ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು “ಬಲಾಧಿಕ್ಯ”ವನ್ನು ಒದಗಿಸಿದ್ದಾನೆ

ಯೆಹೋವನು “ಬಲಾಧಿಕ್ಯ”ವನ್ನು ಒದಗಿಸಿದ್ದಾನೆ

ಜೀವನ ಕ

ಯೆಹೋವನು “ಬಲಾಧಿಕ್ಯ”ವನ್ನು ಒದಗಿಸಿದ್ದಾನೆ

ಹೆಲನ್‌ ಮಾರ್ಕ್ಸ್‌ ಅವರು ಹೇಳಿದಂತೆ

ಅದು 1986ರ ಅತಿ ಹೆಚ್ಚು ಉಷ್ಣತೆಯಿದ್ದ ಬೇಸಗೆಯ ದಿನವಾಗಿತ್ತು. ಯೂರೋಪಿನ ಚಟುವಟಿಕೆಯೇ ಇಲ್ಲದ ವಿಮಾನ ನಿಲ್ದಾಣಗಳಲ್ಲೊಂದರ ಕಸ್ಟಮ್ಸ್‌ ಷೆಡ್‌ನಲ್ಲಿ ನಾನೊಬ್ಬಳು ಮಾತ್ರ ಕಾಯುತ್ತಿದ್ದೆ. ಇದು, “ಲೋಕದ ಪ್ರಪ್ರಥಮ ನಾಸ್ತಿಕ ರಾಜ್ಯ” ಎಂದು ಸ್ವತಃ ಘೋಷಿಸಿಕೊಂಡಿದ್ದ ಅಲ್ಬೇನಿಯದ ರಾಜಧಾನಿಯಾದ ಟಿರಾನ ಆಗಿತ್ತು.

ಬ್ಬ ಶಸ್ತ್ರಸಜ್ಜಿತ ಅಧಿಕಾರಿಯು ನನ್ನ ಸಾಮಾನುಗಳನ್ನು ಶೋಧಿಸುತ್ತಿರುವುದನ್ನು ನಾನು ಅನಿಶ್ಚಿತತೆ ಮತ್ತು ಭೀತಿಯ ಮಿಶ್ರ ಅನಿಸಿಕೆಗಳೊಂದಿಗೆ ನೋಡುತ್ತಾ ನಿಂತೆ. ಅವನು ಸಂದೇಹಪಡುವಂತೆ ಮಾಡುವ ಯಾವುದೇ ವಿಷಯನ್ನು ನಾನು ಮಾಡುವುದಾದರೆ ಅಥವಾ ಹೇಳುವುದಾದರೆ, ಅದರ ಫಲಿತಾಂಶವು ನನ್ನನ್ನು ದೇಶದಿಂದ ಗಡೀಪಾರುಮಾಡುವುದಾಗಿತ್ತು ಮತ್ತು ನನಗಾಗಿ ಹೊರಗೆ ಕಾಯುತ್ತಿದ್ದ ಜನರಿಗೆ ಸೆರೆವಾಸವಾಗಬಹುದಿತ್ತು ಇಲ್ಲವೆ ಅವರಿಗೆ ಕೆಲಸದ ಶಿಬಿರವೇ ಗತಿಯಾಗುತ್ತಿತ್ತು. ಸಂತೋಷಕರವಾಗಿ, ನಾನು ಅಧಿಕಾರಿಗೆ ಚೂಯಿಂಗ್‌ ಗಮ್‌ ಮತ್ತು ಬಿಸ್ಕೆಟ್‌ಗಳನ್ನು ಕೊಡುವ ಮೂಲಕ ಅವನು ನನ್ನೊಂದಿಗೆ ಹೆಚ್ಚು ಸ್ನೇಹಪರನಾಗಿರುವಂತೆ ಮಾಡಿದೆ. ಆದರೆ ನನ್ನ ಮೇಲೆ, ಅಂದರೆ 60ಗಳ ಪ್ರಾಯದಲ್ಲಿರುವ ಒಬ್ಬ ಸ್ತ್ರೀಯ ಮೇಲೆ ಇಂತಹ ಪರಿಸ್ಥಿತಿಯು ಹೇಗೆ ಬಂದೆರಗಿತು? ಒಂದು ಆರಾಮವಾದ ಜೀವನವನ್ನು ಬಿಟ್ಟು, ಮಾರ್ಕ್ಸ್‌ವಾದ-ಲೆನಿನ್‌ವಾದದ ಕೊನೆಯ ಬುರುಜುಗಳಲ್ಲಿ ಒಂದಾಗಿರುವಲ್ಲಿಗೆ ರಾಜ್ಯಾಭಿರುಚಿಗಳನ್ನು ಹೆಚ್ಚಿಸಲು ಪ್ರಯತ್ನಿಸುವ ಅಪಾಯದ ಕೆಲಸಕ್ಕೆ ಏಕೆ ಕೈಹಾಕಿದೆ?

ಅನೇಕ ಪ್ರಶ್ನೆಗಳಿದ್ದ ಒಬ್ಬ ಅಸ್ವಸ್ಥ ಹುಡುಗಿ

ಕ್ರೀಟ್‌ನ ಈಉರಾಪೆಟ್ರಾದಲ್ಲಿ, 1920ರಲ್ಲಿ ನನ್ನ ಜನನವಾದ ಎರಡು ವರ್ಷಗಳ ನಂತರ, ನ್ಯುಮೋನಿಯದಿಂದಾಗಿ ನನ್ನ ತಂದೆಯವರು ಸತ್ತುಹೋದರು. ತಾಯಿ ಬಡವರೂ ಅನಕ್ಷರಸ್ಥರೂ ಆಗಿದ್ದರು. ನಾಲ್ಕು ಮಕ್ಕಳಲ್ಲಿ ನಾನೇ ಎಲ್ಲರಿಗಿಂತಲೂ ಚಿಕ್ಕವಳಾಗಿದ್ದೆ, ಮತ್ತು ನಾನು ಕಾಮಾಲೆ ರೋಗದಿಂದ ನರಳುತ್ತಿದ್ದ ಕಾರಣ, ತುಂಬ ಬಿಳಿಚಿಕೊಂಡು ಅಸ್ವಸ್ಥಳಾಗಿ ಕಾಣುತ್ತಿದ್ದೆ. ನನ್ನ ತಾಯಿಯವರು ತಮ್ಮ ಗಮನ ಮತ್ತು ಸೀಮಿತ ಆಸ್ತಿಪಾಸ್ತಿಯನ್ನು ಆರೋಗ್ಯದಿಂದಿದ್ದ ಮೂರು ಮಕ್ಕಳಿಗಾಗಿ ಉಪಯೋಗಿಸುವಂತೆಯೂ ನನ್ನನ್ನು ಸಾಯಲು ಬಿಡುವಂತೆಯೂ ನೆರೆಯವರು ಸಲಹೆ ನೀಡಿದರು. ಆದರೆ ಅವರು ಆ ಬುದ್ಧಿವಾದದಂತೆ ನಡೆಯದಿದ್ದದ್ದು ನನಗೆ ಸಂತೋಷವನ್ನು ತರುತ್ತದೆ.

ನನ್ನ ತಂದೆಯ ಆತ್ಮವು ಸ್ವರ್ಗದಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ತಾಯಿ ಸಾಮಾನ್ಯವಾಗಿ ಒಬ್ಬ ಆರ್ತೊಡಾಕ್ಸ್‌ ಪಾದ್ರಿಯ ಸೇವೆಯನ್ನು ಉಪಯೋಗಿಸುತ್ತಾ ಸಮಾಧಿಗೆ ಅನೇಕಾವರ್ತಿ ಭೇಟಿ ನೀಡುತ್ತಿದ್ದರು. ಆದರೆ, ಆ ಸೇವೆಗಳು ಅಲ್ಪ ಬೆಲೆಯವುಗಳಾಗಿರಲಿಲ್ಲ. ಅತ್ಯಧಿಕ ಚಳಿಯಿದ್ದ ಒಂದು ಕ್ರಿಸ್ಮಸ್‌ ದಿನದಂದು, ನನ್ನ ತಾಯಿಯವರು ಸಮಾಧಿಯಿಂದ ಹಿಂದಿರುಗುತ್ತಿದ್ದಾಗ, ನಾನೂ ಅವರ ಜೊತೆಯಲ್ಲಿ ನಡುಗುತ್ತಾ ಬರುತ್ತಿದ್ದ ದೃಶ್ಯವು ನನಗೆ ಈಗಲೂ ಜ್ಞಾಪಕವಿದೆ. ನಮ್ಮ ಹತ್ತಿರ ಕೊನೆಯದಾಗಿ ಉಳಿದಿದ್ದ ಹಣವನ್ನು ನಾವು ಆಗ ತಾನೇ ಪಾದ್ರಿಗೆ ಕೊಟ್ಟುಬಂದಿದ್ದೆವು. ಮಕ್ಕಳಾದ ನಮಗೆ ಊಟಕ್ಕಾಗಿ ಸ್ವಲ್ಪ ಕಾಯಿಪಲ್ಯಗಳನ್ನು ತಯಾರಿಸಿದ ನಂತರ, ತಾಯಿ ಹೊಟ್ಟೆಗಿಲ್ಲದೇ ಮತ್ತು ಹತಾಶೆಯ ಕಣ್ಣೀರು ಸುರಿಸುತ್ತಾ ಮತ್ತೊಂದು ಕೋಣೆಗೆ ಹೋದರು. ಸ್ವಲ್ಪ ಸಮಯದ ನಂತರ, ನಾನು ಪಾದ್ರಿಯ ಹತ್ತಿರ ಹೋಗಿ, ನನ್ನ ತಂದೆ ಯಾಕೆ ಸತ್ತರು ಮತ್ತು ನನ್ನ ಬಡ ತಾಯಿ ಯಾಕೆ ಅದಕ್ಕಾಗಿ ಪಾದ್ರಿಗೆ ಹಣ ಕೊಡಬೇಕಿತ್ತು ಎಂದು ಕೇಳಲು ಧೈರ್ಯವನ್ನು ತಂದುಕೊಂಡೆ. ಅವರು, “ದೇವರು ಅವರನ್ನು ಕರೆದುಕೊಂಡನು. ಜೀವನ ಇರುವುದೇ ಈ ರೀತಿ. ಸ್ವಲ್ಪದರಲ್ಲೇ ನಿನ್ನ ದುಃಖವನ್ನು ಮರೆಯುವಿ,” ಎಂದು ಪೇಚಾಡುತ್ತಾ ಪಿಸುಗುಟ್ಟಿದರು.

ನಾನು ಶಾಲೆಯಲ್ಲಿ ಕಲಿತಿದ್ದಂಥ ಕರ್ತನ ಪ್ರಾರ್ಥನೆ ಮತ್ತು ಅವರ ಉತ್ತರವನ್ನು ಸರಿಹೊಂದಿಸುವುದು ನನಗೆ ಕಷ್ಟವಾಗಿತ್ತು. ಆದರೆ, ನನಗೆ ಇನ್ನೂ ಕೂಡ ಆ ಪ್ರಾರ್ಥನೆಯ ರಮ್ಯವಾದ ಅರ್ಥಭರಿತ ಮಾತುಗಳು ನೆನಪಿನಲ್ಲಿವೆ: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ತನ್ನ ಚಿತ್ತವು ಭೂಲೋಕದಲ್ಲಿಯೂ ನಡೆಯಬೇಕೆಂದು ದೇವರು ಉದ್ದೇಶಿಸಿರುವುದಾದರೆ, ನಾವು ಇಷ್ಟೊಂದು ಕಷ್ಟವನ್ನು ಅನುಭವಿಸುವುದೇಕೆ?

ಎಮಾನ್ವೇಲ್‌ ಲೀಓನೂಡಾಕೀಸ್‌ ಎಂಬ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಪ್ರಚಾರಕನು 1929ರಲ್ಲಿ ನಮ್ಮ ಮನೆಗೆ ಭೇಟಿಯಿತ್ತಾಗ, ಆ ಪ್ರಶ್ನೆಗೆ ನಾನು ಹೆಚ್ಚುಕಡಿಮೆ ಉತ್ತರವನ್ನು ಪಡೆಯಲಿಕ್ಕಿದ್ದೆ. * ನನ್ನ ತಾಯಿ ಅವರಿಗೆ ಏನು ಬೇಕಾಗಿತ್ತು ಎಂದು ಕೇಳಿದಾಗ, ಎಮಾನ್ವೇಲ್‌ ಒಂದು ಮಾತನ್ನೂ ಆಡದೆ ಒಂದು ಟೆಸ್ಟಿಮನಿ ಕಾರ್ಡ್‌ ಅನ್ನು ಅವರ ಕೈಗೊಪ್ಪಿಸಿದರು. ತಾಯಿ ಆ ಕಾರ್ಡ್‌ ಅನ್ನು ಓದುವಂತೆ ನನಗೆ ಕೊಟ್ಟರು. ನಾನು ಕೇವಲ ಒಂಬತ್ತು ವರ್ಷ ಪ್ರಾಯದವಳಾಗಿದ್ದ ಕಾರಣ, ನನಗೇನೂ ಅರ್ಥವಾಗಲಿಲ್ಲ. ಭೇಟಿಯಿತ್ತ ಪ್ರಚಾರಕನು ಮೂಕನು ಎಂದು ಭಾವಿಸಿಕೊಂಡು ನನ್ನ ತಾಯಿ, “ಪಾಪ! ನಿನಗೆ ಮಾತಾಡಲಿಕ್ಕಾಗುವುದಿಲ್ಲ, ನನಗೆ ಓದಲಿಕ್ಕಾಗುವುದಿಲ್ಲ” ಎಂದುತ್ತರಿಸಿದರು. ನಂತರ ಕನಿಕರದಿಂದ ಅವರಿಗೆ ಹೊರಹೋಗುವ ದಾರಿಯನ್ನು ತೋರಿಸಿದರು.

ಕೆಲವು ವರ್ಷಗಳ ನಂತರ, ನನ್ನ ಪ್ರಶ್ನೆಗಳಿಗೆ ನಾನು ಉತ್ತರವನ್ನು ಕಂಡುಕೊಂಡೆ. ನನ್ನ ಅಣ್ಣನಾದ ಎಮಾನ್ವೇಲ್‌ ಪಟೆರ್ಕೀಸ್‌, ಅದೇ ಪೂರ್ಣ ಸಮಯದ ಶುಶ್ರೂಷಕನಿಂದ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಮೃತರು ಎಲ್ಲಿದ್ದಾರೆ? (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ಪಡೆದುಕೊಂಡನು. * ಅದನ್ನು ಓದುವ ಮೂಲಕ, ನನ್ನ ತಂದೆಯನ್ನು ದೇವರು ಒಯ್ದಿಲ್ಲ ಎಂಬುದನ್ನು ತಿಳಿದು ನನಗೆ ನೆಮ್ಮದಿಯಾಯಿತು. ಮರಣವು ಮಾನವ ಅಪರಿಪೂರ್ಣತೆಯ ಫಲಿತಾಂಶವಾಗಿದೆ ಮತ್ತು ನನ್ನ ತಂದೆಯು ಪರದೈಸ ಭೂಮಿಯಲ್ಲಿ ಪುನರುತ್ಥಾನಕ್ಕಾಗಿ ಕಾದುಕೊಂಡಿದ್ದಾರೆ ಎಂಬುದನ್ನು ನಾನು ಗ್ರಹಿಸಿದೆ.

“ಈ ಪುಸ್ತಕವು ನಿನ್ನನ್ನು ಹಾಳುಮಾಡಿದೆ!”

ಬೈಬಲ್‌ ಸತ್ಯವು ನಮ್ಮ ಕಣ್ಣುಗಳನ್ನು ತೆರೆಸಿತು. ನಮ್ಮ ತಂದೆಯವರ ಒಂದು ಹಳೆಯ ಬೈಬಲು ನಮಗೆ ಸಿಕ್ಕಿತು ಮತ್ತು ಅದನ್ನು ಅನೇಕ ವೇಳೆ ಬೆಂಕಿಗೂಡಿನ ಹತ್ತಿರ ಕುಳಿತುಕೊಂಡು ಮೋಂಬತ್ತಿಯ ಬೆಳಕಿನಲ್ಲಿ ಅಧ್ಯಯನ ಮಾಡಲಾರಂಭಿಸಿದೆವು. ನಮ್ಮ ಪ್ರದೇಶದಲ್ಲಿ ಬೈಬಲಿನ ಬಗ್ಗೆ ಆಸಕ್ತಿ ತೋರಿಸಿದ ಒಬ್ಬಳೇ ಯುವ ಸ್ತ್ರೀ ನಾನಾಗಿದ್ದುದರಿಂದ, ಅಲ್ಲಿಯ ಚಿಕ್ಕ ಗುಂಪಿನ ಸಾಕ್ಷಿಗಳ ಚಟುವಟಿಕೆಗಳಲ್ಲಿ ನಾನು ಒಳಗೂಡಿಸಲ್ಪಡಲಿಲ್ಲ. ನಾನು ಸ್ವಲ್ಪ ಕಾಲದ ವರೆಗೆ, ಈ ಧರ್ಮವು ಪುರುಷರಿಗೆ ಮಾತ್ರ ಎಂದು ಗಂಭೀರವಾಗಿ, ಆದರೆ ತಪ್ಪಾಗಿ ನಂಬಿದೆ.

ಸಾರುವ ಕೆಲಸಕ್ಕಾಗಿರುವ ನನ್ನ ಸಹೋದರನ ಉತ್ಸಾಹವು ನನಗೆ ಉತ್ತೇಜನದ ಮೂಲವಾಗಿತ್ತು. ಇದರಿಂದಾಗಿ ಪೊಲೀಸರು ನಮ್ಮ ಕುಟುಂಬದ ಮೇಲೆ ಕಣ್ಣಿಡಲಾರಂಭಿಸಲು ಅಷ್ಟೇನೂ ಹೆಚ್ಚು ಸಮಯ ಹಿಡಿಯಲಿಲ್ಲ. ಮತ್ತು ಅವರು ಎಮಾನ್ವೇಲ್‌ನನ್ನು ಮತ್ತು ಸಾಹಿತ್ಯವನ್ನು ಹುಡುಕಲಿಕ್ಕಾಗಿ ಹಗಲೂರಾತ್ರಿ ಎಲ್ಲಾ ಸಮಯಗಳಲ್ಲಿ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ನಾವು ಚರ್ಚಿಗೆ ಹಿಂದಿರುಗುವಂತೆ ನಮ್ಮ ಮನವೊಲಿಸಲು ಬಂದಿದ್ದ ಒಬ್ಬ ಪಾದ್ರಿಯ ಭೇಟಿಯು ನನಗೆ ಚೆನ್ನಾಗಿ ಜ್ಞಾಪಕವಿದೆ. ಎಮಾನ್ವೇಲ್‌ ದೇವರ ಹೆಸರು ಯೆಹೋವ ಎಂಬುದನ್ನು ಬೈಬಲಿನಿಂದ ಅವನಿಗೆ ತೋರಿಸಿದಾಗ, ಆ ಪಾದ್ರಿಯು ಬೈಬಲನ್ನು ಕಿತ್ತುಕೊಂಡು, ಬೆದರಿಸುವಂಥ ರೀತಿಯಲ್ಲಿ ಅದನ್ನು ನನ್ನ ಅಣ್ಣನ ಮುಖದ ಮುಂದೆ ಬೀಸುತ್ತಾ, “ಈ ಪುಸ್ತಕವು ನಿನ್ನನ್ನು ಹಾಳುಮಾಡಿದೆ!” ಎಂದು ಕಿರಿಚಾಡಿದನು.

ಇಸವಿ 1940ರಲ್ಲಿ ಎಮಾನ್ವೇಲ್‌ ಸೈನ್ಯದಲ್ಲಿ ಸೇವೆ ಸಲ್ಲಿಸಲು ನಿರಾಕರಿಸಿದಾಗ, ಅವನು ಬಂಧಿಸಲ್ಪಟ್ಟು ಅಲ್ಬೇನಿಯದ ಕದನರಂಗಕ್ಕೆ ಕಳುಹಿಸಲ್ಪಟ್ಟನು. ನಾವು ಅವನೊಂದಿಗಿನ ಸಂಪರ್ಕವನ್ನು ಕಳೆದುಕೊಂಡೆವು ಮತ್ತು ಅವನು ಸತ್ತುಹೋಗಿದ್ದಾನೆ ಎಂದು ಭಾವಿಸಿದೆವು. ಆದರೆ, ನಮ್ಮ ಆಶ್ಚರ್ಯಕ್ಕೆ, ಎರಡು ವರ್ಷಗಳ ನಂತರ ಸೆರೆಮನೆಯಿಂದ ಅವನು ಕಳುಹಿಸಿದ ಒಂದು ಪತ್ರವು ನಮಗೆ ಸಿಕ್ಕಿತು. ಅವನು ಜೀವಂತವಾಗಿದ್ದನು ಮತ್ತು ಸುಕ್ಷೇಮದಿಂದಿದ್ದನು! ಆ ಪತ್ರದಲ್ಲಿ ಅವನು ಉಲ್ಲೇಖಿಸಿದ್ದ ವಚನಗಳಲ್ಲಿ ಒಂದು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ [ಬಲವನ್ನು] ತೋರ್ಪಡಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9) ನಮಗೆ ಇಂತಹ ಪ್ರೋತ್ಸಾಹನೆಯು ಎಷ್ಟು ಆವಶ್ಯಕವಾಗಿತ್ತು!

ನನ್ನನ್ನು ಕೆಲವು ಸಹೋದರರು ಭೇಟಿಮಾಡುವಂತೆ ಸೆರೆಮನೆಯಿಂದಲೇ ಎಮಾನ್ವೇಲ್‌ ಏರ್ಪಡಿಸಶಕ್ತನಾದನು. ತತ್‌ಕ್ಷಣವೇ, ನಗರದಾಚೆ ಒಂದು ತೋಟದ ಮನೆಯಲ್ಲಿ ಕ್ರೈಸ್ತ ಕೂಟಗಳು ರಹಸ್ಯವಾಗಿ ಏರ್ಪಡಿಸಲ್ಪಟ್ಟವು. ಆದರೆ ನಮ್ಮ ಮೇಲೆ ನಿಗಾ ಇಡಲ್ಪಟ್ಟಿದೆ ಎಂಬುದು ನಮಗೆ ಗೊತ್ತೇ ಇರಲಿಲ್ಲ! ಒಂದು ದಿನ ಭಾನುವಾರ, ಶಸ್ತ್ರಸಜ್ಜಿತ ಪೊಲೀಸರು ನಮ್ಮನ್ನು ಸುತ್ತುವರಿದರು. ನಮ್ಮನ್ನು ಮೇಲಿನ ಮುಚ್ಚು ತೆರೆಯಿಲ್ಲದ ಒಂದು ಟ್ರಕ್‌ನಲ್ಲಿ ಹತ್ತಿಸಿ, ಊರೆಲ್ಲಾ ಮೆರವಣಿಗೆ ಮಾಡಿಸಿದರು. ಜನರ ಅಪಹಾಸ್ಯ ಮತ್ತು ಅವಹೇಳನದ ಕೂಗಾಟಗಳು ಇನ್ನೂ ನನ್ನ ಕಿವಿಗಳಲ್ಲಿ ಮಾರ್ದನಿಸುತ್ತಿವೆ, ಆದರೆ ಯೆಹೋವನು ತನ್ನ ಆತ್ಮದ ಮೂಲಕ ನಮಗೆ ಆಂತರಿಕ ಶಾಂತಿಯನ್ನು ಕೊಟ್ಟನು.

ನಾವು ಇನ್ನೊಂದು ನಗರಕ್ಕೆ ಸ್ಥಳಾಂತರಿಸಲ್ಪಟ್ಟೆವು ಮತ್ತು ಅಲ್ಲಿ ನಮ್ಮನ್ನು ಕಾರ್ಗತ್ತಲಿರುವ ಗಲೀಜು ಸೆರೆಕೋಣೆಗಳಲ್ಲಿ ಬಂಧಿಸಿಡಲಾಯಿತು. ನನ್ನ ಸೆರೆಕೋಣೆಯಲ್ಲಿದ್ದಂಥ ಶೌಚಾಲಯವು ಒಂದು ಮುಚ್ಚಳವಿಲ್ಲದ ಬಕೆಟ್‌ ಆಗಿದ್ದು, ಅದು ದಿನಕ್ಕೊಂದಾವರ್ತಿ ಖಾಲಿಮಾಡಲ್ಪಡುತ್ತಿತ್ತು. ನನ್ನನ್ನು ಗುಂಪಿನ “ಶಿಕ್ಷಕಿ” ಎಂದು ಭಾವಿಸಿದ ಕಾರಣ ನನಗೆ ಎಂಟು ತಿಂಗಳುಗಳ ಸೆರೆವಾಸವು ವಿಧಿಸಲ್ಪಟ್ಟಿತು. ಆದರೂ, ಅಲ್ಲಿ ಬಂಧಿಸಲ್ಪಟ್ಟಿದ್ದ ಒಬ್ಬ ಸಹೋದರನು, ತನ್ನ ವಕೀಲನು ನಮ್ಮ ಮೊಕದ್ದಮೆಯನ್ನು ವಹಿಸಿಕೊಳ್ಳುವಂತೆ ಏರ್ಪಡಿಸಿದನು, ಮತ್ತು ಅವನಿಗೆ ನಮ್ಮ ಬಿಡುಗಡೆಯನ್ನು ಮಾಡಿಸಲು ಸಾಧ್ಯವಾಯಿತು.

ಒಂದು ಹೊಸ ಜೀವನ

ಎಮಾನ್ವೇಲ್‌ ಸೆರೆಮನೆಯಿಂದ ಬಿಡುಗಡೆಮಾಡಲ್ಪಟ್ಟ ಬಳಿಕ, ಒಬ್ಬ ಸಂಚರಣ ಮೇಲ್ವಿಚಾರಕನೋಪಾದಿ ಆ್ಯಥೆನ್ಸ್‌ನಲ್ಲಿರುವ ಸಭೆಗಳಿಗೆ ಭೇಟಿ ನೀಡಲಾರಂಭಿಸಿದನು. ನಾನು 1947ರಲ್ಲಿ ಅಲ್ಲಿಗೆ ಸ್ಥಳಾಂತರಿಸಿದೆ. ಕೊನೆಗೆ, ನಾನು ಸಾಕ್ಷಿಗಳ ಒಂದು ದೊಡ್ಡ ಗುಂಪನ್ನು​—ಕೇವಲ ಪುರುಷರು ಮಾತ್ರವಲ್ಲ ಸ್ತ್ರೀಯರೂ ಮಕ್ಕಳೂ ಇದ್ದ ಒಂದು ಗುಂಪನ್ನು ಭೇಟಿಮಾಡಿದೆ. ನಂತರ, 1947ರ ಜುಲೈ ತಿಂಗಳಿನಲ್ಲಿ, ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಲು ನನಗೆ ಸಾಧ್ಯವಾಯಿತು. ಒಬ್ಬ ಮಿಷನೆರಿಯಾಗಬೇಕೆಂದು ನಾನು ಅನೇಕ ವೇಳೆ ಹಂಬಲಿಸಿದ ಕಾರಣ, ಇಂಗ್ಲಿಷ್‌ ಭಾಷೆಯನ್ನು ಕಲಿತುಕೊಳ್ಳಲಿಕ್ಕಾಗಿ ನಾನು ನೈಟ್‌ ಸ್ಕೂಲ್‌ಗೆ ಹೋಗಲಾರಂಭಿಸಿದೆ. 1950ರಲ್ಲಿ ನಾನೊಬ್ಬ ಪಯನೀಯರಳಾದೆ. ತಾಯಿಯು ನನ್ನೊಂದಿಗೆ ವಾಸಿಸಲಿಕ್ಕಾಗಿ ಬಂದರು, ಮತ್ತು ಅವರು ಕೂಡ ಬೈಬಲ್‌ ಸತ್ಯವನ್ನು ಸ್ವೀಕರಿಸಿದರು. ಮತ್ತು 34 ವರ್ಷಗಳ ತರುವಾಯ ಅವರ ಮರಣದ ತನಕ ಅವರು ಒಬ್ಬ ಯೆಹೋವನ ಸಾಕ್ಷಿಯಾಗಿಯೇ ಉಳಿದರು.

ಅದೇ ವರ್ಷದಲ್ಲಿ, ಅಮೆರಿಕದಿಂದ ಬಂದಿದ್ದ ಜಾನ್‌ ಮಾರ್ಕ್ಸ್‌ (ಮಾರ್ಕಾಪುಲಾಸ್‌) ಎಂಬ ಒಬ್ಬ ಗೌರವಾನ್ವಿತ ಆತ್ಮಿಕ ವ್ಯಕ್ತಿಯನ್ನು ನಾನು ಭೇಟಿಯಾದೆ. ಜಾನ್‌ ದಕ್ಷಿಣ ಅಲ್ಬೇನಿಯದಲ್ಲಿ ಹುಟ್ಟಿದವರಾಗಿದ್ದರು, ಮತ್ತು ಅಮೆರಿಕಕ್ಕೆ ವಲಸೆಹೋದ ನಂತರ ಅವರು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದರು. 1950ರಲ್ಲಿ ಅವರು ಗ್ರೀಸ್‌ನಿಂದ ಅಲ್ಬೇನಿಯಕ್ಕೆ ಹೋಗಲು ಒಂದು ವೀಸಾವನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಯತ್ನಿಸುತ್ತಿದ್ದರು. ಆಗ ಅಲ್ಬೇನಿಯ ಅತಿ ಕಟ್ಟುನಿಟ್ಟಾದ ಕಮ್ಯೂನಿಸ್ಟ್‌ ಆಳ್ವಿಕೆಯ ಕೆಳಗಿದ್ದು, ಹೊರಗಿನವರಿಗೆ ಪ್ರವೇಶವಿಲ್ಲದಂಥ ದೇಶವಾಗಿತ್ತು. 1936ರಿಂದ ಜಾನ್‌ ತನ್ನ ಕುಟುಂಬವನ್ನು ನೋಡಿರಲಿಲ್ಲವಾದರೂ, ಅವರಿಗೆ ಅಲ್ಬೇನಿಯವನ್ನು ಪ್ರವೇಶಿಸಲು ಅನುಮತಿ ನೀಡಲ್ಪಡಲಿಲ್ಲ. ಯೆಹೋವನ ಸೇವೆಗಾಗಿರುವ ಅವರ ಅಗ್ನಿಸದೃಶ ಹುರುಪು ಮತ್ತು ಸಹೋದರತ್ವಕ್ಕಾಗಿರುವ ಅವರ ಆಳವಾದ ಪ್ರೀತಿಯು ನನ್ನನ್ನು ಪ್ರಭಾವಿಸಿತು. ನಾವು 1953ರ ಆಗಸ್ಟ್‌ 3ರಂದು ಮದುವೆಯಾದೆವು. ನಂತರ ನಾನು ಅವರೊಂದಿಗೆ ಅಮೆರಿಕದ ನ್ಯೂ ಜರ್ಸಿಯಲ್ಲಿದ್ದ ನಮ್ಮ ಹೊಸ ಮನೆಗೆ ಹೋದೆ.

ನಾವು ಪೂರ್ಣ ಸಮಯ ಸಾರುತ್ತಿರುವಾಗ, ನಮ್ಮ ಜೀವನೋಪಾಯಕ್ಕಾಗಿ ಜಾನ್‌ ಮತ್ತು ನಾನು ನ್ಯೂ ಜರ್ಸಿಯ ಸಮುದ್ರ ತೀರದಲ್ಲಿ ಒಂದು ಚಿಕ್ಕ ವ್ಯಾಪಾರವನ್ನು ನಡೆಸುತ್ತಿದ್ದೆವು; ಬೆಸ್ತರಿಗೆ ಬೆಳಗ್ಗಿನ ಊಟವನ್ನು ತಯಾರಿಸುವುದೇ ಆ ವ್ಯಾಪಾರವಾಗಿತ್ತು. ನಾವು ಬೇಸಗೆ ಕಾಲದಲ್ಲಿ ಮಾತ್ರ, ಮುಂಜಾವದಿಂದ ಹಿಡಿದು ಬೆಳಗ್ಗೆ 9:00 ಗಂಟೆಯ ವರೆಗೆ ಕೆಲಸಮಾಡಿದೆವು. ನಮ್ಮ ಜೀವನವನ್ನು ಸರಳವಾಗಿ ಇಟ್ಟುಕೊಳ್ಳುವ ಮೂಲಕ ಮತ್ತು ನಮ್ಮ ಆದ್ಯತೆಗಳನ್ನು ಆತ್ಮಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವ ಮೂಲಕ, ನಾವು ನಮ್ಮ ಹೆಚ್ಚಿನ ಸಮಯವನ್ನು ಸಾರುವ ಕೆಲಸದಲ್ಲಿ ವ್ಯಯಿಸಲು ಸಾಧ್ಯವಾಯಿತು. ವರ್ಷಗಳು ಕಳೆದಂತೆ, ಎಲ್ಲಿ ಸಾರುವವರ ಅಗತ್ಯವು ಹೆಚ್ಚಾಗಿತ್ತೋ ಅಂತಹ ವಿಭಿನ್ನ ನಗರಗಳಿಗೆ ಸ್ಥಳಾಂತರಿಸುವಂತೆ ನಾವು ಕೇಳಿಕೊಳ್ಳಲ್ಪಟ್ಟೆವು. ಅಲ್ಲಿ, ಯೆಹೋವನ ಸಹಾಯದಿಂದ ನಾವು ಆಸಕ್ತ ಜನರಿಗೆ ನೆರವು ನೀಡಿ, ಸಭೆಗಳನ್ನು ಸ್ಥಾಪಿಸಿ, ರಾಜ್ಯ ಸಭಾಗೃಹಗಳನ್ನು ಕಟ್ಟುವುದರಲ್ಲಿ ಸಹಾಯಮಾಡಿದೆವು.

ಕೊರತೆಯಲ್ಲಿದ್ದ ಸಹೋದರರಿಗೆ ನೆರವಾಗುವುದು

ಆದರೆ, ಶೀಘ್ರವೇ ಒಂದು ರೋಮಾಂಚಕ ಪ್ರತೀಕ್ಷೆಯು ನಮ್ಮ ಮುಂದೆ ಕಂಡುಬಂತು. ಜವಾಬ್ದಾರಿಯುತ ಸಹೋದರರು ನಮ್ಮ ಚಟುವಟಿಕೆಗಳು ನಿಷೇಧಿಸಲ್ಪಟ್ಟಿರುವ ಬಾಲ್ಕನ್‌ ದೇಶಗಳಲ್ಲಿ ಜೀವಿಸುತ್ತಿರುವ ಜೊತೆ ಕ್ರೈಸ್ತರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಬಯಸಿದರು. ಆ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು ಹಲವಾರು ವರ್ಷಗಳಲ್ಲಿ ಕೊಂಚವೇ ಅಥವಾ ಯಾವುದೇ ಆತ್ಮಿಕ ಆಹಾರವನ್ನು ಪಡೆದುಕೊಳ್ಳದೇ, ಅಂತಾರಾಷ್ಟ್ರೀಯ ಸಹೋದರತ್ವದಿಂದ ಸಂಪರ್ಕವನ್ನು ಕಳೆದುಕೊಂಡಿದ್ದರು; ಮತ್ತು ಕ್ರೂರ ಹಿಂಸೆಯನ್ನು ಎದುರಿಸಿದರು. ಅವರಲ್ಲಿ ಹೆಚ್ಚಿನವರ ಮೇಲೆ ಸದಾ ನಿಗಾ ಇಡಲಾಗುತ್ತಿತ್ತು, ಮತ್ತು ಅನೇಕರು ಸೆರೆಮನೆಗಳಲ್ಲಿ ಇಲ್ಲವೇ ಕೆಲಸದ ಶಿಬಿರಗಳಲ್ಲಿದ್ದರು. ಅವರಿಗೆ ತ್ವರಿತವಾಗಿ ಬೈಬಲ್‌ ಆಧಾರಿತ ಪ್ರಕಾಶನಗಳು, ನಿರ್ದೇಶನ ಮತ್ತು ಉತ್ತೇಜನವು ಬೇಕಾಗಿತ್ತು. ಉದಾಹರಣೆಗೆ, ನಾವು ಅಲ್ಬೇನಿಯದಿಂದ ಪಡೆದುಕೊಂಡಂಥ ಒಂದು ಸಂಕೇತ ರೂಪದ ಸಂದೇಶವು ಹೀಗೆಂದಿತು: “ನಮಗಾಗಿ ಕರ್ತನ ಬಳಿ ಪ್ರಾರ್ಥಿಸಿ. ಮನೆಯಿಂದ ಮನೆಗೆ ಹೋಗಿ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅವರು ನಮಗೆ ಅಭ್ಯಾಸಮಾಡಲು ಅನುಮತಿಸುವುದಿಲ್ಲ. ಮೂವರು ವ್ಯಕ್ತಿಗಳು ಬಂಧನದಲ್ಲಿ.”

ಆದುದರಿಂದ, 1960ರ ನವೆಂಬರ್‌ ತಿಂಗಳಿನಲ್ಲಿ ಈ ಸಹೋದರರಲ್ಲಿ ಕೆಲವರನ್ನು ಸಂಧಿಸಲಿಕ್ಕಾಗಿ ಆರು ತಿಂಗಳುಗಳ ದೀರ್ಘ ಪ್ರಯಾಣವನ್ನು ನಾವು ಆರಂಭಿಸಿದೆವು. ನಾವು ಈ ಸಾಹಸಮಯ ಪ್ರಯಾಣವನ್ನು ಸಾಧಿಸಲಿಕ್ಕಾಗಿ ನಮಗೆ “ಬಲಾಧಿಕ್ಯ,” ದೇವದತ್ತ ಧೈರ್ಯ, ಸ್ಥೈರ್ಯ, ಮತ್ತು ಬುದ್ಧಿವಂತಿಕೆಯ ಆವಶ್ಯಕತೆಯಿತ್ತು ಎಂಬುದು ಸುವ್ಯಕ್ತವಾಗಿತ್ತು. (2 ಕೊರಿಂಥ 4:​7) ನಮ್ಮ ಮೊದಲ ಗಮ್ಯಸ್ಥಾನವು ಅಲ್ಬೇನಿಯವಾಗಿತ್ತು. ನಾವು ಪ್ಯಾರಿಸ್‌ನಲ್ಲಿ ಒಂದು ಕಾರನ್ನು ಖರೀದಿಸಿ ಪ್ರಯಾಣವನ್ನು ಆರಂಭಿಸಿದೆವು. ನಾವು ರೋಮ್‌ಗೆ ತಲಪಿದ ನಂತರ, ಅಲ್ಬೇನಿಯಕ್ಕೆ ಹೋಗಲು ಜಾನ್‌ಗೆ ಮಾತ್ರ ವೀಸಾ ಸಿಕ್ಕಿತು. ನಾನು ಗ್ರೀಸ್‌ನಲ್ಲಿರುವ ಆ್ಯಥೆನ್ಸ್‌ಗೆ ಹೋಗಿ, ಅಲ್ಲಿಯೇ ಅವರಿಗಾಗಿ ಕಾಯಬೇಕಾಯಿತು.

ಜಾನ್‌ 1961ರ ಫೆಬ್ರವರಿ ತಿಂಗಳಿನ ಅಂತ್ಯಕ್ಕೆ ಅಲ್ಬೇನಿಯಕ್ಕೆ ಕಾಲಿಟ್ಟು, ಮಾರ್ಚ್‌ ತಿಂಗಳಿನ ಕೊನೆಯ ತನಕ ಅಲ್ಲಿಯೇ ಉಳಿದರು. ಅವರು ಟಿರಾನದಲ್ಲಿ 30 ಸಹೋದರರನ್ನು ವ್ಯಕ್ತಿಗತವಾಗಿ ಭೇಟಿಮಾಡಿದರು. ಹೆಚ್ಚು ಜರೂರಿಯಾಗಿದ್ದ ಸಾಹಿತ್ಯ ಮತ್ತು ಉತ್ತೇಜನವನ್ನು ಪಡೆದುಕೊಂಡದ್ದಕ್ಕಾಗಿ ಸಹೋದರರು ಎಷ್ಟು ಪುಳಕಿತಗೊಂಡರು! ಕಳೆದ 24 ವರ್ಷಗಳಲ್ಲಿ ಅವರಿಗೆ ಹೊರಗಿನವರಿಂದ ಒಂದು ಭೇಟಿಯೂ ಆಗಿರಲಿಲ್ಲ.

ಆ ಸಹೋದರರ ಸಮಗ್ರತೆ ಮತ್ತು ಸಹಿಷ್ಣುಭಾವವು ಜಾನ್‌ರ ಮೇಲೆ ಪ್ರಭಾವ ಬೀರಿತು. ಅನೇಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದರು ಮತ್ತು ಕಮ್ಯೂನಿಸ್ಟ್‌ ರಾಜ್ಯದ ಚಟುವಟಿಕೆಗಳಲ್ಲಿ ಭಾಗವಹಿಸದ ಕಾರಣ ಬಂಧಿಸಲ್ಪಟ್ಟಿದ್ದರು ಎಂಬುದು ಅವರಿಗೆ ತಿಳಿದುಬಂತು. ತಮ್ಮ 80ರ ಪ್ರಾಯದಲ್ಲಿದ್ದ ಇಬ್ಬರು ಸಹೋದರರು, ಸಾರುವ ಕೆಲಸಕ್ಕಾಗಿ 100 ಅಮೆರಿಕನ್‌ ಡಾಲರುಗಳನ್ನು ದಾನವಾಗಿ ಕೊಟ್ಟದ್ದು ವಿಶೇಷವಾಗಿ ಜಾನ್‌ರ ಹೃದಯವನ್ನು ಸ್ಪರ್ಶಿಸಿತು. ಸರಕಾರದಿಂದ ಕೊಡಲ್ಪಡುವ ಕೊಂಚ ಮೊತ್ತದ ಪೆನ್‌ಷನ್‌ಗಳಿಂದ ಅವರು ಅನೇಕ ವರ್ಷಗಳಿಂದ ಉಳಿತಾಯಮಾಡುತ್ತಿದ್ದರು.

ಅಲ್ಬೇನಿಯದಲ್ಲಿ ಜಾನ್‌ ಕಳೆಯಲಿಕ್ಕಿದ್ದ ಕೊನೆಯ ದಿನವು 1961ರ ಮಾರ್ಚ್‌ 30 ಆಗಿತ್ತು​—ಆ ದಿನ ಯೇಸುವಿನ ಮರಣದ ಜ್ಞಾಪಕಾಚರಣೆಯಾಗಿತ್ತು. ಜಾನ್‌ ಕೂಡಿ ಬಂದಿದ್ದ 37 ಮಂದಿಗೆ ಜ್ಞಾಪಕಾಚರಣೆಯ ಭಾಷಣವನ್ನು ಕೊಟ್ಟರು. ಆದರೆ ಭಾಷಣವು ಮುಗಿದೊಡನೆ, ಸಹೋದರರು ಜಾನ್‌ರನ್ನು ಹಿಂದಿನ ಬಾಗಿಲ ಮೂಲಕ ಬೇಗ ಬೇಗನೆ ಹೊರಡಿಸಿ, ಡುರಸ್‌ನ ಬಂದರಿಗೆ ತಂದು ಬಿಟ್ಟರು. ಮತ್ತು ಅಲ್ಲಿಂದ ಗ್ರೀಸ್‌ನಲ್ಲಿರುವ ಪೀರೆಎಫ್ಸ್‌ಗೆ ಹೋಗುತ್ತಿದ್ದ ಟರ್ಕಿಶ್‌ ಸರಕು ಹಡಗನ್ನು ಜಾನ್‌ ಹತ್ತಿದರು.

ಅವರು ಸುಕ್ಷೇಮದಿಂದ ಹಿಂದಿರುಗಿದ್ದು ನನಗೆ ಸಂತೋಷವನ್ನು ಉಂಟುಮಾಡಿತು. ಈಗ ನಾವು ನಮ್ಮ ಉಳಿದ ಅಪಾಯಕರ ಪಯಣಕ್ಕೆ ತೊಡಗಸಾಧ್ಯವಿತ್ತು. ನಮ್ಮ ಪ್ರಯಾಣವು ನಮ್ಮ ಕೆಲಸವನ್ನು ನಿಷೇಧಿಸಿದ್ದ ಮೂರು ಬಾಲ್ಕನ್‌ ದೇಶಗಳಿಗೆ ನಮ್ಮನ್ನು ಕೊಂಡೊಯ್ದಿತು​—ಇದು ಒಂದು ಸಾಹಸ ಕಾರ್ಯವೇ ಆಗಿತ್ತು, ಏಕೆಂದರೆ ನಾವು ಬೈಬಲ್‌ ಸಾಹಿತ್ಯ, ಟೈಪ್‌ರೈಟರ್‌ಗಳು ಮತ್ತು ಇನ್ನಿತರ ಸರಬರಾಯಿಯನ್ನು ತೆಗೆದುಕೊಂಡುಹೋಗುತ್ತಿದ್ದೆವು. ಯೆಹೋವನಿಗೋಸ್ಕರ ತಮ್ಮ ವೃತ್ತಿಗಳನ್ನು, ತಮ್ಮ ಸ್ವಾತಂತ್ರ್ಯವನ್ನು, ಅಷ್ಟೇಕೆ ತಮ್ಮ ಜೀವಗಳನ್ನೂ ಅಪಾಯಕ್ಕೊಡ್ಡಲು ಸಿದ್ಧರಿದ್ದ ಕೆಲವು ನಿಷ್ಠಾವಂತ ಸಹೋದರ ಸಹೋದರಿಯರನ್ನು ಭೇಟಿಮಾಡುವ ಸದವಕಾಶವು ನಮಗೆ ಸಿಕ್ಕಿತು. ಅವರ ಹುರುಪು ಮತ್ತು ಪ್ರಾಮಾಣಿಕ ಪ್ರೀತಿಯು ಉತ್ತೇಜನದ ಬುಗ್ಗೆಯಾಗಿತ್ತು. ಅಷ್ಟುಮಾತ್ರವಲ್ಲ, ಯೆಹೋವನು “ಬಲಾಧಿಕ್ಯ”ವನ್ನು ಒದಗಿಸುತ್ತಿದ್ದಾನೆ ಎಂಬ ವಾಸ್ತವಾಂಶವೂ ನಮ್ಮನ್ನು ಪ್ರಭಾವಿಸಿತು.

ನಮ್ಮ ಪ್ರಯಾಣವು ಯಶಸ್ವಿಕರವಾಗಿ ಕೊನೆಗೊಂಡ ನಂತರ, ನಾವು ಅಮೆರಿಕಕ್ಕೆ ಹಿಂದಿರುಗಿದೆವು. ತದನಂತರದ ವರ್ಷಗಳಲ್ಲಿ, ಅಲ್ಬೇನಿಯಕ್ಕೆ ಸಾಹಿತ್ಯವನ್ನು ಕಳುಹಿಸಲಿಕ್ಕಾಗಿ ಮತ್ತು ನಮ್ಮ ಸಹೋದರರ ಚಟುವಟಿಕೆಗಳ ವರದಿಗಳನ್ನು ಪಡೆದುಕೊಳ್ಳಲಿಕ್ಕಾಗಿ ನಾವು ವಿವಿಧ ವಿಧಾನಗಳನ್ನು ಉಪಯೋಗಿಸಿದೆವು.

ಎಷ್ಟೋ ಪ್ರಯಾಣಗಳಲ್ಲಿ, ಅಪಾಯಗಳಲ್ಲಿ

ವರ್ಷಗಳು ಕಳೆದವು, ಮತ್ತು 1981ರಲ್ಲಿ ಜಾನ್‌ 76 ವರ್ಷ ಪ್ರಾಯದವರಾಗಿದ್ದಾಗ ಮರಣಪಟ್ಟದ್ದು ನನ್ನನ್ನು ಒಬ್ಬೊಂಟಿಗಳಾಗಿ ಮಾಡಿತು. ನನ್ನ ಅಕ್ಕನ ಮಗಳಾದ ಎವಾಂಜೀಲೀಯ ಮತ್ತು ಅವಳ ಗಂಡನಾದ ಜಾರ್ಜ್‌ ಓರ್‌ಫನೀಡೀಸ್‌ ನನ್ನನ್ನು ಅತಿಥಿಯಾಗಿ ಸ್ವೀಕರಿಸಿ, ಅಂದಿನಿಂದ ಅತ್ಯಮೂಲ್ಯವಾಗಿರುವ ಭಾವನಾತ್ಮಕ ಮತ್ತು ಪ್ರಾಯೋಗಿಕ ನೆರವನ್ನು ನೀಡಿದ್ದಾರೆ. ಅವರು ಸೂಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಯೆಹೋವನ ಬೆಂಬಲವನ್ನು ತಾವೇ ಪ್ರತ್ಯಕ್ಷವಾಗಿ ನೋಡಿದ್ದರು. *

ಸ್ವಲ್ಪ ಕಾಲದ ನಂತರ, ಅಲ್ಬೇನಿಯದಲ್ಲಿರುವ ನಮ್ಮ ಸಹೋದರರೊಂದಿಗೆ ಸಂಪರ್ಕ ಮಾಡಲಿಕ್ಕಾಗಿ ಒಂದು ಹೊಸ ಪ್ರಯತ್ನವನ್ನು ಮಾಡಬೇಕಾಗಿತ್ತು. ನನ್ನ ಗಂಡನ ಸಂಬಂಧಿಕರು ಅಲ್ಲಿ ಜೀವಿಸುತ್ತಿದ್ದ ಕಾರಣ, ನಾನು ಆ ದೇಶಕ್ಕೆ ಒಂದು ಪಯಣವನ್ನು ಮಾಡಬಯಸುವೆನೋ ಎಂದು ನನ್ನನ್ನು ಕೇಳಲಾಯಿತು. ಖಂಡಿತವಾಗಿಯೂ ನಾನು ಹೋಗಲು ಸಿದ್ಧಳಿದ್ದೆ!

ಹಲವಾರು ತಿಂಗಳುಗಳ ಶ್ರದ್ಧಾಪೂರ್ವಕ ಪ್ರಯತ್ನದ ನಂತರ, 1986ರ ಮೇ ತಿಂಗಳಿನಲ್ಲಿ, ಆ್ಯಥೆನ್ಸ್‌ನಲ್ಲಿರುವ ಅಲ್ಬೇನಿಯದ ರಾಯಭಾರಿ ಕಚೇರಿಯಿಂದ ಒಂದು ವೀಸಾವನ್ನು ಪಡೆದುಕೊಳ್ಳಲು ನನಗೆ ಸಾಧ್ಯವಾಯಿತು. ಅಂತಾರಾಷ್ಟ್ರೀಯ ವ್ಯವಹಾರಗಳನ್ನು ನಿರ್ವಹಿಸುವ ಸಿಬ್ಬಂದಿ ವರ್ಗವು, ಏನಾದರೂ ಹೆಚ್ಚುಕಡಿಮೆಯಾದರೆ ನಾನು ಹೊರಗಿನ ದೇಶಗಳಿಂದ ಯಾವುದೇ ಸಹಾಯವನ್ನು ಅಪೇಕ್ಷಿಸಬಾರದು ಎಂದು ಖಡಾಖಂಡಿತವಾಗಿ ಎಚ್ಚರಿಕೆ ನೀಡಿತು. ಅಲ್ಬೇನಿಯಕ್ಕೆ ವಿಮಾನ ಟಿಕೆಟ್‌ಗಳನ್ನು ಖರೀದಿಸಲಿಕ್ಕಾಗಿ ನಾನು ಒಬ್ಬ ಟ್ರಾವೆಲ್‌ ಏಜೆಂಟ್‌ ಅನ್ನು ಸಮೀಪಿಸಿದಾಗ, ಅವನು ಆಶ್ಚರ್ಯಚಕಿತನಾದನು. ಭಯವು ನನ್ನನ್ನು ತಡೆಗಟ್ಟುವಂತೆ ಬಿಡದೆ, ಶೀಘ್ರದಲ್ಲೇ ಆ್ಯಥೆನ್ಸ್‌ನಿಂದ ಟಿರಾನಕ್ಕೆ ಹೋಗುವ ಏಕೈಕ ಸಾಪ್ತಾಹಿಕ ವಿಮಾನದಲ್ಲಿ ನಾನು ಪ್ರಯಾಣಿಸಿದೆ. ಅದೇ ವಿಮಾನದಲ್ಲಿ ಅಲ್ಬೇನಿಯದ ಕೇವಲ ಮೂವರು ವೃದ್ಧರು ಪ್ರಯಾಣಿಸುತ್ತಿದ್ದರು; ವೈದ್ಯಕೀಯ ಕಾರಣಗಳಿಗಾಗಿ ಅವರು ಗ್ರೀಸ್‌ಗೆ ಬಂದಿದ್ದರು.

ವಿಮಾನವು ನೆಲಮುಟ್ಟಿದ ಕೂಡಲೇ, ಕಸ್ಟಮ್ಸ್‌ ಕಚೇರಿಯೋಪಾದಿ ಉಪಯೋಗಿಸಲ್ಪಡುತ್ತಿದ್ದ ಒಂದು ಖಾಲಿ ಕೊಠಡಿಗೆ ಹೋಗುವಂತೆ ನನಗೆ ಹೇಳಲಾಯಿತು. ನನ್ನ ಗಂಡನ ತಮ್ಮ ಮತ್ತು ತಂಗಿ ಯೆಹೋವನ ಸಾಕ್ಷಿಗಳಾಗಿರದಿದ್ದರೂ, ಅಲ್ಲಿ ಇರುವ ಸ್ವಲ್ಪ ಮಂದಿ ಸ್ಥಳಿಕ ಸಹೋದರರೊಂದಿಗೆ ಸಂಪರ್ಕವನ್ನು ಸ್ಥಾಪಿಸುವುದರಲ್ಲಿ ನನಗೆ ಸಹಾಯಮಾಡಲು ಅವರು ಸಿದ್ಧರಿದ್ದರು. ನಿಯಮಕ್ಕನುಸಾರ, ನನ್ನ ಆಗಮನದ ಕುರಿತಾಗಿ ಅವರು ಸಮಾಜದ ಮುಖ್ಯಸ್ಥನಿಗೆ ತಿಳಿಸಬೇಕಿತ್ತು. ಇದರ ಫಲಿತಾಂಶವಾಗಿ, ನಾನು ಪೊಲೀಸರ ನಿಕಟ ಗಮನದ ಕೇಂದ್ರಬಿಂದುವಾದೆ. ಆದುದರಿಂದ, ನಾನು ಮನೆಯಲ್ಲಿಯೇ ಉಳಿಯುವಂತೆ ನನ್ನ ಸಂಬಂಧಿಕರು ಸಲಹೆ ನೀಡಿದರು, ಮತ್ತು ಅದೇ ಸಮಯದಲ್ಲಿ ಟಿರಾನದಲ್ಲಿ ಜೀವಿಸುತ್ತಿರುವ ಸಹೋದರರಲ್ಲಿ ಇಬ್ಬರನ್ನು ಹುಡುಕಿ, ಅವರನ್ನು ನನ್ನ ಬಳಿಗೆ ಕರೆತರುವುದಾಗಿ ಹೇಳಿದರು.

ಆ ಸಮಯದಲ್ಲಿ, ಇಡೀ ಅಲ್ಬೇನಿಯದಲ್ಲಿ ಒಂಬತ್ತು ಸಮರ್ಪಿತ ಸಹೋದರರಿದ್ದರು ಎಂದು ತಿಳಿದುಬಂದಿತ್ತು. ಅನೇಕ ವರ್ಷಗಳ ನಿಷೇಧ, ಹಿಂಸೆ ಮತ್ತು ತೀವ್ರ ನಿಗಾವಣೆಯು ಅವರನ್ನು ಹೆಚ್ಚು ಜಾಗರೂಕರನ್ನಾಗಿ ಮಾಡಿತ್ತು. ಆಳವಾದ ಸುಕ್ಕುಗಳು ಅವರ ಮುಖಗಳಲ್ಲಿ ಕಾಣಿಸಿಕೊಂಡವು. ನಾನು ಆ ಇಬ್ಬರು ಸಹೋದರರ ವಿಶ್ವಾಸವನ್ನು ಗಳಿಸಿದಾಗ, ಅವರ ಮೊದಲ ಪ್ರಶ್ನೆಯು, “ಕಾವಲಿನಬುರುಜು ಪತ್ರಿಕೆಗಳೆಲ್ಲಿ?” ಎಂಬುದಾಗಿತ್ತು. ಅನೇಕ ವರ್ಷಗಳಿಂದ ಅವರ ಬಳಿ ಕೇವಲ ಹಳೆಯ ಪುಸ್ತಕಗಳ ಎರಡು ಪ್ರತಿಗಳು ಮಾತ್ರ ಇದ್ದವು​—ಒಂದು ಬೈಬಲು ಕೂಡ ಇರಲಿಲ್ಲ.

ಸರಕಾರವು ಅವರ ವಿರುದ್ಧ ತೆಗೆದುಕೊಂಡಿರುವ ಕೆಲವು ಕ್ರೂರವಾದ ಕ್ರಮಗಳ ಕುರಿತು ಅವರು ಎಲ್ಲ ವಿಷಯವನ್ನು ಹೇಳಿದರು. ಮುಂಬರುತ್ತಿದ್ದ ಚುನಾವಣೆಯಲ್ಲಿ ರಾಜಕೀಯವಾಗಿ ತಟಸ್ಥನಾಗಿ ಉಳಿಯುವೆನು ಎಂಬ ದೃಢ ತೀರ್ಮಾನವನ್ನು ಮಾಡಿದ್ದ ಒಬ್ಬ ಪ್ರೀತಿಯ ಸಹೋದರನ ವಿಷಯವನ್ನು ಅವರು ಹೇಳಿದರು. ಸರಕಾರವು ಎಲ್ಲವನ್ನೂ ನಿಯಂತ್ರಿಸುತ್ತಿದ್ದ ಕಾರಣ, ಹೀಗೆ ಮಾಡುವುದು ಆ ಸಹೋದರನ ಕುಟುಂಬವು ಯಾವುದೇ ಆಹಾರದ ಸರಬರಾಜನ್ನು ಪಡೆದುಕೊಳ್ಳಲಾರದು ಎಂಬುದನ್ನು ಅರ್ಥೈಸಿತು. ಆ ಸಹೋದರನ ವಿವಾಹಿತ ಮಕ್ಕಳು ಮತ್ತು ಅವರ ಕುಟುಂಬಗಳವರೆಲ್ಲರೂ ಅವನ ಧಾರ್ಮಿಕ ನಂಬಿಕೆಗಳಲ್ಲಿ ಪಾಲುದಾರರಾಗಿರಲಿಲ್ಲವಾದರೂ, ಅವರೂ ಸೆರೆಮನೆಯಲ್ಲಿ ಹಾಕಲ್ಪಡಲಿಕ್ಕಿದ್ದರು. ಈ ಸಹೋದರನ ಕುಟುಂಬದವರು, ಭಯದಿಂದಾಗಿ, ಮತ ಚಲಾಯಿಸುವ ದಿನದ ಹಿಂದಿನ ರಾತ್ರಿ ಅವನನ್ನು ಕೊಂದು, ಒಂದು ಬಾವಿಯಲ್ಲಿ ಅವನ ದೇಹವನ್ನು ಹಾಕಿ, ನಂತರ ಅವನು ಭೀತಿಯಿಂದ ತನ್ನನ್ನೇ ಕೊಂದುಕೊಂಡನು ಎಂದು ಹೇಳಿದರು ಎಂದು ವರದಿಸಲ್ಪಟ್ಟಿತ್ತು.

ಆ ಜೊತೆ ಕ್ರೈಸ್ತರ ಬಡತನವು ಎದೆಬಿರಿಸುವಂತಿತ್ತು. ಆದರೂ, ನಾನು ಅವರಲ್ಲಿ ಪ್ರತಿಯೊಬ್ಬರಿಗೆ 20 ಡಾಲರುಗಳನ್ನು ಕೊಡಲು ಪ್ರಯತ್ನಿಸಿದಾಗ, ಅವರು ನಿರಾಕರಿಸುತ್ತಾ, “ನಮಗೆ ಆತ್ಮಿಕ ಆಹಾರ ಮಾತ್ರ ಬೇಕಾಗಿದೆ” ಎಂದು ಹೇಳಿದರು. ಈ ಪ್ರೀತಿಯ ಸಹೋದರರು, ಹಲವಾರು ದಶಕಗಳಿಂದ ಜನಸಮೂಹದ ಅಧಿಕಾಂಶ ಮಂದಿಯನ್ನು ನಾಸ್ತಿಕರಾಗಿ ಮಾಡಲಿಕ್ಕಾಗಿ ತಮ್ಮ ತತ್ತ್ವಬೋಧನೆಗಳನ್ನು ಯಶಸ್ವಿಕರವಾಗಿ ಬೋಧಿಸಿದ್ದ ನಿರಂಕುಶ ಆಡಳಿತದ ಕೆಳಗೆ ಜೀವಿಸಿದ್ದರು. ಆದರೆ ಅವರ ನಂಬಿಕೆ ಮತ್ತು ದೃಢಸಂಕಲ್ಪವು, ಎಲ್ಲೆಡೆಯೂ ಇರುವ ಸಾಕ್ಷಿಗಳಷ್ಟೇ ಬಲವಾಗಿತ್ತು. ಅತಿ ಕಠಿನ ಪರಿಸ್ಥಿತಿಗಳ ಕೆಳಗೂ, “ಬಲಾಧಿಕ್ಯ”ವನ್ನು ಒದಗಿಸಬಲ್ಲ ಯೆಹೋವನ ಸಾಮರ್ಥ್ಯವು, ಎರಡು ವಾರಗಳ ನಂತರ ನಾನು ಅಲ್ಬೇನಿಯವನ್ನು ಬಿಟ್ಟು ಹೊರಟಾಗ ನನ್ನ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರಿತ್ತು.

ಪುನಃ 1989ರಲ್ಲಿ ಮತ್ತು ನಂತರ 1991ರಲ್ಲಿ ಕೂಡ ಅಲ್ಬೇನಿಯಕ್ಕೆ ಹೋಗುವ ಸುಯೋಗವು ನನಗೆ ಸಿಕ್ಕಿತು. ವಾಕ್‌ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವು ಆ ದೇಶದಲ್ಲಿ ಕ್ರಮೇಣವಾಗಿ ಅರಳಲು ಆರಂಭಿಸಿದಾಗ, ಯೆಹೋವನ ಆರಾಧಕರ ಸಂಖ್ಯೆಯು ತ್ವರಿತಗತಿಯಿಂದ ಹೆಚ್ಚಿತು. 1986ರಲ್ಲಿ ಅಲ್ಲಿ ಇದ್ದ ಕೇವಲ ಬೆರಳೆಣಿಕೆಯಷ್ಟು ಸಮರ್ಪಿತ ಕ್ರೈಸ್ತರು, ಈಗ 2,200ಕ್ಕಿಂತ ಹೆಚ್ಚು ಕ್ರಿಯಾಶೀಲ ಪ್ರಚಾರಕರಾಗಿ ಬೆಳೆದಿದ್ದಾರೆ. ಅವರಲ್ಲಿ ಒಬ್ಬಳು ನನ್ನ ಗಂಡನ ತಂಗಿಯಾದ ಮೆಲ್‌ಪೌ ಆಗಿದ್ದಳು. ಆ ನಂಬಿಗಸ್ತ ಗುಂಪಿನ ಮೇಲೆ ಯೆಹೋವನ ಆಶೀರ್ವಾದವಿತ್ತು ಎಂಬುದರ ಕುರಿತು ಯಾವುದೇ ಸಂದೇಹವಿರಲು ಸಾಧ್ಯವೋ?

ಯೆಹೋವನ ಬಲದಿಂದ ಸಂತೃಪ್ತಿದಾಯಕ ಜೀವನ

ನಾನು ಹಿನ್ನೋಟ ಬೀರುವಾಗ, ನಮ್ಮ​—ಜಾನ್‌ ಮತ್ತು ನನ್ನ—ಸೇವೆಯು ವ್ಯರ್ಥವಾಗಿರಲಿಲ್ಲ ಎಂಬ ದೃಢವಿಶ್ವಾಸ ನನಗಿದೆ. ನಮ್ಮ ಯುವಪ್ರಾಯದ ಶಕ್ತಿಯನ್ನು ನಾವು ಸಾಧ್ಯವಿರುವಷ್ಟು ಅತ್ಯುತ್ತಮವಾದ ರೀತಿಯಲ್ಲಿ ಉಪಯೋಗಿಸಿದ್ದೆವು. ಬೇರಾವುದೇ ಜೀವನವೃತ್ತಿಗಿಂತಲೂ ಪೂರ್ಣ ಸಮಯದ ಶುಶ್ರೂಷೆಯ ನಮ್ಮ ಜೀವನವೃತ್ತಿಯು ಹೆಚ್ಚು ಅರ್ಥಭರಿತವಾದದ್ದಾಗಿದೆ. ಬೈಬಲ್‌ ಸತ್ಯವನ್ನು ಕಲಿತುಕೊಳ್ಳುವಂತೆ ನಾವು ಸಹಾಯಮಾಡಿದ ಅನೇಕ ಪ್ರಿಯ ವ್ಯಕ್ತಿಗಳಿಂದಾಗಿ ನಾನು ಸಂತೋಷಗೊಳ್ಳುತ್ತೇನೆ. ಈಗ ವೃದ್ಧ ಪ್ರಾಯದವಳಾಗಿರುವ ನಾನು, ‘ಯೌವನದಲ್ಲಿಯೇ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿರಿ’ ಎಂದು ಯುವ ಜನರಿಗೆ ಹೃತ್ಪೂರ್ವಕವಾದ ಪ್ರೋತ್ಸಾಹವನ್ನು ನೀಡಬಲ್ಲೆ.​—ಪ್ರಸಂಗಿ 12:1.

ಎಂಬತ್ತೊಂದರ ಪ್ರಾಯದವಳಾಗಿದ್ದರೂ ಕೂಡ, ನಾನು ಸುವಾರ್ತೆಯ ಪೂರ್ಣ ಸಮಯದ ಸೇವಕಳಾಗಿ ಇನ್ನೂ ಸೇವೆಮಾಡಶಕ್ತಳಾಗಿದ್ದೇನೆ. ನಾನು ಬೆಳಗ್ಗೆ ಬೇಗನೆ ಎದ್ದು, ಬಸ್‌ ನಿಲ್ದಾಣಗಳಲ್ಲಿ, ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುವ ಜಾಗಗಳಲ್ಲಿ, ಬೀದಿಗಳಲ್ಲಿ, ಅಂಗಡಿಗಳಲ್ಲಿ, ಅಥವಾ ಉದ್ಯಾನವನಗಳಲ್ಲಿ ಜನರಿಗೆ ಸಾಕ್ಷಿಕೊಡುತ್ತೇನೆ. ವೃದ್ಧಾಪ್ಯದ ತೊಂದರೆಗಳು ಜೀವನವನ್ನು ಹೆಚ್ಚು ಕಠಿನವಾಗಿ ಮಾಡುತ್ತವೆ, ಆದರೆ ನನ್ನ ಪ್ರೀತಿಯ ಆತ್ಮಿಕ ಸಹೋದರ ಸಹೋದರಿಯರು​—ನನ್ನ ದೊಡ್ಡ ಆತ್ಮಿಕ ಕುಟುಂಬ​—ಮಾತ್ರವಲ್ಲದೆ, ನನ್ನ ಅಕ್ಕನ ಮಗಳ ಕುಟುಂಬವು ನಿಜವಾದ ಬೆಂಬಲವಾಗಿ ಪರಿಣಮಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ, “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲ” ಎಂಬುದನ್ನು ನಾನು ಕಂಡುಕೊಂಡಿದ್ದೇನೆ.​—2 ಕೊರಿಂಥ 4:7.

[ಪಾದಟಿಪ್ಪಣಿಗಳು]

^ ಪ್ಯಾರ. 10 ಎಮಾನ್ವೇಲ್‌ ಲೀಓನೂಡಾಕೀಸ್‌ ಅವರ ಜೀವನ ಕಥೆಗಾಗಿ, 1999, ಸೆಪ್ಟೆಂಬರ್‌ 1ರ ಕಾವಲಿನಬುರುಜುವಿನ 25-9ನೆಯ ಪುಟಗಳನ್ನುನೋಡಿರಿ.

^ ಪ್ಯಾರ. 11 ಎಮಾನ್ವೇಲ್‌ ಪಟೆರ್ಕೀಸ್‌ ಅವರ ಜೀವನ ಕಥೆಗಾಗಿ, 1996, ನವೆಂಬರ್‌ 1ರ ಕಾವಲಿನಬುರುಜುವಿನ 22-7ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 31 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ 1992ರ ಯಹೋವನ ಸಾಕ್ಷಿಗಳ ವರ್ಷಪುಸ್ತಕದ (ಇಂಗ್ಲಿಷ್‌) 91-2ನೆಯ ಪುಟಗಳನ್ನು ನೋಡಿರಿ.

[ಪುಟ 25ರಲ್ಲಿರುವ ಚಿತ್ರ]

ಮೇಲೆ: ಆ್ಯಥೆನ್ಸ್‌ನಲ್ಲಿನ ಬೆತೆಲಿಗರ ಒಂದು ಗುಂಪಿನೊಂದಿಗೆ, ಜಾನ್‌ (ತೀರ ಎಡಭಾಗದಲ್ಲಿ), ನಾನು (ಮಧ್ಯೆ), ಮತ್ತು ನನ್ನ ಎಡಭಾಗದಲ್ಲಿ ನನ್ನ ಅಣ್ಣನಾದ ಎಮಾನ್ವೇಲ್‌ ಮತ್ತು ಅವನ ಎಡಭಾಗದಲ್ಲಿ ನಮ್ಮ ತಾಯಿ​—1950

[ಪುಟ 25ರಲ್ಲಿರುವ ಚಿತ್ರ]

ಎಡಭಾಗದಲ್ಲಿ: ನ್ಯೂ ಜರ್ಸಿಯ ಸಮುದ್ರ ತೀರದಲ್ಲಿ ಜಾನ್‌ ಅವರೊಂದಿಗೆ ನಮ್ಮ ವ್ಯಾಪಾರ ಸ್ಥಳದಲ್ಲಿ​—1956

[ಪುಟ 26ರಲ್ಲಿರುವ ಚಿತ್ರ]

ಅಲ್ಬೇನಿಯದ ಟಿರಾನದಲ್ಲಿ ಜಿಲ್ಲಾ ಅಧಿವೇಶನ​—1995

[ಪುಟ 26ರಲ್ಲಿರುವ ಚಿತ್ರ]

ಅಲ್ಬೇನಿಯದ ಟಿರಾನದಲ್ಲಿರುವ ಬೆತೆಲ್‌ ಸೌಕರ್ಯ. 1996ರಲ್ಲಿ ಪೂರ್ಣಗೊಂಡಿತು

[ಪುಟ 26ರಲ್ಲಿರುವ ಚಿತ್ರ]

ಮೇಲೆ: 1940ರ “ಕಾವಲಿನಬುರುಜು” ಪತ್ರಿಕೆಯಿಂದ ಅಲ್ಬೇನಿಯನ್‌ ಭಾಷೆಗೆ ರಹಸ್ಯವಾಗಿ ಭಾಷಾಂತರಿಸಲ್ಪಟ್ಟಿರುವ ಒಂದು ಲೇಖನ

[ಪುಟ 26ರಲ್ಲಿರುವ ಚಿತ್ರ]

ನನ್ನ ಅಕ್ಕನ ಮಗಳು ಎವಾಂಜೀಲೀಯ ಓರ್‌ಫನೀಡೀಸ್‌ (ಬಲಕ್ಕೆ) ಮತ್ತು ಅವಳ ಗಂಡ ಜಾರ್ಜ್‌ರೊಂದಿಗೆ