ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಮ್ಮ ಪ್ರೀತಿಯು ಹೆಚ್ಚು ಗಾಢವಾಗಿದೆ”

“ನಮ್ಮ ಪ್ರೀತಿಯು ಹೆಚ್ಚು ಗಾಢವಾಗಿದೆ”

“ನಮ್ಮ ಪ್ರೀತಿಯು ಹೆಚ್ಚು ಗಾಢವಾಗಿದೆ”

ಜಪಾನಿನ ಹೋಕೇಡೊದಲ್ಲಿರುವ ಊಸೂ ಪರ್ವತವು, 23 ವರ್ಷಗಳ ಸುಪ್ತಾವಸ್ಥೆಯ ನಂತರ, 2000ದ ಮಾರ್ಚ್‌ 31ರ ಶುಕ್ರವಾರದಂದು ಸ್ಫೋಟಿಸಿತು. ಸಾವಿರಾರು ಮಂದಿ ನಿವಾಸಿಗಳು ಅಪಾಯದ ವಲಯದಿಂದ ಪಲಾಯನಗೈಯುವಂತೆ ಒತ್ತಾಯಿಸಲ್ಪಟ್ಟರು. ಅನೇಕರು ತಮ್ಮ ಮನೆಗಳನ್ನೂ ಉದ್ಯೋಗಗಳನ್ನೂ ಕಳೆದುಕೊಂಡರು. ಆದರೆ ಸಂತೋಷದ ಸಂಗತಿಯೇನೆಂದರೆ ಯಾರೂ ತಮ್ಮ ಜೀವವನ್ನು ಕಳೆದುಕೊಳ್ಳಲಿಲ್ಲ. ಅಲ್ಲಿಂದ ಓಡಿಹೋಗಬೇಕಾದ ಜನರಲ್ಲಿ 46 ಮಂದಿ ಯೆಹೋವನ ಸಾಕ್ಷಿಗಳಿದ್ದರು. ಆದರೆ ಅವರಿಗೆ ಸಹಾಯ ದೊರೆಯದೆ ಇರಲಿಲ್ಲ.

ಸ್ಫೋಟನದ ಅದೇ ದಿನದಂದು, ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಕ್ರೈಸ್ತ ಸಂಚರಣಾ ಶುಶ್ರೂಷಕನ ಸಹಾಯದಿಂದ ಪರಿಹಾರ ಕಾರ್ಯಗಳಿಗಾಗಿ ಏರ್ಪಾಡುಗಳನ್ನು ಮಾಡಲಾಯಿತು. ಕೂಡಲೇ, ನೆರೆಹೊರೆಯ ಸಭೆಗಳಿಂದ ಪರಿಹಾರ ಸಾಮಗ್ರಿಗಳು ಬರತೊಡಗಿದವು. ಜಪಾನ್‌ ಬ್ರಾಂಚ್‌ನ ಮೇಲ್ವಿಚಾರಣೆಯ ಕೆಳಗೆ ಬೇಗನೆ ಒಂದು ಪರಿಹಾರ ಕಮಿಟಿಯನ್ನು ರಚಿಸಲಾಯಿತು ಮತ್ತು ಜಪಾನಿನ ಎಲ್ಲ ಕಡೆಗಳಲ್ಲೂ ಇರುವ ಯೆಹೋವನ ಸಾಕ್ಷಿಗಳಿಂದ ದಾನಗಳು, ಪರಿಹಾರ ನಿಧಿಗೆ ಪ್ರವಾಹದಂತೆ ಬರತೊಡಗಿದವು. ಆತ್ಮಿಕ ಚಟುವಟಿಕೆಗಳನ್ನು ಬೆಂಬಲಿಸಲಿಕ್ಕಾಗಿ, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರನ್ನು, ಅತಿ ಹೆಚ್ಚು ಬಾಧಿತವಾಗಿರುವ ಸಭೆಗೆ ಕಳುಹಿಸಲಾಯಿತು, ಮತ್ತು ಸರ್ಕಿಟ್‌ ಮೇಲ್ವಿಚಾರಕರು ಭಾವನಾತ್ಮಕ ಹಾಗೂ ಆತ್ಮಿಕ ಬೆಂಬಲವನ್ನು ಕೊಡಲಿಕ್ಕಾಗಿ ಪದೇ ಪದೇ ಆ ಕ್ಷೇತ್ರಕ್ಕೆ ಭೇಟಿ ನೀಡಿದರು.

ಬಾಧಿತ ಕ್ಷೇತ್ರದಲ್ಲಿದ್ದ ಸಾಕ್ಷಿಗಳು, ಹೆಚ್ಚು ಸುರಕ್ಷಿತವಾದ ಒಂದು ವಠಾರದಲ್ಲಿದ್ದ ಖಾಸಗಿ ಮನೆಗಳನ್ನು ಉಪಯೋಗಿಸುವ ಮೂಲಕ, ಆ ಕಷ್ಟಕರವಾದ ಅವಧಿಯಲ್ಲಿ ತಮ್ಮ ಕ್ರೈಸ್ತ ಕೂಟಗಳನ್ನು ನಡೆಸುವುದನ್ನು ಮುಂದುವರಿಸಿದರು. ರಾಜ್ಯ ಸಭಾಗೃಹವು ಎಲ್ಲಿ ಇತ್ತೊ ಆ ಕ್ಷೇತ್ರವನ್ನು ಬಿಟ್ಟುಹೋಗುವ ಅಪ್ಪಣೆಯನ್ನು ಹಿಂದೆಗೆಯಲಾದಾಗ, ಸಹೋದರರು ಸಭಾಗೃಹವನ್ನು ನೋಡಲು ಹೋದರು. ಅಲ್ಲಿ ಆ ಕಟ್ಟಡವು ಓಲುತ್ತಿದ್ದು, ಬಿರುಕುಬಿಟ್ಟು, ಹಾನಿಗೊಳಗಾಗಿರುವುದನ್ನು ಅವರು ನೋಡಿದರು. ರಾಜ್ಯ ಸಭಾಗೃಹದಿಂದ ಸ್ವಲ್ಪ ದೂರದಲ್ಲೇ, ಹೊಸದಾಗಿ ಉಂಟಾಗಿದ್ದ ಜ್ವಾಲಾಮುಖಿಯ ಕುಳಿಯು ಇನ್ನೂ ದಟ್ಟವಾದ ಹೊಗೆ ಕಾರುತ್ತಿತ್ತು. ‘ಈ ಸ್ಥಳದಲ್ಲಿ ಕೂಟಗಳನ್ನು ನಡೆಸುತ್ತಾ ಇರುವುದು ವಿವೇಕಯುತವೊ? ರಾಜ್ಯ ಸಭಾಗೃಹವನ್ನು ರಿಪೇರಿ ಮಾಡಸಾಧ್ಯವೊ?’

ಹತ್ತಿರದಲ್ಲೇ ಸುರಕ್ಷಿತವಾದ ಒಂದು ಸ್ಥಳದಲ್ಲಿ ಒಂದು ಹೊಸ ರಾಜ್ಯ ಸಭಾಗೃಹವನ್ನು ನಿರ್ಮಿಸುವ ನಿರ್ಣಯವನ್ನು ಮಾಡಲಾಯಿತು. ರೀಜನಲ್‌ ಬಿಲ್ಡಿಂಗ್‌ ಕಮಿಟಿಯು ಬೇಕಾದ ನೆರವನ್ನು ಕೊಟ್ಟಿತು. ದೇಶದಾದ್ಯಂತ ಸಾಕ್ಷಿಗಳು ನೀಡಿದ ದಾನಗಳಿಂದ ಸಿಕ್ಕಿದ ಹಣವನ್ನು ಈ ನಿರ್ಮಾಣ ಕಾರ್ಯಕ್ಕಾಗಿ ಬಳಸಲಾಯಿತು. ಬೇಗನೆ ಜಮೀನನ್ನು ಖರೀದಿಸಲಾಯಿತು, ಮತ್ತು ನೂರಾರು ಮಂದಿ ಸ್ವಯಂಸೇವಕರ ಸಹಾಯದಿಂದ, ಸ್ವಲ್ಪ ಸಮಯದೊಳಗೇ ಒಂದು ಹೊಸ ರಾಜ್ಯ ಸಭಾಗೃಹವನ್ನು ಕಟ್ಟಿಮುಗಿಸಲಾಯಿತು. ಹೊಸದಾಗಿ ನಿರ್ಮಿಸಲ್ಪಟ್ಟಿದ್ದ ಈ ರಾಜ್ಯ ಸಭಾಗೃಹದಲ್ಲಿ, 2000ದ ಜುಲೈ 23ರ ಭಾನುವಾರದಂದು ನಡೆದ ಮೊದಲನೆಯ ಕೂಟಕ್ಕೆ 75 ಮಂದಿ ಹಾಜರಾದರು. ಹಾಜರಿದ್ದವರಲ್ಲಿ ಅನೇಕರು ಆನಂದಬಾಷ್ಪವನ್ನು ಸುರಿಸಿದರು. ಅದೇ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಆ ರಾಜ್ಯ ಸಭಾಗೃಹವು ಸಮರ್ಪಿಸಲ್ಪಟ್ಟಾಗ, ಸ್ಥಳಿಕ ಸಭೆಯ ಹಿರಿಯರಲ್ಲೊಬ್ಬರು ಹೀಗೆ ಹೇಳುವಂತೆ ಪ್ರೇರಿಸಲ್ಪಟ್ಟರು: “ಈ ಸ್ಫೋಟವು ತುಂಬ ಕಷ್ಟ ಹಾಗೂ ದುಃಖವನ್ನು ಉಂಟುಮಾಡಿತು. ಆದರೆ ಈ ನಿರ್ಮಾಣ ಕೆಲಸವು ನಮ್ಮ ಭಯವನ್ನು ಆನಂದವಾಗಿ ಬದಲಾಯಿಸಿದೆ. ಯೆಹೋವನಿಗಾಗಿಯೂ ನಮ್ಮ ಪ್ರಿಯ ಕ್ರೈಸ್ತ ಸಹೋದರರಿಗಾಗಿಯೂ ಇರುವ ನಮ್ಮ ಪ್ರೀತಿಯು ಹೆಚ್ಚು ಗಾಢವಾಗಿದೆ!”

[ಪುಟ 19ರಲ್ಲಿರುವ ಚಿತ್ರ ಕೃಪೆ]

ಊಸು ಪರ್ವತದ ಸ್ಫೋಟ: AP Photo/Koji Sasahara