ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮಗೆ ತಾಳ್ಮೆಯನ್ನೂ ಪಟ್ಟುಹಿಡಿಯುವಿಕೆಯನ್ನೂ ಕಲಿಸಿದನು

ಯೆಹೋವನು ನಮಗೆ ತಾಳ್ಮೆಯನ್ನೂ ಪಟ್ಟುಹಿಡಿಯುವಿಕೆಯನ್ನೂ ಕಲಿಸಿದನು

ಜೀವನ ಕಥೆ

ಯೆಹೋವನು ನಮಗೆ ತಾಳ್ಮೆಯನ್ನೂ ಪಟ್ಟುಹಿಡಿಯುವಿಕೆಯನ್ನೂ ಕಲಿಸಿದನು

ಅರೀಸ್ಟಾಟಲೀಸ್‌ ಅಪೊಸ್ಟೋಲೀಡೀಸ್‌ ಅವರು ಹೇಳಿದಂತೆ

ಕಾಕಸಸ್‌ ಪರ್ವತಗಳ ಉತ್ತರಾರ್ಧದಲ್ಲಿರುವ ಬೆಟ್ಟಗಳ ಅಡಿಗುಡ್ಡ ಪ್ರದೇಶದಲ್ಲಿ, ಪೀಅಟಿಗೊರ್ಸ್ಕ್‌ ಎಂಬ ರಷ್ಯನ್‌ ನಗರವು ನೆಲೆಸಿರುತ್ತದೆ. ಈ ನಗರವು ಅದರ ಖನಿಜ ಜಲ ಬುಗ್ಗೆಗಳು ಮತ್ತು ಸೌಮ್ಯವಾದ ಹವಾಮಾನಕ್ಕಾಗಿ ಪ್ರಸಿದ್ಧವಾಗಿದೆ. ನಾನು ಇಲ್ಲಿಯೇ 1929ರಲ್ಲಿ ಗ್ರೀಕ್‌ ನಿರಾಶ್ರಿತರ ಕುಟುಂಬದಲ್ಲಿ ಹುಟ್ಟಿದೆ. ಹತ್ತು ವರ್ಷಗಳ ನಂತರ, ಸ್ಟ್ಯಾಲಿನನ ಶುದ್ಧೀಕರಣಗಳು, ಭೀತಿ, ಮತ್ತು ಕುಲಸಂಬಂಧಿತ ಹತ್ಯಾಕಾಂಡಗಳ ದುಃಸ್ವಪ್ನದ ನಂತರ, ನಾವು ಗ್ರೀಸ್‌ ದೇಶಕ್ಕೆ ಹಿಂದೆ ಹೋಗಲು ಬಲವಂತಪಡಿಸಲ್ಪಟ್ಟಾಗ ಪುನಃ ನಿರಾಶ್ರಿತರಾದೆವು.

ಗ್ರೀಸ್‌ನಲ್ಲಿ ಪೈರೀಅಸ್‌ ಎಂಬಲ್ಲಿಗೆ ನಾವು ಸ್ಥಳಾಂತರಿಸಿದ ನಂತರ, “ನಿರಾಶ್ರಿತರು” ಎಂಬ ಪದವು ನಮಗೆ ಪೂರ್ತಿ ಭಿನ್ನವಾದ ಅರ್ಥವನ್ನು ಹೊಂದಿತು. ನಾವು ಸಂಪೂರ್ಣವಾಗಿ ಪರಕೀಯರಾಗಿದ್ದಂತೆ ಅನಿಸಿತು. ನನಗೆ ಮತ್ತು ನನ್ನ ಅಣ್ಣನಿಗೆ, ಇಬ್ಬರು ಪ್ರಸಿದ್ಧ ಗ್ರೀಕ್‌ ತತ್ತ್ವಜ್ಞಾನಿಗಳಾಗಿದ್ದ ಸಾಕ್ರಟಿಸ್‌ ಮತ್ತು ಆರಿಸ್ಟಾಟಲ್‌ರ ಹೆಸರುಗಳಿದ್ದರೂ, ಆ ಹೆಸರುಗಳಿಂದ ನಮ್ಮನ್ನು ಕರೆಯಲಾಗುತ್ತಿದ್ದದ್ದು ತುಂಬ ಅಪರೂಪ. ಎಲ್ಲರೂ ನಮ್ಮನ್ನು ಪುಟ್ಟ ರಷ್ಯನರು ಎಂದೇ ಕರೆಯುತ್ತಿದ್ದರು.

ಎರಡನೆಯ ವಿಶ್ವ ಯುದ್ಧವು ಆರಂಭವಾದ ಸ್ವಲ್ಪ ಸಮಯದೊಳಗೆಯೇ, ನನ್ನ ಪ್ರೀತಿಯ ಅಮ್ಮ ತೀರಿಹೋದರು. ಅವರೇ ನಮ್ಮ ಮನೆಯ ಕೇಂದ್ರಬಿಂದುವಾಗಿದ್ದರು, ಮತ್ತು ಅವರ ಸಾವು ನಮ್ಮ ಪುಟ್ಟ ಸಂಸಾರವನ್ನು ನುಚ್ಚುನೂರುಮಾಡಿತು. ಅವರು ತುಂಬ ಸಮಯದಿಂದ ಅಸ್ವಸ್ಥರಾಗಿದ್ದದ್ದರಿಂದ, ಅವರು ನನಗೆ ಮನೆಯಲ್ಲಿನ ಅನೇಕ ಕೆಲಸಗಳನ್ನು ಮಾಡಲು ಕಲಿಸಿದ್ದರು. ಈ ತರಬೇತಿಯು ನನ್ನ ಜೀವಿತದಲ್ಲಿ ಮುಂದಕ್ಕೆ ತುಂಬ ಉಪಯುಕ್ತವಾಗಿ ಪರಿಣಮಿಸಿತು.

ಯುದ್ಧ ಮತ್ತು ಬಿಡುಗಡೆ

ಆ ಯುದ್ಧ, ನಾಸಿ ಸೈನ್ಯಗಳ ಆಕ್ರಮಣ ಮತ್ತು ಮಿತ್ರಪಡೆಗಳ ನಿರಂತರ ದಾಳಿಗಳಿಂದಾಗಿ, ಪ್ರತಿ ದಿನವೂ ನಮ್ಮ ಕೊನೆಯ ದಿನವಾಗಿರುವುದು ಎಂದು ನಮಗನಿಸುತ್ತಿತ್ತು. ಎಲ್ಲಿ ನೋಡಿದರೂ ಬಹಳಷ್ಟು ಬಡತನ, ಹಸಿವು ಮತ್ತು ಸಾವೇ ಕಣ್ಣಿಗೆ ಬೀಳುತ್ತಿತ್ತು. ನಾವು 11 ವರ್ಷ ವಯಸ್ಸಿನಿಂದಲೇ ನಮ್ಮ ಮೂವರ ಜೀವನಾಧಾರಕ್ಕಾಗಿ ತಂದೆಯೊಂದಿಗೆ ತುಂಬ ಕಷ್ಟಪಟ್ಟು ದುಡಿಯಬೇಕಾಯಿತು. ನನಗೆ ಗ್ರೀಕ್‌ ಭಾಷೆ ಚೆನ್ನಾಗಿ ಗೊತ್ತಿರದಿದ್ದರಿಂದ ಮತ್ತು ಯುದ್ಧ ಹಾಗೂ ಅದರ ಪರಿಣಾಮಗಳ ಕಾರಣದಿಂದ ನನ್ನ ಶಾಲಾ ಶಿಕ್ಷಣವು ಅರ್ಧಕ್ಕೇ ನಿಂತುಹೋಯಿತು.

ಗ್ರೀಸ್‌ ದೇಶದ ಮೇಲೆ ಜರ್ಮನರ ಆಕ್ರಮಣವು, ಅಕ್ಟೋಬರ್‌ 1944ರಲ್ಲಿ ಕೊನೆಗೊಂಡಿತು. ತದನಂತರ ಸ್ವಲ್ಪ ಸಮಯದಲ್ಲೇ ನನಗೆ ಯೆಹೋವನ ಸಾಕ್ಷಿಗಳ ಸಂಪರ್ಕವಾಯಿತು. ಆ ಸಮಯಗಳಲ್ಲಿದ್ದ ಹತಾಶೆ ಮತ್ತು ಸಂಕಷ್ಟಗಳಿಂದಾಗಿ, ದೇವರ ರಾಜ್ಯದ ಕೆಳಗೆ ಉಜ್ವಲವಾದ ಭವಿಷ್ಯದ ಕುರಿತಾದ ಬೈಬಲಿನ ನಿರೀಕ್ಷೆಯು ನನ್ನ ಮನಸ್ಸನ್ನು ಸ್ಪರ್ಶಿಸಿತು. (ಕೀರ್ತನೆ 37:29) ಇದೇ ಭೂಮಿಯಲ್ಲಿ ಶಾಂತಿಪೂರ್ಣ ಪರಿಸ್ಥಿತಿಗಳಲ್ಲಿ ಅಂತ್ಯವಿಲ್ಲದ ಜೀವಿತದ ಕುರಿತಾದ ದೇವರ ವಾಗ್ದಾನವು ನನ್ನ ಗಾಯಗಳಿಗೆ ನಿಜವಾಗಿಯೂ ಒಂದು ಮುಲಾಮಿನಂತಿತ್ತು. (ಯೆಶಾಯ 9:7) 1946ರಲ್ಲಿ ನನ್ನ ತಂದೆ ಮತ್ತು ನಾನು ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನಾವು ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು ಸಂಕೇತಿಸಿದೆವು.

ಮುಂದಿನ ವರ್ಷ, ನಾನು ಪೈರೀಅಸ್‌ನಲ್ಲಿ ಸಂಘಟಿಸಲ್ಪಟ್ಟಿದ್ದ ಎರಡನೆಯ ಸಭೆಯಲ್ಲಿ ಜಾಹೀರಾತು ಸೇವಕನೋಪಾದಿ (ಅನಂತರ ಪತ್ರಿಕಾ ಸೇವಕನೆಂದು ಕರೆಯಲಾಯಿತು) ನನ್ನ ಮೊತ್ತಮೊದಲ ನೇಮಕವನ್ನು ಪಡೆದಾಗ ಆನಂದಿತನಾದೆ. ನಮ್ಮ ಟೆರಿಟೊರಿಯು ಪೈರೀಅಸ್‌ನಿಂದ ಹಿಡಿದು, ಸುಮಾರು 50 ಕಿಲೊಮೀಟರ್‌ ದೂರದಲ್ಲಿದ್ದ ಇಲ್ಯೂಸಸ್‌ ವರೆಗೂ ಹರಡಿಕೊಂಡಿತ್ತು. ಆ ಸಮಯದಲ್ಲಿ ನಮ್ಮ ಸಭೆಯಲ್ಲಿ ಅನೇಕ ಆತ್ಮಾಭಿಷಿಕ್ತ ಸಹೋದರರು ಇದ್ದರು. ಅವರೊಂದಿಗೆ ಕೆಲಸಮಾಡುವ ಮತ್ತು ಅವರಿಂದ ಕಲಿತುಕೊಳ್ಳುವ ಸುಯೋಗ ನನಗಿತ್ತು. ಸಾರುವ ಕೆಲಸವನ್ನು ಮುಂದುವರಿಸಲಿಕ್ಕಾಗಿ ಮಾಡಬೇಕಾದ ಕಠಿನವಾದ ಪ್ರಯತ್ನದ ಕುರಿತಾಗಿ ಅವರ ಬಳಿ ಅಸಂಖ್ಯಾತ ಅನುಭವಗಳಿದ್ದುದರಿಂದ, ನಾನು ಅವರ ಸಹವಾಸದಲ್ಲಿ ತುಂಬ ಆನಂದಿಸುತ್ತಿದ್ದೆ. ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡಲಿಕ್ಕೋಸ್ಕರ, ಬಹಳಷ್ಟು ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯು ಆವಶ್ಯಕ ಎಂಬುದು ಅವರ ಜೀವನಕ್ರಮದಿಂದ ಸುವ್ಯಕ್ತವಾಗಿತ್ತು. (ಅ. ಕೃತ್ಯಗಳು 14:22) ಇಂದು ಅದೇ ಕ್ಷೇತ್ರದಲ್ಲಿ ಯೆಹೋವನ ಸಾಕ್ಷಿಗಳ 50ಕ್ಕಿಂತಲೂ ಹೆಚ್ಚು ಸಭೆಗಳಿರುವುದನ್ನು ನೋಡಿ ನನಗೆ ಎಷ್ಟು ಸಂತೋಷವಾಗುತ್ತದೆ!

ಒಂದು ಅನಿರೀಕ್ಷಿತ ಪಂಥಾಹ್ವಾನ

ಕೆಲ ಸಮಯದ ಬಳಿಕ ಪತ್ರಾಸ್‌ ಎಂಬ ನಗರದಲ್ಲಿ, ನನಗೆ ಎಲನೀ ಎಂಬ ಹೆಸರಿನ ತುಂಬ ಚೆಲುವೆಯಾದ ಹಾಗೂ ಹುರುಪುಳ್ಳ ಕ್ರೈಸ್ತ ಯುವತಿಯೊಬ್ಬಳ ಪರಿಚಯವಾಯಿತು. 1952ನೆಯ ಇಸವಿಯ ಅಂತ್ಯದಲ್ಲಿ ನಮ್ಮ ವಿವಾಹ ನಿಶ್ಚಿತಾರ್ಥವಾಯಿತು. ಆದರೆ ಕೆಲವು ತಿಂಗಳುಗಳ ಬಳಿಕ ಎಲನೀ ತುಂಬ ಗಂಭೀರವಾಗಿ ಕಾಯಿಲೆಬಿದ್ದಳು. ಅವಳಿಗೆ ಮಿದುಳಿನ ಟ್ಯೂಮರ್‌ ಇದೆಯೆಂದು ಡಾಕ್ಟರರು ಕಂಡುಹಿಡಿದರು, ಮತ್ತು ಅವಳ ಸ್ಥಿತಿಯು ತುಂಬ ಅಪಾಯಕರವಾಗಿತ್ತು. ಅವಳು ತತ್‌ಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಬಹಳಷ್ಟು ಪ್ರಯತ್ನವನ್ನು ಮಾಡಿದ ನಂತರ, ಕೊನೆಯಲ್ಲಿ ನಮಗೆ ಆ್ಯಥೆನ್ಸ್‌ನಲ್ಲಿ ಒಬ್ಬ ಡಾಕ್ಟರ್‌ ಸಿಕ್ಕಿದರು. ಈ ಡಾಕ್ಟರರು ನಮ್ಮ ಧಾರ್ಮಿಕ ನಂಬಿಕೆಗಳಿಗೆ ಹೊಂದಿಕೆಯಲ್ಲಿ ರಕ್ತವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ನಡೆಸಲು ಸಿದ್ಧರಿದ್ದರು. ಈ ರೀತಿಯ ಶಸ್ತ್ರಚಿಕಿತ್ಸೆಗಾಗಿ ಬೇಕಾದಂಥ ಸಾಧನಗಳು ಆ ಕಾಲದಲ್ಲಿ ಲಭ್ಯವಿರಲಿಲ್ಲವಾದರೂ ಅವರು ಆ ಶಸ್ತ್ರಚಿಕಿತ್ಸೆಯನ್ನು ಮಾಡುವೆನೆಂದು ಒಪ್ಪಿಕೊಂಡರು. (ಯಾಜಕಕಾಂಡ 17:​10-14; ಅ. ಕೃತ್ಯಗಳು 15:​28, 29) ಶಸ್ತ್ರಚಿಕಿತ್ಸೆಯ ನಂತರ, ಡಾಕ್ಟರರು ನನ್ನ ನಿಶ್ಚಿತಾರ್ಥ ವಧುವಿನ ಭವಿಷ್ಯದ ಬಗ್ಗೆ ಅತಿ ಜಾಗರೂಕ ಸತ್‌ಪ್ರತೀಕ್ಷೆ ನೀಡಿದರೂ, ಆ ಕಾಯಿಲೆ ಪುನಃ ಮರುಕಳಿಸುವ ಸಾಧ್ಯತೆಯನ್ನು ಅಲ್ಲಗಳೆಯಲಿಲ್ಲ.

ಈ ಸನ್ನಿವೇಶದಲ್ಲಿ ನಾನೇನು ಮಾಡಬೇಕು? ಪರಿಸ್ಥಿತಿಗಳು ಈಗ ಬದಲಾಗಿರುವುದರಿಂದ, ಆ ನಿಶ್ಚಿತಾರ್ಥವನ್ನು ಮುರಿದು, ಆ ಹಂಗಿನಿಂದ ಮುಕ್ತನಾಗಬೇಕೊ? ಇಲ್ಲ! ಏಕೆಂದರೆ ನಿಶ್ಚಿತಾರ್ಥದಲ್ಲಿ ನಾನೊಂದು ಮಾತುಕೊಟ್ಟಿದ್ದೆ. ಮತ್ತು ನನ್ನ ಹೌದು, ಹೌದಾಗಿರಬೇಕೆಂಬುದು ನನ್ನ ಬಯಕೆಯಾಗಿತ್ತು. (ಮತ್ತಾಯ 5:37) ಇದಕ್ಕೆ ವ್ಯತಿರಿಕ್ತವಾದದ್ದನ್ನು ಮಾಡುವುದರ ಬಗ್ಗೆ ನಾನು ಒಂದು ಕ್ಷಣವೂ ಯೋಚಿಸಲಿಲ್ಲ. ಎಲನೀ ತನ್ನ ಅಕ್ಕನ ಆರೈಕೆಯಿಂದಾಗಿ ಸ್ವಲ್ಪ ಮಟ್ಟಿಗೆ ಗುಣಮುಖಳಾದಳು, ಮತ್ತು ನಾವು 1954ರ ಡಿಸೆಂಬರ್‌ನಲ್ಲಿ ಮದುವೆಯಾದೆವು.

ಮೂರು ವರ್ಷಗಳ ನಂತರ, ಆ ಕಾಯಿಲೆ ಮರುಕಳಿಸಿತು, ಮತ್ತು ಅದೇ ಡಾಕ್ಟರರು ಎಲನೀಗೆ ಇನ್ನೊಂದು ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಯಿತು. ಈ ಸಲ, ಅವರು ಆ ಟ್ಯೂಮರ್‌ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಿಕ್ಕಾಗಿ ಮಿದುಳಿನಲ್ಲಿ ಇನ್ನೂ ಆಳಕ್ಕೆ ಹೋಗಿ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇದರಿಂದಾಗಿ, ನನ್ನ ಹೆಂಡತಿಯ ದೇಹದ ಒಂದು ಪಾರ್ಶ್ವಕ್ಕೆ ಲಕ್ವಹೊಡೆಯಿತು ಮತ್ತು ಅವಳ ವಾಕ್‌ ಶಕ್ತಿಯು ತುಂಬ ಕುಂಠಿತಗೊಂಡಿತು. ಈಗ ನಮ್ಮಿಬ್ಬರ ಮುಂದೆ ಜಟಿಲವಾದ ಪಂಥಾಹ್ವಾನಗಳ ಹೊಸ ಕಟ್ಟು ಬಿಚ್ಚಿಕೊಂಡಿತು. ನನ್ನ ಪ್ರೀತಿಯ ಮಡದಿಗೆ ತುಂಬ ಸುಲಭವಾದ ಕೆಲಸವನ್ನು ಮಾಡುವುದು ಸಹ ಒಂದು ದೊಡ್ಡ ಅಡಚಣೆಯಾಗಿಬಿಟ್ಟಿತ್ತು. ಅವಳ ಪರಿಸ್ಥಿತಿಯು ಹದಗೆಡುತ್ತಾ ಇದ್ದದರಿಂದ, ನಮ್ಮ ದಿನನಿತ್ಯದ ಕೆಲಸಗಳಲ್ಲಿ ನಾವು ದೊಡ್ಡ ಬದಲಾವಣೆಗಳನ್ನು ಮಾಡಬೇಕಾಯಿತು. ಎಲ್ಲದಕ್ಕಿಂತಲೂ ಹೆಚ್ಚಾಗಿ, ಅದು ಬಹಳಷ್ಟು ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯನ್ನು ಕೇಳಿಕೊಂಡಿತು.

ನನ್ನ ತಾಯಿಯಿಂದ ನಾನು ಪಡೆದಂಥ ತರಬೇತಿಯು ಈಗ ಕೆಲಸಕ್ಕೆ ಬಂತು. ಪ್ರತಿ ದಿನ ಬೆಳಗ್ಗೆ ನಾನು ಊಟಕ್ಕಾಗಿ ಬೇಕಾದಂಥ ಎಲ್ಲಾ ಸಾಮಾನುಗಳನ್ನು ತಯಾರಿಸಿಡುತ್ತಿದ್ದೆ ಮತ್ತು ಎಲನೀ ಅಡಿಗೆ ಮಾಡುತ್ತಿದ್ದಳು. ನಾವು ಅನೇಕ ಸಲ ಪೂರ್ಣ ಸಮಯದ ಶುಶ್ರೂಷಕರು, ನಾವು ಬೈಬಲ್‌ ಅಧ್ಯಯನವನ್ನು ನಡೆಸುತ್ತಿದ್ದ ವ್ಯಕ್ತಿಗಳು, ಮತ್ತು ಸಭೆಯಲ್ಲಿದ್ದ ಬಡ ಜೊತೆ ಕ್ರೈಸ್ತರನ್ನು, ಹೀಗೆ ಅತಿಥಿಗಳನ್ನು ಊಟಕ್ಕಾಗಿ ಆಮಂತ್ರಿಸುತ್ತಿದ್ದೆವು. ಈ ಊಟಗಳು ತುಂಬ ರುಚಿಕರವಾಗಿವೆಯೆಂದು ಇವರೆಲ್ಲರೂ ಒಪ್ಪಿಕೊಳ್ಳುತ್ತಿದ್ದರು! ಮನೆಯಲ್ಲಿನ ಬೇರೆ ಕೆಲಸಗಳಲ್ಲೂ ಎಲನೀ ಮತ್ತು ನಾನು ಜೊತೆಯಾಗಿ ಕೆಲಸಮಾಡಿದೆವು, ಮತ್ತು ಈ ಕಾರಣದಿಂದ ನಮ್ಮ ಮನೆಯು ಸ್ವಚ್ಛವಾಗಿ ಹಾಗೂ ಅಚ್ಚುಕಟ್ಟಾಗಿರುತ್ತಿತ್ತು. ವಿಪರೀತವಾಗಿ ಪ್ರಯಾಸಕರವಾದ ಈ ಸನ್ನಿವೇಶವು 30 ವರ್ಷಗಳ ವರೆಗೆ ಮುಂದುವರಿಯಿತು.

ಕಾಯಿಲೆಯ ಮಧ್ಯದಲ್ಲೂ ಹುರುಪು

ನನ್ನ ಹೆಂಡತಿಗೆ ಯೆಹೋವನಿಗಾಗಿದ್ದ ಪ್ರೀತಿ ಮತ್ತು ಆತನ ಸೇವೆಗಾಗಿದ್ದ ಹುರುಪನ್ನು ಯಾವುದೇ ವಿಷಯವೂ ಕಡಿಮೆಗೊಳಿಸಲು ಸಾಧ್ಯವಿರಲಿಲ್ಲವೆಂಬುದನ್ನು ನೋಡಿ ನನಗೂ ಇತರರಿಗೂ ಹೃದಯ ತುಂಬಿಬರುತ್ತಿತ್ತು. ಸಕಾಲದಲ್ಲಿ, ಸತತವಾದ ಪ್ರಯತ್ನದಿಂದಾಗಿ ಎಲನೀ ಕೆಲವೇ ಶಬ್ದಗಳನ್ನು ಉಪಯೋಗಿಸುತ್ತಾ ತನ್ನ ವಿಚಾರಗಳನ್ನು ವ್ಯಕ್ತಪಡಿಸಲು ಶಕ್ತಳಾದಳು. ಬೈಬಲಿನ ಶುಭ ವಾರ್ತೆಯನ್ನು ತಿಳಿಸಲಿಕ್ಕಾಗಿ ಬೀದಿಯಲ್ಲಿ ಜನರನ್ನು ಭೇಟಿಯಾಗುವುದು ಅವಳಿಗೆ ತುಂಬ ಪ್ರಿಯವಾದ ಕೆಲಸವಾಗಿತ್ತು. ನಾನು ವ್ಯಾಪಾರದ ನಿಮಿತ್ತ ಪ್ರಯಾಣ ಮಾಡುತ್ತಿದ್ದಾಗ, ಅವಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೆ ಮತ್ತು ಜನಸಂದಣಿಯುಳ್ಳ ಒಂದು ರಸ್ತೆಬದಿಯಲ್ಲಿ ನನ್ನ ಕಾರನ್ನು ಪಾರ್ಕ್‌ ಮಾಡುತ್ತಿದ್ದೆ. ಅವಳು ಕಾರ್‌ ಕಿಟಿಕಿಯನ್ನು ತೆರೆದು, ಹಾದುಹೋಗುತ್ತಿದ್ದವರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ತೆಗೆದುಕೊಳ್ಳುವಂತೆ ಆಮಂತ್ರಿಸುತ್ತಿದ್ದಳು. ಒಂದು ಸಲ, ಅವಳು ಎರಡೇ ತಾಸುಗಳಲ್ಲಿ 80 ಪ್ರತಿಗಳನ್ನು ವಿತರಿಸಿದಳು. ಎಷ್ಟೋ ಸಲ ಅವಳು ಸಭೆಯಲ್ಲಿರುತ್ತಿದ್ದ ಎಲ್ಲ ಹಳೆಯ ಪತ್ರಿಕೆಗಳನ್ನು ವಿತರಿಸಿ ಮುಗಿಸಿಬಿಡುತ್ತಿದ್ದಳು. ಎಲನೀ, ಸಾರುವ ಕೆಲಸದ ಬೇರೆ ವೈಶಿಷ್ಟ್ಯಗಳಲ್ಲೂ ಕ್ರಮವಾಗಿ ಪಾಲ್ಗೊಳ್ಳುತ್ತಿದ್ದಳು.

ನನ್ನ ಪತ್ನಿಯು ಅಶಕ್ತಳಾಗಿದ್ದ ವರ್ಷಗಳಲ್ಲೆಲ್ಲ ಯಾವಾಗಲೂ ನನ್ನೊಂದಿಗೆ ಕೂಟಗಳಿಗೆ ಹಾಜರಾಗುತ್ತಿದ್ದಳು. ಅವಳೆಂದೂ ಒಂದು ಅಧಿವೇಶನಕ್ಕಾಗಲಿ, ಸಮ್ಮೇಳನಕ್ಕಾಗಲಿ ತಪ್ಪಿಸಿಕೊಳ್ಳಲಿಲ್ಲ. ಗ್ರೀಸ್‌ನಲ್ಲಿ ಯೆಹೋವನ ಸಾಕ್ಷಿಗಳ ಹಿಂಸೆಯಿಂದಾಗಿ ನಾವು ಅಧಿವೇಶನ ಹಾಗೂ ಸಮ್ಮೇಳನಗಳಿಗಾಗಿ ವಿದೇಶಕ್ಕೆ ಪ್ರಯಾಣ ಮಾಡಬೇಕಾದಾಗಲೂ ಅವಳು ತಪ್ಪಿಸಲಿಲ್ಲ. ಅವಳಿಗೆ ಶಾರೀರಿಕ ದೌರ್ಬಲ್ಯಗಳಿದ್ದರೂ, ಅವಳು ಸಂತೋಷದಿಂದ ಆಸ್ಟ್ರಿಯ, ಜರ್ಮನಿ, ಸೈಪ್ರಸ್‌ ಮತ್ತು ಇತರ ದೇಶಗಳಲ್ಲಿ ಅಧಿವೇಶನಗಳಿಗೆ ಹಾಜರಾದಳು. ಎಲನೀ ಎಂದೂ ಗೊಣಗುತ್ತಿರಲಿಲ್ಲ ಅಥವಾ ನಾನು ಅವಳಿಗೆ ಬಹಳಷ್ಟು ಗಮನವನ್ನು ಕೊಡುವಂತೆ ನಿರೀಕ್ಷಿಸುತ್ತಿರಲಿಲ್ಲ. ಆಗಿಂದಾಗ್ಗೆ ಯೆಹೋವನ ಸೇವೆಯಲ್ಲಿ ನನಗಿರುತ್ತಿದ್ದ ಹೆಚ್ಚಿನ ಜವಾಬ್ದಾರಿಗಳಿಂದಾಗಿ ಅವಳಿಗೆ ಅನನುಕೂಲವಾಗುತ್ತಿದ್ದಾಗಲೂ ಅವಳು ಹಾಗೆ ಮಾಡಲಿಲ್ಲ.

ನನ್ನ ವಿಷಯದಲ್ಲಾದರೊ, ಈ ಸನ್ನಿವೇಶವು ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯ ವಿಷಯದಲ್ಲಿ ಒಂದು ದೀರ್ಘಾವಧಿಯ ಶಿಕ್ಷಣವಾಗಿತ್ತು. ಎಷ್ಟೋ ಸಾರಿ ನಾನು ಯೆಹೋವನ ಸಹಾಯಹಸ್ತವನ್ನು ಅನುಭವಿಸಿದ್ದೇನೆ. ಸಹೋದರ ಸಹೋದರಿಯರು ತಮಗೆ ಸಾಧ್ಯವಿರುವ ಪ್ರತಿಯೊಂದು ವಿಧದಲ್ಲಿ ನಮಗೆ ಸಹಾಯಮಾಡಲಿಕ್ಕೋಸ್ಕರ ನಿಜವಾಗಿಯೂ ತ್ಯಾಗಗಳನ್ನು ಮಾಡಿದರು ಮತ್ತು ಡಾಕ್ಟರರು ಸಹ ನಮಗೆ ದಯೆಯಿಂದ ಬೆಂಬಲ ನೀಡಿದರು. ತುಂಬ ಕಠಿನವಾದ ನಮ್ಮ ಪರಿಸ್ಥಿತಿಗಳಿಂದಾಗಿ ನಾನು ಪೂರ್ಣ ಸಮಯದ ಉದ್ಯೋಗಕ್ಕೆ ಹೋಗುವುದು ಅಸಾಧ್ಯವಾಗಿತ್ತಾದರೂ, ಆ ಎಲ್ಲ ಕಷ್ಟಕರ ವರ್ಷಗಳಲ್ಲಿ ನಮಗೆ ಎಂದೂ ಜೀವನಾವಶ್ಯಕತೆಗಳ ಕೊರತೆಯಿರಲಿಲ್ಲ. ಯೆಹೋವನ ಅಭಿರುಚಿಗಳು ಮತ್ತು ಸೇವೆಗೆ ನಾವು ಯಾವಾಗಲೂ ಪ್ರಥಮ ಸ್ಥಾನವನ್ನು ಕೊಟ್ಟೆವು.​—ಮತ್ತಾಯ 6:33.

ಆ ಕಷ್ಟಕರವಾದ ಸಮಯದಲ್ಲಿ ನಮ್ಮನ್ನು ಪೋಷಿಸಿದಂಥ ಸಂಗತಿ ಯಾವುದೆಂದು ಅನೇಕರು ನಮಗೆ ಕೇಳಿದ್ದಾರೆ. ನಾನೀಗ ಹಿಂದಿರುಗಿ ನೋಡುವಾಗ, ಬೈಬಲಿನ ವೈಯಕ್ತಿಕ ಅಧ್ಯಯನ, ದೇವರಿಗೆ ಹೃತ್ಪೂರ್ವಕ ಪ್ರಾರ್ಥನೆ, ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಹಾಜರಿ ಮತ್ತು ಸಾರುವ ಕೆಲಸದಲ್ಲಿ ಹುರುಪಿನ ಪಾಲ್ಗೊಳ್ಳುವಿಕೆಯೇ ನಮ್ಮ ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯನ್ನು ಬಲಪಡಿಸಿತೆಂದು ನನಗನಿಸುತ್ತದೆ. ಕೀರ್ತನೆ 37:​3-5ರಲ್ಲಿರುವ ಉತ್ತೇಜನಭರಿತ ಮಾತುಗಳು ಯಾವಾಗಲೂ ನಮ್ಮ ನೆನಪಿಗೆ ಬರುತ್ತಿದ್ದವು: “ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯಕಾರ್ಯಗಳನ್ನು ಮಾಡಿ . . . ಯೆಹೋವನಿಗೆ ಸಂತೋಷದಿಂದ ಸೇವೆಮಾಡು. . . . ಯೆಹೋವನನ್ನು ಆಶ್ರಯಿಸಿಕೊ. ಆತನಲ್ಲಿ ಭರವಸವಿಡು. ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.” (ಪರಿಶುದ್ಧ ಬೈಬಲ್‌) ನಮಗೆ ಅಮೂಲ್ಯವಾಗಿದ್ದ ಇನ್ನೊಂದು ವಚನವು ಕೀರ್ತನೆ 55:22 ಆಗಿತ್ತು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” ತನ್ನ ತಂದೆಯಲ್ಲಿ ಸಂಪೂರ್ಣ ಭರವಸೆಯನ್ನಿಡುವ ಒಬ್ಬ ಮಗುವಿನಂತೆ, ನಾವು ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಿದೆವು ಮಾತ್ರವಲ್ಲ, ಅದನ್ನು ಅವನೊಂದಿಗೇ ಬಿಟ್ಟೆವು.​—ಯಾಕೋಬ 1:6.

ಇಸವಿ 1987ರ ಏಪ್ರಿಲ್‌ 12ರಂದು, ನನ್ನ ಹೆಂಡತಿಯು ನಮ್ಮ ಮನೆಯ ಮುಂದೆ ಶುಭ ವಾರ್ತೆಯನ್ನು ಸಾರುತ್ತಾ ಇದ್ದಳು. ಆಗ ಅವಳ ಹಿಂದಿನಿಂದ ಒಂದು ಭಾರವಾದ ಲೋಹದ ಬಾಗಿಲು ಒಮ್ಮೆಲೇ ಮುಚ್ಚಿಕೊಂಡು, ಅವಳನ್ನು ಪಕ್ಕದಾರಿಗೆ ಉರುಳಿಸಿತು. ಇದರಿಂದಾಗಿ ಅವಳಿಗೆ ಗಂಭೀರವಾದ ಗಾಯಗಳಾದವು. ಮತ್ತು ಮುಂದಿನ ಮೂರು ವರ್ಷಗಳ ವರೆಗೆ ಅವಳು ಅತಿಸುಪ್ತ ಸ್ಥಿತಿಯಲ್ಲಿದ್ದಳು. 1990ರ ಆರಂಭದಲ್ಲಿ ಅವಳು ತೀರಿಕೊಂಡಳು.

ನನ್ನ ಸಾಮರ್ಥ್ಯಕ್ಕನುಸಾರ ಯೆಹೋವನ ಸೇವೆಮಾಡುವುದು

ಹಿಂದೆ 1960ರಲ್ಲಿ, ನಾನು ಪೈರೀಅಸ್‌ ನಗರದ ನಿಕಾಯಾದಲ್ಲಿ ಒಬ್ಬ ಸಭಾ ಸೇವಕನಾಗಿ ಸೇವೆಸಲ್ಲಿಸುವಂತೆ ನೇಮಿಸಲ್ಪಟ್ಟೆ. ಅಂದಿನಿಂದ ನನಗೆ ಪೈರೀಅಸ್‌ನಲ್ಲಿರುವ ಇನ್ನಿತರ ಅನೇಕ ಸಭೆಗಳಲ್ಲಿ ಸೇವೆಸಲ್ಲಿಸುವ ಸುಯೋಗವು ಸಿಕ್ಕಿದೆ. ನನಗೆ ನನ್ನ ಸ್ವಂತ ಮಕ್ಕಳಿರದಿದ್ದರೂ, ಅನೇಕ ಆತ್ಮಿಕ ಮಕ್ಕಳು ಸತ್ಯದಲ್ಲಿ ಸ್ಥಿರಚಿತ್ತರಾಗುವಂತೆ ಸಹಾಯಮಾಡುವ ಆನಂದ ನನಗೆ ದೊರಕಿದೆ. ಅವರಲ್ಲಿ ಕೆಲವರು ಈಗ ಸಭಾ ಹಿರಿಯರು, ಶುಶ್ರೂಷಾ ಸೇವಕರು, ಪಯನೀಯರರು ಮತ್ತು ಬೆತೆಲ್‌ ಕುಟುಂಬದ ಸದಸ್ಯರೋಪಾದಿ ಸೇವೆಸಲ್ಲಿಸುತ್ತಿದ್ದಾರೆ.

ಇಸವಿ 1975ರಲ್ಲಿ ಗ್ರೀಸ್‌ ದೇಶದಲ್ಲಿ ಪ್ರಜಾಪ್ರಭುತ್ವವು ಪುನಃಸ್ಥಾಪಿಸಲ್ಪಟ್ಟ ನಂತರ, ಯೆಹೋವನ ಸಾಕ್ಷಿಗಳು ತಮ್ಮ ಅಧಿವೇಶನಗಳನ್ನು ಬಹಿರಂಗವಾಗಿ ನಡೆಸಲು ಶಕ್ತರಾದರು. ಇನ್ನು ಮುಂದೆ ಅವರು ಕಾಡುಗಳಲ್ಲಿ ಅಡಗಿಕೊಂಡು ಅದನ್ನು ಮಾಡಬೇಕಾಗಲಿಲ್ಲ. ವಿದೇಶದಲ್ಲಿ ಅಧಿವೇಶನಗಳನ್ನು ಸಂಘಟಿಸುವಾಗ ನಮ್ಮಲ್ಲಿ ಕೆಲವರಿಗೆ ದೊರಕಿದಂಥ ಅನುಭವವು ಈಗ ತುಂಬ ಪ್ರಯೋಜನಕಾರಿಯಾಗಿ ಪರಿಣಮಿಸಿತು. ಹೀಗೆ ನನಗೆ ಅನೇಕ ವರ್ಷಗಳ ವರೆಗೆ ವಿಭಿನ್ನ ಅಧಿವೇಶನ ಕಮಿಟಿಗಳಲ್ಲಿ ಸೇವೆಸಲ್ಲಿಸುವ ಆನಂದ ಹಾಗೂ ಸುಯೋಗವು ಸಿಕ್ಕಿತು.

ಅನಂತರ 1979ರಲ್ಲಿ, ಆ್ಯಥೆನ್ಸ್‌ನ ಹೊರವಲಯದಲ್ಲಿ ಗ್ರೀಸ್‌ ದೇಶದ ಮೊತ್ತಮೊದಲ ಸಮ್ಮೇಳನ ಸಭಾಗೃಹವನ್ನು ಕಟ್ಟುವ ಯೋಜನೆಗಳನ್ನು ಮಾಡಲಾಯಿತು. ಈ ಬೃಹತ್‌ ನಿರ್ಮಾಣ ಯೋಜನೆಯನ್ನು ಸಂಘಟಿಸಿ ಪೂರೈಸುವುದರಲ್ಲಿ ಸಹಾಯಮಾಡುವಂತೆ ನನ್ನನ್ನು ನೇಮಿಸಲಾಯಿತು. ಈ ಕೆಲಸಕ್ಕಾಗಿಯೂ ತುಂಬ ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯು ಬೇಕಾಗಿತ್ತು. ಸ್ವತ್ಯಾಗದ ಆತ್ಮವುಳ್ಳ ನೂರಾರು ಮಂದಿ ಸಹೋದರ ಸಹೋದರಿಯರೊಂದಿಗೆ ಕೆಲಸಮಾಡುವುದು, ನಮ್ಮೊಳಗೆ ಪ್ರೀತಿ ಹಾಗೂ ಐಕ್ಯದ ಬಲವಾದ ಬಂಧವನ್ನು ಬೆಸೆಯಿತು. ಈ ನಿರ್ಮಾಣ ಯೋಜನೆಯ ಸವಿನೆನಪುಗಳು ನನ್ನ ಹೃದಯದಲ್ಲಿ ಅಚ್ಚಳಿಯದಂಥ ರೀತಿಯಲ್ಲಿ ಕೆತ್ತಲ್ಪಟ್ಟಿವೆ.

ಸೆರೆವಾಸಿಗಳ ಆತ್ಮಿಕ ಅಗತ್ಯಗಳನ್ನು ಪೂರೈಸುವುದು

ಕೆಲವೊಂದು ವರ್ಷಗಳ ಬಳಿಕ, ಅವಕಾಶದ ಇನ್ನೊಂದು ಬಾಗಿಲು ತೆರೆಯಿತು. ನನ್ನ ಸಭೆಯ ಟೆರಿಟೊರಿಯ ಹತ್ತಿರ, ಅಂದರೆ ಕೊರಿಡಾಲ್ಲೊಸ್‌ನಲ್ಲಿ ಗ್ರೀಸ್‌ ದೇಶದ ಅತಿ ದೊಡ್ಡದಾದ ಸೆರೆಮನೆಯೊಂದು ಇದೆ. ಏಪ್ರಿಲ್‌ 1991ರಿಂದ ಆರಂಭಿಸಿ, ಯೆಹೋವನ ಸಾಕ್ಷಿಗಳ ಒಬ್ಬ ಶುಶ್ರೂಷಕನೋಪಾದಿ ನಾನು ಪ್ರತಿ ವಾರ ಈ ಸೆರೆಮನೆಯನ್ನು ಸಂದರ್ಶಿಸುವಂತೆ ನೇಮಿಸಲ್ಪಟ್ಟಿದ್ದೇನೆ. ಅಲ್ಲಿ ನನಗೆ ಆಸಕ್ತಿಯುಳ್ಳ ಸೆರೆವಾಸಿಗಳೊಂದಿಗೆ ಬೈಬಲ್‌ ಅಧ್ಯಯನಗಳನ್ನು ಮತ್ತು ಕ್ರೈಸ್ತ ಕೂಟಗಳನ್ನು ನಡೆಸಲು ಅನುಮತಿಯಿದೆ. ಅವರಲ್ಲಿ ಅನೇಕರು ತಮ್ಮ ಜೀವಿತದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ ಮತ್ತು ಹೀಗೆ ದೇವರ ವಾಕ್ಯಕ್ಕಿರುವ ಅಪಾರ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. (ಇಬ್ರಿಯ 4:12) ಇದು ಸೆರೆಮನೆಯ ಸಿಬ್ಬಂದಿ ಹಾಗೂ ಇತರ ಸೆರೆವಾಸಿಗಳ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಿದೆ. ನಾನು ಬೈಬಲ್‌ ಅಧ್ಯಯನ ಮಾಡಿರುವ ಸೆರೆವಾಸಿಗಳಲ್ಲಿ ಕೆಲವರು ಬಿಡುಗಡೆಮಾಡಲ್ಪಟ್ಟಿದ್ದಾರೆ ಮತ್ತು ಅವರು ಈಗ ಸುವಾರ್ತೆಯ ಪ್ರಚಾರಕರಾಗಿದ್ದಾರೆ.

ಸ್ವಲ್ಪ ಸಮಯದ ವರೆಗೆ ನಾನು ಕುಖ್ಯಾತರಾಗಿದ್ದ ಮೂರು ಮಂದಿ ಅಮಲೌಷಧದ ಡೀಲರ್‌ಗಳೊಂದಿಗೆ ಅಧ್ಯಯನ ನಡೆಸಿದೆ. ಅವರು ಆತ್ಮಿಕ ಪ್ರಗತಿಯನ್ನು ಮಾಡಿದರು ಮತ್ತು ತಮ್ಮ ಬೈಬಲ್‌ ಅಧ್ಯಯನಕ್ಕಾಗಿ ಬರುತ್ತಿದ್ದಾಗ, ಗಡ್ಡ ಬೋಳಿಸಿ, ಕೂದಲನ್ನು ಚೆನ್ನಾಗಿ ಬಾಚಿಕೊಂಡು, ಶರ್ಟ್‌ ಹಾಗೂ ಟೈ ಹಾಕಿಕೊಂಡು ಬರುತ್ತಿದ್ದರು. ಅದೂ ಗ್ರೀಸ್‌ನಲ್ಲಿ ವಿಪರೀತ ಸೆಕೆಯ ತಿಂಗಳಾದ ಆಗಸ್ಟ್‌ನಲ್ಲಿ! ಆ ಸೆರೆಮನೆಯ ನಿರ್ದೇಶಕರು, ಮುಖ್ಯ ವಾರ್ಡನ್‌, ಮತ್ತು ಕೆಲವು ಉದ್ಯೋಗಿಗಳು, ಈ ಚಮತ್ಕಾರವನ್ನು ನೋಡಲಿಕ್ಕಾಗಿ ತಮ್ಮ ಆಫೀಸುಗಳಿಂದ ಓಡೋಡಿ ಬಂದರು. ಅವರಿಗೆ ಇದನ್ನು ನಂಬಲಿಕ್ಕೇ ಆಗಲಿಲ್ಲ!

ಸೆರೆಮನೆಯಲ್ಲಿ ಮಹಿಳೆಯರ ವಿಭಾಗದಲ್ಲಿ, ಇನ್ನೊಂದು ಉತ್ತೇಜನದಾಯಕ ಅನುಭವವಾಯಿತು. ಕೊಲೆ ಮಾಡಿರುವುದಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಒಬ್ಬ ಸ್ತ್ರೀಯೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು. ಅವಳ ಪ್ರತಿಭಟನಾತ್ಮಕ ಕ್ರಿಯೆಗಳ ಕುರಿತಾಗಿ ಎಲ್ಲರಿಗೂ ತಿಳಿದಿತ್ತು. ಆದರೆ ಅವಳು ಕಲಿಯುತ್ತಿದ್ದ ಬೈಬಲ್‌ ಸತ್ಯವು ಅವಳಲ್ಲಿ ಎಷ್ಟೊಂದು ಗಮನಾರ್ಹವಾದ ಬದಲಾವಣೆಗಳನ್ನು ತಂದಿತ್ತೆಂದರೆ, ಅವಳು ಒಂದು ಕುರಿಯಾಗಿ ಬದಲಾಗುತ್ತಿರುವ ಸಿಂಹದಂತಿದ್ದಳೆಂದು ಅನೇಕರು ಹೇಳಿದರು! (ಯೆಶಾಯ 11:​6, 7) ಬೇಗನೆ, ಅವಳು ಸೆರೆಮನೆಯ ನಿರ್ದೇಶಕಿಯ ಗೌರವ ಹಾಗೂ ಭರವಸೆಯನ್ನು ಗಿಟ್ಟಿಸಿಕೊಂಡಳು. ಅವಳು ಆತ್ಮಿಕವಾಗಿ ಉತ್ತಮ ಪ್ರಗತಿಯನ್ನು ಮಾಡಿ, ತನ್ನನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳುವ ಹಂತವನ್ನು ತಲಪುವುದನ್ನು ನೋಡಿ ನನಗೆ ಸಂತೋಷವಾಯಿತು.

ಅಶಕ್ತರಿಗೂ ವಯಸ್ಸಾದವರಿಗೂ ಸಹಾಯಮಾಡುವುದು

ನನ್ನ ಹೆಂಡತಿಯು ಕಾಯಿಲೆಯೊಂದಿಗೆ ನಡೆಸಿದ ದೀರ್ಘವಾದ ಹೋರಾಟವನ್ನು ನೋಡಿ, ನಮ್ಮ ಮಧ್ಯದಲ್ಲಿರುವ ಅಸ್ವಸ್ಥ ಹಾಗೂ ವೃದ್ಧ ವ್ಯಕ್ತಿಗಳ ಅಗತ್ಯಗಳ ಕುರಿತಾಗಿ ನಾನು ಹೆಚ್ಚು ಸೂಕ್ಷ್ಮಮತಿಯಾಗಿಬಿಟ್ಟಿದ್ದೇನೆ. ನಮ್ಮ ಪ್ರಕಾಶನಗಳಲ್ಲಿ, ನಾವು ಸ್ವಲ್ಪ ಹೆಚ್ಚು ಪ್ರಯತ್ನಮಾಡಿ ಇಂಥ ವ್ಯಕ್ತಿಗಳಿಗೆ ಪ್ರೀತಿಪರ ನೆರವನ್ನು ಕೊಡುವಂತೆ ಉತ್ತೇಜಿಸುವ ಲೇಖನಗಳು ಬಂದಾಗಲೆಲ್ಲ, ನನ್ನ ಆಸಕ್ತಿಯು ಕೆರಳಿಸಲ್ಪಡುತ್ತದೆ. ಅಂಥ ಲೇಖನಗಳು ನನಗೆ ತುಂಬ ಅಮೂಲ್ಯವಾಗಿದ್ದವು ಮತ್ತು ನಾನು ಅವುಗಳನ್ನು ಸಂಗ್ರಹಿಸಿಟ್ಟೆ. ಕೆಲವು ವರ್ಷಗಳು ದಾಟುವಷ್ಟರಲ್ಲಿ, ನೂರಕ್ಕಿಂತಲೂ ಹೆಚ್ಚು ಪುಟಗಳುಳ್ಳ ಒಂದು ಫೋಲ್ಡರ್‌ ಅನ್ನು ನಾನು ತುಂಬಿಸಿಬಿಟ್ಟಿದ್ದೆ. ಇದರಲ್ಲಿ 1962 ಜುಲೈ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿನ “ವೃದ್ಧ ವ್ಯಕ್ತಿಗಳು ಮತ್ತು ದುಃಖಪೀಡಿತರಿಗಾಗಿ ಪರಿಗಣನೆ” ಎಂಬ ಲೇಖನದಿಂದ ಆರಂಭಿಸುತ್ತಾ ಅನೇಕ ಲೇಖನಗಳಿವೆ. ಇವುಗಳಲ್ಲಿನ ಅನೇಕ ಲೇಖನಗಳು, ಪ್ರತಿ ಸಭೆಯು ಅಸ್ವಸ್ಥರು ಹಾಗೂ ವೃದ್ಧರಿಗಾಗಿ ಸಂಘಟಿತವಾದ ನೆರವನ್ನು ಕೊಡುವುದು ಪ್ರಯೋಜನಕಾರಿಯಾಗಿದೆ ಎಂಬುದನ್ನು ತೋರಿಸಿದವು.​—1 ಯೋಹಾನ 3:​17, 18.

ನಮ್ಮ ಸಭೆಯಲ್ಲಿರುವ ಅಸ್ವಸ್ಥರ ಹಾಗೂ ವೃದ್ಧರ ಅಗತ್ಯಗಳನ್ನು ನೋಡಿಕೊಳ್ಳಲು ತಮ್ಮನ್ನು ಲಭ್ಯಗೊಳಿಸಿಕೊಂಡ ಸಹೋದರ ಸಹೋದರಿಯರ ಒಂದು ಗುಂಪನ್ನು ಹಿರಿಯರು ರಚಿಸಿದರು. ಈ ಸ್ವಯಂಸೇವಕರನ್ನು ನಾವು ವಿಭಿನ್ನ ತಂಡಗಳಾಗಿ ಸಂಘಟಿಸಿದೆವು. ಒಂದು ತಂಡದಲ್ಲಿ ದಿನದ ಹೊತ್ತಿನಲ್ಲಿ ಸಹಾಯಮಾಡಲು ಶಕ್ತರಾಗಿದ್ದವರಾಗಿದ್ದರು, ಇನ್ನೊಂದು ತಂಡದಲ್ಲಿ ರಾತ್ರಿ ಸಮಯದಲ್ಲಿ ಸಹಾಯಮಾಡುವವರಿದ್ದರು, ಮತ್ತೊಂದು ತಂಡದವರು ವಾಹನ ಸೌಲಭ್ಯವನ್ನು ಕೊಡಲು ಶಕ್ತರಾಗಿದ್ದವರು ಆಗಿದ್ದರು, ಮತ್ತು ಇನ್ನೂ ಕೆಲವರು 24 ಗಂಟೆಯೂ ಲಭ್ಯವಿದ್ದವರು ಆಗಿದ್ದರು. ಈ ಕೊನೆಯ ತಂಡದವರು ಒಂದು ರೀತಿಯ ಕ್ಷಿಪ್ರಪಡೆ ಆಗಿದ್ದರು.

ಈ ರೀತಿಯ ಪ್ರಯತ್ನಗಳಿಂದ ಸಿಕ್ಕಿರುವ ಫಲಿತಾಂಶಗಳು ತುಂಬ ಉತ್ತೇಜನೀಯವಾಗಿವೆ. ಉದಾಹರಣೆಗಾಗಿ, ಒಬ್ಬೊಂಟಿಗರಾಗಿ ವಾಸಿಸುತ್ತಿದ್ದ ಅಸ್ವಸ್ಥ ಸಹೋದರಿಯೊಬ್ಬರನ್ನು ಎಂದಿನಂತೆ ಸಂದರ್ಶಿಸಲಾದಾಗ ಅವರು ನೆಲದ ಮೇಲೆ ಪ್ರಜ್ಞೆತಪ್ಪಿ ಬಿದ್ದಿರುವುದು ಕಂಡುಬಂತು. ಹತ್ತಿರದಲ್ಲೇ ವಾಸಿಸುತ್ತಿದ್ದ ಮತ್ತು ಒಂದು ಕಾರ್‌ ಅನ್ನು ಹೊಂದಿದ್ದ ಒಬ್ಬ ಸಹೋದರಿಗೆ ನಾವು ಸುದ್ದಿ ತಲಪಿಸಿದೆವು. ಅವಳು ಆ ಅಸ್ವಸ್ಥ ಸಹೋದರಿಯನ್ನು ಅಲ್ಲಿಗೆ ಹತ್ತಿರವಿದ್ದ ಆಸ್ಪತ್ರೆಗೆ ಕೇವಲ ಹತ್ತು ನಿಮಿಷದೊಳಗೆ ಕೊಂಡೊಯ್ದಳು! ಇದರಿಂದಾಗಿಯೇ ಆ ಸಹೋದರಿಯ ಜೀವ ಉಳಿಯಿತೆಂದು ಡಾಕ್ಟರರು ಹೇಳಿದರು.

ಈ ಗುಂಪಿನ ಸದಸ್ಯರಿಗೆ ಅಶಕ್ತರೂ ವೃದ್ಧರೂ ಆಗಿರುವವರು ತೋರಿಸುವ ಕೃತಜ್ಞತೆಯು ಮನಸ್ಸಿಗೆ ತುಂಬ ತೃಪ್ತಿಯನ್ನು ಕೊಡುತ್ತದೆ. ಈ ಸಹೋದರ ಸಹೋದರಿಯರೊಂದಿಗೆ ದೇವರ ಹೊಸ ವ್ಯವಸ್ಥೆಯಲ್ಲಿ ಇಂದಿಗಿಂತ ಭಿನ್ನವಾದ ಪರಿಸ್ಥಿತಿಗಳಲ್ಲಿ ಜೀವಿಸಲು ನಮಗಿರುವ ನಿರೀಕ್ಷೆಯು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಅಷ್ಟುಮಾತ್ರವಲ್ಲದೆ, ಅವರ ಕಷ್ಟಗಳ ಸಮಯದಲ್ಲಿ ಅವರಿಗೆ ಸಿಕ್ಕಿರುವ ಬೆಂಬಲದಿಂದಾಗಿ ಅವರಿಗೆ ತಾಳಿಕೊಳ್ಳಲು ಸಹಾಯ ಸಿಕ್ಕಿತೆಂಬ ಅರಿವು ಇನ್ನೊಂದು ಪ್ರತಿಫಲವಾಗಿದೆ.

ಪಟ್ಟುಹಿಡಿಯುವಿಕೆಯು ಪ್ರತಿಫಲಗಳನ್ನು ತಂದಿದೆ

ಪೈರೀಅಸ್‌ನಲ್ಲಿರುವ ಸಭೆಗಳೊಂದರಲ್ಲಿ ನಾನೀಗ ಒಬ್ಬ ಹಿರಿಯನೋಪಾದಿ ಸೇವೆಸಲ್ಲಿಸುತ್ತಿದ್ದೇನೆ. ಮುದಿಪ್ರಾಯ ಮತ್ತು ಆರೋಗ್ಯದ ಸಮಸ್ಯೆಗಳ ಎದುರಿನಲ್ಲೂ, ನಾನು ಈಗಲೂ ಸಭೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಶಕ್ತನಾಗಿರುವುದಕ್ಕಾಗಿ ಸಂತೋಷಪಡುತ್ತೇನೆ.

ಈ ಎಲ್ಲ ವರ್ಷಗಳಲ್ಲಿ, ಕಷ್ಟಕರ ಪರಿಸ್ಥಿತಿಗಳಲ್ಲಿ, ಕಠಿನ ಪಂಥಾಹ್ವಾನಗಳ ಎದುರಿನಲ್ಲಿ ಹಾಗೂ ಮುನ್ನೋಡಿರದಂಥ ಘಟನೆಗಳಲ್ಲಿ ಅಸಾಧಾರಣ ಮಟ್ಟಿಗಿನ ಧೈರ್ಯ ಹಾಗೂ ಪಟ್ಟುಹಿಡಿಯುವಿಕೆಯು ಆವಶ್ಯಕವಾಗಿತ್ತು. ಆದರೆ ಈ ಸಮಸ್ಯೆಗಳನ್ನು ಜಯಿಸಲು ಬೇಕಾದಂಥ ಬಲವನ್ನು ಯೆಹೋವನು ಯಾವಾಗಲೂ ಕೊಟ್ಟಿದ್ದಾನೆ. “ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದಾಗಲೇ, ನಿನ್ನ ಕೃಪೆಯು ನನಗೆ ಆಧಾರವಾಯಿತು. ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ” ಎಂಬ ಕೀರ್ತನೆಗಾರನ ಮಾತುಗಳ ಸತ್ಯತೆಯನ್ನು ನಾನು ಆಗಿಂದಾಗ್ಗೆ ಅನುಭವಿಸಿದ್ದೇನೆ.​—ಕೀರ್ತನೆ 94:18, 19.

[ಪುಟ 25ರಲ್ಲಿರುವ ಚಿತ್ರ]

1957ರಲ್ಲಿ ಎರಡನೆಯ ಶಸ್ತ್ರಚಿಕಿತ್ಸೆಯ ನಂತರ ನನ್ನ ಹೆಂಡತಿ ಎಲನೀಯೊಂದಿಗೆ

[ಪುಟ 26ರಲ್ಲಿರುವ ಚಿತ್ರ]

1969ರಲ್ಲಿ ಜರ್ಮನಿಯ ನ್ಯೂರೆಂಬರ್ಗ್‌ನಲ್ಲಿ ನಡೆದ ಅಧಿವೇಶನದಲ್ಲಿ

[ಪುಟ 28ರಲ್ಲಿರುವ ಚಿತ್ರ]

ಅಸ್ವಸ್ಥರಿಗೂ ವೃದ್ಧರಿಗೂ ಸಹಾಯಮಾಡುತ್ತಿದ್ದ ಸಹೋದರ ಸಹೋದರಿಯರ ಗುಂಪು