ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ”

“ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ”

“ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ”

ಬೆಳಕನ್ನು ನಾವು ಅನೇಕ ಬಾರಿ ಸಾಮಾನ್ಯವಾದದ್ದಾಗಿ ಎಣಿಸುತ್ತೇವೆ. ಆದರೆ ಕರೆಂಟ್‌ ಹೋಗಿ ನಮ್ಮ ಇಡೀ ನೆರೆಹೊರೆಯು ಕಗ್ಗತ್ತಲೆಯಲ್ಲಿ ಮುಳುಗಿಸಲ್ಪಡುವಾಗಲೇ ನಮಗೆ ಅದರ ಮೌಲ್ಯ ಗೊತ್ತಾಗುತ್ತದೆ. ಸಂತೋಷಕರವಾಗಿ, ನಮ್ಮ ಸ್ವರ್ಗೀಯ “ಪವರ್‌ ಸ್ಟೇಷನ್‌” ಆಗಿರುವ ಸೂರ್ಯನು ಎಂದಿಗೂ ಕೈಕೊಡುವುದಿಲ್ಲ. ನಾವು ನೋಡಲು, ತಿನ್ನಲು, ಉಸಿರಾಡಲು, ಮತ್ತು ಜೀವಿಸಲು ಸಾಧ್ಯಗೊಳಿಸುವ ಸೂರ್ಯನಿಂದ ಬರುವ ಬೆಳಕಿಗೆ ನಾವು ಆಭಾರಿಗಳಾಗಿದ್ದೇವೆ.

ಬೆಳಕು ಜೀವಿತಕ್ಕೆ ಆವಶ್ಯಕವಾಗಿರುವುದರಿಂದ, ಅದು ಸೃಷ್ಟಿಯ ಮೊದಲ ದಿನದಂದು ಕಾಣಿಸಿಕೊಂಡಿತು ಎಂಬುದನ್ನು ಆದಿಕಾಂಡದಲ್ಲಿ ಓದುವುದು ನಮಗೆ ಸ್ವಲ್ಪವೂ ಆಶ್ಚರ್ಯವನ್ನು ಉಂಟುಮಾಡಬಾರದು. “ಆಗ ದೇವರು​—ಬೆಳಕಾಗಲಿ ಅನ್ನಲು ಬೆಳಕಾಯಿತು.” (ಆದಿಕಾಂಡ 1:3) ರಾಜ ದಾವೀದನಂಥ ದೈವಭಕ್ತ ಮನುಷ್ಯರು ಯೆಹೋವನನ್ನು ಯಾವಾಗಲೂ ಜೀವ ಮತ್ತು ಬೆಳಕಿನ ಮೂಲವಾಗಿ ಪರಿಗಣಿಸಿದರು. ದಾವೀದನು ಬರೆದುದು: “ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು! ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.”​—ಕೀರ್ತನೆ 36:9, ಪರಿಶುದ್ಧ ಬೈಬಲ್‌. *

ದಾವೀದನ ಮಾತುಗಳು ಅಕ್ಷರಾರ್ಥವಾಗಿಯೂ ಸಾಂಕೇತಿಕವಾಗಿಯೂ ಅನ್ವಯವಾಗುತ್ತವೆ. ಎನ್‌ಸೈಕ್ಲೊಪೀಡಿಯ ಬ್ರಿಟಾನಿಕಾ ಸೂಚಿಸಿ ಹೇಳುವುದು: “ಬೆಳಕು, ದೃಷ್ಟಿ ಪ್ರಜ್ಞೆಗೆ ಕಾರಣವಾಗಿದೆ ಎಂಬುದು ಸುವ್ಯಕ್ತ.” ನಂತರ ಅದು ಕೂಡಿಸುವುದು: “ಬೇರಾವುದೇ ಜ್ಞಾನೇಂದ್ರಿಯಕ್ಕಿಂತಲೂ ಹೆಚ್ಚಾಗಿ ಕಣ್ಣಿನ ಮೂಲಕವೇ ಹೆಚ್ಚಿನ ವಿಚಾರವು ಮಾನವ ಮಿದುಳನ್ನು ತಲಪುತ್ತದೆ.” ಕಣ್ಣು ಸರಿಯಾಗಿ ಕಾರ್ಯನಡಿಸಲು ಬೆಳಕಿನ ಆವಶ್ಯಕತೆಯಿರುತ್ತದೆ. ಮತ್ತು ನಾವು ಕಲಿತುಕೊಳ್ಳುವಂಥ ಹೆಚ್ಚಿನ ವಿಷಯಗಳು ದೃಷ್ಟಿಯ ಕೊಡುಗೆಯ ಮೇಲೆ ಅವಲಂಬಿಸಿರುವುದರಿಂದ, ಶಾಸ್ತ್ರವಚನಗಳಲ್ಲಿ ಬೆಳಕು ಸಾಂಕೇತಿಕ ರೀತಿಯಲ್ಲಿ ಕೂಡ ಉಪಯೋಗಿಸಲ್ಪಟ್ಟಿದೆ.

ಆದುದರಿಂದಲೇ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು.” (ಯೋಹಾನ 8:12) ಯೇಸುವಿನಿಂದ ಸೂಚಿಸಲ್ಪಟ್ಟ ಸಾಂಕೇತಿಕ ಬೆಳಕು, ಅವನು ಸಾರಿದ ಸತ್ಯದ ಕುರಿತಾದ ಸಂದೇಶವಾಗಿದೆ ಮತ್ತು ಈ ಸಂದೇಶವು ತನ್ನ ಕೇಳುಗರ ಹೃದಮನಗಳನ್ನು ಉಜ್ವಲಗೊಳಿಸಲು ಸಾಧ್ಯವಿದೆ. ವರ್ಷಾನುಗಟ್ಟಲೆಯ ಆತ್ಮಿಕ ಕತ್ತಲೆಯ ನಂತರ, ಯೇಸುವಿನ ಶಿಷ್ಯರು ಕೊನೆಯಲ್ಲಿ ಮಾನವಕುಲಕ್ಕಾಗಿರುವ ದೇವರ ಉದ್ದೇಶ ಹಾಗೂ ರಾಜ್ಯದ ನಿರೀಕ್ಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇದು ನಿಜವಾಗಿಯೂ ‘ಜೀವಕೊಡುವ ಬೆಳಕಾಗಿತ್ತು,’ ಏಕೆಂದರೆ ಈ ಜ್ಞಾನವು ನಮ್ಮನ್ನು ನಿತ್ಯಜೀವಕ್ಕೆ ನಡೆಸಬಲ್ಲದು. “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು” ಎಂದು ತನ್ನ ಸ್ವರ್ಗೀಯ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಹೇಳಿದನು. (ಯೋಹಾನ 17:3) ಈ ಆತ್ಮಿಕ ಬೆಳಕನ್ನು ನಾವೆಂದಿಗೂ ಸಾಮಾನ್ಯವಾದದ್ದಾಗಿ ತೆಗೆದುಕೊಳ್ಳದಿರೋಣ!

[ಪಾದಟಿಪ್ಪಣಿ]

^ ಪ್ಯಾರ. 3 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.