ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜವಾದ ಯೇಸು

ನಿಜವಾದ ಯೇಸು

ನಿಜವಾದ ಯೇಸು

ತನ್ನ ಕುರಿ  ಜನರು ಏನು ಯೋಚಿಸುತ್ತಾರೆ ಎಂದು ತನ್ನ ಶಿಷ್ಯರಿಂದ ತಿಳಿದುಕೊಂಡ ನಂತರ, ಯೇಸು ಅವರನ್ನು ಕೇಳಿದ್ದು: “ಆದರೆ ನೀವು ನನ್ನನ್ನು ಯಾರನ್ನುತ್ತೀರಿ?” ಅಪೊಸ್ತಲ ಪೇತ್ರನ ಉತ್ತರವನ್ನು ಮತ್ತಾಯನ ಸುವಾರ್ತೆಯು ವರದಿಸುತ್ತದೆ: “ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು.” (ಮತ್ತಾಯ 16:15, 16) ಇತರರಿಗೂ ಅದೇ ಅಭಿಪ್ರಾಯವಿತ್ತು. ನಂತರ ಯೇಸುವಿನ ಅಪೊಸ್ತಲನಾದ ನತಾನಯೇಲನು ಯೇಸುವಿಗೆ ಹೇಳಿದ್ದು: “ಗುರುವೇ, ನೀನು ದೇವಕುಮಾರನು ಸರಿ; ನೀನೇ ಇಸ್ರಾಯೇಲಿನ ಅರಸನು.” (ಯೋಹಾನ 1:49) ತನ್ನ ಪ್ರಾಮುಖ್ಯವಾದ ಪಾತ್ರದ ಕುರಿತು ಸ್ವತಃ ಯೇಸುವೇ ಮಾತಾಡಿದನು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” (ಯೋಹಾನ 14:6) ಬೇರೆ ಬೇರೆ ಸಂದರ್ಭಗಳಲ್ಲಿ, ತಾನು “ದೇವಕುಮಾರ”ನೆಂದು ಅವನೇ ಸೂಚಿಸಿ ಹೇಳಿದನು. (ಯೋಹಾನ 5:24, 25; 11:4) ಅದ್ಭುತಕಾರ್ಯಗಳನ್ನು ಮಾಡುವ ಮೂಲಕ ಮತ್ತು ಮೃತರನ್ನು ಎಬ್ಬಿಸುವ ಮೂಲಕವೂ ಈ ಹೇಳಿಕೆಗೆ ಅವನು ಪುರಾವೆಯನ್ನು ಕೊಟ್ಟನು.

ಸಾಧಾರವುಳ್ಳ ಸಂದೇಹಗಳೇ?

ಯೇಸುವಿನ ಕುರಿತಾದ ಸುವಾರ್ತೆಯ ದಾಖಲೆಯಲ್ಲಿ ನಾವು ನಿಜವಾಗಿಯೂ ನಂಬಿಕೆಯನ್ನಿಡಬಲ್ಲೆವೋ? ಅವು ನಿಜವಾದ ಯೇಸುವನ್ನು ಚಿತ್ರಿಸುತ್ತವೋ? ಇಂಗ್ಲೆಂಡಿನ ಮ್ಯಾನ್‌ಚೆಸ್ಟರ್‌ ವಿಶ್ವವಿದ್ಯಾನಿಲಯದಲ್ಲಿ, ಬೈಬಲಿನ ದೂಷಣೆ ಮತ್ತು ಟೀಕಾತ್ಮಕ ವಿವರಗಳ ಪ್ರೊಫೆಸರ್‌ ಆಗಿದ್ದ ಮತ್ತು ಈಗ ನಿಧನರಾಗಿರುವ ಫ್ರೆಡ್ರಿಕ್‌ ಎಫ್‌. ಬ್ರೂಸ್‌ ಅವರು ಹೇಳಿದ್ದು: “ಒಂದು ಪುರಾತನ ಬರಹದಲ್ಲಿ, ಅದು ಬೈಬಲಿನದ್ದಾಗಿರಲಿ ಅಥವಾ ಬೈಬಲೇತರವಾಗಿರಲಿ, ಪ್ರತಿಯೊಂದು ಅಂಶದ ಸತ್ಯತೆಯನ್ನು ಐತಿಹಾಸಿಕ ನಿರ್ಣಯಾತ್ಮಕ ವಾದವಿವಾದಗಳ ಮೂಲಕ ಸ್ಥಾಪಿಸುವುದು ಸಾಮಾನ್ಯವಾಗಿ ಸಾಧ್ಯವಿರುವುದಿಲ್ಲ. ಒಬ್ಬ ಬರಹಗಾರನ ಸಾಮಾನ್ಯವಾದ ವಿಶ್ವಾಸಾರ್ಹತೆಯಲ್ಲಿ ನ್ಯಾಯಸಮ್ಮತವಾದ ಭರವಸವಿಡುವದು ಸಾಕು; ಆ ವಿಶ್ವಾಸಾರ್ಹತೆಯು ಸ್ಥಾಪಿಸಲ್ಪಟ್ಟಿರುವುದಾದರೆ, ಅವನ ವಿವರಗಳು ನೈಜವಾದವುಗಳಾಗಿವೆ ಎಂಬುದಕ್ಕೆ ಸ್ಪಷ್ಟವಾದ ಸಾಧ್ಯತೆಯಿದೆ. . . . ಹೊಸ ಒಡಂಬಡಿಕೆಯು ಐತಿಹಾಸಿಕವಾಗಿ ವಿಶ್ವಾಸಾರ್ಹವಾಗಿದೆ ಎಂಬುದಕ್ಕೆ ಯಾವುದೇ ಕಡಿಮೆ ಸಾಧ್ಯತೆ ಇಲ್ಲ, ಏಕೆಂದರೆ ಕ್ರೈಸ್ತರು ಅದನ್ನು ‘ಪವಿತ್ರ’ ಸಾಹಿತ್ಯವಾಗಿ ಸ್ವೀಕರಿಸಿದ್ದಾರೆ.”

ಸುವಾರ್ತಾ ಪುಸ್ತಕಗಳಲ್ಲಿ ಚಿತ್ರಿಸಲ್ಪಟ್ಟಿರುವ ಯೇಸುವಿನ ಕುರಿತ ಸಂದೇಹಗಳನ್ನು ಪರಿಶೀಲಿಸಿದ ನಂತರ, ಅಮೆರಿಕದ ಉತ್ತರ ಡಕೋಟದ ಜೇಮ್ಸ್‌ಟೌನ್‌ ಕಾಲೇಜಿನ ಧರ್ಮದ ಪ್ರೊಫೆಸರ್‌ ಜೇಮ್ಸ್‌ ಆರ್‌. ಎಡ್ವರ್ಡ್ಸ್‌ ಬರೆದದ್ದು: “ಯೇಸುವಿನ ಕುರಿತಾದ ವಾಸ್ತವಿಕ ಸತ್ಯದ ವಿವಿಧ ಮತ್ತು ವಿಶೇಷವಾದ ಆಧಾರಕಟ್ಟನ್ನು ಸುವಾರ್ತೆಗಳು ಸಂರಕ್ಷಿಸಿಟ್ಟಿವೆ ಎಂದು ನಾವು ದೃಢನಿಶ್ಚಯದಿಂದ ಹೇಳಬಲ್ಲೆವು. . . . ಸುವಾರ್ತೆಗಳು ಯೇಸುವನ್ನು ಯಾಕೆ ಆ ರೀತಿಯಲ್ಲಿ ನಿರೂಪಿಸುತ್ತವೆ ಎಂಬುದಕ್ಕೆ ಅತ್ಯಂತ ನ್ಯಾಯಸಮ್ಮತವಾದ ಉತ್ತರವೇನೆಂದರೆ, ವಾಸ್ತವದಲ್ಲಿ ಅವನು ಹಾಗೆಯೇ ಇದ್ದನು. ಯೇಸು ತನ್ನ ಹಿಂಬಾಲಕರ ಮೇಲೆ ಬಿಟ್ಟುಹೋದ ಪ್ರಭಾವವೇನೆಂದರೆ, ಅವನು ನಿಜವಾಗಿಯೂ ದೇವರಿಂದ ಕಳುಹಿಸಲ್ಪಟ್ಟವನು ಮತ್ತು ದೇವಕುಮಾರನೂ, ದೇವರ ಸೇವಕನೂ ಆಗಿ ಅಧಿಕಾರ ಕೊಡಲ್ಪಟ್ಟವನು ಎಂಬುದೇ. ಇದನ್ನೇ ಸುವಾರ್ತೆಗಳು ನಂಬಿಗಸ್ತಿಕೆಯಿಂದ ಸಂರಕ್ಷಿಸಿಟ್ಟಿವೆ.” *

ಯೇಸುವಿನ ಅನ್ವೇಷಣೆಯಲ್ಲಿ

ಯೇಸು ಕ್ರಿಸ್ತನ ಬಗ್ಗೆ ಬೈಬಲೇತರ ನಿರ್ದೇಶಗಳ ಕುರಿತಾಗಿ ಏನು? ಅವು ಎಷ್ಟು ವಿಶ್ವಾಸಾರ್ಹವಾಗಿವೆ? ಟ್ಯಾಸಿಟಸ್‌, ಸ್ವೀಟೋನಿಯಸ್‌, ಜೋಸೀಫಸ್‌, ಪ್ಲಿನೀ ದ ಯಂಗರ್‌, ಮತ್ತು ಇನ್ನಿತರ ಕೆಲವು ಪುರಾತನ ಪ್ರಸಿದ್ಧ ಬರಹಗಾರರ ಕೃತಿಗಳಲ್ಲಿ ಯೇಸುವಿನ ಕುರಿತಾಗಿ ಅಸಂಖ್ಯಾತ ಉಲ್ಲೇಖಗಳಿವೆ. ಅವುಗಳ ಕುರಿತಾಗಿ ದ ನ್ಯೂ ಎನ್‌ಸೈಕ್ಲೊಪೀಡಿಯಾ ಬ್ರಿಟ್ಯಾನಿಕ (1995) ಹೇಳುವುದು: “ಪ್ರಾಚೀನ ಕಾಲಗಳಲ್ಲಿ ಯೇಸುವಿನ ಐತಿಹಾಸಿಕತ್ವದ ಕುರಿತು ಕ್ರೈಸ್ತತ್ವದ ವಿರೋಧಿಗಳು ಕೂಡ ಎಂದೂ ಸಂದೇಹಪಟ್ಟಿರಲಿಲ್ಲ ಎಂದು ಈ ಸ್ವತಂತ್ರವಾದ ದಾಖಲೆಗಳು ರುಜುಪಡಿಸುತ್ತವೆ. ಅದರ ಕುರಿತಾದ ವಾಗ್ವಾದವು, 18ನೆಯ ಶತಮಾನದ ಅಂತಿಮ ಭಾಗದಲ್ಲಿ, 19ನೆಯ ಶತಮಾನದಾದ್ಯಂತ ಮತ್ತು 20ನೆಯ ಶತಮಾನದ ಆರಂಭದಲ್ಲಿಯೇ ಮೊತ್ತಮೊದಲ ಬಾರಿ ಮತ್ತು ಅಸ್ಥಿರವಾದ ಆಧಾರಗಳ ಮೇಲೆ ಮಾಡಲ್ಪಟ್ಟಿದೆ.”

ವಿಷಾದಕರವಾಗಿ, ಆಧುನಿಕ ವಿದ್ವಾಂಸರು “ನಿಜ”ವಾದ ಅಥವಾ “ಐತಿಹಾಸಿಕ” ಯೇಸುವಿನ ಅನ್ವೇಷಣೆಯಲ್ಲಿ, ಅವನ ನಿಜ ಪರಿಚಯವನ್ನು ಆಧಾರವಿಲ್ಲದ ಊಹಾಪೋಹ, ಅರ್ಥವಿಲ್ಲದ ಸಂದೇಹಗಳು, ಮತ್ತು ಬುಡವಿಲ್ಲದ ತತ್ತ್ವನಿರೂಪಣೆಗಳ ಪದರಗಳ ಕೆಳಗೆ ಮುಚ್ಚಿಹಾಕಿದ್ದಾರೆ ಎಂಬಂತೆ ತೋರುತ್ತದೆ. ಒಂದರ್ಥದಲ್ಲಿ, ಕಟ್ಟುಕಥೆಗೆ ಅವರೇ ಹೊಣೆಗಾರರಾಗಿದ್ದರೂ, ಅದಕ್ಕೆ ಸುವಾರ್ತಾ ಬರಹಗಾರರ ಮೇಲೆ ಸುಳ್ಳಾಗಿ ಆರೋಪ ಹೊರಿಸುತ್ತಾರೆ. ಕೆಲವರು ಹೆಸರುವಾಸಿಯಾಗಲು ಮತ್ತು ಚಕಿತಗೊಳಿಸುವಂಥ ಒಂದು ಹೊಸ ತತ್ತ್ವದೊಂದಿಗೆ ತಮ್ಮ ಹೆಸರನ್ನು ಜೋಡಿಸಿಕೊಳ್ಳಲು ಎಷ್ಟು ಆತುರಪಡುತ್ತಾರೆಂದರೆ, ಅವರು ಯೇಸುವಿನ ಕುರಿತಾದ ಪುರಾವೆಯನ್ನು ಪ್ರಾಮಾಣಿಕವಾಗಿ ಪರಿಶೀಲಿಸಲು ತಪ್ಪಿಬೀಳುತ್ತಾರೆ. ಇದನ್ನು ಮಾಡುವ ಭರದಲ್ಲಿ, ವಿದ್ವತ್‌ಪೂರ್ಣ ಕಲ್ಪನೆಗನುಸಾರವಾದ ಒಂದು “ಯೇಸು”ವನ್ನು ಅವರು ಸೃಷ್ಟಿಸಿಬಿಡುತ್ತಾರೆ.

ನಿಜವಾದ ಯೇಸುವನ್ನು ಕಂಡುಕೊಳ್ಳಲು ಬಯಸುವವರು, ಅವನನ್ನು ಬೈಬಲಿನಲ್ಲಿ ಕಂಡುಕೊಳ್ಳಬಹುದು. ಎಮ್ರೀ ವಿಶ್ವವಿದ್ಯಾನಿಲಯದ ಕೆಂಡಲರ್‌ ಸ್ಕೂಲ್‌ ಆಫ್‌ ಥಿಯಾಲಜಿಯಲ್ಲಿ ಹೊಸ ಒಡಂಬಡಿಕೆ ಮತ್ತು ಕ್ರೈಸ್ತ ಮೂಲಗಳ ಪ್ರೊಫೆಸರರಾಗಿರುವ ಲೂಕ್‌ ಜಾನ್ಸನ್‌, ಐತಿಹಾಸಿಕ ಯೇಸುವಿನ ಕುರಿತಾದ ಹೆಚ್ಚಿನ ಸಂಶೋಧನೆಗಳು ಬೈಬಲಿನ ದೃಷ್ಟಿಕೋನವನ್ನು ಕೊಡುವುದಿಲ್ಲ ಎಂದು ವಾದಿಸುತ್ತಾರೆ. ಯೇಸುವಿನ ಜೀವನ ಮತ್ತು ಯುಗದ ಸಾಮಾಜಿಕ, ರಾಜಕೀಯ, ಮನುಷ್ಯಶಾಸ್ತ್ರೀಯ ಮತ್ತು ಸಾಂಸ್ಕೃತಿಕ ಪೂರ್ವಾಪರಗಳನ್ನು ಪರಿಶೀಲಿಸುವುದು ಆಸಕ್ತಿಕರವಾಗಿರಬಹುದು ಎಂದು ಅವರು ಹೇಳುತ್ತಾರೆ. ಆದರೂ ಅವರು ಕೂಡಿಸುವುದು, ಐತಿಹಾಸಿಕ ಯೇಸುವನ್ನು ವಿದ್ವಾಂಸರು ಏನೆಂದು ಕರೆಯುತ್ತಾರೋ ಅದು “ಶಾಸ್ತ್ರವಚನಗಳ ಉದ್ದೇಶವೇ ಅಲ್ಲ.” ಏಕೆಂದರೆ ಶಾಸ್ತ್ರವಚನಗಳು “ಹೆಚ್ಚಾಗಿ ಯೇಸುವಿನ ವ್ಯಕ್ತಿತ್ವವನ್ನು” ಮತ್ತು ಅವನ ಸಂದೇಶ ಹಾಗೂ ವಿಮೋಚಕನಾಗಿರುವ ಅವನ ಪಾತ್ರವನ್ನು “ವಿವರಿಸುವುದರಲ್ಲಿ ಆಸಕ್ತವಾಗಿವೆ.” ಹಾಗಾದರೆ, ಯೇಸುವಿನ ನಿಜವಾದ ವ್ಯಕ್ತಿತ್ವ ಮತ್ತು ಸಂದೇಶವು ಏನಾಗಿತ್ತು?

ನಿಜವಾದ ಯೇಸು

ಸುವಾರ್ತೆಗಳು, ಅಂದರೆ ಯೇಸುವಿನ ಜೀವನದ ನಾಲ್ಕು ಬೈಬಲ್‌ ವೃತ್ತಾಂತಗಳು, ಭಾರೀ ಸಹಾನುಭೂತಿಯುಳ್ಳ ಒಬ್ಬ ಮನುಷ್ಯನನ್ನು ಚಿತ್ರಿಸುತ್ತವೆ. ಅಸ್ವಸ್ಥರಾಗಿದ್ದ, ಕುರುಡರಾಗಿದ್ದ ಮತ್ತು ಇತರ ಬಾಧೆಗಳಿಂದ ನರಳುತ್ತಿದ್ದ ಜನರಿಗೆ ಸಹಾಯಮಾಡುವಂತೆ ಕನಿಕರ ಮತ್ತು ದಯೆಯು ಯೇಸುವನ್ನು ಪ್ರೇರಿಸಿತು. (ಮತ್ತಾಯ 9:36; 14:14; 20:34) ಅವನ ಮಿತ್ರನಾದ ಲಾಜರನ ಮರಣ ಮತ್ತು ಇದರಿಂದ ಲಾಜರನ ಸಹೋದರಿಯರಿಗಾದ ದುಃಖವು, ಯೇಸು ‘ನೊಂದುಕೊಂಡು ಕಣ್ಣೀರು ಬಿಡುವಂತೆ’ ಮಾಡಿತು. (ಯೋಹಾನ 11:32-36) ವಾಸ್ತವದಲ್ಲಿ, ಸುವಾರ್ತೆಗಳು ಯೇಸುವಿನ ಭಾವನೆಗಳ ವಿಸ್ತಾರವಾದ ವ್ಯಾಪ್ತಿಯನ್ನು, ಅಂದರೆ ಕುಷ್ಠರೋಗಿಯಾಗಿದ್ದ ಒಬ್ಬ ವ್ಯಕ್ತಿಗೆ ತೋರಿಸಿದ ಅನುಕಂಪ, ತನ್ನ ಶಿಷ್ಯರ ಯಶಸ್ಸಿನಿಂದಾಗಿ ಪಡೆದುಕೊಂಡ ಅತ್ಯಾನಂದ, ಕಲ್ಲೆದೆಯ ಕಾನೂನುವಾದಿಗಳ ಮೇಲೆ ಕೋಪ, ಮತ್ತು ಮೆಸ್ಸೀಯನನ್ನು ನಿರಾಕರಿಸಿದ ಕಾರಣ ಯೆರೂಸಲೇಮಿಗಾಗಿ ತೋರ್ಪಡಿಸಿದ ದುಃಖದಂಥ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.

ಯೇಸು ಒಂದು ಅದ್ಭುತವನ್ನು ಮಾಡುವಾಗಲೆಲ್ಲ, ವಾಸಿಯಾಗುವವನ ಮೇಲೆ ಗಮನವನ್ನು ಕೇಂದ್ರೀಕರಿಸಿದನು: “ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು.” (ಮತ್ತಾಯ 9:22) ಅವನು ನತಾನಯೇಲನನ್ನು “ನಿಜವಾದ ಇಸ್ರಾಯೇಲನು” ಎಂದು ಹೊಗಳುತ್ತಾ, “ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು. (ಯೋಹಾನ 1:47) ಒಬ್ಬ ಸ್ತ್ರೀಯ ಕೃತಜ್ಞತಾಭಾವದ ಕೊಡುಗೆಯು ಅನಾವಶ್ಯಕವಾದ ದುಬಾರಿ ಖರ್ಚು ಎಂದು ಕೆಲವರಿಗೆ ಅನಿಸಿದಾಗ, ಯೇಸು ಅವಳ ಪಕ್ಷವಹಿಸಿ, ಅವಳ ಧಾರಾಳ ಮನಸ್ಸಿನ ಕುರಿತಾದ ಈ ವೃತ್ತಾಂತವು ದೀರ್ಘಕಾಲದ ವರೆಗೆ ನೆನಪಿಸಲ್ಪಡುವುದು ಎಂದು ಹೇಳಿದನು. (ಮತ್ತಾಯ 26:6-13) ಅವನು ತನ್ನ ಹಿಂಬಾಲಕರಿಗೆ ತನ್ನನ್ನು ಒಬ್ಬ ನಿಜ ಸ್ನೇಹಿತನನ್ನಾಗಿ ಮತ್ತು ಪ್ರೀತಿಭರಿತ ಸಂಗಾತಿಯಾಗಿ ಸಾಬೀತುಪಡಿಸಿಕೊಂಡನು. ಅವನು ‘ಕೊನೆಯ ತನಕ ಅವರನ್ನು ಪ್ರೀತಿಸುತ್ತಾ ಬಂದನು.’​—ಯೋಹಾನ 13:​1; 15:11-15, NW.

ಯೇಸು ತಾನು ಭೇಟಿಮಾಡಿದ ಅನೇಕ ಜನರ ಅಗತ್ಯಗಳನ್ನು ಕೂಡಲೇ ಮನಗಂಡನು ಎಂಬುದನ್ನೂ ಸುವಾರ್ತೆಗಳು ತೋರಿಸುತ್ತವೆ. ಒಂದು ಬಾವಿಯ ಹತ್ತಿರ ಒಬ್ಬ ಸ್ತ್ರೀಯೊಂದಿಗೆ, ಅಥವಾ ಒಂದು ತೋಟದಲ್ಲಿ ಒಬ್ಬ ಧಾರ್ಮಿಕ ಬೋಧಕನೊಂದಿಗೆ ಅಥವಾ ಕೆರೆಯ ಹತ್ತಿರ ಒಬ್ಬ ಬೆಸ್ತನೊಂದಿಗೆ ಮಾತಾಡುವಾಗ, ತತ್‌ಕ್ಷಣವೇ ಅವರ ಹೃದಯಗಳನ್ನು ಸ್ಪರ್ಶಿಸಿದನು. ಯೇಸುವಿನ ಪ್ರಾರಂಭಿಕ ಮಾತುಗಳ ನಂತರವೇ, ಅನೇಕರು ತಮ್ಮ ಅತಿ ಗಹನವಾದ ವಿಚಾರಗಳನ್ನು ಅವನಿಗೆ ಹೇಳಿಬಿಟ್ಟರು. ಅವನು, ತನಗೆ ಯಾರು ಕಿವಿಗೊಡುತ್ತಿದ್ದರೋ ಅವರಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟಿಸುವ ಸಾಮರ್ಥ್ಯವುಳ್ಳವನಾಗಿದ್ದನು. ಅವನ ಕಾಲದ ಜನರು ಅಧಿಕಾರದಲ್ಲಿದ್ದಂಥವರನ್ನು ಆದಷ್ಟು ದೂರವಾಗಿ ಇಡುತ್ತಿದ್ದಿರಬಹುದಾದರೂ, ಯೇಸುವಿನ ಬಳಿಗಾದರೋ ಜನರು ಗುಂಪುಗುಂಪಾಗಿ ಕೂಡಿಬಂದರು. ಅವರು ಯೇಸುವಿನೊಂದಿಗಿರಲು ಇಷ್ಟಪಟ್ಟರು; ಅವನ ಸಹವಾಸದಲ್ಲಿ ಅವರಿಗೆ ಆರಾಮವಾದ ಅನಿಸಿಕೆಯಾಯಿತು. ಮಕ್ಕಳು ಕೂಡ ಅವನೊಂದಿಗೆ ಆರಾಮವಾಗಿದ್ದರು, ಮತ್ತು ಒಂದು ಚಿಕ್ಕ ಮಗುವನ್ನು ಒಂದು ಉದಾಹರಣೆಯಾಗಿ ಉಪಯೋಗಿಸಿದಾಗ, ಅದನ್ನು ತನ್ನ ಶಿಷ್ಯರ ಮುಂದೆ ನಿಲ್ಲಿಸಿದನು ಮಾತ್ರವಲ್ಲ ಅದನ್ನು ‘ಅಪ್ಪಿಕೊಂಡನು’ ಸಹ. (ಮಾರ್ಕ 9:36; 10:13-16) ಕೇವಲ ಅವನ ಚಿತ್ತಾಕರ್ಷಕ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೋಸ್ಕರ ಜನರು ಮೂರು ದಿನ ಅವನೊಂದಿಗೆ ಉಳಿಯುವಷ್ಟು ಮನಮೋಹಕವಾದ ವ್ಯಕ್ತಿತ್ವವುಳ್ಳ ಒಬ್ಬ ಪುರುಷನು ಯೇಸು ಆಗಿದ್ದನೆಂದು ಸುವಾರ್ತೆಗಳು ವಾಸ್ತವವಾಗಿಯೇ ಚಿತ್ರಿಸುತ್ತವೆ.​—ಮತ್ತಾಯ 15:32.

ಯೇಸುವಿನ ಪರಿಪೂರ್ಣತೆಯು, ಅವನು ಯಾವ ಜನರ ಮಧ್ಯೆ ಜೀವಿಸುತ್ತಿದ್ದು, ಸಾರುತ್ತಿದ್ದನೋ ಆ ಅಪರಿಪೂರ್ಣ ಮತ್ತು ಪಾಪಹೊತ್ತ ಜನರ ಬಗ್ಗೆ ಅತಿರೇಕ ಟೀಕಾಕಾರನನ್ನಾಗಿ ಅಥವಾ ದರ್ಪದವನಾಗಿ ಮತ್ತು ದಬ್ಬಾಳಿಕೆ ನಡೆಸುವವನನ್ನಾಗಿ ಮಾಡಲಿಲ್ಲ. (ಮತ್ತಾಯ 9:10-13; 21:31, 32; ಲೂಕ 7:36-48; 15:1-32; 18:9-14) ಯೇಸು ಎಂದೂ ಇತರರಿಂದ ತೀರ ಹೆಚ್ಚನ್ನು ಅಪೇಕ್ಷಿಸುತ್ತಿರಲಿಲ್ಲ. ಅವನು ಜನರ ಹೊರೆಗಳಿಗೆ ಇನ್ನಷ್ಟು ಭಾರವನ್ನು ಹೊರಿಸಲಿಲ್ಲ. ಬದಲಾಗಿ, “ಕಷ್ಟಪಡುತ್ತಿರುವವರೇ . . . ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ಚೈತನ್ಯ ನೀಡುವೆನು” ಎಂದು ಅವನು ಹೇಳಿದನು. ಅವನು “ಮೃದುಸ್ವಭಾವದವನೂ ದೀನ ಮನಸ್ಸುಳ್ಳವನೂ” ಆಗಿದ್ದಾನೆಂಬುದನ್ನು ಅವನ ಶಿಷ್ಯರು ಕಂಡುಕೊಂಡರು. ಅವನ ನೊಗವು ಮೃದುವಾದದ್ದೂ ಹೊರೆಯು ಹಗುರವಾದದ್ದೂ ಆಗಿತ್ತು.​—ಮತ್ತಾಯ 11:​28-30, NW.

ಸುವಾರ್ತೆಗಳಲ್ಲಿ ಯೇಸುವಿನ ವ್ಯಕ್ತಿತ್ವವು ಪ್ರಕಟಿಸಲ್ಪಟ್ಟಿದೆ ಮತ್ತು ಅದರಲ್ಲಿ ನಿರ್ಧಾರಕ ಸತ್ಯತೆಯ ಲಕ್ಷಣವು ಮಾರ್ದನಿಸುತ್ತದೆ. ನಾಲ್ಕು ವಿಭಿನ್ನ ವ್ಯಕ್ತಿಗಳು ಒಂದು ಅಸಾಧಾರಣ ವ್ಯಕ್ತಿತ್ವವನ್ನು ಕಲ್ಪಿಸಿ, ನಂತರ ನಾಲ್ಕು ವಿವಿಧವಾದ ನಿರೂಪಣೆಗಳಲ್ಲಿ ಆ ವ್ಯಕ್ತಿಯ ಕುರಿತಾದ ಸಮಂಜಸವಾದ ಚಿತ್ರಣವನ್ನು ನೀಡುವುದು ಸುಲಭವಾದ ವಿಷಯವೇನಲ್ಲ. ಅಸ್ತಿತ್ವದಲ್ಲೇ ಇರದಿದ್ದ ಒಬ್ಬ ವ್ಯಕ್ತಿಯ ಕುರಿತು ನಾಲ್ಕು ವಿಭಿನ್ನವಾದ ಲೇಖಕರು ಒಂದೇ ರೀತಿಯಲ್ಲಿ ವಿವರಿಸುವುದು ಮತ್ತು ಸಮಂಜಸವಾಗಿ ಅವನ ಬಗ್ಗೆ ಒಂದೇ ರೀತಿಯ ಚಿತ್ರಣವನ್ನು ಕೊಡುವುದು, ತೀರ ಅಸಾಧ್ಯವಾದ ವಿಷಯವಾಗಿರುವುದು.

ಇತಿಹಾಸಗಾರ ಮೈಕಲ್‌ ಗ್ರಾಂಟ್‌, ಆಲೋಚನಾ ಪ್ರೇರಕವಾದ ಪ್ರಶ್ನೆಯೊಂದನ್ನು ಕೇಳುತ್ತಾನೆ: “ಯಾವುದೇ ವಿನಾಯಿತಿ ಇಲ್ಲದೆ ಎಲ್ಲಾ ಸುವಾರ್ತಾ ವೃತ್ತಾಂತಗಳಲ್ಲಿ, ಎಲ್ಲಾ ರೀತಿಯ ಸ್ತ್ರೀಯರೊಂದಿಗೆ, ಅಂದರೆ ಖಂಡಿತವಾಗಿಯೂ ಗೌರವಾರ್ಹರಲ್ಲದವರು ಎಂಬವರನ್ನೂ ಸೇರಿಸಿ ಎಲ್ಲರೊಂದಿಗೂ, ಸ್ವಲ್ಪವೂ ಭಾವೋದ್ವಿಗ್ನತೆ, ಅಸ್ವಾಭಾವಿಕತೆ, ಅಥವಾ ವಯ್ಯಾರಿತನದ ಲಕ್ಷಣವಿಲ್ಲದೆ ಧಾರಾಳವಾಗಿ ಸಹವಾಸಮಾಡುತ್ತಿದ್ದ, ಆದರೂ ಪ್ರತಿಯೊಂದು ಸಂದರ್ಭದಲ್ಲಿ ಯಥಾರ್ಥವಾದ ಸಮಗ್ರತೆಯ ಸ್ವಭಾವವನ್ನು ಕಾಪಾಡಿಕೊಳ್ಳುವ ಒಬ್ಬ ಆಕರ್ಷಕ ಯುವ ಪುರುಷನ ಗಮನಾರ್ಹವಾದ ವಿಶಿಷ್ಟ ಚಿತ್ರಣವು ಕೊಡಲ್ಪಡುವುದು ಹೇಗೆ ಸಾಧ್ಯ?” ಇದಕ್ಕೆ ನ್ಯಾಯಸಮ್ಮತವಾದ ಉತ್ತರವು, ಅಂತಹ ಒಬ್ಬ ಮನುಷ್ಯನು ನಿಜವಾಗಿಯೂ ಅಸ್ತಿತ್ವದಲ್ಲಿದ್ದನು ಮತ್ತು ಬೈಬಲು ಹೇಳುವ ರೀತಿಯಲ್ಲಿ ವರ್ತಿಸಿದನು ಎಂದಾಗಿದೆ.

ನಿಜವಾದ ಯೇಸು ಮತ್ತು ನಿಮ್ಮ ಭವಿಷ್ಯ

ಬೈಬಲು, ಭೂಮಿಯ ಮೇಲಿದ್ದ ಯೇಸುವಿನ ಒಂದು ನಿಜ ಜೀವನ ಚಿತ್ರಣವನ್ನು ಕೊಡುತ್ತದಲ್ಲದೆ, “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದ ಅವನಿಗೆ ದೇವರ ಏಕಜಾತ ಪುತ್ರನಾಗಿ ಮಾನವಪೂರ್ವ ಜೀವಿತವೊಂದಿತ್ತು ಎಂಬುದನ್ನೂ ತೋರಿಸುತ್ತದೆ. (ಕೊಲೊಸ್ಸೆ 1:15) ಇಪ್ಪತ್ತು ಶತಮಾನಗಳಿಗೆ ಮುಂಚೆ, ದೇವರು ತನ್ನ ಸ್ವರ್ಗೀಯ ಪುತ್ರನು ಮನುಷ್ಯನಾಗಿ ಹುಟ್ಟಲಿಕ್ಕೋಸ್ಕರ ಅವನ ಜೀವಿತವನ್ನು ಒಬ್ಬ ಯೆಹೂದಿ ಸ್ತ್ರೀಯ ಗರ್ಭಕ್ಕೆ ಸ್ಥಳಾಂತರಿಸಿದನು. (ಮತ್ತಾಯ 1:18) ತನ್ನ ಭೂಶುಶ್ರೂಷೆಯ ಸಮಯದಲ್ಲಿ, ದುಃಖಪೀಡಿತ ಮಾನವಕುಲಕ್ಕೆ ಒಂದೇ ನಿರೀಕ್ಷೆಯು ದೇವರ ರಾಜ್ಯ ಎಂಬುದಾಗಿ ಯೇಸು ಘೋಷಿಸಿದನು, ಮತ್ತು ಈ ಸಾರುವ ಕೆಲಸವನ್ನು ತನ್ನ ಶಿಷ್ಯರು ಮುಂದುವರಿಸುವಂತೆ ಅವರಿಗೆ ತರಬೇತಿಯನ್ನು ಕೊಟ್ಟನು.​—ಮತ್ತಾಯ 4:17; 10:5-7; 28:19, 20.

ಸಾ.ಶ. 33, ನೈಸಾನ್‌ 14 (ಸುಮಾರು ಏಪ್ರಿಲ್‌ 1)ರಂದು ಯೇಸು ಬಂಧಿಸಲ್ಪಟ್ಟು, ವಿಚಾರಣೆಮಾಡಲ್ಪಟ್ಟು, ದಂಡನೆ ವಿಧಿಸಲ್ಪಟ್ಟು, ದಂಗೆಕೋರನೆಂಬ ಸುಳ್ಳಾರೋಪದೊಂದಿಗೆ ಕೊಲ್ಲಲ್ಪಟ್ಟನು. (ಮತ್ತಾಯ 26:18-20, ಮತ್ತಾಯ 26: 48–27:50) ಯೇಸುವಿನ ಮರಣವು ಪ್ರಾಯಶ್ಚಿತ್ತವನ್ನು ಒದಗಿಸುತ್ತದೆ, ಮತ್ತು ಇದು ನಂಬಿಕೆಯನ್ನಿಡುವ ಮಾನವಕುಲವನ್ನು ಅದರ ಪಾಪಸ್ಥಿತಿಯಿಂದ ಬಿಡಿಸುತ್ತದೆ ಮತ್ತು ಹೀಗೆ ಅವನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಎಲ್ಲರಿಗೂ ನಿತ್ಯಜೀವಕ್ಕಾಗಿರುವ ದಾರಿಯನ್ನು ತೆರೆಯುತ್ತದೆ. (ರೋಮಾಪುರ 3:23, 24; 1 ಯೋಹಾನ 2:2) ನೈಸಾನ್‌ 16ರಂದು ಯೇಸುವಿನ ಪುನರುತ್ಥಾನವಾಯಿತು, ಮತ್ತು ನಂತರ ಶೀಘ್ರದಲ್ಲೇ ಅವನು ಪುನಃ ಪರಲೋಕಕ್ಕೆ ಏರಿಹೋದನು. (ಮಾರ್ಕ 16:1-8; ಲೂಕ 24:50-53; ಅ. ಕೃತ್ಯಗಳು 1:6-9) ಯೆಹೋವನ ನೇಮಿತ ರಾಜನಾಗಿ, ಪುನರುತ್ಥಾನಗೊಳಿಸಲ್ಪಟ್ಟಿರುವ ಯೇಸುವಿಗೆ ದೇವರ ಮೂಲ ಉದ್ದೇಶವನ್ನು ಪೂರೈಸುವ ಸಂಪೂರ್ಣ ಅಧಿಕಾರವಿದೆ. (ಯೆಶಾಯ 9:6, 7; ಲೂಕ 1:32, 33) ಹೌದು, ದೇವರ ಉದ್ದೇಶಗಳನ್ನು ನೆರವೇರಿಸುವುದರಲ್ಲಿ ಬೈಬಲು ಯೇಸುವನ್ನು ಒಬ್ಬ ಪ್ರಧಾನ ವ್ಯಕ್ತಿತ್ವವಾಗಿ ನಿರೂಪಿಸುತ್ತದೆ.

ಮೊದಲನೆಯ ಶತಮಾನದಲ್ಲಿ, ಜನಸಮೂಹಗಳು ಯೇಸು ಏನಾಗಿದ್ದನೋ ಅದಕ್ಕಾಗಿ ಅವನನ್ನು ಅಂಗೀಕರಿಸಿದರು, ಅಂದರೆ ಯೆಹೋವನ ಪರಮಾಧಿಕಾರವನ್ನು ಉನ್ನತಿಗೇರಿಸಲು ಮತ್ತು ಮಾನವಕುಲಕ್ಕಾಗಿ ಒಂದು ಪ್ರಾಯಶ್ಚಿತ್ತದೋಪಾದಿ ಸಾಯಲಿಕ್ಕಾಗಿ ಕಳುಹಿಸಲ್ಪಟ್ಟ ವಾಗ್ದತ್ತ ಮೆಸ್ಸೀಯನನ್ನಾಗಿ ಅಥವಾ ಕ್ರಿಸ್ತನನ್ನಾಗಿ ಅಂಗೀಕರಿಸಿದರು. (ಮತ್ತಾಯ 20:28; ಲೂಕ 2:25-32; ಯೋಹಾನ 17:25, 26; 18:37) ಯೇಸುವಿನ ಪರಿಚಯದ ಕುರಿತಾಗಿ ಸಂಶಯವಿದ್ದಿದ್ದರೆ, ಘೋರ ಹಿಂಸೆಯ ಎದುರಿನಲ್ಲಿ ಜನರು ಯೇಸುವಿನ ಶಿಷ್ಯರಾಗಲು ಕಿಂಚಿತ್ತೂ ಪ್ರಚೋದಿಸಲ್ಪಡುತ್ತಿರಲಿಲ್ಲ. ಧೈರ್ಯದಿಂದ ಮತ್ತು ಹುರುಪಿನಿಂದ, ಅವನು ಅವರಿಗೆ ಕೊಟ್ಟ “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಆಜ್ಞೆಯನ್ನು ಅವರು ಪಾಲಿಸಿದರು.​—ಮತ್ತಾಯ 28:19.

ಇಂದು, ಪ್ರಾಮಾಣಿಕರಾದ ಮತ್ತು ತಿಳಿವಳಿಕೆಯುಳ್ಳ ಲಕ್ಷಾಂತರ ಮಂದಿ ಕ್ರೈಸ್ತರಿಗೆ ಯೇಸು ಒಬ್ಬ ಕಾಲ್ಪನಿಕ ವ್ಯಕ್ತಿಯಾಗಿಲ್ಲ ಎಂಬುದು ಗೊತ್ತಿದೆ. ಅವರು ಅವನನ್ನು, ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿರುವ ದೇವರ ರಾಜ್ಯದ, ಮತ್ತು ಅತಿ ಶೀಘ್ರದಲ್ಲೇ ಭೂಮಿಯ ಮತ್ತು ಅದರ ವ್ಯವಹಾರಗಳ ಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲಿರುವ ಸಿಂಹಾಸನಾರೂಢ ರಾಜನನ್ನಾಗಿ ಅಂಗೀಕರಿಸಿದ್ದಾರೆ. ಈ ದೈವಿಕ ಸರಕಾರವು ಸಂತೋಷದಾಯಕ ಸುದ್ದಿಯಾಗಿದೆ, ಏಕೆಂದರೆ ಅದು ಲೋಕ ಸಮಸ್ಯೆಗಳ ನಿವಾರಣೆಯನ್ನು ವಾಗ್ದಾನಿಸುತ್ತದೆ. ಸತ್ಯ ಕ್ರೈಸ್ತರು “ರಾಜ್ಯದ ಈ ಸುವಾರ್ತೆ”ಯನ್ನು ಇತರರಿಗೆ ಪ್ರಕಟಪಡಿಸುವ ಮೂಲಕ ಯೆಹೋವನು ಆಯ್ಕೆಮಾಡಿರುವ ರಾಜನಿಗೆ ತಮ್ಮ ನಿಷ್ಠಾವಂತ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ.​—ಮತ್ತಾಯ 24:14.

ಜೀವಂತ ದೇವರ ಕುಮಾರನಾದ ಯೇಸುವಿನ ಮೂಲಕವಾಗಿರುವ ರಾಜ್ಯದ ಏರ್ಪಾಡನ್ನು ಬೆಂಬಲಿಸುವವರು, ಅನಂತ ಕಾಲದ ಆಶೀರ್ವಾದಗಳನ್ನು ಅನುಭವಿಸಲು ಜೀವಂತರಾಗಿರುವರು. ಈ ಆಶೀರ್ವಾದಗಳು ನಿಮ್ಮವೂ ಆಗಸಾಧ್ಯವಿದೆ! ಈ ಪತ್ರಿಕೆಯ ಪ್ರಕಾಶಕರು ನೀವು ನಿಜವಾದ ಯೇಸುವನ್ನು ತಿಳಿದುಕೊಳ್ಳಲಿಕ್ಕಾಗಿ ನಿಮಗೆ ಸಹಾಯಮಾಡಲು ಸಂತೋಷಿಸುವರು.

[ಪಾದಟಿಪ್ಪಣಿ]

^ ಪ್ಯಾರ. 5 ಸುವಾರ್ತಾ ದಾಖಲೆಗಳ ವಿಸ್ತೃತ ಪರಿಶೀಲನೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌​—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) ಎಂಬ ಪುಸ್ತಕದ 5ರಿಂದ 7ನೆಯ ಅಧ್ಯಾಯಗಳನ್ನು ನೋಡಿರಿ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಇತರರು ಹೇಳಿರುವ ಸಂಗತಿಗಳು

“ಲೋಕವು ಕಂಡಿರುವ ಮಹಾ ಬೋಧಕರಲ್ಲಿ ನಜರೇತಿನ ಯೇಸುವೂ ಒಬ್ಬನೆಂದು ನಾನು ಪರಿಗಣಿಸುತ್ತೇನೆ. . . . ನಾನು ಹಿಂದೂಗಳಿಗೆ, ನೀವು ಯೇಸುವಿನ ಬೋಧನೆಗಳನ್ನು ಭಕ್ತಿಯಿಂದ ಅಧ್ಯಯನ ಮಾಡದಿದ್ದಲ್ಲಿ ನಿಮ್ಮ ಜೀವಿತಗಳು ಅಪೂರ್ಣವಾಗಿರುವವು ಎಂದು ಹೇಳುವೆ.” ಮೋಹನ್‌ದಾಸ್‌ ಕೆ. ಗಾಂಧಿ,  ಯೇಸು ಕ್ರಿಸ್ತನ ಸಂದೇಶ (ಇಂಗ್ಲಿಷ್‌).

“ಇಷ್ಟೊಂದು ನೈಜವಾಗಿರುವ, ಇಷ್ಟೊಂದು ಸಂಪೂರ್ಣವಾಗಿರುವ, ಇಷ್ಟೊಂದು ಏಕಪ್ರಕಾರವಾಗಿ ಸಮಂಜಸವಾಗಿರುವ, ಇಷ್ಟೊಂದು ಪರಿಪೂರ್ಣವಾಗಿರುವ, ಇಷ್ಟೊಂದು ಮಾನವೀಯವಾಗಿರುವ, ಆದರೂ ಎಲ್ಲ ಮಾನವ ಮಹತ್ವಕ್ಕಿಂತ ಇಷ್ಟೊಂದು ಉಚ್ಚವಾಗಿರುವ ಒಂದು ವ್ಯಕ್ತಿತ್ವವು ಮೋಸ ಅಥವಾ ಕಟ್ಟುಕಥೆ ಆಗಿರಲು ಸಾಧ್ಯವೇ ಇಲ್ಲ. . . . ಒಬ್ಬ ಯೇಸುವನ್ನು ಸೃಷ್ಟಿಸಲಿಕ್ಕಾಗಿ, ಯೇಸುವಿಗಿಂತ ಮಹಾನ್‌ ಆಗಿರುವ ಒಬ್ಬ ವ್ಯಕ್ತಿಯು ಬೇಕಾಗಿರುವುದು.” ಫಿಲಿಪ್‌ ಶಾಫ್‌, ಕ್ರೈಸ್ತ ಚರ್ಚಿನ ಇತಿಹಾಸ (ಇಂಗ್ಲಿಷ್‌).

“ಅಂಥ ಬಲಶಾಲಿಯಾದ ಮತ್ತು ಚಿತ್ತಾಕರ್ಷಕ ವ್ಯಕ್ತಿತ್ವವನ್ನು, ನೈತಿಕತೆಯಲ್ಲಿ ಅಷ್ಟೊಂದು ಉನ್ನತವಾದ ಮತ್ತು ಮಾನವ ಸಹೋದರತ್ವದ ಅಷ್ಟೊಂದು ಪ್ರೇರಕವಾದ ಒಂದು ನೋಟವನ್ನು ಕೇವಲ ಕೆಲವೇ ಸಾಮಾನ್ಯ ಮನುಷ್ಯರು ರಚಿಸುವುದು ತಾನೇ, ಸುವಾರ್ತೆಗಳಲ್ಲಿ ದಾಖಲೆಯಾದ ಯಾವುದೇ ಅದ್ಭುತಕ್ಕಿಂತ ಹೆಚ್ಚು ನಂಬಲಸಾಧ್ಯವಾದ ಒಂದು ಅದ್ಭುತವಾಗಬಹುದು.” ವಿಲ್‌ ಡೂರಾಂಟ್‌, ಕೈಸರನು ಮತ್ತು ಕ್ರಿಸ್ತನು (ಇಂಗ್ಲಿಷ್‌).

“ನಿರ್ವಿವಾದವಾಗಿ ಜೀವಿಸಿದ್ದ ನಿಜ ವ್ಯಕ್ತಿಗಳು ಧರ್ಮಗಳನ್ನು ಆರಂಭಿಸಲು ಪ್ರಯತ್ನಿಸಿ ಸೋತುಹೋಗಿರುವುದನ್ನು ಪರಿಗಣಿಸುವುದಾದರೆ, ಅಸ್ತಿತ್ವದಲ್ಲಿ ಇಲ್ಲದಿದ್ದಂಥ ಒಬ್ಬನ ಬಿಕರಿ ಮಾಡುವ ತಂತ್ರದಿಂದ ಒಂದು ಭೌಗೋಳಿಕ ಧಾರ್ಮಿಕ ಚಳುವಳಿ ಆರಂಭಿಸಲ್ಪಟ್ಟಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿ ತೋರಬಹುದು.” ಗ್ರೆಗ್‌ ಈಸ್ಟರ್‌ಬ್ರುಕ್‌, ಪ್ರಶಾಂತವಾದ ನೀರುಗಳ ಬದಿಯಲ್ಲಿ (ಇಂಗ್ಲಿಷ್‌).

‘ಸುವಾರ್ತೆಗಳು ಖಂಡಿತವಾಗಿಯೂ ದಂತಕಥೆಗಳಾಗಿಲ್ಲ ಎಂಬುದನ್ನು, ಒಬ್ಬ ಸಾಹಿತ್ಯ ಚರಿತ್ರಕಾರನಾಗಿರುವ ನಾನು ಸಂಪೂರ್ಣವಾಗಿ ಮನಗಂಡಿದ್ದೇನೆ. ಏಕೆಂದರೆ ಇವು ದಂತಕಥೆಗಳಷ್ಟು ಕಲಾತ್ಮಕವಾಗಿಲ್ಲ. . . . ಯೇಸುವಿನ ಅಧಿಕಾಂಶ ಜೀವನದ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಹಾಗೂ ದಂತಕಥೆಯನ್ನು ಹೆಣೆಯುವ ಯಾರೊಬ್ಬರೂ ಕಥೆಯನ್ನು ಹಾಗೆಯೇ ಅಪೂರ್ಣವಾಗಿ ಇರುವಂತೆ ಬಿಡಲಾರರು.’ ಸಿ. ಎಸ್‌. ಲೂಅಸ್‌, ಅಪರಾಧಿಯ ಗೂಡಿನಲ್ಲಿ ದೇವರು (ಇಂಗ್ಲಿಷ್‌).

[ಪುಟ 7ರಲ್ಲಿರುವ ಚಿತ್ರಗಳು]

ಸುವಾರ್ತೆಗಳು ಯೇಸುವಿನ ಭಾವನೆಗಳ ವಿಸ್ತಾರವಾದ ವ್ಯಾಪ್ತಿಯನ್ನು ವ್ಯಕ್ತಪಡಿಸುತ್ತವೆ