“ನೀವು ತಪ್ಪಾದ ನಂಬರನ್ನು ಡೈಯಲ್ ಮಾಡಿದ್ದೀರಿ”
ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ನೀವು ತಪ್ಪಾದ ನಂಬರನ್ನು ಡೈಯಲ್ ಮಾಡಿದ್ದೀರಿ”
ದಕ್ಷಿಣ ಆಫ್ರಿಕದ ಜೊಹಾನಸ್‌ಬರ್ಗ್‌ನಲ್ಲಿರುವ ಲೆಸ್ಲಿ ಮತ್ತು ಕ್ಯಾರಲೀನ್ ಎಂಬವರು, ನಿವೃತ್ತ ಜನರು ವಾಸಿಸುತ್ತಿದ್ದ ಒಂದು ಸಮುದಾಯದ ಜನರನ್ನು ಟೆಲಿಫೋನ್ ಮೂಲಕ ಸಂಪರ್ಕಿಸಿ ತಮ್ಮ ಸರದಿಗನುಸಾರ ಸಾಕ್ಷಿಕೊಡುತ್ತಿದ್ದರು. ಏಕೆಂದರೆ ಆ ಸಮುದಾಯದ ಪ್ರವೇಶದ್ವಾರದಲ್ಲಿ ಭದ್ರತಾ ವ್ಯವಸ್ಥೆಯಿದ್ದು, ಅಲ್ಲಿ ಪ್ರವೇಶಿಸುವುದು ಕಷ್ಟಕರವಾಗಿತ್ತು. ಲೆಸ್ಲಿ ಮತ್ತು ಕ್ಯಾರಲೀನ್ ಹೀಗೆ ಟೆಲಿಫೋನ್ ಮಾಡುತ್ತಿದ್ದಾಗ, ಹೆಚ್ಚಿನವರು ಮನೆಯಲ್ಲಿರಲಿಲ್ಲ ಮತ್ತು ಕೆಲವೇ ಮಂದಿ ಅವರ ಕ್ರೈಸ್ತ ಸಂದೇಶದಲ್ಲಿ ಅಭಿರುಚಿಯನ್ನು ತೋರಿಸಿದರು. ಆದುದರಿಂದ, ಕಡೆಗೆ ಒಬ್ಬಾಕೆ ಸ್ತ್ರೀ ಫೋನ್ ಅನ್ನು ಉತ್ತರಿಸಿದಾಗ ಕ್ಯಾರಲೀನ್‌ಗೆ ಸ್ವಲ್ಪ ಖುಷಿಯಾಯಿತು.
“ಇದು ಶ್ರೀಮತಿ ಬಿ— ಅವರೊ?” ಎಂದು ಕ್ಯಾರಲೀನ್ ಕೇಳಿದಳು.
“ಇಲ್ಲ, ನಾನು ಶ್ರೀಮತಿ ಜಿ—. ನೀವು ತಪ್ಪಾದ ನಂಬರನ್ನು ಡೈಯಲ್ ಮಾಡಿದ್ದೀರೆಂದು ತೋರುತ್ತದೆ” ಎಂದು ಹೇಳಿದಂತಹ ಒಂದು ಸ್ನೇಹಮಯಿ ಧ್ವನಿಯು ಆಚೆ ಬದಿಯಿಂದ ಕೇಳಿಬಂತು.
ಅವರ ಧ್ವನಿಯಲ್ಲಿದ್ದ ಆದರವನ್ನು ಗಮನಿಸಿದ ಕ್ಯಾರಲೀನ್ ಹೇಳಿದ್ದು: “ಪರವಾಗಿಲ್ಲ. ನಾನು ಶ್ರೀಮತಿ ಬಿ— ಅವರಿಗೆ ಏನನ್ನು ಹೇಳಲು ಬಯಸುತ್ತಿದ್ದೇನೊ ಅದನ್ನು ನಿಮಗೇ ಹೇಳಿಬಿಡುವೆ.” ಬರಲಿರುವ ದೇವರ ರಾಜ್ಯದ ಆಶೀರ್ವಾದಗಳ ಕುರಿತು ಅವಳು ಮಾತಾಡುತ್ತಾ ಮುಂದುವರಿದಳು. ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಅವರಿಗೆ ಕೊಡಲು ಏರ್ಪಾಡುಗಳನ್ನು ಮಾಡಿದ ಬಳಿಕ, ಶ್ರೀಮತಿ ಜಿ—ಯವರು ಕೇಳಿದ್ದು: “ನೀವು ಯಾವ ಧರ್ಮಕ್ಕೆ ಸೇರಿದವರೆಂದು ಹೇಳಲೇ ಇಲ್ಲವಲ್ಲ?”
“ನಾವು ಯೆಹೋವನ ಸಾಕ್ಷಿಗಳು” ಎಂದು ಕ್ಯಾರಲೀನ್ ಉತ್ತರಕೊಟ್ಟಳು.
“ಅಯ್ಯೋ, ಆ ಧರ್ಮ ಬೇಡವೇ ಬೇಡಪ್ಪಾ! ನನಗೆ ನಿಮ್ಮನ್ನು ಭೇಟಿಯಾಗಲು ಮನಸ್ಸಿಲ್ಲ.”
ಕ್ಯಾರಲೀನ್ ವಿನಂತಿಸಿದ್ದು: “ಆದರೆ ಶ್ರೀಮತಿ ಜಿ— ಕಳೆದ 20 ನಿಮಿಷಗಳಿಂದ, ನಾನು ನಿಮಗೆ ದೇವರ ರಾಜ್ಯವು ಬಲುಬೇಗನೆ ಮಾನವಕುಲಕ್ಕಾಗಿ ಏನೇನು ಮಾಡಲಿದೆಯೆಂಬುದನ್ನು ಬೈಬಲಿನಿಂದ ತೋರಿಸುತ್ತಾ, ಇರುವಂಥದ್ದರಲ್ಲೇ ಅತ್ಯದ್ಭುತವಾದ ನಿರೀಕ್ಷೆಯನ್ನು ಹಂಚಿಕೊಂಡಿದ್ದೇನೆ. ಈ ಸಂಗತಿಗಳನ್ನು ಕೇಳಿ ನೀವು ಎಷ್ಟು ಸಂತೋಷಪಟ್ಟಿರಿ, ಸಂಭ್ರಮಪಟ್ಟಿರಿ ಮತ್ತು ಹೆಚ್ಚನ್ನು ಕಲಿಯಲು ಬಯಸಿದ್ದೀರಿ. ಯೆಹೋವನ ಸಾಕ್ಷಿಗಳ ಬಗ್ಗೆ ನಿಮಗೆ ನಿಜವಾಗಿಯೂ ಏನು ಗೊತ್ತಿದೆ? ನೀವು ಕಾಯಿಲೆಬೀಳುವಲ್ಲಿ, ಒಬ್ಬ ಮೆಕ್ಯಾನಿಕ್ ಬಳಿ ಹೋಗುವಿರೊ? ಯೆಹೋವನ ಸಾಕ್ಷಿಗಳು ಏನನ್ನು ನಂಬುತ್ತಾರೆಂಬುದನ್ನು ನಾನು ನಿಮಗೆ ತಿಳಿಸುವಂತೆ ನನಗೇಕೆ ಅವಕಾಶ ಕೊಡಬಾರದು?”
ಒಂದು ಕ್ಷಣ ಮೌನವಾಗಿದ್ದ ನಂತರ ಈ ಪ್ರತ್ಯುತ್ತರ ಬಂತು: “ನೀವು ಹೇಳಿದ್ದು ಸರಿಯೆಂದು ನನಗನಿಸುತ್ತದೆ. ನೀವು ಬಂದರೆ ಒಳ್ಳೇದು. ಆದರೆ ಒಂದು ಸಂಗತಿಯನ್ನು ಮಾತ್ರ ಚೆನ್ನಾಗಿ ಮನಸ್ಸಿನಲ್ಲಿಡಿರಿ, ನೀವು ಎಂದಿಗೂ ನನ್ನನ್ನು ಮತಾಂತರಿಸಲು ಸಾಧ್ಯವಿಲ್ಲ!”
“ನನಗೆ ಮನಸ್ಸಿದ್ದರೂ ನಾನು ನಿಮ್ಮನ್ನು ಮತಾಂತರಿಸಲು ಸಾಧ್ಯವಿಲ್ಲ ಶ್ರೀಮತಿ ಜಿ—. ಅದನ್ನು ಯೆಹೋವನೊಬ್ಬನೇ ಮಾಡಬಲ್ಲನು” ಎಂದು ಕ್ಯಾರಲೀನ್ ಉತ್ತರಿಸಿದಳು.
ಬ್ರೋಷರನ್ನು ಕೊಡಲಿಕ್ಕಾಗಿ ಕ್ಯಾರಲೀನ್ ಅವರಿಗೆ ನೀಡಿದ ಭೇಟಿ ಯಶಸ್ವಿಕರವಾಗಿತ್ತು ಮತ್ತು ಶ್ರೀಮತಿ ಜಿ— (ಬೆಟ್ಟಿ) ಅವರು ಪುನಃ ಅವಳನ್ನು ಭೇಟಿಮಾಡುವಂತೆ ಒಪ್ಪಿಕೊಂಡರು. ಕ್ಯಾರಲೀನ್ ಅಲ್ಲಿಗೆ ಹಿಂದಿರುಗಿ ಹೋದಾಗ, ಸಾಮುದಾಯಿಕ ಭೋಜನಶಾಲೆಯಲ್ಲಿದ್ದ ಮಹಿಳೆಯರಿಗೆ ತಾನು ಯೆಹೋವನ ಸಾಕ್ಷಿಗಳೊಂದಿಗೆ ಚರ್ಚೆಗಳನ್ನು ಮಾಡುತ್ತಿದ್ದೇನೆಂಬುದನ್ನು ತಿಳಿಸಿದೆ ಎಂದು ಬೆಟ್ಟಿ ಹೇಳಿದರು. ಅವರು “ನೀನು ಹೇಗೆ ತಾನೇ ಅದನ್ನು ಮಾಡಿದೆ?” ಎಂದು ಕೇಳಿದರು. “ಆ ಜನರು ಯೇಸುವಿನಲ್ಲಿ ನಂಬಿಕೆಯಿಡುವುದೇ ಇಲ್ಲ!”
ಅದಕ್ಕೆ ಕ್ಯಾರಲೀನ್ ತತ್‌ಕ್ಷಣವೇ, ದೇವರ ರಾಜ್ಯದ ಕುರಿತಾದ ತಮ್ಮ ಹಿಂದಿನ ಚರ್ಚೆಯ ಒಂದು ಮುಖ್ಯ ವಿಷಯದ ಕುರಿತಾಗಿ ಬೆಟ್ಟಿಗೆ ಜ್ಞಾಪಕಹುಟ್ಟಿಸಿದಳು.
“ಅದರ ರಾಜನು ಯಾರಾಗಿರುವನು?” ಎಂದು ಕ್ಯಾರಲೀನ್ ಕೇಳಿದಳು.
“ಹೌದಲ್ಲ, ಅದು ಯೇಸುವೇ” ಎಂದು ಬೆಟ್ಟಿ ಉತ್ತರಿಸಿದರು.
“ಖಂಡಿತವಾಗಿಯೂ” ಎಂದು ಕ್ಯಾರಲೀನ್ ಹೇಳಿದಳು. ಯೇಸು ದೇವರ ಮಗನಾಗಿದ್ದಾನೆ, ಆದರೆ ಅವನು ತ್ರಯೈಕ್ಯದ ಭಾಗವಾಗಿ ದೇವರಿಗೆ ಸಮಾನನಾಗಿಲ್ಲ ಎಂಬುದನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರೆಂದು ಅವಳು ವಿವರಿಸಿದಳು.—ಮಾರ್ಕ 13:32; ಲೂಕ 22:42; ಯೋಹಾನ 14:28.
ಬೆಟ್ಟಿ ತುಂಬ ಸಕಾರಾತ್ಮಕ ಮನೋಭಾವದವರೂ, ಪ್ರಸನ್ನವದನರೂ ಆಗಿದ್ದರೂ, ಅವರು ಕಾಯಿಲೆಯಿಂದ ನರಳುತ್ತಿದ್ದರೆಂಬುದು ಮುಂದಿನ ಕೆಲವೊಂದು ಭೇಟಿಗಳ ಬಳಿಕ ತಿಳಿದುಬಂತು. ವಾಸ್ತವದಲ್ಲಿ ಅವರಿಗೆ ಕ್ಯಾನ್ಸರ್ ಇತ್ತು ಮತ್ತು ತಾನು ಸಾಯುವೆನೆಂಬ ಭಯವಿತ್ತು. “ನಾನು ಈ ಎಲ್ಲ ವಿಷಯಗಳನ್ನು ಅನೇಕ ವರ್ಷಗಳ ಹಿಂದೆಯೇ ಕೇಳಿಸಿಕೊಂಡಿದ್ದು, ನನಗೆ ನಿಮ್ಮಂಥ ನಂಬಿಕೆ ಇರುತ್ತಿದ್ದರೆ ಎಷ್ಟು ಒಳ್ಳೇದಿತ್ತು” ಎಂದು ಅವರು ಅರಿಕೆಮಾಡಿದರು. ಮರಣವು ಒಂದು ಗಾಢವಾದ ನಿದ್ರೆಯಾಗಿದೆ ಮತ್ತು ಪುನರುತ್ಥಾನದಲ್ಲಿ ಒಬ್ಬ ವ್ಯಕ್ತಿಯು ಅಲ್ಲಿಂದ ಹೊರಗೆ ಬರಬಹುದೆಂಬುದನ್ನು ವರ್ಣಿಸುವ ವಚನಗಳನ್ನು ತೋರಿಸಿ ಕ್ಯಾರಲೀನ್ ಅವರನ್ನು ಸಂತೈಸಿದಳು. (ಯೋಹಾನ 11:11, 25) ಇದು ಬೆಟ್ಟಿಗೆ ತುಂಬ ಪ್ರೋತ್ಸಾಹದಾಯಕವಾಗಿತ್ತು. ಅವರೀಗ ಕ್ರಮವಾಗಿ ಬೈಬಲ್ ಅಧ್ಯಯನ ಮಾಡುತ್ತಾರೆ. ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಅವರು ಹಾಜರಾಗದಂತೆ ತಡೆಯುವ ಒಂದೇ ಕಾರಣ, ಅವರ ಹದಗೆಡುತ್ತಿರುವ ಆರೋಗ್ಯವೇ ಆಗಿದೆ.
ಕ್ಯಾರಲೀನ್ ಹೇಳುವುದು: “ದೇವದೂತರು ಈ ಕೆಲಸವನ್ನು ನಿರ್ದೇಶಿಸುತ್ತಿದ್ದಾರೆಂಬುದು ನನಗೆ ತೀರ ಸ್ಪಷ್ಟವಾಗಿದೆ. ಬೆಟ್ಟಿ ‘ತಪ್ಪಾದ ನಂಬರ್’ ಆಗಿದ್ದರು, ಅಷ್ಟುಮಾತ್ರವಲ್ಲ ಅವರು 89 ವರ್ಷ ಪ್ರಾಯದವರು ಸಹ!”—ಪ್ರಕಟನೆ 14:6.