ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ನಂಬಿಕೆ ಈಗಲೂ ಶಕ್ಯವೊ?

ನಿಜ ನಂಬಿಕೆ ಈಗಲೂ ಶಕ್ಯವೊ?

ನಿಜ ನಂಬಿಕೆ ಈಗಲೂ ಶಕ್ಯವೊ?

“ನಂಬಿಕೆಯು ಸಜೀವವೂ ನಿರ್ಭೀತವೂ ದೇವರ ಕೃಪೆಯಲ್ಲಿ ಭರವಸವುಳ್ಳದ್ದೂ ಆಗಿದೆ. ಅದು ಎಷ್ಟು ನಿಶ್ಚಿತವೂ ಸುದೃಢವೂ ಆಗಿದೆಯೆಂದರೆ, ವಿಶ್ವಾಸಿಯು ಅದರ ಮೇಲೆ ಸಹಸ್ರಾರು ಬಾರಿ ತನ್ನ ಜೀವವನ್ನು ಪಣವೊಡ್ಡಬಲ್ಲನು.”—ಮಾರ್ಟಿನ್‌ ಲೂಥರ್‌, 1522.

“ಈಗಾಗಲೇ ನಾವು, ಕ್ರೈಸ್ತ ನಂಬಿಕೆಗಳು ಮತ್ತು ಪದ್ಧತಿಗಳು ಬಹುಮಟ್ಟಿಗೆ ಅಸ್ತಿತ್ವದಲ್ಲೇ ಇಲ್ಲದಿರುವಂಥ ಒಂದು ಐಹಿಕ ಸಮಾಜವಾಗಿ ರೂಪುಗೊಂಡಿದ್ದೇವೆ.”—ಲೂಡೂವಿಕ್‌ ಕೆನಡಿ, 1999.

ನಂಬಿಕೆಯ ಕುರಿತಾದ ಅಭಿಪ್ರಾಯಗಳು ಗಮನಾರ್ಹವಾಗಿ ಭಿನ್ನವಾಗಿರುತ್ತವೆ. ಗತಕಾಲದಲ್ಲಿ, ದೇವರಲ್ಲಿ ನಂಬಿಕೆ ಇರುವುದು ಒಂದು ಸರ್ವಸಾಮಾನ್ಯ ಸಂಗತಿಯಾಗಿತ್ತು. ಈಗಲಾದರೊ ಸಂದೇಹ ಮತ್ತು ಕಷ್ಟನರಳಾಟವು ತುಂಬಿರುವ ಈ ಲೋಕದಲ್ಲಿ, ದೇವರಲ್ಲಿ ಮತ್ತು ಬೈಬಲಿನಲ್ಲಿ ನಿಜ ನಂಬಿಕೆಯು ಶೀಘ್ರಗತಿಯಲ್ಲಿ ಮಾಯವಾಗುತ್ತಲಿದೆ.

ನಿಜ ನಂಬಿಕೆ

ಅನೇಕರಿಗೆ “ನಂಬಿಕೆ”ಯೆಂದರೆ ಕೇವಲ ಒಂದು ಧಾರ್ಮಿಕ ವಿಶ್ವಾಸವನ್ನು ಹೊಂದಿರುವುದು ಅಥವಾ ಒಂದು ಆರಾಧನಾ ಪದ್ಧತಿಯನ್ನು ಅನುಸರಿಸುವುದಾಗಿದೆ. ಆದರೆ ಬೈಬಲಿನಲ್ಲಿ ತಿಳಿಸಿರುವ “ನಂಬಿಕೆ”ಯಾದರೊ ಸಂಪೂರ್ಣ ಭರವಸೆ, ದೇವರಲ್ಲಿಯೂ ಆತನ ವಾಗ್ದಾನಗಳಲ್ಲಿಯೂ ನಿಶ್ಚಲವಾದ ವಿಶ್ವಾಸ ಎಂಬ ಮೂಲಾರ್ಥವನ್ನು ಹೊಂದಿದೆ. ಅದು ಯೇಸು ಕ್ರಿಸ್ತನ ಶಿಷ್ಯರನ್ನು ಗುರುತಿಸುವ ಒಂದು ಗುಣವಾಗಿದೆ.

ಬೇಸರಗೊಳ್ಳದೆ “ಯಾವಾಗಲೂ” ಪ್ರಾರ್ಥಿಸುವ ಅಗತ್ಯದ ಕುರಿತಾಗಿ ಒಮ್ಮೆ ಯೇಸು ಕ್ರಿಸ್ತನು ಮಾತಾಡಿದನು. ಹಾಗೆ ಮಾಡಿದಾಗ ನಿಜ ನಂಬಿಕೆಯು ನಮ್ಮೀ ದಿನಗಳ ತನಕ ಅಸ್ತಿತ್ವದಲ್ಲಿರುವುದೊ ಇಲ್ಲವೊ ಎಂಬುದರ ಕುರಿತು ಒಂದು ಪ್ರಶ್ನೆಯನ್ನು ಎಬ್ಬಿಸಿದನು. ಅವನು ಕೇಳಿದ್ದು: “ಮನುಷ್ಯ ಕುಮಾರನು ಬಂದಾಗ ಭೂಮಿಯ ಮೇಲೆ [ಈ] ನಂಬಿಕೆಯನ್ನು ಕಾಣುವನೋ?”​—ಲೂಕ 18:​1, 8.

ನಷ್ಟವಾದ ನಂಬಿಕೆ

ಜನರಲ್ಲಿರಬಹುದಾದ ನಂಬಿಕೆಯು ನಷ್ಟಗೊಳ್ಳಲು ಅನೇಕ ವಿಷಯಗಳು ಕಾರಣವಾಗಬಲ್ಲವು. ದಿನನಿತ್ಯದ ಜೀವಿತದ ಕಷ್ಟಸಂಕಟಗಳು ಅವುಗಳಲ್ಲಿ ಕೆಲವಾಗಿವೆ. ಉದಾಹರಣೆಗೆ, ಮೆಂಚೆಸ್ಟರ್‌ ಯುನೈಟೆಡ್‌ ಫುಟ್‌ಬಾಲ್‌ ತಂಡದ ಅನೇಕ ಆಟಗಾರರು 1958ರ ಮ್ಯೂನಿಕ್‌ ವಿಮಾನಾಘಾತದಲ್ಲಿ ಮೃತರಾದಾಗ, ಪ್ರೊಫೆಸರ್‌ ಮೈಕಲ್‌ ಗಾಲ್ಡರ್‌ ಇಂಗ್ಲೆಂಡಿನ ಮೆಂಚೆಸ್ಟರ್‌ನ ಸಭಾಪಾದ್ರಿಯಾಗಿದ್ದರು. ಬಿ.ಬಿ.ಸಿ. ಟೆಲಿವಿಷನ್‌ ಕಾರ್ಯಕ್ರಮದ ಪ್ರಸಾರಕ ಜೋನ್‌ ಬೇಕ್‌ವೆಲ್‌, ಗಾಲ್ಡರ್‌ ಕುರಿತು ತಿಳಿಸುತ್ತಾ, “ಜನರ ಘೋರ ದುಃಖವನ್ನು ಕಂಡಾಗ ಅವರಿಗೆ ಸಹಾಯಶೂನ್ಯತೆಯ ಅರಿವಾಯಿತು” ಎಂದು ಹೇಳಿದಳು. ಪರಿಣಾಮವಾಗಿ ಅವರು “ಮಾನವರ ಸುಖದುಃಖದಲ್ಲಿ ಹಸ್ತಕ್ಷೇಪ ಮಾಡುವ ಒಬ್ಬ ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡರು.” “ಬೈಬಲು, ದೇವರ ದೋಷಾತೀತ ವಾಕ್ಯವಲ್ಲ,” ಬದಲಿಗೆ “ಅಲ್ಲಿ ಇಲ್ಲಿ ತುಸು ದೈವ ಪ್ರೇರಣೆಯನ್ನು ಹೊಂದಿರುವ ತಪ್ಪುಒಪ್ಪುಗಳಿರುವ ಮನುಷ್ಯನ ವಾಕ್ಯ”ವೆಂಬುದು ತನ್ನ ನಂಬಿಕೆಯೆಂದು ಗಾಲ್ಡರ್‌ ಹೇಳಿದರು.

ಕೆಲವು ಸಲ ನಂಬಿಕೆಯು ತಾನಾಗಿಯೇ ಬಾಡಿಹೋಗುತ್ತದೆ. ಲೇಖಕನೂ ಪ್ರಸಾರಕನೂ ಆಗಿದ್ದ ಲೂಡೂವಿಕ್‌ ಕೆನಡಿ ಎಂಬುವವನಿಗೆ ಅದೇ ಸಂಭವಿಸಿತು. ಬಾಲ್ಯದಿಂದಲೇ ಅವನಿಗೆ “[ದೇವರ ಕುರಿತು] ಸಂದೇಹ ಮತ್ತು ಅನಿಶ್ಚಿತತೆಗಳು ಆಗಿಂದಾಗ್ಯೆ ಮೂಡಿಬರುತ್ತಾ [ಅವನಲ್ಲಿ] ಅವಿಶ್ವಾಸವು ಬೆಳೆಯಿತು” ಎಂದನವನು. ಅವನ ಪ್ರಶ್ನೆಗಳಿಗೆ ಯಾರೊಬ್ಬರೂ ತೃಪ್ತಿಕರವಾದ ಉತ್ತರಗಳನ್ನು ಕೊಡಲಾರದೆ ಹೋದರು. ಸಮುದ್ರದಲ್ಲಿ ಸಾವನ್ನಪ್ಪಿದ ಅವನ ತಂದೆಯ ಮರಣವಾದರೊ ಅವನ ಅತಿ ದುರ್ಬಲ ನಂಬಿಕೆಗೆ ಗುರುತರವಾದ ಹೊಡೆತವನ್ನು ಕೊಟ್ಟಿತು. “ಸಮುದ್ರದ ಅಪಾಯಗಳಿಂದ ಹಾಗೂ ವೈರಿಗಳ ಹಿಂಸಾಚಾರದಿಂದ ನಮ್ಮನ್ನು ಕಾಪಾಡಿ ನಡಿಸು” ಎಂಬ ಪ್ರಾರ್ಥನೆಗಳಿಗೆ ಯಾವ ಉತ್ತರವೂ ಸಿಕ್ಕಲಿಲ್ಲ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಯಾವುದರಲ್ಲಿ ಅವನ ತಂದೆಯಿದ್ದರೊ ಆ ಪ್ರಯಾಣ ನೌಕೆಯಾಗಿ ಪರಿವರ್ತಿಸಲ್ಪಟ್ಟ ಹಡಗಿನ ಮೇಲೆ ಜರ್ಮನರು ದಾಳಿಮಾಡಿ ಅದನ್ನು ಧ್ವಂಸಗೊಳಿಸಿದರು.​—ಎಲ್ಲವೂ ಬರಿಯ ಕಲ್ಪನೆ​—ದೇವರಿಗೆ ವಿದಾಯ (ಇಂಗ್ಲಿಷ್‌).

ಇಂಥ ಅನುಭವಗಳು ಅಸಾಮಾನ್ಯವೇನಲ್ಲ. ‘ಎಲ್ಲರಲ್ಲಿ ನಂಬಿಕೆಯಿಲ್ಲವಲ್ಲಾ’ ಎಂದು ಅಪೊಸ್ತಲ ಪೌಲನಂದನು. (2 ಥೆಸಲೊನೀಕ 3:2) ನೀವೇನು ನೆನಸುತ್ತೀರಿ? ಈ ಸಂದೇಹಗ್ರಸ್ತ ಲೋಕದಲ್ಲಿ, ದೇವರಲ್ಲಿ ಮತ್ತು ಆತನ ವಾಕ್ಯದಲ್ಲಿನ ನಿಜ ನಂಬಿಕೆಯು ಇನ್ನೂ ಶಕ್ಯವೊ? ಈ ವಿಷಯದಲ್ಲಿ ಮುಂದಿನ ಲೇಖನವು ಏನನ್ನುತ್ತದೋ ಅದನ್ನು ಪರೀಕ್ಷಿಸಿರಿ.