ಸುವರ್ಣ ನಿಯಮ ಒಂದು ಸಾರ್ವತ್ರಿಕ ಬೋಧನೆ
ಸುವರ್ಣ ನಿಯಮ ಒಂದು ಸಾರ್ವತ್ರಿಕ ಬೋಧನೆ
“ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”—ಮತ್ತಾಯ 7:12.
ಆಮಾತುಗಳನ್ನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತನು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ನುಡಿದಿದ್ದನು. ಅಂದಿನಿಂದ ಗತಿಸಿರುವ ಶತಮಾನಗಳಲ್ಲಿ, ಆ ಸರಳವಾದ ವಾಕ್ಯದ ಕುರಿತಾಗಿ ಬಹಳಷ್ಟನ್ನು ಹೇಳಲಾಗಿದೆ ಮತ್ತು ಬರೆಯಲಾಗಿದೆ. ಉದಾಹರಣೆಗೆ, ಅದನ್ನು “ಶಾಸ್ತ್ರವಚನಗಳ ತಿರುಳು,” “ತನ್ನ ನೆರೆಹೊರೆಯವನ ಕಡೆಗೆ ಒಬ್ಬ ಕ್ರೈಸ್ತನ ಕರ್ತವ್ಯದ ಸಾರಾಂಶ,” ಮತ್ತು “ಮೂಲಭೂತ ನೀತಿಸೂತ್ರ” ಎಂದು ಹೊಗಳಲಾಗಿದೆ. ಅದು ಎಷ್ಟು ಸುಪ್ರಸಿದ್ಧವಾಗಿದೆಯೆಂದರೆ, ಅದನ್ನು ಹೆಚ್ಚಾಗಿ ಸುವರ್ಣ ನಿಯಮ ಎಂದೇ ಕರೆಯಲಾಗುತ್ತದೆ.
ಆದರೆ ಈ ಸುವರ್ಣ ನಿಯಮದಲ್ಲಿರುವ ವಿಚಾರವನ್ನು ಅಂಗೀಕರಿಸುವವರು, ಕೇವಲ ನಾಮಮಾತ್ರದ ಕ್ರೈಸ್ತ ಜಗತ್ತಿನವರಲ್ಲ. ಯೆಹೂದಮತ, ಬೌದ್ಧಮತ ಮತ್ತು ಗ್ರೀಕ್ ತತ್ತ್ವಜ್ಞಾನವು ಈ ನೀತಿಸೂತ್ರವನ್ನು ಬೇರೆ ಬೇರೆ ರೂಪಗಳಲ್ಲಿ ನಿರೂಪಿಸಿದೆ. ವಿಶೇಷವಾಗಿ ಪೂರ್ವ ದೇಶಗಳ ಜನರ ನಡುವೆ, ಅಲ್ಲಿ ಅತಿ ಮಹಾನ್ ಸಂನ್ಯಾಸಿ ಮತ್ತು ಶಿಕ್ಷಕನೆಂದು ಗೌರವಿಸಲಾಗುವ ಕನ್‌ಫ್ಯೂಷಿಯಸ್‌ನ ಒಂದು ಹೇಳಿಕೆಯು ಪ್ರಖ್ಯಾತವಾಗಿದೆ. ಕನ್‌ಫ್ಯೂಷಿಯನ್ ಧರ್ಮದ ನಾಲ್ಕು ಪುಸ್ತಕಗಳಲ್ಲಿ ಮೂರನೆಯ ಪುಸ್ತಕವಾದ ದಿ ಆ್ಯನಲೆಕ್ಟ್ಸ್‌ನಲ್ಲಿ, ಈ ವಿಚಾರವು ಮೂರು ಬಾರಿ ವ್ಯಕ್ತಪಡಿಸಲ್ಪಟ್ಟಿದೆ. ತನ್ನ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಉತ್ತರಿಸುವಾಗ ಕನ್‌ಫ್ಯೂಷಿಯಸ್ ಎರಡು ಬಾರಿ ಹೀಗಂದನು: “ಬೇರೆಯವರು ನಿಮಗೇನನ್ನು ಮಾಡಬಾರದೆಂದು ಅಪೇಕ್ಷಿಸುತ್ತೀರೊ, ಅದನ್ನೇ ನೀವು ಬೇರೆಯವರಿಗೆ ಮಾಡಬೇಡಿರಿ.” ಇನ್ನೊಂದು ಸಂದರ್ಭದಲ್ಲಿ, ಅವನ ಶಿಷ್ಯ ಸಿಗಾಂಗನು, “ಇತರರು ನನಗೇನನ್ನು ಮಾಡಬಾರದೆಂದು ನಾನು ಬಯಸುತ್ತೇನೊ, ಅದನ್ನು ನಾನು ಸಹ ಅವರಿಗೆ ಮಾಡುವುದಿಲ್ಲ” ಎಂದು ಕೊಚ್ಚಿಕೊಂಡಾಗ, ಅವನ ಶಿಕ್ಷಕನು ಈ ವಿಚಾರಪ್ರೇರಕ ಉತ್ತರವನ್ನು ಕೊಟ್ಟನು: “ಅದು ಸರಿಯೇ, ಆದರೆ ಇದನ್ನು ನೀನು ಇನ್ನೂ ಮಾಡಲು ಶಕ್ತನಾಗಿಲ್ಲವಲ್ಲ.”
ಈ ಮಾತುಗಳನ್ನು ಓದುವಾಗ, ಕನ್‌ಫ್ಯೂಷಿಯಸ್‌ನ ಈ ಹೇಳಿಕೆಯು ಸಮಯಾನಂತರ ಯೇಸು ಹೇಳಿದಂಥ ವಾಕ್ಯದ ನಕಾರಾತ್ಮಕ ರೂಪಾಂತರವಾಗಿದೆಯೆಂಬುದು ತಿಳಿದುಬರುತ್ತದೆ. ಸ್ಪಷ್ಟವಾಗಿ ತೋರಿಬರುವ ವ್ಯತ್ಯಾಸವೇನೆಂದರೆ, ಯೇಸು ಹೇಳಿದಂಥ ಸುವರ್ಣ ನಿಯಮವು, ಇತರರಿಗೆ ಒಳ್ಳೇದನ್ನು ಮಾಡುವ ಸಕಾರಾತ್ಮಕ ಕ್ರಿಯೆಗಳನ್ನು ಅವಶ್ಯಪಡಿಸುತ್ತದೆ. ಒಂದುವೇಳೆ ಜನರು ಯೇಸುವಿನ ಸಕಾರಾತ್ಮಕ ಹೇಳಿಕೆಗನುಸಾರ ನಡೆದುಕೊಂಡು, ಇತರರ ಕುರಿತಾಗಿ ಕಾಳಜಿವಹಿಸುತ್ತಾ ಮತ್ತು ಸಹಾಯಮಾಡಲು ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾ, ದಿನಾಲೂ ಈ ನೀತಿಸೂತ್ರಕ್ಕನುಸಾರ ಜೀವಿಸುತ್ತಿದ್ದರು ಎಂದಿಟ್ಟುಕೊಳ್ಳಿ. ಆಗ ಈ ಜಗತ್ತು ಬದುಕಲಿಕ್ಕಾಗಿ ಒಂದು ಉತ್ತಮ ಸ್ಥಳವಾಗಿರುತ್ತಿತ್ತೆಂದು ನೀವು ನೆನಸುತ್ತೀರೊ? ನಿಸ್ಸಂದೇಹವಾಗಿಯೂ ಹೌದು.
ಆ ನಿಯಮವು ಸಕಾರಾತ್ಮಕ ರೀತಿಯಲ್ಲಿ, ನಕಾರಾತ್ಮಕ ರೀತಿಯಲ್ಲಿ, ಅಥವಾ ಬೇರೆ ಯಾವುದೇ ರೂಪದಲ್ಲಿ ತಿಳಿಸಲ್ಪಟ್ಟಿರಲಿ, ವಿಭಿನ್ನ ಹಿನ್ನೆಲೆಗಳಿಂದ ಮತ್ತು ಬೇರೆ ಬೇರೆ ಸಮಯಗಳು ಹಾಗೂ ಸ್ಥಳಗಳಿಂದ ಬಂದಿರುವ ಜನರು, ಈ ಸುವರ್ಣ ನಿಯಮದ ಮೇಲೆ ತುಂಬ ನಂಬಿಕೆಯನ್ನಿಟ್ಟಿದ್ದಾರೆ ಎಂಬುದು ಮಾತ್ರ ತುಂಬ ಮಹತ್ವಪೂರ್ಣ ಸಂಗತಿಯಾಗಿದೆ. ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಹೇಳಿದಂಥ ಸಂಗತಿಯು, ಎಲ್ಲೆಡೆಯೂ ಎಲ್ಲ ಯುಗಗಳಲ್ಲೂ ಜನರ ಜೀವಿತಗಳನ್ನು ಪ್ರಭಾವಿಸುವ ಒಂದು ಸಾರ್ವತ್ರಿಕ ಬೋಧನೆಯಾಗಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಇತರರು ನನ್ನನ್ನು ಗೌರವಪೂರ್ವಕವಾಗಿ, ಪಕ್ಷಪಾತವಿಲ್ಲದೆ, ಪ್ರಾಮಾಣಿಕವಾಗಿ ಉಪಚರಿಸುವಂತೆ ನಾನು ಬಯಸುತ್ತೇನೊ? ಜಾತೀಯ ಪೂರ್ವಾಗ್ರಹ, ಪಾತಕ ಮತ್ತು ಯುದ್ಧವಿಲ್ಲದಂಥ ಒಂದು ಜಗತ್ತಿನಲ್ಲಿ ಜೀವಿಸಲು ನಾನು ಇಷ್ಟಪಡುತ್ತೇನೊ? ಪ್ರತಿಯೊಬ್ಬರೂ ಇತರರ ಭಾವನೆಗಳು ಮತ್ತು ಹಿತಚಿಂತನೆಯ ಬಗ್ಗೆ ಕಾಳಜಿಯನ್ನು ತೋರಿಸುತ್ತಿರುವ ಒಂದು ಕುಟುಂಬದಲ್ಲಿ ನಾನಿರಲು ಇಷ್ಟಪಡುತ್ತೇನೊ?’ ಇವೆಲ್ಲವೂ ವಾಸ್ತವರೂಪ ತಾಳುವುದಾದರೆ ಯಾರು ಇವುಗಳನ್ನು ಬೇಡವೆನ್ನುವರು? ಆದರೆ ಕಠೋರ ಸತ್ಯವೇನೆಂದರೆ, ಕೆಲವೇ ಮಂದಿ ಈ ಸ್ಥಿತಿಯಲ್ಲಿ ಆನಂದಿಸುತ್ತಿದ್ದಾರೆ. ಹೆಚ್ಚಿನವರಿಗೆ, ಇವುಗಳ ಆಸೆಯನ್ನಿಡಲೂ ಸಾಧ್ಯವಿರುವುದಿಲ್ಲ.
ಕಳೆಗುಂದಿರುವ ಸುವರ್ಣ ನಿಯಮ
ಇತಿಹಾಸದಾದ್ಯಂತ ಜನರ ಹಕ್ಕುಗಳು ಸಂಪೂರ್ಣವಾಗಿ ಬದಿಗೆ ತಳ್ಳಲ್ಪಟ್ಟಿರುವ, ಮಾನವಜಾತಿಯ ವಿರುದ್ಧ ಪಾತಕಗಳನ್ನು ಗೈಯಲಾಗಿರುವ ಎಷ್ಟೋ ವಿದ್ಯಮಾನಗಳಿವೆ. ಇವುಗಳಲ್ಲಿ, ಆಫ್ರಿಕದಲ್ಲಿ ನಡೆದ ಗುಲಾಮರ ವ್ಯಾಪಾರ, ನಾಸಿ ಮೃತ್ಯು ಶಿಬಿರಗಳು, ಬಲವಂತದ ಬಾಲ ಕಾರ್ಮಿಕ ಪದ್ಧತಿ, ಮತ್ತು ಒಂದರ ನಂತರ ಇನ್ನೊಂದು ದೇಶದಲ್ಲಿ ನಡೆದಿರುವ ಭೀಕರ ಹತ್ಯಾಕಾಂಡಗಳು ಸೇರಿವೆ. ತಲ್ಲಣಗೊಳಿಸುವ ಈ ಪಟ್ಟಿಯು ಇನ್ನೂ ಉದ್ದವಾಗುತ್ತಾ ಹೋಗಬಹುದು.
ಇಂದು ನಮ್ಮ ಉಚ್ಛ ತಂತ್ರಜ್ಞಾನದ ಜಗತ್ತು ಸ್ವಾರ್ಥಪರವಾಗಿದೆ. ತಮ್ಮ ಅನುಕೂಲಕ್ಕೆ ಅಥವಾ ನಾಮಮಾತ್ರದ ಹಕ್ಕುಗಳಿಗೆ ಏನಾದರೂ ತೊಂದರೆಯಾಗುವ ಸಮಯದಲ್ಲಿ ಬೇರೆಯವರ ಕುರಿತಾಗಿ ಯೋಚಿಸುವವರು ತೀರ ಕಡಿಮೆ ಮಂದಿ. (2 ತಿಮೊಥೆಯ 3:1-5) ಇಷ್ಟೊಂದು ಜನರು ಸ್ವಾರ್ಥಪರರೂ, ಕ್ರೂರಿಗಳೂ, ಕಲ್ಲೆದೆಯವರೂ, ತಮ್ಮ ಬಗ್ಗೆಯೇ ಯೋಚಿಸುವವರೂ ಆಗಿರುವುದು ಏಕೆ? ಈಗಲೂ ಸುವರ್ಣ ನಿಯಮವು ವ್ಯಾಪಕವಾಗಿ ಪ್ರಸಿದ್ಧವಾಗಿದ್ದರೂ, ಇಂದಿನ ಸಮಯದಲ್ಲಿ ಅನ್ವಯಿಸಲಾಗದಂಥ ಒಂದು ನೈತಿಕ ಪ್ರಾಚೀನಾವಶೇಷವೆಂದು ಬದಿಗೆ ತಳ್ಳಲ್ಪಟ್ಟಿರುವುದರಿಂದಲೇ ಅಲ್ಲವೊ? ದೇವರನ್ನು ನಂಬುತ್ತೇವೆಂದು ಹೇಳಿಕೊಳ್ಳುವವರ ನಡುವೆಯೂ ಇದು ಸತ್ಯವಾಗಿದೆಯೆಂಬುದು ದುಃಖದ ಸಂಗತಿಯಾಗಿದೆ. ಮತ್ತು ಸದ್ಯದ ಪ್ರವೃತ್ತಿಗನುಸಾರ ಭವಿಷ್ಯದೆಡೆಗೆ ನೋಡುವಲ್ಲಿ, ಜನರು ಇನ್ನೂ ಹೆಚ್ಚು ಸ್ವಾರ್ಥಪರರಾಗುವರೆಂಬಂತೆ ತೋರುತ್ತದೆ.
ಆದುದರಿಂದ ನಾವು ಪರಿಗಣಿಸಬೇಕಾಗಿರುವ ಅತಿ ಪ್ರಾಮುಖ್ಯ ಪ್ರಶ್ನೆಗಳು ಯಾವುವೆಂದರೆ, ಸುವರ್ಣ ನಿಯಮಕ್ಕನುಸಾರ ಜೀವಿಸುವುದರಲ್ಲಿ ಏನೆಲ್ಲಾ ಅಡಕವಾಗಿದೆ? ಈಗಿನ ಕಾಲದಲ್ಲೂ ಅದನ್ನು ಪಾಲಿಸುವವರಿದ್ದಾರೊ? ಮತ್ತು ಇಡೀ ಮಾನವಕುಲವು ಸುವರ್ಣ ನಿಯಮಕ್ಕನುಸಾರ ಜೀವಿಸುವ ಒಂದು ಸಮಯ ಎಂದಾದರೂ ಬರುವುದೊ? ಈ ಪ್ರಶ್ನೆಗಳಿಗೆ ಸತ್ಯಭರಿತ ಉತ್ತರಗಳನ್ನು ಪಡೆಯಲಿಕ್ಕಾಗಿ ದಯವಿಟ್ಟು ಮುಂದಿನ ಲೇಖನವನ್ನು ಓದಿರಿ.
[ಪುಟ 3ರಲ್ಲಿರುವ ಚಿತ್ರ]
ಕನ್‌ಫ್ಯೂಷಿಯಸ್ ಮತ್ತು ಇತರರು, ಸುವರ್ಣ ನಿಯಮವನ್ನು ಬೇರೆ ಬೇರೆ ರೂಪಗಳಲ್ಲಿ ಕಲಿಸಿದರು