ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸಂಬಂಧಿಕರ ನಡುವಿನ ಮದುವೆಯ ಕುರಿತಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿ ಕೊಡಲ್ಪಟ್ಟಿದ್ದ ನಿರ್ಬಂಧಗಳು ಇಂದು ಎಷ್ಟರ ಮಟ್ಟಿಗೆ ಕ್ರೈಸ್ತರಿಗೆ ಅನ್ವಯವಾಗುತ್ತವೆ?

ಯೆಹೋವನು ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ವಿವಾಹ ಸಮಾರಂಭಗಳು ಮತ್ತು ವಿಧಿವಿಧಾನಗಳ ಕುರಿತಾದ ವಿವರಗಳು ಕೊಡಲ್ಪಟ್ಟಿಲ್ಲ. ಆದರೆ ನಿರ್ದಿಷ್ಟವಾದ ವೈವಾಹಿಕ ಸಂಬಂಧಗಳ ವಿರುದ್ಧ ಅದು ನಿರ್ಬಂಧಗಳನ್ನು ಹಾಕಿತ್ತೆಂಬುದಂತೂ ನಿಜ. ಉದಾಹರಣೆಗಾಗಿ, ಯಾಜಕಕಾಂಡ 18:​6-20ರಲ್ಲಿ, ‘ರಕ್ತಸಂಬಂಧವುಳ್ಳ’ ವ್ಯಕ್ತಿಗಳೊಂದಿಗೆ ನಿಷೇಧಿಸಲ್ಪಟ್ಟಿರುವ ಸಂಬಂಧಗಳ ಕುರಿತಾದ ಒಂದು ಪಟ್ಟಿ ಇದೆ. ಯಾವ್ಯಾವ ರಕ್ತಸಂಬಂಧಿಗಳು ಪರಸ್ಪರ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ಆ ವಚನಗಳು ವಿವರವಾಗಿ ತಿಳಿಸುತ್ತವೆ. ಆದರೆ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲ ಇಲ್ಲವೇ ಅದರ ಕಟ್ಟಳೆಗಳಿಂದ ಬಂಧಿಸಲ್ಪಟ್ಟಿಲ್ಲವೆಂಬುದು ನಿಜ. (ಎಫೆಸ 2:15; ಕೊಲೊಸ್ಸೆ 2:14) ಹಾಗಿದ್ದರೂ, ಕ್ರೈಸ್ತರು ಯಾರೊಂದಿಗೆ ಮದುವೆಯಾಗುತ್ತಾರೆ ಎಂಬುದನ್ನು ಆಯ್ಕೆಮಾಡುವಾಗ, ಈ ವಿಷಯವನ್ನು ಪೂರ್ಣವಾಗಿ ಅಲಕ್ಷಿಸಸಾಧ್ಯವಿದೆ ಎಂಬುದು ಇದರರ್ಥವಲ್ಲ. ಇದಕ್ಕೆ ಹಲವಾರು ಕಾರಣಗಳಿವೆ.

ಮೊದಲನೆಯದಾಗಿ, ರಕ್ತಸಂಬಂಧಿಗಳ ನಡುವಿನ ವಿವಾಹದ ಕುರಿತು ಲೌಕಿಕ ಕಾನೂನುಗಳಿವೆ. ಮತ್ತು ಕ್ರೈಸ್ತರು ತಾವು ಜೀವಿಸುತ್ತಿರುವ ದೇಶದ ನಿಯಮಗಳಿಗೆ ವಿಧೇಯರಾಗಲು ಮೂಲತಃ ಹಂಗುಳ್ಳವರಾಗಿದ್ದಾರೆ. (ಮತ್ತಾಯ 22:21; ರೋಮಾಪುರ 13:1) ಅಂಥ ಕಾನೂನುಗಳು, ಬೇರೆ ಬೇರೆ ಸ್ಥಳಗಳಲ್ಲಿ ಭಿನ್ನ ಭಿನ್ನವಾಗಿರುತ್ತವೆ ನಿಜ. ಈ ರೀತಿಯ ಹೆಚ್ಚಿನ ಆಧುನಿಕ ಕಾನೂನುಗಳು, ಪ್ರಮುಖವಾಗಿ ಆನುವಂಶೀಯ ವಿಚಾರಗಳ ಮೇಲೆ ಆಧಾರಿತವಾಗಿರುತ್ತವೆ. ಹತ್ತಿರದ ರಕ್ತಸಂಬಂಧಿಗಳ ನಡುವಿನ ವಿವಾಹಗಳಲ್ಲಿ, ಮಕ್ಕಳು ಆನುವಂಶೀಯ ದೋಷಗಳು ಮತ್ತು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಈ ಕಾರಣದಿಂದಾಗಿ ಮತ್ತು ‘ಮೇಲಿನ ಅಧಿಕಾರಿಗಳಿಗೆ ಅಧೀನತೆ’ಯನ್ನು ತೋರಿಸುವ ಕಾರಣಕ್ಕಾಗಿ, ವಿವಾಹವಾಗುವ ಕ್ರೈಸ್ತರು ವಿವಾಹದ ಕುರಿತಾದ ಸ್ಥಳಿಕ ಕಾನೂನುಗಳನ್ನು ಪಾಲಿಸುತ್ತಾರೆ.

ಮತ್ತೊಂದು ವಿಷಯವೂ ಇದೆ. ಒಬ್ಬ ವ್ಯಕ್ತಿಯು ಜೀವಿಸುತ್ತಿರುವ ಸಮುದಾಯದಲ್ಲಿ ಯಾವುದು ಅಂಗೀಕಾರಾರ್ಹವಾಗಿದೆ ಮತ್ತು ಯಾವುದು ಅಂಗೀಕಾರಾರ್ಹವಾಗಿಲ್ಲವೆಂಬುದೇ. ಬಹುಮಟ್ಟಿಗೆ ಪ್ರತಿಯೊಂದು ಸಂಸ್ಕೃತಿಯಲ್ಲಿ, ಹತ್ತಿರದ ರಕ್ತಸಂಬಂಧಿಗಳ ನಡುವಿನ ವಿವಾಹಗಳನ್ನು ಹೆಚ್ಚಾಗಿ ಅಗಮ್ಯಗಮನವೆಂದೂ ಈ ಕಾರಣದಿಂದ ನಿಷೇಧಿತವೆಂದೂ ಪರಿಗಣಿಸುತ್ತಾ, ಅಂಥ ವಿವಾಹಗಳನ್ನು ತಡೆಯುವ ನಿಯಮಗಳೂ ಪದ್ಧತಿಗಳೂ ಇವೆ. ವಿಭಿನ್ನ ಸಂಸ್ಕೃತಿಗಳಲ್ಲಿ ಯಾವ ನಿರ್ದಿಷ್ಟ ಸಂಬಂಧಗಳಲ್ಲಿ ವಿವಾಹವು ನಿಷೇಧಿಸಲ್ಪಟ್ಟಿದೆ ಎಂಬ ವಿಷಯದಲ್ಲಿ ತುಂಬ ವ್ಯತ್ಯಾಸಗಳಿದ್ದರೂ, “ಸಾಮಾನ್ಯವಾಗಿ ಹೇಳುವುದಾದರೆ, ಇಬ್ಬರು ವ್ಯಕ್ತಿಗಳ ನಡುವಿನ ವಂಶವಾಹಿ ಸಂಬಂಧವು ಎಷ್ಟು ಹತ್ತಿರವಾಗಿದೆಯೊ, ಅವರ ನಡುವಿನ ಲೈಂಗಿಕ ಸಂಬಂಧವನ್ನು ನಿಷೇಧಿಸುವ ಇಲ್ಲವೇ ನಿರುತ್ತೇಜಿಸುವ ನಿಷಿದ್ಧತೆಯು ಅಷ್ಟೇ ಹೆಚ್ಚು ಪ್ರಬಲವೂ ಹೆಚ್ಚು ತೀವ್ರವೂ ಆಗಿರುತ್ತದೆ” ಎಂದು ದಿ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ಹೀಗಿರುವುದರಿಂದ, ಅಗಮ್ಯಗಮನದ ಸಂಬಂಧಗಳು ಒಳಗೂಡಿರದಿದ್ದರೂ, ಕ್ರೈಸ್ತರು ತಮ್ಮ ಸಮುದಾಯದ ಸ್ಥಾಪಿತ ಪದ್ಧತಿಗಳನ್ನು, ಇಲ್ಲವೇ ನ್ಯಾಯಸಮ್ಮತವಾದ ಸೂಕ್ಷ್ಮತೆಗಳನ್ನು ಪೂರ್ಣವಾಗಿ ಅಲಕ್ಷಿಸುವಂಥ ರೀತಿಯಲ್ಲಿ ವರ್ತಿಸಲು ಬಯಸದಿರುವರು. ಏಕೆಂದರೆ ಕ್ರೈಸ್ತ ಸಭೆಯ ಮೇಲಾಗಲಿ, ದೇವರ ಹೆಸರಿನ ಮೇಲಾಗಲಿ ಅವರು ನಿಂದೆಯನ್ನು ತರಲು ಬಯಸುವುದಿಲ್ಲ.​—2 ಕೊರಿಂಥ 6:3.

ನಾವು ಅಲಕ್ಷಿಸಬಾರದಂಥ ಇನ್ನೊಂದು ವಿಷಯವು, ನಮ್ಮ ದೇವದತ್ತ ಮನಸ್ಸಾಕ್ಷಿಯಾಗಿದೆ. ಹುಟ್ಟುವಾಗಲೇ ಎಲ್ಲ ಜನರಿಗೂ ಸರಿ ಮತ್ತು ತಪ್ಪು ಹಾಗೂ ಒಳ್ಳೇದು ಮತ್ತು ಕೆಟ್ಟದ್ದರ ಕುರಿತಾದ ಪ್ರಜ್ಞೆಯಿರುತ್ತದೆ. (ರೋಮಾಪುರ 2:15) ಅವರ ಮನಸ್ಸಾಕ್ಷಿಯು ಒಂದುವೇಳೆ ವಿಕೃತವಾದ ಆಚರಣೆಗಳಿಂದಾಗಿ ಡೊಂಕಾಗಿರದಿರುವಲ್ಲಿ ಇಲ್ಲವೇ ಕಠಿನವಾಗಿರದಿರುವಲ್ಲಿ, ಯಾವುದು ಸ್ವಾಭಾವಿಕವೂ ಯೋಗ್ಯವೂ ಆಗಿದೆ ಮತ್ತು ಯಾವುದು ಅಸ್ವಾಭಾವಿಕವೂ ಹೇಯಕರವಾದದ್ದೂ ಆಗಿದೆಯೆಂಬುದನ್ನು ಅದು ಅವರಿಗೆ ಹೇಳುತ್ತದೆ. ಆಪ್ತ ರಕ್ತಸಂಬಂಧಿಗಳ ನಡುವಿನ ಮದುವೆಯ ವಿರುದ್ಧ ಯೆಹೋವನು ಇಸ್ರಾಯೇಲ್ಯರಿಗೆ ತನ್ನ ಧರ್ಮಶಾಸ್ತ್ರವನ್ನು ಕೊಟ್ಟಾಗ, ಯೆಹೋವನು ಈ ವಾಸ್ತವಾಂಶಕ್ಕೆ ಪರೋಕ್ಷವಾಗಿ ಸೂಚಿಸಿದನು. ನಾವು ಹೀಗೆ ಓದುತ್ತೇವೆ: “ನೀವು ವಾಸವಾಗಿದ್ದ ಐಗುಪ್ತದೇಶದ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಬರಮಾಡುವ ಕಾನಾನ್‌ದೇಶದ ಆಚರಣೆಗಳನ್ನೂ ನೀವು ಅನುಸರಿಸಬಾರದು; ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಬಾರದು.” (ಯಾಜಕಕಾಂಡ 18:3) ಕ್ರೈಸ್ತರಿಗೆ ಅವರ ಬೈಬಲ್‌ ಆಧಾರಿತ ಮನಸ್ಸಾಕ್ಷಿಯು ತುಂಬ ಅಮೂಲ್ಯವಾದದ್ದಾಗಿದೆ, ಮತ್ತು ಅದು ರಾಷ್ಟ್ರಗಳ ತಪ್ಪುಒಪ್ಪುಗಳ ಕುರಿತಾದ ತಿರುಚಲ್ಪಟ್ಟ ಪ್ರಜ್ಞೆಯಿಂದ ಭ್ರಷ್ಟವಾಗುವಂತೆ ಅನುಮತಿಸುವುದಿಲ್ಲ.​—ಎಫೆಸ 4:​17-19.

ಹಾಗಾದರೆ ನಾವು ಯಾವ ತೀರ್ಮಾನಕ್ಕೆ ಬರಬಹುದು? ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇಲ್ಲ. ಆದರೆ ಅದೇ ಸಮಯದಲ್ಲಿ, ಅವರ ಮನಸ್ಸಾಕ್ಷಿಯು, ಹತ್ತಿರದ ರಕ್ತಸಂಬಂಧಿಗಳ ನಡುವೆ, ಉದಾಹರಣೆಗೆ ತಂದೆ ಮಗಳು, ತಾಯಿ ಮಗ, ಸಹೋದರ ಸಹೋದರಿಯರ ನಡುವಿನ ವಿವಾಹವು ಕ್ರೈಸ್ತ ಸಮುದಾಯದಲ್ಲಿ ಸಂಪೂರ್ಣವಾಗಿ ನಿಷೇಧಿತವೆಂದು ಹೇಳುತ್ತದೆ. * ರಕ್ತಸಂಬಂಧಿಗಳ ವೃತ್ತವು ದೊಡ್ಡದಾಗುತ್ತಾ ಹೋದಂತೆ, ಕಾನೂನುಬದ್ಧ ವಿವಾಹವನ್ನು ನಿಯಂತ್ರಿಸುವ ನಿಯಮಗಳೂ ಕಟ್ಟಳೆಗಳೂ ಇವೆ ಮತ್ತು ಸಾಮಾಜಿಕವಾಗಿಯೂ ಸಾಂಸ್ಕೃತಿಕವಾಗಿಯೂ ಅಂಗೀಕಾರಾರ್ಹವಾಗಿರುವ ಮಟ್ಟಗಳು ಇವೆಯೆಂಬುದನ್ನು ಕ್ರೈಸ್ತರು ಅಂಗೀಕರಿಸುತ್ತಾರೆ. “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು” ಎಂಬ ಶಾಸ್ತ್ರೀಯ ಬುದ್ಧಿವಾದವನ್ನು ನಾವು ಪಾಲಿಸಲು ಶಕ್ತರಾಗುವಂತೆ, ಇದೆಲ್ಲವನ್ನೂ ಜಾಗರೂಕತೆಯಿಂದ ಪರಿಗಣಿಸಬೇಕು.​—ಇಬ್ರಿಯ 13:4.

[ಪಾದಟಿಪ್ಪಣಿ]

^ ಪ್ಯಾರ. 7 ಈ ವಿಷಯದ ಕುರಿತಾದ ವಿವರವಾದ ಚರ್ಚೆಗಾಗಿ, 1978, ಮಾರ್ಚ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ 25-6ನೆಯ ಪುಟಗಳಲ್ಲಿರುವ “ಅಗಮ್ಯಗಮನ ವಿವಾಹಗಳು​—ಅವುಗಳ ಬಗ್ಗೆ ಕ್ರೈಸ್ತರ ಅಭಿಪ್ರಾಯ ಏನಾಗಿರಬೇಕು?” ಎಂಬ ಲೇಖನವನ್ನು ದಯವಿಟ್ಟು ನೋಡಿ.