ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಖರ್ಜೂರದ ವೃಕ್ಷದಿಂದ ಒಂದು ಪಾಠ

ಖರ್ಜೂರದ ವೃಕ್ಷದಿಂದ ಒಂದು ಪಾಠ

ಖರ್ಜೂರದ ವೃಕ್ಷದಿಂದ ಒಂದು ಪಾಠ

“ಅಪೂರ್ವ ಸೌಂದರ್ಯವುಳ್ಳ ಒಯ್ಯಾರದ ಛಾಯಾರೂಪ.” ಹೀಗೆಂದು ಒಂದು ಬೈಬಲ್‌ ವಿಶ್ವಕೋಶವು ಖರ್ಜೂರ ವೃಕ್ಷವನ್ನು ವರ್ಣಿಸುತ್ತದೆ. ಬೈಬಲಿನ ಕಾಲದಲ್ಲಿ ಮತ್ತು ಈಗ, ಖರ್ಜೂರ ವೃಕ್ಷಗಳು ಈಜಿಪ್ಟಿನ ನೈಲ್‌ ನದೀ ಕಣಿವೆಯನ್ನು ಅಲಂಕರಿಸುತ್ತವೆ ಮತ್ತು ನೆಗೆಬ್‌ ಮರುಭೂಮಿಯ ಒಯಸೀಸ್‌ನ ಸುತ್ತಲೂ ಚೈತನ್ಯಕರವಾದ ಛಾಯೆಯನ್ನು ಲಭ್ಯಗೊಳಿಸುತ್ತವೆ.

ತಾಳೆಯ ಮರಗಳ ಹೆಚ್ಚಿನ ಜಾತಿಗಳು ಹೇಗೊ ಹಾಗೆ ಖರ್ಜೂರ ತಾಳೆಗೆ ಸಹ ಒಂದು ನೆಟ್ಟನೆಯ ಆಕರ್ಷಕ ನಿಲುವಿದೆ. ಕೆಲವು ಮರಗಳು 30 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ ಮತ್ತು 150 ವರ್ಷಗಳ ತನಕ ಫಲಬಿಡುತ್ತಾ ಇರುತ್ತವೆ. ಹೌದು, ಖರ್ಜೂರ ವೃಕ್ಷವು ನಯನ ಮನೋಹರವಾಗಿದೆ ಮತ್ತು ಬೆರಗುಗೊಳಿಸುವ ರೀತಿಯಲ್ಲಿ ಫಲಭರಿತವೂ ಆಗಿದೆ. ಅದು ಪ್ರತಿ ವರ್ಷ ನೂರಾರು ಗೊಂಚಲು ಹಣ್ಣುಗಳನ್ನು ಬಿಡುತ್ತದೆ. ಪ್ರತಿಯೊಂದು ಗೊಂಚಲಲ್ಲಿ 1000ಕ್ಕಿಂತಲೂ ಹೆಚ್ಚು ಖರ್ಜೂರದ ಹಣ್ಣುಗಳಿರಬಹುದು. ಖರ್ಜೂರದ ಹಣ್ಣುಗಳ ಕುರಿತು ಒಬ್ಬ ಗ್ರಂಥಕರ್ತನು ಹೇಳಿದ್ದು: “ಯಾರು ಒಣಗಿಸಿ, ಡಬ್ಬಿಯಲ್ಲಿ ಪ್ಯಾಕ್‌ಮಾಡಿ ಅಂಗಡಿಗಳಲ್ಲಿ ಮಾರಲ್ಪಡುವ ಖರ್ಜೂರದ ಹಣ್ಣುಗಳನ್ನು ಮಾತ್ರವೇ ತಿಂದಿದ್ದಾರೊ ಅವರು, ಅದರ ತಾಜಾ ಹಣ್ಣಿನ ಸೊಗಸಾದ ಸವಿಯನ್ನು ಬಲ್ಲವರೇ ಅಲ್ಲ.”

ತಕ್ಕದ್ದಾಗಿಯೆ ಬೈಬಲು, ನಿರ್ದಿಷ್ಟ ಮಾನವರನ್ನು ಖರ್ಜೂರದ ಮರಗಳಿಗೆ ಹೋಲಿಸಿದೆ. ದೇವರ ದೃಷ್ಟಿಯಲ್ಲಿ ಮೆಚ್ಚಿಗೆಯನ್ನು ಪಡೆಯಬೇಕಾದರೆ, ಒಬ್ಬನು ಫಲಭರಿತ ಖರ್ಜೂರ ವೃಕ್ಷದಂತೆ ನೈತಿಕವಾಗಿ ನೆಟ್ಟನೆಯ ನಿಲುವುಳ್ಳವನೂ ಸತ್ಕಾರ್ಯಗಳೆಂಬ ಫಲವನ್ನು ಸದಾ ಉತ್ಪಾದಿಸುವವನೂ ಆಗಿರಬೇಕು. (ಮತ್ತಾಯ 7:​17-20) ಈ ಕಾರಣಕ್ಕಾಗಿಯೆ, ಸೊಲೊಮೋನನ ಆಲಯ ಮತ್ತು ಯೆಹೆಜ್ಕೇಲನ ದಾರ್ಶನಿಕ ಆಲಯ ಎರಡರಲ್ಲೂ, ಅಲಂಕಾರಕ್ಕಾಗಿ ಖರ್ಜೂರ ವೃಕ್ಷಗಳನ್ನು ನಿಲುವುಕಂಬಗಳಲ್ಲಿ ಚಿತ್ರಿಸಲಾಗಿತ್ತು. (1 ಅರಸುಗಳು 6:​29, 32, 35; ಯೆಹೆಜ್ಕೇಲ 40:​14-16, 20, 22) ಹೀಗೆ ಒಬ್ಬನ ಆರಾಧನೆಯು ದೇವರಿಗೆ ಸ್ವೀಕಾರಯೋಗ್ಯವಾಗಬೇಕಾದರೆ, ಖರ್ಜೂರ ವೃಕ್ಷದ ಅಪೇಕ್ಷಣೀಯ ಗುಣಲಕ್ಷಣಗಳು ಅವನಲ್ಲಿರಬೇಕು. ದೇವರ ವಾಕ್ಯವು ವಿವರಿಸುವುದು: “ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು.”​—ಕೀರ್ತನೆ 92:12.