“ಧಾರ್ಮಿಕ ಸಹಿಷ್ಣುತೆ ದಿನ”
“ಧಾರ್ಮಿಕ ಸಹಿಷ್ಣುತೆ ದಿನ”
ಯೆಹೋವನ ಸಾಕ್ಷಿಗಳೊಂದಿಗೆ ಮಾಡಿದ್ದ ಒಂದು ಚರ್ಚೆಯಿಂದಾಗಿ ಸ್ಫೂರ್ತಿಪಡೆದ ಪೊಲೆಂಡಿನ ಒಬ್ಬ ಪ್ರಾಧ್ಯಾಪಿಕೆಯು, ತನ್ನ ಶಾಲೆಗಾಗಿ ಒಂದು “ಧಾರ್ಮಿಕ ಸಹಿಷ್ಣುತೆ ದಿನ”ವನ್ನು ಬದಿಗಿರಿಸಿದಳು. ಕ್ಯಾಥೊಲಿಕರು, ಬೌದ್ಧರು ಮತ್ತು ಯೆಹೋವನ ಸಾಕ್ಷಿಗಳಾದ ವಿದ್ಯಾರ್ಥಿಗಳಲ್ಲಿ ಕೆಲವರು ತಾವಾಗಿಯೇ ಮುಂದೆ ಬಂದು, ತಮ್ಮ ನಂಬಿಕೆ ಮತ್ತು ಪದ್ಧತಿಗಳನ್ನು ಇತರ ವಿದ್ಯಾರ್ಥಿಗಳಿಗೆ ಪರಿಚಯಪಡಿಸುವ ಚಿಕ್ಕ ಚಿಕ್ಕ ಭಾಷಣಗಳನ್ನು ತಯಾರಿಸುವಂತೆ ಅವಳು ಸೂಚಿಸಿದಳು. ಆ ಕೂಡಲೆ, ಹದಿಹರೆಯದ ಮೂವರು ಯೆಹೋವನ ಸಾಕ್ಷಿಗಳು ಅದಕ್ಕಾಗಿ ತಮ್ಮನ್ನು ನೀಡಿಕೊಂಡರು.
ಆ ದಿನವು ಬಂದಾಗ, ಮೊದಲಾಗಿ ಮಾತಾಡಿದವಳು 15 ವರ್ಷ ಪ್ರಾಯದ ಮಾಲ್ವಿನ. ಭಾಗಶಃ ಅವಳಂದದ್ದು: “ಈ ಶಾಲೆಗೆ ನಾವು ಬರುವುದಕ್ಕೆ ಮುಂಚೆಯೇ ನಿಮ್ಮಲ್ಲಿ ಹೆಚ್ಚಿನವರಿಗೆ ನಮ್ಮ ಪರಿಚಯವಿತ್ತು. ಯಾಕಂದರೆ ನಾವು ನಿಮ್ಮನ್ನು ನಿಮ್ಮ ಮನೆಯಲ್ಲಿ ಭೇಟಿಯಾಗಿದ್ದೆವು. ನಾವು ಅದನ್ನು ಮಾಡುತ್ತಿರುವುದೇಕೆಂದು ಒಂದುವೇಳೆ ನೀವು ಯೋಚಿಸಿದ್ದಿರಬಹುದು. ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುವುದರಿಂದಲೇ ನಾವು ಹಾಗೆ ಮಾಡುತ್ತೇವೆ. ಜನರಿರುವ ಎಲ್ಲಾ ಕಡೆಗಳಿಗೆ ಹೋಗಿ ಅವನು ದೇವರ ರಾಜ್ಯದ ಸುವಾರ್ತೆಯನ್ನು ಸಾರಿದನು. ಅಪೊಸ್ತಲರು ಮತ್ತು ಬೇರೆ ಆದಿ ಕ್ರೈಸ್ತರು ಸಹ ಅದನ್ನು ಮಾಡಿದರು. ಅನೇಕ ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಗಾಗಿ ಕಷ್ಟಸಂಕಟಗಳನ್ನು ತಾಳಿಕೊಳ್ಳುತ್ತಾರಾದರೂ, ನಮ್ಮ ಶಾಲೆಯಲ್ಲಿ ನಾವು ಸಮಾಧಾನ ಸಂತೋಷದಲ್ಲಿರುವುದು ನಿಮ್ಮೆಲ್ಲರ ನೆರವಿನಿಂದಾಗಿ. ಅದಕ್ಕಾಗಿ ನಿಮಗೆ ಉಪಕಾರ!”
ತನ್ನ ಭಾಷಣದ ಕೊನೆಯಲ್ಲಿ ಮಾಲ್ವಿನ ಹೇಳಿದ್ದು: “ನಾವು ನಿಮ್ಮ ಮನೆಯನ್ನು ಸಂದರ್ಶಿಸಲಿಕ್ಕೆ ಇನ್ನೊಂದು ಕಾರಣವಿದೆ. ನಿಮ್ಮ ಕುರಿತು ನಾವು ಚಿಂತಿಸುತ್ತೇವೆ. ಮಾನವಕುಲವು ಬೇಗನೆ ಲೋಕವನ್ನೇ ನಡುಗಿಸುವ ಘಟನಾವಳಿಗಳನ್ನು ಅನುಭವಿಸಲಿದೆಯೆಂದು ಬೈಬಲು ಹೇಳುತ್ತದೆ. ಆದುದರಿಂದ, ಇನ್ನೊಮ್ಮೆ ನಾವು ನಿಮ್ಮ ಮನೆಬಾಗಲನ್ನು ತಟ್ಟುವಾಗ, ದಯವಿಟ್ಟು ಕಿವಿಗೊಡಲು ಸಮಯವನ್ನು ಮಾಡಿಕೊಳ್ಳಿ. ಪರದೈಸ ಭೂಮಿಯಲ್ಲಿ ನಾವು ಹೇಗೆ ಒಟ್ಟಾಗಿ ಸದಾ ಜೀವಿಸಬಲ್ಲೆವೆಂದು ನಾವು ನಿಮಗೆ ತಿಳಿಸಬಯಸುತ್ತೇವೆ.”
ಮುಂದಿನ ಭಾಷಣಗಾರನು 15 ವರ್ಷ ಪ್ರಾಯದ ಮಟಾಯುಶ್ ಆಗಿದ್ದನು. ಅನೇಕ ವರ್ಷಗಳಿಂದ ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರಲು ವಿವಿಧ ವಿಧಾನಗಳನ್ನು ಉಪಯೋಗಿಸಿದ್ದಾರೆ ಎಂದು ಮಟಾಯುಶ್ ಸಭಿಕರಿಗೆ ತಿಳಿಸಿದನು. ಉದಾಹರಣೆಗಾಗಿ, ಮೂಕ ಚಲನಚಿತ್ರಗಳ ಯುಗವಾದ 1914ರಲ್ಲಿ, ಯೆಹೋವನ ಸಾಕ್ಷಿಗಳು “ಫೋಟೋ ಡ್ರಾಮಾ ಆಫ್ ಕ್ರಿಯೇಷನ್” ಎಂಬ ಚಲನಚಿತ್ರ ಮತ್ತು ಸ್ಲೈಡ್ ಪ್ರದರ್ಶನವನ್ನು ಸಂಯೋಜಿತ ಧ್ವನಿಮುದ್ರಣದೊಂದಿಗೆ ತೋರಿಸುತ್ತಿದ್ದರು.
ರೇಡಿಯೋ ಮೂಲಕ ರಾಜ್ಯದ ಸಂದೇಶದ ಪ್ರಸಾರದ ಕುರಿತು ಮಟಾಯುಶ್ ಚರ್ಚಿಸಿದನು ಮತ್ತು ಅನಂತರ ಯೆಹೋವನ ಸಾಕ್ಷಿಗಳಿಂದ ವಿಕಸಿಸಲ್ಪಟ್ಟ ಅದ್ವಿತೀಯ ವಿಧಾನವಾದ ಬಹುಭಾಷೀಯ ಇಲೆಕ್ಟ್ರಾನಿಕ್ ಫೋಟೋಟೈಪ್‌ಸೆಟ್ಟಿಂಗ್ ಸಿಸ್ಟಮ್ (MEPS) ಅನ್ನು ವರ್ಣಿಸಿದನು. ರಕ್ತರಹಿತ ಔಷಧೋಪಚಾರದ ಹೊಸ ತಂತ್ರಜ್ಞಾನವನ್ನು ಡಾಕ್ಟರುಗಳಿಗೆ ತಿಳಿಸಲು ಸಾಕ್ಷಿಗಳು ಹೇಗೆ ಸಹಾಯಮಾಡಿದ್ದಾರೆಂಬುದನ್ನೂ ಅವನು ತಿಳಿಸಿದನು. “ಈಗ ಪ್ರಖ್ಯಾತ ಪೋಲಿಶ್ ಡಾಕ್ಟರುಗಳು ನಮ್ಮ ನಿಲುವಿನ ಕುರಿತು ಮೆಚ್ಚಿಕೆಯಿಂದ ಮಾತಾಡುತ್ತಾರೆ ಮತ್ತು ಪ್ರತಿ ವರ್ಷ ಅಧಿಕಾಧಿಕ ಸಾಕ್ಷ್ಯೇತರ ರೋಗಿಗಳಿಗೂ ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ” ಎಂದನವನು.
ರಾಜ್ಯ ಸಭಾಗೃಹಗಳ ಕಟ್ಟುವಿಕೆಯ ಕುರಿತು ಮಾತಾಡುತ್ತಾ ಕೊನೆಯಲ್ಲಿ ಮಟಾಯುಶ್ ಅಂದದ್ದು: “ನೀವು ನಮ್ಮ ರಾಜ್ಯ ಸಭಾಗೃಹವನ್ನು ಸಂದರ್ಶಿಸಲು ಬಯಸುತ್ತೀರೋ? ಪ್ರವೇಶದರವಿಲ್ಲ ಮತ್ತು ಹಣವನ್ನು ಸಂಗ್ರಹಿಸಲಾಗುವುದಿಲ್ಲ.” ಸಸ್‌ನೊವೆಟ್ಸ್‌ನ ಅಧಿವೇಶನ ಕೇಂದ್ರದ ಕುರಿತು ಮಾತಾಡುತ್ತಾ, ಮಟಾಯುಶ್ ಹೇಳಿದ್ದು: “ನೀವು ಈ ಭವ್ಯವಾದ ಹಾಗೂ ಅನೇಕ ಕಾರ್ಯಕ್ಕೆ ಉಪಯುಕ್ತವಾದ ಕಟ್ಟಡವನ್ನು ನೋಡಲೇಬೇಕು. ಒಟ್ಟಾಗಿ ನಾವಲ್ಲಿಗೆ ಹೋಗೋಣವೇ? ನಮ್ಮ ಸಲಹೆಯೊಂದಿದೆ. ನಮ್ಮ ಸ್ನೇಹಿತೆಯಾದ ಕಟರ್‌ಜಿನ ಅದರ ಕುರಿತು ನಿಮಗೆ ಹೇಳುವಳು.”
ಹದಿನೈದು ವರ್ಷ ಪ್ರಾಯದ ಕಟರ್‌ಜಿನ ಉತ್ಸಾಹದಿಂದ ಹೇಳಿದ್ದು: “ಸಸ್‌ನೊವೆಟ್ಸ್‌ನಲ್ಲಿ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ ಬರಲು ನಿಮಗೆ ಸ್ವಾಗತವಿದೆ. ಯುವ ಜನರಿಗೆ ಸಂಬಂಧಿಸಿದ ವಿಷಯಗಳು ಅಲ್ಲಿ ಚರ್ಚಿಸಲ್ಪಡುವವು.” ಕ್ರೈಸ್ತರ ಪ್ರಾಮುಖ್ಯ ಆಚರಣೆಯಾದ ಕ್ರಿಸ್ತನ ಮರಣದ ಸ್ಮಾರಕ ದಿನದ ಕುರಿತಾಗಿಯೂ ಕಟರ್‌ಜಿನ ತಿಳಿಸಿದಳು. ಅವಳು ಕೇಳುಗರನ್ನು ಉತ್ತೇಜಿಸಿದ್ದು: “ಕಳೆದ ವರ್ಷ 1.4 ಕೋಟಿ ಜನರು ಲೋಕದಾದ್ಯಂತ ಈ ಆಚರಣೆಗೆ ಹಾಜರಾದರು. ಮುಂದಿನ ಆಚರಣೆಗೆ ನೀವೂ ನಮ್ಮೊಂದಿಗೆ ಏಕೆ ಜೊತೆಗೂಡಬಾರದು?”
ಭಾಷಣ ಕೊಟ್ಟಾದ ಮೇಲೆ ಮಾಲ್ವಿನ, ಮಟಾಯುಶ್ ಮತ್ತು ಕಟರ್‌ಜಿನರು, ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಪುಸ್ತಕವನ್ನು ಮತ್ತು ಅದರೊಂದಿಗೆ ಯೆಹೋವನ ಸಾಕ್ಷಿಗಳ ನಂಬಿಕೆಗಳನ್ನು ಹಾಗೂ ಚಟುವಟಿಕೆಗಳನ್ನು ಚರ್ಚಿಸುವ ಎರಡು ವಿಡಿಯೋಕ್ಯಾಸೆಟ್‌ಗಳನ್ನು ಶಿಕ್ಷಕರಿಗೆ ನೀಡಿದರು. * ಶಿಕ್ಷಕರು ಅವುಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿದರು ಮತ್ತು ಇತಿಹಾಸದ ಪಾಠಗಳಲ್ಲಿ ಉಪಯೋಗಿಸುವೆವೆಂದು ಮಾತುಕೊಟ್ಟರು.
ಈ ಸೆಷನ್‌ನ ಅಂತ್ಯದಲ್ಲಿ, 12 ವರ್ಷ ಪ್ರಾಯದ ಮಾರ್ಟಿನಳು, ಅಲ್ಲಿ ನೆರೆದಿದ್ದವರೆಲ್ಲರಿಗಾಗಿ “ಯೆಹೋವನೇ, ನಾವು ನಿನಗೆ ಆಭಾರಿಗಳು” ಎಂಬ ಹಾಡನ್ನು ನುಡಿಸಿದಳು. ಈ ಯುವ ಸಾಕ್ಷಿಗಳು ತಮ್ಮ “ದೇವರ ಮೂಲಕ ಧೈರ್ಯಗೊಂಡು” ಉತ್ತಮ ಸಾಕ್ಷಿಯನ್ನು ಕೊಟ್ಟರು. (1 ಥೆಸಲೊನೀಕ 2:2) ಎಲ್ಲೆಡೆಯಲ್ಲೂ ಇರುವ ಯುವ ಸಾಕ್ಷಿಗಳಿಗೆ ಇದೆಷ್ಟು ಅತ್ಯುತ್ತಮ ಮಾದರಿ!
[ಪಾದಟಿಪ್ಪಣಿ]
^ ಪ್ಯಾರ. 9 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 26ರಲ್ಲಿರುವ ಚಿತ್ರ]
ಮಾಲ್ವಿನ ಶಾಲೆಯಲ್ಲಿ ಭಾಷಣವನ್ನು ಕೊಡುವ ಕೆಲವು ದಿನಗಳಿಗೆ ಮುಂಚೆ ಅದನ್ನು ತಯಾರಿಸುತ್ತಿರುವುದು
[ಪುಟ 26ರಲ್ಲಿರುವ ಚಿತ್ರ]
ಕಟರ್‌ಜಿನ ಭಾಷಣಕ್ಕಾಗಿ ಶಾಸ್ತ್ರವಚನಗಳನ್ನು ಆರಿಸಿಕೊಳ್ಳುವುದು