ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಮಂಜೂಷವನ್ನು ಹೊತ್ತುಕೊಂಡುಹೋಗಲಿಕ್ಕಾಗಿ ಉಪಯೋಗಿಸಲ್ಪಡುತ್ತಿದ್ದಂತಹ ಕೋಲುಗಳು ಪರಿಶುದ್ಧ ಸ್ಥಳದಿಂದ ಕಾಣಿಸುತ್ತಿದ್ದವು ಎಂದು 1 ಅರಸುಗಳು 8:8 ಸೂಚಿಸುವುದರಿಂದ, ಆ ಕೋಲುಗಳು ಯಾವ ರೀತಿಯಲ್ಲಿ ಇಡಲ್ಪಟ್ಟಿದ್ದವು?

ಅರಣ್ಯದಲ್ಲಿ ಯೆಹೋವನು ಮೋಶೆಗೆ ದೇವದರ್ಶನಗುಡಾರದ ನಕ್ಷೆಯನ್ನು ಕೊಟ್ಟಾಗ, ಅದರ ಮುಖ್ಯ ವೈಶಿಷ್ಟ್ಯವು ಮಂಜೂಷವಾಗಿತ್ತು. ಆಯತಾಕಾರದ್ದಾಗಿದ್ದು ಚಿನ್ನದಿಂದ ಹೊದಿಸಲ್ಪಟ್ಟಿದ್ದ ಈ ಪೆಟ್ಟಿಗೆಯಲ್ಲಿ, ಧರ್ಮಶಾಸ್ತ್ರದ ಆಜ್ಞಾಶಾಸನಗಳು ಮತ್ತು ಇನ್ನಿತರ ವಸ್ತುಗಳು ಇದ್ದವು. ಇದು ಗರ್ಭಗೃಹದಲ್ಲಿ ಅಂದರೆ ಮಹಾಪರಿಶುದ್ಧ ಸ್ಥಳದಲ್ಲಿ ಇಡಲ್ಪಟ್ಟಿತ್ತು. ಮಂಜೂಷದ ಮುಚ್ಚಳದ ಮೇಲೆ ರೆಕ್ಕೆಗಳು ಮೇಲಕ್ಕೆ ಚಾಚಿಕೊಂಡಿರುವ ಕೆರೂಬಿಗಳ ಎರಡು ಬಂಗಾರದ ಆಕಾರಗಳು ಇಡಲ್ಪಟ್ಟಿದ್ದವು. ಎರಡು ಕೋಲುಗಳ ಸಹಾಯದಿಂದ ಮಂಜೂಷವನ್ನು ಹೊತ್ತುಕೊಂಡುಹೋಗಲು ಸಾಧ್ಯವಾಗುವಂತೆ ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳಿದ್ದವು. ಈ ಕೋಲುಗಳನ್ನು ಜಾಲೀಮರದಿಂದ ಮಾಡಿ, ಅವುಗಳಿಗೆ ಚಿನ್ನವನ್ನು ಹೊದಿಸಲಾಗಿತ್ತು. ಮಂಜೂಷದ ಪ್ರತಿಯೊಂದು ಪಕ್ಕದಲ್ಲಿದ್ದ ಎರಡು ಬಳೆಗಳ ಮೂಲಕ ಈ ಕೋಲುಗಳನ್ನು ಒಳತೂರಿಸಲಾಗುತ್ತಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗೆ, ಪೂರ್ವಾಭಿಮುಖವಾಗಿದ್ದ ದೇವದರ್ಶನಗುಡಾರದ ಮಹಾಪರಿಶುದ್ಧ ಸ್ಥಳದಲ್ಲಿ ಅದರ ನಿಗದಿತ ಸ್ಥಾನದಲ್ಲಿ ಮಂಜೂಷವು ಇಡಲ್ಪಟ್ಟಿದ್ದು, ಅದರ ಕೋಲುಗಳು ಉತ್ತರ-ದಕ್ಷಿಣಾಭಿಮುಖವಾಗಿದ್ದವು. ಸಮಯಾನಂತರ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿಯೂ ಮಂಜೂಷವು ಇದೇ ರೀತಿಯಲ್ಲಿ ಇಡಲ್ಪಟ್ಟಿತ್ತು.​—ವಿಮೋಚನಕಾಂಡ 25:​10-22; 37:​4-9; 40:​17-21. *

ಮಹಾಪರಿಶುದ್ಧ ಸ್ಥಳಕ್ಕೂ ಪರಿಶುದ್ಧಸ್ಥಳ (ಹೊರಾಂಗಣ)ಕ್ಕೂ ಮಧ್ಯೆ ಒಂದು ತೆರೆಯಿತ್ತು. ಪರಿಶುದ್ಧಸ್ಥಳದಲ್ಲಿದ್ದ ಯಾಜಕರು ಮಹಾಪರಿಶುದ್ಧ ಸ್ಥಳವನ್ನೂ ದೇವರ ಸಮಕ್ಷಮವಿದ್ದ ಮಂಜೂಷವನ್ನೂ ನೋಡಸಾಧ್ಯವಿರಲಿಲ್ಲ. (ಇಬ್ರಿಯ 9:​1-7) ಆದುದರಿಂದ, 1 ಅರಸುಗಳು 8:8ನೆಯ ವಚನವು ಸ್ವಲ್ಪ ಗೊಂದಲಮಯವಾಗಿ ಕಂಡುಬರಬಹುದು: “ಆ ಕೋಲುಗಳು ಬಹಳ ಉದ್ದವಾಗಿದ್ದದರಿಂದ ಅವುಗಳ ತುದಿಗಳು ಗರ್ಭಗೃಹದ ಎದುರಿನಲ್ಲಿರುವ ಪರಿಶುದ್ಧಸ್ಥಳದಲ್ಲಿ ನಿಂತವರಿಗೆ ಕಾಣಿಸಿದರೂ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ.” 2 ಪೂರ್ವಕಾಲವೃತ್ತಾಂತ 5:9ರಲ್ಲಿಯೂ ಇದೇ ವಿಷಯವನ್ನು ತಿಳಿಸಲಾಗಿದೆ. ದೇವಾಲಯದ ಪರಿಶುದ್ಧಸ್ಥಳದಲ್ಲಿ ನಿಂತಿದ್ದ ಯಾರಿಗಾದರೂ ಈ ಕೋಲುಗಳು ಹೇಗೆ ಕಾಣಿಸಸಾಧ್ಯವಿತ್ತು?

ಆ ಕೋಲುಗಳು ತೆರೆಗೆ ತಾಕುತ್ತಿದ್ದವು, ಇದರಿಂದಾಗಿ ಅವುಗಳ ಮುಂಚಾಚಿದ ಗುರುತುಗಳು ಕಾಣಿಸುತ್ತಿದ್ದವು ಎಂದು ಕೆಲವರು ಊಹಿಸಿದ್ದಾರೆ. ಆದರೆ ಕೋಲುಗಳು ಉತ್ತರ-ದಕ್ಷಿಣಾಭಿಮುಖವಾಗಿದ್ದು, ತೆರೆಯು ಆ ಕೋಲುಗಳಿಗೆ ಅಡ್ಡಲಾಗಿರುವಲ್ಲಿ ಅದು ಹಾಗೆ ಕಾಣುವ ಸಾಧ್ಯತೆಯಿಲ್ಲ. (ಅರಣ್ಯಕಾಂಡ 3:38) ಇದಕ್ಕೆ ಇನ್ನೂ ಹೆಚ್ಚು ಗಮನಾರ್ಹವಾದ ವಿವರಣೆಯಿದೆ. ತೆರೆ ಹಾಗೂ ದೇವಾಲಯದ ಗೋಡೆಯ ಮಧ್ಯೆ ಸ್ವಲ್ಪ ಅಂತರವಿರುವಲ್ಲಿ ಅಥವಾ ಮಹಾಯಾಜಕನು ಮಹಾಪರಿಶುದ್ಧ ಸ್ಥಾನವನ್ನು ಪ್ರವೇಶಿಸಬೇಕಾಗಿದ್ದಾಗ, ಆ ಕೋಲುಗಳು ಸ್ವಲ್ಪ ಕಾಣಿಸುತ್ತಿದ್ದಿರಬಹುದು. ಅಲ್ಲಿದ್ದ ತೆರೆಯು ಮಂಜೂಷವನ್ನು ಸಂಪೂರ್ಣವಾಗಿ ಮರೆಮಾಡುತ್ತಿತ್ತಾದರೂ, ಎರಡೂ ಕಡೆಗಳಲ್ಲಿ ಚಾಚಿಕೊಂಡಿದ್ದ ಕೋಲುಗಳು ಮಾತ್ರ ನಡುವೆ ಇದ್ದ ಜಾಗದಿಂದ ಕಂಡಿದ್ದಿರಬಹುದು. ಈ ವಿವರವು ನ್ಯಾಯಸಮ್ಮತವಾಗಿ ತೋರುವುದಾದರೂ, ಇವುಗಳನ್ನು ನಾವು ಕಟ್ಟುನಿಟ್ಟಾಗಿ ಹೇಳಸಾಧ್ಯವಿಲ್ಲ.

ನಾವು ಇನ್ನೂ ಅನೇಕ ವಿವರಗಳನ್ನು ಕಲಿಯಲಿಕ್ಕಿದೆ ಎಂಬುದಂತೂ ಸ್ಪಷ್ಟ. ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಕೆಲವು ಅಂಶಗಳನ್ನು ಪ್ರಸ್ತಾಪಿಸಿದನು. ತದನಂತರ ಅವನು ಹೇಳಿದ್ದು: “ಸದ್ಯಕ್ಕೆ ಈ ವಿಷಯಗಳನ್ನು ಒಂದೊಂದಾಗಿ ವಿವರಿಸುವದಕ್ಕೆ ಆಗುವದಿಲ್ಲ.” (ಇಬ್ರಿಯ 9:5) ಮುಂದೆ ಆಗಲಿರುವ ನಂಬಿಗಸ್ತರ ಪುನರುತ್ಥಾನವು, ದೇವದರ್ಶನಗುಡಾರದ ನಕ್ಷೆ ಹಾಗೂ ಕಾರ್ಯಾಚರಣೆಯೊಂದಿಗೆ ವೈಯಕ್ತಿಕವಾಗಿ ಚಿರಪರಿಚಿತರಾಗಿದ್ದ ಮೋಶೆ, ಆರೋನ, ಬೆಚಲೇಲ ಹಾಗೂ ಇನ್ನಿತರರಿಂದ ಕಲಿತುಕೊಳ್ಳಲು ಪ್ರಚೋದನಾತ್ಮಕ ಸದವಕಾಶಗಳನ್ನು ತೆರೆಯುವುದು.​—ವಿಮೋಚನಕಾಂಡ 36:1.

[ಪಾದಟಿಪ್ಪಣಿ]

^ ಪ್ಯಾರ. 3 ದೇವದರ್ಶನಗುಡಾರದಲ್ಲಿ ಮಂಜೂಷವು ನಿಗದಿತ ಸ್ಥಾನದಲ್ಲಿ ಇಡಲ್ಪಟ್ಟಿದ್ದಾಗಲೂ ಈ ಕೋಲುಗಳನ್ನು ಬಳೆಗಳಿಂದ ತೆಗೆಯಲಾಗುತ್ತಿರಲಿಲ್ಲ. ಆದುದರಿಂದ, ಈ ಕೋಲುಗಳನ್ನು ಬೇರೆ ಯಾವುದೇ ಕೆಲಸಕ್ಕಾಗಿ ಉಪಯೋಗಿಸಸಾಧ್ಯವಿರಲಿಲ್ಲ. ಇದಲ್ಲದೆ, ಮಂಜೂಷವನ್ನು ಯಾರೂ ಮುಟ್ಟಬಾರದಾಗಿತ್ತು; ಒಂದುವೇಳೆ ಬಳೆಗಳಿಂದ ಕೋಲುಗಳನ್ನು ಹೊರತೆಗೆಯುವಲ್ಲಿ, ಪ್ರತಿಬಾರಿ ಪವಿತ್ರ ಮಂಜೂಷವನ್ನು ಬೇರೆ ಕಡೆಗೆ ಒಯ್ಯುವಾಗ ಬಳೆಗಳೊಳಗೆ ಕೋಲುಗಳನ್ನು ತೂರಿಸಲಿಕ್ಕಾಗಿ ಅದನ್ನು ಮುಟ್ಟಬೇಕಾಗುತ್ತಿತ್ತು. ‘ಕೋಲುಗಳನ್ನು ಸೇರಿಸುವುದರ’ ಕುರಿತು ಅರಣ್ಯಕಾಂಡ 4:6ರಲ್ಲಿರುವ ಹೇಳಿಕೆಯು, ಭಾರವಾದ ಮಂಜೂಷವನ್ನು ಹೊಸ ಪಾಳೆಯಕ್ಕೆ ಕೊಂಡೊಯ್ಯುವ ಸಿದ್ಧತೆಯಲ್ಲಿ ಕೋಲುಗಳನ್ನು ಸರಿಮಾಡುವುದು ಅಥವಾ ಸರಿಹೊಂದಿಸುವುದನ್ನು ಸೂಚಿಸಬಹುದು.