ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಾನು ಯಾರು ಎಂದು ಜನರು ಹೇಳುತ್ತಾರೆ?’

‘ನಾನು ಯಾರು ಎಂದು ಜನರು ಹೇಳುತ್ತಾರೆ?’

‘ನಾನು ಯಾರು ಎಂದು ಜನರು ಹೇಳುತ್ತಾರೆ?’

ಪುನಃ ಒಮ್ಮೆ ಕ್ರಿಸ್ಮಸ್‌ ಕಾಲವು ಬಂದಿದೆ. ಲೋಕದಾದ್ಯಂತ ಜನರು ಜನ್ಮದಿನವೊಂದನ್ನು ಆಚರಿಸಲು ಬಯಸುತ್ತಾರೆ. ಯಾರ ಜನ್ಮದಿನವನ್ನು? ಅದು ದೇವಕುಮಾರನದ್ದೋ ಅಥವಾ ಮೊದಲನೆಯ ಶತಮಾನದಲ್ಲಿ ತನ್ನ ಕ್ಷೇತ್ರದಲ್ಲಿ ವ್ಯಾಪಕವಾಗಿದ್ದ ಧರ್ಮವನ್ನು ಸುಧಾರಿಸುವುದರಲ್ಲಿ ಆಸಕ್ತನಾಗಿದ್ದ ಕೇವಲ ಒಬ್ಬ ದೈವಭಕ್ತ ಯೆಹೂದ್ಯನದ್ದೋ? ಅದು ಬಡವರ ಸಂರಕ್ಷಕನು, ರೋಮನ್‌ ಸಾಮ್ರಾಜ್ಯಕ್ಕೆ ಬೆದರಿಕೆಯನ್ನೊಡ್ಡಿದ ಕಾರಣ ವಧಿಸಲ್ಪಟ್ಟ ಒಬ್ಬ ದಂಗೆಕೋರನ ಜನ್ಮದಿನವೊ ಅಥವಾ ಸ್ವಜ್ಞಾನವನ್ನು ಹಾಗೂ ಆಂತರಿಕ ವಿವೇಕವನ್ನು ಒತ್ತಿಹೇಳಿದಂಥ ಒಬ್ಬ ಸಾಧುವಿನ ಜನ್ಮದಿನವೋ? ‘ಯೇಸು ಕ್ರಿಸ್ತನು ನಿಜವಾಗಿ ಯಾರಾಗಿದ್ದನು?’ ಎಂಬುದನ್ನು ಪರ್ಯಾಲೋಚಿಸಲು ನಿಮಗೆ ಸಕಾರಣವಿದೆ.

ಆ ಪ್ರಶ್ನೆಗೆ ಜನರು ಕೊಡುವ ಪ್ರತ್ಯುತ್ತರ ಏನೆಂಬುದನ್ನು ತಿಳಿದುಕೊಳ್ಳಲು ಸ್ವತಃ ಯೇಸುವೇ ಆಸಕ್ತನಾಗಿದ್ದನು. “ಜನರು ನನ್ನನ್ನು ಯಾರು ಅನ್ನುತ್ತಾರೆ”? ಎಂದು ಅವನು ಒಮ್ಮೆ ತನ್ನ ಶಿಷ್ಯರನ್ನು ಕೇಳಿದನು. (ಮಾರ್ಕ 8:27) ಈ ಪ್ರಶ್ನೆಯೇಕೆ? ಏಕೆಂದರೆ ಅನೇಕರು ಈಗಾಗಲೇ ಅವನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟಿದ್ದರು. ಇತರರು, ಅವನನ್ನು ರಾಜನನ್ನಾಗಿ ಮಾಡಲು ತಾವು ಮಾಡಿದ ಪ್ರಯತ್ನವನ್ನು ಅವನು ತಳ್ಳಿಹಾಕಿದ ಕಾರಣ ಗಲಿಬಿಲಿಗೊಂಡಿದ್ದರು. ಮಾತ್ರವಲ್ಲದೆ, ತನ್ನ ವೈರಿಗಳು ಸವಾಲೊಡ್ಡಿದಾಗ, ತಾನು ಯಾರೆಂಬುದನ್ನು ರುಜುಪಡಿಸಲಿಕ್ಕಾಗಿ ಯೇಸು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಸಹ ತೋರಿಸಿರಲಿಲ್ಲ. ಆದುದರಿಂದ, ಆ ಪ್ರಶ್ನೆಯನ್ನು ಉತ್ತರಿಸುತ್ತಾ, ಅವನು ಯಾರೆಂಬುದರ ಕುರಿತಾಗಿ ಅಪೊಸ್ತಲರು ಏನು ಹೇಳಿದರು? ಜನರ ಮಧ್ಯೆ ಇದ್ದ ಕೆಲವು ಅಭಿಪ್ರಾಯಗಳನ್ನು ಅವರು ಹೇಳಿದರು: “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ, ಕೆಲವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ.” (ಮತ್ತಾಯ 16:13, 14) ಆದರೆ ಆಗ ಯೇಸುವಿನ ಕುರಿತಾಗಿ ಪ್ಯಾಲೆಸ್ಟೀನ್‌ನಲ್ಲಿ ಹಬ್ಬಿಕೊಂಡಿದ್ದ ನಿಂದಾತ್ಮಕ ಹೇಳಿಕೆಗಳ ಕುರಿತು, ಅಂದರೆ ಅವನನ್ನು ದೇವದೂಷಕ, ಮೋಸಗಾರ, ಸುಳ್ಳು ಪ್ರವಾದಿ ಮತ್ತು ಹುಚ್ಚ ಎಂದೂ ಕರೆಯಲಾಗುತ್ತಿದೆ ಎಂಬುದರ ಕುರಿತು ಅವರು ಹೇಳಲಿಲ್ಲ.

ಯೇಸುವಿನ ವಿವಿಧ ವೈಶಿಷ್ಟ್ಯಗಳು

ಯೇಸು ಅದೇ ಪ್ರಶ್ನೆಯನ್ನು ಇಂದು ಕೇಳುವುದಾದರೆ, ಆ ವಾಕ್ಯವನ್ನು ಬೇರೆ ರೀತಿಯಲ್ಲಿ ನಿರೂಪಿಸಿ, “ವಿದ್ವಾಂಸರು ನನ್ನನ್ನು ಯಾರು ಅನ್ನುತ್ತಾರೆ?” ಎಂದೂ ಕೇಳಬಹುದು. ಪುನಃ ಉತ್ತರವು ಇದೇ ಆಗಿರಬಹುದು: ಬೇರೆ ಬೇರೆ ರೀತಿಯ ಅಭಿಪ್ರಾಯಗಳಿವೆ. “ಯೇಸು, ವಿಭಿನ್ನ ಜನರು ಅನೇಕ ವಿಭಿನ್ನ ದಿಕ್ಕುಗಳಲ್ಲಿ ಓಡಿಸಿಕೊಂಡು ಹೋಗಿರುವ ಕುದುರೆಯಂತಿದ್ದಾನೆ,” ಎಂದು ಶಿಕಾಗೋ ವಿಶ್ವವಿದ್ಯಾನಿಲಯದ ಡೇವಿಡ್‌ ಟ್ರೇಸೀ ಹೇಳಿದರು. ಯೇಸು ಯಾರು ಎಂಬ ಪ್ರಶ್ನೆಗೆ ಉತ್ತರವನ್ನು ರೂಪಿಸುವುದರಲ್ಲಿ, ಕಳೆದ ಶತಮಾನದಾದ್ಯಂತ ವಿದ್ವಾಂಸರು ಬಹಳಷ್ಟು ಜಟಿಲವಾದ ಸಾಮಾಜಿಕ, ಮನುಷ್ಯಶಾಸ್ತ್ರೀಯ ಮತ್ತು ಸಾಹಿತ್ಯಾತ್ಮಕ ವಿಧಾನಗಳನ್ನು ಉಪಯೋಗಿಸಿದ್ದಾರೆ. ಕೊನೆಯಲ್ಲಿ, ಯೇಸು ನಿಜವಾಗಿಯೂ ಯಾರು ಎಂಬುದಾಗಿ ಅವರು ನಂಬುತ್ತಾರೆ?

ಐತಿಹಾಸಿಕ ಯೇಸು, ಪಶ್ಚಾತ್ತಾಪವನ್ನು ಉತ್ತೇಜಿಸುತ್ತಾ, ಲೋಕಾಂತ್ಯದ ಕುರಿತು ಪ್ರವಾದಿಸಿದಂಥ ಒಬ್ಬ ಯೆಹೂದಿ ಪ್ರವಾದಿಯಾಗಿದ್ದನೆಂದು ಕೆಲವು ವಿದ್ವಾಂಸರು ಇನ್ನೂ ವಾದಿಸುತ್ತಾರೆ. ಆದರೆ, ಅವರು ಅವನನ್ನು ದೇವರ ಮಗ, ಮೆಸ್ಸೀಯ ಮತ್ತು ವಿಮೋಚಕ ಎಂದು ಕರೆಯುವುದಿಲ್ಲ. ಅನೇಕರು ಅವನ ಸ್ವರ್ಗೀಯ ಮೂಲ ಮತ್ತು ಪುನರುತ್ಥಾನದ ಕುರಿತಾದ ಬೈಬಲ್‌ ದಾಖಲೆಯನ್ನು ಸಂದೇಹಿಸುವವರಾಗಿದ್ದಾರೆ. ಇತರರಿಗೆ, ಯೇಸು ತನ್ನ ಆದರ್ಶಪ್ರಾಯ ಜೀವನರೀತಿ ಮತ್ತು ಬೋಧನೆಗಳ ಮೂಲಕ, ಕಾಲಕ್ರಮೇಣ ಕ್ರೈಸ್ತತ್ವವೆಂದು ಗುರುತಿಸಲ್ಪಟ್ಟ ಅನೇಕ ಧರ್ಮಗಳನ್ನು ಉತ್ತೇಜಿಸಿದಂಥ ಒಬ್ಬ ಮನುಷ್ಯನಾಗಿದ್ದಾನೆ ಅಷ್ಟೆ. ದೇವತಾಶಾಸ್ತ್ರ ಇಂದು (ಇಂಗ್ಲಿಷ್‌) ಎಂಬ ಪತ್ರಿಕೆಯಲ್ಲಿ ಸೂಚಿಸಲ್ಪಟ್ಟಿರುವ ಪ್ರಕಾರ, ಇನ್ನೂ ಅನೇಕರು ಯೇಸುವನ್ನು “ಒಬ್ಬ ಸಿನಿಕ, ಅಲೆಮಾರಿ ಸಾಧು, ಅಥವಾ ಒಬ್ಬ ಆಧ್ಯಾತ್ಮಿಕ ಅನಕ್ಷರಸ್ಥ, ಸಾಮಾಜಿಕ ಸಂಘಟಕ, ಸಮಾಜದ ಸ್ಥಾಪಿತ ರೀತಿನೀತಿಗಳನ್ನು ಟೀಕಿಸುತ್ತಾ ಇದ್ದ ಹಿಪ್ಪಿ ಕವಿ, ಅಥವಾ ಗೊಂದಲಮಯವಾದ, ದಾರಿದ್ರ್ಯದಲ್ಲಿದ್ದ, ಹಿಂಸಾಚಾರವು ಬೇಗನೆ ಸಿಡಿದೇಳುವ ಸಾಧ್ಯತೆ ಇದ್ದ, ಹಿಂದುಳಿದ ಪ್ಯಾಲೆಸ್ಟೀನ್‌ನ ಹಳ್ಳಿಗಳಲ್ಲಿ ತನ್ನ ಅಭಿಪ್ರಾಯಗಳನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸುತ್ತಾ, ಜೀವಿಸಲು ಅರಿತಿದ್ದ ಚಿತಾವಣೆಗಾರನಾಗಿ” ಪರಿಗಣಿಸುತ್ತಾರೆ.

ಇನ್ನೂ ಹೆಚ್ಚು ಅಸಾಮಾನ್ಯವಾದ ದೃಷ್ಟಿಕೋನಗಳೂ ಇವೆ. ಕರಿ ಯೇಸುವಿನ ರೂಪವು ರ್ಯಾಪ್‌ ಸಂಗೀತ, ಸಾರ್ವಜನಿಕ ವಾಸ್ತುಶಿಲ್ಪ, ಮಾತ್ರವಲ್ಲದೆ ನೃತ್ಯಕಲೆಯಲ್ಲಿಯೂ ಕಾಣಿಸಿಕೊಳ್ಳುತ್ತಿದೆ. * ವಾಸ್ತವದಲ್ಲಿ ಯೇಸು ಒಬ್ಬ ಸ್ತ್ರೀಯಾಗಿದ್ದನು ಎಂದು ಇನ್ನಿತರರು ಊಹಿಸುತ್ತಾರೆ. 1993ರ ಬೇಸಗೆಯಲ್ಲಿ, ಕ್ಯಾಲಿಫೋರ್ನಿಯದ ಆರಿಂಜ್‌ ಕೌಂಟಿ ಜಾತ್ರೆಯ ಸಂದರ್ಶಕರು, ಶಿಲುಬೆಯ ಮೇಲೆ ಬೆತ್ತಲೆಯಾದ ಹೆಣ್ಣು “ಯೇಸು”ವನ್ನು ಅಂದರೆ “ಕ್ರಿಸ್ಟೀ”ಯ ಮೂರ್ತಿಯನ್ನು ನೋಡಿದರು. ಸರಿಸುಮಾರು ಇದೇ ಸಮಯಕ್ಕೆ ನ್ಯೂ ಯಾರ್ಕ್‌ನಲ್ಲಿ, “ಕ್ರಿಸ್ಟ”​—ಶಿಲುಬೆಗೇರಿಸಲ್ಪಟ್ಟಿರುವ ಹೆಣ್ಣು ಯೇಸು⁠—ಮೂರ್ತಿಯು ಪ್ರದರ್ಶನಕ್ಕಿಡಲ್ಪಟ್ಟಿತ್ತು. ಈ ಎರಡೂ ಮೂರ್ತಿಗಳು ತುಂಬ ವಾದವಿವಾದಗಳನ್ನು ಎಬ್ಬಿಸಿದವು. ಮತ್ತು 1999ರ ಆರಂಭದಲ್ಲಿ, ಪುಸ್ತಕಗಳನ್ನು ಖರೀದಿಸುವವರು, “ಬಾಲಕ ಯೇಸು ಮತ್ತು ಅವನ ನಾಯಿಯಾದ ಏಂಜಲ್‌, ಪರಸ್ಪರ ಹಂಚಿಕೊಳ್ಳುವ ಪ್ರೀತಿಯ ಕುರಿತಾಗಿ” ಹೇಳುವ ಒಂದು ಪುಸ್ತಕವನ್ನು ಕಂಡುಕೊಳ್ಳಬಹುದಿತ್ತು. ಅವರ ಸಂಬಂಧವು “ಆತ್ಮಿಕವಾಗಿ ಪ್ರೇರಿಸುವಂಥದ್ದೂ, ಬಾಲಕ ಹಾಗೂ ನಾಯಿ ಹೇಗೆ ಪರಸ್ಪರರಿಗೋಸ್ಕರ ತಮ್ಮ ಜೀವಗಳನ್ನು ತ್ಯಾಗಮಾಡಲು ಸಿದ್ಧರಿದ್ದರು ಎಂಬುದನ್ನು ತೋರಿಸುವಂಥದ್ದೂ ಆಗಿದೆ” ಎಂದು ವರ್ಣಿಸಲಾಗಿದೆ.

ಯೇಸು ಯಾರೆಂಬುದನ್ನು ತಿಳಿದುಕೊಳ್ಳುವುದು ನಿಜವಾಗಿಯೂ ಆವಶ್ಯಕವೋ?

ಯೇಸು ಯಾರಾಗಿದ್ದನು ಮತ್ತು ಈಗ ಯಾರಾಗಿದ್ದಾನೆ ಎಂಬುದರ ಕುರಿತು ನೀವೇಕೆ ಚಿಂತಿಸಬೇಕು? ಒಂದು ಕಾರಣವೇನೆಂದರೆ, ನೆಪೋಲಿಯನ್‌ ಹೇಳಿದಂತೆ, “ಯೇಸು ಕ್ರಿಸ್ತನು ತನ್ನ ಶಾರೀರಿಕ ಹಾಜರಿಯು ಇಲ್ಲದೇ, ತನ್ನ ಪ್ರಜೆಗಳ ಮೇಲೆ ಪ್ರಭಾವಬೀರಿದ್ದಾನೆ ಮತ್ತು ಆಧಿಪತ್ಯ ನಡಿಸಿದ್ದಾನೆ.” ತನ್ನ ಬಲವರ್ಧಕ ಬೋಧನೆಗಳ ಮೂಲಕ ಮತ್ತು ತನ್ನ ಜೀವನರೀತಿಯಿಂದ, ಯೇಸು ಸುಮಾರು ಎರಡು ಸಾವಿರ ವರ್ಷಗಳಿಂದ ಕೋಟ್ಯಂತರ ಜನರ ಜೀವಿತಗಳನ್ನು ಪ್ರಬಲವಾಗಿ ಪ್ರಭಾವಿಸಿದ್ದಾನೆ. ಒಬ್ಬ ಲೇಖಕನು ಅದನ್ನು ಸರಿಯಾಗಿಯೇ ವ್ಯಕ್ತಪಡಿಸಿದ್ದು: “ದಂಡೆತ್ತಿಹೋದ ಎಲ್ಲಾ ಸೇನೆಗಳು ಮತ್ತು ಕಟ್ಟಲ್ಪಟ್ಟ ಎಲ್ಲಾ ನೌಕಾಶಕ್ತಿಗಳು ಮತ್ತು ಆಸೀನವಾದ ಎಲ್ಲಾ ಪಾರ್ಲಿಮೆಂಟುಗಳು, ಆಳಿದ ಎಲ್ಲಾ ಅರಸರುಗಳು, ಇವೆಲ್ಲವುಗಳನ್ನೂ ಒಟ್ಟಿಗೆ ಕೂಡಿಸಿದರೂ ಅವೆಲ್ಲವೂ ಈ ಭೂಮಿಯ ಮೇಲೆ ಮನುಷ್ಯನ ಜೀವಿತವನ್ನು ಅಷ್ಟೊಂದು ಬಲವತ್ತಾಗಿ ಪ್ರಭಾವಿಸಿರುವದಿಲ್ಲ.”

ಇದಲ್ಲದೆ, ಯೇಸು ಯಾರಾಗಿದ್ದನು ಮತ್ತು ಯಾರಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳುವ ಆವಶ್ಯಕತೆ ನಿಮಗಿದೆ, ಏಕೆಂದರೆ ಅವನು ನಿಮ್ಮ ಭವಿಷ್ಯತ್ತಿನ ಮೇಲೆ ನೇರವಾದ ಪ್ರಭಾವವನ್ನು ಬೀರುವನು. ಒಂದು ಸ್ಥಾಪಿತ ಸ್ವರ್ಗೀಯ ರಾಜ್ಯದ, ಅಂದರೆ ಯೇಸುವಿನ ಆಡಳಿತದ ಕೆಳಗಿನ ದೇವರ ರಾಜ್ಯದ ಪ್ರಜೆಯಾಗುವ ಸದವಕಾಶವು ನಿಮಗಿದೆ. ಯೇಸುವಿನ ಮಾರ್ಗದರ್ಶನದ ಕೆಳಗೆ, ನಮ್ಮ ತೊಂದರೆಯುಕ್ತ ಭೂಗ್ರಹಕ್ಕೆ ಅದರ ಮಹತ್ತರವಾದ ಜೈವಿಕ ವೈವಿಧ್ಯತೆ ಮತ್ತು ಜೀವಿಪರಿಸ್ಥಿತಿ ಸಮತೆಯು ಪುನಃಸ್ಥಾಪಿಸಲ್ಪಡುವುದು. ಯೇಸುವಿನ ರಾಜ್ಯವು, ಹೊಟ್ಟೆಗಿಲ್ಲದೆ ನರಳುತ್ತಿರುವವರನ್ನು ಉಣಿಸುವುದು, ಬಡವರ ಆರೈಕೆಮಾಡುವುದು, ರೋಗಗ್ರಸ್ತರನ್ನು ವಾಸಿಮಾಡುವುದು ಮತ್ತು ಸತ್ತವರನ್ನು ಪುನಃ ಉಜ್ಜೀವಿಸುವುದು ಎಂಬ ಆಶ್ವಾಸನೆಯನ್ನು ಬೈಬಲ್‌ ಪ್ರವಾದನೆಯು ನಮಗೆ ಕೊಡುತ್ತದೆ.

ತುಂಬ ಅಗತ್ಯವಾಗಿರುವ ಇಂತಹ ಸರಕಾರವನ್ನು ಯಾವ ರೀತಿಯ ವ್ಯಕ್ತಿಯು ಮುನ್ನಡೆಸುವನು ಎಂಬುದನ್ನು ತಿಳಿದುಕೊಳ್ಳಲು ನೀವು ಖಂಡಿತ ಬಯಸುವಿರಿ. ನಿಜವಾದ ಯೇಸುವಿನ ಕುರಿತು ಒಳನೋಟವನ್ನು ಪಡೆದುಕೊಳ್ಳಲು ಮುಂದಿನ ಲೇಖನವು ನಿಮಗೆ ಸಹಾಯಮಾಡುವುದು.

[ಪಾದಟಿಪ್ಪಣಿ]

^ ಪ್ಯಾರ. 7 ಯೇಸುವಿನ ಶಾರೀರಿಕ ತೋರಿಕೆಯ ಕುರಿತಾಗಿ, 1998, ಡಿಸೆಂಬರ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿರುವ “ಯೇಸು ನೋಡಲಿಕ್ಕೆ ಹೇಗಿದ್ದನು?” ಎಂಬ ಲೇಖನವನ್ನು ನೋಡಿರಿ.