ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃಕ್ಷಗಳ ವಿನಾಶಕರು

ವೃಕ್ಷಗಳ ವಿನಾಶಕರು

ವೃಕ್ಷಗಳ ವಿನಾಶಕರು

ಬೈಬಲಿನ ಕಾಲದಲ್ಲಿ ವೃಕ್ಷಗಳು ಅಮೂಲ್ಯ ವಸ್ತುಗಳಾಗಿ ಪರಿಗಣಿಸಲ್ಪಡುತ್ತಿದ್ದವು. ಉದಾಹರಣೆಗೆ, ಅಬ್ರಹಾಮನು ತನ್ನ ಪ್ರಿಯ ಪತ್ನಿಯಾದ ಸಾರಳ ಸಮಾಧಿಗಾಗಿ ಭೂಮಿಯನ್ನು ಖರೀದಿಸಿದಾಗ, ಜಮೀನನ್ನು ವರ್ಗಾಯಿಸಿದ ಕರಾರಿನಲ್ಲಿ ಮರಗಳನ್ನೂ ಪಟ್ಟಿಮಾಡಲಾಗಿತ್ತು.​—ಆದಿಕಾಂಡ 23:15-18.

ಅದೇ ರೀತಿಯಲ್ಲಿ ಇಂದಿನ ಕಾಲದಲ್ಲೂ ಮರಗಳಿಗೆ ಬಹಳ ಬೆಲೆಯಿದೆ, ಮತ್ತು ಈ ಕಾರಣದಿಂದ ಅರಣ್ಯಗಳನ್ನು ರಕ್ಷಿಸುವುದಕ್ಕೆ ಅಂತಾರಾಷ್ಟ್ರೀಯವಾಗಿ ತುಂಬ ಗಮನವನ್ನು ಕೊಡಲಾಗುತ್ತಿದೆ. ಜಗತ್ತಿನ ಸ್ಥಿತಿ 1998 (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಉತ್ತರದ ಸಮಶೀತೋಷ್ಣವಲಯಗಳಲ್ಲಿರುವ ಅನೇಕ ಜನರು, ಉಷ್ಣವಲಯದ ಅರಣ್ಯಗಳ ಕುರಿತು ಚಿಂತೆಯನ್ನು ವ್ಯಕ್ತಪಡಿಸುವಾಗ, ತಮ್ಮ ಸ್ವಂತ ದೇಶಗಳ ಸಮಶೀತೋಷ್ಣ ಅರಣ್ಯಗಳೇ ಬೇರೆಲ್ಲವುಗಳಿಗಿಂತ ಹೆಚ್ಚಾಗಿ ನಷ್ಟಗೊಳ್ಳುತ್ತಿವೆ ಮತ್ತು ಹಾಳಾಗಿಹೋಗುತ್ತಿವೆಯೆಂಬುದು ಅವರಿಗೆ ತಿಳಿದಿಲ್ಲ.” ಯೂರೋಪ್‌ ಮತ್ತು ಉತ್ತರ ಅಮೆರಿಕದಲ್ಲಿ, ಉತ್ತರದಲ್ಲಿರುವ ದೇಶಗಳ ಅರಣ್ಯಗಳ ಕ್ಷೇಮಕ್ಕೆ ಬೆದರಿಕೆಯನ್ನೊಡ್ಡುತ್ತಿರುವ ಸಂಗತಿ ಯಾವುದಾಗಿದೆ? ಅರಣ್ಯನಾಶವೇ ಅದಕ್ಕೆ ಕಾರಣವೆಂದು ಅನೇಕರು ಹೇಳುತ್ತಾರಾದರೂ, ಮರಗಳನ್ನು ಒಂದೊಂದಾಗಿಯೇ ಕುಶಾಗ್ರತೆಯಿಂದ ವಿನಾಶಗೊಳಿಸುವ ಬೇರೆ ಶಕ್ತಿಗಳೂ ಇವೆ. ಅವು ಯಾವುವು? ವಾಯುಮಾಲಿನ್ಯ ಮತ್ತು ಆಮ್ಲಮಳೆ. ಈ ಮಾಲಿನ್ಯತೆಗಳು ವೃಕ್ಷಗಳನ್ನು ನಿಧಾನವಾಗಿ ದುರ್ಬಲಗೊಳಿಸಿ, ಕೀಟಗಳು ಮತ್ತು ವ್ಯಾಧಿಗೆ ಸುಲಭಬೇಧ್ಯವನ್ನಾಗಿ ಮಾಡುತ್ತವೆ.

ದಶಕಗಳಿಂದ ಪರಿಸರವಾದಿಗಳು ಮತ್ತು ಚಿಂತಿತ ಸಜ್ಜನರು, ಭೂಮಿಯ ಜೀವಿಪರಿಸ್ಥಿತಿ ವ್ಯವಸ್ಥೆಯನ್ನು ಕಾಪಾಡುವ ಅಗತ್ಯದ ಕುರಿತು ಎಚ್ಚರಿಕೆ ನೀಡಿದ್ದಾರೆ. 1980ಗಳಲ್ಲಿ, ಜರ್ಮನಿಯ ವಿಜ್ಞಾನಿಗಳು ವಾತಾವರಣದ ಮೇಲೆ ವಾಯುಮಾಲಿನ್ಯ ಮತ್ತು ಆಮ್ಲಮಳೆಯು ಬೀರುವ ದುಷ್ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ ನಂತರ ಈ ತೀರ್ಮಾನಕ್ಕೆ ಬಂದರು: ‘ಯಾವ ಕ್ರಮವೂ ಕೈಕೊಳ್ಳಲ್ಪಡದಿದ್ದಲ್ಲಿ, ಇಸವಿ 2000ದಷ್ಟಕ್ಕೆ ಸುಮಾರಾಗಿ ಜನರು ಅರಣ್ಯಗಳನ್ನು ಕೇವಲ ಫೋಟೊ ಮತ್ತು ಚಿತ್ರಪಟಗಳಲ್ಲಿ ಮಾತ್ರ ನೋಡಿ ಆನಂದಿಸಲು ಶಕ್ತರಾಗಿರುವರು.’ ಸಂತೋಷಕರವಾಗಿ, ಭೂಮಿಗೆ ಪುನರುತ್ಪಾದಕ ಶಕ್ತಿಯು ಎಷ್ಟಿದೆಯೆಂದರೆ, ಅರಣ್ಯಗಳು ಮುಂತಿಳಿಸಲಾಗಿದ್ದ ಅಧಿಕ ಹಾನಿಯನ್ನು ಈ ವರೆಗೆ ಎದುರಿಸಿ ನಿಲ್ಲಲು ಶಕ್ತವಾಗಿವೆ.

ಆದರೆ ದೀರ್ಘಕಾಲದ ತನಕ ನಮ್ಮ ಜೀವಿಪರಿಸ್ಥಿತಿ ವ್ಯವಸ್ಥೆಯನ್ನು ಕಾಪಾಡಲು ಅತ್ಯಧಿಕವಾದದ್ದನ್ನು ಮಾಡುವಾತನು ದೇವರು ಮಾತ್ರ. ‘ಆತನು ತನ್ನ ಮೇಲಂತಸ್ತುಗಳಿಂದ ಪರ್ವತಗಳಿಗೆ ನೀರು ಕೊಡುತ್ತಾನೆ’ ಮತ್ತು ‘ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತಾನೆ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತಾನೆ.’ ಮತ್ತು ಆತನು “ಲೋಕನಾಶಕರನ್ನು ನಾಶಮಾಡು”ವ ಮಾತುಕೊಟ್ಟಿದ್ದಾನೆ. (ಕೀರ್ತನೆ 104:13, 14; ಪ್ರಕಟನೆ 11:18) ಲೋಕದ ನಿವಾಸಿಗಳು ಒಂದು ಮಾಲಿನ್ಯರಹಿತ ಭೂಮಿಯನ್ನು ಸದಾಕಾಲ ಆನಂದಿಸಲು ಶಕ್ತರಾಗುವುದು ಅದೆಷ್ಟು ಅದ್ಭುತಕರವಾಗಿರುವುದು!​—ಕೀರ್ತನೆ 37:9-11.