ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಒಪ್ಪುವ ಹೃದಯವನ್ನು ಪಡೆದುಕೊಳ್ಳಿರಿ

ಯೆಹೋವನಿಗೆ ಒಪ್ಪುವ ಹೃದಯವನ್ನು ಪಡೆದುಕೊಳ್ಳಿರಿ

ಯೆಹೋವನಿಗೆ ಒಪ್ಪುವ ಹೃದಯವನ್ನು ಪಡೆದುಕೊಳ್ಳಿರಿ

“ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.”​—ಕೀರ್ತನೆ 51:10.

1, 2. ನಾವು ನಮ್ಮ ಹೃದಯದ ಕುರಿತು ಏಕೆ ಆಸಕ್ತರಾಗಿರಬೇಕು?

ಅವನು ಎತ್ತರ ಮೈಕಟ್ಟಿನವನೂ, ನೋಡಲು ಸುಂದರನೂ ಆಗಿದ್ದನು. ಅವನನ್ನು ನೋಡಿದಾಕ್ಷಣ ಪ್ರವಾದಿಯಾದ ಸಮುವೇಲನು ಎಷ್ಟು ಪ್ರಭಾವಿತನಾದನೆಂದರೆ, ಸೌಲನ ನಂತರ ರಾಜನಾಗಿರಲು ದೇವರಿಂದ ಆಯ್ಕೆಮಾಡಲ್ಪಟ್ಟವನು ಇವನೇ ಎಂದು ನೆನಸಿದನು. ಆದರೆ ಯೆಹೋವನು ಹೇಳಿದ್ದು: “ನೀನು [ಆ ಮಗನ] ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” ಯೆಹೋವನಿಂದ ಆಯ್ಕೆಮಾಡಲ್ಪಟ್ಟವನು ಇಷಯನ ಕೊನೆಯ ಮಗನಾದ ದಾವೀದನೇ ಆಗಿದ್ದನು. ಅವನು ‘ಆತನಿಗೆ [“ಆತನ ಹೃದಯಕ್ಕೆ,” NW] ಒಪ್ಪುವ ಪುರುಷನಾಗಿದ್ದನು.’​—1 ಸಮುವೇಲ 13:14; 16:7.

2 ದೇವರು ಮನುಷ್ಯರ ಹೃದಯದಲ್ಲೇನಿದೆ ಎಂಬುದನ್ನು ನೋಡಬಲ್ಲನು. ಇದನ್ನು ಆತನು ತದನಂತರ ಸ್ಪಷ್ಟವಾಗಿಯೇ ಹೇಳಿದನು: “ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವನೂ ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.” (ಯೆರೆಮೀಯ 17:10) ಹೌದು, ‘ಯೆಹೋವನು ಹೃದಯಗಳನ್ನು ಶೋಧಿಸುವವನಾಗಿದ್ದಾನೆ.’ (ಜ್ಞಾನೋಕ್ತಿ 17:3) ಆದರೆ ಯೆಹೋವನು ಶೋಧಿಸುವಂಥ ಮನುಷ್ಯನಲ್ಲಿನ ಆ ಹೃದಯವು ಏನಾಗಿದೆ? ಮತ್ತು ಆತನಿಗೆ ಒಪ್ಪುವಂಥ ಒಂದು ಹೃದಯವನ್ನು ಪಡೆದುಕೊಳ್ಳಲು ನಾವೇನು ಮಾಡಸಾಧ್ಯವಿದೆ?

“ಹೃದಯದ ಗುಪ್ತ ವ್ಯಕ್ತಿ”

3, 4. “ಹೃದಯ” ಎಂಬ ಪದವನ್ನು ಬೈಬಲಿನಲ್ಲಿ ಪ್ರಮುಖವಾಗಿ ಯಾವ ಅರ್ಥದಲ್ಲಿ ಉಪಯೋಗಿಸಲಾಗಿದೆ? ಉದಾಹರಣೆಗಳನ್ನು ಕೊಡಿರಿ.

3 “ಹೃದಯ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು, ಶಾಸ್ತ್ರವಚನಗಳಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಸಲ ಕಂಡುಬರುತ್ತದೆ. ಆದರೆ ಕನ್ನಡ ಬೈಬಲಿನಲ್ಲಿ ಈ ಪದವು ಎಲ್ಲ ಕಡೆಗಳಲ್ಲಿ ಹೃದಯ ಎಂದೇ ಭಾಷಾಂತರಿಸಲ್ಪಟ್ಟಿಲ್ಲ. ಅದನ್ನು ಮನಸ್ಸು, ಬುದ್ಧಿ, ಮನಸ್ಸಾಕ್ಷಿ, ಚಿತ್ತ ಎಂದು ಭಿನ್ನ ಭಿನ್ನವಾಗಿ ಭಾಷಾಂತರಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಆ ಹೀಬ್ರು ಪದವು ಸಾಂಕೇತಿಕ ಹೃದಯಕ್ಕೆ ಸೂಚಿತವಾಗಿದೆ. ಉದಾಹರಣೆಗಾಗಿ, ಯೆಹೋವನು ಪ್ರವಾದಿಯಾದ ಮೋಶೆಗೆ ಹೇಳಿದ್ದು: “ಇಸ್ರಾಯೇಲ್ಯರು ನನಗೋಸ್ಕರ ಕಾಣಿಕೆಯನ್ನು ಮೀಸಲಿಡಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆ ಕಾಣಿಕೆಯನ್ನು ತೆಗೆದುಕೊಳ್ಳಬೇಕು.” ಮತ್ತು “ಯಾರಾರನ್ನು ಹೃದಯವು ಪ್ರೇರಿಸಿತೋ . . . ಅವರೆಲ್ಲರೂ ಬಂದು” ಕಾಣಿಕೆಗಳನ್ನು ಕೊಟ್ಟರು. (ವಿಮೋಚನಕಾಂಡ 25:2; 35:21) ಸ್ಪಷ್ಟವಾಗಿಯೇ, ಸಾಂಕೇತಿಕ ಹೃದಯದ ಒಂದು ಅಂಶವು, ಪ್ರೇರಣೆಯಾಗಿದೆ​—ಕ್ರಿಯೆಗೈಯುವಂತೆ ನಮ್ಮನ್ನು ಪ್ರೇರೇಪಿಸುವ ಆಂತರಿಕ ಶಕ್ತಿಯಾಗಿದೆ. ನಮ್ಮ ಸಾಂಕೇತಿಕ ಹೃದಯವು ನಮ್ಮ ಭಾವನೆಗಳು, ಅನಿಸಿಕೆಗಳು, ಇಚ್ಛೆಗಳು ಮತ್ತು ಒಲವುಗಳನ್ನೂ ಪ್ರತಿಬಿಂಬಿಸುತ್ತದೆ. ಹೃದಯವು ಕೋಪದಿಂದ ಕುದಿಯುತ್ತಿರಬಹುದು, ಭಯದಿಂದ ತುಂಬಿರಬಲ್ಲದು, ದುಃಖದಿಂದ ಛಿದ್ರಗೊಂಡಿರಬಲ್ಲದು ಅಥವಾ ಆನಂದದಿಂದ ಹಿಗ್ಗಬಲ್ಲದು. (ಕೀರ್ತನೆ 27:​3, NW; 39:3; ಯೋಹಾನ 16:22; ರೋಮಾಪುರ 9:2) ಅದು ಅಹಂಕಾರಿಯಾಗಿರಬಲ್ಲದು ಇಲ್ಲವೇ ನಮ್ರವಾಗಿರಬಲ್ಲದು, ಪ್ರೀತಿಪರವಾಗಿರಬಲ್ಲದು ಅಥವಾ ದ್ವೇಷಭರಿತವಾಗಿರಬಲ್ಲದು.​—ಜ್ಞಾನೋಕ್ತಿ 16:​5, NW; ಮತ್ತಾಯ 11:​29, NW; 1 ಪೇತ್ರ 1:22.

4 ಅಂತೆಯೇ, “ಹೃದಯ”ಕ್ಕಾಗಿರುವ ಹೀಬ್ರು ಪದವನ್ನು ಹೆಚ್ಚಾಗಿ ಪ್ರಚೋದನೆ ಮತ್ತು ಭಾವನೆಗಳೊಂದಿಗೆ ಸಂಬಂಧಿಸಲಾಗಿದೆ, ಆದರೆ “ಮನಸ್ಸು” ಎಂಬ ಪದವನ್ನು ವಿಶೇಷವಾಗಿ ಬುದ್ಧಿಯೊಂದಿಗೆ ಸಂಬಂಧಿಸಲಾಗಿದೆ. ಈ ಪದಗಳು ಶಾಸ್ತ್ರವಚನಗಳಲ್ಲಿ ಕಂಡುಬರುವಾಗ ಅವುಗಳನ್ನು ಈ ವಿಧದಲ್ಲಿ ಅರ್ಥಮಾಡಿಕೊಳ್ಳಬೇಕು. (ಮತ್ತಾಯ 22:​37, NW; ಫಿಲಿಪ್ಪಿ 4:7) ಆದರೆ ಬೈಬಲಿನಲ್ಲಿ “ಹೃದಯ” ಹಾಗೂ “ಮನಸ್ಸು” ಎಂಬ ಪದಗಳು ಪರಸ್ಪರ ಸಂಬಂಧವುಳ್ಳವುಗಳಾಗಿವೆ. ದೃಷ್ಟಾಂತಕ್ಕಾಗಿ ಮೋಶೆಯು ಇಸ್ರಾಯೇಲ್ಯರಿಗೆ ಪ್ರೇರೇಪಿಸಿದ್ದು: “ಯೆಹೋವನೊಬ್ಬನೇ ದೇವರು ಎಂಬುದನ್ನು ನಿಮ್ಮ ಮನಸ್ಸಿಗೆ [ಅಥವಾ ಹೀಬ್ರು ಭಾಷೆಯಲ್ಲಿ, “ಹೃದಯಕ್ಕೆ”] ಪುನಃ ತಂದುಕೊಳ್ಳಬೇಕು.” (ಧರ್ಮೋಪದೇಶಕಾಂಡ 4:​39, NW ಪಾದಟಿಪ್ಪಣಿ) ತನ್ನ ವಿರುದ್ಧ ಸಂಚು ನಡೆಸುತ್ತಿದ್ದ ಶಾಸ್ತ್ರಿಗಳಿಗೆ ಯೇಸು ಹೇಳಿದ್ದು: “ನೀವು ಯಾಕೆ ನಿಮ್ಮ ಮನಸ್ಸಿನಲ್ಲಿ [“ಹೃದಯದಲ್ಲಿ,” NW] ಕೆಟ್ಟ ಆಲೋಚನೆಯನ್ನು ಮಾಡುತ್ತೀರಿ?” (ಮತ್ತಾಯ 9:4) “ತಿಳುವಳಿಕೆ,” “ಜ್ಞಾನ,” ಮತ್ತು “ವಿವೇಚನಾಶಕ್ತಿಯನ್ನು” ಸಹ ಹೃದಯದೊಂದಿಗೆ ಸಂಬಂಧಿಸಸಾಧ್ಯವಿದೆ. (1 ಅರಸುಗಳು 3:12; ಜ್ಞಾನೋಕ್ತಿ 15:14; ಮಾರ್ಕ 2:6, NW) ಆದುದರಿಂದ, ಸಾಂಕೇತಿಕ ಹೃದಯವು ನಮ್ಮ ಬುದ್ಧಿಯನ್ನೂ ಅಂದರೆ ನಮ್ಮ ವಿಚಾರಗಳು ಅಥವಾ ನಮ್ಮ ತಿಳುವಳಿಕೆಯನ್ನೂ ಒಳಗೂಡಸಾಧ್ಯವಿದೆ.

5. ಸಾಂಕೇತಿಕ ಹೃದಯವು ಏನನ್ನು ಪ್ರತಿನಿಧಿಸುತ್ತದೆ?

5 ಒಂದು ಕೃತಿಗನುಸಾರ, ಸಾಂಕೇತಿಕ ಹೃದಯವು “ಸಾಮಾನ್ಯವಾಗಿ ಕೇಂದ್ರ ಭಾಗವನ್ನು, ಅಂತರಂಗವನ್ನು ಮತ್ತು ಹೀಗೆ, ತನ್ನ ವಿಭಿನ್ನ ಚಟುವಟಿಕೆಗಳಲ್ಲಿ, ತನ್ನ ಆಸೆಗಳು, ಒಲವುಗಳು, ಭಾವನೆಗಳು, ಭಾವೋದ್ರೇಕಗಳು, ಉದ್ದೇಶಗಳು, ತನ್ನ ವಿಚಾರಗಳು, ಗ್ರಹಣಶಕ್ತಿಗಳು, ಊಹೆಗಳು, ತನ್ನ ವಿವೇಕ, ಜ್ಞಾನ, ಕೌಶಲ, ತನ್ನ ನಂಬಿಕೆಗಳು ಮತ್ತು ತನ್ನ ತರ್ಕಗಳು, ತನ್ನ ಜ್ಞಾಪಕಶಕ್ತಿ ಮತ್ತು ತನ್ನ ಅರಿವಿನಲ್ಲಿ ತನ್ನನ್ನೇ ವ್ಯಕ್ತಪಡಿಸುವ ಆಂತರಿಕ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ.” ನಾವು ನಿಜವಾಗಿ ಅಂತರಂಗದಲ್ಲಿ ಏನಾಗಿದ್ದೇವೆಂಬುದನ್ನು, “ಹೃದಯದ ಗುಪ್ತ ವ್ಯಕ್ತಿಯನ್ನು” ಅದು ಪ್ರತಿನಿಧಿಸುತ್ತದೆ. (1 ಪೇತ್ರ 3:4, NW) ಯೆಹೋವನು ಅದನ್ನು ನೋಡಿ, ಪರೀಕ್ಷಿಸುತ್ತಾನೆ. ಆದುದರಿಂದಲೇ ದಾವೀದನು ಹೀಗೆ ಪ್ರಾರ್ಥಿಸಸಾಧ್ಯವಿತ್ತು: “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.” (ಕೀರ್ತನೆ 51:10) ನಾವು ಒಂದು ಶುದ್ಧ ಹೃದಯವನ್ನು ಹೇಗೆ ಪಡೆದುಕೊಳ್ಳಬಹುದು?

ದೇವರ ವಾಕ್ಯವನ್ನು “ನಿಮ್ಮ ಹೃದಯಗಳಿಗೆ ಅನ್ವಯಿಸಿಕೊಳ್ಳಿರಿ”

6. ಇಸ್ರಾಯೇಲ್ಯರು ಮೋವಾಬ್‌ ಬಯಲಿನಲ್ಲಿ ಪಾಳೆಯ ಹೂಡಿದ್ದಾಗ, ಮೋಶೆಯು ಯಾವ ಬುದ್ಧಿವಾದವನ್ನು ನೀಡಿದನು?

6 ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ, ಮೋವಾಬ್‌ ಬಯಲಿನಲ್ಲಿ ಒಟ್ಟುಗೂಡಿದ್ದ ಇಸ್ರಾಯೇಲ್ಯರಿಗೆ ಬುದ್ಧಿವಾದವನ್ನು ಕೊಡುತ್ತಿದ್ದಾಗ ಮೋಶೆಯು ಹೇಳಿದ್ದು: “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ [“ನಿಮ್ಮ ಹೃದಯಕ್ಕೆ ಅನ್ವಯಿಸಿಕೊಳ್ಳಿರಿ,” NW], ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ.” (ಧರ್ಮೋಪದೇಶಕಾಂಡ 32:46) ಇಸ್ರಾಯೇಲ್ಯರು “ಚೆನ್ನಾಗಿ ಕಿವಿಗೊಡುವವರು” ಆಗಿರಬೇಕಿತ್ತು (ನಾಕ್ಸ್‌). ಸ್ವತಃ ಅವರೇ ದೇವರ ಆಜ್ಞೆಗಳೊಂದಿಗೆ ಚೆನ್ನಾಗಿ ಪರಿಚಿತರಾಗಿರುವ ಮೂಲಕ ಮಾತ್ರ ಅವರು ಅದನ್ನು ತಮ್ಮ ಸಂತತಿಯಲ್ಲಿ ಬೇರೂರಿಸಸಾಧ್ಯವಿತ್ತು.​—ಧರ್ಮೋಪದೇಶಕಾಂಡ 6:​6-8.

7. ದೇವರ ವಾಕ್ಯವನ್ನು ‘ನಮ್ಮ ಹೃದಯಕ್ಕೆ ಅನ್ವಯಿಸಿಕೊಳ್ಳು’ವುದರಲ್ಲಿ ಏನು ಒಳಗೂಡಿದೆ?

7 ಒಂದು ಶುದ್ಧ ಹೃದಯವನ್ನು ಗಳಿಸುವುದಕ್ಕಾಗಿರುವ ಒಂದು ಮುಖ್ಯ ಆವಶ್ಯಕತೆಯು, ದೇವರ ಚಿತ್ತ ಮತ್ತು ಉದ್ದೇಶಗಳ ಕುರಿತಾಗಿ ನಿಷ್ಕೃಷ್ಟ ಜ್ಞಾನವನ್ನು ಗಳಿಸುವುದೇ. ಮತ್ತು ಆ ಜ್ಞಾನದ ಒಂದೇ ಒಂದು ಮೂಲವು, ದೇವರ ಪ್ರೇರಿತ ವಾಕ್ಯವಾಗಿದೆ. (2 ತಿಮೊಥೆಯ 3:​16, 17) ಆದರೆ ಬರೀ ತಲೆಜ್ಞಾನದಿಂದ ನಾವು ಯೆಹೋವನನ್ನು ಸಂತೋಷಪಡಿಸುವ ಒಂದು ಹೃದಯವನ್ನು ಪಡೆದುಕೊಳ್ಳಲಾರೆವು. ಆ ಜ್ಞಾನವು ನಮ್ಮನ್ನು ಆಂತರಿಕವಾಗಿ ಪ್ರಭಾವಿಸಬೇಕಾದರೆ, ನಾವೇನನ್ನು ಕಲಿಯುತ್ತಿದ್ದೇವೊ ಅದನ್ನು ನಮ್ಮ ‘ಹೃದಯಕ್ಕೆ ಅನ್ವಯಿಸಿಕೊಳ್ಳ’ಬೇಕು, ಅಥವಾ “ಹೃದಯಕ್ಕೆ ತೆಗೆದುಕೊಳ್ಳಬೇಕು.” (ಧರ್ಮೋಪದೇಶಕಾಂಡ 32:​46, ಆ್ಯನ್‌ ಅಮೆರಿಕನ್‌ ಟ್ರಾನ್ಸ್‌ಲೇಶನ್‌) ಇದನ್ನು ಹೇಗೆ ಮಾಡಲಾಗುತ್ತದೆ? ಕೀರ್ತನೆಗಾರನಾದ ದಾವೀದನು ವಿವರಿಸುವುದು: “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.”​—ಕೀರ್ತನೆ 143:5.

8. ನಾವು ಅಭ್ಯಾಸಮಾಡುತ್ತಾ ಇರುವಾಗ ಯಾವ ಪ್ರಶ್ನೆಗಳ ಕುರಿತಾಗಿ ಯೋಚಿಸುತ್ತಿರಬಹುದು?

8 ನಾವು ಸಹ ಯೆಹೋವನ ಚಟುವಟಿಕೆಯ ಕುರಿತು ಗಣ್ಯತಾಭಾವದಿಂದ ಮನನಮಾಡಬೇಕು. ಬೈಬಲನ್ನು ಇಲ್ಲವೆ ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಓದುವಾಗ, ನಾವು ಈ ಮುಂದಿನ ಪ್ರಶ್ನೆಗಳ ಕುರಿತಾಗಿ ಯೋಚಿಸುತ್ತಿರಬೇಕು: ‘ಇದು ನನಗೆ ಯೆಹೋವನ ಕುರಿತಾಗಿ ಏನನ್ನು ಕಲಿಸುತ್ತದೆ? ಇಲ್ಲಿ ಯೆಹೋವನ ಯಾವ ಗುಣಗಳು ಪ್ರದರ್ಶಿಸಲ್ಪಡುವುದನ್ನು ನಾನು ನೋಡಬಲ್ಲೆ? ಯೆಹೋವನು ಏನನ್ನು ಇಷ್ಟಪಡುತ್ತಾನೆ ಮತ್ತು ಏನನ್ನು ಇಷ್ಟಪಡುವುದಿಲ್ಲ ಎಂಬುದರ ಬಗ್ಗೆ ಈ ವೃತ್ತಾಂತವು ನನಗೆ ಏನನ್ನು ಕಲಿಸುತ್ತದೆ? ಯೆಹೋವನು ಇಷ್ಟಪಡುವಂಥ ಮಾರ್ಗಕ್ರಮವನ್ನು ಅನುಸರಿಸುವುದರಿಂದ ಸಿಗುವ ಫಲಿತಾಂಶಗಳು ಯಾವುವು ಮತ್ತು ಆತನು ದ್ವೇಷಿಸುವಂಥ ಮಾರ್ಗಕ್ರಮವನ್ನು ಅನುಸರಿಸುವುದರಿಂದ ಸಿಗುವ ಫಲಿತಾಂಶಗಳಾವುವು? ನನಗೀಗಾಗಲೇ ತಿಳಿದಿರುವ ವಿಷಯದೊಂದಿಗೆ ಈ ಮಾಹಿತಿಯು ಹೇಗೆ ಸಂಬಂಧಿಸುತ್ತದೆ?’

9. ವೈಯಕ್ತಿಕ ಅಭ್ಯಾಸ ಮತ್ತು ಮನನವು ಎಷ್ಟು ಅಮೂಲ್ಯವಾದದ್ದಾಗಿದೆ?

9 ಮೂವತ್ತೆರಡು ವರ್ಷ ಪ್ರಾಯದ ಲೀಸ * ಎಂಬವಳು, ಉದ್ದೇಶಭರಿತವಾದ ಅಭ್ಯಾಸ ಮತ್ತು ಮನನದ ಮೌಲ್ಯವನ್ನು ಹೇಗೆ ಗಣ್ಯಮಾಡಲಾರಂಭಿಸಿದಳೆಂಬುದನ್ನು ವಿವರಿಸುತ್ತಾಳೆ: “1994ರಲ್ಲಿ ನನ್ನ ದೀಕ್ಷಾಸ್ನಾನದ ನಂತರ, ನಾನು ಸುಮಾರು ಎರಡು ವರ್ಷಗಳ ವರೆಗೆ ಸತ್ಯದಲ್ಲಿ ಸುಮಾರಾಗಿ ಸಕ್ರಿಯಳಾಗಿದ್ದೆ. ನಾನು ಎಲ್ಲ ಕ್ರೈಸ್ತ ಕೂಟಗಳಿಗೆ ಹಾಜರಾದೆ, ಕ್ಷೇತ್ರ ಸೇವೆಯಲ್ಲಿ ಪ್ರತಿ ತಿಂಗಳು 30ರಿಂದ 40 ತಾಸುಗಳನ್ನು ಕಳೆದೆ, ಮತ್ತು ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡಿದೆ. ಆದರೆ ಅನಂತರ ನಾನು ತೇಲಿಹೋಗಲಾರಂಭಿಸಿದೆ. ನಾನು ಎಷ್ಟು ಕೆಳಗೆ ಮುಳುಗಿಹೋದೆನೆಂದರೆ, ನಾನು ದೇವರ ನಿಯಮವನ್ನೂ ಉಲ್ಲಂಘಿಸಿದೆ. ಆದರೆ ನಾನು ಎಚ್ಚತ್ತುಕೊಂಡು, ನನ್ನ ಬದುಕನ್ನು ಶುದ್ಧಗೊಳಿಸಲು ನಿರ್ಣಯಿಸಿದೆ. ಯೆಹೋವನು ನನ್ನ ಪಶ್ಚಾತ್ತಾಪವನ್ನು ಅಂಗೀಕರಿಸಿ ನನ್ನನ್ನು ಪುನಃ ಸ್ವೀಕರಿಸಿರುವುದಕ್ಕಾಗಿ ನಾನೆಷ್ಟು ಸಂತೋಷಿತಳಾಗಿದ್ದೇನೆ! ನಾನು ಎಷ್ಟೋ ಸಾರಿ ಹೀಗೆ ಯೋಚಿಸಿದ್ದೇನೆ: ‘ನಾನು ಹಾಗೇಕೆ ಬಿದ್ದುಹೋದೆ?’ ನನ್ನ ಮನಸ್ಸಿಗೆ ಪದೇ ಪದೇ ಬರುವ ಒಂದೇ ಉತ್ತರವೇನೆಂದರೆ, ನಾನು ಉದ್ದೇಶಭರಿತವಾದ ಅಭ್ಯಾಸ ಮತ್ತು ಮನನವನ್ನು ಅಲಕ್ಷ್ಯಮಾಡಿದ್ದೆ. ಬೈಬಲ್‌ ಸತ್ಯವು ನನ್ನ ಹೃದಯವನ್ನು ತಲಪಿರಲಿಲ್ಲ. ಇಂದಿನಿಂದ, ವೈಯಕ್ತಿಕ ಅಭ್ಯಾಸ ಮತ್ತು ಮನನವು ಯಾವಾಗಲೂ ನನ್ನ ಜೀವಿತದ ಮಹತ್ವಪೂರ್ಣ ಭಾಗವಾಗಿರುವುದು.” ಯೆಹೋವನ, ಆತನ ಮಗನ ಮತ್ತು ಆತನ ವಾಕ್ಯದ ಕುರಿತಾದ ನಮ್ಮ ಜ್ಞಾನವು ಹೆಚ್ಚುತ್ತಾ ಇರುವಾಗ, ಅರ್ಥಪೂರ್ಣವಾದ ಚಿಂತನೆಗಾಗಿ ಸಮಯವನ್ನು ಬದಿಗಿರಿಸುವುದು ಎಷ್ಟು ಅತ್ಯಾವಶ್ಯಕವಾಗಿದೆ!

10. ವೈಯಕ್ತಿಕ ಅಭ್ಯಾಸ ಮತ್ತು ಮನನಕ್ಕಾಗಿ ನಾವು ಸಮಯವನ್ನು ಮಾಡಿಕೊಳ್ಳುವುದು ಜರೂರಿಯದ್ದಾಗಿದೆ ಏಕೆ?

10 ಈ ಕಾರ್ಯನಿರತ ಲೋಕದಲ್ಲಿ, ಅಭ್ಯಾಸ ಮತ್ತು ಮನನಕ್ಕಾಗಿ ಸಮಯವನ್ನು ಕಂಡುಕೊಳ್ಳುವುದು ನಿಜವಾಗಿಯೂ ಕಷ್ಟಕರ. ಆದರೆ ಕ್ರೈಸ್ತರು ಇಂದು ಅದ್ಭುತವಾದ ಒಂದು ವಾಗ್ದತ್ತ ದೇಶ, ಅಂದರೆ ದೇವರ ನೀತಿಯ ಹೊಸ ಲೋಕದ ಹೊಸ್ತಿಲಲ್ಲಿ ನಿಂತಿದ್ದಾರೆ. (2 ಪೇತ್ರ 3:13) ‘ಮಹಾ ಬಾಬೆಲಿನ’ ನಾಶನ ಮತ್ತು ಯೆಹೋವನ ಜನರ ಮೇಲೆ ‘ಮಾಗೋಗ್‌ ದೇಶದ ಗೋಗನ’ ಆಕ್ರಮಣದಂಥ ಚಕಿತಗೊಳಿಸುವ ಘಟನೆಗಳು ಇನ್ನೇನು ಬೇಗನೆ ನಡೆಯಲಿವೆ. (ಪ್ರಕಟನೆ 17:​1, 2, 5, 15-17; ಯೆಹೆಜ್ಕೇಲ 38:​1-4, 14-16; 39:2) ಮುಂದೆ ಏನು ಕಾದಿದೆಯೊ ಅದು, ಯೆಹೋವನಿಗಾಗಿ ನಮಗಿರುವ ಪ್ರೀತಿಯನ್ನು ಪರೀಕ್ಷೆಗೊಳಪಡಿಸುವುದು. ನಾವು ಉಚಿತವಾದ ಸಮಯವನ್ನು ಕೊಂಡುಕೊಂಡು, ದೇವರ ವಾಕ್ಯವನ್ನು ನಮ್ಮ ಹೃದಯಕ್ಕೆ ಅನ್ವಯಿಸಿಕೊಳ್ಳುವುದು ತುರ್ತಿನ ಸಂಗತಿಯಾಗಿದೆ!​—ಎಫೆಸ 5:​15, 16.

‘ದೇವರ ವಾಕ್ಯವನ್ನು ವಿಚಾರಿಸಲು ನಿಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಿರಿ’

11. ನಮ್ಮ ಹೃದಯವನ್ನು ಹೇಗೆ ಮಣ್ಣಿಗೆ ಹೋಲಿಸಸಾಧ್ಯವಿದೆ?

11 ಸಾಂಕೇತಿಕ ಹೃದಯವನ್ನು, ಸತ್ಯದ ಬೀಜವನ್ನು ನೆಡಬಹುದಾದಂಥ ಮಣ್ಣಿಗೆ ಹೋಲಿಸಸಾಧ್ಯವಿದೆ. (ಮತ್ತಾಯ 13:​18-23) ಬೆಳೆಯು ಚೆನ್ನಾಗಿ ಬೆಳೆಯುವುದನ್ನು ಖಚಿತಪಡಿಸಿಕೊಳ್ಳಲು ಅಕ್ಷರಶಃ ಮಣ್ಣನ್ನು ಸಾಮಾನ್ಯವಾಗಿ ಅಣಿಗೊಳಿಸಲಾಗುತ್ತದೆ. ತದ್ರೀತಿಯಲ್ಲಿ, ನಮ್ಮ ಹೃದಯವು ದೇವರ ವಾಕ್ಯವನ್ನು ಹೆಚ್ಚು ತೀವ್ರವಾಗಿ ಗ್ರಹಿಸುವಂಥದ್ದಾಗಿರಬೇಕಾದರೆ ಅದನ್ನು ಸಿದ್ಧಗೊಳಿಸಬೇಕು. ಯಾಜಕನಾದ ಎಜ್ರನು “ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಲು ಮತ್ತು ಅದನ್ನು ಅನುಸರಿಸಲು ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡನು.” (ಎಜ್ರ 7:​10, NW) ನಾವು ನಮ್ಮ ಹೃದಯವನ್ನು ಹೇಗೆ ಸಿದ್ಧಪಡಿಸಿಕೊಳ್ಳಬಹುದು?

12. ಅಧ್ಯಯನಕ್ಕಾಗಿ ಯಾವುದು ಹೃದಯವನ್ನು ಸಿದ್ಧಪಡಿಸುವುದು?

12 ನಾವು ದೇವರ ವಾಕ್ಯವನ್ನು ವಿಚಾರಿಸುವಾಗ ಹೃದಯವನ್ನು ಅತ್ಯುತ್ತಮವಾಗಿ ಸಿದ್ಧಪಡಿಸಿಕೊಳ್ಳುವ ರೀತಿಯು, ಹೃತ್ಪೂರ್ವಕವಾದ ಪ್ರಾರ್ಥನೆಯೇ ಆಗಿದೆ. ಸತ್ಯಾರಾಧಕರ ಕ್ರೈಸ್ತ ಕೂಟಗಳು ಪ್ರಾರ್ಥನೆಯೊಂದಿಗೆ ಆರಂಭವಾಗುತ್ತವೆ ಮತ್ತು ಅಂತ್ಯಗೊಳ್ಳುತ್ತವೆ. ಆದುದರಿಂದ, ನಾವು ಪ್ರತಿ ಸಲ ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ಆರಂಭಿಸುವ ಮುಂಚೆ, ಮನಃಪೂರ್ವಕವಾದ ಒಂದು ಪ್ರಾರ್ಥನೆ, ಮತ್ತು ಅನಂತರ ನಮ್ಮ ಅಧ್ಯಯನದ ಸಮಯದಲ್ಲಿ ಪ್ರಾರ್ಥನಾಪೂರ್ವಕವಾದ ಮನೋಭಾವವನ್ನು ಕಾಪಾಡಿಕೊಳ್ಳುವುದು ಎಷ್ಟು ಸೂಕ್ತ!

13. ಯೆಹೋವನಿಗೆ ಒಪ್ಪುವಂಥ ರೀತಿಯ ಹೃದಯವನ್ನು ಪಡೆದುಕೊಳ್ಳಲು ನಾವೇನು ಮಾಡಬೇಕು?

13 ಸಾಂಕೇತಿಕ ಹೃದಯವು, ಪೂರ್ವಕಲ್ಪಿತ ಅಭಿಪ್ರಾಯಗಳನ್ನು ತೊಡೆದುಹಾಕಲು ಸಿದ್ಧಗೊಳಿಸಲ್ಪಡಬೇಕು. ಯೇಸುವಿನ ದಿನದಲ್ಲಿದ್ದ ಧಾರ್ಮಿಕ ಮುಖಂಡರು ಇದನ್ನು ಮಾಡಲು ಸಿದ್ಧರಿರಲಿಲ್ಲ. (ಮತ್ತಾಯ 13:15) ಇನ್ನೊಂದು ಕಡೆ, ಯೇಸುವಿನ ತಾಯಿಯಾದ ಮರಿಯಳು, ತಾನು ಕೇಳಿಸಿಕೊಂಡಿದ್ದ ಸತ್ಯಗಳ ಮೇಲಾಧಾರಿಸಿ, “ತನ್ನ ಹೃದಯದಲ್ಲಿ” ಅವುಗಳ ಬಗ್ಗೆ ಯೋಚಿಸುತ್ತಿದ್ದಳು. (ಲೂಕ 2:​19, 51, NW) ಅವಳು ಯೇಸುವಿನ ಒಬ್ಬ ನಂಬಿಗಸ್ತ ಶಿಷ್ಯೆಯಾದಳು. ಥುವತೈರದ ಲುದ್ಯಳು ಪೌಲನಿಗೆ ಕಿವಿಗೊಟ್ಟಳು ಮತ್ತು ‘ಯೆಹೋವನು ಆಕೆಯ ಹೃದಯವನ್ನು ತೆರೆದನು.’ ಅವಳು ಸಹ ಒಬ್ಬ ವಿಶ್ವಾಸಿಯಾದಳು. (ಅ. ಕೃತ್ಯಗಳು 16:​14, 15) ನಾವು ನಮ್ಮ ಸ್ವಂತ ವೈಯಕ್ತಿಕ ವಿಚಾರಗಳು ಅಥವಾ ಅತಿ ಪ್ರಿಯವೆಂದೆಣಿಸುವ ಸೈದ್ಧಾಂತಿಕ ಅಭಿಪ್ರಾಯಗಳಿಗೆ ಅತಿ ನಿಷ್ಠೆಯಿಂದ ಅಂಟಿಕೊಳ್ಳದಿರೋಣ. ಅದರ ಬದಲು, ‘ಮನುಷ್ಯರು ಸುಳ್ಳುಗಾರರಾದರೂ ದೇವರು ಸತ್ಯವಂತನೇ ಸರಿ’ ಎಂಬುದನ್ನು ನಾವು ಸಿದ್ಧಮನಸ್ಸಿನಿಂದ ಒಪ್ಪಿಕೊಳ್ಳೋಣ.​—ರೋಮಾಪುರ 3:4.

14. ಕ್ರೈಸ್ತ ಕೂಟಗಳಲ್ಲಿ ಕಿವಿಗೊಡಲಿಕ್ಕಾಗಿ ನಾವು ನಮ್ಮ ಹೃದಯವನ್ನು ಹೇಗೆ ಸಿದ್ಧಪಡಿಸಬಹುದು?

14 ಕ್ರೈಸ್ತ ಕೂಟಗಳಲ್ಲಿ ಕಿವಿಗೊಡಲಿಕ್ಕಾಗಿ ಹೃದಯವನ್ನು ಸಿದ್ಧಪಡಿಸುವುದು ವಿಶೇಷವಾಗಿ ಪ್ರಾಮುಖ್ಯ ಸಂಗತಿಯಾಗಿದೆ. ವೇದಿಕೆಯಿಂದ ಹೇಳಲಾಗುತ್ತಿರುವ ವಿಷಯಗಳಿಗೆ ನಾವು ಕೊಡುತ್ತಿರುವ ಗಮನವನ್ನು ಅನೇಕ ಸಂಗತಿಗಳು ಅಪಕರ್ಷಿಸಬಹುದು. ಇಡೀ ದಿನ ಏನೇನು ನಡೆಯಿತೋ ಅದರ ಕುರಿತಾಗಿ ನಾವು ಯೋಚಿಸುತ್ತಾ ಇರುವಲ್ಲಿ ಅಥವಾ ನಾಳಿನ ದಿನ ನಮಗೇನು ಕಾದಿದೆಯೊ ಎಂಬುದರ ಬಗ್ಗೆ ನಾವು ಚಿಂತಿತರಾಗಿರುವಲ್ಲಿ, ಅಲ್ಲಿ ಹೇಳಲಾಗುತ್ತಿರುವ ಮಾತುಗಳು ನಮ್ಮ ಮೇಲೆ ಯಾವುದೇ ಪ್ರಭಾವವನ್ನು ಬೀರಲಾರವು. ಅಲ್ಲಿ ಏನನ್ನು ಹೇಳಲಾಗುತ್ತದೊ ಅದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಕಿವಿಗೊಡಲು ಮತ್ತು ಕಲಿಯಲು ನಾವು ದೃಢನಿರ್ಧಾರವನ್ನು ಮಾಡಬೇಕು. ವಿವರಿಸಲಾಗುತ್ತಿರುವ ಶಾಸ್ತ್ರವಚನಗಳನ್ನು ಮತ್ತು ಅವುಗಳ ವಿವರಣೆಯನ್ನು ಅರ್ಥಮಾಡಿಕೊಳ್ಳಲು ನಾವು ದೃಢಸಂಕಲ್ಪವನ್ನು ಮಾಡುವಲ್ಲಿ, ನಾವು ಎಷ್ಟೊಂದು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು!​—ನೆಹೆಮೀಯ 8:​5-8, 12.

15. ನಮ್ರತೆಯು ನಾವು ಕಲಿಯುವ ಮನಸ್ಸುಳ್ಳವರಾಗಿರುವಂತೆ ಹೇಗೆ ಸಹಾಯಮಾಡುತ್ತದೆ?

15 ಸರಿಯಾದ ರಾಸಾಯನಿಕ ಗೊಬ್ಬರಗಳನ್ನು ಕೂಡಿಸುವುದರಿಂದ ಹೇಗೆ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಬಹುದೊ ಹಾಗೆಯೇ ನಮ್ರತೆ, ಆತ್ಮಿಕತೆಗಾಗಿ ಹಸಿವು, ಭರವಸೆ, ದೇವಭಯ, ಮತ್ತು ದೇವರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು ನಮ್ಮ ಹೃದಯವನ್ನು ಸಂಪದ್ಯುಕ್ತಗೊಳಿಸುವುದು. ನಮ್ರತೆಯು ನಮ್ಮ ಹೃದಯವನ್ನು ಮೃದುಗೊಳಿಸಿ, ಕಲಿಯುವ ಮನಸ್ಸುಳ್ಳವರಾಗಿರುವಂತೆ ಸಹಾಯಮಾಡುತ್ತದೆ. ಯೆಹೂದದ ರಾಜನಾದ ಯೋಷೀಯನಿಗೆ ಯೆಹೋವನು ಹೇಳಿದ್ದು: “ನಾನು ಹೇಳಿದ ಸಂಗತಿಗಳನ್ನು ನೀನು ಕೇಳಿರುವೆ. ನಿನ್ನ ಹೃದಯವು ಮೃದುವಾಗಿರುವುದರಿಂದ, ನೀನು ಅವುಗಳನ್ನು ಕೇಳಿದಾಗ ದೈನ್ಯತೆಯುಳ್ಳವನಾದೆ. . . . ಅಳಲಾರಂಭಿಸಿದೆ. ಆದಕಾರಣವೇ ನಾನು ನಿನಗೆ ಕಿವಿಗೊಟ್ಟೆನು.” (2 ರಾಜರುಗಳು [2 ಅರಸುಗಳು] 22:​19, ಪರಿಶುದ್ಧ ಬೈಬಲ್‌ *) ಯೋಷೀಯನ ಹೃದಯವು ನಮ್ರವಾಗಿತ್ತು ಮತ್ತು ಗ್ರಹಣಶೀಲವಾಗಿತ್ತು. ನಮ್ರತೆಯಿಂದಾಗಿಯೇ ಯೇಸುವಿನ ‘ಶಾಸ್ತ್ರಾಭ್ಯಾಸಮಾಡದ ಸಾಧಾರಣ’ ಶಿಷ್ಯರು, ‘ಜ್ಞಾನಿಗಳೂ ಬುದ್ಧಿವಂತರೂ’ ಆಗಿರುವ ಜನರು ಗ್ರಹಿಸಲು ತಪ್ಪಿಹೋದಂಥ ಆತ್ಮಿಕ ಸತ್ಯಗಳನ್ನು ಗ್ರಹಿಸಿ ಅನ್ವಯಿಸಲು ಶಕ್ತರಾದರು. (ಅ. ಕೃತ್ಯಗಳು 4:13; ಲೂಕ 10:21) ನಾವು ಯೆಹೋವನು ಒಪ್ಪುವ ಹೃದಯವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ, ‘ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳೋಣ.’​—ಎಜ್ರ 8:21.

16. ಆತ್ಮಿಕ ಆಹಾರಕ್ಕಾಗಿ ಹಸಿವನ್ನು ಬೆಳೆಸಿಕೊಳ್ಳಲು ಪ್ರಯತ್ನದ ಅಗತ್ಯವಿದೆ ಏಕೆ?

16 ಯೇಸು ಹೇಳಿದ್ದು: “ತಮ್ಮ ಆತ್ಮಿಕ ಆವಶ್ಯಕತೆಯ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:3, NW) ನಮಗೆ ಆತ್ಮಿಕತೆಯ ಸಾಮರ್ಥ್ಯವಿದೆಯಾದರೂ, ಈ ದುಷ್ಟ ಲೋಕದಿಂದ ಬರುವ ಒತ್ತಡಗಳು ಅಥವಾ ಆಲಸ್ಯದಂಥ ಪ್ರವೃತ್ತಿಗಳು ನಮ್ಮ ಈ ಆವಶ್ಯಕತೆಯ ಕುರಿತಾದ ಪ್ರಜ್ಞೆಯನ್ನು ಮಂದಗೊಳಿಸುವವು. (ಮತ್ತಾಯ 4:​4) ಆತ್ಮಿಕ ಆಹಾರಕ್ಕಾಗಿ ನಾವು ಒಳ್ಳೆಯ ಹಸಿವನ್ನು ಬೆಳೆಸಿಕೊಳ್ಳಬೇಕು. ಮೊದಮೊದಲು ನಮಗೆ ಬೈಬಲನ್ನು ಓದುವುದರಲ್ಲಿ ಮತ್ತು ವೈಯಕ್ತಿಕ ಅಧ್ಯಯನದಲ್ಲಿ ಅಷ್ಟೊಂದು ಆನಂದ ಸಿಗಲಿಕ್ಕಿಲ್ಲ; ಆದರೆ ನಾವು ಪಟ್ಟುಹಿಡಿದು ಮುಂದುವರಿಯುವಲ್ಲಿ, ಆ ಜ್ಞಾನವು ‘ನಮ್ಮ ಆತ್ಮಕ್ಕೆ ಅಂದವಾಗಿರುವುದನ್ನು’ ನಾವು ಕಂಡುಕೊಳ್ಳುವೆವು ಮತ್ತು ಅಂಥ ಅಧ್ಯಯನದ ಅವಧಿಗಳಿಗಾಗಿ ನಾವು ಸದಾ ಕಾತುರರಾಗಿ ಎದುರುನೋಡುತ್ತಿರುವೆವು.​—ಜ್ಞಾನೋಕ್ತಿ 2:​10, 11.

17. (ಎ) ಯೆಹೋವನು ಏಕೆ ನಮ್ಮ ಸಂಪೂರ್ಣ ಭರವಸೆಗೆ ಅರ್ಹನಾಗಿದ್ದಾನೆ? (ಬಿ) ನಾವು ದೇವರಲ್ಲಿ ಭರವಸೆಯನ್ನು ಹೇಗೆ ವರ್ಧಿಸಬಹುದು?

17 “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ [“ಹೃದಯದಿಂದ,” NW] ಯೆಹೋವನಲ್ಲಿ ಭರವಿಸವಿಡು” ಎಂದು ರಾಜನಾದ ಸೊಲೊಮೋನನು ಬುದ್ಧಿಹೇಳಿದನು. (ಜ್ಞಾನೋಕ್ತಿ 3:5) ಯೆಹೋವನಲ್ಲಿ ಭರವಸೆಯಿಡುವ ಒಂದು ಹೃದಯವು, ಆತನು ತನ್ನ ವಾಕ್ಯದ ಮೂಲಕ ಏನನ್ನೇ ಕೇಳಲಿ ಅಥವಾ ಯಾವುದೇ ನಿರ್ದೇಶನವನ್ನು ಕೊಡಲಿ, ಅದು ಯಾವಾಗಲೂ ಸರಿಯಾದದ್ದಾಗಿದೆ ಎಂಬುದನ್ನು ತಿಳಿದಿರುತ್ತದೆ. (ಯೆಶಾಯ 48:17) ಯೆಹೋವನು ನಮ್ಮ ಸಂಪೂರ್ಣ ಭರವಸೆಗೆ ಅರ್ಹನಾಗಿದ್ದಾನೆ. ತಾನು ಉದ್ದೇಶಿಸಿದ್ದೆಲ್ಲವನ್ನು ಪೂರೈಸಲೂ ಆತನು ಶಕ್ತನಾಗಿದ್ದಾನೆ. (ಯೆಶಾಯ 40:​26, 29) ಆತನ ಹೆಸರಿನ ಅರ್ಥವೇ, ಅಕ್ಷರಶಃ ‘ಆತನು ಆಗಿಸಿಕೊಳ್ಳುತ್ತಾನೆ’ ಎಂದಾಗಿದೆ ಮತ್ತು ಇದು ಆತನು ಏನನ್ನು ವಾಗ್ದಾನಿಸಿದ್ದಾನೊ ಅದನ್ನು ನೆರವೇರಿಸುವ ಆತನ ಸಾಮರ್ಥ್ಯದಲ್ಲಿ ಭರವಸೆಯನ್ನು ವರ್ಧಿಸುತ್ತದೆ! (ಕೀರ್ತನೆ 145:17) ಆದರೆ ಆತನಲ್ಲಿ ಭರವಸೆಯನ್ನು ಕಟ್ಟಲಿಕ್ಕಾಗಿ, ನಾವು ಬೈಬಲಿನಿಂದ ಏನನ್ನು ಕಲಿಯುತ್ತೇವೊ ಅದನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮೂಲಕ ಮತ್ತು ಅದರಿಂದಾಗಿ ಉಂಟಾಗುವ ಒಳಿತಿನ ಕುರಿತಾಗಿ ಮನನಮಾಡುವ ಮೂಲಕ, ‘ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ಸವಿದು ನೋಡಬೇಕು.’​—ಕೀರ್ತನೆ 34:8.

18. ದೈವಿಕ ಭಯವು, ನಾವು ದೇವರ ಮಾರ್ಗದರ್ಶನಕ್ಕೆ ಸ್ಪಂದಿಸುವವರಾಗಿರಲು ಹೇಗೆ ಸಹಾಯಮಾಡುತ್ತದೆ?

18 ನಮ್ಮ ಹೃದಯವು ದೈವಿಕ ಮಾರ್ಗದರ್ಶನಕ್ಕೆ ಸ್ಪಂದಿಸುವಂತೆ ಮಾಡುವ ಮತ್ತೊಂದು ಗುಣವನ್ನು ಸೂಚಿಸುತ್ತಾ, ಸೊಲೊಮೋನನು ಹೇಳಿದ್ದು: “ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.” (ಜ್ಞಾನೋಕ್ತಿ 3:7) ಪುರಾತನ ಇಸ್ರಾಯೇಲಿನ ಕುರಿತಾಗಿ ಯೆಹೋವನು ಹೇಳಿದ್ದು: “ನನ್ನಲ್ಲಿ ಭಯಭಕ್ತಿಯುಳ್ಳವರಾಗಿ ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು [“ಹೃದಯ,” NW] ಯಾವಾಗಲೂ ಅವರಲ್ಲಿ ಇದ್ದರೆ ಎಷ್ಟೋ ಮೇಲು; ಆಗ ಅವರಿಗೂ ಅವರ ಸಂತತಿಯವರಿಗೂ ಯಾವಾಗಲೂ ಶುಭವುಂಟಾಗುವದು.” (ಧರ್ಮೋಪದೇಶಕಾಂಡ 5:29) ಹೌದು, ದೇವರಿಗೆ ಭಯಪಡುವವರು ಆತನಿಗೆ ವಿಧೇಯರಾಗುತ್ತಾರೆ. ‘ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ [“ಪೂರ್ಣ ಹೃದಯವುಳ್ಳವರ,” NW] ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುವ’ ಮತ್ತು ತನಗೆ ಅವಿಧೇಯರಾಗುವವರಿಗೆ ಶಿಕ್ಷೆಯನ್ನು ಕೊಡುವ ಸಾಮರ್ಥ್ಯ ಯೆಹೋವನಿಗಿದೆ. (2 ಪೂರ್ವಕಾಲವೃತ್ತಾಂತ 16:9) ದೇವರನ್ನು ಅಸಂತೋಷಪಡಿಸುವ ಪೂಜ್ಯ ಭಯವು, ಯಾವಾಗಲೂ ನಮ್ಮ ಎಲ್ಲ ಕಾರ್ಯಗಳು, ವಿಚಾರಗಳು ಮತ್ತು ಭಾವನೆಗಳನ್ನು ನಿಯಂತ್ರಿಸಲಿ.

‘ಯೆಹೋವನನ್ನು ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸಿರಿ’

19. ಯೆಹೋವನ ನಿರ್ದೇಶನಕ್ಕೆ ನಮ್ಮ ಹೃದಯವು ಸ್ಪಂದಿಸುವಂತೆ ಮಾಡುವುದರಲ್ಲಿ ಪ್ರೀತಿಯ ಪಾತ್ರವೇನು?

19 ಬೇರೆಲ್ಲ ಗುಣಗಳಿಗಿಂತಲೂ ಹೆಚ್ಚಾಗಿ, ಯೆಹೋವನ ನಿರ್ದೇಶನಕ್ಕೆ ನಮ್ಮ ಹೃದಯವು ಸ್ಪಂದಿಸುವಂತೆ ಮಾಡುವಂಥದ್ದು ಪ್ರೀತಿಯೇ. ಪ್ರೀತಿಯಿಂದ ತುಂಬಿರುವ ಒಂದು ಹೃದಯವು, ಒಬ್ಬ ವ್ಯಕ್ತಿಯು ದೇವರನ್ನು ಸಂತೋಷಪಡಿಸುವಂಥ ಮತ್ತು ಅಸಂತೋಷಪಡಿಸುವಂಥ ಸಂಗತಿಗಳು ಯಾವುವು ಎಂಬುದನ್ನು ಕಲಿಯಲು ಆತುರಪಡುವಂತೆ ಮಾಡುತ್ತದೆ. (1 ಯೋಹಾನ 5:3) ಯೇಸು ಹೇಳಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ದೇವರ ಒಳ್ಳೇತನದ ಕುರಿತಾಗಿ ಆಲೋಚಿಸುವ ರೂಢಿಯನ್ನು ಮಾಡಿಕೊಳ್ಳುವ ಮೂಲಕ, ಒಬ್ಬ ಅತ್ಯಾಪ್ತ ಮಿತ್ರನೊಂದಿಗೋ ಎಂಬಂತೆ ಆತನೊಂದಿಗೆ ಕ್ರಮವಾಗಿ ಮಾತಾಡುವ ಮೂಲಕ, ಮತ್ತು ಆತನ ಬಗ್ಗೆ ಇತರರಿಗೆ ತೀವ್ರಾಸಕ್ತಿಯಿಂದ ತಿಳಿಸುವ ಮೂಲಕ, ದೇವರಿಗಾಗಿರುವ ನಮ್ಮ ಪ್ರೀತಿಯನ್ನು ನಾವು ಗಾಢಗೊಳಿಸಬಹುದು.

20. ಯೆಹೋವನಿಗೆ ಒಪ್ಪುವ ಹೃದಯವನ್ನು ನಾವು ಹೇಗೆ ಪಡೆದುಕೊಳ್ಳಬಹುದು?

20 ಹಾಗಾದರೆ ನಾವು ಕಲಿತಂಥ ವಿಷಯಗಳನ್ನು ಪುನರ್ವಿಮರ್ಶಿಸೋಣ: ಯೆಹೋವನು ಒಪ್ಪುವ ಒಂದು ಹೃದಯವನ್ನು ಪಡೆದುಕೊಳ್ಳುವುದರಲ್ಲಿ, ನಾವು ಅಂತರಂಗದಲ್ಲಿ ಏನಾಗಿದ್ದೇವೊ ಅದನ್ನು, ಹೃದಯದ ಗುಪ್ತ ವ್ಯಕ್ತಿಯನ್ನು ದೇವರ ವಾಕ್ಯವು ಪ್ರಭಾವಿಸುವಂತೆ ಬಿಡುವುದೂ ಸೇರಿದೆ. ಶಾಸ್ತ್ರಗಳ ಅರ್ಥಪೂರ್ಣ ವೈಯಕ್ತಿಕ ಅಧ್ಯಯನ ಮತ್ತು ಕೃತಜ್ಞತಾಭರಿತ ಮನನವು ತೀರ ಆವಶ್ಯಕ. ಇದನ್ನು ಸಿದ್ಧಗೊಳಿಸಲ್ಪಟ್ಟಿರುವ ಹೃದಯದೊಂದಿಗೆ ಚೆನ್ನಾಗಿ ಮಾಡಬಹುದು. ಸಿದ್ಧಗೊಳಿಸಲ್ಪಟ್ಟಿರುವ ಹೃದಯವೆಂದರೆ, ಪೂರ್ವಕಲ್ಪಿತ ವಿಚಾರಗಳಿಂದ ಮುಕ್ತವಾಗಿರುವ ಒಂದು ಹೃದಯ, ಕಲಿಸಲ್ಪಡುವಂತೆ ನಮ್ಮನ್ನು ಸದಾ ಸಿದ್ಧವಾಗಿರಿಸುವಂಥ ಗುಣಗಳಿಂದ ತುಂಬಿರುವ ಹೃದಯವೇ ಆಗಿದೆ! ಹೌದು, ಯೆಹೋವನ ಸಹಾಯದಿಂದ ಆತನಿಗೆ ಒಪ್ಪುವ ಹೃದಯವನ್ನು ನಾವು ಪಡೆದುಕೊಳ್ಳಸಾಧ್ಯವಿದೆ. ಆದರೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಸಾಧ್ಯವಿದೆ?

[ಪಾದಟಿಪ್ಪಣಿಗಳು]

^ ಪ್ಯಾರ. 9 ಹೆಸರನ್ನು ಬದಲಾಯಿಸಲಾಗಿದೆ.

^ ಪ್ಯಾರ. 15 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.

ನೀವು ಹೇಗೆ ಪ್ರತಿಕ್ರಿಯಿಸುವಿರಿ?

• ಯೆಹೋವನು ಪರೀಕ್ಷಿಸುವಂಥ ಸಾಂಕೇತಿಕ ಹೃದಯವು ಏನಾಗಿದೆ?

• ನಾವು ದೇವರ ವಾಕ್ಯವನ್ನು ಹೇಗೆ ‘ನಮ್ಮ ಹೃದಯಕ್ಕೆ ಅನ್ವಯಿಸಿಕೊಳ್ಳಬಹುದು?’

• ದೇವರ ವಾಕ್ಯವನ್ನು ವಿಚಾರಿಸಲಿಕ್ಕಾಗಿ ನಾವು ನಮ್ಮ ಹೃದಯವನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು?

• ಈ ವಿಷಯವನ್ನು ಪರಿಗಣಿಸಿದ ನಂತರ, ನೀವು ಏನನ್ನು ಮಾಡುವಂತೆ ಪ್ರಚೋದಿಸಲ್ಪಟ್ಟಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ದಾವೀದನು ಗಣ್ಯತಾಭಾವದಿಂದ ಆತ್ಮಿಕ ವಿಷಯಗಳ ಕುರಿತು ಮನನಮಾಡಿದನು. ನೀವೂ ಹಾಗೆ ಮಾಡುತ್ತೀರೊ?

[ಪುಟ 18ರಲ್ಲಿರುವ ಚಿತ್ರಗಳು]

ದೇವರ ವಾಕ್ಯವನ್ನು ಅಭ್ಯಾಸಮಾಡುವ ಮುನ್ನ ನಿಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಿರಿ