ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೀರ್ಘಶಾಂತಿಯನ್ನು ಧರಿಸಿಕೊಳ್ಳಿರಿ’

‘ದೀರ್ಘಶಾಂತಿಯನ್ನು ಧರಿಸಿಕೊಳ್ಳಿರಿ’

‘ದೀರ್ಘಶಾಂತಿಯನ್ನು ಧರಿಸಿಕೊಳ್ಳಿರಿ’

“ಕನಿಕರ ದಯೆ . . . ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.”​—ಕೊಲೊಸ್ಸೆ 3:12.

1. ದೀರ್ಘಶಾಂತಿಯ ಒಂದು ಉತ್ತಮ ಉದಾಹರಣೆಯನ್ನು ತಿಳಿಸಿರಿ.

ನೈರುತ್ಯ ಫ್ರಾನ್ಸಿನಲ್ಲಿ ವಾಸಿಸುತ್ತಿರುವ ರೇಜೀಸ್‌ 1952ರಲ್ಲಿ ಯೆಹೋವನ ಸ್ನಾನಿತ ಸಾಕ್ಷಿಯಾದನು. ಅನೇಕ ವರ್ಷಗಳ ವರೆಗೆ ಅವನ ಪತ್ನಿಯು ಯೆಹೋವನನ್ನು ಸೇವಿಸುವುದರಿಂದ ಅವನನ್ನು ತಡೆಯಲು ಬಹಳಷ್ಟು ಪ್ರಯತ್ನವನ್ನು ಮಾಡಿದಳು. ಅವನನ್ನು ಕೂಟಗಳಿಗೆ ಹಾಜರಾಗುವುದರಿಂದ ತಡೆಯಲಿಕ್ಕಾಗಿ ಅವನ ಕಾರಿನ ಟಯರುಗಳನ್ನು ಪಂಕ್ಚರ್‌ ಮಾಡಿದಳು, ಒಂದು ಸಂದರ್ಭದಲ್ಲಿ ಅವನು ಮನೆಯಿಂದ ಮನೆಗೆ ಬೈಬಲಿನ ಸಂದೇಶವನ್ನು ಸಾರಲು ಹೋದಾಗಲೂ ಅವನನ್ನು ಹಿಂಬಾಲಿಸಿ, ಅವನು ರಾಜ್ಯದ ಸುವಾರ್ತೆಯನ್ನು ಮನೆಯವರಿಗೆ ಸಾರುವಾಗ ಅವನನ್ನು ಅಪಹಾಸ್ಯ ಮಾಡುತ್ತಾ ಇದ್ದಳು. ಈ ಎಡೆಬಿಡದ ವಿರೋಧದ ನಡುವೆಯೂ ರೇಜೀಸ್‌ ದೀರ್ಘಶಾಂತಿಯನ್ನು ತೋರಿಸುತ್ತಾ ಹೋದನು. ಹೀಗೆ ರೇಜೀಸ್‌ ಕ್ರೈಸ್ತರೆಲ್ಲರಿಗೆ ಉತ್ತಮ ಮಾದರಿಯಾಗಿದ್ದಾನೆ. ಯಾಕೆಂದರೆ ತನ್ನ ಆರಾಧಕರೆಲ್ಲರು ಇತರರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ದೀರ್ಘಶಾಂತಿಯನ್ನು ತೋರಿಸುವಂತೆ ಯೆಹೋವನು ಅವಶ್ಯಪಡಿಸುತ್ತಾನೆ.

2. “ದೀರ್ಘಶಾಂತಿ”ಗಾಗಿರುವ ಗ್ರೀಕ್‌ ಶಬ್ದದ ಅಕ್ಷರಾರ್ಥವು ಏನು, ಮತ್ತು ಆ ಶಬ್ದವು ಏನನ್ನು ಸೂಚಿಸುತ್ತದೆ?

2 “ದೀರ್ಘಶಾಂತಿ”ಗಾಗಿರುವ ಗ್ರೀಕ್‌ ಶಬ್ದದ ಅಕ್ಷರಾರ್ಥವು, “ದೀರ್ಘ ಮನೋಬಲ” ಎಂದಾಗಿದೆ. ಇಂಗ್ಲಿಷ್‌ ಭಾಷೆಯಲ್ಲಿರುವ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಇದನ್ನು ಮೂರು ಬಾರಿ “ತಾಳ್ಮೆ” ಎಂದೂ, ಒಂದು ಬಾರಿ “ತಾಳ್ಮೆ ತೋರಿಸುವುದು” ಎಂದೂ ಭಾಷಾಂತರಿಸಿದೆ. “ದೀರ್ಘಶಾಂತಿ” ಎಂದು ಭಾಷಾಂತರವಾದ ಹೀಬ್ರು ಮತ್ತು ಗ್ರೀಕ್‌ ಅಭಿವ್ಯಕ್ತಿಗಳೆರಡರಲ್ಲಿಯೂ ತಾಳ್ಮೆ, ಸೈರಣೆ, ಮತ್ತು ಮಂದಕೋಪ ಎಂಬ ವಿಚಾರವು ಒಳಗೂಡಿದೆ.

3. ದೀರ್ಘಶಾಂತಿಯ ವಿಷಯದಲ್ಲಿ ಕ್ರೈಸ್ತರ ನೋಟವು ಒಂದನೆಯ ಶತಮಾನದ ಗ್ರೀಕರಿಗಿಂತ ಹೇಗೆ ಭಿನ್ನವಾಗಿತ್ತು?

3 ಒಂದನೆಯ ಶತಮಾನದ ಗ್ರೀಕರು ದೀರ್ಘಶಾಂತಿಯನ್ನು ಒಂದು ಸದ್ಗುಣವಾಗಿ ವೀಕ್ಷಿಸುತ್ತಿರಲಿಲ್ಲ. ಸ್ತೋಯಿಕ ತತ್ತ್ವಜ್ಞಾನಿಗಳು ಎಂದಿಗೂ ಆ ಶಬ್ದವನ್ನೇ ಉಪಯೋಗಿಸಲಿಲ್ಲ. ಬೈಬಲ್‌ ವಿದ್ವಾಂಸರಾದ ವಿಲ್ಯಮ್‌ ಬರ್ಕ್ಲೆಗನುಸಾರ, ದೀರ್ಘಶಾಂತಿಯು “ಗ್ರೀಕ್‌ ಸದ್ಗುಣಕ್ಕೆ ತೀರಾ ವಿರುದ್ಧವಾದ” ವಿಷಯವಾಗಿತ್ತು. “ಯಾವುದೇ ಮುಖಭಂಗ ಅಥವಾ ತೆಗಳಿಕೆಯನ್ನು ಸಹಿಸಿಕೊಳ್ಳಲು ನಿರಾಕರಿಸುವುದು” ಅವರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಬರ್ಕ್ಲೆ ಅನ್ನುವುದು: “ಮುಯ್ಯಿಗೆ ಮುಯ್ಯಿ ತೀರಿಸಲಿಕ್ಕಾಗಿ ಏನು ಮಾಡಲೂ ಹಿಂಜರಿಯದವನೇ ಗ್ರೀಕರಲ್ಲಿ ಮಹಾಶಯ. ಆದರೆ ಕ್ರೈಸ್ತರಲ್ಲಿ, ಮುಯ್ಯಿ ತೀರಿಸಲು ಶಕ್ತನಿದ್ದರೂ ಅದನ್ನು ಮಾಡಲು ನಿರಾಕರಿಸುವವನೇ ಮಹಾಶಯ.” ಗ್ರೀಕರು ದೀರ್ಘಶಾಂತಿಯನ್ನು ಒಂದು ಬಲಹೀನತೆಯ ಚಿಹ್ನೆಯಾಗಿ ಪರಿಗಣಿಸಿದ್ದಿರಬಹುದು. ಆದರೆ ಬೇರೆ ವಿಷಯಗಳಲ್ಲಿ ಹೇಗೊ ಹಾಗೆ ಇಲ್ಲಿಯೂ, “ದೇವರಲ್ಲಿ ಯಾವದನ್ನು ಬುದ್ಧಿಹೀನತೆಯಿಂದ ಎಣಿಸುತ್ತಾರೋ ಅದು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠ. . . . ದೇವರಲ್ಲಿ ಯಾವದನ್ನು ಬಲಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ.”​—1 ಕೊರಿಂಥ 1:25.

ದೀರ್ಘಶಾಂತಿಯಲ್ಲಿ ಕ್ರಿಸ್ತನ ಮಾದರಿ

4, 5. ಯೇಸು ದೀರ್ಘಶಾಂತಿಯ ವಿಷಯದಲ್ಲಿ ಎಂಥ ಶ್ಲಾಘನೀಯ ಮಾದರಿಯನ್ನು ತೋರಿಸಿದನು?

4 ಯೆಹೋವನ ನಂತರ, ದೀರ್ಘಶಾಂತಿಯ ಅತ್ಯುತ್ತಮ ಮಾದರಿಯು ಯೇಸು ಕ್ರಿಸ್ತನದ್ದಾಗಿದೆ. ಮಹಾ ಒತ್ತಡದ ಕೆಳಗೂ ಯೇಸು ಬೆರಗುಗೊಳಿಸುವ ಸೈರಣೆಯನ್ನು ತೋರಿಸಿದನು. ಅವನ ಕುರಿತು ಪ್ರವಾದನೆಯು ನುಡಿದದ್ದು: “ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.”​—ಯೆಶಾಯ 53:7.

5 ಭೂಮಿಯ ಮೇಲೆ ತನ್ನ ಶುಶ್ರೂಷೆಯ ಕಾಲದಲ್ಲೆಲ್ಲಾ ಯೇಸು ಎಂಥ ಗಮನಾರ್ಹವಾದ ದೀರ್ಘಶಾಂತಿಯನ್ನು ತೋರಿಸಿದನು! ತನ್ನ ಶತ್ರುಗಳ ಘಾತುಕ ಪ್ರಶ್ನೆಗಳನ್ನು ಅವನು ಸಹಿಸಿಕೊಂಡನು, ವಿರೋಧಕರ ನಿಂದೆಗಳನ್ನು ತಾಳಿಕೊಂಡನು. (ಮತ್ತಾಯ 22:15-46; 1 ಪೇತ್ರ 2:23) ಅವನು ತನ್ನ ಶಿಷ್ಯರೊಂದಿಗೆ ತಾಳ್ಮೆಯಿಂದಿದ್ದನು. ತಮ್ಮಲ್ಲಿ ಯಾರು ದೊಡ್ಡವನು ಎಂಬ ವಿಷಯದಲ್ಲಿ ಅವರು ಸದಾ ಕಚ್ಚಾಡುತ್ತಿರುವಾಗಲೂ ಅವರೊಂದಿಗೆ ಸಹನೆಯಿಂದಿದ್ದನು. (ಮಾರ್ಕ 9:33-37; 10:35-45; ಲೂಕ 22:24-27) ಮತ್ತು ತಾನು ಹಿಡಿದುಕೊಡಲ್ಪಡುವ ರಾತ್ರಿಯಂದು, “ಎಚ್ಚರವಾಗಿರ್ರಿ” ಎಂದು ಹೇಳಿದ ಮೇಲೂ ಪೇತ್ರ ಮತ್ತು ಯೋಹಾನರು ನಿದ್ದೆಮಾಡುವುದನ್ನು ಕಂಡಾಗ, ಯೇಸು ತೋರಿಸಿದಂಥ ಸೈರಣೆಯು ಎಷ್ಟು ಶ್ಲಾಘನೀಯ!​—ಮತ್ತಾಯ 26:36-41.

6. ಯೇಸುವಿನ ದೀರ್ಘಶಾಂತ ಗುಣದಿಂದ ಪೌಲನು ಹೇಗೆ ಪ್ರಯೋಜನ ಹೊಂದಿದನು, ಮತ್ತು ಇದರಿಂದ ನಾವೇನನ್ನು ಕಲಿಯುತ್ತೇವೆ?

6 ತನ್ನ ಮರಣ ಮತ್ತು ಪುನರುತ್ಥಾನದ ಬಳಿಕವೂ ಯೇಸು ದೀರ್ಘಶಾಂತಿಯನ್ನು ತೋರಿಸುತ್ತಾ ಹೋದನು. ವಿಶೇಷವಾಗಿ ಅಪೊಸ್ತಲ ಪೌಲನು ಇದರ ಅರಿವುಳ್ಳವನಾಗಿದ್ದನು, ಯಾಕೆಂದರೆ ಹಿಂದೆ ಅವನು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು. ಪೌಲನು ಬರೆದದ್ದು: “ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು. ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸು ಮುಖ್ಯಪಾಪಿಯಾದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು.” (1 ತಿಮೊಥೆಯ 1:15, 16) ನಮ್ಮ ಹಿಂದಣ ನಡವಳಿಕೆಯು ಹೇಗೆಯೇ ಇದ್ದಿರಲಿ, ನಾವು ಯೇಸುವಿನಲ್ಲಿ ನಂಬಿಕೆಯಿಡುವುದಾದರೆ, ಆತನು ನಮ್ಮೊಂದಿಗೆ ದೀರ್ಘಶಾಂತಿಯಿಂದಿರುವನು. ಆದರೆ ‘ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡುವುದನ್ನು’ ಆತನು ಖಂಡಿತವಾಗಿಯೂ ನಮ್ಮಿಂದ ಅಪೇಕ್ಷಿಸುವನು. (ಅ. ಕೃತ್ಯಗಳು 26:20; ರೋಮಾಪುರ 2:4) ಏಷಿಯಾ ಮೈನರ್‌ನ ಏಳು ಸಭೆಗಳಿಗೆ ಕ್ರಿಸ್ತನು ಕಳುಹಿಸಿದ ಸಂದೇಶಗಳು ತೋರಿಸುವುದೇನೆಂದರೆ, ಅವನು ದೀರ್ಘಶಾಂತನಾಗಿದ್ದಾನೆ ಆದರೆ ಅದೇ ಸಮಯದಲ್ಲಿ ಜನರ ನಡವಳಿಕೆಯಲ್ಲಿ ಸುಧಾರಣೆಯನ್ನೂ ಅಪೇಕ್ಷಿಸುತ್ತಾನೆ.​—ಪ್ರಕಟನೆ, 2 ಮತ್ತು 3ನೆಯ ಅಧ್ಯಾಯಗಳು.

ಆತ್ಮದ ಒಂದು ಫಲ

7. ದೀರ್ಘಶಾಂತಿ ಮತ್ತು ಪವಿತ್ರಾತ್ಮದ ನಡುವೆ ಯಾವ ಸಂಬಂಧವಿದೆ?

7 ಗಲಾತ್ಯದವರಿಗೆ ಬರೆದ ತನ್ನ ಪತ್ರದ 5ನೆಯ ಅಧ್ಯಾಯದಲ್ಲಿ, ಶರೀರಭಾವದ ಕರ್ಮಗಳು ಮತ್ತು ಆತ್ಮದ ಫಲಗಳ ನಡುವಣ ವ್ಯತ್ಯಾಸವನ್ನು ಪೌಲನು ತೋರಿಸುತ್ತಾನೆ. (ಗಲಾತ್ಯ 5:19-23) ದೀರ್ಘಶಾಂತಿಯು ಯೆಹೋವನ ಗುಣಗಳಲ್ಲಿ ಒಂದಾಗಿರುವುದರಿಂದ, ಈ ಗುಣದ ಮೂಲನು ಆತನಾಗಿದ್ದಾನೆ ಮತ್ತು ಇದು ಆತನ ಆತ್ಮದ ಒಂದು ಫಲವಾಗಿದೆ. (ವಿಮೋಚನಕಾಂಡ 34:6, 7) ಪೌಲನು ವಿವರಿಸಿರುವ ಆತ್ಮದ ಫಲಗಳಾದ “ಪ್ರೀತಿ ಸಂತೋಷ ಸಮಾಧಾನ . . . ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಗಳೊಂದಿಗೆ ದೀರ್ಘಶಾಂತಿಯು ನಾಲ್ಕನೆಯದಾಗಿ ಪಟ್ಟಿಮಾಡಲ್ಪಟ್ಟಿದೆ. (ಗಲಾತ್ಯ 5:22, 23) ಆದುದರಿಂದ ದೇವರ ಸೇವಕರು ದೈವಿಕ ತಾಳ್ಮೆಯನ್ನು ಅಥವಾ ದೀರ್ಘಶಾಂತಿಯನ್ನು ತೋರಿಸುವಾಗ, ಅವರು ಅದನ್ನು ದೇವರ ಪವಿತ್ರಾತ್ಮದ ಪ್ರಭಾವದಿಂದ ಮಾಡುತ್ತಾರೆ.

8. ದೀರ್ಘಶಾಂತಿಯನ್ನೂ ಸೇರಿಸಿ ಆತ್ಮದ ಫಲಗಳನ್ನು ಬೆಳೆಸಿಕೊಳ್ಳಲು ನಮಗೆ ಯಾವುದು ಸಾಧ್ಯಮಾಡುವುದು?

8 ಆದರೂ ಯೆಹೋವನು ತನ್ನ ಆತ್ಮವನ್ನು ಒಬ್ಬ ವ್ಯಕ್ತಿಯ ಮೇಲೆ ಬಲವಂತದಿಂದ ಹೊರಿಸುತ್ತಾನೆಂದು ಇದರ ಅರ್ಥವಲ್ಲ. ನಾವು ಸಿದ್ಧಮನಸ್ಸಿನಿಂದ ಅದರ ಪ್ರಭಾವಕ್ಕೆ ಮಣಿಯಬೇಕಾಗಿದೆ. (2 ಕೊರಿಂಥ 3:17; ಎಫೆಸ 4:30) ನಾವು ಮಾಡುವ ಪ್ರತಿಯೊಂದು ವಿಷಯದಲ್ಲೂ ಆತ್ಮದ ಫಲಗಳನ್ನು ಬೆಳೆಸಿಕೊಳ್ಳುವ ಮೂಲಕ ಆ ಆತ್ಮವು ನಮ್ಮ ಜೀವಿತಗಳಲ್ಲಿ ಕಾರ್ಯನಡಿಸುವಂತೆ ನಾವು ಬಿಡುತ್ತೇವೆ. ಶರೀರಭಾವದ ಕರ್ಮಗಳು ಮತ್ತು ಆತ್ಮದ ಫಲಗಳನ್ನು ಪಟ್ಟಿಮಾಡಿದ ಮೇಲೆ, ಪೌಲನು ಕೂಡಿಸಿದ್ದು: “ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ. ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.” (ಗಲಾತ್ಯ 5:25; 6:7, 8) ದೀರ್ಘಶಾಂತಿಯನ್ನು ಬೆಳೆಸಿಕೊಳ್ಳುವುದರಲ್ಲಿ ನಾವು ಯಶಸ್ವಿಗಳಾಗಬೇಕಾದರೆ, ಪವಿತ್ರಾತ್ಮವು ಕ್ರೈಸ್ತರಲ್ಲಿ ಉತ್ಪಾದಿಸುವ ಉಳಿದ ಫಲಗಳನ್ನು ಸಹ ನಾವು ಬೆಳೆಸಿಕೊಳ್ಳಬೇಕು.

‘ಪ್ರೀತಿ ದೀರ್ಘಶಾಂತಿಯುಳ್ಳದ್ದು’

9. “ಪ್ರೀತಿ ದೀರ್ಘಶಾಂತಿಯುಳ್ಳದ್ದು” ಎಂದು ಪೌಲನು ಕೊರಿಂಥದ ಸಭೆಯವರಿಗೆ ಏಕೆ ಹೇಳಿರಸಾಧ್ಯವಿದೆ?

9 ಪ್ರೀತಿ ಮತ್ತು ದೀರ್ಘಶಾಂತಿಯ ನಡುವೆ ಒಂದು ವಿಶೇಷವಾದ ಸಂಬಂಧವಿರುವುದನ್ನು ಪೌಲನು ತೋರಿಸಿದನು. ಅವನಂದದ್ದು: “ಪ್ರೀತಿ ಬಹು ತಾಳ್ಮೆ [“ದೀರ್ಘಶಾಂತಿ,” NW] ಯುಳ್ಳದ್ದು.” (1 ಕೊರಿಂಥ 13:4) ಬೈಬಲ್‌ ವಿದ್ವಾಂಸರಾದ ಆ್ಯಲ್ಬರ್ಟ್‌ ಬಾರ್ನ್ಸ್‌ ಸೂಚಿಸುವುದೇನೆಂದರೆ, ಪೌಲನು ಕೊರಿಂಥದ ಕ್ರೈಸ್ತ ಸಭೆಯಲ್ಲಿದ್ದ ಜಗಳ ಮತ್ತು ಪಕ್ಷಭೇದದ ನಿಮಿತ್ತವಾಗಿ ಅದನ್ನು ಒತ್ತಿಹೇಳಿದನು. (1 ಕೊರಿಂಥ 1:11, 12) ಬಾರ್ನ್ಸ್‌ ಎತ್ತಿಹೇಳಿದ್ದು: “ಇಲ್ಲಿ [ದೀರ್ಘಶಾಂತಿಗೆ] ಉಪಯೋಗಿಸಲ್ಪಟ್ಟ ಶಬ್ದವು ದುಡುಕು ಎಂಬ ಪದಕ್ಕೆ ವಿರುದ್ಧ ಪದವಾಗಿದ್ದು, ರೋಷಾವೇಶದ ಮಾತು ಮತ್ತು ವಿಚಾರಗಳಿಗೆ ಹಾಗೂ ಕೆರಳಿಕೆಗೆ ವಿರುದ್ಧವಾದದ್ದಾಗಿದೆ. ವಿರೋಧಿಸಲ್ಪಟ್ಟಾಗ ಅಥವಾ ಕೆರಳಿಸಲ್ಪಟ್ಟಾಗ ದೀರ್ಘಕಾಲ ತಾಳಿಕೊಳ್ಳುವ ಮಾನಸಿಕ ಸ್ಥಿತಿಯನ್ನು ಅದು ಸೂಚಿಸುತ್ತದೆ.” ಪ್ರೀತಿ ಮತ್ತು ದೀರ್ಘಶಾಂತಿಯು ಕ್ರೈಸ್ತ ಸಭೆಯ ಶಾಂತಿಸಮಾಧಾನಕ್ಕೆ ಇನ್ನೂ ಬಹಳವಾಗಿ ನೆರವಾಗುತ್ತಲಿದೆ.

10. (ಎ) ದೀರ್ಘಶಾಂತಿಯನ್ನು ತೋರಿಸಲು ಪ್ರೀತಿಯು ನಮಗೆ ಹೇಗೆ ಸಹಾಯಮಾಡುತ್ತದೆ, ಮತ್ತು ಈ ಸಂಬಂಧದಲ್ಲಿ ಅಪೊಸ್ತಲ ಪೌಲನು ಯಾವ ಸಲಹೆಯನ್ನು ಕೊಡುತ್ತಾನೆ? (ಬಿ) ದೇವರ ದೀರ್ಘಶಾಂತಿ ಮತ್ತು ದಯೆಯ ಕುರಿತು ಒಬ್ಬ ಬೈಬಲ್‌ ವಿದ್ವಾಂಸರು ಯಾವ ಟಿಪ್ಪಣಿಕೊಟ್ಟಿದ್ದಾರೆ? (ಪಾದಟಿಪ್ಪಣಿ ನೋಡಿ.)

10 “ಪ್ರೀತಿ ಬಹು ತಾಳ್ಮೆಯುಳ್ಳದ್ದು, [“ದೀರ್ಘಶಾಂತಿಯುಳ್ಳದ್ದು,” NW], ಪ್ರೀತಿ ದಯೆ ತೋರಿಸುವದು . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ.” ಹೀಗೆ ಅನೇಕ ವಿಧಗಳಲ್ಲಿ ಪ್ರೀತಿಯು ನಮಗೆ ದೀರ್ಘಶಾಂತಿಯೆಂಬ ಗುಣವನ್ನು ತೋರಿಸುವಂತೆ ಸಹಾಯಮಾಡುತ್ತದೆ. * (1 ಕೊರಿಂಥ 13:4, 5) ಒಬ್ಬರನ್ನೊಬ್ಬರು ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಮತ್ತು ನಾವೆಲ್ಲರೂ ಅಪರಿಪೂರ್ಣರೂ ಕುಂದುಕೊರತೆಗಳುಳ್ಳವರೂ ಆಗಿದ್ದೇವೆಂಬುದನ್ನು ನೆನಪಿನಲ್ಲಿಡುವಂತೆ ಪ್ರೀತಿಯು ನಮಗೆ ಸಹಾಯಮಾಡುತ್ತದೆ. ಒಬ್ಬರಿಗೊಬ್ಬರು ಪರಿಗಣನೆಯನ್ನು ತೋರಿಸುತ್ತಾ ಕ್ಷಮಾಶೀಲರಾಗಿರುವಂತೆಯೂ ಅದು ನಮಗೆ ನೆರವು ನೀಡುತ್ತದೆ. “ನೀವು ಪೂರ್ಣ ವಿನಯ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ” ಎಂದು ಅಪೊಸ್ತಲ ಪೌಲನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ.​—ಎಫೆಸ 4:1-3.

11. ಸಾಕ್ಷಿಗಳ ಕ್ರೈಸ್ತ ಸಮುದಾಯಗಳಲ್ಲಿ ದೀರ್ಘಶಾಂತ ಗುಣವು ವಿಶೇಷವಾಗಿ ಪ್ರಾಮುಖ್ಯವಾಗಿದೆಯೇಕೆ?

11 ಸಭೆಯಲ್ಲಿ, ಬೆತೆಲ್‌ ಕುಟುಂಬದಲ್ಲಿ, ಮಿಷನೆರಿ ಮನೆಗಳಲ್ಲಿ, ಕಟ್ಟಡ ನಿರ್ಮಾಣ ತಂಡಗಳಲ್ಲಿ ಇಲ್ಲವೇ ಕ್ರಿಸ್ತೀಯ ಶಾಲೆಗಳಲ್ಲಿರುವ ಸದಸ್ಯರಿಂದ ತೋರಿಸಲ್ಪಡುವ ದೀರ್ಘಶಾಂತಿಯು, ಕ್ರೈಸ್ತ ಸಮುದಾಯದ ಶಾಂತಿ ಮತ್ತು ಸಂತೋಷಕ್ಕೆ ನೆರವಾಗುತ್ತದೆ. ವ್ಯಕ್ತಿತ್ವಗಳು, ಅಭಿರುಚಿಗಳು, ಪಾಲನೆಪೋಷಣೆ, ನಯನಾಜೂಕು ರೀತಿನೀತಿಗಳು ಮತ್ತು ಆರೋಗ್ಯ ಸೂತ್ರಗಳಲ್ಲಿನ ಭಿನ್ನತೆಗಳು ಆಗಿಂದಾಗ್ಗೆ ಕಷ್ಟಕರ ಸನ್ನಿವೇಶಗಳನ್ನು ಉಂಟುಮಾಡಬಹುದು. ಕುಟುಂಬಗಳಲ್ಲೂ ಕಷ್ಟಕರ ಸನ್ನಿವೇಶಗಳು ಉಂಟಾಗಸಾಧ್ಯವಿದೆ. ಆದುದರಿಂದ ಮಂದಕೋಪಿಗಳಾಗಿರುವುದು ಅತ್ಯಾವಶ್ಯಕ. (ಜ್ಞಾನೋಕ್ತಿ 14:29; 15:18; 19:11) ಸನ್ನಿವೇಶವನ್ನು ಒಳ್ಳೇದಕ್ಕಾಗಿ ಮಾರ್ಪಡಿಸಲು ದೀರ್ಘಶಾಂತಿ, ಅಂದರೆ ತಾಳ್ಮೆಯುತ ಸೈರಣೆಯು ಎಲ್ಲರಲ್ಲಿಯೂ ಇರಬೇಕಾದ ಅಗತ್ಯವಿದೆ.​—ರೋಮಾಪುರ 15:1-6.

ದೀರ್ಘಶಾಂತಿಯು ನಾವು ತಾಳಿಕೊಳ್ಳುವಂತೆ ಸಹಾಯಮಾಡುತ್ತದೆ

12. ಕಷ್ಟಕರವಾದ ಸನ್ನಿವೇಶಗಳಲ್ಲಿ ದೀರ್ಘಶಾಂತಿಯು ಏಕೆ ಪ್ರಾಮುಖ್ಯವಾಗಿದೆ?

12 ಯಾವುದೇ ತ್ವರಿತ ಉಪಾಯಕಾಣದ ಹಾಗೂ ಕೊನೆಯಿಲ್ಲದಂತೆ ತೋರುವ ಕಷ್ಟಕರವಾದ ಸನ್ನಿವೇಶಗಳನ್ನು ತಾಳಿಕೊಳ್ಳಲು ದೀರ್ಘಶಾಂತಿಯು ನಮಗೆ ಸಹಾಯಮಾಡುತ್ತದೆ. ಆರಂಭದಲ್ಲಿ ತಿಳಿಸಲಾದ ರೇಜೀಸ್‌ನ ವಿಷಯದಲ್ಲಿ ಇದು ಸತ್ಯವಾಯಿತು. ವರ್ಷಗಳಿಂದ ಅವನ ಪತ್ನಿಯು ಅವನು ಯೆಹೋವನನ್ನು ಸೇವಿಸಲು ಮಾಡುತ್ತಿದ್ದ ಪ್ರಯತ್ನಗಳನ್ನು ವಿರೋಧಿಸುತ್ತಿದ್ದಳು. ಆದರೆ ಒಂದು ದಿನ ಅವಳು ಕಣ್ಣೀರಿಡುತ್ತಾ ಅವನ ಬಳಿಗೆ ಬಂದು ಹೇಳಿದ್ದು: “ಇದೇ ಸತ್ಯವೆಂದು ನನಗೆ ಮನದಟ್ಟಾಗಿದೆ. ಬೈಬಲಧ್ಯಯನ ಮಾಡಬಯಸುತ್ತೇನೆ. ಸಹಾಯಮಾಡುವಿರಾ?” ಕೊನೆಗೆ ಅವಳೂ ಸ್ನಾನಿತ ಸಾಕ್ಷಿಯಾದಳು. “ಇಷ್ಟೊಂದು ವರ್ಷಗಳ ಒದ್ದಾಟ, ತಾಳ್ಮೆ ಮತ್ತು ಸೈರಣೆಯನ್ನು ಯೆಹೋವನು ಆಶೀರ್ವದಿಸಿದ್ದಾನೆಂಬುದಕ್ಕೆ ಇದು ರುಜುವಾತು” ಅನ್ನುತ್ತಾನೆ ರೇಜೀಸ್‌. ಅವನ ದೀರ್ಘಶಾಂತಿಗೆ ಪ್ರತಿಫಲವು ದೊರೆಯಿತು.

13. ಪೌಲನು ತಾಳಿಕೊಳ್ಳುವಂತೆ ಯಾವುದು ಅವನಿಗೆ ಸಹಾಯಮಾಡಿತು, ಮತ್ತು ಅವನ ಉದಾಹರಣೆಯು ನಮಗೆ ತಾಳಿಕೊಳ್ಳಲು ಹೇಗೆ ಸಹಾಯಮಾಡುತ್ತದೆ?

13 ಹಿಂದೆ ಸಾ.ಶ. ಒಂದನೆಯ ಶತಮಾನದಲ್ಲಿ, ಅಪೊಸ್ತಲ ಪೌಲನು ದೀರ್ಘಶಾಂತ ಗುಣದಲ್ಲಿ ಉತ್ತಮ ಮಾದರಿಯಾಗಿದ್ದನು. (2 ಕೊರಿಂಥ 6:3-10; 1 ತಿಮೊಥೆಯ 1:16) ಪೌಲನ ಮರಣಕ್ಕೆ ಸಮಯವು ಹತ್ತಿರವಾದಾಗ, ತನ್ನ ಯುವ ಸಂಗಡಿಗನಾದ ತಿಮೊಥೆಯನಿಗೆ ಬುದ್ಧಿವಾದ ನೀಡುತ್ತಾ, ಕ್ರೈಸ್ತರೆಲ್ಲರೂ ಹಿಂಸೆಯನ್ನು ಅನುಭವಿಸುವರೆಂಬ ಎಚ್ಚರಿಕೆಯನ್ನು ಅವನು ಕೊಟ್ಟನು. ಅವನು ತನ್ನ ಸ್ವಂತ ಮಾದರಿಯನ್ನು ಆಧಾರವಾಗಿ ಕೊಟ್ಟನು ಮತ್ತು ತಾಳಿಕೊಳ್ಳಲು ಬೇಕಾದ ಮೂಲ ಕ್ರಿಸ್ತೀಯ ಗುಣಗಳನ್ನು ಶಿಫಾರಸ್ಸುಮಾಡಿದನು. ಪೌಲನು ಬರೆದದ್ದು: “ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘಶಾಂತಿ ಪ್ರೀತಿ ಸೈರಣೆ ಇವುಗಳನ್ನೂ ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು; ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು. ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:10-12; ಅ. ಕೃತ್ಯಗಳು 13:49-51; 14:19-22) ತಾಳಿಕೊಳ್ಳಲು ನಮಗೆಲ್ಲರಿಗೆ ನಂಬಿಕೆ, ಪ್ರೀತಿ ಮತ್ತು ದೀರ್ಘಶಾಂತಿಯು ಅಗತ್ಯವಾಗಿ ಬೇಕಾಗಿದೆ.

ದೀರ್ಘಶಾಂತಿಯನ್ನು ಧರಿಸಿಕೊಳ್ಳುವುದು

14. ದೀರ್ಘಶಾಂತಿಯಂಥ ದೈವಿಕ ಗುಣಗಳನ್ನು ಪೌಲನು ಯಾವುದಕ್ಕೆ ಹೋಲಿಸಿದನು, ಮತ್ತು ಕೊಲೊಸ್ಸೆಯ ಕ್ರೈಸ್ತರಿಗೆ ಅವನು ಯಾವ ಬುದ್ಧಿವಾದವನ್ನು ನೀಡಿದನು?

14 ಅಪೊಸ್ತಲ ಪೌಲನು ದೀರ್ಘಶಾಂತಿ ಮತ್ತು ಇತರ ದೈವಿಕ ಗುಣಗಳನ್ನು, ಕ್ರೈಸ್ತನೊಬ್ಬನು “ಪೂರ್ವಸ್ವಭಾವವನ್ನು” ಅದರ ಕೃತ್ಯಗಳ ಸಹಿತ ತೆಗೆದುಹಾಕಿದ ಮೇಲೆ ಧರಿಸಿಕೊಳ್ಳಬೇಕಾದ ಬಟ್ಟೆಬರೆಗೆ ಹೋಲಿಸಿದನು. (ಕೊಲೊಸ್ಸೆ 3:5-10) ಅವನು ಬರೆದದ್ದು: “ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”​—ಕೊಲೊಸ್ಸೆ 3:12-14.

15. ಕ್ರೈಸ್ತರು ದೀರ್ಘಶಾಂತಿ ಮತ್ತು ಇತರ ದೈವಿಕ ಗುಣಗಳನ್ನು ‘ಧರಿಸಿಕೊಳ್ಳುವಾಗ,’ ಯಾವ ಫಲಿತಾಂಶವು ದೊರೆಯುತ್ತದೆ?

15 ಸಭೆಯ ಸದಸ್ಯರು ಕನಿಕರ, ದಯೆ, ದೀನಭಾವ, ಸಾತ್ವಿಕತ್ವ, ದೀರ್ಘಶಾಂತಿ ಮತ್ತು ಪ್ರೀತಿಯನ್ನು ‘ಧರಿಸಿಕೊಳ್ಳುವಾಗ,’ ಅವರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶಕ್ತರಾಗುತ್ತಾರೆ ಮತ್ತು ಯೆಹೋವನ ಸೇವೆಯಲ್ಲಿ ಐಕ್ಯತೆಯಿಂದ ಮುಂದುವರಿಯುತ್ತಾರೆ. ವಿಶೇಷವಾಗಿ ಕ್ರೈಸ್ತ ಮೇಲ್ವಿಚಾರಕರು ದೀರ್ಘಶಾಂತಿಯಿಂದಿರುವ ಅಗತ್ಯವಿದೆ. ಇನ್ನೊಬ್ಬ ಕ್ರೈಸ್ತನಿಗೆ ಗದರಿಕೆಯನ್ನು ನೀಡಬೇಕಾದ ಸಂದರ್ಭಗಳು ಬರಬಹುದು, ಆದರೆ ಇದನ್ನು ಮಾಡುವ ವಿವಿಧ ರೀತಿಗಳಿವೆ. ತಿಮೊಥೆಯನಿಗೆ ಬರೆಯುವಾಗ ಪೌಲನು ಆ ಉತ್ತಮ ಮನೋಭಾವವನ್ನು ವಿವರಿಸಿದನು: “ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.” (2 ತಿಮೊಥೆಯ 4:2) ಹೌದು, ಯೆಹೋವನ ಕುರಿಗಳನ್ನು ಯಾವಾಗಲೂ ದೀರ್ಘಶಾಂತಿಯಿಂದ, ಆದರದಿಂದ ಮತ್ತು ಕೋಮಲವಾಗಿ ಉಪಚರಿಸಬೇಕಾಗಿದೆ.​—ಮತ್ತಾಯ 7:12; 11:28; ಅ. ಕೃತ್ಯಗಳು 20:28, 29; ರೋಮಾಪುರ 12:10.

“ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ”

16. “ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ” ಎಂಬ ಬುದ್ಧಿವಾದವನ್ನು ನಾವು ಪಾಲಿಸುವಾಗ ಏನು ಫಲಿಸುತ್ತದೆ?

16 ಮಾನವರ ಕಡೆಗೆ ಯೆಹೋವನು ತೋರಿಸುವ ದೀರ್ಘಶಾಂತಿಯು, “ಎಲ್ಲರಲ್ಲಿಯೂ ದೀರ್ಘಶಾಂತರಾಗಿ”ರಬೇಕಾದ ನೈತಿಕ ಹಂಗನ್ನು ನಮ್ಮ ಮೇಲೆ ಹೊರಿಸುತ್ತದೆ. (1 ಥೆಸಲೊನೀಕ 5:14) ಇದರ ಅರ್ಥವೇನೆಂದರೆ, ನಾವು ಸಾಕ್ಷಿಗಳಲ್ಲದ ಕುಟುಂಬ ಸದಸ್ಯರ ಕಡೆಗೆ, ನೆರೆಯವರು, ಸಹೋದ್ಯೋಗಿಗಳು ಮತ್ತು ಸಹಪಾಠಿಗಳ ಕಡೆಗೆ ತಾಳ್ಮೆಯನ್ನು ತೋರಿಸುವುದೇ. ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ತಾವು ಸಹವಾಸ ಮಾಡುವ ಜನರಿಂದ ಕಟು ಟೀಕೆಯನ್ನು ಅಥವಾ ತೀವ್ರ ವಿರೋಧವನ್ನು ಅನೇಕ ವರ್ಷಗಳ ವರೆಗೆ ತಾಳಿಕೊಂಡದ್ದರಿಂದಾಗಿ, ಸಾಕ್ಷಿಗಳು ಅನೇಕ ಪೂರ್ವಾಭಿಪ್ರಾಯಗಳನ್ನು ಜಯಿಸಲು ಸಾಧ್ಯವಾಗಿದೆ. (ಕೊಲೊಸ್ಸೆ 4:5, 6) ಅಪೊಸ್ತಲ ಪೇತ್ರನು ಬರೆದದ್ದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.”​—1 ಪೇತ್ರ 2:12.

17. ಯೆಹೋವನ ಪ್ರೀತಿ ಮತ್ತು ದೀರ್ಘಶಾಂತಿಯನ್ನು ನಾವು ಹೇಗೆ ಅನುಕರಿಸಬಲ್ಲೆವು, ಮತ್ತು ನಾವು ಹಾಗೇಕೆ ಮಾಡಬೇಕು?

17 ಯೆಹೋವನ ದೀರ್ಘಶಾಂತಿಯು ಕೋಟ್ಯಂತರ ಜನರಿಗೆ ರಕ್ಷಣೆಯ ಅರ್ಥದಲ್ಲಿರುವುದು. (2 ಪೇತ್ರ 3:9, 15) ಯೆಹೋವನ ಪ್ರೀತಿ ಮತ್ತು ದೀರ್ಘಶಾಂತಿಯನ್ನು ನಾವು ಅನುಕರಿಸುವುದಾದರೆ, ನಾವು ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಮುಂದುವರಿಯುವೆವು ಮತ್ತು ಕ್ರಿಸ್ತನ ರಾಜ್ಯದಾಳಿಕೆಗೆ ಅಧೀನರಾಗಲು ಇತರರಿಗೆ ಕಲಿಸುತ್ತಾ ಇರುವೆವು. (ಮತ್ತಾಯ 28:18-20; ಮಾರ್ಕ 13:10) ಒಂದುವೇಳೆ ನಾವು ಸಾರುವುದನ್ನು ನಿಲ್ಲಿಸಿಬಿಟ್ಟಲ್ಲಿ, ಯೆಹೋವನ ದೀರ್ಘಶಾಂತಿಯನ್ನು ನಾವು ಸೀಮಿತಗೊಳಿಸಲು ಬಯಸುತ್ತೇವೊ ಎಂಬಂತಿರುವುದು ಮತ್ತು ಜನರನ್ನು ಪಶ್ಚಾತ್ತಾಪಕ್ಕೆ ನಡಿಸುವ ಆತನ ಉದ್ದೇಶವನ್ನು ಗ್ರಹಿಸಲು ತಪ್ಪಿದವರಾಗಿ ಕಂಡುಬಂದೇವು.​—ರೋಮಾಪುರ 2:4.

18. ಕೊಲೊಸ್ಸೆಯವರಿಗಾಗಿ ಪೌಲನ ಪ್ರಾರ್ಥನೆ ಏನಾಗಿತ್ತು?

18 ಏಷಿಯಾ ಮೈನರ್‌ನಲ್ಲಿದ್ದ ಕೊಲೊಸ್ಸೆಯ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಹೇಳಿದ್ದು: “ಆದಕಾರಣ ನಾವು ನಿಮ್ಮ ಸುದ್ದಿಯನ್ನು ಕೇಳಿದ ದಿವಸದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ [“ಯೆಹೋವನ,” NW] ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ ಆತನ ಮಹಿಮಶಕ್ತಿಯ ಪ್ರಕಾರ ಪರಿಪೂರ್ಣಬಲಹೊಂದಿ ಬಲಿಷ್ಠರಾಗಿ ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸುವವರಾಗಿರಬೇಕೆಂತಲೂ . . . ದೇವರನ್ನು ಬೇಡಿಕೊಳ್ಳುತ್ತೇವೆ.”​—ಕೊಲೊಸ್ಸೆ 1:9-12.

19, 20. (ಎ) ಯೆಹೋವನ ಮುಂದುವರಿಯುವ ದೀರ್ಘಶಾಂತಿಯನ್ನು ಒಂದು ಪರೀಕ್ಷೆಯಾಗಿ ಪರಿಗಣಿಸುವುದನ್ನು ನಾವು ಹೇಗೆ ತಪ್ಪಿಸಬಹುದು? (ಬಿ) ದೀರ್ಘಶಾಂತಿಯಿಂದಿರುವುದರಿಂದ ಯಾವ ಪ್ರಯೋಜನಗಳು ಬರುವವು?

19 ನಾವು, “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬ” ‘ಯೆಹೋವನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡಿರುವಲ್ಲಿ,’ ಆತನ ಮುಂದುವರಿಯುತ್ತಿರುವ ದೀರ್ಘಶಾಂತಿ ಅಥವಾ ತಾಳ್ಮೆಯು ನಮಗೊಂದು ಪರೀಕ್ಷೆಯಾಗಿ ಇರಬಾರದು. (1 ತಿಮೊಥೆಯ 2:4) ನಾವು “ಸಕಲ ಸತ್ಕಾರ್ಯವೆಂಬ ಫಲವನ್ನು,” ವಿಶೇಷವಾಗಿ “ರಾಜ್ಯದ ಈ ಸುವಾರ್ತೆ”ಯನ್ನು ಸಾರುವ ಕಾರ್ಯದಲ್ಲಿ ಫಲವನ್ನು ಕೊಡುತ್ತಾ ಮುಂದುವರಿಯುವೆವು. (ಮತ್ತಾಯ 24:14) ನಾವು ನಂಬಿಗಸ್ತಿಕೆಯಿಂದ ಇದನ್ನು ಮಾಡುತ್ತಾ ಮುಂದುವರಿದರೆ, “ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸಲು” ಶಕ್ತರಾಗಿರುವಂತೆ ಬೇಕಾದ ‘ಪರಿಪೂರ್ಣ ಬಲವನ್ನು’ ಯೆಹೋವನು ಕೊಡುವನು. ನಾವು ಹೀಗೆ ಮಾಡುವಾಗ, ‘ಯೆಹೋವನಿಗೆ ಯೋಗ್ಯರಾಗಿ ನಡೆಯು’ವೆವು ಮತ್ತು “ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸು”ವುದರಿಂದ ಬರುವ ಶಾಂತಿಯನ್ನು ಅನುಭವಿಸುವೆವು.

20 ಯೆಹೋವನ ದೀರ್ಘಶಾಂತಿಯಲ್ಲಿರುವ ವಿವೇಕವು ನಮಗೆ ಪೂರ್ಣವಾಗಿ ಮನದಟ್ಟಾಗುವಂತಿರಲಿ. ಅದು ನಮ್ಮ ರಕ್ಷಣೆಗಾಗಿ ಹಾಗೂ ನಮ್ಮ ಸಾರುವಿಕೆ ಮತ್ತು ಕಲಿಸುವಿಕೆಗೆ ಕಿವಿಗೊಡುವ ಜನರ ರಕ್ಷಣೆಗಾಗಿ ಕಾರ್ಯನಡಿಸುತ್ತದೆ. (1 ತಿಮೊಥೆಯ 4:16) ದೇವರಾತ್ಮದ ಫಲಗಳನ್ನು ಅಂದರೆ ಪ್ರೀತಿ, ದಯೆ, ಉಪಕಾರ, ಸಾಧುತ್ವ, ಶಮೆದಮೆಗಳೆಂಬ ಗುಣಗಳನ್ನು ಬೆಳೆಸಿಕೊಳ್ಳುವುದು, ನಾವು ಸಂತೋಷದಿಂದ ದೀರ್ಘಶಾಂತಿಯನ್ನು ತೋರಿಸುವಂತೆ ಸಾಧ್ಯಗೊಳಿಸುವುದು. ನಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತು ಸಭೆಯಲ್ಲಿನ ನಮ್ಮ ಸಹೋದರ ಸಹೋದರಿಯರೊಂದಿಗೆ ಶಾಂತಿಯಿಂದ ಜೀವಿಸಲು ಶಕ್ತರಾಗುವೆವು. ನಮ್ಮ ಸಹೋದ್ಯೋಗಿಗಳು ಮತ್ತು ಸಹಪಾಠಿಗಳೊಂದಿಗೆ ತಾಳ್ಮೆಯಿಂದಿರಲು ಸಹ ದೀರ್ಘಶಾಂತಿಯು ನಮಗೆ ಸಹಾಯಮಾಡುವುದು. ಮತ್ತು ನಮ್ಮ ದೀರ್ಘಶಾಂತಿಗೆ ಒಂದು ಉದ್ದೇಶವಿರುವುದು. ಅದೇನಂದರೆ, ದುರ್ಜನರಿಗೆ ರಕ್ಷಣೆಯನ್ನು ತರುವದು ಮತ್ತು ದೀರ್ಘಶಾಂತಿಯ ದೇವರಾದ ಯೆಹೋವನಿಗೆ ಮಹಿಮೆಯುಂಟಾಗುವಂತೆ ಮಾಡುವುದೇ.

[ಪಾದಟಿಪ್ಪಣಿ]

^ ಪ್ಯಾರ. 10 “ಪ್ರೀತಿ ದೀರ್ಘಶಾಂತಿಯುಳ್ಳದ್ದು, ಪ್ರೀತಿ ದಯೆ ತೋರಿಸುವದು” ಎಂಬ ಪೌಲನ ಹೇಳಿಕೆಯ ಮೇಲೆ ಟಿಪ್ಪಣಿ ನೀಡುತ್ತಾ ಬೈಬಲ್‌ ವಿದ್ವಾಂಸರಾದ ಗಾರ್ಡನ್‌ ಡಿ. ಫೀ ಬರೆಯುವುದು: “ಪೌಲನ ವಿಚಾರದಲ್ಲಿ [ದೀರ್ಘಶಾಂತಿ ಮತ್ತು ದಯೆ] ಇವೆರಡೂ, ಮಾನವಕುಲದ ಕಡೆಗಿನ ದೈವಿಕ ಮನೋಭಾವದ ಎರಡು ಮುಖಗಳಾಗಿವೆ. (ಸಿಎಫ್‌. ರೋಮಾ. 2:4) ಒಂದು ಕಡೆ, ಮಾನವ ದಂಗೆಯ ಕಡೆಗೆ ತನ್ನ ಕೋಪವನ್ನು ತಡೆದುಹಿಡಿಯುವ ಮೂಲಕ ದೇವರು ತನ್ನ ಪ್ರೀತಿಯ ಸೈರಣೆಯನ್ನು ತೋರಿಸಿದ್ದಾನೆ; ಇನ್ನೊಂದು ಕಡೆ, ಆತನ ದಯೆಯು, ಆತನ ಕರುಣೆಯ ಸಹಸ್ರಾರು ಅಭಿವ್ಯಕ್ತಿಗಳಲ್ಲಿ ತೋರಿಬಂದಿದೆ. ಹೀಗೆ ಪ್ರೀತಿಯ ಕುರಿತಾದ ಪೌಲನ ವರ್ಣನೆಯು ದೇವರ ಈ ಇಮ್ಮಡಿ ವರ್ಣನೆಯಿಂದ ಆರಂಭವಾಗುತ್ತದೆ. ದೈವಿಕ ನ್ಯಾಯತೀರ್ಪಿಗೆ ಅರ್ಹರಾಗಿರುವವರ ಕಡೆಗೆ ಕ್ರಿಸ್ತನ ಮೂಲಕ ಆತನು ಸೈರಣೆಯನ್ನೂ ದಯೆಯನ್ನೂ ತೋರಿಸಿದನು.”

ನೀವು ವಿವರಿಸಬಲ್ಲಿರೋ?

• ಯಾವ ರೀತಿಯಲ್ಲಿ ಕ್ರಿಸ್ತನು ದೀರ್ಘಶಾಂತಿಯ ಅದ್ಭುತಕರ ಮಾದರಿಯಾಗಿದ್ದಾನೆ?

• ದೀರ್ಘಶಾಂತಿಯನ್ನು ಬೆಳೆಸಿಕೊಳ್ಳಲು ನಮಗೆ ಯಾವುದು ಸಹಾಯಮಾಡುತ್ತದೆ?

• ದೀರ್ಘಶಾಂತಿಯು ಕುಟುಂಬಗಳಿಗೆ, ಕ್ರೈಸ್ತ ಸಮುದಾಯಗಳಿಗೆ ಮತ್ತು ಹಿರಿಯರಿಗೆ ಹೇಗೆ ಸಹಾಯಮಾಡುತ್ತದೆ?

• ನಾವು ದೀರ್ಘಶಾಂತರಾಗಿರುವುದರಿಂದ ನಮಗೆ ಮತ್ತು ಇತರರಿಗೆ ಹೇಗೆ ಪ್ರಯೋಜನವಾಗುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಮಹಾ ಒತ್ತಡದ ಕೆಳಗೂ ಯೇಸು ತನ್ನ ಶಿಷ್ಯರೊಂದಿಗೆ ತಾಳ್ಮೆಯಿಂದಿದ್ದನು

[ಪುಟ 16ರಲ್ಲಿರುವ ಚಿತ್ರ]

ತಮ್ಮ ಸಹೋದರರೊಂದಿಗೆ ವ್ಯವಹರಿಸುವುದರಲ್ಲಿ, ಕ್ರೈಸ್ತ ಮೇಲ್ವಿಚಾರಕರು ದೀರ್ಘಶಾಂತಿಯ ಒಳ್ಳೆಯ ಮಾದರಿಯನ್ನಿಡುವಂತೆ ಪ್ರೇರಿಸಲ್ಪಡುತ್ತಾರೆ

[ಪುಟ 17ರಲ್ಲಿರುವ ಚಿತ್ರ]

ಯೆಹೋವನ ಪ್ರೀತಿ ಮತ್ತು ದೀರ್ಘಶಾಂತಿಯನ್ನು ನಾವು ಅನುಕರಿಸುವುದಾದರೆ, ಸುವಾರ್ತೆ ಸಾರುವುದನ್ನು ನಾವು ಮುಂದುವರಿಸುವೆವು

[ಪುಟ 18ರಲ್ಲಿರುವ ಚಿತ್ರ]

ಕ್ರೈಸ್ತರು ‘ಆನಂದಪೂರ್ವಕವಾಗಿ ದೀರ್ಘಶಾಂತಿಯನ್ನು’ ತೋರಿಸುವಂತೆ ಪೌಲನು ಪ್ರಾರ್ಥಿಸಿದನು