VIIIನೆಯ ಹೆನ್ರಿ ಮತ್ತು ಬೈಬಲ್
VIIIನೆಯ ಹೆನ್ರಿ ಮತ್ತು ಬೈಬಲ್
ವಿನ್ಸ್‌ಟನ್ ಚರ್ಚಿಲ್, ಇಂಗ್ಲಿಷ್ ಮಾತಾಡುವ ಜನರ ಇತಿಹಾಸ (ಸಂಪುಟ 2, ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಬರೆದುದು: “ಧಾರ್ಮಿಕ ನಂಬಿಕೆಯ ಕ್ಷೇತ್ರದಲ್ಲಿ ಮತಸುಧಾರಣೆಯು ಮಹತ್ತರವಾದ ಬದಲಾವಣೆಯನ್ನು ತಂದಿತು. ಆ ಸಮಯದಲ್ಲಿ ಬೈಬಲ್, ಬೇರೆ ಬೇರೆ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದಂತಹ, ಅತ್ಯುತ್ತಮ ಬುದ್ಧಿವಾದದ, ಹೊಸದಾಗಿ ಅಂಗೀಕರಿಸಲ್ಪಟ್ಟ ಮೂಲವಾಗಿ ಪರಿಣಮಿಸಿತು. ಆದರೆ ಹಿರೀ ತಲೆಮಾರಿನವರು, ಪವಿತ್ರ ಬೈಬಲು ಅಜ್ಞಾನಿಗಳ ಕೈಸೇರುವುದು ಅಪಾಯಕರವಾಗಿದೆ ಮತ್ತು ಅದು ಪಾದ್ರಿಗಳಿಂದ ಮಾತ್ರ ಓದಲ್ಪಡಬೇಕು ಎಂಬ ಅಭಿಪ್ರಾಯವನ್ನು ಹೊಂದಿದ್ದರು.”
ಅದೇ ವೃತ್ತಾಂತವು ಮುಂದುವರಿಸುವುದು: “ಟಿಂಡೇಲ್ ಮತ್ತು ಕವರ್‌ಡೇಲ್‌ರಿಂದ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಲ್ಪಟ್ಟು, ಮುದ್ರಿಸಲ್ಪಟ್ಟ ಪೂರ್ಣ ಬೈಬಲ್‌ಗಳು, 1535ರ ಶರತ್ಕಾಲದ ಕೊನೇ ಭಾಗದಲ್ಲಿ ಪ್ರಪ್ರಥಮ ಬಾರಿಗೆ ಪ್ರಕಟವಾಗತೊಡಗಿದ್ದವು, ಮತ್ತು ಆಗ ಬೇರೆ ಬೇರೆ ಮುದ್ರಣಗಳಾಗಿ ಉತ್ಪಾದಿಸಲ್ಪಡುತ್ತಿದ್ದವು. ಬೈಬಲನ್ನು ಓದುವಂತೆ ಪಾದ್ರಿಗಳು ಜನರನ್ನು ಉತ್ತೇಜಿಸುವಂತೆ ಸರಕಾರವು ಸಲಹೆ ನೀಡಿತು.” ಅನೇಕ ಶತಮಾನಗಳ ವರೆಗೆ ಬೈಬಲ್ ಹಾಗೂ ಅದರಲ್ಲಿರುವ ವಿಷಯದ ಕುರಿತಾದ ಅಜ್ಞಾನದ ನಂತರ, ಇಂಗ್ಲೆಂಡ್ ಈಗ ಬೈಬಲಿನ ಜ್ಞಾನವನ್ನು ಪಡೆದುಕೊಳ್ಳಲಿತ್ತು, ಆದರೆ ಇದು ಚರ್ಚಿನ ಕಾರಣದಿಂದಲ್ಲ ಬದಲಾಗಿ VIIIನೆಯ ಹೆನ್ರಿಯ ಸರಕಾರದ ಪರಿಣಾಮವಾಗಿತ್ತು. *
“ಬೈಬಲಿನ ಕುರಿತು ಹಿಂದಿನ ರೂಢಿಗಳು ಹಾಗೂ ಅಭಿಪ್ರಾಯಗಳಿಗೆ ಅಂಟಿಕೊಂಡಿದ್ದ ಜನರಿಗೆ ಇನ್ನೂ ಹೆಚ್ಚಿನ ಹೊಡೆತವನ್ನು ಕೊಡುತ್ತಾ, ಪ್ಯಾರಿಸ್‌ನಲ್ಲಿ ಈ ಮುಂಚಿನ ಯಾವುದೇ ಸಂಪುಟಕ್ಕಿಂತಲೂ ಹೆಚ್ಚು ಬೆಲೆಯ ಇಂಗ್ಲಿಷ್ ಬೈಬಲ್‌ಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಮುದ್ರಿಸುವಂತೆ ಸರಕಾರವು ಆದೇಶ ನೀಡಿತು; ಮತ್ತು 1538ರ ಸೆಪ್ಟೆಂಬರ್ ತಿಂಗಳಿನಲ್ಲಿ, ಪ್ರತಿಯೊಂದು ಚರ್ಚಿನಲ್ಲಿ ಇಡಲಿಕ್ಕಾಗಿ ಮತ್ತು ಆಯಾ ಪ್ರಾಂತದ ಜನರು ಅತಿ ಸುಲಭವಾಗಿ ಅವುಗಳನ್ನು ಉಪಯೋಗಿಸಸಾಧ್ಯವಾಗುವಂತೆ ಮತ್ತು ಓದಸಾಧ್ಯವಾಗುವಂತೆ, ದೇಶದಲ್ಲಿರುವ ಪ್ರತಿಯೊಂದು ಪ್ರಾಂತವು ಇಂಗ್ಲಿಷ್ ಭಾಷೆಯ ಅತಿ ದೊಡ್ಡ ಗಾತ್ರದ ಬೈಬಲನ್ನು ಖರೀದಿಸಬೇಕು ಎಂಬ ಆಜ್ಞೆಯನ್ನಿತ್ತಿತು. ಲಂಡನ್ ನಗರದಲ್ಲಿನ ಸೆಂಟ್ ಪೌಲ್ಸ್ ಕತೀಡ್ರಲ್‌ನಲ್ಲಿ ಆರು ಪ್ರತಿಗಳು ಇಡಲ್ಪಟ್ಟವು, ಮತ್ತು ಅವುಗಳನ್ನು ಓದಲಿಕ್ಕಾಗಿ ಇಡೀ ದಿನ, ಅದರಲ್ಲೂ ವಿಶೇಷವಾಗಿ, ಗಟ್ಟಿಯಾಗಿ ಓದಲು ಕರ್ಣಗೋಚರ ಧ್ವನಿಯಿರುವ ಯಾವುದೇ ವ್ಯಕ್ತಿಯನ್ನು ಕಂಡುಕೊಳ್ಳಸಾಧ್ಯವಿರುವಾಗ, ಜನಸಮೂಹಗಳು ಗುಂಪುಗುಂಪಾಗಿ ಬರುತ್ತಿದ್ದವು ಎಂದು ನಮಗೆ ಹೇಳಲಾಯಿತು.”
ಆದರೆ, ಅನೇಕ ಐರೋಪ್ಯ ದೇಶಗಳಲ್ಲಿ ಮತ್ತು ಉತ್ತರ ಅಮೆರಿಕದಲ್ಲಿ, ಬೈಬಲನ್ನು ಕ್ರಮವಾಗಿ ಓದುವ ತಮ್ಮ ಸುಯೋಗವನ್ನು ಅನೇಕರು ಸದುಪಯೋಗಿಸಿಕೊಳ್ಳುವುದಿಲ್ಲ ಎಂಬುದು ದುಃಖಕರ ಸಂಗತಿಯಾಗಿದೆ. ಇದು ಭಾರೀ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಬೈಬಲ್ ಮಾತ್ರವೇ ‘ದೈವಪ್ರೇರಿತವಾದ ಶಾಸ್ತ್ರವಾಗಿದ್ದು, ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.’—2 ತಿಮೊಥೆಯ 3:16.
[ಪಾದಟಿಪ್ಪಣಿ]
^ ಪ್ಯಾರ. 3 ರಾಜನಾದ VIIIನೆಯ ಹೆನ್ರಿಯು 1509ರಿಂದ 1547ರ ವರೆಗೆ ಇಂಗ್ಲೆಂಡನ್ನು ಆಳಿದನು.
[ಪುಟ 32ರಲ್ಲಿರುವ ಚಿತ್ರ ಕೃಪೆ]
VIIIನೆಯ ಹೆನ್ರಿ: Painting in the Royal Gallery at Kensington, from the book The History of Protestantism (Vol. I)