ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸಮಾಧಾನವನ್ನು ಹಾರೈಸಿ, ಅದಕ್ಕಾಗಿ ಪ್ರಯತ್ನಪಡಿ’

‘ಸಮಾಧಾನವನ್ನು ಹಾರೈಸಿ, ಅದಕ್ಕಾಗಿ ಪ್ರಯತ್ನಪಡಿ’

‘ಸಮಾಧಾನವನ್ನು ಹಾರೈಸಿ, ಅದಕ್ಕಾಗಿ ಪ್ರಯತ್ನಪಡಿ’

“ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.”​—ರೋಮಾಪುರ 12:18.

1, 2. ಮನುಷ್ಯರಿಂದ ಬರುವ ಸಮಾಧಾನವು ಬಹುಕಾಲ ಬಾಳುವುದಿಲ್ಲವೆಂಬುದಕ್ಕೆ ಕೆಲವು ಕಾರಣಗಳೇನು?

ನಿಮ್ಮ ಮನಸ್ಸಿನಲ್ಲಿ, ದುರ್ಬಲವಾದ ಅಸ್ತಿವಾರ, ಕೊಳೆತುಹೋಗಿರುವ ಅಡ್ಡತೊಲೆಗಳು ಮತ್ತು ಜೋಲುತ್ತಿರುವ ಛಾವಣಿಯುಳ್ಳ ಒಂದು ಮನೆಯನ್ನು ಚಿತ್ರಿಸಿಕೊಳ್ಳಿರಿ. ಆ ಮನೆಯೊಳಗೆ ಹೋಗಿ, ಅದನ್ನು ನಿಮ್ಮ ಬೀಡನ್ನಾಗಿ ಮಾಡಲು ನಿಮಗೆ ಮನಸ್ಸಾಗುವುದೊ? ಇಲ್ಲ. ಆ ಮನೆಗೆ ಹೊಸ ಬಣ್ಣ ಬಳಿದರೂ, ಅದು ಕಟ್ಟಲ್ಪಟ್ಟಿರುವ ರೀತಿಯೇ ಭದ್ರವಾಗಿಲ್ಲವೆಂಬ ವಾಸ್ತವಾಂಶವನ್ನು ಅದು ಬದಲಾಯಿಸಲಾರದು. ಇಂದಲ್ಲ ನಾಳೆ ಆ ಮನೆ ಖಂಡಿತವಾಗಿಯೂ ಕುಸಿದುಬೀಳುವುದು.

2 ಈ ಲೋಕವು ತರುವ ಯಾವುದೇ ರೀತಿಯ ಸಮಾಧಾನವು ಆ ಮನೆಯಂತಿದೆ. ಆ ಸಮಾಧಾನವು, ‘ಸಹಾಯಮಾಡಶಕ್ತನಲ್ಲದ’ ಮನುಷ್ಯನ ವಾಗ್ದಾನಗಳು ಮತ್ತು ಯೋಜನೆಗಳೆಂಬ ದುರ್ಬಲವಾದ ಅಸ್ತಿವಾರದ ಮೇಲೆ ಕಟ್ಟಲ್ಪಟ್ಟಿದೆ. (ಕೀರ್ತನೆ 146:3) ಇತಿಹಾಸದುದ್ದಕ್ಕೂ, ರಾಷ್ಟ್ರಗಳು, ಕುಲಸಂಬಂಧಿತ ಗುಂಪುಗಳು ಮತ್ತು ಬುಡಕಟ್ಟುಗಳ ನಡುವೆ ಒಂದರ ನಂತರ ಒಂದು ಸಂಘರ್ಷಗಳು ನಡೆದದ್ದೇ ಇದೆ. ಆಗಾಗ್ಗೆ ಮಧ್ಯಮಧ್ಯದಲ್ಲಿ ಸಮಾಧಾನದ ಅವಧಿಗಳಿರುತ್ತವೆಂಬುದು ನಿಜ. ಆದರೆ ಅದು ಯಾವ ರೀತಿಯ ಸಮಾಧಾನ? ಎರಡು ರಾಷ್ಟ್ರಗಳು ಯುದ್ಧಮಾಡುತ್ತಿದ್ದು, ಅವುಗಳಲ್ಲಿ ಒಂದು ರಾಷ್ಟ್ರವು ಸೋತುಹೋಗಿರುವ ಕಾರಣಕ್ಕಾಗಿ ಅಥವಾ ಆ ಎರಡೂ ರಾಷ್ಟ್ರಗಳಿಗೆ ಯುದ್ಧಮಾಡುವುದರಿಂದ ತಮಗೇನೂ ಪ್ರಯೋಜನವಿಲ್ಲವೆಂಬ ಸಂಗತಿಯು ಮನದಟ್ಟಾದ ಕಾರಣದಿಂದಾಗಿ ಸಮಾಧಾನವು ಘೋಷಿಸಲ್ಪಡುವುದಾದರೆ, ಅದು ಯಾವ ರೀತಿಯ ಸಮಾಧಾನವಾಗಿದೆ? ಆ ಯುದ್ಧವನ್ನು ಹೊತ್ತಿಸಿದಂಥ ದ್ವೇಷ, ಅನುಮಾನಗಳು ಮತ್ತು ಹೊಟ್ಟೆಕಿಚ್ಚು ಹಾಗೆಯೇ ಉಳಿದಿರುತ್ತವೆ. ಕೇವಲ ಬಾಹ್ಯ ತೋರಿಕೆಯಾಗಿರುವ ಮತ್ತು ದ್ವೇಷದ ಮೇಲಿನ ‘ಬಣ್ಣ ಬಳಿಯುವಿಕೆ’ಯಾಗಿರುವಂಥ ಸಮಾಧಾನವು, ಬಹುಕಾಲ ಬಾಳುವಂಥ ಸಮಾಧಾನವಾಗಿರುವುದಿಲ್ಲ.​—ಯೆಹೆಜ್ಕೇಲ 13:10.

3. ದೇವಜನರ ಸಮಾಧಾನವು, ಮನುಷ್ಯರಿಂದ ಬರುವ ಯಾವುದೇ ಸಮಾಧಾನಕ್ಕಿಂತಲೂ ಭಿನ್ನವಾಗಿದೆ ಏಕೆ?

3 ಹಾಗಿದ್ದರೂ ಈ ಯುದ್ಧ ಛಿದ್ರ ಲೋಕದಲ್ಲಿ ನಿಜವಾದ ಸಮಾಧಾನವು ಈಗಲೂ ಅಸ್ತಿತ್ವದಲ್ಲಿದೆ. ಎಲ್ಲಿ? ಯೇಸುವಿನ ಮಾತುಗಳನ್ನು ಪಾಲಿಸಿ, ಅವನ ಜೀವನಕ್ರಮವನ್ನು ಅನುಕರಿಸಲು ಪ್ರಯತ್ನಿಸುವ ನಿಜ ಕ್ರೈಸ್ತರ, ಅಂದರೆ ಯೇಸು ಕ್ರಿಸ್ತನ ಹೆಜ್ಜೆಜಾಡಿನ ಹಿಂಬಾಲಕರ ನಡುವೆಯೇ. (1 ಕೊರಿಂಥ 11:​1; 1 ಪೇತ್ರ 2:21) ವಿಭಿನ್ನ ಜಾತಿ, ಸಾಮಾಜಿಕ ಅಂತಸ್ತು, ಮತ್ತು ರಾಷ್ಟ್ರಗಳಿಂದ ಬಂದಿರುವ ನಿಜ ಕ್ರೈಸ್ತರ ನಡುವೆ ಇರುವ ಸಮಾಧಾನವು ನೈಜವಾದದ್ದಾಗಿದೆ. ಏಕೆಂದರೆ ಅದು, ದೇವರೊಂದಿಗೆ ಅವರಿಗಿರುವ ಶಾಂತಿಭರಿತ ಸಂಬಂಧದಿಂದ ಹೊಮ್ಮುತ್ತದೆ. ಮತ್ತು ಈ ಸಂಬಂಧವು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ಅವರಿಗಿರುವ ನಂಬಿಕೆಯ ಮೇಲೆ ಆಧಾರಿತವಾಗಿದೆ. ಅವರ ಸಮಾಧಾನವು ದೇವರು ಕೊಟ್ಟಿರುವ ಒಂದು ಕೊಡುಗೆಯಾಗಿದೆ, ಮಾನವ ಪ್ರಯತ್ನದ ಪ್ರತಿಫಲವಲ್ಲ. (ರೋಮಾಪುರ 15:33; ಎಫೆಸ 6:​23, 24) ಅದು, ಅವರು ತಮ್ಮನ್ನೇ ‘ಸಮಾಧಾನದ ಪ್ರಭು’ ಯೇಸು ಕ್ರಿಸ್ತನಿಗೆ ಅಧೀನಪಡಿಸಿಕೊಳ್ಳುವುದರ ಮತ್ತು ‘ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರಾದ’ ಯೆಹೋವನನ್ನು ಆರಾಧಿಸುವುದರ ಒಂದು ಪರಿಣಾಮವಾಗಿದೆ.​—ಯೆಶಾಯ 9:6; 2 ಕೊರಿಂಥ 13:11.

4. ಒಬ್ಬ ಕ್ರೈಸ್ತನು ಸಮಾಧಾನಕ್ಕಾಗಿ ಹೇಗೆ ‘ಪ್ರಯತ್ನಪಡಬೇಕು’?

4 ಸಮಾಧಾನವು ಅಪರಿಪೂರ್ಣ ಮಾನವರಿಗೆ ತನ್ನಿಂದತಾನೇ ಬರುವುದಿಲ್ಲ. ಆದುದರಿಂದ ಪ್ರತಿಯೊಬ್ಬ ಕ್ರೈಸ್ತನು ‘ಸಮಾಧಾನವನ್ನು ಹಾರೈಸಿ, ಅದಕ್ಕಾಗಿ ಪ್ರಯತ್ನಪಡಬೇಕು’ ಎಂದು ಪೇತ್ರನು ಹೇಳಿದನು. (1 ಪೇತ್ರ 3:11) ನಾವದನ್ನು ಹೇಗೆ ಮಾಡಬಲ್ಲೆವು? ಒಂದು ಪ್ರಾಚೀನ ಪ್ರವಾದನೆಯು ಉತ್ತರವನ್ನು ಕೊಡುತ್ತದೆ. ಯೆಶಾಯನ ಮೂಲಕ ಮಾತಾಡುತ್ತಾ ಯೆಹೋವನು ಹೇಳಿದ್ದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು [“ಶಾಂತಿಯಿರುವುದು,” NW].” (ಯೆಶಾಯ 54:13; ಫಿಲಿಪ್ಪಿ 4:9) ಹೌದು, ಯೆಹೋವನ ಬೋಧನೆಗಳಿಗೆ ಗಮನಕೊಡುವವರಿಗೆ ನಿಜವಾದ ಸಮಾಧಾನವು ಸಿಗುತ್ತದೆ. ಅದಲ್ಲದೆ, ‘ಪ್ರೀತಿ, ಸಂತೋಷ ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆಯೊಂದಿಗೆ’ ಸಮಾಧಾನವೂ ದೇವರ ಪವಿತ್ರಾತ್ಮದ ಫಲವಾಗಿದೆ. (ಗಲಾತ್ಯ 5:​22, 23) ಇದನ್ನು ಪ್ರೀತಿಯಿಲ್ಲದ, ಆನಂದವಿಲ್ಲದ, ತಾಳ್ಮೆಯಿಲ್ಲದ, ದಯೆಯಿಲ್ಲದ, ದುಷ್ಟ, ಅಪನಂಬಿಗಸ್ತ, ಕಠೋರ ಅಥವಾ ಸ್ವನಿಯಂತ್ರಣವಿಲ್ಲದ ಒಬ್ಬ ವ್ಯಕ್ತಿಯು ಆನಂದಿಸಸಾಧ್ಯವಿಲ್ಲ.

“ಎಲ್ಲರ ಸಂಗಡ ಸಮಾಧಾನದಿಂದಿರಿ”

5, 6. (ಎ) ಬೈಬಲಿನಲ್ಲಿ ಸಮಾಧಾನದಿಂದಿರುವುದರ ಅರ್ಥವೇನು? (ಬಿ) ಕ್ರೈಸ್ತರು ಯಾರೊಂದಿಗೆ ಸಮಾಧಾನದಿಂದಿರಲು ಪ್ರಯತ್ನಿಸುತ್ತಾರೆ?

5 ಸಮಾಧಾನವನ್ನು, ನೆಮ್ಮದಿ ಮತ್ತು ಶಾಂತತೆಯ ಸ್ಥಿತಿ ಎಂದು ಅರ್ಥನಿರೂಪಿಸಲಾಗಿದೆ. ಆ ಅರ್ಥನಿರೂಪಣೆಯು, ಕಲಹವಿಲ್ಲದಿರುವಂಥ ಅನೇಕ ಸನ್ನಿವೇಶಗಳಿಗೆ ಅನ್ವಯವಾಗಬಹುದು. ಒಬ್ಬ ಮೃತ ವ್ಯಕ್ತಿ ಸಹ ಸಮಾಧಾನದಿಂದಿದ್ದಾನಲ್ಲವೇ! ಆದರೆ ನಿಜವಾದ ಸಮಾಧಾನವನ್ನು ಅನುಭವಿಸಲಿಕ್ಕಾಗಿ, ಒಬ್ಬ ವ್ಯಕ್ತಿಯು ಸಮಾಧಾನಕ್ಕೆ ಇಂಬುಕೊಡಬೇಕು. ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು [“ಪುತ್ರರು,” NW] ಅನ್ನಿಸಿಕೊಳ್ಳುವರು.” (ಮತ್ತಾಯ 5:9) ಯೇಸು ಅಲ್ಲಿ, ಮುಂದೆ ದೇವರ ಆತ್ಮಿಕ ಪುತ್ರರಾಗುವ ಮತ್ತು ಸ್ವರ್ಗದಲ್ಲಿ ಅಮರ ಜೀವವನ್ನು ಪಡೆಯುವ ಅವಕಾಶವುಳ್ಳ ವ್ಯಕ್ತಿಗಳೊಂದಿಗೆ ಮಾತಾಡುತ್ತಿದ್ದನು. (ಯೋಹಾನ 1:12; ರೋಮಾಪುರ 8:​14-17, NW) ಮತ್ತು ಸ್ವರ್ಗೀಯ ನಿರೀಕ್ಷೆಯಿಲ್ಲದಿರುವ ನಂಬಿಗಸ್ತ ಮಾನವಕುಲದ ಇತರರೆಲ್ಲರೂ ಕೊನೆಗೆ ‘ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ’ ಆನಂದಿಸುವರು. (ರೋಮಾಪುರ 8:21) ಕೇವಲ ಸಮಾಧಾನದಿಂದಿರುವವರಿಗೆ ಇಂಥ ನಿರೀಕ್ಷೆಯಿರಬಲ್ಲದು. “ಸಮಾಧಾನದಿಂದಿರಿ” ಎಂಬುದಕ್ಕಾಗಿರುವ ಗ್ರೀಕ್‌ ಪದದ ಅಕ್ಷರಾರ್ಥವು, “ಸಮಾಧಾನ ಮಾಡುವವರು” ಎಂದಾಗಿದೆ. ಆದುದರಿಂದ ಬೈಬಲ್‌ ಅರ್ಥದಲ್ಲಿ ಸಮಾಧಾನದಿಂದಿರುವುದು, ಸಕ್ರಿಯವಾಗಿ ಸಮಾಧಾನವನ್ನು ಪ್ರವರ್ಧಿಸುವುದನ್ನು ಸೂಚಿಸುತ್ತದೆ. ಕೆಲವೊಮ್ಮೆ, ಸಮಾಧಾನ ಇಲ್ಲದಿದ್ದ ಸನ್ನಿವೇಶಗಳಲ್ಲಿ ಸಮಾಧಾನಮಾಡಬೇಕಾಗುತ್ತದೆ.

6 ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಅಪೊಸ್ತಲ ಪೌಲನು ರೋಮಿನ ಕ್ರೈಸ್ತರಿಗೆ ಕೊಟ್ಟ ಈ ಸಲಹೆಯನ್ನು ಪರಿಗಣಿಸಿರಿ: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:18) ರೋಮಿನ ಕ್ರೈಸ್ತರು ಬರೀ ಪ್ರಶಾಂತ ಸ್ವಭಾವದವರಾಗಿರಬೇಕೆಂದು ಪೌಲನು ಅವರಿಗೆ ಹೇಳುತ್ತಿರಲ್ಲಿಲ್ಲ. ಅಂಥ ಸ್ವಭಾವದಿಂದ ಸಹಾಯವಾಗುತ್ತದಾದರೂ, ಅವರು ಸಮಾಧಾನ ಮಾಡುವಂತೆ ಅವನು ಉತ್ತೇಜಿಸುತ್ತಿದ್ದನು. ಯಾರೊಂದಿಗೆ ಸಮಾಧಾನ ಮಾಡುವುದು? “ಎಲ್ಲರ ಸಂಗಡ,” ಅಂದರೆ ಕುಟುಂಬ ಸದಸ್ಯರು, ಜೊತೆ ಕ್ರೈಸ್ತರು, ಮತ್ತು ತಮ್ಮ ನಂಬಿಕೆಗಳಲ್ಲಿ ಪಾಲಿಗರಾಗದಿದ್ದವರೊಂದಿಗೂ. ರೋಮಿನ ಕ್ರೈಸ್ತರು ‘ಸಾಧ್ಯವಾದರೆ ಅವರಿಂದಾಗುವ ಮಟ್ಟಿಗೆ’ ಇತರರೊಂದಿಗೆ ಸಮಾಧಾನ ಮಾಡುವಂತೆ ಉತ್ತೇಜಿಸಿದನು. ಆದರೆ ಸಮಾಧಾನ ಮಾಡುವುದಕ್ಕೋಸ್ಕರ ತಮ್ಮ ನಂಬಿಕೆಗಳನ್ನು ರಾಜಿಮಾಡಿಕೊಳ್ಳುವಂತೆ ಅವನು ಬಯಸಲಿಲ್ಲವೆಂಬುದು ಖಂಡಿತ. ಅದರ ಬದಲಿಗೆ, ಅವರು ಅನಾವಶ್ಯಕವಾಗಿ ಇತರರ ಕೋಪವನ್ನೆಬ್ಬಿಸುವುದರ ಬದಲು, ಸಮಾಧಾನಕರ ಉದ್ದೇಶದೊಂದಿಗೆ ಅವರ ಬಳಿ ಹೋಗಬೇಕಾಗಿತ್ತು. ಕ್ರೈಸ್ತರು ಸಭೆಯೊಳಗಿದ್ದವರೊಂದಿಗೆ ವ್ಯವಹರಿಸುತ್ತಿರಲಿ ಇಲ್ಲವೇ ಸಭೆಯ ಹೊರಗಿನವರೊಂದಿಗೆ ವ್ಯವಹರಿಸುತ್ತಿರಲಿ ಅವರು ಹೀಗೆಯೇ ಮಾಡಬೇಕಾಗಿತ್ತು. (ಗಲಾತ್ಯ 6:10) ಇದಕ್ಕೆ ಹೊಂದಿಕೆಯಲ್ಲಿ, ಪೌಲನು ಬರೆದುದು: “ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತವನ್ನು ಮಾಡುವವರಾಗಿರಿ.”​—1 ಥೆಸಲೊನೀಕ 5:15.

7, 8. ತಮ್ಮ ನಂಬಿಕೆಗಳಲ್ಲಿ ಪಾಲಿಗರಾಗದವರೊಂದಿಗೆ ಕ್ರೈಸ್ತರು ಹೇಗೆ ಮತ್ತು ಏಕೆ ಸಮಾಧಾನದಿಂದಿರುತ್ತಾರೆ?

7 ನಮ್ಮ ನಂಬಿಕೆಗಳಲ್ಲಿ ಪಾಲಿಗರಾಗದ ಮತ್ತು ನಮ್ಮನ್ನು ವಿರೋಧಿಸಬಹುದಾದ ಜನರೊಂದಿಗೂ ನಾವು ಹೇಗೆ ಸಮಾಧಾನದಿಂದಿರಬಹುದು? ಒಂದು ವಿಧ, ನಾವು ಅವರಿಗಿಂತ ಶ್ರೇಷ್ಠರು ಎಂಬ ರೀತಿಯಲ್ಲಿ ನಡೆದುಕೊಳ್ಳದಿರುವ ಮೂಲಕವೇ. ಉದಾಹರಣೆಗಾಗಿ, ನಾವು ನಿರ್ದಿಷ್ಟ ವ್ಯಕ್ತಿಗಳ ಕುರಿತಾಗಿ ಮಾತಾಡುವಾಗ ಹೀನೈಸುವಂಥ ಪದಗಳನ್ನು ಉಪಯೋಗಿಸಿದರೆ ನಾವು ಸಮಾಧಾನದಿಂದಿದ್ದೇವೆಂದು ಹೇಳಲು ಸಾಧ್ಯವೇ ಇಲ್ಲ. ಸಂಸ್ಥೆಗಳು ಮತ್ತು ಕೆಲವೊಂದು ವರ್ಗಗಳ ವಿರುದ್ಧ ಯೆಹೋವನು ತನ್ನ ನ್ಯಾಯತೀರ್ಪುಗಳನ್ನು ಪ್ರಕಟಿಸಿರುವುದಾದರೂ, ಒಬ್ಬ ವ್ಯಕ್ತಿಯು ಈಗಾಗಲೇ ಯೆಹೋವನಿಂದ ಖಂಡಿಸಲ್ಪಟ್ಟಿದ್ದಾನೊ ಎಂಬಂಥ ರೀತಿಯಲ್ಲಿ ಮಾತಾಡಲು ನಮಗೆ ಯಾವುದೇ ಹಕ್ಕಿಲ್ಲ. ವಾಸ್ತವವಾಗಿ ನಾವು ಬೇರೆ ಯಾರ ಕುರಿತಾಗಿಯೂ, ನಮ್ಮ ವಿರೋಧಿಗಳ ಬಗ್ಗೆಯೂ ತೀರ್ಪುಮಾಡಬಾರದು. ಕ್ರೇತದಲ್ಲಿದ್ದ ಕ್ರೈಸ್ತರಿಗೆ, ಮಾನವ ಅಧಿಕಾರಿಗಳೊಂದಿಗಿನ ಅವರ ವ್ಯವಹಾರಗಳ ಕುರಿತಾಗಿ ಸಲಹೆ ಕೊಡುವಂತೆ ತೀತನಿಗೆ ಹೇಳಿದ ಬಳಿಕ, ಅವರು “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿ”ರಲು ಜ್ಞಾಪಕಹುಟ್ಟಿಸುವಂತೆಯೂ ಪೌಲನು ಹೇಳಿದನು.​—ತೀತ 3:1, 2.

8 ನಮ್ಮ ಧರ್ಮಕ್ಕೆ ಸೇರಿರದವರಿಗೆ ಸತ್ಯವನ್ನು ಶಿಫಾರಸ್ಸು ಮಾಡಲಿಕ್ಕಾಗಿ ಅವರೊಂದಿಗೆ ಸಮಾಧಾನದಿಂದಿರುವುದು ತುಂಬ ಸಹಾಯಕಾರಿಯಾಗಿರುತ್ತದೆ. ಆದರೆ ನಾವು ಖಂಡಿತವಾಗಿಯೂ ಅವರೊಂದಿಗೆ ‘ಸದಾಚಾರವನ್ನು ಕೆಡಿಸುವಂಥ’ ರೀತಿಯ ಗೆಳೆತನಗಳನ್ನು ಮಾಡಬಾರದು. (1 ಕೊರಿಂಥ 15:33) ಹೀಗಿದ್ದರೂ, ನಾವು ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು, ಮತ್ತು ನಾವು ಎಲ್ಲ ಜನರನ್ನು ಘನತೆ ಹಾಗೂ ಮಾನವೀಯ ದಯೆಯೊಂದಿಗೆ ಉಪಚರಿಸಬೇಕು. ಪೇತ್ರನು ಬರೆದುದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.”​—1 ಪೇತ್ರ 2:12.

ಶುಶ್ರೂಷೆಯಲ್ಲಿ ಸಮಾಧಾನದಿಂದಿರುವುದು

9, 10. ಅವಿಶ್ವಾಸಿಗಳೊಂದಿಗೆ ಸಮಾಧಾನದಿಂದ ವ್ಯವಹರಿಸುವುದರಲ್ಲಿ ಅಪೊಸ್ತಲ ಪೌಲನು ಯಾವ ಮಾದರಿಯನ್ನಿಟ್ಟನು?

9 ಪ್ರಥಮ ಶತಮಾನದ ಕ್ರೈಸ್ತರು ಅವರ ಧೈರ್ಯಕ್ಕಾಗಿ ಪ್ರಸಿದ್ಧರಾಗಿದ್ದರು. ಅವರು ತಮ್ಮ ಸಂದೇಶದ ಮಹತ್ವವನ್ನು ಕಡಿಮೆಗೊಳಿಸಲಿಲ್ಲ ಮತ್ತು ವಿರೋಧವನ್ನು ಎದುರಿಸುತ್ತಿರುವಾಗ ಅವರು ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಲು ದೃಢನಿರ್ಧಾರವುಳ್ಳವರಾಗಿದ್ದರು. (ಅ. ಕೃತ್ಯಗಳು 4:29; 5:29) ಹಾಗಿದ್ದರೂ, ಧೈರ್ಯ ಮತ್ತು ಒರಟು ವರ್ತನೆಯಲ್ಲಿ ವ್ಯತ್ಯಾಸವಿದೆಯೆಂಬುದು ಅವರಿಗೆ ತಿಳಿದಿತ್ತು. ಪೌಲನು, ರಾಜನಾದ IIನೆಯ ಹೆರೋದ ಅಗ್ರಿಪ್ಪನ ಮುಂದೆ ತನ್ನ ನಂಬಿಕೆಯನ್ನು ಸಮರ್ಥಿಸುತ್ತಿದ್ದಾಗ ಮಾತಾಡಿದಂಥ ರೀತಿಯನ್ನು ಪರಿಗಣಿಸಿರಿ. ಹೆರೋದ ಅಗ್ರಿಪ್ಪನು ತನ್ನ ತಂಗಿ ಬೆರ್ನಿಕೆಯೊಂದಿಗೆ ಅಗಮ್ಯಗಮನದ ಸಂಬಂಧವನ್ನಿಟ್ಟುಕೊಂಡಿದ್ದನು. ಆದರೆ ಪೌಲನು ಅಗ್ರಿಪ್ಪನಿಗೆ ನೈತಿಕತೆಯ ಕುರಿತಾಗಿ ಒಂದು ಭಾಷಣಬಿಗಿಯಲು ಆರಂಭಿಸಲಿಲ್ಲ. ಅದರ ಬದಲು, ಅಗ್ರಿಪ್ಪನು ಮತ್ತು ತಾನು ಯಾವ ವಿಷಯಗಳ ಕುರಿತಾಗಿ ಒಮ್ಮತದಿಂದಿದ್ದರೊ ಆ ವಿಷಯಗಳನ್ನು ಪೌಲನು ಎತ್ತಿಹೇಳಿದನು. ಅಗ್ರಿಪ್ಪನು ಯೆಹೂದ್ಯರ ಎಲ್ಲ ಆಚಾರಗಳನ್ನು ಚೆನ್ನಾಗಿ ಬಲ್ಲವನು ಮತ್ತು ಪ್ರವಾದಿಗಳಲ್ಲಿ ನಂಬಿಕೆಯುಳ್ಳವನೆಂದು ಸಹ ಪೌಲನು ಹೇಳಿದನು.​—ಅ. ಕೃತ್ಯಗಳು 26:​2, 3, 27.

10 ಇವನು ತನ್ನನ್ನು ಬಿಡುಗಡೆಮಾಡಬಲ್ಲ ವ್ಯಕ್ತಿಯೆಂಬ ಕಾರಣಕ್ಕಾಗಿ ಪೌಲನು ಸುಮ್ಮನೆ ಅವನ ಮುಖಸ್ತುತಿಮಾಡುತ್ತಿದ್ದನೊ? ಇಲ್ಲ. ಪೌಲನು ತನ್ನ ಸ್ವಂತ ಬುದ್ಧಿವಾದವನ್ನೇ ಅನ್ವಯಿಸಿಕೊಳ್ಳುತ್ತಾ ಸತ್ಯವನ್ನಾಡುತ್ತಿದ್ದನು. ಅವನು ಹೆರೋದ ಅಗ್ರಿಪ್ಪನಿಗೆ ಹೇಳಿದ ಯಾವುದೇ ವಿಷಯವು ಅಸತ್ಯವಾಗಿರಲಿಲ್ಲ. (ಎಫೆಸ 4:15) ಆದರೆ ಪೌಲನು ಸಮಾಧಾನ ಮಾಡುವವನಾಗಿದ್ದನು ಮತ್ತು “ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾ”ಗುವುದು ಹೇಗೆಂಬುದು ಅವನಿಗೆ ಗೊತ್ತಿತ್ತು. (1 ಕೊರಿಂಥ 9:22) ಅವನ ಗುರಿಯು, ಯೇಸುವಿನ ಕುರಿತಾಗಿ ಸಾರಲು ತನಗಿರುವ ಹಕ್ಕನ್ನು ಸಮರ್ಥಿಸುವುದೇ ಆಗಿತ್ತು. ಒಬ್ಬ ಒಳ್ಳೆಯ ಶಿಕ್ಷಕನೋಪಾದಿ, ಅವನು ಮತ್ತು ಅಗ್ರಿಪ್ಪನು ಒಮ್ಮತದಿಂದಿದ್ದ ಒಂದು ವಿಷಯವನ್ನು ತಿಳಿಸುವ ಮೂಲಕ ಅವನು ಆರಂಭಿಸಿದನು. ಹೀಗೆ, ಆ ಅನೈತಿಕ ರಾಜನು ಕ್ರೈಸ್ತತ್ವವನ್ನು ಹೆಚ್ಚು ಉತ್ತಮವಾದ ದೃಷ್ಟಿಯಿಂದ ನೋಡುವಂತೆ ಪೌಲನು ಅವನಿಗೆ ಸಹಾಯಮಾಡಿದನು.​—ಅ. ಕೃತ್ಯಗಳು 26:​28-31.

11. ನಮ್ಮ ಶುಶ್ರೂಷೆಯಲ್ಲಿ ನಾವು ಹೇಗೆ ಸಮಾಧಾನ ಮಾಡುವವರಾಗಿರಬಹುದು?

11 ನಮ್ಮ ಶುಶ್ರೂಷೆಯಲ್ಲಿ ನಾವು ಹೇಗೆ ಸಮಾಧಾನ ಮಾಡುವವರಾಗಿರಬಹುದು? ಪೌಲನಂತೆ, ನಾವು ಸಹ ವಾದವಿವಾದಗಳಿಂದ ದೂರವಿರಬೇಕು. ಕೆಲವೊಮ್ಮೆ ನಾವು ‘ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುತ್ತಾ,’ ನಮ್ಮ ನಂಬಿಕೆಯನ್ನು ಧೈರ್ಯದಿಂದ ಸಮರ್ಥಿಸಬೇಕಾಗುತ್ತದೆ ಎಂಬುದು ಒಪ್ಪತಕ್ಕ ಮಾತೇ. (ಫಿಲಿಪ್ಪಿ 1:14) ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಮುಖ್ಯ ಗುರಿಯು, ಸುವಾರ್ತೆಯನ್ನು ಸಾರುವುದು ಆಗಿರುತ್ತದೆ. (ಮತ್ತಾಯ 24:14) ಒಬ್ಬ ವ್ಯಕ್ತಿಯು ದೇವರ ಉದ್ದೇಶಗಳ ಕುರಿತಾದ ಸತ್ಯವನ್ನು ಗ್ರಹಿಸಿದಾಗ, ಅವನು ಸ್ವತಃ ತನ್ನ ಸುಳ್ಳು ಧಾರ್ಮಿಕ ವಿಚಾರಗಳನ್ನು ತೊರೆದು, ಅಶುದ್ಧವಾದ ಆಚಾರಗಳನ್ನು ತೆಗೆದುಹಾಕಿ ತನ್ನನ್ನು ಶುದ್ಧಪಡಿಸಿಕೊಳ್ಳುವನು. ಹೀಗಿರುವುದರಿಂದ ಸಾಧ್ಯವಿರುವಷ್ಟರ ಮಟ್ಟಿಗೆ ನಮ್ಮ ಕೇಳುಗರಿಗೆ ಹಿಡಿಸುವಂಥ ವಿಷಯಗಳನ್ನು ನಾವು ಎತ್ತಿತಿಳಿಸಬೇಕು. ಇದನ್ನು ಮಾಡಲು, ಅವರು ಮತ್ತು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳುವಂಥ ವಿಷಯಗಳ ಕುರಿತಾಗಿ ಮಾತಾಡುತ್ತಾ ನಾವು ಆರಂಭಿಸಬಹುದು. ಒಬ್ಬ ವ್ಯಕ್ತಿಯೊಂದಿಗೆ ನಾವು ಜಾಣ್ಮೆಯಿಂದ ಮಾತಾಡುವಲ್ಲಿ ಅವನು ನಮ್ಮ ಸಂದೇಶಕ್ಕೆ ಕಿವಿಗೊಡುವನು. ಆದರೆ ನಾವು ಅದೇ ವ್ಯಕ್ತಿಯ ಕೋಪವನ್ನೆಬ್ಬಿಸಿದರೆ ಅದು ಬಹುಶಃ ಪ್ರತಿಕೂಲವಾದ ಪರಿಣಾಮವನ್ನು ತರುವುದು.​—2 ಕೊರಿಂಥ 6:3.

ಕುಟುಂಬದಲ್ಲಿ ಸಮಾಧಾನ ಮಾಡುವವರು

12. ಕುಟುಂಬದಲ್ಲಿ ನಾವು ಯಾವ ವಿಧಗಳಲ್ಲಿ ಸಮಾಧಾನ ಮಾಡುವವರಾಗಿ ಇರಬಹುದು?

12 ಮದುವೆಮಾಡಿಕೊಳ್ಳುವವರಿಗೆ ‘ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು’ ಎಂದು ಪೌಲನು ಹೇಳಿದನು. (1 ಕೊರಿಂಥ 7:28) ಅವರು ವಿಭಿನ್ನ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುವುದು. ಇವುಗಳಲ್ಲಿ ಒಂದು, ಕೆಲವು ದಂಪತಿಗಳ ನಡುವೆ ಆಗಾಗ್ಗೆ ಏಳುವ ಭಿನ್ನಾಭಿಪ್ರಾಯಗಳೇ. ಇವುಗಳನ್ನು ಹೇಗೆ ನಿರ್ವಹಿಸಬೇಕು? ಸಮಾಧಾನದಿಂದ. ಸಮಾಧಾನ ಮಾಡುವ ಒಬ್ಬ ವ್ಯಕ್ತಿ ಒಂದು ಘರ್ಷಣೆಯು ಹೆಚ್ಚುವುದನ್ನು ನಿಲ್ಲಿಸಲು ಪ್ರಯತ್ನಿಸುವನು. ಹೇಗೆ? ಪ್ರಥಮವಾಗಿ, ನಾಲಿಗೆಗೆ ಕಡಿವಾಣವನ್ನು ಹಾಕುವ ಮೂಲಕ. ವ್ಯಂಗ್ಯ ಹಾಗೂ ಅವಮಾನಕಾರಿ ಮಾತುಗಳನ್ನಾಡಲು ಈ ಚಿಕ್ಕ ಅಂಗವನ್ನು ಉಪಯೋಗಿಸುವಾಗ ಅದು ನಿಜವಾಗಿಯೂ, ‘ಸುಮ್ಮನಿರಲಾರದ ಕೆಡುಕು ಮರಣಕರವಾದ ವಿಷದಿಂದ ತುಂಬಿರುವಂಥದ್ದಾಗಿರಬಲ್ಲದು.’ (ಯಾಕೋಬ 3:8) ಸಮಾಧಾನ ಮಾಡುವ ವ್ಯಕ್ತಿಯಾದರೊ ತನ್ನ ನಾಲಿಗೆಯನ್ನು ಇತರರನ್ನು ಕೆಡವಿಹಾಕಲು ಅಲ್ಲ ಬದಲಾಗಿ ಭಕ್ತಿವೃದ್ಧಿಮಾಡಲು ಉಪಯೋಗಿಸುವನು.​—ಜ್ಞಾನೋಕ್ತಿ 12:18.

13, 14. ನಾವು ಮಾತಿನಲ್ಲಿ ತಪ್ಪುಮಾಡುವಾಗ ಅಥವಾ ನಾವು ತುಂಬ ಭಾವುಕರಾಗುವಾಗ, ಸಮಾಧಾನವನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು?

13 ಅಪರಿಪೂರ್ಣರಾಗಿರುವುದರಿಂದ ನಾವೆಲ್ಲರೂ ಆಗಿಂದಾಗ್ಗೆ ಮನಸ್ಸಿಗೆ ಬಂದಂತೆ ಮಾತಾಡಿ, ಅನಂತರ ಅದರ ಕುರಿತಾಗಿ ವಿಷಾದಿಸುತ್ತೇವೆ. ಇದು ಸಂಭವಿಸುವಾಗ, ತಪ್ಪನ್ನು ಸರಿಪಡಿಸಲು ಅಂದರೆ ಸಮಾಧಾನವನ್ನು ಮಾಡಲು ತಡಮಾಡಬೇಡಿರಿ. (ಜ್ಞಾನೋಕ್ತಿ 19:11; ಕೊಲೊಸ್ಸೆ 3:13) ‘ಕುತರ್ಕ ವಾಗ್ವಾದಗಳಲ್ಲಿ’ ಮತ್ತು ‘ಕಚ್ಚಾಟಗಳಲ್ಲಿ’ ಹೂತುಹೋಗುವುದರಿಂದ ದೂರವಿರಿ. (1 ತಿಮೊಥೆಯ 6:​4, 5) ಅದರ ಬದಲು, ಹೊರತೋರಿಕೆಯನ್ನು ಮಾತ್ರ ನೋಡದೇ ನಿಮ್ಮ ಸಂಗಾತಿಯ ಅಂತರಂಗದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಕಠೋರವಾದ ಮಾತುಗಳನ್ನಾಡುವಲ್ಲಿ, ನೀವೂ ಅದೇ ರೀತಿಯಲ್ಲಿ ಉತ್ತರಿಸಬೇಡಿ. “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು” ಎಂಬುದನ್ನು ನೆನಪಿನಲ್ಲಿಡಿ.​—ಜ್ಞಾನೋಕ್ತಿ 15:1.

14 ಕೆಲವೊಮ್ಮೆ, ಜ್ಞಾನೋಕ್ತಿ 17:14ರಲ್ಲಿರುವ ಸಲಹೆಯನ್ನು ನೀವು ಪರಿಗಣಿಸಬೇಕಾದೀತು: “ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.” ಆ ಸ್ಫೋಟಕ ಸನ್ನಿವೇಶದಿಂದ ದೂರಹೋಗಿರಿ. ಅನಂತರ, ನಿಮ್ಮಿಬ್ಬರ ಮನಸ್ಸು ಶಾಂತವಾದಾಗ, ನೀವು ಸಮಾಧಾನದಿಂದ ಸಮಸ್ಯೆಯನ್ನು ಬಗೆಹರಿಸಲು ಶಕ್ತರಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ಒಬ್ಬ ಪ್ರೌಢ ಕ್ರೈಸ್ತ ಮೇಲ್ವಿಚಾರಕನಿಂದ ಸಹಾಯ ಕೋರುವುದು ಒಳ್ಳೇದ್ದಾಗಿರಬಹುದು. ಅಂಥ ಅನುಭವೀ ಮತ್ತು ಅನುಭೂತಿಯುಳ್ಳ ಪುರುಷರು, ವೈವಾಹಿಕ ಶಾಂತಿಯು ಅಪಾಯದಲ್ಲಿರುವಾಗ ಚೈತನ್ಯದಾಯಕ ಸಹಾಯಕರಾಗಿರಬಲ್ಲರು.​—ಯೆಶಾಯ 32:​1, 2.

ಸಭೆಯಲ್ಲಿ ಸಮಾಧಾನ ಮಾಡುವವರು

15. ಯಾಕೋಬನಿಗನುಸಾರ, ಕೆಲವು ಕ್ರೈಸ್ತರಲ್ಲಿ ಯಾವ ಕೆಟ್ಟ ಮನೋಭಾವವು ಬೆಳೆದಿತ್ತು, ಮತ್ತು ಆ ಮನೋಭಾವವು ಏಕೆ “ಭೂಸಂಬಂಧವಾದದ್ದು,” “ಪ್ರಾಕೃತಭಾವವಾದದ್ದು,” ಮತ್ತು “ದೆವ್ವಗಳಿಗೆ ಸಂಬಂಧಪಟ್ಟದ್ದು” ಆಗಿದೆ?

15 ದುಃಖಕರ ಸಂಗತಿಯೇನೆಂದರೆ, ಪ್ರಥಮ ಶತಮಾನದ ಕ್ರೈಸ್ತರ ನಡುವೆ ಸಮಾಧಾನಕ್ಕೆ ತದ್ವಿರುದ್ಧವಾದ ಮತ್ಸರ ಮತ್ತು ಜಗಳಗಂಟಿತನವಿತ್ತು. ಯಾಕೋಬನು ಹೇಳಿದ್ದು: “ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು. ಮತ್ಸರವೂ ಪಕ್ಷಭೇದವೂ [“ಜಗಳಗಂಟಿತನ,” NW] ಇರುವ ಕಡೆ ಗಲಿಬಿಲಿಯೂ ಸಕಲವಿಧ ನೀಚಕೃತ್ಯಗಳೂ ಇರುವವು.” (ಯಾಕೋಬ 3:14-16) “ಜಗಳಗಂಟಿತನ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ಸ್ವಾರ್ಥಪರ ಹೆಬ್ಬಯಕೆ, ಸ್ಥಾನಕ್ಕಾಗಿರುವ ಕಾದಾಟವನ್ನು ಅರ್ಥೈಸುತ್ತದೆಂದು ಕೆಲವರು ನಂಬುತ್ತಾರೆ. ಸಕಾರಣದಿಂದಲೇ ಯಾಕೋಬನು ಅದಕ್ಕೆ “ಭೂಸಂಬಂಧವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು” ಎಂಬ ಪಟ್ಟಕಟ್ಟುತ್ತಾನೆ. ಇತಿಹಾಸದಾದ್ಯಂತ ಲೋಕದ ಧುರೀಣರು, ಪರಸ್ಪರರ ವಿರುದ್ಧ ಜಗಳಾಡುತ್ತಿರುವ ಕಾಡು ಪ್ರಾಣಿಗಳಂತೆ ಪಕ್ಷಭೇದದಿಂದ ವರ್ತಿಸಿದ್ದಾರೆ. ಪಕ್ಷಭೇದವು ನಿಜವಾಗಿಯೂ “ಭೂಸಂಬಂಧವಾದದ್ದು” ಮತ್ತು “ಪ್ರಾಕೃತಭಾವವಾದದ್ದು” ಆಗಿದೆ. ಅದು “ದೆವ್ವಗಳಿಗೆ ಸಂಬಂಧಪಟ್ಟದ್ದು” ಸಹ ಆಗಿದೆ. ಈ ಅಗೋಚರವಾದ ಗುಣವು ಮೊತ್ತಮೊದಲು, ಅಧಿಕಾರಕ್ಕಾಗಿ ಹಸಿದಿದ್ದ ಒಬ್ಬ ದೇವದೂತನಿಂದ ಪ್ರದರ್ಶಿಸಲ್ಪಟ್ಟಿತು. ಅವನು ಸ್ವತಃ ಯೆಹೋವ ದೇವರ ವಿರುದ್ಧವೇ ಎದ್ದು, ದೆವ್ವಗಳ ಅಧಿಪತಿ ಸೈತಾನನಾದನು.

16. ಪ್ರಥಮ ಶತಮಾನದ ಕೆಲವು ಕ್ರೈಸ್ತರು ಸೈತಾನನಂಥ ಮನೋಭಾವವನ್ನು ಪ್ರದರ್ಶಿಸಿದ್ದು ಹೇಗೆ?

16 ಕ್ರೈಸ್ತರು ಜಗಳಗಂಟಿ ಮನೋಭಾವವನ್ನು ಬೆಳೆಸುವುದನ್ನು ಪ್ರತಿರೋಧಿಸುವಂತೆ ಯಾಕೋಬನು ಅವರಿಗೆ ಪ್ರೇರೇಪಿಸಿದನು, ಯಾಕೆಂದರೆ ಅದು ಸಮಾಧಾನದ ವಿರುದ್ಧ ಕೆಲಸಮಾಡುತ್ತದೆ. ಅವನು ಬರೆದುದು: “ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಹುಟ್ಟುತ್ತವೆ? ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ಭೋಗಾಶೆಗಳಿಂದಲೇ ಅಲ್ಲವೇ.” (ಯಾಕೋಬ 4:1) ಇಲ್ಲಿ ತಿಳಿಸಲ್ಪಟ್ಟಿರುವ ‘ಭೋಗಾಶೆಗಳು,’ ಭೌತಿಕ ವಿಷಯಗಳಿಗಾಗಿ ದುರಾಶೆಯ ಹಾತೊರೆಯುವಿಕೆ ಇಲ್ಲವೇ ಪ್ರತಿಷ್ಠೆ, ಅಧಿಕಾರ ಅಥವಾ ವರ್ಚಸ್ಸಿಗಾಗಿರುವ ಆಶೆಗೆ ಸೂಚಿಸಬಲ್ಲದು. ಸೈತಾನನಂತೆ, ಸಭೆಗಳಲ್ಲಿರುವ ಕೆಲವರು, ಯೇಸು ತನ್ನ ನಿಜ ಹಿಂಬಾಲಕರ ಕುರಿತಾಗಿ ಹೇಳಿದಂತೆ ‘ಚಿಕ್ಕವರಾಗಿರಲು’ ಅಲ್ಲ, ಬದಲಾಗಿ ಕಂಗೊಳಿಸಲು ಬಯಸುತ್ತಿದ್ದರೆಂಬುದು ವ್ಯಕ್ತವಾಗುತ್ತದೆ. (ಲೂಕ 9:48) ಅಂಥ ಮನೋಭಾವವು ಸಭೆಯಿಂದ ಸಮಾಧಾನವನ್ನು ಕಸಿದುಕೊಳ್ಳಸಾಧ್ಯವಿದೆ.

17. ಇಂದು ಕ್ರೈಸ್ತರು ಸಭೆಯಲ್ಲಿ ಹೇಗೆ ಸಮಾಧಾನ ಮಾಡುವವರಾಗಿರಬಲ್ಲರು?

17 ಇಂದು ನಾವು ಸಹ ಪ್ರಾಪಂಚಿಕತೆ, ಮತ್ಸರ ಅಥವಾ ನಿರರ್ಥಕ ಮಹತ್ವಾಕಾಂಕ್ಷೆಯತ್ತ ಓಲುವ ಪ್ರವೃತ್ತಿಯನ್ನು ಪ್ರತಿರೋಧಿಸಬೇಕು. ಸಭೆಯಲ್ಲಿ ಕೆಲವರು ನಿರ್ದಿಷ್ಟ ಚಟುವಟಿಕೆಗಳಲ್ಲಿ ನಮಗಿಂತಲೂ ಹೆಚ್ಚು ನಿಸ್ಸೀಮರಾಗಿರಬಹುದು. ಆದರೆ ನಾವು ಸಮಾಧಾನ ಮಾಡುವವರಾಗಿರುವಲ್ಲಿ, ನಮಗೆ ಅವರಿಗಿಂತಲೂ ಚಿಕ್ಕ ಪಾತ್ರವಿದೆ ಎಂಬುದರ ಕುರಿತಾಗಿ ನಾವು ಚಿಂತಿಸುತ್ತಾ ಇರುವುದಿಲ್ಲ ಅಥವಾ ಅಂಥವರ ಉದ್ದೇಶಗಳು ತಪ್ಪಾಗಿವೆಯೆಂದು ಹೇಳುವ ಮೂಲಕ ಬೇರೆಯವರ ದೃಷ್ಟಿಯಲ್ಲಿ ಅವರನ್ನು ಅವಹೇಳನ ಮಾಡದಿರುವೆವು. ನಮ್ಮ ಬಳಿ ಒಂದು ವಿಶಿಷ್ಟವಾದ ಸಾಮರ್ಥ್ಯವಿರುವಲ್ಲಿ, ನಾವು ಇತರರಿಗಿಂತಲೂ ಉತ್ತಮರಾಗಿದ್ದೇವೆಂದು ತೋರಿಸಿಕೊಳ್ಳಲು ಅದನ್ನು ಉಪಯೋಗಿಸದಿರುವೆವು. ಕೇವಲ ನಮ್ಮ ಕುಶಲತೆ ಮತ್ತು ಪ್ರಾಯೋಗಿಕ ಜ್ಞಾನದಿಂದ ಮಾತ್ರ ಸಭೆಯು ನಡೆಯುತ್ತದೊ ಎಂಬ ಅಭಿಪ್ರಾಯವನ್ನು ಕೊಡದಿರುವೆವು. ಅಂಥ ಮನೋಭಾವವು ಸಭೆಯಲ್ಲಿ ವಿಭಜನೆಯನ್ನುಂಟುಮಾಡುವುದು, ಅದು ಸಮಾಧಾನವನ್ನು ತರುವುದಿಲ್ಲ. ಸಮಾಧಾನ ಮಾಡುವವರು ತಮ್ಮ ಪ್ರತಿಭೆಗಳನ್ನು ಗರ್ವದಿಂದ ಪ್ರದರ್ಶಿಸಲಿಕ್ಕಾಗಿಯಲ್ಲ, ಬದಲಾಗಿ ತಮ್ಮ ಸಹೋದರರ ಸೇವೆಮಾಡಲು ಮತ್ತು ಯೆಹೋವನಿಗೆ ಗೌರವವನ್ನು ತರಲು ಅವುಗಳನ್ನು ವಿನಯಶೀಲತೆಯಿಂದ ಉಪಯೋಗಿಸುತ್ತಾರೆ. ಏಕೆಂದರೆ ಕಟ್ಟಕಡೆಗೆ, ಒಬ್ಬ ಸತ್ಕ್ರೈಸ್ತನನ್ನು ಗುರುತಿಸುವಂಥ ಸಂಗತಿಯು ಅವನ ಸಾಮರ್ಥ್ಯವಲ್ಲ, ಬದಲಾಗಿ ಪ್ರೀತಿ ಎಂಬುದು ಅವರಿಗೆ ಗೊತ್ತಿದೆ.​—ಯೋಹಾನ 13:35; 1 ಕೊರಿಂಥ 13:​1-3.

‘ಸಮಾಧಾನವು ನಿನಗೆ ಅಧಿಪತಿ’

18. ಹಿರಿಯರು ತಮ್ಮೊಳಗೇ ಸಮಾಧಾನವನ್ನು ಹೇಗೆ ಪ್ರವರ್ಧಿಸುತ್ತಾರೆ?

18 ಸಮಾಧಾನ ಮಾಡುವವರಾಗಿರುವುದರಲ್ಲಿ ಸಭಾ ಹಿರಿಯರು ಮುಂದಾಳತ್ವವನ್ನು ವಹಿಸುತ್ತಾರೆ. ಯೆಹೋವನು ತನ್ನ ಜನರ ಕುರಿತಾಗಿ ಮುಂತಿಳಿಸಿದ್ದು: “ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.” (ಯೆಶಾಯ 60:17) ಈ ಪ್ರವಾದನಾತ್ಮಕ ಮಾತುಗಳಿಗೆ ಹೊಂದಿಕೆಯಲ್ಲಿ, ಕ್ರೈಸ್ತ ಕುರುಬರೋಪಾದಿ ಸೇವೆಸಲ್ಲಿಸುವವರು, ತಮ್ಮೊಳಗೇ ಮತ್ತು ಹಿಂಡಿನೊಳಗೆ ಸಮಾಧಾನವನ್ನು ಪ್ರವರ್ಧಿಸಲು ಕಠಿನವಾಗಿ ಪ್ರಯಾಸಪಡುತ್ತಾರೆ. ಸಮಾಧಾನಕರವೂ ವಿವೇಚನಾಭರಿತವೂ ಆದ ‘ಮೇಲಣ ವಿವೇಕವನ್ನು’ ಪ್ರದರ್ಶಿಸುವ ಮೂಲಕ ಹಿರಿಯರು ತಮ್ಮೊಳಗೆ ಸಮಾಧಾನವನ್ನು ಕಾಪಾಡಿಕೊಳ್ಳಬಹುದು. (ಯಾಕೋಬ 3:17, NW) ಜೀವಿತದಲ್ಲಿನ ತಮ್ಮ ವಿಭಿನ್ನ ಹಿನ್ನೆಲೆಗಳು ಮತ್ತು ಅನುಭವಗಳಿಂದಾಗಿ, ಸಭೆಯಲ್ಲಿರುವ ಹಿರಿಯರಿಗೆ ಕೆಲವೊಮ್ಮೆ ಭಿನ್ನವಾದ ದೃಷ್ಟಿಕೋನಗಳಿರಬಹುದು. ಇದು ಅವರಲ್ಲಿ ಸಮಾಧಾನವಿಲ್ಲ ಎಂಬ ಅರ್ಥವನ್ನು ಕೊಡುತ್ತದೊ? ಅಂಥ ಸನ್ನಿವೇಶವನ್ನು ಸರಿಯಾಗಿ ನಿರ್ವಹಿಸುವಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ. ಸಮಾಧಾನ ಮಾಡುವವರು ವಿನಯಶೀಲರಾಗಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತಾರೆ ಮತ್ತು ಇತರರ ವಿಚಾರಗಳಿಗೂ ಗೌರವಪೂರ್ವಕವಾಗಿ ಕಿವಿಗೊಡುತ್ತಾರೆ. ತಾನು ಹೇಳಿದಂತೆಯೇ ಆಗಬೇಕೆಂದು ಪಟ್ಟುಹಿಡಿಯುವ ಬದಲು, ಸಮಾಧಾನ ಮಾಡುವ ವ್ಯಕ್ತಿಯು ತನ್ನ ಸಹೋದರನ ದೃಷ್ಟಿಕೋನವನ್ನೂ ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವನು. ಬೈಬಲಿನ ಯಾವುದೇ ಮೂಲತತ್ವವು ಉಲ್ಲಂಘಿಸಲ್ಪಡದಿರುವಲ್ಲಿ, ಸಾಮಾನ್ಯವಾಗಿ ವಿಭಿನ್ನ ಪ್ರಕಾರದ ದೃಷ್ಟಿಕೋನಗಳಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಬೇರೆಯವರು ತನ್ನೊಂದಿಗೆ ಅಸಮ್ಮತಿಸುವಾಗ, ಸಮಾಧಾನ ಮಾಡುವ ವ್ಯಕ್ತಿಯು ಅಧಿಕಾಂಶ ವ್ಯಕ್ತಿಗಳ ನಿರ್ಣಯಕ್ಕೆ ಮಣಿದು ಅವರ ನಿರ್ಣಯವನ್ನು ಬೆಂಬಲಿಸುವನು. ಹೀಗೆ ತಾನು ವಿವೇಚನಾಶೀಲನಾಗಿದ್ದೇನೆಂಬುದನ್ನು ಅವನು ತೋರಿಸುವನು. (1 ತಿಮೊಥೆಯ 3:​2, 3) ತನ್ನ ಅಭಿಪ್ರಾಯಕ್ಕನುಸಾರವೇ ನಡೆಯುವುದಕ್ಕಿಂತಲೂ, ಸಮಾಧಾನವನ್ನು ಕಾಪಾಡಿಕೊಳ್ಳುವುದು ಹೆಚ್ಚು ಪ್ರಾಮುಖ್ಯ ಎಂಬುದು ಅನುಭವೀ ಮೇಲ್ವಿಚಾರಕರಿಗೆ ತಿಳಿದಿದೆ.

19. ಹಿರಿಯರು ಸಭೆಯಲ್ಲಿ ಸಮಾಧಾನ ಮಾಡುವವರಾಗಿ ಹೇಗೆ ಕಾರ್ಯನಡಿಸುತ್ತಾರೆ?

19 ಹಿಂಡಿನ ಸದಸ್ಯರನ್ನು ಬೆಂಬಲಿಸುವ ಮೂಲಕ ಮತ್ತು ಅವರು ಮಾಡುತ್ತಿರುವ ಪ್ರಯತ್ನಗಳ ಕುರಿತಾಗಿ ಯಾವಾಗಲೂ ಟೀಕಾತ್ಮಕರಾಗಿರದಿರುವ ಮೂಲಕ, ಹಿರಿಯರು ಅವರೊಂದಿಗೆ ಸಮಾಧಾನದಿಂದಿರುತ್ತಾರೆ. ಕೆಲವೊಮ್ಮೆ ಕೆಲವರನ್ನು ತಿದ್ದಿ ಸರಿಮಾಡಬೇಕಾಗುತ್ತದೆಂಬುದು ನಿಜ. (ಗಲಾತ್ಯ 6:1) ಆದರೆ ಒಬ್ಬ ಕ್ರೈಸ್ತ ಮೇಲ್ವಿಚಾರಕನ ಕೆಲಸವು ಪ್ರಮುಖವಾಗಿ ಶಿಸ್ತನ್ನು ಕೊಡುವುದು ಆಗಿರುವುದಿಲ್ಲ. ಅವನು ಹೆಚ್ಚಾಗಿ ಶ್ಲಾಘನೆಯನ್ನು ಕೊಡುವವನಾಗಿರುತ್ತಾನೆ. ಪ್ರೀತಿಪರ ಹಿರಿಯರು ಬೇರೆಯವರಲ್ಲಿರುವ ಒಳ್ಳೆಯತನವನ್ನು ನೋಡಲು ಪ್ರಯತ್ನಿಸುತ್ತಾರೆ. ಮೇಲ್ವಿಚಾರಕರು ಜೊತೆ ಕ್ರೈಸ್ತರ ಕಠಿನ ಶ್ರಮವನ್ನು ಗಣ್ಯಮಾಡುತ್ತಾರೆ ಮತ್ತು ತಮ್ಮ ಜೊತೆ ವಿಶ್ವಾಸಿಗಳು ತಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತಿದ್ದಾರೆಂಬ ಭರವಸೆ ಅವರಿಗಿದೆ.​—2 ಕೊರಿಂಥ 2:​3, 4.

20. ಎಲ್ಲರೂ ಸಮಾಧಾನ ಮಾಡುವವರಾಗಿರುವಲ್ಲಿ, ಸಭೆಗೆ ಹೇಗೆ ಪ್ರಯೋಜನವಾಗುತ್ತದೆ?

20 ಹೀಗೆ ಕುಟುಂಬದಲ್ಲಿ, ಸಭೆಯಲ್ಲಿ, ಮತ್ತು ನಮ್ಮ ನಂಬಿಕೆಗಳಲ್ಲಿ ಪಾಲಿಗರಾಗದವರೊಂದಿಗೆ ವ್ಯವಹರಿಸುವಾಗ ನಾವು ಸಮಾಧಾನದಿಂದಿರಲು ಶ್ರಮಿಸುತ್ತೇವೆ ಮತ್ತು ಸಮಾಧಾನಕ್ಕಾಗಿ ಪ್ರಯತ್ನಿಸುತ್ತೇವೆ. ನಾವು ಶ್ರದ್ಧೆಯಿಂದ ಸಮಾಧಾನವನ್ನು ಬೆಳೆಸಿಕೊಳ್ಳುವಲ್ಲಿ, ಸಭೆಯ ಸಂತೋಷವನ್ನು ಹೆಚ್ಚಿಸುವೆವು. ಅದೇ ಸಮಯದಲ್ಲಿ, ಮುಂದಿನ ಲೇಖನದಲ್ಲಿ ನೋಡಲಿರುವಂತೆ ನಾವು ಅನೇಕ ವಿಧಗಳಲ್ಲಿ ಸಂರಕ್ಷಿಸಲ್ಪಡುವೆವು ಮತ್ತು ಬಲಗೊಳಿಸಲ್ಪಡುವೆವು.

ನಿಮಗೆ ಜ್ಞಾಪಕವಿದೆಯೊ?

• ಸಮಾಧಾನದಿಂದಿರುವುದರ ಅರ್ಥವೇನು?

• ಸಾಕ್ಷ್ಯೇತರರೊಂದಿಗೆ ವ್ಯವಹರಿಸುವಾಗ ನಾವು ಹೇಗೆ ಸಮಾಧಾನದಿಂದಿರಬಹುದು?

• ಕುಟುಂಬದಲ್ಲಿ ಸಮಾಧಾನವನ್ನು ಬೆಳೆಸಿಕೊಳ್ಳುವ ಕೆಲವು ವಿಧಗಳು ಯಾವುವು?

• ಹಿರಿಯರು ಸಭೆಯಲ್ಲಿ ಸಮಾಧಾನಕ್ಕೆ ಹೇಗೆ ಉತ್ತೇಜನವನ್ನು ಕೊಡಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಸಮಾಧಾನ ಮಾಡುವವರು, ತಾವು ಇತರರಿಗಿಂತಲೂ ಶ್ರೇಷ್ಠರು ಎಂಬ ಮನೋಭಾವದಿಂದ ದೂರವಿರುತ್ತಾರೆ

[ಪುಟ 10ರಲ್ಲಿರುವ ಚಿತ್ರ]

ಕ್ರೈಸ್ತರು ಶುಶ್ರೂಷೆಯಲ್ಲಿ, ಮನೆಯಲ್ಲಿ ಮತ್ತು ಸಭೆಯಲ್ಲಿ ಸಮಾಧಾನ ಮಾಡುವವರಾಗಿದ್ದಾರೆ