ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಸಾಂಟ್ಯಮ್‌ನಲ್ಲಿ ಚರ್ಚು ಮತ್ತು ಸರಕಾರ

ಬೈಸಾಂಟ್ಯಮ್‌ನಲ್ಲಿ ಚರ್ಚು ಮತ್ತು ಸರಕಾರ

ಬೈಸಾಂಟ್ಯಮ್‌ನಲ್ಲಿ ಚರ್ಚು ಮತ್ತು ಸರಕಾರ

ಕ್ರೈಸ್ತ ಧರ್ಮದ ಸ್ಥಾಪಕನು, ತನ್ನ ಹಿಂಬಾಲಕರು ಮತ್ತು ದೇವರಿಂದ ದೂರ ಸರಿದಿರುವ ಮಾನವ ಜಗತ್ತಿನ ನಡುವೆ ಇರಬೇಕಾದ ಎದ್ದುಕಾಣುವಂಥ ವ್ಯತ್ಯಾಸದ ಕುರಿತು ತುಂಬ ಸ್ಪಷ್ಟವಾಗಿ ತಿಳಿಸಿದನು. ಯೇಸು ತನ್ನ ಹಿಂಬಾಲಕರಿಗಂದದ್ದು: “ನೀವು ಲೋಕದ ಕಡೆಯವರಾಗಿ [“ಭಾಗವಾಗಿ,” NW]ರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು; ಆದರೆ ನೀವು ಲೋಕದ ಕಡೆಯವರಲ್ಲದೆ [“ಭಾಗವಾಗಿಲ್ಲದೆ,” NW] ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.” (ಯೋಹಾನ 15:19) ತನ್ನ ದಿನದಲ್ಲಿದ್ದ ರಾಜಕೀಯ ಶಕ್ತಿಯ ಪ್ರತಿನಿಧಿಯಾಗಿದ್ದ ಪಿಲಾತನ ಮುಂದೆ ಯೇಸು ಘೋಷಿಸಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ.”​—ಯೋಹಾನ 18:36.

“ಭೂಲೋಕದ ಕಟ್ಟಕಡೆಯ ವರೆಗೂ” ಸಾರುವ ತಮ್ಮ ಜವಾಬ್ದಾರಿಯನ್ನು ಪೂರೈಸಲಿಕ್ಕಾಗಿ, ಕ್ರೈಸ್ತರು ಲೌಕಿಕ ವ್ಯವಹಾರಗಳಿಂದ ಅಪಕರ್ಷಿಸಲ್ಪಡುವುದರಿಂದ ದೂರವಿರಬೇಕಿತ್ತು. (ಅ. ಕೃತ್ಯಗಳು 1:8) ಯೇಸುವಿನಂತೆ, ಆರಂಭದ ಕ್ರೈಸ್ತರು ರಾಜಕೀಯದಲ್ಲಿ ಒಳಗೂಡಲಿಲ್ಲ. (ಯೋಹಾನ 6:15) ನಂಬಿಗಸ್ತ ಕ್ರೈಸ್ತರು, ಯಾವುದೇ ಸರಕಾರಿ

ಅಧಿಕಾರ ಇಲ್ಲವೇ ಆಡಳಿತದ ಪದವಿಗಳಿಗೆ ಸೇರಿಕೊಳ್ಳುತ್ತಿರಲಿಲ್ಲವೆಂಬುದು ಎಲ್ಲರ ಗಮನಕ್ಕೂ ಬಂದ ಸಂಗತಿಯಾಗಿತ್ತು. ಆದರೆ ಈ ಸ್ಥಿತಿಯು ಕಾಲಕ್ರಮೇಣ ಬದಲಾಯಿತು.

“ಲೋಕದ ಭಾಗ”

ಅಪೊಸ್ತಲರಲ್ಲಿ ಕೊನೆಯವನು ಮರಣಪಟ್ಟು ಸ್ವಲ್ಪ ಸಮಯದ ನಂತರ, ಧಾರ್ಮಿಕ ಮುಖಂಡರು ತಮ್ಮ ಕುರಿತಾಗಿ ಮತ್ತು ಲೋಕದ ಕುರಿತಾಗಿ ತಮಗಿದ್ದ ಅಭಿಪ್ರಾಯಗಳನ್ನು ಸಂತೋಷದಿಂದ ಬದಲಾಯಿಸಲಾರಂಭಿಸಿದರು. ಈ ಲೋಕದಲ್ಲಿ ಇರುವಂಥದ್ದೂ, ಅದರ ಭಾಗವೂ ಆಗಿರುವ ಒಂದು “ರಾಜ್ಯದ” ಕುರಿತಾಗಿ ಅವರು ಊಹಿಸಿಕೊಳ್ಳಲಾರಂಭಿಸಿದರು. ಬೈಸಾಂಟ್ಯಮ್‌ನಲ್ಲಿ (ಈಗ ಇಸ್ತಾಂಬುಲ್‌) ರಾಜಧಾನಿಯನ್ನು ಹೊಂದಿದ್ದ ಬೈಸಾಂಟೈನ್‌ ಸಾಮ್ರಾಜ್ಯದಲ್ಲಿ, ಅಂದರೆ ಪೂರ್ವ ರೋಮನ್‌ ಸಾಮ್ರಾಜ್ಯದಲ್ಲಿ ಧರ್ಮ ಮತ್ತು ರಾಜಕೀಯಗಳು ಹೇಗೆ ಪರಸ್ಪರ ಹೆಣೆದುಕೊಂಡಿದ್ದವು ಎಂಬುದರ ಕಡೆಗಿನ ಒಂದು ನೋಟವು, ತುಂಬ ಬೋಧಪ್ರದವಾಗಿರುವುದು.

ಧರ್ಮವು ಪರಂಪರಾಗತವಾಗಿ ಒಂದು ದೊಡ್ಡ ಪಾತ್ರವನ್ನು ವಹಿಸುತ್ತಿದ್ದ ಒಂದು ಸಮಾಜದಲ್ಲಿ, ಬೈಸಾಂಟೈನ್‌ ಚರ್ಚು ಬಹಳಷ್ಟು ಅಧಿಕಾರವನ್ನು ಚಲಾಯಿಸುತ್ತಿತ್ತು. ಅದರ ಕೇಂದ್ರವು ಬೈಸಾಂಟ್ಯಮ್‌ನಲ್ಲಿತ್ತು. ಚರ್ಚ್‌ ಇತಿಹಾಸಗಾರರಾದ ಪನಯೊಟೀಸ್‌ ಕ್ರೀಸ್ಟು ಒಮ್ಮೆ ಹೀಗಂದರು: “ಬೈಸಾಂಟೈನ್‌ ಜನರು, ತಮ್ಮ ಭೂಸಾಮ್ರಾಜ್ಯವು ದೇವರ ರಾಜ್ಯವನ್ನು ಪ್ರತಿಬಿಂಬಿಸುತ್ತಿದೆಯೆಂದು ನಂಬುತ್ತಿದ್ದರು.” ಆದರೆ ಅಲ್ಲಿನ ಸಾಮ್ರಾಜ್ಯಶಾಹಿ ಅಧಿಕಾರವು ಯಾವಾಗಲೂ ಈ ದೃಷ್ಟಿಕೋನದಲ್ಲಿ ಭಾಗಿಯಾಗಲಿಲ್ಲ. ಫಲಸ್ವರೂಪವಾಗಿ ಕೆಲವೊಂದು ಸಮಯ ಚರ್ಚು ಮತ್ತು ಸರಕಾರದ ನಡುವಿನ ಸಂಬಂಧವು ಕೋಲಾಹಲಮಯವಾಗಿರುತ್ತಿತ್ತು. ದಿ ಆಕ್ಸ್‌ಫರ್ಡ್‌ ಡಿಕ್ಷನೆರಿ ಆಫ್‌ ಬೈಸಾಂಟ್ಯಮ್‌ ತಿಳಿಸುವುದು: “ಕಾನ್ಸ್‌ಟಾಂಟಿನೋಪಲಿನ [ಇಲ್ಲವೇ ಬೈಸಾಂಟ್ಯಮ್‌ನ] ಬಿಷಪರು ವಿಭಿನ್ನ ರೀತಿಯ ನಡವಳಿಕೆಯನ್ನು ಪ್ರದರ್ಶಿಸಿದರು. ಇದರಲ್ಲಿ, ಒಬ್ಬ ಶಕ್ತಿಶಾಲಿ ರಾಜನಿಗೆ ಪುಕ್ಕಲುತನದಿಂದ ಅಧೀನತೆಯನ್ನು ತೋರಿಸುವುದು . . . , ಸಮ್ರಾಟನೊಂದಿಗೆ ಲಾಭದಾಯಕ ಸಹಯೋಗ . . . , ಮತ್ತು ಸಮ್ರಾಟನ ಸಂಕಲ್ಪದ ವಿರುದ್ಧ ಧೀರ ವಿರೋಧವು ಒಳಗೂಡಿತ್ತು.”

ಪ್ರಾಚ್ಯ ಚರ್ಚಿನ ಮುಖಂಡನಾಗಿದ್ದ ಕಾನ್ಸ್‌ಟಾಂಟಿನೋಪಲಿನ ಪೇಟ್ರಿಯಾರ್ಕನು ತುಂಬ ಪ್ರಭಾವಶಾಲಿ ವ್ಯಕ್ತಿಯಾದನು. ಸಮ್ರಾಟನಿಗೆ ಕಿರೀಟಧಾರಣೆ ಮಾಡುತ್ತಿದ್ದವನು ಅವನೇ. ಆದುದರಿಂದ, ಸಮ್ರಾಟನು ಸಾಂಪ್ರದಾಯಿಕತೆಯನ್ನು ನಿಷ್ಠೆಯಿಂದ ಸಮರ್ಥಿಸುವವನಾಗಿರುವಂತೆ ಅಪೇಕ್ಷಿಸಲಾಗುತ್ತಿತ್ತು. ಈ ಪೇಟ್ರಿಯಾರ್ಕನು ತುಂಬ ಧನಿಕನೂ ಆಗಿರುತ್ತಿದ್ದನು, ಯಾಕೆಂದರೆ ಚರ್ಚಿನ ಅಪಾರವಾದ ಸಂಪನ್ಮೂಲಗಳು ಅವನ ನಿಯಂತ್ರಣದ ಕೆಳಗಿರುತ್ತಿದ್ದವು. ಅವನ ಶಕ್ತಿಯ ಮೂಲವು, ಅಸಂಖ್ಯಾತ ಸಂನ್ಯಾಸಿಗಳ ಮೇಲೆ ಮಾತ್ರವಲ್ಲದೆ ಸಾಮಾನ್ಯ ಜನರ ಮೇಲೂ ಅವನಿಗಿದ್ದ ಅಧಿಕಾರವಾಗಿತ್ತು.

ಅನೇಕವೇಳೆ ಪೇಟ್ರಿಯಾರ್ಕನು ಸಮ್ರಾಟನಿಗೆ ಸವಾಲುಹಾಕುವ ಸ್ಥಾನದಲ್ಲಿರುತ್ತಿದ್ದನು. ಇದು ದೇವರ ಚಿತ್ತ ಎಂಬ ಹೆಸರಿನಲ್ಲಿ, ಅವನು ಸಮ್ರಾಟನನ್ನು ಜಾತಿಯಿಂದ ಹೊರಹಾಕುವ ಬೆದರಿಕೆಯನ್ನೊಡ್ಡಸಾಧ್ಯವಿತ್ತು, ಇಲ್ಲವೇ ಸಮ್ರಾಟರನ್ನು ಉಚ್ಛಾಟಿಸುವ ಬೇರೆ ವಿಧಾನಗಳನ್ನು ಬಳಸಸಾಧ್ಯವಿತ್ತು.

ರಾಜಧಾನಿಯ ಹೊರಗೆ ಪೌರ ಆಡಳಿತವು ನಿಧಾನವಾಗಿ ಕಡಿಮೆಯಾಗುತ್ತಾ ಹೋದಂತೆ, ಬಿಷಪರು ತಮ್ಮ ನಗರದಲ್ಲಿ ಅತಿ ಶಕ್ತಿಶಾಲಿ ವ್ಯಕ್ತಿಗಳಾಗಲು ಪ್ರಾರಂಭಿಸಿದರು. ಅವರು ಪ್ರಾಂತೀಯ ದೇಶಾಧಿಪತಿಗಳಷ್ಟೇ ಶಕ್ತಿಶಾಲಿಗಳಾಗಿರುತ್ತಿದ್ದರು, ಮತ್ತು ಇವರನ್ನು ಆಯ್ಕೆಮಾಡಲು ಬಿಷಪರೇ ಸಹಾಯಮಾಡುತ್ತಿದ್ದರು. ಚರ್ಚು ಒಳಗೂಡಿದ್ದಾಗ ಮತ್ತು ಕೆಲವೊಮ್ಮೆ ಅದು ಒಳಗೂಡಿರದಿದ್ದಾಗಲೂ ಬಿಷಪರು ನ್ಯಾಯಾಲಯದ ಮೊಕದ್ದಮೆಗಳು ಮತ್ತು ಲೌಕಿಕ ವ್ಯಾಪಾರಗಳತ್ತ ಗಮನ ಕೊಡುತ್ತಿದ್ದರು. ಅವರಿಗಿದ್ದ ಶಕ್ತಿಗೆ ಕಾರಣವಾಗಿದ್ದ ಅಂಶವೇನೆಂದರೆ, ಅವರ ಸ್ಥಳಿಕ ಬಿಷಪರಿಗೆ ಸರ್ವ ರೀತಿಯಲ್ಲೂ ಅಧೀನರಾಗಿದ್ದ ಲಕ್ಷಾಂತರ ಸಂಖ್ಯೆಯ ಪಾದ್ರಿಗಳು ಹಾಗೂ ಸಂನ್ಯಾಸಿಗಳೇ.

ರಾಜಕೀಯ ಮತ್ತು ಧರ್ಮಾಧಿಕಾರದ ಮಾರಾಟ

ಮೇಲಿನ ವಿಷಯವು ತೋರಿಸಿದಂತೆ, ಕ್ರೈಸ್ತ ಮಠೀಯ ಹುದ್ದೆಯು ರಾಜಕೀಯದೊಂದಿಗೆ ಬೇರ್ಪಡಿಸಲಾಗದಂಥ ರೀತಿಯಲ್ಲಿ ಒಂದಕ್ಕೊಂದು ಹೆಣೆದುಕೊಂಡಿತ್ತು. ಆದರೆ, ಅವರ ಪಾದ್ರಿಗಳ ದೊಡ್ಡ ಸಂಖ್ಯೆ ಮತ್ತು ಅವರ ಧಾರ್ಮಿಕ ಚಟುವಟಿಕೆಗಳಿಗಾಗಿ ಭಾರೀ ಮೊತ್ತದ ಹಣವು ಆವಶ್ಯಕವಾಗಿತ್ತು. ಉಚ್ಛ ಪದವಿಯಲ್ಲಿದ್ದ ಹೆಚ್ಚಿನ ಪಾದ್ರಿಗಳು ಐಷಾರಾಮದ ಜೀವನವನ್ನು ನಡೆಸುತ್ತಿದ್ದರು. ಚರ್ಚು ಶಕ್ತಿ ಮತ್ತು ಐಶ್ವರ್ಯವನ್ನು ಗಳಿಸುತ್ತಾ ಹೋದಂತೆ, ಯೇಸುವಿನಂಥ ಬಡ ಹಾಗೂ ಪವಿತ್ರ ಜೀವನವು ಮಾಯವಾಗಿಬಿಟ್ಟಿತು. ಕೆಲವು ಪಾದ್ರಿಗಳು ಮತ್ತು ಬಿಷಪರು ನೇಮಕಗಳನ್ನು ಹಣಕೊಟ್ಟು ಖರೀದಿಸಿದರು. ಪಾದ್ರಿ ವರ್ಗದ ಅತ್ಯುಚ್ಚ ಶ್ರೇಣಿಗಳ ವರೆಗೂ ಈ ಧರ್ಮಾಧಿಕಾರದ ಮಾರಾಟವು ಸಾಮಾನ್ಯವಾಗಿತ್ತು. ಧನಿಕ ವಶೀಲಿಗಾರರಿಂದ ಬೆಂಬಲಿಸಲ್ಪಟ್ಟಿದ್ದ ಪಾದ್ರಿಗಳು, ಸಮ್ರಾಟನ ಮುಂದೆಯೇ ಚರ್ಚಿನ ಹುದ್ದೆಗಳಿಗಾಗಿ ಸ್ಪರ್ಧಿಸಿದರು.

ಹಿರಿಯ ಧಾರ್ಮಿಕ ನಾಯಕರನ್ನು ಪ್ರಭಾವಿಸುವ ಒಂದು ಮಾಧ್ಯಮವು, ಲಂಚಕೊಡುವಿಕೆಯಾಗಿತ್ತು. ಸಮ್ರಾಜ್ಞಿ ಜೊ (ಸಾ.ಶ. 978-1050) ಎಂಬವಳು ತನ್ನ ಗಂಡನಾದ IIIನೆಯ ರೋಮಾನಸ್‌ನ ಹತ್ಯೆಮಾಡಿಸಿ, ತನ್ನ ಪ್ರಿಯತಮನೂ, ಮುಂದೆ IVನೆಯ ಮೀಕಾಯೇಲ್‌ ಎಂಬ ಸಮ್ರಾಟನೂ ಆಗಿರಲಿದ್ದ ತನ್ನ ಈ ಪ್ರಿಯಕರನನ್ನು ಮದುವೆಯಾಗಲು ಬಯಸಿದಾಗ, ಪೇಟ್ರಿಯಾರ್ಕ್‌ ಅಲೆಕ್ಸಿಯಸನು ಅರಮನೆಗೆ ಕೂಡಲೇ ಬರುವಂತೆ ಅವಸರದಿಂದ ಅವನನ್ನು ಕರೆಕಳುಹಿಸಿದಳು. ಅಲ್ಲಿ ತಲಪಿದಾಗ, ಪೇಟ್ರಿಯಾರ್ಕನಿಗೆ ರೋಮಾನಸನ ಮೃತ್ಯುವಿನ ಕುರಿತು ಮತ್ತು ಅವನು ಮದುವೆಯ ಸಂಸ್ಕಾರವನ್ನು ನಡೆಸುವಂತೆ ಅಪೇಕ್ಷಿಸಲಾಗುತ್ತಿದೆ ಎಂಬುದರ ಕುರಿತು ತಿಳಿದುಬಂತು. ಆ ದಿನದಂದು, ಚರ್ಚು ಗುಡ್‌ ಫ್ರೈಡೇಯನ್ನು ಆಚರಿಸುತ್ತಿದ್ದರೂ, ಅಲೆಕ್ಸಿಯಸನು ಆ ಸನ್ನಿವೇಶದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಆದರೆ ಅವನು ಸಮ್ರಾಜ್ಞಿಯು ನೀಡಿದಂಥ ಬಹಳಷ್ಟು ಕೊಡುಗೆಗಳನ್ನು ಸ್ವೀಕರಿಸಿ, ಅವಳ ಬೇಡಿಕೆಯನ್ನು ಪೂರೈಸಿದನು.

ಸಮ್ರಾಟನ ಮುಂದೆ ಅತಿ ನಮ್ರತೆ

ಕೆಲವೊಮ್ಮೆ ಬೈಸಾಂಟೈನ್‌ ಸಾಮ್ರಾಜ್ಯದ ಇತಿಹಾಸದಲ್ಲಿ, ಕಾನ್ಸ್‌ಟಾಂಟಿನೋಪಲ್‌ನ ಪೇಟ್ರಿಯಾರ್ಕನು ಯಾರಾಗಿರಬೇಕೆಂಬುದರ ವಿಷಯದಲ್ಲಿ ನೇಮಕ ಮಾಡುವ ತನ್ನ ಹಕ್ಕನ್ನು ಸಮ್ರಾಟನು ಉಪಯೋಗಿಸುತ್ತಿದ್ದನು. ಅಂಥ ಅವಧಿಗಳಲ್ಲಿ, ಯಾರೊಬ್ಬರೂ ಸಮ್ರಾಟನ ಇಚ್ಛೆಯ ವಿರುದ್ಧ ಪೇಟ್ರಿಯಾರ್ಕನಾಗಲು ಸಾಧ್ಯವಿರಲಿಲ್ಲ, ಅಥವಾ ಹೆಚ್ಚು ಸಮಯ ಹಾಗೆ ಉಳಿಯಲು ಸಾಧ್ಯವಿರಲಿಲ್ಲ.

ಸಮ್ರಾಟನಾದ IIನೆಯ ಆಂಡ್ರೊನಿಕಸ್‌ (1260-1332), ಒಂಬತ್ತು ಸಲ ಪೇಟ್ರಿಯಾರ್ಕರನ್ನು ಬದಲಾಯಿಸಬೇಕಾಯಿತು. ಇದರಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ, ಪೇಟ್ರಿಯಾರ್ಕನ ಸಿಂಹಾಸನದ ಮೇಲೆ ಅತಿ ನಮ್ಯನಾದ ಅಭ್ಯರ್ಥಿಯನ್ನು ಕುಳ್ಳಿರಿಸುವುದೇ ಅವನ ಉದ್ದೇಶವಾಗಿತ್ತು. ಬೈಸಾಂಟೈನ್‌ ಜನರು (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, ಒಬ್ಬ ಪೇಟ್ರಿಯಾರ್ಕನು ಸಮ್ರಾಟನಿಗೆ “ಅವನು ಕೇಳಿಕೊಳ್ಳುವಂಥದ್ದು ಎಷ್ಟೇ ಕಾನೂನುಬಾಹಿರವಾಗಿದ್ದರೂ ಅದೆಲ್ಲವನ್ನೂ ಮಾಡುವುದಾಗಿ ಮತ್ತು ಅವನು ಇಷ್ಟಪಡದಂಥ ವಿಷಯಗಳನ್ನು ಮಾಡುವುದರಿಂದ ದೂರವಿರುವುದಾಗಿಯೂ” ಬರೆದು ಮಾತುಕೊಟ್ಟನು. ರಾಜಮನೆತನದ ಒಬ್ಬ ರಾಜಕುಮಾರನನ್ನು ಪೇಟ್ರಿಯಾರ್ಕನಾಗಿ ಪ್ರತಿಷ್ಠಾಪಿಸುವ ಮೂಲಕ ಸಮ್ರಾಟರು ಎರಡು ಸಾರಿ ಚರ್ಚಿನ ಮೇಲೆ ತಮ್ಮ ಇಷ್ಟವನ್ನು ಬಲವಂತವಾಗಿ ಹೇರಲು ಪ್ರಯತ್ನಿಸಿದರು. ಸಮ್ರಾಟ ರೋಮಾನಸ್‌ I, ಕೇವಲ 16 ವರ್ಷದವನಾಗಿದ್ದ ತನ್ನ ಮಗನಾದ ಥಿಯೋಫಿಲಾಕ್ಟ್‌ ಎಂಬವನನ್ನು ಪೇಟ್ರಿಯಾರ್ಕನ ಹುದ್ದೆಗೇರಿಸಿದನು.

ಒಬ್ಬ ಪೇಟ್ರಿಯಾರ್ಕನು ಸರ್ವಾಧಿಕಾರಿಯನ್ನು ಸಂತೋಷಪಡಿಸಲು ತಪ್ಪಿಹೋಗುವಲ್ಲಿ, ಆ ಸರ್ವಾಧಿಕಾರಿಯು ಅವನು ತನ್ನ ಪದವಿಯನ್ನು ತೊರೆದುಬಿಡುವಂತೆ ಒತ್ತಾಯಿಸಬಹುದಿತ್ತು ಇಲ್ಲವೇ ಧರ್ಮಾಧಿಕಾರಿಗಳ ಆಲೋಚನಾ ಸಭೆಯು ಅವನನ್ನು ಪದಚ್ಯುತಿಗೊಳಿಸುವಂತೆ ಅಪ್ಪಣೆಗಳನ್ನು ಕೊಡಬಹುದಿತ್ತು. ಬೈಸಾಂಟ್ಯಮ್‌ ಎಂಬ ಪುಸ್ತಕವು ಹೇಳುವುದು: “ಬೈಸಾಂಟೈನ್‌ ಇತಿಹಾಸದಲ್ಲಿ ಹೆಚ್ಚೆಚ್ಚಾಗಿ ಉಚ್ಚ ಅಧಿಕಾರಿಗಳು ಮತ್ತು ಸಮ್ರಾಟನ ನೇರವಾದ ಪ್ರಭಾವವು ಸಹ, ಬಿಷಪರ ಆಯ್ಕೆಯನ್ನು ಮಾಡುವುದರಲ್ಲಿ ಒಂದು ಪ್ರಧಾನ ಪಾತ್ರವನ್ನು ವಹಿಸಿತು.”

ಚರ್ಚಿನ ಸಮಾಲೋಚನಾ ಸಭೆಗಳಲ್ಲೂ, ಪೇಟ್ರಿಯಾರ್ಕನನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು, ಸಮ್ರಾಟನೇ ಅಧ್ಯಕ್ಷತೆ ವಹಿಸುತ್ತಿದ್ದನು. ಅವನು ವಾಗ್ವಾದಗಳನ್ನು ಮಾರ್ಗದರ್ಶಿಸುತ್ತಿದ್ದನು, ನಂಬಿಕೆಯ ಮೂಲಭೂತ ಅಂಶಗಳನ್ನು ಸೂತ್ರೀಕರಿಸುತ್ತಿದ್ದನು, ಬಿಷಪರೊಂದಿಗೂ ಪಾಷಂಡವಾದಿಗಳೊಂದಿಗೂ ವಾದಿಸುತ್ತಿದ್ದನು ಮತ್ತು ಇವರಿಗಾಗಿ ಅವನ ಬಳಿ ಇದ್ದ ಕಟ್ಟಕಡೆಯ ವಾದವು, ಅವರಿಗೆ ಕಂಭದ ಮೇಲಿನ ಮರಣವೇ ಆಗಿರುತ್ತಿತ್ತು. ಸಮ್ರಾಟನು, ಸಮಾಲೋಚನಾ ಸಮಿತಿಯು ಅನುಮೋದಿಸುತ್ತಿದ್ದ ನಿಯಮಗಳನ್ನು ದೃಢೀಕರಿಸಿ, ಜಾರಿಗೆ ತರುತ್ತಿದ್ದನು ಸಹ. ಅವನನ್ನು ವಿರೋಧಿಸುವವರ ಮೇಲೆ ಅವನು ರಾಜದ್ರೋಹದ ಆರೋಪವನ್ನಲ್ಲದೆ, ಚರ್ಚಿನ ಹಾಗೂ ದೇವರ ಶತ್ರುಗಳೆಂಬ ಆರೋಪವನ್ನೂ ಹೊರಿಸುತ್ತಿದ್ದನು. “ಸಮ್ರಾಟನ ಇಚ್ಛೆ ಮತ್ತು ಆಜ್ಞೆಗಳಿಗೆ ವಿರುದ್ಧವಾಗಿರುವ ಯಾವುದೇ ಸಂಗತಿಯು ಚರ್ಚಿನಲ್ಲಿ ಮಾಡಲ್ಪಡಬಾರದು” ಎಂದು ಆರನೆಯ ಶತಮಾನದ ಒಬ್ಬ ಪೇಟ್ರಿಯಾರ್ಕನು ಬರೆದನು. ಈ ಬಿಷಪರು ನಯವಾದ, ತೋರಿಕೆಗೆ ಆಜ್ಞಾನುವರ್ತಿ ಪುರುಷರಾಗಿದ್ದು, ಅವರಿಗೆ ಸ್ವಲ್ಪ ಅನುಗ್ರಹವನ್ನು ತೋರಿಸಿ, ಅವರೊಂದಿಗೆ ಹುಷಾರಾಗಿ ಚೌಕಸಿ ಮಾಡುವಲ್ಲಿ ಅವರಿಗೆ ಯಾವುದೇ ಕೆಲಸವನ್ನು ಹೇಳಿದರೂ ಮಾಡುತ್ತಿದ್ದರು. ತಮಗಿಂತ ಉಚ್ಚ ಸ್ಥಾನದಲ್ಲಿದ್ದ ಪೇಟ್ರಿಯಾರ್ಕನಂತೆಯೇ ಇವರು ಸಾಮಾನ್ಯವಾಗಿ ಸಮ್ರಾಟನ ವಿರುದ್ಧ ಯಾವುದೇ ದನಿಯೆತ್ತುತ್ತಿರಲಿಲ್ಲ.

ಉದಾಹರಣೆಗಾಗಿ, ಇಗ್ನೇಷಿಯಸ್‌ (ಸಾ.ಶ. 799-878) ಎಂಬ ಪೇಟ್ರಿಯಾರ್ಕನು ಮುಖ್ಯ ಮಂತ್ರಿಯಾಗಿದ್ದ ಬಾರ್ಡಾಸ್‌ನಿಗೆ ಪ್ರಭು ಭೋಜನವನ್ನು (ಕಮ್ಯೂನಿಯನ್‌) ಕೊಡಲು ನಿರಾಕರಿಸಿದಾಗ, ಆ ಮಂತ್ರಿಯು ಅವನ ವಿರುದ್ಧ ಹೋರಾಡಿದನು. ಅವನು ಇಗ್ನೇಷಿಯಸ್‌ನ ಮೇಲೆ, ಷಡ್ಯಂತ್ರ ಹಾಗೂ ರಾಜದ್ರೋಹದ ತಪ್ಪಾರೋಪವನ್ನು ಹೊರಿಸಿದನು. ಆದುದರಿಂದ ಆ ಪೇಟ್ರಿಯಾರ್ಕನನ್ನು ದಸ್ತಗಿರಿ ಮಾಡಿ, ದೇಶದಿಂದ ಹೊರಹಾಕಲಾಯಿತು. ಆಗ ಆ ಮಂತ್ರಿಯು, ಫೋಷೀಯಸ್‌ ಎಂಬ ಹೆಸರಿನ, ಪಾದ್ರಿಯಾಗಿರದಿದ್ದ ಒಬ್ಬ ಸಾಮಾನ್ಯ ಮನುಷ್ಯನು ಆ ಸ್ಥಾನಕ್ಕೆ ಆಯ್ಕೆಯಾಗುವಂತೆ ನೋಡಿಕೊಂಡನು. ಈ ಮನುಷ್ಯನು ಬರೀ ಆರು ದಿನಗಳೊಳಗೆ ಚರ್ಚಿನ ಎಲ್ಲ ಹುದ್ದೆಗಳಲ್ಲಿ ಅತ್ಯುಚ್ಚವಾದ ಹುದ್ದೆಗೇರಿ, ಕಟ್ಟಕಡೆಗೆ ಪೇಟ್ರಿಯಾರ್ಕನ ಸ್ಥಾನವನ್ನು ತಲಪಿದನು. ಆ ಹುದ್ದೆಗೆ ಫೋಷೀಯಸನು ಅರ್ಹತೆಗಳನ್ನು ಹೊಂದಿದ್ದನೊ? ಅವನನ್ನು, “ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಮಹತ್ವಾಕಾಂಕ್ಷೆ, ಅಸಾಧಾರಣ ಮಟ್ಟಿಗಿನ ಅಹಂಭಾವ ಹಾಗೂ ಮೀರಿಸಲಾಗದ ರಾಜಕೀಯ ಕುತಂತ್ರವುಳ್ಳ” ಮನುಷ್ಯನೆಂದು ವರ್ಣಿಸಲಾಗಿದೆ.

ರಾಜಕೀಯಕ್ಕೆ ಸಹಾಯಮಾಡಿದ ಮತತತ್ತ್ವಗಳು

ಹೆಚ್ಚಿನವೇಳೆ, ಸಾಂಪ್ರದಾಯಿಕತೆ ಮತ್ತು ಪಾಷಂಡವಾದದ ಕುರಿತಾದ ವಿವಾದಗಳು, ರಾಜಕೀಯ ವಿರೋಧವನ್ನು ಮರೆಮಾಚಿದವು, ಮತ್ತು ಹೊಸ ಮತತತ್ತ್ವಗಳನ್ನು ಪರಿಚಯಿಸುವ ಆಸೆಗಿಂತಲೂ ಹೆಚ್ಚಾಗಿ ರಾಜಕೀಯ ಕಾರಣಗಳೇ ಒಬ್ಬ ಸಮ್ರಾಟನನ್ನು ಪ್ರಚೋದಿಸುತ್ತಿದ್ದವು. ಸಾಮಾನ್ಯವಾಗಿ, ಮತತತ್ವವನ್ನು ವಿಧಿಸುವ ಹಾಗೂ ತನ್ನ ಇಚ್ಛೆಗೆ ಚರ್ಚಿನಿಂದ ವಿಧೇಯತೆಯನ್ನು ಕೇಳಿಕೊಳ್ಳುವ ಹಕ್ಕನ್ನು ಸಮ್ರಾಟನು ತನಗಾಗಿ ಕಾದಿರಿಸಿದನು.

ಉದಾಹರಣೆಗಾಗಿ, ಕ್ರಿಸ್ತನ ಸ್ವಭಾವದ ಕುರಿತಾಗಿ ಬಿರುಕುಬಿಟ್ಟಿದ್ದ ಒಂದು ಒಡಕು, ಸಮ್ರಾಟ ಹೆರಾಕ್ಲಿಯಸನ (ಸಾ.ಶ. 575-641) ಸುಸ್ತಾಗಿಹೋಗಿದ್ದ ಮತ್ತು ದುರ್ಬಲವಾಗಿದ್ದ ಸಾಮ್ರಾಜ್ಯವನ್ನು ಸಿಗಿದುಹಾಕುವ ಬೆದರಿಕೆಯನ್ನೊಡ್ಡುತ್ತಿತ್ತು. ಆದುದರಿಂದ ಅವನು ಆ ಒಡಕನ್ನು ಮುಚ್ಚಿಹಾಕಲು ತುಂಬ ಪ್ರಯತ್ನಿಸಿದನು. ರಾಜಿಮಾಡುವ ಪ್ರಯತ್ನದಲ್ಲಿ, ಅವನು ಮಾನತಿಲಿಟಿಸಮ್‌ ಎಂಬ ಹೊಸ ಮತತತ್ತ್ವವನ್ನು ಪರಿಚಯಿಸಿದನು. * ಅನಂತರ, ತನ್ನ ಸಾಮ್ರಾಜ್ಯದ ದಕ್ಷಿಣ ದಿಕ್ಕಿನಲ್ಲಿದ್ದ ಪ್ರಾಂತಗಳು ತನಗೆ ನಿಷ್ಠಾವಂತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಹೆರಾಕ್ಲಿಯಸನು ಅಲೆಕ್ಸಾಂಡ್ರಿಯಕ್ಕೆ ಒಂದು ಹೊಸ ಪೇಟ್ರಿಯಾರ್ಕನನ್ನು, ಅಂದರೆ ಫಾಸಿಸ್‌ನ ಸೈರಸನನ್ನು ಆಯ್ಕೆಮಾಡಿದನು. ಇವನು, ಸಮ್ರಾಟನು ಬೆಂಬಲಿಸಿದಂಥ ಆ ಮತತತ್ತ್ವವನ್ನು ಸಮ್ಮತಿಸುವವನಾಗಿದ್ದನು. ಸಮ್ರಾಟನು, ಸೈರಸನನ್ನು ಪೇಟ್ರಿಯಾರ್ಕನನ್ನಾಗಿ ಮಾತ್ರವಲ್ಲ ಬದಲಾಗಿ, ಸ್ಥಳಿಕ ನಾಯಕರುಗಳ ಮೇಲೆ ಅಧಿಕಾರವುಳ್ಳ ಐಗುಪ್ತದ ಮುಖ್ಯಾಧಿಕಾರಿಯನ್ನಾಗಿಯೂ ಮಾಡಿದನು. ಸ್ವಲ್ಪ ಹಿಂಸೆಯಿಂದಾಗಿ ಒತ್ತಡವಿದ್ದರೂ, ಸೈರಸನು ಐಗುಪ್ತದ ಚರ್ಚಿನವರಲ್ಲಿ ಹೆಚ್ಚಿನವರ ಸಮ್ಮತಿಯನ್ನು ಗಳಿಸಲು ಶಕ್ತನಾದನು.

ಕಹಿಯಾದ ಕೊಯ್ಲು

ಈ ಎಲ್ಲ ಘಟನೆಗಳು, ತನ್ನ ಹಿಂಬಾಲಕರು ‘ಈ ಲೋಕದ ಭಾಗವಾಗಿಲ್ಲ’ ಎಂಬ ಯೇಸುವಿನ ಪ್ರಾರ್ಥನೆಯ ಮಾತುಗಳನ್ನೂ ಆತ್ಮವನ್ನೂ ಪ್ರತಿಬಿಂಬಿಸುವುದಾದರೂ ಹೇಗೆ?​—ಯೋಹಾನ 17:​14-16.

ಬೈಸಾಂಟೈನ್‌ನ ಸಮಯದಲ್ಲಿ ಮತ್ತು ತದನಂತರದ ಕಾಲಗಳಲ್ಲಿ, ಕ್ರೈಸ್ತ ಮುಖಂಡರೆಂದು ಹೇಳಿಕೊಳ್ಳುವವರು ಲೋಕದ ರಾಜಕೀಯ ಹಾಗೂ ಮಿಲಿಟರಿ ವ್ಯವಹಾರಗಳಲ್ಲಿ ಒಳಗೂಡಿರುವುದಕ್ಕಾಗಿ ತುಂಬ ಕಹಿಯಾದ ಫಲಿತಾಂಶಗಳನ್ನು ಕೊಯ್ದಿದ್ದಾರೆ. ಇತಿಹಾಸದ ಕುರಿತಾದ ಈ ಚುಟುಕಾದ ಪರಿಶೀಲನೆಯು ನಿಮಗೆ ಏನನ್ನು ಹೇಳುತ್ತದೆ? ಬೈಸಾಂಟೈನ್‌ ಚರ್ಚಿನ ಮುಖಂಡರು ದೇವರ ಹಾಗೂ ಯೇಸು ಕ್ರಿಸ್ತನ ಅನುಗ್ರಹವನ್ನು ಪಡೆದರೊ?​—ಯಾಕೋಬ 4:4.

ನಿಜ ಕ್ರೈಸ್ತತ್ವವು, ಇಂಥ ಮಹತ್ವಾಕಾಂಕ್ಷಿ ಧಾರ್ಮಿಕ ಮುಖಂಡರು ಮತ್ತು ಅವರ ರಾಜಕೀಯ ಪ್ರಿಯಕರರಿಂದ ಯಾವುದೇ ರೀತಿಯಲ್ಲಿ ಪ್ರಯೋಜನವನ್ನು ಪಡೆದಿಲ್ಲ. ಧರ್ಮ ಮತ್ತು ರಾಜಕೀಯದ ಈ ಅಪವಿತ್ರವಾದ ಮಿಶ್ರಣವು, ಯೇಸುವಿನಿಂದ ಕಲಿಸಲ್ಪಟ್ಟಿದ್ದ ಶುದ್ಧ ಧರ್ಮವನ್ನು ತಪ್ಪಾಗಿ ನಿರೂಪಿಸಿದೆ. ನಾವು ಇತಿಹಾಸದಿಂದ ಪಾಠವನ್ನು ಕಲಿತುಕೊಂಡು, ‘ಲೋಕದ ಭಾಗವಾಗಿರದಿರೋಣ.’

[ಪಾದಟಿಪ್ಪಣಿ]

^ ಪ್ಯಾರ. 22 ಮಾನತಿಲಿಟಿಸಮ್‌ ಮತತತ್ತ್ವದಲ್ಲಿ, ಕ್ರಿಸ್ತನಿಗೆ ದೇವ ಸ್ವಭಾವ ಮತ್ತು ಮಾನುಷ ಸ್ವಭಾವ ಹೀಗೆ ಎರಡೂ ಸ್ವಭಾವಗಳಿದ್ದರೂ, ಅವನಿಗೆ ಒಂದೇ ಚಿತ್ತವಿದೆಯೆಂದು ಕಲಿಸಲಾಗುತ್ತದೆ.

[ಪುಟ 10ರಲ್ಲಿರುವ ಚೌಕ/ಚಿತ್ರ]

“ಪರಲೋಕದಲ್ಲಿ ಶತಪಥ ಹಾಕುತ್ತಿರುವ ಒಬ್ಬ ದೇವನಂತೆ” 

ಮೈಕಲ್‌ ಸೆರೂಲಾರ್ಯಸ್‌ (ಸುಮಾರು ಸಾ.ಶ. 1000-1059) ಎಂಬ ಪೇಟ್ರಿಯಾರ್ಕನ ಸುತ್ತ ಕೇಂದ್ರೀಕೃತವಾಗಿರುವ ಘಟನೆಗಳು, ಸರಕಾರದ ವ್ಯವಹಾರಗಳಲ್ಲಿ ಚರ್ಚಿನ ಮುಖ್ಯಸ್ಥನು ವಹಿಸಸಾಧ್ಯವಿದ್ದ ಪಾತ್ರ ಮತ್ತು ಅದರಲ್ಲಿ ಒಳಗೂಡಿದ್ದ ಮಹತ್ವಾಕಾಂಕ್ಷೆಗಳ ನಮೂನೆಯಾಗಿವೆ. ಪೇಟ್ರಿಯಾರ್ಕನ ಸ್ಥಾನವನ್ನು ಗಳಿಸಿದ ನಂತರ, ಸೆರೂಲಾರ್ಯಸನು ಇನ್ನೂ ಎತ್ತರಕ್ಕೇರುವ ಗುರಿಯನ್ನಿಟ್ಟನು. ಅವನನ್ನು ದರ್ಪವುಳ್ಳವನೂ, ದುರಹಂಕಾರಿಯೂ, ಯಾವುದೇ ಕಾರಣಕ್ಕೂ ಬಗ್ಗದವನೂ​—“ತನ್ನ ನಡವಳಿಕೆಯಲ್ಲಿ ಪರಲೋಕದಲ್ಲಿ ಶತಪಥ ಹಾಕುತ್ತಿರುವ ಒಬ್ಬ ದೇವನಂತೆ ತೋರುತ್ತಿದ್ದವನು” ಎಂದು ವರ್ಣಿಸಲಾಗಿದೆ.

ತನ್ನನ್ನೇ ಮೇಲೇರಿಸಿಕೊಳ್ಳುವ ಆಸೆಯಿಂದಾಗಿ, ಸೆರೂಲಾರ್ಯಸನು 1054ರಲ್ಲಿ ರೋಮಿನಲ್ಲಿದ್ದ ಪೋಪ್‌ನೊಂದಿಗೆ ಒಡಕನ್ನುಂಟುಮಾಡಿದನು, ಮತ್ತು ಈ ವಿಭಜನೆಯನ್ನು ಅಂಗೀಕರಿಸುವಂತೆ ಸಮ್ರಾಟನನ್ನು ಒತ್ತಾಯಿಸಿದನು. ತನ್ನ ಈ ವಿಜಯದಲ್ಲಿ ಸಂತೋಷಪಡುತ್ತಾ, ಸೆರೂಲಾರ್ಯಸನು VIನೆಯ ಮೈಕಲ್‌ನನ್ನು ಸಿಂಹಾಸನಕ್ಕೇರಿಸುವ ಏರ್ಪಾಡುಗಳನ್ನು ಮಾಡಿ, ಅವನ ಅಧಿಕಾರವನ್ನು ಬಲಪಡಿಸಲು ಮೈಕಲ್‌ನಿಗೆ ಸಹಾಯಮಾಡಿದನು. ಒಂದು ವರ್ಷದ ಬಳಿಕ ಸೆರೂಲಾರ್ಯಸನು ಸಮ್ರಾಟನು ತನ್ನ ಪದವಿಯನ್ನು ಬಿಟ್ಟುಬಿಡುವಂತೆ ನಿರ್ಬಂಧಪಡಿಸಿದನು ಮತ್ತು ಐಸಾಕ್‌ ಕಾಮ್ನೇನಸ್‌ನನ್ನು (ಸುಮಾರು ಸಾ.ಶ. 1005-1061) ಸಿಂಹಾಸನದಲ್ಲಿ ಕೂರಿಸಿದನು.

ಪೇಟ್ರಿಯಾರ್ಕನ ಅಧಿಕಾರ ಮತ್ತು ಸಾಮ್ರಾಜ್ಯದ ನಡುವಿನ ತಿಕ್ಕಾಟವು ಹೆಚ್ಚಿತು. ಸಾರ್ವಜನಿಕರ ಬೆಂಬಲವನ್ನು ಹೊಂದಿದ್ದ ಸೆರೂಲಾರ್ಯಸನು ಬೆದರಿಕೆಯನ್ನೊಡ್ಡಿದನು, ಒತ್ತಾಯದ ಕೇಳಿಕೆಗಳನ್ನು ಮಾಡಿದನು ಮತ್ತು ಹಿಂಸಾಚಾರವನ್ನು ಬಳಸಿದನು. ಅವನ ಸಮಯದಲ್ಲಿದ್ದ ಒಬ್ಬ ಇತಿಹಾಸಗಾರನು ತಿಳಿಸಿದ್ದು: “ಹಳಸಲು ಹಾಗೂ ಅವಾಚ್ಯ ಮಾತುಗಳಲ್ಲಿ ಅವನು ಸಮ್ರಾಟನ ಪತನದ ಕುರಿತಾಗಿ ಮುಂತಿಳಿಸುತ್ತಾ ಹೇಳಿದ್ದು: ‘ಹೆಡ್ಡನೇ, ನಿನ್ನನ್ನು ಮೇಲಕ್ಕೇರಿಸಿದವನು ನಾನು; ಆದರೆ ನಾನೇ ನಿನ್ನನ್ನು ನಾಶಮಾಡುವೆ.’” ಆದರೆ ಐಸಾಕ್‌ ಕಾಮ್ನೇನಸ್‌ ಅವನನ್ನು ದಸ್ತಗಿರಿ ಮಾಡಿ, ಸೆರೆಮನೆಗೆ ಹಾಕಿ, ಇಂಬ್ರೊಸ್‌ ಎಂಬಲ್ಲಿಗೆ ಗಡೀಪಾರುಮಾಡಿದನು.

ಕಾನ್ಸ್‌ಟಾಂಟಿನೋಪಲ್‌ನ ಪೇಟ್ರಿಯಾರ್ಕರು ಎಷ್ಟೊಂದು ಉಪದ್ರವಗಳನ್ನು ಉಂಟುಮಾಡಸಾಧ್ಯವಿತ್ತು ಮತ್ತು ಎಷ್ಟು ಧೈರ್ಯದಿಂದ ಸಮ್ರಾಟನನ್ನೇ ವಿರೋಧಿಸಸಾಧ್ಯವಿತ್ತು ಎಂಬುದನ್ನು ಇಂಥ ಉದಾಹರಣೆಗಳು ತೋರಿಸುತ್ತವೆ. ಸಾಮ್ರಾಟನು ಅನೇಕವೇಳೆ ವ್ಯವಹರಿಸಬೇಕಾಗುತ್ತಿದ್ದಂಥ ಈ ಪುರುಷರು ನಿಪುಣ ರಾಜಕಾರಣಿಗಳೂ, ಸಮ್ರಾಟನನ್ನೂ ಸೈನ್ಯವನ್ನೂ ಧಿಕ್ಕರಿಸಲು ಸಮರ್ಥರಾಗಿದ್ದವರೂ ಆಗಿದ್ದರು.

[ಪುಟ 9ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಬೈಸಾಂಟೈನ್‌ ಸಾಮ್ರಾಜ್ಯದ ಗರಿಷ್ಠ ವ್ಯಾಪ್ತಿ

ರಾವೆನ್ನ

ರೋಮ್‌

ಮ್ಯಾಸೆಡೋನಿಯ

ಕಾನ್ಸ್‌ಟಾಂಟಿನೋಪಲ್‌

ಕಪ್ಪು ಸಮುದ್ರ

ನಿಕೇಯ

ಎಫೆಸಸ್‌

ಆ್ಯಂಟಿಯೋಕ್‌

ಜೆರೂಸಲೇಮ್‌

ಅಲೆಕ್ಸಾಂಡ್ರಿಯ

ಮೆಡಿಟರೇನಿಯನ್‌ ಸಮುದ್ರ

[ಕೃಪೆ]

ನಕ್ಷೆ: Mountain High Maps® Copyright © 1997 Digital Wisdom, Inc.

[ಪುಟ 10, 11ರಲ್ಲಿರುವ ಚಿತ್ರಗಳು]

ಕಾಮ್ನೆನಸ್‌

IIIನೆಯ ರೋಮೆನಸ್‌ (ಎಡಬದಿಯಲ್ಲಿ)

IVನೆಯ ಮೈಕಲ್‌

ಸಮ್ರಾಜ್ಞಿ ಜೊ

Iನೆಯ ರೋಮೆನಸ್‌ (ಎಡಬದಿಯಲ್ಲಿ)

[ಕೃಪೆ]

ಕಾಮ್ನೆನಸ್‌, IIIನೆಯ ರೋಮೆನಸ್‌, IVನೆಯ ಮೈಕಲ್‌: Courtesy Classical Numismatic Group, Inc.; ಸಮ್ರಾಜ್ಞಿ ಜೊ: Hagia Sophia; Iನೆಯ ರೋಮೆನಸ್‌: Photo courtesy Harlan J. Berk, Ltd.

[ಪುಟ 12ರಲ್ಲಿರುವ ಚಿತ್ರ]

ಫೋಷೀಯಸ್‌

[ಪುಟ 12ರಲ್ಲಿರುವ ಚಿತ್ರ]

ಹೆರಾಕ್ಲಿಯಸ್‌ ಮತ್ತು ಮಗ

[ಕೃಪೆ]

ಹೆರಾಕ್ಲಿಯಸ್‌ ಮತ್ತು ಮಗ: Photo courtesy Harlan J. Berk, Ltd.; ಎಲ್ಲ ವಿನ್ಯಾಸಕ ಅಂಶಗಳು, ಪುಟ 8-12: From the book L’Art Byzantin III Ravenne Et Pompose