ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪೋಲಿಹೋದ ಮಗ”ನಂತಿರುವ ಮಕ್ಕಳಿಗೆ ನೀವು ಹೇಗೆ ಸಹಾಯಮಾಡಬಲ್ಲಿರಿ?

“ಪೋಲಿಹೋದ ಮಗ”ನಂತಿರುವ ಮಕ್ಕಳಿಗೆ ನೀವು ಹೇಗೆ ಸಹಾಯಮಾಡಬಲ್ಲಿರಿ?

“ಪೋಲಿಹೋದ ಮಗ”ನಂತಿರುವ ಮಕ್ಕಳಿಗೆ ನೀವು ಹೇಗೆ ಸಹಾಯಮಾಡಬಲ್ಲಿರಿ?

‘ಉಲ್ಲಾಸಪಡು, ಯಾಕಂದರೆ ಅವನು ಪೋಲಿಹೋಗಿದ್ದನು ಮತ್ತು ಸಿಕ್ಕಿದನು.’​—ಲೂಕ 1:32.

1, 2. (ಎ) ಕ್ರೈಸ್ತ ಸತ್ಯಕ್ಕೆ ಕೆಲವು ಯುವ ಜನರು ಯಾವ ಪ್ರತಿಕ್ರಿಯೆ ತೋರಿಸಿದ್ದಾರೆ? (ಬಿ) ಹೆತ್ತವರಿಗೆ ಮತ್ತು ಆ ಮಕ್ಕಳಿಗೆ ಅಂಥ ಪರಿಸ್ಥಿತಿಯಲ್ಲಿ ಹೇಗನಿಸಬಹುದು?

“ನಾನು ಸತ್ಯವನ್ನು ಬಿಟ್ಟುಹೋಗುತ್ತಿದ್ದೇನೆ!” ತಮ್ಮ ಮಕ್ಕಳೊಬ್ಬರಿಂದ ಇಂಥ ಮಾತುಗಳನ್ನು ಕೇಳಿಸಿಕೊಳ್ಳುವುದು ದೇವಭೀರು ಹೆತ್ತವರಿಗೆ ಎಂಥ ಧಕ್ಕೆಯಾಗಿರುತ್ತದೆ! ಇತರ ಯುವ ಜನರಾದರೋ ತಮ್ಮ ಹೇತುಗಳನ್ನು ಬಹಿರಂಗವಾಗಿ ತಿಳಿಸದೆಯೇ ‘ತೇಲಿಕೊಂಡು’ಹೋಗಿಬಿಡುತ್ತಾರೆ. (ಇಬ್ರಿಯ 2:1, NW) ಇವರಲ್ಲಿ ಹೆಚ್ಚಿನವರು ಯೇಸುವಿನ ಸಾಮ್ಯದ ಪೋಲಿಹೋದ ಮಗನನ್ನು ಹೋಲುತ್ತಾರೆ. ಅವನು ತನ್ನ ತಂದೆಯ ಮನೆಯನ್ನು ಬಿಟ್ಟು, ಒಂದು ದೂರದೇಶಕ್ಕೆ ಹೋಗಿ, ತನ್ನ ಪಾಲಿಗೆ ಬಂದ ಆಸ್ತಿಯನ್ನೆಲ್ಲಾ ಪೋಲುಮಾಡಿಬಿಟ್ಟನು.​—ಲೂಕ 15:​11-16.

2 ಹೆಚ್ಚಿನ ಯೆಹೋವನ ಸಾಕ್ಷಿಗಳಿಗೆ ಈ ಸಮಸ್ಯೆಯು ಇರುವುದಿಲ್ಲ, ಆದರೆ ಯಾರಿಗೆ ಇದೆಯೋ ಅವರಿಗಾಗುವ ದುಃಖವನ್ನು, ಸಾಂತ್ವನದ ಎಷ್ಟು ಮಾತುಗಳನ್ನಾಡಿದರೂ ಪೂರ್ಣವಾಗಿ ನಿವಾರಿಸಲಾಗದು. ಮತ್ತು ಆ ಪೋಲಿಹೋದ ಯುವ ವ್ಯಕ್ತಿಯು ಸ್ವತಃ ಅನುಭವಿಸಬಹುದಾದ ಅಸಂತೋಷವನ್ನು ಸಹ ದುರ್ಲಕ್ಷಿಸಸಾಧ್ಯವಿಲ್ಲ. ಅವನ ಹೃದಯದಾಳದಲ್ಲಿ, ಅವನ ಮನಸ್ಸಾಕ್ಷಿಯು ಸಹ ಅವನನ್ನು ಚುಚ್ಚುತ್ತಿರಬಹುದು. ಯೇಸುವಿನ ಸಾಮ್ಯದಲ್ಲಿ ಪೋಲಿಹೋದ ಮಗನಿಗೆ ಕಟ್ಟಕಡೆಗೆ “ಬುದ್ಧಿಬಂತು.” ಅವನು ಮನೆಗೆ ಹಿಂದಿರುಗಿ ಬಂದಾಗ ಅವನ ತಂದೆಯು ಬಹಳ ಸಂತೋಷಪಟ್ಟನು. ಪೋಲಿಹೋದ ಯುವ ಜನರಿಗೆ ‘ಬುದ್ಧಿಬರುವಂತೆ’ ಹೆತ್ತವರು ಮತ್ತು ಸಭೆಯಲ್ಲಿರುವ ಇತರರು ಹೇಗೆ ಸಹಾಯಮಾಡಬಹುದು?​—ಲೂಕ 15:17.

ಕೆಲವರು ಸತ್ಯವನ್ನು ಬಿಟ್ಟುಹೋಗುವುದೇಕೆ?

3. ಯುವ ಜನರು ಕ್ರೈಸ್ತ ಸಭೆಯನ್ನು ಬಿಟ್ಟುಹೋಗುವ ನಿರ್ಧಾರಮಾಡಲು ಕೆಲವು ಕಾರಣಗಳಾವುವು?

3 ಕ್ರೈಸ್ತ ಸಭೆಯಲ್ಲಿ ಸಂತೋಷದಿಂದ ಯೆಹೋವನ ಸೇವೆಮಾಡಲು ನೂರಾರು ಸಾವಿರ ಯುವ ಜನರು ಇದ್ದಾರೆ. ಹೀಗಿರಲಾಗಿ, ಕೆಲವು ಯುವ ಜನರು ಸತ್ಯವನ್ನು ಬಿಟ್ಟುಹೋಗುವುದೇಕೆ? ಲೋಕವು ಏನನ್ನು ನೀಡುತ್ತಿದೆಯೊ ಅದನ್ನು ತಾವು ಕಳೆದುಕೊಳ್ಳುತ್ತಿದ್ದೇವೆಂಬ ಅನಿಸಿಕೆ ಅವರಿಗಾಗಬಹುದು. (2 ತಿಮೊಥೆಯ 4:10) ಇಲ್ಲವೆ ಯೆಹೋವನ ಸುರಕ್ಷಿತ ಕುರಿಹಟ್ಟಿಯು ತೀರ ಕಟ್ಟುನಿಟ್ಟಿನದ್ದಾಗಿದೆಯೆಂದು ಅವರು ಭಾವಿಸಾರು. ಒಂದು ದೋಷಿ ಮನಸ್ಸಾಕ್ಷಿ, ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯಲ್ಲಿ ತೀವ್ರಾಸಕ್ತಿ, ಅಥವಾ ಸಮವಯಸ್ಕ ಮಿತ್ರರಿಂದ ಸ್ವೀಕರಿಸಲ್ಪಡಬೇಕೆಂಬ ಇಚ್ಛೆಯು ಸಹ ಒಬ್ಬ ಯುವಕನನ್ನು ಯೆಹೋವನ ಸಂಸ್ಥೆಯಿಂದ ಹೊರಕ್ಕೆ ತೇಲಿಕೊಂಡುಹೋಗುವಂತೆ ಮಾಡಬಹುದು. ಹೆತ್ತವರಲ್ಲಿ ಅಥವಾ ಬೇರೆ ಕ್ರೈಸ್ತರಲ್ಲಿ ಕಪಟತನದಂತೆ ತೋರುವ ವಿಷಯಗಳೂ, ಒಬ್ಬ ಯುವ ವ್ಯಕ್ತಿಯು ದೇವರ ಸೇವೆಯನ್ನು ತ್ಯಜಿಸುವಂತೆ ಮಾಡಬಹುದು.

4. ಯುವ ಜನರು ದಾರಿತಪ್ಪಿಹೋಗುವಂತೆ ಮಾಡುವ ಮೂಲಕಾರಣವು ಹೆಚ್ಚಾಗಿ ಯಾವುದಾಗಿದೆ?

4 ಒಬ್ಬ ಮಗನ ದಂಗೆಕೋರ ಮನೋಭಾವ ಮತ್ತು ವರ್ತನೆಗಳು ಸಾಮಾನ್ಯವಾಗಿ ಆತ್ಮಿಕ ನಿರ್ಬಲತೆಯ ರೋಗಸೂಚನೆಗಳಾಗಿವೆ. ಅವು ಅವನ ಹೃದಯದಲ್ಲಿ ಏನಿದೆಯೋ ಅದರ ಬಾಹ್ಯ ಪ್ರತಿಬಿಂಬಗಳಾಗಿವೆ. (ಜ್ಞಾನೋಕ್ತಿ 15:13; ಮತ್ತಾಯ 12:34) ಒಬ್ಬ ಯುವ ವ್ಯಕ್ತಿಯು ಯಾವುದೇ ಕಾರಣದಿಂದಾಗಿ ದಾರಿತಪ್ಪಿಹೋಗಲಿ, ಅವನ ಸಮಸ್ಯೆಯ ಮೂಲಕಾರಣವು, “ಸತ್ಯದ ಪರಿಜ್ಞಾನ” ಅಥವಾ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ತನ್ನ ಹೃದಯಕ್ಕೆ ತೆಗೆದುಕೊಳ್ಳಲು ತಪ್ಪಿರುವುದೇ ಆಗಿದೆ. (2 ತಿಮೊಥೆಯ 3:7) ಯೆಹೋವನಿಗೆ ಕೇವಲ ಕಾಟಾಚಾರದ ಆರಾಧನೆಯನ್ನು ಸಲ್ಲಿಸುವುದಕ್ಕಿಂತ ಹೆಚ್ಚಿನದ್ದು ಬೇಕಾಗಿದೆ. ಯುವ ಜನರು ಆತನೊಂದಿಗೆ ಒಂದು ಅತ್ಯಾಪ್ತ ಸಂಬಂಧವನ್ನು ಬೆಳೆಸಿಕೊಳ್ಳುವ ಆವಶ್ಯಕತೆ ಇದೆ. ಇದನ್ನು ಮಾಡಲು ಅವರಿಗೆ ಯಾವುದು ಸಹಾಯಮಾಡುವುದು?

ದೇವರ ಸಮೀಪಕ್ಕೆ ಬನ್ನಿರಿ

5. ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಒಬ್ಬ ಯುವ ವ್ಯಕ್ತಿಗೆ ಯಾವುದು ಅತ್ಯಾವಶ್ಯಕ?

5 “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋಬ 4:8) ಹೀಗೆ ಮಾಡಲು, ಒಬ್ಬ ಯುವ ವ್ಯಕ್ತಿಗೆ ದೇವರ ವಾಕ್ಯಕ್ಕಾಗಿ ರುಚಿಯನ್ನು ಬೆಳೆಸಿಕೊಳ್ಳಲು ಸಹಾಯಮಾಡಬೇಕು. (ಕೀರ್ತನೆ 34:8) ಆರಂಭದಲ್ಲಿ, ಅವನಿಗೆ ಬೈಬಲಿನ ಮೂಲ ಬೋಧನೆಗಳೆಂಬ “ಹಾಲು” ಬೇಕಾಗುವುದು. ಆದರೆ ಅವನು ದೇವರ ವಾಕ್ಯದಲ್ಲಿ ಆನಂದವನ್ನು ಕಂಡುಕೊಂಡ ಹಾಗೆ ಮತ್ತು “ಗಟ್ಟಿಯಾದ ಆಹಾರ”ಕ್ಕಾಗಿ, ಅಂದರೆ ಗಾಢವಾದ ಆತ್ಮಿಕ ಮಾಹಿತಿಗಾಗಿ ರುಚಿಯನ್ನು ಬೆಳೆಸಿಕೊಂಡ ಹಾಗೆ ಅವನು ಬೇಗನೆ ಆತ್ಮಿಕ ಪ್ರೌಢತೆಯನ್ನು ಗಳಿಸುವನು. (ಇಬ್ರಿಯ 5:11-14; ಕೀರ್ತನೆ 1:2) ಲೋಕದ ಜೀವನ ಶೈಲಿಯಲ್ಲಿ ತಾನು ಪೂರ್ಣವಾಗಿ ಮುಳುಗಿದ್ದೆನೆಂದು ಒಪ್ಪಿಕೊಂಡ ಯುವಕನೊಬ್ಬನು, ಆತ್ಮಿಕ ಮೌಲ್ಯಗಳನ್ನು ಗಣ್ಯಮಾಡಲಾರಂಭಿಸಿದನು. ಆತ್ಮಿಕತೆಗೆ ತಿರುಗಿಕೊಳ್ಳಲು ಅವನಿಗೆ ಯಾವುದು ಸಹಾಯಮಾಡಿತು? ಇಡೀ ಬೈಬಲನ್ನು ಓದುವಂತೆ ನೀಡಲ್ಪಟ್ಟ ಸಲಹೆಗೆ ಪ್ರತಿಕ್ರಿಯಿಸುತ್ತಾ, ಅವನು ಒಂದು ಕ್ರಮವಾದ ಬೈಬಲ್‌ ಓದುವಿಕೆಯ ಶೆಡ್ಯೂಲಿಗೆ ನಿಕಟವಾಗಿ ಅಂಟಿಕೊಂಡಿದ್ದನು. ಹೌದು, ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲು ದೇವರ ವಾಕ್ಯವನ್ನು ಕ್ರಮವಾಗಿ ಓದುವುದು ಅತ್ಯಾವಶ್ಯಕವಾಗಿದೆ.

6, 7. ಮಕ್ಕಳು ದೇವರ ಕಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಹೆತ್ತವರು ಹೇಗೆ ಸಹಾಯಮಾಡಬಲ್ಲರು?

6 ದೇವರ ವಾಕ್ಯದೆಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳಲು ಹೆತ್ತವರು ತಮ್ಮ ಮಕ್ಕಳಿಗೆ ಸಹಾಯಮಾಡುವುದು ಅದೆಷ್ಟು ಪ್ರಾಮುಖ್ಯ! ಮನೆಯಲ್ಲಿ ಕ್ರಮದ ಕುಟುಂಬ ಅಧ್ಯಯನವು ನಡಿಸಲ್ಪಡುತ್ತಿದ್ದರೂ, ಹುಡುಗಿಯೊಬ್ಬಳು ಬಾಲಾಪರಾಧಿಗಳೊಂದಿಗೆ ಜತೆಗೂಡಿದಳು. ಅವಳ ಕುಟುಂಬ ಅಧ್ಯಯನದ ಕುರಿತು ಅವಳು ನೆನಪಿಸುವುದು: “ತಂದೆ ಪ್ರಶ್ನೆಯನ್ನು ಕೇಳುತ್ತಿದ್ದಾಗ ನಾನು ಉತ್ತರಗಳನ್ನು ಕೇವಲ ಓದಿಹೇಳಿಬಿಡುತ್ತಿದ್ದೆ, ತಲೆಯೆತ್ತಿ ಸಹ ನೋಡುತ್ತಿರಲಿಲ್ಲ.” ಕುಟುಂಬ ಅಧ್ಯಯನದಲ್ಲಿ ವಿಷಯಗಳನ್ನು ಬರೇ ಆವರಿಸಿ ಮುಗಿಸುವ ಬದಲಿಗೆ, ಜ್ಞಾನಿಗಳಾದ ಹೆತ್ತವರು ಕಲಿಸುವ ಕಲೆಯನ್ನು ಉಪಯೋಗಿಸುತ್ತಾರೆ. (2 ತಿಮೊಥೆಯ 4:2) ಒಬ್ಬ ಯುವ ವ್ಯಕ್ತಿಯು ಅಭ್ಯಾಸದಲ್ಲಿ ಆನಂದಿಸಬೇಕಾದರೆ, ಅದು ಅವನ ವೈಯಕ್ತಿಕ ಜೀವನಕ್ಕೆ, ಅವನ ಚಿಂತೆ ಆಸಕ್ತಿಗಳಿಗೆ ಸಂಬಂಧಪಟ್ಟಿದೆ ಎಂಬ ಅನಿಸಿಕೆ ಅವನಿಗಾಗಬೇಕು. ವಿಷಯದ ಬಗ್ಗೆ ಅವನ ದೃಷ್ಟಿಕೋನವೇನೆಂಬ ಪ್ರಶ್ನೆಗಳನ್ನು ಕೇಳಿರಿ. ಅವನು ತನ್ನ ಅಭಿಪ್ರಾಯಗಳನ್ನು ತಿಳಿಸುವಂತೆ ಅನುಮತಿಸಿರಿ. ಅಭ್ಯಾಸಮಾಡಲಾಗುತ್ತಿರುವ ವಿಷಯದ ವ್ಯಾವಹಾರಿಕ ಅನ್ವಯವನ್ನು ಮಾಡುವಂತೆ ಅವನನ್ನು ಉತ್ತೇಜಿಸಿರಿ. *

7 ಅಷ್ಟಲ್ಲದೆ, ಆ ಶಾಸ್ತ್ರೀಯ ಚರ್ಚೆಯನ್ನು ಸಜೀವಭರಿತವಾಗಿ ಮಾಡಲು ಪ್ರಯತ್ನಿಸಿರಿ. ಎಲ್ಲಿ ಯೋಗ್ಯವೊ ಅಲ್ಲಿ, ಯುವ ಜನರು ಬೈಬಲ್‌ ಘಟನೆಗಳನ್ನು ಮತ್ತು ಡ್ರಾಮಗಳನ್ನು ಅಭಿನಯಿಸಿ ತೋರಿಸಲಿ. ಆ ಘಟನೆಗಳು ಎಲ್ಲಿ ನಡೆದವೊ ಆ ದೇಶವು ನೆಲೆಸಿರುವ ಸ್ಥಳ ಮತ್ತು ವೈಶಿಷ್ಟ್ಯಗಳನ್ನು ಕಣ್ಮುಂದೆ ತಂದುಕೊಳ್ಳುವಂತೆ ಯುವ ಜನರಿಗೆ ಸಹಾಯಮಾಡಿರಿ. ನಕ್ಷೆಗಳನ್ನು ಮತ್ತು ಚಿತ್ರಗಳನ್ನು ಉಪಯೋಗಿಸಿದರೆ ಸಹಾಯವಾದೀತು. ಹೌದು, ಸ್ವಲ್ಪ ಕಲ್ಪನಾಶಕ್ತಿಯನ್ನು ಉಪಯೋಗಿಸುವಲ್ಲಿ, ಕುಟುಂಬ ಅಧ್ಯಯನವು ಸಜೀವಭರಿತ ಹಾಗೂ ವೈವಿಧ್ಯತೆಯುಳ್ಳದ್ದಾಗಿರಬಲ್ಲದು. ಹೆತ್ತವರು ಯೆಹೋವನೊಂದಿಗೆ ತಮಗಿರುವ ಸ್ವಂತ ಸಂಬಂಧದ ಕುರಿತು ಪರೀಕ್ಷಿಸಿಕೊಳ್ಳಬೇಕು. ಅವರು ತಾವೇ ತಮ್ಮನ್ನು ಯೆಹೋವನಿಗೆ ಹೆಚ್ಚು ಹತ್ತಿರವಾಗಿ ತರುವಾಗ, ತಮ್ಮ ಮಕ್ಕಳಿಗೆ ಕೂಡ ಹಾಗೆ ಮಾಡಲು ಕಲಿಸಬಲ್ಲರು.​—ಧರ್ಮೋಪದೇಶಕಾಂಡ 6:5-7.

8. ದೇವರ ಸಮೀಪಕ್ಕೆ ಬರಲು ಪ್ರಾರ್ಥನೆಯು ಒಬ್ಬ ವ್ಯಕ್ತಿಗೆ ಹೇಗೆ ಸಹಾಯಮಾಡುತ್ತದೆ?

8 ಪ್ರಾರ್ಥನೆ ಸಹ ಒಬ್ಬನನ್ನು ದೇವರ ಸಮೀಪಕ್ಕೆ ಎಳೆಯಲು ಸಹಾಯಮಾಡುತ್ತದೆ. ಹದಿವಯಸ್ಸಿನ ಆರಂಭದಲ್ಲಿದ್ದ ಹುಡುಗಿಯೊಬ್ಬಳು, ಕ್ರೈಸ್ತ ಜೀವನಮಾರ್ಗ ಮತ್ತು ತನ್ನ ನಂಬಿಕೆಯಲ್ಲಿ ಪಾಲ್ಗೊಳ್ಳದ ಸ್ನೇಹಿತರ ಸಹವಾಸ ಇವೆರಡರ ನಡುವೆ ಆಯ್ಕೆಮಾಡಲು ಶಕ್ತಳಾಗದೆ ಕಷ್ಟಪಟ್ಟಳು. (ಯಾಕೋಬ 4:4) ಆ ಕುರಿತು ಅವಳು ಮಾಡಿದ್ದೇನು? “ನನ್ನ ಜೀವಿತದಲ್ಲಿ ಮೊತ್ತಮೊದಲ ಬಾರಿ ನನ್ನ ಭಾವನೆಗಳ ಕುರಿತು ನಾನು ಯೆಹೋವನಿಗೆ ನಿಜವಾಗಿ ಪ್ರಾರ್ಥನೆಮಾಡಿದೆ” ಎಂದು ಆಕೆ ಹೇಳುತ್ತಾಳೆ. ತನ್ನ ಅಂತರಂಗವನ್ನು ಹೇಳಿಕೊಳ್ಳಲು ಕ್ರೈಸ್ತ ಸಭೆಯೊಳಗೇ ಒಬ್ಬಾಕೆ ಸ್ನೇಹಿತಳು ಅವಳಿಗೆ ದೊರೆತಾಗ, ತನ್ನ ಪ್ರಾರ್ಥನೆಗೆ ಉತ್ತರ ಸಿಕ್ಕಿತು ಎಂದಾಕೆ ಕೊನೆಗೆ ಹೇಳಿದಳು. ಯೆಹೋವನು ತನ್ನನ್ನು ಮಾರ್ಗದರ್ಶಿಸುತ್ತಿದ್ದಾನೆಂದು ತಿಳಿದವಳಾಗಿ ಆಕೆ ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸತೊಡಗಿದಳು. ತಮ್ಮ ಸ್ವಂತ ಪ್ರಾರ್ಥನೆಯ ಗುಣಮಟ್ಟವನ್ನು ಉತ್ತಮಗೊಳಿಸುವ ಮೂಲಕ ಸಹ ಹೆತ್ತವರು ತಮ್ಮ ಮಕ್ಕಳಿಗೆ ಸಹಾಯಮಾಡಬಲ್ಲರು. ಕುಟುಂಬವಾಗಿ ಪ್ರಾರ್ಥನೆ ಮಾಡುವಾಗ ಹೆತ್ತವರು ತಮ್ಮ ಹೃದಯದ ಭಾವನೆಗಳನ್ನು ಪೂರ್ಣವಾಗಿ ವ್ಯಕ್ತಪಡಿಸಬೇಕು. ಆಗ ಹೆತ್ತವರ ಮತ್ತು ಯೆಹೋವನ ಮದ್ಯೆ ಇರುವ ಆಪ್ತ ವೈಯಕ್ತಿಕ ಸಂಬಂಧವನ್ನು ಮಕ್ಕಳು ಕಾಣಶಕ್ತರಾಗುತ್ತಾರೆ.

ತಾಳ್ಮೆಯಿಂದಿರಿ ಆದರೆ ದೃಢರೂ ಆಗಿರಿ

9, 10. ದುರ್ಮಾರ್ಗಿಗಳಾದ ಇಸ್ರಾಯೇಲ್ಯರೊಂದಿಗೆ ದೀರ್ಘಶಾಂತಿಯಿಂದ ವ್ಯವಹರಿಸುವುದರಲ್ಲಿ ಯೆಹೋವನು ಯಾವ ಮಾದರಿಯನ್ನಿಟ್ಟನು?

9 ಒಬ್ಬ ಯುವಕನು ನಿಧಾನವಾಗಿ ಸತ್ಯದಿಂದ ಹೊರಹೋಗುವಾಗ, ಅವನು ತನ್ನನ್ನು ಇತರರಿಂದ ಪ್ರತ್ಯೇಕಿಸಿಕೊಂಡು ಒಂಟಿಗನಾಗಿ ಇರಲು ಪ್ರಯತ್ನಿಸಬಹುದು ಮತ್ತು ಹೆತ್ತವರು ಕೊಡಪ್ರಯತ್ನಿಸುವ ಆತ್ಮಿಕ ಸಹಾಯವನ್ನು ಧಿಕ್ಕರಿಸಲೂಬಹುದು. ಅಂಥ ಕಷ್ಟಕರ ಪ್ರಸಂಗದಲ್ಲಿ ಹೆತ್ತವರು ಏನು ಮಾಡಬಲ್ಲರು? ದೇವರು ಪುರಾತನ ಇಸ್ರಾಯೇಲ್ಯರೊಂದಿಗೆ ಹೇಗೆ ವ್ಯವಹರಿಸಿದನೆಂಬುದನ್ನು ಗಮನಿಸಿರಿ. ಆ “ಮೊಂಡ”ರಾದ ಇಸ್ರಾಯೇಲ್ಯರೊಂದಿಗೆ ಆತನು 900ಕ್ಕಿಂತಲೂ ಹೆಚ್ಚು ವರ್ಷ ತಾಳ್ಮೆಯಿಂದ ವ್ಯವಹರಿಸಿದನು. ಆ ಮೇಲೆಯೇ ಅವರನ್ನು ಅವರ ದುರ್ಮಾರ್ಗಕ್ಕೆ ಬಿಟ್ಟುಬಿಟ್ಟನು. (ವಿಮೋಚನಕಾಂಡ 34:9; 2 ಪೂರ್ವಕಾಲವೃತ್ತಾಂತ 36:17-21; ರೋಮಾಪುರ 10:21) ಅವರು ಆತನನ್ನು ‘ಪದೇ ಪದೇ ಪರೀಕ್ಷಿಸಿದರೂ’ ಯೆಹೋವನು ಅವರಿಗೆ “ಕರುಣೆ” ತೋರಿಸಿದನು. “ತನ್ನ ಸಿಟ್ಟನ್ನೆಲ್ಲಾ ಏರಗೊಡದೆ ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.” (ಕೀರ್ತನೆ 78:38-42) ಅವರೊಂದಿಗಿನ ವ್ಯವಹಾರದಲ್ಲಿ ದೇವರು ದೋಷವಿಲ್ಲದವನಾಗಿದ್ದನು. ಪ್ರೀತಿಯುಳ್ಳ ಹೆತ್ತವರು ಯೆಹೋವನನ್ನು ಅನುಕರಿಸುವರು ಮತ್ತು ಸಹಾಯದ ಪ್ರಯತ್ನಗಳಿಗೆ ಮಗುವು ಆ ಕೂಡಲೆ ಪ್ರತಿಕ್ರಿಯೆ ತೋರಿಸದಿದ್ದಾಗಲೂ ತಾಳ್ಮೆಯಿಂದ ವರ್ತಿಸುವರು.

10 ದೀರ್ಘಶಾಂತಿ ಅಥವಾ ತಾಳ್ಮೆಯು, ಒಂದು ಪ್ರಕ್ಷುಬ್ಧ ಸಂಬಂಧದಲ್ಲಿ ಸುಧಾರಣೆಯಾಗುವುದೆಂಬ ಆಶೆಯನ್ನು ಬಿಟ್ಟುಬಿಡದಿರುವುದನ್ನೂ ಸೂಚಿಸುತ್ತದೆ. ಹೇಗೆ ದೀರ್ಘಶಾಂತಿಯಿಂದಿರಬೇಕು ಎಂಬುದರಲ್ಲಿ ಯೆಹೋವನು ನಮಗೆ ಮಾದರಿಯನ್ನಿಟ್ಟಿದ್ದಾನೆ. ಆತನೇ ಮೊದಲ ಹೆಜ್ಜೆಯನ್ನಿಟ್ಟು, ತನ್ನ ದೂತರ ಮೂಲಕ ಇಸ್ರಾಯೇಲ್ಯರನ್ನು “ಪದೇ ಪದೇ” ಎಚ್ಚರಿಸುತ್ತಾ ಇದ್ದರೂ “ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿದರು.” (2 ಪೂರ್ವಕಾಲವೃತ್ತಾಂತ 36:15, 16, NW) “ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗದಿಂದಲೂ ದುಷ್ಕೃತ್ಯಗಳಿಂದಲೂ ಹಿಂದಿರುಗಿರಿ” ಎಂದು ಆತನು ಇಸ್ರಾಯೇಲ್ಯರಿಗೆ ಬೇಡಿಕೊಂಡನು. (ಯೆರೆಮೀಯ 25:4, 5) ಹೀಗಿದ್ದರೂ, ಯೆಹೋವನು ತನ್ನ ನೀತಿಯುಳ್ಳ ತತ್ತ್ವಗಳ ವಿಷಯದಲ್ಲಿ ಒಪ್ಪಂದಮಾಡಿಕೊಳ್ಳಲಿಲ್ಲ. ದೇವರ ಕಡೆಗೂ ಆತನ ಮಾರ್ಗಗಳ ಕಡೆಗೂ “ಹಿಂದಿರುಗಿ” ಬರುವಂತೆ ಇಸ್ರಾಯೇಲ್ಯರಿಗೆ ತಿಳಿಸಲಾಯಿತು.

11. ತಪ್ಪುದಾರಿಗಿಳಿಯುವ ಮಗನೊಂದಿಗೆ ವ್ಯವಹರಿಸುವಾಗ, ಹೆತ್ತವರು ದೀರ್ಘಶಾಂತರಾಗಿದ್ದರೂ ದೃಢತೆಯುಳ್ಳವರಾಗಿರಸಾಧ್ಯವಿದೆ ಹೇಗೆ?

11 ತಪ್ಪುದಾರಿಗಿಳಿಯುವ ಮಗನ ವಿಷಯದಲ್ಲಿ, ಅವಸರದಿಂದ ಆಶೆಯನ್ನು ಬಿಟ್ಟುಬಿಡದೆ ದೀರ್ಘಶಾಂತಿಯನ್ನು ತೋರಿಸುವ ಮೂಲಕ ಹೆತ್ತವರು ಯೆಹೋವನನ್ನು ಅನುಕರಿಸಬಲ್ಲರು. ಸಂವಾದದ ದ್ವಾರಗಳನ್ನು ತೆರೆದಿಡುವುದಕ್ಕಾಗಿ ಅಥವಾ ಸಂವಾದವನ್ನು ಪುನಃ ಸ್ಥಾಪಿಸುವುದಕ್ಕಾಗಿ ಅವರು ಮೊದಲ ಹೆಜ್ಜೆಯನ್ನಿಡಬೇಕು, ನಿರೀಕ್ಷೆಯನ್ನು ಕಳೆದುಕೊಳ್ಳಬಾರದು. ಅವರು ನೀತಿಯ ತತ್ತ್ವಗಳಿಗೆ ಅಂಟಿಕೊಂಡು, ಅದೇ ಸಮಯದಲ್ಲಿ ತಮ್ಮ ಮಗನು ದುರ್ಮಾರ್ಗದಿಂದ ಸತ್ಯದ ದಾರಿಗೆ ಹಿಂದಿರುಗುವಂತೆ “ಪದೇ ಪದೇ” ಎಚ್ಚರಿಸುತ್ತಾ ಅಪ್ಪೀಲು ಮಾಡಸಾಧ್ಯವಿದೆ.

ಕಿರಿಯ ಪ್ರಾಯದವನು ಬಹಿಷ್ಕರಿಸಲ್ಪಟ್ಟಾಗ

12. ತಮ್ಮೊಂದಿಗೆ ಜೀವಿಸುವ ಆದರೆ ಸಭೆಯಿಂದ ಬಹಿಷ್ಕರಿಸಲ್ಪಡುವ ಕಿರಿಯ ಪ್ರಾಯದ ಮಗನ ವಿಷಯದಲ್ಲಿ ಹೆತ್ತವರಿಗೆ ಯಾವ ಜವಾಬ್ದಾರಿಯಿದೆ?

12 ತನ್ನ ಹೆತ್ತವರೊಂದಿಗೆ ಜೀವಿಸುತ್ತಿರುವ ಕಿರಿಯ ಪ್ರಾಯದ ಮಗನು ಒಂದು ಗಂಭೀರವಾದ ಪಾಪವನ್ನು ಮಾಡುತ್ತಾನೆಂದು ನೆನಸೋಣ. ಅವನು ಪಶ್ಚಾತ್ತಾಪದ ಭಾವವನ್ನು ತೋರಿಸದ ಕಾರಣ ಅವನಿಗೆ ಸಭೆಯಿಂದ ಬಹಿಷ್ಕಾರವಾಗುತ್ತದೆ. ಆಗೇನು? ಅವನಿನ್ನೂ ತನ್ನ ಹೆತ್ತವರ ಮನೆಯಲ್ಲಿ ಜೀವಿಸುತ್ತಾನಾದುದರಿಂದ, ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿ ಅವನಿಗೆ ಬೋಧಿಸುವ ಮತ್ತು ಅವನನ್ನು ಶಿಸ್ತುಗೊಳಿಸುವ ಜವಾಬ್ದಾರಿಯು ಹೆತ್ತವರಿಗೇ ಸೇರಿದೆ. ಇದನ್ನು ಹೇಗೆ ಮಾಡಸಾಧ್ಯವಿದೆ?​—ಜ್ಞಾನೋಕ್ತಿ 6:​20-22; 29:17.

13. ತಪ್ಪುಮಾಡುತ್ತಿರುವ ತಮ್ಮ ಮಗನ ಹೃದಯವನ್ನು ತಲಪಲು ಹೆತ್ತವರು ಹೇಗೆ ಪ್ರಯತ್ನಿಸಬಹುದು?

13 ಅಂಥ ಬೋಧನೆ ಮತ್ತು ಶಿಸ್ತನ್ನು ಒಂದು ಖಾಸಗಿ ಬೈಬಲ್‌ ಅಧ್ಯಯನದ ಮೂಲಕ ಕೊಡುವುದು ನಿಶ್ಚಯವಾಗಿ ಸಾಧ್ಯವಾದೀತು, ಮತ್ತು ಅದು ಉತ್ತಮವೂ ಆಗಿದೆ. ಮಗನ ಕಠಿನ ಮನೋಭಾವದ ಆಧಾರದ ಮೇಲೆ ಅವನ ತೀರ್ಪುಮಾಡದೆ, ಅವನ ಹೃದಯದಲ್ಲೇನಿದೆ ಎಂಬುದನ್ನು ನೋಡಲು ಹೆತ್ತವರು ಪ್ರಯತ್ನಿಸಬೇಕು. ಅವನ ಆತ್ಮಿಕ ಅಸ್ವಸ್ಥತೆಯು ಎಷ್ಟರ ಮಟ್ಟಿಗೆ ಹಬ್ಬಿದೆ? (ಜ್ಞಾನೋಕ್ತಿ 20:5) ಅವನ ಹೃದಯದ ಅತಿ ಸೂಕ್ಷ್ಮವಾದ ಭಾವನೆಗಳ ಮೇಲೆ ಪ್ರಭಾವ ಬೀರಬಲ್ಲಿರೋ? ಯಾವ ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದು? ಅಪೊಸ್ತಲ ಪೌಲನು ನಮಗೆ ಆಶ್ವಾಸನೆ ಕೊಡುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) ಹೌದು, ಇನ್ನೊಮ್ಮೆ ಕೆಟ್ಟತನವನ್ನು ಮಾಡಬೇಡ ಎಂದು ಬರೇ ಹೇಳುವ ಬದಲಿಗೆ ಹೆತ್ತವರು ಹೆಚ್ಚನ್ನು ಮಾಡಸಾಧ್ಯವಿದೆ. ಗುಣಪಡಿಸುವಂಥ ಪ್ರಕ್ರಿಯೆಯನ್ನು ಅವರೇ ಆರಂಭಿಸಿ, ಅದನ್ನು ಮುಂದುವರಿಸಿಕೊಂಡು ಹೋಗಲು ಅವರು ಪ್ರಯತ್ನಿಸಬೇಕು.

14. ತಪ್ಪುಗೈದಿರುವ ಯುವಕನು ಯೆಹೋವನೊಂದಿಗೆ ತನ್ನ ಸಂಬಂಧವನ್ನು ಪುನಃ ಸ್ಥಾಪಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮೊದಲನೆ ಹೆಜ್ಜೆ ಯಾವುದು, ಮತ್ತು ಆ ಹೆಜ್ಜೆಯನ್ನು ತೆಗೆದುಕೊಳ್ಳಲು ಹೆತ್ತವರು ಮಗನಿಗೆ ಹೇಗೆ ಸಹಾಯಮಾಡಬಹುದು?

14 ತಪ್ಪುಮಾಡಿರುವ ಯುವಕನಿಗೆ ಯೆಹೋವನೊಂದಿಗೆ ತನ್ನ ಸಂಬಂಧವನ್ನು ಪುನಃ ಸ್ಥಾಪಿಸಿಕೊಳ್ಳುವ ಅವಶ್ಯಕತೆ ಇದೆ. ಅವನು ತೆಗೆದುಕೊಳ್ಳಬೇಕಾದ ಮೊದಲನೆ ಹೆಜ್ಜೆಯು, ‘ಪಶ್ಚಾತ್ತಾಪಪಟ್ಟು ತಿರುಗಿಕೊಳ್ಳುವುದೇ’ ಆಗಿದೆ. (ಅ. ಕೃತ್ಯಗಳು 3:19; ಯೆಶಾಯ 55:6, 7) ತಮ್ಮ ಮನೆಯಲ್ಲಿರುವ ಎದುರಾಳಿ ಯುವಕನಿಗೆ ಪಶ್ಚಾತ್ತಾಪಪಡಲು ಸಹಾಯಮಾಡುವುದರಲ್ಲಿ, ಹೆತ್ತವರು ‘ಕೇಡನ್ನು ಸಹಿಸಿಕೊಳ್ಳುವವರೂ ನಿಧಾನವಾಗಿ ತಿದ್ದುವವರೂ’ ಆಗಿರಬೇಕು. (2 ತಿಮೊಥೆಯ 2:24-26) ಬೈಬಲಿನ ಅರ್ಥದಲ್ಲಿ ಅವರು ಅವನನ್ನು “ಗದರಿಸುವ” ಅಗತ್ಯವಿದೆ. “ಗದರಿಸು” ಎಂಬುದಾಗಿ ತರ್ಜುಮೆಯಾದ ಗ್ರೀಕ್‌ ಪದರೂಪದ ಅರ್ಥವು “ಮನಗಾಣಿಸುವ ಪುರಾವೆಯನ್ನು ಕೊಡುವುದು” ಎಂದೂ ಆಗಿದೆ. (ಪ್ರಕಟನೆ 3:19; ಯೋಹಾನ 16:8) ಆದುದರಿಂದ, ಗದರಿಸುವುದರಲ್ಲಿ, ಅವನು ಗೈದ ಪಾಪವನ್ನು ಅವನಿಗೆ ಮನದಟ್ಟುಮಾಡಿಸಲು ಸಾಕಷ್ಟು ಪುರಾವೆಯನ್ನು ತೋರಿಸುವುದು ಒಳಗೂಡಿರುತ್ತದೆ. ಹೀಗೆ ಮಾಡುವುದು ಅಷ್ಟೇನು ಸುಲಭವಲ್ಲ ಎಂಬುದು ಒಪ್ಪತಕ್ಕದ್ದೇ. ಸಾಧ್ಯವಿರುವಲ್ಲಿ, ಹೆತ್ತವರು ಅವನ ಹೃದಯಕ್ಕೆ ಅಪ್ಪೀಲು ಮಾಡಬಹುದು. ತಮ್ಮ ಮಗನ ದುರ್ನಡತೆಯನ್ನು ಅವನಿಗೆ ಮನದಟ್ಟುಮಾಡಿಸಲು ಶಾಸ್ತ್ರೀಯವಾಗಿ ಯೋಗ್ಯವಾದ ಎಲ್ಲಾ ಸಾಧನಗಳನ್ನು ಉಪಯೋಗಿಸಬಹುದು. ‘ಕೆಟ್ಟದ್ದನ್ನು ದ್ವೇಷಿಸಿ, ಒಳ್ಳೇದನ್ನು ಪ್ರೀತಿಸುವ’ ಅಗತ್ಯವನ್ನು ತಿಳಿದುಕೊಳ್ಳುವಂತೆ ಅವರು ಸಹಾಯಮಾಡಲು ಪ್ರಯತ್ನಿಸಬಹುದು. (ಆಮೋಸ 5:15) ಆಗ ಒಂದುವೇಳೆ ಅವನು ಹಿಂದಿರುಗಿ ‘ಸೈತಾನನ ಉರ್ಲಿನಿಂದ ತಪ್ಪಿಸಿಕೊಂಡು ಸ್ವಸ್ಥಚಿತ್ತನಾದಾನು.’

15. ಪಾಪಿಗೆ ಯೆಹೋವನೊಂದಿಗಿರುವ ಸಂಬಂಧವನ್ನು ಪುನಃ ಸ್ಥಾಪಿಸುವುದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?

15 ಯೆಹೋವನೊಂದಿಗೆ ಒಬ್ಬನ ಸಂಬಂಧವನ್ನು ಪುನಃ ಸ್ಥಾಪಿಸುವುದಕ್ಕೆ ಪ್ರಾರ್ಥನೆಯು ಅತ್ಯಾವಶ್ಯಕ. ಆದರೆ ಒಂದು ಸಮಯದಲ್ಲಿ ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುತ್ತಿದ್ದ ಯಾವುದೇ ವ್ಯಕ್ತಿಯು ಸ್ಪಷ್ಟವಾಗಿ ಪಶ್ಚಾತ್ತಾಪವಿಲ್ಲದೆ ನಿರ್ಲಜ್ಜವಾಗಿ ನಡೆಸುತ್ತಿರುವ ಪಾಪದ ವಿಷಯವಾಗಿ ಯಾರೂ “ಬೇಡಿಕೊಳ್ಳ”ಬಾರದೆಂಬುದು ನಿಶ್ಚಯ. (1 ಯೋಹಾನ 5:16, 17; ಯೆರೆಮೀಯ 7:16-20; ಇಬ್ರಿಯ 10:26, 27) ಹೀಗಿದ್ದರೂ ಆ ಪರಿಸ್ಥಿತಿಯೊಂದಿಗೆ ವ್ಯವಹರಿಸಲು ಬೇಕಾದ ವಿವೇಕವನ್ನು ದಯಪಾಲಿಸುವಂತೆ ಹೆತ್ತವರು ಯೆಹೋವನನ್ನು ಬೇಡಿಕೊಳ್ಳಬಹುದು. (ಯಾಕೋಬ 1:5) ಬಹಿಷ್ಕರಿಸಲ್ಪಟ್ಟ ಯುವಕನು ಪಶ್ಚಾತ್ತಾಪಕ್ಕೆ ಯೋಗ್ಯವಾದ ಪುರಾವೆಯನ್ನು ಕೊಡುತ್ತಿದ್ದರೂ, ‘ದೇವರೊಂದಿಗೆ ಅವನಿಗೆ ವಾಕ್‌ ಸ್ವಾತಂತ್ರ್ಯ’ ಇರದಿದ್ದಲ್ಲಿ ಹೆತ್ತವರು ಅವನಿಗಾಗಿ ಪ್ರಾರ್ಥಿಸುತ್ತಾ, ದೇವರು ಅವನ ಪಾಪವನ್ನು ಕ್ಷಮಿಸಿಬಿಡಲು ಆಧಾರವನ್ನು ಕಾಣುವುದಾದರೆ ಆತನ ಚಿತ್ತವೇ ನೆರವೇರಲೆಂದು ಬಿನ್ನೈಸಬಹುದು. (1 ಯೋಹಾನ 3:​21, NW) ಈ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುವಾಗ, ಯೆಹೋವನು ಒಬ್ಬ ಕರುಣಾಳು ದೇವರಾಗಿದ್ದಾನೆಂಬುದನ್ನು ಗ್ರಹಿಸಲು ಆ ಯುವಕನಿಗೆ ಸಹಾಯ ಸಿಗುವುದು. *​—ವಿಮೋಚನಕಾಂಡ 34:6, 7; ಯಾಕೋಬ 5:16.

16. ಬಹಿಷ್ಕರಿಸಲ್ಪಟ್ಟಿರುವ ಕಿರಿಯ ಪ್ರಾಯದವರ ಕುಟುಂಬ ಸದಸ್ಯರಿಗೆ ನಾವು ಹೇಗೆ ಸಹಾಯಮಾಡಸಾಧ್ಯವಿದೆ?

16 ದೀಕ್ಷಾಸ್ನಾನ ಪಡೆದಿರುವ ಯುವಕನೊಬ್ಬನು ಬಹಿಷ್ಕರಿಸಲ್ಪಟ್ಟರೆ, ಸಭಾ ಸದಸ್ಯರು “ಅವನ ಸಹವಾಸ ಮಾಡಬಾರದು.” (1 ಕೊರಿಂಥ 5:11; 2 ಯೋಹಾನ 10, 11) ಇದು ಕೊನೆಗೆ ಅವನಿಗೆ ‘ಬುದ್ಧಿಬರುವಂತೆ’ ಸಹಾಯಮಾಡಿ, ದೇವರ ಸುರಕ್ಷಣೆಯ ಮಂದೆಯೊಳಗೆ ಮರಳುವಂತೆ ಸಹಾಯಮಾಡೀತು. (ಲೂಕ 15:17) ಅವನು ದೇವರ ಸಂಸ್ಥೆಗೆ ಮರಳಿಬರಲಿ, ಬಾರದಿರಲಿ, ಸಭೆಯ ಸದಸ್ಯರು ಆ ಬಹಿಷ್ಕೃತ ಯುವಕನ ಕುಟುಂಬಕ್ಕೆ ಪ್ರೋತ್ಸಾಹವನ್ನು ನೀಡುತ್ತಾ ಇರಬೇಕು. ಕೋಮಲವಾದ “ಕರುಣೆ”ಯನ್ನು ತೋರಿಸುವುದಕ್ಕಾಗಿ ನಾವೆಲ್ಲರೂ ಅವಕಾಶವನ್ನು ಹುಡುಕುತ್ತಿರಬೇಕು.​—1 ಪೇತ್ರ 3:8, 9.

ಇತರರು ಸಹಾಯಮಾಡಬಲ್ಲ ವಿಧ

17. ದಾರಿತಪ್ಪಿಹೋಗುತ್ತಿರುವ ಬಾಲಕನಿಗೆ ಸಹಾಯಮಾಡಲು ಪ್ರಯತ್ನಿಸುವಾಗ, ಸಭಾ ಸದಸ್ಯರು ಏನನ್ನು ಮನಸ್ಸಿನಲ್ಲಿಡಬೇಕು?

17 ಯುವಕನೊಬ್ಬನು ಕ್ರೈಸ್ತ ಸಭೆಯಿಂದ ಬಹಿಷ್ಕೃತನಾಗಿರದಿದ್ದರೂ, ನಂಬಿಕೆಯಲ್ಲಿ ಅವನು ಬಲಹೀನನಾಗುತ್ತಾ ಬರುವುದಾದರೆ ಆಗೇನು? “ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 12:26) ಇತರರು ಅಂಥ ಯುವಕನಲ್ಲಿ ಕ್ರಿಯಾಶೀಲ ಆಸಕ್ತಿಯನ್ನು ತೋರಿಸಬಹುದು. ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದೂ ಉತ್ತಮವಾಗಿದೆ, ಯಾಕೆಂದರೆ ಆತ್ಮಿಕವಾಗಿ ಅಸ್ವಸ್ಥನಾಗಿರುವ ಒಬ್ಬ ಯುವಕನು ಬೇರೆ ಯುವಕರ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರಬಲ್ಲನು. (ಗಲಾತ್ಯ 5:7-9) ಒಂದು ಸಭೆಯಲ್ಲಿ ಸದುದ್ದೇಶವುಳ್ಳ ವಯಸ್ಕರು ಆತ್ಮಿಕವಾಗಿ ನಿರ್ಬಲರಾಗಿದ್ದ ಕೆಲವು ಯುವ ಜನರಿಗೆ ಸಹಾಯಮಾಡಲು ಬಯಸಿದರು. ಜನಪ್ರಿಯ ಸಂಗೀತಗಳನ್ನು ನುಡಿಸಿ ಹಾಡುವ ಒಕ್ಕೂಟಗಳಿಗೆ ಅವರನ್ನು ಆಮಂತ್ರಿಸಲಾಯಿತು. ಯುವ ಜನರು ಅದಕ್ಕೆ ಹಾಜರಾಗಿ ಕಾರ್ಯಕ್ರಮಗಳನ್ನು ಆನಂದಿಸಿದರೂ, ಒಬ್ಬರ ಮೇಲೊಬ್ಬರು ಬೀರಿದ ಪ್ರಭಾವದಿಂದಾಗಿ ಕಟ್ಟಕಡೆಗೆ ಅವರು ಸಭೆಯನ್ನೇ ಬಿಟ್ಟುಹೋದರು. (1 ಕೊರಿಂಥ 15:33; ಯೂದ 22, 23) ಆತ್ಮಿಕವಾಗಿ ಅಸ್ವಸ್ಥನಾಗಿರುವ ಬಾಲಕನಿಗೆ ಆತ್ಮಿಕ ಮಾರ್ಗದರ್ಶನವಿಲ್ಲದ ಸಾಮಾಜಿಕ ಒಕ್ಕೂಟಗಳಲ್ಲ, ಬದಲಾಗಿ ಆತ್ಮಿಕ ವಿಷಯಗಳಿಗಾಗಿ ರುಚಿಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವ ಸಹವಾಸವೇ ವಾಸಿಕಾರಕವಾಗಿದೆ. *

18. ಯೇಸುವಿನ ಸಾಮ್ಯದಲ್ಲಿದ್ದ ಪೋಲಿಹೋದ ಮಗನ ತಂದೆಯ ಮನೋಭಾವವನ್ನು ನಾವು ಹೇಗೆ ಅನುಕರಿಸಬಹುದು?

18 ಸಭೆಯನ್ನು ಬಿಟ್ಟುಹೋಗಿರುವ ಯುವಕನೊಬ್ಬನು ರಾಜ್ಯ ಸಭಾಗೃಹಕ್ಕೆ ಹಿಂದೆ ಮರಳುವಾಗ ಅಥವಾ ಸಮ್ಮೇಳನವೊಂದಕ್ಕೆ ಹಾಜರಾಗುವಾಗ, ಅವನಿಗೆ ಮನಸ್ಸಿನಲ್ಲಿ ಹೇಗನಿಸುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳಿರಿ. ಯೇಸುವಿನ ಸಾಮ್ಯದಲ್ಲಿರುವ ಪೋಲಿಹೋದ ಮಗನ ತಂದೆಯು ಕೊಟ್ಟ ಸಂತಸದ ಸ್ವಾಗತವನ್ನು ನಾವೂ ಕೊಡಬಾರದೊ? (ಲೂಕ 15:18-20, 25-32) ಒಮ್ಮೆ ಕ್ರೈಸ್ತ ಸಭೆಯನ್ನು ಬಿಟ್ಟುಹೋಗಿ ತದನಂತರ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದ ಹದಿವಯಸ್ಕನೊಬ್ಬನು ಹೇಳಿದ್ದು: “ನನ್ನಂಥ ವ್ಯಕ್ತಿಯನ್ನು ಎಲ್ಲರೂ ನಿರ್ಲಕ್ಷಿಸುವರೆಂದು ನಾನು ನೆನಸಿದ್ದೆ. ಆದರೆ ಸಹೋದರ ಸಹೋದರಿಯರು ನನ್ನನ್ನು ಆದರದಿಂದ ಬರಮಾಡಿಕೊಂಡರು. ನಾನು ತುಂಬ ಪ್ರಭಾವಿತನಾದೆ.” ಅವನು ಪುನಃ ಬೈಬಲಭ್ಯಾಸವನ್ನು ಆರಂಭಿಸಿ ಅನಂತರ ದೀಕ್ಷಾಸ್ನಾನವನ್ನು ಪಡೆದುಕೊಂಡನು.

ಆಶೆಯನ್ನು ಬಿಟ್ಟುಬಿಡಬೇಡಿರಿ

19, 20. ಪೋಲಿಹೋದ ಮಗನ ಸಂಬಂಧದಲ್ಲಿ ಆಶಾವಾದಿಗಳಾಗಿ ನಾವೇಕೆ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಬೇಕು?

19 “ಪೋಲಿಹೋದ” ಮಕ್ಕಳಿಗೆ ‘ಬುದ್ಧಿಬರುವಂತೆ’ ಸಹಾಯಮಾಡುವುದಕ್ಕೆ ತಾಳ್ಮೆಯು ಬೇಕಾಗಿದೆ. ಮತ್ತು ಅದು ಹೆತ್ತವರಿಗೂ ಇತರರಿಗೂ ಒಂದು ಸವಾಲಾಗಿರಬಲ್ಲದು. ಆದರೆ ಆಶೆಯನ್ನು ಬಿಟ್ಟುಬಿಡಬೇಡಿರಿ. “ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.” (2 ಪೇತ್ರ 3:9) ಜನರು ಪಶ್ಚಾತ್ತಾಪಪಟ್ಟು ಬದುಕಿ ಉಳಿಯುವುದನ್ನೇ ಯೆಹೋವನು ಬಯಸುತ್ತಾನೆಂಬುದಕ್ಕೆ ನಮಗೆ ಶಾಸ್ತ್ರೀಯ ಆಶ್ವಾಸನೆಯಿದೆ. ಮಾನವರನ್ನು ತನ್ನೊಂದಿಗೆ ಸಮಾಧಾನಪಡಿಸಿಕೊಳ್ಳಲಿಕ್ಕಾಗಿ ಏರ್ಪಾಡನ್ನು ಮಾಡುವುದರಲ್ಲಿ ಆತನೇ ಆರಂಭದ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ. (2 ಕೊರಿಂಥ 5:18, 19) ಆತನ ತಾಳ್ಮೆಯು ಲಕ್ಷಾಂತರ ಜನರು ತಮ್ಮ ಬುದ್ಧಿಗೆ ಬರುವಂತೆ ಅವಕಾಶವನ್ನು ಕೊಟ್ಟಿರುತ್ತದೆ.​—ಯೆಶಾಯ 2:2, 3.

20 ಆದುದರಿಂದ ಹೆತ್ತವರು ತಮ್ಮ ಪೋಲಿಹೋದ ಕಿರಿಪ್ರಾಯದ ಮಗನು ಸ್ವಸ್ಥಬುದ್ಧಿಗೆ ಮರಳುವಂತೆ ಮಾಡಲಿಕ್ಕಾಗಿ ಸಾಧ್ಯವಿರುವ ಪ್ರತಿಯೊಂದು ಶಾಸ್ತ್ರೀಯ ವಿಧಾನವನ್ನು ಉಪಯೋಗಿಸಬಾರದೊ? ಯೆಹೋವನ ಬಳಿಗೆ ಹಿಂದಿರುಗುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡಲು ನಿಶ್ಚಿತ ಹೆಜ್ಜೆಗಳನ್ನು ನೀವು ತೆಗೆದುಕೊಳ್ಳುವಾಗ, ಯೆಹೋವನನ್ನು ಅನುಕರಿಸುತ್ತಾ ದೀರ್ಘಶಾಂತಿಯುಳ್ಳವರಾಗಿರಿ. ಬೈಬಲಿನ ಮೂಲತತ್ತ್ವಗಳಿಗೆ ದೃಢವಾಗಿ ಅಂಟಿಕೊಳ್ಳಿರಿ, ಮತ್ತು ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳುವಾಗ ಆತನ ಗುಣಗಳಾದ ಪ್ರೀತಿ, ನ್ಯಾಯ ಮತ್ತು ವಿವೇಕವನ್ನು ಪ್ರತಿಬಿಂಬಿಸಲು ಪ್ರಯತ್ನಿಸಿರಿ. ಕಲ್ಲೆದೆಯ ಅನೇಕ ಮಂದಿ ದಂಗೆಕೋರರು ಯೆಹೋವನ ಪ್ರೀತಿಯುಳ್ಳ ಆಮಂತ್ರಣಕ್ಕೆ ಪ್ರತಿಕ್ರಿಯಿಸಿ, ಆತನ ಸಂಸ್ಥೆಗೆ ಮರಳಿಬಂದಿರುವಂತೆ, ನಿಮ್ಮ ಪೋಲಿಹೋದ ಮಗ ಇಲ್ಲವೆ ಮಗಳು ಆತನ ಸುರಕ್ಷಣೆಯ ಹಿಂಡಿನೊಳಗೆ ಪುನಃ ಹಿಂದೆ ಬರಬಹುದು.​—ಲೂಕ 15:6, 7.

[ಪಾದಟಿಪ್ಪಣಿಗಳು]

^ ಪ್ಯಾರ. 6 ಯುವ ಜನರಿಗೆ ಪರಿಣಾಮಕಾರಿಯಾಗಿ ಕಲಿಸುವ ವಿಧಾನದ ಕುರಿತು ಸಲಹೆಗಾಗಿ 1999, ಜುಲೈ 1ರ ಕಾವಲಿನಬುರುಜು ಪತ್ರಿಕೆಯ 13-17ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 15 ಇಂಥ ಪ್ರಾರ್ಥನೆಗಳು ಬಹಿಷ್ಕೃತನಾಗಿರುವ ಒಬ್ಬ ಕಿರಿಯ ಪ್ರಾಯದವನ ಪರವಾಗಿ ಸಭಾ ಕೂಟಗಳಲ್ಲಿ ಬಹಿರಂಗವಾಗಿ ನಡಿಸಲ್ಪಡುವುದಿಲ್ಲ. ಯಾಕೆಂದರೆ ಆ ಬಹಿಷ್ಕೃತ ವ್ಯಕ್ತಿಯ ಸನ್ನಿವೇಶದ ಕುರಿತು ಇತರರಿಗೆ ತಿಳಿದಿರಲಿಕ್ಕಿಲ್ಲ.​—ಅಕ್ಟೋಬರ್‌ 15, 1979ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಪುಟ 31ನ್ನು ನೋಡಿ.

^ ಪ್ಯಾರ. 17 ನಿರ್ದಿಷ್ಟ ಸಲಹೆಗಳಿಗಾಗಿ ಎಚ್ಚರ! (ಇಂಗ್ಲಿಷ್‌) ಜೂನ್‌ 22, 1972, ಪುಟಗಳು 13-16; ಸೆಪ್ಟೆಂಬರ್‌ 22, 1996 ಪುಟಗಳು 21-23ನ್ನು ನೋಡಿ.

ನಿಮಗೆ ನೆನಪಿದೆಯೆ?

• ಯುವ ಜನರು ಸಭೆಯನ್ನು ಬಿಟ್ಟುಹೋಗುವಾಗ ಸಮಸ್ಯೆಯ ಮೂಲ ಕಾರಣವು ಯಾವುದಾಗಿರಬಹುದು?

• ಯೆಹೋವನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಯುವ ಜನರಿಗೆ ಹೇಗೆ ಸಹಾಯಮಾಡಬಹುದು?

• ಪೋಲಿಹೋದ ಮಗನಂತಿರುವ ಮಕ್ಕಳಿಗೆ ಸಹಾಯಮಾಡುವಾಗ ಹೆತ್ತವರು ದೀರ್ಘಶಾಂತರಾಗಿರಬೇಕಾದರೂ ದೃಢರಾಗಿರಬೇಕು ಏಕೆ?

• ಪೋಲಿಹೋದ ಯುವಕನೊಬ್ಬನು ಹಿಂದೆಬರುವಂತೆ ಸಭೆಯಲ್ಲಿರುವವರು ಹೇಗೆ ಸಹಾಯಮಾಡಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ದೇವರ ವಾಕ್ಯವನ್ನು ಓದುವುದು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲು ಅತ್ಯಾವಶ್ಯಕವಾಗಿದೆ

[ಪುಟ 15ರಲ್ಲಿರುವ ಚಿತ್ರ]

ತಮ್ಮ ಹೆತ್ತವರು ಮತ್ತು ಯೆಹೋವನ ನಡುವೆ ಇರುವ ವೈಯಕ್ತಿಕ ಸಂಬಂಧವನ್ನು, ಹೆತ್ತವರ ಹೃತ್ಪೂರ್ವಕವಾದ ಪ್ರಾರ್ಥನೆಯಿಂದ ಮಕ್ಕಳು ಕಂಡುಕೊಳ್ಳಸಾಧ್ಯವಿದೆ

[ಪುಟ 17ರಲ್ಲಿರುವ ಚಿತ್ರ]

ಪೋಲಿಹೋದ ಮಗನಂತಿರುವವನಿಗೆ ‘ಬುದ್ಧಿಬಂದಾಗ’ ಅವನನ್ನು ಆದರದಿಂದ ಸ್ವಾಗತಿಸಿರಿ

[ಪುಟ 18ರಲ್ಲಿರುವ ಚಿತ್ರ]

ಯೆಹೋವನ ಬಳಿಗೆ ಹಿಂದಿರುಗುವಂತೆ ನಿಮ್ಮ ಮಗುವಿಗೆ ಸಹಾಯಮಾಡಲು ನಿಶ್ಚಿತ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ