ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಿದ್ಧಮನಸ್ಸು ಜನರನ್ನು ಗಿಲ್ಯಡ್‌ಗೆ ಕರೆತರುತ್ತದೆ

ಸಿದ್ಧಮನಸ್ಸು ಜನರನ್ನು ಗಿಲ್ಯಡ್‌ಗೆ ಕರೆತರುತ್ತದೆ

ಸಿದ್ಧಮನಸ್ಸು ಜನರನ್ನು ಗಿಲ್ಯಡ್‌ಗೆ ಕರೆತರುತ್ತದೆ

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌, ಸಮರ್ಪಿತ ಸ್ತ್ರೀಪುರುಷರನ್ನು ವಿದೇಶೀ ಮಿಷನೆರಿ ಸೇವೆಗಾಗಿ ತರಬೇತುಗೊಳಿಸಲು ಅಸ್ತಿತ್ವದಲ್ಲಿದೆ. ಯಾರು ಗಿಲ್ಯಡ್‌ಗೆ ಬರಲು ಅರ್ಹರಾಗಿದ್ದಾರೆ? ಯಾರಿಗೆ ಸಿದ್ಧಮನಸ್ಸು ಇದೆಯೋ ಅವರೇ. (ಕೀರ್ತನೆ 110:3) 2001ರ ಸೆಪ್ಟೆಂಬರ್‌ 8ರಂದು 111ನೆಯ ತರಗತಿಯು ಪದವಿಯನ್ನು ಪಡೆದುಕೊಂಡಾಗ ಇದು ಸುವ್ಯಕ್ತವಾಯಿತು.

ಆ ತರಗತಿಯ ಕೆಲವು ವಿದ್ಯಾರ್ಥಿಗಳು, ಎಲ್ಲಿ ಹೆಚ್ಚಿನ ಆವಶ್ಯಕತೆಯಿದೆಯೋ ಅಲ್ಲಿ ಸೇವೆಮಾಡಲಿಕ್ಕಾಗಿ ಸಿದ್ಧಮನಸ್ಸಿನಿಂದ ಈಗಾಗಲೇ ತಮ್ಮ ಕುಟುಂಬವನ್ನು, ಸ್ನೇಹಿತರನ್ನು ಹಾಗೂ ಸ್ವದೇಶವನ್ನು ಬಿಟ್ಟುಬಂದವರಾಗಿದ್ದರು. ಹಾಗೆ ಮಾಡುವ ಮೂಲಕ, ಬೇರೊಂದು ಪರಿಸರದಲ್ಲಿ ಜೀವಿಸಲಿಕ್ಕಾಗಿ ತಾವು ಹೊಂದಾಣಿಕೆಗಳನ್ನು ಮಾಡಸಾಧ್ಯವಿದೆಯೋ ಎಂದು ತಮ್ಮನ್ನೇ ಪರೀಕ್ಷಿಸಿ ನೋಡಿದ್ದರು. ಉದಾಹರಣೆಗೆ, ದೇವರ ರಾಜ್ಯದ ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ ರೀಶಾ ಮತ್ತು ನಟಾಲೀ ಅವರು ಬೊಲಿವಿಯಕ್ಕೂ, ಟಾಡ್‌ ಮತ್ತು ಮಿಶೆಲ್‌ ಡೊಮಿನಿಕನ್‌ ರಿಪಬ್ಲಿಕ್‌ಗೂ, ಡೇವಿಡ್‌ ಮತ್ತು ಮೋನೀಕ್‌ ಏಷಿಯಾದಲ್ಲಿರುವ ಒಂದು ದೇಶಕ್ಕೂ ಸ್ಥಳಾಂತರಿಸಲಿಕ್ಕಾಗಿ ಏರ್ಪಾಡುಗಳನ್ನು ಮಾಡಿದರು. ಇತರ ವಿದ್ಯಾರ್ಥಿಗಳು ಈಗಾಗಲೇ ನಿಕರಾಗುವ, ಎಕ್ವಡಾರ್‌ ಮತ್ತು ಅಲ್ಬೇನಿಯಗಳಲ್ಲಿ ಸೇವೆಮಾಡಿದ್ದರು.

ಕ್ರಿಸ್‌ಟೀಯು ಪ್ರೌಢ ಶಾಲೆಯಲ್ಲಿ ಸ್ಪ್ಯಾನಿಷ್‌ ಭಾಷೆಯನ್ನು ಕಲಿಯುವಂತೆ ಉತ್ತೇಜಿಸಲ್ಪಟ್ಟಿದ್ದಳು. ಅವಳು ಮದುವೆಯಾಗುವುದಕ್ಕೆ ಮೊದಲು ಎಕ್ವಡಾರ್‌ನಲ್ಲಿ ಎರಡು ವರ್ಷಗಳನ್ನು ಕಳೆಯಲು ಸಿದ್ಧಳಾಗುವಂತೆ ಇದು ಅವಳಿಗೆ ಸಹಾಯಮಾಡಿತು. ಇತರರು ತಮ್ಮ ಸ್ವದೇಶಗಳಲ್ಲಿದ್ದ ವಿದೇಶೀ ಭಾಷೆಯ ಸಭೆಗಳಿಗೆ ಸೇರಿಕೊಂಡರು. ಬೇರೆ ರೀತಿಯ ಪಂಥಾಹ್ವಾನವನ್ನು ಎದುರಿಸುತ್ತಾ, ಸೌಲ್‌ ಮತ್ತು ಪ್ರೀಶೀಲಾ ಎಂಬುವವರು, ಗಿಲ್ಯಡ್‌ ಶಾಲೆಗೆ ಬರುವುದಕ್ಕೆ ಮೊದಲು ತಮ್ಮ ಇಂಗ್ಲಿಷ್‌ ಭಾಷೆಯನ್ನು ಉತ್ತಮಗೊಳಿಸಲಿಕ್ಕಾಗಿ ಕಷ್ಟಪಟ್ಟು ಪ್ರಯತ್ನಿಸುವ ಮೂಲಕ ಸಿದ್ಧಮನಸ್ಸನ್ನು ತೋರಿಸಿದರು.

ಮಿಷನೆರಿ ತರಬೇತಿಯ 20 ವಾರಗಳು ಅತಿ ಬೇಗನೆ ಹಾರಿಹೋದವು. ಪದವಿ ಪಡೆದುಕೊಳ್ಳುವ ದಿನವು ಆಗಮಿಸಿತು, ಮತ್ತು ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸೇರಿಕೊಂಡು ವಿವೇಕಯುತವಾದ ಸಲಹೆಗೆ ಮತ್ತು ಉತ್ತೇಜನದ ಅಂತಿಮ ಮಾತುಗಳಿಗೆ ಕಿವಿಗೊಟ್ಟರು.

ಗಿಲ್ಯಡ್‌ ಶಾಲೆಯ ಏಳನೆಯ ತರಗತಿಯ ಪದವೀಧರರಾಗಿದ್ದ ಥಿಯೊಡರ್‌ ಜಾರಸ್‌ ಅವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಈಗ ಇವರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಆರಂಭದ ಮಾತುಗಳು, ನಾವು ಗಿಲ್ಯಡ್‌ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ, ಅಂದರೆ ನಿವಾಸಿತ ಭೂಮಿಯಲ್ಲೆಲ್ಲಾ ರಾಜ್ಯ ಸುವಾರ್ತೆಯನ್ನು ಸಾರುವ ಉದ್ದೇಶದಿಂದ ಒಂದು ಸಂಸ್ಥೆಯೋಪಾದಿ ಎಂದೂ ವಿಚಲಿತರಾಗಿಲ್ಲ ಎಂಬ ವಾಸ್ತವಾಂಶವನ್ನು ಎತ್ತಿತೋರಿಸಿದವು. (ಮಾರ್ಕ 13:10) ಗತ ಸಮಯದಲ್ಲಿ ತಾವು ಮಾಡಿರುವುದಕ್ಕಿಂತಲೂ ಹೆಚ್ಚು ವ್ಯಾಪಕವಾಗಿ ಮತ್ತು ಲೋಕದ ಯಾವ ಕ್ಷೇತ್ರಗಳಲ್ಲಿ ತರಬೇತಿ ಪಡೆದುಕೊಂಡಿರುವ ಮಿಷನೆರಿಗಳ ವಿಶೇಷ ಆವಶ್ಯಕತೆಯಿದೆಯೋ ಅಂಥ ಕ್ಷೇತ್ರಗಳಲ್ಲಿ ಈ ಸಾರುವ ಚಟುವಟಿಕೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಗಿಲ್ಯಡ್‌ ಶಾಲೆಯು ಅರ್ಹ ವಿದ್ಯಾರ್ಥಿಗಳನ್ನು ಸನ್ನದುಗೊಳಿಸುತ್ತದೆ. ಪ್ರಸ್ತುತ ಈ ತರಗತಿಯ ಪದವೀಧರರಾಗಿ, ಅವರು ನೇಮಿಸಲ್ಪಟ್ಟಿರುವ 19 ದೇಶಗಳಲ್ಲಿ ಈಗಾಗಲೇ ಸೇವೆಮಾಡುತ್ತಿರುವ ಮಿಷನೆರಿಗಳೊಂದಿಗೆ ಸೇರಿಕೊಳ್ಳುವ ಈ ವಿದ್ಯಾರ್ಥಿಗಳು, ತಮ್ಮ ಗಿಲ್ಯಡ್‌ ತರಬೇತಿಯನ್ನು ಸದುಪಯೋಗಿಸಿಕೊಳ್ಳುವಂತೆ ಸಹೋದರ ಜಾರಸ್‌ ಅವರಿಗೆ ಸಲಹೆ ನೀಡಿದರು.

ಪದವೀಧರರಿಗೆ ಸಮಯೋಚಿತ ಬುದ್ಧಿವಾದ

ತದನಂತರ ಸರದಿಯಾಗಿ ಬೇರೆ ಬೇರೆ ಭಾಷಣಗಳು ಕೊಡಲ್ಪಟ್ಟವು. ಅಮೆರಿಕದ ಬ್ರಾಂಚ್‌ ಕಮಿಟಿಯ ಸದಸ್ಯರಾಗಿರುವ ವಿಲಿಯಮ್‌ ವಾನ್‌ ಡೇ ವಾಲ್‌ ಅವರು, “ಮಿಷನೆರಿ ಹುರುಪು​—ನಿಜ ಕ್ರೈಸ್ತರ ಒಂದು ಗುರುತು” ಎಂಬ ವಿಷಯದ ಕುರಿತು ಮಾತಾಡಿದರು. ಮತ್ತಾಯ 28:​19, 20ರಲ್ಲಿ ದಾಖಲಿಸಲ್ಪಟ್ಟಿರುವ ‘ಶಿಷ್ಯರನ್ನಾಗಿ ಮಾಡುವ’ ನೇಮಕದ ಮೇಲೆ ಅವರು ಗಮನವನ್ನು ಕೇಂದ್ರೀಕರಿಸಿದರು. ಇದಲ್ಲದೆ ಅವರು ವಿದ್ಯಾರ್ಥಿಗಳಿಗೆ ಬುದ್ಧಿಹೇಳಿದ್ದು: “ತನ್ನ ಮಿಷನೆರಿ ನೇಮಕವನ್ನು ಹುರುಪಿನಿಂದ ಹಾಗೂ ಅತ್ಯುತ್ಸಾಹದಿಂದ ಪೂರೈಸಿದಂಥ ಯೇಸುವನ್ನು ಅನುಕರಿಸಿರಿ.” ಭಾವೀ ಮಿಷನೆರಿಗಳು ಮಿಷನೆರಿ ಕೆಲಸಕ್ಕಾಗಿರುವ ತಮ್ಮ ಹುರುಪನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುತ್ತಾ, ಅವರು ಉತ್ತೇಜಿಸಿದ್ದು: “ಪ್ರಾಯೋಗಿಕ ಶೆಡ್ಯೂಲ್‌ಗೆ ಅಂಟಿಕೊಳ್ಳಿರಿ; ಒಳ್ಳೆಯ ವೈಯಕ್ತಿಕ ಅಭ್ಯಾಸ ರೂಢಿಗಳನ್ನು ಕಾಪಾಡಿಕೊಳ್ಳುತ್ತಾ, ದೇವಪ್ರಭುತ್ವಾತ್ಮಕ ವಿಷಯಗಳಲ್ಲಿ ಸದ್ಯೋಚಿತ ತಿಳಿವಳಿಕೆಯನ್ನು ಪಡೆದುಕೊಳ್ಳಿರಿ; ಮತ್ತು ನೀವು ಏಕೆ ನಿಮ್ಮ ನೇಮಕದಲ್ಲಿದ್ದೀರಿ ಎಂಬುದರ ಕಾರಣಗಳ ಮೇಲೆ ಯಾವಾಗಲೂ ಗಮನವನ್ನು ಕೇಂದ್ರೀಕರಿಸಿರಿ.”

ಕಾರ್ಯಕ್ರಮದ ಮುಂದಿನ ಭಾಗವನ್ನು ನಿರ್ವಹಿಸಿದವರು, ಆಡಳಿತ ಮಂಡಲಿಯ ಸದಸ್ಯರಾಗಿರುವ ಗೈ ಪಿಯರ್ಸ್‌. “‘ನಿಮ್ಮ ವಿವೇಚನಾಶಕ್ತಿಯನ್ನು’ ಬೆಳೆಸಿಕೊಳ್ಳುತ್ತಾ ಇರಿ” ಎಂಬ ವಿಷಯದ ಕುರಿತು ಅವರು ಭಾಷಣ ನೀಡಿದರು. (ರೋಮಾಪುರ 12:1, NW) ಪದವಿ ಪಡೆದುಕೊಳ್ಳುತ್ತಿರುವ ತರಗತಿಗೆ ಅವರು ಪ್ರಾಯೋಗಿಕ ಬುದ್ಧಿವಾದವನ್ನು ನೀಡಿದರು, ಮತ್ತು ತಮ್ಮ ದೇವದತ್ತ ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸುವಂತೆ ಅವರನ್ನು ಉತ್ತೇಜಿಸುತ್ತಾ ಅವರು ಹೇಳಿದ್ದು: “ತನ್ನ ವಾಕ್ಯದ ಮೂಲಕ ಯೆಹೋವನು ನಿಮಗೆ ಏನು ಹೇಳುತ್ತಿದ್ದಾನೋ ಅದರ ಕುರಿತು ಮನನಮಾಡುತ್ತಾ ಇರಿ. ಇದು ನಿಮ್ಮನ್ನು ಕಾಪಾಡುವುದು.” (ಜ್ಞಾನೋಕ್ತಿ 2:11) ತಮ್ಮ ‘ವಿವೇಚನಾಶಕ್ತಿಯನ್ನು’ ತಡೆಗಟ್ಟದಂತೆ ಅವರು ತಮ್ಮ ಸ್ವಂತ ದೃಷ್ಟಿಕೋನಗಳನ್ನು ಅಧಿಕಾರಯುತವಾಗಿ ಪ್ರತಿಪಾದಿಸುವವರಾಗಿರಬಾರದು ಎಂದು ಸಹ ಸಹೋದರ ಪಿಯರ್ಸ್‌ ಆ ತರಗತಿಗೆ ಬುದ್ಧಿ ಹೇಳಿದರು. ಪದವೀಧರರು ಮಿಷನೆರಿಗಳೋಪಾದಿ ಸೇವೆಮಾಡುವಾಗ, ಈ ಸಮಯೋಚಿತ ಮರುಜ್ಞಾಪನಗಳು ಸಹಾಯಕರವಾಗಿ ಪರಿಣಮಿಸುವವು ಎಂಬುದಂತೂ ಸ್ಪಷ್ಟ.

ತದನಂತರ ಅಧ್ಯಕ್ಷರು, ಗಿಲ್ಯಡ್‌ ಶಿಕ್ಷಕರಲ್ಲಿ ಒಬ್ಬರಾದ ಲೋರನ್ಸ್‌ ಬೊವೆನ್‌ ಅವರ ಪರಿಚಯವನ್ನು ಮಾಡಿಕೊಟ್ಟರು. ಇವರು, “ಬೇರೆ ಯಾವುದನ್ನೂ ತಿಳಿಯದವರಾಗಿ ಇರಲು ತೀರ್ಮಾನಿಸಿರಿ” ಎಂಬ ವಿಷಯದ ಕುರಿತು ಮಾತಾಡಿದರು. ಕೊರಿಂಥದಲ್ಲಿನ ತನ್ನ ಮಿಷನೆರಿ ಕೆಲಸದ ಸಂಬಂಧದಲ್ಲಿ ಅಪೊಸ್ತಲ ಪೌಲನು, “ವಧಾಸ್ತಂಭಕ್ಕೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯದವನಾಗಿ . . . ಇರುವೆನೆಂದು ತೀರ್ಮಾನಿಸಿ”ದ್ದನು ಎಂದು ಅವರು ಹೇಳಿದರು. (1 ಕೊರಿಂಥ 2:2, NW) ಇಡೀ ವಿಶ್ವದಲ್ಲೇ ಮಹಾನ್‌ ಶಕ್ತಿಯಾಗಿರುವ ಪವಿತ್ರಾತ್ಮವು, ಬೈಬಲಿನಾದ್ಯಂತ ಪ್ರತಿಬಿಂಬಿಸಲ್ಪಟ್ಟಿರುವ ಸಂದೇಶಕ್ಕೆ, ಅಂದರೆ ತನ್ನ ವಾಗ್ದತ್ತ ಸಂತಾನದ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣಕ್ಕೆ ಬೆಂಬಲವನ್ನು ನೀಡುತ್ತದೆ ಎಂಬುದು ಪೌಲನಿಗೆ ತಿಳಿದಿತ್ತು. (ಆದಿಕಾಂಡ 3:15) ಪದವಿಯನ್ನು ಪಡೆದುಕೊಳ್ಳುತ್ತಿರುವ 48 ಮಂದಿ ವಿದ್ಯಾರ್ಥಿಗಳು, ಪೌಲ ಹಾಗೂ ತಿಮೊಥೆಯರ ಹಾಗೆ ಇರುವಂತೆ ಮತ್ತು ‘ಸ್ವಸ್ಥಬೋಧನಾವಾಕ್ಯಗಳಿಗೆ’ ಬಲವಾಗಿ ಅಂಟಿಕೊಳ್ಳುತ್ತಾ ಮಿಷನೆರಿಗಳೋಪಾದಿ ಯಶಸ್ಸನ್ನು ಕಂಡುಕೊಳ್ಳುವಂತೆ ಉತ್ತೇಜಿಸಲ್ಪಟ್ಟರು.​—2 ತಿಮೊಥೆಯ 1:13.

“ದೇವರಿಂದ ಕೊಡಲ್ಪಟ್ಟಿರುವ ಕೊಡುಗೆಯಾದ ನಿಮ್ಮ ಸುಯೋಗವನ್ನು ಗಣ್ಯಮಾಡಿರಿ” ಎಂಬುದು, ಆರಂಭದ ಭಾಷಣಗಳ ಮಾಲೆಯ ಕೊನೆಯ ಭಾಷಣದ ಮುಖ್ಯ ವಿಷಯವಾಗಿತ್ತು. ಗಿಲ್ಯಡ್‌ ಶಾಲೆಯ ರೆಜಿಸ್ಟ್ರಾರ್‌ ಆಗಿರುವ ವಾಲೆಸ್‌ ಲಿವರನ್ಸ್‌ ಅವರು, ಸೇವಾ ಸುಯೋಗಗಳನ್ನು ಪಡೆಯುವ ಅರ್ಹತೆ ತಮಗಿದೆ ಅಥವಾ ಇದನ್ನು ತಾವು ಸಂಪಾದಿಸಿಕೊಂಡಿದ್ದೇವೆ ಎಂದು ಪದವೀಧರರು ನೆನಸಬಾರದು, ಬದಲಾಗಿ ಆ ಸುಯೋಗಗಳು ದೇವರ ಅಪಾತ್ರ ಕೃಪೆಯ ಅಭಿವ್ಯಕ್ತಿಗಳಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಪದವೀಧರರಿಗೆ ಸಹಾಯಮಾಡಿದರು. ಅಪೊಸ್ತಲ ಪೌಲನ ಉದಾಹರಣೆಯನ್ನು ತೆಗೆದುಕೊಳ್ಳುತ್ತಾ, ಸಹೋದರ ಲಿವರನ್ಸ್‌ ಹೇಳಿದ್ದು: “ಯೆಹೋವನು ಪೌಲನನ್ನು ಅನ್ಯಜನಾಂಗಗಳಿಗೆ ತನ್ನ ಅಪೊಸ್ತಲನಾಗಿ ಕಾರ್ಯನಡಿಸುವಂತೆ ಆಯ್ಕೆಮಾಡಿದ್ದು ಅವನ ಕೆಲಸಗಳ ಆಧಾರದಿಂದಲ್ಲ. ಹಾಗಿದ್ದರೆ ಪೌಲನು ಆ ನೇಮಕದ ಹಕ್ಕನ್ನು ಪಡೆದಿದ್ದನು ಅಥವಾ ಅದು ಅವನ ಸ್ವಾಧೀನಕ್ಕೆ ಕೊಡಲ್ಪಟ್ಟಿದೆ ಎಂದಾಗುತ್ತಿತ್ತು. ಅದು ದೀರ್ಘಾವಧಿಯ ಸೇವೆ ಅಥವಾ ಅನುಭವದ ಮೇಲೆ ಆಧಾರಿತವಾಗಿರಲಿಲ್ಲ. ಮಾನವ ದೃಷ್ಟಿಕೋನದಿಂದ ನೋಡುವಾಗ, ಬಾರ್ನಬನನ್ನು ಆಯ್ಕೆಮಾಡುತ್ತಿದ್ದಲ್ಲಿ ಅದೇ ಸರಿಯಾದ ಆಯ್ಕೆಯಾಗಿ ಕಂಡುಬರಸಾಧ್ಯವಿತ್ತು. ಅದು ವೈಯಕ್ತಿಕ ಸಾಮರ್ಥ್ಯದ ಮೇಲೆ ಆಧಾರಿತವಾಗಿರಲಿಲ್ಲ; ಪೌಲನಿಗಿಂತಲೂ ಅಪೊಲ್ಲೊಸನು ಹೆಚ್ಚು ನಿರರ್ಗಳವಾಗಿ ಭಾಷಣ ನೀಡುವ ಸಾಮರ್ಥ್ಯವುಳ್ಳವನಾಗಿದ್ದನು ಎಂದು ತೋರುತ್ತದೆ. ಇದು ದೇವರ ಅಪಾತ್ರ ಕೃಪೆಯ ಒಂದು ಅಭಿವ್ಯಕ್ತಿಯಾಗಿತ್ತು.” (ಎಫೆಸ 3:​7-9) ಪದವೀಧರರು ತಮ್ಮ ಕೊಡುಗೆಯನ್ನು ಅಥವಾ ಸೇವಾ ಸುಯೋಗವನ್ನು, ಇತರರು ದೇವರ ಸ್ನೇಹಿತರಾಗಲು ಮತ್ತು ‘ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವವನ್ನು ದೇವರ ಉಚಿತಾರ್ಥ ವರವಾಗಿ’ ಪಡೆದುಕೊಳ್ಳುವವರಾಗಲು ಅವರಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸುವಂತೆ ಸಹೋದರ ಲಿವರನ್ಸ್‌ ಉತ್ತೇಜಿಸಿದರು.​—ರೋಮಾಪುರ 6:23.

ಈ ಭಾಷಣದ ನಂತರ, ಗಿಲ್ಯಡ್‌ ಶಾಲೆಯ ಇನ್ನೊಬ್ಬ ಶಿಕ್ಷಕರಾಗಿರುವ ಮಾರ್ಕ್‌ ನ್ಯೂಮರ್‌ ಅವರು, “ಪೂರ್ವ ತಯಾರಿಯು ಒಳ್ಳೇ ಫಲಿತಾಂಶಗಳಿಗೆ ನಡಿಸುತ್ತದೆ” ಎಂಬ ವಿಷಯದ ಕುರಿತು ಅನೇಕ ವಿದ್ಯಾರ್ಥಿಗಳೊಂದಿಗೆ ಉತ್ಸಾಹಭರಿತ ಚರ್ಚೆಯನ್ನು ನಡೆಸಿದರು. (ಜ್ಞಾನೋಕ್ತಿ 21:5) ಅನುಭವಗಳು ದೃಷ್ಟಾಂತಿಸಿದ್ದೇನೆಂದರೆ, ಒಬ್ಬ ಶುಶ್ರೂಷಕನು ಶುಶ್ರೂಷೆಗಾಗಿ ಒಳ್ಳೇ ತಯಾರಿಯನ್ನು ಮಾಡುವಾಗ, ಅದರಲ್ಲೂ ವಿಶೇಷವಾಗಿ ತನ್ನ ಹೃದಯವನ್ನು ಸಿದ್ಧಪಡಿಸಿಕೊಳ್ಳುವಾಗ, ಅವನಿಗೆ ಜನರಲ್ಲಿ ನಿಜವಾದ ಆಸಕ್ತಿಯಿರುವುದು. ಆಗ ಅವನು ಏನು ಹೇಳಬೇಕು ಎಂಬ ವಿಷಯದಲ್ಲಿ ಎಂದೂ ಅನಿಶ್ಚಿತನಾಗಿರುವುದಿಲ್ಲ. ಅದಕ್ಕೆ ಬದಲಾಗಿ, ಅವರಿಗೆ ಆತ್ಮಿಕವಾಗಿ ಸಹಾಯಮಾಡಲು ಅಗತ್ಯವಿರುವ ವಿಷಯಗಳನ್ನು ಹೇಳುವನು ಮತ್ತು ಮಾಡುವನು. ಆಫ್ರಿಕದಲ್ಲಿ ಒಬ್ಬ ಮಿಷನೆರಿಯೋಪಾದಿ ತಮ್ಮ ಸ್ವಂತ ಅನುಭವವನ್ನೇ ಉದಾಹರಣೆಯಾಗಿ ಉಪಯೋಗಿಸುತ್ತಾ, “ಒಬ್ಬ ಸಫಲ ಮಿಷನೆರಿಯಾಗಲು ಇದೇ ಕೀಲಿ ಕೈಯಾಗಿದೆ” ಎಂದು ಸಹೋದರ ನ್ಯೂಮರ್‌ ಹೇಳಿದರು.

ಮಿಷನೆರಿ ಸೇವೆ​—ಒಂದು ಸಂತೃಪ್ತಿಕರ ಜೀವನವೃತ್ತಿ

ರಾಲ್ಫ್‌ ವಾಲ್ಸ್‌ ಮತ್ತು ಚಾರ್ಲ್ಸ್‌ ವೂಡೀ ಅವರು, ವಿಶೇಷ ತರಬೇತಿಗಾಗಿ ಪ್ಯಾಟರ್‌ಸನ್‌ ಎಡ್ಯೂಕೇಷನಲ್‌ ಸೆಂಟರ್‌ಗೆ ಬಂದಿದ್ದಂಥ ಕೆಲವು ಅನುಭವಸ್ಥ ಮಿಷನೆರಿಗಳ ಇಂಟರ್‌ವ್ಯೂ ಮಾಡಿದರು. ಮಿಷನೆರಿ ಸೇವೆಯಲ್ಲಿ ಸಂತೋಷವನ್ನು ತರುವಂಥದ್ದು ಜನರ ಕಡೆಗಿನ ಪ್ರೀತಿಯೇ ಎಂಬುದನ್ನು ಆ ಇಂಟರ್‌ವ್ಯೂಗಳು ಒತ್ತಿಹೇಳಿದವು. ಮಿಷನೆರಿ ಸೇವೆಯು ಏಕೆ ಒಂದು ಸಂತೃಪ್ತಿಕರ ಜೀವನವೃತ್ತಿಯಾಗಿದೆ ಎಂಬುದನ್ನು ಈ ಅನುಭವಸ್ಥ ಮಿಷನೆರಿಗಳೇ ನೇರವಾಗಿ ವಿವರಿಸುವುದನ್ನು ಕೇಳಿಸಿಕೊಳ್ಳುವುದು, ವಿದ್ಯಾರ್ಥಿಗಳಿಗೆ ಮತ್ತು ಸಭಿಕರಲ್ಲಿದ್ದ ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ತುಂಬ ಪುನರಾಶ್ವಾಸನಾದಾಯಕವಾಗಿತ್ತು.

ಆಡಳಿತ ಮಂಡಲಿಯಲ್ಲಿ ಸೇವೆಸಲ್ಲಿಸುತ್ತಿರುವ ಜಾನ್‌ ಇ. ಬಾರ್‌ ಅವರು, ಆ ದಿನದ ಮುಖ್ಯ ಭಾಷಣವನ್ನು ಕೊಟ್ಟರು. “ಯೆಹೋವನ ಘನತೆಗಾಗಿ ನೂತನಗೀತವನ್ನು ಹಾಡಿರಿ” ಎಂಬುದು ಅದರ ಮೇಲ್ವಿಷಯವಾಗಿತ್ತು. (ಯೆಶಾಯ 42:10) ‘ಒಂದು ನೂತನಗೀತ’ ಎಂಬ ಅಭಿವ್ಯಕ್ತಿಯು ಬೈಬಲಿನಲ್ಲಿ ಒಂಬತ್ತು ಬಾರಿ ಕಂಡುಬರುತ್ತದೆ ಎಂದು ಸಹೋದರ ಬಾರ್‌ ಹೇಳಿದರು. “ಈ ನೂತನಗೀತವು ಏನಾಗಿದೆ?” ಎಂಬ ಪ್ರಶ್ನೆಯನ್ನು ಅವರು ಕೇಳಿದರು. ತದನಂತರ ಅವರೇ ಉತ್ತರಿಸಿದ್ದು: “ಯೆಹೋವನ ಪರಮಾಧಿಕಾರದ ಉಪಯೋಗದಲ್ಲಿ ನೂತನ ವಿಕಸನಗಳ ಕಾರಣ ಒಂದು ನೂತನಗೀತವು ಹಾಡಲ್ಪಡುತ್ತದೆ ಎಂಬುದನ್ನು ಪೂರ್ವಾಪರ ವಚನಗಳು ಪ್ರಕಟಪಡಿಸುತ್ತವೆ.” ಮೆಸ್ಸೀಯ ರಾಜನಾಗಿರುವ ಕ್ರಿಸ್ತ ಯೇಸುವಿನ ವಶದಲ್ಲಿರುವ ದೇವರ ವಿಜಯೋತ್ಸಾಹದ ರಾಜ್ಯದ ಸ್ತುತಿಗೀತೆಗಳನ್ನು ಹಾಡುವುದರಲ್ಲಿ ಧ್ವನಿಗೂಡಿಸುತ್ತಾ ಮುಂದುವರಿಯುವಂತೆ ಅವರು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಗಿಲ್ಯಡ್‌ನಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಂಥ ತರಬೇತಿಯು, ಈ ‘ನೂತನಗೀತೆಯ’ ಬೇರೆ ಬೇರೆ ಅಂಶಗಳನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಇನ್ನಷ್ಟು ಗಹನವಾಗಿ ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಿತ್ತೆಂದು ಸಹೋದರ ಬಾರ್‌ ತಿಳಿಸಿದರು. “ನೀವು ಹೋಗುವಲ್ಲೆಲ್ಲಾ ನಿಮ್ಮ ಸಹೋದರ ಸಹೋದರಿಯರೊಂದಿಗೆ ಯೆಹೋವನ ಸ್ತುತಿಗಳನ್ನು ‘ಹಾಡ’ಬೇಕಾಗಿದೆ ಎಂಬುದನ್ನು ಶಾಲೆಯು ಒತ್ತಿಹೇಳಿದೆ; ನಿಮ್ಮ ನೇಮಕಗಳಲ್ಲಿ ಇತರರೊಂದಿಗೆ ಯಾವಾಗಲೂ ಐಕ್ಯಭಾವವನ್ನು ಬೆಳೆಸಿಕೊಳ್ಳಿರಿ.”

ವಿದ್ಯಾರ್ಥಿಗಳಿಗೆ ಅವರ ಡಿಪ್ಲೊಮಾಗಳು ಕೊಡಲ್ಪಟ್ಟ ಬಳಿಕ, ತರಗತಿಯ ಒಬ್ಬ ಪ್ರತಿನಿಧಿಯು, ಗಿಲ್ಯಡ್‌ನಲ್ಲಿ ತಾವು ಪಡೆದುಕೊಂಡ ತರಬೇತಿಗಾಗಿ ಹೃತ್ಪೂರ್ವಕ ಗಣ್ಯತೆಯನ್ನು ವ್ಯಕ್ತಪಡಿಸುವಂಥ ಒಂದು ಪತ್ರವನ್ನು ಓದಿದನು.

ನೀವು ದೇವರಿಗೆ ನಿಮ್ಮ ಸೇವೆಯನ್ನು ಇನ್ನಷ್ಟು ಹೆಚ್ಚಿಸಿ, ಅದನ್ನು ಇನ್ನಷ್ಟು ಉತ್ಪನ್ನದಾಯಕವಾಗಿ ಮಾಡಬಲ್ಲಿರೋ? ಹಾಗಿರುವಲ್ಲಿ, ಪದವಿ ಪಡೆದುಕೊಂಡ ವಿದ್ಯಾರ್ಥಿಗಳ ಹಾಗೆಯೇ ಶ್ರದ್ಧಾಪೂರ್ವಕವಾಗಿ ಪ್ರಯತ್ನಮಾಡಿ. ಇದೇ ಅವರು ಮಿಷನೆರಿ ಕ್ಷೇತ್ರಕ್ಕಾಗಿ ಅರ್ಹರಾಗುವಂತೆ ಅವರಿಗೆ ಸಹಾಯಮಾಡಿದೆ. ದೇವರ ಸೇವೆಯಲ್ಲಿ ಒಬ್ಬನು ಸಿದ್ಧಮನಸ್ಸಿನಿಂದ ಮತ್ತು ಆನಂದದಿಂದ ತನ್ನನ್ನು ನೀಡಿಕೊಳ್ಳುವಾಗ, ಮಹಾನ್‌ ಸಂತೋಷವು ಕಂಡುಕೊಳ್ಳಲ್ಪಡುತ್ತದೆ.​—ಯೆಶಾಯ 6:8.

[ಪುಟ 25ರಲ್ಲಿರುವ ಚೌಕ]

ತರಗತಿಯ ಸಂಖ್ಯಾಸಂಗ್ರಹಣಗಳು

ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 10

ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 19

ವಿದ್ಯಾರ್ಥಿಗಳ ಸಂಖ್ಯೆ: 48

ಸರಾಸರಿ ಪ್ರಾಯ: 33.2

ಸತ್ಯದಲ್ಲಿ ಸರಾಸರಿ ವರ್ಷಗಳು: 16.8

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12.6

[ಪುಟ 26ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 111ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.

(1) ಯೋಮನ್ಸ್‌, ಸಿ.; ಟೋಕಾರೀ, ಎ.; ನೂನ್ಯೆಸ್‌, ಎಸ್‌.; ಫಿಲಿಪ್ಸ್‌, ಜೆ.; ಡಾಕನ್‌, ಎಮ್‌.; ಸೀಲ್ವೆಸ್ಟ್ರೀ, ಪಿ. (2) ಮಾರನ್‌, ಎನ್‌.; ಬೈನೀ, ಜೆ.; ಲೋಪೆಸ್‌, ಎಮ್‌.; ವಾನ್‌ ಹಾವ್ಟ್‌, ಎಮ್‌.; ಕ್ಯಾಂಟೂ, ಎ.; ಸಿಲ್ವಾಶೀ, ಎಫ್‌. (3) ವಿಲಿಯಮ್ಸ್‌, ಎಮ್‌.; ಈಟೋ, ಎಮ್‌.; ವಾನ್‌ ಕಾಯ್ಲೀ, ಎಸ್‌.; ಲೆವರಿಂಗ್‌, ಡಿ.; ಫ್ಯೂಸೆಲ್‌, ಎಫ್‌.; ಗೈಸ್ಲ, ಎಸ್‌. (4) ಯೋಮನ್ಸ್‌, ಜೆ.; ಮಾಸ್‌, ಎಮ್‌.; ಹಾಜಿನ್ಸ್‌, ಎಮ್‌.; ಡಡಿಂಗ್‌, ಎಸ್‌.; ಬ್ರೀಸೆನ್ಯೊ, ಜೆ.; ಫಿಲಿಪ್ಸ್‌, ಎಮ್‌. (5) ಲೋಪೆಸ್‌, ಜೆ.; ಈಟೋ, ಟಿ.; ಸಾಮರುಡ್‌, ಎಸ್‌.; ಕೋಸಾ, ಸಿ.; ಫ್ಯೂಸೆಲ್‌, ಜಿ.; ಮಾಸ್‌, ಡಿ. (6) ವಿಲಿಯಮ್ಸ್‌, ಡಿ.; ಡಡಿಂಗ್‌, ಆರ್‌.; ಗೈಸ್ಲ, ಎಮ್‌.; ಮಾರನ್‌, ಆರ್‌.; ಬೈನೀ, ಎಸ್‌.; ಕ್ಯಾಂಟೂ, ಎಲ್‌. (7) ಡಾಕನ್‌, ಎಮ್‌.; ಹಾಜಿನ್ಸ್‌, ಟಿ.; ಲೆವರಿಂಗ್‌, ಎಮ್‌.; ಸೀಲ್ವೆಸ್ಟ್ರೀ, ಎಸ್‌.; ವಾನ್‌ ಹಾವ್ಟ್‌, ಡಿ.; ಬ್ರೀಸೆನ್ಯೊ, ಎ. (8) ವಾನ್‌ ಕಾಯ್ಲೀ, ಎಮ್‌.; ನೂನ್ಯೆಸ್‌, ಎ.; ಕೋಸಾ, ಬಿ.; ಸಾಮರುಡ್‌, ಜೆ.; ಟೋಕಾರೀ, ಎಸ್‌.; ಸಿಲ್ವಾಶೀ, ಪಿ.