ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳನ್ನು ತರಬೇತುಗೊಳಿಸುವಾಗ ಯೆಹೋವನನ್ನು ಅನುಕರಿಸಿರಿ

ನಿಮ್ಮ ಮಕ್ಕಳನ್ನು ತರಬೇತುಗೊಳಿಸುವಾಗ ಯೆಹೋವನನ್ನು ಅನುಕರಿಸಿರಿ

ನಿಮ್ಮ ಮಕ್ಕಳನ್ನು ತರಬೇತುಗೊಳಿಸುವಾಗ ಯೆಹೋವನನ್ನು ಅನುಕರಿಸಿರಿ

“ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿ?”​—ಇಬ್ರಿಯ 12:7.

1, 2. ತಮ್ಮ ಮಕ್ಕಳನ್ನು ಸಾಹಿಸಲಹಲು ಇಂದು ಹೆತ್ತವರಿಗೆ ಅಷ್ಟು ಕಷ್ಟಕರವಾಗಿರುವುದೇಕೆ?

ಕೆಲವು ವರ್ಷಗಳ ಹಿಂದೆ ಜಪಾನಿನಲ್ಲಿ ನಡೆಸಲಾದ ಒಂದು ಸಮೀಕ್ಷೆಗನುಸಾರ, ಇಂಟರ್‌ವ್ಯೂ ಮಾಡಲ್ಪಟ್ಟ ಸುಮಾರು ಅರ್ಧದಷ್ಟು ವಯಸ್ಕರು, ಹೆತ್ತವರು ಮತ್ತು ಅವರ ಮಕ್ಕಳ ಮಧ್ಯೆ ತೀರ ಕಡಿಮೆ ಸಂವಾದವು ನಡೆಯುತ್ತಿದೆಯೆಂದೂ ಹೆತ್ತವರು ತಮ್ಮ ಮಕ್ಕಳನ್ನು ಅತಿಯಾಗಿ ಮುದ್ದಿಸಿ ಹಾಳುಮಾಡುತ್ತಾರೆಂದೂ ಅಭಿಪ್ರಯಿಸಿದರು. ಆ ದೇಶದಲ್ಲಿ ನಡೆಸಲಾದ ಇನ್ನೊಂದು ಸಮೀಕ್ಷೆಯಲ್ಲಿ, ಇಂಟರ್‌ವ್ಯೂ ಮಾಡಲ್ಪಟ್ಟ ಸುಮಾರು ಕಾಲು ಪಾಲಷ್ಟು ಜನರು, ಮಕ್ಕಳೊಂದಿಗೆ ಕಲೆತು ಪರಸ್ಪರ ಪ್ರತಿಕ್ರಿಯಿಸುವುದು ಹೇಗೆಂಬುದು ತಮಗೆ ತಿಳಿಯದು ಎಂದು ಹೇಳಿದರು. ಈ ಪ್ರವೃತ್ತಿಯು ಪೌರಾತ್ಯ ದೇಶಕ್ಕೇ ಮೀಸಲಾಗಿಲ್ಲ. “ಅನೇಕ ಕೆನೇಡಿಯನ್‌ ಹೆತ್ತವರು​—ಒಳ್ಳೆಯ ಹೆತ್ತವರಾಗಿರುವುದು ಹೇಗೆಂಬ ವಿಷಯದಲ್ಲಿ ತಾವು ಅನಿಶ್ಚಿತರಾಗಿದ್ದೇವೆಂದು ಒಪ್ಪಿಕೊಳ್ಳುತ್ತಾರೆ” ಎಂಬುದಾಗಿ ದ ಟೊರಾಂಟೊ ಸ್ಟಾರ್‌ ಪತ್ರಿಕೆಯು ಪ್ರಕಟಿಸಿತು. ಎಲ್ಲಾ ಕಡೆಗಳಲ್ಲೂ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವುದು ಹೆತ್ತವರಿಗೆ ಕಷ್ಟಕರವಾಗುತ್ತಿದೆ.

2 ತಮ್ಮ ಮಕ್ಕಳನ್ನು ಸಾಕಿಸಲಹಲು ಹೆತ್ತವರಿಗೆ ಅಷ್ಟು ಕಷ್ಟಕರವಾಗಿರುವುದೇಕೆ? ಒಂದು ಮುಖ್ಯ ಕಾರಣವು, ‘ವ್ಯವಹರಿಸಲು ಕಷ್ಟಕರವಾದ ಕಠಿನಕಾಲದಲ್ಲಿ’ ಮತ್ತು “ಕಡೇ ದಿವಸಗಳಲ್ಲಿ” ನಾವು ಜೀವಿಸುವುದೇ ಆಗಿದೆ. (2 ತಿಮೊಥೆಯ 3:​1, NW) ಅದಲ್ಲದೆ, “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂದು ಬೈಬಲು ಹೇಳುತ್ತದೆ. (ಆದಿಕಾಂಡ 8:21) ಮತ್ತು ವಿಶೇಷವಾಗಿ ಯುವ ಜನರು ಸೈತಾನನ ಆಕ್ರಮಣಗಳಿಗೆ ಸುಲಭಬೇಧ್ಯರಾಗಿದ್ದಾರೆ. “ಗರ್ಜಿಸುವ ಸಿಂಹ”ದೋಪಾದಿಯಲ್ಲಿ ಅವನು ಅನನುಭವಿಗಳಾದ ವ್ಯಕ್ತಿಗಳನ್ನು ಹೊಂಚಿ ಬೇಟೆಯಾಡುತ್ತಾನೆ. (1 ಪೇತ್ರ 5:8) ತಮ್ಮ ಮಕ್ಕಳನ್ನು ‘ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ’ ಸಾಕಿಸಲಹಲು ಪ್ರಯತ್ನಿಸುವಾಗ ಕ್ರೈಸ್ತ ಹೆತ್ತವರಿಗಿರುವ ಕಷ್ಟಗಳಾದರೊ ಅನೇಕ. (ಎಫೆಸ 6:4, NW) ತಮ್ಮ ಮಕ್ಕಳು “ಇದು ಒಳ್ಳೇದು ಅದು ಕೆಟ್ಟದ್ದು” ಎಂಬ ಬೇಧವನ್ನು ತಿಳಿಯಲು ಶಕ್ತರಾಗಿರುವ ಯೆಹೋವನ ಪ್ರೌಢ ಆರಾಧಕರಾಗಿ ಬೆಳೆಯುವಂತೆ ಹೆತ್ತವರು ಹೇಗೆ ಸಹಾಯಮಾಡಸಾಧ್ಯವಿದೆ?​—ಇಬ್ರಿಯ 5:14.

3. ಮಕ್ಕಳನ್ನು ಸಾಫಲ್ಯದಿಂದ ಸಾಕಿಸಲಹಲು ಹೆತ್ತವರ ತರಬೇತಿ ಮತ್ತು ಮಾರ್ಗದರ್ಶನವು ಅತ್ಯಾವಶ್ಯಕವೇಕೆ?

3 “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ” ಎಂಬುದಾಗಿ ಜ್ಞಾನಿ ರಾಜನಾದ ಸೊಲೊಮೋನನು ಗಮನಿಸಿದನು. (ಜ್ಞಾನೋಕ್ತಿ 13:1; 22:15) ಅಂಥ ಮೂರ್ಖತನವನ್ನು ಅವರ ಹೃದಯದಿಂದ ತೊಲಗಿಸಲು ಮಕ್ಕಳಿಗೆ ಹೆತ್ತವರ ಪ್ರೀತಿಯ ತಿದ್ದುಪಾಟಿನ ಆವಶ್ಯಕತೆಯಿದೆ. ಯುವ ಜನರು ಅಂಥ ತಿದ್ದುಪಾಟನ್ನು ಯಾವಾಗಲೂ ಸಂತೋಷದಿಂದ ಸ್ವೀಕರಿಸುವುದಿಲ್ಲ ನಿಜ. ಬುದ್ಧಿವಾದವನ್ನು ನೀಡುವವರು ಯಾರೇ ಆಗಿರಲಿ, ಅವರದಕ್ಕೆ ತೀವ್ರವಾಗಿ ಮುನಿಯುತ್ತಾರೆ. ಆದುದರಿಂದ ಹೆತ್ತವರು “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸ”ಲು ಕಲಿಯಬೇಕು. (ಜ್ಞಾನೋಕ್ತಿ 22:6) ಅಂಥ ಶಿಸ್ತನ್ನು ಅನುಸರಿಸಿ ನಡೆಯಲು ಮಕ್ಕಳು ಕಲಿಯುವಾಗ, ಅದು ಅವರಿಗೆ ಜೀವವಾಗಿ ಪರಿಣಮಿಸುವುದು. (ಜ್ಞಾನೋಕ್ತಿ 4:13) ತಮ್ಮ ಮಕ್ಕಳಿಗೆ ತರಬೇತಿ ನೀಡುವುದರಲ್ಲಿ ಏನೆಲ್ಲಾ ಒಳಗೂಡಿದೆಯೆಂದು ಹೆತ್ತವರಿಗೆ ತಿಳಿದಿರುವುದು ಅದೆಷ್ಟು ಪ್ರಾಮುಖ್ಯ!

ಶಿಸ್ತು ಎಂದರೇನು?

4. ಬೈಬಲಿನಲ್ಲಿ ಉಪಯೋಗಿಸಲ್ಪಟ್ಟ ಪ್ರಕಾರ “ಶಿಸ್ತು” ಎಂಬುದರ ಮುಖ್ಯಾರ್ಥವೇನು?

4 ಶಾರೀರಿಕ, ಮೌಖಿಕ ಅಥವಾ ಮಾನಸಿಕ ದುರುಪಚಾರಕ್ಕೆ ದೋಷಿಗಳಾದೇವೊ ಎಂಬ ಭಯದಿಂದ ಕೆಲವು ಹೆತ್ತವರು ತಮ್ಮ ಮಕ್ಕಳನ್ನು ತಿದ್ದುವುದರಿಂದ ದೂರವಿರುತ್ತಾರೆ. ನಮಗೆ ಆ ರೀತಿ ಭಯಪಡುವ ಅಗತ್ಯವಿರುವುದಿಲ್ಲ. ಬೈಬಲಿನಲ್ಲಿ ಉಪಯೋಗಿಸಲ್ಪಟ್ಟ “ಶಿಸ್ತು” ಎಂಬ ಪದವು ಯಾವುದೇ ರೀತಿಯ ದೌರ್ಜನ್ಯ ಅಥವಾ ಕ್ರೂರತೆಯನ್ನು ಸೂಚಿಸುವುದಿಲ್ಲ. “ಶಿಸ್ತು” ಎಂಬುದರ ಗ್ರೀಕ್‌ ಪದರೂಪವು ಮುಖ್ಯವಾಗಿ ಬೋಧನೆ, ಶಿಕ್ಷಣ, ತಿದ್ದುಪಾಟು ಮತ್ತು ಕೆಲವು ಸಲ ಕಟ್ಟುನಿಟ್ಟಿನ ಆದರೆ ಪ್ರೀತಿಯಿಂದ ಕೂಡಿದ ದಂಡನೆಯಾಗಿದೆ.

5. ಯೆಹೋವನು ತನ್ನ ಜನರೊಂದಿಗೆ ವ್ಯವಹರಿಸುವ ರೀತಿಯನ್ನು ಗಮನಿಸುವುದು ಏಕೆ ಪ್ರಯೋಜನಕರವಾಗಿದೆ?

5 ಅಂಥ ಶಿಸ್ತನ್ನು ನೀಡುವ ವಿಷಯದಲ್ಲಿ ಯೆಹೋವ ದೇವರು ಒಂದು ಪರಿಪೂರ್ಣ ಮಾದರಿಯನ್ನು ಇಡುತ್ತಾನೆ. ಯೆಹೋವನನ್ನು ಒಬ್ಬ ಮಾನವ ತಂದೆಗೆ ಹೋಲಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ತಂದೆಯಿಂದ ಶಿಕ್ಷೆಹೊಂದದ ಮಗನೆಲ್ಲಿ? . . . ಆ ತಂದೆಗಳು ಕೆಲವು ದಿವಸಗಳ ಪ್ರಯೋಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು. ಆತನಾದರೊ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ.” (ಇಬ್ರಿಯ 12:​7-10) ಹೌದು, ಯೆಹೋವನು ತನ್ನ ಸೇವಕರನ್ನು ಅವರು ಪರಿಶುದ್ಧರು, ಇಲ್ಲವೇ ನಿರ್ಮಲರಾಗಿರುವ ಉದ್ದೇಶದಿಂದ ಶಿಸ್ತಿಗೊಳಪಡಿಸುತ್ತಾನೆ. ಯೆಹೋವನು ತನ್ನ ಜನರನ್ನು ಹೇಗೆ ತರಬೇತುಗೊಳಿಸಿದನು ಎಂಬುದನ್ನು ಗಮನಿಸುವ ಮೂಲಕ, ನಮ್ಮ ಮಕ್ಕಳನ್ನು ಶಿಸ್ತಿಗೊಳಪಡಿಸುವ ವಿಷಯದಲ್ಲಿ ನಾವು ಖಂಡಿತವಾಗಿಯೂ ಹೆಚ್ಚನ್ನು ಕಲಿಯಸಾಧ್ಯವಿದೆ.​—ಧರ್ಮೋಪದೇಶಕಾಂಡ 32:4; ಮತ್ತಾಯ 7:11; ಎಫೆಸ 5:1.

ಪ್ರೀತಿ​—ಪ್ರೇರಕ ಶಕ್ತಿ

6. ಯೆಹೋವನ ಪ್ರೀತಿಯನ್ನು ಅನುಕರಿಸುವುದು ಹೆತ್ತವರಿಗೆ ಕಷ್ಟಕರವಾಗಬಹುದು ಏಕೆ?

6 “ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ ಎಂದು ಅಪೊಸ್ತಲ ಯೋಹಾನನು ಹೇಳುತ್ತಾನೆ. ಹೀಗಿರಲಾಗಿ ಯೆಹೋವನು ಕೊಡುವ ತರಬೇತಿಯು ಯಾವಾಗಲೂ ಪ್ರೀತಿಯಿಂದ ಪ್ರೇರಿತವಾಗಿದೆ. (1 ಯೋಹಾನ 4:8; ಜ್ಞಾನೋಕ್ತಿ 3:​11, 12) ತಮ್ಮ ಮಕ್ಕಳಲ್ಲಿ ಸಹಜವಾದ ಮಮತೆಯಿರುವ ಹೆತ್ತವರು ಈ ವಿಷಯದಲ್ಲಿ ಯೆಹೋವನನ್ನು ಅನುಕರಿಸುವುದು ಬಹುಸುಲಭವೆಂದು ಇದರ ಅರ್ಥವೊ? ಹಾಗೇನಿಲ್ಲ. ದೇವರು ತೋರಿಸುವ ಪ್ರೀತಿಯು ತತ್ತ್ವಾಧಾರಿತವಾದ ಪ್ರೀತಿಯಾಗಿದೆ. ಅಂಥ ಪ್ರೀತಿಯು “ಯಾವಾಗಲೂ ಸ್ವಾಭಾವಿಕ ಒಲುಮೆಯಿಂದ ಹೊರಸೂಸುವ ಪ್ರವೃತ್ತಿಯದ್ದಲ್ಲ” ಎಂದು ಒಬ್ಬ ಗ್ರೀಕ್‌ ವಿದ್ವಾಂಸರು ಹೇಳುತ್ತಾರೆ. ದೇವರು ಭಾವೋದ್ರೇಕಗಳಿಂದ ಪ್ರಭಾವಿತನಾಗುವುದಿಲ್ಲ. ತನ್ನ ಜನರಿಗೆ ಯಾವುದು ಹಿತಕರವೊ, ಯಾವುದು ಉತ್ತಮವೊ ಅದನ್ನು ಆತನು ಪರಿಗಣನೆಗೆ ತೆಗೆದುಕೊಳ್ಳುತ್ತಾನೆ.​—ಯೆಶಾಯ 30:20; 48:17.

7, 8. (ಎ) ತನ್ನ ಜನರೊಂದಿಗೆ ವ್ಯವಹರಿಸುವುದರಲ್ಲಿ, ತತ್ತ್ವಾಧಾರಿತ ಪ್ರೀತಿಯ ಯಾವ ಮಾದರಿಯನ್ನು ಯೆಹೋವನು ಇಟ್ಟನು? (ಬಿ) ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುವ ಶಕ್ತಿಯನ್ನು ತಮ್ಮ ಮಕ್ಕಳು ಬೆಳೆಸಿಕೊಳ್ಳುವಂತೆ ಹೆತ್ತವರು ಯೆಹೋವನ ಮಾದರಿಯನ್ನು ಹೇಗೆ ಅನುಕರಿಸಬಹುದು?

7 ಇಸ್ರಾಯೇಲ್ಯರೊಂದಿಗೆ ವ್ಯವಹರಿಸಿದಾಗ ಯೆಹೋವನು ತೋರಿಸಿದ ಪ್ರೀತಿಯನ್ನು ಮನಸ್ಸಿಗೆ ತಂದುಕೊಳ್ಳಿರಿ. ಹೊಸ ಇಸ್ರಾಯೇಲ್‌ ಜನಾಂಗಕ್ಕಾಗಿ ಯೆಹೋವನಿಗಿದ್ದ ಪ್ರೀತಿಯನ್ನು ವರ್ಣಿಸಲಿಕ್ಕಾಗಿ ಮೋಶೆಯು ಒಂದು ಹೃದಯಸ್ಪರ್ಶಿ ಹೋಲಿಕೆಯನ್ನು ಉಪಯೋಗಿಸಿದನು. ನಾವು ಓದುವುದು: ‘ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡು . . . ಯೆಹೋವನೊಬ್ಬನೇ ಅವರನ್ನು ನಡಿಸಿಕೊಂಡು ಬಂದನು.’ (ಧರ್ಮೋಪದೇಶಕಾಂಡ 32:​9, 11, 12) ತಾಯಿಹದ್ದು ತನ್ನ ಚಿಕ್ಕ ಮರಿಗಳಿಗೆ ಹಾರಾಡಲು ಕಲಿಸಲಿಕ್ಕಾಗಿ, ‘ಗೂಡಿನೊಳಗಿಂದ ಹೊರಡಿಸುತ್ತದೆ,’ ರೆಕ್ಕೆಬಡಿಯುತ್ತಾ ಮೇಲಕ್ಕೂ ಕೆಳಕ್ಕೂ ಚಲಿಸಿ ಮರಿಗಳನ್ನು ಹಾರಾಡಲು ಪ್ರಚೋದಿಸುತ್ತದೆ. ಕೊನೆಗೆ ಒಂದು ಚಿಕ್ಕ ಮರಿಯು, ಹೆಚ್ಚಾಗಿ ಬೆಟ್ಟದ ಕಡಿದಾದ ತುದಿಯಲ್ಲಿರುವ ಗೂಡಿನೊಳಗಿಂದ ತಲೆಕೆಳಗಾಗಿ ಧುಮುಕುವಾಗ, ತಾಯಿಯು ರೆಕ್ಕೆಗಳನ್ನು ಚಾಚಿ ಆ ಮರಿಯ ‘ಬಳಿಯಲ್ಲೇ ಹಾರಾಡುತ್ತಿರುತ್ತದೆ.’ ಒಂದುವೇಳೆ ಆ ಮರಿಯು ನೆಲಕ್ಕೆ ಬೀಳಬಹುದು ಎಂದು ತೋರಿದರೆ, ಫಕ್ಕನೆ ತಾಯಿಹದ್ದು ಮರಿಯ ಕೆಳಕ್ಕೆರಗಿ ರೆಕ್ಕೆಯ ಗರಿಗಳಿಂದ ಅದನ್ನೆತ್ತುತ್ತದೆ. ನವಜನಿತ ಇಸ್ರಾಯೇಲ್‌ ಜನಾಂಗವನ್ನು ಯೆಹೋವನು ಇದೇ ರೀತಿ ಪ್ರೀತಿಯಿಂದ ಪರಾಮರಿಕೆ ಮಾಡಿದನು. (ಕೀರ್ತನೆ 78:​5-7) ಅವರ ಮೇಲೆ ಎಚ್ಚರಿಕೆಯ ಕಾವಲನ್ನಿಟ್ಟು, ಅವರ ಸಂಕಷ್ಟದ ಸಮಯದಲ್ಲೆಲ್ಲಾ ಅವರನ್ನು ರಕ್ಷಿಸಲು ಸಿದ್ಧನಾಗಿ ನಿಂತನು.

8 ಕ್ರೈಸ್ತ ಹೆತ್ತವರು ಯೆಹೋವನ ಪ್ರೀತಿಯನ್ನು ಹೇಗೆ ಅನುಕರಿಸಬಹುದು? ಮೊತ್ತಮೊದಲಾಗಿ, ದೇವರ ವಾಕ್ಯವಾದ ಬೈಬಲಿನಲ್ಲಿರುವ ಮೂಲತತ್ತ್ವ ಮತ್ತು ಮಟ್ಟಗಳನ್ನು ಅವರು ತಮ್ಮ ಮಕ್ಕಳಿಗೆ ಕಲಿಸಬೇಕು. (ಧರ್ಮೋಪದೇಶಕಾಂಡ 6:​4-9) ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ನಿರ್ಣಯಮಾಡಲು ಮಕ್ಕಳು ಕಲಿಯುವಂತೆ ಮಾಡುವುದೇ ಅವರ ಧ್ಯೇಯವಾಗಿದೆ. ಹೀಗೆ ಮಾಡುವುದರಲ್ಲಿ ಅವರು ಸಾಂಕೇತಿಕವಾಗಿ ತಮ್ಮ ಮರಿಗಳೊಂದಿಗೆ ರೆಕ್ಕೆಬಡಿಯುತ್ತಾ ಮೇಲಕ್ಕೂ ಕೆಳಕ್ಕೂ ಚಲಿಸುತ್ತಾರೆ. ತಾವು ಕಲಿತ ಬೈಬಲ್‌ ಮೂಲತತ್ತ್ವಗಳನ್ನು ಮಕ್ಕಳು ಹೇಗೆ ಅನ್ವಯಿಸಿಕೊಳ್ಳುತ್ತಾರೆಂದು ನೋಡುತ್ತಿರುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾದ ಹಾಗೆ ಅವರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಅಪಾಯವು ಇರುವಾಗಲೆಲ್ಲ ಒಲವಿನ ಹೆತ್ತವರು ಕೆಳಕ್ಕೆರಗಿ ತಮ್ಮ ಎಳೆಯ ಮಕ್ಕಳನ್ನು ರೆಕ್ಕೆಗಳಿಂದ ಎತ್ತಿಕೊಳ್ಳುತ್ತಾರೆ. ಯಾವ ರೀತಿಯ ಅಪಾಯ?

9. ಪ್ರೀತಿಯುಳ್ಳ ಹೆತ್ತವರು ಯಾವ ವಿಶಿಷ್ಟ ಅಪಾಯದ ಕುರಿತು ಎಚ್ಚರದಿಂದಿರಬೇಕು? ದೃಷ್ಟಾಂತಿಸಿರಿ.

9 ಕೆಟ್ಟ ಸಹವಾಸಗಳ ಕೆಟ್ಟ ಫಲಿತಾಂಶಗಳ ಕುರಿತು ಯೆಹೋವ ದೇವರು ಇಸ್ರಾಯೇಲ್ಯರಿಗೆ ಎಚ್ಚರಿಕೆಯನ್ನು ಕೊಟ್ಟನು. (ಅರಣ್ಯಕಾಂಡ 25:​1-18; ಎಜ್ರ 10:​10-14) ಅಯೋಗ್ಯರಾದ ಜನರೊಂದಿಗೆ ಸಹವಾಸ ಮಾಡುವುದು ಇಂದು ಸಹ ಒಂದು ಸಾಮಾನ್ಯ ಅಪಾಯವಾಗಿದೆ. (1 ಕೊರಿಂಥ 15:33) ಈ ವಿಷಯದಲ್ಲಿ ಕ್ರೈಸ್ತ ಹೆತ್ತವರು ಯೆಹೋವನನ್ನು ಅನುಕರಿಸಬೇಕು. ಲೀಸ ಎಂಬ 15 ವರ್ಷ ಪ್ರಾಯದ ಹುಡುಗಿಯು ಅವಳ ಕುಟುಂಬದ ನೈತಿಕ ಮತ್ತು ಆತ್ಮಿಕ ಮೌಲ್ಯಗಳನ್ನು ಅನುಸರಿಸದ ಒಬ್ಬ ಹುಡುಗನಲ್ಲಿ ಆಸಕ್ತಳಾದಳು. ಲೀಸ ಹೇಳುವುದು: “ನನ್ನ ಹೆತ್ತವರು ಕೂಡಲೇ ನನ್ನ ಮನೋಭಾವದಲ್ಲಾದ ಬದಲಾವಣೆಯನ್ನು ಗಮನಿಸಿ, ತಮ್ಮ ಚಿಂತೆಯನ್ನು ವ್ಯಕ್ತಪಡಿಸಿದರು. ಕೆಲವೊಮ್ಮೆ ಅವರು ನನ್ನ ತಪ್ಪನ್ನು ಸರಿಪಡಿಸಿದರು ಮತ್ತು ಬೇರೆ ಸಮಯಗಳಲ್ಲಿ ಮಮತೆಯಿಂದ ಉತ್ತೇಜನಕೊಟ್ಟರು.” ಅವರು ಲೀಸಳೊಂದಿಗೆ ಕುಳಿತುಕೊಂಡು ಅವಳಿಗೆ ತಾಳ್ಮೆಯಿಂದ ಕಿವಿಗೊಟ್ಟರು. ತನ್ನ ಸಹಪಾಠಿಗಳಿಂದ ಅಂಗೀಕರಿಸಲ್ಪಡಬೇಕೆಂಬ ಬಯಕೆಯೇ ಅವಳ ಮುಖ್ಯ ಸಮಸ್ಯೆಯಾಗಿತ್ತೆಂದು ಅವರಿಗೆ ತಿಳಿಯಿತು. ಹೀಗೆ ಅವರು ಅದನ್ನು ನಿಭಾಯಿಸಲು ಬೇಕಾದ ಸಹಾಯವನ್ನು ನೀಡಿದರು. *

ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಿರಿ

10. ಇಸ್ರಾಯೇಲ್ಯರೊಂದಿಗೆ ಸಂವಾದ ನಡಿಸುವುದರಲ್ಲಿ ಯೆಹೋವನು ಯಾವ ಒಳ್ಳೇ ಮಾದರಿಯನ್ನಿಟ್ಟನು?

10 ಮಕ್ಕಳನ್ನು ತರಬೇತುಗೊಳಿಸುವ ವಿಷಯದಲ್ಲಿ ಯಶಸ್ವಿಗಳಾಗಬೇಕಾದರೆ ಹೆತ್ತವರು ಮಕ್ಕಳೊಂದಿಗೆ ಒಳ್ಳೇಯ ಸಂವಾದವನ್ನು ಕಾಪಾಡಿಕೊಳ್ಳಲು ಪ್ರಯಾಸಪಡಬೇಕು. ಯೆಹೋವನಿಗೆ ನಮ್ಮ ಹೃದಯದಲ್ಲೇನಿದೆ ಎಂಬುದು ಚೆನ್ನಾಗಿ ತಿಳಿದಿದ್ದರೂ, ನಾವು ಆತನೊಂದಿಗೆ ಸಂವಾದಮಾಡುವಂತೆ ಆತನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. (1 ಪೂರ್ವಕಾಲವೃತ್ತಾಂತ 28:9) ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಟ್ಟ ಬಳಿಕ, ಅದನ್ನು ಬೋಧಿಸುವುದಕ್ಕೆ ಯೆಹೋವನು ಲೇವಿಯರನ್ನು ನೇಮಿಸಿದನು. ಜನರೊಂದಿಗೆ ವಿವೇಚಿಸಿ ಮಾತಾಡಿ, ಅವರ ತಪ್ಪುಗಳನ್ನು ತಿದ್ದಿ ಸರಿಪಡಿಸಲು ಆತನು ಪ್ರವಾದಿಗಳನ್ನು ಕಳುಹಿಸಿದನು. ಪ್ರಾರ್ಥನೆಗಳ ಮೂಲಕ ಅವರ ಮಾತುಗಳನ್ನು ಕೇಳುವ ಸಿದ್ಧಮನಸ್ಸನ್ನೂ ಆತನು ತೋರಿಸಿದನು.​—2 ಪೂರ್ವಕಾಲವೃತ್ತಾಂತ 17:​7-9; ಕೀರ್ತನೆ 65:2; ಯೆಶಾಯ 1:​1-3, 18-20; ಯೆರೆಮೀಯ 25:4; ಗಲಾತ್ಯ 3:​22-24.

11. (ಎ) ಹೆತ್ತವರು ತಮ್ಮ ಮಕ್ಕಳೊಂದಿಗೆ ಒಳ್ಳೇ ಸಂವಾದವನ್ನು ಹೇಗೆ ಪ್ರವರ್ಧಿಸಬಹುದು? (ಬಿ) ತಮ್ಮ ಮಕ್ಕಳೊಂದಿಗೆ ಸಂವಾದಿಸುವಾಗ ಹೆತ್ತವರು ಚೆನ್ನಾಗಿ ಕಿವಿಗೊಡುವವರಾಗಿರುವುದು ಏಕೆ ಪ್ರಾಮುಖ್ಯ?

11 ತಮ್ಮ ಮಕ್ಕಳೊಂದಿಗೆ ಸಂವಾದಮಾಡುವಾಗ ಹೆತ್ತವರು ಯೆಹೋವನನ್ನು ಹೇಗೆ ಅನುಕರಿಸಬಹುದು? ಮೊದಲನೆಯದಾಗಿ ಮತ್ತು ಮುಖ್ಯವಾಗಿ, ಅವರು ತಮ್ಮ ಮಕ್ಕಳಿಗಾಗಿ ಸಮಯವನ್ನು ಬದಿಗಿರಿಸುವ ಅಗತ್ಯವಿದೆ. “ಅಷ್ಟು ಚಿಕ್ಕ ಸಂಗತಿ ನಿನ್ನನ್ನು ಬಾಧಿಸುತ್ತಿತ್ತೋ? ನಾನೇನೊ ದೊಡ್ಡ ಸಂಗತಿಯೆಂದು ನೆನಸಿದ್ದೆ,” “ಅದು ಶುದ್ಧ ಬೆಪ್ಪತನ,” “ಅದಲ್ಲದೆ ಬೇರೇನನ್ನು ನೀನು ಅಪೇಕ್ಷಿಸಿದ್ದೀ? ನೀನಿನ್ನೂ ಒಂದು ಮಗು” ಎಂಬ ಗೇಲಿಮಾಡುವಂಥ ನಿರ್ಲಕ್ಷ್ಯದ ಮಾತುಗಳನ್ನು ಹೆತ್ತವರು ವರ್ಜಿಸಬೇಕು. (ಜ್ಞಾನೋಕ್ತಿ 12:18) ಮಕ್ಕಳು ಮನಬಿಚ್ಚಿ ಮಾತಾಡುವುದನ್ನು ಉತ್ತೇಜಿಸಲು, ಜ್ಞಾನಿಗಳಾದ ಹೆತ್ತವರು ಚೆನ್ನಾಗಿ ಕಿವಿಗೊಡುವವರಾಗಿರಲು ಪ್ರಯಾಸಪಡುತ್ತಾರೆ. ಮಕ್ಕಳು ಚಿಕ್ಕವರಿರುವಾಗ ಅವರನ್ನು ದುರ್ಲಕ್ಷಿಸುವ ಹೆತ್ತವರು, ಮಕ್ಕಳು ಬೆಳೆದು ದೊಡ್ಡವರಾಗುವಾಗ ಮಕ್ಕಳಿಂದಲೇ ದುರ್ಲಕ್ಷಿಸಲ್ಪಡುತ್ತಾರೆ. ಯೆಹೋವನು ಯಾವಾಗಲೂ ತನ್ನ ಜನರಿಗೆ ಕಿವಿಗೊಡಲು ಸಿದ್ಧನಾಗಿದ್ದಾನೆ. ದೀನಭಾವದಿಂದ ಪ್ರಾರ್ಥನೆಯಲ್ಲಿ ಆತನ ಕಡೆಗೆ ತಿರುಗುವವರೆಲ್ಲರಿಗೆ ಆತನು ಕಿವಿಗೊಡುತ್ತಾನೆ ಖಂಡಿತ.​—ಕೀರ್ತನೆ 91:15; ಯೆರೆಮೀಯ 29:12; ಲೂಕ 11:​9-13.

12. ಹೆತ್ತವರು ತೋರಿಸಬಹುದಾದ ಯಾವ ಗುಣಗಳು, ಮಕ್ಕಳು ಅವರನ್ನು ಸಮೀಪಿಸುವುದನ್ನು ಸುಲಭವನ್ನಾಗಿ ಮಾಡಸಾಧ್ಯವಿದೆ?

12 ಆತನ ಜನರು ಆತನನ್ನು ಸಂಕೋಚವಿಲ್ಲದೆ ಸಮೀಪಿಸಲು ಸುಲಭವಾಗಿ ಮಾಡಿರುವ ಯೆಹೋವನ ವ್ಯಕ್ತಿತ್ವದ ಕೆಲವು ಅಂಶಗಳನ್ನು ಸಹ ಮನಸ್ಸಿಗೆ ತನ್ನಿರಿ. ಉದಾಹರಣೆಗೆ, ಪುರಾತನ ಇಸ್ರಾಯೇಲಿನ ಅರಸನಾದ ದಾವೀದನು ಬೆತ್ಷೇಬಳೊಂದಿಗೆ ವ್ಯಭಿಚಾರಮಾಡುವ ಮೂಲಕ ಒಂದು ಘೋರವಾದ ಪಾಪವನ್ನು ಮಾಡಿದನು. ಅಪರಿಪೂರ್ಣ ಮನುಷ್ಯನಾಗಿದ್ದ ದಾವೀದನು ತನ್ನ ಜೀವಿತದಲ್ಲಿ ಇತರ ಗಂಭೀರ ಪಾಪಗಳನ್ನೂ ಮಾಡಿದ್ದನು. ಆದರೂ, ಯೆಹೋವನನ್ನು ಸಮೀಪಿಸಿ ಆತನಿಂದ ಕ್ಷಮಾಪಣೆ ಮತ್ತು ಗದರಿಕೆಯನ್ನು ಕೋರುವುದಕ್ಕೆ ಆತನೆಂದೂ ತಪ್ಪಲಿಲ್ಲ. ದೇವರ ಕೃಪಾತಿಶಯ ಮತ್ತು ಕರುಣೆಯು, ದಾವೀದನಿಗೆ ಯೆಹೋವನ ಬಳಿಗೆ ಹಿಂದಿರುಗುವುದನ್ನು ಸುಲಭವನ್ನಾಗಿ ಮಾಡಿತು. (ಕೀರ್ತನೆ 103:8) ಕನಿಕರ ಮತ್ತು ದಯೆಯಂಥ ದೈವಿಕ ಗುಣಗಳನ್ನು ಪ್ರತಿಬಿಂಬಿಸುವ ಮೂಲಕ, ಹೆತ್ತವರು ತಮ್ಮ ಸಂವಾದವನ್ನು ಕಾಪಾಡಿಕೊಂಡು ಹೋಗಸಾಧ್ಯವಿದೆ, ಮಕ್ಕಳು ತಪ್ಪು ಮಾಡುವಾಗಲೂ ಸಹ.​—ಕೀರ್ತನೆ 103:13; ಮಲಾಕಿಯ 3:17.

ನ್ಯಾಯಸಮ್ಮತರಾಗಿರಿ

13. ನ್ಯಾಯಸಮ್ಮತರಾಗಿರುವುದರಲ್ಲಿ ಏನು ಒಳಗೂಡಿದೆ?

13 ಹೆತ್ತವರು ತಮ್ಮ ಮಕ್ಕಳಿಗೆ ಕಿವಿಗೊಡುವಾಗ ನ್ಯಾಯಸಮ್ಮತತೆಯುಳ್ಳವರಾಗಿ “ಮೇಲಣಿಂದ ಬರುವ ಜ್ಞಾನವನ್ನು” ಪ್ರತಿಬಿಂಬಿಸುವವರಾಗಬೇಕು. (ಯಾಕೋಬ 3:17) “ನಿಮ್ಮ ನ್ಯಾಯಸಮ್ಮತತೆಯು ಎಲ್ಲರಿಗೂ ಗೊತ್ತಾಗಲಿ” ಎಂದು ಅಪೊಸ್ತಲ ಪೌಲನು ಬರೆದನು. (ಫಿಲಿಪ್ಪಿ 4:5, NW) ನ್ಯಾಯಸಮ್ಮತತೆ ಎಂದರೇನು? “ನ್ಯಾಯಸಮ್ಮತತೆ” ಎಂದು ತರ್ಜುಮೆಯಾದ ಗ್ರೀಕ್‌ ಶಬ್ದದ ಅರ್ಥವು, “ನಿಯಮದ ಅಕ್ಷರಶಃ ಪಾಲನೆಯನ್ನು ಒತ್ತಾಯಿಸದೆ ಇರುವುದು” ಎಂದಾಗಿದೆ. ದೃಢತೆಯ ನೈತಿಕ ಮತ್ತು ಆತ್ಮಿಕ ಮಟ್ಟಗಳನ್ನು ಎತ್ತಿಹಿಡಿಯುವ ಸಮಯದಲ್ಲೇ, ಹೆತ್ತವರು ಹೇಗೆ ನ್ಯಾಯಸಮ್ಮತರಾಗಿರಬಲ್ಲರು?

14. ಲೋಟನೊಂದಿಗೆ ವ್ಯವಹರಿಸುವಾಗ ಯೆಹೋವನು ಹೇಗೆ ನ್ಯಾಯಸಮ್ಮತತೆಯನ್ನು ತೋರಿಸಿದನು?

14 ನ್ಯಾಯಸಮ್ಮತತೆಯಲ್ಲಿ ಯೆಹೋವನು ಒಂದು ಎದ್ದುಕಾಣುವ ಆದರ್ಶವನ್ನು ಇಟ್ಟಿದ್ದಾನೆ. (ಕೀರ್ತನೆ 10:17) ಧ್ವಂಸವಾಗಲಿದ್ದ ಸೊದೋಮ್‌ ನಗರವನ್ನು ಬಿಟ್ಟುಹೋಗುವಂತೆ ಲೋಟ ಮತ್ತು ಅವನ ಕುಟುಂಬವನ್ನು ಆತನು ಒತ್ತಾಯಿಸಿದಾಗ, “ಅವನು ತಡಮಾಡ”ತೊಡಗಿದನು. ಬೆಟ್ಟದ ಸೀಮೆಗೆ ಓಡಿಹೋಗಿ ತನ್ನನ್ನು ರಕ್ಷಿಸಿಕೊಳ್ಳುವಂತೆ ಯೆಹೋವನ ದೂತನು ತದನಂತರ ಅವನಿಗೆ ಹೇಳಿದಾಗ, ಲೋಟನು ಅಂದದ್ದು: “ಬೆಟ್ಟಕ್ಕೆ ಓಡಿಹೋಗಲಾರೆನು . . . ಅಗೋ, ಅಲ್ಲಿ ಒಂದು ಊರು [ಚೋಗರ್‌] ಹತ್ತಿರವಾಗಿದೆ; ಅದು ಸಣ್ಣದು; ಅಲ್ಲಿಗಾದರೂ ಹೋಗುವದಕ್ಕೆ ಅಪ್ಪಣೆಯಾದರೆ ನನ್ನ ಪ್ರಾಣ ಉಳಿಯುವದು. ಆ ಊರು ಸಣ್ಣದಲ್ಲವೇ”? ಇದಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯೆ ತೋರಿಸಿದನು? ಆತನಂದದ್ದು: “ಈ ವಿಷಯದಲ್ಲಿಯೂ ನಿನಗೆ ಅನುಗ್ರಹಮಾಡಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡಹುವದಿಲ್ಲ.” (ಆದಿಕಾಂಡ 19:​16-21, 30) ಯೆಹೋವನು ಲೋಟನ ವಿನಂತಿಗೆ ಒಪ್ಪಿಕೊಳ್ಳಲು ಸಮ್ಮತಿಸಿದನು. ಹೌದು, ದೇವರ ವಾಕ್ಯವಾದ ಬೈಬಲಿನಲ್ಲಿ ಯೆಹೋವನು ತಿಳಿಸಿರುವ ಮಟ್ಟಗಳನ್ನು ಪರಿಪಾಲಿಸುವ ಅಗತ್ಯವು ಹೆತ್ತವರಿಗಿದೆ. ಆದರೂ ಬೈಬಲಿನ ಮೂಲತತ್ತ್ವಗಳು ಉಲ್ಲಂಘಿಸಲ್ಪಡದಿರುವಾಗ, ಎಳೆಯ ಮಕ್ಕಳ ಇಷ್ಟಗಳಿಗೆ ಅವಕಾಶವನ್ನು ಕೊಡುವ ಸಾಧ್ಯತೆ ಇರಬಹುದು.

15, 16. ಯೆಶಾಯ 28:​24, 25ರಲ್ಲಿರುವ ದೃಷ್ಟಾಂತದಿಂದ ಹೆತ್ತವರು ಯಾವ ಪಾಠವನ್ನು ಕಲಿಯಸಾಧ್ಯವಿದೆ?

15 ನ್ಯಾಯಸಮ್ಮತತೆಯಲ್ಲಿ, ಮಕ್ಕಳ ಹೃದಯವು ಬುದ್ಧಿವಾದವನ್ನು ಸ್ವೀಕರಿಸಲು ಸಿದ್ಧವಾಗುವಂತೆ ಅವರನ್ನು ತಯಾರಿಸುವುದೂ ಸೇರಿರುತ್ತದೆ. ದೃಷ್ಟಾಂತರೂಪವಾಗಿ, ಯೆಶಾಯನು ಯೆಹೋವನನ್ನು ಒಬ್ಬ ಬೇಸಾಯಗಾರನಿಗೆ ಹೋಲಿಸುತ್ತಾ ಹೇಳಿದ್ದು: “ಬಿತ್ತನೆಗಾಗಿ ಉಳುವವನು ಸದಾ ಉಳುತ್ತಿರುವನೋ? [ಪ್ರತಿನಿತ್ಯವೂ] ಮಣ್ಣನ್ನು ಕೆಳಮೇಲು ಮಾಡುತ್ತಾ ಕುಂಟೆಹೊಡೆಯುವನೋ? ಅಂತು ಭೂಮಿಯನ್ನು ಹಸನುಮಾಡಿದ ಮೇಲೆ ಕರಿಯ ಜೀರಿಗೆಯನ್ನು ಚೆಲ್ಲಿ ಜೀರಿಗೆಯನ್ನು ಬಿತ್ತಿ ಗೋಧಿಯನ್ನು ಸಾಲು ಸಾಲಾಗಿಯೂ ಜವೆಗೋಧಿಯನ್ನು ತಕ್ಕ ಸ್ಥಳದಲ್ಲಿಯೂ ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೆ.”​—ಯೆಶಾಯ 28:​24, 25.

16 ಯೆಹೋವನು ‘ಬಿತ್ತನೆಗಾಗಿ ಉಳುತ್ತಿರುವನು’ ಮತ್ತು “ಮಣ್ಣನ್ನು ಕೆಳಮೇಲು ಮಾಡುತ್ತಾ” ಕುಂಟೆಹೊಡೆಯುವನು. ಹೀಗೆ ಆತನು ತನ್ನ ಜನರಿಗೆ ಶಿಸ್ತನ್ನು ನೀಡುವ ಮೊದಲು ಅವರ ಹೃದಯವನ್ನು ಸಿದ್ಧಪಡಿಸುತ್ತಾನೆ. ತಮ್ಮ ಮಕ್ಕಳನ್ನು ತಿದ್ದಿ ಸರಿಪಡಿಸುವಾಗ ಹೆತ್ತವರು ಅವರ ಹೃದಯವನ್ನು ಹೇಗೆ ‘ಉಳಸಾಧ್ಯವಿದೆ?’ ಒಬ್ಬ ತಂದೆಯು ನಾಲ್ಕು ವರ್ಷ ಪ್ರಾಯದ ತನ್ನ ಮಗನ ತಪ್ಪನ್ನು ತಿದ್ದುವಾಗ ಯೆಹೋವನನ್ನು ಅನುಕರಿಸಿದನು. ಅವನ ಮಗನು ನೆರೆಯವರ ಹುಡುಗನೊಬ್ಬನನ್ನು ಹೊಡೆದಾಗ, ಅವನು ಕೊಟ್ಟ ನೆವನಗಳನ್ನು ತಂದೆ ಕಿವಿಗೊಟ್ಟು ಕೇಳಿದನು. ಅನಂತರ, ಮಗನ ಹೃದಯವನ್ನು ‘ಉಳು’ತ್ತಾನೋ ಎಂಬಂತೆ, ದಾಂಢಿಗನೊಬ್ಬನಿಂದ ಭೀಕರ ದೌರ್ಜನ್ಯವನ್ನು ಅನುಭವಿಸಿದ ಒಬ್ಬ ಚಿಕ್ಕ ಹುಡುಗನ ಕಥೆಯನ್ನು ತಂದೆಯು ಹೇಳಿದನು. ಕಥೆ ಕೇಳಿಯಾದ ಮೇಲೆ, ಆ ದಾಂಢಿಗನಿಗೆ ದಂಡನೆ ವಿಧಿಸಲ್ಪಡಲೇ ಬೇಕೆಂದು ಹೇಳುವಂತೆ ಈ ಹುಡುಗನು ಪ್ರೇರೇಪಿಸಲ್ಪಟ್ಟನು. ಅಂಥ ‘ಉಳುವಿಕೆಯು’ ಹುಡುಗನ ಹೃದಯವನ್ನು ಹದಗೊಳಿಸಿತು ಮತ್ತು ನೆರೆಯವರ ಹುಡುಗನನ್ನು ಹೊಡೆಯುವುದು ತಪ್ಪು ಮತ್ತು ಕೇವಲ ದಾಂಢಿಗರು ಹಾಗೆ ಮಾಡುತ್ತಾರೆಂಬದನ್ನು ಗ್ರಹಿಸಲು ಸುಲಭವಾಯಿತು.​—2 ಸಮುವೇಲ 12:​1-14.

17. ಯೆಶಾಯ 28:​26-29ರಲ್ಲಿ, ಹೆತ್ತವರು ಮಕ್ಕಳಿಗೆ ಕೊಡಬಹುದಾದ ತಿದ್ದುಪಾಟಿನ ಯಾವ ಪಾಠವು ಕೊಡಲ್ಪಟ್ಟಿದೆ?

17 ಯೆಹೋವನ ತಿದ್ದುಪಾಟನ್ನು ಯೆಶಾಯನು ಈಗ ಬೇಸಾಯದ ಇನ್ನೊಂದು ಕೆಲಸಕ್ಕೆ ಹೋಲಿಸುತ್ತಾನೆ. ಅದು ಒಕ್ಕುವ ಕೆಲಸವಾಗಿದೆ. ಧಾನ್ಯದ ಹೊಟ್ಟಿನ ಗಡುಸು ಮತ್ತು ಮೃದುತ್ವವನ್ನು ಹೊಂದಿಕೊಂಡು ಬೇಸಾಯಗಾರನು ಬೇರೆ ಬೇರೆ ಒಕ್ಕುವ ಸಾಧನಗಳನ್ನು ಉಪಯೋಗಿಸುತ್ತಾನೆ. ಕೋಮಲ ಕರಿಜೀರಿಗೆಯನ್ನು ಕೋಲಿನಿಂದ ಒಕ್ಕಲಾಗುತ್ತದೆ ಮತ್ತು ಜೀರಿಗೆಯನ್ನು ಒಕ್ಕುವುದಕ್ಕೆ ದೊಣ್ಣೆಯನ್ನು ಉಪಯೋಗಿಸುತ್ತಾರೆ. ಆದರೆ ಗಟ್ಟಿಯಾದ ಹೊಟ್ಟಿರುವ ಧಾನ್ಯಗಳನ್ನು ಒಕ್ಕಲು ಚಿಮ್ಮಟಿಕೆ ಅಥವಾ ಬಂಡಿಯ ಚಕ್ರಗಳು ಉಪಯೋಗಿಸಲ್ಪಡುತ್ತವೆ. ಆದರೂ ಆ ಗಟ್ಟಿ ಧಾನ್ಯವು ನುಚ್ಚಾಗಿ ಹೋಗುವಷ್ಟು ರಭಸದಿಂದ ಅವುಗಳನ್ನು ಒಕ್ಕಲಾಗುವುದಿಲ್ಲ. ಅದೇ ರೀತಿ, ತನ್ನ ಜನರಲ್ಲಿರುವ ಅನಪೇಕ್ಷಣೀಯವಾದ ಯಾವುದೇ ವಿಷಯವನ್ನು ತೆಗೆದುಹಾಕಲು ಯೆಹೋವನು ಬಯಸುವಾಗ, ಇರುವ ಆವಶ್ಯಕತೆ ಮತ್ತು ಪರಿಸ್ಥಿತಿಗಳಿಗೆ ಅನುಸಾರವಾಗಿ ಆತನು ತನ್ನ ವ್ಯವಹರಿಸುವ ವಿಧಾನವನ್ನು ಬದಲಾಯಿಸುತ್ತಾನೆ. ಆತನೆಂದೂ ನಿರಂಕುಶವೂ ಕ್ರೂರವೂ ಆದ ರೀತಿಯಲ್ಲಿ ವರ್ತಿಸುವುದಿಲ್ಲ. (ಯೆಶಾಯ 28:​26-29) ಕೆಲವು ಮಕ್ಕಳಿಗೆ ಬೇಕಾಗಿರುವುದು ಕೇವಲ ಹೆತ್ತವರ ಕುಡಿನೋಟ, ಬೇರೇನೂ ಬೇಡ. ಇನ್ನು ಕೆಲವರಿಗೆ ಪದೇ ಪದೇ ಜ್ಞಾಪಕ ಹುಟ್ಟಿಸಬೇಕಾಗುತ್ತದೆ. ಇನ್ನೂ ಇತರರಿಗೆ ತುಸು ಗಡುಸಾದ ಪ್ರೇರೇಪಣೆ ಬೇಕಾಗಬಹುದು. ವಿವೇಚನೆಯುಳ್ಳ ಹೆತ್ತವರು ಆಯಾ ಮಗುವಿನ ವೈಯಕ್ತಿಕ ಅಗತ್ಯಕ್ಕನುಸಾರ ತಿದ್ದುಪಾಟನ್ನು ನೀಡುವರು.

ಕೌಟುಂಬಿಕ ಚರ್ಚೆಗಳನ್ನು ಆನಂದದಾಯಕವಾಗಿ ಮಾಡಿರಿ

18. ಕ್ರಮದ ಕುಟುಂಬ ಬೈಬಲ್‌ ಅಧ್ಯಯನಕ್ಕಾಗಿ ಹೆತ್ತವರು ಹೇಗೆ ಸಮಯವನ್ನು ಮಾಡಿಕೊಳ್ಳಬಲ್ಲರು?

18 ನಿಮ್ಮ ಮಕ್ಕಳಿಗೆ ಬೋಧಿಸುವ ಅತ್ಯುತ್ತಮ ವಿಧಾನಗಳಲ್ಲಿ ಕ್ರಮದ ಕುಟುಂಬ ಬೈಬಲ್‌ ಅಧ್ಯಯನ ಮತ್ತು ದೈನಂದಿನ ಶಾಸ್ತ್ರೀಯ ಚರ್ಚೆಗಳು ಒಳಗೂಡಿವೆ. ಕುಟುಂಬ ಅಧ್ಯಯನವು ಕ್ರಮವಾಗಿ ಅಥವಾ ನಿಯಮಿತವಾಗಿ ನಡಿಸಲ್ಪಡುವಾಗ, ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಯಾವಾಗಲಾದರೊಮ್ಮೆ ಆಕಸ್ಮಿಕವಾಗಿ ನಡಿಸಲ್ಪಟ್ಟಲ್ಲಿ ಅದು ಹೆಚ್ಚು ಪ್ರಯೋಜನವನ್ನು ತರಲಾರದು. ಆದುದರಿಂದ ಹೆತ್ತವರು ಅಧ್ಯಯನಕ್ಕಾಗಿ ಸಮಯವನ್ನು ‘ಖರೀದಿಸಲೇಬೇಕು.’ (ಎಫೆಸ 5:​15-17, NW) ಎಲ್ಲರಿಗೂ ಅನುಕೂಲವಾಗಿರುವಂಥ ಒಂದು ನಿರ್ದಿಷ್ಟ ಸಮಯವನ್ನು ಆರಿಸಿಕೊಳ್ಳುವುದು ಒಂದು ಸವಾಲಾಗಿರಬಲ್ಲದು. ಮಕ್ಕಳು ಬೆಳೆದು ದೊಡ್ಡವರಾದ ಹಾಗೆ, ಅವರ ವಿವಿಧ ಕಾಲತಖ್ತೆಗಳು ಇಡೀ ಕುಟುಂಬವನ್ನು ಒಟ್ಟುಗೂಡಿಸಲು ಕಷ್ಟಕರವನ್ನಾಗಿ ಮಾಡುತ್ತಿದ್ದವೆಂದು ಒಬ್ಬ ಕುಟುಂಬದ ತಲೆಯು ಕಂಡುಕೊಂಡನು. ಆದರೂ, ಸಭಾ ಕೂಟಗಳ ರಾತ್ರಿಗಳಲ್ಲಿ ಕುಟುಂಬವು ಯಾವಾಗಲೂ ಒಟ್ಟಿಗಿರುತ್ತಿತ್ತು. ಆದುದರಿಂದ ಆ ರಾತ್ರಿಗಳಲ್ಲೊಂದರಲ್ಲಿ ಕುಟುಂಬ ಅಭ್ಯಾಸವನ್ನು ಮಾಡುವಂತೆ ತಂದೆಯು ಏರ್ಪಡಿಸಿದನು. ಇದು ಒಳ್ಳೇ ಫಲವನ್ನು ನೀಡಿತು. ಅವನ ಮೂವರೂ ಮಕ್ಕಳು ಈಗ ಯೆಹೋವನ ಸಮರ್ಪಿತ ಸೇವಕರಾಗಿದ್ದಾರೆ.

19. ಕುಟುಂಬ ಅಧ್ಯಯನವನ್ನು ನಡಿಸುವಾಗ ಹೆತ್ತವರು ಯೆಹೋವನನ್ನು ಹೇಗೆ ಅನುಕರಿಸಬಲ್ಲರು?

19 ಆದರೂ ಅಧ್ಯಯನದ ಸಮಯದಲ್ಲಿ ಕೆಲವು ಶಾಸ್ತ್ರೀಯ ವಿಷಯಗಳನ್ನು ಮೇಲಿಂದ ಮೇಲೆ ಆವರಿಸುವುದಷ್ಟೇ ಸಾಲದು. ಯೆಹೋವನು ಪುನಃಸ್ಥಾಪಿತ ಇಸ್ರಾಯೇಲ್ಯರಿಗೆ ಯಾಜಕರ ಮೂಲಕ ಕಲಿಸಿದನು. ಅವರು ‘ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಲಾಗಿ’ ಜನರು ಅದನ್ನು ಗ್ರಹಿಸಿದರು. (ನೆಹೆಮೀಯ 8:8) ತನ್ನ ಎಲ್ಲಾ ಏಳು ಮಂದಿ ಮಕ್ಕಳು ಯೆಹೋವನನ್ನು ಪ್ರೀತಿಸಲು ಸಫಲಪೂರ್ವಕವಾಗಿ ಸಹಾಯಮಾಡಿದ ತಂದೆಯೊಬ್ಬನು, ಕುಟುಂಬ ಅಧ್ಯಯನಕ್ಕೆ ಮುಂಚೆ ಯಾವಾಗಲೂ ತನ್ನ ಕೋಣೆಗೆ ಹೋಗಿ ಅದಕ್ಕಾಗಿ ತಯಾರುಮಾಡುತ್ತಿದ್ದನು. ಮಕ್ಕಳಲ್ಲಿ ಪ್ರತಿಯೊಬ್ಬನ ಅಗತ್ಯಾನುಸಾರ ಆ ಶಾಸ್ತ್ರೀಯ ಮಾಹಿತಿಯನ್ನು ಅನ್ವಯಿಸುವ ವಿಧಾನವನ್ನು ಹುಡುಕುತ್ತಿದ್ದನು. ಅವನು ಅಭ್ಯಾಸವನ್ನು ಮಕ್ಕಳಿಗೆ ಆನಂದಕರವಾಗುವಂತೆ ಮಾಡಿದನು. ಅವನ ಪ್ರಾಯಸ್ಥ ಮಗನೊಬ್ಬನು ನೆನಪಿಸಿಕೊಳ್ಳುವುದು: “ಅಧ್ಯಯನವು ಯಾವಾಗಲೂ ಸಂತಸದ ವಿಷಯವಾಗಿತ್ತು. ಕುಟುಂಬದ ಅಧ್ಯಯನಕ್ಕಾಗಿ ನಮ್ಮನ್ನು ಕರೆಯಲಾದಾಗ, ಹೊರಗೆ ಹಿತ್ತಲಲ್ಲಿ ಚೆಂಡಾಟವಾಡುತ್ತಿದ್ದ ನಾವು ಆ ಕೂಡಲೆ ಚೆಂಡನ್ನು ಬದಿಗಿಟ್ಟು ಅಭ್ಯಾಸಕ್ಕಾಗಿ ಓಡಿಬರುತ್ತಿದ್ದೆವು. ವಾರದ ಅತ್ಯಂತ ಆನಂದಕರ ಸಂಜೆ ಅದಾಗಿರುತ್ತಿತ್ತು.”

20. ಮಕ್ಕಳನ್ನು ಬೆಳೆಸುವುದರಲ್ಲಿ ಯಾವ ಸಂಭಾವ್ಯ ಸಮಸ್ಯೆಯನ್ನು ನಾವು ಇನ್ನೂ ಚರ್ಚಿಸಬೇಕಾಗಿದೆ?

20 ಕೀರ್ತನೆಗಾರನು ಘೋಷಿಸಿದ್ದು: “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ.” (ಕೀರ್ತನೆ 127:3) ನಮ್ಮ ಮಕ್ಕಳನ್ನು ತರಬೇತುಗೊಳಿಸುವುದಕ್ಕೆ ಸಮಯ ಮತ್ತು ಪ್ರಯತ್ನವು ಬೇಕಾಗಿದೆ. ಆದರೆ ಅದನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದು ನಮ್ಮ ಎಳೆಯರಿಗೆ ನಿತ್ಯ ಜೀವದ ಅರ್ಥದಲ್ಲಿರಬಲ್ಲದು. ಅದೆಂಥ ಉತ್ತಮ ಬಹುಮಾನವಾಗಿರುವುದು! ಆದುದರಿಂದ ನಮ್ಮ ಮಕ್ಕಳನ್ನು ತರಬೇತುಗೊಳಿಸುವುದರಲ್ಲಿ ಯೆಹೋವನನ್ನು ಅತ್ಯಾಸಕ್ತಿಯಿಂದ ಅನುಕರಿಸುವವರಾಗಿರೋಣ. ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸುವ ಜವಾಬ್ದಾರಿಯು ಹೆತ್ತವರಿಗೆ ವಹಿಸಲ್ಪಟ್ಟಿದೆಯಾದರೂ, ಅದು ಯಶಸ್ವಿಯಾಗಿಯೇ ತೀರುವುದು ಎಂಬ ಖಾತರಿ ಇಲ್ಲ. (ಎಫೆಸ 6:​4, NW) ಅತ್ಯುತ್ತಮ ಪರಾಮರಿಕೆಯನ್ನು ಕೊಟ್ಟ ಬಳಿಕವೂ, ಒಂದು ಮಗುವು ದಂಗೆಯೇಳುವವನಾಗಿ ಯೆಹೋವನನ್ನು ಸೇವಿಸುವುದನ್ನು ನಿಲ್ಲಿಸಬಹುದು. ಆಗೇನು? ಮುಂದಿನ ಲೇಖನವು ಅದನ್ನು ಚರ್ಚಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 9 ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಕಂಡುಬರುವ ಅನುಭವಗಳು ನಿಮ್ಮ ದೇಶದ ಸಂಸ್ಕೃತಿಗಳಿಗಿಂತ ಭಿನ್ನವಾಗಿರಬಹುದು. ಇವುಗಳಲ್ಲಿ ಯಾವ ಮೂಲತತ್ತ್ವಗಳು ಒಳಗೂಡಿವೆಯೆಂದು ವಿವೇಚಿಸಿ, ನಿಮ್ಮ ಸಾಂಸ್ಕೃತಿಕ ಸನ್ನಿವೇಶಕ್ಕೆ ಇವುಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿರಿ.

ನಿಮ್ಮ ಉತ್ತರವೇನು?

ಧರ್ಮೋಪದೇಶಕಾಂಡ 32:​11, 12ರಲ್ಲಿ ವರ್ಣಿಸಲಾದ ಯೆಹೋವನ ಪ್ರೀತಿಯನ್ನು ಹೆತ್ತವರು ಹೇಗೆ ಅನುಕರಿಸಬಹುದು?

• ಇಸ್ರಾಯೇಲ್ಯರೊಂದಿಗೆ ಯೆಹೋವನು ಸಂವಾದ ನಡಿಸಿದ ರೀತಿಯಿಂದ ನೀವೇನನ್ನು ಕಲಿತಿರಿ?

• ಲೋಟನ ಬಿನ್ನಹಕ್ಕೆ ಯೆಹೋವನು ಕಿವಿಗೊಟ್ಟ ವಿಷಯವು ನಮಗೇನನ್ನು ಕಲಿಸುತ್ತದೆ?

ಯೆಶಾಯ 28:​24-29ರಿಂದ, ಮಕ್ಕಳನ್ನು ತಿದ್ದಿ ಸರಿಪಡಿಸುವ ವಿಷಯದಲ್ಲಿ ನೀವು ಯಾವ ಪಾಠವನ್ನು ಕಲಿತಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 8, 9ರಲ್ಲಿರುವ ಚಿತ್ರ]

ಯೆಹೋವನು ತನ್ನ ಜನರನ್ನು ತರಬೇತುಗೊಳಿಸುವ ರೀತಿಯನ್ನು ಮೋಶೆ, ಒಂದು ಹದ್ದು ತನ್ನ ಮರಿಗಳನ್ನು ತರಬೇತುಗೊಳಿಸುವ ರೀತಿಗೆ ಹೋಲಿಸಿದನು

[ಪುಟ 10ರಲ್ಲಿರುವ ಚಿತ್ರಗಳು]

ಹೆತ್ತವರು ತಮ್ಮ ಮಕ್ಕಳಿಗೆ ಸಮಯವನ್ನು ಕೊಡಬೇಕು

[ಪುಟ 12ರಲ್ಲಿರುವ ಚಿತ್ರ]

“ವಾರದ ಅತ್ಯಂತ ಆನಂದಕರ ಸಂಜೆ ಅದಾಗಿರುತ್ತಿತ್ತು”