ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶುಭ ವಾರ್ತೆಯ ಆಶೀರ್ವಾದಗಳು

ಶುಭ ವಾರ್ತೆಯ ಆಶೀರ್ವಾದಗಳು

ಶುಭ ವಾರ್ತೆಯ ಆಶೀರ್ವಾದಗಳು

“[ಯೆಹೋವನು] ನನ್ನನ್ನು ಬಡವರಿಗೆ [“ದೀನರಿಗೆ,” NW] ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ . . . ದುಃಖಿತರೆಲ್ಲರನ್ನು ಸಂತೈಸುವದಕ್ಕೂ . . . ಆತನು ನನ್ನನ್ನು ಕಳುಹಿಸಿದ್ದಾನೆ.”​—ಯೆಶಾಯ 61:​1-3.

1, 2. (ಎ) ತಾನು ಯಾರಾಗಿದ್ದೇನೆಂದು ಯೇಸು ಪ್ರಕಟಿಸಿದನು, ಮತ್ತು ಹೇಗೆ? (ಬಿ) ಯೇಸು ಪ್ರಕಟಿಸಿದಂಥ ಶುಭ ವಾರ್ತೆಯು ಯಾವ ಆಶೀರ್ವಾದಗಳನ್ನು ತಂದಿತು?

ಯೇಸು ತನ್ನ ಶುಶ್ರೂಷೆಯ ಆರಂಭದಲ್ಲಿ ಒಂದು ಸಬ್ಬತ್‌ ದಿನದಂದು ನಜರೇತಿನ ಸಭಾಮಂದಿರದಲ್ಲಿದ್ದನು. ದಾಖಲೆಗನುಸಾರ, “ಆಗ ಯೆಶಾಯನೆಂಬ ಪ್ರವಾದಿಯ ಗ್ರಂಥದ ಸುರಳಿಯನ್ನು ಆತನ ಕೈಗೆ ಕೊಡಲಾಗಿ ಆತನು ಆ ಸುರಳಿಯನ್ನು ಬಿಚ್ಚಿ ಮುಂದೆ ಹೇಳುವ ಮಾತು ಬರೆದಿರುವ ಸ್ಥಳವನ್ನು ಕಂಡು ಓದಿದನು; ಆ ಮಾತೇನಂದರೆ​—ಕರ್ತನ [“ಯೆಹೋವನ,” NW] ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ [“ದೀನರಿಗೆ,” NW] ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು.” ಯೇಸು ಆ ಪ್ರವಾದನಾ ಭಾಗವನ್ನು ಓದುವುದನ್ನು ಮುಂದುವರಿಸಿದನು. ಅನಂತರ ಅವನು ಕುಳಿತುಕೊಂಡು ಹೇಳಿದ್ದು: “ಈ ಹೊತ್ತು . . . ಈ ವೇದೋಕ್ತಿ ನೆರವೇರಿದೆ.”​—ಲೂಕ 4:16-21.

2 ಈ ರೀತಿಯಲ್ಲಿ, ತಾನು ಪ್ರವಾದಿಸಲ್ಪಟ್ಟಿರುವ ಸೌವಾರ್ತಿಕನು, ಶುಭ ವಾರ್ತೆಯನ್ನು ತಿಳಿಸುವವನು ಮತ್ತು ಸಾಂತ್ವನ ವಾಹಕನೆಂಬುದನ್ನು ಯೇಸು ತಿಳಿಯಪಡಿಸಿದನು. (ಮತ್ತಾಯ 4:23) ಮತ್ತು ಯೇಸು ಏನು ಹೇಳಿದನೊ ಅದು ನಿಜವಾಗಿಯೂ ಶುಭ ವಾರ್ತೆಯಾಗಿತ್ತು! ಅವನು ತನ್ನ ಕೇಳುಗರಿಗೆ ಹೇಳಿದ್ದು: “ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು.” (ಯೋಹಾನ 8:12) ಅವನು ಮತ್ತೂ ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:31, 32) ಹೌದು, ಯೇಸುವಿನ ಬಳಿ “ನಿತ್ಯಜೀವವನ್ನು ಉಂಟುಮಾಡುವ ವಾಕ್ಯ”ಗಳಿದ್ದವು. (ಯೋಹಾನ 6:​68, 69) ಬೆಳಕು, ಜೀವ, ಬಿಡುಗಡೆ​—ಇವೆಲ್ಲವೂ ನಾವು ಅಮೂಲ್ಯವೆಂದೆಣಿಸಬೇಕಾದ ಆಶೀರ್ವಾದಗಳಾಗಿವೆ ಎಂಬುದಂತೂ ಖಂಡಿತ!

3. ಯೇಸುವಿನ ಶಿಷ್ಯರು ಯಾವ ಸುವಾರ್ತೆಯನ್ನು ಸಾರಿದರು?

3 ಸಾ.ಶ. 33ರ ಪಂಚಾಶತ್ತಮದ ನಂತರ ಶಿಷ್ಯರು ಶುಭ ವಾರ್ತೆಯನ್ನು ಪ್ರಕಟಿಸುವ ಯೇಸುವಿನ ಆ ಕೆಲಸವನ್ನು ಮುಂದುವರಿಸಿಕೊಂಡು ಹೋದರು. ಅವರು ಇಸ್ರಾಯೇಲ್ಯರಿಗೂ, ಬೇರೆ ಜನಾಂಗಗಳವರಿಗೂ ‘ರಾಜ್ಯದ ಸುವಾರ್ತೆಯನ್ನು’ ಪ್ರಕಟಿಸಿದರು. (ಮತ್ತಾಯ 24:14; ಅ. ಕೃತ್ಯಗಳು 15:7; ರೋಮಾಪುರ 1:16) ಅದಕ್ಕೆ ಪ್ರತಿಕ್ರಿಯೆ ತೋರಿಸಿದವರು ಯೆಹೋವ ದೇವರ ಕುರಿತು ತಿಳಿದುಕೊಂಡರು. ಅವರು ಧಾರ್ಮಿಕ ದಾಸತ್ವದಿಂದ ಬಿಡಿಸಲ್ಪಟ್ಟರು ಮತ್ತು ‘ದೇವರ ಇಸ್ರಾಯೇಲ್‌’ ಎಂಬ ಹೊಸ ಆತ್ಮಿಕ ಜನಾಂಗದ ಭಾಗವಾದರು. ಮತ್ತು ಈ ಜನಾಂಗದ ಸದಸ್ಯರಿಗೆ, ಸ್ವರ್ಗದಲ್ಲಿ ತಮ್ಮ ಕರ್ತನಾದ ಯೇಸು ಕ್ರಿಸ್ತನೊಂದಿಗೆ ಸದಾಕಾಲ ಆಳುವ ಪ್ರತೀಕ್ಷೆಯಿದೆ. (ಗಲಾತ್ಯ 5:1; 6:16; ಎಫೆಸ 3:​5-7; ಕೊಲೊಸ್ಸೆ 1:​3-5; ಪ್ರಕಟನೆ 22:5) ಇವು ಖಂಡಿತವಾಗಿಯೂ ಹೇರಳವಾದ ಆಶೀರ್ವಾದಗಳಾಗಿದ್ದವು!

ಇಂದು ಶುಭ ವಾರ್ತೆಯನ್ನು ಪ್ರಕಟಿಸುವ ಕಾರ್ಯ

4. ಶುಭ ವಾರ್ತೆಯನ್ನು ಪ್ರಕಟಿಸುವ ನೇಮಕವು ಇಂದು ಹೇಗೆ ಪೂರೈಸಲ್ಪಡುತ್ತಿದೆ?

4 ಇಂದು ಅಭಿಷಿಕ್ತ ಕ್ರೈಸ್ತರು, ಮೂಲತಃ ಯೇಸುವಿಗೆ ಕೊಡಲ್ಪಟ್ಟಿದ್ದ ಪ್ರವಾದನಾತ್ಮಕ ನೇಮಕವನ್ನು ಪೂರೈಸುತ್ತಾ ಇದ್ದಾರೆ. ಮತ್ತು ಅವರನ್ನು ‘ಬೇರೆ ಕುರಿಗಳ’ ಬೆಳೆಯುತ್ತಿರುವ ಸಂಖ್ಯೆಯ ‘ಮಹಾ ಸಮೂಹದವರು’ ಬೆಂಬಲಿಸುತ್ತಿದ್ದಾರೆ. (ಯೋಹಾನ 10:16; ಪ್ರಕಟನೆ 7:9) ಫಲಸ್ವರೂಪವಾಗಿ, ಹಿಂದೆಂದೂ ನೋಡಿರದಂಥ ಪ್ರಮಾಣದಲ್ಲಿ ಶುಭ ವಾರ್ತೆಯು ಪ್ರಕಟಿಸಲ್ಪಡುತ್ತಿದೆ. 235 ದೇಶಗಳಲ್ಲಿ ಮತ್ತು ಟೆರಿಟೊರಿಗಳಲ್ಲಿ, ಯೆಹೋವನ ಸಾಕ್ಷಿಗಳು ‘ದೀನರಿಗೆ ಶುಭವರ್ತಮಾನವನ್ನು ಸಾರುವದಕ್ಕೆ, ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವದನ್ನು, ಬಂದಿಗಳಿಗೆ [ಕದ] ತೆರೆಯುವುದನ್ನು ಪ್ರಸಿದ್ದಿಪಡಿಸುವದಕ್ಕೂ ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ, ಇವುಗಳನ್ನು ಪ್ರಚುರಗೊಳಿಸುವದಕ್ಕೂ ದುಃಖಿತರೆಲ್ಲರನ್ನು ಸಂತೈಸುವದಕ್ಕೂ’ ಹೋಗಿದ್ದಾರೆ. (ಯೆಶಾಯ 61:​1-3) ಹೀಗಿರುವುದರಿಂದ, ಶುಭ ವಾರ್ತೆಯನ್ನು ಪ್ರಕಟಿಸುವ ಕ್ರೈಸ್ತ ಕೆಲಸವು ಅನೇಕರಿಗೆ ಆಶೀರ್ವಾದಗಳನ್ನೂ, ‘ಪ್ರತಿಯೊಂದು ವಿಧದ ಸಂಕಟದಲ್ಲಿರುವವರಿಗೆ’ ನಿಜವಾದ ಸಾಂತ್ವನವನ್ನೂ ತರುತ್ತಿದೆ.​—2 ಕೊರಿಂಥ 1:​3, 4, NW.

5. ಶುಭ ವಾರ್ತೆಯನ್ನು ಪ್ರಕಟಿಸುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಕ್ರೈಸ್ತಪ್ರಪಂಚದ ಚರ್ಚುಗಳಿಂದ ಹೇಗೆ ಭಿನ್ನರಾಗಿದ್ದಾರೆ?

5 ಕ್ರೈಸ್ತಪ್ರಪಂಚದ ಚರ್ಚುಗಳು, ಬೇರೆ ಬೇರೆ ವಿಧಾನಗಳಲ್ಲಿ ಪ್ರಚಾರಮಾಡುತ್ತಿವೆಯೆಂಬುದು ನಿಜ. ಬೇರೆ ದೇಶಗಳಲ್ಲಿರುವ ಜನರನ್ನು ಮತಾಂತರಗೊಳಿಸಲಿಕ್ಕಾಗಿ ಚರ್ಚುಗಳು ಮಿಷನೆರಿಗಳನ್ನು ಕಳುಹಿಸುತ್ತವೆ. ಉದಾಹರಣೆಗಾಗಿ, ಮಡಗಾಸ್ಕರ್‌, ದಕ್ಷಿಣ ದಿಕ್ಕಿನ ಆಫ್ರಿಕ, ಟಾನ್ಸೇನಿಯ, ಮತ್ತು ಸಿಂಬಾಬ್ವೇಯಲ್ಲಿ ಆರ್ತೊಡಾಕ್ಸ್‌ ಮಿಷನೆರಿಗಳ ಚಟುವಟಿಕೆಯ ಕುರಿತಾಗಿ ದಿ ಆರ್ತೊಡಾಕ್ಸ್‌ ಕ್ರಿಸ್ಟ್ಯನ್‌ ಮಿಷನ್‌ ಸೆಂಟರ್‌ ಮ್ಯಾಗಸಿನ್‌ ವರದಿಸುತ್ತದೆ. ಆದರೆ ಕ್ರೈಸ್ತಪ್ರಪಂಚದ ಬೇರೆ ಚರ್ಚುಗಳಲ್ಲಿರುವಂತೆಯೇ ಆರ್ತೊಡಾಕ್ಸ್‌ ಚರ್ಚಿನಲ್ಲಿಯೂ ಅದರ ಅಧಿಕಾಂಶ ಸದಸ್ಯರು ಅಂಥ ಕೆಲಸದಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಯೆಹೋವನ ಸಮರ್ಪಿತ ಸಾಕ್ಷಿಗಳೆಲ್ಲರೂ ಶುಭ ವಾರ್ತೆಯನ್ನು ಪ್ರಕಟಿಸುವ ಕೆಲಸದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುತ್ತಾರೆ. ಶುಭ ವಾರ್ತೆಯನ್ನು ಘೋಷಿಸುವುದು, ತಮ್ಮ ನಂಬಿಕೆಯ ಯಥಾರ್ಥತೆಯನ್ನು ರುಜುಪಡಿಸುತ್ತದೆ ಎಂಬುದನ್ನು ಅವರು ಗ್ರಹಿಸುತ್ತಾರೆ. ಪೌಲನು ಹೇಳಿದ್ದು: “ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ, ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.” ಒಬ್ಬ ವ್ಯಕ್ತಿಯನ್ನು ಕ್ರಿಯೆಗೆ ಪ್ರಚೋದಿಸದಂಥ ನಂಬಿಕೆಯು ನಿಜವಾಗಿಯೂ ಸತ್ತದ್ದಾಗಿದೆ.​—ರೋಮಾಪುರ 10:10; ಯಾಕೋಬ 2:17.

ನಿತ್ಯ ಆಶೀರ್ವಾದಗಳನ್ನು ತರುವಂಥ ಶುಭ ವಾರ್ತೆ

6. ಇಂದು ಯಾವ ಶುಭ ವಾರ್ತೆಯನ್ನು ಪ್ರಕಟಿಸಲಾಗುತ್ತಿದೆ?

6 ಯೆಹೋವನ ಸಾಕ್ಷಿಗಳು ಇರುವುದರಲ್ಲೇ ಅತ್ಯುತ್ತಮವಾದ ವಾರ್ತೆಯನ್ನು ಪ್ರಕಟಿಸುತ್ತಿದ್ದಾರೆ. ಮಾನವಕುಲಕ್ಕೆ ದೇವರನ್ನು ಸಮೀಪಿಸುವ ಒಂದು ಮಾರ್ಗ, ಪಾಪಗಳ ಕ್ಷಮಾಪಣೆ ಮತ್ತು ನಿತ್ಯ ಜೀವದ ನಿರೀಕ್ಷೆಯನ್ನು ಕೊಡಲಿಕ್ಕಾಗಿ ಯೇಸು ತನ್ನ ಜೀವವನ್ನೇ ಬಲಿಯಾಗಿ ಕೊಟ್ಟನೆಂಬುದನ್ನು ಅವರು ತಮ್ಮ ಬೈಬಲುಗಳನ್ನು ತೆರೆದು, ಆಸಕ್ತ ಜನರಿಗೆ ತೋರಿಸುತ್ತಾರೆ. (ಯೋಹಾನ 3:16; 2 ಕೊರಿಂಥ 5:​18, 19) ಮತ್ತು ದೇವರ ರಾಜ್ಯವು ಅಭಿಷಿಕ್ತ ರಾಜನಾದ ಯೇಸು ಕ್ರಿಸ್ತನ ಕೆಳಗೆ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆ, ಮತ್ತು ಆ ರಾಜ್ಯವು ಬೇಗನೆ ಈ ಭೂಮಿಯಿಂದ ದುಷ್ಟತನವನ್ನು ತೆಗೆದುಹಾಕಿ, ಭೂಮಿಯಲ್ಲಿ ಪರದೈಸವನ್ನು ಪುನಃಸ್ಥಾಪಿಸುವ ಕೆಲಸದ ಉಸ್ತುವಾರಿಯನ್ನು ವಹಿಸಿಕೊಳ್ಳುವುದೆಂಬುದನ್ನು ಅವರು ಪ್ರಕಟಿಸುತ್ತಾರೆ. (ಪ್ರಕಟನೆ 11:15; 21:​3, 4) ಯೆಶಾಯನ ಪ್ರವಾದನೆಯ ನೆರವೇರಿಕೆಯಲ್ಲಿ, ಇದು “ಯೆಹೋವನು ನೇಮಿಸಿರುವ ಶುಭವರುಷ”ವಾಗಿದೆ ಎಂದೂ, ಮಾನವಕುಲವು ಈಗಲೂ ಶುಭ ವಾರ್ತೆಗೆ ಪ್ರತಿಕ್ರಿಯೆಯನ್ನು ತೋರಿಸಬಲ್ಲದೆಂದೂ ಅವರು ತಮ್ಮ ನೆರೆಯವರಿಗೆ ತಿಳಿಸುತ್ತಾರೆ. ಯೆಹೋವನು ಪಶ್ಚಾತ್ತಾಪಪಡದ ತಪ್ಪಿತಸ್ಥರನ್ನು ಅಂತ್ಯಗೊಳಿಸಲಿರುವ, ‘ನಮ್ಮ ದೇವರ ಮುಯ್ಯಿತೀರಿಸುವ ದಿನವು’ ಬೇಗನೆ ಬರಲಿದೆಯೆಂದೂ ಅವರು ಎಚ್ಚರಿಸುತ್ತಾರೆ.​—ಕೀರ್ತನೆ 37:​9-11.

7. ಯೆಹೋವನ ಸಾಕ್ಷಿಗಳ ಐಕ್ಯವನ್ನು ಯಾವ ಅನುಭವವು ತೋರಿಸುತ್ತದೆ, ಮತ್ತು ಅವರಲ್ಲಿ ಅಂಥ ಐಕ್ಯಭಾವ ಇರಲು ಕಾರಣವೇನು?

7 ದುರಂತ ಮತ್ತು ವಿಪತ್ತುಗಳಿಂದ ಛಿದ್ರಗೊಂಡಿರುವ ಈ ಜಗತ್ತಿನಲ್ಲಿ, ನಿತ್ಯ ಪ್ರಯೋಜನಗಳುಳ್ಳ ಏಕಮಾತ್ರ ಶುಭ ವಾರ್ತೆ ಇದಾಗಿದೆ. ಅದನ್ನು ಸ್ವೀಕರಿಸುವವರು, ಕ್ರೈಸ್ತರ ಒಂದು ಐಕ್ಯ, ಲೋಕವ್ಯಾಪಕ ಸಹೋದರತ್ವದ ಭಾಗವಾಗುತ್ತಾರೆ. ಈ ಕ್ರೈಸ್ತರು ಯಾವುದೇ ರಾಷ್ಟ್ರೀಯ, ಕುಲಸಂಬಂಧಿತ, ಅಥವಾ ಆರ್ಥಿಕ ಭಿನ್ನತೆಗಳು ತಮ್ಮನ್ನು ವಿಭಜಿಸುವಂತೆ ಬಿಡುವುದಿಲ್ಲ. ಅವರು ‘ಪ್ರೀತಿಯನ್ನು ಧರಿಸಿಕೊಂಡಿದ್ದಾರೆ, ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.’ (ಕೊಲೊಸ್ಸೆ 3:14; ಯೋಹಾನ 15:12) ಇದು ಕಳೆದ ವರ್ಷ ಆಫ್ರಿಕದ ಒಂದು ದೇಶದಲ್ಲಿ ಸುವ್ಯಕ್ತವಾಯಿತು. ರಾಜಧಾನಿಯಲ್ಲಿ ವಾಸಿಸುತ್ತಿದ್ದವರು ಒಂದು ದಿನ ಬೆಳಗ್ಗೆ ಬಂದೂಕುಗಳ ಶಬ್ದದಿಂದ ಎಚ್ಚರಗೊಂಡರು. ಒಂದು ಕ್ಷಿಪ್ರ ಕ್ರಾಂತಿಯ ಪ್ರಯತ್ನ ನಡೆಯುತ್ತಾ ಇತ್ತು. ಆದರೆ ಈ ಘಟನೆಗಳು ಕುಲಸಂಬಂಧಿತ ವಿವಾದಾಂಶಗಳಾಗಿ ಬದಲಾದಾಗ, ಒಂದು ಸಾಕ್ಷಿ ಕುಟುಂಬವು ಇನ್ನೊಂದು ಕುಲಕ್ಕೆ ಸೇರಿದವರಾಗಿದ್ದ ಜೊತೆ ಸಾಕ್ಷಿಗಳನ್ನು ಸಂರಕ್ಷಿಸಿದ್ದಕ್ಕಾಗಿ ಅವರನ್ನು ದೂಷಿಸಲಾಯಿತು. ಆ ಕುಟುಂಬವು ಉತ್ತರಿಸಿದ್ದು: “ನಮ್ಮ ಮನೆಯಲ್ಲಿ ಕೇವಲ ಯೆಹೋವನ ಸಾಕ್ಷಿಗಳು ಇದ್ದಾರೆ.” ಅವರಿಗೆ ಕುಲಸಂಬಂಧಿತ ಭಿನ್ನತೆಗಳು ಪ್ರಾಮುಖ್ಯವಾಗಿರಲಿಲ್ಲ, ಕ್ರೈಸ್ತ ಪ್ರೀತಿ ಅಂದರೆ ಅಗತ್ಯದಲ್ಲಿರುವವರಿಗೆ ಸಾಂತ್ವನವನ್ನು ನೀಡುವುದು ಹೆಚ್ಚು ಪ್ರಾಮುಖ್ಯವಾಗಿತ್ತು. ಸಾಕ್ಷಿಯಾಗಿರದಿದ್ದ ಒಬ್ಬ ಸಂಬಂಧಿಕಳು ಹೇಳಿದ್ದು: “ಎಲ್ಲ ಧರ್ಮಗಳ ಸದಸ್ಯರು ತಮ್ಮ ಜೊತೆ ಆರಾಧಕರನ್ನು ಹಿಡಿದುಕೊಟ್ಟು ಅವರಿಗೆ ದ್ರೋಹಬಗೆದರು. ಕೇವಲ ಯೆಹೋವನ ಸಾಕ್ಷಿಗಳು ಹಾಗೆ ಮಾಡಲಿಲ್ಲ.” ಆಂತರಿಕ ಕಲಹದಿಂದ ಛಿನ್ನವಿಚ್ಛಿನ್ನವಾಗಿರುವ ದೇಶಗಳಿಂದ ಬಂದಿರುವ ಅದೇ ರೀತಿಯ ವರದಿಗಳು ತೋರಿಸುತ್ತವೇನೆಂದರೆ, ಯೆಹೋವನ ಸಾಕ್ಷಿಗಳ ಮಧ್ಯೆ ನಿಜವಾಗಿಯೂ ‘ಸಹೋದರರ ಪ್ರೀತಿ’ ಇದೆ.​—1 ಪೇತ್ರ 2:17.

ಶುಭ ವಾರ್ತೆಯು ಜನರನ್ನು ಬದಲಾಯಿಸುತ್ತದೆ

8, 9. (ಎ) ಶುಭ ವಾರ್ತೆಯನ್ನು ಸ್ವೀಕರಿಸುವವರು ಯಾವ ಬದಲಾವಣೆಗಳನ್ನು ಮಾಡುತ್ತಾರೆ? (ಬಿ) ಯಾವ ಅನುಭವಗಳು ಶುಭ ವಾರ್ತೆಯ ಶಕ್ತಿಯನ್ನು ತೋರಿಸುತ್ತವೆ?

8 ಪೌಲನು ಯಾವುದನ್ನು “ಈಗಿನ ಜೀವಿತ ಹಾಗೂ ಬರಲಿರುವ ಜೀವಿತ” ಎಂದು ಕರೆದನೋ ಅದಕ್ಕೂ ಈ ಶುಭ ವಾರ್ತೆಗೂ ಸಂಬಂಧವಿದೆ. (1 ತಿಮೊಥೆಯ 4:8, NW) ಅದು ಭವಿಷ್ಯತ್ತಿಗಾಗಿ ಒಂದು ಅದ್ಭುತವಾದ, ನಿಶ್ಚಿತ ನಿರೀಕ್ಷೆಯನ್ನು ನೀಡುತ್ತದೆ ಮಾತ್ರವಲ್ಲ, ಅದು ‘ಈಗಿನ ಜೀವಿತ’ದಲ್ಲೂ ಸುಧಾರಣೆಗಳನ್ನು ತರುತ್ತದೆ. ಯೆಹೋವನ ಸಾಕ್ಷಿಗಳಲ್ಲಿ ಪ್ರತಿಯೊಬ್ಬರೂ, ತಮ್ಮ ಜೀವಿತಗಳನ್ನು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ತರಲಿಕ್ಕಾಗಿ ದೇವರ ವಾಕ್ಯವಾದ ಬೈಬಲಿನಿಂದ ಮಾರ್ಗದರ್ಶಿಸಲ್ಪಟ್ಟಿದ್ದಾರೆ. (ಕೀರ್ತನೆ 119:101) ಅವರು ನೀತಿ ಮತ್ತು ನಿಷ್ಠೆಯಂಥ ಗುಣಗಳನ್ನು ಬೆಳೆಸಿಕೊಳ್ಳುವಾಗ, ಅವರ ವ್ಯಕ್ತಿತ್ವಗಳೇ ಹೊಸದಾಗುತ್ತವೆ.​—ಎಫೆಸ 4:24.

9 ಫ್ರಾಂಕೊ ಎಂಬ ವ್ಯಕ್ತಿಯ ಉದಾಹರಣೆಯನ್ನು ತೆಗೆದುಕೊಳ್ಳಿ. ಅವನಿಗೆ ಕೋಪದ ಸಮಸ್ಯೆಯಿತ್ತು. ತನ್ನ ನಿರೀಕ್ಷೆಯಂತೆ ವಿಷಯಗಳು ನಡೆಯದಿದ್ದಲ್ಲಿ, ಅವನು ಕೋಪದಿಂದ ಕೈಗೆ ಸಿಕ್ಕಿದ್ದೆಲ್ಲವನ್ನೂ ಮುರಿದುಹಾಕುತ್ತಿದ್ದನು. ಅವನ ಹೆಂಡತಿಯು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನಮಾಡಿದಳು. ಮತ್ತು ಈ ಸಾಕ್ಷಿಗಳ ಕ್ರೈಸ್ತ ಮಾದರಿಯು, ತಾನೂ ಬದಲಾವಣೆಯನ್ನು ಮಾಡಬೇಕೆಂಬ ವಿಷಯವು ಫ್ರಾಂಕೊಗೆ ಮನದಟ್ಟಾಗಲು ಕ್ರಮೇಣವಾಗಿ ಸಹಾಯಮಾಡಿತು. ಅವನು ಅವರೊಂದಿಗೆ ಬೈಬಲನ್ನು ಅಭ್ಯಾಸಮಾಡಿದನು, ಮತ್ತು ಕೊನೆಯಲ್ಲಿ ಶಾಂತಿ ಹಾಗೂ ಆತ್ಮನಿಯಂತ್ರಣದಂಥ ಪವಿತ್ರಾತ್ಮದ ಫಲಗಳನ್ನು ಪ್ರದರ್ಶಿಸಲು ಶಕ್ತನಾದನು. (ಗಲಾತ್ಯ 5:​22, 23, NW) 2001ರ ಸೇವಾ ವರ್ಷದಲ್ಲಿ ಬೆಲ್ಜಿಯಮ್‌ನಲ್ಲಿ ದೀಕ್ಷಾಸ್ನಾನಪಡೆದ 492 ಜನರಲ್ಲಿ ಅವನೂ ಒಬ್ಬನಾಗಿದ್ದನು. ಅಲೇಹಾಂಡ್ರೊ ಎಂಬವನನ್ನೂ ಪರಿಗಣಿಸಿರಿ. ಈ ಯುವಕನಿಗೆ ಅಮಲೌಷಧದ ಚಟ ಎಷ್ಟು ಹಿಡಿದಿತ್ತೆಂದರೆ, ಇವನು ತಿಪ್ಪೆಯಲ್ಲಿ ಸಿಗುತ್ತಿದ್ದ ವಸ್ತುಗಳನ್ನು ಉಪಯೋಗಿಸಿ ಜೀವನ ನಡೆಸುವಷ್ಟು ಕೆಳಮಟ್ಟಕ್ಕೆ ಇಳಿದನು. ತನ್ನ ಅಮಲೌಷಧದ ಚಟಕ್ಕಾಗಿ ಹಣವನ್ನು ಪಡೆಯಲು ಅವನು ತಿಪ್ಪೆಯನ್ನು ಕೆದಕಿ, ಅದರಲ್ಲಿ ಸಿಗುತ್ತಿದ್ದ ವಸ್ತುಗಳನ್ನು ಮಾರುತ್ತಿದ್ದನು. ಅಲೇಹಾಂಡ್ರೊ 22 ವರ್ಷದವನಾಗಿದ್ದಾಗ, ಯೆಹೋವನ ಸಾಕ್ಷಿಗಳು ಅವನು ಬೈಬಲ್‌ ಅಧ್ಯಯನಮಾಡುವಂತೆ ಆಮಂತ್ರಿಸಿದರು ಮತ್ತು ಅವನು ಅದಕ್ಕೆ ಒಪ್ಪಿಕೊಂಡನು. ಅವನು ಪ್ರತಿದಿನ ಬೈಬಲನ್ನು ಓದಿ, ಕ್ರೈಸ್ತ ಕೂಟಗಳಿಗೆ ಹಾಜರಾದನು. ಅವನು ತನ್ನ ಬದುಕನ್ನು ಎಷ್ಟು ಬೇಗನೆ ಶುದ್ಧೀಕರಿಸಿಕೊಂಡನೆಂದರೆ, ಆರು ತಿಂಗಳುಗಳಿಗಿಂತಲೂ ಕಡಿಮೆ ಸಮಯದಲ್ಲೇ, ಅವನು ಶುಭ ವಾರ್ತೆಯನ್ನು ಪ್ರಕಟಿಸುವ ಕೆಲಸದಲ್ಲಿ ಪಾಲ್ಗೊಳ್ಳಲು ಶಕ್ತನಾದನು. ಹೋದ ವರ್ಷ ಪ್ಯಾನಮದಲ್ಲಿ ಈ ಕೆಲಸವನ್ನು ಮಾಡಿದ 10,115 ಮಂದಿ ಯೆಹೋವನ ಸಾಕ್ಷಿಗಳಲ್ಲಿ ಅವನೂ ಒಬ್ಬನಾಗಿದ್ದನು.

ಶುಭ ವಾರ್ತೆ​—ದೀನರಿಗೆ ಆಶೀರ್ವಾದ

10. ಶುಭ ವಾರ್ತೆಗೆ ಯಾರು ಪ್ರತಿಕ್ರಿಯೆಯನ್ನು ತೋರಿಸುತ್ತಾರೆ, ಮತ್ತು ಅವರ ಹೊರನೋಟವು ಹೇಗೆ ಬದಲಾಗುತ್ತದೆ?

10 ಶುಭ ವಾರ್ತೆಯು ದೀನರಿಗೆ ಸಾರಲ್ಪಡುವುದೆಂದು ಯೆಶಾಯನು ಪ್ರವಾದಿಸಿದ್ದನು. ಈ ದೀನರು ಯಾರು? ಅಪೊಸ್ತಲರ ಕೃತ್ಯಗಳು ಪುಸ್ತಕವು ಅವರನ್ನು, “ನಿತ್ಯ ಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳವರು” ಎಂದು ವರ್ಣಿಸುತ್ತದೆ. (ಅ. ಕೃತ್ಯಗಳು 13:​48, NW) ಇವರು, ಸಮಾಜದ ಎಲ್ಲ ವರ್ಗಗಳಲ್ಲೂ ಕಂಡುಬರುವ ನಮ್ರ ವ್ಯಕ್ತಿಗಳಾಗಿದ್ದು, ಸತ್ಯದ ಸಂದೇಶದ ಕಡೆಗೆ ತಮ್ಮ ಹೃದಯಗಳನ್ನು ತೆರೆಯುತ್ತಾರೆ. ದೇವರ ಚಿತ್ತವನ್ನು ಮಾಡುವುದರಿಂದ, ಈ ಐಹಿಕ ಲೋಕವು ನೀಡುವಂಥ ಯಾವುದೇ ವಿಷಯಕ್ಕಿಂತಲೂ ಹೆಚ್ಚು ಸಮೃದ್ಧವಾಗಿರುವ ಆಶೀರ್ವಾದಗಳು ಸಿಗುತ್ತವೆಂದು ಅಂಥವರು ಕಲಿಯುತ್ತಾರೆ. (1 ಯೋಹಾನ 2:​15-17) ಆದರೆ ಶುಭ ವಾರ್ತೆಯನ್ನು ಪ್ರಕಟಿಸುವ ತಮ್ಮ ಕೆಲಸದಲ್ಲಿ ಯೆಹೋವನ ಸಾಕ್ಷಿಗಳು ಜನರ ಹೃದಯಗಳನ್ನು ಹೇಗೆ ತಲಪುತ್ತಾರೆ?

11. ಪೌಲನಿಗನುಸಾರ ಶುಭ ವಾರ್ತೆಯು ಹೇಗೆ ಸಾರಲ್ಪಡಬೇಕು?

11 ಅಪೊಸ್ತಲ ಪೌಲನ ಉದಾಹರಣೆಯನ್ನು ಪರಿಗಣಿಸಿರಿ. ಅವನು ಕೊರಿಂಥದವರಿಗೆ ಬರೆದುದು: “ಸಹೋದರರೇ, ನಾನಂತೂ ದೇವರು ಹೇಳಿಕೊಟ್ಟ ಮಾತನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ ಜ್ಞಾನಾಡಂಬರದಿಂದಾಗಲಿ ಬರಲಿಲ್ಲ. ನಾನು ಶಿಲುಬೆಗೆ [“ವಧಾಸ್ತಂಭಕ್ಕೆ,” NW] ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯದವನಾಗಿ ನಿಮ್ಮಲ್ಲಿ ಇರುವೆನೆಂದು ತೀರ್ಮಾನಿಸಿಕೊಂಡೆನು.” (1 ಕೊರಿಂಥ 2:1, 2) ಪೌಲನು ತನ್ನ ಕೇಳುಗರನ್ನು ತನ್ನ ಪಾಂಡಿತ್ಯದಿಂದ ಮರುಳುಗೊಳಿಸಲು ಪ್ರಯತ್ನಿಸಲಿಲ್ಲ. ಅವನು ಬೇರೇನನ್ನೂ ಅಲ್ಲ, ಬದಲಾಗಿ ದೈವಿಕವಾಗಿ ದೃಢೀಕರಿಸಲ್ಪಟ್ಟಿದ್ದ ವಾಸ್ತವಾಂಶಗಳನ್ನು ಮಾತ್ರ ಕಲಿಸಿದನು. ಮತ್ತು ಇಂದು ಆ ವಾಸ್ತವಾಂಶಗಳು ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. ತನ್ನ ಜೊತೆ ಪ್ರಚಾರಕನಾದ ತಿಮೊಥೆಯನಿಗೆ ಪೌಲನು ಕೊಟ್ಟ ಉತ್ತೇಜನವನ್ನೂ ಗಮನಿಸಿರಿ: “ದೇವರ ವಾಕ್ಯವನ್ನು ಸಾರು, . . . ಅದರಲ್ಲಿ ಆಸಕ್ತನಾಗಿರು.” (2 ತಿಮೊಥೆಯ 4:2) ತಿಮೊಥೆಯನು, “ವಾಕ್ಯವನ್ನು” ಅಂದರೆ ದೇವರ ಸಂದೇಶವನ್ನು ಸಾರಬೇಕಿತ್ತು. ಪೌಲನು ತಿಮೊಥೆಯನಿಗೆ ಹೀಗೂ ಬರೆದನು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.”​—2 ತಿಮೊಥೆಯ 2:15.

12. ಇಂದು ಯೆಹೋವನ ಸಾಕ್ಷಿಗಳು ಪೌಲನ ಮಾತುಗಳನ್ನೂ ಮಾದರಿಯನ್ನೂ ಹೇಗೆ ಪಾಲಿಸುತ್ತಾರೆ?

12 ಯೆಹೋವನ ಸಾಕ್ಷಿಗಳು ಪೌಲನ ಮಾದರಿಯನ್ನೂ, ಅವನು ತಿಮೊಥೆಯನಿಗೆ ಬರೆದಂಥ ಮಾತುಗಳನ್ನೂ ಪಾಲಿಸುತ್ತಾರೆ. ದೇವರ ವಾಕ್ಯಕ್ಕಿರುವ ಶಕ್ತಿಯನ್ನು ಅವರು ಅಂಗೀಕರಿಸುತ್ತಾರೆ, ಮತ್ತು ತಮ್ಮ ನೆರೆಯವರಿಗೆ ನಿರೀಕ್ಷೆ ಹಾಗೂ ಸಾಂತ್ವನದ ಯಥೋಚಿತವಾದ ಮಾತುಗಳನ್ನು ತೋರಿಸಲು ಪ್ರಯತ್ನಿಸುವಾಗ ಆ ವಾಕ್ಯವನ್ನು ಉಪಯೋಗಿಸುತ್ತಾರೆ. (ಕೀರ್ತನೆ 119:52; 2 ತಿಮೊಥೆಯ 3:​16, 17; ಇಬ್ರಿಯ 4:12) ಆಸಕ್ತ ಜನರು ತಮ್ಮ ಬಿಡುವಿನ ಸಮಯದಲ್ಲಿ ಹೆಚ್ಚಿನ ಬೈಬಲ್‌ ಜ್ಞಾನವನ್ನು ಪಡೆದುಕೊಳ್ಳಸಾಧ್ಯವಾಗುವಂತೆ, ಅವರು ಬೈಬಲ್‌ ಸಾಹಿತ್ಯವನ್ನೂ ಉತ್ತಮವಾಗಿ ಉಪಯೋಗಿಸುತ್ತಾರೆಂಬುದು ನಿಜ. ಆದರೆ ಅವರು ಯಾವಾಗಲೂ ಜನರಿಗೆ ಶಾಸ್ತ್ರವಚನಗಳ ಮಾತುಗಳನ್ನು ತೋರಿಸಲು ಪ್ರಯತ್ನಿಸುತ್ತಾರೆ. ದೇವರ ಪ್ರೇರಿತ ವಾಕ್ಯವು, ನಮ್ರ ಜನರ ಹೃದಯಗಳನ್ನು ಪ್ರೇರಿಸುತ್ತದೆಂಬುದು ಅವರಿಗೆ ತಿಳಿದಿದೆ. ಮತ್ತು ಅದನ್ನು ಈ ರೀತಿಯಲ್ಲಿ ಉಪಯೋಗಿಸುವುದರಿಂದ ಅವರ ಸ್ವಂತ ನಂಬಿಕೆಯು ಬಲಗೊಳ್ಳುತ್ತದೆ.

‘ದುಃಖಿತರೆಲ್ಲರನ್ನು ಸಂತೈಸುವುದು’

13. ಇಸವಿ 2001ರಲ್ಲಿ, ದುಃಖಿತರೆಲ್ಲರಿಗೆ ಸಾಂತ್ವನವನ್ನು ನೀಡುವ ವ್ಯಾಪಕ ಅಗತ್ಯವನ್ನು ಉಂಟುಮಾಡಿದಂಥ ಘಟನೆಗಳು ಯಾವುವು?

13 ಇಸವಿ 2001ರಲ್ಲೂ ಅನೇಕ ದುರಂತಗಳು ನಡೆದವು, ಮತ್ತು ಈ ಕಾರಣದಿಂದ ಅನೇಕ ವ್ಯಕ್ತಿಗಳಿಗೆ ಸಾಂತ್ವನದ ಅಗತ್ಯವಿತ್ತು. ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಅಮೆರಿಕದಲ್ಲಿ ಏನು ನಡೆಯಿತೊ ಅದೊಂದು ಎದ್ದುಕಾಣುವ ಉದಾಹರಣೆಯಾಗಿದೆ. ನ್ಯೂ ಯಾರ್ಕ್‌ನಲ್ಲಿದ್ದ ವಿಶ್ವ ವಾಣಿಜ್ಯ ಕೇಂದ್ರ ಮತ್ತು ವಾಷಿಂಗ್ಟನ್‌ ಡಿ.ಸಿ.ಯ ಹತ್ತಿರದಲ್ಲಿರುವ ಪೆಂಟಗನ್‌ ಕಟ್ಟಡದ ಮೇಲೆ ಭಯೋತ್ಪಾದಕರು ದಾಳಿಮಾಡಿದರು. ಆ ದಾಳಿಗಳು ಇಡೀ ದೇಶವನ್ನು ಎಷ್ಟು ತಲ್ಲಣಗೊಳಿಸಿದವು! ಇಂಥ ಘಟನೆಗಳ ಎದುರಿನಲ್ಲೂ ಯೆಹೋವನ ಸಾಕ್ಷಿಗಳು ‘ದುಃಖಿತರೆಲ್ಲರನ್ನು ಸಂತೈಸುವ’ ತಮ್ಮ ನೇಮಕವನ್ನು ಪೂರೈಸಲು ಪ್ರಯತ್ನಿಸುತ್ತಿದ್ದಾರೆ. ಅವರು ಇದನ್ನು ಹೇಗೆ ಮಾಡುತ್ತಾರೆಂಬುದನ್ನು ಕೆಲವೊಂದು ಅನುಭವಗಳು ಇಲ್ಲಿ ದೃಷ್ಟಾಂತಿಸುತ್ತವೆ.

14, 15. ಎರಡು ಭಿನ್ನ ಸಂದರ್ಭಗಳಲ್ಲಿ ದುಃಖಿತರನ್ನು ಸಂತೈಸಲಿಕ್ಕಾಗಿ ಸಾಕ್ಷಿಗಳು ಶಾಸ್ತ್ರವಚನಗಳನ್ನು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಲು ಶಕ್ತರಾದರು?

14 ಪೂರ್ಣ ಸಮಯದ ಸೌವಾರ್ತಿಕಳಾಗಿರುವ ಒಬ್ಬ ಸಾಕ್ಷಿಯು, ರಸ್ತೆಬದಿಯಲ್ಲಿ ಒಬ್ಬ ಮಹಿಳೆಯ ಬಳಿ ಹೋಗಿ, ಇತ್ತೀಚಿನ ಭಯೋತ್ಪಾದಕರ ದಾಳಿಗಳ ಕುರಿತಾಗಿ ಅವಳು ಏನು ನೆನಸುತ್ತಾಳೆಂದು ಕೇಳಿದಳು. ಆಗ ಆ ಮಹಿಳೆಯು ಅಳಲಾರಂಭಿಸಿದಳು. ತನಗೆ ತುಂಬ ಸಂಕಟದ ಅನಿಸಿಕೆಯಾಗುತ್ತಿದೆ ಮತ್ತು ತಾನು ಯಾವುದಾದರೊಂದು ರೀತಿಯಲ್ಲಿ ಸಹಾಯಮಾಡಲು ಹಾರೈಸುತ್ತಿದ್ದೇನೆಂದು ಹೇಳಿದಳು. ದೇವರಿಗೆ ನಮ್ಮೆಲ್ಲರ ಬಗ್ಗೆ ತುಂಬ ಕಾಳಜಿಯಿದೆಯೆಂದು ಆ ಸಾಕ್ಷಿಯು ಅವಳಿಗೆ ಹೇಳಿ, ಯೆಶಾಯ 61:​1, 2ನ್ನು ಓದಿದಳು. ಎಲ್ಲರೂ ದುಃಖದಲ್ಲಿ ಮುಳುಗಿದ್ದಾರೆಂದು ಹೇಳಿದ ಆ ಮಹಿಳೆಗೆ, ದೈವಿಕವಾಗಿ ಪ್ರೇರಿತವಾಗಿರುವ ಆ ಮಾತುಗಳು ಅರ್ಥಪೂರ್ಣವಾಗಿ ಕಂಡುಬಂದವು. ಅವಳೊಂದು ಟ್ರ್ಯಾಕ್ಟನ್ನು ಸ್ವೀಕರಿಸಿದಳು ಮತ್ತು ಆ ಸಾಕ್ಷಿಯು ಅವಳನ್ನು ತನ್ನ ಮನೆಯಲ್ಲಿ ಭೇಟಿಯಾಗುವಂತೆ ಕೇಳಿಕೊಂಡಳು.

15 ಶುಭ ವಾರ್ತೆಯನ್ನು ಪ್ರಕಟಿಸುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದ ಇಬ್ಬರು ಸಾಕ್ಷಿಗಳು, ತನ್ನ ಶೆಡ್‌ನಲ್ಲಿ ಕೆಲಸಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಭೇಟಿಯಾದರು. ಇತ್ತೀಚೆಗೆ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ನಡೆದ ದುರಂತದ ನೋಟದಲ್ಲಿ, ಅವನಿಗೆ ಶಾಸ್ತ್ರವಚನಗಳಿಂದ ಸಾಂತ್ವನದ ಮಾತುಗಳನ್ನು ತೋರಿಸಲು ಬಯಸುತ್ತೇವೆಂದು ಅವರು ಹೇಳಿದರು. ಅವನ ಅನುಮತಿಯನ್ನು ಪಡೆದ ನಂತರ ಅವರು 2 ಕೊರಿಂಥ 1:​3-7ನ್ನು ಓದಿದರು. ಆ ವಚನಗಳಲ್ಲಿ ಈ ಮಾತುಗಳು ಸೇರಿವೆ: “ಆದರಣೆಯು [“ಸಾಂತ್ವನವು,” NW] . . . ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ.” ತನ್ನ ಸಾಕ್ಷಿ ನೆರೆಯವರು, ಇತರರಿಗೆ ಸಾಂತ್ವನದಾಯಕ ವಿಷಯವನ್ನು ಹಂಚುತ್ತಿರುವುದನ್ನು ಆ ವ್ಯಕ್ತಿಯು ಗಣ್ಯಮಾಡಿದನು ಮತ್ತು ಹೀಗಂದನು: “ನೀವು ಮಾಡುತ್ತಿರುವ ಅತ್ಯದ್ಭುತ ಕೆಲಸವನ್ನು ದೇವರು ಆಶೀರ್ವದಿಸಲಿ.”

16, 17. ದುರಂತಗಳಿಂದ ದುಃಖಿತರಾಗಿರುವ ಅಥವಾ ವಿಚಲಿತರಾಗಿರುವ ವ್ಯಕ್ತಿಗಳಿಗೆ ಸಹಾಯಮಾಡುವ ಬೈಬಲಿನ ಶಕ್ತಿಯನ್ನು ಯಾವ ಎರಡು ಅನುಭವಗಳು ತೋರಿಸುತ್ತವೆ?

16 ಆಸಕ್ತ ಜನರನ್ನು ಪುನಃ ಭೇಟಿ ಮಾಡುತ್ತಿದ್ದ ಒಬ್ಬ ಸಾಕ್ಷಿಯು, ಈ ಹಿಂದೆ ಆಸಕ್ತಿಯನ್ನು ತೋರಿಸಿದಂಥ ಒಬ್ಬ ಸ್ತ್ರೀಯ ಮಗನನ್ನು ಭೇಟಿಯಾದನು. ಇತ್ತೀಚಿನ ದುರಂತದ ನಂತರ ತನ್ನ ನೆರೆಯವರ ಸ್ಥಿತಿ ಹೇಗಿದೆಯೆಂಬುದರ ಕುರಿತು ತಾನು ಚಿಂತಿತನಾಗಿದ್ದೇನೆಂದು ಆ ಸಾಕ್ಷಿಯು ಹೇಳಿದನು. ಆ ಸಾಕ್ಷಿಯು ಜನರನ್ನು ಭೇಟಿಮಾಡಿ ಅವರು ಹೇಗಿದ್ದಾರೆಂಬುದನ್ನು ನೋಡಲಿಕ್ಕಾಗಿ ತನ್ನ ಸಮಯವನ್ನು ಉಪಯೋಗಿಸುತ್ತಿದ್ದಾನೆಂಬುದನ್ನು ತಿಳಿದು ಆ ವ್ಯಕ್ತಿ ಅಚ್ಚರಿಪಟ್ಟನು. ಆ ದಾಳಿಯು ನಡೆದಾಗ ತಾನು ವಿಶ್ವ ವಾಣಿಜ್ಯ ಕೇಂದ್ರದ ಹತ್ತಿರದಲ್ಲೇ ಕೆಲಸಮಾಡುತ್ತಿದ್ದು, ಆ ಇಡೀ ಘಟನೆಯನ್ನು ಕಣ್ಣಾರೆ ನೋಡಿದೆನೆಂದು ಅವನು ಹೇಳಿದನು. ದೇವರು ಈ ಎಲ್ಲ ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ಆ ವ್ಯಕ್ತಿಯು ಕೇಳಿದಾಗ, ಸಾಕ್ಷಿಯು ಬೈಬಲಿನಿಂದ ವಚನಗಳನ್ನು ಓದಿದನು. ಅದರಲ್ಲಿ ಕೀರ್ತನೆ 37:39 ಸೇರಿತ್ತು. ಆ ವಚನವು ಹೀಗೆ ಹೇಳುತ್ತದೆ: “ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ.” ಆ ಸಾಕ್ಷಿ ಮತ್ತು ಅವನ ಕುಟುಂಬದ ಹಿತಕ್ಷೇಮದ ಕುರಿತು ಆ ವ್ಯಕ್ತಿಯು ಕೇಳಿದನು, ಮತ್ತೊಮ್ಮೆ ಬರುವಂತೆ ಸಾಕ್ಷಿಯನ್ನು ಆಹ್ವಾನಿಸಿದನು, ಹಾಗೂ ಅವನ ಭೇಟಿಗಾಗಿ ಹೃತ್ಪೂರ್ವಕವಾದ ಗಣ್ಯತೆಯನ್ನು ವ್ಯಕ್ತಪಡಿಸಿದನು.

17 ಆ ಭಯೋತ್ಪಾದಕರ ದಾಳಿಗಳ ನಂತರದ ದಿನಗಳಲ್ಲಿ ಯೆಹೋವನ ಸಾಕ್ಷಿಗಳಿಂದ ಸಂತೈಸಲ್ಪಟ್ಟ ಸಾವಿರಾರು ದುಃಖಿತ ಜನರಲ್ಲಿ ಇನ್ನೊಬ್ಬ ಸ್ತ್ರೀಯೂ ಇದ್ದಳು. ಸಾಕ್ಷಿಗಳು ತಮ್ಮ ನೆರೆಯವರನ್ನು ಸಂದರ್ಶಿಸುತ್ತಿದ್ದಾಗ ಅವಳನ್ನು ಭೇಟಿಯಾದರು. ಏನು ನಡೆದಿತ್ತೊ ಅದು ಅವಳ ಮನಸ್ಸನ್ನು ತುಂಬ ಕಲಕಿಬಿಟ್ಟಿತ್ತು. ಸಾಕ್ಷಿಗಳು ಕೀರ್ತನೆ 72:​12-14ನ್ನು ಓದಿದಾಗ ಅವಳು ಕಿವಿಗೊಟ್ಟಳು: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.” ಆ ಮಾತುಗಳು ಎಷ್ಟು ಅರ್ಥಪೂರ್ಣವಾಗಿದ್ದವು! ಸಾಕ್ಷಿಗಳು ಆ ವಚನಗಳನ್ನು ಪುನಃ ಓದುವಂತೆ ಆಕೆ ಕೇಳಿಕೊಂಡಳು ಮತ್ತು ಚರ್ಚೆಯನ್ನು ಮುಂದುವರಿಸಲಿಕ್ಕಾಗಿ ಅವಳು ಅವರನ್ನು ಮನೆಯೊಳಕ್ಕೆ ಆಮಂತ್ರಿಸಿದಳು. ಆ ಸಂಭಾಷಣೆಯು ಅಂತ್ಯಗೊಳ್ಳುವಷ್ಟರಲ್ಲಿ, ಅವಳೊಂದಿಗೆ ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತ್ತು.

18. ತಮ್ಮ ಪರವಾಗಿ ಪ್ರಾರ್ಥಿಸುವಂತೆ ಕೇಳಿಕೊಳ್ಳಲ್ಪಟ್ಟಾಗ, ಒಬ್ಬ ಸಾಕ್ಷಿಯು ತನ್ನ ನೆರೆಯವರಿಗೆ ಹೇಗೆ ಸಹಾಯಮಾಡಿದನು?

18 ಒಬ್ಬ ಸಾಕ್ಷಿಯು, ಧನಿಕ ಸಮುದಾಯದಲ್ಲಿರುವ ಒಂದು ರೆಸ್ಟರಾಂಟ್‌ನಲ್ಲಿ ಕೆಲಸಮಾಡುತ್ತಾನೆ. ಆ ಸಮುದಾಯದಲ್ಲಿ ಜನರು ಈ ಹಿಂದೆ ರಾಜ್ಯದ ಶುಭ ವಾರ್ತೆಯಲ್ಲಿ ಅಷ್ಟೊಂದು ಆಸಕ್ತಿಯನ್ನು ತೋರಿಸಿರಲಿಲ್ಲ. ಆದರೆ ಆ ಭಯೋತ್ಪಾದಕರ ದಾಳಿಗಳ ನಂತರ, ಆ ಸಮುದಾಯವು ತತ್ತರಿಸಿಹೋದಂತೆ ತೋರುತ್ತಿತ್ತು. ಆ ದಾಳಿಯ ನಂತರ ಶುಕ್ರವಾರ ಸಂಜೆ, ಎಲ್ಲರೂ ಹೊರಗೆ ಹೋಗಿ, ಆ ಹಿಂಸಾಕೃತ್ಯಕ್ಕೆ ಬಲಿಯಾದವರ ಸ್ಮರಣಾರ್ಥವಾಗಿ ಒಂದು ಕ್ಷಣ ಮೌನವಾಗಿರುವಂತೆ ರೆಸ್ಟರಾಂಟಿನ ಮ್ಯಾನೇಜರಳು ಕೇಳಿಕೊಂಡಳು. ಅವರ ಭಾವನೆಗಳಿಗೆ ಗೌರವ ನೀಡುತ್ತಾ, ಆ ಸಾಕ್ಷಿಯು ಸಹ ಹೊರಗೆ ಹೋಗಿ, ರಸ್ತೆಬದಿಯಲ್ಲಿ ಮೌನವಾಗಿ ನಿಂತುಕೊಂಡನು. ಅವನು ಯೆಹೋವನ ಸಾಕ್ಷಿಗಳ ಒಬ್ಬ ಶುಶ್ರೂಷಕನಾಗಿದ್ದಾನೆಂದು ಆ ಮ್ಯಾನೇಜರಳಿಗೆ ತಿಳಿದಿತ್ತು. ಆದುದರಿಂದ ಆ ಒಂದು ಕ್ಷಣದ ಮೌನದ ನಂತರ ಅವಳು, ಅವನು ಎಲ್ಲರ ಪರವಾಗಿ ಒಂದು ಪ್ರಾರ್ಥನೆಯನ್ನು ಮಾಡುವಂತೆ ಅವನನ್ನು ಕೇಳಿಕೊಂಡಳು. ಆ ಸಾಕ್ಷಿಯು ಅದಕ್ಕೆ ಒಪ್ಪಿದನು. ಅವನು ಪ್ರಾರ್ಥನೆಯಲ್ಲಿ, ಎಲ್ಲೆಲ್ಲೂ ಇರುವ ದುಃಖದ ಕುರಿತಾಗಿ ತಿಳಿಸಿದನು, ಆದರೆ ಶೋಕಿಸುವವರು ನಿರೀಕ್ಷಾಹೀನರಾಗಿ ದುಃಖಿಸುವ ಅಗತ್ಯವಿಲ್ಲವೆಂದು ಹೇಳಿದನು. ಅಂಥ ಘೋರ ಘಟನೆಗಳು ಮುಂದೆಂದೂ ಸಂಭವಿಸದಂಥ ಸಮಯದ ಕುರಿತಾಗಿಯೂ ಅವನು ತಿಳಿಸಿದನು ಮತ್ತು ಎಲ್ಲರೂ ಬೈಬಲಿನಿಂದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ, ಸಾಂತ್ವನದ ದೇವರಿಗೆ ಇನ್ನೂ ಆಪ್ತರಾಗಸಾಧ್ಯವಿದೆ ಎಂದು ಅವನು ಹೇಳಿದನು. “ಆಮೆನ್‌” ಎಂದು ಹೇಳಿದ ನಂತರ, ಮ್ಯಾನೇಜರಳು ಆ ಸಾಕ್ಷಿಯ ಬಳಿ ಬಂದು, ಉಪಕಾರ ಹೇಳಿ ಅವನನ್ನು ಆಲಿಂಗಿಸಿದಳು ಮತ್ತು ತಾನು ಈ ವರೆಗೆ ಕೇಳಿಸಿಕೊಂಡಿರುವ ಪ್ರಾರ್ಥನೆಗಳಲ್ಲಿ ಇದೇ ಅತ್ಯುತ್ತಮವಾಗಿತ್ತೆಂದು ಅವಳು ಹೇಳಿದಳು. ರೆಸ್ಟರಾಂಟಿನ ಹೊರಗಿದ್ದ 60ಕ್ಕಿಂತಲೂ ಹೆಚ್ಚು ಜನರು ಸಹ ಅದನ್ನೇ ಮಾಡಿದರು.

ಸಮುದಾಯಕ್ಕೆ ಒಂದು ಆಶೀರ್ವಾದ

19. ಕೆಲವರು ಯೆಹೋವನ ಸಾಕ್ಷಿಗಳ ಉಚ್ಚ ಮಟ್ಟಗಳನ್ನು ಅಂಗೀಕರಿಸುತ್ತಾರೆಂಬುದನ್ನು ಯಾವ ಅನುಭವವು ತೋರಿಸುತ್ತದೆ?

19 ವಿಶೇಷವಾಗಿ ಈ ದಿನಗಳಲ್ಲಿ, ಎಲ್ಲಿ ಯೆಹೋವನ ಸಾಕ್ಷಿಗಳು ಸಕ್ರಿಯರಾಗಿದ್ದಾರೋ ಆ ಸಮುದಾಯಗಳು ಅವರ ಉಪಸ್ಥಿತಿಯಿಂದ ಪ್ರಯೋಜನ ಪಡೆದಿವೆ. ಇದನ್ನು ಅನೇಕರು ಹೇಳಿದ್ದಾರೆ. ಹೌದು, ಶಾಂತಿ, ಪ್ರಾಮಾಣಿಕತೆ, ಮತ್ತು ಶುದ್ಧ ನೈತಿಕತೆಯುಳ್ಳ ಜನರು, ಉಪಯುಕ್ತವಾದ ಪ್ರಭಾವವನ್ನು ಬೀರಬಲ್ಲರು. ಮಧ್ಯ ಏಷಿಯಾದ ಒಂದು ದೇಶದಲ್ಲಿ, ಸಾಕ್ಷಿಗಳು ಮಾಜಿ ಸರಕಾರದ ಭದ್ರತಾ ಏಜೆನ್ಸಿಯ ಒಬ್ಬ ನಿವೃತ್ತ ಅಧಿಕಾರಿಯನ್ನು ಭೇಟಿಯಾದರು. ಒಮ್ಮೆ ತನಗೆ ವಿಭಿನ್ನ ಧಾರ್ಮಿಕ ಸಂಸ್ಥೆಗಳ ತನಿಖೆ ನಡೆಸುವ ನೇಮಕ ಸಿಕ್ಕಿತ್ತೆಂದು ಅವನು ಹೇಳಿದನು. ಅವನು ಯೆಹೋವನ ಸಾಕ್ಷಿಗಳ ತನಿಖೆ ನಡೆಸಿದಾಗ, ಅವರ ಪ್ರಾಮಾಣಿಕತೆ ಮತ್ತು ಸುನಡತೆಯಿಂದಾಗಿ ಪ್ರಭಾವಿತನಾಗಿದ್ದನು. ಅವರ ದೃಢವಾದ ನಂಬಿಕೆ ಮತ್ತು ಅವರ ಬೋಧನೆಗಳು ಶಾಸ್ತ್ರವಚನಗಳ ಮೇಲಾಧಾರಿತವಾಗಿವೆ ಎಂಬ ಸತ್ಯಾಂಶವನ್ನು ಅವನು ತುಂಬ ಮೆಚ್ಚಿಕೊಂಡನು. ಈ ವ್ಯಕ್ತಿ ಬೈಬಲ್‌ ಅಧ್ಯಯನವನ್ನು ಮಾಡಲು ಸಮ್ಮತಿಸಿದನು.

20. (ಎ) ಕಳೆದ ವರ್ಷ ಯೆಹೋವನ ಸಾಕ್ಷಿಗಳು ವರದಿಸಿರುವ ಚಟುವಟಿಕೆಯು ಏನನ್ನು ತೋರಿಸುತ್ತದೆ? (ಬಿ) ಮಾಡಲಿಕ್ಕಾಗಿ ಇನ್ನೂ ಬಹಳಷ್ಟು ಕೆಲಸವಿದೆಯೆಂಬುದನ್ನು ಯಾವುದು ಸೂಚಿಸುತ್ತದೆ, ಮತ್ತು ಶುಭ ವಾರ್ತೆಯನ್ನು ಪ್ರಕಟಿಸುವ ನಮ್ಮ ಸುಯೋಗದ ಕುರಿತು ನಮ್ಮ ದೃಷ್ಟಿಕೋನವೇನು?

20 ತಿಳಿಸಸಾಧ್ಯವಿರುವ ಸಾವಿರಾರು ಅನುಭವಗಳಿವೆ. ಆದರೆ ಈ ಲೇಖನದಲ್ಲಿ ತಿಳಿಸಲ್ಪಟ್ಟಿರುವ ಕೆಲವೇ ಅನುಭವಗಳಿಂದ, ಯೆಹೋವನ ಸಾಕ್ಷಿಗಳು 2001ನೆಯ ಸೇವಾ ವರ್ಷದಲ್ಲಿ ತುಂಬ ಕಾರ್ಯಮಗ್ನರಾಗಿದ್ದರೆಂಬುದು ಸ್ಪಷ್ಟವಾಗುತ್ತದೆ. * ಅವರು ಕೋಟಿಗಟ್ಟಲೆ ಜನರೊಂದಿಗೆ ಮಾತಾಡಿದರು, ಅನೇಕ ಶೋಕಿತರನ್ನು ಸಂತೈಸಿದರು, ಮತ್ತು ಶುಭ ವಾರ್ತೆಯನ್ನು ಪ್ರಕಟಿಸುವ ಅವರ ಕೆಲಸವು ಆಶೀರ್ವದಿಸಲ್ಪಟ್ಟಿತು. 2,63,431 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಮೂಲಕ ದೇವರಿಗೆ ತಾವು ಮಾಡಿದ ಸಮರ್ಪಣೆಯನ್ನು ಸಂಕೇತಿಸಿದರು. ಲೋಕವ್ಯಾಪಕವಾಗಿ ಶುಭ ವಾರ್ತೆಯನ್ನು ಪ್ರಕಟಿಸುವವರ ಸಂಖ್ಯೆಯು, 1.7 ಪ್ರತಿಶತ ಏರಿತು. ಮತ್ತು ಯೇಸುವಿನ ವಾರ್ಷಿಕ ಜ್ಞಾಪಕಾಚರಣೆಗೆ 1,53,74,986 ಮಂದಿ ಹಾಜರಾದರು ಎಂಬ ವಾಸ್ತವಾಂಶವು, ಇನ್ನೂ ಬಹಳಷ್ಟು ಕೆಲಸವನ್ನು ಮಾಡಲಿಕ್ಕಿದೆ ಎಂಬುದನ್ನು ಸೂಚಿಸುತ್ತದೆ. (1 ಕೊರಿಂಥ 11:​23-26) ಶುಭ ವಾರ್ತೆಗೆ ಪ್ರತಿಕ್ರಿಯೆಯನ್ನು ತೋರಿಸುವ ದೀನ ವ್ಯಕ್ತಿಗಳನ್ನು ನಾವು ಹುಡುಕುತ್ತಾ ಇರೋಣ. ಮತ್ತು ಯೆಹೋವನ ಶುಭವರುಷವು ಮುಂದುವರಿಯುವಷ್ಟರ ವರೆಗೆ, ನಾವು ‘ಮನಮುರಿದವರನ್ನು’ ಸಂತೈಸುತ್ತಾ ಇರೋಣ. ನಮಗೆ ಎಂಥ ಆಶೀರ್ವದಿತ ಸುಯೋಗವಿದೆ! ಖಂಡಿತವಾಗಿಯೂ ನಾವೆಲ್ಲರೂ ಯೆಶಾಯನ ಈ ಮಾತುಗಳನ್ನು ಪ್ರತಿಧ್ವನಿಸುತ್ತೇವೆ: “ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವದು.” (ಯೆಶಾಯ 61:10) “ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಸ್ತೋತ್ರವನ್ನೂ ಮೊಳೆಯಿಸುವನು” ಎಂಬ ಪ್ರವಾದನಾತ್ಮಕ ಮಾತುಗಳನ್ನು ನೆರವೇರಿಸುತ್ತಿರುವಾಗ, ದೇವರು ನಮ್ಮನ್ನು ಉಪಯೋಗಿಸುತ್ತಾ ಮುಂದುವರಿಯಲಿ.​—ಯೆಶಾಯ 61:11.

[ಪಾದಟಿಪ್ಪಣಿ]

^ ಪ್ಯಾರ. 20 19ರಿಂದ 22ರ ವರೆಗಿನ ಪುಟಗಳಲ್ಲಿರುವ ಚಾರ್ಟ್‌, 2001ನೆಯ ಸೇವಾ ವರ್ಷದಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯ ವರದಿಯನ್ನು ಕೊಡುತ್ತದೆ.

ನಿಮಗೆ ನೆನಪಿದೆಯೆ?

• ಯೇಸು ಪ್ರಕಟಿಸಿದಂಥ ಶುಭ ವಾರ್ತೆಯಿಂದ ದೀನರು ಹೇಗೆ ಆಶೀರ್ವದಿಸಲ್ಪಟ್ಟರು?

• ಯೇಸುವಿನ ಪ್ರಥಮ ಶತಮಾನದ ಶಿಷ್ಯರ ಶುಭ ವಾರ್ತೆಯನ್ನು ಪ್ರಕಟಿಸುವ ಕೆಲಸಕ್ಕೆ ಪ್ರತಿಕ್ರಿಯೆಯನ್ನು ತೋರಿಸಿದವರಿಗೆ ಯಾವ ಆಶೀರ್ವಾದಗಳು ಸಿಕ್ಕಿದವು?

• ಪ್ರತಿಕ್ರಿಯೆ ತೋರಿಸುವವರು ಇಂದು ಶುಭ ವಾರ್ತೆಯಿಂದ ಹೇಗೆ ಆಶೀರ್ವದಿತರಾಗಿದ್ದಾರೆ?

• ಶುಭ ವಾರ್ತೆಯನ್ನು ಪ್ರಕಟಿಸುವವರಾಗಿರುವ ನಮ್ಮ ಸುಯೋಗವನ್ನು ನಾವು ಹೇಗೆ ಪರಿಗಣಿಸುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 19-22ರಲ್ಲಿರುವ ಚಾರ್ಟು]

ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 2001 ನೆಯ ಇಸವಿಯ ಸೇವಾ ವರ್ಷದ ವರದಿ

(ಬೌಂಡ್‌ ವಾಲ್ಯುಮ್‌ ನೋಡಿ)

[ಪುಟ 15ರಲ್ಲಿರುವ ಚಿತ್ರಗಳು]

ಶುಭ ವಾರ್ತೆಯನ್ನು ಪ್ರಕಟಿಸಲಿಕ್ಕಾಗಿ ತಮಗಿರುವ ಜವಾಬ್ದಾರಿಯನ್ನು ಯೆಹೋವನ ಸಾಕ್ಷಿಗಳು ಯಾವಾಗಲೂ ನೆನಪಿನಲ್ಲಿಡುತ್ತಾರೆ

[ಪುಟ 17ರಲ್ಲಿರುವ ಚಿತ್ರಗಳು]

ಶುಭ ವಾರ್ತೆಗೆ ಪ್ರತಿಕ್ರಿಯೆ ತೋರಿಸುವವರು ಒಂದು ಐಕ್ಯ, ಲೋಕವ್ಯಾಪಕ ಸಹೋದರತ್ವದ ಭಾಗವಾಗುತ್ತಾರೆ