ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಷ್ಟಗೊಳಿಸುವಂಥ ಯಾವುದೇ ಸಂಗತಿಯಿಂದ ಶುದ್ಧರಾಗಿರಿ

ಭಷ್ಟಗೊಳಿಸುವಂಥ ಯಾವುದೇ ಸಂಗತಿಯಿಂದ ಶುದ್ಧರಾಗಿರಿ

ಭಷ್ಟಗೊಳಿಸುವಂಥ ಯಾವುದೇ ಸಂಗತಿಯಿಂದ ಶುದ್ಧರಾಗಿರಿ

ಶುದ್ಧರಾಗಿರಲು ಬಯಸುವುದು ಸ್ವಾಭಾವಿಕವೇ. ಆದರೆ ದೇವರೊಂದಿಗಿನ ನಮ್ಮ ಸಂಬಂಧದ ವಿಷಯಕ್ಕೆ ಬರುವಾಗ, ಅವನನ್ನು ಸಂತೋಷಪಡಿಸಲು ಅದೊಂದು ಅತ್ಯಾವಶ್ಯಕ ಅಂಶವಾಗಿದೆ. ಹಲವಾರು ಹೀಬ್ರು ಮತ್ತು ಗ್ರೀಕ್‌ ಪದಗಳು ಶುದ್ಧವಾದದ್ದನ್ನೂ, ಅಪ್ಪಟವಾದದ್ದನ್ನೂ ಹಾಗೂ ಶುದ್ಧೀಕರಣದ ಕೃತ್ಯವನ್ನು, ಅಂದರೆ ದೋಷರಹಿತ, ಕಳಂಕರಹಿತವಾದ ಸ್ಥಿತಿಗೆ ಪುನಸ್ಥಾಪಿಸುವುದು ಮತ್ತು ಮಲಿನಗೊಳಿಸುವ, ಬೆರಕೆಮಾಡುವ ಇಲ್ಲವೇ ಭ್ರಷ್ಟಗೊಳಿಸುವ ಯಾವುದೇ ಸಂಗತಿಯಿಂದ ಮುಕ್ತವಾಗಿರುವುದನ್ನು ವರ್ಣಿಸುತ್ತವೆ. ಈ ಪದಗಳು, ಶಾರೀರಿಕ ಶುದ್ಧತೆಯನ್ನು ಮಾತ್ರವಲ್ಲ, ನೈತಿಕ ಇಲ್ಲವೆ ಆತ್ಮಿಕ ಶುದ್ಧತೆಯನ್ನೂ ವರ್ಣಿಸುತ್ತವೆ.

ಶಾರೀರಿಕ ಶುದ್ಧತೆ. ಇಸ್ರಾಯೇಲ್‌ ಜನಾಂಗದವರು, 40 ವರ್ಷಗಳ ವರೆಗೆ ಅರಣ್ಯದಲ್ಲಿ ಅಲೆದಾಡುತ್ತಾ ಇದ್ದರು, ಅವರ ವೈಯಕ್ತಿಕ ರೂಢಿಗಳು ಅವರನ್ನು ತಕ್ಕಮಟ್ಟಿಗೆ ಆರೋಗ್ಯವಂತರನ್ನಾಗಿ ಇಟ್ಟಿದ್ದವು. ರೋಗಗಳ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಹಾಗೂ ಅವರ ಶಿಬಿರ ವಾಸವನ್ನು ನಿಯಂತ್ರಿಸುತ್ತಿದ್ದ ದೇವರ ನಿಯಮಗಳು, ಈ ಸ್ಥಿತಿಗೆ ಕಾರಣವಾಗಿದ್ದವು ಎಂಬ ವಿಷಯದಲ್ಲಿ ಎರಡು ಮಾತಿಲ್ಲ. ಈ ಏರ್ಪಾಡಿನಲ್ಲಿ ಶುದ್ಧ ನೀರಿನ ಪ್ರಾಮುಖ್ಯತೆಯನ್ನು ಒತ್ತಿಹೇಳಲಾಯಿತು.

ಫರಿಸಾಯರ ಆತ್ಮಿಕ ಅಶುದ್ಧತೆ ಮತ್ತು ಕಪಟಾಚಾರವನ್ನು ತೋರಿಸಲಿಕ್ಕಾಗಿ ಯೇಸು ಸಹ ಶಾರೀರಿಕ ಶುದ್ಧತೆಯ ಒಂದು ಮೂಲತತ್ತ್ವವನ್ನು ಉಪಯೋಗಿಸಿದನು. ಅವರ ವಂಚನಾತ್ಮಕ ನಡತೆಯನ್ನು, ಒಂದು ಬಟ್ಟಲು ಇಲ್ಲವೇ ಪಂಚಪಾತ್ರೆಯನ್ನು ಒಳಗೆ ತೊಳೆಯದೆ ಕೇವಲ ಹೊರಗೆ ತೊಳೆಯುವುದಕ್ಕೆ ಹೋಲಿಸಲಾಯಿತು. (ಮತ್ತಾಯ 23:​25, 26) ಇಸ್ಕರಿಯೋತ ಯೂದನ ಉಪಸ್ಥಿತಿಯಲ್ಲಿ, ಯೇಸು ತನ್ನ ಶಿಷ್ಯರೊಂದಿಗೆ ಕೊನೆಯ ಪಸ್ಕದ ಊಟದ ಸಮಯದಲ್ಲಿ ಮಾತಾಡುತ್ತಿದ್ದಾಗ, ಅಂಥದ್ದೇ ರೀತಿಯ ಒಂದು ದೃಷ್ಟಾಂತವನ್ನು ಉಪಯೋಗಿಸಿದನು. ಅವರು ಸ್ನಾನಮಾಡಿದ್ದುದರಿಂದ ಮತ್ತು ಅವರ ಕಾಲುಗಳನ್ನು ಯಜಮಾನನು ತೊಳೆದಿದ್ದದರಿಂದ ಅವರು ಶಾರೀರಿಕವಾಗಿ “ಮೈಯೆಲ್ಲಾ ಶುದ್ಧವಾಗಿ” ದ್ದರೂ, ಆತ್ಮಿಕ ರೀತಿಯಲ್ಲಿ “ಎಲ್ಲರೂ ಶುದ್ಧರಲ್ಲ” ಎಂದು ಯೇಸು ಹೇಳಿದನು.​—ಯೋಹಾನ 13:​1-11.

ಸಹಜವಾದದ್ದಾದರೂ ಅಶುದ್ಧ​—ಏಕೆ? ಮುಟ್ಟು, ವಿವಾಹಿತ ದಂಪತಿಯ ನಡುವಿನ ಲೈಂಗಿಕ ಸಂಬಂಧ, ಮತ್ತು ಹೆರಿಗೆಯಂಥ ಸಹಜವಾದ, ಯೋಗ್ಯವಾದ ಸಂಗತಿಗಳು ಒಬ್ಬ ವ್ಯಕ್ತಿಯನ್ನು “ಅಶುದ್ಧ” ಗೊಳಿಸುತ್ತವೆಂದು ಧರ್ಮಶಾಸ್ತ್ರವು ಏಕೆ ಪರಿಗಣಿಸಿತು? ಒಂದು ಕಾರಣವೇನೆಂದರೆ, ಅದು ವಿವಾಹದಲ್ಲಿ ಅತ್ಯಾಪ್ತವಾದೊಂದು ಸಂಬಂಧವನ್ನು ಪವಿತ್ರತೆಯ ಮಟ್ಟಕ್ಕೇರಿಸಿತು, ಪತಿಪತ್ನಿಯರಿಬ್ಬರಿಗೂ ಸಂಯಮವನ್ನು, ಜನನಾಂಗಗಳಿಗಾಗಿ ಉಚ್ಚ ಮಾನ್ಯತೆಯನ್ನು ಮತ್ತು ಜೀವ ಹಾಗೂ ರಕ್ತದ ಪಾವಿತ್ರ್ಯತೆಗಾಗಿ ಗೌರವವನ್ನು ಕಲಿಸಿತು. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಬರುವ ಆರೋಗ್ಯಸಂಬಂಧಿತ ಪ್ರಯೋಜನಗಳ ಕುರಿತಾಗಿಯೂ ಬಹಳಷ್ಟನ್ನು ಹೇಳಲಾಗಿದೆ. ಆದರೆ ಇನ್ನೊಂದು ವಿಷಯವೂ ಇದೆ.

ಆರಂಭದಲ್ಲಿ ದೇವರು ಪ್ರಥಮ ಸ್ತ್ರೀಪುರುಷರಲ್ಲಿ ಲೈಂಗಿಕ ಪ್ರವೃತ್ತಿಗಳನ್ನೂ, ಪ್ರಜನನ ಶಕ್ತಿಗಳನ್ನೂ ಸೃಷ್ಟಿಸಿ, ಅವರು ಮಕ್ಕಳಿಗೆ ಜನ್ಮ ನೀಡುವಂತೆ ಆಜ್ಞೆಯನ್ನು ಕೊಟ್ಟನು. ಆದುದರಿಂದ, ಒಂದು ಪರಿಪೂರ್ಣ ದಂಪತಿಯು ಲೈಂಗಿಕ ಸಂಬಂಧವನ್ನಿಡುವುದು ಪಾಪವಾಗಿರಲಿಲ್ಲ. ಆದರೆ ಆದಾಮಹವ್ವರು ಲೈಂಗಿಕ ಸಂಬಂಧಗಳ ವಿಷಯದಲ್ಲಿ ಅಲ್ಲ, ಬದಲಾಗಿ ನಿಷೇಧಿತ ಹಣ್ಣನ್ನು ತಿನ್ನುವ ವಿಷಯದಲ್ಲಿ ದೇವರಿಗೆ ಅವಿಧೇಯರಾದಾಗ, ದೊಡ್ಡ ಬದಲಾವಣೆಗಳಾದವು. ತತ್‌ಕ್ಷಣ ಪಾಪದಿಂದ ಬಾಧಿತವಾದ ಅವರ ದೋಷಿ ಮನಸ್ಸಾಕ್ಷಿಯು, ಅವರು ನಗ್ನರಾಗಿದ್ದಾರೆಂಬ ಅರಿವನ್ನು ಅವರಲ್ಲಿ ಮೂಡಿಸಿತು, ಮತ್ತು ಅವರು ಕೂಡಲೇ ದೇವರ ದೃಷ್ಟಿಯಿಂದ ತಮ್ಮ ಜನನಾಂಗಗಳನ್ನು ಮುಚ್ಚಿಕೊಂಡರು. (ಆದಿಕಾಂಡ 3:​7, 10, 11) ಅಂದಿನಿಂದ ಮನುಷ್ಯರು, ತಮಗೆ ಕೊಡಲ್ಪಟ್ಟಿದ್ದ ಸಂತಾನೋತ್ಪಾದಕ ನೇಮಕವನ್ನು ಪರಿಪೂರ್ಣತೆಯಲ್ಲಿ ಪಾಲಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಬಳುವಳಿಯಾಗಿ ಬಂದ ಪಾಪದ ಕಳಂಕ ಮತ್ತು ಮರಣ ದಂಡನೆಯು, ಹೆತ್ತವರಿಂದ ಮಕ್ಕಳಿಗೆ ದಾಟಿಸಲ್ಪಡಲಿತ್ತು. ತುಂಬ ಯಥಾರ್ಥರೂ, ದೇವಭೀರುಗಳೂ ಆಗಿರುವ ಹೆತ್ತವರು ಸಹ ಪಾಪದಿಂದ ಸೋಂಕಿತರಾದ ಮಕ್ಕಳಿಗೆ ಜನ್ಮಕೊಡುತ್ತಾರೆ.​—ಕೀರ್ತನೆ 51:5.

ಸಂತಾನೋತ್ಪತ್ತಿಯ ಅಂಗಗಳ ಕೆಲಸಗಳಿಗೆ ಸಂಬಂಧಿಸಿದಂಥ ಧರ್ಮಶಾಸ್ತ್ರದ ಆವಶ್ಯಕತೆಗಳು ಸ್ತ್ರೀಪುರುಷರಿಗೆ, ಸ್ವಶಿಸ್ತು, ಕಾಮೋದ್ರೇಕಗಳ ನಿಯಂತ್ರಣ, ಮತ್ತು ಪ್ರಜನನಕ್ಕಾಗಿ ದೇವರು ಕೊಟ್ಟಿರುವ ವಿಧಾನಕ್ಕಾಗಿ ಗೌರವವನ್ನು ಕಲಿಸಿದವು. ಮನುಷ್ಯನು ಬಾಧ್ಯತೆಯಾಗಿ ಪಡೆದಿರುವ ಪಾಪವನ್ನು ಮರುಜ್ಞಾಪಿಸಲಿಕ್ಕಾಗಿ, ತಮ್ಮ ದೇಹಗಳ ಸಹಜವಾದ ಕೆಲಸಗಳಿಂದಾಗಿ ಜನನಾಂಗದ ಸ್ರಾವವುಳ್ಳ ಸ್ತ್ರೀಪುರುಷರು, ಅಶುದ್ಧತೆಯ ಅವಧಿಯನ್ನು ಪಾಲಿಸುವುದು ತಕ್ಕದ್ದಾಗಿತ್ತು. ಯಾವುದೋ ದೋಷದಿಂದಾಗಿ ಅಸಾಮಾನ್ಯವಾಗಿ ದೀರ್ಘಾವಧಿಯ ವರೆಗೆ ಸ್ರಾವಗಳು ಮುಂದುವರಿಯುವಲ್ಲಿ, ಅಶುದ್ಧತೆಯ ಹೆಚ್ಚು ವಿಸ್ತಾರಗೊಳಿಸಲ್ಪಟ್ಟ ಅವಧಿಯನ್ನು ಪಾಲಿಸುವುದು ಆವಶ್ಯಕವಾಗಿತ್ತು, ಮತ್ತು ಕೊನೆಯಲ್ಲಿ, ಹೆರಿಗೆಯಾಗಿರುವ ಒಬ್ಬ ತಾಯಿಯೂ ಮಾಡಬೇಕಾದಂತೆ, ಸ್ನಾನಮಾಡುವುದರ ಜೊತೆಗೆ ಒಂದು ದೋಷಪರಿಹಾರಕ ಯಜ್ಞವನ್ನು ಅರ್ಪಿಸುವುದು ಆವಶ್ಯಕವಾಗಿತ್ತು. ಹೀಗೆ ದೇವರ ಯಾಜಕನು, ಆ ವ್ಯಕ್ತಿಯ ಪರವಾಗಿ ಪ್ರಾಯಶ್ಚಿತ್ತವನ್ನು ಮಾಡಸಾಧ್ಯವಿತ್ತು. ಯೇಸುವಿನ ತಾಯಿಯಾದ ಮರಿಯಳು, ತನ್ನ ಜ್ಯೇಷ್ಠ ಪುತ್ರನನ್ನು ಹೆತ್ತ ಬಳಿಕ ಒಂದು ಪಾಪಪರಿಹಾರಕ ಯಜ್ಞವನ್ನು ಕೊಡುವ ಮೂಲಕ, ತನಗೆ ಬಾಧ್ಯತೆಯಾಗಿ ಬಂದಿರುವ ಪಾಪವನ್ನು ಒಪ್ಪಿಕೊಂಡು, ತಾನು ಪಾಪರಹಿತಳೂ, ಪರಿಶುದ್ಧಳೂ ಆಗಿಲ್ಲವೆಂಬುದನ್ನು ಅಂಗೀಕರಿಸಿದಳು.​—ಲೂಕ 2:​22-24.

ಕ್ರೈಸ್ತರು ಮತ್ತು ಶುದ್ಧತೆ. ಯೇಸು ಭೂಮಿಯಲ್ಲಿದ್ದ ದಿನಗಳಲ್ಲಿ ಧರ್ಮಶಾಸ್ತ್ರವೂ ಅದರ ಪದ್ಧತಿಗಳೂ ಜಾರಿಯಲ್ಲಿದ್ದರೂ, ಕ್ರೈಸ್ತರು ಧರ್ಮಶಾಸ್ತ್ರಕ್ಕಾಗಲಿ ಅದರ ಶುದ್ಧೀಕರಣದ ಕುರಿತಾದ ಆವಶ್ಯಕತೆಗಳಿಗಾಗಲಿ ಅಧೀನರಾಗಿರಲಿಲ್ಲ. (ಯೋಹಾನ 11:55) ಧರ್ಮಶಾಸ್ತ್ರವು “ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆ” ಆಗಿತ್ತು; ಅದರ ‘ನಿಜಸ್ವರೂಪವು ಕ್ರಿಸ್ತನೇ.’ (ಇಬ್ರಿಯ 10:1; ಕೊಲೊಸ್ಸೆ 2:17) ಹೀಗಿರುವುದರಿಂದ, ಈ ಶುದ್ಧೀಕರಣ ಸಂಬಂಧಿತ ವಿಷಯಗಳ ಕುರಿತಾಗಿ ಪೌಲನು ಹೀಗೆ ಬರೆದನು: “ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚೆಲ್ಲುವ ಕಡಸಿನ ಬೂದಿಯೂ ಶರೀರದ ಹೊಲೆಯನ್ನು ಹೋಗಲಾಡಿಸಿ ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು ಶುದ್ಧೀಕರಿಸುವದಲ್ಲವೇ.”​—ಇಬ್ರಿಯ 9:13, 14, 19-23.

ಆದುದರಿಂದ, ಕ್ರೈಸ್ತರನ್ನು ಎಲ್ಲ ಪಾಪ ಮತ್ತು ಅನೀತಿಯಿಂದ ಶುದ್ಧಗೊಳಿಸುವಂಥದ್ದು ಕರ್ತನಾದ ಯೇಸು ಕ್ರಿಸ್ತನ ರಕ್ತವೇ. (1 ಯೋಹಾನ 1:​7, 9) ಕ್ರಿಸ್ತನು “ಸಭೆಯನ್ನು ಪ್ರೀತಿಸಿ . . . ತನ್ನನ್ನು ಒಪ್ಪಿಸಿಕೊಟ್ಟನು.” ಅದನ್ನು ಕಳಂಕರಹಿತ, ಪವಿತ್ರ, ದೋಷವಿಲ್ಲದ, ಹಾಗೂ “ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನ” ರಾಗಿರುವಂತೆ “ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಮಾಡಿದನು.” (ಎಫೆಸ 5:25-27; ತೀತ 2:14) ಆದುದರಿಂದ, ಈ ಕ್ರೈಸ್ತ ಸಭೆಯ ಪ್ರತಿಯೊಬ್ಬ ಸದಸ್ಯನು “ತನ್ನ ಹಿಂದಣ ಪಾಪಗಳು ಪರಿಹಾರವಾಗಿ ತಾನು ಶುದ್ಧನಾದದ್ದನ್ನು ಮರೆತು” ಬಿಡಬಾರದು. ಅದರ ಬದಲು, “ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ [ದೇವರು] ಶುದ್ಧಮಾಡುತ್ತಾನೆ” ಎಂಬುದನ್ನು ನೆನಪಿನಲ್ಲಿಡುತ್ತಾ, ದೇವರಾತ್ಮದ ಫಲಗಳನ್ನು ಪ್ರದರ್ಶಿಸುತ್ತಾ ಇರಬೇಕು.​—2 ಪೇತ್ರ 1:​5-9; ಯೋಹಾನ 15:​2, 3.

ಶುದ್ಧತೆಯ ಉಚ್ಚ ಮಟ್ಟವನ್ನು ಕಾಪಾಡಿಕೊಳ್ಳಿರಿ. ಆದುದರಿಂದ ಕ್ರೈಸ್ತರು, “ಶರೀರಾತ್ಮಗಳ ಕಲ್ಮಶ” ದ ವಿರುದ್ಧ ಎಚ್ಚರರಾಗಿರುತ್ತಾ, ಶಾರೀರಿಕ, ನೈತಿಕ ಮತ್ತು ಆತ್ಮಿಕ ಶುದ್ಧತೆಯ ಉಚ್ಚ ಮಟ್ಟವನ್ನು ಕಾಪಾಡಿಕೊಳ್ಳಲೇಬೇಕು. (2 ಕೊರಿಂಥ 7:1) ‘ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡತಕ್ಕಂಥದು ಒಂದೂ ಇಲ್ಲ, ಆದರೆ ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನನ್ನು ಹೊಲೆಮಾಡುವಂಥವುಗಳಾಗಿವೆ’ ಎಂಬ ಯೇಸುವಿನ ಮಾತುಗಳನ್ನು ಮನಸ್ಸಿನಲ್ಲಿಟ್ಟವರಾಗಿ, ಕ್ರಿಸ್ತನ ಶುದ್ಧೀಕರಿಸುವ ರಕ್ತದ ಫಲಾನುಭವಿಗಳಾದ ಇವರು ಆತ್ಮಿಕ ಶುಚಿತ್ವಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಅವರು ದೇವರ ಮುಂದೆ ‘ಶುದ್ಧಹೃದಯವನ್ನು’ ಮತ್ತು ‘ಶುದ್ಧಮನಸ್ಸಾಕ್ಷಿಯನ್ನು’ ಕಾಪಾಡಿಕೊಳ್ಳುತ್ತಾರೆ. (ಮಾರ್ಕ 7:​15, 16; 1 ತಿಮೊಥೆಯ 1:5; 3:9; 2 ತಿಮೊಥೆಯ 1:3) ಶುದ್ಧಮನಸ್ಸಾಕ್ಷಿಯುಳ್ಳ ಅಂಥವರಿಗೆ, ಯಾರಿಗೆ “ಯಾವದೂ ಶುದ್ಧವಲ್ಲ” ವೊ ಆ ಕಳಂಕಿತ ಮನಸ್ಸಾಕ್ಷಿಯುಳ್ಳ ನಂಬಿಕೆರಹಿತ ವ್ಯಕ್ತಿಗಳಿಗೆ ವ್ಯತಿರಿಕ್ತವಾಗಿ, “ಎಲ್ಲವೂ ಶುದ್ಧವೇ.” (ತೀತ 1:15) ಹೃದಯದಲ್ಲಿ ಶುದ್ಧರೂ, ಪವಿತ್ರರೂ ಆಗಿರಲು ಬಯಸುವವರು, ಯೆಶಾಯ 52:11 ರ ಸಲಹೆಯನ್ನು ಪಾಲಿಸುತ್ತಾರೆ. ಅದು ಹೇಳುವುದು: “ಅಶುದ್ಧವಾದ ಯಾವದನ್ನೂ ಮುಟ್ಟದಿರಿ, . . . ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!” (ಕೀರ್ತನೆ 24:4; ಮತ್ತಾಯ 5:8) ಇದನ್ನು ಮಾಡುತ್ತಾ ಅವರ ‘ಕೈಗಳು’ ಸಾಂಕೇತಿಕ ಅರ್ಥದಲ್ಲಿ ಶುದ್ಧಗೊಳಿಸಲ್ಪಟ್ಟಿವೆ, ಮತ್ತು ಈಗ ದೇವರು ಅವರನ್ನು ಶುದ್ಧ ವ್ಯಕ್ತಿಗಳೋಪಾದಿ ಪರಿಗಣಿಸಿ ಅವರೊಂದಿಗೆ ವ್ಯವಹರಿಸುತ್ತಾನೆ.​—ಯಾಕೋಬ 4:8; 2 ಸಮುವೇಲ 22:27; ಕೀರ್ತನೆ 18:26; ದಾನಿಯೇಲ 11:35; 12:10.

ಅಪೊಸ್ತಲ ಪೌಲನು ಧರ್ಮಶಾಸ್ತ್ರದ ಕೆಳಗಿರಲಿಲ್ಲವಾದರೂ, ಒಂದು ಸಂದರ್ಭದಲ್ಲಿ ಅವನು ದೇವಾಲಯದಲ್ಲಿ ತನ್ನನ್ನೇ ವ್ರತಕ್ಕನುಸಾರ ಶುದ್ಧೀಕರಿಸಿಕೊಳ್ಳುವ ಮೂಲಕ ಧರ್ಮಶಾಸ್ತ್ರದ ಆವಶ್ಯಕತೆಗಳನ್ನು ಪೂರೈಸಿದನು. ಹೀಗೆ ಮಾಡುವ ಮೂಲಕ ಅವನು ತನ್ನ ಸ್ವಂತ ಮಾತುಗಳಿಗೆ ಅಸಂಗತವಾಗಿದ್ದನೊ? ಪೌಲನು ಧರ್ಮಶಾಸ್ತ್ರ ಇಲ್ಲವೆ ಅದರ ಕಾರ್ಯವಿಧಾನಗಳ ವಿರುದ್ಧ ಹೋರಾಡಲಿಲ್ಲ. ಅದಕ್ಕೆ ವಿಧೇಯತೆಯನ್ನು ತೋರಿಸುವುದು ಕ್ರೈಸ್ತರಿಗೆ ದೈವಿಕವಾಗಿ ಆವಶ್ಯಪಡಿಸಲ್ಪಟ್ಟಿಲ್ಲವೆಂಬುದನ್ನೇ ಅವನು ತೋರಿಸಿದನು. ಅದರ ಕಾರ್ಯವಿಧಾನಗಳು, ಹೊಸದಾದ ಕ್ರೈಸ್ತ ಸತ್ಯಗಳನ್ನು ಉಲ್ಲಂಘಿಸದಿದ್ದಲ್ಲೆಲ್ಲ, ದೇವರು ಧರ್ಮಶಾಸ್ತ್ರಕ್ಕನುಸಾರ ವಿಧಿಸಿದಂಥ ಸಂಗತಿಗಳನ್ನು ಮಾಡಲು ಯಾವುದೇ ನಿಜವಾದ ಆಕ್ಷೇಪಣೆಯಿರಲಿಲ್ಲ. ಪೌಲನು ಆ ಕೃತ್ಯವನ್ನು ನಡೆಸಿದ್ದಕ್ಕೆ ಕಾರಣವೇನೆಂದರೆ, ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಗೆ ಕಿವಿಗೊಡಲು ಅದು ಯೆಹೂದ್ಯರಿಗೆ ಅನಾವಶ್ಯಕವಾಗಿ ಒಂದು ತಡೆಗೋಡೆಯಾಗಿರಬಾರದೆಂದೇ. (ಅ. ಕೃತ್ಯಗಳು 21:​24, 26; 1 ಕೊರಿಂಥ 9:20) ಇದೆಲ್ಲವನ್ನು ಮಾಡುವ ಮೂಲಕ ಪೌಲನು, ಇತರರ ರಕ್ಷಣೆಗಾಗಿ ತುಂಬ ಚಿಂತೆಯನ್ನು ತೋರಿಸಿದನು. ಆದುದರಿಂದ ಅವನು ಹೀಗೆ ಹೇಳಸಾಧ್ಯವಿತ್ತು: “ನಾನು ಎಲ್ಲ ಮನುಷ್ಯರ ರಕ್ತದಿಂದ ಶುದ್ಧನಾಗಿದ್ದೇನೆ.” (ಅ. ಕೃತ್ಯಗಳು 20:​26, NW; ಅ. ಕೃತ್ಯಗಳು 18:6) ನಾವು ಶಾರೀರಿಕವಾಗಿ, ನೈತಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧರಾಗಿರಲು ಕಠಿನವಾಗಿ ಪ್ರಯಾಸಪಡೋಣ. ಹೀಗೆ ಮಾಡುವ ಮೂಲಕ ನಾವು ದೇವರ ಪ್ರಸನ್ನತೆಯ ನಸುನಗೆಗೆ ಪಾತ್ರರಾಗುವೆವು.