ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವ ಸಂಗತಿಯಾದರೂ ಜನರನ್ನು ನಿಜವಾಗಿಯೂ ಐಕ್ಯಗೊಳಿಸೀತೇ?

ಯಾವ ಸಂಗತಿಯಾದರೂ ಜನರನ್ನು ನಿಜವಾಗಿಯೂ ಐಕ್ಯಗೊಳಿಸೀತೇ?

ಯಾವ ಸಂಗತಿಯಾದರೂ ಜನರನ್ನು ನಿಜವಾಗಿಯೂ ಐಕ್ಯಗೊಳಿಸೀತೇ?

ನಿಮ್ಮ ನಂಬಿಕೆಗಳು ಏನೇ ಆಗಿರಲಿ, ಸತ್ಯಪ್ರಿಯರು ಬಹುಮಟ್ಟಿಗೆ ಎಲ್ಲ ಧರ್ಮಗಳಲ್ಲಿಯೂ ಇದ್ದಾರೆಂದು ನೀವು ಪ್ರಾಯಶಃ ಒಪ್ಪಿಕೊಳ್ಳುವಿರಿ. ಸತ್ಯವಾಗಿರುವ ವಿಷಯಕ್ಕೆ ತೀರ ಕೃತಜ್ಞರಾಗಿದ್ದು, ಅದನ್ನು ಹುಡುಕಲು ಬಯಸುವವರು ಹಿಂದೂಗಳಲ್ಲಿ, ಕ್ಯಾಥೊಲಿಕರಲ್ಲಿ, ಯೆಹೂದ್ಯರಲ್ಲಿ ಮತ್ತು ಇತರರಲ್ಲಿ ಕಂಡುಬರುತ್ತಾರೆ. ಆದರೂ, ಧರ್ಮವು ಮಾನವಕುಲವನ್ನು ಬೇರ್ಪಡಿಸುವಂತೆ ತೋರುತ್ತದೆ. ಕೆಲವರು ಧರ್ಮವನ್ನು ಕೆಟ್ಟ ಉದ್ದೇಶಗಳಿಗಾಗಿಯೂ ಬಳಸುತ್ತಾರೆ. ಹಾಗಾದರೆ, ಒಳ್ಳೇದನ್ನು ಮತ್ತು ಸತ್ಯವಾಗಿರುವುದನ್ನು ಪ್ರೀತಿಸುವ ಸಕಲ ಧರ್ಮಗಳ ಯಥಾರ್ಥವಂತರನ್ನು ಐಕ್ಯಗೊಳಿಸಲು ಎಂದಾದರೂ ಸಾಧ್ಯವಾದೀತೇ? ಅವರನ್ನು ಒಂದು ಸಾಮಾನ್ಯ ಉದ್ದೇಶಕ್ಕಾಗಿ ಒಟ್ಟುಗೂಡಿಸಲು ಸಾಧ್ಯವಾದೀತೇ?

ಧರ್ಮವು ಭಿನ್ನಭೇದಗಳಿಗೆ ಹೆಚ್ಚೆಚ್ಚು ಕಾರಣಭೂತವಾಗಿ ಪರಿಣಮಿಸುವುದನ್ನು ನೋಡುವುದು ಅದೆಷ್ಟು ಅಸಮಾಧಾನಗೊಳಿಸುವ ವಿಷಯ! ನಡೆಯುತ್ತಿರುವ ಈ ಕೆಲವು ಘರ್ಷಣೆಗಳನ್ನು ಪರಿಗಣಿಸಿರಿ. ಶ್ರೀ ಲಂಕದಲ್ಲಿ ಹಿಂದೂಗಳು ಬೌದ್ಧರೊಂದಿಗೆ ಹೋರಾಡುತ್ತಾರೆ. ಪ್ರಾಟೆಸ್ಟಂಟ್‌, ಕ್ಯಾಥೊಲಿಕ್‌ ಮತ್ತು ಯೆಹೂದ್ಯರು ಅನೇಕಾನೇಕ ಹೋರಾಟಗಳಲ್ಲಿ ರಕ್ತವನ್ನು ಸುರಿಸಿದ್ದಾರೆ. “ಕ್ರೈಸ್ತರು” ಎಂದು ಹೇಳಿಕೊಳ್ಳುವವರು ಬಾಸ್ನಿಯ, ಚೆಚ್ನಿಯ, ಇಂಡೊನೇಶಿಯ ಮತ್ತು ಕಾಸವೊ ದೇಶಗಳಲ್ಲಿ ಮುಸಲ್ಮಾನರೊಂದಿಗೆ ಹೋರಾಡುತ್ತಾರೆ. ಮತ್ತು 2000ದ ಮಾರ್ಚ್‌ ತಿಂಗಳಿನಲ್ಲಿ ಧರ್ಮಕ್ಕೆ ಸಂಬಂಧಪಟ್ಟ ಎರಡು ದಿನಗಳ ಕಲಹವು ನೈಜೀರಿಯದಲ್ಲಿ 300 ಜನರ ಮರಣದಲ್ಲಿ ಅಂತ್ಯಗೊಂಡಿತು. ಹೌದು, ಧರ್ಮಗಳ ಮಧ್ಯೆ ಇರುವ ಇಂತಹ ದ್ವೇಷವು, ಈ ಹೋರಾಟಗಳ ಉಗ್ರತೆಯನ್ನು ತೀವ್ರಗೊಳಿಸಿದೆ.

ಧರ್ಮದ ಹೆಸರಿನಲ್ಲಿ ನಡೆಯುವ ಅತ್ಯಾಚಾರವು ಯಥಾರ್ಥ ಜನರನ್ನು ಅನೇಕವೇಳೆ ಎದೆಗುಂದಿಸುತ್ತದೆ. ಉದಾಹರಣೆಗೆ, ಮಕ್ಕಳನ್ನು ಲೈಂಗಿಕವಾಗಿ ಕೆಡಿಸಿರುವ ಪಾದ್ರಿಗಳನ್ನು ಕೆಲವು ಚರ್ಚ್‌ಗಳು ಅಧಿಕೃತವಾಗಿ ಸಹಿಸಿಕೊಂಡಿರುವುದು ಚರ್ಚಿಗೆ ಹೋಗುವ ಅನೇಕರನ್ನು ತಲ್ಲಣಗೊಳಿಸಿದೆ. ಕ್ರೈಸ್ತರೆನಿಸಿಕೊಳ್ಳುವ ಅನೇಕ ಪಂಥಗಳಲ್ಲಿ ಸಲಿಂಗೀಕಾಮ ಮತ್ತು ಗರ್ಭಪಾತದ ವಿವಾದಾಂಶದಲ್ಲಿ ಇರುವ ಭಿನ್ನತೆಯನ್ನು ನೋಡಿ ಅನೇಕ ವಿಶ್ವಾಸಿಗಳು ಅತಿ ನಾಚಿಕೆಗೊಳಪಟ್ಟಿದ್ದಾರೆ. ಧರ್ಮವು ಮಾನವಕುಲವನ್ನು ಐಕ್ಯಗೊಳಿಸಿಲ್ಲವೆಂಬುದು ಸ್ಪಷ್ಟ. ಆದರೂ, ಮುಂದಿನ ಅನುಭವಗಳು ತೋರಿಸುವಂತೆ, ಅನೇಕ ಧರ್ಮಗಳಲ್ಲಿ ನಿಜವಾದ ಸತ್ಯಪ್ರಿಯರು ಇದ್ದಾರೆ ಎಂಬುದಂತೂ ಖಂಡಿತ.

ಅವರು ಸತ್ಯಕ್ಕಾಗಿ ಹಂಬಲಿಸಿದರು

ಫಿಡೇಲ್ಯ ಎಂಬುವವಳು ಬೊಲಿವಿಯದ ಲ ಪಾಸ್‌ ನಗರದಲ್ಲಿರುವ ಸ್ಯಾನ್‌ ಫ್ರಾನ್ಸಿಸ್ಕೋವಿನ ಚರ್ಚಿನಲ್ಲಿ ಯಥಾರ್ಥ ಹಾಗೂ ದೇವಭಕ್ತ ಆರಾಧಕಳಾಗಿದ್ದಳು. ಅವಳು ಮರಿಯಳ ವಿಗ್ರಹದ ಮುಂದೆ ಅಡ್ಡಬಿದ್ದು, ತಾನು ಕೊಂಡುಕೊಳ್ಳಬಹುದಾದ ಅತ್ಯುತ್ತಮ ಕ್ಯಾಂಡಲ್‌ಗಳನ್ನು ಶಿಲುಬೆಯ ಮುಂದೆ ಹಚ್ಚುತ್ತಿದ್ದಳು. ಪ್ರತಿವಾರ ಆಕೆ ಬಡವರಿಗೆ ಹಂಚಿಕೊಡಲಿಕ್ಕಾಗಿ ಪಾದ್ರಿಗೆ ದೊಡ್ಡ ಪ್ರಮಾಣದ ಆಹಾರ ಪದಾರ್ಥಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದಳು. ಆದರೂ, ಫಿಡೇಲ್ಯಳ ಐದು ಶಿಶುಗಳು, ಶಿಶುದೀಕ್ಷಾಸ್ನಾನ ಹೊಂದುವುದಕ್ಕೆ ಮೊದಲೇ ತೀರಿಕೊಂಡವು. ಆ ಶಿಶುಗಳೆಲ್ಲ ಲಿಂಬೋ ಎಂಬ ಅಂಧಕಾರದ ಸ್ಥಳದಲ್ಲಿ ಕಷ್ಟಾನುಭವಿಸುತ್ತಿವೆಯೆಂದು ಪಾದ್ರಿಯು ಅವಳಿಗೆ ಹೇಳಿದಾಗ, ‘ದೇವರು ಒಳ್ಳೆಯವನಾಗಿರುವಲ್ಲಿ ಇದು ಹೇಗೆ ಸಾಧ್ಯ’ ಎಂದು ಫಿಡೇಲ್ಯಳು ಯೋಚಿಸತೊಡಗಿದಳು.

ತಾರಾ ಎಂಬ ಡಾಕ್ಟರ್‌ ನೇಪಾಲದ ಕಾಟ್ಮಂಡುವಿನಲ್ಲಿ ಹಿಂದೂ ಧರ್ಮದಲ್ಲಿ ಬೆಳೆದಳು. ತನ್ನ ಪೂರ್ವಿಕರ ಹಲವಾರು ಶತಮಾನಗಳಷ್ಟು ಹಳೆಯ ಸಂಪ್ರದಾಯಕ್ಕನುಸಾರ ಆಕೆ ಹಿಂದೂ ದೇವಸ್ಥಾನಗಳಲ್ಲಿ ದೇವತೆಗಳನ್ನು ಆರಾಧಿಸುತ್ತಿದ್ದಳು ಮತ್ತು ತನ್ನ ಮನೆಯಲ್ಲಿಯೂ ವಿಗ್ರಹಗಳನ್ನು ಇಟ್ಟುಕೊಂಡಿದ್ದಳು. ಆದರೆ, ಇಷ್ಟೊಂದು ಕಷ್ಟಾನುಭವಗಳು ಏಕೆ ಇವೆ? ಜನರು ಸಾಯುವುದೇಕೆ? ಎಂಬ ಪ್ರಶ್ನೆಗಳಿಂದ ಆಕೆ ತಬ್ಬಿಬ್ಬಾದಳು. ಆಕೆಯ ಧರ್ಮದಲ್ಲಿ ತೃಪ್ತಿಕರವಾದ ಉತ್ತರಗಳು ಆಕೆಗೆ ದೊರೆಯಲಿಲ್ಲ.

ಪಾನ್ಯ ಎಂಬುವವನು ಥಾಯ್‌ಲೆಂಡ್‌ ದೇಶದ ಬ್ಯಾಂಕಾಕ್‌ ನಗರದ ಕಾಲುವೆಯ ಪಕ್ಕದ ಮನೆಯೊಂದರಲ್ಲಿ ಬೌದ್ಧನಾಗಿ ಬೆಳೆದನು. ಹಿಂದಿನ ಜನ್ಮಗಳಲ್ಲಿ ಮಾಡಿದ ತಪ್ಪುಗಳ ಫಲವಾಗಿ ಕಷ್ಟಾನುಭವಗಳು ಬರುತ್ತವೆಂದೂ ಎಲ್ಲ ಆಸೆಗಳನ್ನು ತೊರೆಯುವುದರ ಮೂಲಕ ಅದರಿಂದ ಬಿಡುಗಡೆಯನ್ನು ಪಡೆಯಸಾಧ್ಯವಿದೆಯೆಂದೂ ಅವನಿಗೆ ಕಲಿಸಲಾಗಿತ್ತು. ಬೇರೆ ಯಥಾರ್ಥವಂತರಾದ ಬೌದ್ಧ ಮತೀಯರಂತೆ, ಪ್ರತಿದಿನ ಬೆಳಗ್ಗೆ ಭಿಕ್ಷೆಗಾಗಿ ಬರುತ್ತಿದ್ದ ಹಳದಿ ಮೇಲುಡುಪಿನ ಭಿಕ್ಷುಗಳ ವಿವೇಕಕ್ಕೆ ಆಳವಾದ ಗೌರವವನ್ನು ಕೊಡುವಂತೆ ಇವನಿಗೂ ಕಲಿಸಲಾಗಿತ್ತು. ಅವನು ಯಾವಾಗಲೂ ಧ್ಯಾನವನ್ನು ಮಾಡುತ್ತಿದ್ದನು ಮತ್ತು ಬುದ್ಧನ ಮೂರ್ತಿಗಳು ಸುರಕ್ಷಿತತೆಯನ್ನು ಒದಗಿಸುತ್ತವೆಂಬ ವಿಶ್ವಾಸದಿಂದ ಅವುಗಳನ್ನು ಸಂಗ್ರಹಿಸುತ್ತಿದ್ದನು. ಒಂದು ದೊಡ್ಡ ಅಪಘಾತದ ಕಾರಣ ಸೊಂಟದಿಂದ ಕೆಳಕ್ಕೆ ಲಕ್ವಹೊಡೆಯಲ್ಪಟ್ಟಿದ್ದ ಪಾನ್ಯ, ಬೌದ್ಧ ಸಂನ್ಯಾಸಿಮಠಗಳಿಗೆ ಭೇಟಿಕೊಡುತ್ತ ಅದ್ಭುತಕರವಾಗಿ ಗುಣಹೊಂದಲು ಯಥಾರ್ಥತೆಯಿಂದ ನಿರೀಕ್ಷಿಸುತ್ತಿದ್ದನು. ಆದರೆ ಅವನು ಗುಣಹೊಂದಲೂ ಇಲ್ಲ, ಜ್ಞಾನೋದಯವನ್ನು ಪಡೆದುಕೊಳ್ಳಲೂ ಇಲ್ಲ. ಬದಲಿಗೆ, ಅವನು ಪ್ರೇತವ್ಯವಹಾರಕ್ಕೆ ಬಲಿಯಾಗಿ ಅದರಲ್ಲಿ ಒಳಗೂಡತೊಡಗಿದನು.

ವರ್ಜಿಲ್‌ ಎಂಬುವವನು ಅಮೆರಿಕದಲ್ಲಿ ಜನಿಸಿ, ಕಾಲೇಜಿನಲ್ಲಿ ಬ್ಲ್ಯಾಕ್‌ ಮುಸ್ಲಿಮ್‌ ಪಂಥವನ್ನು ಸೇರಿದನು. ಅವನು ಅತ್ಯಂತ ಹುರುಪಿನಿಂದ ಅವರ ಪುಸ್ತಕಗಳನ್ನು ಹಂಚತೊಡಗಿದನು. ಅದರಲ್ಲಿ ಬಿಳಿಯ ವ್ಯಕ್ತಿಯನ್ನು ಪಿಶಾಚನೆಂದು ಕರೆಯಲಾಗಿತ್ತು. ಬಿಳಿಯರು ಕರಿಯರ ಮೇಲೆ ಅಷ್ಟೊಂದು ಪಾಶವೀಯತೆಯನ್ನು ತೋರಿಸುವುದು ಇದೇ ಕಾರಣದಿಂದ ಎಂದು ಅವರು ನೆನಸುತ್ತಿದ್ದರು. ವರ್ಜಿಲ್‌ ಇದನ್ನೆಲ್ಲ ಯಥಾರ್ಥತೆಯಿಂದ ನಂಬುತ್ತಿದ್ದರೂ, ಎಲ್ಲ ಬಿಳಿಯರು ಹೇಗೆ ಕೆಟ್ಟವರಾಗುವುದು ಸಾಧ್ಯ? ಸೌವಾರ್ತಿಕರ ಪ್ರಸಂಗದ ಹೆಚ್ಚಿನಾಂಶವು ಹಣಕಾಸಿಗೆ ಸಂಬಂಧಿಸಿದ್ದಾಗಿದೆ ಏಕೆ? ಎಂಬ ಪ್ರಶ್ನೆಗಳಿಂದ ಗೊಂದಲಕ್ಕೊಳಗಾದನು.

ಚಾರೊ ಎಂಬುವವಳು ಕ್ಯಾಥೊಲಿಕರು ಬಹುಸಂಖ್ಯೆಯಲ್ಲಿರುವ ದಕ್ಷಿಣ ಅಮೆರಿಕದಲ್ಲಿ ಬೆಳೆದು ಬಂದಿದ್ದರೂ, ಆಕೆ ಯಥಾರ್ಥ ಹೃದಯದ ಪ್ರಾಟೆಸ್ಟಂಟ್‌ ಆಗಿದ್ದಳು. ತನ್ನ ಸುತ್ತಲೂ ನಡೆಯುತ್ತಿದ್ದ ವಿಗ್ರಹಾರಾಧನೆಯಲ್ಲಿ ತಾನು ಒಳಗೂಡದೆ ಇದ್ದುದಕ್ಕಾಗಿ ಆಕೆ ಸಂತೋಷಿಸಿದಳು. ಪ್ರತಿ ಭಾನುವಾರ ಭಾವಾವೇಶಪೂರಿತ ಆರಾಧನೆಗಾಗಿ ಚರ್ಚಿಗೆ ಹೋಗುವುದರಲ್ಲಿ ಆಕೆ ಆನಂದಿಸಿದಳು. ಅಲ್ಲಿ ಆಕೆ “ಹಲ್ಲೆಲೂಯ!” ಎಂದು ಆರ್ಭಟಿಸಿ, ಬಳಿಕ ನಡೆದ ಧಾರ್ಮಿಕ ಹಾಡು ಮತ್ತು ಕುಣಿತಗಳಲ್ಲಿ ಭಾಗವಹಿಸಿದಳು. ತಾನು ನಿಜವಾಗಿಯೂ ರಕ್ಷಿಸಲ್ಪಟ್ಟಿದ್ದೇನೆಂದೂ ಪುನರ್ಜನಿಸಿದ್ದೇನೆಂದೂ ಚಾರೊ ಯಥಾರ್ಥವಾಗಿ ನಂಬಿದಳು. ತನ್ನ ಸಂಪಾದನೆಯ ದಶಮಾಂಶವನ್ನು ಆಕೆ ಚರ್ಚಿಗೆ ಕೊಡುತ್ತಿದ್ದಳು ಮತ್ತು ಆಕೆಯ ಮೆಚ್ಚಿನ ಟಿವಿ ಉಪದೇಶಕನು ಕಾಣಿಕೆಗಳನ್ನು ಕೇಳಿದಾಗ, ಆಕೆ ಆಫ್ರಿಕದ ಮಕ್ಕಳಿಗಾಗಿ ಹಣವನ್ನು ಕಳುಹಿಸಿದಳು. ಪ್ರೀತಿಸುವ ದೇವರು ಆತ್ಮಗಳನ್ನು ನರಕದಲ್ಲಿ ಏಕೆ ಯಾತನೆಗೊಳಪಡಿಸುತ್ತಾನೆಂದು ಆಕೆ ತನ್ನ ಉಪದೇಶಕನನ್ನು ಕೇಳಿದಾಗ, ಅದಕ್ಕೆ ಅರ್ಥವತ್ತಾದ ಉತ್ತರವು ಅವನಲ್ಲಿರಲಿಲ್ಲವೆಂದು ಆಕೆಗೆ ತಿಳಿದುಬಂತು. ತರುವಾಯ, ತನ್ನ ಕಾಣಿಕೆಗಳು ಆಫ್ರಿಕದ ಮಕ್ಕಳ ಸಹಾಯಾರ್ಥವಾಗಿ ಉಪಯೋಗಿಸಲ್ಪಡುತ್ತಿರಲಿಲ್ಲವೆಂದೂ ಆಕೆಗೆ ತಿಳಿದುಬಂತು.

ವಿವಿಧ ಹಿನ್ನೆಲೆಯವರಾದರೂ ಈ ಐವರಲ್ಲಿ ಸಾಮಾನ್ಯವಾದ ಒಂದು ವಿಷಯವಿತ್ತು. ಅವರು ಸತ್ಯವನ್ನು ಪ್ರೀತಿಸಿ, ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಯಥಾರ್ಥವಾಗಿ ಪ್ರಯತ್ನಿಸಿದರು. ಆದರೆ ಅವರನ್ನು ಸತ್ಯಾರಾಧನೆಯಲ್ಲಿ ಐಕ್ಯಗೊಳಿಸುವುದು ನಿಜವಾಗಿಯೂ ಸಾಧ್ಯವೊ? ಈ ಪ್ರಶ್ನೆಗೆ ಮುಂದಿನ ಲೇಖನವು ಉತ್ತರ ಕೊಡುವುದು.

[ಪುಟ 3ರಲ್ಲಿರುವ ಚಿತ್ರ ಕೃಪೆ]

G.P.O., Jerusalem

[ಪುಟ 4ರಲ್ಲಿರುವ ಚಿತ್ರ]

ವಿವಿಧ ಹಿನ್ನೆಲೆಗಳ ಜನರು ನಿಜವಾಗಿಯೂ ಐಕ್ಯಗೊಳ್ಳುವುದು ಸಾಧ್ಯವೊ?