ಆ್ಯಂಡಿಸ್‌ನಲ್ಲಿ ಜೀವದಾಯಕ ನೀರು ಹರಿಯುತ್ತದೆ
ಆ್ಯಂಡಿಸ್‌ನಲ್ಲಿ ಜೀವದಾಯಕ ನೀರು ಹರಿಯುತ್ತದೆ
ಆ್ಯಂಡಿಸ್ ಪರ್ವತಗಳು ಪೆರೂವಿನ ಮಧ್ಯಭಾಗದ ಉದ್ದಕ್ಕೂ ಚಾಚಿಕೊಂಡಿವೆ ಮತ್ತು ಇವು ದೇಶದ ಪಶ್ಚಿಮ ದಿಕ್ಕನ್ನು ನಿರಾರ್ದ್ರ ಕರಾವಳಿ ಪ್ರದೇಶವಾಗಿ ಮತ್ತು ಪೂರ್ವ ದಿಕ್ಕನ್ನು ಸೋಂಪಾಗಿ ಬೆಳೆದ, ನೀರಾವಿ ಕಾಡು ಪ್ರದೇಶವಾಗಿ ವಿಭಾಗಿಸುತ್ತವೆ. ಈ ಪರ್ವತಶ್ರೇಣಿಯಲ್ಲಿ ಪೆರೂವಿನ 2 ಕೋಟಿ 70 ಲಕ್ಷ ಜನಸಂಖ್ಯೆಯಲ್ಲಿ ಮೂರನೆಯ ಒಂದಂಶಕ್ಕಿಂತಲೂ ಹೆಚ್ಚು ಜನರು ಜೀವಿಸುತ್ತಾರೆ. ಅವರು ಆ್ಯಂಡಿಸ್‌ನ ಎತ್ತರವಾದ ಪ್ರಸ್ತಭೂಮಿಗಳು ಮತ್ತು ಕಡಿದಾದ ಪರ್ವತಬದಿಗಳಲ್ಲಿ ಅಥವಾ ಆ ಬೆಟ್ಟಸಾಲಿನಲ್ಲಿ ಅಡಿಯಿಲ್ಲದಂತೆ ತೋರುವ ಕಮರಿಗಳು ಮತ್ತು ಫಲವತ್ತಾದ ಕಣಿವೆಗಳಲ್ಲಿ ಜೀವಿಸುತ್ತಿದ್ದಾರೆ.
ಆ್ಯಂಡಿಸ್‌ನ ಏರುತಗ್ಗಿನ ಪರ್ವತಶ್ರೇಣಿಯು ಹೊರಗಡೆಯಿಂದ ಸುಲಭವಾದ ಪ್ರವೇಶವನ್ನು ತಡೆಯುತ್ತದೆ. ಪರಿಣಾಮವಾಗಿ, ಅಲ್ಲಿ ಜೀವಿಸುತ್ತಿರುವ ಲಕ್ಷಾಂತರ ಮಂದಿ ಕೊಂಚಮಟ್ಟಿಗೆ ಪ್ರತ್ಯೇಕವಾಗಿ ಜೀವಿಸುತ್ತಾರೆ, ಮತ್ತು ಹೆಚ್ಚಿನ ಮಟ್ಟಿಗೆ ತಮ್ಮ ಕ್ಷೇತ್ರದ ಹೊರಗೆ ನಡೆಯುವ ಘಟನೆಗಳು ಹಾಗೂ ಬೆಳವಣಿಗೆಗಳಿಂದ ನಿರ್ಬಾಧಿತರಾಗಿದ್ದಾರೆ.
ಬೆಳೆಗಳಿಗೆ ಮತ್ತು ಲಾಮಗಳು, ಆಲ್ಪಾಕಗಳು, ವಿಕೂನಗಳು, ಹಾಗೂ ಕುರಿಗಳ ಮಂದೆಗಳಿಗೆ ಆವಶ್ಯಕವಾಗಿರುವ ಜೀವದಾಯಕ ನೀರನ್ನು ಸುಲಭವಾಗಿ ಪಡೆದುಕೊಳ್ಳುವಂತೆ, ನದಿತೀರಗಳಲ್ಲಿ ಚಿಕ್ಕ ಗ್ರಾಮಗಳು ಕಾಣಿಸಿಕೊಂಡಿವೆ. ಆದರೂ, ಮತ್ತೊಂದು ರೀತಿಯ ಅತ್ಯಾವಶ್ಯಕ ನೀರು ಆ್ಯಂಡಿಸ್‌ನಲ್ಲಿ ಹರಿಯುತ್ತಿದೆ—ಅದು “ಜೀವಜಲದ ಬುಗ್ಗೆ”ಯಾಗಿರುವ ಯೆಹೋವನಿಂದ ಬರುವ ಚೈತನ್ಯದಾಯಕ ಆತ್ಮಿಕ ನೀರೇ ಆಗಿದೆ. (ಯೆರೆಮೀಯ 2:13) ಆ್ಯಂಡಿಸ್‌ನ ಎತ್ತರವಾದ ಪ್ರದೇಶಗಳಲ್ಲಿ ಜೀವಿಸುತ್ತಿರುವ ಜನರು ಆತನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ದೇವರು ತನ್ನ ಸಾಕ್ಷಿಗಳನ್ನು ಉಪಯೋಗಿಸುತ್ತಿದ್ದಾನೆ.—ಯೆಶಾಯ 12:3; ಯೋಹಾನ 17:3.
“ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿರುವುದರಿಂದ, ಬೈಬಲಿನಲ್ಲಿರುವ ಜೀವದಾಯಕ ಸಂದೇಶವನ್ನು, ತಲಪಲು ಕಷ್ಟಕರವಾಗಿರುವ ಸಮಾಜಗಳಿಗೆ ತಲಪಿಸಲು ಈ ಶುಶ್ರೂಷಕರು ತಮ್ಮಿಂದಾದ ಎಲ್ಲ ಪ್ರಯತ್ನವನ್ನು ಮಾಡುತ್ತಾರೆ. (1 ತಿಮೊಥೆಯ 2:4) ಬೈಬಲಾಧಾರಿತವಾದ ಸಂದೇಶವು ಜ್ಞಾನೋದಯ ನೀಡುವಂತಹದ್ದೂ ಘನವಾದದ್ದೂ ಆಗಿದೆ. ಅದು ಸಹೃದಯವುಳ್ಳ ಸ್ಥಳಿಕ ಜನರಲ್ಲಿ ಮೃತ ವ್ಯಕ್ತಿಗಳು, ದುಷ್ಟಾತ್ಮಗಳು, ಮತ್ತು ನೈಸರ್ಗಿಕ ಶಕ್ತಿಗಳ ಕುರಿತಾಗಿ ಭೀತಿಯನ್ನು ಉಂಟುಮಾಡಿದ್ದ ಮೂಢನಂಬಿಕೆಗಳು, ಆಚರಣೆಗಳು, ಮತ್ತು ಯೋಚನೆಗಳಿಂದ ಅವರನ್ನು ವಿಮೋಚಿಸಿದೆ. ಹೆಚ್ಚು ಪ್ರಾಮುಖ್ಯವಾಗಿ, ಈ ಸಂದೇಶವು ಅವರಿಗೆ ಪರದೈಸ ಭೂಮಿಯಲ್ಲಿ ಸದಾ ಜೀವಿಸುವ ಮಹಿಮಾಭರಿತ ನಿರೀಕ್ಷೆಯನ್ನು ಕೊಡುತ್ತದೆ.
ಪ್ರಯತ್ನವನ್ನು ಮಾಡುವುದು
ಈ ಪ್ರತ್ಯೇಕ ಪ್ರದೇಶಗಳನ್ನು ಸಂದರ್ಶಿಸುವ ರಾಜ್ಯ ಪ್ರಚಾರಕರು ಹಲವಾರು ಹೊಂದಾಣಿಕೆಗಳನ್ನು ಮಾಡಬೇಕಾಗಿರುತ್ತದೆ. ಜನರ ಹೃದಯವನ್ನು ಮುಟ್ಟಲಿಕ್ಕಾಗಿ, ಈ ಬೈಬಲ್ ಬೋಧಕರಿಗೆ ಕೆಚವ ಅಥವಾ ಐಮಾರ ಎಂಬ ಎರಡು ಸ್ಥಳಿಕ ಭಾಷೆಗಳು ಸ್ವಲ್ಪವಾದರೂ ತಿಳಿದಿರಬೇಕು.
ಆ್ಯಂಡಿಸ್‌ನಲ್ಲಿರುವ ಗ್ರಾಮಗಳನ್ನು ತಲಪುವುದು ಸುಲಭದ ಸಂಗತಿಯಲ್ಲ. ಅನೇಕ ರೈಲುದಾರಿಗಳು ಆ ಕ್ಷೇತ್ರಗಳಿಗೆ ಹೋಗುವುದಿಲ್ಲ. ಸಾರಿಗೆ ವ್ಯವಸ್ಥೆ ಅನಿಶ್ಚಿತವಾಗಿದೆ ಮತ್ತು ಅದು ಕೆಟ್ಟ ಹವಾಮಾನ ಹಾಗೂ ಅನಿಯತ ಪ್ರದೇಶ ಲಕ್ಷಣಗಳಿಗೆ ಒಳಪಟ್ಟಿದೆ. ಹಾಗಾದರೆ ಸಾಕ್ಷಿಗಳು, ಹೇಗೆ ಜನರನ್ನು ತಲಪಿ ಅವರಿಗೆ ರಾಜ್ಯದ ಸಂದೇಶವನ್ನು ಕೊಂಡೊಯ್ಯುತ್ತಾರೆ?
ಸುವಾರ್ತೆಯನ್ನು ಧೈರ್ಯದಿಂದ ಸಾರುವವರು ಪಂಥಾಹ್ವಾನವನ್ನು ಎದುರಿಸಿದ್ದಾರೆ ಮತ್ತು ಪ್ರವಾದಿಯಾದ ಯೆಶಾಯನು ತೋರಿಸಿದ ಅದೇ ಹುರುಪನ್ನು ತೋರಿಸುತ್ತಾ ಹೀಗೆ ಪ್ರತಿಕ್ರಿಯಿಸಿದ್ದಾರೆ: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” (ಯೆಶಾಯ 6:8) ಉತ್ತರ, ಮಧ್ಯ, ಮತ್ತು ದಕ್ಷಿಣ ದಿಕ್ಕುಗಳಿಗೆ ಪ್ರಯಾಣಿಸಲಿಕ್ಕಾಗಿ ಅವರು ಮೋಟಾರ್ ಮನೆಗಳನ್ನು ಉಪಯೋಗಿಸಿದ್ದಾರೆ. ಬೈಬಲ್‌ಗಳು ಮತ್ತು ಬೈಬಲ್ ಸಾಹಿತ್ಯವು ತುಂಬಿದ್ದ ಅನೇಕ ಪೆಟ್ಟಿಗೆಗಳನ್ನು ತೆಗೆದುಕೊಂಡು, ಹುರುಪುಳ್ಳ ಪಯನೀಯರರು ಅಥವಾ ಪೂರ್ಣ ಸಮಯದ ಶುಶ್ರೂಷಕರು, ಅಲ್ಲಿ ಜೀವಿಸುತ್ತಿದ್ದ ಸ್ನೇಹಪರ, ಅತಿಥಿಸತ್ಕಾರ ತೋರಿಸುವ, ಮತ್ತು ಸಹೃದಯಿ ಜನರ ಮಧ್ಯೆ ಬೈಬಲ್ ಸತ್ಯದ ಬೀಜಗಳನ್ನು ಬಿತ್ತಿದ್ದಾರೆ.
ಬೆಟ್ಟ ದಾರಿಗಳ ತಿರುವುಗಳು ವಿಶೇಷವಾಗಿ ಅಪಾಯಕಾರಿಯಾಗಿವೆ. ಇವುಗಳಲ್ಲಿ ಕೆಲವನ್ನು ನಿಭಾಯಿಸಲಿಕ್ಕಾಗಿ, ವಾಹನಗಳು ಹಿಂದೂ ಮುಂದೂ ಚಲಿಸುತ್ತಾ ಕ್ರಮೇಣವಾಗಿ ಮೇಲೆ ಹತ್ತುತ್ತಾ ಹೋಗುತ್ತವೆ. ಇಂತಹ ಒಂದು ತಿರುವಿನಲ್ಲಿ ಬಸ್ ಅನ್ನು ತಿರುಗಿಸುತ್ತಿರುವಾಗ, ಅದರ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಒಬ್ಬ ಮಿಷನೆರಿಯು ಕಿಟಕಿಯಿಂದ ಹೊರಗೆ ನೋಡಿದನು ಮತ್ತು ಹಿಂದಿನ ಚಕ್ರಗಳು 190 ಮೀಟರುಗಳಿಗಿಂತಲೂ ಹೆಚ್ಚು ಆಳವಾಗಿರುವ ಒಂದು ಪ್ರಪಾತದ ಅತಿ ಅಂಚಿನಲ್ಲಿದ್ದದ್ದನ್ನು ಗಮನಿಸಿದನು! ಬಸ್ ಮುಂದೆ ಏರಿಹೋಗುವ ತನಕ ಅವನು ಕಣ್ಣುಗಳನ್ನು ಮುಚ್ಚಿಕೊಂಡಿದ್ದನು.
ಕೆಲವು ರಸ್ತೆಗಳು ಹೆಚ್ಚು ದುರವಸ್ಥೆಯಲ್ಲಿವೆ ಮತ್ತು ತುಂಬ ಕಿರಿದಾಗಿವೆ. ಇಂತಹ ಒಡ್ಡೊಡ್ಡಾದ ಕ್ಷೇತ್ರದಲ್ಲಿ ಹಾದುಹೋಗುತ್ತಿರುವಾಗ, ಒಂದು ಮೋಟಾರ್ ಮನೆಯು ಇಕ್ಕಟ್ಟಾದ ರಸ್ತೆಯಲ್ಲಿ ಇಳಿಯುತ್ತಿದ್ದಾಗ ಅದರ ಮುಂದೆ ಒಂದು ಟ್ರಕ್ ಏರಿಬರುತ್ತಿರುವುದು ಕಂಡುಬಂತು. ಈ ಎರಡೂ ವಾಹನಗಳು ಕೂದಲೆಳೆಯಷ್ಟು ಹತ್ತಿರದಿಂದ ಒಂದು ಇನ್ನೊಂದನ್ನು ದಾಟಿಹೋಗಲು ಸ್ಥಳವು ಸಿಗುವಂತೆ ಮೋಟಾರ್ ಮನೆಯನ್ನು ಗುಡ್ಡದ ಮೇಲೆ ಹಿಂದಕ್ಕೆ ಹತ್ತಿಸಬೇಕಾಯಿತು.
ಹಾಗಿದ್ದರೂ, ಇಂತಹ ಶ್ರದ್ಧಾಭರಿತ ಪ್ರಯತ್ನಗಳ ಪ್ರತಿಫಲಗಳು ಎದ್ದುಕಾಣುವಂತಿವೆ. ಈ ಪ್ರಯತ್ನಗಳ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ?
ಟಿಟಿಕಾಕ ಸರೋವರಕ್ಕೆ “ನೀರುಹಾಯಿಸುವುದು”
ಸಮುದ್ರ ಮಟ್ಟಕ್ಕಿಂತ 3,800 ಮೀಟರುಗಳಷ್ಟು ಎತ್ತರದಲ್ಲಿರುವ ಆ್ಯಂಡಿಸ್ ಪರ್ವತದ ಜಲಾನಯನ ಭೂಮಿಯಲ್ಲಿ ನೆಲೆಸಿರುವ ಟಿಟಿಕಾಕ ಸರೋವರವು, ಲೋಕದ ಅತಿ ಎತ್ತರವಾದ ಒಳನಾಡಿನ, ನೌಕಾಸಂಚಾರಯೋಗ್ಯ ಸರೋವರವಾಗಿದೆ. ಯಾವ ಪರ್ವತ ಶಿಖರಗಳಲ್ಲಿ ಕೆಲವು 6,400 ಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿವೆಯೋ ಅಂತಹ ಹಿಮಾವೃತ ಶಿಖರಗಳು, ಟಿಟಿಕಾಕವನ್ನು ಪೋಷಿಸುವ 25 ನದಿಗಳಲ್ಲಿ ಹೆಚ್ಚಿನವುಗಳಿಗೆ ಉಗಮ ಸ್ಥಾನವಾಗಿವೆ. ಈ ಎತ್ತರವಾದ ಉನ್ನತ ಪ್ರದೇಶದಿಂದಾಗಿ ತಾಪಮಾನವು ತಣ್ಣಗಿರುತ್ತದೆ, ಮತ್ತು ಅಲ್ಲಿ ಹುಟ್ಟಿಬೆಳೆದಿರದ ಜನರು ಉನ್ನತ ಪ್ರದೇಶಗಳ ಕಾಯಿಲೆಯನ್ನು ನಿಭಾಯಿಸಬೇಕಾಗಿರುತ್ತದೆ.
ಕೊಂಚ ಸಮಯದ ಹಿಂದೆ, ಕೆಚವ ಮತ್ತು ಐಮಾರ ಭಾಷೆಗಳನ್ನಾಡುವ ಪಯನೀಯರರ ಒಂದು ಗುಂಪು, ಟಿಟಿಕಾಕ ಸರೋವರದ ದ್ವೀಪಗಳಾದ ಆಮಾಂಟಾನೀ ಮತ್ತು ಟಾಕೀಲೆಗೆ ಪ್ರಯಾಣವನ್ನು ಬೆಳೆಸಿತು. ಅವರು ತಮ್ಮೊಂದಿಗೆ “ಚರ್ಚುಗಳ ಕಡೆಗೆ ಇನ್ನೂ ಹತ್ತಿರದ ನೋಟ” (ಇಂಗ್ಲಿಷ್) ಎಂಬ ಸ್ಲೈಡ್ ಕಾರ್ಯಕ್ರಮವನ್ನು ಕೊಂಡೊಯ್ದರು. ಇದು ಕ್ರೈಸ್ತಪ್ರಪಂಚದ ಸುಳ್ಳುತನದ ಮುಚ್ಚುಮರೆಯಿಲ್ಲದ ಪರಿಶೀಲನೆಯಾಗಿತ್ತು. ಇದು ಸಕಾರಾತ್ಮಕ ಪ್ರತಿಫಲವನ್ನು ತಂದಿತು. ಒಬ್ಬ ಮನುಷ್ಯನು ಸಹೋದರರನ್ನು ಆಮಂತ್ರಿಸಿದನು, ಮತ್ತು ಅವರು ಅಲ್ಲಿಯೇ ಉಳಿದು ಬೈಬಲನ್ನು ಕಲಿಸುವಂತೆ ತನ್ನ ಮನೆಯ ಒಂದು ವಿಶಾಲವಾದ ಕೋಣೆಯನ್ನು ನೀಡಿದನು.
ಆಮಾಂಟಾನೀಯಲ್ಲಿ ನಡೆಸಲ್ಪಟ್ಟ ಮೊದಲ ಕೂಟವು 100 ಮಂದಿ ಜನರನ್ನು ಆಕರ್ಷಿಸಿತು; ಟಾಕೀಲೆಯಲ್ಲಿ ನಡೆಸಲ್ಪಟ್ಟ ಕೂಟದಲ್ಲಿ 140 ಮಂದಿ ಹಾಜರಿದ್ದರು. ಭಾಷಣವು ಕೆಚವ ಭಾಷೆಯಲ್ಲಿತ್ತು. ಇದಕ್ಕೆ ಮುಂಚಿತವಾಗಿ ಮುಖ್ಯ ಭೂಭಾಗದಲ್ಲಿ ಜೀವಿಸುತ್ತಿದ್ದ ಒಬ್ಬ ದಂಪತಿಯು ಹೇಳಿದ್ದು: “ಯೆಹೋವನ ಸಾಕ್ಷಿಗಳಾದ ನೀವು ನಮ್ಮನ್ನು ಜ್ಞಾಪಿಸಿಕೊಳ್ಳಲು ಇದು ಸಮಯವಾಗಿತ್ತು. ನಾವು ನಿಮ್ಮ ಬರೋಣಕ್ಕಾಗಿ ಪ್ರಾರ್ಥಿಸುತ್ತಿದ್ದೆವು.”
ಈ ಎರಡು ದೊಡ್ಡ ದ್ವೀಪಗಳಲ್ಲದೆ, ಟಿಟಿಕಾಕ ಸರೋವರದ ಸುಮಾರು 40 “ತೇಲುವ” ದ್ವೀಪಗಳಿಗೆ ಸುವಾರ್ತೆಯನ್ನು ತಲಪಿಸಲಾಗಿದೆ. ತೇಲುವ ದ್ವೀಪಗಳೋ? ಹೌದು, ಇವು ಟೊಟೊರಾಸ್, ಅಂದರೆ ಸರೋವರದ ಆಳವಿಲ್ಲದ ಕ್ಷೇತ್ರಗಳಲ್ಲಿ ಬೆಳೆಯುವಂಥ ಆಪುಹುಲ್ಲುಗಳಾಗಿವೆ. ಟೊಟೊರಾಸ್ ನೀರಿನಲ್ಲಿ ಬೆಳೆದೇಳುತ್ತಾ ನೀರಿನ ಮೇಲೆ ಕಾಣಿಸಿಕೊಳ್ಳುತ್ತವೆ. ಒಂದು ದ್ವೀಪವನ್ನು ರಚಿಸಲಿಕ್ಕಾಗಿ, ಅಲ್ಲಿನ ನಿವಾಸಿಗಳು ಸರೋವರದ ಅಡಿಭಾಗದಲ್ಲಿ ಬೇರೂರಿರುವ ಆಪುಹುಲ್ಲನ್ನೇ ಮಡಿಚಿ, ಒಂದು ವೇದಿಕೆಯನ್ನು ಮಾಡಲಿಕ್ಕಾಗಿ ಅವುಗಳನ್ನು ಪರಸ್ಪರ ಹೆಣೆಯುತ್ತಾರೆ. ನಂತರ ಆ ವೇದಿಕೆಯೊಳಗೆ ಮಣ್ಣನ್ನು ತುರುಕಿ, ಕತ್ತರಿಸಲ್ಪಟ್ಟ ಹೆಚ್ಚಿನ ಆಪುಹುಲ್ಲಿನಿಂದ ಭದ್ರಪಡಿಸಲಾಗುತ್ತದೆ. ಅದರ ಮೇಲೆ ಕಟ್ಟಲ್ಪಟ್ಟ ಆಪುಹುಲ್ಲಿನ ಗುಡಿಸಿಲುಗಳಲ್ಲಿ ಜನರು ವಾಸಿಸುತ್ತಾರೆ.
ಟಿಟಿಕಾಕ ಸರೋವರದ ದ್ವೀಪಗಳ ಮೇಲೆ ಜೀವಿಸುವಂಥ ಜನರಿಗೆ ಸಾರುವುದಕ್ಕಾಗಿ ಯೆಹೋವನ ಸಾಕ್ಷಿಗಳು ಒಂದು ದೋಣಿಯನ್ನು ಪಡೆದುಕೊಂಡರು. ಈ ದೋಣಿಯು 16 ಜನರನ್ನು ಕೊಂಡೊಯ್ಯಲು ಶಕ್ತವಾಗಿದೆ. ತೇಲುವ ದ್ವೀಪಗಳಿಗೆ ತಲಪಿ ದೋಣಿಯನ್ನು ಕಟ್ಟಿದ ನಂತರ, ಸಾಕ್ಷಿಗಳು ಆಪುಹುಲ್ಲು ವೇದಿಕೆಯ ಮೇಲೆ ನಡೆಯುತ್ತಾ ಮನೆಯಿಂದ ಮನೆಗೆ ಹೋಗುತ್ತಾರೆ. ತಮ್ಮ ಪಾದದಡಿ ಸಾಮಾನ್ಯವಾಗಿ ತುಸು ಚಲನೆ ಇರುತ್ತದೆಂದು ಅವರು ಹೇಳುತ್ತಾರೆ. ಸಮುದ್ರ ಪಿತ್ತದ ಸಮಸ್ಯೆಯಿರುವವರಿಗೆ ಇದು ಸರಿಯಾದ ಜಾಗವಲ್ಲ!
ಐಮಾರ ಭಾಷೆಯನ್ನಾಡುವ ಜನರ ಕುರಿತು ನೋಡುವುದಾದರೆ, ನದಿತೀರದಲ್ಲಿರುವ ಹಲವಾರು ಸಮಾಜಗಳು ಮತ್ತು ಹಳ್ಳಿಗಳಲ್ಲಿ ಹಾಗೂ ಸರೋವರದಲ್ಲಿ ಚಾಚಿಕೊಂಡಿರುವ ಪರ್ಯಾಯ ದ್ವೀಪಗಳಲ್ಲಿ ಅವರು ವಾಸಿಸುತ್ತಾರೆ. ಇವುಗಳನ್ನು ಭೂಮಾರ್ಗಕ್ಕಿಂತಲೂ ದೋಣಿಯ ಮೂಲಕವಾಗಿ ಸಂಪರ್ಕಿಸುವುದು ಹೆಚ್ಚು ಸುಲಭ. ಒಟ್ಟಿನಲ್ಲಿ ಹೇಳುವುದಾದರೆ, ರಾಜ್ಯದ ಸಂದೇಶವನ್ನು ಕೊಂಡೊಯ್ಯುವ ಇಂತಹ ದೋಣಿಗಳು ಹೋಗುವ ಕ್ಷೇತ್ರಗಳಲ್ಲಿ, ಹತ್ತಿರತ್ತಿರ 4,00,000 ಜನರು ಜೀವಿಸುತ್ತಾರೆಂದು ಅಂದಾಜುಮಾಡಲಾಗಿದೆ. ಈ ದೋಣಿಗಳು ಮುಂದಕ್ಕೆ ಇನ್ನೂ ಸ್ವಲ್ಪಕಾಲ ಕಾರ್ಯನಿರತವಾಗಿರುವವು.
ಆತ್ಮಿಕ ದಾಹವನ್ನು ತಣಿಸುವುದು
ಫ್ಲಾವ್ಯೋ, ಸಾಂಟ ಲೂಸೀಆ ಎಂಬ ಹಳ್ಳಿಯಲ್ಲಿ ಜೀವಿಸುತ್ತಿದ್ದನು. ಇದು ಆ್ಯಂಡಿಸ್‌ನಲ್ಲಿ ಹೂಲ್ಯಾಕಾದ ಹತ್ತಿರವಿದೆ. ಅವನ ಇವಾಂಜೆಲಿಕಲ್ ಚರ್ಚಿನಲ್ಲಿ ಅವನಿಗೆ ನರಕಾಗ್ನಿಯ ಕುರಿತಾದ ಬೋಧನೆಯು ಕಲಿಸಲ್ಪಟ್ಟಿತ್ತು. ಎಷ್ಟೋ ವರ್ಷಗಳಿಂದ ಇವನು ಈ ನಿತ್ಯವಾದ ಧಗಧಗಿಸುವ ದಂಡನೆಯ ಭೀತಿಯಲ್ಲಿ ಜೀವಿಸುತ್ತಿದ್ದನು. ಒಬ್ಬ ಪ್ರೀತಿಯ ದೇವರು ಹೇಗೆ ನಿತ್ಯಕ್ಕೂ ಮನುಷ್ಯರನ್ನು ಬೆಂಕಿಯಲ್ಲಿ ಸುಡುವನು ಎಂದು ಅವನು ಅನೇಕವೇಳೆ ಕುತೂಹಲಪಟ್ಟನು. ನಂತರ ಟೀಟೊ ಎಂಬ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೇವಕನೊಬ್ಬನು ಆ ಹಳ್ಳಿಯನ್ನು ಸಂದರ್ಶಿಸಿದಾಗ, ಅವನು ಫ್ಲಾವ್ಯೋಗೆ ಭೇಟಿಯಿತ್ತನು.
ಫ್ಲಾವ್ಯೋ ಎಬ್ಬಿಸಿದ ಮೊದಲ ಪ್ರಶ್ನೆಗಳಲ್ಲಿ ಒಂದು, “ನರಕಾಗ್ನಿಯಲ್ಲಿ ಜನರು ನರಳುವರು ಎಂಬುದಾಗಿ ನಿಮ್ಮ ಧರ್ಮವು ಬೋಧಿಸುತ್ತದೋ?” ಎಂದಾಗಿತ್ತು. ಇಂತಹ ಒಂದು ವಿಚಾರವು ಅಸಂಬದ್ಧವಾಗಿದೆ ಮತ್ತು ಪ್ರೀತಿಯ ದೇವರಾಗಿರುವ ಯೆಹೋವನ ನಾಮಕ್ಕೆ ನಿಂದೆಯನ್ನು ತರುತ್ತದೆ ಎಂಬುದಾಗಿ ಟೀಟೊ ಉತ್ತರಿಸಿದನು. ಫ್ಲಾವ್ಯೋನ ಸ್ವಂತ ಬೈಬಲನ್ನು ಉಪಯೋಗಿಸುತ್ತಾ, ಸತ್ತವರಿಗೆ ಯಾವ ತಿಳುವಳಿಕೆಯೂ ಇಲ್ಲ ಮತ್ತು ದೇವರ ರಾಜ್ಯದ ಕೆಳಗೆ ಭೂಮಿಯ ಮೇಲೆ ಪುನರುತ್ಥಾನಕ್ಕಾಗಿ ಅವರು ಕಾಯುತ್ತಿದ್ದಾರೆ ಎಂಬುದನ್ನು ಟೀಟೊ ತೋರಿಸಿದನು. (ಪ್ರಸಂಗಿ 9:5; ಯೋಹಾನ 5:28, 29) ಇದು ಫ್ಲಾವ್ಯೋನ ಕಣ್ಣುಗಳನ್ನು ತೆರೆಸಿತ್ತು. ತತ್‌ಕ್ಷಣವೇ ಅವನು ಒಂದು ಬೈಬಲ್ ಅಧ್ಯಯನಕ್ಕಾಗಿ ಒಪ್ಪಿಕೊಂಡನು ಮತ್ತು ಶೀಘ್ರದಲ್ಲೇ ಒಬ್ಬ ದೀಕ್ಷಾಸ್ನಾನಿತ ಕ್ರೈಸ್ತನಾದನು.
ಕೃತಜ್ಞತಾಭಾವದ ಒಂದು ಹಳ್ಳಿ
ಇದಕ್ಕೆ ಮುಂಚೆ ಬೈಬಲಿನ ಒಂದು ಪ್ರತಿಯನ್ನೂ ನೋಡಿರದ ಹಳ್ಳಿಗರಿಗೆ ಅಥವಾ ಯೆಹೋವನ ಸಾಕ್ಷಿಗಳ ಕುರಿತಾಗಿ ಇಲ್ಲವೆ ಅವರು ಸಾರುವ ಸುವಾರ್ತೆಯ ಕುರಿತಾಗಿ ಎಂದೂ ಕೇಳಿಸಿಕೊಂಡಿರದ ಜನರಿರುವ ಹಳ್ಳಿಗಳಲ್ಲಿ ಸಾರುವುದು ಎಷ್ಟು ಪುಳಕಗೊಳಿಸುವಂಥ ವಿಷಯವಾಗಿರುವುದು ಎಂಬುದನ್ನು ತುಸು ಯೋಚಿಸಿ ನೋಡಿರಿ! ಇದು ರೋಸಾ, ಆಲೀಸಿಯಾ ಮತ್ತು ಸೆಸೀಲಿಯ ಎಂಬ ಮೂವರು ಪಯನೀಯರ್ ಸಹೋದರಿಯರ ಅನುಭವವಾಗಿತ್ತು. ಮಧ್ಯ ಪೆರೂವಿನಲ್ಲಿ 3,600 ಮೀಟರುಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ನೆಲೆಸಿರುವ ಈಸ್ಕೂಚಾಕಾ ಮತ್ತು ಕೊನೈಕಾ ಎಂಬ ಹಳ್ಳಿಗಳಲ್ಲಿ ಈ ಸಹೋದರಿಯರು ಪ್ರಚಾರಮಾಡಿದರು.
ಅವರು ಮೊದಲ ಹಳ್ಳಿಗೆ ಬಂದಿಳಿದಾಗ, ತಂಗುವುದಕ್ಕಾಗಿ ಎಲ್ಲಿಯೂ ಸ್ಥಳವಿರಲಿಲ್ಲ. ಅವರು ಸ್ಥಳಿಕ ಪೊಲೀಸ್ ಅಧಿಕಾರಿಯೊಂದಿಗೆ
ಮಾತಾಡುತ್ತಾ, ತಮ್ಮ ಭೇಟಿಯ ಉದ್ದೇಶವನ್ನು ವಿವರಿಸಿದರು. ಇದರ ಪರಿಣಾಮ? ಅವರು ಆ ರಾತ್ರಿ ಪೊಲೀಸ್ ಸ್ಟೇಷನ್‌ನಲ್ಲಿ ಉಳಿಯುವಂತೆ ಅವನು ಅನುಮತಿಸಿದನು. ಮರುದಿನ, ಹೆಚ್ಚು ಸ್ಥಾಯಿಯಾದ ತಂಗುದಾಣವನ್ನು ಪಯನೀಯರರು ಕಂಡುಕೊಂಡರು ಮತ್ತು ಅದು ಅವರ ಕಾರ್ಯಾಚರಣೆಯ ಕೇಂದ್ರವಾಯಿತು.ಶೀಘ್ರವೇ ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕಾಚರಣೆಯ ಕಾಲವು ಬಂತು. ಪಯನೀಯರರು ಈಗಾಗಲೇ ಈಸ್ಕೂಚಾಕಾ ಹಳ್ಳಿಯಲ್ಲಿರುವ ಎಲ್ಲ ಮನೆಗಳಿಗೆ ಭೇಟಿ ನೀಡಿದ್ದರು, ಬೈಬಲ್‌ಗಳನ್ನು ನೀಡಿದ್ದರು, ಮತ್ತು ಹಲವಾರು ಬೈಬಲ್ ಅಧ್ಯಯನಗಳನ್ನು ಆರಂಭಿಸಿದ್ದರು. ಜ್ಞಾಪಕಾಚರಣೆಗೆ ಮೊದಲು, ಅವರು ಈ ಸಂದರ್ಭದ ಕುರಿತಾದ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಿದರು. ಮತ್ತು ಆ ಆಮಂತ್ರಣ ಪತ್ರಿಕೆಗಳಲ್ಲಿ ಈ ಸ್ಮಾರಕೋತ್ಸವದ ಉದ್ದೇಶ ಮತ್ತು ಆಚರಣೆಯ ಸಮಯದಲ್ಲಿ ಉಪಯೋಗಿಸಲ್ಪಡುವ ಕುರುಹುಗಳ ಅರ್ಥವೇನು ಎಂಬುದನ್ನು ವಿವರಿಸಿದ್ದರು. ಈ ಸಂದರ್ಭದಲ್ಲಿ ಸಹಾಯಮಾಡಲಿಕ್ಕಾಗಿ ಕೆಲವು ಸಹೋದರರು ಆಮಂತ್ರಿಸಲ್ಪಟ್ಟಿದ್ದರು, ಮತ್ತು ಅವರಲ್ಲಿ ಒಬ್ಬನು ಭಾಷಣವನ್ನು ಕೊಟ್ಟನು. ಈ ವಿಶೇಷವಾದ ಸಂದರ್ಭಕ್ಕೆ ಆ ಚಿಕ್ಕ ಹಳ್ಳಿಯಿಂದ 50 ಮಂದಿ ಹಾಜರಾಗುವುದನ್ನು ನೋಡುವುದು ಎಂತಹ ಆನಂದವನ್ನು ತಂದಿತು! ಮೊಟ್ಟಮೊದಲ ಬಾರಿ, ಕರ್ತನ ಸಂಧ್ಯಾ ಭೋಜನದ ನಿಜಾರ್ಥವೇನು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಅಷ್ಟುಮಾತ್ರವಲ್ಲದೆ, ದೇವರ ವಾಕ್ಯವನ್ನು ತಮ್ಮ ಹಸ್ತಗಳಲ್ಲಿ ಹಿಡಿದುಕೊಂಡಿರುವುದು ಅವರಿಗೆಷ್ಟು ಅತ್ಯಮೂಲ್ಯವಾಗಿತ್ತು!
ಭಾರಗಳಿಂದ ಬಿಡುಗಡೆ
ಬೈಬಲ್ ಸತ್ಯದ ಚೈತನ್ಯದಾಯಕ ನೀರನ್ನು, ಸುಳ್ಳು ಧರ್ಮದ ದಾಸತ್ವದಲ್ಲಿರುವವರಿಗೆ ಕೊಂಡೊಯ್ಯುವುದು ಯಾವಾಗಲೂ ಸಂತೋಷದಾಯಕವಾಗಿರುತ್ತದೆ. ಪೀಸಾಕ್, ಪುರಾತನ ಇಂಕ ಸಾಮ್ರಾಜ್ಯದ ಒಂದು ಕಾಪು ಕೋಟೆಯಾಗಿತ್ತು. ಅಲ್ಲಿ ಜೀವಿಸುತ್ತಿರುವ ಅನೇಕ ಜನರಿಗೆ ನರಕಾಗ್ನಿಯ ಅಶಾಸ್ತ್ರೀಯ ಬೋಧನೆಯು ಕಲಿಸಲ್ಪಟ್ಟಿದೆ. ಅವರ ಪಾದ್ರಿಗಳು, ತಮ್ಮ ಮಧ್ಯಸ್ಥಿಕೆಯ ಮೂಲಕ ಮಾತ್ರವೇ ಅವರು ಪರಲೋಕಕ್ಕೆ ತಲಪಬಲ್ಲರು ಎಂದು ಹೇಳುತ್ತಾರೆ.
ಸ್ವಾಭಾವಿಕವಾಗಿಯೇ, ಇಂತಹ ಜನರು ಬೈಬಲ್ ಸತ್ಯದ ಚೈತನ್ಯದಾಯಕ ನೀರಿಗಾಗಿ ಬಾಯಾರಿದ್ದಾರೆ. ಮನೆ ಮನೆಯಿಂದ ಪ್ರಚಾರಮಾಡುತ್ತಿರುವಾಗ, ಸಾಂಟೀಗೊ ಎಂಬ ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಸೇವಕನಿಗೆ, ನೀತಿವಂತರು ಪರದೈಸ ಭೂಮಿಯಲ್ಲಿ ಜೀವಿಸುವ ಭವಿಷ್ಯವುಳ್ಳವರು ಎಂಬ ವಿಷಯವನ್ನು ಒಬ್ಬ ಮನುಷ್ಯನಿಗೆ ವಿವರಿಸುವ ಅವಕಾಶವು ಸಿಕ್ಕಿತು. (ಕೀರ್ತನೆ 37:11) ಮೃತಪಟ್ಟವರು ಪುನರುತ್ಥಾನಗೊಳಿಸಲ್ಪಡುವರು ಮತ್ತು ನಿತ್ಯಜೀವವನ್ನು ಪಡೆದುಕೊಳ್ಳುವ ಸಲುವಾಗಿ ಮಾನವಕುಲವು ಯೆಹೋವನ ಪರಿಪೂರ್ಣ ಮಾರ್ಗಗಳಲ್ಲಿ ಉಪದೇಶಿಸಲ್ಪಡುವುದು ಎಂಬುದನ್ನು ಸಾಂಟೀಗೊ ಬೈಬಲಿನಿಂದ ತೋರಿಸಿದನು. (ಯೆಶಾಯ 11:9) ಆ ಸಮಯದ ತನಕ, ಆ ಮನುಷ್ಯನು ಒಬ್ಬ ನಿಷ್ಠಾವಂತ ಕ್ಯಾಥೊಲಿಕನಾಗಿದ್ದನು, ಪ್ರೇತಾತ್ಮವಾದದಲ್ಲಿ ತೊಡಗಿದ್ದನು, ಮತ್ತು ವಿಪರೀತವಾಗಿ ಕುಡಿಯುತ್ತಿದ್ದನು. ಈಗ ಅವನಿಗೆ ಒಂದು ಬೈಬಲ್ ಆಧಾರಿತ ನಿರೀಕ್ಷೆಯಿತ್ತು ಮತ್ತು ಜೀವನದಲ್ಲಿ ಒಂದು ಗುರಿಯಿತ್ತು, ಅದು ಪರದೈಸಿನಲ್ಲಿ ಜೀವಿಸುವುದೇ ಆಗಿತ್ತು. ಅವನು ತನ್ನೆಲ್ಲ ಪ್ರೇತಾತ್ಮವಾದದ ಸಾಮಾನುಗಳನ್ನು ಸುಟ್ಟುಹಾಕಿದನು ಮತ್ತು ಕುಡಿತಕ್ಕೆ ವಿದಾಯ ಹೇಳಿದನು. ಅವನು ತನ್ನ ಕುಟುಂಬವನ್ನು ಒಟ್ಟುಗೂಡಿಸಿದನು ಮತ್ತು ಒಂದು ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡನು. ಕಾಲಕ್ರಮೇಣ ಆ ಕುಟುಂಬದಲ್ಲಿದ್ದ ಎಲ್ಲರೂ ಯೆಹೋವ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡರು ಮತ್ತು ದೀಕ್ಷಾಸ್ನಾನ ಪಡೆದುಕೊಂಡರು.
ಅತಿಥಿಸತ್ಕಾರವು ಅಂಗೀಕರಿಸಲ್ಪಡುತ್ತದೆ
ಆ ಬೆಟ್ಟನಿವಾಸಿಗಳು ತುಂಬ ಅತಿಥಿಸತ್ಕಾರವನ್ನು ತೋರಿಸುತ್ತಾರೆ. ಅವರ ಮನೆಗಳು ನಿರಾಡಂಬರವಾಗಿದ್ದು, ಜನರು ಕೊಂಚ ವರಮಾನವುಳ್ಳವರಾಗಿರುವುದಾದರೂ, ಅವರಲ್ಲಿ ಏನಿದೆಯೋ ಅದನ್ನು ಸಂದರ್ಶಕರಿಗೆ ನೀಡುತ್ತಾರೆ. ಬೈಬಲಿನ ಉಚ್ಚ ಮಟ್ಟಗಳನ್ನು ಕಲಿತುಕೊಳ್ಳುವ ಮುನ್ನ ಒಬ್ಬ ಆತಿಥೇಯನು ಸಂದರ್ಶಕನಿಗೆ, ಅವರು ಸಂಭಾಷಿಸುತ್ತಿರುವಾಗ ಜಗಿಯುವುದಕ್ಕಾಗಿ ಕೋಕಾ ಎಲೆಗಳನ್ನು ನೀಡಬಹುದು. ಆದರೆ ಸಮಯಾನಂತರ ಸಾಕ್ಷಿಯಾದಾಗ, ಅವನು ಒಂದು ಚಮಚ ಸಕ್ಕರೆಯನ್ನು ಕೊಡಬಹುದು, ಮತ್ತು ಪ್ರತ್ಯೇಕ ಸ್ಥಳಗಳಲ್ಲಿ ಇವೆರಡೂ ಒಂದೇ ಮೌಲ್ಯವುಳ್ಳವುಗಳಾಗಿವೆ.
ಒಬ್ಬ ಸಹೋದರನು ತನ್ನೊಂದಿಗೆ ಒಂದು ಪುನರ್ಭೇಟಿಗೆ ಬರುವಂತೆ ಒಬ್ಬ ಮಿಷನೆರಿಯನ್ನು ಕೇಳಿಕೊಂಡನು. ಎತ್ತರವಾದ ಪ್ರಪಾತದ ದಾರಿಯನ್ನು ಪ್ರಯಾಸಕರವಾಗಿ ಹತ್ತಿದ ನಂತರ, ತಮ್ಮ ಆಗಮನವನ್ನು ಮನೆಯವನಿಗೆ ತಿಳಿಸಲಿಕ್ಕಾಗಿ ಅವರು ಚಪ್ಪಾಳೆ ತಟ್ಟಿದರು. ಹುಲ್ಲು ಚಾವಣಿಯಿರುವ ಮನೆಯೊಳಕ್ಕೆ ಆಮಂತ್ರಿಸಲ್ಪಟ್ಟ ಅವರು, ಅದರ ತಗ್ಗಿರುವ ಬಾಗಿಲಿನೊಳಕ್ಕೆ ಹೋಗಲಿಕ್ಕಾಗಿ ಬಗ್ಗಬೇಕಾಯಿತು. ಅಲ್ಲಿ ತಾಯಿಯು ಮಣ್ಣಿನ ನೆಲದ ಮಧ್ಯೆ ಒಂದು ಕುಳಿಯನ್ನು ಮಾಡಿ, ಅದರಲ್ಲಿ ಒಂದು ಕಂಬಳಿಯನ್ನು ತುರುಕಿಸಿ, ನಂತರ ತನ್ನ ಮಗುವನ್ನು ಅದರಲ್ಲಿ ಇಟ್ಟಿದ್ದಳು. ಸಹೋದರರು ಅದರ ಸುತ್ತಲೂ ಜೋಪಾನವಾಗಿ ನಡೆದರು. ಆ ಕುಳಿಯಿಂದ ಹೊರಬರಲು ಸಾಧ್ಯವಿಲ್ಲದಿರುವ ಕಾರಣ, ದೊಡ್ಡವರು ಮಾತಾಡುತ್ತಿರುವಾಗ, ಈ ಮಗುವು ಅಲ್ಲಿಯೇ ಗುಳುಗುಳು ಸದ್ದುಮಾಡುತ್ತಾ ಆರಾಮವಾಗಿತ್ತು. ರಾಜ್ಯದ ಆಶೀರ್ವಾದಗಳ ಕುರಿತಾದ ಒಂದು ಹೃದಯೋಲ್ಲಾಸಕರ ಚರ್ಚೆಯನ್ನು ಅವರು ಮಾಡಿದ ನಂತರ, ಸ್ಥಳಿಕ ಪಾನದ ಒಂದು ದೊಡ್ಡ ಪಾತ್ರೆಯನ್ನು ಆ ಮಹಿಳೆಯು ತಂದಳು. ಶೀಘ್ರವೇ ಸಹೋದರರು ಆ ಪರ್ವತಬದಿಯ ಹೆಚ್ಚಿನ ಪುನರ್ಭೇಟಿಗಳಿಗಾಗಿ ತಮ್ಮ ಇಳಿಹಾದಿಯನ್ನು ಹಿಡಿದರು.
ಯಥೇಷ್ಟವಾದ ಕೊಯ್ಲು
ಈಗ ಈ ಪ್ರದೇಶದಲ್ಲಿ, ಸರಿಸುಮಾರು ನೂರು ಪ್ರತ್ಯೇಕಿತ ಗುಂಪುಗಳು ಇವೆ ಮತ್ತು ಒಂದು ಸಾವಿರಕ್ಕಿಂತಲೂ ಹೆಚ್ಚಿನ ಜನರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಅಧ್ಯಯನ ಮಾಡುತ್ತಿದ್ದಾರೆ. ಲೀಮದಲ್ಲಿರುವ ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್‌ನ ಪದವೀಧರರು, ಆ ಗುಂಪುಗಳನ್ನು ಸಭೆಗಳನ್ನಾಗಿ ಮಾಡುವುದಕ್ಕಾಗಿ ಕಳುಹಿಸಲ್ಪಟ್ಟಿದ್ದಾರೆ. ಸುಳ್ಳು ಧರ್ಮ ಮತ್ತು ಮೂಢನಂಬಿಕೆಗಳಿಗೆ ಇಷ್ಟು ದೀರ್ಘಕಾಲ ದಾಸರಾಗಿದ್ದ ಸಹೃದಯವುಳ್ಳ ವ್ಯಕ್ತಿಗಳು, ರಾಜ್ಯದ ಸಂದೇಶದ ಮೂಲಕ ಬಿಡುಗಡೆಯನ್ನು ಕಂಡುಕೊಂಡಿದ್ದಾರೆ! (ಯೋಹಾನ 8:32) ಸತ್ಯದ ನೀರಿಗಾಗಿರುವ ಅವರ ದಾಹವು ತಣಿಸಲ್ಪಡುತ್ತಿದೆ.
[ಪುಟ 10ರಲ್ಲಿರುವ ಚಿತ್ರ]
ಟಿಟಿಕಾಕ ಸರೋವರದ “ತೇಲುವ” ದ್ವೀಪಗಳಲ್ಲಿ ಸಾಕ್ಷಿಕೊಡುತ್ತಿರುವುದು