ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅಳುವ” ಮರ ಮತ್ತು ಅದರ ಬಹೂಪಯೋಗಿ “ಕಣ್ಣೀರು”

“ಅಳುವ” ಮರ ಮತ್ತು ಅದರ ಬಹೂಪಯೋಗಿ “ಕಣ್ಣೀರು”

“ಅಳುವ” ಮರ ಮತ್ತು ಅದರ ಬಹೂಪಯೋಗಿ “ಕಣ್ಣೀರು”

‘ನೋವನ್ನು ನೀಗಿಸುವುದಕ್ಕೆ ಮುಲಾಮನ್ನು ತೆಗೆದುಕೊಳ್ಳಿರಿ’ ಎಂದು ಯೆರೆಮೀಯ 51:8 (NW) ಹೇಳುತ್ತದೆ. ಅತ್ಯಧಿಕ ಉಪಶಮನವನ್ನು ನೀಡುವಂಥ ಹಾಗೂ ಗುಣಪಡಿಸುವಂಥ ಈ ವಸ್ತುವಿನ ಮೂಲಗಳಲ್ಲಿ ಒಂದರ ಕುರಿತಾದ ಅನ್ವೇಷಣೆಯು, ನಮ್ಮನ್ನು ಈಜಿಯನ್‌ ಸಮುದ್ರದಲ್ಲಿರುವ ಕಿಯೋಸ್‌ ದ್ವೀಪಕ್ಕೆ ಕಾಲ್ಪನಿಕ ಪ್ರಯಾಣ ಬೆಳೆಸುವಂತೆ ಮಾಡುತ್ತದೆ.

ಬೇಸಗೆಯ ಆರಂಭದಲ್ಲಿ, ಕಿಯೋಸ್‌ನಲ್ಲಿರುವ ರೈತರು ಸುಗ್ಗೀಕಾಲಕ್ಕಾಗಿ ಬಹಳ ಅಸಾಮಾನ್ಯವಾದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡುತ್ತಾರೆ. ಅವರು ನೆಲವನ್ನು ಗುಡಿಸಿದ ಬಳಿಕ, ಮ್ಯಾಸ್ಟಿಕ್‌ ಮರಗಳೆಂದು ಕರೆಯಲ್ಪಡುವ ಕುರುಚಲು ಗಿಡದಂತಹ ನಿತ್ಯಹರಿದ್ವರ್ಣಿಗಳ ಸುತ್ತಲೂ ಬಿಳಿಯ ಜೇಡಿಮಣ್ಣಿನ ಸಮತಲ ತಳಪಾಯವನ್ನು ಮಾಡುತ್ತಾರೆ. ತದನಂತರ ರೈತರು ಅದರ ತೊಗಟೆಯಲ್ಲಿ ಕಚ್ಚು ಗುರುತುಗಳನ್ನು ಮಾಡುತ್ತಾರೆ; ಇದು ಮರಗಳು ‘ಅಳುವಂತೆ’ ಮಾಡುತ್ತದೆ. ಅವುಗಳಿಂದ ರಾಳದ ನಸುಹಳದಿ ಬಣ್ಣದ “ಕಣ್ಣೀರು” ಸ್ರವಿಸಲು ಆರಂಭವಾಗುತ್ತದೆ. ಎರಡು ಅಥವಾ ಮೂರು ವಾರಗಳ ಬಳಿಕ, ಆ ರಾಳದ ಹನಿಗಳು ಘನೀಕರಿಸುತ್ತವೆ ಮತ್ತು ನೇರವಾಗಿ ಮರಗಳ ಕಾಂಡದಿಂದ ಅಥವಾ ಕೆಳಗಿರುವ ಜೇಡಿಮಣ್ಣಿನ ನೆಲದಿಂದ ರೈತರು ರಾಳವನ್ನು ಶೇಖರಿಸುತ್ತಾರೆ. ಮ್ಯಾಸ್ಟಿಕ್‌ ಗೋಂದು ಎಂದು ಕರೆಯಲ್ಪಡುವ ಈ “ಕಣ್ಣೀರು,” ಮುಲಾಮ (ಬಾಲ್ಸಮ್‌)ನ್ನು ಮಾಡಲಿಕ್ಕಾಗಿ ಉಪಯೋಗಿಸಲ್ಪಡುತ್ತದೆ.

ಆದರೂ, ಇದರ ಕೊಯ್ಲಿಗೆ ಮುಂಚೆ ತಾಳ್ಮೆ ಹಾಗೂ ಶ್ರಮಭರಿತ ಕೆಲಸದ ಅಗತ್ಯವಿದೆ. ಒಂದಕ್ಕೊಂದು ಹೆಣೆದುಕೊಂಡಿದ್ದು, ಬೂದುಬಣ್ಣದ್ದಾಗಿರುವ ಈ ಮರದ ಕಾಂಡಗಳು, ತುಂಬ ನಿಧಾನವಾಗಿ ಬೆಳೆಯುತ್ತವೆ. ಒಂದು ಮರವು ಪರಿಪಕ್ವ ಹಂತವನ್ನು ತಲಪಲು, ಸಾಮಾನ್ಯವಾಗಿ ಆರರಿಂದ ಹತ್ತು ಅಡಿಗಳಷ್ಟು ಎತ್ತರಕ್ಕೆ ಬೆಳೆಯಲು 40ರಿಂದ 50 ವರ್ಷಗಳು ಹಿಡಿಯುತ್ತವೆ.

ಮ್ಯಾಸ್ಟಿಕ್‌ ಗೋಂದನ್ನು ಉತ್ಪಾದಿಸಲಿಕ್ಕಾಗಿ, ಮರಗಳ ಕಾಂಡಗಳಲ್ಲಿ ಕಚ್ಚು ಗುರುತುಗಳನ್ನು ಮಾಡಿ “ಕಣ್ಣೀರ”ನ್ನು ಸಂಗ್ರಹಿಸುವ ಕೆಲಸದ ಜೊತೆಗೆ ಇನ್ನೂ ಹೆಚ್ಚಿನ ಕೆಲಸದ ಆವಶ್ಯಕತೆಯಿದೆ. ರೈತರು ಮ್ಯಾಸ್ಟಿಕ್‌ “ಕಣ್ಣೀರ”ನ್ನು ಸಂಗ್ರಹಿಸಿದ ಬಳಿಕ, ಅದನ್ನು ಸೋಸುತ್ತಾರೆ, ತೊಳೆಯುತ್ತಾರೆ ಮತ್ತು ಅವುಗಳ ಗಾತ್ರ ಹಾಗೂ ಗುಣಮಟ್ಟಕ್ಕನುಸಾರ ಅವುಗಳನ್ನು ಬೇರ್ಪಡಿಸುತ್ತಾರೆ. ತದನಂತರ, ಮ್ಯಾಸ್ಟಿಕ್‌ ಅನ್ನು ಇನ್ನಷ್ಟು ಶುದ್ಧೀಕರಿಸಲಾಗುತ್ತದೆ ಮತ್ತು ಅದನ್ನು ಬೇರೆ ಬೇರೆ ಕೆಲಸಕ್ಕಾಗಿ ಉಪಯೋಗಿಸಲಾಗುತ್ತದೆ.

ಈ ಅಮೂಲ್ಯ ಸಸ್ಯದ ಇತಿಹಾಸ

“ಮ್ಯಾಸ್ಟಿಕ್‌”ಗಾಗಿರುವ ಗ್ರೀಕ್‌ ಪದವು, “ಹಲ್ಲು ಕಡಿ” ಎಂಬ ಅರ್ಥವುಳ್ಳ ಶಬ್ದದೊಂದಿಗೆ ಸಂಬಂಧಿಸಿದ್ದಾಗಿದೆ. ಪುರಾತನ ಸಮಯದಿಂದಲೂ, ಶ್ವಾಸವನ್ನು ತಾಜಾಗೊಳಿಸಲಿಕ್ಕಾಗಿ ಮ್ಯಾಸ್ಟಿಕ್‌ ಗೋಂದನ್ನು ಚ್ಯೂಯಿಂಗ್‌ ಗಮ್‌ನಂತೆ ಉಪಯೋಗಿಸಲಾಗಿದೆ ಎಂಬರ್ಥವನ್ನು ಈ ಹೆಸರು ಸೂಚಿಸಬಹುದು.

ಮ್ಯಾಸ್ಟಿಕ್‌ನ ಕುರಿತಾದ ಅತಿ ಹಳೆಯ ಮಾಹಿತಿಯು, ಸಾ.ಶ.ಪೂ. ಐದನೆಯ ಶತಮಾನದ ಗ್ರೀಕ್‌ ಇತಿಹಾಸಕಾರನಾದ ಹಿರಾಡಟಸ್‌ನಿಂದ ಸಿಗುತ್ತದೆ. ಅಪಾಲಡೋರಸ್‌, ಡೈಅಸ್ಕೋರಡಸ್‌, ಥಿಯೊಫ್ರೇಸ್ಟಸ್‌, ಮತ್ತು ಹಿಪೊಕ್ರೇಟಸ್‌ರಂತಹ ಇತರ ಪುರಾತನ ಲೇಖಕರು ಹಾಗೂ ವೈದ್ಯರು, ಮ್ಯಾಸ್ಟಿಕ್‌ನಿಂದ ತಯಾರಿಸಲ್ಪಟ್ಟ ವೈದ್ಯಕೀಯ ಉಪಯೋಗಗಳ ಕುರಿತು ಉಲ್ಲೇಖಿಸಿದರು. ಸುಮಾರು ಸಾ.ಶ. 50ರಿಂದ ಮ್ಯಾಸ್ಟಿಕ್‌ ಮರಗಳು ಮೆಡಿಟರೇನಿಯನ್‌ ತೀರದುದ್ದಕ್ಕೂ ಬೆಳೆಯುತ್ತಿರುವುದಾದರೂ, ಮ್ಯಾಸ್ಟಿಕ್‌ನ ಉತ್ಪಾದನೆಯು ಬಹುಮಟ್ಟಿಗೆ ಕಿಯೋಸ್‌ ದ್ವೀಪದಲ್ಲೇ ಮಾಡಲ್ಪಡುತ್ತದೆ. ಮತ್ತು ಯಾರು ಕಿಯೋಸ್‌ ದ್ವೀಪವನ್ನು ವಶಪಡಿಸಿಕೊಂಡರೋ ಆ ರೋಮನ್ನರು, ಜೆನೋವದವರು, ಹಾಗೂ ಸಮಯಾನಂತರ ಆಟಮನ್‌ರ ಪ್ರಮುಖ ಆಸಕ್ತಿಯು ಮ್ಯಾಸ್ಟಿಕ್‌ ಉತ್ಪಾದನೆಯೇ ಆಗಿತ್ತು.

ಬಹೂಪಯೋಗಿ ಮ್ಯಾಸ್ಟಿಕ್‌

ಪುರಾತನ ಐಗುಪ್ತದ ವೈದ್ಯರು, ಭೇದಿ ಮತ್ತು ಸಂಧಿವಾತವನ್ನೂ ಸೇರಿಸಿ, ಬೇರೆ ಬೇರೆ ಕಾಯಿಲೆಗಳನ್ನು ಗುಣಪಡಿಸಲಿಕ್ಕಾಗಿ ಮ್ಯಾಸ್ಟಿಕ್‌ ಅನ್ನೇ ಉಪಯೋಗಿಸಿದರು. ಅವರು ಇದನ್ನು ಧೂಪದ್ರವ್ಯವಾಗಿಯೂ ಉಪಯೋಗಿಸಿದರು ಮತ್ತು ಮಮ್ಮೀಕರಣದಲ್ಲೂ ಉಪಯೋಗಿಸಿದರು. ‘ಗಿಲ್ಯಾದಿನ ಔಷಧ [ಬಾಲ್ಸಮ್‌]ದ’ ಮೂಲಗಳಲ್ಲಿ ಒಂದಾಗಿರಬಹುದಾದ ಮ್ಯಾಸ್ಟಿಕ್‌ ಮರವು, ಅದರ ವೈದ್ಯಕೀಯ ಗುಣಲಕ್ಷಣಗಳು ಹಾಗೂ ಪ್ರಸಾಧನಗಳಲ್ಲಿ ಮತ್ತು ಶವಸಂರಕ್ಷಕ ಪದಾರ್ಥಗಳಲ್ಲಿನ ಅದರ ಉಪಯೋಗಕ್ಕಾಗಿ ಬೈಬಲಿನಲ್ಲಿ ದಾಖಲಿಸಲ್ಪಟ್ಟಿದೆ. (ಯೆರೆಮೀಯ 8:22; 46:11) ಪವಿತ್ರ ಉಪಯೋಗಕ್ಕಾಗಿ ಮಾತ್ರ ಬಳಸಲ್ಪಡುವ ಸುವಾಸನೆಯುಳ್ಳ ಪವಿತ್ರ ಧೂಪದ್ರವ್ಯಗಳಲ್ಲಿರುವ ಪದಾರ್ಥಗಳಲ್ಲಿ ಒಂದಾದ ಸುಗಂಧದ್ರವ್ಯವನ್ನು ಹೊರಸೂಸುವ ಮರವು ಸಹ, ಮ್ಯಾಸ್ಟಿಕ್‌ ಮರಗಳ ಜಾತಿಗೇ ಸೇರಿದ್ದಾಗಿರಬಹುದು ಎಂದು ಸೂಚಿಸಲಾಗಿದೆ.​—ವಿಮೋಚನಕಾಂಡ 30:​34, 35.

ಇಂದು, ತೈಲ ವರ್ಣಚಿತ್ರಗಳು, ಪೀಠೋಪಕರಣಗಳು, ಮತ್ತು ಸಂಗೀತ ಸಾಧನಗಳನ್ನು ಸಂರಕ್ಷಿಸುವಂತಹ ಮೆರುಗೆಣ್ಣೆಗಳಲ್ಲಿ ಮ್ಯಾಸ್ಟಿಕ್‌ ಕಂಡುಬರುತ್ತದೆ. ಇದು ಶಾಖನಿರೋಧಕ ಹಾಗೂ ಜಲಾಭೇದ್ಯ ವಸ್ತುವಾಗಿಯೂ ಉಪಯೋಗಿಸಲ್ಪಡುತ್ತದೆ, ಮತ್ತು ಬಟ್ಟೆಗಳಿಗೆ ಹಾಗೂ ಕಲಾಕಾರರ ಪೈಂಟ್‌ಗಳಲ್ಲಿ ಬಣ್ಣಹಾಕಲಿಕ್ಕಾಗಿರುವ ಅತ್ಯುತ್ತಮ ಸಮಸ್ಥಿತಿ ಸ್ಥಾಪಕವಾಗಿ ಪರಿಗಣಿಸಲ್ಪಟ್ಟಿದೆ. ಅಂಟುಪದಾರ್ಥಗಳಲ್ಲಿಯೂ ಮತ್ತು ಚರ್ಮದ ಹದಮಾಡುವಿಕೆಯಲ್ಲಿಯೂ ಮ್ಯಾಸ್ಟಿಕ್‌ ಅನ್ನು ಉಪಯೋಗಿಸಲಾಗುತ್ತದೆ. ಮ್ಯಾಸ್ಟಿಕ್‌ನ ಮುದನೀಡುವ ಸುವಾಸನೆ ಹಾಗೂ ಇತರ ಗುಣಲಕ್ಷಣಗಳ ಕಾರಣದಿಂದ, ಅದನ್ನು ಸಾಬೂನು, ಪ್ರಸಾಧನ, ಹಾಗೂ ಸುಗಂಧದ್ರವ್ಯಗಳಲ್ಲಿ ಉಪಯೋಗಿಸಲಾಗುತ್ತದೆ.

ಲೋಕವ್ಯಾಪಕವಾಗಿರುವ ಔಷಧಗಳ 25 ಅಧಿಕೃತ ಪಟ್ಟಿಗಳಲ್ಲಿ ಮ್ಯಾಸ್ಟಿಕ್‌ ವರ್ಣಿಸಲ್ಪಟ್ಟಿದೆ. ಅರಬ್‌ ಜಗತ್ತಿನಲ್ಲಿ ಸಾಂಪ್ರದಾಯಿಕ ಔಷಧಗಳಲ್ಲಿ ಈಗಲೂ ಇದನ್ನು ಆಗಿಂದಾಗ್ಗೆ ಉಪಯೋಗಿಸಲಾಗುತ್ತಿದೆ. ದಂತಸಿಮೆಂಟ್‌ಗಳಲ್ಲಿ ಮತ್ತು ಔಷಧದ ಕ್ಯಾಪ್ಸುಲ್‌ಗಳ ಒಳಪದರಗಳಲ್ಲಿಯೂ ಇದು ಉಪಯೋಗಿಸಲ್ಪಡುತ್ತದೆ.

ಮುಲಾಮಿನ ಒಂದು ಮೂಲದೋಪಾದಿ, “ಅಳುವ” ಮ್ಯಾಸ್ಟಿಕ್‌ ಮರದ ಬಹೂಪಯೋಗಿ “ಕಣ್ಣೀರು,” ಅನೇಕ ಶತಮಾನಗಳಿಂದ ಜನರಿಗೆ ಉಪಶಮನ ನೀಡಿದೆ ಮತ್ತು ಅವರನ್ನು ಗುಣಪಡಿಸಿದೆ. ಆದುದರಿಂದ, ಸಕಾರಣದಿಂದಲೇ ಯೆರೆಮೀಯನ ಪ್ರವಾದನೆಯು ಹೇಳುವುದು: ‘ನೋವನ್ನು ನೀಗಿಸುವುದಕ್ಕೆ ಮುಲಾಮನ್ನು ತೆಗೆದುಕೊಳ್ಳಿರಿ.’

[ಪುಟ 31ರಲ್ಲಿರುವ ಚಿತ್ರಗಳು]

ಕಿಯೋಸ್‌

ಮ್ಯಾಸ್ಟಿಕ್‌ನ ಕೊಯ್ಲು

ಮ್ಯಾಸ್ಟಿಕ್‌ನ “ಕಣ್ಣೀರು” ಜಾಗರೂಕತೆಯಿಂದ ಸಂಗ್ರಹಿಸಲ್ಪಡುತ್ತದೆ

[ಕೃಪೆ]

Chios and harvest line art: Courtesy of Korais Library; all others: Kostas Stamoulis