ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆ ಪ್ರಾಚೀನ ಜಗತ್ತು ನಾಶಗೊಳಿಸಲ್ಪಟ್ಟಿತು ಏಕೆ?

ಆ ಪ್ರಾಚೀನ ಜಗತ್ತು ನಾಶಗೊಳಿಸಲ್ಪಟ್ಟಿತು ಏಕೆ?

ಆ ಪ್ರಾಚೀನ ಜಗತ್ತು ನಾಶಗೊಳಿಸಲ್ಪಟ್ಟಿತು ಏಕೆ?

ಆ ಭೌಗೋಲಿಕ ಜಲಪ್ರಳಯವು ಒಂದು ನೈಸರ್ಗಿಕ ವಿಪತ್ತಾಗಿರಲಿಲ್ಲ. ಅದು ದೇವರ ನ್ಯಾಯತೀರ್ಪಾಗಿತ್ತು. ಮುಂಚೆಯೇ ಎಚ್ಚರಿಕೆಯನ್ನು ಕೊಡಲಾಗಿತ್ತಾದರೂ, ಹೆಚ್ಚಿನವರು ಅದನ್ನು ಅಲಕ್ಷಿಸಿದರು. ಏಕೆ? ಯೇಸು ಕಾರಣವನ್ನು ವಿವರಿಸಿದ್ದು: “ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ.”​—ಓರೆ ಅಕ್ಷರಗಳು ನಮ್ಮವು; ಮತ್ತಾಯ 24:38, 39.

ಅಭಿವೃದ್ಧಿಹೊಂದಿದ ನಾಗರಿಕತೆ

ಕೆಲವೊಂದು ರೀತಿಗಳಲ್ಲಿ, ಜಲಪ್ರಳಯಕ್ಕೆ ಮುಂಚಿನ ನಾಗರಿಕತೆಗೆ ನಮಗಿಂದು ಇಲ್ಲದಿರುವ ಸೌಕರ್ಯಗಳಿದ್ದವು. ಉದಾಹರಣೆಗಾಗಿ, ಆ ಸಮಯದಲ್ಲಿ ಇಡೀ ಮಾನವಕುಲವು ಒಂದೇ ಭಾಷೆಯನ್ನಾಡುತ್ತಿತ್ತು. (ಆದಿಕಾಂಡ 11:1) ಇದು, ವಿಭಿನ್ನ ಕೌಶಲಗಳುಳ್ಳ ಅನೇಕ ಜನರ ಕೂಡು ಪ್ರಯತ್ನವು ಆವಶ್ಯಕವಾಗಿರುವ ಕಲೆ ಮತ್ತು ವಿಜ್ಞಾನಗಳ ಸಾಧನೆಗಳಿಗೆ ಇಂಬು ಕೊಟ್ಟಿರಬಹುದು. ಅಲ್ಲದೆ ಆ ಸಮಯದಲ್ಲಿ ಹೆಚ್ಚಿನ ಜನರು ದೀರ್ಘಾಯುಷಿಗಳಾಗಿದ್ದುದರಿಂದ, ಅವರು ಶತಮಾನಗಳಿಂದ ಕಲಿತಿದ್ದಂಥ ವಿಷಯಗಳನ್ನು ಸಂಗ್ರಹಿಸುತ್ತಾ ಹೋಗಸಾಧ್ಯವಿತ್ತು.

ಆದರೆ ಆ ಸಮಯದಲ್ಲಿ ಮಾನವನ ಆಯಸ್ಸು ನಿಜವಾಗಿಯೂ ಅಷ್ಟು ದೀರ್ಘವಾಗಿರಲಿಲ್ಲವೆಂದೂ, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವರ್ಷಗಳು ನಿಜವಾಗಿಯೂ ತಿಂಗಳುಗಳಾಗಿವೆಯೆಂದೂ ಕೆಲವರು ಹೇಳುತ್ತಾರೆ. ಅದು ನಿಜವೊ? ಉದಾಹರಣೆಗಾಗಿ, ಮಹಲಲೇಲನೆಂಬುವವನನ್ನು ತೆಗೆದುಕೊಳ್ಳಿರಿ. ಬೈಬಲ್‌ ಹೀಗೆ ಹೇಳುತ್ತದೆ: “ಮಹಲಲೇಲನು ಅರುವತ್ತೈದು ವರುಷದವನಾದಾಗ ಯೆರೆದನನ್ನು ಪಡೆದನು. . . . ಅವನು ಒಟ್ಟು ಎಂಟುನೂರ ತೊಂಭತ್ತೈದು ವರುಷ ಬದುಕಿ ಸತ್ತನು.” (ಆದಿಕಾಂಡ 5:15-17) ಇಲ್ಲಿ ಒಂದು ವರ್ಷವು ನಿಜವಾಗಿ ಒಂದು ತಿಂಗಳಾಗಿರುವುದಾದರೆ, ಇದರರ್ಥ ಮಹಲಲೇಲನು ಕೇವಲ ಐದು ವರ್ಷದವನಾಗಿದ್ದಾಗ ಒಬ್ಬ ಮಗನ ತಂದೆಯಾದನು! ಹಾಗಾದರೆ ಒಂದು ವರ್ಷವು ಒಂದು ತಿಂಗಳಾಗಿರಲಿಲ್ಲ. ಆ ಸಮಯದಲ್ಲಿ ಜನರಿಗೆ, ಹೆಚ್ಚುಕಡಿಮೆ ಪ್ರಥಮ ಮಾನವನಾದ ಆದಾಮನಿಗಿದ್ದಂಥ ಪರಿಪೂರ್ಣ ಜೀವಶಕ್ತಿಯೇ ಇತ್ತು. ಆದುದರಿಂದ ಅವರು ವಾಸ್ತವದಲ್ಲಿ ಹಲವಾರು ಶತಮಾನಗಳ ವರೆಗೆ ಬದುಕಿದರು. ಅವರ ಸಾಧನೆಗಳೇನಾಗಿದ್ದವು?

ಜಲಪ್ರಳಯಕ್ಕಿಂತಲೂ ಅನೇಕ ಶತಮಾನಗಳ ಹಿಂದೆ, ಭೂಮಿಯ ಜನಸಂಖ್ಯೆಯು ಎಷ್ಟು ಬೆಳೆಯಿತೆಂದರೆ, ಆದಾಮನ ಮಗನಾದ ಕಾಯಿನನು ಹನೋಕ ಎಂದು ಹೆಸರಿಟ್ಟಂಥ ಒಂದು ನಗರವನ್ನು ಕಟ್ಟಲು ಶಕ್ತನಾಗಿದ್ದನು. (ಆದಿಕಾಂಡ 4:17) ಜಲಪ್ರಳಯಕ್ಕೆ ಮುಂಚಿನ ಯುಗಗಳಾದ್ಯಂತ, ವಿಭಿನ್ನ ಪ್ರಕಾರದ ಉದ್ಯಮಗಳು ಬೆಳೆದವು. “ಕಬ್ಬಿಣ ತಾಂಬ್ರದ ಆಯುಧಗಳ” ಲೋಹದ ಕುಲುಮೆಗಳಿದ್ದವು. (ಆದಿಕಾಂಡ 4:22) ನಿಸ್ಸಂದೇಹವಾಗಿಯೂ ಈ ಆಯುಧಗಳನ್ನು ಕಟ್ಟಡ ನಿರ್ಮಾಣದಲ್ಲಿ, ಮರಗೆಲಸ, ಹೊಲಿಗೆ, ಮತ್ತು ಕೃಷಿಕೆಲಸದಲ್ಲಿ ಉಪಯೋಗಿಸಲಾಗುತ್ತಿತ್ತು. ಭೂಮಿಯ ಅತ್ಯಾರಂಭದ ಮಾನವ ನಿವಾಸಿಗಳ ಕುರಿತಾದ ವೃತ್ತಾಂತಗಳಲ್ಲಿ ಈ ಎಲ್ಲ ಕಸಬುಗಳ ಕುರಿತಾಗಿ ತಿಳಿಸಲಾಗಿದೆ.

ಸಂಗ್ರಹಿಸಿಡಲ್ಪಟ್ಟ ಜ್ಞಾನವು, ಮುಂದಿನ ತಲೆಮಾರಿನವರು ಲೋಹವಿದ್ಯೆ, ಪೈರುವಿದ್ಯೆ, ಜಾನುವಾರುಗಳ ಸಾಕಣೆ, ಬರಹ, ಮತ್ತು ಲಲಿತಕಲೆಗಳಂಥ ವಿಶೇಷ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡುವುದನ್ನು ಸಾಧ್ಯಗೊಳಿಸಬಹುದಿತ್ತು. ಉದಾಹರಣೆಗಾಗಿ, ಯೂಬಾಲನು “ಕಿನ್ನರಿಕೊಳಲುಗಳನ್ನು ನುಡಿಸುವವರ ಮೂಲಪುರುಷ”ನಾಗಿದ್ದನು. (ಆದಿಕಾಂಡ 4:21) ನಾಗರಿಕತೆಯು ವಿಸ್ತಾರವಾಗಿ ಅಭಿವೃದ್ಧಿಗೊಂಡಿತು. ಆದರೆ ಅದೆಲ್ಲವೂ ಹಠಾತ್ತನೆ ಅಂತ್ಯಗೊಂಡಿತು. ಏನಾಯಿತು?

ತಪ್ಪಾದದ್ದೆಲ್ಲಿ?

ಜಲಪ್ರಳಯಕ್ಕೆ ಮುಂಚಿನ ಸಮಾಜಕ್ಕೆ ಅನೇಕ ಸೌಕರ್ಯಗಳಿದ್ದರೂ, ಅದರ ಆರಂಭವು ಕೆಟ್ಟದ್ದಾಗಿತ್ತು. ಅದರ ಸ್ಥಾಪಕನಾದ ಆದಾಮನು, ದೇವರ ವಿರುದ್ಧ ಒಬ್ಬ ದಂಗೆಕೋರನಾಗಿ ಪರಿಣಮಿಸಿದನು. ದಾಖಲೆಯಲ್ಲಿರುವ ಪ್ರಪ್ರಥಮ ನಗರದ ರಚಕನಾಗಿರುವ ಕಾಯಿನನು, ತನ್ನ ಸ್ವಂತ ತಮ್ಮನನ್ನು ಕೊಂದುಹಾಕಿದನು. ಆದುದರಿಂದ ದುಷ್ಟತನವು ವೇಗವಾಗಿ ಹೆಚ್ಚುತ್ತಾ ಹೋದುದರಲ್ಲಿ ಅಚ್ಚರಿಯೇನಿಲ್ಲ! ಹೀಗೆ, ಆದಾಮನು ತನ್ನ ಸಂತತಿಯವರಿಗೆ ಬಿಟ್ಟುಹೋದ ದೋಷಪೂರ್ಣ ಆಸ್ತಿಯ ಫಲಿತಾಂಶಗಳು ಹೆಚ್ಚೆಚ್ಚಾಗುತ್ತಾ ಹೋದವು.​—ರೋಮಾಪುರ 5:12.

ಈ ಸನ್ನಿವೇಶವು ಇನ್ನೂ 120 ವರ್ಷಗಳ ವರೆಗೆ ಮುಂದುವರಿಯುವಂತೆ ಅನುಮತಿಸಲು ಯೆಹೋವನು ನಿರ್ಧರಿಸಿದಾಗ, ಪರಿಸ್ಥಿತಿಗಳು ಆಗಲೇ ತುತ್ತತುದಿಗೇರಿದ್ದವೆಂಬುದು ವ್ಯಕ್ತವಾಗುತ್ತದೆ. (ಆದಿಕಾಂಡ 6:3) ಬೈಬಲ್‌ ಹೇಳುವುದು: ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿತ್ತು ಮತ್ತು ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿತ್ತು. . . . ಅನ್ಯಾಯವು [“ಹಿಂಸಾಚಾರವು,” NW] ಲೋಕವನ್ನು ತುಂಬಿಕೊಂಡಿತ್ತು.’​—ಆದಿಕಾಂಡ 6:5, 11.

ಕ್ರಮೇಣವಾಗಿ, ದೇವರು ಎಲ್ಲ ದೇಹಿಗಳನ್ನು ಒಂದು ಪ್ರಳಯದಲ್ಲಿ ನಾಶಮಾಡುವನೆಂದು ನೋಹನಿಗೆ ನಿರ್ದಿಷ್ಟವಾಗಿ ತಿಳಿಸಲಾಯಿತು. (ಆದಿಕಾಂಡ 6:​13, 17) ನೋಹನು “ಸುನೀತಿಯನ್ನು ಸಾರುವವನಾಗಿದ್ದ”ರೂ, ತಮ್ಮ ಸುತ್ತಲಿರುವಂಥದ್ದೆಲ್ಲವೂ ಅಂತ್ಯಗೊಳ್ಳುವುದೆಂಬ ಸಂಗತಿಯನ್ನು ನಂಬುವುದು ಜನರಿಗೆ ಕಷ್ಟಕರವಾಗಿತ್ತು. (2 ಪೇತ್ರ 2:5) ಕೇವಲ ಎಂಟು ಮಂದಿ ಆ ಎಚ್ಚರಿಕೆಗೆ ಕಿವಿಗೊಟ್ಟು ರಕ್ಷಿಸಲ್ಪಟ್ಟರು. (1 ಪೇತ್ರ 3:20) ಇದು ಇಂದು ನಮಗೇಕೆ ಪ್ರಾಮುಖ್ಯವಾಗಿದೆ?

ಇದು ನಮಗೆ ಯಾವ ಅರ್ಥವನ್ನು ಹೊಂದಿದೆ?

ನಾವಿಂದು ಜೀವಿಸುತ್ತಿರುವ ಸಮಯಗಳು ನೋಹನ ಸಮಯಕ್ಕೆ ಹೋಲುತ್ತವೆ. ಭಯೋತ್ಪಾದನೆಯ ಭೀತಿಕಾರಕ ಕೃತ್ಯಗಳು, ಜಾತೀಯ ಹತ್ಯಾಕಾಂಡದ ಚಳವಳಿಗಳು, ಚಿಕ್ಕಪುಟ್ಟ ಕಾರಣಗಳಿಗಾಗಿ ಬಂದೂಕುಧಾರಿಗಳಿಂದ ಸಾಮೂಹಿಕ ಹತ್ಯೆಗಳು, ಮತ್ತು ದಂಗುಬಡಿಸುವ ಪ್ರಮಾಣದಲ್ಲಿ ಗೃಹ ಹಿಂಸಾಚಾರದ ಕುರಿತಾಗಿ ನಾವು ಕ್ರಮವಾಗಿ ಕೇಳುತ್ತಿರುತ್ತೇವೆ. ಭೂಮಿಯು ಪುನಃ ಒಮ್ಮೆ ಹಿಂಸಾಚಾರದಿಂದ ತುಂಬಿಹೋಗಿದೆ, ಮತ್ತು ಹಿಂದಿನಂತೆಯೇ ಈಗಲೂ ಜಗತ್ತಿಗೆ ಬರಲಿರುವ ನ್ಯಾಯತೀರ್ಪಿನ ಬಗ್ಗೆ ಎಚ್ಚರಿಕೆಯನ್ನು ಕೊಡಲಾಗುತ್ತಿದೆ. ತಾನು ದೇವರ ನೇಮಿತ ತೀರ್ಪುಗಾರನಾಗಿ ಬಂದು, ಕುರುಬನೋಪಾದಿ ಜನರನ್ನು ಕುರಿ ಮತ್ತು ಆಡುಗಳಾಗಿ ಪ್ರತ್ಯೇಕಿಸುವೆನೆಂದು ಯೇಸು ತಾನೇ ಹೇಳಿದನು. ಅಯೋಗ್ಯರೆಂದು ತೀರ್ಪುಪಡೆಯುವವರು, ‘ನಿತ್ಯಶಿಕ್ಷೆಗೆ ಹೋಗುವರು’ ಎಂದು ಯೇಸು ಹೇಳಿದನು. (ಮತ್ತಾಯ 25:31-33, 46) ಆದರೆ ಈಗ, ಪಾರಾಗುವವರ ಸಂಖ್ಯೆಯು ಲಕ್ಷಗಟ್ಟಲೆಯಾಗಿರುವುದು, ಅಂದರೆ ಒಬ್ಬನೇ ಸತ್ಯ ದೇವರನ್ನು ಆರಾಧಿಸುತ್ತಿರುವವರ ಒಂದು ಮಹಾ ಸಮೂಹವಿರುವುದೆಂದು ಬೈಬಲ್‌ ಹೇಳುತ್ತದೆ. ಬರಲಿರುವ ಲೋಕದಲ್ಲಿ, ಇವರು ಹಿಂದೆಂದೂ ಇಲ್ಲದಿದ್ದಷ್ಟು ಶಾಶ್ವತ ಶಾಂತಿ ಮತ್ತು ಭದ್ರತೆಯಲ್ಲಿ ಜೀವನದ ಆನಂದವನ್ನು ಸವಿಯುವರು.​—ಮೀಕ 4:​3, 4; ಪ್ರಕಟನೆ 7:​9-17.

ನ್ಯಾಯತೀರ್ಪಿನ ಕುರಿತಾಗಿ ಬೈಬಲಿನಲ್ಲಿರುವ ವಾಕ್ಯಗಳು ಮತ್ತು ಎಚ್ಚರಿಕೆಗಳನ್ನು ಅನೇಕರು ಅಪಹಾಸ್ಯಮಾಡುತ್ತಾರೆ. ಅಂಥ ವಾಕ್ಯಗಳು ಸತ್ಯವಾಗಿವೆಯೆಂದು ಆ ನ್ಯಾಯತೀರ್ಪಿನ ಕೃತ್ಯವು ಅವರಿಗೆ ತೋರಿಸಲಿದೆ. ಆದರೆ ಅಂಥ ಸಿನಿಕರು ವಾಸ್ತವಾಂಶಗಳನ್ನು ಅಲಕ್ಷಿಸುತ್ತಿದ್ದಾರೆಂಬುದನ್ನು ಅಪೊಸ್ತಲ ಪೇತ್ರನು ವಿವರಿಸಿದನು. ಅವನು ಬರೆದುದು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ​—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? . . . ಹೀಗೆ ಮಾತಾಡುವವರು ಒಂದು ಸಂಗತಿಯನ್ನು ತಿಳಿದರೂ ಬೇಕೆಂದು ಮರೆತುಬಿಡುತ್ತಾರೆ; ಅದೇನಂದರೆ​—ಪೂರ್ವಕಾಲದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನಿಂದ ಉಂಟಾಗಿ ನೀರಿನಿಂದ ಆಧಾರಗೊಂಡಿರುವಲ್ಲಿ ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.”​—2 ಪೇತ್ರ 3:3-7.

ಯೇಸುವಿನ ಪ್ರವಾದನಾತ್ಮಕ ಆಜ್ಞೆಗೆ ವಿಧೇಯತೆಯಲ್ಲಿ, ಆಗಮಿಸುತ್ತಿರುವ ಈ ನ್ಯಾಯತೀರ್ಪಿನ ದಿನದ ಕುರಿತಾಗಿ ಲೋಕವ್ಯಾಪಕ ಎಚ್ಚರಿಕೆಯನ್ನು ಮತ್ತು ಆ ದಿನದ ನಂತರ ಬರಲಿರುವ ಶಾಂತಿಯ ಕುರಿತಾದ ಸುವಾರ್ತೆಯ ಸಂದೇಶವನ್ನು ಹುರುಪಿನಿಂದ ಸಾರಲಾಗುತ್ತಿದೆ. (ಮತ್ತಾಯ 24:14) ಈ ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಸರ್ವಶಕ್ತನಾದ ದೇವರು, ಕೊಟ್ಟ ಮಾತನ್ನು ಪಾಲಿಸುತ್ತಾನೆ.

ಬರಲಿರುವ ಜಗತ್ತು

ಈ ಭಾರೀ ಬದಲಾವಣೆಯನ್ನು ಪರಿಗಣಿಸುವಾಗ, ಮಾನವಕುಲದ ಭವಿಷ್ಯವೇನಾಗಿರುವುದು? ತನ್ನ ಪ್ರಸಿದ್ಧವಾದ ಪರ್ವತ ಪ್ರಸಂಗದ ಪೀಠಿಕೆಯಲ್ಲಿ ಯೇಸು ಹೀಗೆ ಮಾತುಕೊಟ್ಟನು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” ಅನಂತರ ದೇವರಿಗೆ ಹೀಗೆ ಪ್ರಾರ್ಥಿಸುವಂತೆ ಅವನು ತನ್ನ ಶಿಷ್ಯರಿಗೆ ಕಲಿಸಿದನು: “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 5:5; 6:10) ಹೌದು, ಇದೇ ಭೂಮಿಯ ಮೇಲೆ ನಂಬಿಗಸ್ತ ಮಾನವಕುಲಕ್ಕಾಗಿ ಒಂದು ಅದ್ಭುತಕರವಾದ ಭವಿಷ್ಯವು ಕಾದಿರಿಸಲ್ಪಟ್ಟಿದೆಯೆಂದು ಯೇಸು ತಾನೇ ಕಲಿಸಿದನು. ಅವನು ಅದನ್ನು “ಹೊಸ ಸೃಷ್ಟಿ” ಎಂದು ಕರೆದನು.​—ಮತ್ತಾಯ 19:28.

ಆದುದರಿಂದ ಭವಿಷ್ಯದ ಕುರಿತಾಗಿ ಯೋಚಿಸುವಾಗ, ಕುಚೋದ್ಯಗಾರರು ನೀವು ದೇವರ ಎಚ್ಚರಿಕೆಗಳ ಬಗ್ಗೆ ಸಂದೇಹಿಸುವಂತೆ ಮಾಡಲು ಅನುಮತಿಸಬೇಡಿ. ನಮ್ಮ ಸುತ್ತಲಿನ ಪರಿಸ್ಥಿತಿಗಳು ಸ್ಥಿರವಾಗಿರುವಂತೆ ತೋರಬಹುದು, ಮತ್ತು ಸದ್ಯದ ಜಗತ್ತು ತುಂಬ ದೀರ್ಘ ಸಮಯದಿಂದ ಅಸ್ತಿತ್ವದಲ್ಲಿದೆಯೆಂಬುದು ನಿಜ. ಹಾಗಿದ್ದರೂ ನಾವು ಅದರಲ್ಲಿ ನಮ್ಮ ಭರವಸೆಯನ್ನಿಡಬಾರದು. ಮಾನವಕುಲದ ಜಗತ್ತಿಗೆ ಈಗಾಗಲೇ ತೀರ್ಪನ್ನು ವಿಧಿಸಲಾಗಿದೆ. ಹೀಗಿರುವುದರಿಂದ, ಅಪೊಸ್ತಲ ಪೇತ್ರನ ಪತ್ರದ ಈ ಸಮಾಪ್ತಿಯ ಭಾಗದಿಂದ ಪ್ರೋತ್ಸಾಹವನ್ನು ಪಡೆದುಕೊಳ್ಳಿರಿ:

“ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ; . . . ನೀವು ಇವುಗಳನ್ನು ಎದುರುನೋಡುವವರಾಗಿರುವದರಿಂದ ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಿರಿ. ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ.” (2 ಪೇತ್ರ 3:11, 12, 14, 18) ಹೀಗಿರುವುದರಿಂದ, ಹಿಂದೆ ನೋಹನ ದಿನಗಳಲ್ಲಿ ಏನು ನಡೆಯಿತೋ ಅದರಿಂದ ಪಾಠವನ್ನು ಕಲಿಯಿರಿ. ದೇವರ ಹತ್ತಿರಕ್ಕೆ ಬನ್ನಿರಿ. ಯೇಸು ಕ್ರಿಸ್ತನ ಜ್ಞಾನದಲ್ಲಿ ಬೆಳೆಯಿರಿ. ದೈವಿಕ ಭಕ್ತಿಯನ್ನು ಬೆಳೆಸಿಕೊಂಡು, ಈ ಜಗತ್ತಿನ ಅಂತ್ಯವನ್ನು ಪಾರಾಗಿ, ಬರಲಿರುವ ಶಾಂತಿಪೂರ್ಣ ಲೋಕದೊಳಗೆ ಪಾರಾಗಲು ಆಯ್ಕೆಮಾಡುವ ಲಕ್ಷಾಂತರ ಮಂದಿಯಲ್ಲಿ ಒಬ್ಬರಾಗಿರಿ.

[ಪುಟ 5ರಲ್ಲಿರುವ ಚಿತ್ರ]

ಜಲಪ್ರಳಯದ ಬಹಳಷ್ಟು ಸಮಯಕ್ಕೆ ಮುಂಚೆಯೇ ಲೋಹವಿದ್ಯೆಯು ಜ್ಞಾತವಾಗಿತ್ತು

[ಪುಟ 7ರಲ್ಲಿರುವ ಚಿತ್ರ]

ಒಂದು ಅದ್ಭುತಕರ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ