ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ!

ನಾವು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ!

ನಾವು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ!

“ಸರ್ವ ಪ್ರಯತ್ನವನ್ನೂ ಮಾಡು.” ಒಮ್ಮೆ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರೊಬ್ಬರು ಒಬ್ಬ ಮಿಷನೆರಿಗೆ ಈ ಪ್ರಾಯೋಗಿಕ ಸಲಹೆಯನ್ನು ಕೊಟ್ಟರು. ಆದರೆ ಒಬ್ಬ ಅನುಭವಸ್ಥ ಶುಶ್ರೂಷಕನಿಗೆ ಅಂತಹ ಮೂಲಭೂತ ಬುದ್ಧಿವಾದವು ಏಕೆ ಕೊಡಲ್ಪಟ್ಟಿತು? ಮಿಷನೆರಿಗಳು ತಿಗಣೆ, ಹಾವು, ಬಿಸಿಲು, ರೋಗ ಹಾಗೂ ಇನ್ನಿತರ ಕಷ್ಟತೊಂದರೆಗಳನ್ನು ದಿನಾಲೂ ತಡೆದುಕೊಳ್ಳುವಂತಹ ಧೀರ ವ್ಯಕ್ತಿಗಳಲ್ಲವೋ?

ವಾಸ್ತವದಲ್ಲಿ, ಯೆಹೋವನ ಸಾಕ್ಷಿಗಳ ಮಿಷನೆರಿಗಳು ಎಲ್ಲರಂತೆ ಸಾಮಾನ್ಯ ಸ್ತ್ರೀಪುರುಷರೇ ಆಗಿದ್ದಾರೆ. ಅವರು, ಯೆಹೋವನಿಗಾಗಿ ಮತ್ತು ತಮ್ಮ ಜೊತೆಮಾನವರಿಗಾಗಿರುವ ಆಳವಾದ ಪ್ರೀತಿಯಿಂದ ವಿದೇಶಗಳಲ್ಲಿ ಸೇವೆಮಾಡುವಂತೆ ಪ್ರಚೋದಿಸಲ್ಪಟ್ಟಿರುವ ಕ್ರೈಸ್ತರಾಗಿದ್ದಾರೆ. ಬಲಕ್ಕಾಗಿ ಯೆಹೋವನ ಕಡೆಗೆ ನೋಡುತ್ತಾ, ತಮ್ಮ ಸರ್ವ ಸಾಮರ್ಥ್ಯವನ್ನು ಉಪಯೋಗಿಸಿ ಆತನ ಸೇವೆಮಾಡಲು ಅವರು ಶ್ರಮಿಸುತ್ತಾರೆ.​—ಎಫೆಸ 6:10.

ಮಿಷನೆರಿ ಕೆಲಸದ ಕುರಿತು ಹೆಚ್ಚನ್ನು ತಿಳಿದುಕೊಳ್ಳಲಿಕ್ಕಾಗಿ, ನಾವು ಪಶ್ಚಿಮ ಆಫ್ರಿಕದಲ್ಲಿರುವ ಒಂದು ಮಿಷನೆರಿ ಗೃಹವನ್ನು ಸಂದರ್ಶಿಸುವುದರಲ್ಲಿ ಒಂದು ದಿನವನ್ನು ಕಳೆಯುತ್ತಿದ್ದೇವೆಂದು ಊಹಿಸಿಕೊಳ್ಳಿರಿ.

ಮಿಷನೆರಿ ಕೆಲಸದಲ್ಲಿ ಒಂದು ದಿನ

ಸಮಯ ಬೆಳಗ್ಗೆ 7 ಗಂಟೆಯಾಗಲಿದೆ. ಆ ದಿನಕ್ಕಾಗಿರುವ ಶಾಸ್ತ್ರವಚನವನ್ನು ಚರ್ಚಿಸುವುದರಲ್ಲಿ ಭಾಗವಹಿಸುವ ಉದ್ದೇಶದಿಂದ ನಾವು ಸಮಯಕ್ಕೆ ಸರಿಯಾಗಿ ಮಿಷನೆರಿ ಗೃಹಕ್ಕೆ ಬಂದುಮುಟ್ಟಿದ್ದೇವೆ. ಅಲ್ಲಿನ ಹತ್ತು ಮಿಷನೆರಿಗಳು ನಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ ಮತ್ತು ಬೆಳಗ್ಗಿನ ಉಪಾಹಾರದ ಮೇಜಿನ ಬಳಿ ನಮಗೆ ಸ್ಥಳ ಮಾಡಿಕೊಡುತ್ತಾರೆ. ನಾವು ಅವರೊಂದಿಗೆ ಪರಿಚಯಮಾಡಿಕೊಳ್ಳುತ್ತಿದ್ದಂತೆ, ಅನೇಕ ವರ್ಷಗಳಿಂದ ಮಿಷನೆರಿ ನೇಮಕದಲ್ಲಿ ಸೇವೆಮಾಡುತ್ತಿರುವ ಒಬ್ಬ ಸಹೋದರಿಯು, ಶುಶ್ರೂಷೆಯಲ್ಲಿ ತಮಗಾದ ಮೋಜಿನ ಅನುಭವವನ್ನು ತಿಳಿಸಲು ಆರಂಭಿಸುತ್ತಾರೆ. ಆದರೆ ನಮ್ಮ ಸಂಭಾಷಣೆಯು ಕ್ರಮೇಣ ನಿಂತುಹೋಗುತ್ತದೆ, ಏಕೆಂದರೆ ಆ ದಿನದ ಚರ್ಚೆಯನ್ನು ನಡೆಸುವ ಚೇರ್‌ಮನ್‌, ಈಗ ದಿನದ ವಚನವನ್ನು ಪರಿಗಣಿಸುವ ಸಮಯವಾಗಿದೆ ಎಂದು ಆ ಸಂತೋಷಭರಿತ ಗುಂಪಿಗೆ ಜ್ಞಾಪಕಹುಟ್ಟಿಸುತ್ತಾರೆ. ಆ ಚರ್ಚೆಯು ಫ್ರೆಂಚ್‌ ಭಾಷೆಯಲ್ಲಿ ನಡೆಯುತ್ತದೆ. ನಾವು ಆ ಭಾಷೆಯನ್ನಾಡದಿದ್ದರೂ, ವಿದೇಶಗಳಲ್ಲಿ ಹುಟ್ಟಿ ಬೆಳೆದ ಮಿಷನೆರಿಗಳು ಆ ಭಾಷೆಯಲ್ಲಿ ಪಾಂಡಿತ್ಯ ಪಡೆಯುತ್ತಿದ್ದಾರೆಂಬುದು, ಅವರು ಮಾತಾಡುತ್ತಿರುವ ರೀತಿಯಿಂದ ಸ್ಪಷ್ಟವಾಗುತ್ತದೆ.

ಶಾಸ್ತ್ರೀಯ ಚರ್ಚೆಯ ಬಳಿಕ ಮನಃಪೂರ್ವಕವಾದ ಪ್ರಾರ್ಥನೆಯು ಮಾಡಲ್ಪಡುತ್ತದೆ. ತದನಂತರ ಉಪಾಹಾರವನ್ನು ಮಾಡಲು ಸಮಯವಿರುತ್ತದೆ. ನಮಗೆ ಎಷ್ಟು ಬೇಕೋ ಅಷ್ಟು ಸೀರಿಯಲ್‌ ಅನ್ನು ಬಡಿಸಿಕೊಂಡಾಗ, ನಮ್ಮ ಪಕ್ಕದಲ್ಲಿ ಕುಳಿತುಕೊಂಡಿದ್ದ ಮಿಷನೆರಿಯೊಬ್ಬರು ಬಾಳೆಹಣ್ಣಿನ ತುಂಡುಗಳನ್ನು ಅದರ ಮೇಲೆ ಹಾಕಿ ತಿನ್ನುವಂತೆ ನಮ್ಮನ್ನು ಉತ್ತೇಜಿಸಿದರು. ನಮಗೆ ಬಾಳೆಹಣ್ಣು ಇಷ್ಟವಿಲ್ಲ ಎಂದು ನಾವು ವಿವರಿಸಿದಾಗ, ಒಮ್ಮೆ ಸ್ಥಳಿಕವಾಗಿ ಬೆಳೆದ ಬಾಳೆಹಣ್ಣುಗಳ ರುಚಿನೋಡಿದರೆ ಖಂಡಿತವಾಗಿಯೂ ನೀವು ಮನಸ್ಸನ್ನು ಬದಲಾಯಿಸುವಿರಿ ಎಂದು ಅವರು ನಮಗೆ ಹೇಳಿದರು. ಆದುದರಿಂದ ನಮ್ಮ ಸೀರಿಯಲ್‌ನಲ್ಲಿ ಬಾಳೆಹಣ್ಣಿನ ತುಂಡುಗಳನ್ನು ಹಾಕಿದೆವು. ಅವರು ಹೇಳಿದ್ದು ಎಷ್ಟು ನಿಜ! ಈ ಬಾಳೆಹಣ್ಣುಗಳು ತುಂಬ ರುಚಿಕರವಾಗಿವೆ​—ಐಸ್‌ ಕ್ರೀಮ್‌ನಷ್ಟು ಸಿಹಿಯಾಗಿವೆ! ನಮಗೆ ಉಪಾಹಾರವಾಗಿ ನೀಡಲ್ಪಡುತ್ತಿದ್ದ, ಕಿರಿದಾದ ಉದ್ದ ಫ್ರೆಂಚ್‌ ಬ್ರೆಡ್‌, ಮಿಷನೆರಿ ಗೃಹದಿಂದ ಸ್ವಲ್ಪ ದೂರದಲ್ಲಿದ್ದ ಒಂದು ಚಿಕ್ಕ ಅಂಗಡಿಯಲ್ಲಿ ಈ ಬೆಳಗ್ಗೆ ತಯಾರಿಸಲ್ಪಟ್ಟದ್ದಾಗಿತ್ತೆಂದು ನಮಗೆ ಭರವಸೆ ನೀಡಲಾಯಿತು.

ಉಪಾಹಾರದ ಬಳಿಕ, ಬೆನ್‌ ಮತ್ತು ಕ್ಯಾರನ್‌ ಎಂದು ನಾವು ಕರೆಯುವಂತಹ ಒಬ್ಬ ಮಿಷನೆರಿ ದಂಪತಿಯೊಂದಿಗೆ ಇಡೀ ದಿನವನ್ನು ಕಳೆಯುವೆವು. ಪಶ್ಚಿಮ ಆಫ್ರಿಕದ ಈ ದೇಶದಲ್ಲಿರುವ ಫಲದಾಯಕ ಟೆರಿಟೊರಿಯ ಕುರಿತಾಗಿ ನಾವು ಕೇಳಿಸಿಕೊಂಡಿದ್ದೇವೆ. ಮತ್ತು ಆ ವರದಿಗಳನ್ನು ಖಚಿತಪಡಿಸಿಕೊಳ್ಳಲು ನಾವು ಕಾತುರರಾಗಿದ್ದೇವೆ.

ನಾವು ಬಸ್‌ ಸ್ಟಾಪಿಗೆ ಬಂದಾಗ, ಸುಮಾರು ಹನ್ನೆರಡು ಜನರು ಅಲ್ಲಿ ಕಾಯುತ್ತಿರುವುದನ್ನು ನೋಡುತ್ತೇವೆ. ಸ್ವಲ್ಪದರಲ್ಲೇ, ನಮ್ಮ ಮಿಷನೆರಿ ದಂಪತಿಯು ಒಂದು ಬೈಬಲ್‌ ವಿಷಯದ ಬಗ್ಗೆ ಒಬ್ಬ ಸ್ತ್ರೀಯನ್ನೂ ಅವಳ ಮಗನನ್ನೂ ಉತ್ಸಾಹಭರಿತ ಸಂಭಾಷಣೆಯಲ್ಲಿ ಒಳಗೂಡಿಸುತ್ತಿದ್ದಾರೆ. ನಮಗೆ ಫ್ರೆಂಚ್‌ ಭಾಷೆಯು ಬರದಿದ್ದ ಕಾರಣ, ನಾವು ಅಲ್ಲಿ ಸುಮ್ಮನೆ ನಿಂತುಕೊಂಡು ನಸುನಗಲು ಮಾತ್ರ ಶಕ್ತರಾಗಿದ್ದೆವು! ಆ ಸ್ತ್ರೀಯು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ಸ್ವೀಕರಿಸುತ್ತಿರುವಾಗ ಬಸ್ಸು ಬರುತ್ತದೆ ಮತ್ತು ಪ್ರತಿಯೊಬ್ಬರೂ ಒಟ್ಟಿಗೆ ಬಸ್ಸನ್ನು ಏರಲು ಪ್ರಯತ್ನಿಸುತ್ತಾರೆ! ನಾವು ಪ್ರಯಾಸದಿಂದ ಬಸ್ಸನ್ನು ಹತ್ತುತ್ತಿರುವಾಗ, ಒಳನುಗ್ಗಲು ಪ್ರಯತ್ನಿಸುತ್ತಿರುವ ಗುಂಪು ಹಿಂದಿನಿಂದ ನಮ್ಮನ್ನು ನೂಕುತ್ತದೆ. ನಾವು ಬಸ್ಸಿನಲ್ಲಿ ಮುಂಭಾಗದಿಂದ ಹಿಂದಕ್ಕೆ ಹೋಗುತ್ತಿರುವಾಗ ಸರಿಯಾಗಿ ನಿಲ್ಲುವುದು ಸಹ ಒಂದು ಪಂಥಾಹ್ವಾನವಾಗಿರುತ್ತದೆ. ಚಾಲಕನು ಬಸ್ಸನ್ನು ಸ್ಟಾರ್ಟ್‌ಮಾಡಿದ ಕೂಡಲೆ ನಾವು ಕಂಬಿಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೆ. ಆಗಿಂದಾಗ್ಗೆ ಬಸ್ಸು ಒಂದೊಂದು ಸ್ಟಾಪ್‌ನಲ್ಲಿ ನಿಲ್ಲುತ್ತದೆ ಮತ್ತು ಇನ್ನಷ್ಟು ಜನರು ಒಳನುಗ್ಗುತ್ತಾರೆ. ನಾವು ಜೊತೆ ಪ್ರಯಾಣಿಕರನ್ನು ನೋಡಿ ಮುಗುಳ್ನಗುತ್ತೇವೆ ಮತ್ತು ಅವರು ಸಹ ನಮ್ಮ ಕಡೆಗೆ ಮುಗುಳ್ನಗೆ ಬೀರುತ್ತಾರೆ. ನಾವು ಅವರೊಂದಿಗೆ ಸಂವಾದಿಸಲು ಸಾಧ್ಯವಿರುತ್ತಿದ್ದರೆ ಎಷ್ಟು ಒಳ್ಳೇದಿತ್ತು ಎಂದು ನಾವೆಷ್ಟು ಹಾರೈಸುತ್ತೇವೆ!

ನಮ್ಮ ಬಸ್ಸು ವೇಗವಾಗಿ ಚಲಿಸುತ್ತಿರುವಾಗ, ನಾವು ಕಿಟಕಿಯಿಂದ ಹೊರಗೆ ನೋಡುತ್ತೇವೆ. ಬೀದಿಗಳಲ್ಲಿ ಜನರ ಆತುರಭರಿತ ಚಟುವಟಿಕೆಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಇಬ್ಬರು ಸ್ತ್ರೀಯರು ತಮ್ಮ ತಲೆಗಳ ಮೇಲೆ ಭಾರವಾದ ಮೂಟೆಗಳನ್ನು ಹೊತ್ತುಕೊಂಡು ನಡೆಯುತ್ತಿದ್ದಾರೆ. ಅವರಲ್ಲಿ ಒಬ್ಬಳು ನೀರಿನ ದೊಡ್ಡ ಪಾತ್ರೆಯನ್ನು ಹೊತ್ತುಕೊಂಡು ಹೋಗುತ್ತಿದ್ದಾಳೆ. ಒಬ್ಬ ಸಾಹಸಿ ವ್ಯಕ್ತಿಯು ಕಾಲುದಾರಿಯಲ್ಲಿ ಒಂದು ಕಂಬಳಿಯನ್ನು ಹಾಸಿದ್ದಾನೆ ಮತ್ತು ತಾನು ಮಾರಲು ಬಯಸುವಂತಹ ಕೆಲವೊಂದು ಅಲ್ಪ ಬೆಲೆಯ ಸಾಮಾನುಗಳನ್ನು ಅದರ ಮೇಲೆ ಹರಡಿದ್ದಾನೆ. ಖರೀದಿಸಸಾಧ್ಯವಿರುವ ಹಾಗೂ ಮಾರಸಾಧ್ಯವಿರುವ ಪ್ರತಿಯೊಂದನ್ನೂ ಖರೀದಿಸುತ್ತಿರುವ ಹಾಗೂ ಮಾರುತ್ತಿರುವಂತಹ ಜನರು ಎಲ್ಲ ಕಡೆಗಳಲ್ಲಿಯೂ ಇದ್ದಾರೆ.

ಆಗ, ನನ್ನ ಪಕ್ಕದಲ್ಲಿ ನಿಂತಿರುವ ಬೆನ್‌ಗೆ ಇದ್ದಕ್ಕಿದ್ದಂತೆ ತನ್ನ ಕಾಲನ್ನು ಯಾರೋ ಕುಕ್ಕುತ್ತಿರುವ ಅನಿಸಿಕೆಯಾಗುತ್ತದೆ. ಅದೇನಾಗಿರಸಾಧ್ಯವಿದೆ? ಬಸ್ಸಿನಲ್ಲಿ ಜನರು ಕಿಕ್ಕಿರಿದಿದ್ದಾರೆ, ಆದರೆ ಪುನಃ ಯಾರೋ ಕುಕ್ಕುತ್ತಿದ್ದಾರೆ. ಅವನು ಕೆಳಗೆ ನೋಡಲು ಪ್ರಯತ್ನಿಸಿದನು. ಅಲ್ಲಿ ನೋಡಿದರೆ, ಅವನ ಕಾಲುಗಳ ಬಳಿಯಿರುವ ಚೀಲದಲ್ಲಿ ಒಂದು ಜೀವಂತ ಬಾತುಕೋಳಿಯಿದೆ. ಆಗಿಂದಾಗ್ಗೆ ಅದು ಚೀಲದಿಂದ ತನ್ನ ತಲೆಯನ್ನು ಹೊರಗೆಹಾಕಿ, ಬೆನ್‌ನ ಕಾಲನ್ನು ಕುಕ್ಕುತ್ತಿದೆ! ಬಾತುಕೋಳಿಯ ಯಜಮಾನನು ಅದನ್ನು ಮಾರಲಿಕ್ಕಾಗಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿರಬಹುದು ಎಂದು ಬೆನ್‌ ವಿವರಿಸುತ್ತಾನೆ.

ನಾವು ನಮ್ಮ ಟೆರಿಟೊರಿಯನ್ನು ತಲಪಿದಾಗ, ಸಾಧಾರಣವಾದ ಒಂದು ಆಫ್ರಿಕನ್‌ ನೆರೆಹೊರೆಯನ್ನು ಸಂದರ್ಶಿಸುವೆವು ಎಂಬುದನ್ನು ತಿಳಿದು ನಮಗೆ ಸಂತೋಷವಾಯಿತು. ಮೊದಲನೆಯ ಮನೆಯ ಕಡೆಗೆ ಹೋದಾಗ, ಮನೆಯವನನ್ನು ಕರೆಯಲಿಕ್ಕಾಗಿ ಬೆನ್‌ ತುಂಬ ಹುರುಪಿನಿಂದ ಜೋರಾಗಿ ಚಪ್ಪಾಳೆ ತಟ್ಟುತ್ತಾನೆ. ಲೋಕದ ಈ ಭಾಗದಲ್ಲಿ ಜನರು “ಮನೆ ಬಾಗಿಲನ್ನು ತಟ್ಟುವುದು” ಹೀಗೆಯೇ. ಒಬ್ಬ ಯುವಕನು ಹೊರಗೆ ಬಂದು, ತಾನು ತುಂಬ ಕಾರ್ಯಮಗ್ನನಿದ್ದೇನೆ ಎಂದು ವಿವರಿಸುತ್ತಾನೆ. ಆದರೆ ಸ್ವಲ್ಪ ತಡವಾಗಿ ಬಂದು ಭೇಟಿಯಾಗುವಂತೆ ನಮ್ಮನ್ನು ಕೇಳಿಕೊಳ್ಳುತ್ತಾನೆ.

ಮುಂದಿನ ಮನೆಯಲ್ಲಿ ನಾವು ಬೆನ್‌ಗೆ ಅರ್ಥವಾಗದಿರುವಂತಹ ಒಂದು ಪ್ರಾಂತಭಾಷೆಯಲ್ಲಿ ಮಾತಾಡುವ ಒಬ್ಬ ಸ್ತ್ರೀಯನ್ನು ಭೇಟಿಯಾಗುತ್ತೇವೆ. ಅವಳು ತನ್ನ ಮಗನನ್ನು ಕರೆದು, ಬೆನ್‌ ಹೇಳಲಿಕ್ಕಿರುವ ವಿಷಯವನ್ನು ಭಾಷಾಂತರಿಸುವಂತೆ ಕೇಳಿಕೊಳ್ಳುತ್ತಾಳೆ. ಬೆನ್‌ ಮಾತಾಡಿ ಮುಗಿಸಿದಾಗ, ಬೈಬಲ್‌ ವಿಷಯಗಳ ಕುರಿತಾದ ಒಂದು ಬ್ರೋಷರನ್ನು ಆ ಸ್ತ್ರೀ ಸ್ವೀಕರಿಸಿದಳು. ಮತ್ತು ಅವಳ ಮಗನು ಅದರ ಕುರಿತು ಅವಳಿಗೆ ನಂತರ ವಿವರಿಸುತ್ತೇನೆ ಎಂದು ಮಾತುಕೊಡುತ್ತಾನೆ. ಮೂರನೆಯ ಮನೆಯಲ್ಲಿ, ಅನೇಕ ಯುವ ಜನರು ಮುಂದಿನ ಅಂಗಳದಲ್ಲಿ ಕುಳಿತುಕೊಂಡಿದ್ದಾರೆ. ಅವರಲ್ಲಿ ಇಬ್ಬರು ಬೇಗನೆ ತಮ್ಮ ಕುರ್ಚಿಗಳನ್ನು ಖಾಲಿಮಾಡಿ, ಸಂದರ್ಶಕರು ಕುಳಿತುಕೊಳ್ಳುವಂತೆ ಸಹಕರಿಸುತ್ತಾರೆ. ಆರಾಧನೆಯಲ್ಲಿ ಶಿಲುಬೆಯ ಉಪಯೋಗದ ಕುರಿತು ಉತ್ಸಾಹಭರಿತ ಚರ್ಚೆಯು ನಡೆಯುತ್ತದೆ. ಮುಂದಿನ ವಾರ ಇನ್ನೂ ಹೆಚ್ಚಿನ ಸಂಭಾಷಣೆಯನ್ನು ಮಾಡುವುದಕ್ಕಾಗಿ ಏರ್ಪಾಡುಗಳು ಮಾಡಲ್ಪಡುತ್ತವೆ. ಮೊದಲ ಮನೆಯಲ್ಲಿ ನಾವು ಭೇಟಿಯಾದ ಯುವಕನನ್ನು ಪುನಃ ಭೇಟಿಮಾಡುವ ಸಮಯವಾಗಿದೆ. ಬೀದಿಯ ಇನ್ನೊಂದು ಮೂಲೆಯಲ್ಲಿ ಯುವ ಜನರೊಂದಿಗೆ ನಡೆದ ನಮ್ಮ ಚರ್ಚೆಯ ಕುರಿತು ಹೇಗೋ ಇವನು ತಿಳಿದುಕೊಂಡಿದ್ದಾನೆ. ಅವನಿಗೆ ಬೈಬಲಿನ ಕುರಿತು ಅನೇಕ ಪ್ರಶ್ನೆಗಳಿವೆ ಮತ್ತು ತನ್ನೊಂದಿಗೆ ಬೈಬಲ್‌ ಅಧ್ಯಯನಮಾಡುವಂತೆ ಅವನು ಕೇಳಿಕೊಳ್ಳುತ್ತಾನೆ. ತನ್ನ ಕಾರ್ಯತಖ್ತೆಯನ್ನು ಪರೀಕ್ಷಿಸಿದ ಬಳಿಕ ಬೆನ್‌, ಮುಂದಿನ ವಾರ ಅದೇ ವೇಳೆಗೆ ಅವನ ಮನೆಗೆ ಹಿಂದಿರುಗಲು ಒಪ್ಪಿಕೊಳ್ಳುತ್ತಾನೆ. ಮಧ್ಯಾಹ್ನದ ಊಟಕ್ಕಾಗಿ ಮಿಷನೆರಿ ಗೃಹಕ್ಕೆ ಹಿಂದಿರುಗುತ್ತಿದ್ದಾಗ, ತಾವು ತಮ್ಮ ಬೈಬಲ್‌ ಅಭ್ಯಾಸದ ಚಟುವಟಿಕೆಯನ್ನು ತುಂಬ ಜಾಗರೂಕತೆಯಿಂದ ಯೋಜಿಸಬೇಕು, ಇಲ್ಲದಿದ್ದರೆ ನಡೆಸಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚು ಬೈಬಲ್‌ ಅಭ್ಯಾಸಗಳನ್ನು ತಾವು ಸುಲಭವಾಗಿ ಆರಂಭಿಸಸಾಧ್ಯವಿದೆ ಎಂದು ಬೆನ್‌ ಮತ್ತು ಕ್ಯಾರನ್‌ ವಿವರಿಸುತ್ತಾರೆ.

ಅವರಿಬ್ಬರೂ ಫ್ರೆಂಚ್‌ ಭಾಷೆಯನ್ನು ನಿರರ್ಗಳವಾಗಿ ಮಾತಾಡುತ್ತಿರುವುದಕ್ಕಾಗಿ ನಾವು ಅವರನ್ನು ಶ್ಲಾಘಿಸುತ್ತೇವೆ. ತಾನು ಮತ್ತು ಕ್ಯಾರನ್‌ ಆರು ವರ್ಷಗಳಿಂದ ಮಿಷನೆರಿಗಳಾಗಿ ಸೇವೆಮಾಡುತ್ತಿದ್ದೇವೆ ಮತ್ತು ಫ್ರೆಂಚ್‌ ಭಾಷೆಯೊಂದಿಗೆ ಚಿರಪರಿಚಿತರಾಗಲು ಆರಂಭಿಸಿದ್ದೇವೆ ಎಂದು ಬೆನ್‌ ವಿವರಿಸುತ್ತಾನೆ. ಒಂದು ಹೊಸ ಭಾಷೆಯನ್ನು ಕಲಿಯುವುದು ಸುಲಭವೇನಲ್ಲ, ಆದರೆ ನಮ್ಮ ಸತತ ಪ್ರಯತ್ನಗಳಿಗೆ ಪ್ರತಿಫಲ ಸಿಕ್ಕಿದೆ ಎಂದು ಅವರು ಹೇಳುತ್ತಾರೆ.

ಮಧ್ಯಾಹ್ನ 12:30ಕ್ಕೆ ಎಲ್ಲ ಮಿಷನೆರಿಗಳು ಊಟಕ್ಕಾಗಿ ಮೇಜಿನ ಬಳಿ ಒಟ್ಟುಗೂಡುತ್ತಾರೆ. ಪ್ರತಿ ದಿನ ಬೇರೆ ಬೇರೆ ಮಿಷನೆರಿಗಳು ಬೆಳಗ್ಗಿನ ಉಪಾಹಾರವನ್ನು ಹಾಗೂ ಮಧ್ಯಾಹ್ನದ ಊಟಗಳನ್ನು ತಯಾರಿಸಲು ಮತ್ತು ತದನಂತರ ಪಾತ್ರೆಗಳನ್ನು ತೊಳೆಯಲು ನೇಮಿಸಲ್ಪಡುತ್ತಾರೆ ಎಂಬುದು ನಮಗೆ ತಿಳಿದುಬರುತ್ತದೆ. ಇಂದು ಮಿಷನೆರಿಗಳಲ್ಲಿ ಒಬ್ಬರು, ಬಾಯಿಯಲ್ಲಿ ನೀರೂರಿಸುವಂತಹ ಅಡಿಗೆಯನ್ನು, ಅಂದರೆ ಹುರಿದ ಕೋಳಿಯನ್ನೂ ಆಲೂಗೆಡ್ಡೆಯ ಉಪ್ಪೇರಿಯನ್ನೂ (ಫ್ರೆಂಚ್‌-ಫ್ರೈಡ್‌ ಪೊಟೆಟೋಸ್‌) ಟೊಮೆಟೊ ಸ್ಯಾಲಡನ್ನೂ ತಯಾರಿಸಿದ್ದಾರೆ​—ಅದು ಅವರ ವಿಶೇಷ ಖಾದ್ಯವಾಗಿದೆ!

ಮಧ್ಯಾಹ್ನಕ್ಕಾಗಿ ಬೆನ್‌ ಮತ್ತು ಕ್ಯಾರನ್‌ರ ಯೋಜನೆಗಳೇನು? ಮಧ್ಯಾಹ್ನ 1:00 ಗಂಟೆಯಿಂದ 3:00 ಗಂಟೆಯ ವರೆಗೆ ಪ್ರತಿಯೊಬ್ಬರೂ ಬಿಸಿಲಿನ ಕಾರಣ ಮನೆಯೊಳಗಿರುತ್ತಾರೆ. ಆದುದರಿಂದ ಸಾಮಾನ್ಯವಾಗಿ ಮಿಷನೆರಿಗಳು ಆ ಸಮಯವನ್ನು ಅಧ್ಯಯನಮಾಡಲಿಕ್ಕಾಗಿ ಅಥವಾ ತುಸು ವಿಶ್ರಾಂತಿ ಪಡೆಯಲಿಕ್ಕಾಗಿ ಉಪಯೋಗಿಸುತ್ತಾರೆ ಎಂದು ಅವರು ವಿವರಿಸುತ್ತಾರೆ. ಮಿಷನೆರಿಗಳು ಈ ರೂಢಿಗೆ ಒಗ್ಗಿಕೊಳ್ಳಲು ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಕ್ಯಾರನ್‌ ನಮಗೆ ಹೇಳುವಾಗ ನಾವು ಆಶ್ಚರ್ಯಪಡುವುದಿಲ್ಲ.

ತುಸು ವಿಶ್ರಾಂತಿ ಪಡೆದ ಬಳಿಕ, ನಾವು ಕ್ಷೇತ್ರ ಸೇವೆಗೆ ಹಿಂದಿರುಗುತ್ತೇವೆ. ಬಹಳ ಸಮಯದಿಂದ ಬೆನ್‌ ಸಂಪರ್ಕಿಸಲು ಪ್ರಯತ್ನಿಸಿರುವ ಒಬ್ಬ ಆಸಕ್ತ ವ್ಯಕ್ತಿಯು ಈ ಬಾರಿಯೂ ಮನೆಯಲ್ಲಿ ಸಿಕ್ಕುವುದಿಲ್ಲ. ಬೆನ್‌ ಚಪ್ಪಾಳೆ ತಟ್ಟಿದಾಗ, ಅವನಿಗೆ ಬದಲಾಗಿ ಇಬ್ಬರು ಯುವಕರು ಮನೆ ಬಾಗಿಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮನೆಯ ಯಜಮಾನನು ತಮಗೆ ಬೆನ್‌ನ ಭೇಟಿಗಳ ಕುರಿತು ಹೇಳಿದ್ದಾನೆ ಮತ್ತು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಬೈಬಲ್‌ ಅಭ್ಯಾಸ ಸಹಾಯಕವನ್ನು ತಾವು ಸಹ ಪಡೆದುಕೊಳ್ಳುವಂತೆ ಬಲವಾಗಿ ಶಿಫಾರಸ್ಸುಮಾಡಿದ್ದಾನೆ ಎಂದು ಅವರು ನಮಗೆ ಹೇಳುತ್ತಾರೆ. ನಾವು ಸಂತೋಷದಿಂದ ಅವರಿಗೆ ಆ ಪುಸ್ತಕದ ಪ್ರತಿಯನ್ನು ಕೊಡುತ್ತೇವೆ. ತದನಂತರ, ನಾವು ಒಂದು ಬಸ್ಸನ್ನು ಹಿಡಿದು, ಒಬ್ಬ ಆಸಕ್ತ ಸ್ತ್ರೀಯೊಂದಿಗೆ ಕ್ಯಾರನ್‌ ಬೈಬಲ್‌ ಅಧ್ಯಯನವನ್ನು ನಡೆಸಲಿರುವಂತಹ ಒಂದು ಕ್ಷೇತ್ರಕ್ಕೆ ಹೊರಟೆವು.

ಜನರಿಂದ ಕಿಕ್ಕಿರಿದಿರುವ ಬೀದಿಗಳ ಮೂಲಕ ನಾವು ಪ್ರಯಾಣಿಸುತ್ತಿದ್ದಾಗ, ಒಂದು ದಿನ ತಾನು ಇತರ ಪ್ರಯಾಣಿಕರೊಂದಿಗೆ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಈ ಸ್ತ್ರೀಯನ್ನು ಭೇಟಿಯಾದೆ ಎಂದು ಕ್ಯಾರನ್‌ ನಮಗೆ ಹೇಳುತ್ತಾಳೆ. ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕ್ಯಾರನ್‌ ಆ ಸ್ತ್ರೀಗೆ ಒಂದು ಟ್ರ್ಯಾಕ್ಟನ್ನು ಕೊಟ್ಟಳು. ಆ ಸ್ತ್ರೀ ಟ್ರ್ಯಾಕ್ಟನ್ನು ಓದಿದಳು ಮತ್ತು ಬೇರೊಂದು ಟ್ರ್ಯಾಕ್ಟನ್ನು ಕೊಡುವಂತೆ ಕೇಳಿಕೊಂಡಳು. ತದನಂತರ ಅವಳು ಆ ಟ್ರ್ಯಾಕ್ಟನ್ನು ಇನ್ನಷ್ಟು ಆಸಕ್ತಿಯಿಂದ ಓದಿದಳು. ತಮ್ಮ ಪ್ರಯಾಣದ ಅಂತ್ಯದಲ್ಲಿ ಕ್ಯಾರನ್‌ ಆ ಸ್ತ್ರೀಯನ್ನು ಅವಳ ಮನೆಯಲ್ಲಿ ಭೇಟಿಯಾಗುವ ಏರ್ಪಾಡುಗಳನ್ನು ಮಾಡಿದಳು ಮತ್ತು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ನಲ್ಲಿ ಒಂದು ಫಲದಾಯಕ ಬೈಬಲ್‌ ಅಧ್ಯಯನವನ್ನು ಆರಂಭಿಸಿದಳು. ಇಂದು, ಆ ಬ್ರೋಷರಿನಲ್ಲಿರುವ ಐದನೆಯ ಪಾಠವನ್ನು ಅಭ್ಯಾಸಿಸಲು ಕ್ಯಾರನ್‌ ಹೋಗುತ್ತಿದ್ದಾಳೆ.

ನಾವು ಕ್ಷೇತ್ರ ಸೇವೆಯಲ್ಲಿ ಇಡೀ ದಿನ ಆನಂದವನ್ನು ಪಡೆದುಕೊಂಡೆವು. ಆದರೆ ಮಿಷನೆರಿ ಕೆಲಸದ ಕುರಿತು ನಮ್ಮ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಉಳಿದಿದ್ದವು. ನಮಗೋಸ್ಕರ ಲಘು ಊಟವನ್ನು ಸಿದ್ಧಪಡಿಸಿದ ಬಳಿಕ ನಮ್ಮ ಎಲ್ಲ ಪ್ರಶ್ನೆಗಳನ್ನು ಉತ್ತರಿಸುತ್ತೇವೆ ಎಂದು ನಮ್ಮ ಅತಿಥೇಯರು ನಮಗೆ ಭರವಸೆ ನೀಡಿದರು.

ಅವರು ತಮ್ಮ ಕಾರ್ಯದ ವೇಗವನ್ನು ಕಾಪಾಡಿಕೊಳ್ಳುವ ವಿಧ

ಹುರಿದ ಮೊಟ್ಟೆ, ಫ್ರೆಂಚ್‌ ಬ್ರೆಡ್‌ ಮತ್ತು ಚೀಸನ್ನು ಸವಿಯುತ್ತಿರುವಾಗ ನಾವು ಮಿಷನೆರಿ ಜೀವಿತದ ಕುರಿತು ಹೆಚ್ಚನ್ನು ಕಲಿಯುತ್ತೇವೆ. ಸಾಮಾನ್ಯವಾಗಿ ಸೋಮವಾರಗಳಂದು ಮಿಷನೆರಿಗಳು ವಿಶ್ರಾಂತಿ ಪಡೆದುಕೊಳ್ಳುತ್ತಾರೆ ಅಥವಾ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುತ್ತಾರೆ. ಹೆಚ್ಚಿನ ಮಿಷನೆರಿಗಳು ಆ ದಿನದಲ್ಲಿ ಸ್ವಲ್ಪ ಸಮಯವನ್ನು ತಮ್ಮ ಕುಟುಂಬಗಳಿಗೆ ಮತ್ತು ಮಿತ್ರರಿಗೆ ಪತ್ರಗಳನ್ನು ಬರೆಯಲಿಕ್ಕಾಗಿಯೂ ಉಪಯೋಗಿಸುತ್ತಾರೆ. ಮನೆಯಿಂದ ಸುದ್ದಿಯನ್ನು ಪಡೆದುಕೊಳ್ಳುವುದು ಅವರಿಗೆ ಅತಿ ಪ್ರಾಮುಖ್ಯ ವಿಷಯವಾಗಿದೆ, ಮತ್ತು ಮಿಷನೆರಿಗಳು ಪತ್ರಗಳನ್ನು ಕಳುಹಿಸುವುದರಲ್ಲಿ ಹಾಗೂ ಪಡೆದುಕೊಳ್ಳುವುದರಲ್ಲಿ ಬಹಳ ಸಂತೋಷವನ್ನು ಅನುಭವಿಸುತ್ತಾರೆ.

ಮಿಷನೆರಿಗಳು ಬಹಳ ಹತ್ತಿರದಲ್ಲಿ ಜೀವಿಸಿ ಕೆಲಸಮಾಡುತ್ತಾರಾದ್ದರಿಂದ, ಜೊತೆ ಮಿಷನೆರಿಗಳೊಂದಿಗೆ ಬೆರೆಯುವ ಮೂಲಕ ಮತ್ತು ಆತ್ಮಿಕ ವಿಷಯಗಳನ್ನು ಚರ್ಚಿಸುವ ಮೂಲಕ ಒಳ್ಳೇ ಸಂವಾದವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ, ವೈಯಕ್ತಿಕ ಬೈಬಲ್‌ ಅಧ್ಯಯನದ ಕಾರ್ಯತಖ್ತೆಯ ಜೊತೆಗೆ, ಪ್ರತಿ ಸೋಮವಾರ ಸಾಯಂಕಾಲ ಮಿಷನೆರಿಗಳು ಒಟ್ಟಿಗೆ ಕಾವಲಿನಬುರುಜು ಪತ್ರಿಕೆಯೊಂದಿಗೆ ಬೈಬಲನ್ನು ಅಧ್ಯಯನಮಾಡುತ್ತಾರೆ. ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿರುವ ಮಿಷನೆರಿಗಳು ಒಟ್ಟಿಗೆ ಜೀವಿಸುವಾಗ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಅನಿವಾರ್ಯವಾಗಿರುವುದಾದರೂ, ಕುಟುಂಬ ಅಧ್ಯಯನದ ಆತ್ಮಿಕ ಒದಗಿಸುವಿಕೆಯು ಅವರು ಒಂದು ಶಾಂತಿಭರಿತವಾದ ಹಾಗೂ ಐಕ್ಯಭಾವದ ವಾತಾವರಣವನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುತ್ತದೆ ಎಂದು ಬೆನ್‌ ಹೇಳುತ್ತಾನೆ. ಒಬ್ಬನು ತಾನೇ ಒಬ್ಬ ದೊಡ್ಡ ವ್ಯಕ್ತಿ ಎಂದು ನೆನಸದಿರುವಂತೆ ಸಹ ಸಹಾಯಮಾಡುತ್ತದೆ ಎಂದು ಅವನು ಒತ್ತಿಹೇಳುತ್ತಾನೆ.

ದೀನಭಾವವು ಸಹ ಅತ್ಯಗತ್ಯವಾಗಿದೆ. ಮಿಷನೆರಿಗಳು ಕಳುಹಿಸಲ್ಪಡುವುದು ಬೇರೆಯವರಿಂದ ಸೇವೆಮಾಡಿಸಿಕೊಳ್ಳಲಿಕ್ಕಲ್ಲ, ಬದಲಾಗಿ ಇತರರ ಸೇವೆಮಾಡಲಿಕ್ಕಾಗಿಯೇ. ನಮ್ಮ ಮಿಷನೆರಿಗಳ ಅನಿಸಿಕೆಯೇನೆಂದರೆ, ಯಾವುದೇ ಭಾಷೆಯಲ್ಲಾಗಲಿ, “ನನ್ನಿಂದ ತಪ್ಪಾಯಿತು” ಎಂದು ಹೇಳುವುದು ಅತಿ ಕಷ್ಟಕರ ಸಂಗತಿಯಾಗಿದೆ, ಅದರಲ್ಲೂ ವಿಶೇಷವಾಗಿ ಯಾವುದೇ ಉದ್ದೇಶವಿಲ್ಲದೆ ಹೇಳಿದ ಅಥವಾ ಮಾಡಿದ ಸಂಗತಿಗಾಗಿ ಒಬ್ಬ ವ್ಯಕ್ತಿಯು ಕ್ಷಮೆಯಾಚಿಸುವಾಗಲಂತೂ ಇದು ಖಂಡಿತ ಸತ್ಯ. ತನ್ನ ಗಂಡನ ನಿರ್ದಯ ನಡತೆಗಾಗಿ ಕ್ಷಮೆಯಾಚಿಸಿ, ಭಾರಿ ವಿಪತ್ತಿಗೆ ನಡೆಸಸಾಧ್ಯವಿದ್ದ ಒಂದು ಸನ್ನಿವೇಶವನ್ನು ಶಾಂತಗೊಳಿಸಿದಂಥ ಅಬೀಗೈಲಳ ಕುರಿತಾದ ಬೈಬಲ್‌ ಉದಾಹರಣೆಯನ್ನು ಬೆನ್‌ ನಮಗೆ ಜ್ಞಾಪಕಹುಟ್ಟಿಸುತ್ತಾನೆ. (1 ಸಮುವೇಲ 25:​23-28) ಒಬ್ಬ ಒಳ್ಳೆಯ ಮಿಷನೆರಿಯಾಗಿರಬೇಕಾದರೆ ‘ಸಮಾಧಾನದಿಂದ’ ಜೀವಿಸುವ ಸಾಮರ್ಥ್ಯವು ಅತ್ಯಂತ ಪ್ರಾಮುಖ್ಯ ಅಂಶವಾಗಿದೆ.​—2 ಕೊರಿಂಥ 13:11.

ಮಿಷನೆರಿಗಳು ತಿಂಗಳಿಗೊಮ್ಮೆ ಒಂದು ಮೀಟಿಂಗನ್ನು ನಡೆಸುತ್ತಾರೆ. ಆ ಸಮಯದಲ್ಲಿ ಕುಟುಂಬದ ಮೇಲೆ ಪ್ರಭಾವ ಬೀರುತ್ತಿರುವ ಅಂಶಗಳು ಹಾಗೂ ಕಾರ್ಯತಖ್ತೆಯಲ್ಲಾದ ಬದಲಾವಣೆಗಳ ಕುರಿತು ಚರ್ಚಿಸಲಾಗುತ್ತದೆ. ತದನಂತರ, ಎಲ್ಲರೂ ವಿಶೇಷ ಸಿಹಿತಿಂಡಿಯನ್ನು ಸವಿಯುತ್ತಾರೆ. ಇದು ನಮಗೆ ತುಂಬ ಪ್ರಾಯೋಗಿಕವಾದ ಹಾಗೂ ರುಚಿಕರವಾದ ಏರ್ಪಾಡಾಗಿ ಕಂಡುಬರುತ್ತದೆ.

ರಾತ್ರಿಯೂಟ ಮುಗಿದ ಬಳಿಕ ನಾವು ಮಿಷನೆರಿ ಗೃಹವನ್ನು ಸುತ್ತಿನೋಡುತ್ತೇವೆ. ಮಿಷನೆರಿ ಗೃಹವು ಸಾಧಾರಣವಾದದ್ದಾಗಿದೆಯಾದರೂ, ಅದನ್ನು ತುಂಬ ಸ್ವಚ್ಛವಾಗಿಡುವ ಕೆಲಸದಲ್ಲಿ ಮಿಷನೆರಿಗಳು ಸಹಕರಿಸುತ್ತಾರೆ ಎಂಬುದನ್ನು ನಾವು ಗಮನಿಸುತ್ತೇವೆ. ಅಲ್ಲಿ ಒಂದು ರೆಫ್ರಿಜರೇಟರ್‌, ಒಂದು ವಾಷಿಂಗ್‌ ಮಷೀನ್‌ ಮತ್ತು ಒಂದು ಸ್ಟೌವ್‌ ಇದೆ. ಈ ಪಶ್ಚಿಮ ಆಫ್ರಿಕದಂತಹ ಉಷ್ಣವಲಯದ ದೇಶಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯೂ ಲಭ್ಯವಿರಬಹುದು ಎಂದು ಕ್ಯಾರನ್‌ ನಮಗೆ ಹೇಳುತ್ತಾಳೆ. ಸೂಕ್ತವಾದ ವಸತಿಗಳು, ಹಿತಕರವಾದ ಆಹಾರ ಮತ್ತು ಸರಳವಾದ ಆರೋಗ್ಯ ಮುನ್ನೆಚ್ಚರಿಕೆಗಳು, ಮಿಷನೆರಿಗಳು ಆರೋಗ್ಯದಿಂದಿರುವಂತೆ ಹಾಗೂ ಫಲದಾಯಕರಾಗಿರುವಂತೆ ಸಹಾಯಮಾಡುತ್ತವೆ.

ಸಕಾರಾತ್ಮಕ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು

ನಾವು ನೋಡಿರುವ ಪ್ರತಿಯೊಂದು ಸಂಗತಿಯಿಂದ ನಾವು ಪ್ರಭಾವಿತರಾಗಿದ್ದೇವೆ. ಹಾಗಾದರೆ ನಾವು ಸಹ ಮಿಷನೆರಿ ಕೆಲಸವನ್ನು ಮಾಡಸಾಧ್ಯವಿದೆಯೋ? ಈ ವಿಷಯದಲ್ಲಿ ನಾವು ಹೇಗೆ ನಿಶ್ಚಿತರಾಗಿರಸಾಧ್ಯವಿದೆ? ನಮ್ಮ ಅತಿಥೇಯರು ಆಲೋಚಿಸಿ ನೋಡಲಿಕ್ಕಾಗಿ ಕೆಲವೊಂದು ಅಂಶಗಳನ್ನು ನಮಗೆ ಕೊಡುತ್ತಾರೆ.

ಮೊದಲಾಗಿ, ಕ್ರೈಸ್ತ ಮಿಷನೆರಿಗಳು ಸಾಹಸಮಯ ಜೀವನವನ್ನು ಅರಸುತ್ತಾ ಹೋಗುವುದಿಲ್ಲ ಎಂದು ಅವರು ನಮಗೆ ಹೇಳುತ್ತಾರೆ. ದೇವರ ಅದ್ಭುತಕರ ವಾಗ್ದಾನಗಳ ಕುರಿತು ಕಲಿಯಲು ಬಯಸುವಂಥ ಪ್ರಾಮಾಣಿಕ ಹೃದಯದ ಜನರನ್ನು ಹುಡುಕುವುದೇ ಅವರ ಕೆಲಸವಾಗಿದೆ. ಮಿಷನೆರಿಗಳು ಪ್ರತಿ ತಿಂಗಳು ಕ್ಷೇತ್ರ ಸೇವೆಯಲ್ಲಿ ಕಡಿಮೆಪಕ್ಷ 140 ತಾಸುಗಳನ್ನು ವಿನಿಯೋಗಿಸುತ್ತಾರೆ, ಆದುದರಿಂದ ಶುಶ್ರೂಷೆಗಾಗಿರುವ ಪ್ರೀತಿಯು ಅತ್ಯಾವಶ್ಯಕ.

‘ಆದರೆ ಹಾವು, ಹಲ್ಲಿ, ಮತ್ತು ತಿಗಣೆಗಳ ಕುರಿತಾಗಿ ಏನು?’ ಎಂದು ನಾವು ಕುತೂಹಲಪಡುತ್ತೇವೆ. ಅನೇಕ ಮಿಷನೆರಿ ನೇಮಕಗಳಲ್ಲಿ ಇವುಗಳನ್ನು ಕಂಡುಕೊಳ್ಳಸಾಧ್ಯವಿದೆಯಾದರೂ, ಮಿಷನೆರಿಗಳು ಆ ಸನ್ನಿವೇಶಕ್ಕೆ ಒಗ್ಗಿಕೊಳ್ಳುತ್ತಾರೆ ಎಂದು ಬೆನ್‌ ನಮಗೆ ಹೇಳುತ್ತಾನೆ. ಪ್ರತಿಯೊಂದು ಮಿಷನೆರಿ ನೇಮಕದಲ್ಲಿ ಅದರದ್ದೇ ಆದ ಅಪೂರ್ವ ಮನೋಹರತೆಯಿದೆ ಮತ್ತು ಸಕಾಲದಲ್ಲಿ ಮಿಷನೆರಿಗಳು ತಮ್ಮ ನೇಮಕದ ಸಕಾರಾತ್ಮಕ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ ಎಂದು ಸಹ ಅವನು ಹೇಳುತ್ತಾನೆ. ಈ ಮುಂಚೆ “ಭಿನ್ನ”ವಾಗಿ ಕಂಡುಬರುತ್ತಿದ್ದ ಪರಿಸ್ಥಿತಿಗಳು, ಅತಿ ಬೇಗನೆ ಸಾಮಾನ್ಯವಾಗಿಬಿಡುತ್ತವೆ ಮತ್ತು ಕೆಲವೊಮ್ಮೆ ಅವು ಆನಂದದಾಯಕವೂ ಆಗುತ್ತವೆ. ಅನೇಕ ವರ್ಷಗಳ ವರೆಗೆ ಪಶ್ಚಿಮ ಆಫ್ರಿಕದಲ್ಲಿ ಸೇವೆಮಾಡಿದ ಒಬ್ಬ ಮಿಷನೆರಿಯು, ವೈಯಕ್ತಿಕ ಹಂಗುಗಳ ಕಾರಣದಿಂದಾಗಿ ಆ ಸೇವೆಯನ್ನು ಬಿಟ್ಟು ಸ್ವದೇಶಕ್ಕೆ ಹಿಂದಿರುಗುವಂತೆ ಒತ್ತಾಯಿಸಲ್ಪಟ್ಟರು. ಅನೇಕ ವರ್ಷಗಳ ಹಿಂದೆ ತನ್ನ ನೇಮಕಕ್ಕಾಗಿ ಸ್ವದೇಶವನ್ನು ಬಿಟ್ಟುಹೋಗುವುದು ಅಷ್ಟೇನೂ ಕಷ್ಟಕರವಾಗಿರಲಿಲ್ಲ, ಆದರೆ ತನ್ನ ನೇಮಕವನ್ನು ಬಿಟ್ಟುಬರುವುದು ತುಂಬ ಕಷ್ಟಕರವಾಗಿತ್ತು ಎಂದು ಅವರು ಹೇಳಿದರು. ಅವರ ಮಿಷನೆರಿ ನೇಮಕವು ಅವರ ಮನೆಯಾಗಿ ಪರಿಣಮಿಸಿತ್ತು.

ನೀವು ಸಿದ್ಧರಿದ್ದೀರೋ?

ಬೆನ್‌ ಮತ್ತು ಕ್ಯಾರನ್‌ ಆಲೋಚಿಸಿ ನೋಡಲಿಕ್ಕಾಗಿ ನಮಗೆ ಅನೇಕ ಅಂಶಗಳನ್ನು ಕೊಟ್ಟಿದ್ದಾರೆ. ನಿಮ್ಮ ಕುರಿತಾಗಿ ಏನು? ಒಂದು ವಿದೇಶೀ ಕ್ಷೇತ್ರದಲ್ಲಿ ಒಬ್ಬ ಮಿಷನೆರಿಯೋಪಾದಿ ಸೇವೆಮಾಡುವುದರ ಕುರಿತು ನೀವೆಂದಾದರೂ ಯೋಚಿಸಿದ್ದೀರೋ? ಹಾಗಿರುವಲ್ಲಿ, ಆ ಗುರಿಯಿಂದ ನೀವು ಎಣಿಸಿದಷ್ಟು ದೂರದಲ್ಲಿರಲಿಕ್ಕಿಲ್ಲ. ಇದಕ್ಕೆ ಆವಶ್ಯಕವಾಗಿರುವ ಮುಖ್ಯ ವಿಷಯಗಳಲ್ಲಿ ಒಂದು, ಪೂರ್ಣ ಸಮಯದ ಶುಶ್ರೂಷೆಗಾಗಿ ಪ್ರೀತಿ ಮತ್ತು ಜನರಿಗೆ ಸಹಾಯಮಾಡುವ ಕೆಲಸದಲ್ಲಿ ಆನಂದವೇ ಆಗಿದೆ. ಮಿಷನೆರಿಗಳು ಅತಿಮಾನುಷರೇನಲ್ಲ, ಅವರು ಸಹ ಸಾಮಾನ್ಯ ಸ್ತ್ರೀಪುರುಷರಾಗಿದ್ದಾರೆ ಎಂಬುದು ನೆನಪಿರಲಿ. ಅತಿ ಪ್ರಾಮುಖ್ಯವಾದ ಒಂದು ಕೆಲಸವನ್ನು ಪೂರೈಸಲಿಕ್ಕಾಗಿ ತಮ್ಮ ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

[ಪುಟ 27ರಲ್ಲಿರುವ ಚಿತ್ರಗಳು]

ಪ್ರತಿ ದಿನವನ್ನು ಬೈಬಲಿನ ಒಂದು ವಚನದ ಚರ್ಚೆಯೊಂದಿಗೆ ಆರಂಭಿಸಲಾಗುತ್ತದೆ

[ಪುಟ 28, 29ರಲ್ಲಿರುವ ಚಿತ್ರಗಳು]

ಮಿಷನೆರಿಯೋಪಾದಿ ಒಬ್ಬರ ಜೀವಿತವು ತುಂಬ ಸಂತೃಪ್ತಿದಾಯಕವಾಗಿರಸಾಧ್ಯವಿದೆ

[ಪುಟ 29ರಲ್ಲಿರುವ ಚಿತ್ರಗಳು]

ಆಫ್ರಿಕದ ದೃಶ್ಯಗಳು