ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷಭರಿತ ಲೋಕಕ್ಕಾಗಿರುವ ಕೀಲಿ ಕೈ

ಸಂತೋಷಭರಿತ ಲೋಕಕ್ಕಾಗಿರುವ ಕೀಲಿ ಕೈ

ಸಂತೋಷಭರಿತ ಲೋಕಕ್ಕಾಗಿರುವ ಕೀಲಿ ಕೈ

“ಕೇವಲ ಈ ಎರಡು ಸಹಸ್ರಮಾನಗಳಲ್ಲಿ ಮಾತ್ರವಲ್ಲ, ಇಡೀ ಮಾನವನ ಇತಿಹಾಸದ ಅತ್ಯಂತ ಪ್ರಭಾವಶಾಲಿಯಾದ ಏಕೈಕ ವ್ಯಕ್ತಿಯು ನಜರೇತಿನ ಯೇಸುವಾಗಿದ್ದನು,” ಎಂದು ಟೈಮ್‌ ಪತ್ರಿಕೆಯು ಹೇಳಿತು. ಯೇಸು ಭೂಮಿಯ ಮೇಲೆ ಇದ್ದಾಗ, ಸಾವಿರಾರು ಸಹೃದಯಿ ಜನರು ಅವನ ಮಹತ್ವವನ್ನು ಮಾತ್ರವಲ್ಲದೆ, ಇತರರಿಗಾಗಿದ್ದ ಅವನ ಚಿಂತೆಯನ್ನೂ ಗ್ರಹಿಸಿದರು. ಆದುದರಿಂದ, ಅವನನ್ನು ಅವರು ರಾಜನನ್ನಾಗಿ ಮಾಡಲು ಬಯಸಿದರು ಎಂಬ ಸಂಗತಿಯು ಆಶ್ಚರ್ಯವನ್ನು ಉಂಟುಮಾಡುವುದಿಲ್ಲ. (ಯೋಹಾನ 6:10, 14, 15) ಆದರೂ, ಹಿಂದಿನ ಲೇಖನದಲ್ಲಿ ಹೇಳಲ್ಪಟ್ಟಿರುವಂತೆ, ಯೇಸು ರಾಜಕೀಯದಲ್ಲಿ ಒಳಗೂಡಲು ನಿರಾಕರಿಸಿದನು.

ಯೇಸುವಿನ ಪ್ರತಿಕ್ರಿಯೆಯು ಕಡಿಮೆಪಕ್ಷ ಮೂರು ಅಂಶಗಳ ಮೇಲೆ ಆಧಾರಿತವಾಗಿತ್ತು: ಯಾವುದರಲ್ಲಿ ಮಾನವ ಆಡಳಿತವು ಒಳಗೂಡಿದೆಯೋ ಆ ಮಾನವನ ಸ್ವನಿರ್ಧಾರಮಾಡುವ ಅನಿಸಿಕೆಗಳ ಕುರಿತಾದ ಅವನ ತಂದೆಯ ವೀಕ್ಷಣೆ; ಆಡಳಿತದ ಸಂಬಂಧದಲ್ಲಿ ಮಾನವನು ಮಾಡುವ ಅತಿ ಶ್ರೇಷ್ಠ ಪ್ರಯತ್ನಗಳ ವಿರುದ್ಧವೂ ಕೆಲಸಮಾಡುತ್ತಿರುವ ಗುಪ್ತ ಶಕ್ತಿಗಳ ಕುರಿತಾದ ಯೇಸುವಿನ ತಿಳಿವಳಿಕೆ; ಮತ್ತು ಇಡೀ ಲೋಕವನ್ನು ಆಳುವಂಥ ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸುವ ದೇವರ ಉದ್ದೇಶ. ನಾವು ಈ ಮೂರೂ ಅಂಶಗಳನ್ನು ಹೆಚ್ಚು ನಿಕಟವಾಗಿ ಪರಿಶೀಲಿಸುವಾಗ, ಈ ಲೋಕವನ್ನು ಉತ್ತಮವಾದ ಸ್ಥಳವನ್ನಾಗಿ ಮಾಡುವುದರಲ್ಲಿ ಮಾನವನ ಪ್ರಯತ್ನಗಳು ಏಕೆ ಅಸಫಲವಾಗಿವೆ ಎಂಬುದನ್ನು ನೋಡುವೆವು. ಯಶಸ್ಸನ್ನು ಹೇಗೆ ಸಾಧಿಸಲಾಗುವುದು ಎಂಬುದನ್ನೂ ನೋಡುವೆವು.

ಮನುಷ್ಯರು ತಮ್ಮ ಮೇಲೆಯೇ ರಾಜ್ಯಭಾರ ನಡೆಸಲು ಸಾಧ್ಯವೋ?

ದೇವರು ಮಾನವರನ್ನು ಸೃಷ್ಟಿಸಿದಾಗ, ಅವರಿಗೆ ಪ್ರಾಣಿ ಪ್ರಪಂಚದ ಮೇಲೆ ಅಧಿಕಾರವನ್ನು ಕೊಟ್ಟನು. (ಆದಿಕಾಂಡ 1:26) ಆದರೆ ಮಾನವಕುಲವು ದೇವರ ಪರಮಾಧಿಕಾರದ ಕೆಳಗಿತ್ತು. ಮೊದಲ ಸ್ತ್ರೀಪುರುಷರು ಒಂದು ನಿರ್ದಿಷ್ಟವಾದ ಮರ, ಅಂದರೆ “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ” ಹಣ್ಣನ್ನು ತಿನ್ನುವುದರಿಂದ ದೂರವಿರುವ ಅಪ್ಪಣೆಗೆ ವಿಧೇಯರಾಗುವ ಮೂಲಕ, ದೇವರಿಗೆ ತಮ್ಮ ಅಧೀನತೆಯನ್ನು ಖಚಿತಪಡಿಸಬೇಕಿತ್ತು. (ಆದಿಕಾಂಡ 2:17) ವಿಷಾದಕರವಾಗಿ, ಆದಾಮಹವ್ವರು ತಮ್ಮ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಿದರು ಮತ್ತು ದೇವರಿಗೆ ಅವಿಧೇಯರಾದರು. ನಿಷೇಧಿಸಲ್ಪಟ್ಟಿದ್ದ ಹಣ್ಣನ್ನು ತಿನ್ನುವುದು ಕೇವಲ ಕಳ್ಳತನದ ಕೃತ್ಯವಾಗಿರಲಿಲ್ಲ. ಅದು ದೇವರ ಪರಮಾಧಿಕಾರದ ವಿರುದ್ಧವಾದ ದಂಗೆಯಾಗಿತ್ತು. ದ ನ್ಯೂ ಜೆರೂಸಲೇಮ್‌ ಬೈಬಲ್‌, ಆದಿಕಾಂಡ 2:17ಕ್ಕೆ ಕೊಡುವ ಒಂದು ಪಾದಟಿಪ್ಪಣಿ ಹೇಳುವುದೇನೆಂದರೆ, ಆದಾಮಹವ್ವರು “ಸಂಪೂರ್ಣವಾದ ನೈತಿಕ ಸ್ವಾತಂತ್ರ್ಯವನ್ನು” ಪಡೆದುಕೊಳ್ಳುವ ಹಕ್ಕು ತಮಗಿದೆ ಎಂದು ಹೇಳಿದರು, ಮತ್ತು “ಇದರ ಮೂಲಕ ತಾನು ಒಬ್ಬ ಸೃಷ್ಟಿಸಲ್ಪಟ್ಟ ಜೀವಿ ಎಂಬುದನ್ನು ಮಾನವನು ನಿರಾಕರಿಸಿದನು . . . ಮೊಟ್ಟಮೊದಲ ಪಾಪವು ದೇವರ ಪರಮಾಧಿಕಾರದ ಮೇಲೆ ಮಾಡಲ್ಪಟ್ಟ ದಾಳಿಯಾಗಿತ್ತು.”

ಗಂಭೀರವಾದ ನೈತಿಕ ವಿವಾದಾಂಶಗಳು ಒಳಗೂಡಿರುವ ಕಾರಣ, ಆದಾಮಹವ್ವರು ಮತ್ತು ಅವರ ಸಂತತಿಯು ತಮ್ಮದೇ ಆದ ಜೀವನ ರೀತಿಯನ್ನು ಆರಿಸಿಕೊಳ್ಳುವಂತೆ ದೇವರು ಅನುಮತಿಸಿದನು. ಅವರು ಸರಿ ಮತ್ತು ತಪ್ಪಿನ ತಮ್ಮ ಸ್ವಂತ ಮಟ್ಟಗಳನ್ನು ಸ್ಥಾಪಿಸಿದರು. (ಕೀರ್ತನೆ 147:19, 20; ರೋಮಾಪುರ 2:14) ಮೂಲಭೂತವಾಗಿ, ಸ್ವನಿರ್ಧಾರದೊಂದಿಗೆ ಮಾನವನು ಮಾಡಲಿರುವ ಪ್ರಯೋಗವು ಆರಂಭವಾಯಿತು. ಅದು ಯಶಸ್ವಿಕರವಾಗಿದೆಯೋ? ಸಾವಿರಾರು ವರ್ಷಗಳ ಹಿನ್ನೋಟದ ಮೇಲಾಧಾರಿಸಿ, ನಾವು ಇಲ್ಲ ಎಂದು ಹೇಳಸಾಧ್ಯವಿದೆ! ಪ್ರಸಂಗಿ 8:9 ಹೇಳುವುದು: “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆ. ಮಾನವ ಸ್ವಆಡಳಿತದ ಈ ಶೋಚನೀಯವಾದ ದಾಖಲೆಯು ಯೆರೆಮೀಯ 10:23ರ ನಿಜತ್ವವನ್ನು ಖಚಿತಪಡಿಸುತ್ತದೆ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ತಮ್ಮ ಸೃಷ್ಟಿಕರ್ತನಿಲ್ಲದೆ ಮಾನವರು ಯಶಸ್ವಿಕರವಾಗಿ ಆಡಳಿತ ನಡೆಸುವ ಸಾಮರ್ಥ್ಯವಿಲ್ಲದವರಾಗಿದ್ದಾರೆ ಎಂಬುದನ್ನು ಇತಿಹಾಸವು ರುಜುಪಡಿಸಿದೆ.

ಯೇಸು ಇದಕ್ಕೆ ಪೂರ್ಣ ಸಹಮತದಲ್ಲಿದ್ದನು. ದೇವರಿಂದ ಸ್ವಾತಂತ್ರ್ಯವು ಅವನಿಗೆ ಅತ್ಯಂತ ಹೇಸಿಗೆಯ ವಿಷಯವಾಗಿತ್ತು. ‘ನನ್ನಷ್ಟಕ್ಕೆ ನಾನೇ ಏನೂ ಮಾಡದೆ . . . [ದೇವರಿಗೆ] ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ,’ ಎಂದು ಅವನು ಹೇಳಿದನು. (ಯೋಹಾನ 4:34; 8:28, 29) ಹಾಗಾಗಿ, ಮಾನವರಿಂದ ರಾಜತ್ವವನ್ನು ಪಡೆದುಕೊಳ್ಳಬೇಕು ಎಂಬ ದೈವಿಕ ಅನುಮತಿಯಿಲ್ಲದೆ, ಅದನ್ನು ಅಂಗೀಕರಿಸುವುದರ ಕುರಿತಾಗಿ ಯೇಸು ಯೋಚಿಸಲೂ ಇಲ್ಲ. ಆದರೆ, ಅವನು ತನ್ನ ಜೊತೆಮಾನವನಿಗೆ ಸಹಾಯಮಾಡಲು ಹಿಂಜರಿದನು ಎಂಬುದು ಇದರರ್ಥವಲ್ಲ. ಅದರ ಬದಲು, ಜನರು ಆಗ ಮತ್ತು ಭವಿಷ್ಯದಲ್ಲಿ ಅತ್ಯಧಿಕವಾದ ಸಂತೋಷವನ್ನು ಕಂಡುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ತನ್ನ ಶಕ್ತಿಯಿಂದಾದುದೆಲ್ಲವನ್ನೂ ಅವನು ಮಾಡಿದನು. ಅವನು ಮಾನವಕುಲಕ್ಕಾಗಿ ತನ್ನ ಜೀವವನ್ನೇ ಕೊಟ್ಟನು. (ಮತ್ತಾಯ 5:​3-11; 7:​24-27; ಯೋಹಾನ 3:16) ಆದರೆ, “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು” ಎಂಬುದು ಯೇಸುವಿಗೆ ಗೊತ್ತಿತ್ತು ಮತ್ತು ಇದರಲ್ಲಿ ದೇವರು ತನ್ನ ಪರಮಾಧಿಕಾರವನ್ನು ಮಾನವಕುಲದ ಮೇಲೆ ಸ್ಥಾಪಿಸುವ ಆತನ ಸಮಯವೂ ಸೇರಿತ್ತು. (ಪ್ರಸಂಗಿ 3:1; ಮತ್ತಾಯ 24:14, 21, 22, 36-39) ಆದರೆ, ಏದೆನ್‌ನಲ್ಲಿ ನಮ್ಮ ಆದಿ ಹೆತ್ತವರು ಒಂದು ದೃಶ್ಯ ಸರ್ಪದ ಮೂಲಕ ಮಾತಾಡಿದ ಒಬ್ಬ ದುಷ್ಟ ಆತ್ಮ ಜೀವಿಯ ಮಾತಿಗೆ ಅಧೀನರಾದರು ಎಂಬುದನ್ನು ಮರುಜ್ಞಾಪಿಸಿಕೊಳ್ಳಿ. ಯೇಸು ರಾಜಕೀಯದಲ್ಲಿ ಏಕೆ ಕೈಹಾಕಲಿಲ್ಲ ಎಂಬುದಕ್ಕೆ ಇದು ಎರಡನೆಯ ಕಾರಣವನ್ನು ಕೊಡುತ್ತದೆ.

ಲೋಕದ ಅಜ್ಞಾತ ಅಧಿಪತಿ

ಸೈತಾನನು “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ,” ಒಂದು ಸಾಷ್ಟಾಂಗ ನಮಸ್ಕಾರಕ್ಕೆ ಬದಲಿಯಾಗಿ ಕೊಡುತ್ತೇನೆಂದು ಯೇಸುವಿಗೆ ಹೇಳಿದನೆಂದು ಬೈಬಲ್‌ ಹೇಳುತ್ತದೆ. (ಮತ್ತಾಯ 4:8-10) ಮೂಲಭೂತವಾಗಿ, ಯೇಸುವಿಗೆ ಲೋಕಾಧಿಪತ್ಯವು ನೀಡಲ್ಪಟ್ಟಿತು​—ಆದರೆ ಪಿಶಾಚನ ಷರತ್ತುಗಳ ಮೇರೆಗೆ. ಈ ಶೋಧನೆಗೆ ಯೇಸು ಬಲಿಬೀಳಲಿಲ್ಲ. ಅದು ನಿಜವಾಗಿ ಒಂದು ಶೋಧನೆಯಾಗಿತ್ತೇ? ಸೈತಾನನು ಇಂತಹ ಬೃಹತ್ತಾದ ಕೊಡುವಿಕೆಯನ್ನು ಮಾಡಬಲ್ಲನೋ? ಹೌದು, ಏಕೆಂದರೆ ಯೇಸುವೇ ಅವನನ್ನು “ಇಹಲೋಕಾಧಿಪತಿ” ಎಂದು ಕರೆದನು, ಮತ್ತು ಅಪೊಸ್ತಲ ಪೌಲನು ಅವನನ್ನು “ಈ ಪ್ರಪಂಚದ ದೇವರು” ಎಂದು ವರ್ಣಿಸಿದನು.​—ಯೋಹಾನ 14:30; 2 ಕೊರಿಂಥ 4:4; ಎಫೆಸ 6:12.

ವಾಸ್ತವದಲ್ಲಿ, ಪಿಶಾಚನಿಗೆ ಮಾನವಕುಲದ ಹಿತಕ್ಷೇಮದ ಕುರಿತು ಚಿಂತೆಯಿರಲಿಲ್ಲ ಎಂಬುದು ಯೇಸುವಿಗೆ ಗೊತ್ತಿತ್ತು. ಅವನು ಸೈತಾನನನ್ನು, “ಕೊಲೆಗಾರ” ಮತ್ತು “ಸುಳ್ಳು ಹಾಗೂ ಸುಳ್ಳಾದದ್ದೆಲ್ಲದಕ್ಕೂ ತಂದೆ”ಯಾಗಿದ್ದಾನೆ ಎಂದು ವರ್ಣಿಸಿದನು. (ಯೋಹಾನ 8:​44, ದಿ ಆ್ಯಂಪ್ಲಿಫೈಡ್‌ ಬೈಬಲ್‌) ಇಂತಹ ದುಷ್ಟ ಆತ್ಮನ ‘ವಶದಲ್ಲಿ ಬಿದ್ದಿರುವ’ ಲೋಕವು ಎಂದಿಗೂ ನಿಜವಾಗಿಯೂ ಸಂತೋಷದಿಂದಿರಲಾರದು ಎಂಬುದು ಸುವ್ಯಕ್ತ. (1 ಯೋಹಾನ 5:19) ಆದರೆ ಪಿಶಾಚನಿಗೆ ಈ ಅಧಿಕಾರವು ಸದಾಕಾಲಕ್ಕೂ ಇರುವುದಿಲ್ಲ. ಈಗ ಬಲಿಷ್ಠ ಆತ್ಮ ಜೀವಿಯಾಗಿರುವ ಯೇಸು, ಶೀಘ್ರದಲ್ಲೇ ಸೈತಾನನನ್ನು ತೆಗೆದುಹಾಕುವನು ಮತ್ತು ಅವನ ಪ್ರಭಾವವನ್ನು ಸಂಪೂರ್ಣವಾಗಿ ನಿರ್ನಾಮಮಾಡುವನು.​—ಇಬ್ರಿಯ 2:14; ಪ್ರಕಟನೆ 20:1-3.

ಲೋಕಾಧಿಪತಿಯ ಸ್ಥಾನದಲ್ಲಿರುವ ಅವನ ದಿನಗಳು ಕ್ಷಿಪ್ರವಾಗಿ ಗತಿಸಿಹೋಗುತ್ತಿವೆ ಎಂಬುದು ಸ್ವತಃ ಸೈತಾನನಿಗೇ ಗೊತ್ತಿದೆ. ಆದುದರಿಂದ, ನೋಹನ ದಿನದ ಜಲಪ್ರಳಯಕ್ಕೆ ಮುಂಚೆ ಮಾಡಿದಂತೆಯೇ, ಅವನು ಮನುಷ್ಯರನ್ನು ಸುಧಾರಿಸಲಾಗದಷ್ಟು ಮಟ್ಟಿಗೆ ಭ್ರಷ್ಟಗೊಳಿಸಲು ಉಗ್ರವಾದ ಮತ್ತು ಸರ್ವ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾನೆ. (ಆದಿಕಾಂಡ 6:1-5; ಯೂದ 6) “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ” ಎಂಬುದಾಗಿ ಪ್ರಕಟನೆ 12:12 ಹೇಳುತ್ತದೆ. ಆ ‘ಸ್ವಲ್ಪ ಕಾಲದ’ ಸಮಾಪ್ತಿಯ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದಾಗಿ ಬೈಬಲ್‌ ಪ್ರವಾದನೆ ಮತ್ತು ಲೋಕ ಘಟನೆಗಳು ಸೂಚಿಸುತ್ತವೆ. (2 ತಿಮೊಥೆಯ 3:1-5) ಪರಿಹಾರವು ಈಗ ಸಮೀಪವಾಗಿದೆ.

ಸಂತೋಷವನ್ನು ತರಲು ಒಂದು ಸರಕಾರ

ಯೇಸು ರಾಜಕೀಯದಿಂದ ದೂರವಿರಲು ಮೂರನೆಯ ಕಾರಣವೇನೆಂದರೆ, ಭವಿಷ್ಯದ ಒಂದು ನೇಮಿತ ಸಮಯದಲ್ಲಿ ಭೂಮಿಯ ಮೇಲೆ ಆಳ್ವಿಕೆ ನಡೆಸಲು ದೇವರು ಒಂದು ಸ್ವರ್ಗೀಯ ಸರಕಾರವನ್ನು ಸ್ಥಾಪಿಸುವನು ಎಂಬುದು ಅವನಿಗೆ ಗೊತ್ತಿತ್ತು. ಬೈಬಲ್‌ ಈ ಸರಕಾರವನ್ನು ದೇವರ ರಾಜ್ಯ ಎಂದು ಕರೆಯುತ್ತದೆ, ಮತ್ತು ಯೇಸುವಿನ ಬೋಧನೆಯ ಮುಖ್ಯ ಶೀರ್ಷಿಕೆ ಅದೇ ಆಗಿತ್ತು. (ಲೂಕ 4:43; ಪ್ರಕಟನೆ 11:15) ಆ ರಾಜ್ಯವು ಬರಲಿಕ್ಕಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು, ಏಕೆಂದರೆ ಅದರ ಆಡಳಿತದ ಕೆಳಗೆ ಮಾತ್ರ ‘ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲೂ ನೆರವೇರುವುದು.’ (ಮತ್ತಾಯ 6:9, 10) ನೀವು ಒಂದುವೇಳೆ ಯೋಚಿಸಬಹುದು, ‘ಈ ರಾಜ್ಯವು ಇಡೀ ಲೋಕದ ಮೇಲೆ ಆಳ್ವಿಕೆ ನಡೆಸಲಿರುವುದಾದರೆ, ಮಾನವ ನಿರ್ಮಿತ ಸರಕಾರಗಳಿಗೆ ಏನಾಗುವುದು?’

ಉತ್ತರವು ದಾನಿಯೇಲ 2:44ರಲ್ಲಿದೆ: “[ಸದ್ಯದ ವ್ಯವಸ್ಥೆಯ ಅಂತ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ] ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, [ಮಾನವ ನಿರ್ಮಿತ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ಓರೆ ಅಕ್ಷರಗಳು ನಮ್ಮವು.) ದೇವರ ರಾಜ್ಯವು ಭೂಮಿಯ ಮೇಲಿರುವ ಆಳ್ವಿಕೆಗಳನ್ನು ಏಕೆ ‘ಭಂಗಪಡಿಸಬೇಕು’? ಏಕೆಂದರೆ, ಇವುಗಳೆಲ್ಲವೂ ಹಿಂದೆ ಸೈತಾನನಿಂದ ಏದೆನ್‌ ತೋಟದಲ್ಲಿ ಪ್ರೋತ್ಸಾಹಿಸಲ್ಪಟ್ಟ, ಸ್ವನಿರ್ಧಾರವೆಂಬ ದೇವರನ್ನು ಅಲಕ್ಷಿಸುವ ಮನೋಭಾವವನ್ನು ಬೆನ್ನಟ್ಟುವಂತೆ ಉತ್ತೇಜಿಸುತ್ತವೆ. ಮಾನವನ ಹಿತಕ್ಷೇಮದ ವಿರುದ್ಧವಾಗಿ ಕೆಲಸಮಾಡುವುದರೊಂದಿಗೆ, ಆ ಆತ್ಮವನ್ನು ಬೆನ್ನಟ್ಟಲು ಪ್ರಯಾಸಪಡುವವರು ಸೃಷ್ಟಿಕರ್ತನಿಗೆ ವಿರುದ್ಧವಾಗಿರುವ ಮಾರ್ಗದಲ್ಲಿ ತಮ್ಮನ್ನು ಇರಿಸಿಕೊಳ್ಳುತ್ತಾರೆ. (ಕೀರ್ತನೆ 2:6-12; ಪ್ರಕಟನೆ 16:14, 16) ಆದುದರಿಂದ, ನಾವು ಹೀಗೆ ಕೇಳಿಕೊಳ್ಳಬೇಕು, ‘ನಾವು ದೇವರ ಆಳ್ವಿಕೆಯ ಪರವಾಗಿದ್ದೇವೋ ಅಥವಾ ಅದಕ್ಕೆ ವಿರುದ್ಧವಾಗಿದ್ದೇವೋ?’

ಯಾರ ಪರಮಾಧಿಕಾರವನ್ನು ನೀವು ಆರಿಸಿಕೊಳ್ಳುವಿರಿ?

ಆಡಳಿತದ ಸಂಬಂಧದಲ್ಲಿ ನಿಷ್ಕೃಷ್ಟ ಜ್ಞಾನದ ಮೇಲಾಧಾರಿತವಾದ ಒಂದು ತೀರ್ಮಾನವನ್ನು ಮಾಡುವಂತೆ ಜನರಿಗೆ ಸಹಾಯಮಾಡಲಿಕ್ಕಾಗಿ, ಈ ಸದ್ಯದ ವ್ಯವಸ್ಥೆಯ ಅಂತ್ಯವು ಬರುವ ಮುನ್ನ “ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ” ಸಾರಲ್ಪಡಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಆಜ್ಞೆಯಿತ್ತನು. (ಮತ್ತಾಯ 24:14) ಇಂದು ದೇವರ ರಾಜ್ಯದ ಕುರಿತು ಸಾರುವವರು ಎಂದು ಲೋಕವ್ಯಾಪಕವಾಗಿ ಪ್ರಸಿದ್ಧರಾಗಿರುವವರು ಯಾರು? ಯೆಹೋವನ ಸಾಕ್ಷಿಗಳೇ. ವಾಸ್ತವದಲ್ಲಿ, ಈ ಪತ್ರಿಕೆಯು, ಅನೇಕ ವರ್ಷಗಳಿಂದ ತನ್ನ ಮುಖಪುಟದಲ್ಲಿ “ಯೆಹೋವನ ರಾಜ್ಯವನ್ನು ಪ್ರಕಟಿಸುವುದು,” ಎಂಬ ಮಾತುಗಳನ್ನು ಒಳಗೂಡಿದೆ. ಇಂದು, 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ, ಸುಮಾರು 60 ಲಕ್ಷ ಸಾಕ್ಷಿಗಳು ಆ ರಾಜ್ಯದ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಜನರಿಗೆ ಸಹಾಯಮಾಡುತ್ತಿದ್ದಾರೆ. *

ರಾಜ್ಯದ ಪ್ರಜೆಗಳಿಗಾಗಿ ಆಶೀರ್ವಾದಗಳು

ಯೇಸು ಸದಾ ದೇವರ ವಿಧಾನಕ್ಕನುಸಾರ ವಿಷಯಗಳನ್ನು ಮಾಡಿದನು. ಆದುದರಿಂದ, ಒಂದು ಸ್ವತಂತ್ರವಾದ ಮಾರ್ಗವನ್ನು ಆರಿಸಿಕೊಂಡು, ಈಗಿನ ವ್ಯವಸ್ಥೆಯನ್ನು ರಾಜಕೀಯದ ಮೂಲಕ ಬೆಂಬಲಿಸಲು ಅಥವಾ ಸುಧಾರಿಸಲು ಪ್ರಯತ್ನಿಸುವ ಬದಲು, ದೇವರ ರಾಜ್ಯದ ಅಭಿರುಚಿಗಳನ್ನು ಅಭಿವೃದ್ಧಿಗೊಳಿಸಲು ಅವನು ಪ್ರಯತ್ನಿಸಿದನು; ಮತ್ತು ಇದೇ ಲೋಕದ ತೊಂದರೆಗಳ ನಿಜವಾದ ಪರಿಹಾರವಾಗಿರುವುದು. ಅವನ ನಿಷ್ಠೆಗಾಗಿ, ಸ್ವರ್ಗೀಯ ರಾಜ್ಯದ ರಾಜನೋಪಾದಿ ಅವನಿಗೆ ಒಂದು ಮಹಿಮಾಭರಿತ ಸಿಂಹಾಸನವು ಬಹುಮಾನವಾಗಿ ಕೊಡಲ್ಪಟ್ಟಿತು. ದೇವರಿಗೆ ಅವನು ತೋರಿಸಿದ ಅಧೀನತೆಗೆ ಎಂತಹ ಅದ್ಭುತಕರ ಬಹುಮಾನ!​—ದಾನಿಯೇಲ 7:13, 14.

ಇಂದು, ದೇವರ ರಾಜ್ಯವನ್ನು ಪ್ರಥಮವಾಗಿ ಇಡುವುದರಲ್ಲಿ ಮತ್ತು ದೇವರ ಚಿತ್ತಕ್ಕೆ ಅಧೀನತೆ ತೋರಿಸುವುದರಲ್ಲಿ ಯೇಸುವಿನ ಮಾದರಿಯನ್ನು ಅನುಕರಿಸುವ ಲಕ್ಷಾಂತರ ಮಂದಿ ಒಂದು ಅದ್ಭುತಕರ ಕೊಡುಗೆಯಲ್ಲಿ ಆನಂದಿಸುತ್ತಾರೆ. ಅದು ದೇವರ ರಾಜ್ಯದ ಭೂಪ್ರಜೆಗಳಾಗಲಿರುವ ಸುಯೋಗವಾಗಿದೆ. (ಮತ್ತಾಯ 6:33) ಅದರ ಪ್ರೀತಿಭರಿತ ಆಳ್ವಿಕೆಯ ಕೆಳಗೆ, ನಿತ್ಯಜೀವದ ಪ್ರತೀಕ್ಷೆಯೊಂದಿಗೆ ಅವರು ಮಾನವ ಪರಿಪೂರ್ಣತೆಗೆ ಏರಿಸಲ್ಪಡುವರು. (ಪ್ರಕಟನೆ 21:3, 4) 1 ಯೋಹಾನ 2:17 ಹೇಳುವುದು: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” ಸೈತಾನನು ಮತ್ತು ಅವನ ಹಿಂಬಾಲಕರು ತೊಡೆದುಹಾಕಲ್ಪಟ್ಟಿರುವಾಗ ಮತ್ತು ಲೋಕವು ವಿಭಾಗಿಸುವ ರಾಷ್ಟ್ರೀಯತಾವಾದ, ಭ್ರಷ್ಟ ವಾಣಿಜ್ಯ ವ್ಯವಸ್ಥೆಗಳು, ಮತ್ತು ಸುಳ್ಳು ಧರ್ಮದಿಂದ ಮುಕ್ತವಾಗಿರುವ ಭೌಗೋಲಿಕ ಪರದೈಸಾಗಿ ಬದಲಾಯಿಸಲ್ಪಟ್ಟಿರುವಾಗ, ಇಲ್ಲಿಯೇ ಎಂದೆಂದಿಗೂ ಉಳಿಯುವುದು ಎಷ್ಟು ಅಪಾರ ಆನಂದವನ್ನು ಉಂಟುಮಾಡುವುದು!​—ಕೀರ್ತನೆ 37:29; 72:16.

ಹೌದು, ದೇವರ ರಾಜ್ಯವು ನಿಜವಾಗಿ ಸಂತೋಷವುಳ್ಳ ಲೋಕಕ್ಕೆ ನಿಜವಾದ ಕೀಲಿ ಕೈ ಆಗಿದೆ, ಮತ್ತು ಅದನ್ನು ಪ್ರಕಟಪಡಿಸುವ ಸಂದೇಶವನ್ನು ಸೂಕ್ತವಾಗಿಯೇ ಸುವಾರ್ತೆ ಎಂದು ವರ್ಣಿಸಲಾಗಿದೆ. ನೀವು ಈಗಾಗಲೇ ಕಿವಿಗೊಟ್ಟಿಲ್ಲವಾದರೆ, ಮುಂದಿನ ಸಲ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಿಮ್ಮ ಮನೆಗೆ ಭೇಟಿ ನೀಡಿದಾಗ, ನೀವೇಕೆ ಈ ಸುವಾರ್ತೆಗೆ ಕಿವಿಗೊಡಬಾರದು?

[ಪಾದಟಿಪ್ಪಣಿ]

^ ಪ್ಯಾರ. 16 ದೇವರ ರಾಜ್ಯವನ್ನು ಸಮರ್ಥಿಸುವಾಗ ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ ಕೈಹಾಕುವುದಿಲ್ಲ ಅಥವಾ ಐಹಿಕ ಸರಕಾರಗಳ ವಿರುದ್ಧವಾಗಿ ದಂಗೆಯನ್ನು ಕೆರಳಿಸುವುದಿಲ್ಲ. ಇದು ಸಾಕ್ಷಿಗಳು ಯಾವ ದೇಶಗಳಲ್ಲಿ ನಿಷೇಧಿಸಲ್ಪಟ್ಟಿದ್ದಾರೋ ಅಥವಾ ಹಿಂಸಿಸಲ್ಪಟ್ಟಿದ್ದಾರೋ ಅಲ್ಲಿಯೂ ಸತ್ಯವಾಗಿದೆ. (ತೀತ 3:1) ಬದಲಾಗಿ, ಅವರು ಯೇಸು ಮತ್ತು ಅವನ ಪ್ರಥಮ ಶತಮಾನದ ಶಿಷ್ಯರು ಮಾಡಿದಂತೆಯೇ ಒಂದು ಸಕಾರಾತ್ಮಕ, ಆತ್ಮಿಕ, ಅರಾಜಕೀಯ ಪಾತ್ರವನ್ನು ವಹಿಸುತ್ತಾರೆ. ನೀತಿಯ ಪ್ರವೃತ್ತಿಯುಳ್ಳ ಜನರು ತಮ್ಮ ವಿಭಿನ್ನವಾದ ಸಮುದಾಯಗಳಲ್ಲಿ, ಕೌಟುಂಬಿಕ ಪ್ರೀತಿ, ಯಥಾರ್ಥತೆ, ನೈತಿಕ ಶುದ್ಧತೆ, ಮತ್ತು ಕೆಲಸದ ಒಳ್ಳೆಯ ಅಭ್ಯಾಸಗಳೆಂಬ ಹಿತಕರವಾದ ಬೈಬಲ್‌ ಮೌಲ್ಯಗಳನ್ನು ಅಳವಡಿಸಲಿಕ್ಕಾಗಿ, ಸಾಕ್ಷಿಗಳು ಅವರಿಗೆ ಸಹಾಯಮಾಡಲು ಪ್ರಯಾಸಪಡುತ್ತಿದ್ದಾರೆ. ಪ್ರಥಮವಾಗಿ, ಬೈಬಲ್‌ ನಿಯಮಗಳನ್ನು ಹೇಗೆ ಅನುಸರಿಸುವುದು ಮತ್ತು ಮಾನವನ ನಿಜವಾದ ನಿರೀಕ್ಷೆಯೋಪಾದಿ ದೇವರ ರಾಜ್ಯದೆಡೆಗೆ ಹೇಗೆ ನೋಡುವುದು ಎಂಬುದನ್ನು ಅವರಿಗೆ ಕಲಿಸಲು ಪ್ರಯಾಸಪಡುತ್ತಾರೆ.

[ಪುಟ 5ರಲ್ಲಿರುವ ಚಿತ್ರಗಳು]

ದೇವರ ಸಹಾಯವಿಲ್ಲದೆ ಮಾನವನು ಯಶಸ್ವಿಕರವಾಗಿ ಆಳ್ವಿಕೆ ನಡೆಸಲಾರನು ಎಂಬುದನ್ನು ಇತಿಹಾಸವು ರುಜುಪಡಿಸುತ್ತದೆ

[ಪುಟ 5ರಲ್ಲಿರುವ ಚಿತ್ರ]

ಈಗಿರುವ “ಪ್ರಪಂಚದ” ಮೇಲೆ ಸೈತಾನನು ಆಳ್ವಿಕೆ ನಡೆಸುತ್ತಿರುವ ಕಾರಣ, ಅವನು ಯೇಸುವಿಗೆ “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ” ನೀಡಸಾಧ್ಯವಿತ್ತು

[ಪುಟ 7ರಲ್ಲಿರುವ ಚಿತ್ರಗಳು]

ದೇವರ ರಾಜ್ಯ ಏರ್ಪಾಡಿನ ಕೆಳಗೆ, ಈ ಲೋಕವು ಒಂದು ಅದ್ಭುತಕರವಾದ ಸ್ಥಳವಾಗಿರುವುದು ಎಂದು ಯೇಸು ಕಲಿಸಿದನು