ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಕಾರ್ಯಗಳು ದೇವರನ್ನು ಮಹಿಮೆಗೇರಿಸುತ್ತವೆ

ಸತ್ಕಾರ್ಯಗಳು ದೇವರನ್ನು ಮಹಿಮೆಗೇರಿಸುತ್ತವೆ

ಸತ್ಕಾರ್ಯಗಳು ದೇವರನ್ನು ಮಹಿಮೆಗೇರಿಸುತ್ತವೆ

ತ್ಯ ಕ್ರೈಸ್ತರು ತಮ್ಮ ಅತ್ಯುತ್ತಮ ನಡತೆ ಹಾಗೂ ಆದರ್ಶಪ್ರಾಯ ಕೆಲಸಗಳಿಂದ ದೇವರಿಗೆ ಮಹಿಮೆಯನ್ನು ತರುತ್ತಾರೆ. (1 ಪೇತ್ರ 2:12) ಇತ್ತೀಚಿನ ವರ್ಷಗಳಲ್ಲಿ ಇಟಲಿಯಲ್ಲಿ ಏನು ಸಂಭವಿಸಿದೆಯೋ ಅದರಿಂದ ಇದನ್ನು ನೋಡಸಾಧ್ಯವಿದೆ.

ಇಸವಿ 1997ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಮಾರ್ಷ್‌ ಹಾಗೂ ಅಂಬ್ರಿಯ ಪ್ರಾಂತಗಳ ಬೇರೆ ಬೇರೆ ಭಾಗಗಳಲ್ಲಿ ಭೀಕರ ಭೂಕಂಪವು ಸಂಭವಿಸಿತು. ಇದು ಸುಮಾರು 90,000 ಮನೆಗಳಿಗೆ ಹಾನಿಯನ್ನುಂಟುಮಾಡಿತು. ಆ ಕೂಡಲೆ ಯೆಹೋವನ ಸಾಕ್ಷಿಗಳ ಗುಂಪುಗಳು, ಜೊತೆ ವಿಶ್ವಾಸಿಗಳಿಗೆ ಮತ್ತು ಇತರರಿಗೆ ಸಹಾಯವನ್ನು ನೀಡಿದವು. ಟ್ರೈಲರ್‌ಗಳು, ಮಲಗುವ ಚೀಲಗಳು, ಸ್ಟೌವ್‌ಗಳು, ಜನರೇಟರ್‌ಗಳು ಮತ್ತು ಅಗತ್ಯವಿರುವ ಇನ್ನಿತರ ವಸ್ತುಗಳು ಅವರಿಂದ ಸರಬರಾಜುಮಾಡಲ್ಪಟ್ಟವು. ಪರಿಹಾರದ ಈ ಪ್ರಯತ್ನಗಳು ಇತರರಿಂದ ಗಮನಿಸಲ್ಪಡದೇ ಹೋಗಲಿಲ್ಲ.

ಈಲ್‌ ಕೆಂಟ್ರೊ ಎಂಬ ವಾರ್ತಾಪತ್ರಿಕೆಯು ವರದಿಸಿದ್ದು: “ಭೂಕಂಪ ಪೀಡಿತ ಕ್ಷೇತ್ರಗಳಲ್ಲಿ ಪರಿಹಾರ ಸಾಮಗ್ರಿಗಳೊಂದಿಗೆ ಆಗಮಿಸಿದವರಲ್ಲಿ [ಟೆರಾಮೊ ಪ್ರಾಂತದಲ್ಲಿರುವ] ರೊಸೆಟೋದ ಯೆಹೋವನ ಸಾಕ್ಷಿಗಳೇ ಮೊದಲಿಗರಾಗಿದ್ದರು. . . . ಯೆಹೋವನಿಗೆ ನಂಬಿಗಸ್ತರಾಗಿದ್ದ ಈ ಜನರು ಪ್ರಾಯೋಗಿಕ ರೀತಿಯಲ್ಲಿ ಕಾರ್ಯನಡಿಸಿದರು; ಈ ವಿಪತ್ತಿಗೆ ಬಲಿಯಾದವರು ಯಾವ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂಬುದರ ಕುರಿತು ಸ್ವಲ್ಪವೂ ಯೋಚಿಸದೆ, ಕಷ್ಟಾನುಭವಿಸುತ್ತಿರುವವರೆಲ್ಲರಿಗೂ ಸಹಾಯ ಹಸ್ತವನ್ನು ಚಾಚಿದರು.”

ತುಂಬ ಹಾನಿಗೊಳಗಾದ ಪಟ್ಟಣಗಳಲ್ಲಿ ಒಂದಾದ ನೋಕೇರಾ ಅಂಬ್ರಾದ ನಗರಾಧ್ಯಕ್ಷನು ಸಾಕ್ಷಿಗಳಿಗೆ ಹೀಗೆ ಪತ್ರ ಬರೆದನು: “ನೋಕೇರಾದ ಜನಸಂಖ್ಯೆಗೆ ಒದಗಿಸಲ್ಪಟ್ಟ ಸಹಾಯಕ್ಕಾಗಿ ನಾನು ಹೃತ್ಪೂರ್ವಕವಾಗಿ ಮತ್ತು ವೈಯಕ್ತಿಕವಾಗಿ ನಿಮಗೆ ಉಪಕಾರ ಸಲ್ಲಿಸುತ್ತೇನೆ. ಈ ಪಟ್ಟಣದ ಎಲ್ಲಾ ಪ್ರಜೆಗಳ ಭಾವನೆಗಳನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ ಎಂಬುದಂತೂ ನಿಶ್ಚಯ.” ಅಷ್ಟುಮಾತ್ರವಲ್ಲ, ಕಾಂಗ್ರೇಗಾಟ್‌ಸ್ಯೋನಾ ಕ್ರೀಸ್‌ಟ್ಯಾನಾ ಡೇ ಟೆಸ್ಟಿಮೋನೀ ಡೇ ಸಾಓವಾ (ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆ)ಗೆ ಗೃಹಮಂತ್ರಿಮಂಡಲವು ಯೋಗ್ಯತೆಯ ಪ್ರಮಾಣಪತ್ರವನ್ನೂ ಒಂದು ಪದಕವನ್ನೂ ಕೊಡುವ ಮೂಲಕ ಅವರನ್ನು ಸತ್ಕರಿಸಿತು. ಇದು “ಅಂಬ್ರಿಯ ಮತ್ತು ಮಾರ್ಷ್‌ ಪ್ರಾಂತಗಳಲ್ಲಿ ಆಕಸ್ಮಿಕವಾಗಿ ಎದ್ದಂತಹ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅವರು ಮಾಡಿದ ಕೆಲಸ ಹಾಗೂ ಕಾರ್ಯಶ್ರದ್ಧೆಯ ಪುರಾವೆಯಾಗಿತ್ತು.”

ಇಸವಿ 2000ದ ಅಕ್ಟೋಬರ್‌ ತಿಂಗಳಿನಲ್ಲಿ, ಉತ್ತರ ಇಟಲಿಯಲ್ಲಿರುವ ಪಿಡ್‌ಮಾಂಟ್‌ ಪ್ರಾಂತದಲ್ಲಿ ವಿಪತ್ಕಾರಕ ನೆರೆಹಾವಳಿಯುಂಟಾಯಿತು. ಪುನಃ ಒಮ್ಮೆ ಸಾಕ್ಷಿಗಳು ಸಹಾಯವನ್ನು ನೀಡಲಿಕ್ಕಾಗಿ ಒಡನೆಯೇ ಸಿದ್ಧತೆಗಳನ್ನು ಮಾಡಿಕೊಂಡರು. ಈ ಒಳ್ಳೇ ಕೆಲಸಗಳು ಸಹ ಇತರರ ದೃಷ್ಟಿಗೆ ಬೀಳದೇ ಹೋಗಲಿಲ್ಲ. “ನೆರೆಹಾವಳಿಯಿಂದ ಬಾಧಿತವಾದ ಪಿಡ್‌ಮಾಂಟ್‌ನ ಜನಸಂಖ್ಯೆಗೆ ಬೆಂಬಲ ನೀಡುವುದರಲ್ಲಿ” ಸಾಕ್ಷಿಗಳು “ಮಾಡಿದ ಅಮೂಲ್ಯ ಸ್ವಯಂ ಸೇವೆಗಾಗಿ,” ಪಿಡ್‌ಮಾಂಟ್‌ ಪ್ರಾಂತವು ಒಂದು ಅಲಂಕಾರ ಫಲಕವನ್ನು ಕೊಡುವ ಮೂಲಕ ಅವರನ್ನು ಸನ್ಮಾನಿಸಿತು.

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಉಪದೇಶ ನೀಡಿದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು [“ಮಹಿಮೆಗೇರಿಸುವರು,” NW].” (ಮತ್ತಾಯ 5:16) ತಮ್ಮ ನೆರೆಯವರಿಗೆ ಆತ್ಮಿಕವಾಗಿ ಹಾಗೂ ಇನ್ನಿತರ ವಿಧಗಳಲ್ಲಿ ಸಹಾಯಮಾಡುವ “ಒಳ್ಳೇ ಕ್ರಿಯೆಗಳ”ನ್ನು ಮಾಡುವ ಮೂಲಕ ಯೆಹೋವನ ಸಾಕ್ಷಿಗಳು, ತಮ್ಮನ್ನಲ್ಲ ಬದಲಾಗಿ ದೇವರನ್ನು ಸಂತೋಷದಿಂದ ಮಹಿಮೆಪಡಿಸುತ್ತಾರೆ.