ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ಸತ್ಯದ ಆತ್ಮವನ್ನು’ ಪಡೆದುಕೊಂಡಿದ್ದೀರೊ?

ನೀವು ‘ಸತ್ಯದ ಆತ್ಮವನ್ನು’ ಪಡೆದುಕೊಂಡಿದ್ದೀರೊ?

ನೀವು ‘ಸತ್ಯದ ಆತ್ಮವನ್ನು’ ಪಡೆದುಕೊಂಡಿದ್ದೀರೊ?

“ತಂದೆ . . . ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ.”—ಯೋಹಾನ 14:16, 17.

1. ಮೇಲಂತಸ್ತಿನ ಕೊಠಡಿಯಲ್ಲಿ ತನ್ನ ಕೊನೆಯ ತಾಸುಗಳಲ್ಲಿ ಯೇಸು ತನ್ನ ಶಿಷ್ಯರಿಗೆ ಯಾವ ಪ್ರಾಮುಖ್ಯ ಮಾಹಿತಿಯನ್ನು ಕೊಟ್ಟನು?

“ಸ್ವಾಮೀ, ಎಲ್ಲಿಗೆ ಹೋಗುತ್ತೀ?” ಇದು, ಯೇಸು ಯೆರೂಸಲೇಮಿನಲ್ಲಿನ ಮೇಲಂತಸ್ತಿನ ಕೊಠಡಿಯೊಂದರಲ್ಲಿ ತನ್ನ ಅಪೊಸ್ತಲರೊಂದಿಗೆ ಕಳೆದ ಕೊನೆಯ ತಾಸುಗಳಲ್ಲಿ ಅವರು ಕೇಳಿದಂಥ ಪ್ರಶ್ನೆಗಳಲ್ಲಿ ಒಂದಾಗಿತ್ತು. (ಯೋಹಾನ 13:36) ಈ ಕೂಟವು ನಡೆಯುತ್ತಾ ಇದ್ದಾಗ, ಅವರನ್ನು ಬಿಟ್ಟು ತಾನೀಗ ತನ್ನ ತಂದೆಯ ಬಳಿ ಹಿಂದಿರುಗುವ ಸಮಯ ಬಂದಿದೆಯೆಂದು ಯೇಸು ಅವರಿಗೆ ತಿಳಿಸಿದನು. (ಯೋಹಾನ 14:28; 16:28) ಅವರಿಗೆ ಉಪದೇಶ ನೀಡಲು ಮತ್ತು ಅವರ ಪ್ರಶ್ನೆಗಳನ್ನು ಉತ್ತರಿಸಲು ಅವನು ಇನ್ನು ಮುಂದೆ ಅವರೊಂದಿಗೆ ಶಾರೀರಿಕವಾಗಿ ಉಪಸ್ಥಿತನಿರುವುದಿಲ್ಲ. ಆದರೆ ಅವನು ಅವರಿಗೆ ಪುನರಾಶ್ವಾಸನೆಯನ್ನು ನೀಡುತ್ತಾ, ಹೀಗಂದನು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು [ಇಲ್ಲವೇ, “ಸಾಂತ್ವನಗಾರನನ್ನು”] ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.”​—ಯೋಹಾನ 14:​16, NW ಪಾದಟಿಪ್ಪಣಿ.

2. ತಾನು ಹೊರಟುಹೋದ ನಂತರ ಯೇಸು ತನ್ನ ಶಿಷ್ಯರಿಗೆ ಏನನ್ನು ಕಳುಹಿಸುವನೆಂದು ಮಾತುಕೊಟ್ಟನು?

2 ಆ ಸಹಾಯಕನು ಯಾರು ಎಂಬುದನ್ನು ಯೇಸು ಗುರುತಿಸಿದನು ಮತ್ತು ಅದು ಅವನ ಶಿಷ್ಯರಿಗೆ ಹೇಗೆ ನೆರವು ನೀಡುವುದೆಂದು ವಿವರಿಸಿದನು. ಅವನು ಅವರಿಗೆ ಹೇಳಿದ್ದು: “ನಾನು ನಿಮ್ಮ ಸಂಗಡ ಇದ್ದದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ. ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. . . . ನಾನು ಹೋಗುವದು ನಿಮಗೆ ಹಿತಕರವಾಗಿದೆ; ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ. ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು.”​—ಯೋಹಾನ 16:4, 5, 7, 13.

3. (ಎ) ‘ಸತ್ಯದ ಆತ್ಮವು’ ಆರಂಭದ ಕ್ರೈಸ್ತರಿಗೆ ಯಾವಾಗ ಕಳುಹಿಸಲ್ಪಟ್ಟಿತು? (ಬಿ) ಆತ್ಮವು ಅವರಿಗೆ ‘ಸಹಾಯಕನಾಗಿದ್ದ’ ಒಂದು ಪ್ರಮುಖ ವಿಧವು ಯಾವುದು?

3 ಈ ವಾಗ್ದಾನವು ಸಾ.ಶ. 33ನೆಯ ಪಂಚಾಶತ್ತಮದಂದು ನೆರವೇರಿತು. ಇದಕ್ಕೆ ಅಪೊಸ್ತಲ ಪೇತ್ರನು ಸಾಕ್ಷಿಕೊಟ್ಟದ್ದು: “ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. ಆತನು ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟು ವಾಗ್ದಾನವಾಗಿದ್ದ ಪವಿತ್ರಾತ್ಮವರವನ್ನು ತಂದೆಯಿಂದ ಹೊಂದಿ ನೀವು ನೋಡಿ ಕೇಳುವದನ್ನು ಸುರಿಸಿದ್ದಾನೆ.” (ಅ. ಕೃತ್ಯಗಳು 2:32, 33) ನಾವು ಮುಂದೆ ನೋಡಲಿರುವಂತೆ, ಪಂಚಾಶತ್ತಮದಂದು ಸುರಿಸಲ್ಪಟ್ಟ ಈ ಪವಿತ್ರಾತ್ಮವು ಆರಂಭದ ಕ್ರೈಸ್ತರಿಗಾಗಿ ಅನೇಕ ವಿಷಯಗಳನ್ನು ಪೂರೈಸಿತು. ಆದರೆ ‘ಸತ್ಯದ ಆತ್ಮವು,’ ‘ತಾನು ಅವರಿಗೆ ಹೇಳಿದ್ದನ್ನೆಲ್ಲಾ ಅವರ ನೆನಪಿಗೆ ತರುವುದು’ ಎಂದು ಯೇಸು ವಾಗ್ದಾನಿಸಿದ್ದನು. (ಯೋಹಾನ 14:26) ಅವರು ಯೇಸುವಿನ ಶುಶ್ರೂಷೆ ಮತ್ತು ಬೋಧನೆಗಳನ್ನು, ಹಾಗೂ ಅವನು ಹೇಳಿದ ಮಾತುಗಳನ್ನೇ ನೆನಪಿನಲ್ಲಿಡುವಂತೆ ಮತ್ತು ಇವುಗಳನ್ನು ಬರೆದಿಡುವಂತೆ ಅದು ಅವರನ್ನು ಶಕ್ತಗೊಳಿಸಲಿತ್ತು. ಇದು ವಿಶೇಷವಾಗಿ ಅಪೊಸ್ತಲ ಯೋಹಾನನಿಗೆ ಸಾ.ಶ. ಒಂದನೆಯ ಶತಮಾನದ ಅಂತ್ಯದಲ್ಲಿ ಸಹಾಯಕಾರಿಯಾಗಿತ್ತು. ಯಾಕೆಂದರೆ ಆಗ ಅವನು ತನ್ನ ಸುವಾರ್ತಾ ವೃತ್ತಾಂತವನ್ನು ಬರೆಯಲಾರಂಭಿಸಿದ್ದನು. ಮತ್ತು ಈ ವೃತ್ತಾಂತದಲ್ಲೇ, ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸುವ ಮುಂಚೆ ಕೊಟ್ಟ ಅಮೂಲ್ಯವಾದ ಸಲಹೆಯು ಇದೆ.​—ಯೋಹಾನ, 13-17ನೆಯ ಅಧ್ಯಾಯಗಳು.

4. ‘ಸತ್ಯದ ಆತ್ಮವು’ ಆರಂಭದ ಅಭಿಷಿಕ್ತ ಕ್ರೈಸ್ತರಿಗೆ ಹೇಗೆ ಸಹಾಯಮಾಡಿತು?

4 ಆ ಆತ್ಮವು ‘ಅವರಿಗೆ ಎಲ್ಲ ಸಂಗತಿಗಳನ್ನು ಕಲಿಸುವುದು,’ ಮತ್ತು ‘ಅವರನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವುದು’ ಎಂದೂ ಯೇಸು ಮಾತುಕೊಟ್ಟಿದ್ದನು. ಅವರು ಶಾಸ್ತ್ರಗಳ ಹೆಚ್ಚು ಆಳವಾದ ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ತಮ್ಮ ವಿಚಾರ, ತಿಳಿವಳಿಕೆ ಹಾಗೂ ಉದ್ದೇಶದಲ್ಲಿ ಐಕ್ಯವನ್ನು ಕಾಪಾಡಿಕೊಳ್ಳುವಂತೆ ಆ ಆತ್ಮವು ಅವರಿಗೆ ಸಹಾಯಮಾಡಲಿತ್ತು. (1 ಕೊರಿಂಥ 2:10; ಎಫೆಸ 4:3) ಈ ರೀತಿಯಲ್ಲಿ, ಒಬ್ಬೊಬ್ಬ ಅಭಿಷಿಕ್ತ ಕ್ರೈಸ್ತನೂ ಆತ್ಮಿಕವಾಗಿ ‘ಹೊತ್ತುಹೊತ್ತಿಗೆ ಆಹಾರವನ್ನು’ ಸರಬರಾಯಿಮಾಡಲು, ಆ ಪವಿತ್ರಾತ್ಮವು ಆ ಆರಂಭದ ಕ್ರೈಸ್ತರನ್ನು ಸಾಮೂಹಿಕವಾಗಿ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಾಗಿ’ ಸೇವೆಮಾಡಲು ಶಕ್ತಗೊಳಿಸಿತು.​—ಮತ್ತಾಯ 24:45.

ಪವಿತ್ರಾತ್ಮವು ಸಾಕ್ಷಿಕೊಡುತ್ತದೆ

5. (ಎ) ಸಾ.ಶ. 33 ನೈಸಾನ್‌ 14ರ ರಾತ್ರಿಯಂದು ಯೇಸು ತನ್ನ ಶಿಷ್ಯರಿಗೆ ಯಾವ ಹೊಸ ಪ್ರತೀಕ್ಷೆಯನ್ನು ತೆರೆದನು? (ಬಿ) ಯೇಸುವಿನ ವಾಗ್ದಾನವನ್ನು ನೆರವೇರಿಸುವುದರಲ್ಲಿ ಪವಿತ್ರಾತ್ಮದ ಪಾತ್ರವೇನು?

5 ಸಾ.ಶ. 33ರ ನೈಸಾನ್‌ 14ರ ರಾತ್ರಿಯಂದು, ಯೇಸು ತನ್ನ ಶಿಷ್ಯರಿಗೆ ಪರೋಕ್ಷವಾಗಿ ಸೂಚಿಸಿದ್ದೇನೆಂದರೆ, ಅವನು ಅವರನ್ನು ಸಮಯಾನಂತರ ಸ್ವರ್ಗಕ್ಕೆ ಬರಮಾಡುವನು ಮತ್ತು ಅವರು ಅವನೊಂದಿಗೂ ಅವನ ತಂದೆಯೊಂದಿಗೂ ಅಲ್ಲಿ ವಾಸಿಸುವರು. ಅವನು ಅವರಿಗೆ ಹೇಳಿದ್ದು: “ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; ಇಲ್ಲದಿದ್ದರೆ ನಿಮಗೆ ಹೇಳುತ್ತಿದ್ದೆನು; ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.” (ಯೋಹಾನ 13:36; 14:2, 3) ಅವರು ಅವನೊಂದಿಗೆ ಅವನ ರಾಜ್ಯದಲ್ಲಿ ಆಳುವರು. (ಲೂಕ 22:​28-30) ಈ ಸ್ವರ್ಗೀಯ ನಿರೀಕ್ಷೆಯನ್ನು ಹೊಂದಲಿಕ್ಕಾಗಿ, ಅವರು ದೇವರ ಆತ್ಮಿಕ ಪುತ್ರರಾಗಿ ‘ಆತ್ಮದಿಂದ ಹುಟ್ಟಿದವ’ರಾಗಿ, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ರಾಜರಾಗಿಯೂ ಯಾಜಕರಾಗಿಯೂ ಸೇವೆಸಲ್ಲಿಸಲು ಅಭಿಷಿಕ್ತರಾಗಬೇಕಾಗುವುದು.​—ಯೋಹಾನ 3:​5-8; 2 ಕೊರಿಂಥ 1:​21, 22; ತೀತ 3:​5-7; 1 ಪೇತ್ರ 1:​3, 4; ಪ್ರಕಟನೆ 20:6.

6. (ಎ) ಪರಲೋಕಸ್ವಾಸ್ಥ್ಯಕ್ಕಾಗಿ ಕರೆಯು ಯಾವಾಗ ಆರಂಭವಾಯಿತು, ಮತ್ತು ಎಷ್ಟು ಜನರು ಈ ಕರೆಯನ್ನು ಪಡೆದುಕೊಂಡರು? (ಬಿ) ಕರೆಯಲ್ಪಟ್ಟವರನ್ನು ಯಾವುದರೊಳಗೆ ದೀಕ್ಷಾಸ್ನಾನಮಾಡಿಸಲಾಗಿದೆ?

6 ‘ಪರಲೋಕಸ್ವಾಸ್ಥ್ಯಕ್ಕಾಗಿರುವ ಈ ಕರೆಯು’ ಸಾ.ಶ. 33ರ ಪಂಚಾಶತ್ತಮದಂದು ಆರಂಭವಾಯಿತು ಮತ್ತು ಇದು ಮುಖ್ಯವಾಗಿ 1930ನೆಯ ದಶಕದ ಮಧ್ಯಭಾಗದಲ್ಲಿ ಕೊನೆಗೊಂಡಿರುವಂತೆ ತೋರುತ್ತದೆ. (ಇಬ್ರಿಯ 3:1) ಆತ್ಮಿಕ ಇಸ್ರಾಯೇಲಿನ ಭಾಗವಾಗಿರಲು ಪವಿತ್ರಾತ್ಮದಿಂದ ಮುದ್ರೆಯೊತ್ತಲ್ಪಟ್ಟವರ ಸಂಖ್ಯೆಯು 1,44,000 ಆಗಿದೆ. ಇವರನ್ನು ‘ಭೂಲೋಕದೊಳಗಿಂದ ಕೊಂಡುಕೊಳ್ಳಲಾಗಿದೆ.’ (ಪ್ರಕಟನೆ 7:4; 14:​1-4) ಇವರನ್ನು ಕ್ರಿಸ್ತನ ಆತ್ಮಿಕ ದೇಹದಲ್ಲಿ, ಅವನ ಸಭೆಯಲ್ಲಿ ಮತ್ತು ಅವನ ಮರಣದೊಳಗೂ ದೀಕ್ಷಾಸ್ನಾನಮಾಡಿಸಲಾಗಿದೆ. (ರೋಮಾಪುರ 6:3; 1 ಕೊರಿಂಥ 12:​12, 13, 27; ಎಫೆಸ 1:​22, 23) ಅವರು ನೀರಿನ ದೀಕ್ಷಾಸ್ನಾನಪಡೆದು, ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟ ನಂತರ, ಒಂದು ತ್ಯಾಗಮಯ ಜೀವನಕ್ರಮವನ್ನು ಆರಂಭಿಸಿದರು. ಇದರರ್ಥ, ಅವರು ತಮ್ಮ ಮರಣದ ವರೆಗೂ ಸಮಗ್ರತೆಯ ಜೀವನವನ್ನು ನಡೆಸಿದರು.​—ರೋಮಾಪುರ 6:​4, 5.

7. ಕೇವಲ ಅಭಿಷಿಕ್ತ ಕ್ರೈಸ್ತರು ಮಾತ್ರ ಜ್ಞಾಪಕಾಚರಣೆಯ ಕುರುಹುಗಳನ್ನು ಸೇವಿಸುವುದು ಯೋಗ್ಯವಾಗಿದೆ ಏಕೆ?

7 ಆತ್ಮಿಕ ಇಸ್ರಾಯೇಲ್ಯರೋಪಾದಿ ಈ ಅಭಿಷಿಕ್ತ ಕ್ರೈಸ್ತರು, ಯೆಹೋವನು ಮತ್ತು ‘ದೇವರ ಇಸ್ರಾಯೇಲಿನ’ ನಡುವೆ ಮಾಡಲ್ಪಟ್ಟಿರುವ ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿದ್ದರು. (ಗಲಾತ್ಯ 6:16; ಯೆರೆಮೀಯ 31:​31-34) ಈ ಹೊಸ ಒಡಂಬಡಿಕೆಯು ಕ್ರಿಸ್ತನ ಸುರಿಸಲ್ಪಟ್ಟ ರಕ್ತದಿಂದ ಸ್ಥಿರಗೊಳಿಸಲ್ಪಟ್ಟಿತು. ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸಿದಾಗ ಇದನ್ನು ತಿಳಿಸಿದನು. ಲೂಕನು ದಾಖಲಿಸುವುದು: “ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು​—ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು. ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು​—ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ . . . ಅಂದನು.” (ಲೂಕ 22:19, 20, 22) ಉಳಿಕೆಯವರು, ಅಂದರೆ 1,44,000 ಮಂದಿಯಲ್ಲಿ ಇನ್ನೂ ಭೂಮಿಯ ಮೇಲೆ ಉಳಿದಿರುವ ಸದಸ್ಯರು, ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಕುರುಹುಗಳಾದ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಯೋಗ್ಯವಾಗಿಯೇ ಸೇವಿಸುತ್ತಾರೆ.

8. ತಮಗೆ ಪರಲೋಕಸ್ವಾಸ್ಥ್ಯಕ್ಕಾಗಿ ಕರೆ ಸಿಕ್ಕಿದೆಯೆಂದು ಅಭಿಷಿಕ್ತರಿಗೆ ಹೇಗೆ ತಿಳಿದಿದೆ?

8 ತಮಗೆ ಪರಲೋಕಸ್ವಾಸ್ಥ್ಯಕ್ಕಾಗಿ ಕರೆ ಸಿಕ್ಕಿದೆಯೆಂದು ಅಭಿಷಿಕ್ತರಿಗೆ ಹೇಗೆ ತಿಳಿದಿದೆ? ಅವರಿಗೆ ಪವಿತ್ರಾತ್ಮದಿಂದ, ತಪ್ಪರ್ಥಮಾಡಲಾಗದಷ್ಟು ಸ್ಪಷ್ಟವಾದ ಸಾಕ್ಷಿಯು ಸಿಗುತ್ತದೆ. ಅಂಥವರಿಗೆ ಅಪೊಸ್ತಲ ಪೌಲನು ಹೀಗೆ ಬರೆದನು: “ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು. . . . ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.” (ರೋಮಾಪುರ 8:14-17) ಪವಿತ್ರಾತ್ಮವು ಕೊಡುವ ಸಾಕ್ಷಿಯು ತುಂಬ ಪ್ರಬಲವಾಗಿರುತ್ತದೆ. ಆದುದರಿಂದ, ಯಾರಿಗೆ ಪರಲೋಕಸ್ವಾಸ್ಥ್ಯಕ್ಕಾಗಿ ಕರೆಯು ಸಿಕ್ಕಿದೆ ಎಂಬುದರ ಕುರಿತಾಗಿ ಕೊಂಚ ಅನುಮಾನವಿದೆಯೊ ಅವರು, ತಮಗೆ ಆ ಕರೆ ಸಿಕ್ಕಿಲ್ಲವೆಂದು ತರ್ಕಬದ್ಧವಾಗಿ ನಿರ್ಣಯಿಸಬಹುದು ಮತ್ತು ಈ ಕಾರಣದಿಂದ ಜ್ಞಾಪಕಾಚರಣೆಯಲ್ಲಿ ಕೊಡಲಾಗುವ ಕುರುಹುಗಳನ್ನು ಸೇವಿಸದೇ ಇರುವರು.

ಪವಿತ್ರಾತ್ಮ ಮತ್ತು ಬೇರೆ ಕುರಿಗಳು

9. ಸುವಾರ್ತಾ ಪುಸ್ತಕಗಳಲ್ಲಿ ಮತ್ತು ಪ್ರಕಟನೆಯಲ್ಲಿ ಯಾವ ಎರಡು ಭಿನ್ನ ಗುಂಪುಗಳ ಕುರಿತಾಗಿ ತಿಳಿಸಲಾಗಿದೆ?

9 ಆತ್ಮಿಕ ಇಸ್ರಾಯೇಲನ್ನು ರಚಿಸುವ ಕ್ರೈಸ್ತರ ಸೀಮಿತ ಸಂಖ್ಯೆಯನ್ನು ಮನಸ್ಸಿನಲ್ಲಿಡುತ್ತಾ, ಯೇಸು ಅವರನ್ನು ‘ಚಿಕ್ಕ ಹಿಂಡು’ ಎಂದು ಕರೆದನು. ಇವರನ್ನು ಹೊಸ ಒಡಂಬಡಿಕೆಯ “ಹಟ್ಟಿ”ಯೊಳಗೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ಇನ್ನೊಂದು ಕಡೆ, ಯೇಸು ಇನ್ನೂ ಒಟ್ಟುಗೂಡಿಸಬೇಕೆಂದು ಹೇಳಿದ “ಬೇರೆ ಕುರಿ”ಗಳಾದರೊ ಅಸಂಖ್ಯಾತರಾಗಿದ್ದಾರೆ. (ಲೂಕ 12:32; ಯೋಹಾನ 10:16) ಅಂತ್ಯದ ಸಮಯದಲ್ಲಿ ಒಟ್ಟುಗೂಡಿಸಲ್ಪಡುವ ಬೇರೆ ಕುರಿಗಳು ‘ಮಹಾ ಸಮೂಹವನ್ನು’ ರಚಿಸುವರು. ಇವರು, ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ ‘ಮಹಾ ಸಂಕಟವನ್ನು’ ಪಾರಾಗುವವರಾಗಿದ್ದಾರೆ. ಯೋಹಾನನು ಸಾ.ಶ. ಒಂದನೆಯ ಶತಮಾನದ ಅಂತ್ಯದಲ್ಲಿ ಪಡೆದ ದರ್ಶನವು, ಈ ಮಹಾ ಸಮೂಹ ಮತ್ತು ಆತ್ಮಿಕ ಇಸ್ರಾಯೇಲಿನ 1,44,000 ಮಂದಿ ಸದಸ್ಯರ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆಂಬುದು ಆಸಕ್ತಿಕರ ಸಂಗತಿಯಾಗಿದೆ. (ಪ್ರಕಟನೆ 7:​4, 9, 14) ಬೇರೆ ಕುರಿಗಳಿಗೂ ಪವಿತ್ರಾತ್ಮವು ಸಿಗುತ್ತದೊ, ಮತ್ತು ಒಂದುವೇಳೆ ಅವರಿಗೆ ಸಿಗುತ್ತಿರುವುದಾದರೆ ಅದು ಅವರ ಜೀವಿತಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

10. ಬೇರೆ ಕುರಿಗಳು, “ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ” ದೀಕ್ಷಾಸ್ನಾನವನ್ನು ಪಡೆಯುವುದು ಹೇಗೆ?

10 ಪವಿತ್ರಾತ್ಮವು ಖಂಡಿತವಾಗಿಯೂ ಬೇರೆ ಕುರಿಗಳ ಜೀವಿತದಲ್ಲಿ ಒಂದು ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ಅವರು “ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ” ದೀಕ್ಷಾಸ್ನಾನವನ್ನು ಹೊಂದುವ ಮೂಲಕ, ತಾವು ಯೆಹೋವನಿಗೆ ಮಾಡಿರುವ ಸಮರ್ಪಣೆಯನ್ನು ಸಂಕೇತಿಸುತ್ತಾರೆ. (ಮತ್ತಾಯ 28:19) ಅವರು ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುತ್ತಾರೆ, ಕ್ರಿಸ್ತನು ತಮ್ಮ ರಾಜನೂ ವಿಮೋಚಕನೂ ಆಗಿದ್ದಾನೆಂದು ಅವನಿಗೆ ಅಧೀನರಾಗುತ್ತಾರೆ, ಮತ್ತು ತಮ್ಮ ಜೀವಿತದಲ್ಲಿ ದೇವರಾತ್ಮದ ಇಲ್ಲವೇ ಕಾರ್ಯಕಾರಿ ಶಕ್ತಿಯ ಕ್ರಿಯೆಗೆ ಅಧೀನರಾಗುತ್ತಾರೆ. ದಿನದಿನವೂ ಅವರು, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಎಂಬ ‘ದೇವರಾತ್ಮದಿಂದ ಉಂಟಾಗುವ ಫಲಗಳನ್ನು’ ತಮ್ಮ ಜೀವಿತಗಳಲ್ಲಿ ಬೆಳೆಸಿಕೊಳ್ಳುತ್ತಾರೆ.​—ಗಲಾತ್ಯ 5:22, 23.

11, 12. (ಎ) ಅಭಿಷಿಕ್ತರು ಹೇಗೆ ಒಂದು ಅತಿ ವಿಶೇಷವಾದ ರೀತಿಯಲ್ಲಿ ಪವಿತ್ರೀಕರಿಸಲ್ಪಟ್ಟಿದ್ದಾರೆ? (ಬಿ) ಬೇರೆ ಕುರಿಗಳು ಯಾವ ರೀತಿಯಲ್ಲಿ ಪವಿತ್ರೀಕರಿಸಲ್ಪಟ್ಟಿದ್ದಾರೆ ಮತ್ತು ಪರಿಶುದ್ಧಗೊಳಿಸಲ್ಪಟ್ಟಿದ್ದಾರೆ?

11 ದೇವರ ವಾಕ್ಯ ಮತ್ತು ಆತನ ಪವಿತ್ರಾತ್ಮವು ತಮ್ಮನ್ನು ಶುದ್ಧೀಕರಿಸುವಂತೆಯೂ ಬೇರೆ ಕುರಿಗಳು ಅವಕಾಶವನ್ನು ಮಾಡಿಕೊಡಬೇಕು. ಅಭಿಷಿಕ್ತರು ಕ್ರಿಸ್ತನ ಮದಲಗಿತ್ತಿಯೋಪಾದಿ ನೀತಿವಂತರೆಂದೂ ಪವಿತ್ರರೆಂದೂ ಘೋಷಿಸಲ್ಪಟ್ಟು, ಈಗಾಗಲೇ ಒಂದು ಅತಿ ವಿಶೇಷವಾದ ರೀತಿಯಲ್ಲಿ ಶುದ್ಧೀಕರಿಸಲ್ಪಟ್ಟಿದ್ದಾರೆ. (ಯೋಹಾನ 17:17; 1 ಕೊರಿಂಥ 6:11; ಎಫೆಸ 5:​23-27) ಪ್ರವಾದಿಯಾದ ದಾನಿಯೇಲನು ಅವರನ್ನು ‘ಪರಾತ್ಪರನ ಪವಿತ್ರ ಜನರು’ ಎಂದು ಕರೆಯುತ್ತಾನೆ ಮತ್ತು ಅವರು “ಮನುಷ್ಯಕುಮಾರ”ನಾಗಿರುವ ಯೇಸು ಕ್ರಿಸ್ತನ ಅಧೀನದಲ್ಲಿರುವ ರಾಜ್ಯವನ್ನು ಪಡೆಯುವರೆಂದು ಹೇಳುತ್ತಾನೆ. (ದಾನಿಯೇಲ 7:​13, 14, 18, 27, NW) ಇದಕ್ಕಿಂತಲೂ ಮುಂಚೆ ಯೆಹೋವನು, ಮೋಶೆ ಆರೋನರ ಮೂಲಕ ಇಸ್ರಾಯೇಲ್‌ ಜನಾಂಗಕ್ಕೆ ಹೀಗೆ ಘೋಷಿಸಿದ್ದನು: “ನಾನು ನಿಮ್ಮ ದೇವರಾದ ಯೆಹೋವನು; . . . ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.”​—ಯಾಜಕಕಾಂಡ 11:44.

12 “ಪವಿತ್ರೀಕರಣ” ಎಂಬ ಪದದ ಮೂಲಾರ್ಥವು, “ಯೆಹೋವ ದೇವರ ಸೇವೆಗಾಗಿ ಅಥವಾ ಉಪಯೋಗಕ್ಕಾಗಿ ಪವಿತ್ರವನ್ನಾಗಿ ಮಾಡುವ, ಪ್ರತ್ಯೇಕಿಸುವ ಇಲ್ಲವೇ ಬೇರ್ಪಡಿಸಿಡುವ ಕೃತ್ಯ ಅಥವಾ ಕಾರ್ಯಗತಿ; ಪರಿಶುದ್ಧರೂ, ಪವಿತ್ರರೂ, ಇಲ್ಲವೇ ಶುದ್ಧೀಕರಿಸಲ್ಪಟ್ಟವರೂ ಆಗಿರುವ ಸ್ಥಿತಿ.” 1938ರಷ್ಟು ಹಿಂದೆ, ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯು, ಯೋನಾದಾಬರು ಇಲ್ಲವೇ ಬೇರೆ ಕುರಿಗಳು “ಮಹಾ ಜನಸ್ತೋಮದ ಭಾಗವಾಗಿ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯಿಂದ ಪ್ರತಿಷ್ಠಾಪನೆ [ಸಮರ್ಪಣೆ] ಮತ್ತು ಪವಿತ್ರೀಕರಣವನ್ನು ಅಪೇಕ್ಷಿಸಲಾಗಿದೆಯೆಂಬುದನ್ನು ತಿಳಿದುಕೊಳ್ಳಬೇಕೆಂದು” ಹೇಳಿತು. ಪ್ರಕಟನೆಯ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವಂತೆ, ಮಹಾ ಸಮೂಹದ ಕುರಿತಾದ ದರ್ಶನದಲ್ಲಿ, ಅವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ” ಮತ್ತು ಯೆಹೋವನ “ಆಲಯದಲ್ಲಿ ಹಗಲಿರುಳು ಆತನ ಸೇವೆಮಾಡುತ್ತಾ ಇದ್ದಾರೆ” ಎಂದು ಹೇಳಲಾಗಿದೆ. (ಪ್ರಕಟನೆ 7:​9, 14, 15) ಪವಿತ್ರಾತ್ಮದ ಸಹಾಯದಿಂದ, ಬೇರೆ ಕುರಿಗಳು ಯೆಹೋವನ ಪವಿತ್ರತೆಯ ಕುರಿತಾದ ಆವಶ್ಯಕತೆಗಳನ್ನು ಮುಟ್ಟಲು ತಮ್ಮಿಂದಾದುದೆಲ್ಲವನ್ನೂ ಮಾಡುತ್ತಾರೆ.​—2 ಕೊರಿಂಥ 7:1.

ಕ್ರಿಸ್ತನ ಸಹೋದರರಿಗೆ ಒಳಿತನ್ನು ಮಾಡುವುದು

13, 14. (ಎ) ಕುರಿಗಳು ಮತ್ತು ಆಡುಗಳ ಕುರಿತಾದ ಯೇಸುವಿನ ಸಾಮ್ಯಕ್ಕನುಸಾರ, ಕುರಿಗಳ ರಕ್ಷಣೆಯು ಯಾವುದರ ಮೇಲೆ ಅವಲಂಬಿಸುತ್ತದೆ? (ಬಿ) ಈ ಅಂತ್ಯಕಾಲದಲ್ಲಿ ಬೇರೆ ಕುರಿಗಳು ಕ್ರಿಸ್ತನ ಸಹೋದರರಿಗೆ ಹೇಗೆ ಒಳಿತನ್ನು ಮಾಡಿದ್ದಾರೆ?

13 ‘ಯುಗದ ಸಮಾಪ್ತಿಯ’ ಕುರಿತಾದ ತನ್ನ ಪ್ರವಾದನೆಯಲ್ಲಿ ಒಳಗೂಡಿರುವ ಕುರಿಗಳು ಹಾಗೂ ಆಡುಗಳ ಸಾಮ್ಯದಲ್ಲಿ ಯೇಸು, ಬೇರೆ ಕುರಿಗಳು ಮತ್ತು ಚಿಕ್ಕ ಹಿಂಡಿನ ನಡುವೆ ಇರುವ ಆಪ್ತವಾದ ಬಂಧವನ್ನು ಎತ್ತಿತೋರಿಸಿದನು. ಯೇಸು ಯಾರನ್ನು ‘ನನ್ನ ಸಹೋದರರು’ ಎಂದು ಕರೆದನೊ ಆ ಅಭಿಷಿಕ್ತರ ಕಡೆಗಿನ ಈ ಬೇರೆ ಕುರಿಗಳ ನಡತೆಗೂ, ರಕ್ಷಣೆಗೂ ನಿಕಟವಾದ ಸಂಬಂಧವಿದೆಯೆಂಬುದನ್ನು ಕ್ರಿಸ್ತನು ಆ ಸಾಮ್ಯದಲ್ಲಿ ಸ್ಪಷ್ಟವಾಗಿ ತೋರಿಸಿದನು. ಅವನು ತಿಳಿಸಿದ್ದು: “ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ​—ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ. . . . ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”​—ಮತ್ತಾಯ 24:3; 25:31-34, 40.

14 “ಏನೇನು ಮಾಡಿದಿರೋ” ಎಂಬ ಅಭಿವ್ಯಕ್ತಿಯು, ಯಾರನ್ನು ಸೈತಾನನ ಲೋಕವು ಪರಕೀಯರಂತೆ ಉಪಚರಿಸಿ, ಕೆಲವರನ್ನು ಸೆರೆಮನೆಗೂ ತಳ್ಳಿದೆಯೊ, ಆ ಕ್ರಿಸ್ತನ ಆತ್ಮಾಭಿಷಿಕ್ತ ಸಹೋದರರಿಗೆ ಕೊಡಲ್ಪಟ್ಟ ಪ್ರೀತಿಪರ ಬೆಂಬಲದ ಕೃತ್ಯಗಳನ್ನು ಸೂಚಿಸುತ್ತದೆ. ಆ ಸಹೋದರರಿಗೆ ಆಹಾರ, ಯೋಗ್ಯವಾದ ಉಡುಗೆ, ಮತ್ತು ಆರೋಗ್ಯಾರೈಕೆಯ ಅಗತ್ಯವಿತ್ತು. (ಮತ್ತಾಯ 25:​35, 36, NW ಪಾದಟಿಪ್ಪಣಿ) 1914ರಂದಿನಿಂದ ಆರಂಭವಾದ ಈ ಅಂತ್ಯಕಾಲದಲ್ಲಿ, ಅಭಿಷಿಕ್ತರಲ್ಲಿ ಅನೇಕರು ಅಂಥ ಸ್ಥಿತಿಯಲ್ಲಿ ಬಿದ್ದಿದ್ದಾರೆ. ಪವಿತ್ರಾತ್ಮದಿಂದ ಪ್ರೇರಿತರಾದ ಅವರ ನಿಷ್ಠಾವಂತ ಸಂಗಾತಿಗಳಾದ ಬೇರೆ ಕುರಿಗಳು ಅವರಿಗೆ ಬೆಂಬಲವನ್ನು ಕೊಟ್ಟಿದ್ದಾರೆಂಬ ವಾಸ್ತವಾಂಶಕ್ಕೆ ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸವೇ ಸಾಕ್ಷಿಕೊಡುತ್ತದೆ.

15, 16. (ಎ) ಬೇರೆ ಕುರಿಗಳು ಭೂಮಿಯ ಮೇಲಿರುವ ಕ್ರಿಸ್ತನ ಅಭಿಷಿಕ್ತ ಸಹೋದರರಿಗೆ ವಿಶೇಷವಾಗಿ ಯಾವ ಚಟುವಟಿಕೆಯಲ್ಲಿ ಸಹಾಯಮಾಡಿದ್ದಾರೆ? (ಬಿ) ಅಭಿಷಿಕ್ತರು ಬೇರೆ ಕುರಿಗಳ ಕುರಿತು ತಮಗಿರುವ ಗಣ್ಯತೆಯನ್ನು ಹೇಗೆ ವ್ಯಕ್ತಪಡಿಸಿದ್ದಾರೆ?

15 ಈ ಅಂತ್ಯಕಾಲದಲ್ಲಿ, ವಿಶೇಷವಾಗಿ ‘ಪರಲೋಕ ರಾಜ್ಯದ ಸುವಾರ್ತೆಯನ್ನು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರುವ’ ದೇವದತ್ತ ನೇಮಕವನ್ನು ಪೂರೈಸುವುದರಲ್ಲಿ, ಭೂಮಿಯಲ್ಲಿರುವ ಕ್ರಿಸ್ತನ ಅಭಿಷಿಕ್ತ ಸಹೋದರರು ಬೇರೆ ಕುರಿಗಳ ಸಕ್ರಿಯ ಬೆಂಬಲವನ್ನು ಪಡೆದಿದ್ದಾರೆ. (ಮತ್ತಾಯ 24:14; ಯೋಹಾನ 14:12) ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮೇಲಿರುವ ಅಭಿಷಿಕ್ತರ ಸಂಖ್ಯೆಯು ಕಡಿಮೆಯಾಗುತ್ತಾ ಹೋಗುತ್ತಿದೆ, ಆದರೆ ಅದೇ ಸಮಯದಲ್ಲಿ ಬೇರೆ ಕುರಿಗಳ ಸಂಖ್ಯೆಯು ಅಕ್ಷರಾರ್ಥವಾಗಿ ಲಕ್ಷಗಟ್ಟಳೆಯಾಗಿ ಏರಿದೆ. ಇವರಲ್ಲಿ ಸಾವಿರಾರು ಮಂದಿ ಪೂರ್ಣ ಸಮಯದ ಸೌವಾರ್ತಿಕರಾಗಿ, ಅಂದರೆ ಪಯನೀಯರರಾಗಿ ಮತ್ತು ಮಿಷನೆರಿಗಳೋಪಾದಿ ಸೇವೆಸಲ್ಲಿಸುತ್ತಾ, ರಾಜ್ಯದ ಸುವಾರ್ತೆಯನ್ನು ‘ಭೂಲೋಕದ ಕಟ್ಟಕಡೆಯ ವರೆಗೂ’ ಹಬ್ಬಿಸಿದ್ದಾರೆ. (ಅ. ಕೃತ್ಯಗಳು 1:8) ಉಳಿದವರೆಲ್ಲರೂ ತಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಈ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಹಣಕಾಸಿನ ಸಹಾಯದ ಮೂಲಕ ಈ ಮಹತ್ವಪೂರ್ಣ ಕೆಲಸವನ್ನು ಸಂತೋಷದಿಂದ ಬೆಂಬಲಿಸುತ್ತಾರೆ.

16 ತಮ್ಮ ಸಂಗಡಿಗರಾದ ಬೇರೆ ಕುರಿಗಳು ಕೊಡುವ ಈ ನಿಷ್ಠಾವಂತ ಬೆಂಬಲವನ್ನು ಕ್ರಿಸ್ತನ ಅಭಿಷಿಕ್ತ ಸಹೋದರರು ಎಷ್ಟೊಂದು ಗಣ್ಯಮಾಡುತ್ತಾರೆ! 1986ರಲ್ಲಿ ಆಳು ವರ್ಗದಿಂದ ಒದಗಿಸಲ್ಪಟ್ಟಿದ್ದ “ಶಾಂತಿಯ ಪ್ರಭು”ವಿನ ಕೆಳಗೆ ಲೋಕವ್ಯಾಪಕ ಭದ್ರತೆ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಅವರ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಲಾಗಿತ್ತು. ಅದು ಹೇಳುವುದು: “IIನೆಯ ವಿಶ್ವ ಯುದ್ಧದಂದಿನಿಂದ ಹಿಡಿದು ‘ಯುಗದ ಸಮಾಪ್ತಿಯ’ ಕುರಿತಾದ ಯೇಸುವಿನ ಪ್ರವಾದನೆಯ ನೆರವೇರಿಕೆಗೆ ಒಂದು ಮುಖ್ಯ ಕಾರಣವು, ‘ಬೇರೆ ಕುರಿಗಳ’ ‘ಮಹಾ ಸಮೂಹವು’ ವಹಿಸುತ್ತಿರುವ ಪಾತ್ರವೇ. . . . ಆದುದರಿಂದ ಮತ್ತಾಯ 24:14ರಲ್ಲಿರುವ [ಯೇಸುವಿನ] ಪ್ರವಾದನೆಯನ್ನು ನೆರವೇರಿಸುವುದರಲ್ಲಿ ಅವರು ವಹಿಸಿರುವ ದೊಡ್ಡ ಪಾತ್ರಕ್ಕಾಗಿ, ಅಂತಾರಾಷ್ಟ್ರೀಯ, ಬಹುಭಾಷೀಯ ‘ಮಹಾ ಸಮೂಹಕ್ಕೆ’ ಬಹಳಷ್ಟು ಉಪಕಾರಗಳು!”

‘ನಾವಿಲ್ಲದೆ ಸಿದ್ಧಿಗೆ ಬರುವುದಿಲ್ಲ’

17. ಭೂಮಿಯ ಮೇಲೆ ಪುನರುತ್ಥಾನಗೊಳ್ಳುವ ಪ್ರಾಚೀನಕಾಲದ ನಂಬಿಗಸ್ತರು, ಯಾವ ರೀತಿಯಲ್ಲಿ ಅಭಿಷಿಕ್ತರಿಲ್ಲದೆ “ಸಿದ್ಧಿಗೆ” ಬರುವುದಿಲ್ಲ?

17 ಅಭಿಷಿಕ್ತರಲ್ಲಿ ಒಬ್ಬನೋಪಾದಿ ಮಾತಾಡುತ್ತಾ, ಮತ್ತು ಕ್ರಿಸ್ತನಿಗಿಂತಲೂ ಮುಂಚೆ ಜೀವಿಸಿದ ನಂಬಿಗಸ್ತ ಸ್ತ್ರೀಪುರುಷರಿಗೆ ಸೂಚಿಸುತ್ತಾ ಅಪೊಸ್ತಲ ಪೌಲನು ಬರೆದುದು: “ಇವರೆಲ್ಲರೂ ನಂಬಿಕೆಯ ಮೂಲಕ ಒಳ್ಳೇ ಹೆಸರನ್ನು ಸಂಪಾದಿಸಿಕೊಂಡಿದ್ದರೂ ವಾಗ್ದಾನದ ಫಲವನ್ನು ಹೊಂದಲಿಲ್ಲ; ದೇವರು ನಮಗೋಸ್ಕರ [ಅಭಿಷಿಕ್ತರಿಗೋಸ್ಕರ] ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ಸಂಕಲ್ಪಿಸಿದನು.” (ಇಬ್ರಿಯ 11:35, 39, 40) ಸಹಸ್ರವರ್ಷದಾಳಿಕೆಯ ಸಮಯದಲ್ಲಿ, ಸ್ವರ್ಗದಲ್ಲಿರುವ ಕ್ರಿಸ್ತನು ಮತ್ತು ಅವನ 1,44,000 ಮಂದಿ ಅಭಿಷಿಕ್ತ ಸಹೋದರರು, ರಾಜರೂ ಯಾಜಕರೂ ಆಗಿ ಕಾರ್ಯನಡಿಸುವರು ಮತ್ತು ಭೂಮಿಯ ಮೇಲೆ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳನ್ನು ಹಂಚುವರು. ಹೀಗೆ ಬೇರೆ ಕುರಿಗಳು ದೇಹ ಮತ್ತು ಮನಸ್ಸುಗಳಲ್ಲಿ “ಸಿದ್ಧಿಗೆ” ಬರುವರು.​—ಪ್ರಕಟನೆ 22:​1, 2.

18. (ಎ) ಬೈಬಲ್‌ ಸಂಬಂಧಿತ ವಾಸ್ತವಾಂಶಗಳು ಏನನ್ನು ಗಣ್ಯಮಾಡುವಂತೆ ಬೇರೆ ಕುರಿಗಳಿಗೆ ಸಹಾಯಮಾಡಬೇಕು? (ಬಿ) ಬೇರೆ ಕುರಿಗಳು ಯಾವ ನಿರೀಕ್ಷೆಯೊಂದಿಗೆ ‘ದೇವಪುತ್ರರ ಮಹಿಮೆಯು ಪ್ರತ್ಯಕ್ಷವಾಗುವುದಕ್ಕಾಗಿ’ ಕಾಯುತ್ತಾರೆ?

18 ಇದೆಲ್ಲವೂ, ಕ್ರೈಸ್ತ ಗ್ರೀಕ್‌ ಶಾಸ್ತ್ರವು, ಕ್ರಿಸ್ತನು ಮತ್ತು ಅವನ ಅಭಿಷಿಕ್ತ ಸಹೋದರರು ಹಾಗೂ ಯೆಹೋವನ ಉದ್ದೇಶಗಳ ನೆರವೇರಿಕೆಯಲ್ಲಿ ಅವರ ಮುಖ್ಯ ಪಾತ್ರದ ಮೇಲೆ ಏಕೆ ಗಮನವನ್ನು ಕೇಂದ್ರೀಕರಿಸುತ್ತದೆಂಬುದನ್ನು ನಮ್ಮ ಮನಸ್ಸುಗಳಲ್ಲಿ ಅಚ್ಚೊತ್ತಿಸಬೇಕು. ಆದುದರಿಂದ, ಅರ್ಮಗೆದೋನಿನಲ್ಲಿ ಮತ್ತು ಸಹಸ್ರವರ್ಷದಾಳಿಕೆಯ ಸಮಯದಲ್ಲಿ ‘ದೇವಪುತ್ರರ ಮಹಿಮೆಯು ಪ್ರತ್ಯಕ್ಷವಾಗುವುದಕ್ಕಾಗಿ’ ಕಾಯುತ್ತಾ ಇರುವಾಗ, ಬೇರೆ ಕುರಿಗಳು ತಮ್ಮಿಂದ ಸಾಧ್ಯವಿರುವ ಪ್ರತಿಯೊಂದು ವಿಧದಲ್ಲಿ ಅವರನ್ನು ಬೆಂಬಲಿಸುವುದನ್ನು ಒಂದು ಸುಯೋಗವಾಗಿ ಪರಿಗಣಿಸುತ್ತಾರೆ. ಅವರು “ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದು”ವುದನ್ನು ಎದುರುನೋಡಬಲ್ಲರು.​—ರೋಮಾಪುರ 8:19-21.

ಜ್ಞಾಪಕಾಚರಣೆಯ ಸಮಯದಲ್ಲಿ ಆತ್ಮದಲ್ಲಿ ಐಕ್ಯರು

19. ‘ಸತ್ಯದ ಆತ್ಮವು’ ಅಭಿಷಿಕ್ತರಿಗಾಗಿ ಮತ್ತು ಅವರ ಸಂಗಡಿಗರಿಗಾಗಿ ಏನನ್ನು ಮಾಡಿದೆ, ಮತ್ತು ಮಾರ್ಚ್‌ 28ರ ಸಾಯಂಕಾಲದಂದು ಅವರು ವಿಶೇಷವಾಗಿ ಹೇಗೆ ಐಕ್ಯರಾಗಿರುವರು?

19 ಸಾ.ಶ. 33ರ ನೈಸಾನ್‌ 14ರ ರಾತ್ರಿಯಂದು ಯೇಸು ತನ್ನ ಕೊನೆಯ ಪ್ರಾರ್ಥನೆಯಲ್ಲಿ ಅಂದದ್ದು: “ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ.” (ಯೋಹಾನ 17:20, 21) ಅಭಿಷಿಕ್ತರ ಮತ್ತು ವಿಧೇಯ ಮಾನವಕುಲದ ಜಗತ್ತಿನ ರಕ್ಷಣೆಗೋಸ್ಕರ ತನ್ನ ಜೀವವನ್ನು ಕೊಡಲಿಕ್ಕಾಗಿ ದೇವರು ಪ್ರೀತಿಯಿಂದ ತನ್ನ ಮಗನನ್ನು ಕಳುಹಿಸಿಕೊಟ್ಟನು. (1 ಯೋಹಾನ 2:2) ‘ಸತ್ಯದ ಆತ್ಮವು’ ಕ್ರಿಸ್ತನ ಸಹೋದರರನ್ನೂ ಅವರ ಸಂಗಡಿಗರನ್ನೂ ಐಕ್ಯಗೊಳಿಸಿದೆ. ಮಾರ್ಚ್‌ 28ರಂದು ಸೂರ್ಯಾಸ್ತಮಾನದ ನಂತರ, ಈ ಎರಡೂ ವರ್ಗಗಳವರು ಕ್ರಿಸ್ತನ ಮರಣವನ್ನು ಸ್ಮರಿಸಲು ಮತ್ತು ಯೆಹೋವನು ತನ್ನ ಪ್ರಿಯ ಮಗನಾದ ಯೇಸು ಕ್ರಿಸ್ತನ ಯಜ್ಞದ ಮೂಲಕ ತಮಗಾಗಿ ಮಾಡಿರುವುದೆಲ್ಲವನ್ನೂ ನೆನಪಿಸಿಕೊಳ್ಳಲಿಕ್ಕೋಸ್ಕರ ಜೊತೆಯಾಗಿ ಕೂಡಿಬರುವರು. ಆ ಪ್ರಾಮುಖ್ಯ ಸಂದರ್ಭದಲ್ಲಿನ ಅವರ ಉಪಸ್ಥಿತಿಯು, ಅವರ ಐಕ್ಯವನ್ನು ಬಲಪಡಿಸಿ, ದೇವರ ಚಿತ್ತವನ್ನು ಮಾಡುತ್ತಾ ಇರುವ ಅವರ ದೃಢಸಂಕಲ್ಪವನ್ನು ನವೀಕರಿಸಲಿ. ಹೀಗೆ ಅವರು ಯೆಹೋವನಿಗೆ ಪ್ರಿಯರಾಗಿರುವವರ ನಡುವೆ ಇರಲು ಉಲ್ಲಾಸಿಸುತ್ತಾರೆಂಬದಕ್ಕೆ ರುಜುವಾತನ್ನು ಕೊಡುವರು.

ಪುನರ್ವಿಮರ್ಶೆಗಾಗಿ

• ‘ಸತ್ಯದ ಆತ್ಮವನ್ನು’ ಆರಂಭದ ಕ್ರೈಸ್ತರಿಗೆ ಯಾವಾಗ ಕಳುಹಿಸಲಾಯಿತು, ಮತ್ತು ಅದು ಹೇಗೆ ಒಂದು ‘ಸಹಾಯಕವಾಗಿ’ ಪರಿಣಮಿಸಿತು?

• ತಮಗೆ ಪರಲೋಕಸ್ವಾಸ್ಥ್ಯಕ್ಕಾಗಿ ಕರೆಯು ಸಿಕ್ಕಿದೆಯೆಂದು ಅಭಿಷಿಕ್ತರಿಗೆ ಹೇಗೆ ತಿಳಿದುಬರುತ್ತದೆ?

• ದೇವರಾತ್ಮವು ಯಾವ ರೀತಿಯಲ್ಲಿ ಬೇರೆ ಕುರಿಗಳ ಮೇಲೆ ಕಾರ್ಯನಡಿಸುತ್ತದೆ?

• ಬೇರೆ ಕುರಿಗಳು ಹೇಗೆ ಕ್ರಿಸ್ತನ ಸಹೋದರರಿಗೆ ಒಳಿತನ್ನು ಮಾಡಿದ್ದಾರೆ, ಮತ್ತು ಅಭಿಷಿಕ್ತರಿಲ್ಲದೆ ಅವರು ಏಕೆ “ಸಿದ್ಧಿಗೆ” ಬರುವುದಿಲ್ಲ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ಸಾ.ಶ. 33ರ ಪಂಚಾಶತ್ತಮದಂದು ‘ಸತ್ಯದ ಆತ್ಮವು’ ಶಿಷ್ಯರ ಮೇಲೆ ಸುರಿಸಲ್ಪಟ್ಟಿತು

[ಪುಟ 23ರಲ್ಲಿರುವ ಚಿತ್ರಗಳು]

ಸಾರಲಿಕ್ಕಾಗಿ ಕೊಡಲ್ಪಟ್ಟಿರುವ ದೈವಿಕ ನೇಮಕವನ್ನು ಪೂರೈಸುವುದರಲ್ಲಿ ಬೆಂಬಲವನ್ನು ಕೊಡುವ ಮೂಲಕ ಬೇರೆ ಕುರಿಗಳು ಕ್ರಿಸ್ತನ ಸಹೋದರರಿಗೆ ಒಳಿತನ್ನು ಮಾಡಿದ್ದಾರೆ