ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ರಕ್ಷಿಸುತ್ತಾನೆ—ಹೇಗೆ?

ಯೇಸು ರಕ್ಷಿಸುತ್ತಾನೆ—ಹೇಗೆ?

ಯೇಸು ರಕ್ಷಿಸುತ್ತಾನೆ​—ಹೇಗೆ?

“ಯೇಸು ರಕ್ಷಿಸುತ್ತಾನೆ!” “ಯೇಸು ನಮ್ಮ ರಕ್ಷಕನು!” ಲೋಕದಾದ್ಯಂತ ಅನೇಕ ದೇಶಗಳಲ್ಲಿ ಇಂತಹ ಸಂದೇಶಗಳು ಕಟ್ಟಡಗಳ ಗೋಡೆಗಳ ಮೇಲೆ ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲ್ಪಡುತ್ತವೆ. ಯೇಸು ತಮ್ಮ ರಕ್ಷಕನಾಗಿದ್ದಾನೆ ಎಂದು ಲಕ್ಷಗಟ್ಟಲೆ ಜನರು ಪ್ರಾಮಾಣಿಕವಾಗಿ ನಂಬುತ್ತಾರೆ. “ಯೇಸು ನಿಮ್ಮನ್ನು ಹೇಗೆ ರಕ್ಷಿಸುತ್ತಾನೆ?” ಎಂದು ನೀವು ಅವರನ್ನು ಕೇಳುವಲ್ಲಿ, “ಯೇಸು ನಮಗೋಸ್ಕರ ಸತ್ತನು” ಅಥವಾ “ಯೇಸು ನಮ್ಮ ಪಾಪಗಳಿಗಾಗಿ ಸತ್ತನು” ಎಂದವರು ಉತ್ತರಿಸಬಹುದು. ಹೌದು, ಯೇಸುವಿನ ಮರಣವು ನಮ್ಮ ರಕ್ಷಣೆಯನ್ನು ಸಾಧ್ಯಗೊಳಿಸುತ್ತದೆ. ಆದರೆ ಒಬ್ಬ ಮನುಷ್ಯನ ಮರಣವು ಒಂದು ದೊಡ್ಡ ಜನಸಮೂಹದ ಪಾಪಗಳ ಬೆಲೆಯನ್ನು ಹೇಗೆ ತೆರಸಾಧ್ಯವಿದೆ? “ಯೇಸುವಿನ ಮರಣವು ನಿಮ್ಮನ್ನು ಹೇಗೆ ರಕ್ಷಿಸಸಾಧ್ಯವಿದೆ?” ಎಂದು ನಿಮ್ಮನ್ನು ಕೇಳುವಲ್ಲಿ ನೀವೇನು ಹೇಳುವಿರಿ?

ಈ ಪ್ರಶ್ನೆಗೆ ಬೈಬಲ್‌ ಕೊಡುವ ಉತ್ತರವು ತುಂಬ ಸರಳವಾಗಿದೆಯಾದರೂ, ಅದು ಸ್ಪಷ್ಟವಾಗಿದೆ ಮತ್ತು ಗಮನಾರ್ಹವಾದದ್ದಾಗಿದೆ. ಆದರೂ, ಅದರ ಪ್ರಮುಖತೆಯನ್ನು ಗ್ರಹಿಸಲಿಕ್ಕಾಗಿ, ನಾವು ಮೊದಲಾಗಿ ಯೇಸುವಿನ ಜೀವನ ಮತ್ತು ಮರಣವನ್ನು ತುಂಬ ಜಟಿಲವಾದ ಒಂದು ಸಮಸ್ಯೆಗೆ ಪರಿಹಾರದೋಪಾದಿ ಪರಿಗಣಿಸುವ ಅಗತ್ಯವಿದೆ. ಆಗ ಮಾತ್ರ ನಾವು ಯೇಸುವಿನ ಮರಣದ ಅಪರಿಮಿತ ಮೌಲ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಸಾಧ್ಯವಾಗುವುದು.

ಯೇಸು ತನ್ನ ಜೀವವನ್ನು ಕೊಡುವಂತೆ ಮಾಡುವ ಮೂಲಕ, ಆದಾಮನು ಪಾಪಮಾಡಿದಾಗ ಎದ್ದಂತಹ ಒಂದು ಸನ್ನಿವೇಶವನ್ನು ದೇವರು ನಿರ್ವಹಿಸಿದನು. ಆ ಪಾಪವು ಎಂತಹ ಒಂದು ದುರಂತವಾಗಿತ್ತು! ಮೊದಲ ಮಾನವನೂ ಅವನ ಪತ್ನಿಯಾದ ಹವ್ವಳೂ ಪರಿಪೂರ್ಣರಾಗಿದ್ದರು. ಸುಂದರವಾದ ಏದೆನ್‌ ತೋಟವು ಅವರ ಮನೆಯಾಗಿತ್ತು. ತಮ್ಮ ತೋಟಮನೆಯನ್ನು ನೋಡಿಕೊಳ್ಳುವ ಉದ್ದೇಶಭರಿತ ಕೆಲಸವನ್ನು ದೇವರು ಅವರಿಗೆ ಕೊಟ್ಟಿದ್ದನು. ಅಷ್ಟುಮಾತ್ರವಲ್ಲ, ಭೂಮಿಯಲ್ಲಿರುವ ಇತರ ಜೀವಿಗಳನ್ನು ಪ್ರೀತಿಯಿಂದ ಮೇಲ್ವಿಚಾರಣೆಮಾಡುವ ಜವಾಬ್ದಾರಿಯೂ ಅವರಿಗಿತ್ತು. ಮತ್ತು ಮಾನವರು ಬಹುಸಂತಾನವುಳ್ಳವರಾಗಿ ಹೆಚ್ಚಿ ತಮ್ಮ ಸಂತತಿಯಿಂದ ಭೂಮಿಯನ್ನು ತುಂಬಿಸುವಾಗ, ಅವರು ಪರದೈಸನ್ನು ಭೂಮಿಯಾದ್ಯಂತ ವಿಸ್ತರಿಸಬೇಕಾಗಿತ್ತು. (ಆದಿಕಾಂಡ 1:28) ಎಷ್ಟು ಆನಂದಭರಿತವಾದ ಹಾಗೂ ರೋಮಾಂಚಕವಾದ ಕೆಲಸವು ಅವರಿಗೆ ಕೊಡಲ್ಪಟ್ಟಿತ್ತು! ಇದಲ್ಲದೆ, ಅವರು ಪರಸ್ಪರ ಪ್ರೀತಿಯ ಸಾಹಚರ್ಯದಲ್ಲಿ ಆನಂದಿಸಸಾಧ್ಯವಿತ್ತು. (ಆದಿಕಾಂಡ 2:18) ಅವರಿಗೆ ಯಾವುದರ ಕೊರತೆಯೂ ಇರಲಿಲ್ಲ. ಅವರ ಮುಂದೆ ಸಂತೋಷಭರಿತ ನಿತ್ಯಜೀವವಿತ್ತು.

ಆದಾಮ ಅಥವಾ ಹವ್ವಳು ಹೇಗೆ ಪಾಪಮಾಡಸಾಧ್ಯವಿತ್ತು ಎಂಬುದನ್ನು ಊಹಿಸುವುದು ಕಷ್ಟ. ಆದರೆ ಮೊದಲ ಮಾನವ ಜೊತೆಯು ತಮ್ಮನ್ನು ಸೃಷ್ಟಿಸಿದಂತಹ ಯೆಹೋವ ದೇವರ ವಿರುದ್ಧವೇ ದಂಗೆಯೆದ್ದಿತು. ಆತ್ಮಜೀವಿಯಾಗಿದ್ದ ಪಿಶಾಚನಾದ ಸೈತಾನನು ಒಂದು ಸರ್ಪವನ್ನು ಉಪಯೋಗಿಸಿ, ಹವ್ವಳು ಯೆಹೋವನಿಗೆ ಅವಿಧೇಯಳಾಗುವಂತೆ ವಂಚಿಸಿದನು ಮತ್ತು ಆದಾಮನೂ ಅವಳನ್ನೇ ಹಿಂಬಾಲಿಸಿದನು.​—ಆದಿಕಾಂಡ 3:​1-6.

ಆದಾಮಹವ್ವರ ವಿಷಯದಲ್ಲಿ ಸೃಷ್ಟಿಕರ್ತನು ಏನು ಮಾಡಲಿದ್ದನು ಎಂಬುದರ ಕುರಿತು ಯಾವುದೇ ಸಂಶಯವಿರಲಿಲ್ಲ. ಅವಿಧೇಯತೆಯ ಪರಿಣಾಮವನ್ನು ಆತನು ಮೊದಲೇ ಈ ಮಾತುಗಳಿಂದ ಸ್ಪಷ್ಟವಾಗಿ ತಿಳಿಸಿದ್ದನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಹೀಗೆ, ಇನ್ನೂ ಹೆಚ್ಚು ಮಹತ್ವಪೂರ್ಣ ಪ್ರಶ್ನೆಯೊಂದಕ್ಕೆ ಈಗ ಉತ್ತರವು ಬೇಕಾಗಿತ್ತು.

ಮಾನವಕುಲವು ಒಂದು ಕಷ್ಟಕರವಾದ ಸಮಸ್ಯೆಯನ್ನು ಎದುರಿಸುತ್ತದೆ

ಆ ಮೊದಲ ಪಾಪವು ಮಾನವಕುಲಕ್ಕೆ ತುಂಬ ಗಂಭೀರವಾದ ಸಮಸ್ಯೆಯನ್ನು ತಂದೊಡ್ಡಿತು. ಆದಾಮನು ಒಬ್ಬ ಪರಿಪೂರ್ಣ ಮಾನವನೋಪಾದಿ ಜೀವನವನ್ನು ಆರಂಭಿಸಿದನು. ಆದುದರಿಂದ, ಅವನ ಮಕ್ಕಳು ಸಹ ಪರಿಪೂರ್ಣವಾದ ನಿತ್ಯಜೀವವನ್ನು ಅನುಭವಿಸಸಾಧ್ಯವಿತ್ತು. ಆದರೆ, ಆದಾಮನಿಗೆ ಯಾವುದೇ ಮಕ್ಕಳಾಗುವ ಮುಂಚೆಯೇ ಅವನು ಪಾಪಮಾಡಿದನು. “ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂಬ ನ್ಯಾಯತೀರ್ಪನ್ನು ಅವನು ಪಡೆದುಕೊಂಡಾಗ, ಇಡೀ ಮಾನವಕುಲವು ಇನ್ನೂ ಅವನೊಳಗಿತ್ತು. (ಆದಿಕಾಂಡ 3:19) ಆದುದರಿಂದ, ಆದಾಮನು ಪಾಪಮಾಡಿ, ದೇವರು ಮುಂತಿಳಿಸಿದಂತೆಯೇ ಸಾಯಲು ಆರಂಭಿಸಿದಾಗ, ಅವನೊಂದಿಗೆ ಇಡೀ ಮಾನವಕುಲವು ಸಹ ಮರಣದಂಡನೆಗೆ ಒಳಗಾಯಿತು.

ಸೂಕ್ತವಾಗಿಯೇ ಅಪೊಸ್ತಲ ಪೌಲನು ಬರೆದುದು: “ಒಬ್ಬ ಮನುಷ್ಯ [ಆದಾಮ]ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಹೌದು, ಮೊದಲ ಪಾಪದ ಕಾರಣದಿಂದ, ತಮ್ಮ ಮುಂದೆ ಅನಂತ ಜೀವನದ ಪ್ರತೀಕ್ಷೆಯುಳ್ಳವರಾಗಿದ್ದು ಪರಿಪೂರ್ಣರಾಗಿ ಜನಿಸಬೇಕಾಗಿದ್ದ ಮಕ್ಕಳು, ಅಸ್ವಸ್ಥತೆ, ವೃದ್ಧಾಪ್ಯ ಮತ್ತು ಮರಣದ ಪ್ರತೀಕ್ಷೆಯೊಂದಿಗೆ ಜನಿಸಿದರು.

“ಅದು ನ್ಯಾಯವಲ್ಲ. ದೇವರಿಗೆ ಅವಿಧೇಯರಾಗುವ ಆಯ್ಕೆಮಾಡಿದ್ದು ನಾವಲ್ಲ, ಆದಾಮನೇ. ಹೀಗಿರುವಾಗ, ನಿತ್ಯಜೀವ ಹಾಗೂ ಸಂತೋಷಕ್ಕಾಗಿರುವ ನಮ್ಮ ಪ್ರತೀಕ್ಷೆಯನ್ನು ನಾವೇಕೆ ಕಳೆದುಕೊಳ್ಳಬೇಕು?” ಎಂದು ಯಾರಾದರೂ ಹೇಳಬಹುದು. ಒಬ್ಬ ತಂದೆಯು ಒಂದು ಕಾರನ್ನು ಕದ್ದ ಕಾರಣ ನ್ಯಾಯಾಲಯವು ಅವನ ಮಗನನ್ನು ಸೆರೆಮನೆಯಲ್ಲಿ ಹಾಕುವುದಾದರೆ, “ಇದು ನ್ಯಾಯವಲ್ಲ! ನಾನೇನೂ ತಪ್ಪು ಮಾಡಲಿಲ್ಲ” ಎಂದು ಮಗನು ಪ್ರತಿಭಟಿಸುವುದು ಸೂಕ್ತವಾದದ್ದಾಗಿದೆ ಎಂಬುದು ನಮಗೆ ಗೊತ್ತಿದೆ.​—ಧರ್ಮೋಪದೇಶಕಾಂಡ 24:16.

ಮೊದಲ ಸ್ತ್ರೀಪುರುಷರು ಪಾಪಮಾಡುವಂತೆ ಅವರನ್ನು ಪ್ರಚೋದಿಸುವ ಮೂಲಕ ಸೈತಾನನು, ದೇವರನ್ನು ಸಂದಿಗ್ಧ ಸ್ಥಿತಿಯಲ್ಲಿ ಹಾಕಸಾಧ್ಯವಿದೆ ಎಂದು ತೀರ್ಮಾನಿಸಿದ್ದಿರಬಹುದು. ಪಿಶಾಚನು ಮಾನವಕುಲದ ಇತಿಹಾಸದ ಅತ್ಯಾರಂಭದಲ್ಲಿಯೇ, ಅಂದರೆ ಯಾವುದೇ ಮಕ್ಕಳು ಜನಿಸುವುದಕ್ಕೆ ಮೊದಲೇ ಆಕ್ರಮಣವನ್ನು ಮಾಡಿದನು. ಆದಾಮನು ಪಾಪಮಾಡಿದ ಕ್ಷಣದಿಂದ, ಆದಾಮಹವ್ವರಿಗೆ ಜನಿಸುವ ಮಕ್ಕಳ ಕುರಿತು ಯೆಹೋವನು ಏನು ಮಾಡುವನು ಎಂಬ ಪ್ರಾಮುಖ್ಯ ಪ್ರಶ್ನೆಯು ಮೇಲೆದ್ದಿತು.

ಯೆಹೋವ ದೇವರು ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿದನು. “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ!” ಎಂದು ನೀತಿವಂತನಾದ ಎಲೀಹು ಉದ್ಗರಿಸಿದನು. (ಯೋಬ 34:10) ಮತ್ತು ಯೆಹೋವನ ಕುರಿತು ಪ್ರವಾದಿಯಾದ ಮೋಶೆಯು ಬರೆದುದು: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ಆದಾಮನ ಪಾಪದಿಂದ ಉಂಟಾದ ಸಮಸ್ಯೆಗೆ ಸತ್ಯ ದೇವರು ಒದಗಿಸಿದ ಪರಿಹಾರದಿಂದಾಗಿ, ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸಲಿಕ್ಕಾಗಿ ನಮಗೆ ಕೊಡಲ್ಪಟ್ಟಿರುವ ಅವಕಾಶವು ನಮ್ಮ ಕೈತಪ್ಪಿಹೋಗಲಾರದು.

ದೇವರು ಒಂದು ಪರಿಪೂರ್ಣವಾದ ಪರಿಹಾರವನ್ನು ಒದಗಿಸುತ್ತಾನೆ

ಪಿಶಾಚನಾದ ಸೈತಾನನಿಗೆ ತಾನು ನುಡಿದ ವಾಕ್ಯದಲ್ಲಿ ದೇವರು ಸವಿವರವಾಗಿ ವ್ಯಕ್ತಪಡಿಸಿದ ಪರಿಹಾರವನ್ನು ಪರಿಗಣಿಸಿರಿ. ಯೆಹೋವನು ಸೈತಾನನಿಗೆ ಹೇಳಿದ್ದು: “ನಿನಗೂ ಈ ಸ್ತ್ರೀಗೂ [ದೇವರ ಸ್ವರ್ಗೀಯ ಸಂಸ್ಥೆ], ನಿನ್ನ ಸಂತಾನಕ್ಕೂ [ಸೈತಾನನ ನಿಯಂತ್ರಣದ ಕೆಳಗಿರುವ ಲೋಕ] ಈ ಸ್ತ್ರೀಯ ಸಂತಾನಕ್ಕೂ [ಯೇಸು ಕ್ರಿಸ್ತ] ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ [ಸೈತಾನನ] ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ [ಯೇಸುವಿನ ಮರಣ].” (ಆದಿಕಾಂಡ 3:15) ಬೈಬಲಿನ ಈ ಪ್ರಥಮ ಪ್ರವಾದನೆಯಲ್ಲಿ, ತನ್ನ ಸ್ವರ್ಗೀಯ ಆತ್ಮ ಪುತ್ರನು ಭೂಮಿಗೆ ಬಂದು ಪರಿಪೂರ್ಣ ಮಾನವನಾದ ಯೇಸುವಾಗಿ ಜೀವಿಸಿ, ತದನಂತರ ಆ ಪಾಪರಹಿತ ಸ್ಥಿತಿಯಲ್ಲಿ ಸಾಯುವಂತೆ ಅಥವಾ ಹಿಮ್ಮಡಿಯು ಕಚ್ಚಲ್ಪಡುವಂತೆ ಮಾಡುವ ತನ್ನ ಉದ್ದೇಶಕ್ಕೆ ಯೆಹೋವನು ಅಪ್ರತ್ಯಕ್ಷವಾಗಿ ಸೂಚಿಸಿದನು.

ಒಬ್ಬ ಪರಿಪೂರ್ಣ ಮಾನವನ ಮರಣವನ್ನು ದೇವರು ಏಕೆ ಅಗತ್ಯಪಡಿಸಿದನು? ಒಂದುವೇಳೆ ಆದಾಮನು ಪಾಪಮಾಡುತ್ತಿದ್ದಲ್ಲಿ, ಅವನಿಗೆ ಯೆಹೋವ ದೇವರು ಯಾವ ದಂಡನೆಯನ್ನು ವಿಧಿಸಲಿದ್ದನು? ಅದು ಮರಣದಂಡನೆಯಲ್ಲವೋ? (ಆದಿಕಾಂಡ 2:​16, 17) “ಪಾಪವು ಕೊಡುವ ಸಂಬಳ ಮರಣ” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 6:23) ತನ್ನ ಸ್ವಂತ ಮರಣದ ಮೂಲಕ ಆದಾಮನು ತನ್ನ ಪಾಪಕ್ಕೆ ಸಂಬಳವನ್ನು ತೆತ್ತನು. ಅವನಿಗೆ ಜೀವವು ಕೊಡಲ್ಪಟ್ಟಿತ್ತು, ಆದರೆ ಅವನು ಪಾಪವನ್ನು ಆಯ್ಕೆಮಾಡಿದನು ಮತ್ತು ತನ್ನ ಪಾಪಕ್ಕೆ ದಂಡನೆಯೋಪಾದಿ ಅವನು ಮರಣಪಟ್ಟನು. (ಆದಿಕಾಂಡ 3:19) ಆದರೆ ಆ ಪಾಪದ ಕಾರಣ ಇಡೀ ಮಾನವಕುಲವು ಹೊತ್ತುಕೊಳ್ಳಬೇಕಾಗಿದ್ದ ದೋಷಾರೋಪಣೆಯ ಕುರಿತಾಗಿ ಏನು? ಅವರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಒಂದು ಮರಣದ ಆವಶ್ಯಕತೆಯಿತ್ತು. ಆದರೆ ಯಾರ ಮರಣವು ಎಲ್ಲ ಮಾನವಕುಲದ ತಪ್ಪುಗಳನ್ನು ಮುಚ್ಚಿಹಾಕಸಾಧ್ಯವಿತ್ತು?

ಪುರಾತನ ಇಸ್ರಾಯೇಲ್‌ ಜನಾಂಗಕ್ಕೆ ಕೊಡಲ್ಪಟ್ಟಿದ್ದ ದೇವರ ಧರ್ಮಶಾಸ್ತ್ರವು “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು [ಅಥವಾ, ಜೀವಕ್ಕೆ ಪ್ರತಿಯಾಗಿ ಜೀವವನ್ನು]” ಅಗತ್ಯಪಡಿಸಿತು. (ವಿಮೋಚನಕಾಂಡ 21:23) ಈ ಕಾನೂನುಬದ್ಧ ಮೂಲತತ್ತ್ವಕ್ಕನುಸಾರ, ಮಾನವಕುಲದ ತಪ್ಪುಗಳನ್ನು ಮುಚ್ಚಿಹಾಕಸಾಧ್ಯವಿದ್ದ ಮರಣವು, ಆದಾಮನು ಏನನ್ನು ಕಳೆದುಕೊಂಡಿದ್ದನೋ ಅದಕ್ಕೆ ಸಮಾನವಾದ ಮೌಲ್ಯವುಳ್ಳದ್ದಾಗಿರಬೇಕಿತ್ತು. ಕೇವಲ ಇನ್ನೊಬ್ಬ ಪರಿಪೂರ್ಣ ಮಾನವನ ಮರಣವು ಮಾತ್ರ ಪಾಪದ ಸಂಬಳವನ್ನು ತೆರಸಾಧ್ಯವಿತ್ತು. ಯೇಸು ಅಂತಹ ಮಾನವನಾಗಿದ್ದನು. ವಾಸ್ತವದಲ್ಲಿ, ಆದಾಮನ ವಂಶದಿಂದ ಬಂದ ಎಲ್ಲ ವಿಮೋಚನೀಯ ಮಾನವಕುಲವನ್ನು ರಕ್ಷಿಸಲಿಕ್ಕೋಸ್ಕರ ಯೇಸು “ಅನುರೂಪವಾದ ಪ್ರಾಯಶ್ಚಿತ್ತ”ವಾಗಿದ್ದನು.​—1 ತಿಮೊಥೆಯ 2:​6, NW; ರೋಮಾಪುರ 5:​16, 17.

ಯೇಸುವಿನ ಮರಣಕ್ಕೆ ಭಾರಿ ಮೌಲ್ಯವಿದೆ

ಆದಾಮನ ಮರಣಕ್ಕೆ ಯಾವುದೇ ಮೌಲ್ಯವಿರಲಿಲ್ಲ; ತನ್ನ ಪಾಪಕ್ಕಾಗಿ ಅವನು ಸಾಯಲು ಅರ್ಹನಾಗಿದ್ದನು. ಯೇಸುವಿನ ಮರಣವಾದರೋ ಭಾರಿ ಮೌಲ್ಯವುಳ್ಳದ್ದಾಗಿತ್ತು; ಏಕೆಂದರೆ ಅವನು ಪಾಪರಹಿತ ಸ್ಥಿತಿಯಲ್ಲಿ ಮರಣಪಟ್ಟಿದ್ದನು. ಪಾಪಪೂರ್ಣ ಆದಾಮನ ವಿಧೇಯ ವಂಶಕ್ಕಾಗಿ ಯೇಸುವಿನ ಪರಿಪೂರ್ಣ ಜೀವಿತದ ಮೌಲ್ಯವನ್ನು ಯೆಹೋವ ದೇವರು ಪ್ರಾಯಶ್ಚಿತ್ತದೋಪಾದಿ ಸ್ವೀಕರಿಸಸಾಧ್ಯವಿತ್ತು. ಮತ್ತು ಯೇಸುವಿನ ಯಜ್ಞದ ಮೌಲ್ಯವು ಕೇವಲ ನಮ್ಮ ಗತ ಪಾಪಗಳಿಗಾಗಿರುವ ಬೆಲೆಯನ್ನು ತೆರಲು ಮಾತ್ರ ಪರಿಣಾಮಕಾರಿಯಾಗಿರಲಿಲ್ಲ. ಒಂದುವೇಳೆ ಹಾಗಿರುತ್ತಿದ್ದಲ್ಲಿ, ನಮಗೆ ಯಾವುದೇ ಭವಿಷ್ಯತ್ತು ಇರುತ್ತಿರಲಿಲ್ಲ. ಪಾಪದಿಂದಲೇ ಜನಿಸಿದವರಾಗಿರುವ ನಾವು ಪುನಃ ಪಾಪಮಾಡುವ ಸಾಧ್ಯತೆಯಿತ್ತು. (ಕೀರ್ತನೆ 51:5) ಆದರೆ ಯೇಸುವಿನ ಮರಣವು ಆದಾಮಹವ್ವರ ಸಂತತಿಯವರಿಗೆ ಯೆಹೋವನು ಮೂಲತಃ ಉದ್ದೇಶಿಸಿದ್ದ ಪರಿಪೂರ್ಣತೆಯನ್ನು ಪಡೆದುಕೊಳ್ಳುವ ಸದವಕಾಶವನ್ನು ನೀಡುತ್ತಿರುವುದಕ್ಕೆ ನಾವೆಷ್ಟು ಕೃತಜ್ಞರಾಗಿದ್ದೇವೆ!

ಗಂಭೀರವಾದ ಆರ್ಥಿಕ ಸಾಲ (ಪಾಪ)ದಲ್ಲಿ ನಮ್ಮನ್ನು ಸಿಕ್ಕಿಸಿ, ನಾವು ಸಾಲದಿಂದ ಹೊರಬರಲು ಯಾವುದೇ ಮಾರ್ಗವಿಲ್ಲದಂತಹ ರೀತಿಯಲ್ಲಿ ಬಿಟ್ಟು ಸತ್ತುಹೋದ ಒಬ್ಬ ತಂದೆಗೆ ಆದಾಮನನ್ನು ಹೋಲಿಸಸಾಧ್ಯವಿದೆ. ಇನ್ನೊಂದು ಕಡೆಯಲ್ಲಿ, ಆದಾಮನು ನಮ್ಮ ಮೇಲೆ ಹೊರಿಸಿದ ಅಪರಿಮಿತ ಸಾಲದಿಂದ ನಮ್ಮನ್ನು ಬಿಡುಗಡೆಗೊಳಿಸುವ ಹಾಗೂ ನಾವು ಅನಂತ ಕಾಲದ ವರೆಗೆ ಜೀವಿಸಲಿಕ್ಕಾಗಿ ಒದಗಿಸುವಿಕೆಯನ್ನು ಮಾಡುವಂತಹ ಸಂಪದ್ಭರಿತ ಆಸ್ತಿಯನ್ನು ಬಿಟ್ಟು ಸತ್ತುಹೋದ ಒಬ್ಬ ಒಳ್ಳೇ ತಂದೆಗೆ ಯೇಸುವನ್ನು ಹೋಲಿಸಸಾಧ್ಯವಿದೆ. ಯೇಸುವಿನ ಮರಣವು ಕೇವಲ ಗತ ಪಾಪಗಳ ರದ್ದುಪಡಿಸುವಿಕೆಗಾಗಿರುವುದಿಲ್ಲ; ಅದು ನಮ್ಮ ಭವಿಷ್ಯತ್ತಿಗಾಗಿರುವ ಅದ್ಭುತಕರ ಒದಗಿಸುವಿಕೆಯೂ ಆಗಿದೆ.

ಯೇಸು ಮಾನವಕುಲದ ರಕ್ಷಕನಾಗಿದ್ದಾನೆ. ಏಕೆಂದರೆ ಅವನು ನಮಗೋಸ್ಕರ ಮರಣಪಟ್ಟನು. ಮತ್ತು ಅವನ ಮರಣದ ಏರ್ಪಾಡು ಎಷ್ಟು ಅಮೂಲ್ಯವಾದ ಒದಗಿಸುವಿಕೆಯಾಗಿದೆ! ಆದಾಮನ ಪಾಪದ ಜಟಿಲ ಸಮಸ್ಯೆಗೆ ದೇವರು ನೀಡಿರುವ ಪರಿಹಾರದ ಒಂದು ಭಾಗವಾಗಿ ನಾವಿದನ್ನು ಪರಿಗಣಿಸುವುದಾದರೆ, ಯೆಹೋವನಲ್ಲಿ ಮತ್ತು ಆತನು ಕಾರ್ಯನಡಿಸುವ ವಿಧದಲ್ಲಿ ನಮ್ಮ ನಂಬಿಕೆಯು ಇನ್ನಷ್ಟು ಬಲಗೊಳ್ಳುತ್ತದೆ. ಹೌದು, ಯೇಸುವಿನ ಮರಣವು, ಅವನಲ್ಲಿ ‘ನಂಬಿಕೆಯಿಡುವ ಎಲ್ಲರನ್ನು’ ಪಾಪ, ರೋಗ, ವೃದ್ಧಾಪ್ಯ ಮತ್ತು ಮರಣದಿಂದ ರಕ್ಷಿಸುವ ಮಾಧ್ಯಮವಾಗಿದೆ. (ಯೋಹಾನ 3:16) ನಮ್ಮ ರಕ್ಷಣೆಗಾಗಿ ಈ ಪ್ರೀತಿಭರಿತ ಏರ್ಪಾಡನ್ನು ಮಾಡಿರುವುದಕ್ಕಾಗಿ ನೀವು ದೇವರಿಗೆ ಕೃತಜ್ಞರಾಗಿದ್ದೀರೋ?

[ಪುಟ 5ರಲ್ಲಿರುವ ಚಿತ್ರ]

ಆದಾಮನು ಮಾನವಕುಲದ ಮೇಲೆ ಪಾಪ ಮತ್ತು ಮರಣವನ್ನು ಬರಮಾಡಿದನು

[ಪುಟ 6ರಲ್ಲಿರುವ ಚಿತ್ರ]

ಯೆಹೋವನು ಒಂದು ಪರಿಪೂರ್ಣ ಪರಿಹಾರವನ್ನು ಒದಗಿಸಿದನು