ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವೆಯಲ್ಲಿ ಅನಿರೀಕ್ಷಿತ ಆಶ್ಚರ್ಯಗಳ ಜೀವನ

ಯೆಹೋವನ ಸೇವೆಯಲ್ಲಿ ಅನಿರೀಕ್ಷಿತ ಆಶ್ಚರ್ಯಗಳ ಜೀವನ

ಜೀವನ ಕಥೆ

ಯೆಹೋವನ ಸೇವೆಯಲ್ಲಿ ಅನಿರೀಕ್ಷಿತ ಆಶ್ಚರ್ಯಗಳ ಜೀವನ

ಎರಿಕ್‌ ಮತ್ತು ಹೇಸಲ್‌ ಬೆವ್ರಿಜ್‌ ಅವರು ಹೇಳಿದಂತೆ

“ಇದಕ್ಕಾಗಿ ನಿನಗೆ ನಾನು ಆರು ತಿಂಗಳ ಸೆರಮನೆಯ ಶಿಕ್ಷೆಯನ್ನು ವಿಧಿಸುತ್ತೇನೆ.” ನನ್ನನ್ನು ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿರುವ ಸ್ಟ್ರೇಂಜ್‌ವೇಸ್‌ ಸೆರೆಮನೆಗೆ ಒಯ್ಯಲಾಗುತ್ತಿದ್ದಾಗ, ಆ ಮಾತುಗಳು ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಾ ಇದ್ದವು. ಇದು ನಡೆದದ್ದು ಡಿಸೆಂಬರ್‌ 1950ರಲ್ಲಿ. ಮತ್ತು ಆಗ ನನಗೆ 19 ವರ್ಷ ಪ್ರಾಯ. ನನ್ನ ಯುವ ಜೀವನದ ಕಡು ಪರೀಕ್ಷೆಯೊಂದನ್ನು ನಾನು ಆಗ ತಾನೇ ಎದುರಿಸಿದ್ದೆ. ಮಿಲಿಟರಿ ಸೇವೆಗೆ ಒತ್ತಾಯದಿಂದ ಭರ್ತಿಯಾಗುವುದನ್ನು ನಾನು ನಿರಾಕರಿಸಿದ್ದೆ.​—2 ಕೊರಿಂಥ 10:3-5.

ನಾನು ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಪಯನೀಯರ್‌ ಶುಶ್ರೂಷಕನಾಗಿದ್ದೆ. ಇದಕ್ಕಾಗಿ ನನಗೆ ಮಿಲಿಟರಿ ಸೇವೆಯಿಂದ ವಿನಾಯಿತಿ ಕೊಡಲ್ಪಡಬೇಕಿತ್ತು. ಆದರೆ ಬ್ರಿಟಿಷ್‌ ಕಾಯಿದೆಯು ನಮ್ಮ ಶುಶ್ರೂಷೆಯನ್ನು ಮಾನ್ಯಮಾಡಲಿಲ್ಲ. ಹೀಗೆ ಸೆರೆಮನೆಯ ಏಕಾಂತವಾಸವು ನನ್ನ ಪಾಲಿಗೆ ಬಿತ್ತು. ನನ್ನ ತಂದೆಯ ನೆನಪು ನನಗೆ ಬಂತು. ಪರೋಕ್ಷ ರೀತಿಯಲ್ಲಿ, ಅವರಿಂದಾಗಿಯೆ ನಾನು ಜೈಲಿನಲ್ಲಿ ಬಿದ್ದಿದ್ದೆ.

ಸೆರೆಮನೆಯ ಅಧಿಕಾರಿಯಾಗಿದ್ದ ನನ್ನ ತಂದೆ, ಯಾರ್ಕ್‌ಶರ್‌ ನಾಡಿಗರಾಗಿದ್ದು ಬಲವಾದ ನಿಶ್ಚಿತಾಭಿಪ್ರಾಯ ಮತ್ತು ಮೂಲತತ್ತ್ವಗಳುಳ್ಳವರಾಗಿದ್ದರು. ಸೇನೆಯಲ್ಲಿ ಮತ್ತು ಸೆರೆಮನೆಯ ಅಧಿಕಾರಿಯಾಗಿ ಅವರಿಗಾದ ಅನುಭವಗಳಿಂದಾಗಿ, ಕ್ಯಾಥೊಲಿಕ್‌ ಧರ್ಮದ ಕಡೆಗೆ ಅವರಿಗೆ ವೈರವಿತ್ತು. ಹಿಂದೆ 1930ರ ಆದಿ ಭಾಗದಲ್ಲಿ ಅವರಿಗೆ ಸಾಕ್ಷಿಗಳ ಸಂಪರ್ಕವಾಯಿತು. ಅವರನ್ನು ಹೊಡೆದೋಡಿಸಬೇಕೆಂದು ಬಾಗಿಲ ಬಳಿ ಹೋದ ತಂದೆಯವರು, ಕೆಲವು ಪುಸ್ತಕಗಳನ್ನು ಹಿಡಿದುಕೊಂಡೇ ಹಿಂದೆ ಬಂದರು! ತದನಂತರ, ಅವರು ಕಾನ್ಸಲೇಶನ್‌ (ಈಗ ಅವೇಕ್‌!) ಪತ್ರಿಕೆಗೆ ಚಂದಾದಾರರಾದರು. ಸಾಕ್ಷಿಗಳು ಪ್ರತಿ ವರ್ಷ ಹಿಂತಿರುಗಿ ಬಂದು ಚಂದಾ ನವೀಕರಿಸಲು ತಂದೆಯವರನ್ನು ಪ್ರೋತ್ಸಾಹಿಸುತ್ತಿದ್ದರು. ಅವರು ನನ್ನ ತಂದೆಯನ್ನು ಇನ್ನೊಂದು ಚರ್ಚೆಯಲ್ಲಿ ಒಳಗೂಡಿಸಿದಾಗ, ನಾನು ಸಾಕ್ಷಿಗಳ ಪಕ್ಷವನ್ನು ಹಿಡಿದೆ. ಆಗ ನನಗೆ ಸುಮಾರು 15 ವರ್ಷ ವಯಸ್ಸು. ಬೈಬಲ್‌ ಅಭ್ಯಾಸವನ್ನು ನಾನು ಪ್ರಾರಂಭಿಸಿದ್ದು ಆಗಲೇ.

ಇಸವಿ 1949ರ ಮಾರ್ಚ್‌ ತಿಂಗಳಿನಲ್ಲಿ ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆ. ನನಗೆ ಆಗ 17 ವರ್ಷ ವಯಸ್ಸು. ಅದೇ ವರ್ಷ ಆ ಮೇಲೆ ಜಾನ್‌ ಮತ್ತು ಮೈಕಲ್‌ ಚೆರಕರನ್ನು ನಾನು ಭೇಟಿಯಾದೆ. ಅವರು ಆಗತಾನೇ ಗಿಲ್ಯಡ್‌ ಮಿಷನೆರಿ ಶಾಲೆಯಿಂದ ಬಂದಿದ್ದ ಪದವೀಧರರಾಗಿದ್ದು, ನೈಜೀರಿಯ ದೇಶಕ್ಕೆ ಹೋಗುವವರಿದ್ದರು. ಅವರ ಮಿಷನೆರಿ ಉತ್ಸಾಹವು ನನ್ನ ಮೇಲೆ ಆಳವಾದ ಪ್ರಭಾವಬೀರಿತು. ಪ್ರಾಯಶಃ ತಮಗೆ ಅರಿವಿಲ್ಲದೆ ಅವರು ಆ ಮಿಷನೆರಿ ಹುರುಪನ್ನು ನನ್ನ ಹೃದಯದಲ್ಲಿ ಬೇರೂರಿಸಿದ್ದರು.

ಬೈಬಲನ್ನು ಅಭ್ಯಾಸಿಸುತ್ತಿದ್ದಾಗಲೇ, ವಿಶ್ವವಿದ್ಯಾನಿಲಯದ ವ್ಯಾಸಂಗವನ್ನು ಬೆನ್ನಟ್ಟುವುದರಲ್ಲಿ ನನಗಿದ್ದ ಅಭಿರುಚಿಯು ಬತ್ತಿಹೋಯಿತು. ಲಂಡನ್‌ ಕಸ್ಟಮ್ಸ್‌ ಮತ್ತು ಎಕ್ಸೈಸ್‌ ಆಫೀಸಿನಲ್ಲಿ ಕೆಲಸಮಾಡಲು ಮನೆಬಿಟ್ಟು ಹೋದ ಒಂದು ವರ್ಷದೊಳಗೆ, ಸರ್ಕಾರಿ ಆಫೀಸಿನಲ್ಲಿ ಮುಂದುವರಿಯುವ ಮೂಲಕ ನಾನು ದೇವರಿಗೆ ಮಾಡಿದ ನನ್ನ ಸಮರ್ಪಣೆಯನ್ನು ಪೂರೈಸಲು ಸಾಧ್ಯವಿಲ್ಲವೆಂದು ನನಗೆ ತಿಳಿದುಬಂತು. ನನ್ನ ಆಫೀಸಿನ ಕೆಲಸವನ್ನು ನಾನು ಬಿಟ್ಟುಬಿಟ್ಟಾಗ, ಒಬ್ಬ ಅನುಭವಿ ಸಹೋದ್ಯೋಗಿ “ಆ ಆತ್ಮ ವಿನಾಶಕರ ಕೆಲಸವನ್ನು” ಬಿಟ್ಟದ್ದಕ್ಕಾಗಿ ನನ್ನನ್ನು ಅಭಿನಂದಿಸಿದರು.

ಇದಕ್ಕೆ ಮುಂಚೆ ಇನ್ನೊಂದು ಪರೀಕ್ಷೆಯನ್ನು ನಾನು ಎದುರಿಸಿದೆ​—ನನ್ನ ಸುರಕ್ಷಿತ ಕೆಲಸವನ್ನು ಬಿಟ್ಟು ಪೂರ್ಣ ಸಮಯದ ಶುಶ್ರೂಷಕನಾಗುವ ನನ್ನ ಇಚ್ಛೆಯನ್ನು ತಂದೆಗೆ ತಿಳಿಸುವುದು ಹೇಗೆ ಎಂಬುದೇ. ಒಂದು ಸಂಜೆ ರಜೆಯಲ್ಲಿ ಮನೆಯಲ್ಲಿದ್ದಾಗ ಈ ದಂಗುಬಡಿಸುವ ಸುದ್ದಿಯನ್ನು ತಿಳಿಸಿದೆ. ತಂದೆಯವರು ಕೋಪದಿಂದ ಚೀರಾಡಲಾರಂಭಿಸುವುದಕ್ಕಾಗಿ ನಾನು ಕಾಯುತ್ತಾ ಇದ್ದೆ. ಆದರೆ ಅವರು ಕೇವಲ ಹೀಗಂದದ್ದನ್ನು ಕೇಳಿ ನನಗೆ ಆಶ್ಚರ್ಯ: “ನಿರ್ಣಯವನ್ನು ನೀನು ಮಾಡಿದ್ದೀ. ಅದರ ಪರಿಣಾಮಗಳನ್ನು ನೀನು ಅನುಭವಿಸಲೇಬೇಕು. ಆದರೆ ಸಫಲನಾಗದಿದ್ದಲ್ಲಿ, ನನ್ನ ಬಳಿಗೆ ಓಡಿಬರಬೇಡ, ನೋಡು.” ನನ್ನ ಡೈರಿಯಲ್ಲಿ 1950, ಜನವರಿ 1ರಂದು ಹೀಗೆ ಬರೆದಿದ್ದೆ: “ಪಯನೀಯರ್‌ ಸೇವೆಯ ಕುರಿತು ಅಪ್ಪನಿಗೆ ತಿಳಿಸಿದೆ. ಅವರ ಸಾಧಾರಣಮಟ್ಟಿಗಿನ ಸಹಾಯಕ ಮನೋಭಾವವು ನನ್ನನ್ನು ದಂಗುಗೊಳಿಸಿತು. ಅವರ ದಯೆಯುಳ್ಳ ಮಾತುಗಳಿಂದಾಗಿ ನಾನು ಅತ್ತುಬಿಟ್ಟೆ.” ಹೀಗೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪೂರ್ಣ ಸಮಯದ ಪಯನೀಯರ್‌ ಸೇವೆಯ ನೇಮಕವೊಂದನ್ನು ಸ್ವೀಕರಿಸಿದೆ.

ಒಂದು “ಕುಟೀರ” ಸಮೇತ ನೇಮಕಾತಿ

ಈಗ ದೇವರ ಕಡೆಗಿನ ನನ್ನ ಭಕ್ತಿಯ ಇನ್ನೊಂದು ಪರೀಕ್ಷೆ ಬಂತು. ನನಗೆ ವೇಲ್ಸ್‌ನ ಒಬ್ಬ ಜೊತೆ ಕ್ರೈಸ್ತನಾದ ಲೈಡ್‌ ಗ್ರಿಫತ್ಸ್‌ನೊಂದಿಗೆ ಪಯನೀಯರ್‌ ನೇಮಕವನ್ನು ಕೊಡಲಾಯಿತು. ಲ್ಯಾಂಕ್‌ಶರ್‌ನ ಒಂದು “ಕುಟೀರ” ನಮಗಿಬ್ಬರಿಗಾಗಿ ನೀಡಲ್ಪಟ್ಟಿತು. ಆ ಕುಟೀರದ ಕುರಿತು ಏನೇನೋ ಕಲ್ಪನೆಮಾಡುತ್ತಾ ಮತ್ತು ಕನಸು ಕಾಣುತ್ತಾ, ನಾನು ಆ ಮಂಕಾದ, ಮಳೆಯಿಂದ ತೊಯ್ದಿದ್ದ ಬೇಕಪ್‌ ಊರಿಗೆ ಬಂದು ತಲಪಿದೆ. ಆದರೆ ಆ ಕುಟೀರವನ್ನು ನಾನು ನೋಡಿದಾಗ, ಭೂಮಿಗಿಳಿದುಹೋದೆ! ಅದು ಇನ್ನೇನೂ ಅಲ್ಲ, ನಿಜವಾಗಿಯೂ ಒಂದು ನೆಲಮಾಳಿಗೆಯಾಗಿತ್ತಷ್ಟೇ. ರಾತ್ರಿ ಸಮಯದಲ್ಲಿ ನಮಗೆ ಜೊತೆಕೊಡಲು ಇಲಿಗಳೂ ಜಿರಳೆಗಳೂ ಇದ್ದವು. ನಾನು ಮನಸ್ಸನ್ನು ಬದಲಾಯಿಸಿ ಇನ್ನೇನು ಹಿಂದೆ ಮನೆಗೇ ಹೊರಟುಬಿಡುವುದರಲ್ಲಿದ್ದೆ. ಆದರೆ ಈ ಪರೀಕ್ಷೆಯನ್ನು ಎದುರಿಸಲು ಬೇಕಾದ ಶಕ್ತಿಯನ್ನು ಕೊಡುವಂತೆ ಒಂದು ಮೌನ ಪ್ರಾರ್ಥನೆಯನ್ನು ಸಲ್ಲಿಸಿದೆ. ಆ ಕೂಡಲೆ ಒಂದು ರೀತಿಯ ಸಮಾಧಾನವು ನನ್ನನ್ನು ಆವರಿಸಿತು ಮತ್ತು ಪರಿಸ್ಥಿತಿಯನ್ನು ಬೇರೊಂದು ದೃಷ್ಟಿಯಲ್ಲಿ ನಾನು ನೋಡತೊಡಗಿದೆ. ಇದು ಯೆಹೋವನ ಸಂಸ್ಥೆಯಿಂದ ಬಂದಿರುವ ನನ್ನ ನೇಮಕ. ಸಹಾಯಕ್ಕಾಗಿ ನಾನು ಯೆಹೋವನ ಮೇಲೆ ಭರವಸವಿಡಬೇಕು. ಆ ಪರಿಸ್ಥಿತಿಯನ್ನು ನಾನು ತಾಳಿಕೊಂಡದ್ದಕ್ಕಾಗಿ ಎಷ್ಟು ಕೃತಜ್ಞನು. ಒಂದುವೇಳೆ ಬಿಟ್ಟುಕೊಟ್ಟಿದ್ದರೆ, ನನ್ನ ಜೀವನವು ಸದಾಕಾಲಕ್ಕೂ ಬೇರೊಂದು ರೀತಿಯದ್ದಾಗುತ್ತಿತ್ತು.​—ಯೆಶಾಯ 26:3, 4.

ಸುಮಾರು ಒಂಬತ್ತು ತಿಂಗಳ ತನಕ, ಆಗ ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ರಾಸಂಡೇಲ್‌ ವ್ಯಾಲಿಯಲ್ಲಿ ನಾನು ಸೇವೆಮಾಡಿದೆ. ಅಲ್ಲಿ ಮಿಲಿಟರಿ ಸೇವೆಯನ್ನು ನಿರಾಕರಿಸಿದ್ದಕ್ಕಾಗಿ ನನ್ನನ್ನು ಸೆರೆಮನೆಗೆ ಹಾಕಲಾಯಿತು. ಸ್ಟ್ರೇಂಜ್‌ವೇಸ್‌ ಸೆರೆಮನೆಯಲ್ಲಿ ಎರಡು ವಾರಗಳನ್ನು ಕಳೆದ ಬಳಿಕ, ನಾನು ಇಂಗ್ಲೆಂಡಿನ ದಕ್ಷಿಣ ಕರಾವಳಿಯ ಲೂಎಸ್‌ ಸೆರೆಮನೆಗೆ ಸ್ಥಳಾಂತರಿಸಲ್ಪಟ್ಟೆ. ಕಟ್ಟಕಡೆಗೆ ನಾವು ಐವರು ಸಾಕ್ಷಿಗಳು ಅಲ್ಲಿ ಒಟ್ಟುಸೇರಿದೆವು. ಸೆರೆಮನೆಯ ಚಿಕ್ಕ ಕೋಣೆಯಲ್ಲಿ ನಾವು ಕ್ರಿಸ್ತನ ಮರಣದ ಸ್ಮಾರಕವನ್ನೂ ಆಚರಿಸಲು ಶಕ್ತರಾದೆವು.

ತಂದೆಯವರು ಒಮ್ಮೆ ನನ್ನನ್ನು ನೋಡಲು ಬಂದರು. ಅದು ಅವರ ಅಹಂ ಅನ್ನು ಪರೀಕ್ಷಿಸಿದ್ದಿರಬೇಕು. ಏಕೆಂದರೆ ಒಬ್ಬ ಖ್ಯಾತ ಜೈಲ್‌ ಅಧಿಕಾರಿ ತನ್ನ ಕೈದಿ ಮಗನನ್ನು ನೋಡಲು ಬಂದದ್ದು! ಆ ಭೇಟಿಗಾಗಿ ನಾನು ಸದಾ ಕೃತಜ್ಞನಾಗಿರುವೆನು. ಕೊನೆಗೆ 1951ರ ಏಪ್ರಿಲ್‌ ತಿಂಗಳಲ್ಲಿ ನನಗೆ ಬಿಡುಗಡೆಯಾಯಿತು.

ಲೂಎಸ್‌ನಿಂದ ನನ್ನ ಬಿಡುಗಡೆಯ ಅನಂತರ ನಾನು ಟ್ರೈನ್‌ ಹತ್ತಿ ವೇಲ್ಸ್‌ನ ಕಾರ್ಡಿಫ್‌ಗೆ ಹೋದೆ. ಅಲ್ಲಿ ನನ್ನ ತಂದೆಯವರು ಸೆರೆಮನೆಯ ಮುಖ್ಯಾಧಿಕಾರಿಯಾಗಿ ಕೆಲಸಮಾಡುತ್ತಿದ್ದರು. ನಾಲ್ಕು ಮಕ್ಕಳಲ್ಲಿ​—ಮೂವರು ಹುಡುಗರು ಒಬ್ಬಳು ಹುಡುಗಿ⁠—ನಾನು ಹಿರಿಯವನಾಗಿದ್ದೆ. ನನ್ನ ಜೀವನೋಪಾಯಕ್ಕಾಗಿ ಮತ್ತು ಪಯನೀಯರನಾಗಿ ಉಳಿಯಲು ನಾನು ಪಾರ್ಟ್‌-ಟೈಮ್‌ ಕೆಲಸ ಮಾಡಲೇಬೇಕಿತ್ತು. ಒಂದು ಜವಳಿ ಅಂಗಡಿಯಲ್ಲಿ ಕೆಲಸ ಹಿಡಿದೆ. ಆದರೆ ಜೀವನದ ಮುಖ್ಯ ಉದ್ದೇಶವು ಕ್ರೈಸ್ತ ಶುಶ್ರೂಷೆಯಾಗಿತ್ತು. ಇದೇ ಸಮಯಕ್ಕೆ ಸುಮಾರಾಗಿ ನಮ್ಮ ತಾಯಿ ನಮ್ಮನ್ನು ಬಿಟ್ಟುಹೋದರು. ಇದು ತಂದೆಗೆ ಮತ್ತು 8-19ರ ವಯಸ್ಸಿನ ಮಕ್ಕಳಾದ ನಮಗೆ ಒಂದು ದೊಡ್ಡ ಪೆಟ್ಟಾಗಿತ್ತು. ದುಃಖದ ಸಂಗತಿಯೇನೆಂದರೆ ನಮ್ಮ ಹೆತ್ತವರು ವಿಚ್ಛೇದವನ್ನು ಪಡೆದರು.

ಸುಪತ್ನೀ ಲಾಭ . . .

ಸಭೆಯಲ್ಲಿ ಹಲವಾರು ಪಯನೀಯರರು ಇದ್ದರು. ಅವರಲ್ಲೊಬ್ಬ ಸಹೋದರಿ ದಿನಾಲೂ ರಾಂಡ ವ್ಯಾಲಿಯಿಂದ ಕೆಲಸಕ್ಕಾಗಿ ಮತ್ತು ಸಾರುವುದಕ್ಕಾಗಿ ಬರುತ್ತಿದ್ದಳು. ಅವಳು ಉತ್ತಮ ಪಯನೀಯರಳಾಗಿದ್ದಳು. ಅವಳ ಹೆಸರು ಹೇಸಲ್‌ ಗ್ರೀನ್‌. ಅವಳಿಗೆ ಸತ್ಯವು ನನಗಿಂತ ಎಷ್ಟೋ ಮುಂಚೆ ಸಿಕ್ಕಿತ್ತು. ಅವಳ ಹೆತ್ತವರು 1920ರ ದಶಕದಲ್ಲಿ ಬೈಬಲ್‌ ಸ್ಟೂಡೆಂಟ್ಸ್‌ (ಈಗ ಯೆಹೋವನ ಸಾಕ್ಷಿಗಳು)ರ ಕೂಟಗಳಿಗೆ ಹಾಜರಾಗುತ್ತಿದ್ದರು. ಅವಳೇ ತನ್ನ ಕಥೆಯನ್ನು ಹೇಳುವುದನ್ನು ಕೇಳಿರಿ.

“ಧರ್ಮವು ಬಿರುಗಾಳಿಯನ್ನು ಕೊಯ್ಯುತ್ತದೆ (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು 1944ರಲ್ಲಿ ಓದುವ ತನಕ, ನಾನು ಬೈಬಲನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನನ್ನ ತಾಯಿ ಕಾರ್ಡಿಫ್‌ನ ಸರ್ಕಿಟ್‌ ಸಮ್ಮೇಳನವೊಂದಕ್ಕೆ ಹಾಜರಾಗಲು ನನ್ನನ್ನು ಪ್ರೇರೇಪಿಸಿದರು. ಬೈಬಲಿನ ಯಾವುದೇ ಜ್ಞಾನವು ನನಗಿರದಿದ್ದರೂ, ಸಾರ್ವಜನಿಕ ಭಾಷಣವನ್ನು ಪ್ರಕಟಿಸುವ ಪ್ಲ್ಯಾಕಾರ್ಡನ್ನು ಧರಿಸಿ ಮುಖ್ಯ ಶಾಪಿಂಗ್‌ ಸೆಂಟರ್‌ನ ಸುತ್ತಲೂ ನಡೆದಾಡಿದೆ. ಪಾದ್ರಿಗಳು ಮತ್ತು ಇತರರು ಕಿರುಕುಳಕೊಟ್ಟರೂ, ನಾನು ಆ ಅನುಭವವನ್ನು ಪಾರಾದೆ. 1946ರಲ್ಲಿ ನನಗೆ ದೀಕ್ಷಾಸ್ನಾನವಾಯಿತು ಮತ್ತು ಆ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ನಾನು ಪಯನೀಯರಳಾದೆ. ಅನಂತರ 1951ರಲ್ಲಿ ಆಗಲೇ ಸೆರೆಯಿಂದ ಮುಕ್ತನಾಗಿದ್ದ ಒಬ್ಬ ತರುಣ ಪಯನೀಯರ್‌ ಕಾರ್ಡಿಫ್‌ಗೆ ಆಗಮಿಸಿದ. ಅವನೇ ಎರಿಕ್‌.

“ನಾವು ಒಟ್ಟಿಗೆ ಸಾರಲು ಹೋಗುತ್ತಿದ್ದೆವು. ನಾವು ಚೆನ್ನಾಗಿ ಹೊಂದಿಕೊಂಡೆವು. ಜೀವಿತದಲ್ಲಿ ನಮಗೆ ಸಮಾನ ಧ್ಯೇಯಗಳಿದ್ದವು​—ದೇವರ ರಾಜ್ಯಾಭಿರುಚಿಗಳ ಪ್ರವರ್ಧನೆಯೇ. ಆದುದರಿಂದ 1952ರ ಡಿಸೆಂಬರ್‌ ತಿಂಗಳಲ್ಲಿ ನಾವು ಮದುವೆಯಾದೆವು. ನಾವಿಬ್ಬರೂ ಪೂರ್ಣ ಸಮಯದ ಪಯನೀಯರ್‌ ಸೇವೆಯಲ್ಲಿದ್ದರೂ ಮತ್ತು ನಮಗೆ ಸೀಮಿತ ಆದಾಯವಿದ್ದರೂ, ಜೀವನಾವಶ್ಯಕತೆಗಳ ಕೊರತೆಯಿರಲಿಲ್ಲ. ಕೆಲವೊಮ್ಮೆ, ಜಿನಸಿ ಅಂಗಡಿಯಿಂದ ತೀರ ಹೆಚ್ಚು ಜಾಮ್‌ ಅಥವಾ ಸಾಬೂನನ್ನು ಅಕಾಸ್ಮಾತ್ತಾಗಿ ಆರ್ಡರ್‌ ಮಾಡಿದೆ ಎಂದು ಹೇಳುತ್ತಿದ್ದ ಸಾಕ್ಷಿ ಸಹೋದರಿಯಿಂದ ನಾವು ಪಡೆದುಕೊಳ್ಳುತ್ತಿದ್ದೆವು​—ಅದೂ ನಮಗೆ ಬೇಕಾದಾಗ ಮಾತ್ರ ಸಿಗುತ್ತಿತ್ತು! ಅಂಥ ವ್ಯಾವಹಾರಿಕ ಸಹಾಯಕ್ಕಾಗಿ ನಾವು ತುಂಬಾ ಆಭಾರಿಗಳಾಗಿದ್ದೆವು. ಆದರೆ ಹೆಚ್ಚಿನ ಆಶ್ಚರ್ಯಗಳು ನಮಗಾಗಿ ಕಾದಿದ್ದವು.”

ನಮ್ಮ ಜೀವಿತವನ್ನು ಬದಲಾಯಿಸಿದ ಒಂದು ಆಶ್ಚರ್ಯ

ಇಸವಿ 1954ರ ನವೆಂಬರ್‌ನಲ್ಲಿ ಹೇಸಲ್‌ ಮತ್ತು ನನಗೆ ಒಂದು ಅನಿರೀಕ್ಷಿತ ಆಶ್ಚರ್ಯ ಸಿಕ್ಕಿತು. ಅದು ಸರ್ಕಿಟ್‌ ಮೇಲ್ವಿಚಾರಕನ ಸೇವೆಗಾಗಿ ಅರ್ಜಿಯಾಗಿದ್ದು, ಯೆಹೋವನ ಸಾಕ್ಷಿಗಳ ಲಂಡನ್‌ ಬ್ರಾಂಚ್‌ನಿಂದ ಬಂದಿತ್ತು. ಖಂಡಿತವಾಗಿಯೂ ಏನೋ ತಪ್ಪಾಗಿದ್ದಿರಬೇಕೆಂದು ನಾವು ನೆನಸಿದೆವು. ಆದುದರಿಂದ ನಾವು ಸಭೆಯಲ್ಲಿ ಯಾರಿಗೂ ಹೇಳಲಿಲ್ಲ. ಆದರೂ ನಾನು ಅರ್ಜಿಯನ್ನು ತುಂಬಿಸಿ ಕಳುಹಿಸಿದೆ, ಮತ್ತು ಏನಾಗುವುದೊ ಏನೋ ಎಂದು ಕಾತುರ ಮತ್ತು ಕುತೂಹಲದಿಂದ ಕಾದುಕೊಂಡಿದ್ದೆವು. ಕೆಲವು ದಿನಗಳ ಬಳಿಕ, “ತರಬೇತಿಗಾಗಿ ಲಂಡನ್‌ಗೆ ಬನ್ನಿ!” ಎಂಬ ಉತ್ತರ ಬಂತು.

ಲಂಡನ್‌ ಆಫೀಸಿನಲ್ಲಿದ್ದ ಗಮನಾರ್ಹ ಸಹೋದರರೊಂದಿಗೆ, ಕೇವಲ 23 ವರ್ಷದವನಾಗಿದ್ದ ನಾನು ಇದ್ದೇನೆಂಬುದನ್ನು ನನಗೇ ನಂಬಲಾಗುತ್ತಿರಲಿಲ್ಲ. ನನ್ನೆದುರು ಆತ್ಮಿಕ ದೈತ್ಯರಂತೆ ತೋರಿಬಂದ ಪ್ರೈಸ್‌ ಹ್ಯೂಸ್‌, ಎಮ್ಲನ್‌ ವೈನ್ಸ್‌, ಅರ್ನಿ ಬೀವರ್‌, ಅರ್ನಿ ಗೈವರ್‌, ಬಾಬ್‌ ಗೌ, ಗ್ಲಿನ್‌ ಪಾರ್‌, ಸ್ಟ್ಯಾನ್‌ ಮತ್ತು ಮಾರ್ಟಿನ್‌ ವುಡ್‌ಬರ್ನ್‌ ಮತ್ತು ಇತರ ಅನೇಕರು ಅಲ್ಲಿದ್ದರು. ಅವರಲ್ಲಿ ಹೆಚ್ಚಿನವರು ಈಗ ತೀರಿಕೊಂಡಿರುವುದಾದರೂ, 1940 ಮತ್ತು 1950ರ ದಶಕಗಳಲ್ಲಿ ಅವರು ಬ್ರಿಟನ್‌ನಲ್ಲಿ ಹುರುಪು ಮತ್ತು ಸಮಗ್ರತೆಯ ದೃಢವಾದ ಅಸ್ತಿವಾರವನ್ನು ಹಾಕಿದ ಪುರುಷರಾಗಿದ್ದರು.

ಇಂಗ್ಲೆಂಡಿನಲ್ಲಿ ಸರ್ಕಿಟ್‌ ಕೆಲಸ​—ಎಂದೂ ಬೇಸರಹಿಡಿಸಲಿಲ್ಲ

ನಮ್ಮ ಸರ್ಕಿಟ್‌ ಕೆಲಸವು 1954/55ರ ಹಿಮತುಂಬಿದ ಚಳಿಗಾಲದಲ್ಲಿ ಪ್ರಾರಂಭವಾಯಿತು. ನಮ್ಮನ್ನು ಈಸ್ಟ್‌ ಆಂಗ್ಲಿಯಕ್ಕೆ ನೇಮಿಸಲಾಗಿತ್ತು. ಅದು ಇಂಗ್ಲೆಂಡಿನ ಸಮತಲವಾದ ಕ್ಷೇತ್ರವಾಗಿದ್ದು ಉತ್ತರ ಸಾಗರದ ಶೀತಲಗಾಳಿಗೆ ತೆರೆದಿತ್ತು. ಆಗ ಬ್ರಿಟನ್‌ನಲ್ಲಿ ಕೇವಲ 31,000 ಸಾಕ್ಷಿಗಳಿದ್ದರು. ನಮ್ಮ ಮೊದಲನೆಯ ಸರ್ಕಿಟ್‌ ಸಂಚಾರವು ನಮಗೆ ಒಂದು ಕಷ್ಟಕರವಾದ ಕಲಿಯುವ ಅನುಭವವಾಗಿತ್ತು; ನಾವು ಸಂದರ್ಶಿಸಿದ ಸಹೋದರರಿಗೂ ಅದೇನೂ ಸುಲಭವಾಗಿರಲಿಲ್ಲ. ನನ್ನ ಅನನುಭವ ಮತ್ತು ಯಾರ್ಕ್‌ಶರ್‌ ನಾಡಿಗನಾದ ನನ್ನ ಕಡ್ಡಿ ಮುರಿದ ಹಾಗೆ ನೇರವಾಗಿ ಮಾತಾಡುವ ರೀತಿಯಿಂದಾಗಿ, ನಾನು ಕೆಲವು ಸಾರಿ ಸಹೋದರರ ಮನನೋಯಿಸಿದೆ. ಆದರೆ ವರ್ಷಗಳು ದಾಟಿದಂತೆ, ಕಾರ್ಯದಕ್ಷತೆಗಿಂತ ದಯೆಯು ಹೆಚ್ಚು ಪ್ರಾಮುಖ್ಯವೆಂದು ಮತ್ತು ಕಾರ್ಯವಿಧಾನಗಳಿಗಿಂತಲೂ ಜನರು ಹೆಚ್ಚು ಪ್ರಾಮುಖ್ಯರಾಗಿದ್ದಾರೆಂಬುದನ್ನು ನಾನು ಕಲಿಯಬೇಕಾಯಿತು. ಇತರರಿಗೆ ಚೈತನ್ಯವನ್ನೀಯುವ ಯೇಸುವಿನ ಮಾದರಿಯನ್ನು ಅನುಕರಿಸಲು ನಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ. ಆದರೆ ಯಾವಾಗಲೂ ಅದನ್ನು ಮಾಡಲು ಸಫಲನಾಗುವುದಿಲ್ಲ.​—ಮತ್ತಾಯ 11:28-30.

ಪೂರ್ವ ಆಂಗ್ಲಿಯದಲ್ಲಿ 18 ತಿಂಗಳುಗಳನ್ನು ಕಳೆದ ಮೇಲೆ, ಇಂಗ್ಲೆಂಡಿನ ಈಶಾನ್ಯದಲ್ಲಿದ್ದ ನ್ಯೂಕ್ಯಾಸಲ್‌ ಅಪಾನ್‌ ಟೈನ್‌ ಮತ್ತು ನಾರ್ಥಂಬರ್‌ಲೆಂಡ್‌ ಸರ್ಕಿಟ್‌ ಒಂದರಲ್ಲಿ ಸೇವೆಮಾಡಲು ನಾವು ನೇಮಿಸಲ್ಪಟ್ಟೆವು. ಆ ಸುಂದರವಾದ ಪ್ರದೇಶದ ಸ್ನೇಹಪರ ಜನರನ್ನು ನಾನು ಪ್ರೀತಿಸಿದೆ. ಅಮೆರಿಕದ ಸಿಯಾಟಲ್‌ನಿಂದ ಭೇಟಿಮಾಡಲು ಬಂದಿದ್ದ ಜಿಲ್ಲಾ ಮೇಲ್ವಿಚಾರಕರಾದ ಜಾನ್‌ವಾರ್ಡ್‌ ನನಗೆ ತುಂಬಾ ಸಹಾಯಮಾಡಿದರು. ಅವರು ಗಿಲ್ಯಡ್‌ ಶಾಲೆಯ 20ನೆಯ ಕ್ಲಾಸಿನ ಪದವೀಧರರಾಗಿದ್ದರು. ಭಾಷಣ ಕೊಡುವಾಗ ನಾನು ಉತ್ಸಾಹದಿಂದ ತುಂಬ ವೇಗದಿಂದ ಬಡಬಡನೆ ಮಾತನಾಡುತ್ತಿದ್ದೆ. ನಿಧಾನವಾಗಿ ಅಲ್ಲಲ್ಲಿ ನಿಲ್ಲಿಸಿ ಮಾತಾಡಲು ಮತ್ತು ಕಲಿಸಲು ಅವರು ನನಗೆ ಹೇಳಿಕೊಟ್ಟರು.

ನಮ್ಮ ಜೀವಿತವನ್ನು ಬದಲಾಯಿಸಿದ ಇನ್ನೊಂದು ಆಶ್ಚರ್ಯ

ನಮ್ಮ ಜೀವಿತವನ್ನು ಬದಲಾಯಿಸಿದ ಒಂದು ಪತ್ರವು 1958ರಲ್ಲಿ ನಮ್ಮ ಕೈ ಸೇರಿತು. ಅಮೆರಿಕದ ಸೌತ್‌ ಲ್ಯಾನ್ಸಿಂಗ್‌ನಲ್ಲಿನ ಗಿಲ್ಯಡ್‌ ಶಾಲೆಯನ್ನು ಹಾಜರಾಗಲು ನಮ್ಮನ್ನು ಆಮಂತ್ರಿಸಲಾಗಿತ್ತು. 1935ರ ಮಾಡೆಲ್‌ನ ನಮ್ಮ ಚಿಕ್ಕ ಆಸ್ಟಿನ್‌ ಸೆವೆನ್‌ ಕಾರನ್ನು ಮಾರಿ, ಟಿಕೇಟುಗಳನ್ನು ಖರೀದಿಸಿ ನ್ಯೂ ಯಾರ್ಕಿಗೆ ಹೋಗುವ ಹಡಗನ್ನು ಹತ್ತಿದೆವು. ಮೊದಲಾಗಿ ನ್ಯೂ ಯಾರ್ಕ್‌ ನಗರದಲ್ಲಿ ಯೆಹೋವನ ಸಾಕ್ಷಿಗಳ ಒಂದು ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಿ, ಅನಂತರ ಒಂಟೇರಿಯೋದ ಪೀಟರ್‌ಬರೊವಿನಲ್ಲಿ ಆರು ತಿಂಗಳು ಪಯನೀಯರ್‌ ಸೇವೆಮಾಡಿ, ಕೊನೆಗೆ ದಕ್ಷಿಣಕ್ಕೆ ಮುಂದೊತ್ತಿ ಗಿಲ್ಯಡ್‌ ಶಾಲೆಗೆ ಹೋದೆವು.

ಶಾಲಾ ಶಿಕ್ಷಕರಲ್ಲಿ, ಈಗ ಆಡಳಿತ ಮಂಡಳಿಯ ಸದಸ್ಯರಾಗಿರುವ ಆಲ್ಬರ್ಟ್‌ ಶ್ರೋಡರ್‌ ಹಾಗೂ ಈಗ ತೀರಿಕೊಂಡಿರುವ ಮ್ಯಾಕ್ಸ್‌ವೆಲ್‌ ಫ್ರೆಂಡ್‌ ಮತ್ತು ಜ್ಯಾಕ್‌ ರೆಡ್‌ಫರ್ಡ್‌ ಸೇರಿದ್ದರು. 14 ದೇಶಗಳಿಂದ ಬಂದ 82 ವಿದ್ಯಾರ್ಥಿಗಳೊಂದಿಗಿನ ಸಹವಾಸವು ಬಹು ಭಕ್ತಿವರ್ಧಕವಾಗಿತ್ತು. ನಾವು ಪರಸ್ಪರರ ಸಂಸ್ಕೃತಿಗಳ ಕುರಿತು ಅಲ್ಪಸ್ವಲ್ಪ ತಿಳಿಯಲಾರಂಭಿಸಿದೆವು. ಇಂಗ್ಲಿಷ್‌ ಭಾಷೆಯೊಂದಿಗೆ ಒದ್ದಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳೊಂದಿಗೆ ಬೆರೆತಾಗ, ಸ್ವತಃ ನಾವು ಇನ್ನೊಂದು ಭಾಷೆಯನ್ನು ಕಲಿಯುವಾಗ ಎದುರಿಸಲಿರುವ ಸಮಸ್ಯೆಗಳ ಮುನ್ನರಿವು ನಮಗಾಯಿತು. ಐದು ತಿಂಗಳುಗಳಲ್ಲಿ ನಾವು ನಮ್ಮ ತರಬೇತಿಯನ್ನು ಮುಗಿಸಿದೆವು. ನಮ್ಮೆಲ್ಲರನ್ನು 27 ವಿವಿಧ ದೇಶಗಳಿಗೆ ನೇಮಿಸಲಾಯಿತು. ಅನಂತರ ಪದವಿಪ್ರಾಪ್ತಿ ದಿನ ಬಂತು ಮತ್ತು ಕೆಲವೇ ದಿನಗಳೊಳಗೆ ನಾವು ಹಿಂದೆ ಯೂರೋಪಿಗೆ ತೆರಳಲು ನ್ಯೂ ಯಾರ್ಕ್‌ ನಗರದಲ್ಲಿ ನಮ್ಮ ಹಡಗು ಕ್ವೀನ್‌ ಎಲಿಸಬೆತ್‌ಗಾಗಿ ಕಾಯುತ್ತಿದ್ದೆವು.

ನಮ್ಮ ಮೊದಲನೆಯ ವಿದೇಶ ನೇಮಕ

ನಮಗೆ ಯಾವ ನೇಮಕವು ನೀಡಲ್ಪಟ್ಟಿತ್ತು? ಪೋರ್ಚುಗಲ್‌ಗೆ ಹೋಗುವ ನೇಮಕ! 1959ರ ನವೆಂಬರ್‌ನಲ್ಲಿ ನಾವು ಲಿಸ್ಬನ್‌ಗೆ ಆಗಮಿಸಿದೆವು. ಒಂದು ಹೊಸ ಭಾಷೆ ಮತ್ತು ಹೊಸ ಸಂಸ್ಕೃತಿಗೆ ನಮ್ಮನ್ನು ಹೊಂದಿಸಿಕೊಳ್ಳುವ ಒಂದು ಪರೀಕ್ಷೆಯು ಆಗ ಬಂತು. 1959ರಲ್ಲಿ ಪೋರ್ಚುಗಲ್‌ನಲ್ಲಿ 643 ಕ್ರಿಯಾಶೀಲ ಸಾಕ್ಷಿಗಳಿದ್ದರು. ಜನಸಂಖ್ಯೆಯಾದರೊ ಸುಮಾರು 90 ಲಕ್ಷವಿತ್ತು. ಆದರೆ ನಮ್ಮ ಸಾರುವ ಕಾರ್ಯವು ಕಾನೂನುಬದ್ಧವಾಗಿ ಅಂಗೀಕರಿಸಲ್ಪಟ್ಟಿರಲಿಲ್ಲ. ನಮಗೆ ರಾಜ್ಯ ಸಭಾಗೃಹಗಳಿದ್ದರೂ ಹೊರಗೆ ಹೆಸರು ಹಲಗೆಗಳು ಇರಲಿಲ್ಲ.

ಎಲ್ಸ ಪೀಕೋನೀ ಎಂಬ ಮಿಷನೆರಿಯಿಂದ ಪೋರ್ಚುಗೀಸ್‌ ಭಾಷೆಯನ್ನು ಕಲಿತಾದ ಮೇಲೆ, ನಾನು ಮತ್ತು ಹೇಸಲ್‌ ಲಿಸ್ಬನ್‌, ಫಾರೂ, ಈವುರ, ಬೇಸ ನಗರಗಳ ಆಸುಪಾಸಿನ ಸಭೆಗಳು ಮತ್ತು ಗುಂಪುಗಳನ್ನು ಸಂದರ್ಶಿಸಿದೆವು. ಅನಂತರ 1961ರಲ್ಲಿ ವಿಷಯಗಳು ಬದಲಾಗತೊಡಗಿದವು. ಸ್ವಾವ್‌ ಗೊನ್‌ಸಾಲ್‌ವಿಶ್‌ ಎಂಬ ಯೌವನಸ್ಥನೊಂದಿಗೆ ನಾನು ಬೈಬಲ್‌ ಅಭ್ಯಾಸ ನಡಿಸುತ್ತಿದ್ದೆ. ಮಿಲಿಟರಿ ಸೇವೆಯ ವಿಷಯದಲ್ಲಿ ಅವನು ತಟಸ್ಥ ಕ್ರೈಸ್ತನಾಗಿ ತನ್ನ ನಿಲುವನ್ನು ತೆಗೆದುಕೊಳ್ಳಲು ನಿರ್ಣಯಿಸಿದನು. ಅನಂತರ ಸ್ವಲ್ಪ ಸಮಯದಲ್ಲಿ ನನ್ನನ್ನು ವಿಚಾರಣೆಗಾಗಿ ಪೊಲೀಸ್‌ ಮುಖ್ಯ ಕಾರ್ಯಾಲಯಕ್ಕೆ ಕರೆಯಲಾಯಿತು. ಇನ್ನೊಂದು ಆಶ್ಚರ್ಯ! 30 ದಿನಗಳೊಳಗೆ ನಾವು ದೇಶವನ್ನು ಬಿಟ್ಟುಹೋಗಬೇಕೆಂದು ಕೆಲವು ದಿನಗಳ ಬಳಿಕ ನಮಗೆ ನೋಟೀಸನ್ನು ಕೊಡಲಾಯಿತು! ಜೊತೆ ಮಿಷನೆರಿಗಳಾದ ಎರಿಕ್‌ ಮತ್ತು ಕ್ರಿಸ್ತೀನ್‌ ಬ್ರಿಟನ್‌ ಹಾಗೂ ಡಾಮಿನಿಕ್‌ ಮತ್ತು ಎಲ್ಸ ಪೀಕೋನೀ ಅವರಿಗೂ ಈ ನೋಟೀಸ್‌ ಸಿಕ್ಕಿತು.

ನಾನು ವಿಚಾರಣೆಗಾಗಿ ಅಪ್ಪೀಲು ಮಾಡಿದೆ. ಗುಪ್ತ ಪೊಲೀಸರ ಮುಖ್ಯಸ್ಥನನ್ನು ಭೇಟಿಯಾಗಲು ನಮಗೆ ಅನುಮತಿ ಸಿಕ್ಕಿತು. ನಾವು ದೇಶವನ್ನು ಬಿಟ್ಟುಹೋಗುವಂತೆ ಏಕೆ ಆಜ್ಞಾಪಿಸಲಾಗಿದೆಯೆಂಬುದನ್ನು ಅವರು ನಮಗೆ ಸ್ಪಷ್ಟವಾಗಿ ತಿಳಿಸಿದರು. ನನ್ನ ಬೈಬಲ್‌ ವಿದ್ಯಾರ್ಥಿ ಸ್ವಾವ್‌ ಗೊನ್‌ಸಾಲ್‌ವಿಶ್‌ನ ಹೆಸರನ್ನೆತ್ತಿದ್ದರು! ಬ್ರಿಟನ್‌ ದೇಶದಂತೆ ಪೋರ್ಚುಗಲ್‌ನಲ್ಲಿ, ಮನಸ್ಸಾಕ್ಷಿಯ ಕಾರಣದಿಂದ ಮಿಲಿಟರಿ ಸೇವೆಯನ್ನು ನಿರಾಕರಿಸುವವರಿಗೆ ಸ್ಥಳವಿಲ್ಲವೆಂದು ಅವರು ಹೇಳಿಬಿಟ್ಟರು. ಹೀಗೆ ನಾವು ಪೋರ್ಚುಗಲ್‌ ಬಿಟ್ಟುಹೋಗಬೇಕಾಯಿತು. ಮತ್ತು ಸ್ವಾವ್‌ನೊಂದಿಗಿನ ನನ್ನ ಸಂಪರ್ಕವು ಕಡಿದುಹೋಯಿತು. ಆದರೆ 26 ವರ್ಷಗಳ ಬಳಿಕ, ಪೋರ್ಚುಗಲ್‌ನ ಹೊಸ ಬೆತೆಲ್‌ ಕಟ್ಟಡಗಳ ಸಮರ್ಪಣೆಯ ಸಮಯದಲ್ಲಿ ಅವನನ್ನು, ಅವನ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳೊಂದಿಗೆ ಕಾಣುವುದು ನನಗೆಷ್ಟು ಆನಂದವನ್ನು ತಂದಿತು! ಪೋರ್ಚುಗಲ್‌ನಲ್ಲಿ ನಾವು ನಡಿಸಿದ ಶುಶ್ರೂಷೆಯು ವ್ಯರ್ಥವಾಗಿರಲಿಲ್ಲ!​—1 ಕೊರಿಂಥ 3:6-9.

ನಮ್ಮ ಮುಂದಿನ ನೇಮಕವು ಯಾವುದು? ಇನ್ನೊಂದು ಆಶ್ಚರ್ಯ! ನೆರೆಹೊರೆಯ ಸ್ಪೆಯ್ನ್‌ ದೇಶವೇ. 1962ರ ಫೆಬ್ರವರಿ ತಿಂಗಳಿನಲ್ಲಿ ಮ್ಯಾಡ್ರಿಡ್‌ಗೆ ಹೋಗುವ ರೈಲನ್ನು ಲಿಸ್ಬನ್‌ನಲ್ಲಿ ಹತ್ತಿದಾಗ, ನಮ್ಮ ಕಣ್ಣುಗಳು ತುಂಬಿಬಂದವು.

ಇನ್ನೊಂದು ಸಂಸ್ಕೃತಿಗೆ ಹೊಂದಿಕೊಳ್ಳುವುದು

ಸ್ಪೆಯ್ನ್‌ನಲ್ಲಿ ನಮ್ಮ ಸಾರುವಿಕೆ ಮತ್ತು ಕೂಟಗಳ ನಡಿಸುವಿಕೆಯನ್ನು ಗುಪ್ತ ರೀತಿಯಲ್ಲಿ ಮಾಡಬೇಕಾಗಿತ್ತು. ಸಾರುವಾಗ ನಾವು ಸಾಮಾನ್ಯವಾಗಿ ಅಕ್ಕಪಕ್ಕದ ಎರಡೂ ಮನೆಗಳನ್ನು ಸಂದರ್ಶಿಸುತ್ತಿರಲಿಲ್ಲ. ಒಂದು ಮನೆಯಲ್ಲಿ ಸಾಕ್ಷಿಕೊಟ್ಟ ನಂತರ ನಾವು ಇನ್ನೊಂದು ರಸ್ತೆಗೆ ಹೋಗಿ ಇನ್ನೊಂದು ಕಟ್ಟಡದಲ್ಲಿ ಸೇವೆಮಾಡುತ್ತಿದ್ದೆವು. ಇದರಿಂದಾಗಿ ಪೊಲೀಸರಿಗೆ ಅಥವಾ ಪಾದ್ರಿಗಳಿಗೆ ನಮ್ಮನ್ನು ಹಿಡಿಯಲು ಕಷ್ಟವಾಗುತ್ತಿತ್ತು. ನಾವು ಫ್ಯಾಸಿಸ್ಟ್‌, ಕ್ಯಾಥೊಲಿಕ್‌ ಸರ್ವಾಧಿಕಾರದ ಕೆಳಗಿದ್ದೆವು ಮತ್ತು ನಮ್ಮ ಸಾರುವ ಕೆಲಸವು ಅಲ್ಲಿ ನಿಷೇಧಿಸಲ್ಪಟ್ಟಿತ್ತೆಂಬುದನ್ನು ಮನಸ್ಸಿನಲ್ಲಿಡಿ. ವಿದೇಶೀಯರಾದ ನಮ್ಮ ಗುರುತು ಸಿಕ್ಕದಂತೆ ಸುರಕ್ಷತೆಗಾಗಿ ನಾವು ಸ್ಪ್ಯಾನಿಷ್‌ ಹೆಸರುಗಳನ್ನು ಇಟ್ಟುಕೊಂಡೆವು. ನಾನು ಪಾಬ್ಲೊ ಆದೆ ಮತ್ತು ಹೇಸಲ್‌ ಕ್ವಾನಾ ಆದಳು.

ಮ್ಯಾಡ್ರಿಡ್‌ನಲ್ಲಿ ಕೆಲವು ತಿಂಗಳು ಸೇವೆ ನಡಿಸಿದ ಬಳಿಕ ನಾವು ಬಾರ್ಸೆಲೋನದಲ್ಲಿ ಸರ್ಕಿಟ್‌ ಕೆಲಸಕ್ಕೆ ನೇಮಿಸಲ್ಪಟ್ಟೆವು. ನಾವು ನಗರದ ವಿವಿಧ ಸಭೆಗಳನ್ನು ಭೇಟಿಮಾಡುತ್ತಾ ಪ್ರತಿಯೊಂದರಲ್ಲಿ ಕೆಲವೊಮ್ಮೆ ಎರಡು ಅಥವಾ ಮೂರು ವಾರಗಳನ್ನು ಕಳೆಯುತ್ತಿದ್ದೆವು. ಭೇಟಿಗಳು ಅಷ್ಟು ದೀರ್ಘವಾಗಿದ್ದದ್ದೇಕೆಂದರೆ, ಪ್ರತಿ ಪುಸ್ತಕ ಅಭ್ಯಾಸ ಗುಂಪನ್ನು ಅದು ಒಂದು ಸಭೆಯೋ ಎಂಬಂತೆ ಸಂದರ್ಶಿಸಬೇಕಿತ್ತು. ಸಾಮಾನ್ಯವಾಗಿ ವಾರದಲ್ಲಿ ಎರಡು ಗುಂಪುಗಳನ್ನು ಭೇಟಿಮಾಡುತ್ತಿದ್ದೆವು.

ಒಂದು ಅನಿರೀಕ್ಷಿತ ಸವಾಲು

ಇಸವಿ 1963ರಲ್ಲಿ ನಮ್ಮನ್ನು ಜಿಲ್ಲಾ ಕೆಲಸಕ್ಕಾಗಿ ಆಮಂತ್ರಿಸಲಾಯಿತು. ಸುಮಾರು 3,000 ಕ್ರಿಯಾಶೀಲ ಸಾಕ್ಷಿಗಳ ಸೇವೆಮಾಡಲು ನಮಗೆ ಇಡೀ ದೇಶವನ್ನೇ ಆವರಿಸಬೇಕಾಗಿತ್ತು. ಆಗ ಅಲ್ಲಿ ಏಳು ಸರ್ಕಿಟ್‌ಗಳು ಇದ್ದವು. ನಮ್ಮ ಕೆಲವು ಅತ್ಯಂತ ಸ್ಮರಣೀಯ ಗುಪ್ತ ಸಮ್ಮೇಳನಗಳು ಸವಿಲ್‌ನ ಸಮೀಪದ ಅರಣ್ಯದಲ್ಲಿ, ಹೀಹೋನ್‌ ಸಮೀಪದ ಹೊಲದಲ್ಲಿ ಮತ್ತು ಮ್ಯಾಡ್ರಿಡ್‌, ಬಾರ್ಸಲೋನ ಮತ್ತು ಲಗ್ರೊನ್ಯೊದ ಸಮೀಪದ ನದಿಗಳ ಕಿನಾರೆಯಲ್ಲಿ ನಡಿಸಲ್ಪಟ್ಟವು.

ಮನೆಮನೆಯ ಸೇವೆಮಾಡುವಾಗ, ಒಂದುವೇಳೆ ಏನಾದರೂ ತೊಂದರೆಯಾದರೆ ಅಲ್ಲಿಂದ ಪಾರಾಗುವ ಮಾರ್ಗವು ನನಗೆ ತಿಳಿದಿರುವಂತೆ, ನಾನು ಸಮೀಪದ ರಸ್ತೆಗಳ ವಿನ್ಯಾಸಗಳನ್ನು ಪರೀಕ್ಷೆಮಾಡಿ ನೋಡುತ್ತಿದ್ದೆ. ಒಮ್ಮೆ ಮ್ಯಾಡ್ರಿಡ್‌ನಲ್ಲಿ ನಾನು ಮತ್ತು ಇನ್ನೊಬ್ಬ ಸಾಕ್ಷಿಯು ಮೇಲಿನ ಮಾಳಿಗೆಯಲ್ಲಿ ಸಾರುತ್ತಿದ್ದಾಗ, ಥಟ್ಟನೆ ಕೆಳಗಿನಿಂದ ಕೂಗಾಟ ಮತ್ತು ಚೀರಾಟ ಕೇಳಿಸಿತು. ನಾವು ಕೆಳಗೆ ಬಂದಾಗ ಹದಿವಯಸ್ಸಿನ ಹುಡುಗಿಯರ ಒಂದು ಗುಂಪು ಅಲ್ಲಿ ಒಟ್ಟುಗೂಡಿತ್ತು. ಅವರು ಈಹಾಸ್‌ ಡೆ ಮಾರಿಯ (ಮರಿಯಳ ಕುಮಾರ್ತೆಯರು) ಎಂಬ ಕ್ಯಾಥೊಲಿಕ್‌ ಗುಂಪಿನ ಸದಸ್ಯರಾಗಿದ್ದರು. ಅವರು ನಮ್ಮ ಕುರಿತಾಗಿ ನೆರೆಯವರನ್ನು ಎಚ್ಚರಿಸಲಿಕ್ಕಾಗಿ ಬಂದಿದ್ದರು. ನಾವು ಆಗ ಅವರೊಂದಿಗೆ ಸಮಜಾಯಿಸಿ ಮಾತಾಡಲು ಸಾಧ್ಯವಿರಲಿಲ್ಲ, ಮತ್ತು ಅಲ್ಲಿಂದ ತತ್‌ಕ್ಷಣ ಹೊರಟುಹೋಗದಿದ್ದರೆ ಪೊಲೀಸರ ಕೈಗೆ ಸಿಕ್ಕಿಬೀಳುವೆವೆಂದು ನನಗೆ ಗೊತ್ತಿತ್ತು. ಆದ್ದರಿಂದ ಕೂಡಲೆ ನಾವು ಅಲ್ಲಿಂದ ಕಾಲ್ಕಿತ್ತೆವು!

ಅವು ಸ್ಪೆಯ್ನ್‌ನಲ್ಲಿ ನಾವು ಕಳೆದ ರೋಮಾಂಚಕ ವರ್ಷಗಳು! ನಾವು ಅಲ್ಲಿನ ವಿಶೇಷ ಪಯನೀಯರರನ್ನು ಸೇರಿಸಿ, ಒಳ್ಳೆಯ ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದ್ದೆವು. ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದಕ್ಕಾಗಿ ಮತ್ತು ಸಭೆಗಳನ್ನು ಸ್ಥಾಪಿಸಿ ಬಲಪಡಿಸಲಿಕ್ಕಾಗಿ ಅವರೂ ಸೆರೆಮನೆವಾಸ ಮತ್ತು ಕೊರತೆಗಳನ್ನು ಸಹಿಸಿಕೊಂಡಿದ್ದರು.

ಈ ಸಮಯದಲ್ಲಿ ನಮಗೆ ಒಂದು ಕೆಟ್ಟ ಸುದ್ದಿಯೂ ಸಿಕ್ಕಿತು. ಹೇಸಲ್‌ ಹೇಳುವುದು: “1964ರಲ್ಲಿ, ಒಬ್ಬ ನಂಬಿಗಸ್ತ ಸಾಕ್ಷಿಯಾಗಿದ್ದ ನನ್ನ ತಾಯಿ ತೀರಿಕೊಂಡರು. ಅವರಿಗೆ ವಿದಾಯ ಹೇಳಲು ಸಹ ಶಕ್ತಳಾಗದೆ ಅವರನ್ನು ಕಳೆದುಕೊಂಡದ್ದು ದುಃಖದ ವಿಷಯವಾಗಿತ್ತು. ಮಿಷನೆರಿ ಸೇವೆಗಾಗಿ ತೆರಬೇಕಾದ ಬೆಲೆಗಳಲ್ಲಿ ಇದೂ ಒಂದಾಗಿದೆ ಮತ್ತು ಇನ್ನೂ ಅನೇಕ ಮಿಷನೆರಿಗಳು ಸಹ ಈ ಬೆಲೆಯನ್ನು ತೆತ್ತಿದ್ದಾರೆ.”

ಕಟ್ಟಕಡೆಗೆ ಧಾರ್ಮಿಕ ಸ್ವಾತಂತ್ರ್ಯ

ವರ್ಷಗಟ್ಟಳೆ ಹಿಂಸೆಯನ್ನು ಅನುಭವಿಸಿದ ಅನಂತರ 1970ರ ಜುಲೈ ತಿಂಗಳಲ್ಲಿ ನಮ್ಮ ಕೆಲಸಕ್ಕೆ ಫ್ರಾಂಕೋ ಸರ್ಕಾರದಿಂದ ಕಾನೂನುಬದ್ಧ ಅಂಗೀಕಾರವು ಸಿಕ್ಕಿತು. ಮೊದಲು ಮ್ಯಾಡ್ರಿಡ್‌ನಲ್ಲಿ ಮತ್ತು ಆಮೇಲೆ ಬಾರ್ಸಲೋನದ ಲೆಸೆಪ್ಸಲ್ಲಿ ರಾಜ್ಯ ಸಭಾಗೃಹಗಳು ತೆರೆಯಲ್ಪಟ್ಟಾಗ ನಾನು ಮತ್ತು ಹೇಸಲ್‌ ಸಂತಸಗೊಂಡೆವು. ದೊಡ್ಡ ಹೆಸರು ಹಲಗೆಗಳನ್ನು ತೂಗಿಸಲಾಯಿತು, ಕೆಲವೊಮ್ಮೆ ದೀಪಾಲಂಕಾರ ಸಹಿತ. ಯೆಹೋವನ ಸಾಕ್ಷಿಗಳೀಗ ಶಾಸನಬದ್ಧರು ಮತ್ತು ಸ್ಪೆಯ್ನ್‌ನಲ್ಲಿ ಉಳಿದೇ ತೀರುವರೆಂದು ನಾವು ಜನರಿಗೆ ತಿಳಿಸಲು ಬಯಸಿದೆವು! 1972ರ ಆ ಸಮಯದಲ್ಲಿ ಸುಮಾರು 17,000 ಸಾಕ್ಷಿಗಳು ಸ್ಪೆಯ್ನ್‌ನಲ್ಲಿದ್ದರು.

ಸುಮಾರು ಈ ಸಮಯದಷ್ಟಕ್ಕೆ ತುಂಬ ಉತ್ತೇಜನದಾಯಕ ಸುದ್ದಿಯನ್ನು ಇಂಗ್ಲೆಂಡಿನಿಂದ ಕೇಳಿಸಿಕೊಂಡೆವು. 1969ರಲ್ಲಿ ನನ್ನ ತಂದೆಯವರು ಸ್ಪೆಯ್ನ್‌ನಲ್ಲಿ ನಮ್ಮನ್ನು ಭೇಟಿಮಾಡಿದ್ದರು. ಸ್ಪ್ಯಾನಿಷ್‌ ಸಹೋದರರು ಅವರನ್ನು ಉಪಚರಿಸಿದ ರೀತಿಯಿಂದ ಅವರೆಷ್ಟು ಪ್ರಭಾವಿತರಾದರೆಂದರೆ, ಇಂಗ್ಲೆಂಡಿಗೆ ಮರಳಿ ಹೋದಾಗ ಅವರು ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸಿದರು. ಅನಂತರ 1971ರಲ್ಲಿ ಅವರಿಗೆ ದೀಕ್ಷಾಸ್ನಾನವಾಯಿತೆಂಬ ಸುದ್ದಿ ಕೇಳಿದೆ! ನಾವು ಮನೆಯನ್ನು ಸಂದರ್ಶಿಸಿದಾಗ, ಅವರು ನನ್ನ ಕ್ರೈಸ್ತ ಸಹೋದರರೋಪಾದಿ, ಊಟಕ್ಕಾಗಿ ದೇವರ ಆಶೀರ್ವಾದವನ್ನು ಕೇಳಿದಾಗ ನನ್ನ ಹೃದಯವು ತುಂಬಿಬಂತು. ಆ ದಿನಕ್ಕಾಗಿ ನಾನು ಸುಮಾರು 20 ವರ್ಷಗಳಿಂದ ಕಾದುಕೊಂಡಿದ್ದೆ. ನನ್ನ ತಮ್ಮ ಬಾಬ್‌ ಮತ್ತು ಅವನ ಪತ್ನಿ ಐರಿಸ್‌ 1958ರಲ್ಲೇ ಸಾಕ್ಷಿಗಳಾಗಿದ್ದರು. ಅವರ ಮಗ ಫಿಲಿಪ್‌ ತನ್ನ ಪತ್ನಿ ಜೀನ್‌ಳೊಂದಿಗೆ ಸ್ಪೆಯ್ನ್‌ನಲ್ಲಿ ಈಗ ಸರ್ಕಿಟ್‌ ಮೇಲ್ವಿಚಾರಕನೋಪಾದಿ ಸೇವೆಸಲ್ಲಿಸುತ್ತಿದ್ದಾನೆ. ಆ ಅದ್ಭುತಕರ ದೇಶದಲ್ಲಿ ಅವರು ಸೇವೆಮಾಡುವುದನ್ನು ನೋಡುವುದು ನಮ್ಮನ್ನು ಅತ್ಯಾನಂದಗೊಳಿಸುತ್ತದೆ.

ನಮ್ಮ ತೀರ ಇತ್ತೀಚಿನ ಆಶ್ಚರ್ಯವು

ಫೆಬ್ರವರಿ 1980ರಲ್ಲಿ ಆಡಳಿತ ಮಂಡಲಿಯ ಒಬ್ಬ ಸದಸ್ಯರು ಸೋನ್‌ ಮೇಲ್ವಿಚಾರಕರಾಗಿ ಸ್ಪೆಯ್ನ್‌ ದೇಶವನ್ನು ಸಂದರ್ಶಿಸಿದರು. ಅವರು ಶುಶ್ರೂಷೆಯಲ್ಲಿ ನನ್ನೊಂದಿಗೆ ಜೊತೆಗೂಡಲು ಬಯಸುತ್ತಾರೆಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು! ಅವರು ನನ್ನನ್ನು ಪರೀಕ್ಷಿಸುತ್ತಿದ್ದರೆಂದು ನನಗೆ ಆಗ ತಿಳಿದಿರಲಿಲ್ಲ. ಬಳಿಕ ಸೆಪ್ಟೆಂಬರ್‌ನಲ್ಲಿ ನಮಗೆ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯಕ್ಕೆ ಹೋಗಲು ಆಮಂತ್ರಣ ದೊರೆಯಿತು. ಆಗ ನಮಗಾದ ಆಶ್ಚರ್ಯವು ಅಷ್ಟಿಷ್ಟಲ್ಲ! ನಮ್ಮ ಸ್ಪ್ಯಾನಿಷ್‌ ಸಹೋದರರಿಂದ ಅಗಲುವುದು ಹೃದಯ ಬಿರಿಯುವಂಥ ವಿಷಯವಾಗಿದ್ದರೂ, ನಾವು ಆ ಆಮಂತ್ರಣವನ್ನು ಸ್ವೀಕರಿಸಿದೆವು. ಆಗ ಸ್ಪೆಯ್ನ್‌ನಲ್ಲಿ 48,000 ಸಾಕ್ಷಿಗಳಿದ್ದರು!

ನಾವು ಅಲ್ಲಿಂದ ಹೊರಟಾಗ ಒಬ್ಬ ಸಹೋದರನು ನನಗೊಂದು ಪಾಕೆಟ್‌ ವಾಚನ್ನು ಕೊಡುಗೆಯಾಗಿ ಕೊಟ್ಟನು. ಅದರ ಮೇಲೆ ಅವನು ಎರಡು ಶಾಸ್ತ್ರವಚನಗಳನ್ನು ಕೆತ್ತಿದ್ದನು​—“ಲೂಕ 16:10; ಲೂಕ 17:10.” ಅವು ನನ್ನ ಮುಖ್ಯ ವಚನಗಳಾಗಿದ್ದವು ಎಂದನವನು. ಲೂಕ 16:​10, ನಾವು ಚಿಕ್ಕ ವಿಷಯಗಳಲ್ಲೂ ನಂಬಿಗಸ್ತರಾಗಿರಬೇಕು ಎಂಬುದನ್ನು ಒತ್ತಿಹೇಳುತ್ತದೆ; ಮತ್ತು ಲೂಕ 17:10 ನಾವು ‘ಪ್ರಯೋಜನವಿಲ್ಲದ ಆಳುಗಳು’ ಎಂದು ಹೇಳುತ್ತದೆ. ಆದುದರಿಂದ ನಮಗೆ ಹೆಮ್ಮೆಪಡಲು ಯಾವ ಕಾರಣವೂ ಇಲ್ಲ. ಯೆಹೋವನ ಸೇವೆಯಲ್ಲಿ ನಾವೇನೇ ಮಾಡಲಿ ಅದು ಕೇವಲ ಸಮರ್ಪಿತ ಕ್ರೈಸ್ತರೋಪಾದಿ ನಮ್ಮ ಕರ್ತವ್ಯವಲ್ಲದೆ ಬೇರೇನೂ ಅಲ್ಲವೆಂದು ನಾನು ಯಾವಾಗಲೂ ಮನಗಂಡಿದ್ದೇನೆ.

ಆರೋಗ್ಯಾಶ್ಚರ್ಯ

ನನಗೆ ಹೃದ್ರೋಗದ ಸಮಸ್ಯೆಯುಂಟಾದದ್ದು 1990ರಲ್ಲಿ. ರಕ್ತ ನಾಳದಲ್ಲಿ ರಕ್ತಚಲನೆಗೆ ತಡೆಗಟ್ಟು ಇದ್ದುದರಿಂದ, ಅದನ್ನು ತೆರೆದು ಸ್ಟೀಲ್‌ನ ಕೊಳವೆಯನ್ನು ಒಳಸೇರಿಸಬೇಕಾಗಿತ್ತು. ಶಾರೀರಿಕ ಬಲಹೀನತೆಯ ಈ ಕಷ್ಟಕರ ಅವಧಿಯಲ್ಲಿ, ಹೇಸಲ್‌ ಅನೇಕ ವಿಧಗಳಲ್ಲಿ ನನಗೆ ಬೆಂಬಲಕೊಟ್ಟಳು. ನನಗೆ ಎತ್ತಲು ಕಷ್ಟವಾಗುತ್ತಿದ್ದ ಬ್ಯಾಗ್‌, ಸೂಟ್‌ಕೇಸ್‌ಗಳನ್ನು ಆಕೆಯೇ ಹೊತ್ತುತರುತ್ತಿದ್ದಳು. ಅನಂತರ 2000ದ ಮೇ ತಿಂಗಳಲ್ಲಿ ಹೃದಯಬಡಿತವನ್ನು ಸಮಸ್ಥಿತಿಯಲ್ಲಿಡುವ ಪೇಸ್‌ಮೇಕರನ್ನು ಒಳಸೇರಿಸಲಾಯಿತು. ಅದೆಷ್ಟೋ ಹೆಚ್ಚು ಉಪಶಮನವನ್ನು ಕೊಟ್ಟಿದೆ!

ಯೆಹೋವನ ಹಸ್ತವು ಮೋಟುಗೈಯಲ್ಲ ಮತ್ತು ಆತನ ಉದ್ದೇಶಗಳು ನಾವು ನೆನಸುವ ಸಮಯದಲ್ಲಲ್ಲ, ಬದಲಾಗಿ ಆತನ ತಕ್ಕ ಸಮಯದಲ್ಲಿ ನೆರವೇರುತ್ತವೆ ಎಂಬುದನ್ನು ಕಳೆದ 50 ವರ್ಷಗಳಲ್ಲಿ ನಾನು ಮತ್ತು ಹೇಸಲ್‌ ಕಂಡಿದ್ದೇವೆ. (ಯೆಶಾಯ 59:1; ಹಬಕ್ಕೂಕ 2:3) ನಮ್ಮ ಜೀವಿತದಲ್ಲಿ ಅನೇಕ ಹರ್ಷಭರಿತ ಆಶ್ಚರ್ಯಗಳ ಅನುಭವಗಳು ನಮಗಾದವು. ಕೆಲವು ದುಃಖಕರ ಅನುಭವಗಳು ಸಹ. ಆದರೆ ಆ ಎಲ್ಲ ಸಮಯದಲ್ಲಿ ಯೆಹೋವನು ನಮ್ಮನ್ನು ಪೋಷಿಸಿದನು. ಇಲ್ಲಿ ಯೆಹೋವನ ಜನರ ಮುಖ್ಯಕಾರ್ಯಾಲಯದಲ್ಲಿ, ಪ್ರತಿದಿನವೂ ಆಡಳಿತ ಮಂಡಲಿಯ ಸದಸ್ಯರುಗಳ ಸಂಪರ್ಕದಲ್ಲಿರುವ ಆಶೀರ್ವಾದವನ್ನು ಪಡೆದಿದ್ದೇವೆ. ಕೆಲವು ಸಲ ‘ನಾವು ನಿಜವಾಗಿ ಇಲ್ಲಿದ್ದೇವೊ?’ ಎಂದು ನನ್ನನ್ನೇ ಕೇಳಿಕೊಳ್ಳುತ್ತೇನೆ. ಯಾಕೆಂದರೆ ಇದೊಂದು ಆಪಾತ್ರ ಕೃಪೆಯೇ ಸರಿ. (2 ಕೊರಿಂಥ 12:9) ಸೈತಾನನ ತಂತ್ರೋಪಾಯಗಳಿಂದ ಯೆಹೋವನು ನಮ್ಮನ್ನು ಕಾಪಾಡುತ್ತಾ ಮುಂದರಿಯುವನು ಮತ್ತು ನಾವು ಭೂಮಿಯ ಮೇಲೆ ಆತನ ನೀತಿಯ ಆಳ್ವಿಕೆಯ ದಿನದಲ್ಲಿ ಆನಂದಿಸಲು ಶಕ್ತರಾಗುವಂತೆ ನಮ್ಮನ್ನು ಸಂರಕ್ಷಿಸುವನೆಂಬ ಭರವಸೆ ನಮಗಿದೆ.​—ಎಫೆಸ 6:11-18; ಪ್ರಕಟನೆ 21:1-4.

[ಪುಟ 26ರಲ್ಲಿರುವ ಚಿತ್ರ]

ನಾನು ನನ್ನ ಸೆರೆಮನೆಯ ಶಿಕ್ಷೆಯನ್ನು ಪ್ರಾರಂಭಿಸಿದ ಮ್ಯಾಂಚೆಸ್ಟರ್‌ನ ಸ್ಟ್ರೇಂಜ್‌ವೇಸ್‌ ಸೆರೆಮನೆ

[ಪುಟ 27ರಲ್ಲಿರುವ ಚಿತ್ರ]

ಇಂಗ್ಲೆಂಡಿನಲ್ಲಿ ಸರ್ಕಿಟ್‌ ಕೆಲಸದಲ್ಲಿ ನಮ್ಮ ಆಸ್ಟಿನ್‌ ಸೆವೆನ್‌ರೊಂದಿಗೆ

[ಪುಟ 28ರಲ್ಲಿರುವ ಚಿತ್ರ]

1962ರಲ್ಲಿ, ಸ್ಪೆಯ್ನ್‌ನ ಮ್ಯಾಡ್ರಿಡ್‌ನ ತೆರ್ಸೆಡೀಲ್ಯದಲ್ಲಿ ಗುಪ್ತವಾಗಿ ನಡೆದ ಸಮ್ಮೇಳನ

[ಪುಟ 29ರಲ್ಲಿರುವ ಚಿತ್ರ]

ಬ್ರೂಕ್ಲಿನ್‌ನಲ್ಲಿ ನಮ್ಮ ಸಾಕ್ಷಿಕಾರ್ಯದ ಮೇಜಿನ ಬಳಿ