ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ”!

“ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ”!

“ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ”!

ಜನರ ಒಂದು ಗುಂಪು ಒಬ್ಬ ಅರಕ್ಷಿತ ಮನುಷ್ಯನನ್ನು ಹಿಡಿದು, ಅವನಿಗೆ ಚೆನ್ನಾಗಿ ಹೊಡೆಯಲಾರಂಭಿಸುತ್ತದೆ. ಅವನು ಮರಣದಂಡನೆಗೆ ಅರ್ಹನು ಎಂಬುದು ಆ ಗುಂಪಿನವರ ಅಭಿಪ್ರಾಯ. ಆ ಜನರು ಅವನನ್ನು ಇನ್ನೇನು ಕೊಂದುಹಾಕುತ್ತಾರೆ ಎಂಬಂತೆ ಕಂಡುಬಂದಾಗ, ಸಿಪಾಯಿಗಳು ಅಲ್ಲಿಗೆ ಬರುತ್ತಾರೆ ಮತ್ತು ಆ ಹಿಂಸಾತ್ಮಕ ಗುಂಪಿನಿಂದ ಬಹಳ ಪ್ರಯಾಸಪಟ್ಟು ಆ ವ್ಯಕ್ತಿಯನ್ನು ಬಿಡಿಸಿ ಕರೆದೊಯ್ಯುತ್ತಾರೆ. ಆ ಮನುಷ್ಯನು ಅಪೊಸ್ತಲ ಪೌಲನೇ. ಅವನ ಮೇಲೆ ಆಕ್ರಮಣಮಾಡಿದವರು ಯೆಹೂದ್ಯರು. ಇವರು ಪೌಲನ ಸಾರುವಿಕೆಯನ್ನು ಭಾವಾವೇಶದಿಂದ ಆಕ್ಷೇಪಿಸುತ್ತಾ, ಅವನು ದೇವಾಲಯವನ್ನು ಹೊಲೆಮಾಡಿದವನು ಎಂದು ಅವನ ಮೇಲೆ ದೋಷಾರೋಪ ಹೊರಿಸಿದ್ದಾರೆ. ಅವನನ್ನು ಕಾಪಾಡಿದವರು, ಕ್ಲೌದ್ಯ ಲೂಸ್ಯನು ಯಾರ ಸಹಸ್ರಾಧಿಪತಿಯಾಗಿದ್ದನೋ ಆ ರೋಮನರು. ಈ ಗಡಿಬಿಡಿಯಲ್ಲಿ ಪೌಲನೇ ಶಂಕಿತ ಅಪರಾಧಿಯೆಂದು ಅವರು ಅವನನ್ನು ಬಂಧಿಸಿದ್ದಾರೆ.

ಅಪೊಸ್ತಲರ ಕೃತ್ಯಗಳು ಪುಸ್ತಕದ ಕೊನೆಯ ಏಳು ಅಧ್ಯಾಯಗಳು, ಈ ಬಂಧನದೊಂದಿಗೆ ಆರಂಭವಾದ ಮೊಕದ್ದಮೆಯ ಮುಖ್ಯಾಂಶಗಳನ್ನು ಒದಗಿಸುತ್ತವೆ. ಪೌಲನ ಕಾನೂನು ಸಂಬಂಧಿತ ಹಿನ್ನೆಲೆ, ಅವನ ವಿರುದ್ಧವಾದ ಆರೋಪಗಳು, ಅವನ ಪ್ರತಿವಾದ, ಮತ್ತು ರೋಮನ್‌ ದಂಡನೆಯ ಕಾರ್ಯವಿಧಾನದ ಕುರಿತು ಅರ್ಥಮಾಡಿಕೊಳ್ಳುವುದು, ಈ ಅಧ್ಯಾಯಗಳ ಕುರಿತು ನಮಗೆ ಹೆಚ್ಚಿನ ತಿಳಿವಳಿಕೆಯನ್ನು ನೀಡುತ್ತದೆ.

ಕ್ಲೌದ್ಯ ಲೂಸ್ಯನ ಬಂಧನದಲ್ಲಿ

ಕ್ಲೌದ್ಯ ಲೂಸ್ಯನಿಗಿದ್ದ ಕರ್ತವ್ಯಗಳಲ್ಲಿ, ಯೆರೂಸಲೇಮಿನಲ್ಲಿ ಶಾಂತಿಯಿರುವಂತೆ ನೋಡಿಕೊಳ್ಳುವುದು ಸಹ ಒಳಗೂಡಿತ್ತು. ಅವನ ಮೇಲಧಿಕಾರಿಯು, ಅಂದರೆ ಯೂದಾಯದ ರೋಮನ್‌ ದೇಶಾಧಿಪತಿಯು ಕೈಸರೈಯದಲ್ಲಿ ವಾಸಿಸುತ್ತಿದ್ದನು. ಪೌಲನ ವಿಷಯದಲ್ಲಿ ಲೂಸ್ಯನು ಕೈಕೊಂಡ ಕಾರ್ಯವನ್ನು, ಹಿಂಸಾಚಾರದಿಂದ ಒಬ್ಬ ವ್ಯಕ್ತಿಯ ರಕ್ಷಣೆಯೋಪಾದಿ ಹಾಗೂ ಶಾಂತಿಭಂಗಮಾಡುವವನೊಬ್ಬನ ಬಂಧನದೋಪಾದಿ ಪರಿಗಣಿಸಸಾಧ್ಯವಿದೆ. ಆ ಯೆಹೂದ್ಯರ ಪ್ರತಿಕ್ರಿಯೆಯು, ಲೂಸ್ಯನು ಈ ಖೈದಿಯನ್ನು ಆ್ಯಂಟೊನಿಯ ಕೋಟೆಯ ಸಿಪಾಯಿಗಳ ಪಾಳೆಯದೊಳಕ್ಕೆ ಕರೆದುಕೊಂಡುಹೋಗುವಂತೆ ಮಾಡಿತು.​—ಅ. ಕೃತ್ಯಗಳು 21:​27–22:24.

ಪೌಲನು ಏನು ತಪ್ಪುಮಾಡಿದ್ದನು ಎಂಬುದನ್ನು ಲೂಸ್ಯನು ಕಂಡುಕೊಳ್ಳಬೇಕಾಗಿತ್ತು. ಗದ್ದಲದ ನಿಮಿತ್ತ ಅವನಿಗೆ ಏನೊಂದೂ ಅರ್ಥವಾಗಿರಲಿಲ್ಲ. ಆದುದರಿಂದ, ಇನ್ನೂ ಹೆಚ್ಚಿನ ಗದ್ದಲವನ್ನು ಉಂಟುಮಾಡದೆ, ‘ಯಾವ ಕಾರಣದಿಂದ ಹೀಗೆ ಪೌಲನಿಗೆ ವಿರುದ್ಧವಾಗಿ ಅವರು ಕೂಗಾಡುತ್ತಿದ್ದರೆಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಅವನಿಗೆ ಕೊರಡೆಗಳಿಂದ ಹೊಡೆದು ವಿಚಾರಿಸುವಂತೆ’ ಅವನು ಅಪ್ಪಣೆಕೊಟ್ಟನು. (ಅ. ಕೃತ್ಯಗಳು 22:24) ಅಪರಾಧಿಗಳು, ಗುಲಾಮರು, ಹಾಗೂ ಕಡಿಮೆ ದರ್ಜೆಯ ಇನ್ನಿತರರಿಂದ ಮಾಹಿತಿಯನ್ನು ಸಂಗ್ರಹಿಸಲಿಕ್ಕಾಗಿ ಇಂತಹ ಶಿಕ್ಷೆಯನ್ನು ಉಪಯೋಗಿಸುವುದು ಸಾಮಾನ್ಯವಾಗಿತ್ತು. ಕೊರಡೆ (ಫ್ಲಾಗ್ರುಮ್‌)ಗಳಿಂದ ಹೊಡೆದು ಜನರ ಬಾಯಿಯನ್ನು ಬಿಡಿಸಬಹುದಿತ್ತಾದರೂ, ಇದು ತುಂಬ ಭೀಕರ ಸಾಧನವಾಗಿತ್ತು. ಈ ಚಾವಟಿಗಳಲ್ಲಿ ಕೆಲವು, ಸರಪಳಿಗಳಲ್ಲಿ ನೇತಾಡುತ್ತಿರುವ ಲೋಹದ ಗುಂಡುಗಳನ್ನು ಒಳಗೂಡಿದ್ದವು. ಇನ್ನಿತರ ಕೊರಡೆಗಳಲ್ಲಿ, ಚೂಪಾದ ಎಲುಬುಗಳು ಮತ್ತು ಲೋಹದ ತುಂಡುಗಳು ಒಳಸೇರಿಸಲ್ಪಟ್ಟಿದ್ದ ಅನೇಕ ಪಟ್ಟಿಗಳಿದ್ದವು. ಮತ್ತು ಮಾಂಸವನ್ನು ಎಳೆ ಎಳೆಯಾಗಿ ಹರಿಯುತ್ತಾ, ಇವು ದುರ್ಭರ ಗಾಯಗಳನ್ನು ಉಂಟುಮಾಡುತ್ತಿದ್ದವು.

ಈ ಹಂತದಲ್ಲಿ ಪೌಲನು, ತಾನು ರೋಮಿನ ಪ್ರಜೆಯಾಗಿದ್ದೇನೆ ಎಂಬುದನ್ನು ಬಹಿರಂಗವಾಗಿ ಹೇಳಿದನು. ರೋಮಿನ ಒಬ್ಬ ನಿರ್ದೋಷಿ ವ್ಯಕ್ತಿಯನ್ನು ಕೊರಡೆಗಳಿಂದ ಹೊಡೆಯಬಾರದಿತ್ತು, ಆದುದರಿಂದ ಪೌಲನು ತಾನು ಸ್ಥಳಿಕ ಪ್ರಜೆಯೆಂದು ಹೇಳಿಕೊಂಡದ್ದು ಆ ಕೂಡಲೆ ಉತ್ತಮ ಪರಿಣಾಮವನ್ನು ತಂದಿತು. ರೋಮಿನ ಒಬ್ಬ ಪ್ರಜೆಯನ್ನು ದುರುಪಚರಿಸುವುದು ಮತ್ತು ಅವನಿಗೆ ಶಿಕ್ಷೆ ವಿಧಿಸುವುದು, ಒಬ್ಬ ರೋಮನ್‌ ಅಧಿಕಾರಿಯು ತನ್ನ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡಸಾಧ್ಯವಿತ್ತು. ಅಂದಿನಿಂದ, ನಾವು ಅರ್ಥಮಾಡಿಕೊಳ್ಳಸಾಧ್ಯವಿರುವಂತೆ, ಪೌಲನನ್ನು ವಿಶೇಷ ರೀತಿಯ ಸೆರೆವಾಸಿಯಾಗಿ, ಅಂದರೆ ಸಂದರ್ಶಕರು ಭೇಟಿಯಾಗಸಾಧ್ಯವಿದ್ದ ಸೆರೆವಾಸಿಯಾಗಿ ಉಪಚರಿಸಲಾಯಿತು.​—ಅ. ಕೃತ್ಯಗಳು 22:​25-29; 23:​16, 17.

ಪೌಲನ ಮೇಲೆ ಯಾವ ಆರೋಪವನ್ನು ಹೊರಿಸಲಾಗಿದೆ ಎಂಬುದರ ಬಗ್ಗೆ ಅನಿಶ್ಚಿತನಾಗಿದ್ದ ಲೂಸ್ಯನು, ಸಾರ್ವಜನಿಕ ಕೋಲಾಹಲಕ್ಕಾಗಿರುವ ವಿವರವನ್ನು ತಿಳಿದುಕೊಳ್ಳುವ ಪ್ರಯತ್ನದಿಂದ ಪೌಲನನ್ನು ಹಿರೀಸಭೆಯ ಮುಂದೆ ಕರೆದುಕೊಂಡುಹೋದನು. ಆದರೆ ಪುನರುತ್ಥಾನದ ವಿವಾದಾಂಶದ ಆಧಾರದ ಮೇಲೆ ತನಗೆ ತೀರ್ಪುನೀಡಲ್ಪಡುತ್ತಿರುವುದರ ಕುರಿತು ಪೌಲನು ಮಾತಾಡಿದಾಗ, ಅವನು ಅವರ ಮಧ್ಯೆ ಭಿನ್ನಾಭಿಪ್ರಾಯದ ಕಿಡಿಯನ್ನು ಹೊತ್ತಿಸಿದನು. ಆ ಭಿನ್ನಾಭಿಪ್ರಾಯವು ಎಷ್ಟು ಗಂಭೀರವಾಗಿತ್ತೆಂದರೆ, ಜನರು ಪೌಲನನ್ನು ಎಳೆದಾಡಿ ಚೂರುಚೂರು ಮಾಡಬಹುದೆಂದು ಲೂಸ್ಯನು ಭಯಪಟ್ಟನು, ಮತ್ತು ಕೋಪಗೊಂಡಿದ್ದ ಯೆಹೂದ್ಯರ ಮಧ್ಯದಿಂದ ಅವನನ್ನು ಪುನಃ ಬಲವಂತವಾಗಿ ಹಿಡಿದುಕೊಂಡು ಹೋಗುವಂತೆ ನಿರ್ಬಂಧಿಸಲ್ಪಟ್ಟನು.​—ಅ. ಕೃತ್ಯಗಳು 22:​30–23:10.

ರೋಮಿನ ಒಬ್ಬ ಪ್ರಜೆಯ ಮರಣಕ್ಕೆ ಜವಾಬ್ದಾರನಾಗಲು ಲೂಸ್ಯನು ಬಯಸಲಿಲ್ಲ. ಅವನನ್ನು ಕೊಲ್ಲಲು ಒಳಸಂಚು ನಡೆಯುತ್ತಿದೆ ಎಂಬುದು ಗೊತ್ತಾದಾಗ, ತನ್ನ ವಶದಲ್ಲಿದ್ದ ಸೆರೆವಾಸಿಯನ್ನು ಆತುರಾತುರವಾಗಿ ಕೈಸರೈಯಕ್ಕೆ ಕರೆದೊಯ್ಯುವ ಏರ್ಪಾಡನ್ನು ಅವನು ಮಾಡಿದನು. ಸೆರೆವಾಸಿಗಳನ್ನು ನ್ಯಾಯಾಲಯದ ಉಚ್ಚ ಅಧಿಕಾರಿಗಳ ಬಳಿಗೆ ಕಳುಹಿಸುವಾಗ, ಅವರೊಂದಿಗೆ ಮೊಕದ್ದಮೆಯ ಬಗ್ಗೆ ವರದಿ ನೀಡುವ ಕಾನೂನುಬದ್ಧ ಕಾಗದಪತ್ರಗಳನ್ನು ಕಳುಹಿಸುವ ಆವಶ್ಯಕತೆಯಿತ್ತು. ಆ ವರದಿಗಳಲ್ಲಿ, ಆರಂಭದ ವಿಚಾರಣೆಗಳ ಫಲಿತಾಂಶಗಳು, ಆ ಕ್ರಮವನ್ನು ಕೈಗೊಂಡದ್ದರ ಕಾರಣಗಳು, ಮತ್ತು ಮೊಕದ್ದಮೆಯ ಕುರಿತು ವಿಚಾರಕನ ಅಭಿಪ್ರಾಯವೇನು ಎಂಬ ಅಂಶಗಳು ಒಳಗೂಡಿರುತ್ತಿದ್ದವು. ‘ಯೆಹೂದಿ ಧರ್ಮಶಾಸ್ತ್ರವಿಷಯಗಳ ಕಾರಣದಿಂದ ಪೌಲನ ಮೇಲೆ ತಪ್ಪುಹೊರಿಸಿದರೇ ಹೊರತು ಮರಣದಂಡನೆಗಾಗಲಿ ಬೇಡಿಗಾಗಲಿ ಆಧಾರವಾದ ಯಾವ ಅಪರಾಧವನ್ನೂ ಅವನು ಮಾಡಲಿಲ್ಲ’ ಎಂದು ಲೂಸ್ಯನು ವರದಿಸಿದನು. ಅಷ್ಟುಮಾತ್ರವಲ್ಲ, ಯಾರು ಪೌಲನ ಮೇಲೆ ಆರೋಪ ಹೊರಿಸಿದರೋ ಅವರು, ದಂಡಾಧಿಕಾರಿಯಾದ ಫೇಲಿಕ್ಸನ ಮುಂದೆಯೇ ತಮ್ಮ ಆಪಾದನೆಗಳನ್ನು ತಿಳಿಸುವಂತೆ ಲೂಸ್ಯನು ಆಜ್ಞೆಯನ್ನಿತ್ತನು.​—ಅ. ಕೃತ್ಯಗಳು 23:​29, 30.

ದೇಶಾಧಿಪತಿಯಾದ ಫೇಲಿಕ್ಸನು ನ್ಯಾಯದಂಡನೆಯನ್ನು ವಿಧಿಸುವುದರಲ್ಲಿ ವಿಫಲನಾಗುತ್ತಾನೆ

ಪ್ರಾಂತೀಯ ನ್ಯಾಯಾಧಿಕಾರವು ಫೇಲಿಕ್ಸನ ಶಕ್ತಿ ಹಾಗೂ ಅಧಿಕಾರದ ಮೇಲೆ ಆಧಾರಿತವಾಗಿತ್ತು. ಅವನಿಗೆ ಇಷ್ಟವಿದ್ದರೆ ಅವನು ಸ್ಥಳಿಕ ಪದ್ಧತಿಯನ್ನು ಅನುಸರಿಸಸಾಧ್ಯವಿತ್ತು ಅಥವಾ ಸಮಾಜದ ಅಗ್ರಗಣ್ಯ ಸದಸ್ಯರಿಗೆ ಮತ್ತು ಸರಕಾರಿ ಅಧಿಕಾರಿಗಳಿಗೆ ಅನ್ವಯವಾಗುವಂಥ ಶಾಸನಬದ್ಧ ಅಪರಾಧಿ ನಿಯಮವನ್ನು ಅನುಸರಿಸಸಾಧ್ಯವಿತ್ತು. ಶಾಸನಬದ್ಧ ಅಪರಾಧಿ ನಿಯಮವು ಓರ್ಡೊ ಎಂದು ಅಥವಾ ಪಟ್ಟಿ ಎಂದು ಸಹ ಪ್ರಸಿದ್ಧವಾಗಿತ್ತು. ಯಾವುದೇ ರೀತಿಯ ಅಪರಾಧದ ವಿಷಯದಲ್ಲಿ ತೀರ್ಪನ್ನು ನೀಡಲಿಕ್ಕಾಗಿ, ಎಕ್ಸ್‌ಟ್ರಾ ಓರ್ಡಿನೆಮ್‌ ನ್ಯಾಯಾಧಿಕಾರವನ್ನು ಉಪಯೋಗಿಸುವ ಆಯ್ಕೆಯನ್ನು ಸಹ ಅವನು ಮಾಡಸಾಧ್ಯವಿತ್ತು. ಒಬ್ಬ ಪ್ರಾಂತೀಯ ದೇಶಾಧಿಪತಿಯು, ‘ರೋಮಿನಲ್ಲಿ ಏನು ಮಾಡಲ್ಪಡುತ್ತಿತ್ತೋ ಅದನ್ನಲ್ಲ, ಬದಲಾಗಿ ಸರ್ವಸಾಮಾನ್ಯವಾಗಿ ಏನನ್ನು ಮಾಡಬೇಕಾಗಿತ್ತೋ ಅದಕ್ಕೆ ಪರಿಗಣನೆ’ ತೋರಿಸುವಂತೆ ನಿರೀಕ್ಷಿಸಲಾಗುತ್ತಿತ್ತು. ಹೀಗೆ, ಹೆಚ್ಚುಕಡಿಮೆ ಎಲ್ಲವನ್ನೂ ಅವನ ನಿರ್ಧಾರಕ್ಕೇ ಬಿಡಲಾಗುತ್ತಿತ್ತು.

ಪುರಾತನ ರೋಮ್‌ನ ನಿಯಮದ ಕುರಿತಾದ ಎಲ್ಲ ವಿವರಗಳು ಗೊತ್ತಿಲ್ಲವಾದರೂ, ಪೌಲನ ಮೊಕದ್ದಮೆಯನ್ನು “ಎಕ್ಸ್‌ಟ್ರಾ ಓರ್ಡಿನೆಮ್‌ ಎಂಬ ಪ್ರಾಂತೀಯ ದಂಡನಾ ಕಾರ್ಯವಿಧಾನದ ಆದರ್ಶಪ್ರಾಯ ವೃತ್ತಾಂತವಾಗಿ” ಪರಿಗಣಿಸಲಾಯಿತು. ತನ್ನ ಸಲಹೆಗಾರರ ಸಹಾಯದಿಂದ ದೇಶಾಧಿಪತಿಯು, ಒಬ್ಬೊಬ್ಬ ವ್ಯಕ್ತಿಗಳಿಂದ ಮಾಡಲ್ಪಟ್ಟ ಫಿರ್ಯಾದುಗಳನ್ನು ಕೇಳಿಸಿಕೊಳ್ಳುತ್ತಿದ್ದನು. ನಂತರ ತನ್ನ ಫಿರ್ಯಾದುಗಾರನನ್ನು ಎದುರಿಸುವಂತೆ ಪ್ರತಿವಾದಿಯನ್ನು ಕರೆಯಲಾಗುತ್ತಿತ್ತು, ಮತ್ತು ಅವನು ತನ್ನನ್ನು ಸಮರ್ಥಿಸಿಕೊಳ್ಳಸಾಧ್ಯವಿತ್ತು, ಆದರೆ ಅದನ್ನು ರುಜುಪಡಿಸುವುದು ಆಪಾದಕನ ಕರ್ತವ್ಯವಾಗಿತ್ತು. ಆದರೆ ನ್ಯಾಯಾಧೀಶನಿಗೆ ಯಾವುದು ಸರಿಕಾಣುತ್ತಿತ್ತೋ ಆ ಶಿಕ್ಷೆಯನ್ನು ವಿಧಿಸುವ ಸ್ವಾತಂತ್ರ್ಯ ಅವನಿಗಿತ್ತು. ಅವನು ಆ ಕೂಡಲೆ ನಿರ್ಣಯವನ್ನು ಮಾಡಸಾಧ್ಯವಿತ್ತು ಅಥವಾ ಅನಿಶ್ಚಿತ ಸಮಯದ ವರೆಗೆ ನ್ಯಾಯತೀರ್ಪನ್ನು ಮುಂದೂಡಸಾಧ್ಯವಿತ್ತು; ಅಷ್ಟರ ತನಕ ಪ್ರತಿವಾದಿಯನ್ನು ಬಂಧನದಲ್ಲಿರಿಸಲಾಗುತ್ತಿತ್ತು. “ಸ್ವೇಚ್ಛಾನುಸಾರವಾದ ಇಂತಹ ಅಧಿಕಾರವಿರುವ ದಂಡಾಧಿಕಾರಿಯು, ‘ಅನುಚಿತ ಪ್ರಭಾವ’ಕ್ಕೆ ಒಳಗಾಗುವ ಹಾಗೂ ಒಬ್ಬ ವ್ಯಕ್ತಿಯನ್ನು ನಿರಪರಾಧಿಯೆಂದು ಘೋಷಿಸಿ ಬಿಡುಗಡೆಮಾಡಲು, ದಂಡನೆಗೆ ಗುರಿಮಾಡಲು ಅಥವಾ ಮೊಕದ್ದಮೆಯನ್ನು ಮುಂದೂಡಲು ಲಂಚವನ್ನು ಸ್ವೀಕರಿಸುವ ಸಾಧ್ಯತೆಯಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ” ಎಂದು ವಿದ್ವಾಂಸ ಹೆನ್ರಿ ಕ್ಯಾಡ್‌ಬೆರಿ ಹೇಳುತ್ತಾರೆ.

ಮಹಾಯಾಜಕನಾದ ಅನನೀಯ, ಯೆಹೂದ್ಯರಲ್ಲಿ ಹಿರೀಪುರುಷರು, ಮತ್ತು ತೆರ್ತುಲ್ಲನು ಸೇರಿಕೊಂಡು, ಪೌಲನು ‘ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುತ್ತಿರುವ ಪೀಡೆ’ಯಾಗಿದ್ದಾನೆ ಎಂದು ಫೇಲಿಕ್ಸನ ಮುಂದೆ ವಿಧಿವತ್ತಾಗಿ ಆರೋಪಿಸಿದರು. ಪೌಲನು “ನಜರೇತಿನವರ ಪಾಷಂಡಮತದ” ಮುಂದಾಳುವಾಗಿದ್ದಾನೆ ಮತ್ತು ದೇವಾಲಯವನ್ನು ಹೊಲೆಮಾಡಲು ಪ್ರಯತ್ನಿಸಿದ್ದಾನೆ ಎಂದು ಅವರು ಪ್ರತಿಪಾದಿಸಿದರು.​—ಅ. ಕೃತ್ಯಗಳು 24:​1-6.

ಪೌಲನ ಮೇಲೆ ಮೊದಲಾಗಿ ಆಕ್ರಮಣಮಾಡಿದವರು, ಅವನು ತ್ರೊಫಿಮನೆಂಬ ಹೆಸರಿನ ಅನ್ಯನನ್ನು ಯೆಹೂದ್ಯರಿಗಾಗಿ ಮಾತ್ರ ಮೀಸಲಾಗಿದ್ದ ಅಂಗಣಕ್ಕೆ ಕರೆದುಕೊಂಡು ಬಂದಿದ್ದನು ಎಂದು ಭಾವಿಸಿದರು. * (ಅ. ಕೃತ್ಯಗಳು 21:​28, 29) ಕಟ್ಟುನಿಟ್ಟಾಗಿ ಹೇಳುವುದಾದರೆ, ದೇವಾಲಯದ ಅಂಗಣದೊಳಕ್ಕೆ ಅತಿಕ್ರಮ ಪ್ರವೇಶ ಮಾಡಿರುವವನೆಂದು ಆಪಾದಿಸಲ್ಪಟ್ಟಿರುವುದು ತ್ರೊಫಿಮನ ಕುರಿತಾಗಿತ್ತು. ಪೌಲನ ಮೇಲೆ ಆರೋಪಿಸಲ್ಪಟ್ಟಿರುವ ಕೃತ್ಯವನ್ನು, ಅತಿಕ್ರಮ ಪ್ರವೇಶಮಾಡುವ ವ್ಯಕ್ತಿಗೆ ನೀಡುವ ಒತ್ತಾಸೆಯೋಪಾದಿ ಅಥವಾ ದುಷ್ಕಾರ್ಯದಲ್ಲಿ ನೆರವು ನೀಡಿದ್ದಕ್ಕೆ ಸಮಾನವೆಂದು ಯೆಹೂದ್ಯರು ಅರ್ಥೈಸಿದ್ದಲ್ಲಿ, ಅದನ್ನು ಸಹ ಮರಣದಂಡನೆಗೆ ಅರ್ಹವಾದ ಅಪರಾಧದೋಪಾದಿ ಪರಿಗಣಿಸಸಾಧ್ಯವಿತ್ತು. ಮತ್ತು ರೋಮ್‌ ಈ ಅಪರಾಧಕ್ಕಾಗಿ ಮರಣದಂಡನೆಯ ಶಿಕ್ಷೆಯನ್ನು ವಿಧಿಸಲು ಅಧಿಕೃತವಾಗಿ ಸಮ್ಮತಿಸಿದಂತೆ ತೋರುತ್ತಿತ್ತು. ಆದುದರಿಂದ, ಲೂಸ್ಯನಿಗೆ ಬದಲಾಗಿ ಯೆಹೂದಿ ದೇವಾಲಯದ ಪೊಲೀಸರಿಂದ ಪೌಲನು ಬಂಧಿಸಲ್ಪಡುತ್ತಿದ್ದಲ್ಲಿ, ಯಾವುದೇ ಸಮಸ್ಯೆಯಿಲ್ಲದೆ ಹಿರೀಸಭೆಯು ಅವನನ್ನು ವಿಚಾರಣೆಗೊಪ್ಪಿಸಿ ಶಿಕ್ಷೆಗೊಳಪಡಿಸಸಾಧ್ಯವಿತ್ತು.

ಪೌಲನು ಏನನ್ನು ಕಲಿಸಿದನೋ ಅದು ಯೆಹೂದಿಮತವಲ್ಲ ಅಥವಾ ಕಾನೂನುಬದ್ಧ ಧರ್ಮವಲ್ಲ (ರಿಲಿಜಿಯೋ ಲಿಕಿಟಾ) ಎಂದು ಯೆಹೂದ್ಯರು ತರ್ಕಿಸುತ್ತಿದ್ದರು. ಅದಕ್ಕೆ ಬದಲಾಗಿ, ಅವನ ಕಲಿಸುವಿಕೆಯನ್ನು ಕಾನೂನಿಗೆ ವಿರುದ್ಧವಾದದ್ದಾಗಿ, ರಾಜಕೀಯ ವ್ಯವಸ್ಥೆಯನ್ನು ಉರುಳಿಸುವಂಥದ್ದಾಗಿ ಪರಿಗಣಿಸುವ ಆವಶ್ಯಕತೆಯಿತ್ತು.

ಪೌಲನು “ಲೋಕದಲ್ಲಿ ಎಲ್ಲೆಲ್ಲಿಯೂ ಇರುವ ಎಲ್ಲಾ ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವ”ನಾಗಿದ್ದಾನೆಂದು ಸಹ ಅವರು ವಾದಿಸಿದರು. (ಅ. ಕೃತ್ಯಗಳು 24:5) ಇತ್ತೀಚೆಗೆ, “ಲೋಕದಾದ್ಯಂತ ವಿಶ್ವವ್ಯಾಪಿ ಪಿಡುಗನ್ನು ಉಂಟುಮಾಡಿದ್ದಕ್ಕಾಗಿ” ಕ್ಲೌದ್ಯ ಚಕ್ರವರ್ತಿಯು ಅಲೆಕ್ಸಾಂಡ್ರಿಯದ ಯೆಹೂದ್ಯರನ್ನು ಬಹಿರಂಗವಾಗಿ ಖಂಡಿಸಿದನು. ಈ ಹೋಲಿಕೆಯು ಗಮನಾರ್ಹವಾದದ್ದಾಗಿದೆ. “ಆ ಆರೋಪವು, ಕ್ಲೌದ್ಯ ಚಕ್ರವರ್ತಿಯ ಚಕ್ರಾಧಿಪತ್ಯದ ಸಮಯದಲ್ಲಿ ಅಥವಾ ನೀರೋನ ಆರಂಭದ ವರ್ಷಗಳಲ್ಲಿ ಒಬ್ಬ ಯೆಹೂದ್ಯನ ವಿರುದ್ಧ ಎಬ್ಬಿಸಲ್ಪಟ್ಟದ್ದಾಗಿತ್ತು” ಎಂದು ಇತಿಹಾಸಕಾರ ಎ. ಎನ್‌. ಶರ್‌ವನ್‌-ವೈಟ್‌ ಹೇಳುತ್ತಾರೆ. “ಪೌಲನ ಸಾರುವಿಕೆಯನ್ನು, ಆ ಸಾಮ್ರಾಜ್ಯದ ಯೆಹೂದಿ ಜನಾಂಗದಾದ್ಯಂತ ನಾಗರಿಕ ದೊಂಬಿಯನ್ನು ಉಂಟುಮಾಡುವುದಕ್ಕೆ ಸಮಾನವಾಗಿ ಪರಿಗಣಿಸುವಂತೆ ಆ ಯೆಹೂದ್ಯರು ದೇಶಾಧಿಪತಿಯನ್ನು ಒಡಂಬಡಿಸಲು ಪ್ರಯತ್ನಿಸುತ್ತಿದ್ದರು. ಪೂರ್ಣವಾಗಿ ಧಾರ್ಮಿಕ ಆರೋಪಗಳ ಆಧಾರದ ಮೇಲೆ ಒಬ್ಬನನ್ನು ಅಪರಾಧಿಯೆಂದು ರುಜುಪಡಿಸಲು ದೇಶಾಧಿಪತಿಗಳು ಒಪ್ಪಿಕೊಳ್ಳುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆದುದರಿಂದ, ಆ ಯೆಹೂದ್ಯರು ಈ ಧಾರ್ಮಿಕ ಆರೋಪಕ್ಕೆ ರಾಜಕೀಯ ತಿರುವನ್ನು ನೀಡಲು ಪ್ರಯತ್ನಿಸಿದರು.”

ಪೌಲನಾದರೋ ಒಂದಾದ ನಂತರ ಇನ್ನೊಂದು ಅಂಶವನ್ನು ಉಪಯೋಗಿಸಿ ತನ್ನನ್ನು ಸಮರ್ಥಿಸಿಕೊಂಡನು. ‘ನಾನು ಯಾವುದೇ ದಂಗೆಯನ್ನು ಎಬ್ಬಿಸಿಲ್ಲ. ಅವರು ಯಾವುದನ್ನು ಒಂದು “ಪಾಷಂಡಮತ”ವೆಂದು ಕರೆಯುತ್ತಾರೋ ಆ ಮತಕ್ಕೆ ನಾನು ಸೇರಿದವನಾಗಿದ್ದೇನೆ ಎಂಬುದು ನಿಜವಾದರೂ, ಒಂದು ಮತಕ್ಕೆ ಸೇರಿರುವುದು ಯೆಹೂದಿ ಆಜ್ಞೆಗಳನ್ನು ಪಾಲಿಸುವುದನ್ನು ಅರ್ಥೈಸುತ್ತದೆ. ಆಸ್ಯಸೀಮೆಯಿಂದ ಬಂದ ಕೆಲವು ಯೆಹೂದ್ಯರು ಈ ರೀತಿಯ ಗೊಂದಲವನ್ನು ಉದ್ರೇಕಿಸಿದರು. ಅವರು ನನ್ನ ವಿರುದ್ಧ ಆಪಾದಿಸಲು ಬಯಸುವಲ್ಲಿ, ತಪ್ಪುಹೊರಿಸುವುದಕ್ಕೆ ಅವರೇ ಇಲ್ಲಿಗೆ ಬರಬೇಕಾಗಿತ್ತು.’ ಬೇಕೆಂದೇ ಪೌಲನು ಆಪಾದನೆಗಳನ್ನು ಯೆಹೂದ್ಯರ ಮಧ್ಯೆ ಇರುವ ಧಾರ್ಮಿಕ ವಾಗ್ವಾದಕ್ಕೆ ಮಾತ್ರ ಸೀಮಿತಗೊಳಿಸಿದನು. ಏಕೆಂದರೆ ಈ ವಿಷಯದಲ್ಲಿ ರೋಮ್‌ಗೆ ವಿಚಾರಣಾಧಿಕಾರವಿರಲಿಲ್ಲ. ಈಗಾಗಲೇ ಮೊಂಡತನದಿಂದ ವರ್ತಿಸುತ್ತಿರುವ ಯೆಹೂದ್ಯರನ್ನು ಇನ್ನಷ್ಟು ಉದ್ರೇಕಿಸದಿರುವಂತೆ ಎಚ್ಚರಿಕೆ ವಹಿಸುತ್ತಾ, ಇನ್ನೂ ಹೆಚ್ಚಿನ ವಿಚಾರಣೆಯು ನಡೆಯದಂಥ ರೀತಿಯ ಕಾನೂನುಬದ್ಧ ಸನ್ನಿವೇಶವನ್ನು ಕಾರ್ಯತಃ ಜಾರಿಗೆ ತರುವ ಮೂಲಕ ಫೇಲಿಕ್ಸನು ಮೊಕದ್ದಮೆಯನ್ನು ಮುಂದೂಡಿದನು. ತಮಗೆ ವಿಚಾರಣಾಧಿಕಾರವಿದೆ ಎಂದು ವಾದಿಸಿದಂತಹ ಯೆಹೂದ್ಯರ ಕೈಗೂ ಪೌಲನು ಒಪ್ಪಿಸಲ್ಪಡಲಿಲ್ಲ, ರೋಮಿನ ನಿಯಮಕ್ಕನುಸಾರ ನ್ಯಾಯತೀರ್ಪನ್ನೂ ಪಡೆದುಕೊಳ್ಳಲಿಲ್ಲ, ಅಥವಾ ಅವನು ಬಿಡುಗಡೆಯನ್ನೂ ಹೊಂದಲಿಲ್ಲ. ಅಷ್ಟುಮಾತ್ರವಲ್ಲ, ನ್ಯಾಯತೀರ್ಪನ್ನು ನೀಡುವಂತೆ ಫೇಲಿಕ್ಸನನ್ನು ಒತ್ತಾಯಿಸಸಾಧ್ಯವಿರಲಿಲ್ಲ, ಮತ್ತು ಈ ಮೊಕದ್ದಮೆಯನ್ನು ವಿಳಂಬಿಸಲು ಫೇಲಿಕ್ಸನಿಗೆ ಬೇರೆ ಬೇರೆ ಉದ್ದೇಶಗಳಿದ್ದವು. ಮೊದಲನೆಯದಾಗಿ ಅವನು ಯೆಹೂದ್ಯರ ಅನುಗ್ರಹವನ್ನು ಪಡೆದುಕೊಳ್ಳಲು ಬಯಸುತ್ತಿದ್ದನು, ಎರಡನೆಯದಾಗಿ ಪೌಲನು ತನಗೆ ಲಂಚವನ್ನು ಕೊಡಬಹುದೆಂದು ಸಹ ಅವನು ನಿರೀಕ್ಷಿಸುತ್ತಿದ್ದನು.​—ಅ. ಕೃತ್ಯಗಳು 24:​10-19, 26. *

ಪೋರ್ಕಿಯ ಫೆಸ್ತನ ಕೆಳಗೆ ತಿರುವು

ಸುಮಾರು ಎರಡು ವರ್ಷಗಳ ನಂತರ, ಅಂದರೆ ಹೊಸ ದೇಶಾಧಿಪತಿಯಾದ ಪೋರ್ಕಿಯ ಫೆಸ್ತನು ಕಾರ್ಯಭಾರವನ್ನು ವಹಿಸಿಕೊಂಡ ಬಳಿಕ, ಯೆರೂಸಲೇಮಿನಲ್ಲಿ ಯೆಹೂದ್ಯರು ತಮ್ಮ ಆರೋಪಗಳನ್ನು ನವೀಕರಿಸಿದರು ಮತ್ತು ಪೌಲನನ್ನು ತಮ್ಮ ನ್ಯಾಯಾಧಿಕಾರಕ್ಕೆ ಒಪ್ಪಿಸಿಕೊಡುವಂತೆ ಕೇಳಿಕೊಂಡರು. ಆದರೆ ಫೆಸ್ತನು ದೃಢವಾಗಿ ಹೀಗೆ ಪ್ರತ್ಯುತ್ತರಿಸಿದನು: “ಆಪಾದಿತ ಮನುಷ್ಯನು ತನ್ನ ಮೇಲೆ ಆಪಾದನೆಯನ್ನು ಹೊರಿಸುವವರನ್ನು ಮುಖಾಮುಖಿಯಾಗಿ ಭೇಟಿಯಾಗಿ, ಆ ಆಪಾದನೆಯ ವಿಷಯದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವ ಮಾತುಗಳನ್ನಾಡಲು ಅವಕಾಶ ಸಿಗುವ ಮುಂಚೆ, ಆ ವ್ಯಕ್ತಿಯನ್ನು ಬೇರೆಯವರಿಗೆ ಒಪ್ಪಿಸಿಕೊಡುವುದು ರೋಮ್‌ನ ಕಾರ್ಯನೀತಿಯಲ್ಲ.” ಇತಿಹಾಸಕಾರನಾದ ಹ್ಯಾರಿ ಡಬ್ಲ್ಯೂ. ಟಾಶ್‌ರ ಹೀಗೆ ದಾಖಲಿಸುತ್ತಾನೆ: “ರೋಮ್‌ನ ಒಬ್ಬ ಪ್ರಜೆಯ ವಿರುದ್ಧ ಕಾನೂನುಬಾಹಿರ ಗಲ್ಲಿಗೇರಿಸುವಿಕೆಯ ಯೋಜನೆಯು ನಡೆಯುತ್ತಿದೆ ಎಂಬುದನ್ನು ಫೆಸ್ತನು ಸುಲಭವಾಗಿ ಗ್ರಹಿಸಿದನು.” ಆದುದರಿಂದ, ಯೆಹೂದ್ಯರು ತಮ್ಮ ತಪ್ಪುಹೊರಿಸುವಿಕೆಯನ್ನು ಕೈಸರೈಯದಲ್ಲೇ ಪ್ರಸ್ತುತಪಡಿಸುವಂತೆ ಅವರಿಗೆ ಹೇಳಲಾಯಿತು.​—ಅ. ಕೃತ್ಯಗಳು 25:​1-6, 16.

ಅಲ್ಲಿ ಯೆಹೂದ್ಯರು, ಪೌಲನು “ಇನ್ನು ಮೇಲೆ ಬದುಕಬಾರದು” ಎಂದು ಕೂಗಿಹೇಳಿದರು. ಆದರೂ ಅವರು ಯಾವುದೇ ಪುರಾವೆಯನ್ನು ಸಾಬೀತುಪಡಿಸಲಿಲ್ಲ, ಮತ್ತು ಪೌಲನು ಮರಣದಂಡನೆಗೆ ಕಾರಣವಾದದ್ದೇನನ್ನೂ ಮಾಡಲಿಲ್ಲ ಎಂಬುದು ಫೆಸ್ತನಿಗೆ ತಿಳಿದುಬಂತು. “ಅವರ ಮತದ ವಿಷಯದಲ್ಲಿಯೂ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು. ಆ ಯೇಸು ಜೀವಿತನಾಗಿದ್ದಾನೆಂದು ಪೌಲನು ಹೇಳಿದನು” ಎಂದು ಫೆಸ್ತನು ಇನ್ನೊಬ್ಬ ರಾಜನಿಗೆ ವಿವರಿಸಿದನು.​—ಅ. ಕೃತ್ಯಗಳು 25:​7, 18, 19, 24, 25.

ಪೌಲನು ಯಾವುದೇ ರೀತಿಯ ರಾಜಕೀಯ ಆಪಾದನೆಯ ವಿಷಯದಲ್ಲಿ ನಿರಪರಾಧಿಯಾಗಿದ್ದನು ಎಂಬುದಂತೂ ಸ್ಪಷ್ಟ. ಆದರೂ ಈ ಧಾರ್ಮಿಕ ಕಲಹದಲ್ಲಿ, ಈ ವಿಷಯವನ್ನು ನಿರ್ವಹಿಸಲು ಸಮರ್ಥವಾಗಿರುವ ಏಕಮಾತ್ರ ನ್ಯಾಯಾಲಯವು ತಮ್ಮದೇ ಆಗಿದೆ ಎಂದು ಯೆಹೂದ್ಯರು ವಾಗ್ವಾದಿಸಿದರು. ಈ ವಿಷಯಗಳಲ್ಲಿ ನ್ಯಾಯತೀರ್ಪನ್ನು ಪಡೆದುಕೊಳ್ಳಲಿಕ್ಕಾಗಿ ಪೌಲನು ಯೆರೂಸಲೇಮಿಗೆ ಹೋಗಲಿದ್ದನೋ? ನೀನು ಯೆರೂಸಲೇಮಿಗೆ ಹೋಗುವಿಯೋ ಎಂದು ಫೆಸ್ತನು ಪೌಲನನ್ನು ಕೇಳಿದನಾದರೂ, ಇದು ಖಂಡಿತವಾಗಿಯೂ ಅನುಚಿತವಾದ ಒಂದು ಪ್ರಸ್ತಾಪವಾಗಿತ್ತು. ಎಲ್ಲಿ ಆಪಾದನೆ ಹೊರಿಸಿರುವವರು ನ್ಯಾಯಾಧೀಶರಾಗಿ ಕಾರ್ಯನಡಿಸಲಿದ್ದರೋ ಆ ಯೆರೂಸಲೇಮಿಗೆ ಹಿಂದಕ್ಕೆ ಹೋಗುವುದು, ಪೌಲನು ಯೆಹೂದ್ಯರ ಕೈಗೆ ಒಪ್ಪಿಸಲ್ಪಡುವುದನ್ನು ಅರ್ಥೈಸಸಾಧ್ಯವಿತ್ತು. ಆದುದರಿಂದ ಪೌಲನು ಹೇಳಿದ್ದು: “ನಾನು ಚಕ್ರವರ್ತಿಯ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ಯೆಹೂದ್ಯರಿಗೆ ನಾನು ಅನ್ಯಾಯವೇನೂ ಮಾಡಲಿಲ್ಲ . . . ಇವರ ಮೇಲಣ ದಯೆಯಿಂದ ನನ್ನನ್ನು ಒಪ್ಪಿಸಿಕೊಡುವದಕ್ಕೆ ಒಬ್ಬರಿಗೂ ಅಧಿಕಾರವಿಲ್ಲ. ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ”!​—ಅ. ಕೃತ್ಯಗಳು 25:​10, 11, 20.

ರೋಮಿನ ಪ್ರಜೆಯೊಬ್ಬನು ಈ ಮಾತುಗಳನ್ನು ನುಡಿಯುವುದು, ಎಲ್ಲ ರೀತಿಯ ಪ್ರಾಂತೀಯ ನ್ಯಾಯಾಧಿಕಾರವನ್ನು ತಾತ್ಕಾಲಕ್ಕೆ ತಡೆಹಿಡಿಯಿತು. ಅವನ ಅಪ್ಪೀಲ್‌ (ಪ್ರೊವೊಕಾಟ್ಯೊ) ಮಾಡುವಿಕೆಯ ಹಕ್ಕು “ವಿಶ್ವಾಸಾರ್ಹವಾದದ್ದಾಗಿತ್ತು, ಅರ್ಥಮಾಡಿಕೊಳ್ಳತಕ್ಕದ್ದಾಗಿತ್ತು ಮತ್ತು ಪರಿಣಾಮಕಾರಿಯಾಗಿತ್ತು.” ಆದುದರಿಂದ, ತನ್ನ ಸಭೆಯವರ ಸಂಗಡ ಶಾಸ್ತ್ರತಂತ್ರಗಳ ಕುರಿತು ಆಲೋಚನೆಮಾಡಿದ ನಂತರ ಫೆಸ್ತನು ಘೋಷಿಸಿದ್ದು: ‘ನೀನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಅಂದಿಯಲ್ಲಾ, ಚಕ್ರವರ್ತಿಯ ಬಳಿಗೇ ನೀನು ಹೋಗಬೇಕು.’​—ಅ. ಕೃತ್ಯಗಳು 25:12.

ಪೌಲನನ್ನು ತನ್ನಿಂದ ತೊಲಗಿಸುವುದು ಫೆಸ್ತನಿಗೆ ಇಷ್ಟಕರವಾದ ಸಂಗತಿಯಾಗಿತ್ತು. ಕೆಲವು ದಿನಗಳ ಬಳಿಕ ಅವನು IIನೆಯ ಹೆರೋದ ಅಗ್ರಿಪ್ಪನ ಮುಂದೆ ಒಪ್ಪಿಕೊಂಡಂತೆ, ಈ ಮೊಕದ್ದಮೆಯು ಫೆಸ್ತನನ್ನು ಕಂಗೆಡಿಸಿತು. ಚಕ್ರವರ್ತಿಗೆ ಕಳುಹಿಸಲಿಕ್ಕಾಗಿ ಫೆಸ್ತನು ಮೊಕದ್ದಮೆಯ ಒಂದು ಹೇಳಿಕೆಯನ್ನು ಸಿದ್ಧಪಡಿಸಬೇಕಾಗಿತ್ತು, ಆದರೆ ಫೆಸ್ತನಿಗೆ ಈ ಮೊಕದ್ದಮೆಗಳು ಅರ್ಥಮಾಡಿಕೊಳ್ಳಲಾಗದಂಥ ಜಟಿಲ ಯೆಹೂದಿ ನಿಯಮವನ್ನು ಒಳಗೂಡಿದ್ದವು. ಆದರೆ ಅಗ್ರಿಪ್ಪರಾಜನು ಇಂಥ ವಿಷಯಗಳಲ್ಲಿ ತುಂಬ ಪರಿಣತನಾಗಿದ್ದನು. ಆದುದರಿಂದ, ಈ ವಿಷಯದಲ್ಲಿ ಅವನು ಆಸಕ್ತಿಯನ್ನು ವ್ಯಕ್ತಪಡಿಸಿದಾಗ, ಕೋರಿಕೆಯ ಪತ್ರವನ್ನು ಸಿದ್ಧಪಡಿಸಲು ಸಹಾಯಮಾಡುವಂತೆ ಅವನನ್ನು ಕೇಳಿಕೊಳ್ಳಲಾಯಿತು. ಅಗ್ರಿಪ್ಪರಾಜನ ಮುಂದೆ ಪೌಲನು ಮಾಡಿದ ಪ್ರತಿವಾದವನ್ನು ಅರ್ಥಮಾಡಿಕೊಳ್ಳಲು ಅಶಕ್ತನಾದ ಫೆಸ್ತನು ಉದ್ಗರಿಸಿದ್ದು: “ಪೌಲನೇ, ನೀನು ಮರುಳಾಗಿದ್ದೀ; ನೀನು ಬಹಳವಾಗಿ ಮಾಡುವ ಶಾಸ್ತ್ರವಿಚಾರವು ನಿನ್ನನ್ನು ಮರುಳುಗೊಳಿಸುತ್ತದೆ.” ಆದರೆ ಅಗ್ರಿಪ್ಪರಾಜನು ಎಲ್ಲವನ್ನೂ ಪರಿಪೂರ್ಣವಾಗಿ ಅರ್ಥಮಾಡಿಕೊಂಡನು. “ಅಲ್ಪಪ್ರಯತ್ನದಿಂದ ನನ್ನನ್ನು ಕ್ರೈಸ್ತನಾಗುವದಕ್ಕೆ ಒಡಂಬಡಿಸುತ್ತೀಯಾ?” ಎಂದು ಅವನು ಕೇಳಿದನು. ಪೌಲನ ವಾಗ್ವಾದಗಳ ಕುರಿತು ಫೆಸ್ತ ಹಾಗೂ ಅಗ್ರಿಪ್ಪರಿಗೆ ಏನೇ ಅನಿಸಿರಲಿ, ಅವನು ನಿರಪರಾಧಿಯಾಗಿದ್ದಾನೆ ಎಂಬುದನ್ನು ಅವರು ಒಪ್ಪಿಕೊಂಡರು ಮತ್ತು ಒಂದುವೇಳೆ ಪೌಲನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳದಿರುತ್ತಿದ್ದಲ್ಲಿ, ಅವರೇ ಅವನನ್ನು ಬಿಡುಗಡೆಮಾಡಸಾಧ್ಯವಿತ್ತು.​—ಅ. ಕೃತ್ಯಗಳು 25:​13-27; 26:​24-32.

ನ್ಯಾಯನಿರ್ಣಾಯಕ ಪರಂಪರೆಯ ಅಂತ್ಯ

ರೋಮ್‌ಗೆ ಬಂದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಮುಖರನ್ನು ತನ್ನ ಬಳಿಗೆ ಕರೆಸಿಕೊಂಡನು. ಅವರಿಗೆ ಸಾರಲಿಕ್ಕಾಗಿ ಮಾತ್ರವಲ್ಲ ತನ್ನ ಕುರಿತು ಅವರಿಗೆ ಏನು ತಿಳಿದಿದೆ ಎಂಬುದನ್ನು ಕಂಡುಕೊಳ್ಳಲಿಕ್ಕಾಗಿಯೂ ಅವನು ಹೀಗೆ ಮಾಡಿದನು. ಅದು ಅವನ ಫಿರ್ಯಾದಿಗಳ ಹೇತುಗಳೇನಾಗಿದ್ದವು ಎಂಬುದನ್ನು ಬಯಲುಪಡಿಸಿದ್ದಿರಬಹುದು. ಒಂದು ಮೊಕದ್ದಮೆಯ ಕಾನೂನು ಕ್ರಮವನ್ನು ತೆಗೆದುಕೊಳ್ಳುವಾಗ, ಯೆರೂಸಲೇಮಿನಲ್ಲಿರುವ ಅಧಿಕಾರಿಗಳು ರೋಮ್‌ನ ಯೆಹೂದ್ಯರ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ಸರ್ವಸಾಮಾನ್ಯವಾಗಿತ್ತು. ಆದರೆ ಅವನ ಕುರಿತು ತಮಗೆ ಯಾವುದೇ ಕಾಗದಗಳು ಬಂದಿಲ್ಲವೆಂದು ಅವರು ಹೇಳಿದ್ದನ್ನು ಪೌಲನು ಕೇಳಿಸಿಕೊಂಡನು. ವಿಚಾರಣೆಗಾಗಿ ಕಾಯುತ್ತಿರುವಾಗ, ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳುವಂತೆ ಮತ್ತು ಸ್ವತಂತ್ರವಾಗಿ ಸಾರುವಂತೆ ಪೌಲನಿಗೆ ಅನುಮತಿ ಸಿಕ್ಕಿತು. ಇಂತಹ ಸೌಮ್ಯತೆಯು, ರೋಮಿನವರ ದೃಷ್ಟಿಯಲ್ಲಿ ಪೌಲನು ಒಬ್ಬ ನಿರಪರಾಧಿಯಾಗಿದ್ದನು ಎಂಬುದನ್ನು ಅರ್ಥೈಸಿದ್ದಿರಬಹುದು.​—ಅ. ಕೃತ್ಯಗಳು 28:​17-31.

ಪೌಲನು ಇನ್ನೂ ಎರಡು ವರ್ಷಗಳ ವರೆಗೆ ಬಂಧನದಲ್ಲೇ ಉಳಿದನು. ಏಕೆ? ಬೈಬಲು ಯಾವುದೇ ವಿವರಣೆಯನ್ನು ಕೊಡುವುದಿಲ್ಲ. ಆಪಾದನೆಗಳನ್ನು ಮುಂದುವರಿಸಲಿಕ್ಕಾಗಿ ಅವನ ಫಿರ್ಯಾದಿಗಳು ಬರುವ ತನಕ ಸಾಮಾನ್ಯವಾಗಿ ಮೇಲ್ಮನವಿಯು ಮಾಡಲ್ಪಡುತ್ತದೆ, ಆದರೆ ತಮ್ಮ ಮೊಕದ್ದಮೆಯ ದೌರ್ಬಲ್ಯವನ್ನು ಗ್ರಹಿಸಿದ ಯೆರೂಸಲೇಮಿನ ಯೆಹೂದ್ಯರು, ಆಪಾದನೆಯನ್ನು ಮುಂದುವರಿಸಲು ಆಗಮಿಸಲೇ ಇಲ್ಲ. ಸಾಧ್ಯವಿರುವಷ್ಟು ದೀರ್ಘ ಸಮಯದ ವರೆಗೆ ಪೌಲನನ್ನು ಮೌನವಾಗಿರಿಸುವ ಪರಿಣಾಮಕಾರಿ ವಿಧವು, ಯೆರೂಸಲೇಮಿನ ಯೆಹೂದ್ಯರು ಆಗಮಿಸದಿರುವುದೇ ಆಗಿದ್ದಿರಬಹುದು. ಯಾವುದೇ ಕಾರಣಕ್ಕಾಗಿ ಪೌಲನು ಇನ್ನೂ ಎರಡು ವರ್ಷಗಳ ವರೆಗೆ ಸೆರೆಮನೆಯಲ್ಲಿದ್ದಿರಲಿ, ಅವನು ನೀರೋನ ಮುಂದೆ ಹಾಜರಾದನು, ನಿರಪರಾಧಿಯೆಂದು ಘೋಷಿಸಲ್ಪಟ್ಟನು ಮತ್ತು ಅವನು ಸೆರೆಹಿಡಿಯಲ್ಪಟ್ಟು ಸುಮಾರು ಐದು ವರ್ಷಗಳ ಬಳಿಕ, ತನ್ನ ಮಿಷನೆರಿ ಚಟುವಟಿಕೆಗಳನ್ನು ಪುನಃ ಆರಂಭಿಸುವಂತೆ ಕೊನೆಗೂ ಬಿಡುಗಡೆಮಾಡಲ್ಪಟ್ಟನು ಎಂಬುದಂತೂ ಸುವ್ಯಕ್ತ.​—ಅ. ಕೃತ್ಯಗಳು 27:24.

ಸತ್ಯದ ವಿರೋಧಿಗಳು ಬಹಳ ಸಮಯದಿಂದಲೂ ಕ್ರೈಸ್ತ ಸಾರುವ ಕೆಲಸವನ್ನು ತಡೆಯಲಿಕ್ಕಾಗಿ ‘ಧರ್ಮಶಾಸ್ತ್ರದ ನೆವನದಿಂದ ಕೇಡುಕಲ್ಪಿಸಲು’ ಪ್ರಯತ್ನಿಸಿದ್ದಾರೆ. ಇದು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಾರದು. ಏಕೆಂದರೆ, ಯೇಸು ಹೇಳಿದ್ದು: “ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು.” (ಕೀರ್ತನೆ 94:20; ಯೋಹಾನ 15:20) ಆದರೂ, ಇಡೀ ಲೋಕಕ್ಕೆ ಸುವಾರ್ತೆಯನ್ನು ತಿಳಿಸುವ ಸ್ವಾತಂತ್ರ್ಯದ ಖಾತ್ರಿಯನ್ನು ಸಹ ಯೇಸು ನೀಡುತ್ತಾನೆ. (ಮತ್ತಾಯ 24:14) ಹೀಗೆ, ಅಪೊಸ್ತಲ ಪೌಲನು ಹಿಂಸೆ ಹಾಗೂ ವಿರೋಧವನ್ನು ಎದುರಿಸಿ ನಿಂತಂತೆಯೇ, ಇಂದಿನ ಯೆಹೋವನ ಸಾಕ್ಷಿಗಳು ‘ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುತ್ತಾರೆ ಮತ್ತು ಅದನ್ನು ನ್ಯಾಯಬದ್ಧವಾಗಿ ಸ್ಥಾಪಿಸುತ್ತಾರೆ.’​—ಫಿಲಿಪ್ಪಿ 1:​7, NW.

[ಪಾದಟಿಪ್ಪಣಿಗಳು]

^ ಪ್ಯಾರ. 14 ಮೂರು ಮೊಳದಷ್ಟು ಎತ್ತರವಿರುವ ಕಲ್ಲಿನ ವಿಸ್ತಾರವಾದ ಹೂಜಿಗಂಬಗಳ ಸಾಲು, ಅನ್ಯರ ಅಂಗಣವನ್ನು ಒಳಾಂಗಣದಿಂದ ವಿಭಾಗಿಸಿತ್ತು. ಈ ಗೋಡೆಯ ಮೇಲೆ ನಿರ್ದಿಷ್ಟ ಅಂತರದಲ್ಲಿ, ಕೆಲವು ಗ್ರೀಕ್‌ ಭಾಷೆಯ ಹಾಗೂ ಕೆಲವು ಲ್ಯಾಟಿನ್‌ ಭಾಷೆಯ ಈ ರೀತಿಯ ಎಚ್ಚರಿಕೆಗಳು ಕಂಡುಬರುತ್ತಿದ್ದವು: “ಯಾವ ಪರದೇಶಸ್ಥನೂ ಈ ತಡೆಗಟ್ಟಿನಿಂದ ಮತ್ತು ಪವಿತ್ರಾಲಯದ ಸುತ್ತಲಿರುವ ಬೇಲಿಯಿಂದ ಒಳಗೆ ಪ್ರವೇಶಿಸಲು ಪ್ರಯತ್ನಿಸದಿರಲಿ. ಹೀಗೆ ಅತಿಕ್ರಮ ಪ್ರವೇಶ ಮಾಡುವ ಯಾರನ್ನಾದರೂ ಹಿಡಿಯುವಲ್ಲಿ, ಇದರ ಪರಿಣಾಮವಾಗಿ ಅವನು ತನ್ನ ಮರಣಕ್ಕೆ ತಾನೇ ಜವಾಬ್ದಾರನಾಗಿರುವನು.”

^ ಪ್ಯಾರ. 17 ಇದು ಖಂಡಿತವಾಗಿಯೂ ಕಾನೂನಿಗೆ ವಿರುದ್ಧವಾದದ್ದಾಗಿತ್ತು. ಒಂದು ಮೂಲವು ಹೇಳುವುದು: “ಲೆಕ್ಸ್‌ ರೆಪೆಟೂನ್ಡಾರಮ್‌ ಎಂಬ ಹಣಸುಲಿಗೆಮಾಡುವುದರ ಕುರಿತಾದ ನಿಯಮದ ಕಟ್ಟುಪಾಡುಗಳ ಕೆಳಗೆ, ಅಧಿಕಾರ ಅಥವಾ ಆಡಳಿತದ ಸ್ಥಾನದಲ್ಲಿರುವ ಯಾರೇ ಆಗಲಿ, ಒಬ್ಬ ಮನುಷ್ಯನನ್ನು ಬಂಧಿಸಲಿಕ್ಕಾಗಿ ಅಥವಾ ಬಿಡುಗಡೆಮಾಡಲಿಕ್ಕಾಗಿ, ನ್ಯಾಯತೀರ್ಪನ್ನು ನೀಡಲಿಕ್ಕಾಗಿ ಅಥವಾ ನೀಡದಿರಲಿಕ್ಕಾಗಿ, ಇಲ್ಲವೆ ಒಬ್ಬ ಸೆರೆವಾಸಿಯನ್ನು ಬಿಡುಗಡೆಮಾಡಲಿಕ್ಕಾಗಿ ಲಂಚವನ್ನು ಬಯಸುವುದು ಅಥವಾ ಸ್ವೀಕರಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿತ್ತು.”