ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒತ್ತಡದಿಂದ ಉಪಶಮನ—ಒಂದು ಪ್ರಾಯೋಗಿಕ ಪರಿಹಾರ

ಒತ್ತಡದಿಂದ ಉಪಶಮನ—ಒಂದು ಪ್ರಾಯೋಗಿಕ ಪರಿಹಾರ

ಒತ್ತಡದಿಂದ ಉಪಶಮನ​—ಒಂದು ಪ್ರಾಯೋಗಿಕ ಪರಿಹಾರ

“ಕಷ್ಟಪಡುತ್ತಿರುವವರೇ ಮತ್ತು ಹೊರೆಹೊತ್ತವರೇ, ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ಚೈತನ್ಯ ನೀಡುವೆನು.”​—ಮತ್ತಾಯ 11:28, NW.

1, 2. (ಎ) ವಿಪರೀತ ಒತ್ತಡವನ್ನು ಕಡಿಮೆಮಾಡಲು ಸಹಾಯಮಾಡುವಂಥ ಯಾವ ವಿಷಯಗಳು ಬೈಬಲಿನಲ್ಲಿವೆ? (ಬಿ) ಯೇಸುವಿನ ಬೋಧನೆಗಳು ಎಷ್ಟು ಪರಿಣಾಮಕರವಾಗಿದ್ದವು?

ತೀರ ಹೆಚ್ಚು ಒತ್ತಡವು ಹಾನಿಕರವಾಗಿದೆ ಎಂಬುದನ್ನು ಬಹುಶಃ ನೀವು ಸಹ ಒಪ್ಪಿಕೊಳ್ಳುವಿರಿ; ಅತಿಯಾದ ಒತ್ತಡವು ಸಂಕಟಕ್ಕೆ ಸಮಾನವಾಗಿದೆ. ಎಲ್ಲ ಮಾನವ ಸೃಷ್ಟಿಯು ಭಾರವಾದ ಹೊರೆಗಳಿಂದ ಎಷ್ಟರ ಮಟ್ಟಿಗೆ ಕುಗ್ಗಿಹೋಗಿದೆಯೆಂದರೆ, ಅನೇಕಾನೇಕ ಜನರು ಇಂದಿನ ಒತ್ತಡಭರಿತ ಜೀವನದಿಂದ ಉಪಶಮನವನ್ನು ಪಡೆಯಲು ಕಾತುರರಾಗಿದ್ದಾರೆಂದು ಬೈಬಲ್‌ ತಿಳಿಸುತ್ತದೆ. (ರೋಮಾಪುರ 8:​20-22) ಆದರೆ, ಈಗಲೂ ನಾವು ಯಾವುದೇ ರೀತಿಯ ಬೇಗುದಿಯಿಂದ ಗಮನಾರ್ಹ ರೀತಿಯ ಉಪಶಮನವನ್ನು ಪಡೆದುಕೊಳ್ಳಸಾಧ್ಯವಿರುವ ವಿಧವನ್ನು ಸಹ ಶಾಸ್ತ್ರವಚನಗಳು ತೋರಿಸುತ್ತವೆ. ಸುಮಾರು 20 ಶತಮಾನಗಳಿಗೆ ಹಿಂದೆ ಜೀವಿಸಿದ್ದ ಒಬ್ಬ ಯೌವನಸ್ಥನ ಬುದ್ಧಿವಾದ ಹಾಗೂ ಮಾದರಿಯನ್ನು ಅನುಸರಿಸುವ ಮೂಲಕ ಅಂತಹ ಉಪಶಮನವು ಸಿಗುತ್ತದೆ. ಅವನು ಒಬ್ಬ ಬಡಗಿಯಾಗಿದ್ದನು, ಆದರೂ ತನ್ನ ಕೆಲಸಕ್ಕಿಂತಲೂ ಹೆಚ್ಚಾಗಿ ಅವನು ಜನರನ್ನು ಪ್ರೀತಿಸಿದನು. ಅವನು ಜನರ ಹೃದಯಗಳ ಮೇಲೆ ಪ್ರಭಾವ ಬೀರಿದನು, ಅವರ ಆವಶ್ಯಕತೆಗಳನ್ನು ಪೂರೈಸಿದನು, ನಿರ್ಬಲರಿಗೆ ಸಹಾಯಮಾಡಿದನು ಮತ್ತು ಖಿನ್ನರಿಗೆ ಸಾಂತ್ವನವನ್ನು ನೀಡಿದನು. ಇದಕ್ಕಿಂತಲೂ ಹೆಚ್ಚಾಗಿ ಅವನು ಅನೇಕರಲ್ಲಿ ಆತ್ಮಿಕ ಅರಿವನ್ನು ಮೂಡಿಸಿದನು. ಹೀಗೆ ಅವರು ವಿಪರೀತ ಒತ್ತಡದಿಂದ ಉಪಶಮನವನ್ನು ಕಂಡುಕೊಂಡರು, ಮತ್ತು ನೀವು ಸಹ ಕಂಡುಕೊಳ್ಳಸಾಧ್ಯವಿದೆ.​—ಲೂಕ 4:​16-21; 19:​47, 48; ಯೋಹಾನ 7:46.

2 ನಜರೇತಿನ ಯೇಸುವಾಗಿದ್ದ ಈ ಮನುಷ್ಯನು, ಪುರಾತನ ರೋಮ್‌ನಲ್ಲಿ, ಅಥೇನೆ ಪಟ್ಟಣದಲ್ಲಿ ಅಥವಾ ಅಲೆಕ್ಸಾಂಡ್ರಿಯದಲ್ಲಿ ವ್ಯಾಸಂಗಮಾಡುವ ಮೂಲಕ ಕೆಲವರು ಪಡೆದುಕೊಂಡಿದ್ದಂಥ ಲೌಕಿಕ ರೀತಿಯ ಉನ್ನತ ಶಿಕ್ಷಣದಿಂದ ಮಾರ್ಗದರ್ಶಿಸಲ್ಪಟ್ಟವನಾಗಿರಲಿಲ್ಲ. ಆದರೂ, ಅವನ ಬೋಧನೆಗಳು ಜಗತ್ಪ್ರಸಿದ್ಧವಾಗಿವೆ. ಅವನ ಬೋಧನೆಗಳಿಗೆ ಈ ಮುಖ್ಯ ವಿಷಯವಿತ್ತು: ದೇವರು ಭೂಮಿಯ ಮೇಲೆ ಯಶಸ್ವಿಕರವಾಗಿ ಆಳ್ವಿಕೆ ನಡೆಸಲಿರುವಂತಹ ಒಂದು ಸರಕಾರ. ಅಷ್ಟುಮಾತ್ರವಲ್ಲ, ಜೀವನ ರೀತಿಗೆ ಸಂಬಂಧಪಟ್ಟ ಮೂಲಭೂತ ತತ್ತ್ವಗಳನ್ನು, ಇಂದು ನಿಜವಾಗಿಯೂ ಅಮೂಲ್ಯವಾಗಿರುವಂತಹ ತತ್ತ್ವಗಳನ್ನು ಯೇಸು ವಿವರಿಸಿದನು. ಯೇಸು ಕಲಿಸಿದಂತಹ ವಿಷಯಗಳನ್ನು ತಿಳಿದುಕೊಂಡು, ಅವುಗಳನ್ನು ಅನ್ವಯಿಸುವಂತಹ ಜನರು, ವಿಪರೀತ ಒತ್ತಡದಿಂದ ಉಪಶಮನವನ್ನೂ ಒಳಗೊಂಡು ಅನೇಕ ನೇರವಾದ ಪ್ರಯೋಜನಗಳಲ್ಲಿ ಆನಂದಿಸುತ್ತಾರೆ. ನೀವು ಸಹ ಇದರಲ್ಲಿ ಆನಂದಿಸುವುದಿಲ್ಲವೋ?

3. ಯೇಸು ಯಾವ ಭಾರಿ ಆಮಂತ್ರಣವನ್ನು ನೀಡಿದನು?

3 ನಿಮಗೆ ಸಂಶಯಗಳಿರಬಹುದು. ‘ಅಷ್ಟು ದೀರ್ಘ ಕಾಲದ ಹಿಂದೆ ಜೀವಿಸಿದ್ದ ಒಬ್ಬ ವ್ಯಕ್ತಿಯು ಇಂದು ನನ್ನ ಜೀವಿತದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಹೇಗೆ ಬೀರಸಾಧ್ಯವಿದೆ?’ ಹಾಗಾದರೆ, ಯೇಸುವಿನ ಆಹ್ಲಾದಕರ ಮಾತುಗಳಿಗೆ ಕಿವಿಗೊಡಿರಿ: “ಕಷ್ಟಪಡುತ್ತಿರುವವರೇ ಮತ್ತು ಹೊರೆಹೊತ್ತವರೇ, ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ಚೈತನ್ಯ ನೀಡುವೆನು. ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ ಮತ್ತು ನನ್ನಿಂದ ಕಲಿತುಕೊಳ್ಳಿರಿ, ಏಕೆಂದರೆ ನಾನು ಮೃದುಸ್ವಭಾವದವನೂ ದೀನ ಮನಸ್ಸುಳ್ಳವನೂ ಆಗಿದ್ದೇನೆ, ಮತ್ತು ನೀವು ನಿಮ್ಮ ಆತ್ಮಗಳಿಗೆ ಚೈತನ್ಯವನ್ನು ಕಂಡುಕೊಳ್ಳುವಿರಿ. ಯಾಕೆಂದರೆ ನನ್ನ ನೊಗವು ಮೃದುವಾದದ್ದು ಮತ್ತು ನನ್ನ ಹೊರೆಯು ಹಗುರವಾದದ್ದು.” (ಮತ್ತಾಯ 11:​28-30, NW) ಅವನ ಮಾತುಗಳ ಅರ್ಥವೇನಾಗಿತ್ತು? ಈ ಮಾತುಗಳನ್ನು ನಾವು ಸ್ವಲ್ಪ ವಿವರವಾಗಿ ಪರೀಕ್ಷಿಸೋಣ ಮತ್ತು ಸಹಿಸಿಕೊಳ್ಳಲು ಕಷ್ಟಕರವಾಗಿರುವ ಒತ್ತಡದಿಂದ ಉಪಶಮನವನ್ನು ಕಂಡುಕೊಳ್ಳಲು ಅವು ನಿಮಗೆ ಹೇಗೆ ಸಹಾಯಮಾಡುತ್ತವೆ ಎಂಬುದನ್ನು ನೋಡೋಣ.

4. ಯೇಸು ಯಾರೊಂದಿಗೆ ಮಾತಾಡಿದನು, ಮತ್ತು ಅವನಿಗೆ ಕಿವಿಗೊಡುತ್ತಿದ್ದವರಿಗೆ ಅವರಿಂದ ಅಪೇಕ್ಷಿಸಲಾಗುತ್ತಿದ್ದ ಸಂಗತಿಗಳನ್ನು ಮಾಡುವುದು ಏಕೆ ಕಷ್ಟಕರವಾಗಿದ್ದಿರಬಹುದು?

4 ಯಾರು ನ್ಯಾಯಸಮ್ಮತವಾದದ್ದನ್ನು ಮಾಡಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಿದ್ದು, ಯೆಹೂದಿ ಮುಖಂಡರು ಧರ್ಮವನ್ನು ಭಾರದಾಯಕವಾಗಿ ಮಾಡಿದ್ದರಿಂದ ‘ಹೊರೆಹೊತ್ತಿದ್ದವರಂತಿದ್ದರೋ’ ಅಂತಹ ಅನೇಕರೊಂದಿಗೆ ಯೇಸು ಮಾತಾಡಿದನು. (ಮತ್ತಾಯ 23:4) ಯೆಹೂದಿ ಮುಖಂಡರು ಕಾರ್ಯತಃ ಜೀವಿತದ ಎಲ್ಲ ಅಂಶಗಳ ವಿಷಯದಲ್ಲಿ ನಿರಂತರ ನಿಯಮಗಳನ್ನು ಸ್ಥಾಪಿಸುವುದರ ಮೇಲೆಯೇ ಗಮನವನ್ನು ಕೇಂದ್ರೀಕರಿಸಿದರು. ಯಾವಾಗಲೂ ‘ಇದನ್ನು ಮಾಡಬಾರದು, ಅದನ್ನು ಮಾಡಬಾರದು’ ಎಂಬುದನ್ನೇ ಕೇಳಿಸಿಕೊಳ್ಳುತ್ತಿರುವುದನ್ನು ನೀವು ಒಂದು ಒತ್ತಡಭರಿತ ಸನ್ನಿವೇಶವಾಗಿ ಪರಿಗಣಿಸುವುದಿಲ್ಲವೋ? ಇದಕ್ಕೆ ತದ್ವಿರುದ್ಧವಾಗಿ, ಯೇಸುವಿನ ಆಮಂತ್ರಣಕ್ಕೆ ಯಾರು ಕಿವಿಗೊಟ್ಟರೋ ಅವರನ್ನು ಅದು ಸತ್ಯಕ್ಕೆ, ನೀತಿಗೆ, ಉತ್ತಮವಾದ ಜೀವಿತಕ್ಕೆ ನಡಿಸಿತು. ಹೌದು, ಸತ್ಯ ದೇವರನ್ನು ತಿಳಿದುಕೊಳ್ಳುವ ಮಾರ್ಗವು, ಯೇಸು ಕ್ರಿಸ್ತನಿಗೆ ಗಮನಕೊಡುವುದನ್ನೂ ಒಳಗೊಂಡಿತ್ತು. ಏಕೆಂದರೆ ಯೆಹೋವನು ಎಂತಹ ದೇವರಾಗಿದ್ದಾನೆ ಎಂಬುದನ್ನು ಮಾನವರು ಅವನಲ್ಲೇ ನೋಡಶಕ್ತರಿದ್ದರು ಮತ್ತು ನೋಡಸಾಧ್ಯವಿತ್ತು. ಯೇಸು ಹೇಳಿದ್ದು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.”​—ಯೋಹಾನ 14:9.

ನಿಮ್ಮ ಜೀವಿತವು ತುಂಬ ಒತ್ತಡಭರಿತವಾಗಿದೆಯೋ?

5, 6. ನಮ್ಮ ದಿನದ ಸಂಬಳಕ್ಕೆ ಹೋಲಿಸುವಾಗ, ಯೇಸುವಿನ ದಿನಗಳಲ್ಲಿ ಕೆಲಸಮಾಡುವ ಸನ್ನಿವೇಶಗಳು ಹಾಗೂ ಕೂಲಿಗಳು ಹೇಗಿದ್ದವು?

5 ನಿಮ್ಮ ಉದ್ಯೋಗ ಅಥವಾ ಕುಟುಂಬದ ಸನ್ನಿವೇಶವು ತುಂಬ ಒತ್ತಡಭರಿತವಾಗಿ ಇರಬಹುದಾದ್ದರಿಂದ, ಅದು ನಿಮಗೆ ತುಂಬ ಚಿಂತೆಯ ವಿಷಯವಾಗಿರಬಹುದು. ಅಥವಾ ಇನ್ನಿತರ ಜವಾಬ್ದಾರಿಗಳು ನಿಮ್ಮನ್ನು ಪೂರ್ತಿಯಾಗಿ ದಣಿಸುತ್ತಿರುವಂತೆ ತೋರಬಹುದು. ಹಾಗಿರುವಲ್ಲಿ, ಯೇಸು ಯಾರನ್ನು ಭೇಟಿಯಾಗಿ ಸಹಾಯ ನೀಡಿದನೋ ಅಂತಹ ಪ್ರಾಮಾಣಿಕ ಜನರಂತೆ ನೀವಿದ್ದೀರಿ. ಉದಾಹರಣೆಗೆ, ಜೀವನೋಪಾಯಮಾಡುವ ಸಮಸ್ಯೆಯನ್ನು ಪರಿಗಣಿಸಿರಿ. ಇಂದು ಅನೇಕರು ಇದಕ್ಕಾಗಿ ತುಂಬ ಹೆಣಗಾಡುತ್ತಾರೆ, ಮತ್ತು ಯೇಸುವಿನ ಸಮಯದಲ್ಲಿಯೂ ಅನೇಕರು ಹೀಗೆಯೇ ಹೆಣಗಾಡುತ್ತಿದ್ದರು.

6 ಆ ಕಾಲದಲ್ಲಿ ಒಬ್ಬ ಕೂಲಿಯಾಳು ಒಂದು ದಿನಕ್ಕೆ 12 ತಾಸುಗಳಂತೆ, ಒಂದು ವಾರದಲ್ಲಿ 6 ದಿನ ದುಡಿಯುತ್ತಿದ್ದನು. ಸಾಮಾನ್ಯವಾಗಿ ಅವನಿಗೆ ಇಡೀ ದಿನದ ದುಡಿತಕ್ಕಾಗಿ ಕೊಡಲ್ಪಡುತ್ತಿದ್ದ ಕೂಲಿ ಒಂದು ಪಾವಲಿಯಾಗಿತ್ತು. (ಮತ್ತಾಯ 20:​2-10) ನಿಮ್ಮ ಸಂಬಳ ಅಥವಾ ನಿಮ್ಮ ಸ್ನೇಹಿತರ ಸಂಬಳಕ್ಕೆ ಹೋಲಿಸುವಾಗ ಅದು ಎಷ್ಟಾಗುತ್ತದೆ? ಆಧುನಿಕ ಸಮಯದ ಸಂಬಳವನ್ನೂ ಪುರಾತನ ಕಾಲದ ಕೂಲಿಯನ್ನೂ ಹೋಲಿಸುವುದು ತುಂಬ ಕಷ್ಟಕರವಾಗಿರಸಾಧ್ಯವಿದೆ. ಆದರೂ, ಹೋಲಿಸಸಾಧ್ಯವಿರುವ ಒಂದು ವಿಧವು, ಹಣವು ಏನನ್ನು ಕೊಂಡುಕೊಳ್ಳಸಾಧ್ಯವಿದೆ ಎಂಬುದನ್ನು ಪರಿಗಣಿಸುವುದೇ ಆಗಿದೆ. ಯೇಸುವಿನ ದಿನದಲ್ಲಿ, ಒಂದು ಸೇರು ಗೋಧಿಹಿಟ್ಟಿನಿಂದ ಮಾಡಲ್ಪಟ್ಟ ರೊಟ್ಟಿಯು ಸುಮಾರು ಒಂದು ತಾಸಿನ ಕೂಲಿಯಷ್ಟು ಬೆಲೆಯದ್ದಾಗಿತ್ತು ಎಂದು ಒಬ್ಬ ವಿದ್ವಾಂಸನು ಹೇಳುತ್ತಾನೆ. ಒಂದು ಕಪ್‌ ಒಳ್ಳೆಯ ದ್ರಾಕ್ಷಾರಸವು ಎರಡು ತಾಸಿನ ಕೂಲಿಯಷ್ಟು ಬೆಲೆಯುಳ್ಳದ್ದಾಗಿತ್ತು ಎಂದು ಇನ್ನೊಬ್ಬ ವಿದ್ವಾಂಸನು ಹೇಳುತ್ತಾನೆ. ಆ ಸಮಯದಲ್ಲಿ ಜನರು ಜೀವನೋಪಾಯಕ್ಕಾಗಿ ಪ್ರತಿ ದಿನ ದೀರ್ಘ ಸಮಯದ ವರೆಗೆ ಕಷ್ಟಪಟ್ಟು ದುಡಿಯುತ್ತಿದ್ದರು ಎಂಬುದನ್ನು ಇಂತಹ ವಿವರಗಳಿಂದ ನಾವು ಕಂಡುಕೊಳ್ಳಸಾಧ್ಯವಿದೆ. ನಮ್ಮಂತೆಯೇ ಅವರಿಗೂ ಉಪಶಮನ ಹಾಗೂ ಚೈತನ್ಯದ ಅಗತ್ಯವಿತ್ತು. ನೀವು ಉದ್ಯೋಗದಲ್ಲಿರುವಲ್ಲಿ, ಹೆಚ್ಚೆಚ್ಚು ಉತ್ಪನ್ನಶೀಲರಾಗಿರುವಂತೆ ನಿಮ್ಮ ಮೇಲೆ ಒತ್ತಡವು ಬರಬಹುದು. ಕೆಲವೊಮ್ಮೆ ಸರಿಯಾಗಿ ಆಲೋಚಿಸಿ ನಿರ್ಣಯಗಳನ್ನು ಮಾಡಲು ಸಹ ನಮಗೆ ಸಮಯ ಸಿಗುವುದಿಲ್ಲ. ನೀವು ಉಪಶಮನಕ್ಕಾಗಿ ಹಾತೊರೆಯುತ್ತಿದ್ದೀರಿ ಎಂಬುದನ್ನು ಸ್ವತಃ ನೀವೇ ಒಪ್ಪಿಕೊಳ್ಳಬಹುದು.

7. ಯೇಸುವಿನ ಸಂದೇಶಕ್ಕೆ ಯಾವ ಪ್ರತಿಕ್ರಿಯೆಯು ಸಿಕ್ಕಿತು?

7 ‘ಕಷ್ಟಪಡುತ್ತಿದ್ದ ಮತ್ತು ಹೊರೆಹೊತ್ತಿದ್ದ’ ಜನರೆಲ್ಲರಿಗೆ ಯೇಸು ಕೊಟ್ಟ ಆಮಂತ್ರಣವು, ಆ ಸಮಯದಲ್ಲಿದ್ದ ಅನೇಕ ಕೇಳುಗರಿಗೆ ತುಂಬ ಹಿತಕರವಾಗಿದ್ದಿರಬಹುದು ಎಂಬುದಂತೂ ಸ್ಪಷ್ಟ. (ಮತ್ತಾಯ 4:25; ಮಾರ್ಕ 3:​7, 8) ಮತ್ತು “ನಾನು ನಿಮಗೆ ಚೈತನ್ಯ ನೀಡುವೆನು” ಎಂಬ ವಾಗ್ದಾನವನ್ನೂ ಯೇಸು ಕೂಡಿಸಿದನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಇಂದು ಸಹ ಅದೇ ವಾಗ್ದಾನವು ಕಾರ್ಯರೂಪದಲ್ಲಿದೆ. ಒಂದುವೇಳೆ ನಾವು ‘ಕಷ್ಟಪಡುವವರೂ ಹೊರೆಹೊತ್ತಿರುವವರೂ’ ಆಗಿರುವಲ್ಲಿ, ಈ ವಾಗ್ದಾನವು ನಮಗೂ ಅನ್ವಯಿಸಸಾಧ್ಯವಿದೆ. ಇದಲ್ಲದೆ, ತದ್ರೀತಿಯ ಸನ್ನಿವೇಶದಲ್ಲಿರಬಹುದಾದ ನಮ್ಮ ಪ್ರಿಯ ಜನರಿಗೂ ಇದು ಅನ್ವಯವಾಗಬಲ್ಲದು.

8. ಮಕ್ಕಳನ್ನು ಬೆಳೆಸುವುದು ಮತ್ತು ವೃದ್ಧಾಪ್ಯವು ಹೇಗೆ ಒತ್ತಡಕ್ಕೆ ಹೆಚ್ಚನ್ನು ಕೂಡಿಸುತ್ತಿದೆ?

8 ಜನರ ಮೇಲೆ ಒತ್ತಡ ಹೇರುತ್ತಿರುವಂತಹ ಇತರ ವಿಷಯಗಳೂ ಇವೆ. ಮಕ್ಕಳನ್ನು ಬೆಳೆಸುವುದು ಒಂದು ದೊಡ್ಡ ಪಂಥಾಹ್ವಾನವಾಗಿದೆ. ಒಂದು ಮಗುವಾಗಿರುವುದು ಸಹ ಪಂಥಾಹ್ವಾನದಾಯಕವಾಗಿದೆ. ಎಲ್ಲ ವಯಸ್ಸಿನ ಅಧಿಕಾಧಿಕ ಸಂಖ್ಯೆಯ ಜನರು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮತ್ತು ಜನರು ದೀರ್ಘಕಾಲ ಜೀವಿಸುತ್ತಿದ್ದಾರಾದರೂ, ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನಡೆಗಳಾಗಿರುವುದಾದರೂ ವೃದ್ಧರು ವಿಶೇಷ ಸಮಸ್ಯೆಗಳೊಂದಿಗೆ ಹೆಣಗಾಡಬೇಕಾಗಿದೆ.​—ಪ್ರಸಂಗಿ 12:1.

ನೊಗದ ಕೆಳಗೆ ಕೆಲಸಮಾಡುವುದು

9, 10. ಪುರಾತನ ಸಮಯಗಳಲ್ಲಿ ನೊಗವು ಯಾವುದರ ಸಂಕೇತವಾಗಿತ್ತು, ಮತ್ತು ತನ್ನ ನೊಗವನ್ನು ತಮ್ಮ ಮೇಲೆ ತೆಗೆದುಕೊಳ್ಳುವಂತೆ ಯೇಸು ಏಕೆ ಜನರನ್ನು ಆಮಂತ್ರಿಸಿದನು?

9ಮತ್ತಾಯ 11:​28, 29ರಿಂದ ಉದ್ಧರಿಸಲ್ಪಟ್ಟ ಮಾತುಗಳಲ್ಲಿ ಯೇಸು, “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ ಮತ್ತು ನನ್ನಿಂದ ಕಲಿತುಕೊಳ್ಳಿರಿ” ಎಂದು ಹೇಳಿದನು ಎಂಬುದನ್ನು ನೀವು ಗಮನಿಸಿದಿರೋ? ಆ ಸಮಯದಲ್ಲಿ, ಒಬ್ಬ ಸಾಮಾನ್ಯ ಮನುಷ್ಯನಿಗೆ ತಾನು ಒಂದು ನೊಗದ ಕೆಳಗೆ ಕೆಲಸಮಾಡುತ್ತಿದ್ದೇನೆ ಎಂಬ ಅನಿಸಿಕೆ ಆಗುತ್ತಿದ್ದಿರಬಹುದು. ಪುರಾತನ ಸಮಯದಿಂದಲೂ, ನೊಗವು ಗುಲಾಮಗಿರಿ ಅಥವಾ ದಾಸತ್ವದ ಸಂಕೇತವಾಗಿತ್ತು. (ಆದಿಕಾಂಡ 27:40; ಯಾಜಕಕಾಂಡ 26:13; ಧರ್ಮೋಪದೇಶಕಾಂಡ 28:48) ಯೇಸು ಭೇಟಿಯಾದಂತಹ ಕೂಲಿಯಾಳುಗಳು ಅನೇಕ ದಿನಗಳಂದು ತಮ್ಮ ಭುಜಗಳ ಮೇಲೆ ನಿಜವಾದ ನೊಗವನ್ನಿಟ್ಟುಕೊಂಡು ಕೆಲಸಮಾಡುತ್ತಿದ್ದರು, ಅಂದರೆ ಭಾರವಾದ ಹೊರೆಗಳನ್ನು ಹೊರುತ್ತಿದ್ದರು. ಒಂದು ನೊಗವು ಯಾವ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿತ್ತು ಎಂಬುದರ ಮೇಲೆ ಹೊಂದಿಕೊಂಡು, ಅದು ಒಬ್ಬನ ಕತ್ತು ಹಾಗೂ ಭುಜಗಳ ಮೇಲೆ ಸಾಕಷ್ಟು ಹಿತಕರವಾಗಿ ಹೊಂದಿಕೊಳ್ಳಸಾಧ್ಯವಿತ್ತು ಇಲ್ಲವೆ ಉಜ್ಜುಗಾಯವನ್ನು ಮಾಡಸಾಧ್ಯವಿತ್ತು. ಒಬ್ಬ ಬಡಗಿಯಾಗಿದ್ದ ಯೇಸು ಸಹ ನೊಗಗಳನ್ನು ಮಾಡಿದ್ದಿರಬಹುದು, ಮತ್ತು ‘ಮೃದುವಾದ’ ಒಂದು ನೊಗವನ್ನು ತಯಾರಿಸುವ ವಿಧವೂ ಅವನಿಗೆ ಗೊತ್ತಿದ್ದಿರಬಹುದು. ನೊಗವನ್ನು ಸಾಧ್ಯವಿರುವಷ್ಟರ ಮಟ್ಟಿಗೆ ಹಿತಕರವಾಗಿ ಮಾಡಲಿಕ್ಕಾಗಿ, ಅವನು ಕತ್ತು ಹಾಗೂ ಭುಜಗಳ ಮೇಲೆ ಸಂಪರ್ಕ ಹೊಂದಸಾಧ್ಯವಿದ್ದ ಸ್ಥಳಗಳಲ್ಲಿ ಚರ್ಮದ ಅಥವಾ ಬಟ್ಟೆಯ ಒಳಪದರವನ್ನು ಕೊಟ್ಟಿದ್ದಿರಬಹುದು.

10 “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ” ಎಂದು ಯೇಸು ಹೇಳಿದಾಗ, ಒಬ್ಬ ಕೂಲಿಯಾಳಿನ ಕತ್ತು ಹಾಗೂ ಭುಜಗಳಿಗೆ ‘ಮೃದುವಾಗಿ’ ಹೊಂದಿಕೊಳ್ಳುವ, ಉತ್ತಮವಾಗಿ ತಯಾರಿಸಲ್ಪಟ್ಟಿದ್ದ ನೊಗಗಳನ್ನು ಒದಗಿಸಿದಂತಹ ಒಬ್ಬ ವ್ಯಕ್ತಿಗೆ ಅವನು ತನ್ನನ್ನು ಹೋಲಿಸಿಕೊಳ್ಳುತ್ತಿದ್ದಿರಬಹುದು. ಆದುದರಿಂದಲೇ ಯೇಸು ಕೂಡಿಸಿದ್ದು: “ನನ್ನ ಹೊರೆಯು ಹಗುರವಾದದ್ದು.” ನೊಗವನ್ನು ಉಪಯೋಗಿಸುವುದು ಅಹಿತಕರವಾಗಿರಲಿಲ್ಲ ಮತ್ತು ಆ ಕೆಲಸವು ಗುಲಾಮಗಿರಿಯೂ ಆಗಿರಲಿಲ್ಲ ಎಂಬುದನ್ನು ಇದು ಸೂಚಿಸಿತು. ತನ್ನ ನೊಗವನ್ನು ತೆಗೆದುಕೊಳ್ಳುವಂತೆ ತನ್ನ ಕೇಳುಗರನ್ನು ಆಮಂತ್ರಿಸುವ ಮೂಲಕ, ಆಗ ಅಸ್ತಿತ್ವದಲ್ಲಿದ್ದ ದಬ್ಬಾಳಿಕೆಯ ಎಲ್ಲ ಪರಿಸ್ಥಿತಿಗಳಿಂದ ಆ ಕೂಡಲೆ ಪರಿಹಾರ ಸಿಗುವುದೆಂದು ಯೇಸು ಹೇಳುತ್ತಿರಲಿಲ್ಲ ಎಂಬುದೂ ಸತ್ಯವೇ. ಆದರೂ, ಅವನು ತಿಳಿಸುತ್ತಿದ್ದ ಭಿನ್ನವಾದ ದೃಷ್ಟಿಕೋನವು ಗಮನಾರ್ಹ ರೀತಿಯ ಚೈತನ್ಯವನ್ನು ಉಂಟುಮಾಡಸಾಧ್ಯವಿತ್ತು. ಅವರ ಜೀವನ ಶೈಲಿಯಲ್ಲಿ ಮತ್ತು ವಿಷಯಗಳನ್ನು ನಿರ್ವಹಿಸುವ ರೀತಿಯಲ್ಲಿ ಮಾಡಲ್ಪಡುವ ಹೊಂದಾಣಿಕೆಗಳು ಸಹ ಅವರಿಗೆ ಉಪಶಮನವನ್ನು ನೀಡಲಿದ್ದವು. ಅದಕ್ಕಿಂತಲೂ ಮಿಗಿಲಾಗಿ, ಒಂದು ಸ್ಪಷ್ಟವಾದ ಹಾಗೂ ದೃಢವಾದ ನಿರೀಕ್ಷೆಯು, ಜೀವಿತವನ್ನು ಕಡಿಮೆ ಒತ್ತಡಭರಿತವಾದದ್ದಾಗಿ ಕಂಡುಕೊಳ್ಳುವಂತೆ ಸಹಾಯಮಾಡಸಾಧ್ಯವಿತ್ತು.

ನೀವು ಚೈತನ್ಯವನ್ನು ಕಂಡುಕೊಳ್ಳಬಲ್ಲಿರಿ

11. ಒಂದು ನೊಗವನ್ನು ಕೊಟ್ಟು ಇನ್ನೊಂದು ನೊಗವನ್ನು ಪಡೆದುಕೊಳ್ಳುವುದರ ಕುರಿತಾಗಿ ಯೇಸು ಸೂಚಿಸುತ್ತಿರಲಿಲ್ಲವೇಕೆ?

11 ಜನರು ಒಂದು ನೊಗವನ್ನು ಕೊಟ್ಟು ಇನ್ನೊಂದು ನೊಗವನ್ನು ಪಡೆದುಕೊಳ್ಳುವರು ಎಂದು ಯೇಸು ಹೇಳುತ್ತಿರಲಿಲ್ಲವೆಂಬುದನ್ನು ದಯವಿಟ್ಟು ಗಮನಿಸಿರಿ. ಏಕೆಂದರೆ, ಇಂದು ಕ್ರೈಸ್ತರು ವಾಸಿಸುತ್ತಿರುವ ದೇಶಗಳಲ್ಲಿ ಹೇಗೆ ಸರಕಾರಗಳು ಆಳುತ್ತಿವೆಯೋ ಹಾಗೆಯೇ ಆಗಲೂ ರೋಮ್‌ ಅಲ್ಲಿ ಆಧಿಪತ್ಯ ನಡಿಸುತ್ತಿತ್ತು. ಪ್ರಥಮ ಶತಮಾನದ ರೋಮನ್‌ ತೆರಿಗೆಗಳು ಕೂಡ ರದ್ದುಗೊಳ್ಳಸಾಧ್ಯವಿರಲಿಲ್ಲ. ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳು ಖಂಡಿತವಾಗಿಯೂ ಮುಂದುವರಿಯಲಿದ್ದವು. ಅಪರಿಪೂರ್ಣತೆ ಹಾಗೂ ಪಾಪವು ಜನರ ಮೇಲೆ ಪ್ರಭಾವ ಬೀರುವುದನ್ನು ಮುಂದುವರಿಸಲಿತ್ತು. ಆದರೂ, ಯೇಸುವಿನ ಬೋಧನೆಗಳನ್ನು ಅನ್ವಯಿಸುವ ಮೂಲಕ ಅವರು ಚೈತನ್ಯವನ್ನು ತಮ್ಮದಾಗಿಸಿಕೊಳ್ಳಸಾಧ್ಯವಿತ್ತು. ಇಂದು ಸಹ ನಾವು ಹಾಗೆಯೇ ಮಾಡಸಾಧ್ಯವಿದೆ.

12, 13. ಚೈತನ್ಯವನ್ನು ನೀಡಸಾಧ್ಯವಿದ್ದಂತಹ ಯಾವ ವಿಷಯವನ್ನು ಯೇಸು ಒತ್ತಿಹೇಳಿದನು, ಮತ್ತು ಕೆಲವರು ಹೇಗೆ ಪ್ರತಿಕ್ರಿಯಿಸಿದರು?

12 ನೊಗದ ಕುರಿತಾದ ಯೇಸುವಿನ ದೃಷ್ಟಾಂತದ ಪ್ರಾಮುಖ್ಯ ಅನ್ವಯವು, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು. ಯೇಸುವಿನ ಮುಖ್ಯ ಚಟುವಟಿಕೆಯು, ದೇವರ ರಾಜ್ಯಕ್ಕೆ ಒತ್ತನ್ನು ನೀಡುತ್ತಾ ಇತರರಿಗೆ ಬೋಧಿಸುವುದೇ ಆಗಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ. (ಮತ್ತಾಯ 4:23) ಆದುದರಿಂದ, “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ” ಎಂದು ಅವನು ಹೇಳಿದಾಗ, ಅದೇ ಚಟುವಟಿಕೆಯಲ್ಲಿ ಅವನನ್ನು ಹಿಂಬಾಲಿಸುವುದನ್ನು ಅದು ಒಳಗೂಡಿದ್ದಿರಬಹುದು ಎಂಬುದಂತೂ ನಿಶ್ಚಯ. ಪ್ರಾಮಾಣಿಕ ಹೃದಯದ ಜನರು, ಅನೇಕರ ಜೀವನದಲ್ಲಿ ಅತ್ಯಧಿಕ ಚಿಂತೆಯ ವಿಷಯವಾಗಿರುವ ತಮ್ಮ ಜೀವನವೃತ್ತಿಯನ್ನು ಬದಲಾಯಿಸುವಂತೆ ಯೇಸು ಅವರನ್ನು ಪ್ರಚೋದಿಸಿದನು ಎಂದು ಸುವಾರ್ತಾ ವೃತ್ತಾಂತವು ತೋರಿಸುತ್ತದೆ. ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರಿಗೆ ಅವನು ಕೊಟ್ಟ ಕರೆಯನ್ನು ಜ್ಞಾಪಿಸಿಕೊಳ್ಳಿರಿ: “ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು.” (ಮಾರ್ಕ 1:​16-20) ಅವನು ತನ್ನ ಜೀವನದಲ್ಲಿ ಯಾವ ಕೆಲಸವನ್ನು ಪ್ರಥಮ ಸ್ಥಾನದಲ್ಲಿಟ್ಟನೋ ಆ ಕೆಲಸವನ್ನು, ತನ್ನ ಮಾರ್ಗದರ್ಶನದ ಕೆಳಗೆ ಹಾಗೂ ತನ್ನ ಸಹಾಯದಿಂದ ಆ ಬೆಸ್ತರೂ ಮಾಡುವಲ್ಲಿ ಅದೆಷ್ಟು ಸಂತೃಪ್ತಿಕರವಾಗಿರುವುದು ಎಂಬುದನ್ನು ಅವನು ಅವರಿಗೆ ತೋರಿಸಿಕೊಟ್ಟನು.

13 ಅವನ ಬೋಧನೆಯನ್ನು ಕೇಳಿಸಿಕೊಂಡಿದ್ದ ಯೆಹೂದ್ಯರಲ್ಲಿ ಕೆಲವರು ಅದನ್ನು ಅರ್ಥಮಾಡಿಕೊಂಡರು ಮತ್ತು ತಮ್ಮ ಜೀವನದಲ್ಲಿ ಅನ್ವಯಿಸಿಕೊಂಡರು. ಲೂಕ 5:​1-11ರಲ್ಲಿ ನಾವು ಓದಿದಂತಹ ಸಮುದ್ರ ತೀರದ ದೃಶ್ಯವನ್ನು ಚಿತ್ರಿಸಿಕೊಳ್ಳಿರಿ. ನಾಲ್ಕು ಮಂದಿ ಬೆಸ್ತರು ಇಡೀ ರಾತ್ರಿ ಬಲೆಹಾಕಿ ದಣಿದಿದ್ದರೂ ಅವರಿಗೆ ಏನೂ ಸಿಕ್ಕಿರಲಿಲ್ಲ. ತದನಂತರ ಆ ಕೂಡಲೆ ಅವರ ಬಲೆಗಳಲ್ಲಿ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು! ಇದು ಆಕಸ್ಮಿಕವಾಗಿ ಸಂಭವಿಸಲಿಲ್ಲ; ಯೇಸುವಿನ ಮಧ್ಯಸ್ಥಿಕೆಯಿಂದಲೇ ಇದು ಸಂಭವಿಸಿತು. ಅವರು ಸಮುದ್ರ ತೀರದ ಕಡೆಗೆ ನೋಡಿದಾಗ, ಜನರ ಒಂದು ದೊಡ್ಡ ಗುಂಪು ಯೇಸುವಿನ ಬೋಧನೆಗಳಲ್ಲಿ ತೀವ್ರವಾದ ಆಸಕ್ತಿಯನ್ನು ತೋರಿಸುತ್ತಿರುವುದನ್ನು ನೋಡಿದರು. ಅದು, ಆ ನಾಲ್ಕು ಮಂದಿಗೆ ಯೇಸು ಏನು ಹೇಳಿದನೋ ಅದನ್ನು ವಿವರಿಸುವಂತೆ ಸಹಾಯಮಾಡಿತು: ‘ಇಂದಿನಿಂದ ನೀವು ಮನುಷ್ಯರನ್ನು ಹಿಡಿಯುವವರಾಗುವಿರಿ.’ ಅವರ ಪ್ರತಿಕ್ರಿಯೆ ಏನಾಗಿತ್ತು? “ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು.”

14. (ಎ) ಇಂದು ನಾವು ಚೈತನ್ಯವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ? (ಬಿ) ಚೈತನ್ಯದಾಯಕವಾದ ಯಾವ ಸುವಾರ್ತೆಯು ಯೇಸುವಿನಿಂದ ಸಾರಲ್ಪಟ್ಟಿತು?

14 ಮೂಲಭೂತವಾಗಿ ನೀವು ಸಹ ತದ್ರೀತಿಯಲ್ಲಿ ಪ್ರತಿಕ್ರಿಯಿಸಸಾಧ್ಯವಿದೆ. ಜನರಿಗೆ ಬೈಬಲ್‌ ಸತ್ಯವನ್ನು ಕಲಿಸುವ ಕೆಲಸವು ಈಗಲೂ ಮುಂದುವರಿಯುತ್ತಿದೆ. ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳಲ್ಲಿ ಸುಮಾರು 60 ಲಕ್ಷ ಮಂದಿ, ‘ಅವನ ನೊಗವನ್ನು’ ತಮ್ಮ ಮೇಲೆ ತೆಗೆದುಕೊಳ್ಳುವಂತೆ ಯೇಸು ಕೊಟ್ಟ ಆಮಂತ್ರಣವನ್ನು ಅಂಗೀಕರಿಸಿದ್ದಾರೆ; ಅವರು “ಮನುಷ್ಯರನ್ನು ಹಿಡಿಯುವ ಬೆಸ್ತ”ರಾಗಿದ್ದಾರೆ. (ಮತ್ತಾಯ 4:19) ಕೆಲವರು ಅದನ್ನು ಪೂರ್ಣ ಸಮಯದ ಜೀವನವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ; ಇತರರು ಆಂಶಕಾಲಿಕವಾಗಿ ತಮ್ಮಿಂದ ಎಷ್ಟನ್ನು ಮಾಡಸಾಧ್ಯವಿದೆಯೋ ಅಷ್ಟನ್ನು ಮಾಡುತ್ತಾರೆ. ಈ ಕೆಲಸವನ್ನು ಎಲ್ಲರೂ ಚೈತನ್ಯದಾಯಕವಾಗಿ ಕಂಡುಕೊಳ್ಳುತ್ತಾರೆ, ಆದುದರಿಂದ ಅವರ ಜೀವಿತವು ಕಡಿಮೆ ಒತ್ತಡದಾಯಕವಾಗಿ ಪರಿಣಮಿಸುತ್ತದೆ. ಅವರು ಆನಂದಿಸುವ ವಿಷಯವನ್ನು ಮಾಡುವುದು, ಅಂದರೆ “ಪರಲೋಕರಾಜ್ಯದ ಸುವಾರ್ತೆ”ಯನ್ನು ಇತರರಿಗೆ ತಿಳಿಸುವುದು ಈ ಕೆಲಸದಲ್ಲಿ ಒಳಗೂಡಿದೆ. (ಮತ್ತಾಯ 4:23) ಸುವಾರ್ತೆಯ ಕುರಿತು, ವಿಶೇಷವಾಗಿ ಈ ಸುವಾರ್ತೆಯ ಕುರಿತು ಮಾತಾಡುವುದು ಯಾವಾಗಲೂ ಆಹ್ಲಾದಕರವಾದದ್ದಾಗಿದೆ. ಇತರರು ಸಹ ಕಡಿಮೆ ಒತ್ತಡದಾಯಕ ಜೀವನವನ್ನು ನಡೆಸಸಾಧ್ಯವಿದೆ ಎಂಬುದನ್ನು ಅನೇಕರಿಗೆ ಮನಗಾಣಿಸಲು ನಮಗೆ ಅಗತ್ಯವಿರುವಂತಹ ಮೂಲಭೂತ ವಿಷಯವು ಬೈಬಲಿನಲ್ಲಿದೆ.​—2 ತಿಮೊಥೆಯ 3:​16, 17.

15. ಜೀವನದ ಕುರಿತಾದ ಯೇಸುವಿನ ಬೋಧನೆಗಳಿಂದ ನೀವು ಹೇಗೆ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ?

15 ಈಗಷ್ಟೇ ದೇವರ ರಾಜ್ಯದ ಕುರಿತು ಕಲಿಯಲು ಆರಂಭಿಸಿರುವ ಜನರು ಸಹ, ಹೇಗೆ ಜೀವಿಸಬೇಕು ಎಂಬುದರ ಕುರಿತಾದ ಯೇಸುವಿನ ಬೋಧನೆಗಳಿಂದ ಸ್ವಲ್ಪ ಮಟ್ಟಿಗಿನ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಯೇಸುವಿನ ಬೋಧನೆಗಳು ತಮಗೆ ಚೈತನ್ಯವನ್ನು ಉಂಟುಮಾಡಿವೆ ಹಾಗೂ ತಮ್ಮ ಜೀವಿತಗಳನ್ನು ಪೂರ್ಣವಾಗಿ ಬದಲಾಯಿಸಲು ಸಹಾಯಮಾಡಿವೆ ಎಂದು ಅನೇಕರು ನಿಜವಾಗಿಯೂ ಹೇಳಬಲ್ಲರು. ಯೇಸುವಿನ ಜೀವನ ಮತ್ತು ಶುಶ್ರೂಷೆಯ ವೃತ್ತಾಂತಗಳಲ್ಲಿ, ನಿರ್ದಿಷ್ಟವಾಗಿ ಮತ್ತಾಯ, ಮಾರ್ಕ, ಮತ್ತು ಲೂಕರಿಂದ ಬರೆಯಲ್ಪಟ್ಟ ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲ್ಪಟ್ಟಿರುವ ಜೀವನದ ಮೂಲತತ್ತ್ವಗಳಲ್ಲಿ ಕೆಲವನ್ನು ಪರೀಕ್ಷಿಸುವ ಮೂಲಕ, ಅದನ್ನು ಸ್ವತಃ ನೀವೇ ತಿಳಿದುಕೊಳ್ಳಸಾಧ್ಯವಿದೆ.

ಚೈತನ್ಯವನ್ನು ಕಂಡುಕೊಳ್ಳುವ ಮಾರ್ಗ

16, 17. (ಎ) ಯೇಸುವಿನ ಮುಖ್ಯ ಬೋಧನೆಗಳಲ್ಲಿ ಕೆಲವನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? (ಬಿ) ಯೇಸುವಿನ ಬೋಧನೆಗಳ ಅನ್ವಯದಿಂದ ಚೈತನ್ಯವನ್ನು ಕಂಡುಕೊಳ್ಳಲು ಯಾವುದರ ಆವಶ್ಯಕತೆಯಿದೆ?

16 ಸಾ.ಶ. 31ರ ವಸಂತಕಾಲದಲ್ಲಿ, ಇಂದಿನ ವರೆಗೂ ಲೋಕವ್ಯಾಪಕವಾಗಿ ಪ್ರಸಿದ್ಧವಾಗಿರುವ ಒಂದು ಉಪನ್ಯಾಸವನ್ನು ಯೇಸು ಕೊಟ್ಟನು. ಇದು ಸಾಮಾನ್ಯವಾಗಿ ಪರ್ವತ ಪ್ರಸಂಗ ಎಂದು ಕರೆಯಲ್ಪಡುತ್ತದೆ. ಇದು ಮತ್ತಾಯ 5ರಿಂದ 7ನೆಯ ಅಧ್ಯಾಯಗಳಲ್ಲಿ ಮತ್ತು ಲೂಕ 6ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿದೆ, ಮತ್ತು ಅವನ ಅನೇಕ ಬೋಧನೆಗಳನ್ನು ಚೆನ್ನಾಗಿ ಸಾರಾಂಶಿಸುತ್ತದೆ. ಸುವಾರ್ತಾ ವೃತ್ತಾಂತಗಳಲ್ಲಿ ಬೇರೆಡೆಯಲ್ಲಿಯೂ ನೀವು ಯೇಸುವಿನ ಇತರ ಬೋಧನೆಗಳನ್ನು ಕಂಡುಕೊಳ್ಳಸಾಧ್ಯವಿದೆ. ಅವನು ಹೇಳಿದ ವಿಷಯಗಳಲ್ಲಿ ಹೆಚ್ಚಿನದ್ದು ಸ್ವವಿವರಣಾತ್ಮಕವಾಗಿದೆ, ಆದರೆ ಅದನ್ನು ವೈಯಕ್ತಿಕವಾಗಿ ಅನ್ವಯಿಸಿಕೊಳ್ಳುವುದು ಮಾತ್ರ ಪಂಥಾಹ್ವಾನದಾಯಕವಾಗಿರಸಾಧ್ಯವಿದೆ. ಆ ಅಧ್ಯಾಯಗಳನ್ನು ನೀವು ಜಾಗರೂಕತೆಯಿಂದ ಹಾಗೂ ಧ್ಯಾನಮಗ್ನರಾಗಿ ಓದಬಾರದೇಕೆ? ಅವನ ವಿಚಾರಗಳ ಶಕ್ತಿಯು ನಿಮ್ಮ ಆಲೋಚನೆ ಹಾಗೂ ಮನೋಭಾವವನ್ನು ಪ್ರಭಾವಿಸಲಿ.

17 ಯೇಸುವಿನ ಬೋಧನೆಗಳನ್ನು ಬೇರೆ ಬೇರೆ ಕ್ರಮದಲ್ಲಿ ಏರ್ಪಡಿಸಸಾಧ್ಯವಿದೆ ಎಂಬುದಂತೂ ಸ್ಪಷ್ಟ. ಆದುದರಿಂದ, ತಿಂಗಳ ಪ್ರತಿಯೊಂದು ದಿನಕ್ಕಾಗಿ ಒಂದರಂತೆ ಇವುಗಳನ್ನು ನಿಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳುವ ಗುರಿಯೊಂದಿಗೆ, ನಾವೀಗ ಮುಖ್ಯ ಬೋಧನೆಗಳನ್ನು ಗುಂಪುಗುಂಪಾಗಿ ಪ್ರತ್ಯೇಕಿಸೋಣ. ಹೇಗೆ? ಈ ಅಂಶಗಳ ಮೇಲೆ ಸುಮ್ಮನೆ ಅವಸರದಿಂದ ಕಣ್ಣೋಡಿಸಬೇಡಿರಿ. “ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು”? ಎಂದು ಯೇಸು ಕ್ರಿಸ್ತನನ್ನು ಕೇಳಿದಂತಹ ಒಬ್ಬ ಐಶ್ವರ್ಯವಂತ ಅಧಿಕಾರಿಯನ್ನು ಜ್ಞಾಪಿಸಿಕೊಳ್ಳಿರಿ. ದೇವರ ಧರ್ಮಶಾಸ್ತ್ರದ ಅತ್ಯಾವಶ್ಯಕ ಆವಶ್ಯಕತೆಗಳನ್ನು ಯೇಸು ಅವನ ಮುಂದೆ ಪುನರಾವರ್ತಿಸಿದಾಗ, ಈಗಾಗಲೇ ನಾನು ಈ ಎಲ್ಲಾ ಆವಶ್ಯಕತೆಗಳನ್ನು ಪೂರೈಸುತ್ತಿದ್ದೇನೆ ಎಂದು ಆ ಮನುಷ್ಯನು ಪ್ರತ್ಯುತ್ತರಿಸಿದನು. ಆದರೂ, ತಾನು ಇನ್ನೂ ಹೆಚ್ಚಿನದ್ದನ್ನು ಮಾಡಬೇಕು ಎಂಬುದನ್ನು ಅವನು ಗ್ರಹಿಸಿದನು. ಒಬ್ಬ ಕ್ರಿಯಾಶೀಲ ಶಿಷ್ಯನಾಗಲಿಕ್ಕಾಗಿ, ದೈವಿಕ ಮೂಲತತ್ತ್ವಗಳನ್ನು ಪ್ರಾಯೋಗಿಕ ರೀತಿಯಲ್ಲಿ ಅನ್ವಯಿಸಲು ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ಯೇಸು ಅವನನ್ನು ಕೇಳಿಕೊಂಡನು. ಆದರೆ, ಅಷ್ಟರ ಮಟ್ಟಿಗೆ ಕ್ರಿಯೆಗೈಯಲು ಆ ಮನುಷ್ಯನು ಸಿದ್ಧನಿರಲಿಲ್ಲ ಎಂಬುದು ಸುಸ್ಪಷ್ಟ. (ಲೂಕ 18:​18-23) ಆದುದರಿಂದ, ಇಂದು ಯೇಸುವಿನ ಬೋಧನೆಗಳನ್ನು ಕಲಿಯಲು ಬಯಸುವಂಥ ಒಬ್ಬ ವ್ಯಕ್ತಿಯು, ಆ ಬೋಧನೆಗಳನ್ನು ಅಂಗೀಕರಿಸುವುದು ಹಾಗೂ ಅವುಗಳನ್ನು ವಾಸ್ತವಿಕವಾಗಿ ಪಾಲಿಸುವುದರ ನಡುವೆ ಭಿನ್ನತೆಯಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಆಗ ಮಾತ್ರ ಒತ್ತಡವು ಕಡಿಮೆಯಾಗಸಾಧ್ಯವಿದೆ.

18. ಈ ಲೇಖನದ ಜೊತೆಗಿರುವ ರೇಖಾಚೌಕವನ್ನು ನೀವು ಪ್ರಯೋಜನಾರ್ಹವಾಗಿ ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ದೃಷ್ಟಾಂತಿಸಿರಿ.

18 ಯೇಸುವಿನ ಬೋಧನೆಗಳನ್ನು ಪರೀಕ್ಷಿಸುವ ಹಾಗೂ ಅನ್ವಯಿಸುವ ವಿಷಯದಲ್ಲಿ ಒಂದು ಆರಂಭದೋಪಾದಿ, ಈ ಲೇಖನದ ಜೊತೆಗಿರುವ ರೇಖಾಚೌಕದಲ್ಲಿರುವ 1ನೆಯ ಅಂಶವನ್ನು ನೋಡಿರಿ. ಇದು ಮತ್ತಾಯ 5:​3-9ಕ್ಕೆ ಸೂಚಿತವಾಗಿದೆ. ವಾಸ್ತವದಲ್ಲಿ, ನಮ್ಮಲ್ಲಿ ಯಾರೇ ಆಗಲಿ, ಆ ವಚನಗಳಲ್ಲಿ ಕೊಡಲ್ಪಟ್ಟಿರುವ ಅಪೂರ್ವ ಸಲಹೆಯ ಕುರಿತು ಮನನಮಾಡಲು ಅತ್ಯಧಿಕ ಸಮಯವನ್ನು ವ್ಯಯಿಸಸಾಧ್ಯವಿದೆ. ಆದರೂ, ಅವುಗಳನ್ನು ಒಟ್ಟಿಗೆ ಪರಿಗಣಿಸುವಾಗ, ಮನೋಭಾವದ ಕುರಿತು ನೀವು ಯಾವ ತೀರ್ಮಾನಕ್ಕೆ ಬರುತ್ತೀರಿ? ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಒತ್ತಡದ ಪ್ರಭಾವವನ್ನು ನೀವು ನಿಜವಾಗಿಯೂ ಜಯಿಸಲು ಬಯಸುವುದಾದರೆ, ಯಾವುದು ನಿಮಗೆ ಸಹಾಯಮಾಡಬಲ್ಲದು? ನಿಮ್ಮ ಹೆಚ್ಚಿನ ಆಲೋಚನೆಗಳಲ್ಲಿ ಆತ್ಮಿಕ ವಿಷಯಗಳು ಒಳಗೂಡಿರುವಂತೆ ಬಿಡುವ ಮೂಲಕ, ಇಂತಹ ವಿಷಯಗಳ ಕಡೆಗೆ ನೀವು ಅತ್ಯಧಿಕ ಗಮನವನ್ನು ಹರಿಸುವುದಾದರೆ, ನೀವು ಹೇಗೆ ನಿಮ್ಮ ಸನ್ನಿವೇಶವನ್ನು ಉತ್ತಮಗೊಳಿಸಬಹುದು? ನಿಮ್ಮ ಜೀವನದಲ್ಲಿ ಆತ್ಮಿಕ ವಿಚಾರಗಳಿಗೆ ಹೆಚ್ಚಿನ ಗಮನವನ್ನು ಕೊಡುವಂತೆ ಅನುಮತಿಸುತ್ತಾ, ನೀವು ಕಡಿಮೆ ಮಹತ್ವವನ್ನು ಕೊಡಬೇಕಾಗಿರುವಂತಹ ಯಾವುದೇ ಚಿಂತೆಯು ನಿಮಗಿದೆಯೋ? ಒಂದುವೇಳೆ ನೀವು ಹೀಗೆ ಮಾಡುವಲ್ಲಿ, ಇದು ಈಗಲೇ ನಿಮ್ಮ ಸಂತೋಷಕ್ಕೆ ಹೆಚ್ಚನ್ನು ಕೂಡಿಸುವುದು.

19. ಹೆಚ್ಚಿನ ಒಳನೋಟ ಹಾಗೂ ತಿಳಿವಳಿಕೆಯನ್ನು ಪಡೆದುಕೊಳ್ಳಲಿಕ್ಕಾಗಿ ನೀವೇನು ಮಾಡಸಾಧ್ಯವಿದೆ?

19 ನೀವು ಇನ್ನೂ ಹೆಚ್ಚಿನದ್ದನ್ನು ಮಾಡಸಾಧ್ಯವಿದೆ. ಆ ವಚನಗಳನ್ನು ದೇವರ ಇನ್ನೊಬ್ಬ ಸೇವಕನೊಂದಿಗೆ, ಬಹುಶಃ ನಿಮ್ಮ ವಿವಾಹ ಸಂಗಾತಿಯೊಂದಿಗೆ, ಒಬ್ಬ ನಿಕಟ ಸಂಬಂಧಿಯೊಂದಿಗೆ, ಅಥವಾ ಒಬ್ಬ ಸ್ನೇಹಿತನೊಂದಿಗೆ ಚರ್ಚಿಸಬಾರದೇಕೆ? (ಜ್ಞಾನೋಕ್ತಿ 18:24; 20:5) ಆ ಐಶ್ವರ್ಯವಂತ ಅಧಿಕಾರಿಯು ಸಂಬಂಧಿತ ವಿಷಯದ ಕುರಿತು ಸ್ವತಃ ಯೇಸುವನ್ನೇ ನೇರವಾಗಿ ಪ್ರಶ್ನಿಸಿದನು ಎಂಬುದು ನಿಮಗೆ ತಿಳಿದಿರಲಿ. ಅವನಿಗೆ ಸಿಕ್ಕಿದ ಉತ್ತರವು, ಅವನ ಸಂತೋಷ ಹಾಗೂ ನಿತ್ಯಜೀವದ ಪ್ರತೀಕ್ಷೆಯನ್ನು ಹೆಚ್ಚಿಸಸಾಧ್ಯವಿತ್ತು. ಈ ವಚನಗಳನ್ನು ನೀವು ಯಾರೊಂದಿಗೆ ಚರ್ಚಿಸುತ್ತೀರೋ ಆ ಜೊತೆ ಆರಾಧಕರು ಖಂಡಿತವಾಗಿಯೂ ಯೇಸುವಿಗೆ ಸಮಾನರಾಗಿರಲಾರರು; ಆದರೂ, ಯೇಸುವಿನ ಬೋಧನೆಗಳ ಕುರಿತಾದ ಸಂಭಾಷಣೆಯು ಮಾತ್ರ ನಿಮ್ಮಿಬ್ಬರಿಗೂ ಪ್ರಯೋಜನಾರ್ಹವಾಗಿರುವುದು. ಆದಷ್ಟು ಬೇಗನೆ ಇದನ್ನು ಮಾಡಲು ಪ್ರಯತ್ನಿಸಿರಿ.

20, 21. ಯೇಸುವಿನ ಬೋಧನೆಗಳ ಕುರಿತಾಗಿ ಕಲಿಯಲು ನೀವು ಯಾವ ಕಾರ್ಯಕ್ರಮವನ್ನು ಅನುಸರಿಸಸಾಧ್ಯವಿದೆ, ಮತ್ತು ನಿಮ್ಮ ಪ್ರಗತಿಯನ್ನು ನೀವು ಹೇಗೆ ಅಳೆಯುವಿರಿ?

20 “ನಿಮಗೆ ಸಹಾಯಮಾಡಲಿಕ್ಕಾಗಿರುವ ಬೋಧನೆಗಳು” ಎಂಬ ರೇಖಾಚೌಕವನ್ನು ಪುನಃ ನೋಡಿರಿ. ಒಂದು ದಿನಕ್ಕೆ ಕಡಿಮೆಪಕ್ಷ ಒಂದು ಬೋಧನೆಯನ್ನು ನೀವು ಪರಿಗಣಿಸುವಂತಹ ರೀತಿಯಲ್ಲಿ ಈ ಬೋಧನೆಗಳನ್ನು ವಿಭಾಗಿಸಲಾಗಿದೆ. ಉದ್ಧೃತ ವಚನಗಳಲ್ಲಿ ಯೇಸು ಏನನ್ನು ಹೇಳಲಿಕ್ಕಿದ್ದನೆಂಬುದನ್ನು ನೀವು ಮೊದಲಾಗಿ ಓದಸಾಧ್ಯವಿದೆ. ತದನಂತರ ಅವನ ಮಾತುಗಳ ಕುರಿತು ಆಲೋಚಿಸಿರಿ. ನಿಮ್ಮ ಜೀವನದಲ್ಲಿ ಅವುಗಳನ್ನು ಹೇಗೆ ಅನ್ವಯಿಸಸಾಧ್ಯವಿದೆ ಎಂಬುದರ ಕುರಿತು ಮನನಮಾಡಿರಿ. ಈಗಾಗಲೇ ನೀವು ಹಾಗೆ ಮಾಡುತ್ತಿದ್ದೀರೆಂದು ನಿಮಗನಿಸುವಲ್ಲಿ, ಆ ದೈವಿಕ ಬೋಧನೆಗನುಸಾರ ಜೀವಿಸಲಿಕ್ಕಾಗಿ ಯಾವ ರೀತಿಯಲ್ಲಿ ಇನ್ನೂ ಹೆಚ್ಚನ್ನು ಮಾಡಸಾಧ್ಯವಿದೆ ಎಂಬುದನ್ನು ಗ್ರಹಿಸಲಿಕ್ಕಾಗಿ ಮನನಮಾಡಿರಿ. ಆ ದಿನವೆಲ್ಲಾ ಆ ಬೋಧನೆಯನ್ನು ಅನ್ವಯಿಸಲು ಪ್ರಯತ್ನಿಸಿರಿ. ಅದನ್ನು ಅರ್ಥಮಾಡಿಕೊಳ್ಳಲು ಅಥವಾ ನೀವು ಅದನ್ನು ಹೇಗೆ ಅನ್ವಯಿಸಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಹೆಣಗಾಡಬೇಕಾಗಿರುವಲ್ಲಿ, ಇನ್ನೊಂದು ದಿನವೂ ಅದರ ಬಗ್ಗೆಯೇ ಕಾರ್ಯನಡಿಸಲು ಪ್ರಯತ್ನಿಸಿರಿ. ಆದರೂ, ಇನ್ನೊಂದು ಅಂಶಕ್ಕೆ ಮುಂದುವರಿಯುವ ಮುಂಚೆ, ಮೊದಲ ಅಂಶವನ್ನು ನೀವು ಸಂಪೂರ್ಣವಾಗಿ ಕರಗತಮಾಡಿಕೊಳ್ಳಬೇಕಾಗಿಲ್ಲ ಎಂಬುದು ನೆನಪಿರಲಿ. ಮರುದಿನ ನೀವು ಇನ್ನೊಂದು ಬೋಧನೆಯನ್ನು ಪರಿಗಣಿಸಬಹುದು. ಒಂದು ವಾರದ ಕೊನೆಯಲ್ಲಿ, ಯೇಸುವಿನ ಬೋಧನೆಗಳಲ್ಲಿ ನಾಲ್ಕು ಅಥವಾ ಐದನ್ನು ಅಳವಡಿಸಿಕೊಳ್ಳುವುದರಲ್ಲಿ ನೀವೆಷ್ಟು ಸಫಲರಾಗಿದ್ದೀರಿ ಎಂಬುದನ್ನು ನೀವೇ ಪುನರ್ವಿಮರ್ಶಿಸಸಾಧ್ಯವಿದೆ. ಎರಡನೆಯ ವಾರ ಇನ್ನೂ ಹೆಚ್ಚನ್ನು ಕೂಡಿಸಿರಿ; ದಿನೇ ದಿನೇ ಹೀಗೆ ಮಾಡುತ್ತಾ ಹೋಗಿ. ಯಾವುದೋ ಬೋಧನೆಯನ್ನು ಅನ್ವಯಿಸಿಕೊಳ್ಳುವುದರಲ್ಲಿ ನೀವು ತಪ್ಪಿಬೀಳುತ್ತಿದ್ದೀರಿ ಎಂದು ನಿಮಗನಿಸುವಲ್ಲಿ, ಖಂಡಿತ ನಿರಾಶರಾಗಬೇಡಿ. ಪ್ರತಿಯೊಬ್ಬ ಕ್ರೈಸ್ತನಿಗೂ ಇದೇ ರೀತಿಯ ಅನುಭವವಾಗಿರುವದು. (2 ಪೂರ್ವಕಾಲವೃತ್ತಾಂತ 6:36; ಕೀರ್ತನೆ 130:3; ಪ್ರಸಂಗಿ 7:20; ಯಾಕೋಬ 3:8) ಮೂರನೆಯ ವಾರ ಹಾಗೂ ನಾಲ್ಕನೆಯ ವಾರಗಳಲ್ಲೂ ಈ ಬೋಧನೆಗಳನ್ನು ಅನ್ವಯಿಸಿಕೊಳ್ಳುತ್ತಾ ಮುಂದುವರಿಯಿರಿ.

21 ಹೆಚ್ಚುಕಡಿಮೆ ಒಂದು ತಿಂಗಳ ಬಳಿಕ, ಎಲ್ಲ 31 ಅಂಶಗಳನ್ನು ನೀವು ಪರಿಗಣಿಸಿ ಮುಗಿಸಬಹುದು. ಹೀಗಿರುವಾಗ, ಇದರ ಫಲಿತಾಂಶವಾಗಿ ನಿಮಗೆ ಹೇಗನಿಸುವುದು? ನೀವು ಹೆಚ್ಚು ಸಂತೋಷಿತರೂ, ನಿಶ್ಚಿಂತರೂ ಆಗಿರುವುದಿಲ್ಲವೋ? ಒಂದುವೇಳೆ ನೀವು ಸ್ವಲ್ಪವೇ ಪ್ರಗತಿಯನ್ನು ಮಾಡುವುದಾದರೂ, ನಿಮ್ಮ ಒತ್ತಡವು ಕಡಿಮೆಯಾಗಿರುವ ಅನಿಸಿಕೆ ನಿಮಗಾಗುವುದು, ಅಥವಾ ಕಡಿಮೆಪಕ್ಷ ನೀವು ಒತ್ತಡವನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿರ್ವಹಿಸಿರುವಿರಿ ಮತ್ತು ಅದನ್ನು ಮುಂದುವರಿಸುವ ವಿಧಾನವನ್ನೂ ನೀವು ಹೊಂದಿರುವಿರಿ. ಈ ಪಟ್ಟಿಯಲ್ಲಿಲ್ಲದಿರುವಂತಹ ಯೇಸುವಿನ ಬೋಧನೆಗಳ ಕುರಿತಾದ ಇನ್ನೂ ಅತ್ಯುತ್ತಮ ಅಂಶಗಳು ಇವೆ ಎಂಬುದನ್ನು ಮರೆಯದಿರಿ. ಅವುಗಳಲ್ಲಿ ಕೆಲವನ್ನು ಹುಡುಕಿ, ಅವುಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಲು ಪ್ರಯತ್ನಿಸಬಾರದೇಕೆ?​—ಫಿಲಿಪ್ಪಿ 3:16.

22. ಯೇಸುವಿನ ಬೋಧನೆಗಳಿಂದ ಏನು ಫಲಿಸಸಾಧ್ಯವಿದೆ, ಆದರೆ ಇನ್ನೂ ಯಾವ ಹೆಚ್ಚಿನ ಅಂಶವು ಅಭ್ಯಾಸಕ್ಕೆ ಅರ್ಹವಾಗಿದೆ?

22 ಯೇಸುವಿನ ನೊಗವು ಭಾರರಹಿತವಾಗಿರದಿದ್ದರೂ ಅದು ನಿಜವಾಗಿಯೂ ಮೃದುವಾದದ್ದಾಗಿದೆ ಎಂಬುದನ್ನು ನಾವು ನೋಡಸಾಧ್ಯವಿದೆ. ಅವನ ಬೋಧನೆಗಳು ಹಾಗೂ ಶಿಷ್ಯತ್ವದ ಹೊರೆಯು ಹಗುರವಾಗಿದೆ. 60ಕ್ಕಿಂತಲೂ ಹೆಚ್ಚು ವರ್ಷಗಳ ವೈಯಕ್ತಿಕ ಅನುಭವದ ನಂತರ, ಯೇಸುವಿನ ಆತ್ಮೀಯ ಸ್ನೇಹಿತನಾಗಿದ್ದ ಅಪೊಸ್ತಲ ಯೋಹಾನನು ಒಪ್ಪಿಕೊಂಡದ್ದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ನಿಮಗೂ ಇದೇ ದೃಢಭರವಸೆ ಇರಸಾಧ್ಯವಿದೆ. ಯೇಸುವಿನ ಬೋಧನೆಗಳನ್ನು ನೀವು ಹೆಚ್ಚೆಚ್ಚು ಅನ್ವಯಿಸಿಕೊಂಡಂತೆ, ಇಂದು ಅನೇಕರಿಗೆ ಜೀವಿತವನ್ನು ತುಂಬ ಒತ್ತಡಭರಿತವಾಗಿ ಮಾಡುವಂತಹ ಸಂಗತಿಗಳು ನಿಮಗೆ ಅಷ್ಟೇನೂ ತೊಂದರೆದಾಯಕವಾಗಿಲ್ಲ ಎಂಬುದನ್ನು ನೀವು ಕಂಡುಕೊಳ್ಳುವಿರಿ. ನೀವು ಸಾಕಷ್ಟು ಗಮನಾರ್ಹ ರೀತಿಯ ಉಪಶಮನವನ್ನು ಪಡೆದುಕೊಂಡಿದ್ದೀರಿ ಎಂಬುದನ್ನು ನೀವೇ ಗ್ರಹಿಸುವಿರಿ. (ಕೀರ್ತನೆ 34:8) ಆದರೂ, ಯೇಸುವಿನ ಮೃದುವಾದ ನೊಗಕ್ಕೆ ಇನ್ನೂ ಒಂದು ಅಂಶವಿದ್ದು, ನೀವದನ್ನು ಪರಿಗಣಿಸಬೇಕಾಗಿದೆ. ತಾನು “ಮೃದುಸ್ವಭಾವದವನೂ ದೀನ ಮನಸ್ಸುಳ್ಳವನೂ ಆಗಿದ್ದೇನೆ” ಎಂದು ಸಹ ಯೇಸು ತಿಳಿಸಿದನು. ಹಾಗಾದರೆ, ಯೇಸುವಿನಿಂದ ಕಲಿಯುವುದರಲ್ಲಿ ಹಾಗೂ ಅವನನ್ನು ಅನುಕರಿಸುವುದರಲ್ಲಿ ಅದು ಹೇಗೆ ಒಳಗೂಡಿದೆ? ಮುಂದಿನ ಲೇಖನದಲ್ಲಿ ನಾವಿದನ್ನು ಪರಿಗಣಿಸುವೆವು.​—ಮತ್ತಾಯ 11:29.

ನಿಮ್ಮ ಉತ್ತರವೇನು?

• ತೀರ ಹೆಚ್ಚು ಒತ್ತಡದಿಂದ ಉಪಶಮನವನ್ನು ಕಂಡುಕೊಳ್ಳಲು ಪ್ರಯತ್ನಿಸುವಾಗ, ನಾವು ಯೇಸುವಿನ ಕಡೆಗೆ ನೋಡಬೇಕೇಕೆ?

• ನೊಗವು ಯಾವುದರ ಸಂಕೇತವಾಗಿತ್ತು, ಮತ್ತು ಏಕೆ?

• ತನ್ನ ನೊಗವನ್ನು ತೆಗೆದುಕೊಳ್ಳುವಂತೆ ಯೇಸು ಜನರನ್ನು ಏಕೆ ಆಮಂತ್ರಿಸಿದನು?

• ಆತ್ಮಿಕ ಚೈತನ್ಯವು ಹೇಗೆ ನಿಮ್ಮದಾಗಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಸಂಕ್ಷಿಪ್ತ ವಿವರಣೆ]

2002ನೆಯ ಇಸವಿಯಲ್ಲಿ ಯೆಹೋವನ ಸಾಕ್ಷಿಗಳ ವಾರ್ಷಿಕವಚನವು ಇದಾಗಿರುವುದು: “ನನ್ನ ಬಳಿಗೆ ಬನ್ನಿರಿ . . . ನಾನು ನಿಮಗೆ ಚೈತನ್ಯ ನೀಡುವೆನು.”​—ಮತ್ತಾಯ 11:28, NW.

[ಪುಟ 12, 13ರಲ್ಲಿರುವ ಚೌಕ/ಚಿತ್ರ]

ನಿಮಗೆ ಸಹಾಯಮಾಡಲಿಕ್ಕಾಗಿರುವ ಬೋಧನೆಗಳು

ಮತ್ತಾಯ 5ರಿಂದ 7ನೆಯ ಅಧ್ಯಾಯಗಳಲ್ಲಿ ನೀವು ಯಾವ ಒಳ್ಳೇ ವಿಷಯಗಳನ್ನು ಕಂಡುಕೊಳ್ಳಸಾಧ್ಯವಿದೆ? ಮಹಾ ಬೋಧಕನಾದ ಯೇಸು, ಗಲಿಲಾಯದ ಬೆಟ್ಟದ ತಪ್ಪಲಿನಲ್ಲಿ ತಿಳಿಸಿದ ಬೋಧನೆಗಳು ಈ ಅಧ್ಯಾಯಗಳಲ್ಲಿ ಒಳಗೂಡಿವೆ. ಬೈಬಲಿನ ನಿಮ್ಮ ಸ್ವಂತ ಪ್ರತಿಯನ್ನು ಉಪಯೋಗಿಸಿ ಈ ಕೆಳಗೆ ಕೊಡಲ್ಪಟ್ಟಿರುವ ವಚನಗಳನ್ನು ದಯವಿಟ್ಟು ಓದಿ, ಮತ್ತು ಸಂಬಂಧಿತ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಿ.

1. 5:​3-9 ನನ್ನ ಸಾಮಾನ್ಯ ಮನೋಭಾವದ ಕುರಿತು ಇದು ನನಗೆ ಏನನ್ನು ತಿಳಿಸುತ್ತದೆ? ಹೆಚ್ಚಿನ ಸಂತೋಷವನ್ನು ಪಡೆದುಕೊಳ್ಳಲಿಕ್ಕಾಗಿ ನಾನು ಹೇಗೆ ಪ್ರಯತ್ನ ಮಾಡಬಹುದು? ನನ್ನ ಆತ್ಮಿಕ ಆವಶ್ಯಕತೆಗಳ ಕಡೆಗೆ ನಾನು ಹೇಗೆ ಹೆಚ್ಚಿನ ಗಮನವನ್ನು ಹರಿಸಬಲ್ಲೆ?

2. 5:​25, 26 ಅನೇಕರಿಗಿರುವಂತಹ ಕಲಹಶೀಲ ಮನೋಭಾವವನ್ನು ಅನುಕರಿಸುವುದಕ್ಕಿಂತ ಯಾವುದು ಹೆಚ್ಚು ಉತ್ತಮವಾದದ್ದಾಗಿದೆ?​—ಲೂಕ 12:​58, 59.

3. 5:​27-30 ಪ್ರಣಯಾತ್ಮಕ ಭ್ರಾಂತಿಯ ವಿಷಯದಲ್ಲಿ ಯೇಸುವಿನ ಮಾತುಗಳು ಏನನ್ನು ಒತ್ತಿಹೇಳುತ್ತವೆ? ನಾನು ಅಂತಹ ವಿಷಯಗಳನ್ನು ದೂರಮಾಡುವುದು ನನ್ನ ಸಂತೋಷಕ್ಕೆ ಹಾಗೂ ಮನಶ್ಶಾಂತಿಗೆ ಹೇಗೆ ಹೆಚ್ಚನ್ನು ಕೂಡಿಸುವುದು?

4. 5:​38-42 ಆಧುನಿಕ ಸಮಾಜವು ಆಕ್ರಮಣಶೀಲ ಮನೋಭಾವಕ್ಕೆ ನೀಡುವ ಮಹತ್ವದಿಂದ ದೂರವಿರಲು ನಾನೇಕೆ ಹೆಣಗಾಡಬೇಕು?

5. 5:​43-48 ನಾನು ಶತ್ರುಗಳೆಂದು ಪರಿಗಣಿಸಿರಬಹುದಾದ ಸಹವಾಸಿಗಳೊಂದಿಗೆ ಹೆಚ್ಚು ಪರಿಚಿತನಾಗುವ ಮೂಲಕ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆ? ಒತ್ತಡವನ್ನು ಕಡಿಮೆಮಾಡುವುದರಲ್ಲಿ ಅಥವಾ ಅದನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದರಲ್ಲಿ ಇದು ಹೇಗೆ ಸಹಾಯಕರವಾಗಿರುವುದು?

6. 6:​14, 15 ಕೆಲವೊಮ್ಮೆ ನಾನು ಇತರರನ್ನು ಕ್ಷಮಿಸಲು ಮನಸ್ಸುಮಾಡದಿರುವಾಗ, ಅಸೂಯೆ ಅಥವಾ ಅಸಮಾಧಾನವು ಇದರ ಮೂಲ ಕಾರಣವಾಗಿರಬಹುದೋ? ಅದನ್ನು ನಾನು ಹೇಗೆ ಬದಲಾಯಿಸಬಲ್ಲೆ?

7. 6:​16-18 ಆಂತರ್ಯದಲ್ಲಿ ನಾನು ಏನಾಗಿದ್ದೇನೆ ಎಂಬುದಕ್ಕಿಂತಲೂ ಹೊರತೋರಿಕೆಯ ಕುರಿತು ನಾನು ಹೆಚ್ಚು ಚಿಂತಿಸುವ ಪ್ರವೃತ್ತಿಯವನಾಗಿದ್ದೇನೋ? ಯಾವುದರ ಬಗ್ಗೆ ನಾನು ಹೆಚ್ಚು ಚಿಂತಿಸುವವನಾಗಿರಬೇಕು?

8. 6:​19-32 ಹಣ ಹಾಗೂ ಸಂಪತ್ತಿನ ಬಗ್ಗೆಯೇ ನಾನು ಅತಿಯಾಗಿ ಚಿಂತಿತನಾಗಿರುವುದಾದರೆ, ಅದರ ಪರಿಣಾಮವೇನಾಗಿರಸಾಧ್ಯವಿದೆ? ಈ ವಿಷಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಯಾವುದರ ಕುರಿತು ಆಲೋಚಿಸುವುದು ನನಗೆ ಸಹಾಯಮಾಡುವುದು?

9. 7:​1-5 ಯಾವಾಗಲೂ ಇತರರ ತಪ್ಪುಗಳನ್ನೇ ಹುಡುಕುತ್ತಾ, ನಿಂದಾತ್ಮಕ ಹಾಗೂ ಟೀಕಾತ್ಮಕ ಮನೋಭಾವವುಳ್ಳವರಾಗಿರುವ ಜನರ ಮಧ್ಯೆ ನಾನಿರುವಾಗ ನನಗೆ ಹೇಗನಿಸುತ್ತದೆ? ಅವರಂತಿರುವುದನ್ನು ದೂರಮಾಡುವುದು ನನಗೆ ತುಂಬ ಪ್ರಾಮುಖ್ಯವಾದದ್ದಾಗಿದೆ ಏಕೆ?

10. 7:​7-11 ನಾನು ದೇವರಿಗೆ ಭಿನ್ನಹಗಳನ್ನು ಮಾಡುವಾಗ ಪಟ್ಟುಹಿಡಿಯುವುದು ಒಳ್ಳೇದಾಗಿರುವಲ್ಲಿ, ಜೀವಿತದ ಇತರ ಅಂಶಗಳಲ್ಲಿ ಹಾಗೆ ಪಟ್ಟುಹಿಡಿಯುವುದರ ಕುರಿತಾಗಿ ಏನು?​—ಲೂಕ 11:​5-13.

11. 7:12 ನನಗೆ ಸುವರ್ಣ ನಿಯಮವು ಗೊತ್ತಿರುವುದಾದರೂ, ಇತರರೊಂದಿಗಿನ ನನ್ನ ವ್ಯವಹಾರದಲ್ಲಿ ನಾನು ಅದನ್ನು ಎಷ್ಟರ ಮಟ್ಟಿಗೆ ಅನ್ವಯಿಸಿಕೊಳ್ಳುತ್ತೇನೆ?

12. 7:​24-27 ನನ್ನ ಸ್ವಂತ ಜೀವನವನ್ನು ಮಾರ್ಗದರ್ಶಿಸಲು ನಾನೇ ಹೊಣೆಗಾರನಾಗಿರುವುದರಿಂದ, ಕಷ್ಟವೆಂಬ ಚಂಡಮಾರುತಗಳು ಹಾಗೂ ತೊಂದರೆಯೆಂಬ ಪ್ರವಾಹಗಳನ್ನು ಎದುರಿಸಲು ನಾನೆಷ್ಟರ ಮಟ್ಟಿಗೆ ಸಿದ್ಧನಾಗಿದ್ದೇನೆ? ಇದರ ಕುರಿತು ಈಗ ನಾನೇಕೆ ಚಿಂತಿಸುತ್ತಿರಬೇಕು?​—ಲೂಕ 6:​46-49.

ನಾನು ಪರಿಗಣಿಸಸಾಧ್ಯವಿರುವ ಇನ್ನೂ ಹೆಚ್ಚಿನ ಬೋಧನೆಗಳು:

13. 8:​2, 3 ಯೇಸು ಅನೇಕವೇಳೆ ಮಾಡಿದಂತೆ, ದುರವಸ್ಥೆಯಲ್ಲಿರುವವರಿಗೆ ನಾನು ಹೇಗೆ ಸಹಾನುಭೂತಿಯನ್ನು ತೋರಿಸಸಾಧ್ಯವಿದೆ?

14. 9:​9-38 ನನ್ನ ಜೀವನದಲ್ಲಿ ಕರುಣೆ ತೋರಿಸುವುದು ಯಾವ ಪಾತ್ರವನ್ನು ವಹಿಸುತ್ತದೆ, ಮತ್ತು ನಾನು ಅದನ್ನು ಇನ್ನೂ ಹೆಚ್ಚಿನ ಮಟ್ಟಿಗೆ ಹೇಗೆ ತೋರಿಸಸಾಧ್ಯವಿದೆ?

15. 12:19 ಯೇಸುವಿನ ಕುರಿತಾದ ಪ್ರವಾದನೆಯಿಂದ ಕಲಿತಂತೆ, ಕಲಹಶೀಲ ವಾಗ್ವಾದಗಳನ್ನು ದೂರಮಾಡಲು ನಾನು ಹೆಣಗಾಡುತ್ತೇನೋ?

16. 12:​20, 21 ನನ್ನ ಮಾತುಗಳಿಂದಾಗಲಿ ನನ್ನ ಕ್ರಿಯೆಗಳಿಂದಾಗಲಿ ಇತರರನ್ನು ಜಜ್ಜದಿರುವ ಮೂಲಕ ನಾನು ಯಾವ ಒಳಿತನ್ನು ಮಾಡಬಲ್ಲೆ?

17. 12:​34-37 ಹೆಚ್ಚಿನ ವೇಳೆ ನಾನು ಯಾವುದರ ಕುರಿತು ಮಾತಾಡುತ್ತಿರುತ್ತೇನೆ? ಒಂದು ಕಿತ್ತಲೆ ಹಣ್ಣನ್ನು ಹಿಂಡಿದಾಗ, ಕಿತ್ತಲೆ ರಸವೇ ಹೊರಗೆಬರುತ್ತದೆ ಎಂಬುದು ನನಗೆ ಗೊತ್ತಿದೆ, ಆದುದರಿಂದ ನನ್ನ ಆಂತರ್ಯದಲ್ಲಿ ಅಂದರೆ ನನ್ನ ಹೃದಯದಲ್ಲಿ ಏನಿದೆ ಎಂಬುದರ ಬಗ್ಗೆ ನಾನೇಕೆ ಚಿಂತಿಸಬೇಕು?​—ಮಾರ್ಕ 7:​20-23.

18. 15:​4-6 ಯೇಸುವಿನ ಹೇಳಿಕೆಗಳಿಂದ, ವೃದ್ಧರ ಪ್ರೀತಿಪರ ಪರಾಮರಿಕೆಯ ಕುರಿತು ನಾನು ಏನನ್ನು ಅರ್ಥಮಾಡಿಕೊಳ್ಳಬಲ್ಲೆ?

19. 19:​13-15 ಏನನ್ನು ಮಾಡಲಿಕ್ಕಾಗಿ ನಾನು ಸಮಯವನ್ನು ಬದಿಗಿರಿಸಬೇಕಾಗಿದೆ?

20. 20:​25-28 ಸ್ವಪ್ರಯೋಜನಕ್ಕಾಗಿ ಅಧಿಕಾರವನ್ನು ಚಲಾಯಿಸುವುದು ಏಕೆ ಲಾಭದಾಯಕವಲ್ಲ? ಈ ವಿಷಯದಲ್ಲಿ ನಾನು ಯೇಸುವನ್ನು ಹೇಗೆ ಅನುಕರಿಸಸಾಧ್ಯವಿದೆ?

ಮಾರ್ಕನಿಂದ ದಾಖಲಿಸಲ್ಪಟ್ಟ ಹೆಚ್ಚಿನ ವಿಷಯಗಳು:

21. 4:​24, 25 ನಾನು ಇತರರನ್ನು ಹೇಗೆ ಉಪಚರಿಸುತ್ತೇನೆ ಎಂಬುದು ಎಷ್ಟು ಮಹತ್ವಪೂರ್ಣವಾಗಿದೆ?

22. 9:50 ನಾನು ಹೇಳುವ ಹಾಗೂ ಮಾಡುವ ವಿಷಯವು ಒಳ್ಳೇದಾಗಿರುವಲ್ಲಿ, ಯಾವ ಒಳ್ಳೇ ಫಲಿತಾಂಶಗಳು ಉಂಟಾಗುವ ಸಾಧ್ಯತೆಯಿದೆ?

ಕೊನೆಯದಾಗಿ, ಲೂಕನಿಂದ ದಾಖಲಿಸಲ್ಪಟ್ಟ ಕೆಲವೊಂದು ಬೋಧನೆಗಳು:

23. 8:​11, 14 ಚಿಂತೆ, ಐಶ್ವರ್ಯ, ಹಾಗೂ ಸುಖಾನುಭವವು ನನ್ನ ಜೀವಿತದಲ್ಲಿ ಮೇಲುಗೈ ಪಡೆಯುವಂತೆ ನಾನು ಬಿಡುವಲ್ಲಿ, ಇದರ ಫಲಿತಾಂಶವೇನಾಗಿರಸಾಧ್ಯವಿದೆ?

24. 9:​1-6 ಅಸ್ವಸ್ಥರನ್ನು ವಾಸಿಮಾಡುವ ಶಕ್ತಿಯು ಯೇಸುವಿಗಿತ್ತಾದರೂ, ಅವನು ಯಾವುದಕ್ಕೆ ಆದ್ಯತೆ ನೀಡಿದನು?

25. 9:​52-56 ನನಗೆ ಮುಂಗೋಪವಿದೆಯೋ? ನಾನು ಸೇಡು ತೀರಿಸಿಕೊಳ್ಳುವ ಸ್ವಭಾವವನ್ನು ತೊರೆದುಬಿಡುತ್ತೇನೋ?

26. 9:62 ದೇವರ ರಾಜ್ಯದ ಕುರಿತು ಮಾತಾಡುವ ನನ್ನ ಜವಾಬ್ದಾರಿಯನ್ನು ನಾನು ಹೇಗೆ ಪರಿಗಣಿಸತಕ್ಕದ್ದು?

27. 10:​29-37 ನಾನು ಒಬ್ಬ ನೆರೆಯವನಾಗಿದ್ದೇನೆ, ಅಪರಿಚಿತ ವ್ಯಕ್ತಿಯಲ್ಲ ಎಂಬುದನ್ನು ನಾನು ಹೇಗೆ ರುಜುಪಡಿಸಬಲ್ಲೆ?

28. 11:​33-36 ನನ್ನ ಜೀವನವನ್ನು ಹೆಚ್ಚು ಸರಳವಾದದ್ದಾಗಿ ಮಾಡಲು ನಾನು ಯಾವ ಬದಲಾವಣೆಗಳನ್ನು ಮಾಡಬಹುದು?

29. 12:15 ಜೀವ ಹಾಗೂ ಧನಸಂಪತ್ತುಗಳ ನಡುವೆ ಯಾವ ಸಂಬಂಧವಿದೆ?

30. 14:​28-30 ಒಂದುವೇಳೆ ನಾನು ನಿರ್ಣಯಗಳನ್ನು ತೂಗಿನೋಡಲು ಸಮಯವನ್ನು ತೆಗೆದುಕೊಳ್ಳುವುದಾದರೆ, ನಾನು ಏನನ್ನು ದೂರಮಾಡಬಲ್ಲೆ, ಮತ್ತು ಇದರಿಂದ ಯಾವ ಪ್ರಯೋಜನ ಸಿಗುತ್ತದೆ?

31. 16:​10-12 ಸಮಗ್ರತೆಯ ಜೀವನವನ್ನು ನಡೆಸುವುದರಿಂದ ನಾನು ಯಾವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು?

[ಪುಟ 10ರಲ್ಲಿರುವ ಚಿತ್ರಗಳು]

ಯೇಸುವಿನ ನೊಗದ ಕೆಳಗೆ ಜೀವರಕ್ಷಕ ಕೆಲಸವು ಚೈತನ್ಯದಾಯಕವಾದದ್ದಾಗಿದೆ