ಗಾಳಿಯಲ್ಲಿ ಒಂದು ಮರೆ
ಗಾಳಿಯಲ್ಲಿ ಒಂದು ಮರೆ
ಯುರೋಪಿನ ಉನ್ನತ ಪರ್ವತ ಪ್ರದೇಶಗಳಲ್ಲಿ, ಆಲ್‌ಪೈನ್ ರೋಸ್ ಎಂಬ ಹೆಸರಿನ ಒಂದು ಬಲವಾದ ಪೊದೆಯು ಬೆಳೆಯುತ್ತಿರುವುದನ್ನು ನೀವು ನೋಡಬಹುದು. ಈ ಕುಬ್ಜ ರೋಡಡೆಂಡ್ರನ್ ಪೊದೆಯು, ಹೆಚ್ಚಾಗಿ ಆ ಪ್ರಾಂತದ ಮೇಲ್ಭಾಗದಲ್ಲಿ ಬೀಸುವ ತೀಕ್ಷ್ಣವಾದ ಗಾಳಿಯ ವಿರುದ್ಧ ಸಂರಕ್ಷಣೆಯನ್ನು ಪಡೆಯಲು ನೆಲಕ್ಕೆ ಒತ್ತೊತ್ತಾಗಿ, ದಟ್ಟವಾದ ತಗ್ಗಿದ ಪೊದರುಗಳಾಗಿ ಬೆಳೆಯುತ್ತದೆ. ಸತತವಾಗಿ ಬೀಸುವ ಗಾಳಿಯು, ಆ ಉನ್ನತ ಪ್ರದೇಶದಲ್ಲಿರುವ ಗಿಡಗಳ ತಾಪಮಾನವನ್ನು ಇಳಿಸುವ ಮೂಲಕ, ಗಾಳಿ ಮತ್ತು ಮಣ್ಣನ್ನು ಒಣಗಿಸುವ ಮೂಲಕ ಮತ್ತು ಅವುಗಳ ಬೇರುಗಳನ್ನು ಕಿತ್ತುಹಾಕುವ ಮೂಲಕ ಅವುಗಳ ಅಸ್ತಿತ್ವಕ್ಕೆ ಬೆದರಿಕೆಯನ್ನೊಡ್ಡುತ್ತದೆ.
ಹೆಚ್ಚಾಗಿ ಬಂಡೆಗಳ ಸಂದುಗಳಲ್ಲಿ ಬೆಳೆಯುವ ಮೂಲಕ, ಆಲ್‌ಪೈನ್ ರೋಸ್ ಗಿಡವು ಆ ಗಾಳಿಯ ಹಾವಳಿಯಿಂದ ತಪ್ಪಿಸಿಕೊಳ್ಳುತ್ತದೆ. ಈ ಸ್ಥಳಗಳಲ್ಲಿ ಹೆಚ್ಚು ಮಣ್ಣು ಇರದಿದ್ದರೂ, ಆ ಬಂಡೆಸಂದುಗಳು ಗಾಳಿಯ ವಿರುದ್ಧ ರಕ್ಷಣೆಯನ್ನು ಕೊಡುತ್ತವೆ ಮತ್ತು ಆ ಗಿಡವು ನೀರನ್ನು ಶೇಖರಿಸಿಡಲು ಸಹಾಯಮಾಡುತ್ತವೆ. ವರ್ಷದಲ್ಲಿ ಹೆಚ್ಚಿನ ಸಮಯ ದೃಷ್ಟಿಯಿಂದ ಕಾರ್ಯತಃ ಮರೆಯಾಗಿರುವ ಈ ರೋಡಡೆಂಡ್ರನ್ ಗಿಡಗಳು, ಬೇಸಗೆ ಸಮಯದಲ್ಲಿ ಆ ಪರ್ವತಗಳನ್ನು ಉಜ್ವಲವಾದ ಕೆಂಪು ಬಣ್ಣದ ಹೂವುಗಳಿಂದ ಅಲಂಕರಿಸುತ್ತವೆ.
ದೇವರು ‘ಅಧಿಪತಿಗಳನ್ನು’ ನೇಮಿಸುವನು ಮತ್ತು ಪ್ರತಿಯೊಬ್ಬರೂ “ಗಾಳಿಯಲ್ಲಿ ಮರೆಯಂತೆ” ಇರುವರೆಂದು ಪ್ರವಾದಿಯಾದ ಯೆಶಾಯನು ವಿವರಿಸಿದನು. (ಯೆಶಾಯ 32:1, 2) ರಾಜನಾದ ಯೇಸು ಕ್ರಿಸ್ತನ ನಿರ್ದೇಶನದ ಕೆಳಗೆ ಈ ಆತ್ಮಿಕ ಅಧಿಪತಿಗಳು ಇಲ್ಲವೇ ಮೇಲ್ವಿಚಾರಕರು, ಸ್ಥಿರವಾದ ಬಂಡೆಕಲ್ಲುಗಳಂತೆ ಒತ್ತಡ ಇಲ್ಲವೇ ಸಂಕಷ್ಟದ ಸಮಯದಲ್ಲಿ ದೃಢರಾಗಿರುವರು. ಕಷ್ಟದ ಸಮಯದಲ್ಲಿ ಇವರು ವಿಶ್ವಾಸಾರ್ಹವಾದ ಆಶ್ರಯವನ್ನೂ ಒದಗಿಸುವರು ಮತ್ತು ಕಷ್ಟದಲ್ಲಿರುವವರು ದೇವರ ವಾಕ್ಯದಿಂದ ಆತ್ಮಿಕ ನೀರಿನ ದಾಸ್ತಾನುಗಳನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುವರು.
ಹಿಂಸೆ, ನಿರುತ್ತೇಜನ, ದೌರ್ಬಲ್ಯ ಎಂಬ ಬಿರುಸಾದ ಗಾಳಿಯು ಒಬ್ಬ ಕ್ರೈಸ್ತನನ್ನು ಅಪ್ಪಳಿಸಿ, ಅವನಿಗೆ ಸಂರಕ್ಷಣೆಯಿಲ್ಲದಿರುವಲ್ಲಿ ಅವನ ನಂಬಿಕೆಯು ಬಾಡಿಹೋಗುವಂತೆ ಮಾಡಬಲ್ಲದು. ಕ್ರೈಸ್ತ ಹಿರಿಯರು ಆ ವ್ಯಕ್ತಿಯ ಸಮಸ್ಯೆಯೇನೆಂಬುದನ್ನು ಗಮನಕೊಟ್ಟು ಆಲಿಸಿ, ಬೈಬಲ್ ಆಧಾರಿತ ಸಲಹೆಯನ್ನು ಕೊಟ್ಟು, ಉತ್ತೇಜನವನ್ನು ಇಲ್ಲವೇ ವ್ಯಾವಹಾರಿಕ ಸಹಾಯವನ್ನು ಕೊಡುವ ಮೂಲಕ ಸಂರಕ್ಷಣೆಯನ್ನು ನೀಡಬಲ್ಲರು. ತಮ್ಮ ನೇಮಿತ ರಾಜನಾದ ಯೇಸು ಕ್ರಿಸ್ತನಂತೆ, “ತೊಳಲಿ ಬಳಲಿ ಹೋಗಿ”ರುವವರಿಗೆ ಅವರು ಸಹಾಯಮಾಡಲು ಬಯಸುತ್ತಾರೆ. (ಮತ್ತಾಯ 9:36) ಮತ್ತು ಸುಳ್ಳು ಬೋಧನೆಗಳೆಂಬ ಗಾಳಿಗಳಿಂದ ಹಾನಿಗೊಳಗಾಗಿರುವ ಇನ್ನಿತರರಿಗೂ ಅವರು ನೆರವನ್ನು ನೀಡಲು ಆಸೆಪಡುತ್ತಾರೆ. (ಎಫೆಸ 4:14) ಸರಿಯಾದ ಸಮಯದಲ್ಲಿ ಕೊಡಲ್ಪಡುವ ಅಂಥ ನೆರವು ಅತ್ಯಾವಶ್ಯಕವಾಗಿರಬಲ್ಲದು.
ಮಿರ್ಯಮ್ ಎಂಬುವಳು ವಿವರಿಸುವುದು: “ನನ್ನ ಜೀವನದಲ್ಲಿ ನಾನು ಒಂದು ವೇದನಾಮಯ ಅವಧಿಯಲ್ಲಿದ್ದೆ. ಯಾಕೆಂದರೆ ಸಭೆಯಲ್ಲಿದ್ದ ನನ್ನ ಕೆಲವು ಆಪ್ತ ಮಿತ್ರರು ಸತ್ಯವನ್ನು ಬಿಟ್ಟುಹೋದರು, ಮತ್ತು ಅದೇ ಸಮಯದಲ್ಲಿ ನನ್ನ ತಂದೆಗೆ ಮಿದುಳಿನ ರಕ್ತಸ್ರಾವವಾಯಿತು. ನನ್ನ ಖಿನ್ನಾವಸ್ಥೆಯನ್ನು ಜಯಿಸುವ ಪ್ರಯತ್ನದಲ್ಲಿ ನಾನು ಒಬ್ಬ ಲೌಕಿಕ ಹುಡುಗನೊಂದಿಗೆ ಪ್ರಣಯ ಸಂಬಂಧವನ್ನು ಆರಂಭಿಸಿದೆ. ಸ್ವಲ್ಪ ಸಮಯದ ನಂತರವೇ, ನಾನು ಅಯೋಗ್ಯಳೆಂಬ ಭಾವನೆಯು ನನ್ನಲ್ಲಿ ಹುಟ್ಟಿರಲಾಗಿ, ನಾನು ಸತ್ಯವನ್ನು ಬಿಟ್ಟುಹೋಗಲು ನಿರ್ಣಯಿಸಿದ್ದೇನೆಂದು ಸಭೆಯ ಹಿರಿಯರಿಗೆ ತಿಳಿಸಿದೆ. ಯಾಕೆಂದರೆ ಯೆಹೋವನು ನನ್ನನ್ನು ಪ್ರೀತಿಸಲಾರನೆಂದು ನನಗೆ ಖಡಾಖಂಡಿತವಾಗಿ ತಿಳಿದಿತ್ತು.
“ಈ ನಿರ್ಣಾಯಕ ಸಮಯದಲ್ಲಿ, ಒಬ್ಬ ಕರುಣಾಮಯಿ ಹಿರಿಯನು ನಾನು ಒಬ್ಬ ರೆಗ್ಯುಲರ್ ಪಯನೀಯರ್ ಶುಶ್ರೂಷಕಳೋಪಾದಿ ಸೇವೆಸಲ್ಲಿಸಿದ ವರ್ಷಗಳ ಕುರಿತು ನನಗೆ ಜ್ಞಾಪಕಹುಟ್ಟಿಸಿದನು. ನಾನು ಯಾವಾಗಲೂ ನಿನ್ನ ನಂಬಿಗಸ್ತಿಕೆಯನ್ನು ಮೆಚ್ಚುತ್ತಿದ್ದೆ ಎಂದು ಅವನು ನನಗೆ ಹೇಳಿದನು. ಮತ್ತು ನನಗೆ ಸಹಾಯಮಾಡುವಂತೆ ಅಂದರೆ ಯೆಹೋವನ ಪ್ರೀತಿಯ ಬಗ್ಗೆ ನನಗೆ ಪುನರಾಶ್ವಾಸನೆ ಕೊಡುವಂತೆ ಹಿರಿಯರಿಗೆ ಒಂದು ಅವಕಾಶ ಕೊಡಲು ಅವನು ವಿನಂತಿಸಿದನು. ಆ ನಿರ್ಣಾಯಕ ಸಮಯದಲ್ಲಿ ಅವನು ತೋರಿಸಿದ ಪ್ರೀತಿಭರಿತ ಆಸಕ್ತಿಯು, ನನಗೆ ನನ್ನ ಸುತ್ತಲೂ ಬೀಸುತ್ತಿದ್ದ ಆ ಆತ್ಮಿಕ ಚಂಡಮಾರುತದ ಸಮಯದಲ್ಲಿ ಒಂದು ‘ಮರೆಯಂತೆ’ ಇತ್ತು. ಒಂದು ತಿಂಗಳೊಳಗೆ, ನನ್ನ ಬಾಯ್‌ಫ್ರೆಂಡಿನೊಂದಿಗಿದ್ದ ನನ್ನ ಸಂಬಂಧವನ್ನು ನಾನು ಕೊನೆಗಾಣಿಸಿದೆ, ಮತ್ತು ಅಂದಿನಿಂದ ಸತ್ಯದ ಮಾರ್ಗದಲ್ಲಿ ನಡೆಯುವುದನ್ನು ನಾನು ಮುಂದುವರಿಸಿದ್ದೇನೆ.”
ಸರಿಯಾದ ಸಮಯದಲ್ಲಿ ಕೊಡಲ್ಪಡುವ ಸಂರಕ್ಷಣೆಯ ಕಾರಣದಿಂದ ಜೊತೆ ಕ್ರೈಸ್ತರು ಆತ್ಮಿಕವಾಗಿ ನಳನಳಿಸುತ್ತಿರುವುದನ್ನು ನೋಡುವಾಗ ಹಿರಿಯರಿಗೆ ಧನ್ಯ ಭಾವನೆಯುಂಟಾಗುತ್ತದೆ. ಮತ್ತು ಈ ‘ಮರೆಯ’ ಸ್ಥಾನಗಳು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ನಾವು ಆನಂದಿಸಲಿರುವ ಹೇರಳವಾದ ಆತ್ಮಿಕ ಸಹಾಯದ ಮುನ್‌ರುಚಿಯನ್ನು ಕೊಡುತ್ತವೆ.