ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೂಣರು ಗತಕಾಲದ ನಿಗೂಢ ಜನಾಂಗ

ಹೂಣರು ಗತಕಾಲದ ನಿಗೂಢ ಜನಾಂಗ

ಹೂಣರು ಗತಕಾಲದ ನಿಗೂಢ ಜನಾಂಗ

ಧೂಳಿನಲ್ಲಿ ದೌಡಾಯಿಸುತ್ತಾ, ಕೊಳ್ಳೆಯಿಂದ ತುಂಬಿದ ಜೋಡಿಚೀಲಗಳನ್ನು ತಮ್ಮ ಕುದುರೆಗಳ ಮೇಲೆ ಹೇರಿದ್ದ ಅಲೆಮಾರಿ ಜನಾಂಗದ ಕುದುರೆ ದಂಡು ಆಗಮಿಸಿತು. ಈ ನಿಗೂಢ ಜನರು, ಸುಮಾರು ಸಾ.ಶ.ಪೂ. 700ರಿಂದ 300ರ ತನಕ ಯೂರೇಷಿಯದ ಬೆಂಗಾಡಿನ ಮೇಲೆ ಆಧಿಪತ್ಯ ನಡೆಸುತ್ತಿದ್ದರು. ನಂತರ ಇವರು ಕಣ್ಮರೆಯಾದರೂ, ಅದಕ್ಕೆ ಮುಂಚೆ ಮಾನವ ಇತಿಹಾಸದಲ್ಲಿ ತಮ್ಮ ಗುರುತನ್ನು ಬಿಟ್ಟುಹೋದರು. ಬೈಬಲಿನಲ್ಲಿಯೂ ಇವರ ಕುರಿತಾದ ಉಲ್ಲೇಖವಿದೆ. ಇವರೇ ಇಂಗ್ಲಿಷ್‌ನಲ್ಲಿ ಸಿದಿಯನ್ಸ್‌ ಎಂದು ಕರೆಯಲಾಗಿರುವ ಹೂಣರು.

ಅನೇಕ ಶತಮಾನಗಳ ವರೆಗೆ, ಪೂರ್ವ ಯೂರೋಪಿನ ಕಾರ್ಪೇತಿಯನ್‌ ಪರ್ವತಗಳಿಂದ ಹಿಡಿದು ಈಗ ಆಗ್ನೇಯ ರಷ್ಯಾ ಆಗಿ ಪರಿಣಮಿಸಿರುವ ಪ್ರದೇಶದ ವರೆಗೆ ವಿಸ್ತರಿಸಿರುವ ಹುಲ್ಲುಗಾವಲುಗಳಲ್ಲಿ, ಅಲೆಮಾರಿಗಳು ಹಾಗೂ ಕಾಡ್ಗುದುರೆಗಳ ಹಿಂಡುಗಳು ಬಹಳಷ್ಟು ಅಡ್ಡಾಡಿದ್ದವು. ಸಾ.ಶ.ಪೂ. ಎಂಟನೆಯ ಶತಮಾನದಷ್ಟಕ್ಕೆ, ಶೂಆನ್‌ ಎಂಬ ಚೀನೀ ಚಕ್ರವರ್ತಿಯು ಕೈಕೊಂಡ ಮಿಲಿಟರಿ ಕಾರ್ಯಾಚರಣೆಯು, ಇವರು ಪಶ್ಚಿಮದ ಕಡೆಗೆ ವಲಸೆಹೋಗುವಂತೆ ಮಾಡಿತು. ಪಶ್ಚಿಮದ ಕಡೆಗೆ ಸ್ಥಳಾಂತರಿಸಿದ ಹೂಣರು, ಕಾಕಸಸ್‌ ಪ್ರಾಂತವನ್ನೂ ಕಪ್ಪು ಸಮುದ್ರದ ಉತ್ತರಕ್ಕಿರುವ ಕ್ಷೇತ್ರವನ್ನೂ ನಿಯಂತ್ರಿಸುತ್ತಿದ್ದ ಸಿಮಿರೀಯನ್ನರೊಂದಿಗೆ ಹೋರಾಡಿದರು ಮತ್ತು ಅವರನ್ನು ಅಟ್ಟಿಬಿಟ್ಟರು.

ಐಶ್ವರ್ಯವನ್ನು ಸಂಪಾದಿಸುವ ಬಯಕೆಯಿಂದ ಹೂಣರು ಅಶ್ಶೂರ್ಯರ ರಾಜಧಾನಿಯಾದ ನಿನೆವೆಯನ್ನು ಸೂರೆಮಾಡಿದರು. ತದನಂತರ ಅವರು ಅಶ್ಶೂರ್ಯರೊಂದಿಗೆ ಸೇರಿಕೊಂಡು, ಮೇದ್ಯಯ, ಬ್ಯಾಬಿಲೋನಿಯ ಹಾಗೂ ಇನ್ನಿತರ ಜನಾಂಗಗಳ ವಿರುದ್ಧ ಕ್ರಿಯೆಗೈದರು. ಅವರ ಆಕ್ರಮಣಗಳು ಉತ್ತರ ಐಗುಪ್ತವನ್ನೂ ತಲಪಿದವು. ಈಶಾನ್ಯ ಇಸ್ರಾಯೇಲ್‌ನಲ್ಲಿರುವ ಬೇತ್‌ಷೆಯಾನ್‌ ಪಟ್ಟಣವು ಸಮಯಾನಂತರ ಹೂಣರನಗರ (ಸಿದಿಯಾಪೊಲಿಸ್‌) ಎಂದು ಕರೆಯಲ್ಪಟ್ಟಿತೆಂಬ ವಾಸ್ತವಾಂಶವು, ಈ ಹೂಣರು ಆ ಕ್ಷೇತ್ರವನ್ನು ಸ್ವಾಧೀನಪಡಿಸಿಕೊಂಡಿದ್ದ ಕಾಲಾವಧಿಯನ್ನು ಸೂಚಿಸಬಹುದು.​—1 ಸಮುವೇಲ 31:​11, 12.

ಕಾಲಕ್ರಮೇಣ, ಆಧುನಿಕ ದಿನದ ರೊಮೇನಿಯ, ಮಾಲ್ಡೋವ, ಯುಕ್ರೇನ್‌ ಮತ್ತು ದಕ್ಷಿಣ ರಷ್ಯಾದ ಬೆಂಗಾಡುಗಳಲ್ಲಿ ಹೂಣರು ನೆಲೆಸತೊಡಗಿದರು. ಅಲ್ಲಿ ಅವರು, ಗ್ರೀಕರು ಹಾಗೂ ಆಧುನಿಕ ದಿನದ ಯುಕ್ರೇನ್‌ ಮತ್ತು ದಕ್ಷಿಣ ರಷ್ಯಾದ ಧಾನ್ಯ ಉತ್ಪಾದಕರ ನಡುವೆ ಮಧ್ಯಸ್ಥಗಾರರೋಪಾದಿ ಕೆಲಸಮಾಡುತ್ತಾ ದಿನೇ ದಿನೇ ಐಶ್ವರ್ಯವಂತರಾಗತೊಡಗಿದರು. ಹೂಣರು ಧಾನ್ಯ, ಜೇನುತುಪ್ಪ, ಉಣ್ಣೆ, ಹಾಗೂ ದನಕರುಗಳನ್ನು ಗ್ರೀಕರ ದ್ರಾಕ್ಷಾಮದ್ಯ, ಜವಳಿ, ಹಾಗೂ ಕಲಾಕೃತಿಗಳೊಂದಿಗೆ ವಿನಿಮಯಮಾಡಿಕೊಳ್ಳುತ್ತಿದ್ದರು. ಹೀಗೆ ಅವರು ನಂಬಲಸಾಧ್ಯವಾದಷ್ಟು ಐಶ್ವರ್ಯವನ್ನು ಒಟ್ಟುಗೂಡಿಸಿಕೊಂಡರು.

ಅದ್ಭುತ ಕುದುರೆ ಸವಾರರು

ಮರಳುಗಾಡಿನ ಜನರಿಗೆ ಒಂಟೆಯು ಹೇಗೆ ಸಹಾಯಕವಾಗಿತ್ತೋ ಹಾಗೆಯೇ ಈ ಬೆಂಗಾಡಿನ ಸವಾರರಿಗೆ ಕುದುರೆಯು ಸಹಾಯಕವಾಗಿತ್ತು. ಈ ಹೂಣರು ಅತ್ಯುತ್ತಮ ಕುದುರೆ ಸವಾರರಾಗಿದ್ದರು ಮತ್ತು ಕುದುರೆಗಳ ಮೇಲಿರುವ ಜೋಡಿಚೀಲಗಳು ಹಾಗೂ ರಿಕಾಪುಗಳನ್ನು ಉಪಯೋಗಿಸಿದ ಮೊದಲಿಗರಲ್ಲಿ ಇವರೂ ಸೇರಿದ್ದರು. ಇವರು ಕುದುರೆಗಳ ಮಾಂಸವನ್ನು ತಿನ್ನುತ್ತಿದ್ದರು ಮತ್ತು ಹೆಣ್ಣು ಕುದುರೆಗಳ ಹಾಲನ್ನು ಕುಡಿಯುತ್ತಿದ್ದರು. ಅಷ್ಟುಮಾತ್ರವಲ್ಲ, ಸರ್ವಾಂಗಹೋಮಕ್ಕಾಗಿ ಅವರು ಕುದುರೆಗಳನ್ನೇ ಉಪಯೋಗಿಸುತ್ತಿದ್ದರು. ಒಬ್ಬ ಹೂಣ ಯೋಧನು ಮರಣಪಟ್ಟಾಗ, ಅವನ ಕುದುರೆಯನ್ನು ಕೊಂದು, ಅದರ ಅಲಂಕಾರ ಸಜ್ಜಿನ ಸಮೇತ ಗೌರವಾರ್ಹ ರೀತಿಯಲ್ಲಿ ಅವರು ಶವಸಂಸ್ಕಾರಮಾಡುತ್ತಿದ್ದರು.

ಇತಿಹಾಸಕಾರನಾದ ಹಿರೊಡೊಟಸನಿಂದ ವರ್ಣಿಸಲ್ಪಟ್ಟಂತೆ, ಹೂಣರು ತುಂಬ ಕ್ರೂರವಾದ ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ದರು. ಇವುಗಳಲ್ಲಿ, ತಾವು ಕೊಂದವರ ತಲೆಬುರುಡೆಗಳನ್ನು ಕುಡಿಯುವ ಪಾತ್ರೆಗಳಾಗಿ ಉಪಯೋಗಿಸುವುದೂ ಒಳಗೂಡಿತ್ತು. ಅವರು ತಮ್ಮ ವೈರಿಗಳನ್ನು ಆಕ್ರಮಿಸಿ, ಮಾಂಸವನ್ನು ಹರಿದಂತಹ ಕಬ್ಬಿಣದ ಕತ್ತಿ, ಗಂಡುಗೊಡಲಿ, ಈಟಿ ಮತ್ತು ಮುಳ್ಳು ಬಾಣಗಳಿಂದ ಅವರನ್ನು ನಾಶಮಾಡುತ್ತಿದ್ದರು.

ನಿತ್ಯತೆಗಾಗಿ ಸಜ್ಜುಗೊಳಿಸಲ್ಪಟ್ಟಿರುವ ಗೋರಿಗಳು

ಹೂಣರು ಮಾಟಮಂತ್ರವನ್ನು ಹಾಗೂ ಷ್ಯಾಮನಿಸ್ಟ್‌ ಮತವನ್ನು ಅನುಸರಿಸುತ್ತಿದ್ದರು ಮತ್ತು ಬೆಂಕಿಯನ್ನೂ ದೇವಿಮಾತೆಯನ್ನೂ ಆರಾಧಿಸುತ್ತಿದ್ದರು. (ಧರ್ಮೋಪದೇಶಕಾಂಡ 18:​10-12) ಅವರು ಗೋರಿಯನ್ನು ಮೃತರ ನಿವಾಸವಾಗಿ ಪರಿಗಣಿಸುತ್ತಿದ್ದರು. ಮೃತ ಧಣಿಯ ಉಪಯೋಗಕ್ಕಾಗಿ ಆಳುಗಳನ್ನು ಹಾಗೂ ಪ್ರಾಣಿಗಳನ್ನು ಬಲಿಯಾಗಿ ಅರ್ಪಿಸಲಾಗುತ್ತಿತ್ತು. ಐಶ್ವರ್ಯ ಹಾಗೂ ಸೇವಕರು, ತಮ್ಮ ಯಜಮಾನರೊಂದಿಗೆ “ಮುಂದಿನ ಲೋಕ”ಕ್ಕೆ ಹೋಗುತ್ತಿದ್ದರು ಎಂದು ನಂಬಲಾಗುತ್ತದೆ. ರಾಜಮನೆತನದ ಒಂದು ಗೋರಿಯಲ್ಲಿ, ಐವರು ಸೇವಕರು ತಮ್ಮ ಧಣಿಯ ಕಡೆಗೆ ಪಾದಗಳನ್ನು ಮಾಡಿಕೊಂಡು ಮಲಗಿದ್ದು, ಸಮಯ ಬಂದಾಗ ಬೇಗನೆ ಎದ್ದು ತಮ್ಮ ಕರ್ತವ್ಯಗಳನ್ನು ಪುನಃ ಆರಂಭಿಸಲು ಸಿದ್ಧರಾಗಿರುವಂತೆ ಕಂಡುಬರುತ್ತಿತ್ತು.

ರಾಜರುಗಳನ್ನು ಅಪಾರ ಕಾಣಿಕೆಗಳೊಂದಿಗೆ ಸಮಾಧಿಮಾಡಲಾಗುತ್ತಿತ್ತು. ಮತ್ತು ಶೋಕದ ಸಮಯಾವಧಿಯಲ್ಲಿ ಹೂಣರು ತಮ್ಮ ರಕ್ತವನ್ನು ಸುರಿಸುತ್ತಿದ್ದರು ಮತ್ತು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದರು. ಹಿರೊಡೊಟಸನು ಬರೆದುದು: “ಅವರು ತಮ್ಮ ಕಿವಿಗಳ ಒಂದು ಭಾಗವನ್ನು ಕತ್ತರಿಸಿಕೊಳ್ಳುತ್ತಿದ್ದರು, ತಮ್ಮ ತಲೆಗಳನ್ನು ಬೋಳಿಸಿಕೊಳ್ಳುತ್ತಿದ್ದರು, ತಮ್ಮ ತೋಳುಗಳ ಸುತ್ತಲೂ ಗೀಚುಗಾಯಗಳನ್ನು ಮಾಡಿಕೊಳ್ಳುತ್ತಿದ್ದರು, ಹಣೆಗಳು ಹಾಗೂ ಮೂಗುಗಳಿಗೆ ಗಾಯಮಾಡಿಕೊಳ್ಳುತ್ತಿದ್ದರು, ತಮ್ಮ ಎಡಗೈಗಳನ್ನು ಬಾಣಗಳಿಂದ ಇರಿದುಕೊಳ್ಳುತ್ತಿದ್ದರು.” ಇದಕ್ಕೆ ವ್ಯತಿರಿಕ್ತವಾಗಿ, ಅದೇ ಯುಗದ ಇಸ್ರಾಯೇಲ್ಯರಿಗೆ ದೇವರು ಕೊಟ್ಟ ಧರ್ಮಶಾಸ್ತ್ರದಲ್ಲಿ ಹೀಗೆ ಆಜ್ಞಾಪಿಸಲಾಗಿತ್ತು: “ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು.”​—ಯಾಜಕಕಾಂಡ 19:28.

ಹೂಣರು ಸಾವಿರಾರು ಕುರ್ಗನ್‌ಗಳನ್ನು (ಸಮಾಧಿ ದಿಬ್ಬಗಳನ್ನು) ಹಿಂದೆ ಬಿಟ್ಟುಹೋದರು. ಕುರ್ಗನ್‌ಗಳಲ್ಲಿ ಸಿಕ್ಕಿದ ಅನೇಕ ಆಭರಣಗಳು, ಹೂಣರ ದೈನಂದಿನ ಜೀವಿತವನ್ನು ಚೆನ್ನಾಗಿ ಚಿತ್ರಿಸುತ್ತವೆ. ರಷ್ಯಾದ ಚಕ್ರವರ್ತಿಯಾದ ಪೀಟರ್‌ ದ ಗ್ರೇಟ್‌ ಎಂಬಾತನು 1715ರಲ್ಲಿ ಅಂತಹ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದನು. ಮತ್ತು ಈ ಥಳಥಳಿಸುವ ವಸ್ತುಗಳನ್ನು ಇಂದು ರಷ್ಯಾ ಹಾಗೂ ಯುಕ್ರೇನ್‌ನಲ್ಲಿರುವ ವಸ್ತುಸಂಗ್ರಹಾಲಯಗಳಲ್ಲಿ ನೋಡಸಾಧ್ಯವಿದೆ. ಈ “ಪ್ರಾಣಿ ಕಲೆ”ಯಲ್ಲಿ ಕುದುರೆಗಳು, ಹದ್ದುಗಳು, ಗಿಡುಗಗಳು, ಬೆಕ್ಕುಗಳು, ಚಿರತೆಗಳು, ಕಡವೆ, ಜಿಂಕೆ, ಪಕ್ಷಿ-ಗ್ರಿಫಿನ್‌ಗಳು ಮತ್ತು ಸಿಂಹ-ಗ್ರಿಫಿನ್‌ಗಳು (ರೆಕ್ಕೆಯುಳ್ಳ ಅಥವಾ ರೆಕ್ಕೆರಹಿತವಾದ ದೇಹವುಳ್ಳ ಒಂದು ಪ್ರಾಣಿಯು, ಇನ್ನೊಂದು ಪ್ರಾಣಿಯ ತಲೆಯನ್ನು ಹೊಂದಿರುವಂತಹ ದಂತಕಥೆಗಳ ಜೀವಿಗಳು) ಒಳಗೂಡಿವೆ.

ಹೂಣರು ಮತ್ತು ಬೈಬಲ್‌

ಹೂಣರ ವಿಷಯದಲ್ಲಿ ಬೈಬಲು ನೇರವಾಗಿ ಒಂದೇ ಒಂದು ಬಾರಿ ಉಲ್ಲೇಖಿಸುತ್ತದೆ. ಕೊಲೊಸ್ಸೆ 3:11ರಲ್ಲಿ ನಾವು ಓದುವುದು: “ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿಮಾಡಿಸಿಕೊಂಡವರು ಸುನ್ನತಿಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ; ಮ್ಲೇಚ್ಛ ಹೂಣ ಎಂಬ ಹೆಸರುಗಳಿಲ್ಲ; ಆಳು ಒಡೆಯ ಎಂಬ ಭೇದವಿಲ್ಲ. ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿರುವನು.” ಕ್ರೈಸ್ತ ಅಪೊಸ್ತಲ ಪೌಲನು ಈ ಮಾತುಗಳನ್ನು ಬರೆದಾಗ, “ಹೂಣ” ಎಂದು ತರ್ಜುಮೆಮಾಡಲ್ಪಟ್ಟಿರುವ ಗ್ರೀಕ್‌ ಶಬ್ದವು, ಒಂದು ನಿರ್ದಿಷ್ಟ ಜನಾಂಗವನ್ನಲ್ಲ, ಬದಲಾಗಿ ಅನಾಗರಿಕ ಜನರಲ್ಲಿ ತೀರ ಹೀನರಾದವರನ್ನು ಸೂಚಿಸಿತು. ಯೆಹೋವನ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿಯ ಪ್ರಭಾವದ ಕೆಳಗೆ, ಅಂತಹ ವ್ಯಕ್ತಿಗಳು ಸಹ ಒಂದು ದೈವಿಕ ವ್ಯಕ್ತಿತ್ವವನ್ನು ಧರಿಸಿಕೊಳ್ಳಸಾಧ್ಯವಿದೆ ಎಂಬುದನ್ನು ಪೌಲನು ಒತ್ತಿಹೇಳುತ್ತಿದ್ದನು.​—ಕೊಲೊಸ್ಸೆ 3:​9, 10.

ಯೆರೆಮೀಯ 51:27ರಲ್ಲಿ ಕಂಡುಬರುವ ಅಷ್ಕೆನಜ್‌ ಎಂಬ ಹೆಸರು, ಅಶ್ಶೂರ್ಯದ ಆಶ್‌ಗೂಸೇ​—ಇದು ಹೂಣರಿಗೆ ಅನ್ವಯಿಸಲ್ಪಡುತ್ತಿದ್ದಂಥ ಒಂದು ಶಬ್ದವಾಗಿದೆ​—ಎಂಬ ಶಬ್ದಕ್ಕೆ ಸಮಾನವಾದದ್ದಾಗಿದೆ ಎಂದು ಕೆಲವು ಪ್ರಾಕ್ತನಶಾಸ್ತ್ರಜ್ಞರು ನಂಬುತ್ತಾರೆ. ಸಾ.ಶ.ಪೂ. ಏಳನೆಯ ಶತಮಾನದಲ್ಲಿ ಅಶ್ಶೂರ್ಯರ ವಿರುದ್ಧವಾದ ದಂಗೆಯಲ್ಲಿ, ಈ ಜನಾಂಗವು ಹಾಗೂ ಮನ್ನಾಯ್‌ ಜನಾಂಗವು ಜೊತೆಗೂಡಿ ಕಾರ್ಯನಡಿಸಿದ್ದನ್ನು ಬೆಣೆಲಿಪಿ ಶಾಸನಗಳು ಉಲ್ಲೇಖಿಸುತ್ತವೆ. ಯೆರೆಮೀಯನು ಪ್ರವಾದಿಸಲು ಆರಂಭಿಸುವುದಕ್ಕೆ ಸ್ವಲ್ಪ ಮುಂಚೆ, ಯೆಹೂದ ದೇಶದ ಮಾರ್ಗವಾಗಿ ಐಗುಪ್ತಕ್ಕೆ ಹೋಗಿಬರುವಾಗ ಹೂಣರು ಯಾವುದೇ ಹಾನಿಯನ್ನು ಉಂಟುಮಾಡದೆ ಹಾದುಹೋಗಿದ್ದರು. ಆದುದರಿಂದ, ಉತ್ತರದಿಂದ ಯೆಹೂದದ ಮೇಲೆ ಆಕ್ರಮಣವು ಮಾಡಲ್ಪಡುವುದೆಂದು ಯೆರೆಮೀಯನು ಮುಂತಿಳಿಸಿದ್ದನ್ನು ಕೇಳಿಸಿಕೊಂಡಿದ್ದ ಅನೇಕರು, ಈ ಪ್ರವಾದನೆಯ ನಿಷ್ಕೃಷ್ಟತೆಯನ್ನು ಸಂಶಯಿಸಿದ್ದಿರಬಹುದು.​—ಯೆರೆಮೀಯ 1:​13-15.

ಯೆರೆಮೀಯ 50:42ರಲ್ಲಿ ಹೂಣರ ಬಗ್ಗೆ ಅಪ್ರತ್ಯಕ್ಷ ಸೂಚನೆಯಿದೆ ಎಂದು ಕೆಲವು ವಿದ್ವಾಂಸರು ಅಭಿಪ್ರಯಿಸುತ್ತಾರೆ. ಅಲ್ಲಿ ಹೀಗೆ ಓದಲಾಗುತ್ತದೆ: “ಬಿಲ್ಲನ್ನೂ ಈಟಿಯನ್ನೂ ಹಿಡಿದುಕೊಂಡಿದ್ದಾರೆ, ಅವರು ಕ್ರೂರರು, ನಿಷ್ಕರುಣಿಗಳು; ಅವರ ಧ್ವನಿಯು ಸಮುದ್ರದಂತೆ ಮೊರೆಯುತ್ತದೆ, ಕುದುರೆ ಹತ್ತಿದ್ದಾರೆ; ಬಾಬೆಲ್‌ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.” ಆದರೆ ಈ ವಚನವು ಮೊದಲಾಗಿ ಸಾ.ಶ.ಪೂ. 539ರಲ್ಲಿ ಬಾಬೆಲನ್ನು ಜಯಿಸಿದ ಮೇದ್ಯಯ ಪಾರಸಿಯರಿಗೆ ಅನ್ವಯವಾಗುತ್ತದೆ.

ಯೆಹೆಜ್ಕೇಲ ಪುಸ್ತಕದ 38 ಮತ್ತು 39ನೆಯ ಅಧ್ಯಾಯಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ “ಮಾಗೋಗ್‌ ದೇಶ”ವು, ಹೂಣರ ಬುಡಕಟ್ಟುಗಳಿಗೆ ಸೂಚಿತವಾಗಿದೆ ಎಂದು ತಿಳಿಸಲಾಗಿದೆ. ಆದರೂ, “ಮಾಗೋಗ್‌ ದೇಶ”ಕ್ಕೆ ಒಂದು ಸಾಂಕೇತಿಕ ಮಹತ್ವಾರ್ಥವಿದೆ. ಅದು, ಪರಲೋಕದಲ್ಲಿ ಯುದ್ಧ ನಡೆದ ನಂತರ ಸೈತಾನನೂ ಅವನ ದೂತರೂ ಎಲ್ಲಿಗೆ ನಿರ್ಬಂಧಿಸಲ್ಪಟ್ಟಿದ್ದಾರೋ ಆ ಭೂಪರಿಸರವನ್ನು ಸೂಚಿಸುತ್ತದೆ ಎಂಬುದು ಸುವ್ಯಕ್ತ.​—ಪ್ರಕಟನೆ 12:​7-17.

ನಿನೆವೆಯ ಪತನದ ಕುರಿತು ಮುಂತಿಳಿಸಿದಂತಹ ನಹೂಮನ ಪ್ರವಾದನೆಯ ನೆರವೇರಿಕೆಯಲ್ಲಿ ಹೂಣರು ಒಳಗೂಡಿದ್ದರು. (ನಹೂಮ 1:​1, 14) ಸಾ.ಶ.ಪೂ. 632ರಲ್ಲಿ ಕಸ್ದೀಯರು, ಹೂಣರು ಮತ್ತು ಮೇದ್ಯಯರು, ನಿನೆವೆಯನ್ನು ಸೂರೆಮಾಡಿದರು ಹಾಗೂ ಅಶ್ಶೂರ್ಯ ಸಾಮ್ರಾಜ್ಯಕ್ಕೆ ಅವನತಿಯನ್ನು ತಂದರು.

ಒಂದು ನಿಗೂಢ ಅವನತಿ

ಹೂಣರು ಈಗ ಕಣ್ಮರೆಯಾಗಿದ್ದಾರೆ, ಆದರೆ ಏಕೆ? “ಸತ್ಯವಾಗಿ ಹೇಳುವುದಾದರೆ, ಏನು ಸಂಭವಿಸಿತೆಂಬುದೇ ನಮಗೆ ಗೊತ್ತಿಲ್ಲ” ಎಂದು ಯುಕ್ರೇನ್‌ನ ಮುಖ್ಯ ಪ್ರಾಕ್ತನಶಾಸ್ತ್ರಜ್ಞರು ಹೇಳುತ್ತಾರೆ. ಐಶ್ವರ್ಯದ ಬೆನ್ನಟ್ಟುವಿಕೆಯಲ್ಲಿ ತಮ್ಮ ಎಲ್ಲ ಸಾಮರ್ಥ್ಯವನ್ನು ಕಳೆದುಕೊಂಡಿರಲಾಗಿ, ಸಾ.ಶ.ಪೂ. ಮೊದಲನೆಯ ಹಾಗೂ ಎರಡನೆಯ ಶತಮಾನಗಳಲ್ಲಿ ಅವರು ಏಷಿಯಾದಿಂದ ಬಂದ ಅಲೆಮಾರಿಗಳ ಒಂದು ಹೊಸ ಗುಂಪಿನ, ಅಂದರೆ ಸಾರ್ಮೇಷಿಯನ್ನರ ಗುಂಪಿನ ವಶವಾದರು ಎಂದು ಕೆಲವು ಇತಿಹಾಸಕಾರರು ನಂಬುತ್ತಾರೆ.

ಹೂಣರ ಬುಡಕಟ್ಟುಗಳ ಮಧ್ಯೆ ಇದ್ದ ಕಲಹವೇ ಅವರ ಅವನತಿಗೆ ಕಾರಣವಾಯಿತೆಂಬುದು ಇನ್ನಿತರ ಇತಿಹಾಸಕಾರರ ಅಭಿಪ್ರಾಯವಾಗಿದೆ. ಕಾಕಸಸ್‌ನ ಆಸೀಶದವರ ನಡುವೆ, ಹೂಣರಲ್ಲಿ ಉಳಿಕೆಯವರನ್ನು ಕಂಡುಕೊಳ್ಳಬಹುದು ಎಂದು ಇನ್ನೂ ಅನೇಕರು ಹೇಳುತ್ತಾರೆ. ಏನೇ ಆಗಿರಲಿ, ಗತಕಾಲದ ಈ ನಿಗೂಢ ಜನಾಂಗವು, ಮಾನವ ಇತಿಹಾಸದಲ್ಲಿ ತನ್ನ ಗುರುತನ್ನು ಬಿಟ್ಟುಹೋಗಿದೆ​—ಈ ಗುರುತು ಹೂಣ ಎಂಬ ಹೆಸರನ್ನು ಕ್ರೂರತೆಗೆ ಒಂದು ಸಮಾನಾರ್ಥಕ ಪದವಾಗಿ ಮಾಡಿದೆ.

[ಪುಟ 24ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

◻ ಪುರಾತನ ನಗರ

• ಆಧುನಿಕ ನಗರ

ಡ್ಯಾನ್ಯೂಬ್‌

ಸಿದಿಯ (ಹೂಣರ ಪ್ರದೇಶ) ವಲಸೆ ಮಾರ್ಗ

• ಕೀಎವ್‌

ನಿಪ್ರೊ

ನಿಸ್ಟರ್‌

ಕಪ್ಪು ಸಮುದ್ರ

ಒಸೆಟಿಯ

ಕಾಕಸಸ್‌ ಪರ್ವತಗಳು

ಕ್ಯಾಸ್ಪಿಯನ್‌ ಸಮುದ್ರ

ಅಶ್ಶೂರ್ಯ ← ಆಕ್ರಮಣ ಮಾರ್ಗಗಳು

◻ ನಿನೆವೆ

ಟೈಗ್ರಿಸ್‌

ಮೇದ್ಯಯ ← ಆಕ್ರಮಣ ಮಾರ್ಗಗಳು

ಮೆಸಪೊಟೇಮಿಯ

ಬಬಿಲೋನಿಯ ← ಆಕ್ರಮಣ ಮಾರ್ಗಗಳು

◻ ಬಾಬೆಲ್‌

ಯೂಫ್ರೇಟೀಸ್‌

ಪಾರಸಿಯ ಸಾಮ್ರಾಜ್ಯ

◻ ಸೂಸಾ

ಪರ್ಷಿಯನ್‌ ಕೊಲ್ಲಿ

ಪ್ಯಾಲೆಸ್ಟೀನ್‌

• ಬೇತ್‌ಷೆಯಾನ್‌ (ಸಿದಿಯಾಪೊಲಿಸ್‌)

ಐಗುಪ್ತ ← ಆಕ್ರಮಣ ಮಾರ್ಗಗಳು

ನೈಲ್‌

ಮೆಡಿಟರೇನಿಯನ್‌ ಸಮುದ್ರ

ಗ್ರೀಸ್‌

[ಪುಟ 25ರಲ್ಲಿರುವ ಚಿತ್ರಗಳು]

ಹೂಣರು ಯುದ್ಧಪ್ರಿಯ ಜನಾಂಗವಾಗಿದ್ದರು

[ಕೃಪೆ]

The State Hermitage Museum, St. Petersburg

[ಪುಟ 26ರಲ್ಲಿರುವ ಚಿತ್ರಗಳು]

ಹೂಣರು ತಮ್ಮ ಸಾಮಾನುಗಳನ್ನು ಗ್ರೀಕ್‌ ಕಲಾಕೃತಿಗಳಿಗೆ ವಿನಿಮಯಮಾಡಿಕೊಂಡರು ಮತ್ತು ತುಂಬ ಐಶ್ವರ್ಯವಂತರಾದರು

[ಕೃಪೆ]

Courtesy of the Ukraine Historic Treasures Museum, Kiev