ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವಚ್ಛತೆ ಅದರ ನಿಜಾರ್ಥವೇನು?

ಸ್ವಚ್ಛತೆ ಅದರ ನಿಜಾರ್ಥವೇನು?

ಸ್ವಚ್ಛತೆ ಅದರ ನಿಜಾರ್ಥವೇನು?

ಯೂರೋಪ್‌ ಮತ್ತು ಅಮೆರಿಕದಲ್ಲಿ 18 ಹಾಗೂ 19ನೆಯ ಶತಮಾನಗಳಲ್ಲಿದ್ದ ತೀರ ಅಸಹ್ಯವಾದ, ನೈರ್ಮಲ್ಯವಿಲ್ಲದ ಪರಿಸ್ಥಿತಿಗಳಿಂದಾಗಿ, ಆ ಅವಧಿಯಲ್ಲಿದ್ದ ಮಿಷನೆರಿಗಳು “ಸ್ವಚ್ಛತೆಯ ಬೋಧನೆ” ಎಂದು ಯಾವುದನ್ನು ಕರೆಯಲಾಯಿತೊ ಅದರ ಬಗ್ಗೆ ಪ್ರಚಾರ ಮಾಡಿದರು. ಈ ಬೋಧನೆಯು, ಅಸ್ವಚ್ಛತೆಯು ಪಾಪಕ್ಕೆ ಸಮಾನವೆಂದೂ, ಸ್ವಚ್ಛತೆಯಾದರೋ ಒಬ್ಬ ವ್ಯಕ್ತಿಯನ್ನು ದೇವರ ಸಮೀಪಕ್ಕೆ ತರುವುದೆಂದೂ ತಿಳಿಸಿತು. ಬಹುಶಃ ಈ ಕಾರಣದಿಂದಲೇ, “ಸ್ವಚ್ಛತೆ ದೈವಭಕ್ತಿಗೆ ದ್ವಿತೀಯ” ಎಂಬ ಇಂಗ್ಲಿಷ್‌ ನಾಣ್ಣುಡಿಯು ಜನಪ್ರಿಯವಾಯಿತು.

ವಿಲ್ಯಮ್‌ ಮತ್ತು ಕ್ಯಾತರಿನ್‌ ಬೂತ್‌ ಎಂಬವರು ಸ್ಥಾಪಿಸಿದ ‘ಸಾಲ್ವೇಷನ್‌ ಆರ್ಮಿ’ ಎಂಬ ಗುಂಪು, ಈ ದೃಷ್ಟಿಕೋನವನ್ನು ಸ್ವೀಕರಿಸಿತು. ಸೌವಾರ್ತಿಕ ಪರಂಪರೆಯಲ್ಲಿ ಆರೋಗ್ಯ ಮತ್ತು ಔಷಧ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, ಅವರ ಅತ್ಯಾರಂಭದ ಧ್ಯೇಯಮಂತ್ರಗಳಲ್ಲಿ ಒಂದು “ಸಾಬೂನು, ಸಾರು ಮತ್ತು ರಕ್ಷಣೆ” (“ಸೋಪ್‌, ಸೂಪ್‌ ಆ್ಯಂಡ್‌ ಸಾಲ್ವೇಷನ್‌”) ಎಂದಾಗಿತ್ತು. ಅನಂತರ, ಲೂಯಿ ಪ್ಯಾಶ್ಚರ್‌ ಮತ್ತು ಇತರರು, ರೋಗ ಹಾಗೂ ಬ್ಯಾಕ್ಟೀರಿಯಕ್ಕಿರುವ ನಂಟನ್ನು ಖಡಾಖಂಡಿತವಾಗಿ ರುಜುಪಡಿಸಿದಾಗ, ಅದು ಹೆಚ್ಚು ಉತ್ತಮವಾದ ಸಾರ್ವಜನಿಕ ಆರೋಗ್ಯ ಕಾರ್ಯಯೋಜನೆಗಳಿಗೆ ಪುಷ್ಟಿಯನ್ನು ಮತ್ತು ವೈಜ್ಞಾನಿಕ ಆಧಾರವನ್ನೂ ಕೊಟ್ಟಿತು.

ಆ ಕೂಡಲೇ ಕೆಲವು ಕ್ರಮಗಳನ್ನು ಜಾರಿಗೆ ತರಲಾಯಿತು. ಅದರಲ್ಲಿ, ನ್ಯಾಯಾಲಯದಲ್ಲಿ ಒಬ್ಬ ಸಾಕ್ಷಿಯು ಬೈಬಲಿಗೆ ಮುತ್ತಿಡುವುದನ್ನು ಮತ್ತು ಶಾಲೆಗಳಲ್ಲಿ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಎಲ್ಲರೂ ಒಂದೇ ಲೋಟದಿಂದ ಕುಡಿಯುವ ರೂಢಿಯನ್ನು ನಿಲ್ಲಿಸಲಾಯಿತು. ಚರ್ಚಿನ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸಲಾಗುತ್ತಿದ್ದ ಒಂದೇ ಕುಡಿಯುವ ಪಾತ್ರೆಯ ಬದಲಿಗೆ ಪ್ರತಿಯೊಬ್ಬ ವ್ಯಕ್ತಿಗೆ ಪ್ರತ್ಯೇಕವಾದ ಕುಡಿಯುವ ಪಾತ್ರೆಗಳನ್ನು ಕೊಡಲೂ ಪ್ರಯತ್ನಗಳನ್ನು ಮಾಡಲಾಯಿತು. ಆ ಆರಂಭದ ಮೂಲಕರ್ತರು, ಸ್ವಚ್ಛತೆಯ ಕಡೆಗೆ ಜನರ ಮನೋಭಾವಗಳನ್ನು ಬದಲಾಯಿಸುವುದರಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದರೆಂದು ತೋರುತ್ತದೆ. ಇದು ಎಷ್ಟು ಯಶಸ್ವಿಯಾಗಿತ್ತೆಂದರೆ, ಒಬ್ಬ ಲೇಖಕಿಯು ಅದರ ಪರಿಣಾಮವನ್ನು “ಸ್ವಚ್ಛತೆಯೊಂದಿಗಿನ ಒಂದು ಪ್ರೇಮ ವ್ಯವಹಾರ” ಎಂದು ಕರೆದಳು.

ಆದರೆ ಈ ‘ಸ್ವಚ್ಛತೆಯೊಂದಿಗಿನ ಪ್ರೇಮ ವ್ಯವಹಾರವು’ ಕೇವಲ ಮೇಲುಮೇಲಿನದ್ದಾಗಿತ್ತು. ಸ್ವಲ್ಪ ಸಮಯದೊಳಗೆ, ಸಾಹಸಿ ವ್ಯಾಪಾರಿಗಳು ಸಾಮಾನ್ಯವಾದ ಸಾಬೂನನ್ನು ಒಂದು ಸೌಂದರ್ಯ ಸಾಧನವಾಗಿ ಪರಿವರ್ತಿಸಿದರು. ಚಾತುರ್ಯದಿಂದ ತಯಾರಿಸಲಾದ ಜಾಹೀರಾತುಗಳು, ವೈಯಕ್ತಿಕ ನೈರ್ಮಲ್ಯಕ್ಕಾಗಿರುವ ಒಂದು ನಿರ್ದಿಷ್ಟ ಉತ್ಪಾದನೆಯನ್ನು ಉಪಯೋಗಿಸುವುದು ಆ ಬಳಕೆದಾರನಿಗೆ, ಇತರರು ಈರ್ಷ್ಯೆಪಡುವಂಥ ರೀತಿಯ ಸಾಮಾಜಿಕ ಸ್ಥಾನಮಾನವನ್ನು ಕೊಡುವುದೆಂದು ನಂಬುವಂತೆ ಮಾಡಿದವು. ಮತ್ತು ಟಿವಿ ಈ ಭ್ರಾಂತಿಗೆ ಒತ್ತಾಸೆಯನ್ನು ಕೊಡುತ್ತದೆ. ಜಾಹೀರಾತುಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಬರುವ ಯಶಸ್ವೀ ಹಾಗೂ ಬೆಡಗಿನ ವ್ಯಕ್ತಿಗಳು, ಮನೆಯನ್ನು ಸ್ವಚ್ಛಗೊಳಿಸುವುದನ್ನು, ಅಂಗಳ ಗುಡಿಸುವುದನ್ನು, ಕಸ ಎಸೆಯುವುದನ್ನು ಇಲ್ಲವೇ ತಮ್ಮ ಮುದ್ದಿನ ಬೆಕ್ಕುಗಳು ಮತ್ತು ನಾಯಿಗಳ ಮಲವನ್ನು ತೆಗೆದುಹಾಕಿ ಸ್ವಚ್ಛಗೊಳಿಸುವುದನ್ನು ನಾವು ಎಂದೂ ನೋಡುವುದಿಲ್ಲ.

ಕೆಲಸಕ್ಕೆ ಹೋಗುವುದರಿಂದ ಜೀವನದ ಖರ್ಚುಗಳಿಗಾಗಿ ಹಣವಾದರೂ ಸಿಗುತ್ತದೆ, ಆದರೆ ಮನೆಕೆಲಸ ಇಲ್ಲವೇ ಇನ್ನಿತರ ಶುಚಿಗೊಳಿಸುವ ಕೆಲಸಗಳಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಹೀಗೆ ಯಾವುದೇ ಹಣಕಾಸಿನ ಲಾಭವಿಲ್ಲದಿರುವುದರಿಂದ, ಪರಿಸರದ ಸ್ವಚ್ಛತೆಯ ಕುರಿತಾಗಿ ಏಕೆ ಚಿಂತಿಸಬೇಕು ಎಂದು ತರ್ಕಿಸುವವರೂ ಇದ್ದಾರೆ. ಈ ರೀತಿಯ ತರ್ಕದ ಒಂದು ಫಲಿತಾಂಶವೇನೆಂದರೆ, ಇಂದು ಕೆಲವು ಜನರು ಸ್ವಚ್ಛತೆ ಅಂದರೆ ಕೇವಲ ತಮ್ಮ ಸ್ವಂತ ದೈಹಿಕ ನೈರ್ಮಲ್ಯವೆಂದು ನೆನಸುತ್ತಾರೆ.

ಸ್ವಚ್ಛತೆಯ ಬಗ್ಗೆ ದೇವರ ದೃಷ್ಟಿಕೋನ

ಸ್ವಚ್ಛತೆಯನ್ನು ಕಲಿಸುವುದಕ್ಕಾಗಿ ಮಾಡಲ್ಪಟ್ಟ ಆರಂಭದ ಪ್ರಯತ್ನಗಳು ಜನರ ಬದುಕುವ ಪರಿಸ್ಥಿತಿಗಳನ್ನು ನಿಸ್ಸಂದೇಹವಾಗಿಯೂ ಸುಧಾರಿಸಿದವು. ಹೀಗೆ ಪರಿಸ್ಥಿತಿಗಳು ಉತ್ತಮಗೊಂಡದ್ದು ಯಥೋಚಿತವಾಗಿತ್ತು, ಯಾಕೆಂದರೆ ಸ್ವಚ್ಛತೆಯು, ಪವಿತ್ರನೂ ಶುದ್ಧನೂ ಆಗಿರುವ ದೇವರಾದ ಯೆಹೋವನಿಗೆ ಸೇರಿರುವ ಮತ್ತು ಆತನಿಂದಲೇ ಉತ್ಪತ್ತಿಯಾಗಿರುವ ಒಂದು ಗುಣವಾಗಿದೆ. ಮತ್ತು ನಮ್ಮ ಎಲ್ಲ ರೀತಿನೀತಿಗಳಲ್ಲಿ ಪವಿತ್ರರೂ ಶುದ್ಧರೂ ಆಗಿರುವ ಮೂಲಕ ನಾವು ಪ್ರಯೋಜನಹೊಂದುವಂತೆ ಆತನು ಕಲಿಸುತ್ತಾನೆ.​—ಯೆಶಾಯ 48:​17; 1 ಪೇತ್ರ 1:15.

ಈ ವಿಷಯದಲ್ಲಿ ಯೆಹೋವ ದೇವರು ಆದರ್ಶಪ್ರಾಯನಾಗಿದ್ದಾನೆ. ಆತನ ಇತರ ಅದೃಶ್ಯ ಗುಣಗಳೊಂದಿಗೆ, ಆತನ ದೃಶ್ಯ ಸೃಷ್ಟಿಯಲ್ಲಿ ಸ್ವಚ್ಛತೆಯನ್ನು ಸ್ಪಷ್ಟವಾಗಿ ನೋಡಸಾಧ್ಯವಿದೆ. (ರೋಮಾಪುರ 1:20) ಸೃಷ್ಟಿಯು ತಾನೇ ಯಾವುದೇ ರೀತಿಯ ಶಾಶ್ವತ ಮಾಲಿನ್ಯವನ್ನು ಉಂಟುಮಾಡುವುದಿಲ್ಲ ಎಂಬುದನ್ನು ನಾವು ನೋಡಬಹುದು. ಪರಿಸರಸಂಬಂಧಿತ ಚಕ್ರಗಳುಳ್ಳ ಈ ಭೂಮಿಯು, ಸ್ವಶುಚಿಗೊಳಿಸುವ ಒಂದು ಅದ್ಭುತವಾಗಿದೆ. ಸ್ವಚ್ಛ, ಆರೋಗ್ಯಕರ ಜೀವನವನ್ನು ನಡೆಸುವಂಥ ರೀತಿಯಲ್ಲಿ ಅದನ್ನು ವಿನ್ಯಾಸಿಸಲಾಗಿದೆ. ಅಂಥ ಸ್ವಚ್ಛವಾದ ಕೃತಿಯನ್ನು, ಸ್ವಚ್ಛವಾಗಿರುವ ಒಬ್ಬ ವಿನ್ಯಾಸಕನು ಮಾತ್ರ ನಿರ್ಮಿಸಶಕ್ತನು. ಹೀಗಿರುವುದರಿಂದ, ದೇವರ ಆರಾಧಕರು ತಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ಶುದ್ಧರಾಗಿರಬೇಕೆಂಬುದನ್ನು ಇದೆಲ್ಲದ್ದರಿಂದ ನಾವು ತಾರ್ಕಿಕವಾಗಿ ಊಹಿಸಬಹುದು.

ಸ್ವಚ್ಛತೆಯ ನಾಲ್ಕು ಕ್ಷೇತ್ರಗಳು

ದೇವರ ಆರಾಧಕರು ಸ್ಚಚ್ಛರಾಗಿರಬೇಕಾದ ನಾಲ್ಕು ಕ್ಷೇತ್ರಗಳನ್ನು ಬೈಬಲ್‌ ತಿಳಿಸುತ್ತದೆ. ಇವುಗಳನ್ನು ನಾವು ಒಂದೊಂದಾಗಿ ಪರಿಗಣಿಸೋಣ.

ಆತ್ಮಿಕ ಸ್ವಚ್ಛತೆ. ಇದನ್ನು ಎಲ್ಲದ್ದಕ್ಕಿಂತಲೂ ಅತಿ ಪ್ರಾಮುಖ್ಯ ಸ್ವಚ್ಛತೆಯಾಗಿ ಪರಿಗಣಿಸಬೇಕು. ಯಾಕೆಂದರೆ ಇದಕ್ಕೂ ಒಬ್ಬ ವ್ಯಕ್ತಿಯ ನಿತ್ಯಜೀವದ ಪ್ರತೀಕ್ಷೆಗಳಿಗೂ ನಿಕಟ ಸಂಬಂಧವಿದೆ. ಆದರೆ ಸ್ವಚ್ಛತೆಯ ಸಂಬಂಧದಲ್ಲಿ ಅತಿ ಹೆಚ್ಚಾಗಿ ನಿರ್ಲಕ್ಷಿಸಲ್ಪಡುವ ಕ್ಷೇತ್ರವು ಇದೇ ಆಗಿರುತ್ತದೆ. ಸರಳವಾದ ಮಾತುಗಳಲ್ಲಿ ಹೇಳುವುದಾದರೆ, ಆತ್ಮಿಕವಾಗಿ ಸ್ವಚ್ಛರಾಗಿರುವುದರ ಅರ್ಥ, ಸತ್ಯ ಹಾಗೂ ಸುಳ್ಳಾರಾಧನೆಯ ನಡುವೆ ದೇವರು ಇಟ್ಟಿರುವ ರೇಖೆಯನ್ನು ಎಂದೂ ದಾಟದಿರುವುದೇ ಆಗಿದೆ. ಏಕೆಂದರೆ ಎಲ್ಲ ವಿಧದ ಸುಳ್ಳಾರಾಧನೆಯು ದೇವರ ದೃಷ್ಟಿಯಲ್ಲಿ ಅಶುದ್ಧವಾಗಿದೆ. ಅಪೊಸ್ತಲ ಪೌಲನು ಬರೆದುದು: “ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ.” (2 ಕೊರಿಂಥ 6:17) ಈ ವಿಷಯದಲ್ಲಿ ಶಿಷ್ಯನಾದ ಯಾಕೋಬನು ಸಹ ತುಂಬ ಸ್ಪಷ್ಟವಾಗಿ ತಿಳಿಸುವುದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ [“ಆರಾಧನೆ,” NW].”​—ಯಾಕೋಬ 1:27.

ಸುಳ್ಳಾರಾಧನೆಯನ್ನು ತನ್ನ ಸತ್ಯಾರಾಧನೆಯೊಂದಿಗೆ ಬೆರೆಸುವುದರ ಬಗ್ಗೆ ದೇವರು ತನ್ನ ಅಸಮ್ಮತಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾನೆ. ಸುಳ್ಳಾರಾಧನೆಯಲ್ಲಿ ಅನೇಕವೇಳೆ ಅಶುದ್ಧ ಆಚರಣೆಗಳು ಮತ್ತು ಅಸಹ್ಯಕರವಾದ ವಿಗ್ರಹಗಳು ಮತ್ತು ದೇವತೆಗಳು ಸೇರಿರುತ್ತವೆ. (ಯೆರೆಮೀಯ 32:35) ಹೀಗಿರುವುದರಿಂದ, ಸತ್ಯ ಕ್ರೈಸ್ತರು ಅಶುದ್ಧಾರಾಧನೆಯಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳುವುದರಿಂದ ದೂರವಿರುವಂತೆ ಪ್ರೇರೇಪಿಸಲ್ಪಟ್ಟಿದ್ದಾರೆ.​—1 ಕೊರಿಂಥ 10:​20, 21; ಪ್ರಕಟನೆ 18:4.

ನೈತಿಕ ಸ್ವಚ್ಛತೆ. ಇಲ್ಲಿಯೂ, ಯಾವುದು ಶುದ್ಧವಾಗಿದೆ ಮತ್ತು ಯಾವುದು ಅಶುದ್ಧವಾಗಿದೆ ಎಂಬುದರ ನಡುವೆ ದೇವರು ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸುತ್ತಾನೆ. ಒಟ್ಟಿನಲ್ಲಿ ನೋಡುವುದಾದರೆ, ಈ ಜಗತ್ತು ಎಫೆಸ 4:​17-19ರಲ್ಲಿ ವರ್ಣಿಸಲ್ಪಟ್ಟಿರುವ ಸ್ಥಿತಿಗೆ ಬಂದು ತಲಪಿದೆ: “ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ; ಅವರ ಮನಸ್ಸು ಮೊಬ್ಬಾಗಿ ಹೋಗಿದೆ, ಅವರು . . . ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ. ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.” ಇಂಥ ಅನೈತಿಕ ಯೋಚನಾಧಾಟಿಯು ಅನೇಕ ವಿಧಗಳಲ್ಲಿ ಬಹಿರಂಗವಾಗಿಯೋ ನವಿರಾದ ರೀತಿಯಲ್ಲೊ ವ್ಯಕ್ತವಾಗುತ್ತದೆ. ಆದುದರಿಂದ ಕ್ರೈಸ್ತರು ಎಚ್ಚರಿಕೆಯಿಂದಿರಬೇಕು.

ವೇಶ್ಯಾವಾಟಿಕೆ, ಸಲಿಂಗೀಕಾಮ, ವಿವಾಹಪೂರ್ವ ಲೈಂಗಿಕತೆ ಮತ್ತು ಅಶ್ಲೀಲ ಸಾಹಿತ್ಯವು, ನೈತಿಕ ಶುದ್ಧತೆಯ ಕುರಿತಾದ ಯೆಹೋವನ ಮಟ್ಟವನ್ನು ಉಲ್ಲಂಘಿಸುತ್ತದೆಂದು ದೇವರನ್ನು ಪ್ರೀತಿಸುವವರಿಗೆ ತಿಳಿದಿದೆ. ಆದರೆ ಈ ಆಚರಣೆಗಳ ಕೆಲವೊಂದು ರೂಪಗಳು, ಮನೋರಂಜನೆ ಹಾಗೂ ಫ್ಯಾಷನ್‌ ಜಗತ್ತಿನಲ್ಲಿ ಸರ್ವಸಾಮಾನ್ಯವಾಗಿವೆ. ಆದುದರಿಂದ, ಇಂಥ ಪ್ರವೃತ್ತಿಗಳ ವಿರುದ್ಧ ಕ್ರೈಸ್ತರು ಎಚ್ಚರವಾಗಿರಬೇಕು. ಕ್ರೈಸ್ತ ಕೂಟಗಳಿಗೆ ಇಲ್ಲವೇ ಸಾಮಾಜಿಕ ಗೋಷ್ಠಿಗಳಿಗೆ ಹೋಗುವಾಗ ಗಿಡ್ಡವಾದ, ಮೈತೋರುವಂಥ ಬಟ್ಟೆಗಳನ್ನು ಧರಿಸುವುದು, ಒಬ್ಬ ವ್ಯಕ್ತಿಯ ದೇಹದತ್ತ ಅನಾವಶ್ಯಕವಾದ ಗಮನವನ್ನು ಸೆಳೆಯುತ್ತದೆ ಮತ್ತು ಶೀಲದ ಕೊರತೆಯನ್ನು ಪ್ರಕಟಿಸುತ್ತದೆ. ಅದು ಕ್ರೈಸ್ತ ಸಾಹಚರ್ಯದೊಳಗೆ ಅಶುದ್ಧವಾದ ಲೌಕಿಕ ಯೋಚನಾಧಾಟಿಯನ್ನು ತರುತ್ತದಲ್ಲದೆ, ಆ ರೀತಿಯ ಉಡುಗೆಯು ಇತರರ ಮನಸ್ಸಿನಲ್ಲಿ ಅಶುದ್ಧವಾದ ಆಲೋಚನೆಗಳು ಹುಟ್ಟುವಂತೆ ಮಾಡುತ್ತದೆ. ಕ್ರೈಸ್ತರು “ಮೇಲಣಿಂದ ಬರುವ ವಿವೇಕ”ವನ್ನು ಪ್ರದರ್ಶಿಸುವುದಕ್ಕಾಗಿ ಕ್ರಿಯೆಗೈಯಬೇಕಾದ ಒಂದು ಕ್ಷೇತ್ರ ಇದಾಗಿದೆ.​—ಯಾಕೋಬ 3:17, NW.

ಮಾನಸಿಕ ಸ್ವಚ್ಛತೆ. ನಿಮ್ಮ ಮನದಾಳದಲ್ಲಿ ಅಡಗಿರುವ ಅತಿ ಗುಪ್ತವಾದ ಆಲೋಚನೆಗಳು, ಅಶುದ್ಧವಾದ ಆಲೋಚನೆಗಳ ಠೇವಣಿ ಪೆಟ್ಟಿಗೆಯಾಗಿರಬಾರದು. ಯೇಸು ಅಂಥ ಅಶುದ್ಧವಾದ ಯೋಚನೆಯ ಕುರಿತಾಗಿ ಎಚ್ಚರಿಸಿದನು. ಅವನಂದದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:28; ಮಾರ್ಕ 7:20-23) ಈ ಮಾತುಗಳು ಅಶ್ಲೀಲ ಚಿತ್ರಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸುವುದು, ಅಶ್ಲೀಲವಾದ ಲೈಂಗಿಕ ಚಟುವಟಿಕೆಗಳ ಕುರಿತಾದ ವೃತ್ತಾಂತಗಳನ್ನು ಓದುವುದು, ಮತ್ತು ಹಾಡುಗಳ ಲೈಂಗಿಕವಾಗಿ ಉದ್ರೇಕಿಸುವ ಪದಗಳಿಗೆ ಕಿವಿಗೊಡುವುದಕ್ಕೂ ಅನ್ವಯವಾಗುತ್ತವೆ. ಹೀಗಿರುವುದರಿಂದ, ಅಶುದ್ಧವಾದ, ಅಪವಿತ್ರ ಮಾತು ಮತ್ತು ಕ್ರಿಯೆಗಳನ್ನು ಉಂಟುಮಾಡಬಲ್ಲ ಅಶುದ್ಧ ವಿಚಾರಗಳನ್ನು ಪೋಷಿಸುವ ಮೂಲಕ ಕ್ರೈಸ್ತರು ತಮ್ಮನ್ನೇ ಮಲಿನಗೊಳಿಸಿಕೊಳ್ಳುವುದರಿಂದ ದೂರವಿರಬೇಕು.​—ಮತ್ತಾಯ 12:34; 15:18.

ಶಾರೀರಿಕ ಸ್ವಚ್ಛತೆ. ಬೈಬಲಿನಲ್ಲಿ ಪವಿತ್ರತೆ ಮತ್ತು ಶಾರೀರಿಕ ಸ್ವಚ್ಛತೆಯನ್ನು ನಿಕಟವಾಗಿ ಸಂಬಂಧಿಸಲಾಗಿದೆ. ಉದಾಹರಣೆಗಾಗಿ ಪೌಲನು ಬರೆದುದು: “ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ಆದುದರಿಂದ ಸತ್ಯ ಕ್ರೈಸ್ತರು, ಪರಿಸ್ಥಿತಿಗಳು ಅನುಮತಿಸುವಷ್ಟು ಸಮಯ ತಮ್ಮ ದೇಹ, ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಯೂ ಚೊಕ್ಕಟವಾಗಿಯೂ ಇಡಲು ಪ್ರಯತ್ನಿಸಬೇಕು. ತೊಳೆಯಲಿಕ್ಕಾಗಿ ಇಲ್ಲವೇ ಸ್ನಾನಮಾಡಲಿಕ್ಕಾಗಿ ಎಲ್ಲಿ ನೀರಿನ ಕೊರತೆಯಿದೆಯೊ ಅಲ್ಲಿಯೂ ಕ್ರೈಸ್ತರು ತಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಅಂದವಾಗಿಟ್ಟುಕೊಳ್ಳಲು ತಮ್ಮಿಂದಾದದ್ದೆಲ್ಲವನ್ನೂ ಮಾಡಲು ಪ್ರಯತ್ನಿಸಬೇಕು.

ಶಾರೀರಿಕ ಸ್ವಚ್ಛತೆಯ ಅರ್ಥ, ದೇಹವನ್ನು ಮಲಿನಗೊಳಿಸಿ ಹಾನಿಮಾಡುವ ಯಾವುದೇ ರೀತಿಯ ತಂಬಾಕು ಉಪಯೋಗ, ಮದ್ಯದ ಅತಿಸೇವನೆ ಮತ್ತು ಯಾವುದೇ ವಿಧದ ಅಮಲೌಷಧ ದುರುಪಯೋಗದಿಂದ ದೂರವಿರುವುದೂ ಆಗಿದೆ. ಪರಮಗೀತದಲ್ಲಿ ವರ್ಣಿಸಲ್ಪಟ್ಟಿರುವ ಕುರುಬನು, ಶೂಲೇಮ್ಯ ಹುಡುಗಿಯ ಬಟ್ಟೆಯ ಸುವಾಸನೆಯನ್ನು ಆನಂದಿಸಿದನು. (ಪರಮ ಗೀತ 4:11) ನಮ್ಮ ಸುತ್ತಲಿರುವವರ ಮೂಗಿಗೆ ಕೆಟ್ಟ ವಾಸನೆಯು ಬಡಿಯಬಾರದೆಂದು ನಾವು ಅಪೇಕ್ಷಿಸುವುದರಿಂದ, ನಮ್ಮ ಶಾರೀರಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಒಂದು ಪ್ರೀತಿಯ ಕ್ರಿಯೆಯಾಗಿದೆ. ಸುಗಂಧದ್ರವ್ಯಗಳ ಬಳಕೆಯು ಒಳ್ಳೇದಾಗಿದೆಯಾದರೂ, ದಿನಾಲೂ ಸ್ನಾನಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದಕ್ಕೆ ಯಾವುದೇ ಬದಲಿಯಿಲ್ಲ.

ಸಮತೂಕದ ದೃಷ್ಟಿಕೋನವನ್ನಿಡುವುದು

ಶಾರೀರಿಕ ಸ್ವಚ್ಛತೆಯ ವಿಷಯದಲ್ಲಿ ಜನರು ವೈಪರೀತ್ಯಕ್ಕೆ ಹೋಗಬಲ್ಲರು. ಒಂದು ಕಡೆಯಲ್ಲಿ, ಸ್ವಚ್ಛತೆಯ ಕುರಿತಾಗಿ ವಿಪರೀತವಾದ ಕಾಳಜಿಯು ಜೀವನದ ಆನಂದವನ್ನು ಕಸಿದುಕೊಳ್ಳಬಲ್ಲದು ಮತ್ತು ಅಮೂಲ್ಯವಾಗಿರುವ ಬಹಳಷ್ಟು ಸಮಯವನ್ನೂ ಕಬಳಿಸಬಲ್ಲದು. ಆದರೆ ಇನ್ನೊಂದು ಕಡೆಯಲ್ಲಿ, ಗಲೀಜಾಗಿರುವ ಮತ್ತು ಅಸ್ತವ್ಯಸ್ತವಾಗಿರುವ ಮನೆಗಳನ್ನು ರಿಪೇರಿಮಾಡುವುದು ದುಬಾರಿಯಾಗಿ ಪರಿಣಮಿಸಬಲ್ಲದು. ಈ ವೈಪರೀತ್ಯಗಳ ನಡುವೆ, ನಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಅಂದವಾಗಿರುವ ರೀತಿಯಲ್ಲಿಡುವ ವ್ಯಾವಹಾರಿಕ, ಸಮತೂಕದ ಮಾರ್ಗವು ಇದೆ.

ನಿಮ್ಮ ಮನೆಯನ್ನು ಸರಳವಾಗಿಡಿರಿ. ವಸ್ತುಗಳಿಂದ ಅಸ್ತವ್ಯಸ್ತವಾಗಿರುವ ಮನೆಗಳನ್ನು ಅಥವಾ ಕೋಣೆಗಳನ್ನು ಸ್ವಚ್ಛಗೊಳಿಸುವುದು ಕಷ್ಟಕರವಾಗಿರುತ್ತದೆ ಮಾತ್ರವಲ್ಲ, ಅಂಥ ಕಿಕ್ಕಿರಿದಿರುವ ಪರಿಸರದಲ್ಲಿ ಕಸವನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಿಲ್ಲದಿರಬಹುದು. ಸರಳವಾದ, ಅಸ್ತವ್ಯಸ್ತವಾಗಿರದ ಮನೆಗಳನ್ನು ಸ್ವಚ್ಛಗೊಳಿಸಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಬೈಬಲಿನಲ್ಲಿ ಒಂದು ಸರಳವಾದ ಜೀವನ ಶೈಲಿಯನ್ನು ಶಿಫಾರಸ್ಸುಮಾಡಲಾಗಿದೆ: “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.”​—1 ತಿಮೊಥೆಯ 6:8.

ಅಚ್ಚುಕಟ್ಟಾಗಿಡಿರಿ. ಮನೆಯನ್ನು ಸ್ವಚ್ಛವಾಗಿಡುವುದು, ಅದರಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಕೋಣೆಗಳು ಅಚ್ಚುಕಟ್ಟಾಗಿಲ್ಲದಿರುವಾಗ ಮನೆಗಳು ಅಚ್ಚುಕಟ್ಟಾಗಿರುವುದಿಲ್ಲ. ಅಚ್ಚುಕಟ್ಟುತನ ಅಂದರೆ, ಪ್ರತಿಯೊಂದು ವಸ್ತುವು ಆಯಾ ಸ್ಥಳದಲ್ಲಿರುವುದೇ. ಉದಾಹರಣೆಗಾಗಿ, ಕೊಳಕು ಬಟ್ಟೆಗಳನ್ನು ಹಾಕುವ ಸ್ಥಳ, ಮಲಗುವ ಕೋಣೆಯ ನೆಲವಾಗಿರಬಾರದು. ಮತ್ತು ಹೆಚ್ಚು ಗಂಭೀರವಾದ ಸಂಗತಿಯೇನೆಂದರೆ, ಆಟಿಕೆಗಳು ಮತ್ತು ಉಪಕರಣಗಳು ಎಲ್ಲೆಂದರಲ್ಲಿ ಬಿದ್ದಿರುವುದು ಅಪಾಯಕ್ಕೆ ಕರೆಕೊಟ್ಟಂತಿರುತ್ತದೆ. ಮನೆಯಲ್ಲಿ ಅಚ್ಚುಕಟ್ಟುತನವಿಲ್ಲದಿರುವ ಕಾರಣದಿಂದಲೇ ಅನೇಕ ಅಪಘಾತಗಳಾಗುತ್ತವೆ.

ಸ್ವಚ್ಛತೆ ಮತ್ತು ಕ್ರೈಸ್ತ ಜೀವನ ರೀತಿಯು, ಬೇರ್ಪಡಿಸಲಾಗದಂಥ ಸಂಗತಿಯಾಗಿದೆ. ಪ್ರವಾದಿಯಾದ ಯೆಶಾಯನು ದೈವಿಕ ಜೀವನ ರೀತಿಯನ್ನು “ಪರಿಶುದ್ಧ ಮಾರ್ಗ” ಎಂದು ಕರೆಯುತ್ತಾನೆ. ಮತ್ತು “ಯಾವ ಅಶುದ್ಧನೂ ಅಲ್ಲಿ ನಡೆಯನು” ಎಂಬ ವಿಚಾರಪ್ರೇರಕ ವಿಷಯವನ್ನೂ ಅವನು ಕೂಡಿಸುತ್ತಾನೆ. (ಯೆಶಾಯ 35:8) ಹೌದು, ಸ್ವಚ್ಛತೆಯ ಒಳ್ಳೆಯ ರೂಢಿಗಳನ್ನು ಬೆಳೆಸಿಕೊಳ್ಳುವುದು, ದೇವರು ಬೇಗನೆ ಒಂದು ಶುದ್ಧವಾದ ಪರದೈಸ ಭೂಮಿಯನ್ನು ಸ್ಥಾಪಿಸುವನೆಂಬ ಆತನ ವಾಗ್ದಾನದಲ್ಲಿ ನಮಗಿರುವ ನಂಬಿಕೆಯ ಬಲವಾದ ರುಜುವಾತಾಗಿರುತ್ತದೆ. ಈ ಸುಂದರವಾದ ಭೂಗ್ರಹದ ಎಲ್ಲ ಭಾಗಗಳಲ್ಲಿ, ಎಲ್ಲ ಜನರು ದೇವರ ಸ್ವಚ್ಛತೆಯ ಪರಿಪೂರ್ಣ ಮಟ್ಟಗಳಿಗೆ ಹೊಂದಿಕೆಯಲ್ಲಿ ಸಂಪೂರ್ಣವಾಗಿ ನಡೆದುಕೊಳ್ಳುವಾಗ, ಅವರು ಯೆಹೋವ ದೇವರನ್ನು ಮಹಿಮೆಗೊಳಿಸುವರು.​—ಪ್ರಕಟನೆ 7:9.

[ಪುಟ 6ರಲ್ಲಿರುವ ಚಿತ್ರ]

ಒಂದು ಮನೆಯನ್ನು ಸ್ವಚ್ಛವಾಗಿಡುವುದು, ಅದರಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ

[ಪುಟ 7ರಲ್ಲಿರುವ ಚಿತ್ರ]

ಈ ಭೂಮಿಯು, ಸ್ವಶುಚಿಗೊಳಿಸುವ ಒಂದು ಅದ್ಭುತವಾಗಿದೆ