ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತರು

ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತರು

ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತರು

“ವಯಸ್ಕರು ಬುದ್ಧಿವಂತರು ನಿಜ, ಆದರೆ ಮಕ್ಕಳು ಸಹ ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತರು.” ಇದು ನೈಜೀರಿಯ ದೇಶದ ಒಂದು ನಾಣ್ನುಡಿ. ಇದು ಸತ್ಯವೆಂಬುದನ್ನು, ನೈಜೀರಿಯದಲ್ಲಿ ಒಬ್ಬ ಕ್ರೈಸ್ತ ಹಿರಿಯನಾಗಿರುವ ಎಡ್ವಿನ್‌ ಕಂಡುಹಿಡಿದನು.

ಒಂದು ದಿನ ಮನೆಯಲ್ಲಿ ಎಡ್ವಿನ್‌ಗೆ ತನ್ನ ಮೇಜಿನಡಿಯಲ್ಲಿ ಒಂದು ಲೋಹದ ಡಬ್ಬಿ ಸಿಕ್ಕಿತು.

“ಇದು ಯಾರದು?” ಎಂದು ಎಡ್ವಿನ್‌ ತನ್ನ ಮೂರು ಮಂದಿ ಮಕ್ಕಳನ್ನು ಕೇಳಿದನು.

“ನನ್ನದು” ಎಂದು ಎಂಟು ವರ್ಷ ಪ್ರಾಯದ ಇಮಾನ್ವೆಲ್‌ ಉತ್ತರಿಸಿದನು. ಮೇಲೆ ಒಂದು ಸೀಳಿದ್ದ, ತುಕ್ಕುಹಿಡಿದಿದ್ದ, ಐದು ಇಂಚಿನ ಚೌಕಾಕಾರದ ಈ ಲೋಹದ ಡಬ್ಬಿಯು, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕಾಗಿರುವ ಕಾಣಿಕೆಗಳಿಗಾಗಿದೆ ಎಂದು ಅವನು ಕೂಡಲೇ ಹೇಳಿದನು. “ನಾನು ಪ್ರತಿ ದಿನ ರಾಜ್ಯ ಸಭಾಗೃಹಕ್ಕೆ ಹೋಗದಿರುವುದರಿಂದ, ನಾನೇ ಒಂದು ಡಬ್ಬಿಯನ್ನು ತಯಾರಿಸಿ, ನನಗೆ ತಿಂಡಿಗಾಗಿ ಕೊಡಲಾಗುವ ಹಣವನ್ನು ಉಪಯೋಗಿಸದಿದ್ದಾಗಲೆಲ್ಲ ಅದರಲ್ಲಿ ಹಾಕಬೇಕೆಂದು ಯೋಚಿಸಿದೆ” ಎಂದು ಅವನು ವಿವರಿಸಿದನು.

ವಾರ್ಷಿಕ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಹಣ ಉಳಿತಾಯ ಮಾಡಲು ಇಮಾನ್ವೆಲ್‌ನ ತಂದೆ ಮನೆಯಲ್ಲಿ ಒಂದು ಡಬ್ಬಿಯನ್ನಿಟ್ಟಿದ್ದರು. ಆದರೆ ಕುಟುಂಬದಲ್ಲಿ ಎದ್ದ ಒಂದು ತುರ್ತು ಪರಿಸ್ಥಿತಿಯಿಂದಾಗಿ ಅವರು ಅದರಲ್ಲಿದ್ದ ಹಣವನ್ನು ಉಪಯೋಗಿಸಲೇಬೇಕಾಯಿತು. ತನ್ನ ಕಾಣಿಕೆ ಹಣವು ಬೇರಾವುದೇ ಉದ್ದೇಶಕ್ಕಾಗಿ ಉಪಯೋಗಿಸಲ್ಪಡದಂತೆ ನೋಡಿಕೊಳ್ಳಲು, ಇಮಾನ್ವೆಲ್‌ ಒಂದು ಹಳೆಯ ಡಬ್ಬಿಯನ್ನು ಸೀಲ್‌ ಮಾಡಲಿಕ್ಕಾಗಿ ಒಬ್ಬ ವೆಲ್ಡರ್‌ನ ಬಳಿ ತೆಗೆದುಕೊಂಡು ಹೋದನು. ಅವನು ಈ ಡಬ್ಬಿಯನ್ನು ಯಾವುದಕ್ಕಾಗಿ ಉಪಯೋಗಿಸಲಿದ್ದಾನೆಂದು ಆ ವೆಲ್ಡರ್‌ಗೆ ತಿಳಿದುಬಂದಾಗ, ತನ್ನ ಬಳಿ ಉಳಿದಿದ್ದ ಚೂರುಪಾರು ಲೋಹದಿಂದ ಇಮಾನ್ವೆಲ್‌ಗಾಗಿ ಒಂದು ಹೊಸ ಡಬ್ಬಿಯನ್ನು ಮಾಡಿದನು. ಇಮಾನ್ವೆಲ್‌ನ ಐದು ವರ್ಷ ಪ್ರಾಯದ ತಮ್ಮನಾದ ಮೈಕಲ್‌ ಸಹ ಒಂದು ಡಬ್ಬಿಗಾಗಿ ಕೇಳಿಕೊಂಡನು.

ಮಕ್ಕಳ ಈ ಕೆಲಸವನ್ನು ನೋಡಿ ಚಕಿತರಾದ ಎಡ್ವಿನ್‌, ಅವರು ಆ ಡಬ್ಬಿಗಳನ್ನು ಏಕೆ ತಯಾರಿಸಿದ್ದರೆಂದು ಅವರನ್ನು ಕೇಳಿದನು. ಮೈಕಲ್‌ ಉತ್ತರಿಸಿದ್ದು: “ನಾನು ಕಾಣಿಕೆ ಕೊಡಲು ಬಯಸುತ್ತೇನೆ.”

ತಮ್ಮ ಹೆತ್ತವರಿಗೆ ತಿಳಿಸದೆ, ಇಮಾನ್ವೆಲ್‌, ಮೈಕಲ್‌ ಮತ್ತು ಅವರ ಒಂಬತ್ತು ವರ್ಷ ಪ್ರಾಯದ ಅಕ್ಕ ಯೂಕೀ, ತಿಂಡಿಗಾಗಿ ಎಂದು ಕೊಡಲ್ಪಟ್ಟಿರುವ ಹಣದಲ್ಲಿ ಸ್ವಲ್ಪವನ್ನು ಆ ಡಬ್ಬಿಗಳಲ್ಲಿ ಹಾಕಿ ಉಳಿತಾಯಮಾಡುತ್ತಿದ್ದರು. ಅವರಿಗೆ ಈ ವಿಚಾರ ಹೊಳೆದದ್ದು ಹೇಗೆ? ಈ ಮಕ್ಕಳು ಚಿಕ್ಕವರಾಗಿದ್ದು ತಮ್ಮ ಕೈಯಲ್ಲಿ ಏನನ್ನಾದರೂ ಹಿಡಿಯಲು ಶಕ್ತರಾದ ಕೂಡಲೇ, ಅವರ ಹೆತ್ತವರು ಅವರಿಗೆ ರಾಜ್ಯ ಸಭಾಗೃಹದಲ್ಲಿದ್ದ ಕಾಣಿಕೆ ಪೆಟ್ಟಿಗೆಯೊಳಗೆ ಸ್ವಲ್ಪ ಹಣವನ್ನು ಹಾಕುವಂತೆ ಕಲಿಸಿದ್ದರು. ಈ ಮಕ್ಕಳು ಆ ಪಾಠವನ್ನು ಚೆನ್ನಾಗಿ ಕಲಿತಿದ್ದರೆಂಬುದು ಸುವ್ಯಕ್ತ.

ಆ ಡಬ್ಬಿಗಳು ತುಂಬಿದಾಗ, ಅವುಗಳನ್ನು ತೆರೆಯಲಾಯಿತು. ಆ ಉಳಿತಾಯವು ಎಲ್ಲ ಸೇರಿಸಿ 3.13 ಡಾಲರುಗಳಷ್ಟಿತ್ತು. ವಾರ್ಷಿಕ ಸರಾಸರಿ ಸಂಬಳವು ಕೇವಲ ಕೆಲವೇ ನೂರು ಡಾಲರುಗಳಷ್ಟಾಗಿರುವ ಒಂದು ದೇಶದಲ್ಲಿ ಇದೇನೂ ಚಿಕ್ಕ ಮೊತ್ತವಲ್ಲ. ಅಂಥ ಸ್ವಯಂಪ್ರೇರಿತ ದಾನಗಳು, ಇಂದು ಲೋಕವ್ಯಾಪಕವಾಗಿ 235 ದೇಶಗಳಲ್ಲಿ ಮಾಡಲಾಗುತ್ತಿರುವ ಸಾರುವ ಕೆಲಸವನ್ನು ಬೆಂಬಲಿಸುತ್ತವೆ.