ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಲೊವಿಸನ ದೀಕ್ಷಾಸ್ನಾನ ಫ್ರಾನ್ಸ್‌ನಲ್ಲಿ 1,500 ವರ್ಷಗಳ ಕ್ಯಾಥೊಲಿಕ್‌ ಧರ್ಮ

ಕ್ಲೊವಿಸನ ದೀಕ್ಷಾಸ್ನಾನ ಫ್ರಾನ್ಸ್‌ನಲ್ಲಿ 1,500 ವರ್ಷಗಳ ಕ್ಯಾಥೊಲಿಕ್‌ ಧರ್ಮ

ಕ್ಲೊವಿಸನ ದೀಕ್ಷಾಸ್ನಾನ ಫ್ರಾನ್ಸ್‌ನಲ್ಲಿ 1,500 ವರ್ಷಗಳ ಕ್ಯಾಥೊಲಿಕ್‌ ಧರ್ಮ

“ಪೋಪ್‌ನ ಹೆಸರಿನಲ್ಲಿ, ಸ್ಫೋಟ!” ಇದು, ಸೆಪ್ಟೆಂಬರ್‌ 1996ರಲ್ಲಿ ಪೋಪ್‌ IIನೆಯ ಜಾನ್‌ ಪಾಲ್‌ ಭೇಟಿಮಾಡಲಿದ್ದ ಒಂದು ಫ್ರೆಂಚ್‌ ಚರ್ಚಿನಲ್ಲಿ ಪತ್ತೆಹಚ್ಚಲಾದ ಒಂದು ತಾತ್ಕಾಲಿಕ ಬಾಂಬಿನೊಂದಿಗಿದ್ದ ಸಂದೇಶವಾಗಿತ್ತು. ಫ್ರಾನ್ಸ್‌ ದೇಶದ ಮುಖ್ಯ ಭೂಭಾಗಕ್ಕೆ ಅವರು ನೀಡಲಿದ್ದ ಐದನೆಯ ಭೇಟಿಗಿದ್ದ ವಿರೋಧಕ್ಕೆ ಇದೊಂದು ಉದಾಹರಣೆಯಾಗಿದೆ. ಹಾಗಿದ್ದರೂ ಆ ವರ್ಷದಲ್ಲಿ ಫ್ರ್ಯಾಂಕರ ರಾಜನಾದ ಕ್ಲೊವಿಸನು ಕ್ಯಾಥೊಲಿಕ್‌ ಧರ್ಮಕ್ಕೆ ಮತಾಂತರಗೊಂಡ 1,500ನೆಯ ವಾರ್ಷಿಕೋತ್ಸವವನ್ನು ಪೋಪ್‌ರೊಂದಿಗೆ ಆಚರಿಸಲಿಕ್ಕಾಗಿ ಸುಮಾರು 2,00,000 ಜನರು ಫ್ರಾನ್ಸ್‌ನ ರೀಮ್ಸ್‌ ನಗರದಲ್ಲಿ ಕೂಡಿಬಂದಿದ್ದರು. ಯಾರ ದೀಕ್ಷಾಸ್ನಾನವನ್ನು ಫ್ರಾನ್ಸ್‌ ದೇಶದ ದೀಕ್ಷಾಸ್ನಾನವೆಂದು ಕರೆಯಲಾಯಿತೊ, ಈ ರಾಜನು ಯಾರು? ಮತ್ತು ಅದರ ಸ್ಮಾರಕೋತ್ಸವವು ಏಕೆ ಇಷ್ಟೊಂದು ವಾಗ್ವಾದವನ್ನು ಉಂಟುಮಾಡಿದೆ?

ಅವನತಿಹೊಂದುತ್ತಿದ್ದ ಸಾಮ್ರಾಜ್ಯ

ಕ್ಲೊವಿಸನು ಸುಮಾರು ಸಾ.ಶ. 466ರಲ್ಲಿ ಹುಟ್ಟಿದ್ದನು. ಅವನು ಸಾಲ್ಯನ್‌ ಫ್ರ್ಯಾಂಕರ ರಾಜನಾದ Iನೆಯ ಚಿಲ್ಡೆರಿಕ್‌ನ ಮಗನಾಗಿದ್ದನು. ಫ್ರ್ಯಾಂಕರು ಸಾ.ಶ. 358ರಲ್ಲಿ ರೋಮನರ ಅಡಿಯಾಳುತನಕ್ಕೆ ಒಳಪಡಿಸಲ್ಪಟ್ಟ ನಂತರ, ಜರ್ಮನರ ಈ ಬುಡಕಟ್ಟಿಗೆ, ಈಗ ಬೆಲ್ಜಿಯಮ್‌ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ನೆಲೆಸಲು ಅನುಮತಿ ಸಿಕ್ಕಿತು. ಆದರೆ, ಒಂದು ಷರತ್ತು ಇತ್ತು. ಅವರು ಗಡಿಪ್ರದೇಶವನ್ನು ರಕ್ಷಿಸಿ, ರೋಮನ್‌ ಸೇನೆಗೆ ಸೈನಿಕರನ್ನು ಸರಬರಾಯಿ ಮಾಡಬೇಕಾಗಿತ್ತು. ಹಿಂಬಾಲಿಸಿ ಬಂದ ಸ್ಥಳಿಕ ಫ್ರೆಂಚ್‌-ರೋಮನ್‌ ಜನಸಂಖ್ಯೆಯೊಂದಿಗಿನ ನಿಕಟ ಸಂಪರ್ಕದಿಂದಾಗಿ, ಕ್ರಮೇಣವಾಗಿ ಈ ಫ್ರ್ಯಾಂಕರ ರೋಮನೀಕರಣವಾಯಿತು. Iನೆಯ ಚಿಲ್ಡೆರಿಕನು ರೋಮನರ ಸ್ನೇಹಿತನಾಗಿದ್ದು, ವಿಸಿಗಾತ್‌ ಮತ್ತು ಸ್ಯಾಕ್ಸನ್‌ರಂಥ ಜರ್ಮನರ ಇತರ ಗೋತ್ರಗಳ ಆಕಸ್ಮಿಕ ಆಕ್ರಮಣಗಳ ವಿರುದ್ಧ ಹೋರಾಡುತ್ತಿದ್ದನು. ಈ ಕಾರಣದಿಂದ, ಫ್ರೆಂಚ್‌-ರೋಮನ್‌ ಜನರು ಅವನಿಗೆ ಕೃತಜ್ಞರಾಗಿದ್ದರು.

ಗಾಲ್‌ ಎಂಬ ರೋಮನ್‌ ಪ್ರಾಂತವು, ಉತ್ತರದಲ್ಲಿದ್ದ ರೈನ್‌ ನದಿಯಿಂದ ಹಿಡಿದು ದಕ್ಷಿಣದಲ್ಲಿದ್ದ ಪೈರೀನಿಸ್‌ ವರೆಗೆ ವ್ಯಾಪಿಸಿತು. ಆದರೆ, ಸಾ.ಶ. 454ರಲ್ಲಿ ರೋಮನ್‌ ಸೇನಾಧಿಕಾರಿಯಾಗಿದ್ದ ಏಈಶಸ್‌ನ ಮರಣದ ನಂತರ, ಆ ದೇಶದಲ್ಲಿ ಆಳುವ ಅಧಿಕಾರಿಯ ಪದವಿಯು ಖಾಲಿಬಿದ್ದಿತ್ತು. ಅಷ್ಟುಮಾತ್ರವಲ್ಲದೆ, ಸಾ.ಶ. 476ರಲ್ಲಿ ರೋಮ್‌ನ ಕೊನೆಯ ಸಾಮ್ರಾಟನಾದ ರಾಮ್ಯಲಸ್‌ ಆಗಸ್ಚಲಸ್‌ನ ಪತನ ಮತ್ತು ರೋಮನ್‌ ಸಾಮ್ರಾಜ್ಯದ ಪಾಶ್ಚಿಮಾತ್ಯ ಭಾಗದ ಅಂತ್ಯವು, ಆ ಪ್ರದೇಶದಲ್ಲಿ ಬಹಳಷ್ಟು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡಿತು. ಫಲಿತಾಂಶವಾಗಿ, ಗಾಲ್‌ ಈಗ, ಅದರ ಗಡಿಗಳೊಳಗೆಯೇ ನೆಲೆಸಿದ್ದ ಗೋತ್ರಗಳಲ್ಲೊಂದು ಕಿತ್ತು ತಿನ್ನಲು ಸಿದ್ಧವಾಗಿರುವ ಒಂದು ಮಾಗಿದ ಹಣ್ಣಿನಂತಿತ್ತು. ಆದುದರಿಂದ ತನ್ನ ತಂದೆಯ ನಂತರ ಸಿಂಹಾಸನವನ್ನೇರಿದ ಕ್ಲೊವಿಸನು, ತನ್ನ ರಾಜ್ಯದ ಗಡಿಗಳನ್ನು ವಿಸ್ತರಿಸಲು ಪ್ರಯತ್ನಿಸಿದ್ದರಲ್ಲಿ ಆಶ್ಚರ್ಯಗೊಳಿಸುವ ಯಾವುದೇ ಸಂಗತಿಯಿಲ್ಲ. ಸಾ.ಶ. 486ರಲ್ಲಿ ಅವನು, ಸ್ವಾಸೋನ್‌ ನಗರದ ಬಳಿ ನಡೆದ ಒಂದು ಕದನದಲ್ಲಿ, ಗಾಲ್‌ನಲ್ಲಿದ್ದ ರೋಮಿನ ಕೊನೆಯ ಪ್ರತಿನಿಧಿಯನ್ನು ಸೋಲಿಸಿದನು. ಈ ವಿಜಯವು, ಉತ್ತರದಲ್ಲಿದ್ದ ಸಾಮ್‌ ನದಿ ಮತ್ತು ಮಧ್ಯ ಹಾಗೂ ಪಶ್ಚಿಮ ಗಾಲ್‌ನ ನಡುವೆ ಇದ್ದ ಎಲ್ಲ ಕ್ಷೇತ್ರವನ್ನು ಅವನ ಕೈಕೆಳಗೆ ತಂದಿತು.

ರಾಜನಾಗಲಿದ್ದ ಪುರುಷನು

ಜರ್ಮನರ ಇತರ ಗೋತ್ರಗಳಂತಿರದೆ, ಫ್ರ್ಯಾಂಕರು ವಿಧರ್ಮಿಗಳಾಗಿಯೇ ಉಳಿದಿದ್ದರು. ಆದರೆ ಬರ್ಗಂಡಿಯ ರಾಜಕುಮಾರಿಯಾದ ಕ್ಲಟಿಲ್ಡಳೊಂದಿಗೆ ನಡೆದ ಕ್ಲೊವಿಸನ ವಿವಾಹವು, ಅವನ ಜೀವಿತದ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಒಬ್ಬ ಕಟ್ಟಾ ಕ್ಯಾಥೊಲಿಕಳಾಗಿದ್ದ ಕ್ಲಟಿಲ್ಡಳು, ತನ್ನ ಗಂಡನನ್ನು ಮತಾಂತರಗೊಳಿಸಲಿಕ್ಕಾಗಿ ಅವಿರತವಾದ ಪ್ರಯತ್ನ ಮಾಡಿದಳು. ಸಾ.ಶ. ಆರನೆಯ ಶತಮಾನದಲ್ಲಿ ಗ್ರೆಗರಿ ಆಫ್‌ ಟೂರ್ಸ್‌ನಿಂದ ದಾಖಲಿಸಲ್ಪಟ್ಟ ಇತಿಹಾಸಕ್ಕನುಸಾರ, ಅಲೇಮಾನಿ ಎಂಬ ಗೋತ್ರದ ವಿರುದ್ಧ (ಸುಲ್ಪಿಕ್‌, ಜರ್ಮನಿ) ಟೋಲ್ಬಿಯಕ್‌ ಕದನದ ಸಮಯದಲ್ಲಿ, ಅಂದರೆ ಸಾ.ಶ. 496ರಲ್ಲಿ, ಕ್ಲಟಿಲ್ಡಳ ದೇವರು ತನಗೆ ವಿಜಯವನ್ನು ಕೊಟ್ಟರೆ ತಾನು ವಿಧರ್ಮವನ್ನು ತೊರೆದುಬಿಡುವೆನೆಂದು ಕ್ಲೊವಿಸನು ಮಾತುಕೊಟ್ಟನು. ಕ್ಲೊವಿಸನ ಪಡೆಗಳು ಇನ್ನೇನು ಸೋತುಹೋಗಲಿದ್ದಾಗಲೇ, ಅಲೇಮಾನಿ ರಾಜನು ಕೊಲ್ಲಲ್ಪಟ್ಟು, ಅವನ ಸೇನೆಯು ಶರಣಾಗತವಾಯಿತು. ಕ್ಲೊವಿಸನ ಅಭಿಪ್ರಾಯಕ್ಕನುಸಾರ, ಕ್ಲಟಿಲ್ಡಳ ದೇವರೇ ಅವನಿಗೆ ವಿಜಯವನ್ನು ನೀಡಿದ್ದನು. ಪರಂಪರಾಗತ ಕಥೆಗಳಿಗನುಸಾರ, ಕ್ಲೊವಿಸನು ಸಾ.ಶ. 496ರ ಡಿಸೆಂಬರ್‌ 25ರಂದು, ರೀಮ್ಸ್‌ನ ಕ್ಯಾತೀಡ್ರಲ್‌ನಲ್ಲಿ “ಸಂತ” ರಮಿಜೀಅಸ್‌ನಿಂದ ದೀಕ್ಷಾಸ್ನಾನ ಹೊಂದಿದನು. ಆದರೆ ಇನ್ನೂ ಕೆಲವರು, ಅದು ಸಾ.ಶ. 498/9ರಲ್ಲಿ ನಡೆದಿರುವುದು ಹೆಚ್ಚು ಸಂಭಾವ್ಯವೆಂದು ನಂಬುತ್ತಾರೆ.

ಆಗ್ನೇಯದಲ್ಲಿದ್ದ ಬರ್ಗಂಡಿಯ ರಾಜ್ಯವನ್ನು ವಶಪಡಿಸಿಕೊಳ್ಳುವ ಕ್ಲೊವಿಸನ ಪ್ರಯತ್ನಗಳು ನೆಲಕಚ್ಚಿದವು. ಆದರೆ ಸಾ.ಶ. 507ರಲ್ಲಿ ಪ್ವಾಟ್ಯೇಗೆ ಹತ್ತಿರದಲ್ಲಿದ್ದ ವೂಯೆ ಪಟ್ಟಣದಲ್ಲಿ ಅವನು ವಿಸಿಗಾತ್‌ ಎಂಬ ಗೋತ್ರದವರನ್ನು ಸೋಲಿಸಿದಾಗ, ಅವರ ವಿರುದ್ಧ ಅವನು ನಡೆಸುತ್ತಿದ್ದ ಕಾರ್ಯಾಚರಣೆಗೆ ಯಶಸ್ಸು ಲಭಿಸಿತು. ಈ ವಿಜಯದಿಂದಾಗಿ ಅವನಿಗೆ ನೈರುತ್ಯ ಗಾಲ್‌ ಪ್ರದೇಶದ ಹೆಚ್ಚಿನ ಭಾಗದ ಮೇಲೆ ನಿಯಂತ್ರಣ ಸಿಕ್ಕಿತು. ಅವನ ಈ ವಿಜಯಕ್ಕೆ ಮನ್ನಣೆ ನೀಡುತ್ತಾ, ಪೂರ್ವ ರೋಮನ್‌ ಸಾಮ್ರಾಜ್ಯದ ಸಮ್ರಾಟನಾಗಿದ್ದ ಅನಸ್ಟೇಸಸ್‌ನು ಕ್ಲೊವಿಸನಿಗೆ ಗೌರವಾರ್ಥವಾಗಿ ಪರಮಾಧಿಕಾರವುಳ್ಳ ದಂಡಾಧಿಕಾರಿಯ ಬಿರುದನ್ನು ಕೊಟ್ಟನು. ಈ ರೀತಿಯಲ್ಲಿ ಅವನಿಗೆ ಬೇರೆಲ್ಲ ಪಾಶ್ಚಾತ್ಯ ರಾಜರಿಗಿಂತ ಉನ್ನತವಾದ ಸ್ಥಾನಮಾನವಿತ್ತು, ಮತ್ತು ಫ್ರೆಂಚ್‌-ರೋಮನ್‌ ಜನರ ದೃಷ್ಟಿಯಲ್ಲಿ ಅವನ ಆಳ್ವಿಕೆಯು ಕಾನೂನುಬದ್ಧವಾಗಿತ್ತು.

ಪೂರ್ವದಲ್ಲಿ ರೈನ್‌ ನದಿಯ ಗಡಿಯಲ್ಲಿದ್ದ ದೇಶಗಳ ಫ್ರ್ಯಾಂಕರನ್ನು ತನ್ನ ಅಧಿಕಾರದ ಕೆಳಗೆ ತಂದಿರಲಾಗಿ, ಕ್ಲೊವಿಸನು ಪ್ಯಾರಿಸ್‌ ಅನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ತನ್ನ ಜೀವಿತದ ಕೊನೆಯ ವರ್ಷಗಳಲ್ಲಿ, ಲೆಕ್ಸ್‌ ಸೇಲಿಕಾ ಎಂಬ ಲಿಖಿತ ಕಾನೂನು ಸಂಹಿತೆಯನ್ನು ಕೊಡುವ ಮೂಲಕ ಮತ್ತು ಚರ್ಚು ಹಾಗೂ ಸರಕಾರದ ನಡುವಿನ ಸಂಬಂಧ ಹೇಗಿರಬೇಕೆಂಬುದನ್ನು ಸ್ಪಷ್ಟಪಡಿಸಿದ ಒಂದು ಚರ್ಚು ಸಭೆಯನ್ನು ಆರ್‌ಲೀನ್ಸ್‌ನಲ್ಲಿ ಏರ್ಪಡಿಸುವ ಮೂಲಕ, ಅವನು ತನ್ನ ರಾಜ್ಯವನ್ನು ಬಲಪಡಿಸಿದನು. ಸಾ.ಶ. 511ರ ನವೆಂಬರ್‌ 27ರಂದು ಅವನು ಮರಣಪಟ್ಟ ಸಮಯದಲ್ಲಿ, ಗಾಲ್‌ನ ಮೂರಂಶದಷ್ಟು ಪ್ರದೇಶದ ಒಬ್ಬನೇ ರಾಜನು ಅವನಾಗಿದ್ದನು.

ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ, ಕ್ಲೊವಿಸನು ಕ್ಯಾಥೊಲಿಕ್‌ ಧರ್ಮಕ್ಕೆ ಮತಾಂತರಗೊಂಡದ್ದನ್ನು “ಪಾಶ್ಚಾತ್ಯ ಯುರೋಪಿನ ಇತಿಹಾಸದಲ್ಲಿ ಒಂದು ನಿರ್ಣಾಯಕ ಕ್ಷಣ” ಎಂದು ಕರೆಯುತ್ತದೆ. ಈ ವಿಧರ್ಮಿ ರಾಜನ ಮತಾಂತರವು ಏಕೆ ಅಷ್ಟು ಪ್ರಾಮುಖ್ಯವಾಗಿತ್ತು? ಏಕೆಂದರೆ ಕ್ಲೊವಿಸನು ಅರೀಯಸ್‌ನ ಸಿದ್ಧಾಂತದ ಬದಲಿಗೆ ಕ್ಯಾಥೊಲಿಕ್‌ ಧರ್ಮವನ್ನು ಆಯ್ಕೆಮಾಡಿದ್ದನು.

ಅರೀಯನ್‌ ವಿವಾದಾಂಶ

ಸುಮಾರು ಸಾ.ಶ. 320ರಲ್ಲಿ ಈಜಿಪ್ಟ್‌ನ ಅಲೆಕ್ಸಾಂಡ್ರಿಯದಲ್ಲಿದ್ದ ಒಬ್ಬ ಪಾದ್ರಿ ಅರೀಯಸನು, ತ್ರಯೈಕ್ಯದ ಬಗ್ಗೆ ತೀವ್ರಗಾಮಿ ವಿಚಾರಗಳನ್ನು ಹಬ್ಬಿಸಲಾರಂಭಿಸಿದನು. ಮಗ ಮತ್ತು ತಂದೆ ಒಂದೇ ಸತ್ತ್ವವುಳ್ಳವರೆಂಬ ವಿಚಾರವನ್ನು ಅರೀಯಸನು ಅಲ್ಲಗಳೆದನು. ಮಗನಿಗೆ ಒಂದು ಆರಂಭವಿದ್ದದ್ದರಿಂದ ಅವನೇ ದೇವರಾಗಿರಲು ಸಾಧ್ಯವಿರಲಿಲ್ಲ ಇಲ್ಲವೆ ಅವನು ತಂದೆಗೆ ಸಮಾನನಾಗಿರಲು ಸಾಧ್ಯವಿರಲಿಲ್ಲ. (ಕೊಲೊಸ್ಸೆ 1:15) ಪವಿತ್ರಾತ್ಮವಾದರೊ ಒಂದು ವ್ಯಕ್ತಿಯಾಗಿದ್ದರೂ ಅದು ತಂದೆಗೂ ಮಗನಿಗೂ ಕೆಳಸ್ಥಾನದಲ್ಲಿದೆಯೆಂದು ಅರೀಯಸನು ನಂಬಿದನು. ತುಂಬ ಜನಪ್ರಿಯತೆಯನ್ನು ಗಳಿಸಿದ ಈ ಬೋಧನೆಯು, ಚರ್ಚಿನಿಂದ ತೀಕ್ಷ್ಣವಾದ ವಿರೋಧವನ್ನು ಕೆರಳಿಸಿತು. ಸಾ.ಶ. 325ರಲ್ಲಿ ನಡೆದ ನೈಸೀಯದ ಸಮಾಲೋಚನಾ ಸಭೆಯಲ್ಲಿ ಅರೀಯಸನು ಗಡೀಪಾರುಮಾಡಲ್ಪಟ್ಟನು ಮತ್ತು ಅವನ ಬೋಧನೆಗಳು ಖಂಡಿಸಲ್ಪಟ್ಟವು. *

ಆದರೆ ಆ ವಾದಾಂಶವು ಅಲ್ಲಿಗೇ ಕೊನೆಗೊಳ್ಳಲಿಲ್ಲ. ಈ ಮತತತ್ತ್ವ ಸಂಬಂಧಿತ ವಾಗ್ವಾದವು, ಸುಮಾರು 60 ವರ್ಷಗಳ ವರೆಗೆ ಮುಂದುವರಿಯಿತು. ಮತ್ತು ಒಂದರ ನಂತರ ಒಂದರಂತೆ ಪಟ್ಟಕ್ಕೆ ಬರುತ್ತಿದ್ದ ಸಮ್ರಾಟರು, ಇವುಗಳಲ್ಲಿ ಯಾವುದಾದರೊಂದು ಪಕ್ಷವನ್ನು ಬೆಂಬಲಿಸುತ್ತಿದ್ದರು. ಕೊನೆಗೆ ಸಾ.ಶ. 392ರಲ್ಲಿ ಸಮ್ರಾಟ Iನೆಯ ಥಿಯೊಡೋಶಸನು, ತ್ರಯೈಕ್ಯ ಬೋಧನೆಯುಳ್ಳ ಆರ್ತೊಡಾಕ್ಸ್‌ ಕ್ಯಾಥೊಲಿಕ್‌ ಧರ್ಮವನ್ನು ರೋಮನ್‌ ಸಾಮ್ರಾಜ್ಯದ ರಾಷ್ಟ್ರೀಯ ಧರ್ಮವನ್ನಾಗಿ ಮಾಡಿದನು. ಈ ಸಮಯದೊಳಗೆ, ಜರ್ಮನರ ಒಬ್ಬ ಬಿಷಪನಾಗಿದ್ದ ಉಲ್ಫಿಲಾಸ್‌ ಎಂಬವನು ಗಾತ್‌ ಜನಾಂಗದವರನ್ನು ಅರೀಯಸ್‌ನ ಸಿದ್ಧಾಂತಕ್ಕೆ ಮತಾಂತರಗೊಳಿಸಿದ್ದನು. ಮತ್ತು ಜರ್ಮನರ ಇನ್ನಿತರ ಗೋತ್ರಗಳು “ಕ್ರೈಸ್ತತ್ವದ” ಈ ರೂಪವನ್ನು ಬೇಗನೆ ಸ್ವೀಕರಿಸಿದವು. *

ಕ್ಲೊವಿಸನ ಸಮಯದಷ್ಟಕ್ಕೆ, ಗಾಲ್‌ನಲ್ಲಿದ್ದ ಕ್ಯಾಥೊಲಿಕ್‌ ಚರ್ಚು ಒಂದು ಬಿಕ್ಕಟ್ಟಿನಲ್ಲಿತ್ತು. ಅರೀಯನ್‌ ವಿಸಿಗಾತರು, ಮರಣಹೊಂದಿರುವ ಬಿಷಪನ ಸ್ಥಾನದಲ್ಲಿ ಇನ್ನೊಬ್ಬನನ್ನು ನೇಮಿಸಲು ಅನುಮತಿಯನ್ನು ನಿರಾಕರಿಸುವ ಮೂಲಕ ಕ್ಯಾಥೊಲಿಕ್‌ ಧರ್ಮವನ್ನು ಅದುಮಿಡಲು ಪ್ರಯತ್ನಿಸುತ್ತಿದ್ದರು. ಅಷ್ಟುಮಾತ್ರವಲ್ಲದೆ, ಪೋಪರ ಸ್ಥಾನಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಕ್ಯಾಥೊಲಿಕ್‌ ಚರ್ಚು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟ ಸಂಕಟಕರ ಸಮಯ ಅದಾಗಿತ್ತು. ಈ ಗಲಿಬಿಲಿಗೆ ಕೂಡಿಸುತ್ತಾ, ಕೆಲವು ಕ್ಯಾಥೊಲಿಕ್‌ ಬರಹಗಾರರು, ಸಾ.ಶ. 500ರಲ್ಲಿ ಲೋಕದ ಅಂತ್ಯವಾಗುವುದೆಂಬ ವಿಚಾರವನ್ನು ಪ್ರಸ್ತುತಪಡಿಸಿದರು. ಈ ಕಾರಣದಿಂದ ಫ್ರ್ಯಾಂಕರ ವಿಜಯಿ ಸಮ್ರಾಟನು ಕ್ಯಾಥೊಲಿಕ್‌ ಧರ್ಮಕ್ಕೆ ಮತಾಂತರಗೊಂಡದ್ದು, “ಸಂತರ ಹೊಸ ಸಹಸ್ರಮಾನ”ವನ್ನು ಘೋಷಿಸುವ ಒಂದು ಅನುಕೂಲಕರ ಘಟನೆಯಾಗಿ ವೀಕ್ಷಿಸಲ್ಪಟ್ಟಿತು.

ಆದರೆ ಕ್ಲೊವಿಸನ ಉದ್ದೇಶಗಳೇನಾಗಿದ್ದವು? ಧಾರ್ಮಿಕ ಉದ್ದೇಶಗಳು ಇರಲೇ ಇಲ್ಲವೆಂದು ಹೇಳಲಾಗದಿದ್ದರೂ, ಖಂಡಿತವಾಗಿಯೂ ಅವನ ಮನಸ್ಸಿನಲ್ಲಿ ರಾಜಕೀಯ ಗುರಿಗಳಿದ್ದವು. ಕ್ಯಾಥೊಲಿಕ್‌ ಧರ್ಮವನ್ನು ಆಯ್ಕೆಮಾಡುವ ಮೂಲಕ ಕ್ಲೊವಿಸನು, ಮುಖ್ಯವಾಗಿ ಕ್ಯಾಥೊಲಿಕರಾಗಿದ್ದ ಫ್ರೆಂಚ್‌-ರೋಮನ್‌ ಜನರ ಅನುಗ್ರಹವನ್ನು ಮತ್ತು ಪ್ರಭಾವಶಾಲಿಯಾಗಿದ್ದ ಚರ್ಚಿನ ಪುರೋಹಿತರ ಬೆಂಬಲವನ್ನು ಗಿಟ್ಟಿಸಿಕೊಂಡನು. ಹೀಗೆ ಅವನಿಗೆ, ತನ್ನ ರಾಜಕೀಯ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಪ್ರಯೋಜನವಾಯಿತು. “ಗಾಲ್‌ ಮೇಲೆ ಅವನು ನಡೆಸಿದ ದಂಡಯಾತ್ರೆಯು, ದ್ವೇಷಿಸಲ್ಪಟ್ಟ ಅರೀಯನ್‌ ಪಾಷಂಡವಾದಿಗಳ ನೊಗದಿಂದ ಬಿಡುಗಡೆಯ ಯುದ್ಧವಾಗಿ ಪರಿಣಮಿಸಿತು” ಎಂದು ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ.

ಕ್ಲೊವಿಸನು ನಿಜವಾಗಿಯೂ ಯಾವ ರೀತಿಯ ವ್ಯಕ್ತಿಯಾಗಿದ್ದನು?

ಇಸವಿ 1996ರ ಸ್ಮಾರಕೋತ್ಸವದ ಪೂರ್ವಭಾವಿ ಕಾರ್ಯಕ್ರಮದಲ್ಲಿ, ರೀಮ್ಸ್‌ ನಗರದ ಆರ್ಚ್‌ಬಿಷಪನಾದ ಸರಾರ್ಡ್‌ ಡೀಫ್ವಾ, ಕ್ಲೊವಿಸನನ್ನು “ಜಾಗ್ರತೆಯಿಂದ ಯೋಚಿಸಲ್ಪಟ್ಟ ಮತ್ತು ಜವಾಬ್ದಾರಿಯುತ ಮತಾಂತರಿಸುವಿಕೆಯ ಪ್ರತೀಕ” ಎಂದು ವರ್ಣಿಸಿದನು. ಆದರೆ ಫ್ರೆಂಚ್‌ ಇತಿಹಾಸಗಾರನಾದ ಅರ್ನೆಸ್ಟ್‌ ಲಾವೀಸ್‌ ಹೇಳಿದ್ದು: “ಕ್ಲೊವಿಸನ ಮತಾಂತರವು ಅವನ ಸ್ವಭಾವವನ್ನು ಕಿಂಚಿತ್ತೂ ಬದಲಾಯಿಸಲಿಲ್ಲ; ಸುವಾರ್ತಾ ಪುಸ್ತಕಗಳಲ್ಲಿ ಚಿತ್ರಿಸಲ್ಪಟ್ಟಿರುವ ಸೌಮ್ಯ ಹಾಗೂ ಶಾಂತಿಪೂರ್ವಕ ನೀತಿಪಾಠವು ಅವನ ಹೃದಯವನ್ನು ತಟ್ಟಲಿಲ್ಲ.” ಇನ್ನೊಬ್ಬ ಇತಿಹಾಸಗಾರನು ಘೋಷಿಸಿದ್ದು: “ಓಡಿನ್‌ [ನಾರ್ಸ್‌ ದೇವತೆ]ನ ಹೆಸರನ್ನು ಕರೆಯುವ ಬದಲು ಅವನು ಕ್ರಿಸ್ತನ ಹೆಸರನ್ನು ಕರೆದನು, ಆದರೆ ಅವನ ವ್ಯಕ್ತಿತ್ವವು ಹಿಂದಿನಂತೆಯೇ ಇತ್ತು.” ಕ್ಲೊವಿಸನು ತನ್ನ ಆಳ್ವಿಕೆಯನ್ನು ಭದ್ರಪಡಿಸಲಿಕ್ಕಾಗಿ, ಸಿಂಹಾಸನಕ್ಕೆ ಪ್ರತಿಸ್ಪರ್ಧಿಗಳಾಗಿದ್ದವರೆಲ್ಲರನ್ನೂ ಒಬ್ಬೊಬ್ಬರಾಗಿ ಕೊಂದುಹಾಕಿದನು. “ತುಂಬ ದೂರದ ಸಂಬಂಧಿಗಳಾಗಿದ್ದವರೆಲ್ಲರನ್ನೂ” ಅವನು ಹತಿಸಿದನು. ಇದು, ನಾಮಮಾತ್ರಕ್ಕೆ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ನಂತರ ಕಾನ್ಸ್‌ಟೆಂಟೀನನು ಏನು ಮಾಡಿದನೊ ಅದನ್ನು ಜ್ಞಾಪಕಕ್ಕೆ ತರುತ್ತದೆ.

ಕ್ಲೊವಿಸನು ಸತ್ತ ಬಳಿಕ, ಅವನನ್ನು ಒಬ್ಬ ಕ್ರೂರ ಯೋಧನಿಂದ, ಒಬ್ಬ ವಿಖ್ಯಾತ ಸಂತನಾಗಿ ಮಾಡಲಿದ್ದ ಕಟ್ಟುಕಥೆಗಳ ರಚನಾಕಾರ್ಯವು ಆರಂಭವಾಯಿತು. ಬಹುಮಟ್ಟಿಗೆ ಒಂದು ಶತಮಾನದ ನಂತರ ಗ್ರೆಗರಿ ಆಫ್‌ ಟೂರ್ಸ್‌ನ ವೃತ್ತಾಂತವನ್ನು ಬರೆಯಲಾಯಿತು. ಇದನ್ನು, “ಕ್ರೈಸ್ತತ್ವವನ್ನು” ಅವಲಂಬಿಸಿದಂಥ ಮೊತ್ತಮೊದಲ ರೋಮನ್‌ ಸಮ್ರಾಟನಾದ ಕಾನ್ಸ್‌ಟೆಂಟೀನನೊಂದಿಗೆ ಕ್ಲೊವಿಸನನ್ನು ಸಮಾನಗೊಳಿಸಲು ಮಾಡಲ್ಪಟ್ಟ ಪ್ರಜ್ಞಾಪೂರ್ವಕ ಪ್ರಯತ್ನವಾಗಿ ವೀಕ್ಷಿಸಲಾಗಿದೆ. ಮತ್ತು ಅವನ ದೀಕ್ಷಾಸ್ನಾನದ ಸಮಯದಲ್ಲಿ ಕ್ಲೊವಿಸನು 30 ವರ್ಷ ಪ್ರಾಯದವನಾಗಿದ್ದನೆಂದು ಹೇಳಿಕೊಳ್ಳುವ ಮೂಲಕ, ಗ್ರೆಗರಿಯು ಕ್ರಿಸ್ತನೊಂದಿಗೆ ಸಹ ಒಂದು ಹೋಲಿಕೆಯ ಅಂಶವನ್ನು ತೋರಿಸಲು ಪ್ರಯತ್ನಿಸುತ್ತಾನೆ.​—ಲೂಕ 3:23.

ಇದೇ ಕಾರ್ಯವನ್ನು, ರೀಮ್ಸ್‌ ನಗರದ ಬಿಷಪನಾಗಿದ್ದ ಆಂಕ್‌ಮಾರನು ಒಂಬತ್ತನೆಯ ಶತಮಾನದಲ್ಲಿ ಮುಂದುವರಿಸಿದನು. ಆ ಸಮಯದಲ್ಲಿ ಕತೀಡ್ರಲ್‌ಗಳು ಯಾತ್ರಾರ್ಥಿಗಳಿಗಾಗಿ ಪೈಪೋಟಿ ನಡೆಸುತ್ತಾ ಇದ್ದವು. ಆದುದರಿಂದ ಹಿಂದೆ ತನ್ನ ಸ್ಥಾನದಲ್ಲಿದ್ದ “ಸಂತ” ರಮಿಜೀಅಸ್‌ನ ಕುರಿತಾಗಿ ಅವನು ಬರೆದ ಜೀವನಚರಿತ್ರೆಯು, ತನ್ನ ಚರ್ಚಿನ ಖ್ಯಾತಿಯನ್ನು ಹೆಚ್ಚಿಸಿ, ಅದರ ಧನಸಂಗ್ರಹವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿತ್ತು. ಅವನ ವೃತ್ತಾಂತದಲ್ಲಿ, ಕ್ಲೊವಿಸನ ದೀಕ್ಷಾಸ್ನಾನದ ಸಮಯದಲ್ಲಿ ಕ್ಲೊವಿಸನನ್ನು ಅಭಿಷೇಕಿಸಲು ಒಂದು ಬಿಳಿ ಪಾರಿವಾಳವು ಎಣ್ಣೆಯ ಸಣ್ಣ ಸೀಸೆಯೊಂದನ್ನು ತಂದುಕೊಟ್ಟಿತು. ಇದು ಸ್ಪಷ್ಟವಾಗಿ, ಪವಿತ್ರಾತ್ಮದೊಂದಿಗೆ ಯೇಸುವು ಅಭಿಷೇಕಿಸಲ್ಪಟ್ಟ ಘಟನೆಯೊಂದಿಗೆ ಒಂದು ಹೋಲಿಕೆಯಾಗಿತ್ತು. (ಮತ್ತಾಯ 3:16) ಈ ರೀತಿಯಲ್ಲಿ ಆಂಕ್‌ಮಾರನು, ಕ್ಲೊವಿಸ್‌, ರೀಮ್ಸ್‌ ಮತ್ತು ರಾಜಪ್ರಭುತ್ವದೊಂದಿಗೆ ಸಂಬಂಧವನ್ನು ಸ್ಥಾಪಿಸಿದನು ಮತ್ತು ಕ್ಲೊವಿಸನು ಕರ್ತನ ಅಭಿಷಿಕ್ತನಾಗಿದ್ದಾನೆಂಬ ವಿಚಾರದಲ್ಲಿ ನಂಬಿಕೆ ಹುಟ್ಟಿಸಿದನು. *

ವಿವಾದಗ್ರಸ್ತ ಸ್ಮಾರಕೋತ್ಸವ

ಮಾಜಿ ಫ್ರೆಂಚ್‌ ರಾಷ್ಟ್ರಾಧ್ಯಕ್ಷನಾಗಿದ್ದ ಚಾರ್ಲ್ಸ್‌ ಡಿ ಗೋಲ್‌ ಒಮ್ಮೆ ಹೇಳಿದ್ದು: “ನನ್ನ ಅಭಿಪ್ರಾಯಕ್ಕನುಸಾರ ಫ್ರಾನ್ಸ್‌ನ ಇತಿಹಾಸವು ಕ್ಲೊವಿಸ್‌ನೊಂದಿಗೆ ಆರಂಭವಾಗುತ್ತದೆ. ತಮ್ಮ ಹೆಸರನ್ನು ಫ್ರಾನ್ಸ್‌ ದೇಶಕ್ಕೆ ಕೊಟ್ಟ ಫ್ರ್ಯಾಂಕರ ಗೋತ್ರದಿಂದ ಅವನು ಫ್ರಾನ್ಸ್‌ನ ರಾಜನಾಗಿ ಆಯ್ಕೆಮಾಡಲ್ಪಟ್ಟವನು.” ಆದರೆ ಎಲ್ಲರಿಗೂ ಇದೇ ದೃಷ್ಟಿಕೋನವಿಲ್ಲ. ಕ್ಲೊವಿಸನ ದೀಕ್ಷಾಸ್ನಾನದ 1,500ನೆಯ ವಾರ್ಷಿಕೋತ್ಸವದ ಆಚರಣೆಯು ವಿವಾದಗ್ರಸ್ತವಾಗಿತ್ತು. 1905ರಂದಿನಿಂದ ಚರ್ಚು ಮತ್ತು ಸರಕಾರವು ಅಧಿಕೃತವಾಗಿ ಪ್ರತ್ಯೇಕಿಸಲ್ಪಟ್ಟಿರುವ ಒಂದು ರಾಷ್ಟ್ರದಲ್ಲಿ, ಯಾವುದನ್ನು ಅವರು ಒಂದು ಧಾರ್ಮಿಕ ಸ್ಮಾರಕೋತ್ಸವವೆಂದೆಣಿಸಿದರೊ ಅಂಥ ಆಚರಣೆಯಲ್ಲಿ ಸರಕಾರದ ಭಾಗವಹಿಸುವಿಕೆಯನ್ನು ಅನೇಕರು ಟೀಕಿಸಿದರು. ರೀಮ್ಸ್‌ ನಗರಸಭೆಯು, ಪೋಪರ ಭೇಟಿಯ ಸಮಯದಲ್ಲಿ ಉಪಯೋಗಿಸಲು ಬೇಕಾಗುವ ವೇದಿಕೆಗಾಗಿ ಹಣ ಕೊಡುವ ಯೋಜನೆಗಳ ಬಗ್ಗೆ ಘೋಷಿಸಿದಾಗ, ಒಂದು ಸಂಘವು ಇದು ಸಂವಿಧಾನವಿರೋಧ ಕೃತ್ಯವಾಗಿದೆಯೆಂದು ನ್ಯಾಯಾಲಯದಲ್ಲಿ ಆ ನಿರ್ಣಯವನ್ನು ಬುಡಮೇಲುಮಾಡಿತು. ಚರ್ಚು ಫ್ರಾನ್ಸ್‌ನ ಮೇಲೆ ತನ್ನ ನೈತಿಕ ಮತ್ತು ಐಹಿಕ ಅಧಿಕಾರವನ್ನು ಪುನಃ ಹೇರಲು ಪ್ರಯತ್ನಿಸುತ್ತಿದೆಯೆಂದು ಇನ್ನಿತರರಿಗೆ ಅನಿಸಿತು. ಬಲಪಂಥವಾಗಿರುವ ನ್ಯಾಷನಲ್‌ ಫ್ರಂಟ್‌ ಮತ್ತು ಸಂಪ್ರದಾಯವಾದಿ ಕ್ಯಾಥೊಲಿಕ್‌ ಗುಂಪುಗಳು ಕ್ಲೊವಿಸನನ್ನು ತಮ್ಮ ಸಂಕೇತದೋಪಾದಿ ಬಳಸಿಕೊಂಡದ್ದು, ಈ ಸ್ಮಾರಕೋತ್ಸವದ ತೊಡಕನ್ನು ಹೆಚ್ಚಿಸಿದ ಇನ್ನೊಂದು ಸಂಗತಿಯಾಗಿತ್ತು.

ಇನ್ನಿತರರು ಐತಿಹಾಸಿಕ ದೃಷ್ಟಿಕೋನದಿಂದ ಆ ಸ್ಮಾರಕೋತ್ಸವವನ್ನು ಟೀಕಿಸಿದರು. ಕ್ಲೊವಿಸನ ದೀಕ್ಷಾಸ್ನಾನದಿಂದಾಗಿಯೇ ಫ್ರಾನ್ಸ್‌ ದೇಶವು ಕ್ಯಾಥೊಲಿಕ್‌ ಧರ್ಮಕ್ಕೆ ಮತಾಂತರಗೊಳ್ಳಲಿಲ್ಲ, ಯಾಕೆಂದರೆ ಈ ಧರ್ಮವು ಆಗಲೇ, ಫ್ರೆಂಚ್‌-ರೋಮನ್‌ ಜನರಲ್ಲಿ ದೃಢವಾಗಿ ಬೇರೂರಿತ್ತೆಂದು ಅವರು ಹೇಳುತ್ತಾರೆ. ಮತ್ತು ಅವನ ದೀಕ್ಷಾಸ್ನಾನವು, ಒಂದು ರಾಷ್ಟ್ರದೋಪಾದಿ ಫ್ರಾನ್ಸ್‌ನ ಹುಟ್ಟನ್ನೂ ಗುರುತಿಸುವುದಿಲ್ಲವೆಂಬುದು ಅವರ ವಾದ. ಫ್ರಾನ್ಸ್‌ನ ಹುಟ್ಟು, ಸಾ.ಶ. 843ರಲ್ಲಿ ಶಾರ್ಲ್‌ಮೇನ್‌ನ ರಾಜ್ಯದ ವಿಭಜನೆಯ ಸಮಯದಲ್ಲಿ ಆಗಿತ್ತೆಂದು ಹೇಳುವುದು ಹೆಚ್ಚು ಯೋಗ್ಯವೆಂದೂ, ಹೀಗೆ ಚಾರ್ಲ್ಸ್‌ ದ ಬಾಲ್ಡ್‌ ಎಂಬವನು​—ಕ್ಲೊವಿಸನಲ್ಲ​—ಫ್ರಾನ್ಸ್‌ನ ಮೊದಲ ರಾಜನಾಗಿದ್ದನೆಂದು ಅವರು ಪರಿಗಣಿಸುತ್ತಾರೆ.

ಕ್ಯಾಥೊಲಿಕ್‌ ಧರ್ಮದ 1,500 ವರ್ಷಗಳು

“ಚರ್ಚಿನ ಹಿರಿಯ ಮಗಳು” ಆಗಿ 1,500ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ ಫ್ರಾನ್ಸ್‌ನಲ್ಲಿ ಕ್ಯಾಥೊಲಿಕ್‌ ಧರ್ಮದ ಸ್ಥಿತಿಯೇನಾಗಿದೆ? 1938ರ ವರೆಗೆ ಫ್ರಾನ್ಸ್‌ನಲ್ಲಿ ಲೋಕದಲ್ಲೇ ಅತಿ ದೊಡ್ಡ ಸಂಖ್ಯೆಯ ದೀಕ್ಷಾಸ್ನಾನಿತ ಕ್ಯಾಥೊಲಿಕರಿದ್ದರು. ಈಗ ಅದು, ಫಿಲಿಪ್ಪೀನ್ಸ್‌ ಮತ್ತು ಅಮೆರಿಕದಂಥ ದೇಶಗಳ ನಂತರ ಆರನೆಯ ಸ್ಥಾನದಲ್ಲಿದೆ. ಮತ್ತು ಫ್ರಾನ್ಸ್‌ನಲ್ಲಿ 4.5 ಕೋಟಿ ಕ್ಯಾಥೊಲಿಕರಿದ್ದರೂ, ಕೇವಲ 60 ಲಕ್ಷ ಮಂದಿ ಕ್ರಮವಾಗಿ ಚರ್ಚಿಗೆ ಹೋಗುತ್ತಾರೆ. 65 ಪ್ರತಿಶತ ಮಂದಿ, “ಲೈಂಗಿಕ ವಿಷಯಗಳ ಕುರಿತಾದ ಚರ್ಚಿನ ಬೋಧನೆಗೆ ಯಾವುದೇ ಗಮನಕೊಡುವುದಿಲ್ಲ,” ಮತ್ತು ಅವರಲ್ಲಿ 5 ಪ್ರತಿಶತ ಮಂದಿಗೆ, ಯೇಸು “ಏನೂ ಅಲ್ಲ” ಎಂದು ಫ್ರೆಂಚ್‌ ಕ್ಯಾಥೊಲಿಕರ ನಡುವೆ ನಡೆಸಲ್ಪಟ್ಟ ಇತ್ತೀಚಿನ ಒಂದು ಸಮೀಕ್ಷೆಯು ಪ್ರಕಟಪಡಿಸಿತು. ಇಂಥ ನಕಾರಾತ್ಮಕ ಪ್ರವೃತ್ತಿಗಳೇ, ಪೋಪ್‌ 1980ರಲ್ಲಿ ಫ್ರಾನ್ಸ್‌ಗೆ ನೀಡಿದ ಭೇಟಿಯ ಸಮಯದಲ್ಲಿ ಹೀಗೆ ಕೇಳುವಂತೆ ಪ್ರಚೋದಿಸಿದವು: “ಫ್ರಾನ್ಸ್‌ ದೇಶವೇ, ನಿನ್ನ ದೀಕ್ಷಾಸ್ನಾನದ ಪ್ರತಿಜ್ಞೆಗಳು ಏನಾದವು?”

[ಪಾದಟಿಪ್ಪಣಿಗಳು]

^ ಪ್ಯಾರ. 13 ಕಾವಲಿನಬುರುಜು ಪತ್ರಿಕೆಯ 1994, ಮೇ 15ರ ಸಂಚಿಕೆಯ 8-9ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 19 ಲೂಯಿ ಎಂಬ ಹೆಸರು ಕ್ಲೊವಿಸ್‌ ಎಂಬ ಹೆಸರಿನಿಂದ ಬಂದಿದೆ. (XVIIನೆಯ ಲೂಯಿ ಮತ್ತು ಲೂಯಿ-ಫಿಲೀಪ್‌ ಸಮೇತ) 19 ಫ್ರೆಂಚ್‌ ರಾಜರುಗಳಿಗೆ ಈ ಹೆಸರಿತ್ತು.

[ಪುಟ 27ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸ್ಯಾಕ್ಸನರು

ರೈನ್‌ ನದಿ

ಸಾಮ್‌ ನದಿ

ಸ್ವಾಸೋನ್‌

ರೀಮ್ಸ್‌

ಪ್ಯಾರಿಸ್‌

ಗಾಲ್‌

ಲವಾರ್‌ ನದಿ

ವೂಯಿಲ್‌

ಪ್ವಾಟ್ಯೇ

ಪೈರೀನಿಸ್‌

ವಿಸಿಗಾತರು

ರೋಮ್‌

[ಪುಟ 26ರಲ್ಲಿರುವ ಚಿತ್ರ]

14ನೆಯ ಶತಮಾನದ ಒಂದು ಹಸ್ತಪ್ರತಿಯಲ್ಲಿ ಚಿತ್ರಿಸಲ್ಪಟ್ಟಿರುವ ಕ್ಲೊವಿಸನ ದೀಕ್ಷಾಸ್ನಾನ

[ಕೃಪೆ]

© Cliché Bibliothèque nationale de France, Paris

[ಪುಟ 28ರಲ್ಲಿರುವ ಚಿತ್ರ]

ಫ್ರಾನ್ಸ್‌ನಲ್ಲಿರುವ ರೀಮ್ಸ್‌ ಕತೀಡ್ರಲ್‌ನ ಹೊರಭಾಗದಲ್ಲಿ, ಕ್ಲೊವಿಸನ (ಮಧ್ಯದಲ್ಲಿರುವ ವ್ಯಕ್ತಿ) ದೀಕ್ಷಾಸ್ನಾನದ ಕೆತ್ತನೆ

[ಪುಟ 29ರಲ್ಲಿರುವ ಚಿತ್ರ]

ಕ್ಲೊವಿಸನ ದೀಕ್ಷಾಸ್ನಾನವನ್ನು ಆಚರಿಸಲಿಕ್ಕಾಗಿ IIನೆಯ ಜಾನ್‌ ಪಾಲ್‌ ಫ್ರಾನ್ಸ್‌ಗಿತ್ತ ಭೇಟಿಯು ವಾಗ್ವಾದಕ್ಕೆ ಕಾರಣವಾಯಿತು