ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಇಬ್ರಿಯರಿಗೆ 4:​9-11ರಲ್ಲಿ ಸೂಚಿಸಲ್ಪಟ್ಟಿರುವ “ವಿಶ್ರಾಂತಿ”ಯು ಯಾವುದು, ಮತ್ತು ಒಬ್ಬನು ಆ ‘ವಿಶ್ರಾಂತಿಯಲ್ಲಿ ಸೇರುವುದು’ ಹೇಗೆ?

ಒಂದನೆಯ ಶತಮಾನದ ಇಬ್ರಿಯ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ದೇವರ ಜನರು ಅನುಭವಿಸುವದಕ್ಕಿರುವ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು. ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ. ಆದದರಿಂದ ನಾವು ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸಪಡೋಣ.”​—ಇಬ್ರಿಯ 4:9-11.

ದೇವರು ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡನು ಎಂದು ಪೌಲನು ಹೇಳಿದಾಗ, ಆದಿಕಾಂಡ 2:2ರ ವಿಷಯಕ್ಕೆ ಅವನು ಪ್ರಾಯಶಃ ಸೂಚಿಸುತ್ತಿದ್ದಿರಬೇಕು. ಅಲ್ಲಿ ನಾವು ಹೀಗೆ ಓದುತ್ತೇವೆ: “ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು.” ಯೆಹೋವನು “ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡ”ದ್ದೇಕೆ? ಎಲ್ಲಾ “ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು” ಆತನಿಗೆ ದಣಿವಾರಿಸಿಕೊಳ್ಳುವ ಅಗತ್ಯವಿದ್ದುದರ ಕಾರಣದಿಂದಲ್ಲ ಎಂಬುದು ನಿಶ್ಚಯ. ಮುಂದಿನ ವಚನವು ಅದರ ಸುಳಿವನ್ನು ಕೊಡುತ್ತದೆ: “ದೇವರು ತನ್ನ ಸೃಪ್ಟಿಕಾರ್ಯವನ್ನು ಮುಗಿಸಿ ಆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡದ್ದರಿಂದ ಆ ದಿನವನ್ನು ಪರಿಶುದ್ಧದಿನವಾಗಿರಲಿ ಎಂದು ಆಶೀರ್ವದಿಸಿದನು.”​—ಆದಿಕಾಂಡ 2:3; ಯೆಶಾಯ 40:26, 28.

ಆ “ಏಳನೆಯ ದಿನವು” ಅದಕ್ಕೆ ಮುಂಚಿನ ಯಾವುದೇ ಆರು ದಿನಗಳಿಗಿಂತ ಬೇರೆಯಾಗಿತ್ತು, ಯಾಕೆಂದರೆ ದೇವರು ಆ ದಿನವನ್ನು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದ್ದನು. ಅಂದರೆ ಒಂದು ವಿಶೇಷ ಉದ್ದೇಶಕ್ಕಾಗಿ ಆ ದಿನವು ಬದಿಗಿರಿಸಲ್ಪಟ್ಟಿತ್ತು, ಮೀಸಲಾಗಿತ್ತು. ಆ ಉದ್ದೇಶವು ಏನು? ಅದಕ್ಕೆ ಮುಂಚೆ ದೇವರು ಮಾನವಕುಲ ಮತ್ತು ಭೂಮಿಗಾಗಿರುವ ತನ್ನ ಉದ್ದೇಶವನ್ನು ಪ್ರಕಟಪಡಿಸಿದ್ದನು. ಮೊದಲನೆ ಮಾನವನಿಗೆ ಮತ್ತು ಅವನ ಪತ್ನಿಗೆ ದೇವರು ಹೇಳಿದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ದೇವರು ಮಾನವಕುಲಕ್ಕೂ ಭೂಮಿಗೂ ಒಂದು ಪರಿಪೂರ್ಣ ಪ್ರಾರಂಭವನ್ನು ಕೊಟ್ಟಾಗ್ಯೂ, ದೇವರ ಉದ್ದೇಶದ ಪ್ರಕಾರ ಇಡೀ ಭೂಮಿಯು ವಶಮಾಡಿಕೊಳ್ಳಲ್ಪಟ್ಟು ಪರಿಪೂರ್ಣ ಮಾನವರಿಂದ ತುಂಬಿಕೊಳ್ಳಲು ಸಮಯಹಿಡಿಯುವುದು. ಆದುದರಿಂದ, ಆತನು ಈ ಮೊದಲೇ ಮಾಡಿದ್ದ ಸೃಷ್ಟಿಕಾರ್ಯಗಳು ಆತನ ಚಿತ್ತಕ್ಕನುಸಾರ ವಿಕಾಸಗೊಳ್ಳುವ ಉದ್ದೇಶದಿಂದ ದೇವರು “ಏಳನೆಯ ದಿನ”ದಲ್ಲಿ ವಿಶ್ರಮಿಸಿಕೊಂಡನು ಅಥವಾ ಇನ್ನೂ ಹೆಚ್ಚು ಭೂಸೃಷ್ಟಿ ಕೆಲಸ ಮಾಡುವುದನ್ನು ನಿಲ್ಲಿಸಿದನು. ಆ “ದಿನದ” ಅಂತ್ಯದೊಳಗೆ ದೇವರು ಉದ್ದೇಶಿಸಿದ್ದೆಲ್ಲವೂ ಕೈಗೂಡಲಿದೆ. ಆದರೆ ಆ ವಿಶ್ರಾಂತಿ ಕಾಲವು ಎಷ್ಟು ದೀರ್ಘವಾಗಿರುವುದು?

ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನ ಮಾತುಗಳಿಗೆ ನಾವು ಹಿಂದಿರುಗುವುದಾದರೆ, “ದೇವರ ಜನರು ಅನುಭವಿಸುವುದಕ್ಕಿರುವ ಸಬ್ಬತ್ತೆಂಬ ವಿಶ್ರಾಂತಿಯು ಇನ್ನೂ ಉಂಟು” ಎಂದು ಅವನು ಹೇಳುವುದನ್ನು ನಾವು ಗಮನಿಸುತ್ತೇವೆ. ಮತ್ತು “ಆ ವಿಶ್ರಾಂತಿಯಲ್ಲಿ ಸೇರುವುದಕ್ಕೆ” ಪ್ರಯಾಸಪಡೋಣ ಎಂದು ಅವನು ಜೊತೆ ಕ್ರೈಸ್ತರನ್ನು ಪ್ರೋತ್ಸಾಹಿಸಿದನು. ಪೌಲನು ಈ ಮಾತುಗಳನ್ನು ಬರೆದಾಗ, ಸುಮಾರು 4,000 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ದೇವರ ವಿಶ್ರಾಂತಿಯ “ಆ ಏಳನೆಯ ದಿನವು” ಇನ್ನೂ ಮುಂದುವರಿಯುತ್ತಾ ಇತ್ತೆಂಬುದನ್ನು ಅದು ಸೂಚಿಸುತ್ತದೆ. “ಸಬ್ಬತ್‌ ದಿನಕ್ಕೆ ಒಡೆಯ”ನಾಗಿರುವ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಅಂತ್ಯದಲ್ಲಿ, ಮಾನವಕುಲ ಮತ್ತು ಭೂಮಿಯ ಕಡೆಗೆ ದೇವರ ಉದ್ದೇಶವು ಪೂರ್ಣವಾಗಿ ನೆರವೇರುವ ತನಕ ಅದು ಕೊನೆಗೊಳ್ಳದು.​—ಮತ್ತಾಯ 12:8; ಪ್ರಕಟನೆ 20:​1-6; 21:​1-4.

ಆ ಆಶ್ಚರ್ಯಕರ ಪ್ರತೀಕ್ಷೆಯ ನೋಟದಲ್ಲಿ, ದೇವರ ವಿಶ್ರಾಂತಿಯಲ್ಲಿ ಒಬ್ಬನು ಹೇಗೆ ಸೇರಬಹುದೆಂಬುದನ್ನು ಪೌಲನು ವಿವರಿಸಿದನು. ಅವನಂದದ್ದು: “ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.” ಒಂದು ಪರಿಪೂರ್ಣ ಪ್ರಾರಂಭವು ಕೊಡಲ್ಪಟ್ಟರೂ, ಇಡೀ ಮಾನವಕುಲವು ದೇವರ ವಿಶ್ರಾಂತಿಯನ್ನು ಪ್ರವೇಶಿಸಲಿಲ್ಲವೆಂಬುದನ್ನು ಇದು ತೋರಿಸುತ್ತದೆ. ಯಾಕೆಂದರೆ ಆದಾಮಹವ್ವರು, ದೇವರು ಅವರಿಗಾಗಿ ಮಾಡಿರುವ ಏರ್ಪಾಡನ್ನು ಸ್ವೀಕರಿಸುವ ಮೂಲಕ “ಆ ಏಳನೆಯ ದಿನದ” ದೇವರ ವಿಶ್ರಾಂತಿಯನ್ನು ಬಹಳ ಕಾಲ ಪಾಲಿಸಲಿಲ್ಲ. ಅವರು ದಂಗೆಯೆದ್ದರು ಮತ್ತು ದೇವರಿಂದ ಸ್ವತಂತ್ರರಾಗಿರಲು ಬಯಸಿದರು. ದೇವರ ಪ್ರೀತಿಯುಳ್ಳ ಮಾರ್ಗದರ್ಶನವನ್ನು ಸ್ವೀಕರಿಸುವ ಬದಲಿಗೆ ಅವರು ಸೈತಾನನ ತಂತ್ರೋಪಾಯಕ್ಕೆ ಮಾರುಹೋದರು. (ಆದಿಕಾಂಡ 2:​15-17) ಪರಿಣಾಮವಾಗಿ ಒಂದು ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು ಅವರು ಕಳೆದುಕೊಂಡರು. ಅಂದಿನಿಂದ ಮಾನವಕುಲವು ಪಾಪ ಮತ್ತು ಮರಣದ ದಾಸತ್ವಕ್ಕೆ ಒಳಗಾಯಿತು.​—ರೋಮಾಪುರ 5:​12, 14.

ಮಾನವಕುಲದ ದಂಗೆಯೇಳುವಿಕೆಯು ದೇವರ ಉದ್ದೇಶವನ್ನು ಭಗ್ನಗೊಳಿಸಲಿಲ್ಲ. ಆತನ ವಿಶ್ರಾಂತಿಯ ದಿನವು ಈಗಲೂ ಮುಂದುವರಿಯುತ್ತಿದೆ. ಆದರೆ ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಪ್ರಾಯಶ್ಚಿತ್ತದ ಒಂದು ಪ್ರೀತಿಯುಳ್ಳ ಏರ್ಪಾಡನ್ನು ಮಾಡಿದನು. ಹೀಗೆ ಯಾರು ನಂಬಿಕೆಯಿಂದ ಆ ಪ್ರಾಯಶ್ಚಿತ್ತವನ್ನು ಸ್ವೀಕರಿಸುತ್ತಾರೊ ಅವರು ಪಾಪ ಮತ್ತು ಮರಣದ ಬಂಧನದಿಂದ ಬಿಡುಗಡೆ ಅಥವಾ ವಿಶ್ರಾಂತಿಯನ್ನು ಪಡೆಯಸಾಧ್ಯವಿದೆ. (ರೋಮಾಪುರ 6:23) ಆದುದರಿಂದಲೇ ಪೌಲನು ತನ್ನ ಜೊತೆ ಕ್ರೈಸ್ತರನ್ನು ತಮ್ಮ ‘ಸ್ವಂತ ಕೆಲಸಗಳಿಂದ ವಿಶ್ರಮಿಸಿಕೊಳ್ಳುವಂತೆ’ ಉತ್ತೇಜಿಸಿದನು. ರಕ್ಷಣೆಗಾಗಿ ದೇವರು ಮಾಡಿರುವ ಏರ್ಪಾಡನ್ನು ಅವರು ಸ್ವೀಕರಿಸಬೇಕಿತ್ತು ಮತ್ತು ಆದಾಮಹವ್ವರು ಮಾಡಿದಂತೆ, ತಮ್ಮ ಸ್ವಂತ ರೀತಿಯಲ್ಲಿ ತಮ್ಮ ಸ್ವಂತ ಭವಿಷ್ಯತ್ತನ್ನು ನಿರ್ಣಯಿಸಿಕೊಳ್ಳಲು ಪ್ರಯತ್ನಿಸಬಾರದಿತ್ತು. ಅವರು ತಮ್ಮ ಸ್ವಂತ ಕೆಲಸಗಳಿಂದ ನೀತಿವಂತರೆಂಬ ನಿರ್ಣಯವನ್ನು ಪಡೆಯುವ ಪ್ರಯತ್ನದಿಂದ ದೂರವಿರುವ ಅಗತ್ಯವೂ ಇದೆ.

ಸ್ವಾರ್ಥಪರ ಅಥವಾ ಐಹಿಕ ಬೆನ್ನಟ್ಟುವಿಕೆಗಳನ್ನು ಬದಿಗೊತ್ತಿ ದೇವರ ಚಿತ್ತವನ್ನು ಮಾಡಲು ಮುಂದುವರಿಯುವುದು ನಿಜವಾಗಿಯೂ ಚೈತನ್ಯಕರವೂ ವಿಶ್ರಾಂತಿಕರವೂ ಆಗಿದೆ. ಯೇಸು ಈ ಆಮಂತ್ರಣವನ್ನು ಕೊಟ್ಟನು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”​—ಮತ್ತಾಯ 11:28-30.

ದೇವರ ವಿಶ್ರಾಂತಿಯ ಕುರಿತಾದ ಪೌಲನ ಚರ್ಚೆ ಮತ್ತು ಒಬ್ಬನು ಹೇಗೆ ಅದರಲ್ಲಿ ಸೇರಬಹುದು ಎಂಬ ವಿವರಣೆಯು ಯೆರೂಸಲೇಮಿನ ಹೀಬ್ರು ಕ್ರೈಸ್ತರಿಗೆ ಪ್ರೋತ್ಸಾಹನೆಯ ಮೂಲವಾಗಿತ್ತೆಂಬುದು ನಿಶ್ಚಯ. ಯಾಕೆಂದರೆ ಅವರು ತಮ್ಮ ನಂಬಿಕೆಗಾಗಿ ಬಹಳಷ್ಟು ಹಿಂಸೆ ಮತ್ತು ಅಪಹಾಸ್ಯವನ್ನು ತಾಳಿಕೊಂಡಿದ್ದರು. (ಅ. ಕೃತ್ಯಗಳು 8:1; 12:​1-5) ತದ್ರೀತಿಯಲ್ಲಿ, ಇಂದಿನ ಕ್ರೈಸ್ತರಿಗೆ ಪೌಲನ ಮಾತುಗಳು ನಿಶ್ಚಯವಾಗಿಯೂ ಪ್ರೋತ್ಸಾಹನೆಯ ಮೂಲವಾಗಿರಬಲ್ಲವು. ತನ್ನ ನೀತಿಯ ರಾಜ್ಯದ ಕೆಳಗೆ ಬಂದು ಪರದೈಸ ಭೂಮಿಯನ್ನು ತರುವ ದೇವರ ವಾಗ್ದಾನದ ನೆರವೇರಿಕೆಯು ಹತ್ತಿರವಾಗಿದೆ ಎಂದು ಮನಗಂಡವರಾಗಿ, ನಾವು ಸಹ ನಮ್ಮ ಸ್ವಂತ ಕೆಲಸಗಳಿಂದ ವಿಶ್ರಮಿಸಿಕೊಂಡು, ದೇವರ ವಿಶ್ರಾಂತಿಯೊಳಗೆ ಪ್ರವೇಶಿಸಲು ಪ್ರಯಾಸಪಡಬೇಕು.​—ಮತ್ತಾಯ 6:​10, 33; 2 ಪೇತ್ರ 3:13.

[ಪುಟ 31ರಲ್ಲಿರುವ ಚಿತ್ರಗಳು]

ಭೂಪರದೈಸಿನ ಕುರಿತಾದ ದೇವರ ವಾಗ್ದಾನವು ಆತನ ವಿಶ್ರಾಂತಿ ದಿನದ ಅಂತ್ಯದಲ್ಲಿ ಕೈಗೂಡುವುದು