ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಷ್ಠಾವಂತರಾಗಿರುವುದು ಎಂದರೇನು?

ನಿಷ್ಠಾವಂತರಾಗಿರುವುದು ಎಂದರೇನು?

ನಿಷ್ಠಾವಂತರಾಗಿರುವುದು ಎಂದರೇನು?

ಸಾ.ಶ.ಪೂ. ಎರಡನೆಯ ಶತಮಾನದ ಯೆಹೂದಿ ಹಸಿದಿಮ್‌ ಪಂಥದವರು ತಮ್ಮನ್ನು ಅತಿ ನಿಷ್ಠಾವಂತ ಪಂಥವಾಗಿ ವೀಕ್ಷಿಸಿದರು. “ನಿಷ್ಠೆ”ಯ ಹೀಬ್ರು ಮೂಲ ಪದರೂಪವಾದ ಹಾಸೀಡ್‌ನಿಂದ ಅವರ ಹೆಸರು ಬಂದಿರುತ್ತದೆ. ನಾಮಪದವಾದ ಹಾಸೀಡ್‌ನಿಂದ ಅದು ರೂಪಗೊಂಡು “ಕೃಪೆ,” “ನಿಷ್ಠಾವಂತ ಪ್ರೀತಿ,” “ದಯೆ,” “ಒಳ್ಳೇತನ,” “ಕರುಣೆ” ಎಂಬುದಾಗಿ ಭಾಷಾಂತರಿಸಲ್ಪಟ್ಟಿದೆ. ಥಿಯಾಲಾಜಿಕಲ್‌ ಡಿಕ್ಷನೆರಿ ಆಫ್‌ ಓಲ್ಡ್‌ ಟೆಸ್ಟಮೆಂಟ್‌ಗೆ ಅನುಸಾರವಾಗಿ, ಹಾಸೀಡ್‌ “ಕ್ರಿಯಾಶೀಲವೂ, ಸಾಮಾಜಿಕವೂ, ಬಾಳುವಂತಹದ್ದೂ ಆಗಿದ್ದು ಮಾನವ ಮನೋಭಾವವನ್ನು ಮಾತ್ರವಲ್ಲ, ಅದರಿಂದ ಬರುವ ಕ್ರಿಯೆಯನ್ನೂ ಸೂಚಿಸುತ್ತದೆ. ಅದು ಜೀವವನ್ನು ಕಾಪಾಡುವ ಅಥವಾ ಪ್ರವರ್ಧಿಸುವ ಒಂದು ಕ್ರಿಯೆಯಾಗಿದೆ. ದುರ್ಭಾಗ್ಯ ಅಥವಾ ಸಂಕಷ್ಟವನ್ನು ಅನುಭವಿಸುವ ಯಾವನೇ ವ್ಯಕ್ತಿಯ ಪರವಾಗಿ ಅದು ಕಾರ್ಯನಡಿಸುತ್ತದೆ. ಅದು ಸ್ನೇಹದ ವ್ಯಕ್ತಪಡಿಸುವಿಕೆಯಾಗಿದೆ.”

ಬೈಬಲಿನಲ್ಲಿ ಉಪಯೋಗಿಸಲ್ಪಟ್ಟ ಈ ಹೀಬ್ರು ಪದದೊಂದಿಗೆ ಜತೆಗೂಡಿರುವ ಸಂಪೂರ್ಣ ಅರ್ಥವನ್ನು ಅನೇಕ ಭಾಷೆಗಳಲ್ಲಿ ಒಂದೇ ಒಂದು ಶಬ್ದದಿಂದ ವ್ಯಕ್ತಪಡಿಸಲಾಗದು. ಆದರೂ ಬೈಬಲಿನ ಅರ್ಥದಲ್ಲಿ, ನಿಷ್ಠೆ ಎಂದರೆ, ಕಟ್ಟುಪಾಡುಗಳನ್ನು ನಂಬಿಗಸ್ತಿಕೆಯಿಂದ ಪಾಲಿಸುವುದಕ್ಕಿಂತ ಹೆಚ್ಚಿನದ್ದಾಗಿರುತ್ತದೆ. ಪ್ರೀತಿಯ ಅಂಟಿಕೊಳ್ಳುವಿಕೆಯ ಜೊತೆಗೆ ಇತರರ ಪ್ರಯೋಜನಾರ್ಥವಾಗಿ ತೆಗೆದುಕೊಳ್ಳುವ ನಿಶ್ಚಿತ ಕ್ರಿಯೆಯೂ ಅದರಲ್ಲಿ ಸೇರಿರುತ್ತದೆ. ನಿಷ್ಠೆಯೆಂದರೆ ನಿಜವಾಗಿಯೂ ಏನೆಂದು ಅರ್ಥಮಾಡಿಕೊಳ್ಳಲು, ಯೆಹೋವನು ಅದನ್ನು ಅಬ್ರಹಾಮನಿಗೆ, ಮೋಶೆಗೆ, ದಾವೀದನಿಗೆ, ಇಸ್ರಾಯೇಲ್‌ ಜನಾಂಗಕ್ಕೆ ಮತ್ತು ಸಾಮಾನ್ಯ ಮಾನವಕುಲದ ಕಡೆಗೆ ಹೇಗೆ ಪ್ರದರ್ಶಿಸಿದನೆಂಬುದನ್ನು ಗಮನಕ್ಕೆ ತಂದುಕೊಳ್ಳಿರಿ.

ಯೆಹೋವನು ನಿಷ್ಠೆಯನ್ನು ತೋರಿಸಿದನು

ಯೆಹೋವನು ತನ್ನ ಸ್ನೇಹಿತನಾದ ಅಬ್ರಹಾಮನಿಗೆ ಹೇಳಿದ್ದು: “ನಾನು ನಿನಗೆ ಗುರಾಣಿಯಾಗಿದ್ದೇನೆ.” (ಆದಿಕಾಂಡ 15:1; ಯೆಶಾಯ 41:8) ಇವು ಬರಿಯ ಮಾತುಗಳಲ್ಲ, ಬದಲಾಗಿ ಆತನು ಅದನ್ನು ಕ್ರಿಯೆಯಲ್ಲಿಯೂ ತೋರಿಸಿದನು. ಯೆಹೋವನು ಅಬ್ರಹಾಮನನ್ನೂ ಅವನ ಮನೆವಾರ್ತೆಯನ್ನೂ ಫರೋಹನಿಂದ ಮತ್ತು ಅಬೀಮೆಲೆಕನಿಂದ ತಪ್ಪಿಸಿ ಕಾಪಾಡಿದನು. ಲೋಟನನ್ನು ಎದುರಿಸಿದ ನಾಲ್ವರು ಅರಸರ ಸಂಯುಕ್ತ ಶಕ್ತಿಯಿಂದ ಅವನನ್ನು ಬಿಡಿಸಲು ಅಬ್ರಹಾಮನಿಗೆ ಸಹಾಯಮಾಡಿದನು. ಯೆಹೋವನು 100 ವರ್ಷ ಪ್ರಾಯದ ಅಬ್ರಹಾಮನ ಮತ್ತು 90 ವರ್ಷ ವಯಸ್ಸಿನ ಸಾರಳ ಸಂತಾನೋತ್ಪತ್ತಿ ಶಕ್ತಿಯನ್ನು ಪುನಃಸ್ಥಾಪಿಸಿ, ಅವರ ಮೂಲಕ ವಾಗ್ದತ್ತ ಸಂತತಿಯು ಹುಟ್ಟುವಂತೆ ಮಾಡಿದನು. ದರ್ಶನಗಳು, ಸ್ವಪ್ನಗಳು ಮತ್ತು ದೇವದೂತ ಸಂದೇಶವಾಹಕರ ಮೂಲಕ ಯೆಹೋವನು ಅಬ್ರಹಾಮನೊಂದಿಗೆ ಕ್ರಮವಾಗಿ ಸಂವಾದ ಮಾಡಿದನು. ವಾಸ್ತವದಲ್ಲಿ, ಯೆಹೋವನು ಅವನು ಜೀವಂತನಾಗಿರುವಾಗ ಮತ್ತು ಅವನು ತೀರಿಕೊಂಡು ಬಹುಸಮಯ ಕಳೆದ ನಂತರವೂ ನಿಷ್ಠೆಯನ್ನು ತೋರಿಸುತ್ತಾ ಮುಂದುವರಿದನು. ನೂರಾರು ವರ್ಷಗಳ ವರೆಗೆ ಅಬ್ರಹಾಮನ ಸಂತತಿಯವರಾದ ಇಸ್ರಾಯೇಲ್‌ ಜನಾಂಗದ ದುರ್ಮಾರ್ಗಗಳ ಮಧ್ಯೆಯೂ, ಅವರ ವಿಷಯದಲ್ಲಿ ಆತನು ಮಾಡಿದ ವಾಗ್ದಾನಗಳನ್ನು ನೆರವೇರಿಸಿದನು. ಅಬ್ರಹಾಮನೊಂದಿಗಿನ ಯೆಹೋವನ ಸಂಬಂಧವು ನಿಜ ನಿಷ್ಠೆಯ ಪುರಾವೆಯಾಗಿದೆ. ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸುವುದೇ ನಿಜ ನಿಷ್ಠೆಯಾಗಿದೆ.​—ಆದಿಕಾಂಡ, ಅಧ್ಯಾಯ 12ರಿಂದ 25.

“ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು” ಎಂದು ಹೇಳಲಾಗಿದೆ. (ವಿಮೋಚನಕಾಂಡ 33:​11, ಓರೆ ಅಕ್ಷರಗಳು ನಮ್ಮವು.) ಹೌದು, ಯೆಹೋವನೊಂದಿಗೆ ಮೋಶೆಗಿದ್ದ ಸಂಬಂಧವು, ಯೇಸು ಕ್ರಿಸ್ತನಿಗೆ ಮುಂಚಿನ ಬೇರೆ ಯಾವುದೇ ಪ್ರವಾದಿಯೊಂದಿಗಿದ್ದ ಸಂಬಂಧಕ್ಕಿಂತ ಹೆಚ್ಚು ಅತ್ಯಾಪ್ತವಾಗಿತ್ತು. ಮೋಶೆಯ ಕಡೆಗೆ ಯೆಹೋವನು ನಿಷ್ಠೆಯನ್ನು ಹೇಗೆ ತೋರಿಸಿದನು?

ತನ್ನ ನಾಲ್ವತ್ತನೆ ವಯಸ್ಸಿನಲ್ಲಿ ಶಕ್ತಿ ಸಾಮರ್ಥ್ಯದಿಂದ ತುಂಬಿದ್ದ ಮೋಶೆಯು, ತನ್ನ ಜನರನ್ನು ಬಿಡಿಸಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ದುರಭಿಮಾನದಿಂದ ಮುಂದೊತ್ತಿದನು. ಆದರೆ ಅದಕ್ಕೆ ಸಮಯವಿನ್ನೂ ಬಂದಿರಲಿಲ್ಲ. ತನ್ನ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಅವನು ಓಡಿಹೋಗಬೇಕಾಯಿತು. 40 ವರ್ಷಗಳ ವರೆಗೆ ಅವನು ಮಿದ್ಯಾನಿನಲ್ಲಿ ಒಬ್ಬ ಕುರುಬನೋಪಾದಿ ಕೆಲಸಮಾಡಿದನು. (ಅ. ಕೃತ್ಯಗಳು 7:​23-30) ಆದರೂ ಯೆಹೋವನು ಅವನನ್ನು ತ್ಯಜಿಸಿಬಿಡಲಿಲ್ಲ. ತಕ್ಕ ಸಮಯವು ಬಂದಾಗ, ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಬಿಡಿಸಲಿಕ್ಕೋಸ್ಕರ ಮೋಶೆಯನ್ನು ನೇಮಿಸಲಾಯಿತು.

ತದ್ರೀತಿಯಲ್ಲಿ, ಇಸ್ರಾಯೇಲಿನ ಎರಡನೆಯ ಪ್ರಖ್ಯಾತ ರಾಜನಾದ ದಾವೀದನಿಗೆ ಯೆಹೋವನು ನಿಷ್ಠೆಯನ್ನು ತೋರಿಸಿದನು. ದಾವೀದನು ಕೇವಲ ಯುವಕನಾಗಿದ್ದಾಗ, ಯೆಹೋವನು ಪ್ರವಾದಿಯಾದ ಸಮುವೇಲನಿಗೆ ಹೇಳಿದ್ದು: “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ.” ಅಂದಿನಿಂದ ಹಿಡಿದು ಯೆಹೋವನು ದಾವೀದನನ್ನು ನಿಷ್ಠೆಯಿಂದ ಕಾಪಾಡಿ ನಡಿಸುತ್ತಾ ಬಂದಾಗ, ದಾವೀದನು ಇಸ್ರಾಯೇಲಿನ ಭಾವೀ ರಾಜನಾಗಲು ಪ್ರೌಢತೆಯನ್ನು ಪಡೆದನು. ಯೆಹೋವನು ಅವನನ್ನು “ಸಿಂಹದ ಮತ್ತು ಕರಡಿಯ ಉಗುರುಗಳಿಂದ ಮತ್ತು ಫಿಲಿಷ್ಟಿಯರ ದೈತ್ಯನಾದ ಗೊಲ್ಯಾತನಿಂದ” ಕಾಪಾಡಿ ಉಳಿಸಿದನು. ಇಸ್ರಾಯೇಲ್ಯರ ಶತ್ರುಗಳ ಮೇಲೆ ದಾವೀದನು ಜಯದ ಮೇಲೆ ಜಯವನ್ನು ಗಳಿಸಶಕ್ತನಾದದ್ದು ಯೆಹೋವನ ಸಹಾಯದಿಂದಲೇ, ಮತ್ತು ಯೆಹೋವನೇ ಅವನನ್ನು ಅಸೂಯಾಪರನೂ ದ್ವೇಷಿಯೂ ಆಗಿದ್ದ ಸೌಲನ ಈಟಿಯಿಂದ ತಪ್ಪಿಸಿ ಕಾಪಾಡಿದನು.​—1 ಸಮುವೇಲ 16:12; 17:37; 18:11; 19:10.

ದಾವೀದನಾದರೋ ಒಬ್ಬ ಪರಿಪೂರ್ಣ ಮನುಷ್ಯನಾಗಿರಲಿಲ್ಲ ನಿಶ್ಚಯ. ವಾಸ್ತವದಲ್ಲಿ ಅವನು ಘೋರ ಪಾಪಗಳನ್ನು ಮಾಡಿದನು. ಆದರೂ ಯೆಹೋವನು, ಕಡು ಪಶ್ಚಾತ್ತಾಪ ತೋರಿಸಿದ ದಾವೀದನನ್ನು ತ್ಯಜಿಸಿಬಿಡದೆ, ಅವನಿಗೆ ನಿಷ್ಠಾವಂತ ಪ್ರೀತಿಯನ್ನು ವ್ಯಕ್ತಪಡಿಸಿದನು. ದಾವೀದನ ಜೀವಮಾನದಲ್ಲೆಲ್ಲಾ, ಯೆಹೋವನು ಪದೇ ಪದೇ ಜೀವವನ್ನು ರಕ್ಷಿಸಲು ಮತ್ತು ಪ್ರವರ್ಧಿಸಲು ಕಾರ್ಯನಡಿಸಿದನು. ಸಂಕಷ್ಟದಲ್ಲಿ ಬಿದ್ದಿರುವವರ ಪರವಾಗಿ ಹಸ್ತಕ್ಷೇಪ ಮಾಡಿದನು. ಇದು ನಿಜವಾಗಿಯೂ ಆತನ ಕೃಪಾತಿಶಯವನ್ನು ತೋರಿಸುತ್ತದೆ!​—2 ಸಮುವೇಲ 11:​1–12:25; 24:​1-17.

ಇಸ್ರಾಯೇಲ್ಯರು ಸೀನಾಯಿ ಬೆಟ್ಟದಲ್ಲಿ ಮೋಶೆಯ ನಿಯಮದೊಡಂಬಡಿಕೆಯ ಷರತ್ತುಗಳಿಗೆ ವಿಧೇಯರಾಗುವೆವೆಂದು ಸಮ್ಮತಿಸಿದಾಗ, ಇಡೀ ಇಸ್ರಾಯೇಲ್‌ ಜನಾಂಗವು ಯೆಹೋವನೊಂದಿಗೆ ಒಂದು ವಿಶೇಷ ಸಮರ್ಪಿತ ಸಂಬಂಧದೊಳಗೆ ಬಂತು. (ವಿಮೋಚನಕಾಂಡ 19:​3-8) ಆದಕಾರಣ ಇಸ್ರಾಯೇಲು, ಯೆಹೋವನೊಂದಿಗೆ ಒಂದು ವಿವಾಹ ಸಂಬಂಧದೊಳಗೆ ಬಂದಿರುವುದಾಗಿ ಚಿತ್ರಿಸಲ್ಪಟ್ಟಿದೆ. ಇಸ್ರಾಯೇಲಿಗೆ ಹೇಳಲ್ಪಟ್ಟದ್ದು: “ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ.” “ಶಾಶ್ವತ ಕೃಪೆಯಿಂದ ನಿನ್ನನ್ನು ಕರುಣಿಸುವೆನು” ಎಂದೂ ಯೆಹೋವನು ಆಕೆಗಂದನು. (ಯೆಶಾಯ 54:​6, 8) ಈ ವಿಶೇಷ ಸಂಬಂಧದಲ್ಲಿ ಯೆಹೋವನು ಹೇಗೆ ನಿಷ್ಠೆಯನ್ನು ಪ್ರದರ್ಶಿಸಿದನು?

ಇಸ್ರಾಯೇಲ್ಯರ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಮತ್ತು ಅವರ ಸಂಬಂಧವನ್ನು ತನ್ನೊಂದಿಗೆ ಬಲಗೊಳಿಸಲಿಕ್ಕಾಗಿ ಯೆಹೋವನೇ ಮೊದಲ ಹೆಜ್ಜೆ ತೆಗೆದುಕೊಂಡನು. ಅವರನ್ನು ಐಗುಪ್ತದೊಳಗಿಂದ ಬಿಡಿಸಿ ಹೊರತಂದು, ಒಂದು ಜನಾಂಗವಾಗಿ ಸಂಘಟಿಸಿದನು, ಮತ್ತು “ಹಾಲೂ ಜೇನೂ ಹರಿಯುವ ದೇಶದೊಳಗೆ” ಕರತಂದನು. (ವಿಮೋಚನಕಾಂಡ 3:8) ಅವರಿಗೆ ಕ್ರಮವಾಗಿ ಆತ್ಮಿಕ ಬೋಧನೆಯನ್ನು ಯಾಜಕರ ಮೂಲಕ, ಲೇವ್ಯರ ಮೂಲಕ ಕೊಟ್ಟನು. ಒಬ್ಬನ ನಂತರ ಒಬ್ಬರಂತೆ ಪ್ರವಾದಿಗಳನ್ನೂ ಸಂದೇಶವಾಹಕರನ್ನೂ ಕಳುಹಿಸಿ ಬುದ್ಧಿವಾದವನ್ನಿತ್ತನು. (2 ಪೂರ್ವಕಾಲವೃತ್ತಾಂತ 17:​7-9; ನೆಹೆಮೀಯ 8:​7-9; ಯೆರೆಮೀಯ 7:25) ಜನಾಂಗವು ಬೇರೆ ದೇವರುಗಳನ್ನು ಸೇವಿಸಲು ತೊಡಗಿದಾಗ, ಆತನು ಅವರನ್ನು ತಿದ್ದಿ ಸರಿಪಡಿಸಿದನು. ಅವರು ಪಶ್ಚಾತ್ತಾಪಪಟ್ಟಾಗ, ಅವರನ್ನು ಕ್ಷಮಿಸಿಬಿಟ್ಟನು. ಇಸ್ರಾಯೇಲ್‌ ಜನಾಂಗವು, ವ್ಯವಹರಿಸಲು ಕಷ್ಟಕರವಾದ “ಪತ್ನಿ”ಯಾಗಿತ್ತೆಂಬುದು ಒಪ್ಪತಕ್ಕ ಮಾತು. ಆದರೂ ಯೆಹೋವನು ಅವಳನ್ನು ಕ್ಷಿಪ್ರವಾಗಿ ತ್ಯಜಿಸಿಬಿಡಲಿಲ್ಲ. ಅಬ್ರಹಾಮನಿಗೆ ಕೊಟ್ಟ ತನ್ನ ವಾಗ್ದಾನದ ಕಾರಣ, ಇಸ್ರಾಯೇಲ್ಯರ ಸಂಬಂಧದಲ್ಲಿ ತನ್ನ ಉದ್ದೇಶಗಳು ಪೂರೈಸಲ್ಪಡುವವರೆಗೂ ಆತನು ಅವರೊಂದಿಗೆ ನಿಷ್ಠೆಯಿಂದ ಅಂಟಿಕೊಂಡನು. (ಧರ್ಮೋಪದೇಶಕಾಂಡ 7:​7-9) ವಿವಾಹಿತ ವ್ಯಕ್ತಿಗಳಿಗೆ ಎಂಥ ಒಂದು ಅತ್ಯುತ್ತಮ ಮಾದರಿಯಿದು!

ಯೆಹೋವನು ಸಾಮಾನ್ಯ ಮಾನವಕುಲದ ಕಡೆಗೂ ತನ್ನ ನಿಷ್ಠೆಯನ್ನು ತೋರಿಸುತ್ತಾನೆ. ಹೇಗೆಂದರೆ, ನೀತಿವಂತರೂ ಅನೀತಿವಂತರೂ ಆಗಿರುವ ಮಾನವರೆಲ್ಲರ ಜೀವನಾವಶ್ಯಕತೆಗಳನ್ನು ಒದಗಿಸಿಕೊಡುವ ಮೂಲಕವೇ. (ಮತ್ತಾಯ 5:45; ಅ. ಕೃತ್ಯಗಳು 17:25) ಅದಕ್ಕಿಂತಲೂ ಮಿಗಿಲಾಗಿ, ಆತನು ತನ್ನ ಕುಮಾರನನ್ನು ಮಾನವ ಜಾತಿಗೆ ಪ್ರಾಯಶ್ಚಿತ್ತ ಯಜ್ಞವಾಗಿ ಕೊಟ್ಟಿರುತ್ತಾನೆ. ಈ ಮೂಲಕ ಮಾನವರೆಲ್ಲರಿಗೆ ಪಾಪ ಮತ್ತು ಮರಣದ ಬಂಧನದಿಂದ ವಿಮೋಚಿಸಲ್ಪಡುವ ಮತ್ತು ಪರದೈಸ ಭೂಮಿಯಲ್ಲಿ ಪರಿಪೂರ್ಣವಾದ ನಿತ್ಯಜೀವವನ್ನು ಅನುಭವಿಸುವ ಮಹಿಮಾಭರಿತ ಅವಕಾಶ ದೊರೆಯಬಲ್ಲದು. (ಮತ್ತಾಯ 20:28; ಯೋಹಾನ 3:16) ಪ್ರಾಯಶ್ಚಿತ್ತ ಯಜ್ಞದ ಕೊಡುಗೆಯು, ಜೀವದ ರಕ್ಷಣೆ ಮತ್ತು ಪ್ರವರ್ಧನೆಗಾಗಿ ಮಾಡಲ್ಪಟ್ಟ ಸರ್ವಶ್ರೇಷ್ಠ ಏರ್ಪಾಡಾಗಿದೆ. ಅದು ನಿಶ್ಚಯವಾಗಿಯೂ, “ದುರ್ಭಾಗ್ಯ ಅಥವಾ ಸಂಕಷ್ಟವನ್ನು ಅನುಭವಿಸುವ ಯಾವನೇ ವ್ಯಕ್ತಿಯ ಪರವಾಗಿ ಕಾರ್ಯನಡಿಸು”ವುದಾಗಿತ್ತು.

ನಿಮ್ಮ ನಿಷ್ಠೆಯನ್ನು ನಿಶ್ಚಿತ ಕಾರ್ಯಗಳಿಂದ ರುಜುಪಡಿಸಿರಿ

ನಿಷ್ಠೆಯು ಕೃಪಾತಿಶಯದ ಸಮಾನಾರ್ಥಕವಾಗಿರುವುದರಿಂದ, ಪರಸ್ಪರತೆಯ ಬಲವಾದ ಅರ್ಥವನ್ನು ಸಹ ಜೋಡಿಸುತ್ತದೆ. ಕೃಪಾತಿಶಯವು ನಿಮಗೆ ತೋರಿಸಲ್ಪಟ್ಟಾಗ, ನೀವೂ ಅದನ್ನು ತೋರಿಸುವಂತೆ ನಿರೀಕ್ಷಿಸಲಾಗುತ್ತದೆ. ನಿಷ್ಠೆಗೆ ಪ್ರತಿಯಾಗಿ ನಿಷ್ಠೆಯು ತೋರಿಸಲ್ಪಡಬೇಕು. ಹಾಸೀಡ್‌ನಲ್ಲಿ ಒಳಗೂಡಿರುವ ಅರ್ಥವನ್ನು ದಾವೀದನು ಚೆನ್ನಾಗಿ ತಿಳಿದಿದ್ದನೆಂಬುದು ಆತನ ಮಾತುಗಳಲ್ಲಿ ತೋರಿಬರುತ್ತದೆ: “ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುತ್ತೇನೆ; . . . ನಿನ್ನ ನಾಮವನ್ನು ಕೊಂಡಾಡುತ್ತೇನೆ.” ಯಾಕೆ? “ನಿನ್ನ ಕೃಪೆ, ಸತ್ಯತೆ ಇವುಗಳಿಗೋಸ್ಕರ.” (ಕೀರ್ತನೆ 138:2) ಯೆಹೋವನ ಪ್ರೀತಿ ಕೃಪೆಯನ್ನು ದಾವೀದನು ಪಡೆದುಕೊಂಡಿದ್ದನಾದ ಕಾರಣ, ಆತನನ್ನು ಆರಾಧಿಸಿ ಕೊಂಡಾಡಲು ಅವನು ಪ್ರೇರೇಪಿಸಲ್ಪಟ್ಟಿರಬೇಕು. ಹೀಗೆ ಯೆಹೋವನ ಪ್ರೀತಿಕೃಪೆಯು ನಮಗೆ ತೋರಿಸಲ್ಪಡುವಾಗ, ನಾವು ಸಹ ಅದನ್ನು ತೋರಿಸಲು ಪ್ರೇರೇಪಿಸಲ್ಪಡುತ್ತೇವೊ? ಉದಾಹರಣೆಗೆ, ಯೆಹೋವನ ನಾಮವು ನಿಂದೆಗೆ ಒಳಗಾಗಿರುವುದಾದರೆ, ಆತನ ಸತ್ಕೀರ್ತಿಗಾಗಿ ನಿಮಗಿರುವ ಚಿಂತೆಯು, ಆತನ ಪರವಾಗಿ ಸಮರ್ಥಿಸಿ ಮಾತಾಡಲು ನಿಮ್ಮನ್ನು ಪ್ರೇರೇಪಿಸುತ್ತದೊ?

ಮೋಟರ್‌ ಸೈಕಲ್‌ ಅಪಘಾತದಲ್ಲಿ ಸತ್ತ ಒಬ್ಬ ಸಂಬಂಧಿಕನ ಶವಸಂಸ್ಕಾರಕ್ಕೆ ಹಾಜರಾದ ಒಬ್ಬ ಹೊಸ ಕ್ರೈಸ್ತ ಮತ್ತು ಅವನ ಪತ್ನಿಗೆ ಇದೇ ಸಂಭವಿಸಿತು. ಹಾಜರಾದವರು ಮೃತನಾದವನ ಕುರಿತು ಏನಾದರೂ ಹೇಳುವಂತೆ ಆ ಸಂಸ್ಕಾರದಲ್ಲಿ ಅವಕಾಶವನ್ನು ಕೊಡಲಾಯಿತು. ಒಬ್ಬನು ಈ ಯುವಕನ ಅಕಾಲ ಮರಣಕ್ಕಾಗಿ ದೇವರನ್ನು ದೂಷಿಸುತ್ತಾ, ‘ದೇವರಿಗೆ ಅವನು ಬೇಕಾಗಿದ್ದನು, ಆದುದರಿಂದ ಅವನನ್ನು ಸ್ವರ್ಗಕ್ಕೊಯ್ದನು’ ಎಂದನು. ಇದನ್ನು ಕೇಳಿದ ನಮ್ಮ ಕ್ರೈಸ್ತ ಸಹೋದರನಿಗೆ ಮೌನವಾಗಿರುವುದು ಅಶಕ್ಯವಾಯಿತು. ಕೈಯಲ್ಲಿ ಬೈಬಲಾಗಲಿ ಟಿಪ್ಪಣಿಯಾಗಲಿ ಇಲ್ಲದಿದ್ದರೂ ಅವನು ವೇದಿಕೆಯನ್ನು ಹತ್ತಿ ಅಂದದ್ದು: “ದಯೆಯೂ ಕನಿಕರವೂ ಉಳ್ಳವನೂ ಸರ್ವಶಕ್ತನೂ ಆಗಿರುವ ದೇವರು ಇಂಥ ಸನ್ನಿವೇಶಗಳನ್ನು ಅನುಮತಿಸುತ್ತಾನೆಂದು ನೀವು ನೆನಸುತ್ತೀರೊ?” ಅವನು ಅನಂತರ ಯಾವುದೇ ಪೂರ್ವಸಿದ್ಧತೆಯಿಲ್ಲದೆ ಹತ್ತು ನಿಮಿಷಗಳ ತನಕ ಮಾತಾಡಿದನು. ನಾವು ಸಾಯುವುದೇಕೆ, ಮಾನವರನ್ನು ಮರಣದಿಂದ ನಮ್ಮನ್ನು ಬಿಡಿಸಲು ದೇವರು ಯಾವ ಏರ್ಪಾಡನ್ನು ಮಾಡಿದ್ದಾನೆ, ಮತ್ತು ಪರದೈಸ ಭೂಮಿಯಲ್ಲಿ ನಿತ್ಯಜೀವಕ್ಕೆ ಪುನರುತ್ಥಾನವಾಗುವ ಆಶ್ಚರ್ಯಕರ ಪ್ರತೀಕ್ಷೆಯ ಕುರಿತು ಶಾಸ್ತ್ರೀಯ ಉಲ್ಲೇಖಗಳನ್ನು ಅವನು ವಿವರಿಸಿ ಹೇಳಿದನು. ಉಪಸ್ಥಿತರಿದ್ದ 100ಕ್ಕಿಂತಲೂ ಹೆಚ್ಚು ಮಂದಿ ಇದನ್ನು ಕೇಳಿ ಬಹಳ ಹೊತ್ತಿನ ತನಕ ಚಪ್ಪಾಳೆತಟ್ಟಿದರು. ತದನಂತರ ಸಹೋದರನು ನೆನಪಿಸಿದ್ದು: “ಆಗ ನನಗೆ ನಾನು ಹಿಂದೆಂದೂ ಅನುಭವಿಸಿರದಂಥ ಆಂತರಿಕ ಸಂತೋಷವಾಯಿತು. ಆತನ ಜ್ಞಾನದಲ್ಲಿ ನನ್ನನ್ನು ಶಿಕ್ಷಿತನನ್ನಾಗಿ ಮಾಡಿದ್ದಕ್ಕಾಗಿ, ಆತನ ಪವಿತ್ರ ನಾಮವನ್ನು ಸಮರ್ಥಿಸಲಿಕ್ಕಾಗಿ ಸಂದರ್ಭವನ್ನು ಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳಿದೆ.”

ಯೆಹೋವನಿಗೆ ನಿಷ್ಠೆಯಲ್ಲಿ ಆತನ ವಾಕ್ಯವಾದ ಬೈಬಲಿನ ಕಡೆಗೆ ನಿಷ್ಠೆಯೂ ಸೇರಿರುತ್ತದೆ. ಏಕೆ? ಏಕೆಂದರೆ ಬೈಬಲಿನ ಮೂಲಕ ನಾವು ಹೇಗೆ ಜೀವಿಸಬೇಕೆಂದು ಯೆಹೋವನು ನಮಗೆ ಕಲಿಸುತ್ತಾನೆ. ಅಲ್ಲಿ ದಾಖಲಿಸಲ್ಪಟ್ಟ ನಿಯಮಗಳು ಮತ್ತು ತತ್ತ್ವಗಳು ಜೀವಿತಕ್ಕಾಗಿರುವ ಅತ್ಯುತ್ತಮ ಹಾಗೂ ಅತಿ ಉಪಯುಕ್ತ ನೀತಿಬೋಧೆಗಳಾಗಿವೆ. (ಯೆಶಾಯ 48:17) ಇತರರಿಂದ ಬರುವ ಒತ್ತಡಗಳಾಗಲಿ ಅಥವಾ ನಿಮ್ಮ ಸ್ವಂತ ಬಲಹೀನತೆಗಳಾಗಲಿ ಯೆಹೋವನ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮನ್ನು ತಪ್ಪಿಸದಿರಲಿ. ದೇವರ ವಾಕ್ಯಕ್ಕೆ ನಿಷ್ಠಾವಂತರಾಗಿ ಉಳಿಯಿರಿ.

ದೇವರಿಗೆ ನಿಷ್ಠೆಯಲ್ಲಿ ಆತನ ಸಂಸ್ಥೆಗೆ ನಿಷ್ಠೆಯೂ ಒಳಗೂಡಿರುತ್ತದೆ. ಹಲವಾರು ವರ್ಷಗಳಿಂದ ನಿರ್ದಿಷ್ಟ ಶಾಸ್ತ್ರವಚನಗಳ ನಮ್ಮ ತಿಳುವಳಿಕೆಯನ್ನು ಸರಿಪಡಿಸುವ ಮತ್ತು ಅಳವಡಿಸಿಕೊಂಡು ಪರಿಷ್ಕರಿಸುವ ಆವಶ್ಯಕತೆ ಉಂಟಾಗಿರುವುದು ನಮಗೆ ಗೊತ್ತದೆ. ವಾಸ್ತವದಲ್ಲಿ, ಆತ್ಮಿಕವಾಗಿ ನಮ್ಮಷ್ಟು ಚೆನ್ನಾಗಿ ಉಂಡುಕುಡಿಯುವವರು ಬೇರೆ ಯಾರೂ ಇಲ್ಲ. (ಮತ್ತಾಯ 24:​45-47) ಯೆಹೋವನು ತನ್ನ ಆಧುನಿಕ ಸಂಸ್ಥೆಯನ್ನು ನಿಷ್ಠೆಯಿಂದ ಬೆಂಬಲಿಸಿದ್ದಾನೆ ಎಂಬುದರಲ್ಲಿ ಸಂದೇಹವೇ ಇಲ್ಲ. ನಾವು ಸಹ ಅದೇ ರೀತಿಯ ನಿಷ್ಠೆಯನ್ನು ತೋರಿಸಬಾರದೊ? ಎ. ಏಚ್‌. ಮ್ಯಾಕ್‌ಮಿಲನ್‌ರವರು ಆ ನಿಷ್ಠೆಯನ್ನು ತೋರಿಸಿದರು. ತಮ್ಮ ಮರಣಕ್ಕೆ ಮುನ್ನ ಅವರಂದದ್ದು: “ಯೆಹೋವನ ಸಂಸ್ಥೆಯು ಒಂದು ಚಿಕ್ಕ ಆರಂಭದಿಂದ ಬೆಳೆಯುತ್ತಾ ಬಂದದ್ದನ್ನು ನಾನು ನೋಡಿದ್ದೇನೆ. ಸೆಪ್ಟೆಂಬರ್‌ 1900ರಲ್ಲಿ ನನ್ನ ಇಪ್ಪತ್ಮೂರನೆ ವಯಸ್ಸಿನಲ್ಲಿ ನನಗೆ ದೀಕ್ಷಾಸ್ನಾನವಾದಾಗ ಅದು ಚಿಕ್ಕದಾಗಿತ್ತು. ಈಗ ಅದು ದೇವರ ಸತ್ಯವನ್ನು ಉತ್ಸಾಹದಿಂದ ಘೋಷಿಸುವ ಸಂತೋಷದ ಜನರಿಂದ ಕೂಡಿರುವ ವಿಶ್ವವ್ಯಾಪಕ ಸಂಸ್ಥೆಯಾಗಿರುತ್ತದೆ . . . ಈಗ ಭೂಮಿಯಲ್ಲಿ ದೇವರಿಗೆ ನನ್ನ ಸೇವೆಯು ಕೊನೆಗೊಳ್ಳುತ್ತಾ ಬರುವ ಸಮಯದಲ್ಲಿ, ನನಗೆ ಪೂರ್ಣವಾಗಿ ಏನು ಮನದಟ್ಟಾಗಿದೆಯೆಂದರೆ ಯೆಹೋವನು ತನ್ನ ಜನರನ್ನು ಮಾರ್ಗದರ್ಶಿಸಿದ್ದಾನೆ ಮತ್ತು ಹೊತ್ತು ಹೊತ್ತಿಗೆ ಅವರಿಗೆ ಬೇಕಾದದ್ದನ್ನು ಸರಿಯಾಗಿಯೇ ಒದಗಿಸಿದ್ದಾನೆ.” ಸಹೋದರ ಮ್ಯಾಕ್‌ಮಿಲನ್‌ ನಂಬಿಗಸ್ತಿಕೆಯಿಂದಲೂ ನಿಷ್ಠೆಯಿಂದಲೂ ಸುಮಾರು 66 ವರ್ಷ ಸೇವೆ ನಡಿಸಿ, 1966ರ ಆಗಸ್ಟ್‌ 26ರಂದು ತೀರಿಕೊಂಡರು. ಅವರು ದೇವರ ದೃಶ್ಯ ಸಂಸ್ಥೆಗೆ ನಿಷ್ಠೆಯ ಅತ್ಯುತ್ತಮ ಮಾದರಿಯಾಗಿದ್ದರು.

ಸಂಸ್ಥೆಗೆ ನಿಷ್ಠರಾಗಿ ಉಳಿಯುವುದು ಮಾತ್ರವಲ್ಲದೆ, ಒಬ್ಬರಿಗೊಬ್ಬರು ನಾವು ನಿಷ್ಠಾವಂತರಾಗಿ ಇರುವೆವೊ? ಕ್ರೂರ ಹಿಂಸೆಯ ಬೆದರಿಕೆಯನ್ನು ಎದುರಿಸುತ್ತಿರುವಾಗ, ನಾವು ನಮ್ಮ ಸಹೋದರ ಸಹೋದರಿಯರಿಗೆ ನಿಷ್ಠರಾಗಿರುವೆವೊ? IIನೆಯ ವಿಶ್ವ ಯುದ್ಧದ ಸಮಯದಲ್ಲಿ ನೆದರ್‌ಲೆಂಡ್ಸ್‌ನ ನಮ್ಮ ಸಹೋದರರು ನಿಷ್ಠೆಯ ಒಂದು ಉತ್ತಮ ಮಾದರಿಯನ್ನಿಟ್ಟರು. ಗ್ರೊನಿಂಗನ್‌ ಸಭೆಯ ಹಿರಿಯರಾದ ಕ್ಲಾಸ್‌ ಡಿ. ಪ್ರಾಯ್ಸ್‌ ಕ್ರೂರ ಹಿಂಸೆಗೆ ಒಳಗಾದರು. ನಾಜೀ ಗುಪ್ತ ಪೊಲೀಸರಿಂದ ನಿರ್ದಯ ತನಿಖೆಗೆ ಒಳಗಾದ ಇವರು 12 ದಿನಗಳ ವರೆಗೆ ಏಕಾಂತವಾಸದ ಕೈದಿನಲ್ಲಿಡಲ್ಪಟ್ಟರು ಮತ್ತು ಅವರಿಗೆ ಬರೀ ರೊಟ್ಟಿ ಮತ್ತು ನೀರನ್ನು ಕೊಡಲಾಯಿತು. ಹಣೆಗೆ ಪಿಸ್ತೂಲು ಗುರಿಯಿಡಲ್ಪಟ್ಟು, ಮರಣದ ಬೆದರಿಕೆಯು ಹಾಕಲ್ಪಟ್ಟು, ಅವರು ಎರಡೇ ನಿಮಿಷದೊಳಗೆ ಜವಾಬ್ದಾರಿ ಹೊತ್ತ ಸಹೋದರರು ಎಲ್ಲಿದ್ದಾರೆಂದು ತಿಳಿಸಲು ಹಾಗೂ ಇತರ ಪ್ರಾಮುಖ್ಯ ವಿಷಯಗಳನ್ನು ತಿಳಿಸಲು ಒತ್ತಾಯಿಸಲ್ಪಟ್ಟರು. ಕ್ಲಾಸ್‌ ಇಷ್ಟನ್ನು ಮಾತ್ರ ಹೇಳಿದರು: “ನಿಮಗೆ ನನ್ನಿಂದ ಏನೂ ಸುದ್ದಿ ಸಿಗಲಾರದು . . . ನಾನು ದ್ರೋಹಿಯಾಗಲಾರೆ.” ಅವರಿಗೆ ಮೂರು ಬಾರಿ ಪಿಸ್ತೂಲನ್ನು ಗುರಿಯಿಟ್ಟು ಮರಣದ ಬೆದರಿಕೆಯನ್ನು ಹಾಕಲಾಯಿತು. ಪೊಲೀಸರು ಕೊನೆಗೆ ಬಿಟ್ಟುಬಿಟ್ಟು, ಕ್ಲಾಸ್‌ ಅವರನ್ನು ಇನ್ನೊಂದು ಸೆರೆಮನೆಗೆ ಕಳುಹಿಸಿದರು. ಆದರೆ ಕ್ಲಾಸ್‌ ತನ್ನ ಸಹೋದರರಿಗೆ ಎಂದೂ ದ್ರೋಹಬಗೆಯಲಿಲ್ಲ.

ನಮ್ಮ ನಿಷ್ಠೆಯು ನಮ್ಮ ಅತಿ ಹತ್ತರ ಸಂಬಂಧಿಯಾದ​—ನಮ್ಮ ವಿವಾಹಿತ ಜೊತೆಯ ಕಡೆಗೂ ವಿಸ್ತರಿಸುತ್ತದೊ? ಇಸ್ರಾಯೇಲ್‌ ಜನಾಂಗದೊಂದಿಗೆ ತನ್ನ ಒಡಂಬಡಿಕೆಯ ಸಂಬಂಧವನ್ನು ಯೆಹೋವನು ಗೌರವಿಸಿದಂತೆ, ನಾವು ಸಹ ನಮ್ಮ ವಿವಾಹದ ಪ್ರತಿಜ್ಞೆಗಳಿಗೆ ನಿಷ್ಠರಾಗಿದ್ದೇವೊ? ನಿಮ್ಮ ಸಂಗಾತಿಯ ಕಡೆಗೆ ನಿಮಗೆ ನಿಶ್ಚಂಚಲ ನಿಷ್ಠೆಯಿರಬೇಕು ಮಾತ್ರವಲ್ಲ, ಅವರೊಂದಿಗೆ ಒಂದು ಹತ್ತಿರದ ಸಂಬಂಧವನ್ನು ಕ್ರಿಯಾಶೀಲವಾಗಿ ಬೆನ್ನಟ್ಟಬೇಕು. ನಿಮ್ಮ ವಿವಾಹವನ್ನು ಭದ್ರಗೊಳಿಸಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಒಟ್ಟುಗೂಡಿ ಸಮಯ ಕಳೆಯಿರಿ. ಒಬ್ಬರೊಂದಿಗೊಬ್ಬರು ಸರಾಗವಾಗಿ ಮನಬಿಚ್ಚಿ ಮಾತನಾಡಿರಿ. ಒಬ್ಬರನ್ನೊಬ್ಬರು ಬೆಂಬಲಿಸಿ ಪ್ರೋತ್ಸಾಹಿಸಿರಿ. ಒಬ್ಬರಿಗೊಬ್ಬರು ಕಿವಿಗೊಡಿರಿ. ಒಟ್ಟಿಗೆ ನಗಾಡಿರಿ, ಅಳಿರಿ, ಆಟವಾಡಿರಿ. ಪರಸ್ಪರರ ಧ್ಯೇಯಗಳನ್ನು ಮುಟ್ಟಲು ಒಟ್ಟುಗೂಡಿ ದುಡಿಯಿರಿ. ಒಬ್ಬರನ್ನೊಬ್ಬರು ಮೆಚ್ಚಿಸಲು ಪ್ರಯತ್ನಿಸಿರಿ, ಸ್ನೇಹಿತರಾಗಿರಿ. ಬೇರೆಯವರೊಂದಿಗೆ ಪ್ರಣಯ ಪ್ರೀತಿಯನ್ನು ಬೆಳೆಸುವುದರಿಂದ ದೂರವಿರಲು ವಿಶೇಷವಾಗಿ ಜಾಗರೂಕರಾಗಿರಿ. ನಿಮ್ಮ ವಿವಾಹದ ಹೊರಗಿನವರೊಂದಿಗೆ ಪರಿಚಯ ಬೆಳೆಸುವುದು ಮತ್ತು ಆಪ್ತ ಗೆಳೆತನವನ್ನು ಸಹ ವಿಕಸಿಸುವುದು ಯುಕ್ತವೂ ಯೋಗ್ಯವೂ ಆಗಿದ್ದರೂ, ಪ್ರಣಯದ ಭಾವನೆಗಳು ನಿಮ್ಮ ಜೊತೆಗೆ ಮಾತ್ರ ಸೀಮಿತವಾಗಿರಬೇಕು. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಬೇರೆ ಯಾರೂ ಮಧ್ಯ ಬರುವಂತೆ ಎಡೆಗೊಡಬೇಡಿರಿ.​—ಜ್ಞಾನೋಕ್ತಿ 5:​15-20.

ನಿಮ್ಮ ಜೊತೆ ಸಾಕ್ಷಿಗಳಿಗೆ ಮತ್ತು ಕುಟುಂಬಕ್ಕೆ ನಿಷ್ಠಾವಂತರಾಗಿ ಉಳಿಯಿರಿ. ವರ್ಷಗಳು ದಾಟಿಹೋದಂತೆ ಅವರನ್ನು ಮರೆತುಬಿಡಬೇಡಿ. ಸಂಪರ್ಕ ಮಾಡುತ್ತಾ ಇರಿ, ಪತ್ರ ಬರೆಯಿರಿ, ಫೋನ್‌ ಮಾಡಿರಿ, ಸಂದರ್ಶಿಸಿರಿ. ಜೀವಿತದಲ್ಲಿ ನಿಮ್ಮ ಸನ್ನಿವೇಶವು ಹೇಗೆಯೇ ಇರಲಿ, ಅವರನ್ನು ನಿರಾಶೆಗೊಳಿಸದಿರಲು ಪ್ರಯತ್ನಿಸಿರಿ. ಅವರಿಗೆ ನಿಮ್ಮ ಪರಿಚಯವಿದೆ ಅಥವಾ ಅವರು ನಿಮ್ಮ ಸಂಬಂಧಿಕರು ಎಂದು ಸಂತೋಷದಿಂದ ಹೇಳಲಿ. ಅವರ ಕಡೆಗೆ ನಿಮ್ಮ ನಿಷ್ಠೆಯು, ಯಾವುದು ಯೋಗ್ಯವೊ ಅದನ್ನು ಮಾಡಲು ನಿಮಗೆ ಬಲವನ್ನು ಕೊಡುವುದು ಮತ್ತು ಅದು ನಿಮಗೆ ಪ್ರೋತ್ಸಾಹನೆಯ ಮೂಲವಾಗಿರುವುದು.​—ಎಸ್ತೇರಳು 4:​6-16.

ಹೌದು, ನಿಜ ನಿಷ್ಠೆಯಲ್ಲಿ ಅಮೂಲ್ಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ನಿಶ್ಚಿತ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಗೂಡಿದೆ. ಯೆಹೋವನ ಕೃಪಾತಿಶಯವನ್ನು ಹಿಂದಿರುಗಿಸಲು ನಿಮಗೆ ಏನು ಸಾಧ್ಯವೊ ಅದನ್ನು ಮಾಡಿರಿ. ಕ್ರೈಸ್ತ ಸಭೆಯೊಂದಿಗೆ, ನಿಮ್ಮ ವಿವಾಹದ ಜೊತೆ, ಕುಟುಂಬ ಮತ್ತು ಮಿತ್ರರೊಂದಿಗೆ ವ್ಯವಹರಿಸುವುದರಲ್ಲಿ ಯೆಹೋವನ ನಿಷ್ಠೆಯನ್ನು ಅನುಕರಿಸಿರಿ. ಯೆಹೋವನ ಸದ್ಗುಣಗಳನ್ನು ನಿಮ್ಮ ನೆರೆಯವರಿಗೆ ನಿಷ್ಠೆಯಿಂದ ತಿಳಿಯಪಡಿಸಿರಿ. ಕೀರ್ತನೆಗಾರನು ಸರಿಯಾಗಿಯೆ ವ್ಯಕ್ತಪಡಿಸಿದ್ದು: “ಯೆಹೋವನೇ ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿ ಹರಸುವೆನು; ನಿನ್ನ ಸತ್ಯತೆಯನ್ನು ಮುಂದಣ ಸಂತಾನದವರೆಲ್ಲರಿಗೂ ನನ್ನ ಬಾಯಿ ತಿಳಿಯಮಾಡುವುದು.” (ಕೀರ್ತನೆ 89:1) ಅಂಥ ಒಬ್ಬ ದೇವರ ಕಡೆಗೆ ನಾವು ಆಕರ್ಷಿತರಾಗುವುದಿಲ್ಲವೊ? ಖಂಡಿತವಾಗಿಯೂ “ಆತನ ಕೃಪೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.”​—ಕೀರ್ತನೆ 100:5.

[ಪುಟ 23ರಲ್ಲಿರುವ ಚಿತ್ರ]

ಎ. ಏಚ್‌. ಮ್ಯಾಕ್‌ಮಿಲನ್‌