ನಿಜವಾಗಿರುವ ಒಬ್ಬ ದೇವರಲ್ಲಿ ನೀವು ಭರವಸೆಯಿಡುತ್ತೀರೋ?
ನಿಜವಾಗಿರುವ ಒಬ್ಬ ದೇವರಲ್ಲಿ ನೀವು ಭರವಸೆಯಿಡುತ್ತೀರೋ?
ಪರಿಶೋಧಕನಾದ ರೋಬರ್ಟ್ ಪಿರೀ ಸುಮಾರು ಏಳು ವರ್ಷಗಳಿಗೆ ಮುಂಚೆ, ಅಂದರೆ 1906ರಲ್ಲಿ ನೋಡಿದ್ದಾಗಿ ವರದಿಸಿದ್ದಂತಹ ಉತ್ತರ ಧ್ರುವ ಪ್ರದೇಶದ ಕುರಿತು ಅಧ್ಯಯನ ನಡೆಸಲಿಕ್ಕಾಗಿ, ನೈಸರ್ಗಿಕ ಇತಿಹಾಸದ ಅಮೆರಿಕನ್ ವಸ್ತುಸಂಗ್ರಹಾಲಯದಿಂದ ನೇಮಿಸಲ್ಪಟ್ಟ ಒಂದು ವಿಶೇಷ ಕಾರ್ಯಯಾತ್ರೆಯು ತನ್ನ ಕೆಲಸವನ್ನು ಆರಂಭಿಸಿತ್ತು.
ಉತ್ತರ ಅಮೆರಿಕದ ತೀರ ವಾಯವ್ಯ ಭಾಗದಲ್ಲಿರುವ ಕೇಪ್ ಕೋಲ್ಗೇಟ್‌ನಿಂದ, ಬಹು ದೂರದಲ್ಲಿರುವ ಭೂಭಾಗವು ಬಿಳಿಯ ಶಿಖರಗಳಂತೆ ಕಂಡುಬಂದ ದೃಶ್ಯವನ್ನು ಪಿರೀ ಗಮನಿಸಿದ್ದನು. ತದನಂತರ, ತನಗೆ ಹಣಕಾಸಿನ ಬೆಂಬಲ ನೀಡಿದ್ದ ಸಹಾಯಕರಲ್ಲಿ ಒಬ್ಬನ ನಾಮಾರ್ಥವಾಗಿ ಅದಕ್ಕೆ ಕ್ರಾಕರ್ ಲ್ಯಾಂಡ್ ಎಂದು ಹೆಸರಿಟ್ಟನು. ಇದೇ ಅನ್ವೇಷಣೆಯನ್ನು ಮುಂದುವರಿಸುವ ವಿಶೇಷ ಕಾರ್ಯಯಾತ್ರೆಯ ತಂಡವು, ಗುಡ್ಡಗಳು, ಕಣಿವೆಗಳು ಹಾಗೂ ಹಿಮದಿಂದ ಆವೃತವಾಗಿರುವ ಪರ್ವತ ಶಿಖರಗಳಿರುವ ಒಂದು ಕ್ಷೇತ್ರದ ನಸುನೋಟವನ್ನು ಪಡೆದಾಗ, ಈ ತಂಡದ ಸದಸ್ಯರು ಎಷ್ಟು ಪುಳಕಗೊಂಡಿದ್ದರು! ಆದರೆ ಉತ್ತರ ಧ್ರುವ ಪ್ರದೇಶದ ಮರೀಚಿಕೆಯನ್ನಲ್ಲದೆ ಬೇರೇನನ್ನೂ ತಾವು ನೋಡುತ್ತಿಲ್ಲ ಎಂಬುದನ್ನು ಅವರು ಬೇಗನೆ ಗ್ರಹಿಸಿದರು. ವಾಯುಮಂಡಲದ ಈ ದೃಷ್ಟಿ ಭ್ರಾಂತಿಯ ಪರಿಣಾಮವು ಪಿರೀಯನ್ನು ವಂಚಿಸಿತ್ತು, ಮತ್ತು ಈಗ ಈ ತಂಡಕ್ಕೆ ವಾಸ್ತವಾಂಶದ ಅರಿವಾಗುವಷ್ಟರೊಳಗೆ, ಯಾವುದು ನೈಜವಾಗಿರಲಿಲ್ಲವೋ ಅಂತಹ ಯಾವುದನ್ನೋ ಪರಿಶೋಧಿಸುವ ಕೆಲಸದಲ್ಲಿ ಅವರು ತಮ್ಮ ಸಮಯ, ಶಕ್ತಿ, ಹಾಗೂ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ವಿನಿಯೋಗಿಸಿಬಿಟ್ಟಿದ್ದರು.
ಇಂದು, ಅನೇಕರು ಯಾರನ್ನು ನಿಜವಾದ ದೇವರುಗಳೆಂದು ನಂಬುತ್ತಾರೋ ಅಂತಹ ದೇವರುಗಳಿಗೆ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ ಹಾಗೂ ಅವುಗಳಿಗಾಗಿ ಸಮಯವನ್ನು ವಿನಿಯೋಗಿಸುತ್ತಾರೆ. ಯೇಸುವಿನ ಅಪೊಸ್ತಲರ ದಿನಗಳಲ್ಲಿಯೂ ಜನರು ಹೆರ್ಮೆದೇವರು ಹಾಗೂ ದ್ಯೌಸ್‌ದೇವರನ್ನು ಆರಾಧಿಸುತ್ತಿದ್ದರು. (ಅ. ಕೃತ್ಯಗಳು 14:11, 12) ಇಂದು, ಶಿಂಟೋ, ಹಿಂದೂ ಹಾಗೂ ಲೋಕದ ಇತರ ಧರ್ಮಗಳಿಂದ ಆರಾಧಿಸಲ್ಪಡುವ ದೇವರುಗಳ ಸಂಖ್ಯೆಯು ಕೋಟಿಗಟ್ಟಲೆಯಾಗಿದೆ. ವಾಸ್ತವದಲ್ಲಿ, ಬೈಬಲ್ ಹೇಳುವಂತೆ, ‘ಅನೇಕ ದೇವರುಗಳೂ ಅನೇಕ ಕರ್ತರೂ’ ಇದ್ದಾರೆ. (1 ಕೊರಿಂಥ 8:5, 6) ಇವರೆಲ್ಲಾ ನಿಜವಾದ ದೇವರಾಗಿರಸಾಧ್ಯವೋ?
‘ರಕ್ಷಿಸಲಾರದಂಥ’ ದೇವರುಗಳು
ಉದಾಹರಣೆಗೆ, ಆರಾಧನೆಯಲ್ಲಿ ವಿಗ್ರಹಗಳು ಅಥವಾ ಪ್ರತೀಕಗಳ ಉಪಯೋಗವನ್ನು ಪರಿಗಣಿಸಿರಿ. ಯಾರು ಅವುಗಳಲ್ಲಿ ಭರವಸೆಯಿಡುತ್ತಾರೋ ಅಥವಾ ಅವುಗಳ ಮೂಲಕ ಪ್ರಾರ್ಥಿಸುತ್ತಾರೋ ಅವರಿಗೆ, ಆ ವಿಗ್ರಹಗಳು ಜನರಿಗೆ ವರನೀಡುವ ಅತಿಮಾನುಷ ಶಕ್ತಿಯನ್ನು ಹೊಂದಿರುವ ಅಥವಾ ತಮ್ಮನ್ನು ಅಪಾಯದಿಂದ ಬಿಡಿಸಬಲ್ಲ ರಕ್ಷಕರಂತೆ ಕಂಡುಬರುತ್ತವೆ. ಆದರೆ ಅವು ನಿಜವಾಗಿಯೂ ಜನರನ್ನು ರಕ್ಷಿಸಬಲ್ಲವೋ? ಅಂತಹ ವಸ್ತುಗಳ ಕುರಿತು ಕೀರ್ತನೆಗಾರನು ಹಾಡಿದ್ದು: “ಅನ್ಯಜನಗಳ ವಿಗ್ರಹಗಳು ಬೆಳ್ಳಿಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ. ಅವುಗಳಿಗೆ ಬಾಯಿದ್ದರೂ ಕೀರ್ತನೆ 135:15-17; ಯೆಶಾಯ 45:20.
ಮಾತಾಡುವದಿಲ್ಲ; ಕಣ್ಣಿದ್ದರೂ ನೋಡುವದಿಲ್ಲ; ಕಿವಿಯಿದ್ದರೂ ಕೇಳುವದಿಲ್ಲ; ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ.” ಇವು ‘ರಕ್ಷಿಸಲಾರದಂಥ’ ದೇವರುಗಳಾಗಿವೆ ಎಂಬುದಂತೂ ಸ್ಪಷ್ಟ.—ವಿಗ್ರಹಗಳನ್ನು ಯಾರು ಮಾಡುತ್ತಾರೋ ಅವರು, ತಮ್ಮ ಕೈಕೆಲಸಗಳಿಗೆ ಜೀವ ಹಾಗೂ ಶಕ್ತಿ ಇದೆ ಎಂದು ಹೇಳುತ್ತಾರೆ ನಿಜ. ಮತ್ತು ಯಾರು ವಿಗ್ರಹಗಳನ್ನು ಆರಾಧಿಸುತ್ತಾರೋ ಅವರು, ಅವುಗಳಲ್ಲಿ ಪೂರ್ಣ ಭರವಸೆಯನ್ನಿಡುತ್ತಾರೆ. ಈ ವಿಷಯದಲ್ಲಿ ಪ್ರವಾದಿಯಾದ ಯೆಶಾಯನು ಹೇಳಿದ್ದು: “[ಒಂದು ವಿಗ್ರಹವನ್ನು] ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಪೀಠದ ಮೇಲೆ ಇಳಿಸಿ ನಿಲ್ಲಿಸುವರು.” ಅವನು ಇನ್ನೂ ಕೂಡಿಸುತ್ತಾ ಹೇಳಿದ್ದು: “ಅದು ಅಲ್ಲಿಂದ ಜರಗದು, ಒಬ್ಬನು ಕೂಗಿಕೊಂಡರೂ ಉತ್ತರಕೊಟ್ಟು ಕಷ್ಟದಿಂದ ಅವನನ್ನು ಬಿಡಿಸಲಾರದು.” (ಯೆಶಾಯ 46:7) ಯಾರು ಆ ವಿಗ್ರಹದಲ್ಲಿ ಭರವಸೆಯಿಡುತ್ತಾರೋ ಅವರ ನಂಬಿಕೆಯು ಎಷ್ಟೇ ಉತ್ಕಟವಾಗಿರಲಿ, ಆ ವಿಗ್ರಹವು ಮಾತ್ರ ನಿರ್ಜೀವವಾಗಿಯೇ ಉಳಿಯುತ್ತದೆ ಎಂಬುದಂತೂ ಸತ್ಯ. ಅಂತಹ ಕೆತ್ತಿದ ವಿಗ್ರಹಗಳು ಹಾಗೂ ಎರಕದ ಬೊಂಬೆಗಳು “ಕೆಲಸಕ್ಕೆ ಬಾರದ ದೇವರು”ಗಳಾಗಿವೆ.—ಹಬಕ್ಕೂಕ 2:18, NW.
ಇಂದು ಮನೋರಂಜನಾ ಜಗತ್ತಿನ ವ್ಯಕ್ತಿಗಳನ್ನು, ಕ್ರೀಡಾ ತಾರೆಗಳನ್ನು, ರಾಜಕೀಯ ವ್ಯವಸ್ಥೆಗಳನ್ನು ಮತ್ತು ಕೆಲವು ಧಾರ್ಮಿಕ ಮುಖಂಡರನ್ನು ಅತಿಯಾಗಿ ಗೌರವಿಸುವುದು, ಪೂಜ್ಯಭಾವದಿಂದ ಕಾಣುವುದು ಅಥವಾ ಆರಾಧಿಸುವುದು ಸರ್ವಸಾಮಾನ್ಯವಾಗಿದೆ. ಅಷ್ಟುಮಾತ್ರವಲ್ಲ, ಅನೇಕರಿಗೆ ಹಣವೇ ದೇವರಾಗಿದೆ. ಈ ವಿಗ್ರಹಗಳಲ್ಲಿ ಇಲ್ಲದಿರುವಂಥ ಗುಣಗಳು ಹಾಗೂ ಮೌಲ್ಯಗಳನ್ನು ಅವುಗಳಲ್ಲಿ ಇರುವಂತೆ ಪ್ರಸ್ತುತಪಡಿಸಲಾಗುತ್ತದೆ. ಯಾರು ಇವುಗಳಲ್ಲಿ ನಂಬಿಕೆಯಿಡುತ್ತಾರೋ ಅವರಿಂದ ನಿರೀಕ್ಷಿಸಲ್ಪಡುವುದೆಲ್ಲವನ್ನೂ ಇವು ಪೂರೈಸಲಾರವು ಮತ್ತು ಪೂರೈಸಲು ಸಾಧ್ಯವೂ ಇಲ್ಲ. ಉದಾಹರಣೆಗೆ, ಐಶ್ವರ್ಯವೇ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬಂತೆ ತೋರಬಹುದಾದರೂ, ಐಶ್ವರ್ಯವು ಒಬ್ಬನನ್ನು ವಂಚನೆಗೊಳಪಡಿಸುತ್ತದೆ. (ಮಾರ್ಕ 4:19) ಒಬ್ಬ ಸಂಶೋಧಕನು ಕೇಳಿದ್ದು: “ಅನೇಕ ಜನರು ಯಾವುದನ್ನು ತೀವ್ರಾಪೇಕ್ಷೆಯಿಂದ ಬಯಸಿ, ಅದು ಒಂದು ರೀತಿಯ ಸರ್ವ ರೋಗ ನಿವಾರಕವಾಗಿದೆಯೆಂದು ನಂಬುತ್ತಾರೋ ಆ ಸಂಗತಿಯು ಕೊನೆಗೂ ಕೈಗೂಡಿದಾಗ, ಅದು ನಿರಾಶೆಯಿಂದ ಹಿಡಿದು ನಾನಾ ವೇದನಾಮಯ ಪರಿಣಾಮಗಳನ್ನು ಏಕೆ ಉಂಟುಮಾಡುತ್ತದೆ?” ಹೌದು, ಐಶ್ವರ್ಯದ ಬೆನ್ನಟ್ಟುವಿಕೆಯು, ಒಬ್ಬ ವ್ಯಕ್ತಿಯು ಒಳ್ಳೇ ಆರೋಗ್ಯ, ಒಂದು ಸಂತೃಪ್ತ ಕುಟುಂಬ ಜೀವನ, ಆಪ್ತ ಸ್ನೇಹ ಅಥವಾ ಸೃಷ್ಟಿಕರ್ತನೊಂದಿಗಿನ ಅಮೂಲ್ಯ ಸಂಬಂಧದಂಥ ನಿಜ ಮೌಲ್ಯವುಳ್ಳ ವಿಷಯಗಳನ್ನು ತ್ಯಾಗಮಾಡುವಂತೆ ಅಗತ್ಯಪಡಿಸಬಹುದು. ಅವನ ಹಣ ಹಾಗೂ ಐಶ್ವರ್ಯವೆಂಬ ದೇವರು, ‘ಸುಳ್ಳು ವಿಗ್ರಹ’ಕ್ಕಿಂತಲೂ ಹೆಚ್ಚಿನದ್ದೇನೂ ಆಗಿರುವುದಿಲ್ಲ!—ಯೋನ 2:8.
“ಯಾವನೂ ಅವರಿಗೆ ಉತ್ತರಕೊಡಲಿಲ್ಲ”
ಯಾವುದು ನಿಜವಾಗಿಲ್ಲವೋ ಅದನ್ನು ನಿಜವೆಂದು ಕರೆಯುವುದು ಮೂರ್ಖತನವಾಗಿದೆ. ಪ್ರವಾದಿಯಾದ ಎಲೀಯನ ದಿನದಲ್ಲಿ, ಕಹಿ ಅನುಭವದ ಮೂಲಕ ಬಾಳನ ಆರಾಧಕರು ಈ ಪಾಠವನ್ನು ಕಲಿತರು. ಸ್ವರ್ಗದಿಂದ ಬೆಂಕಿಯನ್ನು ಕಳುಹಿಸಿ, ಪ್ರಾಣಿ ಯಜ್ಞವನ್ನು ದಹಿಸಿಬಿಡುವ ಶಕ್ತಿ ಬಾಳನಿಗಿದೆ ಎಂದು ಅವರು ದೃಢವಾಗಿ ನಂಬಿದ್ದರು. ವಾಸ್ತವದಲ್ಲಿ ಅವರು, “ಬಾಳನ ಹೆಸರು ಹೇಳಿ—ಬಾಳನೇ, ನಮಗೆ ಕಿವಿಗೊಡು ಎಂದು ಹೊತ್ತಾರೆಯಿಂದ ಮಧ್ಯಾಹ್ನದ ವರೆಗೆ” ಕೂಗುತ್ತಾ ಇದ್ದರು. ಕೇಳಿಸಿಕೊಳ್ಳುವಂಥ ಕಿವಿಗಳು ಹಾಗೂ ಮಾತಾಡಸಾಧ್ಯವಿರುವಂಥ ಬಾಯಿ ಬಾಳನಿಗೆ ಇತ್ತೋ? ಅದೇ ವೃತ್ತಾಂತವು ಮುಂದುವರಿಯುವುದು: “ಆಕಾಶವಾಣಿಯಾಗಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ.” ವಾಸ್ತವದಲ್ಲಿ ಯಾವನೂ “ಅವರನ್ನು ಲಕ್ಷಿಸಲಿಲ್ಲ.” (1 ಅರಸುಗಳು 18:26, 29) ಬಾಳನು ನಿಜವಾದ ದೇವರಾಗಿರಲಿಲ್ಲ, ಜೀವಂತನಾಗಿರಲಿಲ್ಲ ಅಥವಾ ಕ್ರಿಯಾಶೀಲನಾಗಿರಲಿಲ್ಲ.
ನಿಜವಾಗಿರುವ ಒಬ್ಬ ದೇವರ ಕುರಿತು ತಿಳಿದುಕೊಳ್ಳುವುದು ಮತ್ತು ಆತನನ್ನು ಆರಾಧಿಸುವುದು ಎಷ್ಟು ಅತ್ಯಗತ್ಯವಾಗಿದೆ! ಆದರೆ ಆತನು ಯಾರಾಗಿದ್ದಾನೆ? ಮತ್ತು ಆತನಲ್ಲಿ ಭರವಸೆಯಿಡುವುದು ನಮಗೆ ಹೇಗೆ ಪ್ರಯೋಜನದಾಯಕವಾಗಿರಬಲ್ಲದು?
[ಪುಟ 3ರಲ್ಲಿರುವ ಚಿತ್ರಗಳು]
ಪಿರೀಯ ಸಂಗಡಿಗನಾದ ಈಜೀನ್ಯಾ, ಭೂಭಾಗಕ್ಕಾಗಿ ದಿಗಂತವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾನೆ
ರೋಬರ್ಟ್ ಇ. ಪಿರೀ
[ಕೃಪೆ]
ಈಜೀನ್ಯಾ: From the book The North Pole: Its Discovery in 1909 Under the Auspices of the Peary Arctic Club, 1910; ರೋಬರ್ಟ್ ಈ. ಪಿರೀ: NOAA
[ಪುಟ 4ರಲ್ಲಿರುವ ಚಿತ್ರಗಳು]
ಈ ಲೋಕದಲ್ಲಿ ಯಾವುದು ಪೂಜ್ಯಭಾವದಿಂದ ಪರಿಗಣಿಸಲ್ಪಡುತ್ತದೋ ಅದರಿಂದ ಅನೇಕರು ಮೋಸಹೋಗಿದ್ದಾರೆ