ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ಪ್ರಿಯರಾಗಿರುವವರಲ್ಲಿ ನೀವೂ ಒಬ್ಬರೋ?

ದೇವರಿಗೆ ಪ್ರಿಯರಾಗಿರುವವರಲ್ಲಿ ನೀವೂ ಒಬ್ಬರೋ?

ದೇವರಿಗೆ ಪ್ರಿಯರಾಗಿರುವವರಲ್ಲಿ ನೀವೂ ಒಬ್ಬರೋ?

“ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು.”​—ಯೋಹಾನ 14:21.

1, 2.(ಎ) ಯೆಹೋವನು ಮಾನವಕುಲದ ಕಡೆಗಿದ್ದ ತನ್ನ ಪ್ರೀತಿಯನ್ನು ಹೇಗೆ ತೋರಿಸಿದನು? (ಬಿ) ಸಾ.ಶ. 33ರ ನೈಸಾನ್‌ 14ರ ರಾತ್ರಿಯಂದು ಯೇಸು ಏನನ್ನು ಆರಂಭಿಸಿದನು?

ಯೆಹೋವನು ತನ್ನ ಮಾನವ ಸೃಷ್ಟಿಯನ್ನು ತುಂಬ ಪ್ರೀತಿಸುತ್ತಾನೆ. ವಾಸ್ತವದಲ್ಲಿ ಆತನು ಮಾನವ ಜಗತ್ತಿನ “ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ಸಮಯವು ಹತ್ತಿರವಾಗುತ್ತಿರುವಂತೆ, ಯೆಹೋವನು “ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟ”ನು ಎಂಬ ವಿಷಯದ ಕುರಿತಾಗಿ ನಾವು ಹಿಂದಿಗಿಂತಲೂ ಹೆಚ್ಚು ಪ್ರಜ್ಞೆಯುಳ್ಳವರಾಗಿರಬೇಕು.​—1 ಯೋಹಾನ 4:10.

2 ಸಾ.ಶ. 33ರ ನೈಸಾನ್‌ 14ರ ರಾತ್ರಿಯಂದು, ಯೇಸು ಮತ್ತು ಅವನ 12 ಮಂದಿ ಅಪೊಸ್ತಲರು ಯೆರೂಸಲೇಮಿನಲ್ಲಿ ಮೇಲಂತಸ್ತಿನ ಕೊಠಡಿಯಲ್ಲಿ ಕೂಡಿಬಂದರು. ಅಲ್ಲಿ ಅವರು, ಐಗುಪ್ತದಿಂದ ಇಸ್ರಾಯೇಲ್ಯರ ಬಿಡುಗಡೆಯ ಜ್ಞಾಪಕಾರ್ಥವಾಗಿ ಪಸ್ಕ ಹಬ್ಬವನ್ನು ಆಚರಿಸಿದರು. (ಮತ್ತಾಯ 26:​17-20) ಆ ಯೆಹೂದಿ ಹಬ್ಬವನ್ನು ಆಚರಿಸಿದ ನಂತರ, ಯೇಸು ಇಸ್ಕರಿಯೋತ ಯೂದನನ್ನು ಹೊರಕಳುಹಿಸಿ, ಒಂದು ಜ್ಞಾಪಕಾರ್ಥ ಭೋಜನವನ್ನು ಸಂಸ್ಥಾಪಿಸಿದನು. ಈ ಭೋಜನವೇ, ಕ್ರಿಸ್ತನ ಮರಣದ ಕ್ರೈಸ್ತ ಜ್ಞಾಪಕವಾಗಲಿತ್ತು. * ತನ್ನ ಭೌತಿಕ ದೇಹ ಮತ್ತು ರಕ್ತದ ಕುರುಹುಗಳೋಪಾದಿ, ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾರಸವನ್ನು ಉಪಯೋಗಿಸುತ್ತಾ, ತನ್ನ ಉಳಿದ 11 ಮಂದಿ ಅಪೊಸ್ತಲರು ಈ ಊಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದನು. ಇದನ್ನು ಅವನು ಹೇಗೆ ಮಾಡಿದನೆಂಬುದರ ಕುರಿತಾದ ವಿವರಗಳು, ಮತ್ತಾಯ, ಮಾರ್ಕ ಮತ್ತು ಲೂಕನಿಂದ ಹಾಗೂ ಅದನ್ನು ‘ಕರ್ತನ ಸಂಧ್ಯಾ ಭೋಜನ’ ಎಂದು ಕರೆದ ಅಪೊಸ್ತಲ ಪೌಲನಿಂದ ಕೊಡಲ್ಪಟ್ಟಿವೆ.​—1 ಕೊರಿಂಥ 11:20; ಮತ್ತಾಯ 26:​26-28; ಮಾರ್ಕ 14:​22-25; ಲೂಕ 22:​19, 20.

3. ಮೇಲಂತಸ್ತಿನ ಕೊಠಡಿಯಲ್ಲಿ ಯೇಸು ತನ್ನ ಶಿಷ್ಯರೊಂದಿಗೆ ಕಳೆದಂಥ ಕೊನೆಯ ತಾಸುಗಳ ಕುರಿತಾದ ಯೋಹಾನನ ವೃತ್ತಾಂತವು, ಬೇರೆಲ್ಲ ವೃತ್ತಾಂತಗಳಿಗಿಂತ ಯಾವ ಪ್ರಮುಖ ರೀತಿಗಳಲ್ಲಿ ಭಿನ್ನವಾಗಿದೆ?

3 ಆಸಕ್ತಿಕರ ಸಂಗತಿಯೇನೆಂದರೆ, ಅಪೊಸ್ತಲ ಯೋಹಾನನು ರೊಟ್ಟಿ ಮತ್ತು ದ್ರಾಕ್ಷಾರಸದ ದಾಟಿಸುವಿಕೆಯ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಏಕೆಂದರೆ ಅವನು ತನ್ನ ಸುವಾರ್ತಾ ವೃತ್ತಾಂತವನ್ನು ಬರೆಯುವಷ್ಟರಲ್ಲಿ (ಸುಮಾರು ಸಾ.ಶ. 98ರಷ್ಟಕ್ಕೆ) ಈ ಕಾರ್ಯವಿಧಾನವು ಆರಂಭದ ಕ್ರೈಸ್ತರೊಳಗೆ ಚೆನ್ನಾಗಿ ತಳವೂರಿದ್ದಿರಬಹುದು. (1 ಕೊರಿಂಥ 11:​23-26) ಆದರೆ, ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸುವ ಮೊದಲು ಮತ್ತು ಅನಂತರ ಏನನ್ನು ಹೇಳಿದನೊ ಅದರ ಕುರಿತಾದ ಮಹತ್ವಪೂರ್ಣ ಮಾಹಿತಿಯನ್ನು, ದೇವಪ್ರೇರಣೆಯಿಂದ ಕೇವಲ ಯೋಹಾನನೊಬ್ಬನೇ ನಮಗೆ ಒದಗಿಸಿದ್ದಾನೆ. ಈ ರೋಮಾಂಚಕ ವಿವರಗಳು ಯೋಹಾನನ ಸುವಾರ್ತೆಯಲ್ಲಿ ಐದು ಅಧ್ಯಾಯಗಳನ್ನು ಆವರಿಸುತ್ತವೆ! ದೇವರಿಗೆ ಯಾವ ರೀತಿಯ ವ್ಯಕ್ತಿಗಳು ಪ್ರಿಯರಾಗಿದ್ದಾರೆಂಬುದರ ಬಗ್ಗೆ ಈ ಅಧ್ಯಾಯಗಳು ನಮ್ಮ ಮನಸ್ಸಿನಲ್ಲಿ ಕಿಂಚಿತ್ತೂ ಸಂದೇಹವನ್ನು ಬಿಡದೆ ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸುತ್ತವೆ. ನಾವೀಗ ಯೋಹಾನ 13ರಿಂದ 17ನೆಯ ಅಧ್ಯಾಯಗಳನ್ನು ಪರೀಕ್ಷಿಸಿ ನೋಡೋಣ.

ಯೇಸುವಿನ ಆದರ್ಶಪ್ರಾಯ ಪ್ರೀತಿಯಿಂದ ಪಾಠವನ್ನು ಕಲಿಯಿರಿ

4. (ಎ) ಯೇಸು ಜ್ಞಾಪಕಾಚರಣೆಯನ್ನು ಆರಂಭಿಸಿದಾಗ ತನ್ನ ಶಿಷ್ಯರೊಂದಿಗೆ ನಡೆಸಿದ ಕೂಟದ ಮುಖ್ಯವಿಷಯವನ್ನು ಯೋಹಾನನು ಹೇಗೆ ಒತ್ತಿಹೇಳಿದನು? (ಬಿ) ಯೆಹೋವನು ಯೇಸುವನ್ನು ಪ್ರೀತಿಸಲು ಒಂದು ಮುಖ್ಯ ಕಾರಣವೇನು?

4 ಯೇಸು ತನ್ನ ಹಿಂಬಾಲಕರನ್ನು ಅಗಲಿಹೋಗುವಾಗ ಕೊಟ್ಟ ಸಲಹೆಯಿಂದ ಕೂಡಿರುವ ಈ ಅಧ್ಯಾಯಗಳಲ್ಲಿ ಪ್ರೀತಿಯು ಮುಖ್ಯವಿಷಯವಾಗಿದೆ. ವಾಸ್ತವದಲ್ಲಿ, “ಪ್ರೀತಿ” ಎಂಬ ಪದದ ವಿಭಿನ್ನ ರೂಪಗಳು ಅಲ್ಲಿ 31 ಸಲ ಕಂಡುಬರುತ್ತವೆ. ಯೇಸುವಿಗೆ ತನ್ನ ತಂದೆಯಾದ ಯೆಹೋವನಲ್ಲಿ ಮತ್ತು ತನ್ನ ಶಿಷ್ಯರಲ್ಲಿದ್ದ ಗಾಢವಾದ ಪ್ರೀತಿಯು ಈ ಅಧ್ಯಾಯಗಳಲ್ಲಿ ತೋರಿಬರುವಷ್ಟು ಸ್ಪಷ್ಟವಾಗಿ ಬೇರೆಲ್ಲೂ ತೋರಿಬರುವುದಿಲ್ಲ. ಯೆಹೋವನಿಗಾಗಿ ಯೇಸುವಿನಲ್ಲಿದ್ದ ಪ್ರೀತಿಯು, ಅವನ ಜೀವಿತದ ಕುರಿತಾದ ಎಲ್ಲ ಸುವಾರ್ತಾ ವೃತ್ತಾಂತಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಯೇಸು, “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದನ್ನು ಕೇವಲ ಯೋಹಾನನು ದಾಖಲಿಸುತ್ತಾನೆ. (ಯೋಹಾನ 14:31) ಯೆಹೋವನು ತನ್ನನ್ನು ಪ್ರೀತಿಸುತ್ತಾನೆ ಮತ್ತು ಏಕೆ ಪ್ರೀತಿಸುತ್ತಾನೆಂಬುದನ್ನು ಯೇಸು ತಿಳಿಸಿದನು. ಅವನಂದದ್ದು: “ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ. ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” (ಯೋಹಾನ 15:9, 10) ಹೌದು, ಯೆಹೋವನು ತನ್ನ ಮಗನನ್ನು ಪ್ರೀತಿಸುತ್ತಾನೆ, ಯಾಕೆಂದರೆ ಆ ಮಗನು ಸಂಪೂರ್ಣ ವಿಧೇಯತೆಯನ್ನು ತೋರಿಸುತ್ತಾನೆ. ಇದು, ಯೇಸು ಕ್ರಿಸ್ತನ ಎಲ್ಲ ಹಿಂಬಾಲಕರಿಗೆ ಎಂಥ ಒಳ್ಳೆಯ ಪಾಠವಾಗಿದೆ!

5. ಯೇಸು ತನ್ನ ಶಿಷ್ಯರಿಗಾಗಿದ್ದ ತನ್ನ ಪ್ರೀತಿಯನ್ನು ಹೇಗೆ ಪ್ರದರ್ಶಿಸಿದನು?

5 ಯೇಸುವಿಗೆ ತನ್ನ ಶಿಷ್ಯರಲ್ಲಿದ್ದ ಗಾಢವಾದ ಪ್ರೀತಿಯು, ಅವನು ತನ್ನ ಅಪೊಸ್ತಲರೊಂದಿಗೆ ನಡೆಸಿದ ಕೊನೆಯ ಕೂಟದ ಕುರಿತಾದ ಯೋಹಾನನ ವೃತ್ತಾಂತದ ಆರಂಭದಲ್ಲೇ ಎತ್ತಿತೋರಿಸಲ್ಪಟ್ಟಿದೆ. ಯೋಹಾನನು ಹೇಳಿದ್ದು: “ಪಸ್ಕಹಬ್ಬದ ಮುಂದೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂತೆಂದು ತಿಳುಕೊಂಡು ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ [“ಕೊನೆಯ ವರೆಗೂ,” NW] ಅವರನ್ನು ಪ್ರೀತಿಸುತ್ತಾ ಬಂದನು.” (ಯೋಹಾನ 13:1) ಆ ಸ್ಮರಣೀಯ ಸಾಯಂಕಾಲದಂದು, ಪ್ರೀತಿಯಿಂದ ಇತರರ ಸೇವೆ ಮಾಡುವುದರ ವಿಷಯದಲ್ಲಿ ಅವನು ಅವರಿಗೆ ಒಂದು ಮರೆಯಲಾಗದ ಪಾಠವನ್ನು ಕಲಿಸಿದನು. ಅವನು ಅವರ ಪಾದಗಳನ್ನು ತೊಳೆದನು. ಇದನ್ನು ಅವರಲ್ಲಿ ಪ್ರತಿಯೊಬ್ಬರೂ ಯೇಸುವಿಗಾಗಿ ಮತ್ತು ತಮ್ಮ ಸಹೋದರರಿಗಾಗಿ ಮಾಡಲು ಸಿದ್ಧರಾಗಿರಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಆದುದರಿಂದ, ಯೇಸುವೇ ಈ ನಮ್ರವಾದ ಕೆಲಸವನ್ನು ಮಾಡಿ, ಅನಂತರ ತನ್ನ ಶಿಷ್ಯರಿಗೆ ಹೇಳಿದ್ದು: “ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ. ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.” (ಯೋಹಾನ 13:14, 15) ಸತ್ಯ ಕ್ರೈಸ್ತರು ಸಿದ್ಧಮನಸ್ಸಿನಿಂದಲೂ ಸಂತೋಷದಿಂದಲೂ ತಮ್ಮ ಸಹೋದರರ ಸೇವೆಮಾಡುವವರಾಗಿರಬೇಕು.​—ಮತ್ತಾಯ 20:​26, 27; ಯೋಹಾನ 13:17.

ಹೊಸ ಆಜ್ಞೆಯನ್ನು ಪಾಲಿಸಿರಿ

6, 7. (ಎ) ಜ್ಞಾಪಕಾಚರಣೆಯ ಆರಂಭಿಸುವಿಕೆಯ ಕುರಿತು ಯೋಹಾನನು ಯಾವ ಪ್ರಾಮುಖ್ಯ ವಿವರವನ್ನು ಕೊಡುತ್ತಾನೆ? (ಬಿ) ಯೇಸು ತನ್ನ ಶಿಷ್ಯರಿಗೆ ಯಾವ ಹೊಸ ಆಜ್ಞೆಯನ್ನು ಕೊಟ್ಟನು, ಮತ್ತು ಅದರಲ್ಲಿ ಹೊಸದಾಗಿರುವ ಸಂಗತಿ ಏನು?

6 ನೈಸಾನ್‌ 14ರ ರಾತ್ರಿಯಂದು ಮೇಲಂತಸ್ತಿನ ಕೋಣೆಯಲ್ಲಿ ಏನು ನಡೆಯಿತೆಂಬುದರ ಕುರಿತಾದ ಯೋಹಾನನ ವೃತ್ತಾಂತವೊಂದೇ, ಇಸ್ಕರಿಯೋತ ಯೂದನ ಹೊರಟುಹೋಗುವಿಕೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ. (ಯೋಹಾನ 13:​21-30) ಸುವಾರ್ತಾ ವೃತ್ತಾಂತಗಳನ್ನು ಪರಸ್ಪರ ಹೊಂದಿಸಿ ನೋಡುವಾಗ, ಈ ವಿಶ್ವಾಸಘಾತಕನು ಹೊರಟುಹೋದ ನಂತರವೇ, ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸಿದನೆಂಬುದು ಗೊತ್ತಾಗುತ್ತದೆ. ಅನಂತರ ಅವನು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಬಹಳ ಹೊತ್ತಿನ ವರೆಗೆ ಮಾತಾಡಿ, ಅವರನ್ನು ಬೀಳ್ಕೊಡುವ ಮುಂಚೆ ಸಲಹೆ ಮತ್ತು ಸೂಚನೆಗಳನ್ನು ಕೊಟ್ಟನು. ಜ್ಞಾಪಕಾಚರಣೆಗೆ ಹಾಜರಾಗಲು ನಾವು ಸಿದ್ಧತೆಗಳನ್ನು ಮಾಡುತ್ತಿರುವಾಗ, ಯೇಸು ಆ ಸಂದರ್ಭದಲ್ಲಿ ಏನನ್ನು ಹೇಳಿದನೋ ಅದರಲ್ಲಿ ನಾವು ಇನ್ನೂ ಹೆಚ್ಚಾಗಿ ಆಸಕ್ತರಾಗಿರಬೇಕು. ಯಾಕೆಂದರೆ ದೇವರಿಗೆ ಪ್ರಿಯರಾಗಿರುವವರಲ್ಲಿ ಖಂಡಿತವಾಗಿಯೂ ನಾವೂ ಒಬ್ಬರಾಗಿರಲು ಬಯಸುತ್ತೇವೆ.

7 ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸಿದ ನಂತರ ಯೇಸು ಕೊಟ್ಟ ಮೊತ್ತಮೊದಲ ಸೂಚನೆಯು, ಒಂದು ಹೊಸ ಸಂಗತಿಯಾಗಿತ್ತು. ಅವನು ಹೀಗೆ ಘೋಷಿಸಿದನು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:34, 35) ಈ ಆಜ್ಞೆಯಲ್ಲಿ ಹೊಸ ಸಂಗತಿ ಏನಾಗಿತ್ತು? ಅದೇ ಸಾಯಂಕಾಲದಂದು ಸ್ವಲ್ಪ ಸಮಯದ ನಂತರ, ಯೇಸು ಈ ವಿಷಯವನ್ನು ಸ್ಪಷ್ಟೀಕರಿಸಿದನು. ಅವನಂದದ್ದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:12, 13) ಮೋಶೆಯ ಧರ್ಮಶಾಸ್ತ್ರದಲ್ಲಿ, ‘ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸಬೇಕು’ ಎಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸಲಾಗಿತ್ತು. (ಯಾಜಕಕಾಂಡ 19:18) ಆದರೆ ಯೇಸುವಿನ ಆಜ್ಞೆಯು ಒಂದು ಹೆಜ್ಜೆ ಮುಂದೆ ಹೋಯಿತು. ಕ್ರೈಸ್ತರು ಪರಸ್ಪರರನ್ನು, ಕ್ರಿಸ್ತನು ತಮ್ಮನ್ನು ಪ್ರೀತಿಸಿದಂತೆಯೇ ಪ್ರೀತಿಸಬೇಕಿತ್ತು. ಇದರರ್ಥ, ಅವರು ತಮ್ಮ ಸಹೋದರರಿಗಾಗಿ ತಮ್ಮ ಜೀವಗಳನ್ನೇ ಬಲಿಕೊಡಲು ಸಿದ್ಧರಾಗಿರಬೇಕಿತ್ತು.

8. (ಎ) ಸ್ವತ್ಯಾಗದ ಪ್ರೀತಿಯಲ್ಲಿ ಏನು ಒಳಗೂಡಿದೆ? (ಬಿ) ಇಂದು ಯೆಹೋವನ ಸಾಕ್ಷಿಗಳು ಸ್ವತ್ಯಾಗದ ಪ್ರೀತಿಯನ್ನು ಹೇಗೆ ತೋರಿಸುತ್ತಾರೆ?

8 ಜ್ಞಾಪಕಾಚರಣೆಯ ಸಮಯವು, ನಾವು ವೈಯಕ್ತಿಕವಾಗಿಯೂ ಸಭೆಯೋಪಾದಿಯೂ ನಮ್ಮನ್ನೇ ಪರೀಕ್ಷಿಸಿ ನೋಡಲಿಕ್ಕಾಗಿ ಸೂಕ್ತವಾದ ಸಮಯವಾಗಿದೆ. ನಿಜ ಕ್ರೈಸ್ತತ್ವದ ವಿಶಿಷ್ಟ ಗುರುತಾಗಿರುವ ಕ್ರಿಸ್ತನಂಥ ಪ್ರೀತಿಯು ನಮ್ಮಲ್ಲಿ ನಿಜವಾಗಿಯೂ ಇದೆಯೊ ಇಲ್ಲವೊ ಎಂಬುದನ್ನು ನಾವು ನೋಡಬಹುದು. ಅಂಥ ಸ್ವತ್ಯಾಗದ ಪ್ರೀತಿಯ ಅರ್ಥ, ಒಬ್ಬ ಕ್ರೈಸ್ತನು ತನ್ನ ಸಹೋದರರಿಗೆ ದ್ರೋಹಬಗೆಯುವ ಬದಲು ತನ್ನ ಸ್ವಂತ ಜೀವವನ್ನು ಅಪಾಯಕ್ಕೊಡ್ಡಲು ಸಿದ್ಧನಾಗಿರುವುದೇ ಆಗಿದೆ. ಮತ್ತು ಕೆಲವೊಮ್ಮೆ ಹೀಗೆಯೇ ನಡೆದಿದೆ ಸಹ. ಆದರೆ ಸಾಮಾನ್ಯವಾಗಿ ಇದರಲ್ಲಿ, ನಮ್ಮ ಸಹೋದರರಿಗೂ ಇತರರಿಗೂ ಸಹಾಯಮಾಡಲಿಕ್ಕಾಗಿ ಮತ್ತು ಅವರ ಸೇವೆಮಾಡಲಿಕ್ಕಾಗಿ ನಮ್ಮ ವೈಯಕ್ತಿಕ ಅಭಿರುಚಿಗಳನ್ನು ತ್ಯಾಗಮಾಡಲು ನಾವು ಸಿದ್ಧರಾಗಿರುವುದು ಒಳಗೂಡಿದೆ. ಈ ವಿಷಯದಲ್ಲಿ ಅಪೊಸ್ತಲ ಪೌಲನು ಒಂದು ಒಳ್ಳೆಯ ಮಾದರಿಯಾಗಿದ್ದಾನೆ. (2 ಕೊರಿಂಥ 12:15; ಫಿಲಿಪ್ಪಿ 2:17) ಯೆಹೋವನ ಸಾಕ್ಷಿಗಳು ತಮ್ಮ ಸಹೋದರರಿಗೆ ಮತ್ತು ನೆರೆಯವರಿಗೆ ಸಹಾಯಮಾಡುತ್ತಾ ಮತ್ತು ತಮ್ಮ ಜೊತೆಮಾನವರಿಗೆ ಬೈಬಲ್‌ ಸತ್ಯವನ್ನು ತಿಳಿಸಲಿಕ್ಕಾಗಿ ತಮ್ಮ ಸಮಯ ಹಾಗೂ ಶಕ್ತಿಯನ್ನು ಉಪಯೋಗಿಸುತ್ತಾ ತೋರಿಸುವ ಸ್ವತ್ಯಾಗದ ಮನೋಭಾವಕ್ಕಾಗಿ ಅವರು ಲೋಕದಾದ್ಯಂತ ಪ್ರಸಿದ್ಧರಾಗಿದ್ದಾರೆ. *​—ಗಲಾತ್ಯ 6:10.

ಅಮೂಲ್ಯವೆಂದೆಣಿಸಬೇಕಾದ ಸಂಬಂಧಗಳು

9. ದೇವರೊಂದಿಗೆ ಮತ್ತು ಆತನ ಪುತ್ರನೊಂದಿಗಿನ ನಮ್ಮ ಅಮೂಲ್ಯವಾದ ಸಂಬಂಧವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವೇನನ್ನು ಮಾಡಲು ಸಂತೋಷಿಸುತ್ತೇವೆ?

9 ಯೆಹೋವನು ಮತ್ತು ಆತನ ಮಗನಾದ ಯೇಸು ಕ್ರಿಸ್ತನು ನಮ್ಮನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚು ಅಮೂಲ್ಯವಾದ ಸಂಗತಿ ಬೇರೊಂದಿರಲಾರದು. ಈ ಪ್ರೀತಿಯನ್ನು ಪಡೆದು ಅನುಭವಿಸಲಿಕ್ಕಾಗಿ ನಾವೇನನ್ನೊ ಮಾಡಬೇಕು. ತನ್ನ ಶಿಷ್ಯರೊಂದಿಗಿನ ಆ ಅಂತಿಮ ರಾತ್ರಿಯಂದು ಯೇಸು ಹೇಳಿದ್ದು: “ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು; ನಾನೂ ಅವನನ್ನು ಪ್ರೀತಿಸಿ ಅವನಿಗೆ ಕಾಣಿಸಿಕೊಳ್ಳುವೆನು.” (ಯೋಹಾನ 14:21) ದೇವರೊಂದಿಗೆ ಮತ್ತು ಆತನ ಮಗನೊಂದಿಗಿನ ನಮ್ಮ ಸಂಬಂಧಕ್ಕೆ ನಾವು ಪ್ರಾಶಸ್ತ್ಯ ಕೊಡುವುದರಿಂದ, ನಾವು ಸಂತೋಷದಿಂದ ಅವರ ಆಜ್ಞೆಗಳಿಗೆ ವಿಧೇಯರಾಗುತ್ತೇವೆ. ಇದರಲ್ಲಿ, ಸ್ವತ್ಯಾಗದ ಪ್ರೀತಿಯನ್ನು ತೋರಿಸುವ ಹೊಸ ಆಜ್ಞೆಯೂ ಸೇರಿದೆ. ಅಷ್ಟುಮಾತ್ರವಲ್ಲ, ಕ್ರಿಸ್ತನು ತನ್ನ ಪುನರುತ್ಥಾನದ ಬಳಿಕ, ‘ಜನರಿಗೆ ಸಾರಿ ಸಾಕ್ಷಿಹೇಳುವಂತೆ’ ಮತ್ತು ಸುವಾರ್ತೆಯನ್ನು ಸ್ವೀಕರಿಸಿದವರನ್ನು ‘ಶಿಷ್ಯರನ್ನಾಗಿ ಮಾಡಲು’ ಪ್ರಯತ್ನಿಸುವಂತೆ ಕೊಟ್ಟ ಅಪ್ಪಣೆಯೂ ಸೇರಿದೆ.​—ಅ. ಕೃತ್ಯಗಳು 10:42; ಮತ್ತಾಯ 28:​19, 20.

10. ಅಭಿಷಿಕ್ತರಿಗೆ ಮತ್ತು “ಬೇರೆ ಕುರಿ”ಗಳಿಗೆ ಯಾವ ಅಮೂಲ್ಯ ಸಂಬಂಧಗಳು ಲಭ್ಯಗೊಳಿಸಲ್ಪಟ್ಟಿವೆ?

10 ಅದೇ ರಾತ್ರಿ, ನಂಬಿಗಸ್ತ ಅಪೊಸ್ತಲನಾದ ಯೂದನು (ತದ್ದಾಯನು) ಕೇಳಿದಂಥ ಒಂದು ಪ್ರಶ್ನೆಗೆ ಉತ್ತರವಾಗಿ ಯೇಸು ಹೇಳಿದ್ದು: “ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು, ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನ ಬಳಿಯಲ್ಲಿ ಬಿಡಾರವನ್ನು ಮಾಡಿಕೊಳ್ಳುವೆವು.” (ಯೋಹಾನ 14:​22, 23) ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲಿಕ್ಕಾಗಿ ಕರೆಯಲ್ಪಟ್ಟಿರುವ ಅಭಿಷಿಕ್ತ ಕ್ರೈಸ್ತರು, ಭೂಮಿಯಲ್ಲಿ ಇರುವಾಗಲೇ ಯೆಹೋವನೊಂದಿಗೂ ಆತನ ಪುತ್ರನೊಂದಿಗೂ ಒಂದು ವಿಶೇಷವಾದ ಆಪ್ತ ಸಂಬಂಧವನ್ನು ಹೊಂದಿರುತ್ತಾರೆ. (ಯೋಹಾನ 15:15; 16:27; 17:22; ಇಬ್ರಿಯ 3:1; 1 ಯೋಹಾನ 3:​2, 24) ಆದರೆ, ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳ ಅವರ ಸಂಗಡಿಗರಾದ “ಬೇರೆ ಕುರಿ”ಗಳಿಗೂ ತಮ್ಮ “ಒಬ್ಬನೇ ಕುರುಬ”ನಾದ ಯೇಸು ಕ್ರಿಸ್ತನೊಂದಿಗೆ ಮತ್ತು ತಮ್ಮ ದೇವರಾದ ಯೆಹೋವನೊಂದಿಗೆ ಒಂದು ಅಮೂಲ್ಯವಾದ ಸಂಬಂಧವಿದೆ. ಆದರೆ ಇದಕ್ಕಾಗಿ ಅವರು ಯಾವಾಗಲೂ ವಿಧೇಯರಾಗಿರಬೇಕು.​—ಯೋಹಾನ 10:16; ಕೀರ್ತನೆ 15:​1-5; 25:14.

‘ನೀವು ಲೋಕದ ಕಡೆಯವರಲ್ಲ’

11. ಯೇಸು ತನ್ನ ಶಿಷ್ಯರಿಗೆ ಯಾವ ಗಂಭೀರವಾದ ಎಚ್ಚರಿಕೆಯನ್ನು ಕೊಟ್ಟನು?

11 ತನ್ನ ಮರಣಕ್ಕೆ ಮುಂಚೆ ತನ್ನ ನಂಬಿಗಸ್ತ ಶಿಷ್ಯರೊಂದಿಗಿನ ತನ್ನ ಕೊನೆಯ ಕೂಟದಲ್ಲಿ ಯೇಸು ಈ ಗಂಭೀರವಾದ ಎಚ್ಚರಿಕೆಯನ್ನು ಕೊಟ್ಟನು: ಒಬ್ಬ ವ್ಯಕ್ತಿಯು ದೇವರಿಗೆ ಪ್ರಿಯನಾಗಿರುವಲ್ಲಿ, ಲೋಕವು ಅವನನ್ನು ದ್ವೇಷಿಸುವುದು. ಅವನು ಘೋಷಿಸಿದ್ದು: “ಲೋಕವು ನಿಮ್ಮ ಮೇಲೆ ದ್ವೇಷಮಾಡುವದಾದರೆ ಅದು ಮೊದಲು ನನ್ನ ಮೇಲೆ ದ್ವೇಷಮಾಡಿತೆಂದು ತಿಳುಕೊಳ್ಳಿರಿ. ನೀವು ಲೋಕದ ಕಡೆಯವರಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು; ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ. ದಣಿಗಿಂತ ಆಳು ದೊಡ್ಡವನಲ್ಲವೆಂಬದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು; ಅವರು ನನ್ನ ಮಾತನ್ನು ಕೈಕೊಂಡು ನಡೆದರೆ ನಿಮ್ಮ ಮಾತನ್ನು ಸಹ ಕೈಕೊಂಡು ನಡೆಯುವರು.”​—ಯೋಹಾನ 15:18-20.

12. (ಎ) ಈ ಲೋಕವು ತನ್ನ ಶಿಷ್ಯರನ್ನು ದ್ವೇಷಿಸುವುದೆಂದು ಯೇಸು ಅವರಿಗೆ ಎಚ್ಚರಿಕೆಯನ್ನು ಕೊಟ್ಟದ್ದೇಕೆ? (ಬಿ) ಜ್ಞಾಪಕಾಚರಣೆಯ ಸಮಯವು ಹತ್ತಿರವಾಗುತ್ತಿದ್ದಂತೆ ಎಲ್ಲರೂ ಏನನ್ನು ಪರಿಗಣಿಸುವುದು ಒಳ್ಳೇದು?

12 ಈ 11 ಮಂದಿ ಅಪೊಸ್ತಲರು ಮತ್ತು ಅವರ ನಂತರದ ಎಲ್ಲ ಸತ್ಯ ಕ್ರೈಸ್ತರು ಈ ಲೋಕದ ದ್ವೇಷದಿಂದಾಗಿ ನಿರುತ್ಸಾಹಗೊಂಡು ಪ್ರಯತ್ನವನ್ನು ಬಿಟ್ಟುಬಿಡದಂತೆ ಯೇಸು ಈ ಎಚ್ಚರಿಕೆಯನ್ನು ಕೊಟ್ಟನು. ಅವನು ಕೂಡಿಸಿದ್ದು: “ನೀವು ಧೈರ್ಯಗೆಟ್ಟು ಹಿಂಜರಿಯಬಾರದೆಂದು [“ಎಡವಿಬೀಳಬಾರದೆಂದು,” NW] ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ. ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವದರಿಂದ ಇಂಥದನ್ನು ನಿಮಗೆ ಮಾಡುವರು.” (ಯೋಹಾನ 16:1-3) ಇಲ್ಲಿ ‘ಎಡವಿಬೀಳು’ ಎಂದು ಭಾಷಾಂತರಿಸಲ್ಪಟ್ಟಿರುವ ಕ್ರಿಯಾಪದದ ಒಂದು ರೂಪದ ಅರ್ಥ, “ಒಬ್ಬನು ಯಾರಲ್ಲಿ ಭರವಸವಿಟ್ಟು ವಿಧೇಯನಾಗತಕ್ಕದ್ದೊ ಆ ವ್ಯಕ್ತಿಯನ್ನು ನಂಬದಿರುವಂತೆ ಅಥವಾ ಬಿಟ್ಟುಬಿಡುವಂತೆ ಮಾಡುವುದು, ಬೀಳಿಸಿಹಾಕುವುದು” ಆಗಿದೆಯೆಂದು ಒಂದು ಬೈಬಲ್‌ ನಿಘಂಟು ವಿವರಿಸುತ್ತದೆ. ಜ್ಞಾಪಕಾಚರಣೆಯನ್ನು ನಡೆಸುವ ಸಮಯವು ಹತ್ತಿರ ಬಂದಂತೆ, ಎಲ್ಲರೂ ಹಿಂದಿನ ಮತ್ತು ಸದ್ಯದ ನಂಬಿಗಸ್ತ ವ್ಯಕ್ತಿಗಳ ಜೀವನ ಕ್ರಮದ ಕುರಿತಾಗಿ ಯೋಚಿಸುವುದು ಮತ್ತು ಸಂಕಷ್ಟದ ಕೆಳಗೂ ಅವರಿಟ್ಟ ಸ್ಥಿರಚಿತ್ತತೆಯ ಮಾದರಿಯನ್ನು ಅನುಕರಿಸುವುದು ಒಳ್ಳೇದು. ವಿರೋಧವಾಗಲಿ, ಹಿಂಸೆಯಾಗಲಿ ನೀವು ಯೆಹೋವನನ್ನು ಮತ್ತು ಯೇಸುವನ್ನು ಬಿಟ್ಟುಬಿಡುವಂತೆ ಅನುಮತಿಸಬೇಡಿ ಮತ್ತು ಅವರ ಮೇಲೆ ಭರವಸೆಯಿಟ್ಟು, ಅವರಿಗೆ ವಿಧೇಯರಾಗುವ ದೃಢಸಂಕಲ್ಪವನ್ನು ಮಾಡಿರಿ.

13. ಯೇಸು ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ತನ್ನ ಹಿಂಬಾಲಕರ ಪರವಾಗಿ ಏನನ್ನು ವಿನಂತಿಸಿದನು?

13 ಯೆರೂಸಲೇಮಿನಲ್ಲಿ ಮೇಲಂತಸ್ತಿನ ಕೋಣೆಯಿಂದ ಹೊರಡುವ ಮುಂಚೆ ತನ್ನ ಸಮಾಪ್ತಿ ಪ್ರಾರ್ಥನೆಯಲ್ಲಿ ಯೇಸು ತನ್ನ ತಂದೆಗೆ ಹೇಳಿದ್ದು: “ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:14-16) ಯೆಹೋವನು ಯಾರನ್ನು ಪ್ರೀತಿಸುತ್ತಾನೊ ಅವರು ಲೋಕದಿಂದ ತಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳುವಾಗ ಅವರನ್ನು ಬಲಪಡಿಸಲಿಕ್ಕಾಗಿ ಆತನು ಅವರ ಮೇಲೆ ಕಾವಲಿಡುತ್ತಾನೆ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ.​—ಯೆಶಾಯ 40:​29-31.

ತಂದೆಯ ಮತ್ತು ಮಗನ ಪ್ರೀತಿಯಲ್ಲಿ ಉಳಿಯಿರಿ

14, 15. (ಎ) ‘ಅವನತಿಹೊಂದುತ್ತಿರುವ ದ್ರಾಕ್ಷಾಲತೆಗೆ’ ತುಲನೆಯಲ್ಲಿ ಯೇಸು ತನ್ನನ್ನೇ ಯಾವುದಕ್ಕೆ ಹೋಲಿಸಿಕೊಂಡನು? (ಬಿ) ಆ ‘ನಿಜವಾದ ದ್ರಾಕ್ಷೇಬಳ್ಳಿಯ’ ‘ಕೊಂಬೆಗಳು’ ಯಾರು?

14 ನೈಸಾನ್‌ 14ರ ರಾತ್ರಿಯಂದು ಯೇಸು ತನ್ನ ನಂಬಿಗಸ್ತ ಶಿಷ್ಯರೊಂದಿಗೆ ನಡೆಸಿದ ಆಪ್ತವಾದ ಸಂಭಾಷಣೆಯಲ್ಲಿ, ಅವನು ತನ್ನನ್ನು ‘ನಿಜವಾದ ದ್ರಾಕ್ಷೇಬಳ್ಳಿಗೆ’ ಹೋಲಿಸಿಕೊಂಡನು. ಇದು, ಅಪನಂಬಿಗಸ್ತ ಇಸ್ರಾಯೇಲ್‌ ಎಂಬ ‘ಕೆಟ್ಟ ದ್ರಾಕ್ಷೇಬಳ್ಳಿ’ಗಿಂತ ಭಿನ್ನವಾಗಿದೆ. ಅವನಂದದ್ದು: “ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆ ತೋಟಗಾರನು.” (ಯೋಹಾನ 15:1) ಅನೇಕ ಶತಮಾನಗಳ ಹಿಂದೆ, ಯೆಹೋವನು ತನ್ನ ಪಥಭ್ರಷ್ಟ ಜನರಿಗೆ ಹೇಳಿದ ಈ ಮಾತುಗಳನ್ನು ಪ್ರವಾದಿಯಾದ ಯೆರೆಮೀಯನು ದಾಖಲಿಸಿದ್ದನು: “ನಾನು ನಿನ್ನನ್ನು . . . ಒಳ್ಳೆಯ ದ್ರಾಕ್ಷಾಲತೆಯನ್ನಾಗಿ ನೆಟ್ಟಿರಲು ನೀನು ನನಗೆ ಕಾಡುದ್ರಾಕ್ಷೇಬಳ್ಳಿಯ ಕೆಟ್ಟ ರೆಂಬೆಗಳಾದದ್ದೇನು?” (ಯೆರೆಮೀಯ 2:21) ಮತ್ತು ಪ್ರವಾದಿಯಾದ ಹೋಶೇಯನು ಬರೆದುದು: “ಇಸ್ರಾಯೇಲು ಅವನತಿಹೊಂದುತ್ತಿರುವ ದ್ರಾಕ್ಷಾಲತೆಯಾಗಿದೆ; ಅವನು ತನಗಾಗಿಯೇ ಫಲವನ್ನು ಉತ್ಪಾದಿಸಿದ್ದಾನೆ; . . . ಅವರ ಹೃದಯವು ಕಪಟವಾಗಿಬಿಟ್ಟಿದೆ.”​—ಹೋಶೇಯ 10:1, 2, NW.

15 ಸತ್ಯಾರಾಧನೆಯ ಫಲವನ್ನು ಉತ್ಪಾದಿಸುವ ಬದಲು, ಇಸ್ರಾಯೇಲ್‌ ಜನಾಂಗವು ಧರ್ಮಭ್ರಷ್ಟವಾಯಿತು ಮತ್ತು ತನಗಾಗಿಯೇ ಫಲವನ್ನು ಉತ್ಪಾದಿಸಿತು. ತನ್ನ ನಂಬಿಗಸ್ತ ಶಿಷ್ಯರೊಂದಿಗಿನ ತನ್ನ ಕೊನೆಯ ಕೂಟದ ಮೂರು ದಿನಗಳಿಗೆ ಮುಂಚೆ, ಯೇಸು ಕಪಟಿ ಯೆಹೂದಿ ಮುಖಂಡರಿಗೆ ಹೇಳಿದ್ದು: “ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.” (ಮತ್ತಾಯ 21:43) ಆ ಹೊಸ ಜನಾಂಗವು ‘ದೇವರ ಇಸ್ರಾಯೇಲ್‌’ ಆಗಿದ್ದು, 1,44,000 ಮಂದಿ ಅಭಿಷಿಕ್ತ ಕ್ರೈಸ್ತರಿಂದ ರಚಿಸಲ್ಪಟ್ಟಿದೆ ಮತ್ತು ಯೇಸು ಕ್ರಿಸ್ತನೆಂಬ ‘ನಿಜ ದ್ರಾಕ್ಷೇಬಳ್ಳಿಯ’ ‘ಕೊಂಬೆಗಳಿಗೆ’ ಹೋಲಿಸಲ್ಪಟ್ಟಿದೆ.​—ಗಲಾತ್ಯ 6:16; ಯೋಹಾನ 15:5; ಪ್ರಕಟನೆ 14:​1, 3.

16. ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರು ಏನನ್ನು ಮಾಡುವಂತೆ ಯೇಸು ಪ್ರೇರಿಸಿದನು, ಮತ್ತು ಈ ಅಂತ್ಯಕಾಲದಲ್ಲಿರುವ ನಂಬಿಗಸ್ತ ಉಳಿಕೆಯವರ ವಿಷಯದಲ್ಲಿ ಏನನ್ನು ಹೇಳಸಾಧ್ಯವಿದೆ?

16 ಆ ಮೇಲಂತಸ್ತಿನ ಕೋಣೆಯಲ್ಲಿ ತನ್ನೊಂದಿಗೆ ಉಪಸ್ಥಿತರಿದ್ದ 11 ಮಂದಿ ಅಪೊಸ್ತಲರಿಗೆ ಯೇಸು ಹೇಳಿದ್ದು: “ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ. ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.” (ಯೋಹಾನ 15:2, 4) ಅಭಿಷಿಕ್ತ ಕ್ರೈಸ್ತರ ನಂಬಿಗಸ್ತ ಉಳಿಕೆಯವರು, ತಮ್ಮ ತಲೆಯಾಗಿರುವ ಯೇಸು ಕ್ರಿಸ್ತನೊಂದಿಗೆ ನೆಲೆಗೊಂಡಿದ್ದಾರೆ ಎಂಬುದನ್ನು ಯೆಹೋವನ ಜನರ ಆಧುನಿಕ ಇತಿಹಾಸವು ತೋರಿಸುತ್ತದೆ. (ಎಫೆಸ 5:23) ಅವರು ಶುದ್ಧೀಕರಣವನ್ನೂ ಪರಿಷ್ಕರಿಸುವಿಕೆಯನ್ನೂ ಅಂಗೀಕರಿಸಿದ್ದಾರೆ. (ಮಲಾಕಿಯ 3:​2, 3) 1919ರಂದಿನಿಂದ, ಅವರು ಹೇರಳವಾಗಿ ರಾಜ್ಯ ಫಲವನ್ನು​—ಮೊದಲು ಅಭಿಷಿಕ್ತ ಕ್ರೈಸ್ತರನ್ನು ಮತ್ತು 1935ರಂದಿನಿಂದ ಹೆಚ್ಚೆಚ್ಚಾಗುತ್ತಿರುವ “ಮಹಾ ಸಮೂಹ”ದ ಸಂಗಡಿಗರನ್ನು​—ಉತ್ಪಾದಿಸಿದ್ದಾರೆ.​—ಪ್ರಕಟನೆ 7:9; ಯೆಶಾಯ 60:​4, 8-11.

17, 18. (ಎ) ಯೇಸುವಿನ ಯಾವ ಮಾತುಗಳು ಅಭಿಷಿಕ್ತರಿಗೆ ಮತ್ತು ಬೇರೆ ಕುರಿಗಳವರಿಗೆ ಯೆಹೋವನ ಪ್ರೀತಿಯಲ್ಲಿ ಉಳಿಯುವಂತೆ ಸಹಾಯಮಾಡುತ್ತವೆ? (ಬಿ) ಜ್ಞಾಪಕಾಚರಣೆಗೆ ಹಾಜರಾಗುವುದು ನಮಗೆ ಹೇಗೆ ಸಹಾಯಮಾಡುವುದು?

17 ಎಲ್ಲ ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಡಿಗರಿಗೆ, ಯೇಸುವಿನ ಈ ಮುಂದಿನ ಮಾತುಗಳು ಅನ್ವಯವಾಗುತ್ತವೆ: “ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ. ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ. ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.”​—ಯೋಹಾನ 15:8-10.

18 ನಾವೆಲ್ಲರೂ ದೇವರ ಪ್ರೀತಿಯಲ್ಲಿ ಉಳಿಯಲು ಬಯಸುತ್ತೇವೆ, ಮತ್ತು ಇದು ನಾವು ಫಲಭರಿತ ಕ್ರೈಸ್ತರಾಗಿರುವಂತೆ ಪ್ರೇರಿಸುತ್ತದೆ. ‘ರಾಜ್ಯದ ಸುವಾರ್ತೆಯನ್ನು’ ಸಾರುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿಕೊಳ್ಳುವ ಮೂಲಕ ನಾವಿದನ್ನು ಮಾಡುತ್ತೇವೆ. (ಮತ್ತಾಯ 24:14) ನಮ್ಮ ವೈಯಕ್ತಿಕ ಜೀವಿತಗಳಲ್ಲಿ ‘ಆತ್ಮದ ಫಲಗಳನ್ನು’ ಉತ್ಪಾದಿಸಲು ನಮ್ಮಿಂದಾದುದೆಲ್ಲವನ್ನೂ ನಾವು ಮಾಡುತ್ತೇವೆ. (ಗಲಾತ್ಯ 5:​22, 23) ಇದನ್ನು ಮಾಡುವ ನಮ್ಮ ದೃಢಸಂಕಲ್ಪವು, ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗುವುದರಿಂದ ಇನ್ನಷ್ಟು ಬಲಗೊಳ್ಳುವುದು. ಯಾಕೆಂದರೆ ಅಲ್ಲಿ ದೇವರಿಗೆ ಮತ್ತು ಕ್ರಿಸ್ತನಿಗೆ ನಮ್ಮ ಕಡೆಗಿರುವ ಮಹಾ ಪ್ರೀತಿಯ ಕುರಿತಾಗಿ ಜ್ಞಾಪಕಹುಟ್ಟಿಸಲಾಗುವುದು.​—2 ಕೊರಿಂಥ 5:​14, 15.

19. ಮುಂದಿನ ಲೇಖನದಲ್ಲಿ ಯಾವ ಹೆಚ್ಚಿನ ಸಹಾಯದ ಕುರಿತಾಗಿ ಚರ್ಚಿಸಲಾಗುವುದು?

19 ಜ್ಞಾಪಕಾಚರಣೆಯನ್ನು ಆರಂಭಿಸಿದ ನಂತರ ಯೇಸು, ತನ್ನ ತಂದೆಯು ತನ್ನ ನಂಬಿಗಸ್ತ ಹಿಂಬಾಲಕರಿಗೆ ‘ಸಹಾಯಕನನ್ನು ಅಂದರೆ ಪವಿತ್ರಾತ್ಮವನ್ನು’ ಕಳುಹಿಸುವನೆಂದು ಮಾತುಕೊಟ್ಟಿದ್ದನು. (ಯೋಹಾನ 14:26) ಅಭಿಷಿಕ್ತರೂ ಬೇರೆ ಕುರಿಗಳೂ ಯೆಹೋವನ ಪ್ರೀತಿಯಲ್ಲಿ ಉಳಿಯುವಂತೆ ಈ ಆತ್ಮವು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 2 ಬೈಬಲ್‌ ಕಾಲಗಣನೆಗನುಸಾರ, 2002ನೆಯ ಇಸವಿಯಲ್ಲಿ ನೈಸಾನ್‌ 14, ಮಾರ್ಚ್‌ 28ರ ಗುರುವಾರ ಸೂರ್ಯಾಸ್ತಮಾನದ ನಂತರ ಆರಂಭವಾಗುತ್ತದೆ. ಆ ಸಾಯಂಕಾಲದಂದು ಲೋಕದಾದ್ಯಂತ ಯೆಹೋವನ ಸಾಕ್ಷಿಗಳು ಕರ್ತನಾದ ಯೇಸು ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ಕೂಡಿಬರುವರು.

ಪುನರ್ವಿಮರ್ಶೆಯ ಪ್ರಶ್ನೆಗಳು

• ಪ್ರೀತಿಯಿಂದ ಸೇವೆಮಾಡುವ ವಿಷಯದಲ್ಲಿ ಯೇಸು ತನ್ನ ಶಿಷ್ಯರಿಗೆ ಯಾವ ವ್ಯಾವಹಾರಿಕ ಪಾಠವನ್ನು ಕಲಿಸಿದನು?

• ಜ್ಞಾಪಕಾಚರಣೆಯ ಸಮಯಾವಧಿಯು, ಯಾವುದರ ಸಂಬಂಧದಲ್ಲಿ ಸ್ವಪರಿಶೀಲನೆಯನ್ನು ಮಾಡುವ ಸೂಕ್ತ ಸಮಯವಾಗಿದೆ?

• ಲೋಕದಲ್ಲಿನ ದ್ವೇಷ ಮತ್ತು ಹಿಂಸೆಯ ಕುರಿತಾದ ಯೇಸುವಿನ ಎಚ್ಚರಿಕೆಯ ಬಗ್ಗೆ ನಾವೇಕೆ ಎಡವಿಬೀಳಬಾರದು?

• ‘ನಿಜವಾದ ದ್ರಾಕ್ಷೇಬಳ್ಳಿ’ ಯಾರು? ‘ಕೊಂಬೆಗಳು’ ಯಾರು, ಮತ್ತು ಅವರಿಂದ ಏನನ್ನು ನಿರೀಕ್ಷಿಸಲಾಗಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಪ್ರೀತಿಯಿಂದ ಸೇವೆಮಾಡುವುದರ ಕುರಿತು ಯೇಸು ತನ್ನ ಅಪೊಸ್ತಲರಿಗೆ ಮರೆಯಲಾಗದ ಒಂದು ಪಾಠವನ್ನು ಕಲಿಸಿದನು

[ಪುಟ 16, 17ರಲ್ಲಿರುವ ಚಿತ್ರಗಳು]

ಸ್ವತ್ಯಾಗದ ಪ್ರೀತಿಯನ್ನು ತೋರಿಸಬೇಕೆಂಬ ಕ್ರಿಸ್ತನ ಆಜ್ಞೆಯನ್ನು ಅವನ ಶಿಷ್ಯರು ಪಾಲಿಸುತ್ತಾರೆ