ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದರ ಬೆಲೆ ಎಷ್ಟು?

ಒಂದು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದರ ಬೆಲೆ ಎಷ್ಟು?

ಒಂದು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದರ ಬೆಲೆ ಎಷ್ಟು?

“ಇಪ್ಪತ್ತು ಸಾವಿರ ರಿಯಲ್ಸ್‌ ಹಣವನ್ನು ತೆಗೆದುಕೊಳ್ಳುವಂತೆ ಸರಕಾರಕ್ಕೆ ಅಪ್ಪಣೆ.” ಈ ಅಸಾಮಾನ್ಯವಾದ ತಲೆಬರಹವು, ಇತ್ತೀಚೆಗೆ ಬ್ರಸಿಲ್‌ನ ಕೊರಾಯೊ ಡು ಪೊವು ಎಂಬ ವಾರ್ತಾಪತ್ರಿಕೆಯಲ್ಲಿತ್ತು. ಈ ಲೇಖನವು, ಒಬ್ಬ ಸ್ಥಳಿಕ ಪೋಸ್ಟ್‌ಮ್ಯಾನ್‌ ಆಗಿದ್ದ ಲೂಯಿಜ್‌ ಆಲ್ವೊ ಡಾ ಅರೌಜೊರವರ ಕಥೆಯನ್ನು ಹೇಳುತ್ತಿತ್ತು. ಅವನು ರಾಜ್ಯ ಸರಕಾರಕ್ಕೆ ಸ್ವಲ್ಪ ಜಮೀನನ್ನು ಮಾರಿದ್ದನು. ತನ್ನ ಜಮೀನನ್ನು ಸರಕಾರಕ್ಕೆ ಕೊಟ್ಟ ನಂತರ, ಒಪ್ಪಲ್ಪಟ್ಟಿದ್ದ ಬೆಲೆಗಿಂತಲೂ 20,000 ಹೆಚ್ಚು ರಿಯಲ್ಸ್‌ಗಳನ್ನು (ಸರಿಸುಮಾರು, 8,000 ಡಾಲರುಗಳು) ತನಗೆ ಕೊಡಲಾಗಿದೆಯೆಂಬುದನ್ನು ಕಂಡುಹಿಡಿದು ಲೂಯಿಜನು ಚಕಿತನಾದನು!

ಆದರೆ ಈ ಹೆಚ್ಚಿನ ಹಣವನ್ನು ಹಿಂದಿರುಗಿಸುವುದು ಸುಲಭದ ಕೆಲಸವಾಗಿರಲಿಲ್ಲ. ಸರಕಾರಿ ಇಲಾಖೆಗಳಿಗೆ ಎಷ್ಟೋ ಸಲ ಹೋದರೂ ಏನೂ ಪ್ರಯೋಜನವಾಗದಿದ್ದಾಗ, ಲೂಯಿಜನಿಗೆ ಒಬ್ಬ ವಕೀಲನನ್ನು ಹಿಡಿದು, ಈ ಸಮಸ್ಯೆಯನ್ನು ನ್ಯಾಯಾಲಯದಲ್ಲಿ ಇತ್ಯರ್ಥಗೊಳಿಸುವಂತೆ ಸಲಹೆ ನೀಡಲಾಯಿತು. “ಬಹುಶಃ ಯಾರೋ ಈ ತಪ್ಪನ್ನು ಮಾಡಿದ್ದಿರಬಹುದು, ಆದರೆ ಕೆಂಪು ಪಟ್ಟಿಯಿಂದಾಗಿ, ಇದನ್ನು ಹೇಗೆ ಬಗೆಹರಿಸುವುದೆಂದು ಯಾರಿಗೂ ಗೊತ್ತಿರಲಿಲ್ಲ,” ಎಂದು ನ್ಯಾಯಾಧೀಶರು ಹೇಳಿದರು. ಸರಕಾರವು ಆ ಹಣವನ್ನು ತೆಗೆದುಕೊಂಡು ಎಲ್ಲ ಕಾನೂನುಸಂಬಂಧಿತ ಖರ್ಚುಗಳನ್ನು ಪಾವತಿಮಾಡುವ ತೀರ್ಪನ್ನು ಅವರು ಕೊಟ್ಟರು. “ನಾನು ಈ ವಿಧದ ಮೊಕದ್ದಮೆಯನ್ನು ನೋಡಿರುವುದು ಇದೇ ಮೊದಲು.”

ಒಬ್ಬ ಯೆಹೋವನ ಸಾಕ್ಷಿಯಾಗಿದ್ದ ಲೂಯಿಜನು ವಿವರಿಸುವುದು: “ಹಕ್ಕಿಗನುಸಾರ ನನಗೆ ಸೇರಿರದ ಆ ಹಣವನ್ನು ನನ್ನ ಬಳಿ ಇಟ್ಟುಕೊಳ್ಳಲು ನನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ಬಿಡಲಿಲ್ಲ. ನಾನು ಹೇಗಾದರೂ ಮಾಡಿ ಆ ಹಣವನ್ನು ಹಿಂದಿರುಗಿಸಲೇಬೇಕಿತ್ತು.”

ಈ ರೀತಿಯ ಮನೋಭಾವವು ಅನೇಕರಿಗೆ ವಿಚಿತ್ರವಾದದ್ದು ಇಲ್ಲವೇ ಅರ್ಥವಾಗದಂಥದ್ದಾಗಿಯೂ ತೋರಬಹುದು. ಆದರೆ ಸತ್ಯ ಕ್ರೈಸ್ತರು, ಲೌಕಿಕ ಅಧಿಕಾರಿಗಳೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದಕ್ಕೆ ತುಂಬ ಮಹತ್ವವನ್ನು ಕೊಡುತ್ತಾರೆಂದು ದೇವರ ವಾಕ್ಯವು ತೋರಿಸುತ್ತದೆ. (ರೋಮಾಪುರ 13:5) ಯೆಹೋವನ ಸಾಕ್ಷಿಗಳು ‘ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” NW] ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು, ತಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿಯನ್ನು ಹೊಂದಲು’ ದೃಢನಿರ್ಧಾರವುಳ್ಳವರಾಗಿದ್ದಾರೆ.​—ಇಬ್ರಿಯ 13:18.