ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇದರಿಂದ ಸ್ವಲ್ಪ ನೋವಾಗಬಹುದು”

“ಇದರಿಂದ ಸ್ವಲ್ಪ ನೋವಾಗಬಹುದು”

“ಇದರಿಂದ ಸ್ವಲ್ಪ ನೋವಾಗಬಹುದು”

ನೀವು ಈ ಮಾತುಗಳನ್ನು ಎಂದಾದರೂ ಕೇಳಿಸಿಕೊಂಡಿದ್ದೀರೊ? ನಿಮಗೆ ಯಾವುದೇ ಒಂದು ಪ್ರಕಾರದ ಚಿಕಿತ್ಸೆಯನ್ನು ನೀಡುವ ಮೊದಲು ಒಬ್ಬ ಡಾಕ್ಟರ್‌ ಇಲ್ಲವೆ ನರ್ಸು ನಿಮಗೆ ಹೀಗೆ ಹೇಳಿರಬಹುದು.

ನಿಮಗೆ ಆಗಲಿರುವ ನೋವಿನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನೀವು ಆ ಚಿಕಿತ್ಸೆಯನ್ನೇ ನಿರಾಕರಿಸಲಿಲ್ಲ ಅಲ್ಲವೇ? ಅದರ ಬದಲು, ಭವಿಷ್ಯತ್ತಿನಲ್ಲಿ ಒಳ್ಳೇ ಆರೋಗ್ಯವೆಂಬ ಪ್ರಯೋಜನಗಳನ್ನು ಕೊಯ್ಯಲಿಕ್ಕಾಗಿ ನೀವು ಆ ನೋವನ್ನು ಸಹಿಸಿಕೊಂಡಿರಿ. ಗಂಭೀರ ಹಂತವನ್ನು ತಲಪಿರುವ ವಿದ್ಯಮಾನಗಳಲ್ಲಿ, ವೇದನಾಭರಿತ ಚಿಕಿತ್ಸೆಯನ್ನು ಸ್ವೀಕರಿಸುವುದು ಇಲ್ಲವೆ ನಿರಾಕರಿಸುವುದು, ಜೀವಮರಣಗಳ ವಿಷಯವಾಗಿರಬಲ್ಲದು.

ನಮಗೆ ಯಾವಾಗಲೂ ಒಬ್ಬ ವೈದ್ಯನ ಆವಶ್ಯಕತೆಯಿರಲಿಕ್ಕಿಲ್ಲವಾದರೂ, ಅಪರಿಪೂರ್ಣ ಮಾನವರಾಗಿರುವ ನಮಗೆಲ್ಲರಿಗೆ ಶಿಸ್ತು ಇಲ್ಲವೇ ತಿದ್ದುಪಾಟು ಬೇಕೇಬೇಕು. ಇದು ಕೆಲವೊಮ್ಮೆ ನೋವನ್ನೂ ಉಂಟುಮಾಡಬಹುದು. (ಯೆರೆಮೀಯ 10:23) ಮಕ್ಕಳಿಗಿರುವ ಈ ಅಗತ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾ ಬೈಬಲ್‌ ಹೇಳುವುದು: “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ [“ಶಿಸ್ತಿನ,” NW] ಬೆತ್ತವು ಅದನ್ನು ತೊಲಗಿಸುವದು.”​—ಜ್ಞಾನೋಕ್ತಿ 22:15.

ಇಲ್ಲಿ ತಿಳಿಸಲ್ಪಟ್ಟಿರುವ ಬೆತ್ತವು, ಹೆತ್ತವರ ಅಧಿಕಾರದ ಒಂದು ಸಂಕೇತವಾಗಿದೆ. ಶಿಸ್ತನ್ನು ಇಷ್ಟಪಡುವ ಮಕ್ಕಳು ತೀರ ಕಡಿಮೆಯೆಂಬುದು ನಿಜ. ಮತ್ತು ಅದರಲ್ಲಿ ಯಾವುದೇ ರೀತಿಯ ಶಿಕ್ಷೆಯು ಸೇರಿರುವಲ್ಲಿ, ಅವರು ಮುನಿಯಬಹುದು. ಆದರೆ ವಿವೇಕಿಗಳಾದ ಮತ್ತು ಪ್ರೀತಿಭರಿತ ಹೆತ್ತವರು ಮಗುವಿನ ನೊಂದ ಭಾವನೆಗಳ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸದೆ, ಕಟ್ಟಕಡೆಗೆ ಅದಕ್ಕಾಗುವ ಲಾಭವನ್ನು ಮನಸ್ಸಿನಲ್ಲಿಡುತ್ತಾರೆ. “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” ಎಂದು ದೇವರ ವಾಕ್ಯವು ಹೇಳುವ ಮಾತು ಸತ್ಯವೆಂಬುದು ಕ್ರೈಸ್ತ ಹೆತ್ತವರಿಗೆ ಗೊತ್ತಿದೆ.​—ಇಬ್ರಿಯ 12:11; ಜ್ಞಾನೋಕ್ತಿ 13:24.

ಆದರೆ ಕೇವಲ ಮಕ್ಕಳಿಗೆ ಮಾತ್ರ ಶಿಸ್ತಿನ ಅಗತ್ಯವಿರುವುದಿಲ್ಲ. ವಯಸ್ಕರಿಗೂ ಅದು ಬೇಕಾಗುತ್ತದೆ. “ಸದುಪದೇಶವನ್ನು [“ಶಿಸ್ತನ್ನು,” NW] ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು.” (ಜ್ಞಾನೋಕ್ತಿ 4:13) ಹೌದು, ಎಳೆಯರಾಗಿರಲಿ ವೃದ್ಧರಾಗಿರಲಿ, ವಿವೇಕಿ ವ್ಯಕ್ತಿಗಳಂತೂ ದೇವರ ವಾಕ್ಯವಾದ ಬೈಬಲಿನ ಮೇಲಾಧಾರಿತವಾದ ಶಿಸ್ತನ್ನು ಸಂತೋಷದಿಂದ ಸ್ವೀಕರಿಸುವರು, ಯಾಕೆಂದರೆ ಹೀಗೆ ಮಾಡುವುದು ಕಟ್ಟಕಡೆಗೆ ಅವರ ಜೀವವನ್ನು ಉಳಿಸುವುದು.