ವರ್ಗರಹಿತ ಸಮಾಜವು ನಿಜವಾಗಿಯೂ ಶಕ್ಯವೊ?
ವರ್ಗರಹಿತ ಸಮಾಜವು ನಿಜವಾಗಿಯೂ ಶಕ್ಯವೊ?
ಅಮೆರಿಕದ ಎರಡನೆಯ ರಾಷ್ಟ್ರಾಧ್ಯಕ್ಷರಾಗಿದ್ದ ಜಾನ್ ಆ್ಯಡಮ್ಸ್, ಸ್ವಾತಂತ್ರ್ಯ ಘೋಷಣೆ ಎಂಬ ಐತಿಹಾಸಿಕ ಕರಾರಿಗೆ ಸಹಿಹಾಕಿದವರಲ್ಲಿ ಒಬ್ಬರಾಗಿದ್ದರು. ಆ ಕರಾರಿನಲ್ಲಿ ಈ ಉದಾತ್ತ ಮಾತುಗಳು ಇದ್ದವು: “ಎಲ್ಲ ಮನುಷ್ಯರು ಸಮಾನರಾಗಿ ಸೃಷ್ಟಿಸಲ್ಪಟ್ಟಿದ್ದಾರೆ ಎಂಬ ಈ ಸತ್ಯಗಳು ಸುವ್ಯಕ್ತವಾಗಿವೆ ಎಂದು ನಾವು ನಂಬುತ್ತೇವೆ.” ಆದರೆ ಜನರು ನಿಜವಾಗಿಯೂ ಸಮಾನರಾಗಿದ್ದಾರೆಂಬುದರ ಕುರಿತು ಜಾನ್ ಆ್ಯಡಮ್ಸ್‌ರ ಮನಸ್ಸಿನಲ್ಲಿ ಸಂದೇಹಗಳಿದ್ದವು. ಯಾಕೆಂದರೆ ಅವರು ಹೀಗೆ ಬರೆದರು: “ಮಾನವ ಸ್ವಭಾವದಲ್ಲಿ ಮನಸ್ಸು ಮತ್ತು ದೇಹದ ಅಸಮಾನತೆಯು ಸರ್ವಶಕ್ತ ದೇವರಿಂದ ಎಷ್ಟೊಂದು ದೃಢವಾಗಿ ಬೇರೂರಿಸಲ್ಪಟ್ಟಿದೆ ಅಂದರೆ, ಯಾವುದೇ ಕುಶಲ ಯೋಜನೆಯಾಗಲಿ, ಕಾರ್ಯನೀತಿಯಾಗಲಿ ಅವುಗಳನ್ನು ಸಮಾನಗೊಳಿಸಲಾರದು.” ಇದಕ್ಕೆ ವ್ಯತಿರಿಕ್ತವಾಗಿ ಬ್ರಿಟಿಷ್ ಇತಿಹಾಸಗಾರರಾದ ಏಚ್. ಜಿ. ವೆಲ್ಸ್‌ರವರು, ಸಮಾನತಾವಾದಿ ಸಮಾಜವೊಂದನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಶಕ್ತರಾಗಿದ್ದರು. ಅವರಿಗನುಸಾರ ಅದು ಈ ಮೂರು ವಿಷಯಗಳ ಮೇಲೆ ಆಧಾರಿಸಲ್ಪಡಬೇಕಿತ್ತು: ಸರ್ವಸಾಮಾನ್ಯವಾದರೂ ಶುದ್ಧ ಮತ್ತು ಕಳಂಕರಹಿತವಾದ ಒಂದು ಲೋಕ ಧರ್ಮ, ಎಲ್ಲರಿಗೂ ಸಮಾನವಾದ ಶಿಕ್ಷಣ, ಮತ್ತು ಶಸ್ತ್ರಸಜ್ಜಿತ ಪಡೆಗಳ ಇಲ್ಲದಿರುವಿಕೆ.
ಈ ವರೆಗೆ, ವೆಲ್ಸ್‌ರವರು ಕಲ್ಪಿಸಿಕೊಂಡಿದ್ದ ಆ ಸಮಾನತಾವಾದಿ ಸಮಾಜವನ್ನು ಇತಿಹಾಸವು ರಚಿಸಿಲ್ಲ. ಮಾನವರು ಸ್ವಲ್ಪವೂ ಸಮಾನತೆಯಿಂದ ಜೀವಿಸುತ್ತಿಲ್ಲ, ಮತ್ತು ವರ್ಗಭೇದಗಳು ಈಗಲೂ ಸಮಾಜದ ಒಂದು ಪ್ರಧಾನ ಭಾಗವಾಗಿವೆ. ಒಟ್ಟಿನಲ್ಲಿ ಇಂಥ ವರ್ಗಭೇದಗಳಿಂದಾಗಿ ಸಮಾಜಕ್ಕೆ ಯಾವುದಾದರೂ ಪ್ರಯೋಜನಗಳು ಸಿಕ್ಕಿವೆಯೊ? ಇಲ್ಲ. ಸಾಮಾಜಿಕ ವರ್ಗ ವ್ಯವಸ್ಥೆಗಳು ಜನರನ್ನು ವಿಭಜಿಸುತ್ತವೆ, ಮತ್ತು ಇದು ಈರ್ಷ್ಯೆ, ದ್ವೇಷ, ಮನೋವೇದನೆ ಹಾಗೂ ತುಂಬ ರಕ್ತಪಾತವನ್ನು ಉಂಟುಮಾಡುತ್ತವೆ. ಒಂದು ಕಾಲದಲ್ಲಿ ಆಫ್ರಿಕ, ಆಸ್ಟ್ರೇಲಿಯ, ಮತ್ತು ಉತ್ತರ ಅಮೆರಿಕದಲ್ಲಿದ್ದ ಬಿಳಿಯರು ಶ್ರೇಷ್ಠರು ಎಂಬ ಮನೋವೃತ್ತಿಯು, ಬಿಳಿಯರಾಗಿರದ ಜನರ ಮೇಲೆ ತುಂಬ ಸಂಕಟವನ್ನು ಬರಮಾಡಿತು. ಇದರಲ್ಲಿ, ವಾನ್ ಡೀಮೆನ್ಸ್ ಲ್ಯಾಂಡ್ (ಈಗ ಟಾಸ್ಮೇನಿಯ)ನಲ್ಲಿ ನಡೆದ ಆದಿವಾಸಿಗಳ ಸಂಪೂರ್ಣ ಸಮೂಹಹತ್ಯೆಯು ಸೇರಿದೆ. ಯೂರೋಪಿನಲ್ಲಿ, ಯೆಹೂದ್ಯರು ಕೆಳವರ್ಗದವರೆಂಬ ವರ್ಗೀಕರಣವು, ಅವರ ಸಾಮೂಹಿಕ ಹತ್ಯಾಕಾಂಡಕ್ಕೆ ಪೀಠಿಕೆಯಾಗಿತ್ತು. ಕುಲೀನ ಮನೆತನದವರ ಭಾರೀ ಐಶ್ವರ್ಯ ಮತ್ತು ಕೆಳ ಹಾಗೂ ಮಧ್ಯಮವರ್ಗದವರ ನಡುವೆಯಿದ್ದ ಅತೃಪ್ತ ಭಾವನೆಯು, 18ನೆಯ ಶತಮಾನದಲ್ಲಿ ನಡೆದ ಫ್ರೆಂಚ್ ಕ್ರಾಂತಿ ಮತ್ತು 20ನೆಯ ಶತಮಾನದ ರಷ್ಯಾದಲ್ಲಿ ನಡೆದ ಬಾಲ್ಶೇವಿಕ್ ಕ್ರಾಂತಿಗೆ ನಡೆಸಿದಂಥ ಅಂಶವಾಗಿತ್ತು.
ಗತಕಾಲದ ಒಬ್ಬ ವಿವೇಕಿಯು ಹೀಗೆ ಬರೆದನು: ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂಗಿ 8:9) ಆಧಿಪತ್ಯ ನಡೆಸುವವರು ಒಬ್ಬೊಬ್ಬ ವ್ಯಕ್ತಿಗಳಾಗಿರಲಿ, ಇಲ್ಲವೇ ವರ್ಗಗಳೇ ಆಗಿರಲಿ, ಅವನ ಈ ಮಾತುಗಳು ಸತ್ಯವಾಗಿವೆ. ಜನರ ಒಂದು ಗುಂಪು ತನ್ನನ್ನೇ ಇತರರಿಗಿಂತ ಮೇಲೇರಿಸಿಕೊಳ್ಳುವಾಗ, ಕಷ್ಟಸಂಕಟಗಳು ಅನಿವಾರ್ಯವಾಗಿ ಹಿಂಬಾಲಿಸಿ ಬರುತ್ತವೆ.
ದೇವರ ಮುಂದೆ ಎಲ್ಲರೂ ಸಮಾನರು
ಮನುಷ್ಯರ ಕೆಲವೊಂದು ಗುಂಪುಗಳು ಹುಟ್ಟಿನಿಂದಲೇ ಇತರ ಗುಂಪುಗಳಿಗಿಂತಲೂ ಶ್ರೇಷ್ಠವಾಗಿವೆಯೊ? ದೇವರ ದೃಷ್ಟಿಯಲ್ಲಂತೂ ಇಲ್ಲವೇ ಇಲ್ಲ. ಯಾಕೆಂದರೆ ಬೈಬಲ್ ಹೀಗೆ ಹೇಳುತ್ತದೆ: “[ದೇವರು] ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ . . . ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ”ದನು. (ಅ. ಕೃತ್ಯಗಳು 17:26) ಇದಲ್ಲದೆ ಸೃಷ್ಟಿಕರ್ತನು, “ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.” (ಯೋಬ 34:19) ಎಲ್ಲ ಮನುಷ್ಯರು ಪರಸ್ಪರ ಸಂಬಂಧಿಕರಾಗಿದ್ದಾರೆ, ಮತ್ತು ದೇವರ ಮುಂದೆ ಎಲ್ಲರೂ ಹುಟ್ಟಿನಿಂದಲೇ ಸರಿಸಮಾನರಾಗಿದ್ದಾರೆ.
ಇದನ್ನೂ ನೆನಪಿಡಿರಿ. ಒಬ್ಬ ವ್ಯಕ್ತಿಯು ಸಾಯುವಾಗ, ಅವನು ಇತರರಿಗಿಂತ ಶ್ರೇಷ್ಠನಾಗಿದ್ದಾನೆಂಬ ಅವನ ಎಲ್ಲ ಹೇಳಿಕೆಗಳು ಮಣ್ಣುಪಾಲಾಗುತ್ತವೆ. ಆದರೆ ಪ್ರಾಚೀನ ಐಗುಪ್ತ್ಯರು ಈ ಮಾತನ್ನು ನಂಬುತ್ತಿರಲಿಲ್ಲ. ಹೀಗಿರುವುದರಿಂದ ಒಬ್ಬ ಫರೋಹನು ಸತ್ತಾಗ, ಅವರು ಅವನ ಸಮಾಧಿಯಲ್ಲಿ ತುಂಬ ಬೆಲೆಬಾಳುವ ವಸ್ತುಗಳನ್ನಿಡುತ್ತಿದ್ದರು. ಕಾರಣ? ಮರಣಾನಂತರದ ಜೀವಿತದಲ್ಲೂ ಅವನು ತನ್ನ ಉಚ್ಚ ಪದವಿಯಲ್ಲಿ ಮುಂದುವರಿಯುವಾಗ ಅವುಗಳನ್ನು ಅನುಭೋಗಿಸಲಿಕ್ಕಾಗಿಯೇ. ಆದರೆ ಅವನು ಅವುಗಳನ್ನು ಅನುಭೋಗಿಸುತ್ತಿದ್ದನೊ? ಇಲ್ಲ. ಆ ಐಶ್ವರ್ಯದಲ್ಲಿ ಹೆಚ್ಚಿನದ್ದು, ಗೋರಿಗಳನ್ನು ಲೂಟಿಮಾಡುತ್ತಿದ್ದವರ ಪಾಲಾಗುತ್ತಿತ್ತು, ಮತ್ತು ಅವರ ಕೈಗೆ ಸಿಗದೇ ಹೋದ ವಸ್ತುಗಳನ್ನು ಇಂದು ವಸ್ತುಸಂಗ್ರಹಾಲಯಗಳಲ್ಲಿ ನೋಡಬಹುದು.
ಆ ಫರೋಹನು ಸತ್ತುಹೋಗಿದ್ದರಿಂದ, ಆ ಎಲ್ಲ ದುಬಾರಿ ವಸ್ತುಗಳಿಂದ ಅವನಿಗೆ ಏನೂ ಪ್ರಯೋಜನವಾಗುತ್ತಿರಲಿಲ್ಲ. ಮರಣದಲ್ಲಿ, ಯಾವುದೇ ಉಚ್ಚ ಮತ್ತು ಕೀಳು ವರ್ಗಗಳಿಲ್ಲ, ಐಶ್ವರ್ಯ ಇಲ್ಲವೇ ಬಡತನವೆಂಬುದಿಲ್ಲ. ಬೈಬಲ್ ಹೇಳುವುದು: “ಸುಜ್ಞಾನಿಗಳು ಸಾಯುವದನ್ನು ನೋಡುತ್ತೇವಲ್ಲಾ; ಹಾಗೆಯೇ ಪಶುಗಳಂತಿರುವ ಜ್ಞಾನಹೀನರೂ ನಾಶವಾಗುತ್ತಾರೆ. ಅವರು ನಂಬಿದ್ದ ಆಸ್ತಿಯು ಇತರರ ಪಾಲಾಗುತ್ತದೆ. ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ ಸ್ಥಿರವಿಲ್ಲ; ಪಶುಗಳಂತೆಯೇ ಇಲ್ಲವಾಗುತ್ತಾನೆ.” (ಕೀರ್ತನೆ 49:10, 12) ನಾವು ರಾಜರಾಗಿರಲಿ, ದಾಸರಾಗಿರಲಿ, ಈ ಪ್ರೇರಿತ ಮಾತುಗಳು ನಮಗೆಲ್ಲರಿಗೂ ಅನ್ವಯವಾಗುತ್ತವೆ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, . . . ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”—ಪ್ರಸಂಗಿ 9:5, 10.
ನಾವೆಲ್ಲರೂ ಹುಟ್ಟುವಾಗ ದೇವರ ದೃಷ್ಟಿಯಲ್ಲಿ ಸಮಾನರಾಗಿರುತ್ತೇವೆ, ಮತ್ತು ಮರಣದಲ್ಲೂ ಸಮಾನರಾಗಿ ಅಂತ್ಯವಾಗುತ್ತೇವೆ. ಆದುದರಿಂದ, ನಮಗಿರುವ ಅಲ್ಪಾಯುಷ್ಯದಲ್ಲಿ ಜನರ ಒಂದು ಗುಂಪು ಇನ್ನೊಂದು ಗುಂಪಿಗಿಂತ ಶ್ರೇಷ್ಠವಾಗಿದೆ ಎಂದು ಹೋರಾಡುತ್ತಿರುವುದು ಎಷ್ಟು ವ್ಯರ್ಥ!
ವರ್ಗರಹಿತ ಸಮಾಜ—ಹೇಗೆ?
ಎಂದಾದರೊಂದು ದಿನ, ಸಾಮಾಜಿಕ ವರ್ಗಕ್ಕೆ ಯಾವುದೇ ಮಹತ್ವವನ್ನು ಕೊಡದಿರುವಂಥ ಒಂದು ಸಮಾಜವಿರುವುದೆಂಬ ಯಾವುದೇ ನಿರೀಕ್ಷೆಯಿದೆಯೊ? ಹೌದು, ಇದೆ. ಬಹುಮಟ್ಟಿಗೆ 2,000 ವರ್ಷಗಳ ಹಿಂದೆ ಯೇಸು ಈ ಭೂಮಿಯ ಮೇಲಿದ್ದಾಗ, ಅಂಥ ಒಂದು ಸಮಾಜಕ್ಕಾಗಿ ತಳಪಾಯವನ್ನು ಹಾಕಲಾಯಿತು. ನಂಬುವ ಎಲ್ಲ ಮಾನವರಿಗಾಗಿ ಯೇಸು ತನ್ನ ಜೀವವನ್ನು ಒಂದು ಪ್ರಾಯಶ್ಚಿತ್ತ ಯಜ್ಞವಾಗಿ ಅರ್ಪಿಸಿದನು. ಹೀಗೆ “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯ”ಬಹುದು.—ಯೋಹಾನ 3:16.
ತನ್ನ ಹಿಂಬಾಲಕರಲ್ಲಿ ಯಾರೂ ತಮ್ಮನ್ನು ಜೊತೆ ವಿಶ್ವಾಸಿಗಳಿಗಿಂತ ಮತ್ತಾಯ 23:8-12) ದೇವರ ದೃಷ್ಟಿಯಲ್ಲಿ, ಯೇಸುವಿನ ಎಲ್ಲ ನಿಜ ಶಿಷ್ಯರು ನಂಬಿಕೆಯಲ್ಲಿ ಸಮಾನರಾಗಿದ್ದಾರೆ.
ಮೇಲೇರಿಸಿಕೊಳ್ಳಬಾರದೆಂಬುದನ್ನು ತೋರಿಸಲಿಕ್ಕಾಗಿ ಯೇಸು ಹೇಳಿದ್ದು: “ಆದರೆ ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ. ಮತ್ತು ಗುರುಗಳು ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು. ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು.” (ಆರಂಭದ ಕ್ರೈಸ್ತರು ತಾವೆಲ್ಲರೂ ಸಮಾನರೆಂದು ನೆನಸುತ್ತಿದ್ದರೊ? ಯೇಸುವಿನ ಬೋಧನೆಯ ಅರ್ಥವನ್ನು ಗ್ರಹಿಸಿದವರು ಹಾಗೆ ನೆನಸಿದರು. ಅವರು ಪರಸ್ಪರರನ್ನು ನಂಬಿಕೆಯಲ್ಲಿ ಸಮಾನರೆಂದು ಪರಿಗಣಿಸಿದರು. ಮತ್ತು ಒಬ್ಬರು ಇನ್ನೊಬ್ಬರನ್ನು “ಸಹೋದರ” ಎಂದು ಸಂಬೋಧಿಸುವ ಮೂಲಕ ಅವರು ಇದನ್ನು ರುಜುಪಡಿಸಿದರು. (ಫಿಲೆಮೋನ 1, 7, 20) ತಾನೇ ಇತರರಿಗಿಂತ ಶ್ರೇಷ್ಠನೆಂದು ನೆನಸುವಂತೆ ಯಾರನ್ನೂ ಉತ್ತೇಜಿಸಲಾಗುತ್ತಿರಲಿಲ್ಲ. ಉದಾಹರಣೆಗಾಗಿ, ಪೇತ್ರನು ತನ್ನ ಎರಡನೆಯ ಪತ್ರದಲ್ಲಿ ತನ್ನನ್ನೇ ವರ್ಣಿಸಿಕೊಂಡಂಥ ರೀತಿಯನ್ನು ಪರಿಗಣಿಸಿರಿ: “ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವದೇನಂದರೆ.” (2 ಪೇತ್ರ 1:1) ಪೇತ್ರನು ಯೇಸುವಿನಿಂದ ವೈಯಕ್ತಿಕವಾಗಿ ಉಪದೇಶವನ್ನು ಹೊಂದಿದ್ದನು, ಒಬ್ಬ ಅಪೊಸ್ತಲನೂ ಆಗಿದ್ದನು ಮತ್ತು ಒಂದು ಪ್ರಮುಖ ಜವಾಬ್ದಾರಿಯುತ ಸ್ಥಾನದಲ್ಲಿದ್ದನು. ಆದರೂ, ಅವನು ತನ್ನನ್ನೇ ಒಬ್ಬ ದಾಸನಾಗಿ ಪರಿಗಣಿಸಿದನು, ಮತ್ತು ಇತರ ಕ್ರೈಸ್ತರಿಗೂ ತನಗೂ ಸತ್ಯದ ಸಂಬಂಧದಲ್ಲಿ ಒಂದೇ ರೀತಿಯ ಸುಯೋಗವಿದೆಯೆಂದು ಅಂಗೀಕರಿಸಿದನು.
ಆದರೆ ಸಮಾನತೆಯ ಈ ಉಚ್ಚ ವಿಚಾರವು, ಕ್ರೈಸ್ತ ಪೂರ್ವ ಸಮಯಗಳಲ್ಲಿ ದೇವರು ಇಸ್ರಾಯೇಲನ್ನು ತನ್ನ ವಿಶೇಷ ಜನಾಂಗವಾಗಿ ಮಾಡಿಕೊಂಡಿರುವ ವಿಷಯಕ್ಕೆ ವಿರುದ್ಧವಾಗಿದೆಯೆಂದು ಕೆಲವರು ಹೇಳಬಹುದು. (ವಿಮೋಚನಕಾಂಡ 19:5, 6) ಇದು, ಜಾತೀಯ ಸಂಬಂಧದಲ್ಲಿ ಶ್ರೇಷ್ಠಭಾವನೆಯ ಒಂದು ಉದಾಹರಣೆಯಾಗಿದೆ ಎಂದು ಅವರು ಹೇಳಬಹುದಾದರೂ, ಇದು ನಿಜ ಸಂಗತಿಯಲ್ಲ. ಇಸ್ರಾಯೇಲ್ಯರು ಅಬ್ರಹಾಮನ ಸಂತತಿಯವರಾಗಿದ್ದರಿಂದ, ಅವರು ದೇವರೊಂದಿಗೆ ಒಂದು ವಿಶೇಷವಾದ ಸಂಬಂಧದಲ್ಲಿ ಆನಂದಿಸಿದರು, ಮತ್ತು ದೈವಿಕ ಪ್ರಕಟನೆಗಳಿಗಾಗಿ ಮಾಧ್ಯಮದೋಪಾದಿ ಉಪಯೋಗಿಸಲ್ಪಟ್ಟಿದ್ದರೆಂಬ ಮಾತಂತೂ ಸತ್ಯ. (ರೋಮಾಪುರ 3:1, 2) ಆದರೆ ಇದರ ಉದ್ದೇಶವು ಅವರನ್ನು ಒಂದು ಉಚ್ಚ ಪೀಠದ ಮೇಲೆ ಕುಳ್ಳಿರಿಸುವುದಾಗಿರಲಿಲ್ಲ. ಬದಲಿಗೆ “ಎಲ್ಲ ಜನಾಂಗಗಳವರಿಗೆ ಆಶೀರ್ವಾದವುಂಟಾಗು”ವುದಕ್ಕೋಸ್ಕರವೇ ಹಾಗೆ ಮಾಡಲಾಯಿತು.—ಆದಿಕಾಂಡ 22:18; ಗಲಾತ್ಯ 3:8.
ಹೆಚ್ಚಿನ ಇಸ್ರಾಯೇಲ್ಯರಾದರೋ ತಮ್ಮ ಪೂರ್ವಜನಾದ ಅಬ್ರಹಾಮನ ನಂಬಿಕೆಯನ್ನು ಅನುಕರಿಸಲಿಲ್ಲ. ಅವರು ಅಪನಂಬಿಗಸ್ತರಾಗಿದ್ದರು, ಮತ್ತು ಯೇಸುವನ್ನು ಮೆಸ್ಸೀಯನೋಪಾದಿ ಸ್ವೀಕರಿಸುವುದಕ್ಕೆ ಬದಲಾಗಿ ಅವನನ್ನು ತಿರಸ್ಕರಿಸಿ ಬಿಟ್ಟರು. ಈ ಕಾರಣದಿಂದ ದೇವರು ಅವರನ್ನು ತಿರಸ್ಕರಿಸಿ ಬಿಟ್ಟನು. (ಮತ್ತಾಯ 21:43) ಆದರೆ ಮಾನವಕುಲದಲ್ಲಿದ್ದ ದೀನರು ವಾಗ್ದತ್ತ ಆಶೀರ್ವಾದಗಳನ್ನು ಕಳೆದುಕೊಳ್ಳಲಿಲ್ಲ. ಸಾ.ಶ. 33ರ ಪಂಚಾಶತ್ತಮದಂದು, ಕ್ರೈಸ್ತ ಸಭೆಯು ಹುಟ್ಟಿತು. ಪವಿತ್ರಾತ್ಮದಿಂದ ಅಭಿಷಿಕ್ತರಾಗಿದ್ದ ಕ್ರೈಸ್ತರ ಈ ಸಂಸ್ಥೆಯು, ‘ದೇವರ ಇಸ್ರಾಯೇಲ್’ ಎಂದು ಕರೆಯಲ್ಪಟ್ಟಿತು, ಮತ್ತು ಅದು ಬರಲಿದ್ದ ಆ ಆಶೀರ್ವಾದಗಳ ಮಾಧ್ಯಮವಾಗಿ ಪರಿಣಮಿಸಿತು.—ಗಲಾತ್ಯ 6:16.
ಆ ಸಭೆಯ ಕೆಲವು ಸದಸ್ಯರಿಗೆ ಸಮಾನತೆಯ ವಿಷಯದಲ್ಲಿ ಶಿಕ್ಷಣದ ಅಗತ್ಯವಿತ್ತು. ಉದಾಹರಣೆಗಾಗಿ, ಶಿಷ್ಯನಾದ ಯಾಕೋಬನು, ಬಡವರಿಗಿಂತ ಧನಿಕ ಕ್ರೈಸ್ತರಿಗೆ ಹೆಚ್ಚು ಮಾನವನ್ನು ಕೊಡುತ್ತಿದ್ದವರಿಗೆ ಸಲಹೆಯನ್ನು ಕೊಟ್ಟನು. (ಯಾಕೋಬ 2:1-4) ಏಕೆಂದರೆ ಹಾಗೆ ಮಾಡುವುದು ತಪ್ಪಾಗಿತ್ತು. ಅನ್ಯಜನಾಂಗದ ಕ್ರೈಸ್ತರು ಯೆಹೂದಿ ಕ್ರೈಸ್ತರಿಗಿಂತ ಕೆಳಸ್ಥಾನದಲ್ಲಿಲ್ಲ, ಮತ್ತು ಕ್ರೈಸ್ತರಾಗಿರುವ ಸ್ತ್ರೀಯರು, ಗಂಡಸರಿಗಿಂತ ಯಾವುದೇ ರೀತಿಯಲ್ಲಿ ಕೆಳಗಿನವರಾಗಿಲ್ಲವೆಂದು ಅಪೊಸ್ತಲ ಪೌಲನು ತೋರಿಸಿದನು. ಅವನು ಬರೆದುದು: “ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಪುತ್ರರಾಗಿದ್ದೀರಿ. ಹೇಗಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿಕೊಂಡಿರಿ. ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ.”—ಗಲಾತ್ಯ 3:26-28.
ಇಂದು ವರ್ಗರಹಿತ ಜನರು
ಇಂದು ಯೆಹೋವನ ಸಾಕ್ಷಿಗಳು ಶಾಸ್ತ್ರೀಯ ಮೂಲತತ್ತ್ವಗಳಿಗನುಸಾರ ಜೀವಿಸಲು ಪ್ರಯತ್ನಿಸುತ್ತಾರೆ. ದೇವರು ಸಾಮಾಜಿಕ ವರ್ಗಗಳಿಗೆ ಯಾವುದೇ ವಿಶೇಷ ಮಹತ್ವವನ್ನು ಕೊಡುವುದಿಲ್ಲವೆಂಬುದನ್ನು 1 ಯೋಹಾನ 2:15-17) ಅದರ ಬದಲು, ಎಲ್ಲರೂ ವಿಶ್ವ ಪರಮಾಧಿಕಾರಿಯಾದ ಯೆಹೋವ ದೇವರ ಆರಾಧನೆಯಲ್ಲಿ ಐಕ್ಯರಾಗಿದ್ದಾರೆ.
ಅವರು ಅಂಗೀಕರಿಸುತ್ತಾರೆ. ಹೀಗಿರುವುದರಿಂದ, ಅವರಲ್ಲಿ ಪಾದ್ರಿ ವರ್ಗ ಮತ್ತು ಸಾಮಾನ್ಯ ಜನರೆಂಬ ವಿಭಜನೆಯಿಲ್ಲ, ಮತ್ತು ಚರ್ಮದ ಬಣ್ಣ ಅಥವಾ ಐಶ್ವರ್ಯದ ಆಧಾರದ ಮೇಲೆ ಅವರು ಪ್ರತ್ಯೇಕಿಸಲ್ಪಡುವುದಿಲ್ಲ. ಅವರಲ್ಲಿ ಕೆಲವರು ಧನಿಕರಾಗಿರುವುದಾದರೂ, ಅವರು “ಬದುಕುಬಾಳಿನ ಡಂಬ”ದ ಮೇಲೆ ಗಮನವನ್ನು ಕೇಂದ್ರೀಕರಿಸುವುದಿಲ್ಲ. ಯಾಕೆಂದರೆ ಅದೆಲ್ಲವೂ ಕ್ಷಣಿಕವಾಗಿದೆಯೆಂಬುದನ್ನು ಅವರು ಗ್ರಹಿಸುತ್ತಾರೆ. (ಅವರಲ್ಲಿ ಪ್ರತಿಯೊಬ್ಬರೂ ರಾಜ್ಯದ ಸುವಾರ್ತೆಯನ್ನು ತಮ್ಮ ಜೊತೆ ಮಾನವರಿಗೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆ. ಯೇಸುವಿನಂತೆ, ತುಳಿಯಲ್ಪಟ್ಟಿರುವವರನ್ನು ಮತ್ತು ಅಲಕ್ಷಿಸಲ್ಪಟ್ಟಿರುವವರನ್ನು ಅವರ ಮನೆಗಳಲ್ಲಿ ಭೇಟಿಮಾಡಿ, ದೇವರ ವಾಕ್ಯದ ಕುರಿತು ಕಲಿಸಲು ತಾವು ಸಿದ್ಧರಾಗಿದ್ದೇವೆಂದು ಹೇಳುವ ಮೂಲಕ ಅಂಥವರನ್ನು ಸನ್ಮಾನಿಸುತ್ತಾರೆ. ಬದುಕಿನಲ್ಲಿ ಕೆಳ ಅಂತಸ್ತಿನಲ್ಲಿರುವವರು, ಉಚ್ಚ ವರ್ಗದವರೆಂದೆಣಿಸಲ್ಪಡುವಂಥ ಜನರೊಂದಿಗೆ ಜೊತೆಯಾಗಿ ಕೆಲಸಮಾಡುತ್ತಾರೆ. ಅವರಲ್ಲಿ ಸಾಮಾಜಿಕ ವರ್ಗವಲ್ಲ, ಬದಲಾಗಿ ಆತ್ಮಿಕ ಗುಣಗಳು ಪ್ರಾಮುಖ್ಯವಾಗಿರುತ್ತವೆ. ಪ್ರಥಮ ಶತಮಾನದಲ್ಲಿದ್ದಂತೆ ಎಲ್ಲರೂ ನಂಬಿಕೆಯಲ್ಲಿ ಸಹೋದರ ಸಹೋದರಿಯರಾಗಿದ್ದಾರೆ.
ಸಮಾನತೆಯು ವೈವಿಧ್ಯತೆಗೆ ಎಡೆಮಾಡಿಕೊಡುತ್ತದೆ
ಸಮಾನತೆಯ ಅರ್ಥ ಸಂಪೂರ್ಣ ಏಕರೂಪತೆ ಅಲ್ಲವೆಂಬುದು ನಿಜವೇ. ಈ ಕ್ರೈಸ್ತ ಸಂಸ್ಥೆಯಲ್ಲಿ ಸ್ತ್ರೀಪುರುಷರು, ಆಬಾಲವೃದ್ಧರು ಇದ್ದಾರೆ, ಮತ್ತು ಇವರು ಅನೇಕಾನೇಕ ಜಾತೀಯ, ಭಾಷಾಸಂಬಂಧಿತ, ರಾಷ್ಟ್ರೀಯ ಮತ್ತು ಆರ್ಥಿಕ ಹಿನ್ನೆಲೆಗಳಿಂದ ಬಂದವರಾಗಿರುತ್ತಾರೆ. ಅವರಲ್ಲಿ ಒಬ್ಬೊಬ್ಬ ವ್ಯಕ್ತಿಯಲ್ಲಿಯೂ ಭಿನ್ನಭಿನ್ನವಾದ ಮಾನಸಿಕ ಮತ್ತು ಶಾರೀರಿಕ ಸಾಮರ್ಥ್ಯಗಳಿವೆ. ಆದರೆ ಆ ವ್ಯತ್ಯಾಸಗಳಿಂದಾಗಿ ಕೆಲವರು ಉಚ್ಚ ಸ್ಥಾನಕ್ಕೇರುವುದಿಲ್ಲ ಮತ್ತು ಇತರರು ಕೆಳಸ್ಥಾನಕ್ಕಿಳಿಯುವುದಿಲ್ಲ. ಅದರ ಬದಲು, ಅಂಥ ವ್ಯತ್ಯಾಸಗಳಿಂದಾಗಿ, ಮನಸ್ಸಂತೋಷವನ್ನು ತರುವ ವೈವಿಧ್ಯವು ಪರಿಣಮಿಸುತ್ತದೆ. ತಮಗಿರುವ ಯಾವುದೇ ಪ್ರತಿಭೆಗಳು, ದೇವರ ವರದಾನಗಳಾಗಿವೆ ಮತ್ತು ಇತರರಿಗಿಂತ ತಾವು ಶ್ರೇಷ್ಠರಾಗಿದ್ದೇವೆಂಬ ಭಾವನೆಗಳನ್ನು ಹೊಂದಲು ಕಾರಣವಾಗಿಲ್ಲವೆಂಬುದನ್ನು ಆ ಕ್ರೈಸ್ತರು ಅಂಗೀಕರಿಸುತ್ತಾರೆ.
ಮನುಷ್ಯನು ದೇವರ ಮಾರ್ಗದರ್ಶನವನ್ನು ಅನುಸರಿಸುವ ಬದಲು, ತನ್ನನ್ನೇ ಆಳಿಕೊಳ್ಳಲು ಪ್ರಯತ್ನಿಸಿರುವುದರ ಫಲವೇ ಈ ವರ್ಗಬೇಧವಾಗಿದೆ. ಅತಿ ಬೇಗನೆ, ದೇವರ ರಾಜ್ಯವು ಈ ಭೂಮಿಯ ದೈನಂದಿನ ವಹಿವಾಟುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು. ಇದರ ಪರಿಣಾಮವಾಗಿ, ಮನುಷ್ಯ ನಿರ್ಮಿತ ವರ್ಗಭೇದಗಳು ಮತ್ತು ಯುಗಗಳಾದ್ಯಂತ ಕಷ್ಟಾನುಭವವನ್ನು ಉಂಟುಮಾಡಿರುವಂಥ ಇತರ ಎಲ್ಲ ಸಂಗತಿಗಳು ಅಂತ್ಯಗೊಳ್ಳುವವು. ಆಗ ನಿಜಾರ್ಥದಲ್ಲಿ ‘ದೀನರು ದೇಶವನ್ನು ಅನುಭವಿಸುವರು.’ (ಕೀರ್ತನೆ 37:11) ಒಬ್ಬನು ತನ್ನ ಸ್ವಂತ ಶ್ರೇಷ್ಠತೆಯ ಬಗ್ಗೆ ಜಂಬಕೊಚ್ಚಿಕೊಳ್ಳಲು ಅಲ್ಲಿ ಯಾವುದೇ ಕಾರಣಗಳಿರುವುದಿಲ್ಲ. ಇನ್ನೆಂದಿಗೂ ಸಾಮಾಜಿಕ ವರ್ಗಗಳು ಮನುಷ್ಯನ ಲೋಕವ್ಯಾಪಕ ಸಹೋದರತ್ವವನ್ನು ವಿಭಾಗಿಸವು.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿರ್ಮಾಣಿಕನು “ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.”—ಯೋಬ 34:19.
[ಪುಟ 6ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ತಮ್ಮ ನೆರೆಹೊರೆಯವರಿಗೆ ಮಾನವನ್ನು ಕೊಡುತ್ತಾರೆ
[ಪುಟ 7ರಲ್ಲಿರುವ ಚಿತ್ರಗಳು]
ಸತ್ಯ ಕ್ರೈಸ್ತರ ನಡುವೆ ಆತ್ಮಿಕ ಗುಣಗಳಿಗೆ ಹೆಚ್ಚು ಮಹತ್ವವನ್ನು ಕೊಡಲಾಗುತ್ತದೆ