ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಒಂದು ಶಿಕ್ಷಿತ ಮನಸ್ಸಾಕ್ಷಿಯ ಅಗತ್ಯವಿದೆ

ನಿಮಗೆ ಒಂದು ಶಿಕ್ಷಿತ ಮನಸ್ಸಾಕ್ಷಿಯ ಅಗತ್ಯವಿದೆ

ನಿಮಗೆ ಒಂದು ಶಿಕ್ಷಿತ ಮನಸ್ಸಾಕ್ಷಿಯ ಅಗತ್ಯವಿದೆ

ಏರ್‌ ನ್ಯೂ ಸೀಲೆಂಡ್‌ ಫ್ಲೈಟ್‌ 901 ಎಂಬ ಹೆಸರುಳ್ಳ ವಿಮಾನದಲ್ಲಿ ದಕ್ಷಿಣ ಧ್ರುವ ಪ್ರದೇಶಕ್ಕೆ ಹಾರಾಟ ನಡಿಸಲಿದ್ದ ಪ್ರಯಾಣಿಕರಿಗೆ ಮತ್ತು ಚಾಲಕ ತಂಡಕ್ಕೆ ಅದೊಂದು ಸ್ಮರಣೀಯ ದಿನವಾಗಲಿರುವಂತೆ ತೋರಿತು. ಬೆಳ್ಳಗಿನ ಭೂಖಂಡದ ಭವ್ಯವಾದ ನೋಟವನ್ನು ಪಡೆಯಲು ಆ DC-10 ವಿಮಾನವು ತುಸು ಕೆಳಕ್ಕಿಳಿದಾಗ, ಪ್ರಯಾಣಿಕರು ಕೆಳಗಿನ ರಮಣೀಯ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಿದ್ಧರಾಗಿ ನಿಂತಿದ್ದರು. ಇಡೀ ವಿಮಾನದಲ್ಲಿ ಒಂದು ಸಂಭ್ರಮದ ವಾತಾವರಣವು ನೆಲೆಸಿತ್ತು.

ವಿಮಾನದ ಚಾಲಕನು 15 ವರ್ಷಗಳಿಂದ ವಿಮಾನ ನಡಿಸುತ್ತಿದ್ದು, 11,000 ತಾಸುಗಳಷ್ಟು ಹಾರಾಟದ ಅನುಭವವಿದ್ದವನಾಗಿದ್ದನು. ಹಾರಾಟಕ್ಕೆ ಮುಂಚೆ ಅದರ ಕಾರ್ಯಯೋಜನೆಗಳನ್ನು ವಿಮಾನದ ಕಂಪ್ಯೂಟರಿನಲ್ಲಿ ಜಾಗರೂಕತೆಯಿಂದ ದಾಖಲಿಸಿದ್ದನು. ಆದರೆ ಅವನಿಗೆ ಕೊಡಲ್ಪಟ್ಟ ನಿರ್ದೇಶಾಂಕಗಳು ತಪ್ಪಾಗಿದ್ದವೆಂದು ಅವನಿಗೆ ಗೊತ್ತಿರಲಿಲ್ಲ. ಸುಮಾರು 600 ಮೀಟರುಗಳಿಗಿಂತ ತುಸು ಕಡಿಮೆ ಎತ್ತರದಲ್ಲಿ ಮೋಡದೊಳಗಿಂದ ಹಾರುತ್ತಿರುವಾಗ, ಆ DC-10 ವಿಮಾನವು ಮೌಂಟ್‌ ಇರೆಬಸ್‌ ಬೆಟ್ಟದ ಇಳಿಜಾರಿಗೆ ಡಿಕ್ಕಿಹೊಡೆದು, ಒಳಗಿದ್ದ 257 ಮಂದಿ ಪ್ರಯಾಣಿಕರು ಮತ್ತು ಚಾಲಕ ತಂಡವು ಧ್ವಂಸವಾಗಿಹೋಯಿತು.

ಇಂದು ಆಕಾಶಯಾನ ಮಾಡುತ್ತಿರುವಾಗ ಮಾರ್ಗದರ್ಶನಕ್ಕಾಗಿ ವಿಮಾನಗಳು ಕಂಪ್ಯೂಟರಿನ ಮೇಲೆ ಆತುಕೊಂಡಿವೆ. ಅಂತೆಯೇ, ಮಾನವರ ಜೀವಿತಯಾನದ ಮಾರ್ಗದರ್ಶನಕ್ಕಾಗಿ ಒಂದು ಮನಸ್ಸಾಕ್ಷಿಯು ಕೊಡಲ್ಪಟ್ಟಿದೆ. ಆ ಫ್ಲೈಟ್‌ 901 ಎಂಬ ವಿಮಾನಕ್ಕೆ ಸಂಭವಿಸಿದ ಭೀಕರ ದುರಂತವು, ನಮ್ಮ ಮನಸ್ಸಾಕ್ಷಿಯ ಕುರಿತು ನಮಗೆ ಕೆಲವು ಬಲವತ್ತಾದ ಪಾಠಗಳನ್ನು ಕಲಿಸಬಲ್ಲದು. ಉದಾಹರಣೆಗೆ, ಹಾರಾಟದ ಸುರಕ್ಷಿತತೆಯು ನೌಕಾಗತಿಶಾಸ್ತ್ರದ ಯೋಗ್ಯ ನಿರ್ವಹಣೆ ಹಾಗೂ ನಿಖರವಾದ ನಿರ್ದೇಶಕಗಳ ಮೇಲೆ ಆತುಕೊಂಡಿರುವಂತೆಯೇ, ನಮ್ಮ ಆತ್ಮಿಕ, ನೈತಿಕ ಮತ್ತು ಶಾರೀರಿಕ ಸುಕ್ಷೇಮವು ಸಹ ಸರಿಯಾದ ನೈತಿಕ ನಿರ್ದೇಶಕ ಸಂಕೇತಗಳಿಂದ ಮಾರ್ಗದರ್ಶಿಸಲ್ಪಡುವ ಸ್ಪಂದಿಸುವಂಥ ಮನಸ್ಸಾಕ್ಷಿಯ ಮೇಲೆ ಆತುಕೊಂಡಿರುತ್ತದೆ.

ಇಂದಿನ ಲೋಕದಲ್ಲಾದರೋ ಅಂಥ ನಿಖರವಾದ ನಿರ್ದೇಶಕ ಸಂಕೇತಗಳು ತೀವ್ರಗತಿಯಲ್ಲಿ ಮಾಯವಾಗುತ್ತಿವೆ ಅಥವಾ ಅಲಕ್ಷಿಸಲ್ಪಡುತ್ತಿವೆ. ಅಮೆರಿಕದ ಶಿಕ್ಷಕಿಯೊಬ್ಬಳು ಹೇಳಿದ್ದು: “ಅಮೆರಿಕದಲ್ಲಿರುವ ಒಬ್ಬ ಸಾಮಾನ್ಯ ಶಾಲಾಹುಡುಗನಿಗೆ ಓದಲು ಬರುವುದಿಲ್ಲ, ಬರೆಯಲು ಬರುವುದಿಲ್ಲ, ಭೂಗೋಳಶಾಸ್ತ್ರವು ಅರ್ಥವಾಗುವುದಿಲ್ಲ ಎಂಬಂಥ ವಿಷಯಗಳ ಕುರಿತು ನಾವಿಂದು ಬಹಳಷ್ಟನ್ನು ಕೇಳಿಸಿಕೊಳ್ಳುತ್ತೇವೆ. . . . ಆದರೆ ಆ ಶಾಲಾಹುಡುಗನಿಗೆ ಸರಿ ಯಾವುದು ತಪ್ಪು ಯಾವುದು ಎಂಬುದೂ ಗೊತ್ತಿಲ್ಲ ಎಂಬುದು ನಿಜ. ಶೈಕ್ಷಣಿಕ ಸಮಸ್ಯೆಗಳ ಪಟ್ಟಿಯಲ್ಲಿ, ಅನಕ್ಷರತೆ ಮತ್ತು ಗಣಿತಶಾಸ್ತ್ರದ ಅಜ್ಞಾನದೊಂದಿಗೆ ನೈತಿಕ ಗಲಿಬಿಲಿಯ ಅವಸ್ಥೆಯನ್ನು ಸಹ ನಾವು ಸೇರಿಸಬೇಕು.” ಅವರು ಮತ್ತೂ ಹೇಳಿದ್ದು: “ಇಂದಿನ ಯುವ ಜನರಿಗೆ ನೈತಿಕತೆ ಏನೆಂದು ಗೊತ್ತಿಲ್ಲ. ‘ಸರಿ ಅಥವಾ ತಪ್ಪು’ ಎಂಬ ವಿಷಯಗಳು ಇವೆಯೋ ಎಂದು ಅವರಲ್ಲಿ ಯಾರಾದರೊಬ್ಬರನ್ನು ಕೇಳಿ ನೋಡಿ. ಆಗ ಒಮ್ಮೆಲೇ ಅವರು ಗಲಿಬಿಲಿಗೊಳ್ಳುತ್ತಾರೆ, ಸ್ತಬ್ಧರಾಗಿ ಹೋಗುತ್ತಾರೆ, ಅವರ ಸ್ಥೈರ್ಯ ತಪ್ಪುತ್ತದೆ, ಯಾವ ಮಾತೂ ಹೊರಡುವುದಿಲ್ಲ, ಪುಕ್ಕಲುತನವು ಅವರನ್ನು ಆವರಿಸುತ್ತದೆ. . . . ಕಾಲೇಜಿಗೆ ಹೋದಮೇಲೆ ಈ ಗಲಿಬಿಲಿಯು ಇನ್ನಷ್ಟು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.”

ಈ ಗೊಂದಲಕ್ಕೆ ಒಂದು ಕಾರಣವು, ಅಸ್ತಿತ್ವದಲ್ಲಿರುವ ಸಾಪೇಕ್ಷ ನೈತಿಕ ಸಿದ್ಧಾಂತವೇ ಆಗಿದೆ. ಇದು, ವೈಯಕ್ತಿಕ ಮತ್ತು ಸಾಂಸ್ಕೃತಿಕ ಇಷ್ಟಗಳಿಗನುಸಾರ ನೈತಿಕ ಮಟ್ಟಗಳು ವ್ಯತ್ಯಾಸ ಹೊಂದುತ್ತವೆ ಎಂಬ ವ್ಯಾಪಕ ಅಭಿಪ್ರಾಯವಾಗಿದೆ. ವಿಮಾನಚಾಲಕರು ನಿಖರವಾಗಿ ಸ್ಥಾಪಿಸಲ್ಪಟ್ಟಿರುವ ನಿರ್ದೇಶಕ ಸಂಕೇತಗಳನ್ನು ಪಾಲಿಸದಿದ್ದರೆ ಮತ್ತು ಗೊತ್ತುಗುರಿಯಿಲ್ಲದೆ ಚಲಿಸುವ ಹಾಗೂ ಕೆಲವೊಮ್ಮೆ ಪೂರ್ತಿಯಾಗಿ ಕಣ್ಮರೆಯಾಗುವ ಸಂಜ್ಞಾಜ್ಯೋತಿಗಳನ್ನು ಅನುಸರಿಸಿ ವಿಮಾನವನ್ನು ನಡೆಸುವುದಾದರೆ, ಏನು ಸಂಭವಿಸಬಹುದೆಂದು ತುಸು ಯೋಚಿಸಿರಿ! ಮೌಂಟ್‌ ಇರೆಬಸ್‌ನಲ್ಲಾದಂಥ ರೀತಿಯ ಭೀಕರ ದುರಂತಗಳು ಸಮಾನ್ಯವಾಗಿಬಿಡುವವು ಎಂಬುದರಲ್ಲಿ ಸಂಶಯವಿಲ್ಲ. ಅಂತೆಯೇ, ಸ್ಥಿರವಾದ ನೈತಿಕ ಮಟ್ಟಗಳನ್ನು ಅನುಸರಿಸದೆ ಇರುವ ಕಾರಣ, ಇಂದು ಲೋಕವು ದುರವಸ್ಥೆ ಮತ್ತು ಮರಣವೆಂಬ ಕರಾಳವಾದ ಕೊಯ್ಲನ್ನು ಕೊಯ್ಯುತ್ತಾ ಇದೆ. ದಾಂಪತ್ಯ ದ್ರೋಹದಿಂದ ಕುಟುಂಬಗಳು ಛಿದ್ರಛಿದ್ರವಾಗಿ ಹೋಗುತ್ತಿವೆ ಮತ್ತು ಕೋಟ್ಯಂತರ ಜನರು ಏಡ್ಸ್‌ ಅಥವಾ ಬೇರೆ ಬೇರೆ ರತಿರವಾನಿತ ರೋಗಗಳಿಂದ ನರಳುತ್ತಿದ್ದಾರೆ.

ಸಾಪೇಕ್ಷ ನೈತಿಕ ಸಿದ್ಧಾಂತವು ವ್ಯಾವಹಾರಿಕವಾದದ್ದಾಗಿ ತೋರಬಹುದಾದರೂ, ಅದನ್ನು ಅನುಸರಿಸುವವರು ‘ಎಡಗೈ ಬಲಗೈ ತಿಳಿಯದ’ ಪುರಾತನ ಕಾಲದ ನಿನೆವೆಯ ಜನರಂತಿದ್ದಾರೆ. ಸಾಪೇಕ್ಷ ನೈತಿಕ ಸಿದ್ಧಾಂತವನ್ನು ಪರಿಪಾಲಿಸುವವರು “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ಬೋಧಿಸಿದ ಧರ್ಮಭ್ರಷ್ಟ ಇಸ್ರಾಯೇಲ್ಯರನ್ನು ಹೋಲುತ್ತಾರೆ.​—ಯೋನ 4:11; ಯೆಶಾಯ 5:20.

ಹೀಗಿರುವಲ್ಲಿ, ನಮ್ಮ ಮನಸ್ಸಾಕ್ಷಿಯು ಒಂದು ವಿಶ್ವಾಸನೀಯ ಮಾರ್ಗದರ್ಶಿಯಾಗಿರುವಂತೆ ಅದನ್ನು ತರಬೇತುಗೊಳಿಸಲಿಕ್ಕಾಗಿ ಸ್ಪಷ್ಟ ಹಾಗೂ ನಿಖರವಾದ ನಿಯಮಗಳು ಮತ್ತು ಮೂಲತತ್ತ್ವಗಳು ನಮಗೆಲ್ಲಿ ಸಿಗುವವು? ಬೈಬಲು ಆ ಆವಶ್ಯಕತೆಯನ್ನು ಚೆನ್ನಾಗಿ ಪೂರೈಸುತ್ತದೆಂದು ಲಕ್ಷಾಂತರ ಜನರು ಕಂಡುಕೊಂಡಿದ್ದಾರೆ. ನೈತಿಕತೆಯಿಂದ ಹಿಡಿದು ಕೆಲಸದ ವಿಷಯದಲ್ಲಿನ ನೀತಿಶಾಸ್ತ್ರದ ನಿಯಮಗಳ ವರೆಗೆ, ಮಕ್ಕಳ ತರಬೇತಿಯಿಂದ ಹಿಡಿದು ದೇವರ ಆರಾಧನೆಯ ವರೆಗೆ ಬೈಬಲು ಪ್ರಾಮುಖ್ಯವಾದ ಯಾವುದೇ ವಿಷಯವನ್ನೂ ಬಿಟ್ಟುಬಿಟ್ಟಿಲ್ಲ. (2 ತಿಮೊಥೆಯ 3:16) ಶತಮಾನಗಳಿಂದ ಅದು ಸಂಪೂರ್ಣವಾಗಿ ಭರವಸಯೋಗ್ಯವೆಂದು ಸಮರ್ಥಿಸಲ್ಪಟ್ಟಿದೆ. ಬೈಬಲಿನ ನೈತಿಕ ಮಟ್ಟಗಳು ಸರ್ವಶ್ರೇಷ್ಠ ಅಧಿಕಾರಿಯಾದ ನಮ್ಮ ಸೃಷ್ಟಿಕರ್ತನಿಂದ ಸ್ಥಾಪಿಸಲ್ಪಟ್ಟಿರುವ ಕಾರಣ, ಅವು ಎಲ್ಲಾ ಮಾನವರಿಗೆ ಅನ್ವಯಯೋಗ್ಯವಾಗಿವೆ. ಆದುದರಿಂದ, ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅರಿವಿಲ್ಲದೆ ಜೀವಿಸಲು ನಮಗೆ ಯಾವ ಕಾರಣವೂ ಇಲ್ಲ.

ಆದರೆ ಈ ದಿನಗಳಲ್ಲಾದರೋ ನಿಮ್ಮ ಮನಸ್ಸಾಕ್ಷಿಯು ಹಿಂದೆಂದಿಗಿಂತಲೂ ಹೆಚ್ಚಿನ ಆಕ್ರಮಣಕ್ಕೆ ಒಳಗಾಗುತ್ತಲಿದೆ. ಅದು ಹೇಗೆ ಸಾಧ್ಯ? ಮತ್ತು ನೀವು ನಿಮ್ಮ ಮನಸ್ಸಾಕ್ಷಿಯನ್ನು ಹೇಗೆ ಭದ್ರವಾಗಿ ಕಾಪಾಡಿಕೊಳ್ಳಬಲ್ಲಿರಿ? ವಿವೇಕದ ಮಾರ್ಗವು ಯಾವುದೆಂದರೆ, ಆ ಆಕ್ರಮಣದ ಮೂಲನು ಯಾರು ಮತ್ತು ಅವನ ತಂತ್ರೋಪಾಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದೇ. ಇವುಗಳನ್ನೇ ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.