ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಅವಿಶ್ವಾಸಿಯೂ ಧಾರ್ಮಿಕ ರಜಾದಿನದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವನೂ ಆಗಿರುವ ಗಂಡನಿಗೆ ತನ್ನ ಅಧೀನತೆಯನ್ನು ಮತ್ತು ದೇವರಿಗಾಗಿರುವ ತನ್ನ ನಿಷ್ಠೆಯನ್ನು ಒಬ್ಬ ಕ್ರೈಸ್ತ ಹೆಂಡತಿಯು ಹೇಗೆ ಸರಿದೂಗಿಸಬಲ್ಲಳು?

ಇದನ್ನು ಮಾಡಲಿಕ್ಕಾಗಿ ಅವಳಿಗೆ ವಿವೇಕ ಮತ್ತು ಜಾಣತನದ ಆವಶ್ಯಕತೆಯಿದೆ. ಅವಳು ತನ್ನ ಈ ಎರಡೂ ಕರ್ತವ್ಯಗಳನ್ನು ಸರಿದೂಗಿಸಲು ಪ್ರಯಾಸಪಡುವುದರಿಂದ ಸರಿಯಾದದ್ದನ್ನು ಮಾಡುತ್ತಿದ್ದಾಳೆ. ತದ್ರೀತಿಯ ಪರಿಸ್ಥಿತಿಯ ಕುರಿತಾಗಿ ಯೇಸು ಬುದ್ಧಿವಾದ ನೀಡಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾಯ 22:21) ಅವನು ಸರಕಾರಗಳ ಕಡೆಗಿನ ಕರ್ತವ್ಯಗಳ ಕುರಿತು ಮಾತಾಡುತ್ತಿದ್ದನು ಎಂಬುದು ನಿಜ. ಕ್ರೈಸ್ತರು ಇವುಗಳಿಗೆ ಅಧೀನರಾಗಿರಬೇಕು ಎಂದು ಅನಂತರ ಅವರಿಗೆ ಹೇಳಲಾಯಿತು. (ರೋಮಾಪುರ 13:1) ಆದರೂ, ಅವನ ಬುದ್ಧಿವಾದವನ್ನು, ಒಬ್ಬ ಹೆಂಡತಿಯು ತನ್ನ ಗಂಡನು ಅವಿಶ್ವಾಸಿಯಾಗಿರುವುದಾದರೂ ಅವನಿಗಾಗಿರುವ ಶಾಸ್ತ್ರೀಯ ಅಧೀನತೆಯನ್ನು ಮತ್ತು ದೇವರಿಗಾಗಿರುವ ತನ್ನ ಕರ್ತವ್ಯಗಳನ್ನು ಸರಿದೂಗಿಸುವ ವಿಷಯಕ್ಕೆ ಅನ್ವಯಿಸಬಹುದು.

ಒಬ್ಬ ಕ್ರೈಸ್ತನ ಮೊದಲ ಕರ್ತವ್ಯವು ಸರ್ವಶಕ್ತ ದೇವರಿಗಾಗಿದೆ ಮತ್ತು ಆತನಿಗೆ ಎಲ್ಲಾ ಸಮಯಗಳಲ್ಲಿ ನಿಷ್ಠೆಯಿಂದಿರುವುದನ್ನು ಬೈಬಲು ಒತ್ತಿಹೇಳುತ್ತದೆ ಎಂಬುದನ್ನು ಬೈಬಲಿನೊಂದಿಗೆ ಪರಿಚಿತರಾಗಿರುವ ಯಾರೊಬ್ಬರೂ ನಿರಾಕರಿಸಲಾರರು. (ಅ. ಕೃತ್ಯಗಳು 5:29) ವಿಷಯವು ಹೀಗಿದ್ದರೂ, ಅನೇಕ ಸಂದರ್ಭಗಳಲ್ಲಿ, ದೇವರ ಉಚ್ಚ ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ಪಾಲ್ಗೊಳ್ಳದೆಯೇ, ಒಬ್ಬ ನಿಜ ಆರಾಧಕನು/ಳು ಅಧಿಕಾರದಲ್ಲಿರುವ ಒಬ್ಬ ಅವಿಶ್ವಾಸಿಯ ಕೋರಿಕೆಗಳಿಗೆ ಮತ್ತು ಹಕ್ಕೊತ್ತಾಯದ ಕೇಳಿಕೆಗಳಿಗೆ ಪರಿಗಣನೆ ತೋರಿಸಬಹುದು.

ದಾನಿಯೇಲ ಪುಸ್ತಕದ 3ನೇ ಅಧ್ಯಾಯದಲ್ಲಿ ವಿವರಿಸಲ್ಪಟ್ಟಿರುವ ಪ್ರಕಾರ, ಮೂವರು ಇಬ್ರಿಯರಲ್ಲಿ ನಾವೊಂದು ಬೋಧಪ್ರದ ಮಾದರಿಯನ್ನು ಕಂಡುಕೊಳ್ಳುತ್ತೇವೆ. ಅವರ ಸರಕಾರಿ ಅಧಿಕಾರಿಯಾದ ನೆಬೂಕದ್ನೆಚ್ಚರನು, ಅವರು ಮತ್ತು ಇತರರು ದೂರಾ ಬೈಲಿನಲ್ಲಿ ಹಾಜರಾಗಬೇಕು ಎಂಬ ಆಜ್ಞೆಯನ್ನಿತ್ತನು. ಅಲ್ಲಿ ಸುಳ್ಳಾರಾಧನೆಯು ಯೋಜಿಸಲ್ಪಟ್ಟಿದೆ ಎಂಬುದನ್ನು ಮನಗಾಣುತ್ತಾ, ಅಲ್ಲಿ ಹೋಗದೇ ಇರುವುದು ಒಳ್ಳೇದು ಎಂದು ಆ ಮೂವರು ಇಬ್ರಿಯರು ಯೋಚಿಸಿದ್ದಿರಬಹುದು. ಪ್ರಾಯಶಃ ದಾನಿಯೇಲನು ಒಂದು ವಿನಾಯಿತಿಯನ್ನು ಪಡೆದುಕೊಳ್ಳಲು ಸಾಧ್ಯವಿತ್ತು, ಆದರೆ ಈ ಮೂವರು ಹಾಗೆ ಮಾಡಸಾಧ್ಯವಿರಲಿಲ್ಲ. * ಆದುದರಿಂದ ಅಲ್ಲಿಗೆ ಹೋಗಿ ಹಾಜರಾಗುವಷ್ಟರ ಮಟ್ಟಿಗೆ ಅವರು ಅಧೀನರಾದರು, ಆದರೆ ಅವರು ಯಾವುದೇ ತಪ್ಪಾದ ಆಚರಣೆಯಲ್ಲಿ ಭಾಗವಹಿಸುವಂತಿರಲಿಲ್ಲ​—ಭಾಗವಹಿಸಲೂ ಇಲ್ಲ.​—ದಾನಿಯೇಲ 3:1-18.

ತದ್ರೀತಿಯಲ್ಲಿ, ರಜಾದಿನದ ಸಂದರ್ಭಗಳಲ್ಲಿ ಒಬ್ಬ ಅವಿಶ್ವಾಸಿ ಗಂಡನು ತನ್ನ ಕ್ರೈಸ್ತ ಹೆಂಡತಿಯು ಮಾಡಬಯಸದಂಥ ಒಂದು ವಿಷಯವನ್ನು ಮಾಡುವಂತೆ ಕೋರಬಹುದು ಅಥವಾ ಹಕ್ಕಿನಿಂದ ಕೇಳಿಕೊಳ್ಳಬಹುದು. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ: ಅವನು ಮತ್ತು ಇತರರು ಸಂಭ್ರಮದಿಂದ ಆಚರಿಸುವ ಒಂದು ರಜಾದಿನಕ್ಕಾಗಿ ನಿರ್ದಿಷ್ಟವಾದ ಒಂದು ಊಟವನ್ನು ತಯಾರಿಸುವಂತೆ ಅವಳಿಗೆ ಹೇಳಬಹುದು. ಅಥವಾ ತನ್ನ ಕುಟುಂಬವು (ಅವನ ಹೆಂಡತಿಯನ್ನೂ ಸೇರಿಸಿ) ಆ ದಿನದಂದು ಒಂದು ಊಟಕ್ಕಾಗಿ ಅಥವಾ ಸುಮ್ಮನೆ ಸ್ನೇಹಪರ ಭೇಟಿಗಾಗಿ ತನ್ನ ಸಂಬಂಧಿಕರ ಮನೆಗೆ ಹೋಗುವಂತೆ ಅವನು ಒತ್ತಾಯಪಡಿಸಬಹುದು. ಅಥವಾ ರಜಾದಿನಕ್ಕಿಂತ ಮುಂಚಿತವಾಗಿ, ತನ್ನ ಹೆಂಡತಿ ಷಾಪಿಂಗ್‌ ಮಾಡಲು ಹೋಗುವಾಗ, ಅವನಿಗಾಗಿ ಕೆಲವು ಖರೀದಿಗಳನ್ನು ಮಾಡಿಕೊಂಡು ಬರುವಂತೆ ಹೇಳಬಹುದು​—ಅವು ರಜಾದಿನಕ್ಕೆ ವಿಶಿಷ್ಟವಾಗಿರುವ ಆಹಾರಗಳು, ಕೊಡುಗೆಗಳಾಗಿ ಉಪಯೋಗಿಸುವ ವಸ್ತುಗಳು, ಅಥವಾ ತನ್ನ ಕೊಡುಗೆಗಳೊಂದಿಗೆ ಉಪಯೋಗಿಸಲಿಕ್ಕಾಗಿ ಗ್ರೀಟಿಂಗ್‌ ಕಾರ್ಡ್ಸ್‌ ಅಥವಾ ಕಟ್ಟುವ ಪೇಪರ್‌ ಆಗಿರಬಹುದು.

ಇಲ್ಲಿ ಪುನಃ ಒಬ್ಬ ಕ್ರೈಸ್ತ ಹೆಂಡತಿಯು ಸುಳ್ಳು ಧರ್ಮದ ಆಚರಣೆಗಳಲ್ಲಿ ಭಾಗವಹಿಸದಿರಲು ದೃಢಸಂಕಲ್ಪವುಳ್ಳವಳಾಗಿರತಕ್ಕದ್ದು, ಆದರೆ ಈ ರೀತಿಯ ಕೋರಿಕೆಗಳ ಕುರಿತಾಗಿ ಏನು? ಅವನು ಕುಟುಂಬದ ತಲೆಯಾಗಿದ್ದಾನೆ, ಮತ್ತು ದೇವರ ವಾಕ್ಯವು ಹೇಳುವುದು: “[ಹೆಂಡತಿಯರೇ], ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ.” (ಕೊಲೊಸ್ಸೆ 3:18) ಇಂತಹ ವಿಷಯಗಳಲ್ಲಿ, ಅವಳು ದೇವರಿಗೆ ನಿಷ್ಠಾವಂತಳಾಗಿದ್ದು, ಅದೇ ಸಮಯದಲ್ಲಿ ಒಬ್ಬ ಹೆಂಡತಿಯು ತೋರಿಸಬೇಕಾದ ಅಧೀನತೆಯನ್ನು ತೋರಿಸಸಾಧ್ಯವಿದೆಯೋ? ತನ್ನ ಗಂಡನಿಗೆ ವಿಧೇಯತೆ ತೋರಿಸುವುದನ್ನು ಮತ್ತು ಅದಕ್ಕಿಂತಲೂ ಪ್ರಾಮುಖ್ಯವಾಗಿ ಯೆಹೋವನಿಗೆ ವಿಧೇಯಳಾಗಿರುವುದನ್ನು ಹೇಗೆ ಸರಿದೂಗಿಸುವುದು ಎಂಬುದನ್ನು ಅವಳು ತೀರ್ಮಾನಿಸಬೇಕು.

ಬೇರೆ ಸಮಯಗಳಲ್ಲಿ, ಒಂದು ನಿರ್ದಿಷ್ಟವಾದ ಊಟವನ್ನು ತಯಾರಿಸುವಂತೆ ಅವಳ ಗಂಡನು ಅವಳಿಗೆ ಹೇಳಬಹುದು; ಆ ಊಟವು ಒಂದುವೇಳೆ ಅವನ ಅಚ್ಚುಮೆಚ್ಚಿನ ಊಟವಾಗಿರಬಹುದು ಇಲ್ಲವೇ ಒಂದು ವಿಶಿಷ್ಟವಾದ ಋತುವಿನಲ್ಲಿ ಅದನ್ನು ತಿನ್ನುವ ರೂಢಿ ಅವನಿಗಿರಬಹುದು. ಅವನಿಗೆ ಪ್ರೀತಿ ತೋರಿಸಲು ಮತ್ತು ಅವನ ತಲೆತನಕ್ಕೆ ಪರಿಗಣನೆ ತೋರಿಸಲು ಅವಳು ಬಯಸುತ್ತಾಳೆ. ಅವನು ಅದನ್ನು ಒಂದು ರಜಾದಿನದ ಸಂದರ್ಭದಲ್ಲಿ ಮಾಡುವಂತೆ ಕೋರಿದರೂ ಅವಳು ಹೀಗೆ ಮಾಡುವಳೋ? ಕೆಲವು ಕ್ರೈಸ್ತ ಹೆಂಡತಿಯರಿಗೆ, ಇದನ್ನು ಕೇವಲ ದೈನಂದಿನ ಆಹಾರವನ್ನು ತಯಾರಿಸುವ ಸಾಮಾನ್ಯ ಕೆಲಸವಾಗಿ ಪರಿಗಣಿಸುತ್ತಾ, ಶುದ್ಧ ಮನಸ್ಸಾಕ್ಷಿಯಿಂದ ಹೀಗೆ ಮಾಡಲು ಸಾಧ್ಯವಾಗಬಹುದು. ನಿಶ್ಚಯವಾಗಿಯೂ ಯಾವ ನಿಷ್ಠಾವಂತ ಕ್ರೈಸ್ತಳೂ ಯಾವುದೇ ರಜಾದಿನದ ವೈಶಿಷ್ಟ್ಯವನ್ನು ಅದಕ್ಕೆ ಸಂಬಂಧಿಸಲಾರಳು, ಒಂದುವೇಳೆ ಅವಳ ಗಂಡನು ಅದಕ್ಕೆ ಆ ರೀತಿಯ ವೈಶಿಷ್ಟ್ಯವನ್ನು ಕೊಟ್ಟರೂ ಸಹ. ತದ್ರೀತಿಯಲ್ಲಿ, ಪ್ರತಿ ತಿಂಗಳಿನ ಅಥವಾ ವರ್ಷದ ವಿವಿಧ ಸಮಯಗಳಲ್ಲಿ ಅವನು ತನ್ನ ಸಂಬಂಧಿಕರನ್ನು ಭೇಟಿಮಾಡುವಾಗ ಅವಳು ತನ್ನೊಂದಿಗೆ ಇರುವುದನ್ನು ಅವನು ಅಗತ್ಯಪಡಿಸಬಹುದು. ಅದು ಒಂದು ಧಾರ್ಮಿಕ ರಜಾದಿನವಾಗಿದ್ದರೂ ಅವಳು ಅವನೊಂದಿಗೆ ಹೋಗುವಳೋ? ಅಥವಾ ಅವನ ಕೋರಿಕೆಗನುಸಾರ, ಅವಳು ಅವನಿಗಾಗಿ ಖರೀದಿಸುವಂಥ ವಸ್ತುಗಳಿಂದ ಅವನು ಏನು ಮಾಡಬಯಸುತ್ತಾನೆ ಎಂದು ತೀರ್ಮಾನಿಸದೇ, ಅವಳು ಷಾಪಿಂಗ್‌ ಮಾಡುವಾಗ ಅವುಗಳನ್ನು ಖರೀದಿಸಿಕೊಂಡು ಬರುವ ಮನಸ್ಸುಳ್ಳವಳಾಗಿರುವಳೋ?

ಒಬ್ಬ ಕ್ರೈಸ್ತ ಹೆಂಡತಿಯು, ಪರರ ಕುರಿತಾಗಿಯೂ ಅವರ ಮೇಲೆ ಬೀರುವ ಪ್ರಭಾವದ ಕುರಿತಾಗಿಯೂ ಯೋಚಿಸಬೇಕು ಎಂಬುದು ಖಂಡಿತ. (ಫಿಲಿಪ್ಪಿ 2:4) ಹೇಗೆ ಆ ಮೂವರು ಇಬ್ರಿಯರು ತಾವು ದೂರಾ ಬೈಲಿಗೆ ಪ್ರಯಾಣಿಸುತ್ತಿರುವುದನ್ನು ಇತರರು ನೋಡದಿರುವಂತೆ ಬಯಸಿದ್ದಿರಬಹುದೋ, ಹಾಗೆಯೇ ತನಗೆ ಆ ರಜಾದಿನದೊಂದಿಗೆ ಸಂಬಂಧವಿದೆ ಎಂಬ ಯಾವುದೇ ಅನಿಸಿಕೆಯನ್ನು ಕೊಡುವುದನ್ನು ಅವಳು ದೂರಮಾಡಲು ಬಯಸುವಳು. ಆದುದರಿಂದ, ತನ್ನನ್ನು ಪ್ರೀತಿಸುವ ಮತ್ತು ಗೌರವಿಸುವ ಒಬ್ಬ ಹೆಂಡತಿಗೆ ಅನುಕೂಲವಾಗುವಂತೆ, ಅವಳ ಭಾವನೆಗಳಿಗೆ ಪರಿಗಣನೆ ತೋರಿಸುತ್ತಾ, ಕೆಲವು ರಜಾದಿನ ಸಂಬಂಧಿತ ವಿಷಯಗಳನ್ನು ಅವನೇ ಮಾಡಿಕೊಳ್ಳಲು ಸಾಧ್ಯವಿರಬಹುದೇ ಎಂಬುದನ್ನು ಜಾಣತನದಿಂದ ತನ್ನ ಗಂಡನೊಂದಿಗೆ ವಿವೇಚಿಸಲು ಅವಳು ಪ್ರಯತ್ನಿಸಬಹುದು. ಅವಳು ಸುಳ್ಳು ಧರ್ಮದ ಆಚರಣೆಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸುವುದಾದರೆ, ಅದರಿಂದುಂಟಾಗುವ ಗಮನಾರ್ಹವಾದ ಮುಜುಗರ ಪರಿಸ್ಥಿತಿಯಲ್ಲಿ ಇಬ್ಬರನ್ನೂ ಹಾಕದೇ ಇರುವ ಜಾಣತನವನ್ನು ಅವನು ನೋಡಲು ಶಕ್ತನಾಗಬಹುದು. ಹೌದು, ಮುಂಚಿತವಾದ ಶಾಂತಿದಾಯಕ ಸಂಭಾಷಣೆಯು ಒಂದು ಸಮಾಧಾನಕರ ಪರಿಹಾರಕ್ಕೆ ನಡೆಸಬಹುದು.​—ಜ್ಞಾನೋಕ್ತಿ 22:3.

ಕೊನೆಯ ಮಾತಾಗಿ, ಒಬ್ಬ ವಿಶ್ವಾಸಿ ಕ್ರೈಸ್ತಳು ವಾಸ್ತವಾಂಶಗಳನ್ನು ಸರಿದೂಗಿಸಿ ನೋಡಬೇಕು, ನಂತರ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕು. ಮೂವರು ಇಬ್ರಿಯರ ವಿಷಯದಲ್ಲಿ ಇದ್ದಂತೆಯೇ, ದೇವರಿಗಾಗಿರುವ ವಿಧೇಯತೆಗೆ ಮೊದಲ ಸ್ಥಾನವನ್ನು ಕೊಡಬೇಕು. (1 ಕೊರಿಂಥ 10:31) ಆದರೆ ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಅಧಿಕಾರವಿರುವ ಒಬ್ಬರ ಕೋರಿಕೆಗನುಸಾರ ರಾಜಿಮಾಡಿಕೊಳ್ಳದಿರುವ ಯಾವ ವಿಷಯಗಳನ್ನು ಮಾಡಸಾಧ್ಯವಿದೆ ಎಂಬುದನ್ನು ಒಬ್ಬ ವೈಯಕ್ತಿಕ ಕ್ರೈಸ್ತಳು/ನು ತೀರ್ಮಾನಿಸತಕ್ಕದ್ದು.

[ಪಾದಟಿಪ್ಪಣಿ]

^ ಪ್ಯಾರ. 5 ಇಸವಿ 2001, ಆಗಸ್ಟ್‌ 1ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ಎಂಬ ಭಾಗವನ್ನು ನೋಡಿರಿ.